Tuesday, April 15, 2014

ಟೆಂಟ್ ಸಿನಿಮಾ..-

ಏನೇ ಆಗಲಿ ಅದೇನೇ ಹೋಂ ಥಿಯೇಟರ್ , 3 ಡಿ ಇದ್ದರೂ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಹೋಗಿ ನೋಡುವ ಸೊಬಗೆ ಅನನ್ಯ ಎನ್ನಬಹುದು. ನಾನು ಮೊದಲ ಬಾರಿಗೆ ಚಿತ್ರಮಂದಿರದಲ್ಲಿ ನೋಡಿದ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ನಿಖರವಾದ ಉತ್ತರ ನನಗೆ ದೊರಕಿಲ್ಲ. ಬಹುಶ ದೊರಕುವುದೂ ಇಲ್ಲವೇನೋ. ಆದರೆ ಚಿತ್ರ ನೋಡಿದ ಚಿತ್ರಮಂದಿರ ಮಾತ್ರ ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ನಾವೆಲ್ಲಾ  ಆ ಚಿತ್ರಮಂದಿರಕ್ಕೆ ಹೋಗಿದ್ದೆವು. ಭಯಾನಕ ಜನ ಜಾತ್ರೆ ಸೇರಿದ್ದ ಚಿತ್ರಮಂದಿರವದು. ಟಿಕೆಟ್ ತೆಗೆದುಕೊಳ್ಳಲು ನೂಕು ನುಗ್ಗಲು ..ಒಳ ನುಗ್ಗಲು ನೂಕು ನುಗ್ಗಲು..ಅಬ್ಬಬ್ಬಾ ಅದರ ನೆನಪೇ ರೋಮಾಂಚನ ಎನ್ನಬಹುದು.
ಆ ಚಿತ್ರಮಂದಿರದಲ್ಲಿ ಕುರ್ಚಿಗೆ ನಂಬರಿನ ವ್ಯವಸ್ಥೆ ಇರಲಿಲ್ಲ.ಹಾಗಾಗಿ ಇಡೀ ಕುಟುಂಬದವರು ಒಟ್ಟಿಗೆ ಸಿನಿಮಾ ನೋಡಲು ಹೋದರೆ ಒಂದೇ ಸಾಲಿನಲ್ಲಿ ಕುಳಿತುಕೊಳ್ಳಲು ಹರ ಸಾಹಸ ಪಡಬೇಕಿತ್ತು. ಯಾರಾದರೂ ಒಬ್ಬರು ಮೊದಲೇ ಸಾಲಿನಲ್ಲಿ ನಿಂತು ಟಿಕೇಟು ತೆಗೆದುಕೊಂಡು ಆ ಜನಜಾತ್ರೆಯಲ್ಲಿ ಹೋರಾಡಿ ಮುನ್ನುಗ್ಗಿ ಒಳನುಗ್ಗಿ ಸೀಟು ಕಾಯ್ದಿರಿಸಬೇಕಾಗಿತ್ತು. ಅದಕ್ಕಾಗಿ ಎಷ್ಟೋ ಸಾರಿ ಚಿಕ್ಕಪುಟ್ಟ ಜಗಳಗಳೇ ಪ್ರಾರಂಭವಾದರೂ ಬೆಳ್ಳಿ ಪರದೆಯ ಮೇಲೆ ಚಿತ್ರ ಮೂಡುತ್ತಿದ್ದಂತೆ ಆ ಜಗಳ ಅಷ್ಟಕ್ಕೇ ನಿಲ್ಲುತ್ತಿತ್ತು.
ನನಗೆ ನಮ್ಮ ಊರಿನ ಹತ್ತಿರದಲ್ಲಿದ್ದ ಟೆಂಟ್ ಇನ್ನೂ ಚೆನ್ನಾಗಿ ನೆನಪಿದೆ. ಅದೊಂತರ ವಿಚಿತ್ರ ಟೆಂಟ್. ಸುಮ್ಮನೆ ಆಳುದ್ದದ ಗೋಡೆ ಕಟ್ಟಿ ಅದರ ಮೇಲೆ ಶೀಟು ಹೊದಿಸಿ ಮುಂದೆ ಪರದೆ ಬಿಟ್ಟಿದ್ದರು.ಆ ಟೆಂಟಿನ ಸುತ್ತಲೂ ಬೇಲಿ ಹಾಕಿದ್ದರೆ ವಿನಃ ಕಂಪೌಂಡ್ ಕಟ್ಟಿರಲಿಲ್ಲ. ಹಾಗಾಗಿ ಅದೆಷ್ಟೋ ಪಿಳ್ಳೆ ಹುಡುಗರು ಸಿನಿಮಾ ಪ್ರಾರಂಭವಾದ ಅರ್ಧಗಂಟೆಯ ನಂತರ ಬೇಲಿ ಹಾರಿ ಹಾಗೆಯೇ ಒಳ ನುಸುಳುವ ಪ್ರಯತ್ನ ಪಟ್ಟು ಯಶಸ್ವಿಯಾಗುತ್ತಿದ್ದರು. ಅದರಲ್ಲೂ ನನ್ನದೇ ಗೆಳೆಯ ಉಮೇಶನ ಮನೆ ಅದರ ಪಕ್ಕದಲ್ಲೇ ಇದ್ದದ್ದರಿಂದ ಅವನು ಸಂಜೆ ನಾಲ್ಕು ಗಂಟೆಯ ಪ್ರದರ್ಶನಗಳನ್ನು ಬಿಡದೆ ನೋಡುತ್ತಿದ್ದ. ನಮಗೆಲ್ಲಾ ಹೊಟ್ಟೆಕಿಚ್ಚಾಗುತ್ತಿದ್ದದ್ದು ಅದೇ ಕಾರಣದಿಂದಾಗಿ. ನಾವೆಲ್ಲಾ ಒಂದು ಸಿನಿಮಾಕ್ಕೆ ಹೋಗಬೇಕಾದರೆ ಮನೆಯವರನ್ನು ಕಾಡಿ ಬೇಡಿ ಪೀಡಿಸಿ ಹೋಗಬೇಕಾಗಿತ್ತು. ಅದರಲ್ಲೋ ಆ ಚಿತ್ರ ಎಂತಹದ್ದು ಮಕ್ಕಳು ನೋಡುವ ಹಾಗಿದೆಯಾ ಮುಂತಾದ ವಿಚಾರಣೆಗಳನ್ನು ಮನೆಯವರು ಅಕ್ಕಪಕ್ಕದವರಿಂದ ತಿಳಿದು ಆನಂತರವೇ ಹೋಗಲು ಅನುಮತಿ ಮತ್ತು ಹಣ ಕೊಡುತ್ತಿದ್ದರು. ಆದರೆ ಉಮೇಶನಿಗೆ ಅದ್ಯಾವ ಕಟ್ಟಳೆ ಇರಲಿಲ್ಲ. ಹಾಗಾಗಿ ಆ ಟೆಂಟ್ಗೆ ಬಂದ ಎಲ್ಲಾ ಸಿನಿಮಾಗಳನ್ನ ಬೇಲಿ ಹಾರಿ ನೋಡಿ ಬಿಡುತ್ತಿದ್ದ. ಆದರೆ ಅವನ ಸಮಸ್ಯೆಯೂ ಒಂದಿತ್ತು. ಅದೆಂದರೆ ಅವನಿಗೆ ಮೊದಲಿನ ಅರ್ಧ ಗಂಟೆ ಯಾವತ್ತೂ ಸಿಗುತಿರಲಿಲ್ಲ. ನಮ್ಮ ಹತ್ತಿರ ಬಂದು ಸಿನಿಮಾ ಕತೆ ಹೇಳಲು ಪ್ರಾರಂಭಿಸುತ್ತಿದ್ದ ಉಮೇಶನಿಗೆ ಮೊದಲಿಗೆ ಏನು ಹೇಳು ಎಂದರೆ ಮುಖಾ ಮುಖಾ ನೋಡುತ್ತಿದ್ದ.
ಆ ಟೆಂಟ್ ನಲ್ಲಿ ಎರಡು ತರಗತಿಗಳಿದ್ದವು. ಒಂದು ನೆಲ ಮತ್ತು ಎರಡನೆಯದು ಕುರ್ಚಿ. ನೆಲದಲ್ಲಿ ಪುಣ್ಯಾತ್ಮರು ಸಿಮೆಂಟ್ ಕೂಡ ಹಾಕಿಸಿರಲಿಲ್ಲ. ಹಾಗಾಗಿ ಅಲ್ಲೆಲ್ಲಾ ಮರಳು ಮಣ್ಣು ಇರುತ್ತಿತ್ತು. ನಾವೆಲ್ಲಾ ಚಿತ್ರ ಮಂದಿರಕ್ಕೆ ನೆಲಕ್ಕೆ ಹೋದರೆ ಬಾಗಿಲ ಹತ್ತಿರವೇ ನಿಂತಿದ್ದು ಬಾಗಿಲು ಹಾಕಿದ ತಕ್ಷಣ ಬಾಗಿಲ ಕೆಳಗಿನ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುತ್ತಿದ್ದೆವು. ಯಾಕೆಂದರೆ ನೆಲದ ಮೇಲೆ ಕುಳಿತವರು ಅಲ್ಲೇ ಉಗಿದು ಮಣ್ಣು ಮುಚ್ಚುತ್ತಿದ್ದರು. ಚಿಕ್ಕ ಮಕ್ಕಳು ಸೂಸು ಮಾಡುತ್ತಿದ್ದವು. ಅದೆಲ್ಲಾ ಆನಂತರ ಒಣಗಿ ವಿಚಿತ್ರವಾಗಿ ಗಟ್ಟಿಯಾಗುತ್ತಿದ್ದವು. ಅದನ್ನು ಸರಿ ದೂಗಿಸಲು ಚಿತ್ರಮಂದಿರದವರು ನಾನಾ ಅವತಾರ ಮಾಡಿದ್ದರು. ನೆಲಕ್ಕೆ ಸಗಣಿಯಿಂದ ಸಾರಿಸಿದ್ದರು. ಆದರೆ ಸಗಣಿ ವಾಸನೆ ಯಾವುದೋ ಕೊಟ್ಟಿಗೆಯಲ್ಲಿ ಕುಳಿತ ಭಾವನೆ ಮೂಡಿಸಿ ಚಿತ್ರ ನೋಡುವ ಉತ್ಸಾಹವನ್ನು ಇಂಗಿಸಿಬಿಡುತ್ತಿತ್ತು. ಆದರಿಂದ ಚಿತ್ರಮಂದಿರದವರಿಗೆ ಲಾಭವೂ ಇತ್ತೆನ್ನಬಹುದು. ಈ ಅವ್ಯವಸ್ಥೆಯಿಂದಾಗಿ ಹುಡುಗರು, ಕುಡುಕರು ಮಾತ್ರ ಮುಂದೆ ನೆಲಕ್ಕೆ ಹೋಗುತ್ತಿದ್ದರು. ಉಳಿದವರು ಅದಕ್ಕಿಂತ ಸ್ವಲ್ಪ ಹೆಚ್ಚಿನ ಬೆಲೆಯ ಕುರ್ಚಿಗೆ ಹೋಗುತ್ತಿದ್ದರು.
ಟೆಂಟ್ ವಿಷಯಕ್ಕೆ ಬಂದರೆ ನನಗೆ ನೆನಪಾಗುವುದು ನಮ್ಮ ಪಕ್ಕದ ನಗರದ ನಾಗರತ್ನ ಟೆಂಟ್. ಅಲ್ಲಿ ಆಂಗ್ಲ ಬಿಟ್ಟರೆ ವಯಸ್ಕರ ಚಿತ್ರಗಳನ್ನೇ ಪ್ರದರ್ಶನ ಮಾಡಿ ಮಾಡಿ ಅದು ಅದಕ್ಕೆ ಹೆಸರುವಾಸಿಯಾಗಿಬಿಟ್ಟಿತ್ತು. ನಮ್ಮೂರಿನಲ್ಲಿ ನಗರಕ್ಕೆ ಹೋಗಿ ಬಂದವನು ಆ ನಾಗರತ್ನ ಟೆಂಟ್ ಗೆ ಹೋಗಿದ್ದ ಎಂದರೆ ಸಾಕು ಅವನು ಯಾವುದೋ ಅಸಹ್ಯಕರವಾದ ಕೆಲಸ ಮಾಡಿ ಬಂದ ಎನ್ನುವ ರೀತಿಯಲ್ಲಿ ನಮ್ಮೂರಿನ ಜನ ಅವನನ್ನು ಮಾತಾಡಿಸುತ್ತಿದ್ದರು. ನಾಗರತ್ನ ಟೆಂಟ್ ಚಿತ್ರದ ಪೋಸ್ಟರ್ ಕೂಡ ಹಾಗೆಯೇ ಇರುತ್ತಿದ್ದವು. ಅದ್ಯಾವುದೇ ಭಾಷೆಯಾದರೂ ವಯಸ್ಕರ ಚಿತ್ರವನ್ನೇ ಹುಡುಕಿ ಹುಡುಕಿ ತರುತ್ತಿದ್ದ ಅದರ ಮಾಲೀಕನಿಗೆ ದುಡ್ಡು ಹೇರಳವಾಗಿಯೇ ಸಂಪಾದನೆಯಾಗುತ್ತಿತ್ತು. ಆದರೆ ಆ ಟೆಂಟ್ ಗೆ ಹೆಂಗಸರ್ಯಾರೂ ಹೋಗುತ್ತಿರಲಿಲ್ಲ.
ಅಲ್ಲಿನ ವ್ಯವಸ್ಥೆಯೇ ಬೇರೆಯಿತ್ತು. ಚಿತ್ರಮಂದಿರದ ಸುತ್ತ ಮುತ್ತಾ ಸಿನಿಮಾ ಪ್ರಾರಂಭವಾಗುವವರೆಗೂ ಯಾರೂ ಇರುತ್ತಿರಲಿಲ್ಲ. ಅದಕ್ಕೆ ಕಾರಣ ಭಯ. ಯಾರಾದರೂ ನೋಡಿ ಬಿಟ್ಟರೆ..! ಆದರೆ ಚಿತ್ರ ಪ್ರಾರಂಭವಾಗಿ ಹತ್ತೇ ನಿಮಿಷಕ್ಕೆ ಇಡೀ ಚಿತ್ರಮಂದಿರ ತುಂಬಿ ಹೋಗುತ್ತಿತ್ತು.
ಆ ಚಿತ್ರಮಂದಿರದಲ್ಲಿ ಇನ್ನೂ ಒಂದು ವಿಶೇಷವಿತ್ತು. ಪೋಸ್ಟರ್ ನೋಡಿಕೊಂಡು ಸಿನಿಮಾಕ್ಕೆ ಹೋದರೆ ಪಿಗ್ಗಿಬೀಳುವ ಸಂಭವ ಇದ್ದೇ ಇತ್ತು. ಯಾಕೆಂದರೆ ಚಿತ್ರಮಂದಿರದ ಹೊರಗಿನ ಪೋಸ್ಟರ್ goo ಒಳಗಿನ ಚಿತ್ರಕ್ಕೂ ಸಂಬಂಧವೇ ಇರುತ್ತಿರಲಿಲ್ಲ. ಜನ ಅದನ್ನು ಕೇಳುತ್ತಲೂ ಇರಲಿಲ್ಲ. ಹಾಗೆಯೇ ಚಿತ್ರದಲ್ಲಿ ತೋರಿಸುತ್ತಿದ್ದ ವಯಸ್ಕರ ದೃಶ್ಯಗಳೂ ಆ ಚಿತ್ರದ್ದು ಆಗಿರಲಿಲ್ಲ.  ಆ ಚಿತ್ರಮಂದಿರದ ಪುಣ್ಯಾತ್ಮ ಯಾವ ಯಾವದೋ ವಯಸ್ಕರ ಚಿತ್ರಗಳ ತುಣುಕುಗಳನ್ನು ಒಟ್ಟು ಮಾಡಿ ಇಪ್ಪತ್ತು ನಿಮಿಶದಷ್ಟನ್ನು ರೀಲು ಮಾಡುತ್ತಿದ್ದ. ಅವನೇ ಮಾಡುತ್ತಿದ್ದನೋ ಅಥವಾ ಹಾಗೆಯೇ ಬರುತ್ತಿತೋ ಯಾರಿಗೆ ಗೊತ್ತು. ಸಿನಿಮಾ ಪ್ರಾರಂಭವಾಗಿ ಸರಿಯಾಗಿ ಅರ್ಧಗಂಟೆಗೆ ಹತ್ತು ನಿಮಷಗಳ ಅದನ್ನು ಪ್ರದರ್ಶಿಸುತ್ತಿದ್ದ. ಅನಂತರ ಮತ್ತೆ ಮಧ್ಯಂತರದ ನಂತರ ಅರ್ಧಗಂಟೆಯ ನಂತರ ಮತ್ತೆ ಹತ್ತು ನಿಮಿಷ ತೋರಿಸುತ್ತಿದ್ದ.
ಇದನ್ನು ಅರಿತಿದ್ದ ದಿನಂಪ್ರತಿ ವೀಕ್ಷಕರು ಚಿತ್ರ ಪ್ರಾರಂಭವಾದ ಅರ್ಧಗಂಟೆಹೊತ್ತಿಗೆ ಒಳಹೊಕ್ಕು ಅದಷ್ಟನ್ನು ನೋಡಿ ಹೊರಬಂದು ಬೀಡಿ ಹಚ್ಚಿ ಮತ್ತೆ ಮಧ್ಯಂತರದ ನಂತರ ಅರ್ಧಗಂಟೆ ನಂತರ ಒಳಹೊಕ್ಕು ಅದನ್ನು ನೋಡಿ ಆಮೇಲೆ ಜಾಗ ಖಾಲಿ ಮಾಡುತ್ತಿದ್ದರು.ಚಿತ್ರ ಮುಗಿಯುವವರೆಗೆ ಯಾರೂ ಇರುತ್ತಿರಲಿಲ್ಲ. ಅದರಲ್ಲೂ ರಾತ್ರಿಯ ಆಟಗಳನ್ನು ಆ ತುಣುಕು ದೃಶ್ಯ ಮುಗಿದ ಮೇಲೆ ಕೊನೆ ಮಾಡಿ ಲೈಟ್ ಆಫ್ ಮಾಡಿಯೇ ಬಿಡುತ್ತಿದ್ದರು.
ಆದರೆ ಇದೇ ವಿಷಯಗಳು ಕೆಲವೊಮ್ಮೆ ಅತಿರೇಕಕ್ಕೂ ಹೋಗುತ್ತಿತ್ತು. ತೋರಿಸಿದ ತುಣುಕುಗಳಲ್ಲಿ ಬಿಸಿ ಬಿಸಿ ದೃಶ್ಯಗಳು ಇಲ್ಲದಿದ್ದಾಗ ಅಥವಾ ಕಡಿಮೆಯಿದ್ದಾಗ ಅಥವಾ ರಾತ್ರಿ ಕುಡಿದ ಮತ್ತು ಜಾಸ್ತಿಯಾಗಿ ಜೋಶ್ ಹೆಚ್ಚಾದಾಗ ಸುಖಾಸುಮ್ಮನೆ ಜಗಳಗಳು ನಡೆಯುತ್ತಿದ್ದವು. ಮೊದಲಿಗೆ ಆ ಸಿಟ್ಟಿಗೆ ಬಲಿಯಾಗುತ್ತಿದ್ದದ್ದು ಕುರ್ಚಿಗಳು. ಏನೋ ಹಣ ಕೊಟ್ಟಿಲ್ವಾ ತೋರ್ಸೋಕ್ ಏನೋ ಎಂದದ್ದೆ ಕುರ್ಚಿಗಳಿಗೆ ದಬದಬನೆ ಒದೆಯುತ್ತಿದ್ದರು.
ನಮ್ಮೂರಿನ ಟೆಂಟಿನಲ್ಲಿ ಒಂದು ತೊಂದರೆ ಇತ್ತು. ಅದು ವಿದ್ಯುಚ್ಚಕ್ತಿಯದ್ದು. ಎಲ್ಲಾ ಆಗಿ ಸರಿಹೋಯ್ತು ಎನ್ನುವಷ್ಟರಲ್ಲಿ ಕರೆಂಟ್ ಕೈ ಕೊಡುತ್ತಿತ್ತು. ಯಾವುದೋ ದೃಶ್ಯವನ್ನು ಅಷ್ಟೇ ತನ್ಮಯರಾಗಿ ನೋಡುತ್ತಿದ್ದ ಅಭಿಮಾನಿಗಳಿಗೆ ಸಿಟ್ಟು ಬಂದದ್ದೆ ಅಲ್ಲೇ ಚಿತ್ರಮಂದಿರದಲ್ಲಿ ಕುಣಿದು ಕುಪ್ಪಳಿಸಿ ಬಿಡುತ್ತಿದ್ದರು. ಇಡೀ ಚಿತ್ರಮಂದಿರದ ವ್ಯಕ್ತಿಗಳನ್ನು ವಾಚಾಮಗೋಚರವಾಗಿ ಬಯ್ಯುತ್ತಿದ್ದರಷ್ಟೇ ಅಲ್ಲ, ಚೇರ್ ಗಳನ್ನೂ ಮುರಿಯುವ ಸಾಹಸಕ್ಕೂ ಕೈ ಹಾಕುತ್ತಿದ್ದರು. ತೀರಾ ಮುಂದೆ ಕುಳಿತವರು ಪರದೆಯ ಹತ್ತಿರಕ್ಕೆ ಹೋದದ್ದೇ ಪರದೆಯನ್ನು ಹಿಡಿದು ಜಗ್ಗಿ ಜಾಲಾಡಿ ಹರಿಯುವ ಪ್ರಯತ್ನ ಮಾಡುತ್ತಿದ್ದರು. ಅಷ್ಟರಲ್ಲಿ ಹೇಗೋ ಜನರೇಟರ್ ಸ್ಟಾರ್ಟ್ ಮಾಡಿ ಮತ್ತೆ ಸಿನಿಮಾವನ್ನು ಮುಂದುವರೆಸುತ್ತಿದ್ದರಿಂದ ಅದು ಅಷ್ಟಕ್ಕೇ ನಿಲ್ಲುತ್ತಿತ್ತು. ಜನರೇಟರ್ ಗೆ ಡೀಸೆಲ್ ಅನ್ನು ಪಕ್ಕದ ಊರಿನಿಂದ ತರಬೇಕಾದ್ದರಿಂದ ಚಿತ್ರಮಂದಿರದವರು ಮೊದಲೇ ಕ್ಯಾನ್ ಗಟ್ಟಲೆ ಶೇಖರಿಸಿ ಇಟ್ಟುಕೊಳ್ಳುತ್ತಿದ್ದರೆನೋ ನಿಜ. ಆದರೆ ಕೆಲವೊಮ್ಮೆ ಅದು ಹೇಗೇಗೋ ಕಣ್ತಪ್ಪಿನಿಂದ ಖಾಲಿಯಾಗಿ ಕರೆಂಟ್ ಬರುವವರೆಗೆ ಕಾಯಬೇಕಾದ ಪರಿಸ್ಥಿತಿಯಲ್ಲಿ ಹಣ ವಾಪಸ್ಸು ಕೊಡುತ್ತೇನೆ ಎಂದರೂ ನಾವು ದುಡ್ಡು ಕಂಡಿಲ್ವಾ..ನೀನೋಬ್ಬನೇನಾ ಕಾಸು ಕೊಂಡಿರೋನು..ಪಿಚ್ಚರ್ ನೋಡೋಕ್ ಬಂದಿದ್ದೀವಿ ಪಿಚ್ಚರ್ ಹಾಕಯ್ಯ..ಅಷ್ಟೇ ಎಂದು ಜಬರ್ದಸ್ತ್ ಮಾಡುತ್ತಿದ್ದರು.
ಈ ಎಲ್ಲಾ ಪ್ರೇಕ್ಷಕರ ಹುಚ್ಚಾಟಗಳಿಂದ ಚಿತ್ರಮಂದಿರದ ಪರದೆ ಹರಿದು ನೆರಿಗೆಗಟ್ಟಿ ಚಿತ್ರವೇ ಒಂದು ರೀತಿಯಾದರೆ ತೆರೆಯ ಮೇಲೆ ವಿಚಿತ್ರವಾಗಿ ಮೂಡುತ್ತಿತ್ತು. ಇದನ್ನೆಲ್ಲಾ ನೋಡಿ ಅನುಭವಿಸಿ ಸಾಕಾದ ಚಿತ್ರಮಂದಿರದ ಮಾಲೀಕರು ಅದಕ್ಕೊಂದು ಸಖತ್ ಉಪಾಯ ಕಂಡುಹಿಡಿದಿದ್ದರು. ಮುಂದಿನ ಪರದೆಯನ್ನು ಸಂಪೂರ್ಣವಾಗಿ ತೆಗೆದುಹಾಕಿಸಿ, ಅದನ್ನು ಗಾರೆಯಿಂದ ಗೋಡೆ ಮಾಡಿಸಿ ಬಿಳಿಯ ಬಣ್ಣ ಹೊಡೆಸಿದ್ದರು. ಈಗ ಏನೇ ಆದರೂ ಪರದೆಗೆ ಚಿಕ್ಕಪುಟ್ಟ ಗೀರುಗಳಾಗುತ್ತಿದ್ದವೆ ವಿನಾ ಬೇರೆ ದೊಡ್ಡ ತರಹದ ನಷ್ಟವಾಗುತಿರಲಿಲ್ಲ.
ನನ್ನ ಗೆಳೆಯನ ಊರಿನಲ್ಲಿ ಒಂದು ಟೆಂಟ್ ಇತ್ತು. ಅದೊಮ್ಮೆ ನಾನು ಅವರ ಊರಿಗೆ ಹೋದಾಗ ರಾತ್ರಿಯ ಆಟಕ್ಕೆ ಹೋಗೋಣ ಎಂದು ಊಟ ಮಾಡಿಕೊಂಡು ಹೊರಡಲು ಸಿದ್ಧರಾದೆವು. ಆದರೆ ಗೆಳೆಯ ಯಾವುದೇ ಉತ್ಸಾಹ ತೋರಿಸದೆ ಆರಾಮವಾಗಿ ಟೆಂಟ್ ಹತ್ತಿರ ಹೋಗೋಣ ಇದ್ರೆ ನೋಡೋಣ ಇಲ್ಲಾಂದ್ರೆ ಆರಾಮವಾಗಿ ವಾಪಸ್ ಬಂದು ಮಲಗಿಕೊಳ್ಳೋಣ ಎಂದದ್ದನ್ನು ಕೇಳಿ ನನಗೆ ಆಶ್ಚರ್ಯವಾಗಿತ್ತು. ಇದು ಚಿತ್ರ ಮಂದಿರದಲ್ಲಿ ಚಿತ್ರ ಇಲ್ಲ ಎಂದರೆ ..? ಆದರೆ ಚಿತ್ರಮಂದಿರದತ್ತ ಹೋದಾಗಲೇ ನನಗೆ ಗೊತ್ತಾದದ್ದು ಕೊನೆಯ ರಾತ್ರಿಯ ಆಟ ಒಂಭತ್ತು ಘಂಟೆಗೆ ಶುರುವಾಗಿ ಹನ್ನೆರಡಕ್ಕೆ ಮುಗಿಯುತ್ತಿದ್ದರಿಂದ ಹೊಸ ಸಾಂಸಾರಿಕ ಚಿತ್ರಗಳಾದರೆ ಮಾತ್ರ ರಾತ್ರಿ ಆಟ ಇರುತ್ತಿತ್ತು. ಜನ ಇಲ್ಲದಿದ್ದರೆ ಆಟವನ್ನು ರದ್ದುಗೊಳಿಸಿಬಿಡುತ್ತಿದ್ದರು. ನಾವೆಲ್ಲಾ ಊಟ ಮುಗಿಸಿ ಚಿತ್ರಮಂದಿರಕ್ಕೆ ಹೊರಟೆವು. ನಮ್ಮ ಅದೃಷ್ಟಕ್ಕೆ ಚಿತ್ರವೂ ಜನರೂ ಇದ್ದರು. ಆದರೆ ತಮಿಳು ಚಿತ್ರವಾಗಿತ್ತು. ಸಮಯ ಕಳೆಯಲು ಯಾವುದಾದರೇನೂ ಎಂದು ಒಳಗೆ ಹೋಗಿ ಕುಳಿತುಕೊಂಡೆವು. ಚಿತ್ರ ಪ್ರಾರಂಭವಾಯಿತು. ಅರ್ಧಗಂಟೆಯಾದರೂ ಚಿತ್ರದ ಕತೆ ಅರ್ಥವಾಗಿರಲಿಲ್ಲ. ಒಂದು ದೃಶ್ಯಕ್ಕೂ ಇನ್ನೊಂದು ದೃಶ್ಯಕ್ಕೂ ಸಂಬಂಧವೇ ಇರಲಿಲ್ಲ. ಉದಾಹರಣೆಗೆ ಒಂದು ದೃಶ್ಯದಲ್ಲಿ ನಾಯಕ ನಾಯಕಿ ಪ್ರೀತಿಸಿ ಹಾದಿ ಕುಣಿದಿದ್ದರೆ ಮುಂದಿನ ದೃಶ್ಯದಲ್ಲಿ ಇಬ್ಬರೂ ಇನ್ನೂ ಪರಿಚಯವಾಗದೇ ಆಗತಾನೆ ಪರಿಚಯವಾಗಿ ಜಗಳವಾಡುತ್ತಿದ್ದರು. ಇದ್ಯಾರು ಉಪೇಂದ್ರ ಶೈಲಿಯಲ್ಲಿ ತಿರುವು ಮುರುವು ಚಿತ್ರಕತೆ ಮಾಡಿ ಸಿನಿಮ ಮಾಡಲು ಹೋಗಿ ತಲೆಬುಡವಿಲ್ಲದ ಚಿತ್ರ ತೆಗೆದಿದ್ದಾನೆ ಎಂದು ಸುಮಾರು ಜನರೊಟ್ಟಿಗೆ ನಾವು ಬೈದುಕೊಂಡು ಬಂದಿದ್ದೆವು. ಬಂದನಂತರ ಇಡೀ ಚಿತ್ರದ ಅಂಶಗಳನ್ನು ಒಟ್ಟಾಗಿಸಿ ಕತೆಯನ್ನು ಗ್ರಹಿಸಲು ಪ್ರಯಾಸ ಪಟ್ಟಿದ್ದೆ. ಆನಂತರ ತಿಳಿದುಬಂದ ವಿಷಯವೆಂದರೆ ಆ ಟೆಂಟಿನ ಪ್ರೊಜೆಕ್ಟರ್ ಆಪರೇಟರ್ ಸಿನಿಮಾದ ರೀಲುಗಳನ್ನು ಸರಿಯಾದ ಕ್ರಮದಲ್ಲಿ ಹಾಕದೆ ಕುಡಿತದ ಗಮ್ಮತ್ತಿನಲ್ಲಿ ಇಷ್ಟಬಂದ ಹಾಗೆ ಹಾಕಿದ್ದ ಎಂಬುದು.
ಹೀಗೊಮ್ಮೆ  ನನ್ನ ನೆಂಟರ ಮನೆಗೆ ಹೋಗಿದ್ದೆ. ಆಗ ಅಲ್ಲಿ ಸಿಕ್ಕ ನನ್ನ ಗೆಳೆಯನೊಬ್ಬ ಈವತ್ತು ಇಂಗ್ಲಿಷ್ ಸಿನೆಮಾಗೆ ಹೋಗೋಣ ಎಂದ. ನಾನು ಯಾವುದು ಎಂದದ್ದಕ್ಕೆ ಗೊತ್ತಿಲ್ಲ, ಸಂಜೆ ಗೊತ್ತಾಗುತ್ತದೆ ಎಂದ. ಇದೆಂತಹ ಟೆಂಟ್ ಎನಿಸದಿರಲಿಲ್ಲ. ಸರಿ ಎಂದದ್ದೆ ರಾತ್ರಿ ಅಲ್ಲಿಗೆ ಹೋದರೆ ಅದೊಂದು ಮನೆ . ಮನೆಯ ಕಂಪೌಂಡ್ ಮೇಲೆ ಸೀಮೆ ಸುಣ್ಣವನ್ನು ನೀರಿಗೆ ಅದ್ದಿ ಡಾಳಾಗಿ ಚಿತ್ರದ ಹೆಸರು ಬರೆದಿದ್ದರೇ ಹೊರತು ಯಾವುದೇ ಪೋಸ್ಟರ್ ಅಂಟಿಸಿರಲಿಲ್ಲ. ಇರಲಿ ಎಂದದ್ದೇ ಬಾಗಿಲು ಹತ್ತಿರ ಹೋದರೆ ಅಲ್ಲಿ ನಿಂತಿದ್ದ ದ್ವಾರಪಾಲಕ ನಮ್ಮಿಂದ ಒಂದಷ್ಟು ಹಣ ತೆಗೆದುಕೊಂಡು ಒಳಬಿಟ್ಟ. ಮನೆಯ ಒಳಗೆ ಶಾಲೆಯ ಡೆಸ್ಕ್ ತರಹದ ಮರದ ಉದ್ದನೆಯ ಕುರ್ಚಿಗಳನ್ನು ಜೋಡಿಸಿದ್ದರು ಎಲ್ಲಾ ಸೇರಿ ಒಂದತ್ತು ಸಾಲಿದ್ದಿರಬಹುದು. ಎದುರಿಗೆ ಒಂದು ದೊಡ್ಡ ಟಿವಿ ಇತ್ತು. ಎರಡೂ ಕಡೆಗೆ ಎರಡು ಟೇಬಲ್ ಫ್ಯಾನ್ ಇದ್ದವು. ಅಲ್ಲಿದ್ದ ವಿಸಿ ಆರ್ ಒಳಗೆ ಯಾವುದೋ ಆಂಗ್ಲ ಚಿತ್ರದ ಕ್ಯಾಸೆಟ್ ತುರುಕಿದರು. ಆ ಹಬೆಯ ತರಹದ ಬಿಸಿಯಲ್ಲಿ ಬಿಸಿಗಾಳಿಯ ಜೊತೆ ಆ ಗುಹೆಯಲ್ಲಿ ಯಾತನಾಮಯವಾಗಿ ಅದ್ಯಾವ ಚಿತ್ರವನ್ನೂ ನೋಡಿದೆನೋ ಸರಿಯಾಗಿ ನೆನಪಿಲ್ಲವಾದರೂ ಆ ಯಮಯಾತನೆ ಇಂದಿಗೂ ನೆನಪಿದೆ.
ಈಗೀಗ ಆ ಎಲ್ಲಾ ಪರಿಕಲ್ಪನೆ ಬದಲಾಗಿರಬಹುದಾ..? ಯಾಕೆಂದರೆ ಈವತ್ತು ಮನೆಯಲ್ಲಿಯೇ ದಿನಪೂರ ಎಲ್ಲಾ ಭಾಷೆಯ ಚಿತ್ರಗಳು ಪ್ರಸಾರವಾಗುತ್ತವೆ. ಅಗ್ಗದ ಮೊಬೈಲಿನಲ್ಲೂ ಸಿನಿಮಾ ನೋಡುವ ವ್ಯವಸ್ಥೆ ಇದೆ. ಹಾಗಾಗಿಯೇ ನಾನು ಹೋದೆಡೆಯಲ್ಲ ಸ್ವಲ್ಪ ಅಚ್ಚುಕಟ್ಟಾದ ಚಿತ್ರಮಂದಿರಗಳೇ ಇವೆ ಎನಿಸುತ್ತದೆ.


No comments:

Post a Comment