Sunday, November 10, 2013

ಇಸ್ತ್ರೀ ಪುರಾಣ- ಲಲಿತ ಪ್ರಬಂಧ.



ಇಡೀ ಊರಿನಲ್ಲಿ ಅಂಗಿಗಳಿಗೆ ಗರಿಗರಿಯಾದ ಇಸ್ತ್ರೀ ಮಾಡಿಕೊಂಡು ಮನೆಯಿಂದ ಹೊರ ಬೀಳುತ್ತಿದ್ದವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಎಂದರೆ ನೀವು ನಂಬಲೇ ಬೇಕು. ಹಬ್ಬ, ಹರಿದಿನ, ಅಪರೂಪಕ್ಕೆ ಪಕ್ಕದ ನಗರ ನಂಜನಗೂಡಿಗೆ, ಯಾವುದೋ ಮದುವೆಗೆ, ಮುಂಜಿಗೆ ಮಾತ್ರ ಇಸ್ತ್ರೀ ಹಾಕಿದ ಬಟ್ಟೆ ಧರಿಸುತ್ತಿದ್ದ ನಮ್ಮೂರಿನ ಜನಕ್ಕೆ ಅದರ ಹೊರತಾಗಿ ಬಟ್ಟೆಗಳಿಗೆ ಇಸ್ತ್ರೀ ಹಾಕುವುದು ವ್ಯರ್ಥ ಎನಿಸುತ್ತಿತ್ತು. ಇಸ್ತ್ರೀ ಹಾಕಲಿಕ್ಕೆ ಇದ್ದ ಧಿರಿಸಾದರೂ ಎಂತಹದು. ಒಂದು ಬಿಳಿಯ ಪಂಚೆ, ಬಿಳಿಯ ಅಂಗಿ ಮಾತ್ರ. ನಮೂರಿನ ಬಹುತೇಕರು ಪ್ಯಾಂಟು ಧರಿಸುತ್ತಿರಲಿಲ್ಲ. ಅದೆಲ್ಲ ಸರ್ಕಾರಿ ಕೆಲಸದಲ್ಲಿರುವವರಿಗೆ ಮತ್ತು ದಿನ ಬೆಳಿಗ್ಗೆ ಪೇಟೆಗೆ ಹೋಗಿ ಬರುವವರಿಗೆ ಸೂಕ್ತ, ಹೊಲದಲ್ಲಿ ಕೆಲಸ ಮಾಡುವ ನಮ್ಮಂಥವರಿಗೆ ಪ್ಯಾಂಟು ಎಂಬುದು ಸೋಮಾರಿತನ ಕಲಿಸಿಕೊಡುವ ಕೆಟ್ಟ ಸಾಧನ ಎನ್ನುವರೀತಿಯಾಗಿ ಜನ ಅಭಿಪ್ರಾಯ ಹೊಂದಿದ್ದರು. ಇದೆಲ್ಲಾ ಕಾರಣಗಳಿಂದಲೇ ನಮ್ಮೂರಿನಲ್ಲಿ ನಮ್ಮ ಮನೆಯಲ್ಲಿದ್ದ ಏಕೈಕ ಇಸ್ತ್ರೀ ಪೆಟ್ಟಿಗೆಗೆ ಭಯಾನಕ ಬೇಡಿಕೆಯಿತ್ತು. ನಮ್ಮಪ್ಪ ಶಾಲಾ ಶಿಕ್ಷಕರಾದ್ದರಿಂದ ದಿನಾ ಇಸ್ತ್ರೀ ಮಾಡುತ್ತಿದ್ದರು. ನಾವು ಶಾಲೆಗೆ ಹೋಗುತ್ತಿದ್ದರಿಂದ ಇಸ್ತ್ರೀ ಮಾಡಿಕೊಳ್ಳುತ್ತಿದ್ದೆವು. ಆರು ತಿಂಗಳಿಗೋ ವರ್ಷಕ್ಕೋ ಬೇಕಾಗುವ ಇಸ್ತ್ರೀ ಪೆಟ್ಟಿಗೆಗೆ ವಿನಾಕರಾಣ ಬಂಡವಾಳ ಹಾಕಲು ನಮ್ಮೂರಿನ ಜನ ಮನಸು ಮಾಡಿರಲಿಲ್ಲ. ಹಾಗಾಗಿ ಬೇಕಾದಾಗ ನಮ್ಮ ಮನೆಗೆ ಬಂದು ಇಸ್ತ್ರೀ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿದ್ದರು.
ನಮ್ಮ ಮನೆಯಲ್ಲಿದ್ದದ್ದು ದೊಡ್ಡದಾದ ಕಬ್ಬಿಣದ ಇದ್ದಿಲು ಹಾಕಿ ಶಾಖ ಕೊಡಬಹುದಾದಂತಹ ಇಸ್ತ್ರೀ ಪೆಟ್ಟಿಗೆ. ‘ಸಾರ್..ನಿಮ್ಮನೆ ಇಸ್ತ್ರೀ ಪೆಟ್ಟಿಗೆಗೆ ಕಾವಾಕೋದೇ ಬ್ಯಾಡ ಬುಡಿ..ಸುಮ್ಕೆ ಬಟ್ಟೆ ಮೇಲೆ ತಿಕ್ಕಿಬಿಟ್ರೆ ಇಸ್ತ್ರೀ ಆಗೋಯ್ತದೆ...ಒಳ್ಳೆ ರೋಡ ಮೇಲೆ ಬುಲ್ಡೋಜರ್ ಓಡಾಡ್ತದಲ್ಲ ಹಂಗೆ..’ಎನ್ನುವ ಮೆಚ್ಚುಗೆಯ ಮಾತುಗಳನ್ನಾಡಿ ನಮ್ಮನೆಯ ಇಸ್ತ್ರೀ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿದ್ದವರೂ ಇದ್ದರು.
ಅದರಲ್ಲೂ ಮದುವೆಯ ಸಂದರ್ಭಗಳಲ್ಲಿ ಇಸ್ತ್ರೀ ಪೆಟ್ಟಿಗೆ ಇಡೀ ಊರನ್ನೇ ಸುತ್ತಿ ಬರುತ್ತಿತ್ತು. ಆಗ ನಮ್ಮಪ್ಪ ಅದರಲ್ಲೂ ಏನಾದರೂ ಒಂದು ಲಾಭ ಪಡೆದುಕೊಳ್ಳೋಣ ಎಂದುಕೊಂಡು ಇಸ್ತ್ರೀ ಪೆಟ್ಟಿಗೆಯನ್ನು ಯಾರು ತೆಗೆದುಕೊಂಡು ಹೋಗುತ್ತಾರೋ ಅವರು ಖಾಲಿ ಇಸ್ತ್ರೀಪೆಟ್ಟಿಗೆ ತಂದು ಕೊಡಬಾರದು ಎಂದು ತಾಕೀತು ಮಾಡಿಬಿಟ್ಟಿದ್ದರು. ಆವಾಗಿಲಿಂದ ಖಾಲಿ ಇಸ್ತ್ರೀ ಪೆಟ್ಟಿಗೆ ಬರುವಾಗ ಇದ್ದಿಲು ತುಂಬಿಕೊಂಡು ಬರುತ್ತಿತ್ತು.
ಆದರೆ ಊರಲ್ಲಿ ಬರುಬರುತ್ತಾ ಇಸ್ತ್ರೀ ಮಾಡುವವರೂ ಪೇಟೆಗೆ ಹೋಗಿ ಬರುವವರೂ ಜಾಸ್ತಿಯಾಗಿದ್ದರು. ಅದರಿಂದ ನಮ್ಮ ಮನೆಯ ಇಸ್ತ್ರೀಪೆಟ್ಟಿಗೆ ನಮಗೆ ಸಿಗುವುದು ದುಸ್ತರವಾಗತೊಡಗಿತ್ತು. ದಾರಿಯಲ್ಲಿ ಸಿಕ್ಕ ಜನ ನಮ್ಮ ತಂದೆಗೆ ‘ಸಾರ್  ಈ ಆಯ್ತವಾರ ನಾನೊಂದು ಮದುವೆಗೆ ಹೋಬೇಕು.ಒಸಿ ಇಸ್ತ್ರೀ ಪೆಟ್ಟಿಗೆ ಇಟ್ಟಿರಿ ಯಾರ್ಗೂ ಕೊಡಬೇಡಿ..’ ಎಂದು ಮೊದಲೇ ಬುಕಿಂಗ್ ಮಾಡಿಕೊಂಡುಬಿಡುತ್ತಿದ್ದರು. ಆದರೂ ಅದರ ಹಿಂದಿನ ದಿನ ತೆಗೆದುಕೊಂಡು ಹೋದವರು ವಾಪಸು ಕೊಟ್ಟಿರದೆ ಬುಕಿಂಗ್ ಮಾಡಿದವರು ನಮ್ಮ ಮನೆಗೆ ಬಂದಾಗ ‘ಇಲ್ಲಾ...ರಾಮು..ಆ ಸಿದ್ಲಿಂಗು ಇನ್ನೂ ತಂದೆ ಕೊಟ್ಟಿಲ್ಲ..’ಎಂದರೆ ಕೆರಳಿದ ಅವರು ‘ಸಾರ್ ನಿಮಗೆ ಮೊದಲೇ ಹೇಳಿದ್ನಲ್ಲಾ ಸಾ...ಏನ್ ಸಾ ನೀವು ಹಿಂಗ್ ಮಾಡಿಬುಟ್ರಿ..’ ಎಂದು ನಮ್ಮಪ್ಪನನ್ನೇ ದೂಷಿಸಿ, ‘ಇರೀ ಅವನಿಗೊಂದು ಭೂತ ಬುಡಿಸ್ತೀನಿ..ಏನ್ ಅವರಪ್ಪನ ಮನೆದು ಅನ್ಕಂಡಿದ್ದಾನಾ..’ ಎಂದು ನಮ್ಮೆದುರಿಗೆ ಬೈದು ‘ಸಾರ್..ಅವನಿಗೆ ಇನ್ಯಾವತ್ತೂ ಕೊಡಲೇಬೇಡಿ ಸಾರ್..’ ಎಂದು ನಮಗೆ ಆಜ್ಞಾಪಿಸಿ ಅಲ್ಲಿಂದ ಅವರ ಮನೆಯ ಕಡೆಗೆ ಗೂಳಿಯಂತೆ ನುಗ್ಗುತ್ತಿದ್ದರು.
ಆ ಇಸ್ತ್ರೀಪೆಟ್ಟಿಗೆ ಊರಿನಲ್ಲಿ ನಮಗೊಂದು ವಿಶೇಷ ಮರ್ಯಾದೆಯನ್ನು ತಂದುಕೊಟ್ಟಿತ್ತು. ಎಲ್ಲರೂ ಸಂತೋಷದಿಂದ ಮಾತಾಡಿಸುತ್ತಿದ್ದರಲ್ಲದೆ, ನಮ್ಮ ಮನೆಯ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಿದ್ದರು. ಆದರೆ ಅದರಿಂದ ಚಿಕ್ಕಪುಟ್ಟ ಅವಾಂತರಗಳೂ, ನಮ್ಮ ಇಸ್ತ್ರೀ ಪೆಟ್ಟಿಗೆಯಿಂದ ಜಗಳಗಳೂ ನಡೆಯುತ್ತಿದ್ದ ಸಂದರ್ಭಗಳೂ ಇದ್ದವು.   
ಅದೊಂದು ದಿನ ನಮ್ಮೂರಿನವರೇ ಆದ ಇಬ್ಬರು ಮಹಿಳೆಯರು ಜುಟ್ಟು ಜುಟ್ಟು ಹಿಡಿದುಕೊಂಡು ಜಗಳವಾಡಿಕೊಂಡಿದ್ದರು. ಅದಕ್ಕೆ ಕಾರಣವಾದದ್ದು ನಮ್ಮ ಮನೆಯ ಇಸ್ತ್ರೀ ಪೆಟ್ಟಿಗೆಯಾಗಿತ್ತು. ರತ್ನಮ್ಮ ನಮ್ಮ ಮನೆಯಲ್ಲಿ ಬಂದು ಆವತ್ತು ಇಸ್ತ್ರೀ ಪೆಟ್ಟಿಗೆ ಕೇಳಿದ್ದಳು. ತನ್ನ ಮಗಳು-ಅಳಿಯ ಊರಿಗೆ ಬಂದು ವಾರವಾಗಿದ್ದು ನಾಳೆ ಹೋಗುತ್ತಿದ್ದಾರೆ, ನಮ್ಮ ಅಳಿಯ ಇಸ್ತ್ರೀಯಿಲ್ಲದೆ ಬಟ್ಟೆ ಧರಿಸುವುದೇ ಇಲ್ಲ ಎಂದು ಅಲವತ್ತುಗೊಂಡಿದ್ದಳು. ಆದರೆ ಆಕೆಯ ದುರಾದೃಷ್ಟಕ್ಕೆ ಆವತ್ತೇ ಲಕ್ಷ್ಮಿ ತನ್ನ ಮನೆಗೆ ತೆಗೆದುಕೊಂಡು ಹೋಗಿಬಿಟ್ಟಿದ್ದಳು. ಆಗ ಕೈ ಕೈ ಹೊಸಕಿಕೊಂಡ ರತ್ನಮ್ಮ ಹೆಂಗಾರ ಮಾಡಿ ತನಗೆ ಆ ಇಸ್ತ್ರೀ ಪೆಟ್ಟಿಗೆಯನ್ನು ಈಸಿ ಕೊಡಬೇಕೆಂದು ಇದು ನಮ್ಮ ಮನೆಯ ಮಾನ ಮರ್ಯಾದೆಯ ಪ್ರಶ್ನೆ, ಬೀಗರ ಮುಂದೆ ನಮ್ಮ ಮರ್ಯಾದೆ ಹೋಗಿ ಬಿಡುತ್ತದೆ, ನೀವೇ ಬಂದು ಲಕ್ಷ್ಮಿ ಹತ್ತಿರ ಇಸ್ತ್ರೀಪೆಟ್ಟಿಗೆ ಈಸಿಕೊಟ್ಟು ಉಪಕಾರ ಮಾಡಬೇಕು ಎಂದು ನಮ್ಮಪ್ಪನನ್ನು ಗೋಗೆರೆದಿದ್ದಳು. ನಮ್ಮಮ್ಮ ಅಲ್ಲೋಗಿ ಕೇಳು ಅವಳು ಕೊಡುತ್ತಾಳೆ ಎಂದು ಎಷ್ಟೇ ಹೇಳಿದರೂ ಆಕೆ ಲಕ್ಷ್ಮಮ್ಮನ ಬಳಿ ಹೋಗಲು ತಯಾರಿರಲಿಲ್ಲ. ಯಾಕೆಂದರೆ ರತ್ನಮ್ಮ ಮತ್ತು ಲಕ್ಷ್ಮಿ ಇಬ್ಬರೂ ವಾರಗಿತ್ತಿಯರಾಗಿದ್ದರು ಮತ್ತು  ಅವರ ಮನೆಗಳು ಎದುರು ಬದುರೆ ಇದ್ದದ್ದರಿಂದ ದಿನಾ ಜಗಳವಾಡುತ್ತಿದ್ದರು. ಕೊನೆಗೆ ಸೋತ ನಮ್ಮಪ್ಪ ನನ್ನನ್ನು ಹೋಗಿ ಅವಳ ಮನೆಯಿಂದ ಇಸ್ತ್ರೀ ಪೆಟ್ಟಿಗೆಯನ್ನು ಈಸಿಕೊಡುವಂತೆ ಹೇಳಿದರು. ನಾನು ರತ್ನಮ್ಮ ಜೊತೆ ಲಕ್ಷ್ಮಮ್ಮನ ಮನೆಗೆ ಹೋಗಿ ಅವರ ಮನೆಯಿಂದ ಇಸ್ತ್ರೀ ಪೆಟ್ಟಿಗೆ ತೆಗೆದುಕೊಟ್ಟಿದ್ದಕ್ಕೆ ರತ್ನಮ್ಮ ಭಾವಪರವಶಳಾಗಿ ನನ್ನನ್ನು ಕೊಂಡಾಡಿದ್ದಳು.
ಆನಂತರ ಮನೆಗೆ ಖುಷಿಯಿಂದ ಬಂದಿದ್ದಾಳೆ. ಮಗಳ ಕೈಯಲ್ಲಿ ಅಳಿಯನ ಬಟ್ಟೆ ಕೊಡುವಂತೆ ಕೇಳಿದ್ದಾಳೆ, ಮಗಳೂ ಅಷ್ಟೇ ಖುಷಿಯಿಂದ ಹೋಗಿ ಗಂಡನ ಹತ್ತಿರ ಅಮ್ಮ ಇಸ್ತ್ರೀ ಮಾಡಿಕೊಡುತ್ತಾಳೆ..ಬಟ್ಟೆ ಕೊಡಿ ಎಂದು ಕೇಳಿದ್ದಾಳೆ, ಅವನು ಕೊಟ್ಟಿದ್ದಾನೆ..ಅದೇ ಒಂದು ತರನಾದ ಗರ್ವದ ಜೊತೆಗೆ ರತ್ನಮ್ಮ ಇಸ್ತ್ರೀ ಮಾಡಲು ಕುಳಿತುಕೊಂಡಿದ್ದಾಳೆ.ಮೊದಲಿಗೆ ಎರಡು ರಗ್ಗನ್ನು ಮೂರು ಅಡಿ ಉದ್ದಕ್ಕೆ ಮಡಚಿ ಅದರ ಮೇಲೆ ಬಿಳಿಯ ಪಂಚೆ ಹಾಸಿ ಸಿದ್ಧಮಾಡಿದ್ದಾಳೆ. ಇಸ್ತ್ರೀ ಪೆಟ್ಟಿಗೆಗೆ ಮೊದಲಿಗೆ ಇದ್ದಲು ಹಾಕಿ, ಆನಂತರ ನಿಗಿ ನಿಗಿ ಕೆಂಡ ಹಾಕಿ ಮುಚ್ಚಿದ್ದಾಳೆ. ಆನಂತರ ಬಿಸಿಯಾಗಿದೆ ಎಂದಾಕ್ಷಣ ಅಳಿಯ ಹೊಸ ಮುದುರಿಹೋಗಿದ್ದ ರೇಶಿಮೆ ಅಂಗಿಯನ್ನು ಹಾಸಿ ಇಸ್ತ್ರೀ ಪೆಟ್ಟಿಗೆಯನ್ನು ಅದರ ಮೇಲೆ ಇಟ್ಟಿದ್ದಾಳೆ. ಆನಂತರ ಮೇಲೆತ್ತಿದ್ದರೆ ಇಡೀ ಇಸ್ತ್ರೀ ಪೆಟ್ಟಿಗೆ ಅಂಗಿಗೆ ಆಂಟಿಕೊಳ್ಳಬೇಕೆ..?ಜೋರಾಗಿ ಒದರಿದಾಗ ಇಸ್ತ್ರೀ ಪೆಟ್ಟಿಗೆ ಅಷ್ಟೂ ಜಾಗವನ್ನು ಆಪೋಶನ ತೆಗೆದುಕೊಂಡಿದೆ. ಅಳಿಯನ ಬಟ್ಟೆಯ ಸ್ಥಿತಿ ಕಂಡ ರತ್ನಮ್ಮ ಹೌಹಾರಿದ್ದಾಳೆ. ಇನ್ನು ಗಂಡ ಬಂದರೆ ಭಾರಿಸುವುದು ಖಾತರಿಯಾಗಿದೆಯಾದರೂ ಇದಕ್ಕೆಲ್ಲಾ ಕಾರಣ ಲಕ್ಷ್ಮಿ ಎಂದೆ ಎನಿಸಿಬಿಟ್ಟಿದೆ.
ಇಸ್ತ್ರೀ ಪೆಟ್ಟಿಗೆ ತೆಗೆದುಕೊಂಡು ಹೋದವರು ಬಟ್ಟೆಗಳನ್ನು ಸುಟ್ಟುಕೊಳ್ಳುವುದು ಸರ್ವೇ ಸಾಮಾನ್ಯವಾಗಿತ್ತಾದರೂ ವಾಪಸು ಕೊಡುವಾಗ ಬುಡದಲ್ಲಿ ಶಾಖ ಜಾಸ್ತಿಯಾಗಿ ಅಂಟಿಕೊಂಡಿದ್ದ ಕರಗಿದ್ದ ಬಟ್ಟೆಯನ್ನೆಲ್ಲಾ ಕೆರೆದು ಕೊಡುತ್ತಿದ್ದರು. ನಾವೂ ಅಷ್ಟೇ! ಇಸ್ತ್ರೀ ಮಾಡುವ ಮೊದಲು ತಳವನ್ನೊಮ್ಮೆ ನೋಡಿಯೇ ಮುಂದುವರೆಯುತ್ತಿದ್ದೆವು. ತಕ್ಷಣ ಇದೆಲ್ಲಾ ಆ ಲಕ್ಷ್ಮಿ ಬೇಕೆಂತಲೇ ಮಾಡಿದ್ದಾಳೆ, ತಾನೇ ಬಟ್ಟೆ ಸುಟ್ಟುಕೊಂಡು ತಳ ಕೆರೆಯದೆ ಹಾಗೆ ಕೊಟ್ಟಿದ್ದಾಳೆ, ತನ್ನ ಮಾನ ಕಳೆಯಲು ಹುನ್ನಾರ ಮಾಡಿದ್ದಾಳೆ ಎಂದುಕೊಂಡ ರತ್ನಮ್ಮ ಇನ್ನು ಮುಂದೆ ಯೋಚಿಸಲು ಹೋಗದೆ ಸೀದಾ ಅವಳ ಮನೆಗೆ ನುಗ್ಗಿ ಶರಂಪರ ಜಗಳವಾಡಿದ್ದಾಳೆ. ಇಲ್ಲಾ...ಅದು ಮೇಸ್ಟ್ರು ಕೊಟ್ಟಾಗಲೇ ಹಾಗಿತ್ತು ಬೇಕಾದ್ರೆ ಅವರನ್ನೇ ಕೇಳು..ನನ್ನ ತಂಟೆಗೆ ಬರಬೇಡ ಎಂದು ಲಕ್ಷ್ಮಿ ಜೋರು ಮಾಡಿದ್ದಾಳೆ. ಇದು ತಾರಕಕ್ಕೇರಿ ಕೊನೆಗೆ ಸಾಕ್ಷಿಗಾಗಿ ಅವರ ದಂಡು ನಮ್ಮ ಮನೆಯ ಮುಂದೆ ಬಂದಿದೆ.
‘ಹೇಳಿ ಸಾ..ನೀವು ಕೊಡುವಾಗ ಹಂಗೆ ಇರ್ನಿಲ್ವಾ..’
‘ಅದ್ಯಾಕಂಮಿ ಮೇಸ್ಟ್ರು ಸುಟ್ಟುಕೊಟ್ಟಾರು..ನಿಂಗೆ ಮನೆವರ್ತೆ ಮಾಡಕ್ಕೆ ಬರ್ಲ್ಲಾಂದ್ರೆ ಯಾರ್ಗೂ ಬರಾಕಿಲ್ವಾ..ಕತ್ತೆ ಲೌಡಿ ನೀನು ಬೇಕಂದೆ ಮಾಡಿದೆಯ್ ..ಎಂದು ಇವಳು...ಕೊನೆಗೆ ಅದೇ ಮನೆಯ ಅಳಿಯನ ಮಧ್ಯಸ್ಥಿಕೆಯಿಂದಾಗಿ ಆ ಜಗಳ ಬಗೆಹರಿದದ್ದು ಬೇರೆ ಮಾತು.
ನಮ್ಮೂರಿನಲ್ಲಿ ಪುಟ್ಟಪ್ಪನೊಬ್ಬನೇ ಅಗಸನಿದ್ದದ್ದು. ಆದರೆ ಅಲ್ಯಾರೂ ಬಟ್ಟೆ ಹೊಗೆಯಲು ಅವನ ಕೈಗೆ ಕೊಡುತ್ತಿರಲಿಲ್ಲ. ಮುಟ್ಟಿನ, ಸೂತಕದ ಮುಂತಾದ ಬಟ್ಟೆಗಳನ್ನು ಮಾತ್ರ ಅವನ ಕೈಗೆ ಕೊಟ್ಟು ಒಗೆಸುವ ಸಂಪ್ರಾದಾಯ ನಮ್ಮೂರಲ್ಲಿತ್ತು. ಹಾಗಾಗಿ ಅವನ ಮೂಲ ಕಸುಬಿನಿಂದ ಅವನಿಗೆ ಅಂತಹ ಲಾಭವಾಗುತ್ತಿರಲಿಲ್ಲ. ಊರವರು ವರ್ಷಕ್ಕೊಮ್ಮೆ ಒಂದಷ್ಟು ದವಸ ಧಾನ್ಯ ಕೊಡುತ್ತಿದ್ದರಾದರೂ ಅದು ಅಲ್ಲಿಗಲ್ಲಿಗೆ ಸರಿ ಹೋಗುತ್ತಿತ್ತು.
ಅದೊಂದು ದಿನ ಹೀಗೆ ನಮ್ಮ ಮನೆಗೆ ಬಂದ ಪುಟ್ಟಪ್ಪನಿಗೆ ನಮ್ಮಪ್ಪ ಅದೂ ಇದೂ ಮಾತಾಡುತ್ತ ಇಸ್ತ್ರಿಯ ವಿಚಾರ ತೆಗೆದಿದ್ದರು. ‘ಅಲ್ವೋ ಪುಟ್ಟ ..ಹೆಂಗೂ ಒಂದು ಇಸ್ತ್ರೀ ಅಂಗಡಿ ಇಟ್ಕಂದ್ರೆ ಜನಕ್ಕೂ ಒಳ್ಳೆದಾಗ್ತದೆ..ನಿನಗೂ ಒಂದಷ್ಟು ಕಾಸಾಗ್ತದೆ..’ ಎಂದದ್ದಕ್ಕೆ ಒಮ್ಮೆ ನೆಲಕ್ಕೆ ತುಪಕ್ಕನೆ ಉಗಿದ ಪುಟ್ಟಪ್ಪ, ‘ಸುಮ್ಕಿರಿ ಸಾ.. ನಮ್ಮೂರ ಜನ ಕಾಸು ಕೊಟ್ಟು ಇಸ್ತ್ರೀ ಹಾಕಿಸ್ಕ೦ಡಾರ..? ತಾಮ್ರದ ಚೆಂಬೋಳಕ್ಕೆ ಕೆಂಡಸುರ್ಕೊಂದು ತಾವೇ ಬಟ್ಟೆ ಮೇಲೆ ತಿಕ್ಕೊಳ್ಳೋ ಜನ ..’ ಎಂದೆಲ್ಲಾ ದೂಷಣೆಯ ಮಾತುಗಳನ್ನಾಡಿದನಾದರೂ ಕೊನೆಕೊನೆಗೆ ನಮ್ಮಪ್ಪನ ಮಾತಿನಲ್ಲೂ ಅರ್ಥ ಇದೆ ಅನಿಸಿತು. ನಮ್ಮಪ್ಪನೂ ಅದಕ್ಕೆ ಬೇಕಾದ ಉದಾಹರಣೆಗೆಳನ್ನೂ ಊರು ಬೆಳೆಯುತ್ತಿರುವ ರೀತಿ, ಶಾಲೆಯ ಹುಡುಗರು ಕಾಲೇಜಿಗೆ ಕಾಲು ಇಡುತ್ತಿರುವುದು ಜನರೆಲ್ಲಾ ಪ್ಯಾಂಟನ್ನು ಬಳಸಲು ಕಲಿತಿರುವುದು ಮುಂತಾದ ಇಸ್ತ್ರೀಗೆ ಅನುಕೂಲಕರವಾದ ಅಂಶಗಳನ್ನು ಅವನ ತಲೆಗೆ ತುಂಬಿದ್ದರು. ಕೊನೆಗೆ ‘ಸರಿ ಸಾ.. ಆದೂ ಆಗೋಗ್ಲಿ..ಹೆಂಗೋ ನಂಗೆ ಮೊದಲ್ನಂಗೆ ಹೊಲದಲ್ಲಿ ಕೆಲಸ ಮಾಡಕ್ಕಾಗಲ್ಲ..ಕುಂತ ಜಾಗದಲ್ಲೇ ಒಂದಷ್ಟು ಕಾಸು ಬರದಾದ್ರೆ ಆಗ್ಲಿ ಬುಡಿ...ಹೆಂಗೋ ಒಂದ್ ಇಸ್ತ್ರೀ ಪೆಟ್ಟಿಗೆ, ಒಂದಷ್ಟು ಇದ್ದಿಲು ತಾನೇ ಬಂಡವಾಳ ..’ ಎಂದವನು ಒಂದು ಇಸ್ತ್ರೀ ಅಂಗಡಿಯನ್ನು ತೆರೆಯುವ ನಿರ್ಧಾರ ಮಾಡೇ ಬಿಟ್ಟಿದ್ದ. ‘ಸಾರ್..ಒಸಿ ಯವಾರ ಕೈ ಹತ್ತೊಗಂಟ ನಿಮ್ಮ ಇಸ್ತ್ರೀ ಪೆಟ್ಟಿಗೆ ಕೊಟ್ಟಿರಿ..ಆಮ್ಯಾಕೆ ನಾನೇ ಒಂದ್ ಕೊಂಡ್ಕತೀನಿ..ಎಂದಾಗ ನಮ್ಮಪ್ಪ ಹೌಹಾರಿದ್ದರು.
ನಮ್ಮ ಮನೆಯ ಇಸ್ತ್ರೀ ಪೆಟ್ಟಿಗೆ ಊರ ಬಹುತೇಕರ ಬಟ್ಟೆಗಳನ್ನು ಇಸ್ತ್ರೀ ಮಾಡಿ, ಸುಟ್ಟು ಹಾಕಿ ಅದರ ಬುಡವೆಲ್ಲ ಸವೆದು ಹೋಗಿತ್ತು. ಅದರಲ್ಲಿ ಇಸ್ತ್ರೀ ಮಾಡೋವಾಗ ಅತಿಯಾದ ಜಾಗರೂಕತೆ ವಹಿಸಬೇಕಾಗಿತ್ತು. ಹಾಗಾಗಿ ನಮಗೆ ಹೊಸದನ್ನು ತರುವ ಅನಿವಾರ್ಯ ಬಂದೊದಗಿತ್ತು. ಆದರೆ ಈ ಸಾರಿ ಇದ್ದಿಲು ಇಸ್ತ್ರೀ ಪೆಟ್ಟಿಗೆ ಬೇಡವೇ ಬೇಡ..ಕರೆಂಟ್ ದು ತನ್ನಿ ಎಂಬುದು ನಮ್ಮಮ್ಮ ಮತ್ತು ನಮ್ಮೆಲ್ಲರ ಒಕ್ಕೊರಳಿನ ಒತ್ತಾಯವಾಗಿತ್ತು. ‘ಅದೇಗೆ ಸಾಧ್ಯ..ನಾವೇನೆ ತಂದರೂ ಊರ ಜನ ಕೇಳದೆ ಬಿಡುವುದಿಲ್ಲ..ಕೊಡದಿದ್ದರೆ ನಿಷ್ಠೂರ..ಹಾಗಂತ ಕೊಟ್ಟರೆ ಅದನ್ನು ಬಳಸಲು ಬರದೆ ಹೆಚ್ಚು ಕಡಿಮೆ ಆಗುವ ಸಂಭವ ಜಾಸ್ತಿ..ಮೊದಲೇ ಕರೆಂಟಿನದು..ಸುಮ್ಮನೆ ಇಲ್ಲದ ಅಪಾಯ ಯಾಕೆ? ’ಎಂಬುದು ನಮ್ಮಪ್ಪನ ಅಳಲು. ಹಾಗಾಗಿ ಪುಟ್ಟಪ್ಪ ಇಸ್ತ್ರೀ ಅಂಗಡಿ ತೆರೆದರೆ ನಮಗೆ ಸ್ವಲ್ಪ ತೊಂದರೆ ತಪ್ಪಬಹುದು ಎಂಬುದು ನಮ್ಮಪ್ಪನ ಆಲೋಚನೆಯೂ ಆಗಿತ್ತೆನ್ನಬಹುದು.
ಹೊಸದಾದ ಇಸ್ತ್ರೀ ಪೆಟ್ಟಿಗೆ ತಂದ ಪುಟ್ಟಪ್ಪ ಅಂಗಡಿ ತೆರೆಯುವ ಹಿಂದಿನ ನಮ್ಮ ಮನೆಗೆ ಬಂದವನು ನಮ್ಮಪ್ಪನ ಕೈಯಲ್ಲಿ ಶರ್ಟುಗಳನ್ನು ಇಸ್ತ್ರೀ ಮಾಡುವ ಬಗೆ, ಪ್ಯಾಂಟುಗಳನ್ನೂ ಇಸ್ತ್ರೀ ಮಾಡುವ ಬಗೆ ಮುಂತಾದ ವಿಷಯಗಳನ್ನು ಗಂಟೆಗಟ್ಟಲೆ ಪ್ರಾಯೋಗಿಕವಾಗಿಯೇ ತಿಳಿದುಕೊಂಡು ಹೋಗಿದ್ದ.
ಮಾರನೆಯ ದಿನ ಭರ್ಜರಿಯಾಗಿ ಇಸ್ತ್ರೀ ಪೆಟ್ಟಿಗೆ ಅಂಗಡಿ ತೆರೆದ ಪುಟ್ಟಪ್ಪ ಮನೆಮನೆಗೂ ಹೋಗಿ ತಾನು ಇಸ್ತ್ರೀ ಪೆಟ್ಟಿಗೆ ಅಂಗಡಿ ತೆರೆದಿರುವುದಾಗಿ ಸಾರಿಕೊಂಡು ಬಂದಿದ್ದ. ಹೇಗೋ ವರ್ಷಾ ವರ್ಷಾ ಬಂದು ದವಸ ಧಾನ್ಯ ತೆಗೆದುಕೊಂಡು ಹೋಗುವ ಪುಟ್ಟಪ್ಪನಿಗೆ ತಾವು ಕೊಟ್ಟ ದವಸಕ್ಕೆ ಸರಿಯಾದ ಕೆಲಸ ತೆಗೆದುಕೊಳ್ಳಬೇಕು ಎಂದು ನಮ್ಮೂರ ಜನ ನಿರ್ಧಾರ ಮಾಡಿಬಿಟ್ಟು ಬಟ್ಟೆಯನ್ನೆಲ್ಲಾ ಅವನ ಕೈಲಿ ಕೊಟ್ಟು ಇಸ್ತ್ರೀ ಮಾಡಿಸಲು ಸಿದ್ಧರಾಗಿದ್ದರು.
ಆದರೆ ಒಂದೆ ವಾರಕ್ಕೆ ಪುಟ್ಟಪ್ಪನ ಅಂಗಡಿಯನ್ನು ಮುಚ್ಚುವ ಪ್ರಮೇಯ ಬಂದೊದಗಿತ್ತು. ಇನ್ನೂ ಅನುಭವವಿಲ್ಲದ ಕಾರಣ ಪುಟ್ಟಪ್ಪ ಇಸ್ತ್ರೀ ಪೆಟ್ಟಿಗೆಗೆ ಎರ್ರಾಬಿರ್ರಿ  ಇದ್ದಿಲು ಕೆಂಡ ಹಾಕಿಬಿಡುತ್ತಿದ್ದ. ಬಟ್ಟೆಗಳು ಸುಟ್ಟು ಹೋಗುತಿದ್ದವು.ಆನಂತರ ಅದನ್ನು ಮಡಚಿ ಮಟ್ಟಸವಾಗಿ ಕೊಡುತ್ತಿದ್ದ. ‘ಪರಾವಾಯಿಲ್ಲ ಕಣಯ್ಯಾ..ನೀನು ಕಸುಬು ಕಲ್ತು ಬುಟ್ಟೆ..’ ಎಂದರೇ, ‘ಏನೋ ಸಾಮಿ..ಇನ್ನಾ ಸಲ್ಪ ಪಕ್ಕಾ ಆಗ್ಬೇಕು...ಈ ವಾರದಾಗೆ ಎಲ್ಲಾ ಸರ್ಯೋತದೆ..’ ಎಂಬ ಮಾತುಗಳನ್ನು ಆಡುತ್ತಿದ್ದ. ಅವನ ಮಾತಿನ ಒಳಾರ್ಥ ಅರಿಯದ ಜನ ಕೈಗೆ ಚಿಲ್ಲರೆ ಕಾಸು ಕೊಟ್ಟು ಮನೆಗೆ ಹೋಗಿ ಬಟ್ಟೆಯನ್ನು ಬಿಡಿಸಿದರೆ ಅಲ್ಲಿರುತ್ತಿತ್ತು ಸುಟ್ಟು ಹೋದ ರಂಧ್ರಗಳ ಚಿತ್ತಾರ. ತೀರಾ ಸುಟ್ಟುಹೋಗದಿದ್ದರೂ ಇಸ್ತ್ರೀ ಪೆಟ್ಟಿಗೆಯ ಕೆಳ ಸಂಧಿಯಿಂದ ಹಾರುವ ಚಿಕ್ಕ ಚಿಕ್ಕ ಕಿಡಿಗಳು ಬಟ್ಟೆಗಳಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡುತ್ತಿದ್ದವು. ಒಳ್ಳೊಳ್ಳೆ ಮದುವೆ ಸೀರೆಗಳು , ಬಟ್ಟೆಗಳು ಸುಟ್ಟು ಹೋದ ನಂತರ ಜನರೆಲ್ಲಾ ಅವನ ಮನೆಯ ಹತ್ತಿರ ಹೋಗಿ ಅವನ ಇಸ್ತ್ರೀಪೆಟ್ಟಿಗೆ ಕಿತ್ತುಕೊಂಡು ಬದಲಿ ಹೊಸ ಬಟ್ಟೆ ಕೊಡುವಂತೆ ಜಗಳ ಮಾಡಿದ್ದರು. ಅವರನ್ನೆಲ್ಲಾ ಹೇಗೋ ಸಮಾಧಾನ ಮಾಡಿ ಕಳುಹಿಸಿದ ಪುಟ್ಟಪ್ಪನ ಮಗ ಗಂಗಯ್ಯ ಅಪ್ಪನಿಗೆ ಬೈಯ್ದು ‘ನೀನು ಮನೆಯಲ್ಲಿ ಬಿದ್ದಿರು..ಈ ಇಸ್ತ್ರೀನೂ ಮಾಡಬೇಡಾ..ಏನೂ ಮಾಡಬೇಡಾ..’ ಎಂದು ಗದರಿ ಅಂಗಡಿಯನ್ನು ಮುಚ್ಚಿದ್ದ.
ಅದೇ ಕೊನೆ. ಆನಂತರ ನಮ್ಮ ಊರಿನಲ್ಲಿ ಮತ್ತೆ ಯಾರೂ ಇಸ್ತ್ರೀ ಅಂಗಡಿ ಇಡಲಿಲ್ಲವಾದರೂ ಕೆಲವರು ಸ್ವಂತಕ್ಕೆ ಇಸ್ತ್ರೀಪೆಟ್ಟಿಗೆಯನ್ನು ಖರೀದಿ ಮಾಡಿದ್ದರು.ನಾವೊಂದು ಎಲೆಕ್ಟ್ರಿಕ್ ಇಸ್ತ್ರೀಪೆಟ್ಟಿಗೆ ತಂದೆವಾದರೂ ಹಳೆಯ ಇಸ್ತ್ರೀಪೆಟ್ಟಿಗೆ ಮಾತ್ರ ತನ್ನ ಊರು ಸುತ್ತುವ ಕಾರ್ಯಕ್ರಮವನ್ನು ಎಡೆಬಿಡದೆ ಮಾಡುತ್ತಿತ್ತು.
[ಇತ್ತೀಚಿಗೆ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ನನ್ನ ಪ್ರಬಂಧ]

No comments:

Post a Comment