Saturday, June 21, 2014

ಚಿತ್ರಕತೆ ಬರವಣಿಗೆ:

ಚಿತ್ರಕತೆ ಬರೆಯುವುದು ಹೇಗೆ ಎನ್ನುವ ಪ್ರಶ್ನೆ ನನ್ನನ್ನು ತುಂಬಾ ದಿನಗಳವರೆಗೆ ಕಾಡಿದ ಪ್ರಶ್ನೆ ಎನ್ನಬಹುದು. ಅಂದರೆ ಶೈಲಿ ಹೇಗೆ, ಹೇಗೆ ಪ್ರಾರಂಭಿಸಬೇಕು ಮತ್ತು ಯಾವ ರೀತಿ ಬರೆಯುವುದು ಸರಿಯಾದದ್ದು ಮತ್ತು ಅನುಕೂಲಕರವಾದದ್ದು ಎಂಬುದು ಪ್ರಶ್ನೆ.
ಆದರೆ ಚಿತ್ರರಂಗಕ್ಕೆ ಬಂದ ಮೇಲೆ ನನಗೆ ಅದರ ಸ್ಪಷ್ಟ ರೂಪ ಗೊತ್ತಾಯಿತು ಎನ್ನಬಹುದು.
ಆದರೆ ಮೈಸೂರಿನಲ್ಲಿ ಇದ್ದಾಗಲೇ ಅದರ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದೆ. ಆಗ ಗಾಂಧೀ ಸಿನಿಮಾದ ಚಿತ್ರಕತೆ ಪುಸ್ತಕದ ರೂಪದಲ್ಲಿ ಸಿಕ್ಕಿತ್ತು. ಅದನ್ನು ನನ್ನ ಟೆಕ್ಸ್ಟ್ ಪುಸ್ತಕಕ್ಕಿಂತ ಹೆಚ್ಚಾಗಿ ಹಗಲು ರಾತ್ರಿ ಓದಿದ್ದೆ ಅನ್ನುವುದಕ್ಕಿಂತ ಅದನ್ನು ಗಮನಿಸಿದ್ದೆ. ಅದೇನು ಇಂಟೀರಿಯರ್, ಎಕ್ಷ್ತೇರಿಯರ್, ಕಟ್ ಟು, ಫೇಡ್ ಔಟ್, ಫೇಡ್ ಇನ್ ...ಅದರ ಬಗ್ಗೆ ವಿಸ್ತೃತವಾಗಿ ಅದ್ಯಯನ ಮಾಡಿದ ನಂತರ ಅದರ ರೀತಿಯಲ್ಲೇ ಬರೆಯಲು ಪ್ರಾರಂಭಿಸಿ ನಾನಂದುಕೊಂಡ ಒಂದಿಡೀ ಕತೆ ಚಿತ್ರಕತೆಯನ್ನು ಬರೆದುಬಿಟ್ಟಿದ್ದೆ.
ಆದರೆ ಇಲ್ಲಿ ಬಂದಾಗ ಅದು ಚಿತ್ರೀಕರಣಕ್ಕೆ ಅಷ್ಟು ಉಪಯೋಗವಾಗುವುದಿಲ್ಲ ಎನಿಸಿತು. ಈಗೀಗಂತೂ ಅದರ ಉಪಯೋಗವಿಲ್ಲ ಎನಿಸಿತು. 
ಹಾಳೆಯ ಒಂದು ಮಗ್ಗಲಲ್ಲಿ ಅಂದರೆ ಎಡಭಾಗದಲ್ಲಿ ದೃಶ್ಯದ ಸಂಖ್ಯೆ, ಸ್ಥಳ, ಪಾತ್ರಧಾರಿಗಳು ಮುಂತಾದವುಗಳನ್ನು ಬರೆದು a ಪುಟದ ಅರ್ಧ ಭಾಗದಲ್ಲಿ ಎಡಭಾಗಕ್ಕೆ ಚಿತ್ರಕತೆ ಸಂಭಾಷಣೆ ಬರೆಯುವುದು ಒಳ್ಳೆಯದು. ಯಾಕೆಂದರೆ ಚಿತ್ರೀಕರಣದ ಸಮಯದಲ್ಲಿ ಮುಂದೆ ಸಂಕಲನಕ್ಕೆ ಉಪಯೋಗವಾಗಲೆಂದು ಎಡಿಟಿಂಗ್ ರಿಪೋರ್ಟ್ ಬರೆಯುತ್ತಾರೆ. ಅದರಿಂದ ಅದರ ರೀಡಿಂಗ್ ನಿಂದ ok ಯಾದ, ok ಆಗದ ದೃಶಿಕೆಗಳನ್ನ ವಿಂಗಡಿಸುವುದು ಸುಲಭ ಸಾಧ್ಯ. ಹಾಗೆಯೇ ಚಿತ್ರೀಕರಣದ ಸಮಯದಲ್ಲಿ ಶಾಟ್ ವಿಭಜನೆ, ಸಂಯೋಜನೆ ದಾಖಲೆಗಳನ್ನು ಬರೆದುಕೊಳ್ಳಲು ಸುಲಭ. ಹಾಗಾಗಿ ಒಂದು ಅರ್ಧ ಭಾಗ ಖಾಲಿಯಿದ್ದಾಗ ok ಶಾಟ್, ಅಥವಾ ಏನಾದರೂ ತಿದ್ದುಪಡಿ ಇದ್ದರೇ, ಅಥವಾ ಆಯಾ ಶಾಟ್ ನ ಕ್ಯಾಮೆರಾ ಕ್ಲಿಪ್ ನಂಬರ್ ಮುಂತಾದವುಗಳನ್ನು ನಮೂದಿಸಲು ಉಪಯೋಗವಾಗುತ್ತದೆ ಎನ್ನಬಹುದು.
ಆದರೆ ಹಾಲಿವುಡ್ ಶೈಲಿಯಲ್ಲಿ ಅದಕ್ಕೆ ಆಸ್ಪದವಿಲ್ಲ. ನೋಡಲು ಓದಲು ಅದು ಚೆನ್ನಾಗಿರುತ್ತದೆ. ಪ್ರಾಯೋಗಿಕವಾಗಿ ಇಷ್ಟು ಅನುಕೂಲಕಾರಿಯಲ್ಲ .
ಅಂದ ಹಾಗೆ ರಕ್ಷಿತ್ ಶೆಟ್ಟಿ ತಮ್ಮ ಉಳಿದವರು ಕಂಡಂತೆ ಚಿತ್ರದ ಸ್ಕ್ರಿಪ್ಟ್ ಪ್ರತಿಯನ್ನು ಅಂತರ್ಜಾಲದಲ್ಲಿ ಹಾಕಿದ್ದಾರೆ. ಮತ್ತದು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದಾರೆ. ಒಂದು ಚಿತ್ರ ಭರ್ಜರಿ ಯಶಸ್ಸು ಕಂಡರೆ ಅದರ ಪುಸ್ತಕಗಳು ಬರುವುದು ಸಾಮಾನ್ಯ. ಕನ್ನಡದಲ್ಲಿ ಮಠ, ಎದ್ದೇಳು ಮಂಜುನಾಥ ಚಿತ್ರಗಳು ಬರಹರೂಪದಲ್ಲಿ ಬಂದಿವೆ. ಹಾಗೆ ನೋಡಿದರೆ ಉಕ ಅದ್ಭುತ ಯಶಸ್ವೀ ಚಿತ್ರವಲ್ಲ. ಹಾಗಂತ ತೆಗೆದು ಹಾಕುವ ಚಿತ್ರವೂ ಅಲ್ಲ. ಅದೊಂತರ ಚಿತ್ರ. ನಾನು ಸಿನಿಮಾ ನೋಡುತ್ತಾ ನೋಡುತ್ತಾ ಬೋರ್ ಆಯಿತು ಎನಿಸಿದೆ. ನೋಡಿದ ಮೇಲೆ ಇದೇನು ಕುತೂಹಲವೇ ಇಲ್ಲವಲ್ಲ ಎನಿಸಿದೆ. ಆದರೆ ಅಷ್ಟರ ನಡುವೆಯೂ ನೋಡಿಸಿಕೊಂಡಿದೆ. 
ಒಂದು ಚಿತ್ರದಲ್ಲಿ ಭರವಸೆ, ಅತಿ ಭರವಸೆ ನಿರೀಕ್ಷೆ ಗಳು ಸಿನಿಮಾವನ್ನು ಸಾಮಾನ್ಯವಾಗಿ ನೋಡಲು ಬಿಡುವುದಿಲ್ಲ ಎನ್ನುವುದಕ್ಕೆ ಉಕ ಉತ್ತಮ ಉದಾಹರಣೆ ಎನ್ನಬಹುದು, ಅದರ ಪ್ರಚಾರ, ಪ್ರೊಮೊ, ರಕ್ಷಿತ್ ಶೆಟ್ಟಿ ಇವುಗಳನ್ನು ಸಿನಿಮಾದ ಮೇಲೆ ಅದೆಂತಹ ಪರಿಣಾಮ ಬೀರಿದ್ದವು ಎಂದರೆ ಚಿತ್ರ ನೋಡಿದವರು ಇಲ್ಲಾ ಹೊಗಳಬೇಕು, ಇಲ್ಲಾ ತೆಗಳಬೇಕು ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟರು. ಹಾಗಾಗಿ ಮುಖಪುಸ್ತಕದಲ್ಲಿ ಅಲ್ಲಲ್ಲಿ ಅದರ ಚರ್ಚೆಗಳು ಬೈಗುಳ ಹೊಗಳಿಕೆಗಳು ಎಗ್ಗಿಲ್ಲದೆ ನಡೆದವು ಎನ್ನಬಹುದು. ಹೇಗೆ ವಸ್ತು ಮಾನ್ಯಕ್ಕಿಂತ ಹೆಚ್ಚು ಹೊಗಳಿದರೆ ತಡೆದುಕೊಳ್ಳಲಾಗುವುದಿಲ್ಲವೋ ಹಾಗೆಯೇ ವಿನಾಕಾರಣ ತೆಗಳಿದರೆ ತಡೆದುಕೊಳ್ಳಲಾಗುವುದಿಲ್ಲ. ಸಿನಿಮಾ ಅಂದ್ರೆ. ಸಿನಿಮಾ ಅಷ್ಟೇ.ಏನೇ ಪ್ಯಾಶನ್, ಅದೂ ಇದೂ ಎಂದರೂ ಕತ್ತಲೆಯಲ್ಲಿ ಎರಡೂವರೆ ಗಂಟೆಯ ಜಗತ್ತಿನ ಅನುಭವವೇ ಅಂತಿಮ. ಹಾಗಾಗಿ ಒಂದು ಚಿತ್ರವನ್ನು ಹೊಗಳುವುದಕ್ಕಿಂತ ಅಥವಾ ಪೋಸ್ಟ್ ಮಾರ್ಟಂ ಮಾಡುವುದಕ್ಕಿಂತ ಸುಮ್ಮನೆ ನೋಡಬೇಕು ಅಲ್ಲವೇ?
ಉಕ ಚಿತ್ರಕತೆಯ ಬರಹದ ಪ್ರತಿಯನ್ನು ರಕ್ಷಿತ್ ಅಂತರ್ಜಾಲದಲ್ಲಿ ಬಿಟ್ಟಿದ್ದಾರೆ. ನಿಜಕ್ಕೂ ಅದು ಸಂತೋಷದ ವಿಷಯ. ಸಿನಿಮಾ ನೋಡಿ ಅರ್ಥವಾಗಲಿಲ್ಲ ಎಂದು ಕೊಳ್ಳುವವರು ಅದನ್ನೊಮ್ಮೆ ಓದಿ ಅರ್ಥ ಮಾಡಿಕೊಳ್ಳಬಹುದು ಎಂಬುದಕ್ಕಿಂತ ಸಿನಿಮಾಕ್ಕೆ ಬರಲು ಅಪೇಕ್ಷೆ ಇರುವವರಿಗೆ ಚಿತ್ರಕತೆ ಬರೆಯುವ ಶೈಲಿಯ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಅದು ಅತ್ಯವಶ್ಯ. ಆದರೆ ಅದರ ಶೈಲಿ ಹಾಲಿವುಡ್ ಚಿತ್ರಗಳ ಬರಹದ ಪ್ರತಿಯ ಹಾಗಿರುವುದು ಮತ್ತು ಪ್ರಾಯೋಗಿಕವಾಗಿ ಅದರ ಉಪಯೋಗ ನಾನು ಕಂಡ ಮಟ್ಟಿಗೆ ಇಲ್ಲದಿರುವುದು ಬೇಸರದ ಸಂಗತಿ. ಜಗತ್ತಿನ ಚಿತ್ರಕರ್ಮಿಗಳ ಕಾರ್ಯರೂಪವನ್ನು ಅನುಸರಿಸುವುದು ಅವಶ್ಯ. ಅದು ನಮ್ಮಲ್ಲಿನ ಕೆಲಸಕ್ಕೆ ಎಷ್ಟು ಅನುಕೂಲ ಎನ್ನುವುದನ್ನು ಮನಗಂಡಾಗ ಆ ಕೆಲಸಕ್ಕೂ ಒಂದು ಸಾರ್ಥಕತೆ ಬರುತ್ತದೆ.ಹಾಗಾಗಿ ರಕ್ಷಿತ್ ಕೆಲಸವನ್ನು ಮೆಚ್ಚಿಕೊಳ್ಳುತ್ತಲೇ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಬೇಕಾಗುತ್ತದೆ.
ಅದರ ಜೊತೆಗೆ ಚಿತ್ರದಲ್ಲಿ ಬಳಸಿರುವ ಹೊಸ ತಂತ್ರಜ್ಞಾನಗಳ ಬಗ್ಗೆ ಸ್ವಾನುಭವವನ್ನು ಅದರ ಪ್ರಾಯೋಗಿಕವಾಗಿ ಆದ ಲಾಭ ನಷ್ಟಗಳನ್ನು ಹಂಚಿಕೊಂಡರೆ ಚಿತ್ರಕರ್ಮಿಗಳಿಗೆ ಇನ್ನೂ ಲಾಭದಾಯಕವಾಗುತ್ತದೆ ಎನಿಸುತ್ತದೆ.
ಅವರು ಬಿಡುವಿದ್ದಾಗ ಅದನ್ನು ಮಾಡಲಿ ಎಂಬುದು ನನ್ನ ಆಶಯ..

2 comments:

  1. ಉ ಕ ಚಿತ್ರಕಥೆ ಎಲ್ಲಿ ಓದಲು ಸಿಗುತ್ತದೆ ? ಅದರ ವೆಬ್ ವಿಳಾಸ ಅಥವಾ ಪುಸ್ತಕ ರೂಪದಲ್ಲಿದ್ದರೆ ಅದರ ಹೆಸರನ್ನು ತಿಳಿಸುವಿರಾ

    ReplyDelete
  2. ಉಕ ಚಿತ್ರಕಥೆ ಓದಲು ಎಲ್ಲಿ ಸಿಗುತ್ತದೆ? ದಯವಿಟ್ಟು ಲಿಂಕ್ ಕಳಿಸಿ
    ravinayakjkl6@gmail.com

    ReplyDelete