Saturday, September 21, 2013

ಔಟ್ ಲಯರ್ಸ್ ಪುಸ್ತಕ.

ನಾನಾಗ ಹತ್ತನೆಯ ತರಗತಿಯಲ್ಲಿದ್ದೆ. ವಿದ್ಯಾರ್ಥಿಗಳೇ ಯಶಸ್ಸು ಕನಸಲ್ಲ ಎಂಬ ಪುಸ್ತಕದ ಬಗ್ಗೆ ಯಾರೋ ಹೇಳಿದ್ದರು. ಕೇಳಿ ಖುಷಿಯಾದ ನಾನು ಅದನ್ನು ತೆಗೆದುಕೊಳ್ಳಲು ಇಡೀ ನಂಜನಗೂಡಿನ ಪುಸ್ತಕ ಅಂಗಡಿಗಳನ್ನು ಹುಡುಕಾಡಿದ್ದೆ. ಆದರೆ ಪುಸ್ತಕ ಸಿಕ್ಕಿರಲಿಲ್ಲ. ಮೈಸೂರಿಗೆ ಹೋಗಿ ತೆಗೆದುಕೊಂಡು ಬರಬೇಕಾಗಿತ್ತಾದರೂ ಅದೂ ಸಾಧ್ಯವಾಗಿರಲಿಲ್ಲ. ಆದರೆ ಅದ್ಯಾವುದೋ ಸ್ಪರ್ಧೆಯಲ್ಲಿ ಗೆದ್ದವನಿಗೆ ಅದೇ ಪುಸ್ತಕ ಬಹುಮಾನವಾಗಿ ಬಂದುಬಿಟ್ಟಿತ್ತು. ನನ್ನ ಸಂತೋಷಕ್ಕೆ ಪಾರವಿರಲಿಲ್ಲ. ಆವತ್ತಿಡೀ ಖುಷಿಯಾಗಿ ಇಡೀ ಪುಸ್ತಕ ಓದಿ ಮುಗಿಸಿದ್ದೆ. ಅದರಲ್ಲಿ ಒಂದು ವಾಕ್ಯವಿತ್ತು .ನೀವು ಪ್ರತಿದಿನ ಮಲಗುವ ಮುನ್ನ ಒಮ್ಮೆ ಈವತ್ತು ನಾನು ಚೆನ್ನಾಗಿ ಓದಿದ್ದೇನೆ ಎಂದು ಹತ್ತಾರು ಸಾರಿ ನಿಮಗೆ ಹೇಳಿಕೊಂಡು ಮಲಗಿ ..ಎಂಬುದು. ನನಗ ನಿಜಕ್ಕೂ ನಗು ಬಂದಿತ್ತು. ಇದರಲ್ಲಿ ಅಂತಹ ವಿಶೇಷವೇನಿದೆ..? ಹೇಳಿಕೊಂಡು ಮಲಗಿದರಾಯಿತು, ಆದರೆವ್ ಅದರಿಂದಾಗುವ ಉಪಯೋಗವಾದರೂ ಏನು? ನಾವು ಚೆನ್ನಾಗಿ ಓದಲು ಪ್ರಾರಂಭಿಸಿಬಿಡುತ್ತೇವೆಯೇ? ಎಂದೆಲ್ಲಾ ನನಗೆ ನಾನೇ ಪ್ರಶ್ನೆಗಳನ್ನು ಹಾಕಿಕೊಂಡು ಪುಸ್ತಕ ಬರೆದ ಸ್ವಾಮೀಜಿಯನ್ನು ನನ್ನಲ್ಲೇ ಅಪಹಾಸ್ಯ ಮಾಡಿದ್ದೆ. ಆದರೆ ಒಮ್ಮೆ ಅದೂ ಒಂದು ಪ್ರಯೋಗ ಆಗಿಬಿಡಲಿ ಎನಿಸಿತು.
ಮೊದಲ ದಿನ ಆರಾಮವಾಗಿ ಹತ್ತಕ್ಕಿಂತಲೂ ಹೆಚ್ಚು ಸಾರಿ ಹೇಳಿಕೊಂಡು, ನನ್ನಲ್ಲೇ ನಕ್ಕು ಮಲಗಿದ್ದೆ. ಎರಡನೆಯ ದಿನವೂ ನನಗೆ ಸಮಸ್ಯೆಯಾಗಲಿಲ್ಲ. ಆದರೆ ಮೂರನೆಯ ದಿನ ಮಾತ್ರ ಹಾಗೆ ಹೇಳಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಮೊದಲ ಬಾರಿಗೆ ನನಗೆ ಆಶ್ಚರ್ಯವಾಗಿತ್ತು. ಸುತಾರಾಂ ಹಾಗೆ ಅಂದುಕೊಳ್ಳಲು ಆಗಲೇ ಇಲ್ಲ. ಕೇಳುವವರಾಗಲಿ, ಪರೀಕ್ಷಿಸುವವರಾಗಲಿ ಯಾರೂ ಇಲ್ಲದಾಗಲೂ ನಮಗೆ ನಾವೇ ಸುಳ್ಳು ಹೇಳಿಕೊಳ್ಳಲು ಸಾಧ್ಯವಿಲ್ಲ ಎನಿಸಿತು.
ಆಮೇಲೆ ಯೋಚಿಸಿದಾಗ ನನಗೆ ಗೊತ್ತಾದದ್ದು ಸುಳ್ಳು ನಾವು ಬೇರೆಯವರಿಗೆ ಮಾತ್ರ ಹೇಳಲು ಸಾಧ್ಯ. ನಮಗೆ ನಾವೇ ಸುಳ್ಳು ಹೇಳಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು. ಆನಂತರ ದಿನದಲ್ಲಿ ಒಂದಷ್ಟು ಓದಿದ್ದರೆ ಮಾತ್ರವೇ ಹಾಗೆ ಹೇಳಿಕೊಳ್ಳಲು ಸಾಧ್ಯವಾಗುತ್ತಿತ್ತು. ಇಲ್ಲವಾದಲಿ ಅತೀವ ನೋವಾಗುತ್ತಿತ್ತು. ಸಂಜೆ ಯಾಯಿತೆಂದರೆ ನಿದಿರೆಗೆ ಜಾರುವ ಮುನ್ನ ದನ್ನು ಹೇಳಿಕೊಳ್ಳಲೇ ಬೇಕಲ್ಲ ಎಂಬುದನ್ನು ನೆನೆದು ಮೈ ನಡುಗುತ್ತಿತ್ತು. ಅದಕ್ಕಾಗಿಯಾದರೂ ಓದುತ್ತಿದ್ದೆ.
 ಮೊನ್ನೆ ಇದನ್ನೆಲ್ಲಾ ನೆನಪಿಸ್ಕೊಂದದ್ದು ಮಾಲ್ಕಂ ಗ್ಲಾದ್ವೆಲ್ ಬರೆದ ಔಟ್ ಲಯರ್ಸ್ ಪುಸ್ತಕ ಓದಿದಾಗ.ಅದೊಂದು ಕಾದಂಬರಿಯಾ, ಜ್ಞಾನಾರ್ಜನೆಯ ಪುಸ್ತಕವಾ, ಸಾಮಾನ್ಯ ಜ್ಞಾನಾವಾ..ಕ್ರೀಡೆಯ. ಸಿನಿಮಾ ಸಂಬಂಧಿ ಪುಸ್ಯಕವಾ ಅಥವಾ ಅದ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕವಾ..? ಎಂಬ ಪ್ರಶ್ನೆಗೆ ಅದು ಎಲ್ಲವೂ ಹೌದು. ಅಥವಾ ಯಾವುದೂ ಅಲ್ಲ ಎನ್ನುವ ಉತ್ತರ ನೀಡಲೇ ಬೇಕಾಗುತ್ತದೆ.
ಅದೊಂದು ದಿನ ಸಿಕ್ಕಿದ ವಾಸುಕಿ ನಿಮ್ಮ ಜೊತೆ ಮಾತನಾಡುವುದಿದೆ ಎಂದರು. ಸಿಕ್ಕಿ ಮಾತಾಡಿ  ಜೊತೆಯಲ್ಲಿ ಊಟಕ್ಕೆ ಕುಳಿತುಕೊಂಡೆವು. ಹೋಟೆಲ್ ಹೊರಗೆ
ಮಳೆ ಸುರಿಯುತ್ತಿತ್ತು. ನಮ್ಮ ಹರಟೆಯೇ ಜಡಿಮಳೆ ಆಗಿತ್ತು.ಮಾತೆಲ್ಲ ಮುಗಿಸಿ, ನನ್ನನ್ನು ಮನೆಯ ಹತ್ತಿರಕ್ಕೆ ಕರೆತಂದು ಹೋಗುವಾಗ ನನ್ನ ಕಡೆಯಿಂದ ಇದೊಂದು ಪುಸ್ತಕ ಎಂದು ವಾಸುಕಿ ನನಗೆ ಅದನ್ನು ಕೊಟ್ಟರು. ಅದಕ್ಕೂ ಮುನ್ನ ಎರಡ್ಮೂರು ಸಾರಿ ಅದರ ಬಗ್ಗೆ ಚಿಕ್ಕ ಪರಿಚಯವನ್ನು ನಮ್ಮ ಹರಟೆಯ ಮದ್ಯ ಸೇರಿಸಿದ್ದರಾದರೂ ನನಗೇಕೋ ಅದು ಸೇರಿರಲಿಲ್ಲ. ಅದು ಇಂಗ್ಲೀಷಿನ ಪುಸ್ತಕವಾದ್ದರಿಂದ ಮತ್ತು ಇಂಗ್ಲೀಷ್ ನನಗೆ ವೇಗವಾಗಿ ಓದಲು ಸಾಧ್ಯವಾಗುವುದಿಲ್ಲವಾದ್ದರಿಂದ ವಾರದಲ್ಲೇ ಓದಿ ಮುಗಿಸುತ್ತೇನೆ ಎಂದುಕೊಂಡೆ. ಆನಂತರ ಅದನ್ನು ಕೈಯಲ್ಲಿ ಹಿಡಿದು ಎಲ್ಲೆಂದರಲ್ಲಿ ಹೋಗುತ್ತಿದ್ದೆ. ಚೂರು ಪಾರು ಸಮಯ ಸಿಕ್ಕಾಗಲೆಲ್ಲಾ ಓದಿ ಮುಗಿಸಿಬಿಡೋಣ ಎನ್ನುವ ಹುನ್ನಾರ ನನ್ನದಾಗಿತ್ತು. ಆದರೇಕೋ ಪುಸ್ತಕ ಆಸಕ್ತಿದಾಯಕ ಎನಿಸುತ್ತಿದ್ದಾದರೂ ಓದಿದ್ದು ಸರಿಯಾಗಿ ತಲೆಗೆ ಹೋಗುತ್ತಲೇ ಇರಲಿಲ್ಲ. ಮತ್ತೆ ಓದಲು ತೆಗೆದುಕೊಂಡಾಗ ಹಳೆಯದು ಮರೆತುಹೋಗಿರುತ್ತಿತ್ತು. ಒಂದೆರೆಡು ತಿಂಗಳಿನ ನಂತರ ನನಗೆ ಅರ್ಥವಾದದ್ದು ಅದು ಹೀಗೆ ಕುಂತಲ್ಲಿ ನಿಂತಲ್ಲಿ ಓದುವ ಪುಸ್ತಕ ಅಲ್ಲ, ಅದು ಮಟ್ಟಸವಾಗಿ ಕುಳಿತುಕೊಂಡು ಓದಲೆಬೇಕಾದ ಪುಸ್ತಕ ಎನ್ನುವುದು.
ಹಾಗಾಗಿ ಒಂದು ವಾರ ಸುಳ್ಯದಲ್ಲಿ ಇದ್ದುದರಿಂದ ಮೊಬೈಲ್ ಕರೆಗಳ ಜಂಜಾಟವಿಲ್ಲದೆ ಕುಳಿತು ಓದಿ ಬಿಟ್ಟೆ. ಮತ್ತೆ ಮತ್ತೆ ಮೆಲುಕುಹಾಕಿದೆ.ಮತ್ತು ಪುಸ್ತಕದ ಸಾಹಿತಿಗೆ ದೊಡ್ಡ ನಮಸ್ಕಾರ ಹಾಕಿಯೂ ಬಿಟ್ಟೆ.
ಗ್ಲಾದ್ ವೆಲ್ ಗೊಂದು ಚಿಕ್ಕದಾದ, ವಾಸುಕಿ ರಾಘವನ್ ಗೊಂದು ದೊಡ್ಡ ನಮನ ನನ್ನ ಕಡೆಯಿಂದ.
ಸಿಕ್ಕಾಗ ಓದಿ ಬಿಡಿ ಅನ್ನುವ ಪುಸ್ತಕ ಇದಲ್ಲವಾದ್ದರಿಂದ ಓದಿಲೆಬೇಕಾದ ಪುಸ್ತಕ ಇದು ತೆಗೆದುಕೊಂಡು ಬಿಡಿ ಎನ್ನುವುದು ಲೇಸು. ಓದಿದ ಮೇಲೆ ಹೇಳಿ..ಏನಂತೀರಾ?

1 comment:

  1. ನಿಮಗೆ ಪುಸ್ತಕ ಇಷ್ಟವಾಗಿದ್ದು ತಿಳಿದು ಬಹಳ ಖುಷಿಯಾಯಿತು! ನಿಮ್ಮ "ಹತ್ತು ಸಾವಿರ ಘಂಟೆಗಳ" ತಪಸ್ಸು ಚನ್ನಾಗಿ ನಡೆಯಲಿ :)

    ReplyDelete