Tuesday, October 8, 2013

ತಣ್ಣನೆಯ ಹಂತಕನ ಕಥೆ:

ಯಾವುದೇ ಒಬ್ಬ ವ್ಯಕ್ತಿಗೆ ಕೆಲಸ ಕೊಡುವ ಮೊದಲು ಅವನು ಆ ಕೆಲಸದಲ್ಲಿ ನಿಷ್ಣಾತನೋ ಇಲ್ಲವೋ ಪರೀಕ್ಷಿಸಬೇಕಾದದ್ದು ಕೆಲಸ ಕೊಡುವ ಬಾಸ್ ನ ಮೊದಲ ಕೆಲಸ. ಅವನು ಕುಕ್ಲಿಂಸ್ಕಿ. ಹೆಸರೇ ವಿಚಿತ್ರ ಎನಿಸಿದರೂ ಅದವರ ತಂದೆ ತಾಯಿ ಇಟ್ಟ ಹೆಸರಾದ್ದರಿಂದ ನಾವಲ್ಲ, ಅವರ ಬಾಸ್ ರಾಯ್ ಕೂಡ ಇನ್ನೂ ಮಾಡುವಂತಿಲ್ಲ. ಅವನಿಗೆ ಅವನ ಹೆಸರು ಕರೆಯುವುದು ಹಿಂಸಾತ್ಮಕ. ಸ್ಕಿ ರಾಯ್ ಹತ್ತಿರ ಬಂದವನು ನನಗೆ ಕೆಲಸವಿಲ್ಲ ಕೆಲಸ ಕೊಡಿ ಎಂದು ಕೇಳಿದಾಗ ರಾಯ್ ಅವನ ಕೈಗೊಂದು ಪಿಸ್ತೂಲ್ ಕೊಟ್ಟು ಅಲ್ಲಿ ಕುಳಿತ ಭಿಕ್ಷುಕನನ್ನು ಕೊಂದು ಬಾ ಎನ್ನುತ್ತಾನೆ. ಅವನಿಗೆ ಗೊತ್ತು ಸುಫಾರಿ ಹಂತಕನಿಗೆ ಕೊಲ್ಲು ಎಂದರೆ ಅವನು ಕೊಳ್ಳಬೇಕು, ಯಾರು ಏಕೆ,,ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಬಾರದು. ಸ್ಕಿಯೂ ಅಷ್ಟೇ. ತುಟಿಪಿಟಕ್ ಎನ್ನದೆ ಪಿಸ್ತೂಲ್ ತೆಗೆದುಕೊಂಡು ಆ ಭಿಕ್ಷುಕನ ಹತ್ತಿರ ಹೋಗುತ್ತಾನೆ. ಆತನ ಪಕ್ಕ ಕುಳಿತುಕೊಂಡು ಕುಶಲೋಪರಿ ವಿಚಾರಿಸಿ ಅವನು ಉತ್ತರಿಸುವಷ್ಟರಲ್ಲಿ ಮೂರ್ನಾಲ್ಕು ಗುಂಡುಗಳನ್ನು ಅವನ ದೇಹಕ್ಕೆ ತೂರಿಸಿ ಅಲ್ಲಿಂದ ಎದ್ದು ಬಂದು ರಾಯ್ ಕಡೆಗೆ ‘ಹೆಂಗೆ’ ಎನ್ನುವ ಹಾಗೆ ನೋಡುತ್ತಾನೆ.
ಹಾಗಂತ ಸ್ಕಿ ಗೆ ಅದು ಮೊದಲನೆಯ ಕೊಲೆಯೇನೂ ಅಲ್ಲ. ಆದರೆ ನಿರುದ್ದೇಶದಿಂದ ಮಾಡಿದ ಮೊದಲ ಕೊಲೆಯದು. ಇದಕ್ಕೂ ಮುನ್ನ ಸ್ನೂಕರ್ ಆಡುವಾಗ ಚಿಕ ಜಗಳವಾಗಿ ಬೈದನೆಂದು ಎದುರಾಳಿಯನ್ನು ಕುಳಿತಕಾರಿನಲ್ಲಿ ಕಟ್ಟು ಕೊಯ್ದು ಕೊಂದಿದ್ದ.
ಮುಂದೆ ರಾಯ್ ಜೊತೆ ಸೇರಿದ ಮೇಲೆ ಶುರುವಾಯಿತಲ್ಲ ಕೊಲೆಗಳ ಸುರಿಮಳೆ. ಫೋಟೋ ಕೊಟ್ಟು ದುಡ್ಡು ಕೊಟ್ಟರೆ ಮುಗೀತು ಆ ನಿರ್ದಯಿ ಹಂತಕನಿಗೆ ಬೇರೇನೂ ಬೇಕಾಗುವುದಿಲ್ಲ. ಹೋಗಿ ಕೊಂದು ಬಂದು ಬಿಡುತ್ತಾನೆ.
ಅವನಿಗೆ ಪ್ರೀತಿಸಿ ಮದುವೆಯಾದ ಹೆಂಡತಿಯಿದ್ದಾಳೆ. ಇಬ್ಬರು ಹೆಣ್ಣು ಮಕ್ಕಳಿದ್ದಾಳೆ. ಮನೆಯಲ್ಲಿ ಆತ ಅದ್ಭುತ ಗಂಡ ಮತ್ತು ಅಪ್ಪ.ಅವನನ್ನು ಪೊಲೀಸಿನವರು ಬಂಧಿಸಿದಾಗ ಸ್ವತಃ ಹೆಂಡತಿ ಮಕ್ಕಳೇ ನಿಬ್ಬೆರಗಾಗಿ ಹೋಗಿದ್ದರಂತೆ. ಅವನ ಜೀವಿತಾವಧಿಯಲ್ಲಿ ಸರಿ ಸುಮಾರು ನೂರಕ್ಕೂ ಹೆಚ್ಚು ಕೊಲೆಗಳನ್ನು ಮಾಡಿದ ಸ್ಕಿಗೆ ಜೀವಾವಧಿ ಶಿಕ್ಷೆಯಾಗಿ ಜೈಲಿನಲ್ಲೇ ಪ್ರಾಣಬಿಟ್ಟ.

2012 ರಲ್ಲಿ ಬಿಡುಗಡೆಯಾದ ದಿ ಐಸ್ ಮ್ಯಾನ್ ಚಿತ್ರ ಇದೆ ಸ್ಕಿ ಯಾ ಜೀವನ ಕಥೆಯನ್ನು ಆಧರಿಸಿದ್ದು.ಇದರ ನಿರ್ದೇಶಕರು ಅರಯಾಲ್ ವ್ರೋಮೆನ್. ಇಲ್ಲಿ ಸ್ಕಿ ಪಾತ್ರ ನಿರ್ವಹಿಸಿದವರು ಮೈಖೇಲ್ ಶನೋನ್.
ಚಿತ್ರದಲ್ಲಿ ಸ್ಕಿ ಪಾತ್ರವನ್ನು ಎಲ್ಲೂ ವೈಭವೀಕರಿಸಿಲ್ಲ.ಅವನ ಕೊಲೆಗಳನ್ನೂ ಅಷ್ಟೇ. ನಿರ್ದೇಶಕ ಮಂದಗತಿಯ ನಿರೂಪಣೆಯ ಜೊತೆ ಜೊತೆಗೆ ಸ್ಕಿ ಯಾ ಎರಡೂ ಮುಖಗಳನ್ನು ತುಂಬಾ ಚೆನ್ನಾಗಿ ತೆರೆದಿಟ್ಟಿದ್ದಾನೆ. ಒಬ್ಬ ಪ್ರೇಮಿಯಾಗಿ ತಂದೆಯಾಗಿ ಕುಟುಂಬವನ್ನು ತುಂಬಾ ಚೆನ್ನಾಗಿ ಪೋಷಿಸುವ ಗೃಹಸ್ಥ ಮತ್ತು ಫೋಟೋ ಸಿಕ್ಕ ತಕ್ಷಣ ಯಾರು ಅವರ ಹಿನ್ನೆಲೆ ಏನು ಎಂಬುದನ್ನೂ ಕಿಂಚಿತ್ತೂ ಯೋಚಿಸದೆ ಕೊಳ್ಳುವ ನಿರ್ದಯಿ ಹಂತಕ ಎರಡನ್ನೂ ನಾಯಕ ತುಂಬಾ ಚೆನ್ನಾಗಿ ಅಭಿನಯಿಸಿದ್ದಾನೆ. ಅಂತೂ ಆಕಾಶದ ಕೆಳೆಗೆ ಇತಿಹಾಸದ ಕಾಲಗರ್ಭದಲ್ಲಿ ಏನೆಲ್ಲಾ ನಡೆದುಹೋಗಿದೆ ಎಂತೆಂಥ ಜನರಿದ್ದರಲ್ಲವಾ ಎಂಬ ಪ್ರಶ್ನೆಗೆ ಉತ್ತರವಂತಿದೆ ಈ ಚಿತ್ರ.
ಕೊಸರು: ಮೊನ್ನೆ ಮೊನ್ನೆ ನಮ್ಮಲ್ಲಿ ದಂಡುಪಾಳ್ಯ ಚಿತ್ರ ಬಂದಿತ್ತು. ಉಮೇಶ್ ಎನ್ನುವ ಕುಖ್ಯಾತನ ಚಿತ್ರವೂ ಬಂದುಹೋಯಿತು. ಈಗ ಅದೇ ಉಮೇಶ್ ರೆಡ್ಡಿ ಕಥೆಯಾಧಾರಿತ ಖತರ್ನಾಕ್ ಬರುತ್ತಿದೆ. ಹಾಗೆ ನೋಡಿದರೆ ಇವೆಲ್ಲಾ ದಿ ಐಸ್ಮ್ಯಾನ್  ತರಹದ ಚಿತ್ರಗಳೇ. ಆದರೆ ಅವುಗಳೇಕೆ ನಮಗೆ ಬೇರೆಯದೇ ರೀತಿಯಾಗಿ ಕಾಣಿಸುತ್ತವೆ ಎಂಬ ಪ್ರಶ್ನೆ ನನ್ನನ್ನು ಆಗಾಗ ಕಾಡುತ್ತದೆ. ಒಬ್ಬ ಸರಣಿ ಹಂತಕ, ಅತ್ಯಾಚಾರಿಯ ಕಥೆ ಸಿನೆಮಾ ಮಾಡಿದರೆ ಅದರ ಸಾರ್ಥಕತೆ ಏನು..? ಎನ್ನುವ ಪ್ರಶ್ನೆ ಆಗಾಗ ಉದ್ಭವಿಸುತ್ತಲೇ ಇರುತ್ತದೆ. ಆದರೆ ಹಿಟ್ಲರ್, ಮುಸಲೋನಿ, ಈದಿ ಅಮೀನ್ ಜೀವನಾಧಾರಿತ ಚಿತ್ರಗಳು ಬಂದು ಇತಿಹಾಸದ ಔಟಾದ ಒಂದು ಮಗ್ಗುಲನ್ನು ನಮಗೆ ವಿಶದಪಡಿಸಿವೆ. ಆದರೆ ನಮ್ಮಲ್ಲಿನ ಚಿತ್ರಗಳನ್ನು ಈ ರೀತಿ ಒಪ್ಪಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಅವೆಲ್ಲಾ ಅಭಿರುಚಿಯಿಲ್ಲದ ಸಿನಿಮಾಗಳು ಎಣಿಸುವುದಕ್ಕೆ ಕಾರಣವಾದರೂ ಏನು? ಎಂಬ ಪ್ರಶ್ನೆ ಆಗಾಗ ಕಾಡುತ್ತದೆ. ಚರ್ಚಿಸುವರು ಇದ್ದರೇ ಒಂದು ನಿರ್ಣಯಕ್ಕೆ ಬರಬಹುದು. ಏನಂತೀರಿ?

3 comments:

 1. ಸಿನಿಮಾ ಉದ್ದೇಶ ಒಂದು ಕಥೆ ಹೇಳುವುದು ಮಾತ್ರ. ಯಾವ ಕಥೆ ಅನ್ನುವುದು ಹೇಳುವವನ ಅರಿವು, ನೋಡುವವನ ಆಸಕ್ತಿ, ಅಭಿರುಚಿ ಮೇಲೆ ನಿಂತಿರುತ್ತೆ. ನಮ್ಮ ದೇಶದಲ್ಲಿರೋ ಒಂದು ತಪ್ಪು ಕಲ್ಪನೆ ಸಿನಿಮಾ ಒಂದು "ಮೆಸೇಜ್" ಕೊಡಬೇಕು ಅನ್ನುವುದು. ಹಾಗಾಗಿ ಹಂತಕರ, ಸಮಾಜ ಘಾತುಕರ ಚಿತ್ರ ತೆಗೆದಾಗ ವಿರೋಧ ಕಾಣಸಿಗುತ್ತದೆ. ಅದಕ್ಕೆ ಪೂರಕ ಎನ್ನುವಂತೆ ಈ ಕಥೆಗಳನ್ನ ಹೇಳುವವರು ಯಥಾವತ್ತು ಹೇಳದೆ, ವೈಭವೀಕರಣ ಮಾಡಿ, ಪ್ರಚಾರಕ್ಕೋಸ್ಕರ ತಂತ್ರವಾಗಿ ಉಪಯೋಗಿಸಿಕೊಳ್ಳುತ್ತಾರೆ. ಹೀಗಾಗಿ ಪ್ರಬುದ್ಧ ಚಿತ್ರಕರ್ಮಿಗಳು, ಮುಕ್ತಮನಸ್ಸಿನ ಪ್ರೇಕ್ಷಕರು ಹುಟ್ಟುವ ವಾತಾವರಣ ನಿರ್ಮಾಣ ಆಗಿಲ್ಲ ಅನ್ನುವುದು ನನ್ನ ಅನಿಸಿಕೆ!

  ReplyDelete
 2. ಕೆಲ ದಿನಗಳ ಹಿಂದೆ ನಾನು ದಂಡುಪಾಳ್ಯ ಚಿತ್ರ ನೋಡಿದೆ. ಆ ಹಂತಕರ ವಿವಿಧ ವಿಕೃತಿಗಳನ್ನು ಒಂದಾದ ಮೇಲೆ ಒಂದು ತೋರಿಸುತ್ತಾ ಹೋಗಿದ್ದು ಬಿಟ್ಟರೆ ಅವರ ಬಗ್ಗೆ ಬೇರೆ ಯಾವುದೇ ವಿವರ ಚಿತ್ರ ಕೊಡುವುದಿಲ್ಲ. ಇಲ್ಲಿಯ ತನಕ ಕನ್ನಡ ತೆರೆ ಮೇಲೆ ನೋಡದೆ ಇರುವಂತಹ ಮೃಗೀಯ ಕೃತ್ಯಗಳ ಚಿತ್ರಗಳ ವೈಭವೀಕರಣದ ಮೆರವಣಿಗೆಯಾಗಿ ಮಾತ್ರ ಉಳಿಯುತ್ತದೆ. ಈ ಚಿತ್ರದ ಯಶಸ್ಸು, ಇನ್ನಷ್ಟು ಇಂತಹದೇ ಕೃತ್ಯಗಳನ್ನು ಮಾಡಿರುವ ಉಮೇಶ್ ರೆಡ್ಡಿಯ ಚಿತ್ರಕ್ಕೆ ಪ್ರೇರೇಪಿಸಿದೆ. ಇವುಗಳಲ್ಲಿ ಏಕ ಮುಖೀಯ ಪಾತ್ರ ಸೃಷ್ಟಿ ಮತ್ತು ಪಾತ್ರದ ವಿವಿಧ ವಿಕೃತಿಯ ವಿಝರಂಭಣೆ ಹೊರತಾಗಿ ಬೇರೇನನ್ನೂ ತೋರಿಸುತ್ತಾರೆಂದು ನಾನು ಆಸೆ ಇಟ್ಟುಕೊಂಡಿಲ್ಲ. ಇವುಗಳಲ್ಲಿ ನಿರ್ದೇಶಕನ ಒತ್ತು ಪ್ರೇಕ್ಷಕನನ್ನು titillate ಮಾಡುವುದಕ್ಕೆ ಮಾತ್ರ ಸೀಮಿತ. ಹಾಲೀವುಡ್ ಸಹ ಇಂತಹ ಚಿತ್ರಗಳನ್ನು ಬೇಕಾದಷ್ಟು ಮಾಡುತ್ತದೆ. ಹಿಂಸೆ ವೈಭವೀಕರಿಸುವ ಚಿತ್ರಗಳಿಗೂ ಕಮ್ಮಿ ಇಲ್ಲ.
  ನಿರ್ದೇಶಕನ ಉದ್ದೇಶ ಹಾಗೂ ಅವನು ಪಾತ್ರಗಳನ್ನು ರೂಪಿಸುವ ರೀತಿ ಮತ್ತು ಅವುಗಳನ್ನು ತೆರೆಯ ಮೇಲೆ ತರುವ ರೀತಿಯಿಂದ ಚಿತ್ರದ ಅಭಿರುಚಿ ಬದಲಾಗುತ್ತದೆ. ಬೇರೆ ದೇಶದ ಉತ್ತಮ ಚಿತ್ರಗಳಲ್ಲಿ ಕೊಲೆಗಾರರ ಜೀವನದ ಬೇರೆ ಬೇರೆ ಮಜಲುಗಳನ್ನು ತೋರಿಸುವ ಪ್ರಯತ್ನಗಳು ಹೆಚ್ಚು ಕಾಣಿಸಿಕೊಳ್ಳುವುದರಿಂದ ಹಾಗೂ ಅವರ ಚಿತ್ರೀಕರಣದ ಶೈಲಿಯಿಂದ ಅವು ನಮಗೆ ಹೆಚ್ಚು ಹತ್ತಿರವಾಗುತ್ತವೆ. ಪಾತ್ರದ ಸುತ್ತ ಕಟ್ಟುವ ಡ್ರಾಮಾದ ಒಳಗೆ ಕ್ರೌರ್ಯ ಹಾಸುಹೊಕ್ಕಾಗಿದ್ದಲ್ಲಿ ಅದನ್ನು ತೋರಿಸುವ ರೀತಿಯಲ್ಲಿ ತೋರಿಸಿದಲ್ಲಿ, ಅದು ನಮಗೆ ಸಹ್ಯವಾಗುತ್ತದೆ.

  ದಂಡುಪಾಳ್ಯದಲ್ಲಿ ಪೋಲೀಸ್ ಕಸ್ಟಡಿಯಲ್ಲಿರುವ ಹಂತಕನ ಪಾತ್ರ ತಾನು ಮಾಡಿರುವ ಹೊಲಸನ್ನು ತಾನೇ ತಿನ್ನಿವ ದೃಶ್ಯ, ತಿನ್ನಲು ತಲೆ ಕೆಳಗಾಗುವಲ್ಲಿ ಮುಗಿಯುವುದಿಲ್ಲ. ಬದಲಾಗಿ ಆತ ಬಾಯಿಗೆ ಹಾಕಿ ತಿನ್ನಲು ಶುರು ಮಾಡುವ ತನಕವೂ ದೃಶ್ಯ ಮುಂದುವರಿಯುತ್ತದೆ. ಇಂತಹ ದೃಶ್ಯಗಳನ್ನು ತೋರಿಸಲೆಂದೇ ಮಾಡಿರುವ ಚಿತ್ರವಾಗಿ ಕಂಡು ಬರುವುದರಿಂದ ಇದು ಅಭಿರುಚಿ ಇಲ್ಲದ ಚಿತ್ರವಾಗಿ ಬಿಡುತ್ತದೆ.

  ನಾನು ಐಸ್ ಮ್ಯಾನ್ ಚಿತ್ರವನ್ನು ನೋಡಿಲ್ಲ. ಆದರೆ ಇದರ ಬಗ್ಗೆ ಓದಿದಾಗ ಯಾಕೋ ನನಗೆ ಬ್ರಿಟಿಷ್ ಹಾರರ್ ಥ್ರಿಲರ್ ಚಿತ್ರ ಕಿಲ್ ಲಿಸ್ಟ್ ನೆನಪಾಯಿತು. ಸಾಧ್ಯವಾದರೆ ನೋಡಿ. http://www.youtube.com/watch?feature=player_embedded&v=aqkqF--v1tg

  ReplyDelete
 3. ಹೌದು, ನಾನು ಕಿಲ್ ಲಿಸ್ಟ್ ನೋಡಿದ್ದೇನೆ. ಅದರ ಗತಿ ಮತ್ತು ವಸ್ತು ತುಂಬಾ ಹಿಂಸಾತ್ಮಕ
  ವಾದದ್ದು. ಅದರಲ್ಲೂ ಒಬ್ಬ ವಿಕೃತಕಾಮಿ ಮುದುಕನಿಗೆ ಅವನ ಮಂದಿ ಚಿಪ್ಪಿಗೆ ಸುತ್ತಿಗೆಯಿಂದ ಹೊಡೆಯುವ ದೃಶ್ಯ ಆನಂತರ ಆತನ ತಲೆಯನ್ನು ಟೇಬಲ್ ಮೇಲಿತ್ತು ಅದೇ ಸುತ್ತಿಗೆಯಿಂದ ಹೊಡೆಯುವ ದೃಶ್ಯ ನೋಡುವುದಕ್ಕೆ ಹಿಂಸೆಯಾಗುತ್ತದೆ.
  ಆದರೂ ಒಂದು ಚಿತ್ರದ ಕಥೆಯಲ್ಲಿನ ಸಾರಾ ನಮ್ಮನ್ನು ಹಿಡಿದಿದದಿದ್ದರೆ ಅದೂ ವ್ಯರ್ಥ ಎನಿಸುತ್ತದೆ.

  ReplyDelete