Saturday, January 26, 2013

ವರ್ಣಮಯದ ನಂಜುಂಡಿ ಮತ್ತು ಕವಲೊಡೆದ ಪ್ರೀತಿ...

ವಸುಧೇಂದ್ರ ನನಗಿಷ್ಟವಾದ ಬರಹಗಾರರು. ನಾನು ಮೈಸೂರಿನಲ್ಲಿ ಓದುತ್ತಿದ್ದಾಗ ಅವರ ಕಥೆಗಳು ದಿನಪತ್ರಿಕೆಗಳ ಸಾಪ್ತಾಹಿಕದಲ್ಲಿ ಪ್ರಕಟವಾಗುತ್ತಿದ್ದವು. ಯಾಕೋ ಓದಿದ ಬಹಳ ದಿನಗಳವರೆಗೆ ಮನಸ್ಸಿನಲ್ಲಿ ಉಳಿಯುತ್ತಿದ್ದದ್ದಷ್ಟೇ ಅಲ್ಲ  ಆವಾಗಾವಾಗ ಆಯಾ ಕಥೆಗಳ ಪಾತ್ರಗಳು ಕಾಡುತ್ತಿದ್ದವು ಕೂಡ. ಅಪಸ್ವರದಲ್ಲೊಂದು ಆರ್ತನಾದ, ಯುಗಾದಿ, ಮನೀಷೆ ಮುಂತಾದ ಕಥೆಗಳನ್ನ ಮರೆಯುವುದಾದರೂ ಹೇಗೆ. 
ನಾನು ನನ್ನ ವಿದ್ಯಾಭ್ಯಾಸದ ನಂತರ ಬೆಂಗಳೂರಿಗೆ ಸಿನೆಮಾ ಹುಚ್ಚಿಡಿಸಿಕೊಂಡು ಬಂದ ನಂತರ ಹಲವಾರು ಪ್ರಯತ್ನಗಳ ನಂತರ ಟಿವಿ ಚಾನಲ್ಲಿನ ಧಾರಾವಾಹಿಯೊಂದರ ಸಂಚಿಕೆ ನಿರ್ದೇಶನ ಮಾಡುತ್ತಿದ್ದೆ. ಅದರ ಒಂದು ವಿಭಾಗದಲ್ಲಿ ಯಾರಾದರೂ ಕಥೆಗಾರರ, ಸಾಹಿತಿಗಳ ಪರಿಚಯ ಮಾಡಿಕೊಡುವುದಿತ್ತು. ನನಗೆ ನಮ್ಮ ಬಾಸ್ 'ವಸುಧೇಂದ್ರ ಅಂತ ಒಬ್ರು ರೈಟರ್ ಇದ್ದಾರೆ. ನೋಡಿ ಇಂಟರೆಸ್ಟಿಂಗ್ ಅನ್ಸಿದ್ರೆ ಒಂದು ಸೆಗ್ಮೆಂಟ್ ಮಾಡಿ..' ಎಂದರು. ನನಗೆ ಖುಷಿಯಾಗಿ ಹೋಯಿತು.ತಕ್ಷಣ ವಸುಧೆಂದ್ರರಿಗೆ ಫೋನ್ ಮಾಡಿ ಮಾತಾಡಿದೆ, ಭೇಟಿಗಾಗಿ ಸಮಯ ನಿಗದಿಪದಿಸಿಕೊಂಡೆ. ಅವರ ಮನೆಗೆ ಹೋದಾಗ ಅವರ ಕಥೆಗಳ ಬಗ್ಗೆ ಚರ್ಚಿಸಿದಾಗ ವಸುಧೇಂದ್ರರಿಗೆ ಆಶ್ಚರ್ಯವಾಯಿತು. ಅವರ ಕಥೆಗಳ ಸಾರಾಂಶದ ಜೊತೆಗೆ ಪಾತ್ರಗಳ ಹೆಸರನ್ನೂ ನಾನು ನೆನಪಿಸಿಕೊಂಡು ಹೇಳಿದಾಗ ವಸುಧೇಂದ್ರ ನನ್ನನ್ನು ಮೆಚ್ಚಿದ್ದಷ್ಟೇ ಅಲ್ಲ, ನೀನು ಏನಾದರೂ ಬರೆಯೋ ಎಂದು ಪ್ರೋತ್ಸಾಹಿಸಿದ್ದರು. ಆನಂತರ ಅವಾಗವಾಗ ಫೋನಿನಲ್ಲಿ ಮಾತಿಗೆ ಸಿಗುತ್ತಿದ್ದೆವು. ನನ್ನ ಬರಹಗಳನ್ನೂ ಅವರಿಗೆ ಕಳುಹಿಸಿ ಅವರ ಅಭಿಪ್ರಾಯ ತಿದ್ದುಪಡಿಗಳನ್ನು ಪಡೆಯುತ್ತಿದ್ದೆ. ಆದರೆ ಅದೊಂದು ದಿನ ವಸುಧೇಂದ್ರ ನಮ್ಮ ಮನೆಗೆ ಬಂದಿದ್ದರು. ಮನೆ ಎಂದರೆ ಸಿನಿಮಾದ ಕಥೆ ರಚನೆಗಾಗಿ ಮಾಡಿಕೊಂಡಿದ್ದ ವ್ಯವಸ್ಥೆ. ಊರಾಚೆಯಿತ್ತು. ನಾನು ಯಾವುದೇ ಸಿನೆಮಾ ನೋಡಿದ ತಕ್ಷಣ ಅದರ ಹೆಸರು ಇಸವಿ ಮತ್ತು ನನಗನಿಸಿದ ಹಾಗೆ ಸ್ಟಾರ್ ಕೊಟ್ಟುಬಿಡುತ್ತೇನೆ. ಮನೆಗೆ ಬಂದ ವಸುಧೇಂದ್ರರಿಗೆ ಸಿನೆಮಾಗಳ ಬಗ್ಗೆ ಹೇಳಿ ನೋಡಿದ ಸಿನೆಮಾಗಳ ಪಟ್ಟಿಕೊಟ್ಟೆ. ನನ್ನ ಅಭಿಪ್ರಾಯ ಮತ್ತು ಅವರ ಅಭಿಪ್ರಾಯ ಬಹಳಷ್ಟು ಚಿತ್ರಗಳ ವಿಷಯದಲ್ಲಿ ಒಂದೇ ಆಗಿತ್ತು.
ಅವರ ಹೊಸ ಪ್ರಬಂಧಗಳ ಸಂಕಲನ 'ವರ್ಣಮಯ' ಬಿಡುಗಡೆಯಾಗಿದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಪ್ರಬಂಧಗಳು ಖುಷಿಕೊಡುತ್ತವೆ. ಅದರಲ್ಲೂ ಡ್ರೈವರ್ ನಂಜುಂಡಿಯಾ  ಕಥಾನಕವಂತೂ ಹೊಟ್ಟೆಹುಣ್ಣಾಗಿಸುವಂತೆ ನಗಿಸಿದರೂ ಕೆಲವೆಡೆ ನಮಗರಿವಿಲ್ಲದ[ಲೇಖಕರಿಗೂ ಆಗಷ್ಟೇ ಪರಿಚಯವಾದ] ಪ್ರಪಂಚವನ್ನು ತೆರೆದಿಡುತ್ತದೆ. ಒಬ್ಬ ವ್ಯಕ್ತಿಯ ಬದುಕು ಬೆಳವಣಿಗೆಯನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಲೇ ಅಷ್ಟೇ ಅದ್ಭುತವಾಗಿ ನಮಗೆ ಪರಿಚಯಿಸುತ್ತಾರೆ ವಸುಧೇಂದ್ರ. .ಗೌರಮ್ಮ ಎನ್ನುವ ಕೆಲಸದಾಕೆಯ ಮೇಲಿನ ಪ್ರಬಂಧವೂ ಅಷ್ಟೇ. ಮನೆಗೆಳದವರ ಬದುಕಿನ ವಿವಿಧ ಮಗ್ಗಲನ್ನು ಬಿಡಿಬಿಡಿಯಾಗಿ ತೆರೆದಿಡುತ್ತಾ ಸಾಗುತ್ತದೆ. ಇಲ್ಲೆಲ್ಲೂ ಯಾರೂ ನಮಗೆ ಕಥಾನಾಯಕರಂತೆ ಭಾಸವಾಗುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಕಾಲದ ಕೈಗೊಂಬೆಗಳಂತೆ ನಮಗೆ ಕಾಣಿಸುತ್ತಾರೆ. ಹಾಗೆ ಅಪಾರ್ಟ್ಮೆಂಟಿನ ಕಥಾನಕ, ಮನೆಗೆಲಸದವರ ಘಟನೆಗಳು ಮುಂತಾದವುಗಳನ್ನು ನಮಗೆ ಇನ್ನೊಂದು ಆತ್ಮೀಯವಾಗಿರದ ನಮ್ಮದೇ ಪ್ರಪಂಚವನ್ನು ತೆರೆದಿಡುತ್ತವೆ. ಒಮ್ಮೆ ಓದಲೇಬೇಕಾದ ಪುಸ್ತಕ ವರ್ಣಮಯ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಮಿಕಾ  ಕೌರಿಸ್ಮಾಕಿ ನಿರ್ದೇಶನದ ಫಿನಿಶ್ ಚಲನಚಿತ್ರ ಹೌಸ್ ಆಫ್ ಬ್ರಾಂಚಿಂಗ್ ಲವ್ 2009ರಲ್ಲಿ ತೆರೆಕಂಡ ಚಲನಚಿತ್ರ. ಚಿತ್ರದ ಕಥೆ ಸರಳ. ಗಂಡ ಹೆಂಡಿರಿಬ್ಬರಿಗೂ ಜಗಳವಾಗಿದೆ. ಹಾಗಾಗಿ ಡೈವೋರ್ಸ್ ಕೂಡ ಸಿಕ್ಕಿದೆ. ಆದರೆ ಎಲ್ಲಾ ಸೆಟಲ್ ಮೆಂಟ್ ಗಾಗಿ ಇನ್ನೊಂದಷ್ಟು ತಿಂಗಳುಗಳ ಸಮಯವಿದೆ. ಹಾಗಾಗಿ ಬೇರೆಬೇರೆ ಕಡೆ ಇರುವುದಕ್ಕೆ ಆ ಮನೆಯಲ್ಲೇ ಇದ್ದರೆ ಖರ್ಚು ಉಳಿಯುತ್ತದೆ ಎಂದು ಯೋಚಿಸಿ ಇಬ್ಬರೂ ಒಂದೇ ಮನೆಯಲ್ಲಿ ಉಳಿದುಕೊಳ್ಳಲು ಯೋಚಿಸುತ್ತಾರೆ. ಆದರೆ ಖರ್ಚುಗಳನ್ನು ಹಂಚಿಕೊಳ್ಳುತ್ತಾರೆ. ನಿನ್ನಿಷ್ಟಕ್ಕೆ ನೀನಿರು, ನನ್ನಿಷ್ಟಕ್ಕೆ ನಾನಿರುತ್ತೇನೆ ಎಂದು ಪರಸ್ಪರ ಮಾತಾಡಿಕೊಂಡರೂ ಯಾವುದಕ್ಕೂ ಇರಲಿ ಎಂದು ಬೇಕು-ಬೇಡಗಳ ಒಂದು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಮುಂದೆ ನಡೆಯುವ ಘಟನಾವಳಿಗಳು ಪ್ರೇಕ್ಷಕರಿಗೆ ನಗೆ ತರಿಸುತ್ತವೆ ಅಲ್ಲದೆ ಅವರಿಬ್ಬರ ನಡುವೆ ಇದ್ದ ತಪ್ಪುಕಲ್ಪನೆಗಳು ದೂರಾಗುವಲ್ಲಿ ಸಹಾಯವಾಗುತ್ತವೆ. ಮುಂದೆ ಆ ಹಂತದಲ್ಲಿ ಪುನಃ ಪ್ರೀತಿಗೆ ಬೀಳುವ ದಂಪತಿಗಳು ಮತ್ತೆ ಒಂದಾಗುತ್ತಾರೆ.
ಚಿತ್ರದ ಕಥೆ ನಿರೂಪಣೆ ಚೆನ್ನಾಗಿದೆ. ನಾಯಕ /ನಾಯಕಿಯ ಅಭಿನಯ ಎಲ್ಲೂ ಕೃತಕವೆನಿಸುವುದಿಲ್ಲ. ಒಂದು ಉತ್ತಮ ಹಾಸ್ಯಮಯ ಟೈಂ ಪಾಸ್ ಚಲನಚಿತ್ರ ಇದು. ಸಮಯವಿದ್ದರೆ ಆರಾಮವಾಗಿ ನಗುನಗುತ್ತ ಟೈಂ ಪಾಸ್ ಮಾಡಲು ಒಮ್ಮೆ ನೋಡಿ.

2 comments:

  1. ವಸುಧೇಂದ್ರ ನನ್ನ ಇಷ್ಟದ ಬರಹಗಾರರು ಕೂಡ. ಅವರ ಕತೆಗಳನ್ನು ನನಗೆ ಪರಿಚಯಿಸಿದವರು ನಮ್ಮ ರಾಯರು.ನನ್ನಲ್ಲ್ಲೂ ಇಮೋಷನ್ಸ್ ಇವೆ ಅಂತ ತೋರಿಸಿಕೊಟ್ಟಿದ್ದೆ ಅವರ ಕತೆಗಳು, especially ನನ್ನಮ್ಮ ಅಂದ್ರೆ ನನಗಿಷ್ಟ.. ಆಮೇಲೆ ನಾನು ಅವರ ಸಿಕ್ಕಾಪಟ್ಟೆ ಫ್ಯಾನ್. ವರ್ಣಮಯ ಓದಬೇಕಷ್ಟೆ.
    House of branching love ನಿಜಕ್ಕೂ ಒಂದು hilarious ಸಿನಿಮಾ.ಮರಾಠಿಯಲ್ಲಿ ಕೂಡ ಇದನ್ನು ಮಾಡಿದ್ದಾರೆ. ಅದನ್ನೂ ಅಷ್ಟೆ enjoy ಮಾಡಿದ್ದೆ. (ಹೆಸರು ನೆನಪಿಗೆ ಬರ್ತಾ ಇಲ್ಲ)..'War of the roses' also runs on similar lines but its a black comedy ending on a sad note!
    :-)
    malathi S

    ReplyDelete
  2. ನಾನು ಪೂರ್ತಿ ಓದಿಕೊಂಡವರಲ್ಲಿ ವಸುಧೇಂದ್ರ ಮೊದಲಿಗರು.. ವರ್ಣಮಯ ತುಂಬಾ ಇಷ್ಟವಾಯಿತು..

    ReplyDelete