Thursday, May 22, 2014

ಹೊಸ ಅನುಭವ:

ಮೊನ್ನೆ ಮೊನ್ನೆ ಕನ್ನಡಚಿತ್ರರಂಗದ ಎಂಬತ್ತು ವರ್ಷದ ಸಮಾರಂಭಕ್ಕೆ ನಾನು ಹೋಗಿದ್ದೆ. ಸುಮ್ಮೆನೆ ಅಲ್ಲಿನ ಕಾರ್ಯಾಗಾರ ಭಾಷಣ ಕೇಳುವುದರ ಜೊತೆಗೆ ನನ್ನದೇ ಪುಸ್ತಕವನ್ನು ಅಲ್ಲೊಂದಷ್ಟು ಇಟ್ಟುಕೊಂಡರೆ ಹೇಗೆ ಎಂಬ ಐಡಿಯಾ ಬಂದಿತ್ತು. ಪುಸ್ತಕದ ಪ್ರಚಾರ ಹಾಗೆಯೇ ಮಾರಾಟವಾದರೆ ಸ್ವಲ್ಪ ಹಣ ಜೇಬು ಸೇರುತ್ತದೆ ಎಂಬ ಆಸೆಯಿಂದ ಪುಸ್ತಕ ಇಟ್ಟುಕೊಳ್ಳುವ ಎಂದು ನಿರ್ಧರಿಸಿದೆ.
ನಾನು ಎಲ್ಲಾದರೂ ಹೋದಾಗ ನನ್ನನ್ನು ಸೆಳೆಯುವುದು ಪುಸ್ತಕದ ಅಂಗಡಿ ಮತ್ತು ಸಿನಿಮಾ ಡಿವಿಡಿ ಅಂಗಡಿಗಳು ಮಾತ್ರ. ಉಳಿದವೆಲ್ಲಾ ನನ್ನ ಪಾಲಿಗೆ ನಗಣ್ಯ ಅನಿಸುತ್ತವೆ. ಆದರೆ ಡಿವಿಡಿ ಅಂಗಡಿಗೆ ಹೋಗಿ ಸುಮ್ಮನೆ ಡಿವಿಡಿಗಳನ್ನೂ ನೋಡುವಂತೆ ನೋಡಿ, ಅದರ ಹಿಂಭಾಗದ ಸಾರಾಂಶವನ್ನು ಗಮನಿಸಿ, ಆಸಕ್ತಿಕರ ಎನಿಸಿದರೆ ಬೆಲೆ ನೋಡಿ, ಕೊಳ್ಳುವುದೋ ಬೇಡವೋ ಎಂಬುದನ್ನು ನಿರ್ಧರಿಸುತ್ತೇನೆ. ಡಿವಿಡಿ ಗಳನ್ನ ಮೊದಲು ನೂರರ ಸಂಖ್ಯೆಯಲ್ಲಿ ಒಮ್ಮೆಲೇ ಕೊಳ್ಳುತ್ತಿದ್ದೆ. ಈಗ ಅಂತರ್ಜಾಲದಿಂದಾಗಿ ಹಣ ಉಳಿಸುವ ದುರಾಸೆಯಲ್ಲಿದ್ದೇನೆ. ಆದರೆ ಪುಸ್ತಕದ ವಿಷಯದಲ್ಲಿ ಹಾಗಿಲ್ಲ. ಪ್ರತಿವಾರ ಒಂದಲ್ಲಾ ಒಂದು ಪುಸ್ತಕ ಕೊಂಡುಕೊಳ್ಳುತ್ತೇನೆ.
ಆದರೆ ಕೆಲವನ್ನು ಅಲ್ಲೇ ಮುನ್ನುಡಿ ಓದುವ ಪ್ರಯತ್ನ ಮಾಡಿ ಆಮೇಲೆ ಕೊಳ್ಳುವ ನಿರ್ಣಯಕ್ಕೆ ಬರುತ್ತೇನೆ. ಆದರೆ ಒಂದಷ್ಟು ಪುಸ್ತಕಗಳನ್ನು ಗುಡ್ಡೆ ಹಾಕಿಕೊಂಡು ಹೋಗಿ ಬರುವವರು, ನೋಡುವವರು ಕೊಂಡು ಕೊಳ್ಳಬಹುದಾ ಇಲ್ಲವಾ ಎಂಬುದನ್ನು ಊಹೆ ಮಾಡುತ್ತಾ  ಅವರು ಪುಸ್ತಕವನ್ನು, ಅದರ ಪುಟಗಳನ್ನೂ ತಿರುವಿ ಹಾಕುವಾಗ, ಅವರ ಮುಖಭಾವವನ್ನು ಓದಲು ಪ್ರಯತ್ನಿಸುವುದು ಒಂದು ಅದ್ಭುತ ಅನುಭವ ಎನ್ನಬಹುದು.
ನಾನು ಪುಸ್ತಕವನ್ನು ನನ್ನ ಮುಂದೆ ಮೇಜಿನ ಮೇಲೆ ಆಲಂಕಾರಿಕವಾಗಿ ಜೋಡಿಸಿ, ಅದರ ಹಿಂದುಗಡೆ ಒಂದು ಖುರ್ಚಿಯಲ್ಲಿ ಕುಳಿತು ಪುಸ್ತಕವನ್ನು ಓದುತ್ತಿದ್ದೆ. ಕೆಲವೊಮ್ಮೆ ಓದುತ್ತಿರುವವನಂತೆ ನಟಿಸುತ್ತಿದ್ದೆ.
ಸುಮಾರು ಜನ ಬರುತ್ತಿದ್ದರು. ನೋಡುತ್ತಿದ್ದರು. ಒಬ್ಬರು ವಯಸ್ಸಾದ ವ್ಯಕ್ತಿ ಬಂದವರು ಇದರಲ್ಲಿ ವಿಷ್ಣುವರ್ಧನ್ ಅಭಿನಯದ ಚಿತ್ರವಿದೆಯೇ ಎಂದು ಕೇಳಿ ಇದೆ ಎಂಬುದನ್ನು ಖಾತರಿ ಮಾಡಿಕೊಂಡು ತೆಗೆದುಕೊಂಡರು.
ಇನ್ನೊಬ್ಬರು ನೀವು 1934 ರಿಂದ 2009 ರವರೆಗಿನ ಕನ್ನಡ ಚಿತ್ರಗಳನ್ನಷ್ಟೇ ಆಯ್ಕೆ ಮಾಡಿದ್ದೀರಿ. ಯಾಕೆ ಇಡೀ ಭಾರತದ ಚಿತ್ರರಂಗದಲ್ಲಿ ಎಲ್ಲಾ ಭಾಷೆಯನ್ನೂ ಒಗ್ಗೂಡಿಸಿ ನೋಡಲೇ ಬೇಕಾದ ನೂರೊಂದು ಭಾರತೀಯ ಚಿತ್ರಗಳು ಎಂಬ ಪುಸ್ತಕ ಬರೆಯಬಾರದು ಎಂಬ ಸಲಹೆ ಪ್ರಶ್ನೆ ಕೇಳಿದ್ದರು. ಅಯ್ಯೋ ಸಾರ್, ಇಡೀ ಭಾರತದ ಚಿತ್ರಗಳನ್ನು ಬರೀ ನೂರು ನೂರು ನೋಡಲೂ ನನಗೆ ಶತಮಾನವೇ ಬೇಕಲ್ಲ ಎಂದಿದ್ದೆ ನಗುತ್ತಾ.
ಒಬ್ಬ ವ್ಯಕ್ತಿ ನೀಟಾಗಿ ಇನ್ಶರ್ಟ್ ಮಾಡಿದ್ದು ಬಂದವನೇ ಪುಸ್ತಕವನ್ನು ನೋಡಿ ಅದನ್ನು ಬಿಡಿಸಿ ನೋಡಲಾರಂಭಿಸಿದ್ದ. ನೋಡಿದವನೇ ನನ್ನ ಮುಖ ನೋಡಿ, ಏನ್ ಪುಸ್ತಕ ಬರೀತಾರೋ ದರಿದ್ರ ಎಂದ. ನಾನು ಯಾಕೆ ಸಾರ್..ಚೆನ್ನಾಗಿಲ್ಲವಾ? ಎಂದು ಕೇಳಿದ್ದಕ್ಕೆ, ನಿಮಗೆ ಈ ಲೇಖಕ ಗೊತ್ತಾ ಎಂದ. ಆತ ಪುಸ್ತಕದ ಒಳಪುಟವನ್ನು ನೋಡಿದ್ದರೂ ಅದರಲ್ಲಿನ ನನ್ನ ಫೋಟೋ ಮತ್ತು ಸಾಕ್ಷಾತ್ ನನಗೂnanagoo ಅಜಗಜಾಂತರ ವ್ಯತ್ಯಾಸವಿತ್ತು. ಹಾಗಾಗಿ ಆತ ನಾನು ಪುಸ್ತಕ ಮಾರುವ ವ್ಯಕ್ತಿ ಎಂದಷ್ಟೇ ತಿಳಿದಿದ್ದ ಎನಿಸುತ್ತದೆ. ನಾನು ಉದ್ದುದ್ದ ಅಡ್ಡಡ್ಡ ತಲೆಯಲ್ಲಾಡಿಸಿದೆ. ಅಲ್ರೀ ಒಂದು ಪುಸ್ತಕ andreಅಂದ್ರೆ ಅದರಲ್ಲೊಂದು ಡಿಸಿಪ್ಲಿನ್ ಇರ್ತದೆ. ಈಗ ಪುಬ್ಲಿಶ್ ಅಂದ್ರೂ ಅದರಲ್ಲಿ ಒಂದಷ್ಟು ಸ್ವರೂಪಗಳಿರ್ತವೆ. ಇವನ್ನು ನೋಡಿ. ಇಡೀ ಪುಸ್ತಕದಲ್ಲಿ ಪರಿವಿಡಿ ಹಾಕಿಲ್ಲ ಎಂದ ಮುಖವನ್ನು ಗಿಂಜುತ್ತಾ. ಅದು ಹಾಗಲ್ಲ ಸಾರ್. ಮೊದಲಿಗೆ ಪರಿವಿಡಿ ಹಾಕಿ, ಚಿತ್ರಗಳ ಪಟ್ಟಿ ಕೊಟ್ಟು ಬಿಟ್ಟರೆ ಆತ ಮುಂದಕ್ಕೆ ಓದುವುದೇ ಇಲ್ಲ.ಪುಸ್ತಕವನ್ನು ಕೊಂಡು ಕೊಳ್ಳುವುದೂ ಇಲ್ಲ. ಸಿನಿಮಾಗಳು ಆತನಿಗೆ ಪರಿಚಿತವಾದ್ದರಿಂದ ಒಮ್ಮೆ ಕಣ್ಣಾಡಿಸಿ ನೋಡಿರದ ಚಿತ್ರವನ್ನು ಸ್ಮೃತಿಯಲ್ಲಿರಿಸಿಕೊಂಡು ಹೋಗಿಬಿಟ್ಟರೆ ಲೇಖಕನ ಪ್ರಕಾಶಕನ ಗೋಳು ಯಾರು ಕೇಳುತ್ತಾರೆ ಎಂದೆ. ಅದಕ್ಕೆ ಅವನಿಷ್ಟ ಬಂದ ಹಾಗೆ ಬರೆದರೆ ಆಗಿಬಿಡುತ್ತಾ ಎಂದವನು, ಪುಸ್ತಕವನ್ನು ಅಲ್ಲೇ ಬೀಸಾಕಿ, ಏನೇ ಮಾಡಿದರೂ ಅದರಲ್ಲಿ ಡಿಸಿಪ್ಲಿನ್ ಇರಲೇ ಬೇಕು ಎಂದು ಬೈದುಕೊಳ್ಳುತ್ತಾ ಅಲ್ಲಿಂದ ಹೋಗಿಯೇಬಿಟ್ಟ.
ಆ ಸಮಾರಂಭಕ್ಕೆ ಬಂದಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು ಇಂದಿನ ಭಾರತೀಯ ಸಿನಿಮಾ, ನಿರ್ದೇಶಕರು ಬದಲಾಗುತ್ತಿರುವ ಪರಿ ಮತ್ತು ಪ್ರೇಕ್ಷಕರ ನಾಡಿಮಿಡಿತ ಮುಂತಾದವುಗಳನ್ನು ಸಾಧ್ಯಂತವಾಗಿ ವಿವರಿಸಿದ್ದರು. ಜೊತೆಗೆ ಕಿರು ಸಾಕ್ಷ್ಯಚಿತ್ರವನ್ನೂ ಸಿದ್ಧ ಪಡಿಸಿಕೊಂಡು ಬಂದಿದ್ದರು. ಅದರ ಪ್ರದರ್ಶನದ ಜೊತೆಗೆ ಮಾತನಾಡುತ್ತಾ ತುಂಬಾ ಪ್ರೌಢವಾಗಿ ಮತ್ತು ವಸ್ತುನಿಷ್ಠವಾಗಿ ಸಿನಿಮಾದ ಬಗ್ಗೆ ಮಾತನಾಡಿದ್ದರು. ಆದರೆ ಆಕೆಯ ಮಾತುಗಳಿದ್ದದ್ದು ಇಂಗ್ಲಿಷ್ ಭಾಷೆಯಲ್ಲಿ.
ಆಕೆಯ ಮಾತಿನ ನಂತರ ಕಾಫೀ ವಿರಾಮಕ್ಕೆ ಹೊರಬಂದಾಗ ತುಂಬಾ ಜನ ಆಕೆಯ ಸುತ್ತುವರೆದು ಅದೂ ಇದೂ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕನ್ನಡದ ಬೆರಳೆಣಿಕೆಯ ಚಿತ್ರಗಳನ್ನಷ್ಟೇ ನೋಡಿದ್ದ ಆಕೆ ಏನೇನೋ ಹೇಳುತ್ತಿದ್ದರು. ಒಟ್ಟಿನಲ್ಲಿ ಆಕೆಯ ಸುತ್ತ ಇಡೀ ಒಂದು ಗುಂಪೇ ಇತ್ತು. ಆಕೆಯ ಗುಂಪಿನಿಂದ ಮಾರುದೂರದಲ್ಲಿ ನನ್ನ ಕಿರುಪುಸ್ತಕ ಮಳಿಗೆಯ ಹತ್ತಿರ ಯಾರೂ ಕಣ್ಣು ಹಾಯಿಸದೇ ಇದ್ದದ್ದು ನನಗೆ ಒಂಚೂರು ಇರುಸುಮುರುಸು ಉಂಟುಮಾಡಿತ್ತು. ಹೊಸ ಹೊಸ ಸಿನಿಮಾಸಕ್ತ ಹುಡುಗರು ಕಿರುಚಿತ್ರಗಳನ್ನು ಮಾಡಿದ್ದವರು ಆಕೆಗೆ ನಾನಾತರದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆಕೆ ಉತ್ಸಾಹದಿಂದ ಉತ್ತರಿಸುತ್ತಿದ್ದರು. ನಾನು ಆ ಪ್ರಹಸನವನ್ನೇ ನೋಡುತ್ತಿದ್ದೆ.
ಆಕೆ ಒಂದಷ್ಟು ಮಾತನಾಡಿದ ನಂತರ ಸುಮ್ಮನೆ ನೋಡುವಾಗ ನನ್ನತ್ತ ನೋಡಿದವರು ಸೀದಾ ಹತ್ತಿರಕ್ಕೆ ಬಂದರು. ನಾನು ಎದ್ದುನಿಂತೆ. ಆಕೆ ಇಂಗ್ಲೀಷಿನಲ್ಲಿ ಇದೇನಿದು ಎಂದರು. ನಾನು ಉತ್ತರಿಸಲು ಬಾಯಿ ತೆರೆದೇ. ಅಷ್ಟರಲ್ಲೇ ನನಗೆ ಅಲ್ಲೇ ಪರಿಚಯವಾಗಿದ್ದವರು ತಮ್ಮ ಹರಕು ಮುರುಕು ಇಂಗ್ಲಿಷ್ನಲ್ಲಿ ಉತ್ಸಾಹದಿಂದ ಉತ್ತರಿಸತೊಡಗಿದರು. ಅವರ ಸಂಭಾಷಣೆ ಮಜಾ ಇಲ್ಲಿದೆ.
ಮೇಡಂ..ದಿಸ್ is ಇಸ್ ಬುಕ್..
ನನಗೊತ್ತು ..ಯಾವ ಪುಸ್ತಕ..?[ಇಂಗ್ಲಿಷ್ ನಲ್ಲಿ]
ಬುಕ್..ಸಿನಿಮಾಸ್ ಯುವರ್ ಡೆತ್ ವಾಚ್..
ವಾಟ್..?
ಯು ವಾಚ್ ಡೆಡ್ ಸಿನಿಮಾ ಹಂಡ್ರೆಡ್ ಒನ್ ಫಿಲಂಸ್ ಕನ್ನಡ ..
ಆಕೆಗೆ ಇನ್ನಷ್ಟು ಗೊಂದಲ ಏರ್ಪಟ್ಟಿದ್ದರಿಂದ ನಾನು ಉತ್ತರಿಸಬೇಕಾಯಿತು. ಆಕೆಗೆ ಆ ಪುಸ್ತಕ ಕೇಳಿ ಖುಷಿಯಾಗಿ ನನಗೆ ಕನ್ನಡ ಬರುವುದಿಲ್ಲ. ಆದರೂ ಇದರ ಲೇಖಕನಿಗೆ ಪ್ರಶಂಸಿಸಬೇಕು. ಎಂದವರೇ ಒಂದು ಪುಸ್ತಕ ತೆರೆದು ಅಲ್ಲಿದ್ದ ಸಿನಿಮಾ ಪಟ್ಟಿಯನ್ನು ಗಮನಿಸತೊಡಗಿದರು. ಆದರೆ ಅವರಿಗೆ ಕನ್ನಡ ಲಿಪಿ ಬರುತ್ತಿರಲಿಲ್ಲ. ಅಲ್ಲಿದ್ದ ಕುಬಿ ಮತ್ತು ಇಯಾಲ ಚಿತ್ರವನ್ನು ಗಮನಿಸಿದರು.
ಇದ್ಯಾವ ಸಿನಿಮಾ?
ಕುಬಿ ಅಂಡ್ ಇಯಾಲ.
ಒಹ್. ಕನ್ನಡ
ಯು ನೋ ಕನ್ನಡ ಪೊಯೆಟ್ ಕುಗೆಂಪು. ಹಿಸ್ ಸನ್..ಫುಲ್ ಮೂನ್ ತೇಜಸ್ವಿ. ಹೀ ರೈಟ್ಸ್ ಸ್ಟೋರಿ. ಅಂಡ್ ಫಿಲಂ ಮೇಕ್ಸ್.
ಯು ವಾಚ್ ಮೇಡಂ. ಡೆಡ್ ಫಿಲಂ ಬಿಫೋರ್...ಆಕ್ಚುವಲ್ಲಿ ರಾಜಣ್ಣ ಬಿಗ್ ಆಕ್ಟರ್. ಹೀ ಡೆಡ್ ವೀರಪ್ಪನ್..
ಏನು? ವೀರಪ್ಪನ್ ಕೊಂದದ್ದು ರಾಜಕುಮಾರಾ?
ಯಾಕೋ ಮಾತುಕತೆ ಹಳಿ ತಪ್ಪಿ ಆಕೆ ಏನನ್ನೋ ಅರ್ಥ ಮಾಡಿಕೊಂಡು ಈ ಅತ್ಯುತ್ಸಾಹಿ ಏನನ್ನೋ ಹೇಳಿ ಯಡವಟ್ಟು ಆಗುತ್ತದೆ ಎಂಬುದು ಗೊತ್ತಾದದ್ದೇ ನಾನು ಮಾತಾಡಲೇಬೇಕಾಯಿತು. ಆದರೆ ಆಕೆ ಬಂದು ಮಾತಾಡಿ ಹೋದದ್ದೇ ನನ್ನ ಪುಸ್ತಕಕ್ಕೆ ಇನ್ನಿಲ್ಲದ ಮಹತ್ವ ಬಂದದ್ದು ಸತ್ಯ. ಆಕೆ ಪುಸ್ತಕ ನೋಡಿ, ಅಲ್ಲಿದ್ದ ಕೆಲವರಿಗೆ ನನ್ನ ಪುಸ್ತಕವನ್ನು ಹೆಸರಿಸಿ, ಹೊಗಳಿ ನನ್ನ ಮೊಬೈಲ್ ನಂಬರ್ ತೆಗೆದುಕೊಂಡು ಹೋದ ಮೇಲೆ ಅಷ್ಟು ಹೊತ್ತು ನನ್ನ ಪುಸ್ತಕದ ಕಡೆ ಕಣ್ಣೆತ್ತಿಯೂ ನೋಡದವರು ಒಮ್ಮೆ ನನ್ನ ಬಳಿ ಬಂದು ನನ್ನ ಪುಸ್ತಕವನ್ನು ತಿರುಗಿಸಿ ಮುರುಗಿಸಿ ನೋಡಿ ಹಾಳೆ ಬಿಡಿಸಿ ಓದಿ ನನ್ನೆಡೆ ಮೆಚ್ಚುಗೆಯ ಮಂದಹಾಸ ಬೀರಿದ್ದರು.
ಕನ್ನಡದ ಹೊಸ ಅಲೆಯ ನಿರ್ದೇಶಕ, ನಿರ್ದೇಶಕಿ ಮತ್ತು ನಟ ನಿರ್ದೇಶಕ ಮೂವರು ಆ ಸಮಾರಂಭದಲ್ಲಿ ಭಾಗವಹಿಸಿದ್ದರು. ನನ್ನಿಂದ ಮಾರುದೂರದಲ್ಲಿ ನಿಂತು ಕನ್ನಡ ಚಿತ್ರರಂಗದ ಸ್ಥಿತಿಗತಿಯ ಬಗ್ಗೆ ಕಳಕಳಿಯಿಂದ ಚರ್ಚಿಸುತ್ತಿದ್ದರು. ಆದರೆ ಅವರು ಹೋಗುವಾಗ, ಬರುವಾಗ ನಿಂತು ಮಾತಾಡುವಾಗ ಕೇವಲ ಮಾರುದೂರದಲ್ಲಿ ಬೇಡವೆಂದರೂ ಕಣ್ಣಿಗೆ ಬೀಳುವಂತಿದ್ದ ಪುಸ್ತಕದ ಕಡೆಗೆ ಸುಮ್ಮನೆ ಕೂಡ ತಿರುಗಿಯೂ ನೋಡಲಿಲ್ಲ ಎಂಬುದು ಬೇಸರದ ಸಂಗತಿ ಎನ್ನಬಹುದು. ಒಂದಷ್ಟು ಸಿನಿಮಾದ ಒಲವಿದ್ದ ಮೇಲೆ ಯಾವುದೇ ರೀತಿಯ ಸಿನಿಮಾ ಸಂಬಂಧ ಪಟ್ಟ ಪುಸ್ತಕವೋ ಡಿವಿಡಿಯೋ ಇದ್ದರೇ ಕುತೂಹಲಕ್ಕಾದರೂ ಒಮ್ಮೆ ನೋಡುವುದು ಸಹಜ. ಅದರಲ್ಲಿ ನಾವು ನೋಡುವುದೇನಿದೆ...ನಾವು ಅದನ್ನೆಲ್ಲಾ ಮೀರಿದವರು ಎಂಬ ಮನೋಭಾವ ಅವರದ್ದಾಗಿತ್ತು.

Sunday, April 20, 2014

ನಾನು ಅವನಾಗ ಹೊರಟು......

ನಿಮ್ಮ ಸಿನಿಮಾ ನಾಲೆಜ್ ಸೂಪರ್ ..ಹಾಗೆಯೇ ಸಾಹಿತ್ಯ ಕೂಡ ಚೆನ್ನಾಗಿಯೇ ಗೊತ್ತಿದೆ. ಭಾಷೆಯ ಮೇಲಿನ ಹಿಡಿತ ಅದ್ಭುತ ಇಷ್ಟಿದ್ದೂ ಯಾಕೆ ನೀವು ಈ ಮಾಸ್ತರಿಕೆ ಕೆಲಸ ಮಾಡಬೇಕು..?ಅದೇ ನಿಮ್ಮ ಗೆಳೆಯ ಅಂತೀರಿ ಅವನನ್ನ..ಕ್ಲಾಸ್ ಮೇಟ್ ಬೇರೆ. ನೋಡಿ ಈವತ್ತು ಸುಮಾರು ಸಿನಿಮಾ ಡೈರೆಕ್ಟ್ ಮಾಡೇ ಬಿಟ್ಟಾ..? ಇವತ್ತು ಪತ್ರಿಕೆಗಳಲ್ಲಿ, ಟಿವಿನಲ್ಲಿ ಅವನ ಹೆಸರು, ಸಂದರ್ಶನ ಎಲ್ಲಾ ಬರ್ತಾ ಇದೆ. ನೀವು ಯಾಕೆ ಟ್ರೈ ಮಾಡಬಾರದು..?
ನಮ್ಮ ಬಾಸ್ ಹಾಗೆ ಹೇಳಿದಾಗ ನಾನು ಯೋಚಿಸುವಂತಾದದ್ದು ನಿಜ. ಈವತ್ತು ಚಿತ್ರರಂಗದಲ್ಲಿ ನಿರ್ದೇಶಕನಾಗಿ ಕತೆಗಾರನಾಗಿ ಮಿಂಚುತ್ತಿರುವ ಅವನು ನನ್ನ ಕಾಲೇಜ್ ಮೇಟ್. ಹಾಗೂ ಹಾಸ್ಟೆಲ್ ಮೇಟ್. ಜೊತೆಯಲ್ಲಿಯೇ ಮೂರು ವರ್ಷ ಕಳೆದವರು. ಅವನೂ ಬ್ರಿಲ್ಲಿಯೆಂಟ್. ಆದರೂ ಆಗಾಗ ಕತೆ ಬರೆಯುತ್ತಿದ್ದ. ಇಬ್ಬರೂ ಜೊತೆ ಜೊತೆಯಾಗಿಯೇ ಸಿನಿಮಾ ನೋಡುತ್ತಿದ್ದೆವು. ಚರ್ಚಿಸುತ್ತಿದ್ದೆವು. ಆ ನಿರ್ದೇಶಕ ಹಾಗೆ ಈ ನಿರ್ದೇಶಕ ಹೀಗೆ ಎಂದೆಲ್ಲಾ ಆಯಾ ನಿರ್ದೇಶಕರ ಮಾನ ಮರ್ಯಾದೆ ಹರಾಜಾಗುತ್ತಿದ್ದೆವು.ಆ ಚಿತ್ರದ ಕತೆ ಚಿತ್ರಕತೆ ಬಗ್ಗೆ ಸಂಭಾಷಣೆ ನಿರ್ದೇಶನ ಅಭಿನಯ ಹೀಗೆ ಎಲ್ಲಾ ವಿಷಯಗಳನ್ನೂ ಚರ್ಚಿಸುತ್ತಿದ್ದೆವು. ಆಗಾಗ ಅವನು ನಾನೇನಾದರೂ ಮುಂದೆ ಸಿನಿಮಾ ಮಾಡಿದ್ರೆ ಹೀಗೆ ಮಾಡಲ್ಲಪ್ಪ ಎನ್ನುತ್ತಿದ್ದ. ಆಗ ನಾನೂ ಅವನ ಜೊತೆ ದನಿ ಗೂಡಿಸುತ್ತಿದ್ದೆ. ಹೌದು. ಒಳ್ಳೆ ಕನ್ನಡ ಚಿತ್ರ ಮಾಡಬೇಕು. ಎಂತೆಂಥ ಕತೆಗಳಿವೆ ಕನ್ನಡದಲ್ಲಿ. ಅದನ್ನೆಲ್ಲಾ ದೃಶ್ಯ ಮಾಧ್ಯಮಕ್ಕೆ ತರಬೇಕು.. ಎಂದೆಲ್ಲಾ ಮಧ್ಯರಾತ್ರಿಯವರೆಗೆ ಮಾತನಾಡುತ್ತಿದ್ದೆವು.
ನಮ್ಮ ಸಿನಿಮಾ ಹುಚ್ಚು ಎಷ್ಟಿತ್ತು ಎಂದರೆ ಇಡೀ ಹಾಸ್ಟೆಲ್ ಗೆಳೆಯರು, ಕಾಲೇಜು ಹುಡುಗರು ಬಿಡುಗಡೆಯಾದ ಹೊಸ ಚಿತ್ರಕ್ಕೆ ಹೋಗಬೇಕೆಂದರೆ ನಮ್ಮನ್ನೊಮ್ಮೆ ಕೇಳಿ ಅದರ ಬಗ್ಗೆ ತಿಳಿದುಕೊಂಡು ಹೋಗುತ್ತಿದ್ದರು. ಬಿಡುಗಡೆಯಾದ ಎಲ್ಲಾ ಚಿತ್ರವನ್ನೂ ಆಯಾದಿನವೇ ರಾತ್ರಿಯ ಆಟ ನೋಡಿಬಿಡುತ್ತಿದ್ದೆವು.
ಆನಂತರ ನಮ್ಮ ದಿಕ್ಕು ಬೇರೆ ಬೇರೆಯಾಯಿತು. ನಾನಂತೂ ಒಳ್ಳೆಯ ಅಂಕವಿದ್ದರಿಂದ ಸುಲಭವಾಗಿ ಕೆಲಸ ತೆಗೆದುಕೊಂಡಿದ್ದೆ. ಆನಂತರ ಮನೆಯಲ್ಲಿ ಸ್ವಲ್ಪ ಮಟ್ಟಿಗಿನ ನೆಮ್ಮದಿ ಇತ್ತು. ದಿನ ಕಳೆಯುತ್ತಿದ್ದಂತೆ ನನ್ನ ಜೀವನ ತನ್ನದೇ ಆದ ರೂಪು ಪಡೆದುಕೊಳ್ಳುತ್ತಿತ್ತು. ಈ ನಡುವೆ ಅವನು ಎನಾದಾ ? ಎಂಬುದನ್ನು ನಾನು ಮರತೆ ಬಿಟ್ಟಿದ್ದೆ. ಆಗಾಗ ಗೆಳೆಯರು ಸಿಕ್ಕರೆ ಅವನ ವಿಷಯ ಬಂದಾಗ ಮಾತನಾಡುತ್ತಿದ್ದೆವು. ಅವನಾ..ಅದೆಲ್ಲೋ ಬೆಂಗಳೂರಿಗೆ ಹೋಗಿದ್ದಾನಂತೆ ಅದ್ಯಾವುದೋ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾನಂತೆ..ಅವನಿಗೇನು ಮಾರಾಯ..ಎಲ್ಲಾ ಚೆನ್ನಾಗಿತ್ತು..ಆರಾಮವಾಗಿ ಬದುಕಬಹುದಿತ್ತು..ಅದು ಬಿಟ್ಟು ಇದೆಲ್ಲಾ ಪಡಿ ಪಾಟಲು ಬೇಕಿತ್ತಾ ಅವನಿಗೆ...ಹೀಗೆ ಅವನ ಮಾತಿಲ್ಲದೆ ನಮ್ಮ ಮಾತುಕತೆ ಮುಗಿಯುತ್ತಿರಲಿಲ್ಲ. ಆಗಾಗ ಅಲ್ಲೊಂದು ಇಲ್ಲೊಂದು ಪತ್ರಿಕೆಯಲ್ಲಿ ಅವನು ಬರೆದ ಬರಹಗಳು ಪ್ರಕಟವಾದಾಗ ನಾವೆಲ್ಲಾ ಗೆಳೆಯರು ಓದಿ ಮಾತಾಡಿಕೊಳ್ಳುತ್ತಿದ್ದೆವು. ಇಷ್ಟೆಲ್ಲಾ ಬರೆಯುವ ತಿಳಿದುಕೊಂಡಿರುವವ ಇನ್ನೂ ಸೆಟ್ಲ್ ಆಗದೆ ಒದ್ದಾಡುತ್ತಿರುವುದು ನಮಗೆ ಸ್ವಲ್ಪ ಬೇಸರ ತರಿಸುತ್ತಿತ್ತು.
ಆದರೆ ಇದೆಲ್ಲಾ ಒಂದು ಎಂಟು ವರ್ಷದ ನಂತರ ಬದಲಾಯಿತು. ಇದ್ದಕ್ಕಿದ್ದಂತೆ ಅವನು ಚಿತ್ರರಂಗದಲ್ಲಿ ಉದಯವಾದವನು ಹೆಸರು ಮಾಡಿದ. ಹಣ ಮಾಡಿದ. ಎಲ್ಲಾ ಕಡೆ ಅವನದೇ ಮಾತು ಕತೆ.ಇಂತಹ ಸಮಯದಲ್ಲೇ ನಮ್ಮ ಬಾಸ್ ಹಾಗೆ ಹೇಳಿದ್ದು.
ಯಾಕೋ ಆ ರಾತ್ರಿ ನನಗೆ ನಿದ್ರೆಯೇ ಬರಲಿಲ್ಲ. ಅವನದೇ ಯೋಚನೆ ನಾವೆಲ್ಲಾ ಕೆಲಸ ತೆಗೆದುಕೊಂಡು ಮದುವೆಯಾಗಿ ಸೆಟ್ಲ್ ಆದೆವು ಎಂಬ ಹಮ್ಮಿನಲ್ಲಿ ಓಡಾಡುತ್ತಿದ್ದಾಗ ಆತ ಏನೇನೂ ಇಲ್ಲದೆ ಅಲೆಯುತ್ತಿದ್ದ.ಆದರೆ ಈಗ ಅವನದೇ ಮಾತು. ಮೆಚ್ಚುಗೆಯಲ್ಲಾ ಅವನದೇ. ಹಾಗೆ ನೋಡಿದರೆ ನಮಗಿಂತ ಚೆನ್ನಾಗಿಯೇ ಹಣವಂತನಾಗಿಯೇ ಇದ್ದಾನೆ ಅವನು. ನಾನು ತಪ್ಪು ಮಾಡಿದೆನಾ..? ನಾನೂ ಯಾಕೆ ಒಂದು ಕೈ ನೋಡಬಾರದು. ಅವನೇ ಮಾಡಿದ್ದಾನೆಂದರೆ ನಾನು ಮಾಡಲು ಕಷ್ಟವೇನಲ್ಲ.
ಮಾರನೆಯ ದಿನವೇ ಆತನ ಸಿನಿಮಾಗಳ ಡಿವಿಡಿಗಳನ್ನೂ ಕೊಂಡು ತಂದವನು ಒಂದರ ಹಿಂದೆ ಒಂದರಂತೆ ನೋಡಿದ್ದೆ. ಆದ್ರೆ ಯಾಕೋ ಯಾವುದೂ ಮನಸ್ಸಿಗೆ ತಾಕಿರಲಿಲ್ಲ.ನಾವು ಕಾಲೇಜು ದಿನಗಳಲ್ಲಿ ಹೇಗೆ ಸಿನಿಮಾ ಮಾಡಬಾರದು ಎಂದೆಲ್ಲಾ ಬೈದಾಡಿದ್ದೆವೋ ಆತ ಅದನ್ನೆಲ್ಲಾ ಮರೆತವನಂತೆ ಹಾಗೆಯೇ ಅಥವಾ ಸ್ವಲ್ಪ ಅದಕ್ಕಿಂತ ವ್ಯತಿರಿಕ್ತವಾಗಿ ಮಾಡಿದ್ದ. ಅಷ್ಟೇ. ಅದು ಬಿಟ್ಟರೆ ಯಾವುದೂ ಅಂತಹ ಮಾಸ್ಟರ್ ಪೀಸ್ ಎನಿಸುವ ಹಾಗಿರಲಿಲ್ಲ. ಅದರಲ್ಲೂ ಆತನ ಮೂರನೆಯ ಸಿನಿಮಾವನ್ನು ಪೂರ್ತಿ ನೋಡಲು ನನಗೆ ಅದೆಷ್ಟು ಬೋರಾಗುತ್ತಿತ್ತು ಎಂದರೆ ಯಾವಾಗ ಮುಗಿಯುತ್ತದೋ ಎನಿಸುತ್ತಿತ್ತು.ಆದರೆ ಆ ಚಿತ್ರ ಅದ್ಭುತ ಯಶಸ್ಸು ಗಳಿಸಿತ್ತಲ್ಲದೆ ಒಂದೆರೆಡು ಪ್ರಶಸ್ತಿ ಪುರಸ್ಕಾರಗಳನ್ನೂ ಪಡೆದುಕೊಂಡಿತ್ತು.
ಹೌದು. ನಾನು ಇವನಿಗಿಂತ ಚೆನ್ನಾಗಿ ಸಿನಿಮಾ ಮಾಡಬಲ್ಲೆ. ಅದ್ಭುತವಾದ ಕತೆ, ಕಲ್ಪನೆ ನನ್ನಲ್ಲಿದೆ. ಇಷ್ಟೆಲ್ಲಾ ಸಾಧಿಸಲು ಅವನು ತೆಗೆದುಕೊಂಡಷ್ಟು ಸಮಯ ನನಗೆ ಬೇಕಾಗೂ ಇಲ್ಲ. ಯಾಕೆಂದರೆ ನಾನು ಅವನಿಗಿಂತ ಅಡ್ವಾನ್ಸ್ ಇದ್ದೇನೆ ಎನಿಸಿತು.
nanu ನಾನು ನಿರ್ಧರಿಸಿದೆ. ನಾನೂ ಒಂದು ಕೈ ನೋಡಿಯೇ ಬಿಡುತ್ತೇನೆ. ರಂಗಿನಲೋಕದಲ್ಲಿ ನನ್ನದು ಒಂದು ಹೋಳಿ ಆಟ ಆಡಿಯೇ ತೀರುತ್ತೇನೆ.
ಮಾರನೆಯ ದಿನ ಬೆಳಿಗ್ಗೆ ಬಾಸ್ ಗೆ ವಿಷಯ ಹೇಳಿದಾಗ ಮೊದಲಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು ಆನಂತರ ಒಮ್ಮೆ ಸರಿಯಾಗಿ ಯೋಚಿಸಿ ನಿರ್ಧಾರ ಮಾಡು ಎಂಬ ಅಪಸ್ವರದ ಮಾತನಾಡಿದ್ದು ನನಗೆ ಇಷ್ಟವಾಗಲಿಲ್ಲ. ಆದರೆ ನನ್ನ ನಿರ್ಧಾರ ಗಟ್ಟಿಯಾಗಿತ್ತು.
ನಾನು ಅವನನ್ನು ಮೀರಿಸಬೇಕಿತ್ತು.
ಮಾರನೆಯ ದಿನವೇ ಕೆಲಸ ಬಿಟ್ಟೆನಾದರೂ ಯಾವಾಗ ಬೇಕಾದರೂ ಬಂದು ಮತ್ತೆ ಕೆಲಸಕ್ಕೆ ಜಾಯಿನ್ ಆಗಬಹುದು ಎಂದು ನನ್ನ ಬಾಸ್ ಹೇಳಿದಾಗ ಖುಷಿಯಾಯಿತು.ಆದರೆ ಹೇಗೋ ಸಾಧನೆ ಮಾಡಲು ಹೊರತು ನಿಂತಿರುವೆ. ನಿನಗದರಲ್ಲಿ ಪ್ರಾಕ್ಟಿಕಲ್ ನಾಲೆಜ್ ಕಡಿಮೆ. ಒಮ್ಮೆ ಅವನ ಅಭಿಪ್ರಾಯ ಸಲಹೆ ಯಾಕೆ ತೆಗೆದುಕೊಳ್ಳಬಾರದು ಎಂದರು.ನನಗೆ ಉರಿದು ಹೋಯಿತು. ಅದರ ಅವಶ್ಯಕತೆ ನನಗಿಲ್ಲ ಎಂದವನೇ ದುರ್ದಾನ ತೆಗೆದುಕೊಂಡವನಂತೆ ಅಲ್ಲಿಂದ ಹೊರಟುಬಂದಿದ್ದೆ.
ಈಗ ನನ್ನ ಗುರಿ ಸ್ಪಷ್ಟವಾಗಿತ್ತು..ಮನಸ್ಸಿನಲ್ಲಿ ಅವನು ಬಂದು ಹೋದ. ಅವನನ್ನು ಪ್ರತಿಸ್ಪರ್ಧಿಯಾಗಿ ತೆಗೆದುಕೊಂಡಿರುವವನು ನಾನು..ಅವನ ಹತ್ತಿರ ಸಲಹೆ ಕೇಳುವ ಸಲಾಮು ಹೊಡೆಯುವುದು ನನಗೆ ಇಷ್ಟವಾಗಲಿಲ್ಲ. ಮೊದಲಿಗೆ ಏನೇನು ಮಾಡಬೇಕು ಎಂಬುದನ್ನು ಪಟ್ಟಿ ಮಾಡಿದೆ. ಒಂದೊಳ್ಳೆ ಕತೆ ಮಾಡುವುದು..ಆನಂತರ ಮುಂದಿನದರ ಬಗ್ಗೆ ಯೋಚಿಸೋಣ. ಕತೆಯಿಲ್ಲದೆ ರೀಮೇಕ್ ರೀಮಿಕ್ಸ್ ಗಳಲ್ಲಿ ಕಳೆದುಹೋಗಿ ಒದ್ದಾಡುತ್ತಿರುವ ಚಿತ್ರರಂಗಕ್ಕೆ ನಾನು ಓಯಸಿಸ್ ಆದರೂ ಆಗಬಹುದು. ನನ್ನ ಮನೆಯ ಮುಂದಿನ ಚಿತ್ರಕರ್ಮಿಗಳು ಸಾಲು ಗಟ್ಟಿ ನಿಲ್ಲಬಹುದು ಎನಿಸಿತು.
nanu ನಾನು ನಿರ್ಧರಿಸಿದೆ.
.....
...
ಚೇತನ್ ಭಗತ್ ಜೊತೆಯಲ್ಲೇ ಓದಿದ ಎಸ್.ವಿ.ದಿವಾಕರ್ ಬರೆದ ಬೀಟನ್ ಬಿ ಭಗತ್ ಕಾದಂಬರಿಯ ಭಾವಾನುವಾದವಿದು. ಜೊತೆಯಲ್ಲೇ ಓದಿದ ಗೆಳೆಯನೊಬ್ಬ ಏನೋ ಮಾಡಿದ ಎಂದು ಹಠಕ್ಕೆ ಬೀಳುವ ದಿವಾಕರ್ ಲಕ್ಷಗಟ್ಟಲೆ ಸಂಬಳವಿದ್ದ ಕೆಲಸವನ್ನು ಲೆಕ್ಕಿಸದೆ ಅವನ ತರಹವೇ ಆಗಬೇಕೆಂದು ಪಣತೊಡುತ್ತಾರೆ. ತಾನು ಬರೆಯುತ್ತೇನೆ. ಲಕ್ಷ ಲಕ್ಷ ಸಂಪಾದಿಸುತ್ತೇನೆ..ಹೆಸರು ಗಳಿಸುತ್ತೇನೆ ಎಂದೆಲ್ಲಾ ಕನಸು ಕಟ್ಟಿಕೊಂಡು ಪೆನ್ನು ಹಿಡಿಯುತ್ತಾರೆ.
ನಾನು ನಾನು ಅಷ್ಟೇ. ನಾನು ಬೇರೆ ಯಾರ ತರಹವೂ ಆಗಬೇಕಿಲ್ಲ ಆಗುವುದು ಸಾಧ್ಯವೂ ಇಲ್ಲ. ಹಾಗೆಯೇ ಸಾಧನೆಯ ಹಾದಿ ಅಷ್ಟು ಸುಲಭದ ಸರಾಗದ ಹಾದಿಯಲ್ಲ ಎಂಬುದು ಗೊತಾಗುವವರೆಗೆ ಅವರು ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಸಮಯವಿದ್ದರೆ ಒಮ್ಮೆ ಓದಬಹುದು. ಎಲ್ಲೂ ಬೋರ್ ಹೊಡೆಸದ ಕಾದಂಬರಿ ಇದು.
[ಅಂದ ಹಾಗೆ ಅದನ್ನು ನಾನು ನನಗನಿಸಿದ ರೀತಿಯಲ್ಲಿ ನನ್ನ ಅನುಭವದ ಜೊತೆಗೆ ಪರಿಚಯಿಸಿದ್ದೇನೆ. ಅಷ್ಟೇ]

Friday, April 18, 2014

ಅವರ್ಯಾಕೆ ಓಡುತ್ತಿರುತ್ತಾರೆ ..? ಒಂದು ತಲೆ ಹರಟೆ.

ಚಿತ್ರದಲ್ಲಿ ಪ್ರೊಮೊ ಎಷ್ಟು ಮುಖ್ಯವೋ ಅದರ ಪೋಸ್ಟರ್ ಕೂಡ ಅಷ್ಟೇ ಮುಖ್ಯ ಎನ್ನಬಹುದು. ಯಾಕೆಂದರೆ ಪ್ರೊಮೊ ಹಾಡುಗಳಿಗಿಂತ ಮೊದಲಿಗೆ ಚಿತ್ರದ ಬಗ್ಗೆ ಸಣ್ಣ ಸುಳಿವು ಕೊಡುವುದು ಕುತೂಹಲ ಕೆರಳಿಸುವುದು ಈ ಪೋಸ್ಟರ್ ಗಳು ಎನ್ನಬಹುದು.ಅದರಲ್ಲೂ ಒಂದು ಚಿತ್ರದ ಪೋಸ್ಟರ್ ಆ ಚಿತ್ರದ ಬಗ್ಗೆ ಕುತೂಹಲ ಕೆರಳಿಸಬಹುದು, ಕತೆಯ ವಸ್ತುವನ್ನು ಬಿಚ್ಚಿಡಬಹುದು. ಹಾಗಾಗಿಯೇ ಒಬ್ಬ ನಿರ್ದೇಶಕ ಸಿನಿಮಾ ಮಾಡುವ ಆಷ್ಟೇ ಅಸ್ಥೆಯಿಂದ ಪೋಸ್ಟರ್ ಕೂಡ ವಿನ್ಯಾಸ ಮಾಡಿಸುತ್ತಾನೆ.
ಇದೊಂದು ಘಟನೆಯನ್ನು ನನಗೆ ಯಾರೋ ಒಬ್ಬರು ಹೇಳಿದ್ದರು. ಒಮ್ಮೆ ಪೋಸ್ಟರ್ ವಿನ್ಯಾಸಕಾರನ ಹತ್ತಿರ ಹೋದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ತಮ್ಮ ಚಿತ್ರ ರಂಗನಾಯಕಿ ಗೆ ಸೂಕ್ತವಾದ ಪೋಸ್ಟರ್ ವಿನ್ಯಾಸ ಮಾಡಿಕೊಡುವಂತೆ ಕೇಳಿಕೊಂಡರು. ತಮ್ಮ ಚಿತ್ರದ ಕತೆಯನ್ನು ಅದರ ಆಶಯವನ್ನು ಸಂಪೂರ್ಣವಾಗಿ ವಿವರಿಸಿದ ಖ್ಯಾತರು ತಮಗೆ ಒಬ್ಬ ಕಲಾವಿದೆಯ ಜೀವನದಲ್ಲಿ ಮದುವೆ ಎಂಬುವುದು ಹೇಗೆ ಆಕೆಯ ಕಲೆಯನ್ನು ಮರೆಯುವಂತೆ ಮಾಡಿ ಬಿಟ್ಟಿತು ಅಥವಾ ಮದುವೆಯೇ ಆಕೆಯ ಕಲೆಗೆ ಹೇಗೆ ಅಡ್ಡಗಾಲು ಹಾಕಿತು ಎಂಬುದನ್ನು ಸೂಚ್ಯವಾಗಿ ವಿವರಿಸುವ ಪೋಸ್ಟರ್ ರಚಿಸುವಂತೆ ಹೇಳಿದಾಗ ಕಲಾವಿದರು ಗೊಂದಲಕ್ಕೆ ಬಿದ್ದರಂತೆ. ಅಷ್ಟೂ ಕತೆಯನ್ನು ಹೇಗೆ ಒಂದೇ ಚಿತ್ರದಲ್ಲಿ ತೋರಿಸುವುದು ಎನ್ನುವುದನ್ನು ದಿನಗಟ್ಟಲೆ ಯೋಚಿಸಿದರೂ ಹೊಳೆಯದಿದ್ದಾಗ ಅವರು ಪುಟ್ಟಣ್ಣ ಅವರಲ್ಲೇ ಅದಕ್ಕೊಂದು ಐಡಿಯಾ ಕೊಡುವಂತೆ ಕೇಳಿಕೊಂಡರು.
ಸ್ವಲ್ಪ ಹೊತ್ತು ಯೋಚಿಸಿದ ಪುಟ್ಟಣ್ಣ ಹೇಳಿದರಂತೆ.
" ಒಂದು ಕೆಲಸ ಮಾಡಿ ಒಂದು ಬಾಗಿಲು ಕಟಾ೦ಜನವನ್ನು ಮಧ್ಯದಲ್ಲಿ ಬರೆಯಿರಿ. ಅದರ ಮೇಲೆ ಅಂದರೆ ಹೊಸ್ತಿಲ ಮೇಲೆ ಒಂದು ಮದುವೆಯಾಗಿ ಬಂದ ಹೆಣ್ಣು ಮಗಳು ಒದೆಯುವ ಅಕ್ಕಿ ತುಂಬಿದ ಸೇರು ಇರಲಿ. ಒಂದು ತುದಿಯಿಂದ ಪ್ರಾರಂಭವಾಗುವ ಹೆಜ್ಜೆ ಗುರುತುಗಳು ಆ ಹೊಸ್ತಿಲನ್ನು ದಾಟಿ ಇನ್ನೊಂದು ತುದಿಗೆ ಸಾಗಲಿ. ಹೊಸ್ತಿಲ ಆಚೆಯಿರುವ ಹೆಜ್ಜೆಗಳು ವರ್ಣರಂಜಿತವಾಗಿರಲಿ. ಹೊಸ್ತಿಲ ಹತ್ತಿರಕ್ಕೆ ಬರುಬರುತ್ತಾ ಅವುಗಳ ಬಣ್ಣ ಕಡಿಮೆಯಾಗಲಿ. ಹೊಸ್ತಿಲು ದಾಟಿದ ಮೇಲೆ ಅದರ ಬಣ್ಣ ಸಂಪೂರ್ಣ ಮಾಸಿಹೋಗಲಿ .."
ಅಂದರೆ ಹೊಸ್ತಿಲಾಚೆಗಿನ ಹೆಜ್ಜೆಗಳು ಆಕೆಯ ಕಲಾಜೀವನದ ಹೆಜ್ಜೆಗಳು. ಹಾಗಾಗಿಯೇ ಬಣ್ಣದ ಲೋಕದ ಹೆಜ್ಜೆಗಳು, ಬಣ್ಣದ ಹೆಜ್ಜೆಗಳು. ಹೊಸ್ತಿಲು ಒಳ ಹೋಗುವುದು ಮದುವೆಯ ಸಂಕೇತ. ಆನಂತರ ಮಾಸಿದ ಬಣ್ಣದ ಹೆಜ್ಜೆ ಗುರುತುಗಳು...
ನಿಜಕ್ಕೂ ಇದಕ್ಕಿಂತ ಅದ್ಭುತವಾದ ಆ ಸಿನಿಮಾಕ್ಕೆ ಒಪ್ಪುವ ಪೋಸ್ಟರ್ ವಿನ್ಯಾಸ ಇಲ್ಲ ಎನ್ನಬಹುದು.
ಉಪೇಂದ್ರರ ಎ ಚಿತ್ರದ ಪೋಸ್ಟರ್ ಕೂಡ ಅದ್ಭುತಗಳ ಸಾಲಿಗೆ ಸೇರುತ್ತದೆ ಎನ್ನಬಹುದು.ಚಿತ್ರದಲ್ಲಿರುವ ನಾಯಕನ ತುಮುಲ, ನಿರೂಪಣೆಯಲ್ಲಿನ ಗೊಂದಲವನ್ನು ಪೋಸ್ಟರ್ ನಲ್ಲೆ ಸೂಕ್ಷ್ಮವಾಗಿ ವಿವರಿಸಿದ್ದು ಆ ಚಿತ್ರದ ಪೋಸ್ಟರ್ ವಿನ್ಯಾಸದ ವಿಶೇಷ ಎನ್ನಬಹುದು.
ಹಾಗೆಯೇ ಹಾಲಿವುಡ್ನ ಹ್ಯಾರಿಸನ್ ಫೋರ್ಡ್ ಅಭಿನಯದ ಫ್ಯೂಜಿಟಿವ್ ಚಿತ್ರದ ಪೋಸ್ಟರ್ ಗಮನಿಸಿ. ಚಿತ್ರದ ತುಂಬಾ ತಪ್ಪಿಸಿಕೊಂಡು ಓಡುವ ನಾಯಕ ಪೋಸ್ಟರ್ ನಲ್ಲೂ ಓಡುತ್ತಿರುತ್ತಾನೆ. ಚಿತ್ರದ ಕತೆಗೆ ತಕ್ಕಂತೆ ಆ ಪೋಸ್ಟರ್ ಇದೆ ಎನ್ನಬಹುದು. ಆದರೆ ಇತ್ತೀಚಿಗೆ ಬಂದ ಒಂದಷ್ಟು ಚಿತ್ರಗಳ ಪೋಸ್ಟರ್ ಗಳನ್ನೂ ಗಮನಿಸಿ. ನಾಯಕರು ಓಡುತ್ತಲೇ ಇರುತ್ತಾರೆ. ಮಹೇಶ್ ಬಾಬು ಅಭಿನಯದ ಪೋಕಿರಿ ಚಿತ್ರದಿಂದ ಪ್ರಾರಂಭವಾದ ಪೋಸ್ಟರ್ ಓಟ ಈಗಲೂ ನಡೆಯುತ್ತಲೇ ಇದೆ. ಇತ್ತೀಚಿಗೆ ಬಂದ ಕನ್ನಡವೂ ಸೇರಿದಂತೆ ಸುಮಾರಷ್ಟು  ಚಿತ್ರಗಳ ನಾಯಕರು ಓಡುತ್ತಲೇ ಇರುವುದನ್ನು ನಾವು ಕಾಣಬಹುದು. ಅದೆಲ್ಲಿಗೆ ಓಡುತ್ತಿದ್ದಾರೆ, ಅದ್ಯಾಕೆ ಓಡುತ್ತಿದ್ದಾರೆ. ಇವರೇ ಯಾರನ್ನಾದರೂ ಅಟ್ಟಿಸಿಕೊಂಡು ಹೋಗುತ್ತಿದ್ದಾರಾ..? ಅಥವಾ ಇವರನ್ನು ಯಾರಾದರೂ ಅಟ್ಟಿಸಿಕೊಂಡು ಹೋಗುತ್ತಿದ್ದಾರಾ..? ಅಥವಾ ತಮಾಷೆಗೆ ಹೇಳುವುದಾದರೆ ಯಾವುದಾದರೂ ಸ್ಪರ್ದೆಯಲ್ಲಿ ಭಾಗವಹಿಸುತ್ತಿದ್ದಾರಾ? ಎಂಬ ಪ್ರಶ್ನೆ ಎದುರಾಗದೆ ಇರದು.
ಯಾಕೆಂದರೆ ಆ ಪೋಸ್ಟರ್ ಚಿತ್ರಗಳನ್ನೆಲ್ಲಾ ನಾನು ನೋಡಿದ್ದೇನೆ. ಅವುಗಳಲ್ಲಿ ಅಂತಹ ಓಟ ಇಲ್ಲ. ನಾಯಕ ಯಾವುದೋ ಹೊಡೆದಾಟದ ಸಂದರ್ಭದಲ್ಲಿ ಓಡಿರಬಹುದೇನೋ? ಅದು ಬಿಟ್ಟರೆ ಚಿತ್ರದ ಕತೆಗೆ ಓಟಕ್ಕೆ ಸಂಬಂಧವಿಲ್ಲ. ಪೋಸ್ಟರ್ ನಲ್ಲಿ ಅಷ್ಟು ಫೋರ್ಸ್ ನಿಂದ ಓಡುವ ನಾಯಕನ ಸಿನಿಮಾ ಎಷ್ಟೋ ಸಾರಿ ಆಮೆವೇಗದಲ್ಲಿದ್ದು ಜನರೇ ಚಿತ್ರಮಂದಿರದಿಂದ ಹೊರಕ್ಕೆ ಓಟಕಿತ್ತ ಉದಾಹರಣೆ ಇಲ್ಲದಿಲ್ಲ.
ಮೊನ್ನೆ ಬಿಡುಗಡೆಯಾದ ಚಿತ್ರಗಳ ಪೋಸ್ಟರ್ ಗಮನಿಸಿ. ನಾಯಕಿ ಕೈಹಿಡಿದು ಕೊಂಡು ಓಡುತ್ತಿರುವ, ಗುಂಪು ಕಟ್ಟಿಕೊಂಡು ಓಡುತ್ತಿರುವ, ಕೈ ಯಲ್ಲಿ ಆಯುಧ ಹಿಡಿದು ಓಡುತ್ತಿರುವ, ಖುಷಿಯಿಂದ ಓಡುತ್ತಿರುವ, ಕೋಪದಿಂದ ಮುನ್ನುಗ್ಗಿ ಓಡುತ್ತಿರುವ, ತಪ್ಪಿಸಿಕೊಂಡು ಓಡುತ್ತಿರುವ ಹೀಗೆ ತರಹೇವಾರಿ ಓಟಗಾರರನ್ನು ಕಾಣಬಹುದು.ಆದರೆ ಸಿನಿಮಾದ ಕತೆಯಲ್ಲಿ ಆತರಹದ ಪಲಾಯನ, ತಪ್ಪಿಸಿಕೊಳ್ಳುವಿಕೆ ಇಲ್ಲ. ಸಾಮಾನ್ಯ ಪ್ರೇಮಕತೆಯ ಚಿತ್ರವಾದರೂ ನಾಯಕ ಓಡಿದರೆ ಏನು ಮಾಡೋಣ.
ಅಥವಾ ಬೇಗ ಬನ್ನಿ ಇಲ್ಲವಾದರೆ ನಾನೂ ಚಿತ್ರಮಂದಿರದಿಂದಲೇ ಓಡಿಬಿಡುತ್ತೇನೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತಿರಬಹುದಾ?

Tuesday, April 15, 2014

ಟೆಂಟ್ ಸಿನಿಮಾ..-

ಏನೇ ಆಗಲಿ ಅದೇನೇ ಹೋಂ ಥಿಯೇಟರ್ , 3 ಡಿ ಇದ್ದರೂ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಹೋಗಿ ನೋಡುವ ಸೊಬಗೆ ಅನನ್ಯ ಎನ್ನಬಹುದು. ನಾನು ಮೊದಲ ಬಾರಿಗೆ ಚಿತ್ರಮಂದಿರದಲ್ಲಿ ನೋಡಿದ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ನಿಖರವಾದ ಉತ್ತರ ನನಗೆ ದೊರಕಿಲ್ಲ. ಬಹುಶ ದೊರಕುವುದೂ ಇಲ್ಲವೇನೋ. ಆದರೆ ಚಿತ್ರ ನೋಡಿದ ಚಿತ್ರಮಂದಿರ ಮಾತ್ರ ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ನಾವೆಲ್ಲಾ  ಆ ಚಿತ್ರಮಂದಿರಕ್ಕೆ ಹೋಗಿದ್ದೆವು. ಭಯಾನಕ ಜನ ಜಾತ್ರೆ ಸೇರಿದ್ದ ಚಿತ್ರಮಂದಿರವದು. ಟಿಕೆಟ್ ತೆಗೆದುಕೊಳ್ಳಲು ನೂಕು ನುಗ್ಗಲು ..ಒಳ ನುಗ್ಗಲು ನೂಕು ನುಗ್ಗಲು..ಅಬ್ಬಬ್ಬಾ ಅದರ ನೆನಪೇ ರೋಮಾಂಚನ ಎನ್ನಬಹುದು.
ಆ ಚಿತ್ರಮಂದಿರದಲ್ಲಿ ಕುರ್ಚಿಗೆ ನಂಬರಿನ ವ್ಯವಸ್ಥೆ ಇರಲಿಲ್ಲ.ಹಾಗಾಗಿ ಇಡೀ ಕುಟುಂಬದವರು ಒಟ್ಟಿಗೆ ಸಿನಿಮಾ ನೋಡಲು ಹೋದರೆ ಒಂದೇ ಸಾಲಿನಲ್ಲಿ ಕುಳಿತುಕೊಳ್ಳಲು ಹರ ಸಾಹಸ ಪಡಬೇಕಿತ್ತು. ಯಾರಾದರೂ ಒಬ್ಬರು ಮೊದಲೇ ಸಾಲಿನಲ್ಲಿ ನಿಂತು ಟಿಕೇಟು ತೆಗೆದುಕೊಂಡು ಆ ಜನಜಾತ್ರೆಯಲ್ಲಿ ಹೋರಾಡಿ ಮುನ್ನುಗ್ಗಿ ಒಳನುಗ್ಗಿ ಸೀಟು ಕಾಯ್ದಿರಿಸಬೇಕಾಗಿತ್ತು. ಅದಕ್ಕಾಗಿ ಎಷ್ಟೋ ಸಾರಿ ಚಿಕ್ಕಪುಟ್ಟ ಜಗಳಗಳೇ ಪ್ರಾರಂಭವಾದರೂ ಬೆಳ್ಳಿ ಪರದೆಯ ಮೇಲೆ ಚಿತ್ರ ಮೂಡುತ್ತಿದ್ದಂತೆ ಆ ಜಗಳ ಅಷ್ಟಕ್ಕೇ ನಿಲ್ಲುತ್ತಿತ್ತು.
ನನಗೆ ನಮ್ಮ ಊರಿನ ಹತ್ತಿರದಲ್ಲಿದ್ದ ಟೆಂಟ್ ಇನ್ನೂ ಚೆನ್ನಾಗಿ ನೆನಪಿದೆ. ಅದೊಂತರ ವಿಚಿತ್ರ ಟೆಂಟ್. ಸುಮ್ಮನೆ ಆಳುದ್ದದ ಗೋಡೆ ಕಟ್ಟಿ ಅದರ ಮೇಲೆ ಶೀಟು ಹೊದಿಸಿ ಮುಂದೆ ಪರದೆ ಬಿಟ್ಟಿದ್ದರು.ಆ ಟೆಂಟಿನ ಸುತ್ತಲೂ ಬೇಲಿ ಹಾಕಿದ್ದರೆ ವಿನಃ ಕಂಪೌಂಡ್ ಕಟ್ಟಿರಲಿಲ್ಲ. ಹಾಗಾಗಿ ಅದೆಷ್ಟೋ ಪಿಳ್ಳೆ ಹುಡುಗರು ಸಿನಿಮಾ ಪ್ರಾರಂಭವಾದ ಅರ್ಧಗಂಟೆಯ ನಂತರ ಬೇಲಿ ಹಾರಿ ಹಾಗೆಯೇ ಒಳ ನುಸುಳುವ ಪ್ರಯತ್ನ ಪಟ್ಟು ಯಶಸ್ವಿಯಾಗುತ್ತಿದ್ದರು. ಅದರಲ್ಲೂ ನನ್ನದೇ ಗೆಳೆಯ ಉಮೇಶನ ಮನೆ ಅದರ ಪಕ್ಕದಲ್ಲೇ ಇದ್ದದ್ದರಿಂದ ಅವನು ಸಂಜೆ ನಾಲ್ಕು ಗಂಟೆಯ ಪ್ರದರ್ಶನಗಳನ್ನು ಬಿಡದೆ ನೋಡುತ್ತಿದ್ದ. ನಮಗೆಲ್ಲಾ ಹೊಟ್ಟೆಕಿಚ್ಚಾಗುತ್ತಿದ್ದದ್ದು ಅದೇ ಕಾರಣದಿಂದಾಗಿ. ನಾವೆಲ್ಲಾ ಒಂದು ಸಿನಿಮಾಕ್ಕೆ ಹೋಗಬೇಕಾದರೆ ಮನೆಯವರನ್ನು ಕಾಡಿ ಬೇಡಿ ಪೀಡಿಸಿ ಹೋಗಬೇಕಾಗಿತ್ತು. ಅದರಲ್ಲೋ ಆ ಚಿತ್ರ ಎಂತಹದ್ದು ಮಕ್ಕಳು ನೋಡುವ ಹಾಗಿದೆಯಾ ಮುಂತಾದ ವಿಚಾರಣೆಗಳನ್ನು ಮನೆಯವರು ಅಕ್ಕಪಕ್ಕದವರಿಂದ ತಿಳಿದು ಆನಂತರವೇ ಹೋಗಲು ಅನುಮತಿ ಮತ್ತು ಹಣ ಕೊಡುತ್ತಿದ್ದರು. ಆದರೆ ಉಮೇಶನಿಗೆ ಅದ್ಯಾವ ಕಟ್ಟಳೆ ಇರಲಿಲ್ಲ. ಹಾಗಾಗಿ ಆ ಟೆಂಟ್ಗೆ ಬಂದ ಎಲ್ಲಾ ಸಿನಿಮಾಗಳನ್ನ ಬೇಲಿ ಹಾರಿ ನೋಡಿ ಬಿಡುತ್ತಿದ್ದ. ಆದರೆ ಅವನ ಸಮಸ್ಯೆಯೂ ಒಂದಿತ್ತು. ಅದೆಂದರೆ ಅವನಿಗೆ ಮೊದಲಿನ ಅರ್ಧ ಗಂಟೆ ಯಾವತ್ತೂ ಸಿಗುತಿರಲಿಲ್ಲ. ನಮ್ಮ ಹತ್ತಿರ ಬಂದು ಸಿನಿಮಾ ಕತೆ ಹೇಳಲು ಪ್ರಾರಂಭಿಸುತ್ತಿದ್ದ ಉಮೇಶನಿಗೆ ಮೊದಲಿಗೆ ಏನು ಹೇಳು ಎಂದರೆ ಮುಖಾ ಮುಖಾ ನೋಡುತ್ತಿದ್ದ.
ಆ ಟೆಂಟ್ ನಲ್ಲಿ ಎರಡು ತರಗತಿಗಳಿದ್ದವು. ಒಂದು ನೆಲ ಮತ್ತು ಎರಡನೆಯದು ಕುರ್ಚಿ. ನೆಲದಲ್ಲಿ ಪುಣ್ಯಾತ್ಮರು ಸಿಮೆಂಟ್ ಕೂಡ ಹಾಕಿಸಿರಲಿಲ್ಲ. ಹಾಗಾಗಿ ಅಲ್ಲೆಲ್ಲಾ ಮರಳು ಮಣ್ಣು ಇರುತ್ತಿತ್ತು. ನಾವೆಲ್ಲಾ ಚಿತ್ರ ಮಂದಿರಕ್ಕೆ ನೆಲಕ್ಕೆ ಹೋದರೆ ಬಾಗಿಲ ಹತ್ತಿರವೇ ನಿಂತಿದ್ದು ಬಾಗಿಲು ಹಾಕಿದ ತಕ್ಷಣ ಬಾಗಿಲ ಕೆಳಗಿನ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುತ್ತಿದ್ದೆವು. ಯಾಕೆಂದರೆ ನೆಲದ ಮೇಲೆ ಕುಳಿತವರು ಅಲ್ಲೇ ಉಗಿದು ಮಣ್ಣು ಮುಚ್ಚುತ್ತಿದ್ದರು. ಚಿಕ್ಕ ಮಕ್ಕಳು ಸೂಸು ಮಾಡುತ್ತಿದ್ದವು. ಅದೆಲ್ಲಾ ಆನಂತರ ಒಣಗಿ ವಿಚಿತ್ರವಾಗಿ ಗಟ್ಟಿಯಾಗುತ್ತಿದ್ದವು. ಅದನ್ನು ಸರಿ ದೂಗಿಸಲು ಚಿತ್ರಮಂದಿರದವರು ನಾನಾ ಅವತಾರ ಮಾಡಿದ್ದರು. ನೆಲಕ್ಕೆ ಸಗಣಿಯಿಂದ ಸಾರಿಸಿದ್ದರು. ಆದರೆ ಸಗಣಿ ವಾಸನೆ ಯಾವುದೋ ಕೊಟ್ಟಿಗೆಯಲ್ಲಿ ಕುಳಿತ ಭಾವನೆ ಮೂಡಿಸಿ ಚಿತ್ರ ನೋಡುವ ಉತ್ಸಾಹವನ್ನು ಇಂಗಿಸಿಬಿಡುತ್ತಿತ್ತು. ಆದರಿಂದ ಚಿತ್ರಮಂದಿರದವರಿಗೆ ಲಾಭವೂ ಇತ್ತೆನ್ನಬಹುದು. ಈ ಅವ್ಯವಸ್ಥೆಯಿಂದಾಗಿ ಹುಡುಗರು, ಕುಡುಕರು ಮಾತ್ರ ಮುಂದೆ ನೆಲಕ್ಕೆ ಹೋಗುತ್ತಿದ್ದರು. ಉಳಿದವರು ಅದಕ್ಕಿಂತ ಸ್ವಲ್ಪ ಹೆಚ್ಚಿನ ಬೆಲೆಯ ಕುರ್ಚಿಗೆ ಹೋಗುತ್ತಿದ್ದರು.
ಟೆಂಟ್ ವಿಷಯಕ್ಕೆ ಬಂದರೆ ನನಗೆ ನೆನಪಾಗುವುದು ನಮ್ಮ ಪಕ್ಕದ ನಗರದ ನಾಗರತ್ನ ಟೆಂಟ್. ಅಲ್ಲಿ ಆಂಗ್ಲ ಬಿಟ್ಟರೆ ವಯಸ್ಕರ ಚಿತ್ರಗಳನ್ನೇ ಪ್ರದರ್ಶನ ಮಾಡಿ ಮಾಡಿ ಅದು ಅದಕ್ಕೆ ಹೆಸರುವಾಸಿಯಾಗಿಬಿಟ್ಟಿತ್ತು. ನಮ್ಮೂರಿನಲ್ಲಿ ನಗರಕ್ಕೆ ಹೋಗಿ ಬಂದವನು ಆ ನಾಗರತ್ನ ಟೆಂಟ್ ಗೆ ಹೋಗಿದ್ದ ಎಂದರೆ ಸಾಕು ಅವನು ಯಾವುದೋ ಅಸಹ್ಯಕರವಾದ ಕೆಲಸ ಮಾಡಿ ಬಂದ ಎನ್ನುವ ರೀತಿಯಲ್ಲಿ ನಮ್ಮೂರಿನ ಜನ ಅವನನ್ನು ಮಾತಾಡಿಸುತ್ತಿದ್ದರು. ನಾಗರತ್ನ ಟೆಂಟ್ ಚಿತ್ರದ ಪೋಸ್ಟರ್ ಕೂಡ ಹಾಗೆಯೇ ಇರುತ್ತಿದ್ದವು. ಅದ್ಯಾವುದೇ ಭಾಷೆಯಾದರೂ ವಯಸ್ಕರ ಚಿತ್ರವನ್ನೇ ಹುಡುಕಿ ಹುಡುಕಿ ತರುತ್ತಿದ್ದ ಅದರ ಮಾಲೀಕನಿಗೆ ದುಡ್ಡು ಹೇರಳವಾಗಿಯೇ ಸಂಪಾದನೆಯಾಗುತ್ತಿತ್ತು. ಆದರೆ ಆ ಟೆಂಟ್ ಗೆ ಹೆಂಗಸರ್ಯಾರೂ ಹೋಗುತ್ತಿರಲಿಲ್ಲ.
ಅಲ್ಲಿನ ವ್ಯವಸ್ಥೆಯೇ ಬೇರೆಯಿತ್ತು. ಚಿತ್ರಮಂದಿರದ ಸುತ್ತ ಮುತ್ತಾ ಸಿನಿಮಾ ಪ್ರಾರಂಭವಾಗುವವರೆಗೂ ಯಾರೂ ಇರುತ್ತಿರಲಿಲ್ಲ. ಅದಕ್ಕೆ ಕಾರಣ ಭಯ. ಯಾರಾದರೂ ನೋಡಿ ಬಿಟ್ಟರೆ..! ಆದರೆ ಚಿತ್ರ ಪ್ರಾರಂಭವಾಗಿ ಹತ್ತೇ ನಿಮಿಷಕ್ಕೆ ಇಡೀ ಚಿತ್ರಮಂದಿರ ತುಂಬಿ ಹೋಗುತ್ತಿತ್ತು.
ಆ ಚಿತ್ರಮಂದಿರದಲ್ಲಿ ಇನ್ನೂ ಒಂದು ವಿಶೇಷವಿತ್ತು. ಪೋಸ್ಟರ್ ನೋಡಿಕೊಂಡು ಸಿನಿಮಾಕ್ಕೆ ಹೋದರೆ ಪಿಗ್ಗಿಬೀಳುವ ಸಂಭವ ಇದ್ದೇ ಇತ್ತು. ಯಾಕೆಂದರೆ ಚಿತ್ರಮಂದಿರದ ಹೊರಗಿನ ಪೋಸ್ಟರ್ goo ಒಳಗಿನ ಚಿತ್ರಕ್ಕೂ ಸಂಬಂಧವೇ ಇರುತ್ತಿರಲಿಲ್ಲ. ಜನ ಅದನ್ನು ಕೇಳುತ್ತಲೂ ಇರಲಿಲ್ಲ. ಹಾಗೆಯೇ ಚಿತ್ರದಲ್ಲಿ ತೋರಿಸುತ್ತಿದ್ದ ವಯಸ್ಕರ ದೃಶ್ಯಗಳೂ ಆ ಚಿತ್ರದ್ದು ಆಗಿರಲಿಲ್ಲ.  ಆ ಚಿತ್ರಮಂದಿರದ ಪುಣ್ಯಾತ್ಮ ಯಾವ ಯಾವದೋ ವಯಸ್ಕರ ಚಿತ್ರಗಳ ತುಣುಕುಗಳನ್ನು ಒಟ್ಟು ಮಾಡಿ ಇಪ್ಪತ್ತು ನಿಮಿಶದಷ್ಟನ್ನು ರೀಲು ಮಾಡುತ್ತಿದ್ದ. ಅವನೇ ಮಾಡುತ್ತಿದ್ದನೋ ಅಥವಾ ಹಾಗೆಯೇ ಬರುತ್ತಿತೋ ಯಾರಿಗೆ ಗೊತ್ತು. ಸಿನಿಮಾ ಪ್ರಾರಂಭವಾಗಿ ಸರಿಯಾಗಿ ಅರ್ಧಗಂಟೆಗೆ ಹತ್ತು ನಿಮಷಗಳ ಅದನ್ನು ಪ್ರದರ್ಶಿಸುತ್ತಿದ್ದ. ಅನಂತರ ಮತ್ತೆ ಮಧ್ಯಂತರದ ನಂತರ ಅರ್ಧಗಂಟೆಯ ನಂತರ ಮತ್ತೆ ಹತ್ತು ನಿಮಿಷ ತೋರಿಸುತ್ತಿದ್ದ.
ಇದನ್ನು ಅರಿತಿದ್ದ ದಿನಂಪ್ರತಿ ವೀಕ್ಷಕರು ಚಿತ್ರ ಪ್ರಾರಂಭವಾದ ಅರ್ಧಗಂಟೆಹೊತ್ತಿಗೆ ಒಳಹೊಕ್ಕು ಅದಷ್ಟನ್ನು ನೋಡಿ ಹೊರಬಂದು ಬೀಡಿ ಹಚ್ಚಿ ಮತ್ತೆ ಮಧ್ಯಂತರದ ನಂತರ ಅರ್ಧಗಂಟೆ ನಂತರ ಒಳಹೊಕ್ಕು ಅದನ್ನು ನೋಡಿ ಆಮೇಲೆ ಜಾಗ ಖಾಲಿ ಮಾಡುತ್ತಿದ್ದರು.ಚಿತ್ರ ಮುಗಿಯುವವರೆಗೆ ಯಾರೂ ಇರುತ್ತಿರಲಿಲ್ಲ. ಅದರಲ್ಲೂ ರಾತ್ರಿಯ ಆಟಗಳನ್ನು ಆ ತುಣುಕು ದೃಶ್ಯ ಮುಗಿದ ಮೇಲೆ ಕೊನೆ ಮಾಡಿ ಲೈಟ್ ಆಫ್ ಮಾಡಿಯೇ ಬಿಡುತ್ತಿದ್ದರು.
ಆದರೆ ಇದೇ ವಿಷಯಗಳು ಕೆಲವೊಮ್ಮೆ ಅತಿರೇಕಕ್ಕೂ ಹೋಗುತ್ತಿತ್ತು. ತೋರಿಸಿದ ತುಣುಕುಗಳಲ್ಲಿ ಬಿಸಿ ಬಿಸಿ ದೃಶ್ಯಗಳು ಇಲ್ಲದಿದ್ದಾಗ ಅಥವಾ ಕಡಿಮೆಯಿದ್ದಾಗ ಅಥವಾ ರಾತ್ರಿ ಕುಡಿದ ಮತ್ತು ಜಾಸ್ತಿಯಾಗಿ ಜೋಶ್ ಹೆಚ್ಚಾದಾಗ ಸುಖಾಸುಮ್ಮನೆ ಜಗಳಗಳು ನಡೆಯುತ್ತಿದ್ದವು. ಮೊದಲಿಗೆ ಆ ಸಿಟ್ಟಿಗೆ ಬಲಿಯಾಗುತ್ತಿದ್ದದ್ದು ಕುರ್ಚಿಗಳು. ಏನೋ ಹಣ ಕೊಟ್ಟಿಲ್ವಾ ತೋರ್ಸೋಕ್ ಏನೋ ಎಂದದ್ದೆ ಕುರ್ಚಿಗಳಿಗೆ ದಬದಬನೆ ಒದೆಯುತ್ತಿದ್ದರು.
ನಮ್ಮೂರಿನ ಟೆಂಟಿನಲ್ಲಿ ಒಂದು ತೊಂದರೆ ಇತ್ತು. ಅದು ವಿದ್ಯುಚ್ಚಕ್ತಿಯದ್ದು. ಎಲ್ಲಾ ಆಗಿ ಸರಿಹೋಯ್ತು ಎನ್ನುವಷ್ಟರಲ್ಲಿ ಕರೆಂಟ್ ಕೈ ಕೊಡುತ್ತಿತ್ತು. ಯಾವುದೋ ದೃಶ್ಯವನ್ನು ಅಷ್ಟೇ ತನ್ಮಯರಾಗಿ ನೋಡುತ್ತಿದ್ದ ಅಭಿಮಾನಿಗಳಿಗೆ ಸಿಟ್ಟು ಬಂದದ್ದೆ ಅಲ್ಲೇ ಚಿತ್ರಮಂದಿರದಲ್ಲಿ ಕುಣಿದು ಕುಪ್ಪಳಿಸಿ ಬಿಡುತ್ತಿದ್ದರು. ಇಡೀ ಚಿತ್ರಮಂದಿರದ ವ್ಯಕ್ತಿಗಳನ್ನು ವಾಚಾಮಗೋಚರವಾಗಿ ಬಯ್ಯುತ್ತಿದ್ದರಷ್ಟೇ ಅಲ್ಲ, ಚೇರ್ ಗಳನ್ನೂ ಮುರಿಯುವ ಸಾಹಸಕ್ಕೂ ಕೈ ಹಾಕುತ್ತಿದ್ದರು. ತೀರಾ ಮುಂದೆ ಕುಳಿತವರು ಪರದೆಯ ಹತ್ತಿರಕ್ಕೆ ಹೋದದ್ದೇ ಪರದೆಯನ್ನು ಹಿಡಿದು ಜಗ್ಗಿ ಜಾಲಾಡಿ ಹರಿಯುವ ಪ್ರಯತ್ನ ಮಾಡುತ್ತಿದ್ದರು. ಅಷ್ಟರಲ್ಲಿ ಹೇಗೋ ಜನರೇಟರ್ ಸ್ಟಾರ್ಟ್ ಮಾಡಿ ಮತ್ತೆ ಸಿನಿಮಾವನ್ನು ಮುಂದುವರೆಸುತ್ತಿದ್ದರಿಂದ ಅದು ಅಷ್ಟಕ್ಕೇ ನಿಲ್ಲುತ್ತಿತ್ತು. ಜನರೇಟರ್ ಗೆ ಡೀಸೆಲ್ ಅನ್ನು ಪಕ್ಕದ ಊರಿನಿಂದ ತರಬೇಕಾದ್ದರಿಂದ ಚಿತ್ರಮಂದಿರದವರು ಮೊದಲೇ ಕ್ಯಾನ್ ಗಟ್ಟಲೆ ಶೇಖರಿಸಿ ಇಟ್ಟುಕೊಳ್ಳುತ್ತಿದ್ದರೆನೋ ನಿಜ. ಆದರೆ ಕೆಲವೊಮ್ಮೆ ಅದು ಹೇಗೇಗೋ ಕಣ್ತಪ್ಪಿನಿಂದ ಖಾಲಿಯಾಗಿ ಕರೆಂಟ್ ಬರುವವರೆಗೆ ಕಾಯಬೇಕಾದ ಪರಿಸ್ಥಿತಿಯಲ್ಲಿ ಹಣ ವಾಪಸ್ಸು ಕೊಡುತ್ತೇನೆ ಎಂದರೂ ನಾವು ದುಡ್ಡು ಕಂಡಿಲ್ವಾ..ನೀನೋಬ್ಬನೇನಾ ಕಾಸು ಕೊಂಡಿರೋನು..ಪಿಚ್ಚರ್ ನೋಡೋಕ್ ಬಂದಿದ್ದೀವಿ ಪಿಚ್ಚರ್ ಹಾಕಯ್ಯ..ಅಷ್ಟೇ ಎಂದು ಜಬರ್ದಸ್ತ್ ಮಾಡುತ್ತಿದ್ದರು.
ಈ ಎಲ್ಲಾ ಪ್ರೇಕ್ಷಕರ ಹುಚ್ಚಾಟಗಳಿಂದ ಚಿತ್ರಮಂದಿರದ ಪರದೆ ಹರಿದು ನೆರಿಗೆಗಟ್ಟಿ ಚಿತ್ರವೇ ಒಂದು ರೀತಿಯಾದರೆ ತೆರೆಯ ಮೇಲೆ ವಿಚಿತ್ರವಾಗಿ ಮೂಡುತ್ತಿತ್ತು. ಇದನ್ನೆಲ್ಲಾ ನೋಡಿ ಅನುಭವಿಸಿ ಸಾಕಾದ ಚಿತ್ರಮಂದಿರದ ಮಾಲೀಕರು ಅದಕ್ಕೊಂದು ಸಖತ್ ಉಪಾಯ ಕಂಡುಹಿಡಿದಿದ್ದರು. ಮುಂದಿನ ಪರದೆಯನ್ನು ಸಂಪೂರ್ಣವಾಗಿ ತೆಗೆದುಹಾಕಿಸಿ, ಅದನ್ನು ಗಾರೆಯಿಂದ ಗೋಡೆ ಮಾಡಿಸಿ ಬಿಳಿಯ ಬಣ್ಣ ಹೊಡೆಸಿದ್ದರು. ಈಗ ಏನೇ ಆದರೂ ಪರದೆಗೆ ಚಿಕ್ಕಪುಟ್ಟ ಗೀರುಗಳಾಗುತ್ತಿದ್ದವೆ ವಿನಾ ಬೇರೆ ದೊಡ್ಡ ತರಹದ ನಷ್ಟವಾಗುತಿರಲಿಲ್ಲ.
ನನ್ನ ಗೆಳೆಯನ ಊರಿನಲ್ಲಿ ಒಂದು ಟೆಂಟ್ ಇತ್ತು. ಅದೊಮ್ಮೆ ನಾನು ಅವರ ಊರಿಗೆ ಹೋದಾಗ ರಾತ್ರಿಯ ಆಟಕ್ಕೆ ಹೋಗೋಣ ಎಂದು ಊಟ ಮಾಡಿಕೊಂಡು ಹೊರಡಲು ಸಿದ್ಧರಾದೆವು. ಆದರೆ ಗೆಳೆಯ ಯಾವುದೇ ಉತ್ಸಾಹ ತೋರಿಸದೆ ಆರಾಮವಾಗಿ ಟೆಂಟ್ ಹತ್ತಿರ ಹೋಗೋಣ ಇದ್ರೆ ನೋಡೋಣ ಇಲ್ಲಾಂದ್ರೆ ಆರಾಮವಾಗಿ ವಾಪಸ್ ಬಂದು ಮಲಗಿಕೊಳ್ಳೋಣ ಎಂದದ್ದನ್ನು ಕೇಳಿ ನನಗೆ ಆಶ್ಚರ್ಯವಾಗಿತ್ತು. ಇದು ಚಿತ್ರ ಮಂದಿರದಲ್ಲಿ ಚಿತ್ರ ಇಲ್ಲ ಎಂದರೆ ..? ಆದರೆ ಚಿತ್ರಮಂದಿರದತ್ತ ಹೋದಾಗಲೇ ನನಗೆ ಗೊತ್ತಾದದ್ದು ಕೊನೆಯ ರಾತ್ರಿಯ ಆಟ ಒಂಭತ್ತು ಘಂಟೆಗೆ ಶುರುವಾಗಿ ಹನ್ನೆರಡಕ್ಕೆ ಮುಗಿಯುತ್ತಿದ್ದರಿಂದ ಹೊಸ ಸಾಂಸಾರಿಕ ಚಿತ್ರಗಳಾದರೆ ಮಾತ್ರ ರಾತ್ರಿ ಆಟ ಇರುತ್ತಿತ್ತು. ಜನ ಇಲ್ಲದಿದ್ದರೆ ಆಟವನ್ನು ರದ್ದುಗೊಳಿಸಿಬಿಡುತ್ತಿದ್ದರು. ನಾವೆಲ್ಲಾ ಊಟ ಮುಗಿಸಿ ಚಿತ್ರಮಂದಿರಕ್ಕೆ ಹೊರಟೆವು. ನಮ್ಮ ಅದೃಷ್ಟಕ್ಕೆ ಚಿತ್ರವೂ ಜನರೂ ಇದ್ದರು. ಆದರೆ ತಮಿಳು ಚಿತ್ರವಾಗಿತ್ತು. ಸಮಯ ಕಳೆಯಲು ಯಾವುದಾದರೇನೂ ಎಂದು ಒಳಗೆ ಹೋಗಿ ಕುಳಿತುಕೊಂಡೆವು. ಚಿತ್ರ ಪ್ರಾರಂಭವಾಯಿತು. ಅರ್ಧಗಂಟೆಯಾದರೂ ಚಿತ್ರದ ಕತೆ ಅರ್ಥವಾಗಿರಲಿಲ್ಲ. ಒಂದು ದೃಶ್ಯಕ್ಕೂ ಇನ್ನೊಂದು ದೃಶ್ಯಕ್ಕೂ ಸಂಬಂಧವೇ ಇರಲಿಲ್ಲ. ಉದಾಹರಣೆಗೆ ಒಂದು ದೃಶ್ಯದಲ್ಲಿ ನಾಯಕ ನಾಯಕಿ ಪ್ರೀತಿಸಿ ಹಾದಿ ಕುಣಿದಿದ್ದರೆ ಮುಂದಿನ ದೃಶ್ಯದಲ್ಲಿ ಇಬ್ಬರೂ ಇನ್ನೂ ಪರಿಚಯವಾಗದೇ ಆಗತಾನೆ ಪರಿಚಯವಾಗಿ ಜಗಳವಾಡುತ್ತಿದ್ದರು. ಇದ್ಯಾರು ಉಪೇಂದ್ರ ಶೈಲಿಯಲ್ಲಿ ತಿರುವು ಮುರುವು ಚಿತ್ರಕತೆ ಮಾಡಿ ಸಿನಿಮ ಮಾಡಲು ಹೋಗಿ ತಲೆಬುಡವಿಲ್ಲದ ಚಿತ್ರ ತೆಗೆದಿದ್ದಾನೆ ಎಂದು ಸುಮಾರು ಜನರೊಟ್ಟಿಗೆ ನಾವು ಬೈದುಕೊಂಡು ಬಂದಿದ್ದೆವು. ಬಂದನಂತರ ಇಡೀ ಚಿತ್ರದ ಅಂಶಗಳನ್ನು ಒಟ್ಟಾಗಿಸಿ ಕತೆಯನ್ನು ಗ್ರಹಿಸಲು ಪ್ರಯಾಸ ಪಟ್ಟಿದ್ದೆ. ಆನಂತರ ತಿಳಿದುಬಂದ ವಿಷಯವೆಂದರೆ ಆ ಟೆಂಟಿನ ಪ್ರೊಜೆಕ್ಟರ್ ಆಪರೇಟರ್ ಸಿನಿಮಾದ ರೀಲುಗಳನ್ನು ಸರಿಯಾದ ಕ್ರಮದಲ್ಲಿ ಹಾಕದೆ ಕುಡಿತದ ಗಮ್ಮತ್ತಿನಲ್ಲಿ ಇಷ್ಟಬಂದ ಹಾಗೆ ಹಾಕಿದ್ದ ಎಂಬುದು.
ಹೀಗೊಮ್ಮೆ  ನನ್ನ ನೆಂಟರ ಮನೆಗೆ ಹೋಗಿದ್ದೆ. ಆಗ ಅಲ್ಲಿ ಸಿಕ್ಕ ನನ್ನ ಗೆಳೆಯನೊಬ್ಬ ಈವತ್ತು ಇಂಗ್ಲಿಷ್ ಸಿನೆಮಾಗೆ ಹೋಗೋಣ ಎಂದ. ನಾನು ಯಾವುದು ಎಂದದ್ದಕ್ಕೆ ಗೊತ್ತಿಲ್ಲ, ಸಂಜೆ ಗೊತ್ತಾಗುತ್ತದೆ ಎಂದ. ಇದೆಂತಹ ಟೆಂಟ್ ಎನಿಸದಿರಲಿಲ್ಲ. ಸರಿ ಎಂದದ್ದೆ ರಾತ್ರಿ ಅಲ್ಲಿಗೆ ಹೋದರೆ ಅದೊಂದು ಮನೆ . ಮನೆಯ ಕಂಪೌಂಡ್ ಮೇಲೆ ಸೀಮೆ ಸುಣ್ಣವನ್ನು ನೀರಿಗೆ ಅದ್ದಿ ಡಾಳಾಗಿ ಚಿತ್ರದ ಹೆಸರು ಬರೆದಿದ್ದರೇ ಹೊರತು ಯಾವುದೇ ಪೋಸ್ಟರ್ ಅಂಟಿಸಿರಲಿಲ್ಲ. ಇರಲಿ ಎಂದದ್ದೇ ಬಾಗಿಲು ಹತ್ತಿರ ಹೋದರೆ ಅಲ್ಲಿ ನಿಂತಿದ್ದ ದ್ವಾರಪಾಲಕ ನಮ್ಮಿಂದ ಒಂದಷ್ಟು ಹಣ ತೆಗೆದುಕೊಂಡು ಒಳಬಿಟ್ಟ. ಮನೆಯ ಒಳಗೆ ಶಾಲೆಯ ಡೆಸ್ಕ್ ತರಹದ ಮರದ ಉದ್ದನೆಯ ಕುರ್ಚಿಗಳನ್ನು ಜೋಡಿಸಿದ್ದರು ಎಲ್ಲಾ ಸೇರಿ ಒಂದತ್ತು ಸಾಲಿದ್ದಿರಬಹುದು. ಎದುರಿಗೆ ಒಂದು ದೊಡ್ಡ ಟಿವಿ ಇತ್ತು. ಎರಡೂ ಕಡೆಗೆ ಎರಡು ಟೇಬಲ್ ಫ್ಯಾನ್ ಇದ್ದವು. ಅಲ್ಲಿದ್ದ ವಿಸಿ ಆರ್ ಒಳಗೆ ಯಾವುದೋ ಆಂಗ್ಲ ಚಿತ್ರದ ಕ್ಯಾಸೆಟ್ ತುರುಕಿದರು. ಆ ಹಬೆಯ ತರಹದ ಬಿಸಿಯಲ್ಲಿ ಬಿಸಿಗಾಳಿಯ ಜೊತೆ ಆ ಗುಹೆಯಲ್ಲಿ ಯಾತನಾಮಯವಾಗಿ ಅದ್ಯಾವ ಚಿತ್ರವನ್ನೂ ನೋಡಿದೆನೋ ಸರಿಯಾಗಿ ನೆನಪಿಲ್ಲವಾದರೂ ಆ ಯಮಯಾತನೆ ಇಂದಿಗೂ ನೆನಪಿದೆ.
ಈಗೀಗ ಆ ಎಲ್ಲಾ ಪರಿಕಲ್ಪನೆ ಬದಲಾಗಿರಬಹುದಾ..? ಯಾಕೆಂದರೆ ಈವತ್ತು ಮನೆಯಲ್ಲಿಯೇ ದಿನಪೂರ ಎಲ್ಲಾ ಭಾಷೆಯ ಚಿತ್ರಗಳು ಪ್ರಸಾರವಾಗುತ್ತವೆ. ಅಗ್ಗದ ಮೊಬೈಲಿನಲ್ಲೂ ಸಿನಿಮಾ ನೋಡುವ ವ್ಯವಸ್ಥೆ ಇದೆ. ಹಾಗಾಗಿಯೇ ನಾನು ಹೋದೆಡೆಯಲ್ಲ ಸ್ವಲ್ಪ ಅಚ್ಚುಕಟ್ಟಾದ ಚಿತ್ರಮಂದಿರಗಳೇ ಇವೆ ಎನಿಸುತ್ತದೆ.


Thursday, April 10, 2014

ಮೋಹನ ಸ್ವಾಮಿಯ ಕತೆಗಳು:

ಪುಸ್ತಕಗಳನ್ನು ಓದಿ ತುಂಬಾ ದಿನಗಳೇ ಆಗಿದ್ದವು. ಹಾಗಾಗಿಯೂ ವಸುಧೇಂದ್ರರ ಹೊಸ ಪುಸ್ತಕ ಬಂದಿದೆ ಎಂದು ಗೊತ್ತಾದಾಗ ಅದನ್ನು ಖರೀದಿ ಮಾಡಿ ತಂದೆನಾದರೂ ಓದಲು ಸಮಯ ಸಿಕ್ಕಿರಲಿಲ್ಲ. ಮೊನ್ನೆ ಓದಿದ್ದಾಯಿತು.
ಮೋಹನ ಸ್ವಾಮಿಯಲ್ಲಿ ಸುಮಾರು ಕತೆಗಳಿವೆ. ಎಂದಿನಂತೆ ವಸುಧೇಂದ್ರರ ಸರಳ ಶೈಲಿ ಇನ್ನಷ್ಟು ಸರಳವಾಗಿದ್ದು ಕತೆಯ ಭಿನ್ನತೆ ಗಮನ ಸೆಳೆಯುತ್ತದೆ ಮತ್ತು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ ಎಂಬ ಸಾಲನ್ನು ವಸುಧೇಂದ್ರರ ಯಾವ ಪುಸ್ತಕಕ್ಕಾದರೂ ಹೇಳಬಹುದು/ ಬರೆಯಬಹುದು ಎನ್ನುವುದೇನೂ ಅತಿಶಯೋಕ್ತಿಯಲ್ಲ.ಯಾಕೆಂದರೆ ಅವರ ಭಾಷೆ ಸರಳ ಜೊತೆಗೆ ಅವರ ಕಥಾವಸ್ತು ಕೂಡ ಸರಳವೇ, ನಮ್ಮ ನಡುವಿನವೇ. ಆದರೆ ಹಳೆಯದಲ್ಲ. ಇದು ಗೊತ್ತಿತ್ತು ಎನಿಸಿದರೂ ಇದೆಲ್ಲೂ ಬಂದಿರಲಿಲ್ಲವಲ್ಲ ಎನಿಸುವಂತಹದ್ದು.
ಕಥಾಸಂಕಲನದಲ್ಲಿ ಪೂರ್ಣಾಹುತಿ ಎನ್ನುವ ಕತೆಯೊಂದಿದೆ. ಮೊಬೈಲ್ ಬಳಕೆ ಪರಿಣಾಮ, ದುರುಪಯೋಗ, ದುಷ್ಪರಿಣಾಮಗಳನ್ನು ಮನ ಮುಟ್ಟುವಂತೆ ವಿವರಿಸುವ ಕತೆ ಅದು.ಅಂದರೆ ಮೊಬೈಲ್ ಏವತ್ತುಎ ಷ್ಟು ಅವಶ್ಯಕ ಮತ್ತು ಅದನ್ನು ಯಾವ ಮಟ್ಟಕ್ಕೆ ಬಳಸಿಕೊಳ್ಳಬೇಕು ಎಂಬುದನ್ನು ವಿಶದವಾಗಿ ಕತೆಯ ರೂಪದಲ್ಲಿ ವಿವರಿಸುವ ಕತೆಯ ಆಶಯಕ್ಕೆ ನಿಜಕ್ಕೂ ಶರಣು.
ಇನ್ನು ಮೋಹನ ಸ್ವಾಮಿಯ ಮುಖ್ಯ ಕತೆಗಳೆಂದರೆ ಅಥವಾ ಹೂರಣ ಎಂದರೆ ಮೋಹನ ಸ್ವಾಮಿಯ ಕತೆಗಳೇ. ಸಲಿಂಗ ಪ್ರೇಮದ ಕತೆಗಳ ಸಂಕಲನವಾಗಲಿ ಅಥವಾ ಕತೆಗಳಾಗಲಿ ಸಿನಿಮಾಗಳಾಗಲಿ ನಮ್ಮಲ್ಲಿ ವಿರಳ ಎನ್ನಬಹುದು. ಅಥವಾ ಬರೆದಿದ್ದರೂ ಅದರಲ್ಲಿನ ಭಾವದಲ್ಲಿ ವಾಸ್ತವಕ್ಕಿಂತ ಕರುಣೆಯೇ ಮುಖ್ಯ ಪಾತ್ರವಹಿಸದೆ ಇರುವುದಿಲ್ಲ. ಯಾವತ್ತಿಗೂ ಅಷ್ಟೇ.ಒಂದು ಪಂಗಡದ, ಅಲ್ಪ ಸಂಖ್ಯಾತರ ಅಥವಾ ಒಂದು ವರ್ಗದ ಕತೆಯನ್ನು ಒಬ್ಬ ಕತೆಗಾರ ಹೇಳಲು ಹೊರಟಾಗ ಅಲ್ಲಿ ವಾಸ್ತವದ ಅಂಶಕ್ಕಿಂತ ಆ ಒಂದು ವಿಷಯದ ಬಗೆಗೆ ಕರುಣೆ, ಬೇರೆಯದೇ ಅಯ್ಯೋ ಪಾಪ, ಅವರ ಬದುಕು ಅವರದು ಎನ್ನುವಂತಹ ವಿಶಾಲ ಮನೋಭಾವದ[?] ಎನಿಸುವ ರೀತಿ ಬರೆಯುವುದೇ ಹೆಚ್ಚು. ಆದರೆ ವಸುಧೇಂದ್ರ ಅದ್ಯಾವ ಅಂಶವನ್ನೂ ಗಮನಾರ್ಹ ಎನಿಸುವುದಿಲ್ಲ.
ರಸ್ತೆಯಲ್ಲಿ ಹುಡುಗಿಯನ್ನು ರೇಗಿಸುವ ಪೋಲಿಗಳು,  ಹುಡುಗಿ ಆತ ರಹದ ಚೇಡಿಸುವಿಕೆ ಒಳಗಾಗುವುದನ್ನು ಬರೆಯುವುಷ್ಟೇ ಸಲೀಸಾಗಿ ಈ ತರಹದ ಕತೆಯನ್ನೂ ನಮ್ಮ ಮುಂದಿಡುತ್ತಾರೆ. ಹಾಗಾಗಿ ಅದು ನಮ್ಮದಲ್ಲದ[ಇದು ನನ್ನ ವೈಯಕ್ತಿಕ]ಬದುಕನ್ನು ನಮ್ಮ ಮುಂದಿಡುತ್ತಾ ಸಾಗಿದರೂ ಆಪ್ತ ಎನಿಸದೇ ಇರದು.
ಇಲ್ಲಿ ಮೋಹನ ಸ್ವಾಮೀ ಯಾರು? ಮೋಹನ ಸ್ವಾಮಿಯಂತಹ ಗೆಳೆಯರು ನಮ್ಮ ನಡುವೆ ಇರಬಹುದು. ಕೆಲವೊಮ್ಮೆ ನಮ್ಮ ಗಮನಕ್ಕೆ ಬರುತ್ತದೆ. ಅಥವಾ ಬರದೆ ಇರಬಹುದು.ಆದರೆ ಸಮಾಜದಲ್ಲಿ ಆ ತರಹ ಎಂದಾಕ್ಷಣ ನೋಡುವ ದೃಷ್ಟಿಯ ಹೇಗೆ ಬೇರೆಯಾಗುತ್ತದೆ ಎಂಬುದನ್ನು ಕತೆಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡುವ ವಸುಧೇಂದ್ರ ಅದನ್ನು ಅಷ್ಟೇ ಮಾರ್ಮಿಕವಾಗಿ ನಮ್ಮ ಮುಂದಿಡುತ್ತಾರೆ. ಭಾಷೆಯ ಬಳಕೆಯಲ್ಲಿ ಹೆಚ್ಚು ಸ್ವತಂತ್ರ ತೆಗೆದುಕೊಂಡಿರುವ ಅವರು ಅದನ್ನೂ ಸಭ್ಯತೆಯ ಸೋಗಿನಲ್ಲೇ ಹೇಳಹೊರಟಿದ್ದಾರೆ ಎನ್ನುವುದಕ್ಕೆ ಮಾತನ್ನು ಮಾತಿನಂತೆಯೇ ಆಡುವಂತೆಯೇ ಮತ್ತು ಆಯಾ ಸಂದರ್ಭದಲ್ಲಿ ಬರುವ ಸಾಮಾನ್ಯ ಮಾತುಗಳನ್ನು ಹಾಗೆಯೇ ಹರಿಬಿಟ್ಟಿದ್ದಾರೆ ಎನ್ನಬಹುದು.
ಮೋಹನ ಸ್ವಾಮಿಯ ವೈಯಕ್ತಿಕ ಬದುಕು, ಆತನ ಮಾನಸಿಕ ತುಮುಲಗಳು, ಕಾಮನೆಗಳು, ಅದನ್ನು  ಉಪಯೋಗಿಸಿಕೊಳ್ಳುವ, ದುರುಪಯೋಗ ಮಾಡಿಕೊಳ್ಳುವ ಖದೀಮರು, ಅವರ ಕುಟುಂಬದ ತಲ್ಲಣ ಮುಂತಾದವುಗಳನ್ನು ಕತೆಗಳ ಮೂಲಕ ಹಿಡಿದಿಟ್ಟಿದ್ದಾರೆ ಲೇಖಕರು. ಓದಿಸಿಕೊಳ್ಳುತ್ತಲೇ ಮಜಾ ಕೊಡುವ ನಗಿಸುವ ಬೇಸರ ಎನಿಸುವ ಮರುಕ ತರುವ  ಮೋಹನ ಸ್ವಾಮಿಯ ಕತೆಗಳು ಇಷ್ಟವಾಗುತ್ತವೆ.

Wednesday, April 2, 2014

ಡಬ್ಬಿಂಗ್ ...

ಕನ್ನಡದಲ್ಲಿ ಉತ್ತಮ ಚಿತ್ರಗಳಾವುವು?
ನಾನು ನನ್ನ ಪುಸ್ತಕ ನೋಡಲೇ ಬೇಕಾದ ನೂರೊಂದು ಚಿತ್ರಗಳು ಪುಸ್ತಕಕ್ಕಾಗಿ ಈ ಒಂದು ಪ್ರಶ್ನೆಯನ್ನು ಕೇಳಿಕೊಂಡು ಅದಕ್ಕೆ ಉತ್ತರ ಹುಡುಕಲು ಪ್ರಯತ್ನಿಸಿದ್ದೆ. ಯಾಕೆಂದರೆ ಇಲ್ಲಿಯವರೆಗೆ ಮೂರು ಸಾವಿರ ಚಿಲ್ಲರೆ ಚಿತ್ರಗಳು ಬಿಡುಗಡೆಯಾಗಿರುವ ಕನ್ನಡ ಚಿತ್ರರಂಗದಲ್ಲಿ ಯಾವ ಮಾನದಂಡದ ಮೇಲೆ ಚಿತ್ರಗಳನ್ನು ಆಯ್ಕೆ ಮಾಡುವುದು ಎನ್ನುವುದು ಯಕ್ಷ ಪ್ರಶ್ನೆ. 
ಇರಲಿ ಹೇಗೋ ಹಾಗೆ ಒಂದಷ್ಟು ಮಾನದಂಡಗಳನ್ನೂ ನಮ್ಮಲ್ಲೇ ಹೇರಿಕೊಂಡು ಒಂದಷ್ಟು ಚಿತ್ರಗಳನ್ನು ಆಯ್ಕೆ ಮಾಡಬಹುದು. ಕನ್ನಡದ ಮಟ್ಟಿಗೆ ಅವೇ ಉತ್ತಮ ಚಿತ್ರಗಳು ಎನ್ನಬಹುದು.
ಹಾಗೆಯೇ ತಮಿಳಿನಲ್ಲಿ ನೋಡಲೇಬೇಕಾದ ಚಿತ್ರಗಳು, ತೆಲುಗಿನಲ್ಲಿ..ಹೀಗೆ ಆಯಾ ಭಾಷೆಯಲ್ಲಿ ಒಂದಷ್ಟು ಚಿತ್ರಗಳನ್ನು ಪಟ್ಟಿಮಾಡಬಹುದು.
ನಾನು ಮನೆಯಲ್ಲಿ ಟಿವಿಯ ಮುಂದೆ ಕುಳಿತಾಗ ಸುಮ್ಮನೆ ಚಾನಲ್ಗಳನ್ನೂ ಚೇಂಜ್ ಮಾಡುತ್ತಾ ಇರುತ್ತೇನೆ. ಅದರಲ್ಲೋ ಬರೀ ಡಬ್ಬಿಂಗ್ ಚಿತ್ರಗಳನ್ನು ಹಾಕುವ ಹಿಂದಿ ಚಾನಲುಗಳನ್ನು ಅಲ್ಲಿ ಬರುವ ಚಿತ್ರಗಳನ್ನು ನೋಡುತ್ತೇನೆ. ಪಾಪ. ಹಿಂದಿ ಭಾಷಿಕರ ಕರ್ಮ ಹೇಳತೀರದು ಎನಿಸುತ್ತದೆ.ಅಜಯ್ ದೇವಗನ್ ಅಭಿನಯದ ಸಿಂಘಂ, ಸೂರ್ಯ ಸಿಂಘಂ ಕನ್ನಡ ಬಾಜಿರಾವ್ ಸಿಂಘಂ ಮೂರೂ ಹಿಂದಿ ಭಾಷೆಯಲ್ಲೇ ಪ್ರಸಾರವಾಗುತ್ತವೆ. ಹಾಗೆಯೇ ವೀರ ಮದಕರಿ, ರೌಡಿ ರಾಥೋಡ್, ತೆಲುಗಿನ ವೀರ ಮದಕರಿ ಕೂಡ ಹಿಂದಿಯಲ್ಲಿ ಬಂದುಹೋಗುತ್ತವೆ.ಹಿಂದಿ ಭಾಷಿಕರ ತಮ್ಮ ಸಿನಿಮಾ ಯಾವುದು ಇದು ಯಾವುದು ಎಂಬುದನ್ನು ವಿಂಗಡಿಸಲು ಸಾಧ್ಯವೇ ಆಗುವುದಿಲ್ಲ. ಅದರಲ್ಲೂ ಮೊನ್ನೆ ಯಾವುದೋ ಸಾಯಿಕುಮಾರ್ ಥ್ರಿಲ್ಲರ್ ಮಂಜು ಅಭಿನಯದ ಚಿತ್ರವೊಂದು ಹಿಂದಿಯಲ್ಲಿ ಡಬ್ ಆಗಿ ಪ್ರಸಾರವಾಗುತ್ತಿತ್ತು. ನಮ್ಮಲ್ಲಿ ಪಂಚಿಂಗ್ ಕಡಕ್ ಸಂಭಾಷಣೆಗೆ ಹೆಸರಾದ ಡೈಲಾಗ್ ಕಿಂಗ್ ನನ್ನು ಹಿಂದಿಯಲ್ಲಿ ಡಬ್ ಮಾಡಿದ ಕಂಠದಾನ ಕಲಾವಿದ ಅದ್ಯಾವುದನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಇಷ್ಟ ಬಂದ ಹಾಗೆ ಹಿಂದಿಯಲ್ಲಿ ಮಾತುಗಳನ್ನು ಒಪ್ಪಿಸಿದ್ದ. ಹಾಗಾಗಿ ನಮ್ಮ ಸಾಯಿಕುಮಾರ್ ಅಬ್ಬರ ಅಲ್ಲಿ ಯಾವನೋ ಒಬ್ಬ ಮುದುಕ ಮಾತನಾಡಿದ ರೀತಿಯಿತ್ತು. ನನ್ನ ಪ್ರಕಾರ ಒಂದು ಗಂಡು ಧ್ವನಿ ಮತ್ತೊಂದು ಹೆಣ್ಣು ಧ್ವನಿ ಇಡೀ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಧ್ವನಿ ನೀಡಿದ ರೀತಿಯಿತ್ತು. ಇರಲಿ. ನಾನು ಅಲ್ಲಿನ ಸುಮಾರು ಕನ್ನಡದಿಂದ ಡಬ್ ಆದ ಚಿತ್ರಗಳನ್ನು ಗಮನಿಸಿದ್ದೇನೆ. ಇಲ್ಲಿ ಎರಡೇ ದಿನಕ್ಕೆ ಚಿತ್ರಮಂದಿರದಿಂದ ನಾಪತ್ತೆಯಾದ, ಪ್ರೇಕ್ಷಕರಿಂದ ವಿಮರ್ಶಕರಿಂದ ಉಗಿಸಿಕೊಂಡ ಕೀಳು ಅಭಿರುಚಿಯ ಚಿತ್ರಗಳ ಸಂಖ್ಯೆಯೇ ಅವುಗಳಲ್ಲಿ ಜಾಸ್ತಿ ಎನಿಸಿದೆ.
ಹಾಗಾದರೆ ಅದ್ಯಾವ ಮಾನದಂಡದ ಮೇಲೆ ಅವರು ಡಬ್ ಮಾಡುತ್ತಾರೆ ಎಂಬ ಪ್ರಶ್ನೆಯನ್ನು ಸುಮಾರು ಸಾರಿ ಕೇಳಿಕೊಂಡೆ.ಉತ್ತರ ಗೊತ್ತಾಯಿತು. ರಕ್ತಪಾತದ, ಆಕ್ಷನ್ ಇರುವ ಚಿತ್ರಗಳನ್ನು ಡಬ್ ಮಾಡುತ್ತಾರೆ. ಒಟ್ಟಿನಲ್ಲಿ ಯತೇಚ್ಛವಾದ ಮಸಾಲೆ ಅಂಶ ಅದರಲ್ಲಿ ತುಂಬಿರಬೇಕು. ಇದು ವಾಹಿನಿಗಳ ವಿಷಯ ಇನ್ನು ಅಲ್ಲಿ ಚಿತ್ರ ಮಂದಿರಗಳಲ್ಲಿ ಇನ್ನೂ ಒಂದು ವಿಭಾಗದ ಡಬ್ಬಿಂಗ್ ಗೆ ಹೆಚ್ಚು ಅವಕಾಶ ಬೇಡಿಕೆ ಇದೆ ಎಂಬುದು ಗೊತ್ತಾಯಿತು. ಅದು ವಯಸ್ಕರ ಚಿತ್ರಗಳು.
ಅಂದರೆ ನಾವುಗಳು ನಮ್ಮ ಕನ್ನಡದ ಉತ್ತಮ ಚಿತ್ರಗಳನ್ನು ಹಿಂದಿಯವರಿಗೆ ತೋರಿಸಲು ಸಾಧ್ಯವಿಲ್ಲವೇ..ಅಥವಾ ಅಂತಹವುಗಳನ್ನು ಡಬ್ಬಿಂಗ್ ಮಾಡುವವರು ಖರೀದಿಸುವುದಿಲ್ಲವೇ ಎನ್ನುವುದು ಪ್ರಶ್ನೆಯಲ್ಲ.
ನಮ್ಮಲ್ಲೂ ಡಬ್ಬಿಂಗ್ ಬಂದರೆ ಇದೇ ಮುಂದುವರೆಯಬಹುದಾ ಎಂಬುದು ಪ್ರಶ್ನೆ. ಸಿನಿಮ ಗುಣಮಟ್ಟವನ್ನು ಲೆಕ್ಕಿಸದ ಮಂದಿ ಬರೀ ಹಣವನ್ನೇ ಮುಖ್ಯಾಂಶ ಎಂದುಕೊಂಡಿರುವವರು ಅದ್ಯಾಕೆ ರಿಸ್ಕು ತೆಗೆದುಕೊಳ್ಳುತ್ತಾರೆ ಎನಿಸದಿರಲಿಲ್ಲ. ವಯಸ್ಕರ, ಮಸಾಲೆಭರಿತ ಚಿತ್ರಗಳು ಮೊದಲಿಗೆ ಡಬ್ ಆಗುತ್ತವೆ. ಏಕೆಂದರೆ ಅವುಗಳಿಗೆ ಬೇಡಿಕೆ ಜಾಸ್ತಿ. ಇನ್ನು ಸ್ಟಾರ್ ನಟರ ಸಿನಿಮಾಗಳನ್ನೂ ಆಯಾ ಭಾಷೆಯ ನಿರ್ಮಾಪಕರೂ ಕನ್ನಡಕ್ಕೆ ತಾವೇ ಡಬ್ ಮಾಡಿ ಎಲ್ಲಾ ಅವತರಣಿಕೆಯನ್ನೂ ತಾವೇ ಬಿಡುಗಡೆ ಮಾಡುತ್ತಾರೆ. ಹಾಗಾಗಿ ನಮ್ಮ ಇಲ್ಲಿ ಡಬ್ಬಿಂಗ್ ನಿಂದ ಒಂದಷ್ಟು ಹಣ ಮಾಡಿಕೊಳ್ಳಬಹುದು ಎನ್ನುವವರಿಗೆ ತಾರಾಮೌಲ್ಯದ ಅಥವಾ ಅದ್ದೂರಿ ಚಿತ್ರಗಳು ಡಬ್ಬಿಂಗ್ ಗೆ ಸಿಗುವುದಿಲ್ಲ. ಆಗ ಅವರಾದರೂ ಏನು ಮಾಡಲು ಸಾಧ್ಯ. ಕೈಗೆ ಸಿಕ್ಕ ಚಿತ್ರಗಳಿಗೆ ಕನ್ನಡ ಮಾತಿನ ಲೇಪನ ಮಾಡಿಸುತ್ತಾರೆ.
ಪೊರ್ಕಿ, ಹೀಗೊಬ್ಬ ಪೋಕಿರಿ, ಶಕ್ತಿವಂತ ಪೋಕಿರಿ, ವಾಂಟೆಡ್ ಪೋಕಿರಿ, ಸಿಂಘಂ, ಕೆಂಪೇಗೌಡ, ಮತ್ತೆ ಬಂದ ಕೆಂಪೇಗೌಡ, ಬಾಜಿರಾವ್ ಕೆಂಪೇಗೌಡ, ಕೆಂಪೇಗೌಡ ಐ.ಪಿ.ಎಸ್, ರಾಜಾಹುಲಿ, ನಮ್ಮೂರ ಹುಲಿ, ಮತ್ತೆ ಬಂದ ಹೆಬ್ಬುಲಿ, ಕಿರಾತಕ, ಪಕ್ಕಾ ಕಿರಾತಕ, ಮರ್ಯಾದೆ ರಾಮಣ್ಣ, ಇವನೇ ಮರ್ಯಾದೆ ಶಾಮಣ್ಣ, ಮರ್ಯಾದೆ ಮೀರದ ರಾಮಣ್ಣ, ಮಾಣಿಕ್ಯ, ಪಕ್ಕಾ  ಮಾಣಿಕ್ಯ , ಅವನೇ ಮಾಣಿಕ್ಯ, ಕಿಕ್, ಪಕ್ಕಾ ಕಿಕ್, ಕಿಕ್ಕಂದ್ರೆ ಕಿಕ್ಕು ..ಹೀಗೆ. ಚಿತ್ರ ಮಂದಿರದ ವಿಷಯ ಬಿಟ್ಟಾಕಿ. ನಮ್ಮ ವಾಹಿನಿಗಳಲ್ಲಿ ಒಂದೇ ಕತೆಯ ಒಂದೇ ಚಿತ್ರದ ಬೇರೆ ಬೇರೆ ಭಾಷೆಯ ಚಿತ್ರಗಳು ಹೀಗೆಲ್ಲಾ ಶೀರ್ಷಿಕೆ ಹೊತ್ತುಕೊಂಡು ಬರಬಹುದಾ..?ಯಾಕೆಂದರೆ ಈಗ ಬೇರೆ ವಾಹಿನಿಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಅಲ್ಲಿ ನಡೆಯುತ್ತಿರುವುದು ಇದೆ. ನಮ್ಮ ಕನ್ನಡದ ಅತ್ಯುತ್ತಮ ಚಿತ್ರ ಅಂದುಕೊಂಡ ಸಿನಿಮ ಅಲ್ಲಿ ಡಬ್ ಆಗಿಲ್ಲ. ನಮ್ಮಲ್ಲಿ ಹೊಸತನ ಮೆರೆದ, ನವೀನತೆ ಎತ್ತಿಹಿಡಿದ ನಮ್ಮ ನೆಲದ ಸೊಗಡನ್ನು ಪಸರಿಸಿದ ಚಿತ್ರ ಯಾವುದೂ ಅಲ್ಲಿ ಭಾಷಾಂತರ ಆಗಿಲ್ಲ.
ಹಾಗೆಯೇ ಅಲ್ಲಿನ ಅದ್ಭುತ ಎನಿಸಿದ, ನೋಡಲೇ ಬೇಕೆನಿಸಿದ ಭಾವಪೂರ್ಣ ಚಿತ್ರಗಳು ಕನ್ನಡಕ್ಕೆ ಬರಬಹುದಾ..? ಬಂದರೂ ಅವುಗಳ ಸಂಖ್ಯೆಯನ್ನು ತೂರಿ ಬಿಡುವಷ್ಟು ಸಂಖ್ಯೆಯಲ್ಲಿ ಬೇರೆ ಭಾಷಾಂತರಗೊಂಡ ಚಿತ್ರಗಳು ಬಂದುಬಿಡಬಹುದಾ..?

Sunday, March 30, 2014

ಜಿಜ್ಜ್ಞಾಸೆ:

ಒಮ್ಮೊಮ್ಮೆ ಜಿಜ್ಞಾಸೆಗೆ ಬೀಳುವಂತಾಗುತ್ತದೆ. ನೇರವಾಗಿ ವಿಷಯಕ್ಕೆ ಬರುವುದಾದರೆ ಮೊದಲೆಲ್ಲಾ ಚಿತ್ರ ನೋಡಿದ ಮೇಲೆ ಚಿಕ್ಕದೊಂದು ಟಿಪ್ಪಣಿ ಮಾಡಿಡುತ್ತಿದ್ದೆ. ತೀರಾ ಚೆನ್ನಾಗಿದ್ದರೆ ಒಂದಷ್ಟು ಗೆಳೆಯರಿಗೆ ಹೇಳುತ್ತಿದ್ದೆ. ಸಾಧ್ಯವಾದರೆ ಅವರುಗಳನ್ನು ಕರೆದುಕೊಂಡು ನಾನೂ ಅವರ ಜೊತೆಗೆ ಹೋಗಿ ಸಿನಿಮಾವನ್ನು ಇನ್ನೊಮ್ಮೆ ನೋಡುತ್ತಿದ್ದೆ. ಆ ಚಿತ್ರ ನನ್ನದೇ ಏನೋ ಎಂಬಂತೆ ಮತ್ತೆ ನಮ್ಮ ಮನೆಯವರಿಗೆ ಹತ್ತಿರದವರಿಗೆ ನೋಡುವಂತೆ ಹೇಳುತ್ತಿದ್ದೆ. ಚಿತ್ರ ಚೆನ್ನಾಗಿಲ್ಲದಿದ್ದರೆ ಬೈದುಕೊಂಡು ನಕ್ಕು ಹಗುರಾಗುತ್ತಿದ್ದೆ.
ಈಗ ಅದರ ಬಗ್ಗೆ ಒಂದಷ್ಟು ಬರೆಯುತ್ತೇನೆ. ಅದರ ಉದ್ದೇಶ ಇಷ್ಟೇ. ಒಬ್ಬ ಪ್ರೇಕ್ಷಕನಾಗಿ ಆ ಚಿತ್ರವನ್ನು ನೋಡಿದಾಗ ನನಗೆನನ್ನಿಸುತ್ತದೋ ಅದನ್ನು ಹಾಗೆ ಅಕ್ಷರಕ್ಕೆ ಇಳಿಸುವುದು.ನನ್ನ ಪ್ರಕಾರ ಇಲ್ಲಿ ವಿಮರ್ಶೆ ಪೋಸ್ಟ್ ಮಾರ್ಟಂ ಆಗಬಾರದು ಅಥವಾ ಇಡೀ ಚಿತ್ರವನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಹುಡುಕಿ ಅಳೆದು ಗುಣಿಸಲೂಬಾರದು. ಮತ್ತು ಸಿನಿಮಾ ಹೀಗಿರಬೇಕಿತ್ತು ಆದರೆ ಹೀಗೆಲ್ಲಾ ಮಾಡಿಬಿಟ್ಟಿದ್ದಾನೆ ಎಂದುಕೊಂಡು ಬೈಯ್ಯಲೂಬಾರದು. ಆ ಚಿತ್ರಕರ್ಮಿಯ ಬಗ್ಗೆ ಆತನ ಹಿನ್ನೆಲೆಯ ಬಗ್ಗೆ ತಿಳಿದುಕೊಂಡಿರಬೇಕಾದರೂ ಅದಕ್ಕೂ ಆ ಸಿನಿಮಾಕ್ಕೂ ತಾಳೆ ಹಾಕಬಾರದು. ಇದು ನಾನೇ ನನಗೆ ಹಾಕಿಕೊಂಡ ಮಾನದಂಡಗಳು. ಯಾಕೆಂದರೆ ನನ್ನ ಬರಹ ಓದಿದ ಗೆಳೆಯರಿಗೆ ಸರಿಯಾದ ಚಿತ್ರಣ ಸಿಗಬೇಕು. ತೀರಾ ನನ್ನ ವೈಯಕ್ತಿಕ ಹಳವಂಡವನ್ನೂ ದೃಷ್ಟಿಕೋನವನ್ನೂ ಈರ್ಷೆ ಮತ್ಸರಗಳನ್ನು ಕೋಪಗಳನ್ನೂ ಅದರಲ್ಲಿ ಸೇರಿಸಬಾರದು. ಹೀಗೆ ನನ್ನದೇ ಒಂದಷ್ಟು ಮಾನದಂಡಗಳನ್ನು ಹಾಕಿಕೊಂಡು ಚಿತ್ರದ ಮೇಲೆ ನನ್ನ ಅಭಿಪ್ರಾಯಗಳನ್ನು ಬರೆಯತೊಡಗಿದೆ. ನನ್ನ ಪ್ರಕಾರ ಅದೆಷ್ಟು ಸಾಮಾನ್ಯವಾಗಿರಬೇಕೆಂದರೆ ಸಾಮಾನ್ಯನೊಬ್ಬನ ಅಭಿಪ್ರಾಯ ಅದಾಗಿರಬೇಕುಎಂಬುದಾಗಿತ್ತು, ಎಂಬುದಾಗಿದೆ.
ಮೊದಲೆಲ್ಲಾ ನನ್ನ ಗೆಳೆಯರು ಒಂದು ಸಿನಿಮಾವನ್ನು ನೋಡುವಾಗ ನೀನೊಬ್ಬ ತಂತ್ರಜ್ಞನಾಗಿ ನೋಡಬೇಡ ಎನ್ನುತ್ತಿದ್ದರು. ಅವರ ಪ್ರಕಾರ ತಂತ್ರಜ್ಞನಾಗಿ ನೋಡಿದರೆ ಹೆಚ್ಚು ತಪ್ಪುಗಳನ್ನು ಹುಡುಕಬಹುದು ಎಂಬುದಾಗಿತ್ತು. ಆದರೆ ನನ್ನ ಪ್ರಕಾರ ಅದು ತಪ್ಪು. ಒಬ್ಬ ಸಿನಿಮಾ ತಂತ್ರಜ್ಞ ಒಂದು ಸಿನಿಮಾ ನೋಡಿದಾಗ ಅದರಲ್ಲಿ ತಪ್ಪು ಹುಡುಕುವುದಾಗಲಿ ತಪ್ಪುಗಳಿಗೆ ಬೈಯ್ಯುವುದಾಗಲಿ ಸಾಧ್ಯವಿಲ್ಲ.ಯಾಕೆಂದರೆ ಒಂದು ಚಿತ್ರದ ದೃಶ್ಯದ ಸಂದರ್ಭದಲ್ಲಿ ಅದೆಷ್ಟು ಕಷ್ಟ ಕೋಟಲೆಗಳಿರುತ್ತವೋ..ಅದೆಲ್ಲಿ ರಾಜಿಯಾಗಿರಬೇಕಾಗುತ್ತೋ.. ಆ ತಾರೆಯರ ನಿರ್ಮಾಪಕರ ನಖರಗಳೆನಿರುತ್ತವೋ ...ಯಾಕೆಂದರೆ ಒಂದು ಚಿತ್ರ ಟೀಂ ವರ್ಕ್. ಯಾರೇ ಒಬ್ಬರು ತಪ್ಪಿದರೂ ಚಿತ್ರದಲ್ಲಿ ಅದನ್ನು ಸರಿದೂಗಿಸುವುದು ಕಷ್ಟದ ಕೆಲಸ. ಹತ್ತು ಗಂಟೆಗೆ ಬರಬೇಕೆಂದುಕೊಂಡ ನಟ ಕಾರಣದಿಂದ ಹನ್ನೊಂದಕ್ಕೆ ಬರಬಹುದು..ಚಿತ್ರೀಕರಣದ ಸಮಯದಲ್ಲಿ ಮಳೆ ಬಂದುಬಿಡಬಹುದು..ಹೀಗೆ. ಈ ಎಲ್ಲವನ್ನು ತಲೆಯಲ್ಲಿಟ್ಟುಕೊಳ್ಳುವ ಅದರ ಅರಿವಿರುವ ಚಿತ್ರ ತಂತ್ರಜ್ಞ ಅದೇಗೆ ಬೈಯಲು ಸಾಧ್ಯ ಹೇಳಿ. ಆದರೆ ಪ್ರೇಕ್ಷಕ ಹಾಗಲ್ಲ.ಅದೆಲ್ಲ ಅವನಿಗೆ ಬೇಕಾಗೂ ಇಲ್ಲ. ಒಂದು ಹೊತ್ತಿನ ಊಟಕ್ಕಾಗುವ ಹಣವನ್ನು ಮತ್ತು ಕೆಲಸ ಮಾಡುವ ಸಮಯವನ್ನು ಆತ ಕಳೆದಿರುತ್ತಾನೆ. ಆತನಲ್ಲಿ ಏನೋ ನಿರೀಕ್ಷೆ ಇರುತ್ತದೆ. ಆತ ಚಿತ್ರದ ನಿಜವಾದ ಮಾಲೀಕ. ಹಾಗಾಗಿ ಚಿತ್ರದಲ್ಲಿ ಅದೇನು ಕಷ್ಟಪಟ್ಟಿದ್ದರೂ ಅವನಿಗೆನಾಗಬೇಕು ಕೊಟ್ಟ ಕಾಸಿಗೆ ಅಂದುಕೊಂಡ ನಿರೀಕ್ಷೆಗೆ ಸ್ವಲ್ಪವೂ ನ್ಯಾಯ ಒದಗಿಸದ ಬದಲಿಗೆ ಮಾನಸಿಕ ಹಿಂಸೆ ಕೊಟ್ಟು ತಲೆ ನೋವು ಬರಿಸಿದರೆ ಅದೇಕೆ ತಡೆದುಕೊಳ್ಳಬೇಕು. ಹಾಗಾಗಿ ಬೈಯ್ದು ಎದ್ದು ಹೋಗುವ ಹಕ್ಕು ಆತನಿಗೆ ಯಾವತ್ತಿಗೂ ಇದ್ದೇ ಇದೆ. ನಾನು ಚಿತ್ರ ನೋಡುವಾಗ ಅದೇ ಮನಸ್ಥಿತಿಯಲ್ಲಿ ಕುಳಿತುಕೊಳ್ಳುತ್ತೇನೆ.
ಮೊನ್ನೆ ಬಿಡುಗಡೆಯಾದ ಉಳಿದವರು ಕಂಡಂತೆ ಚಿತ್ರ ನೋಡಿದಾಗ ನನಗನ್ನಿಸಿದ್ದನು ಬರೆದಾದ ಮೇಲೆ ಒಂದಷ್ಟು ಪತ್ರಿಕೆಗಳ ವಿಮರ್ಶೆಯಲ್ಲಿ ಚಿತ್ರದ ಬಗ್ಗೆ ತೀರಾ ಧನಾತ್ಮಕ ಮಾತುಗಳನ್ನಾಡಿದ್ದು ನೋಡಿದೆ. ಅವರ ಕೆಲವು ಸಾಲುಗಳು ಹೀಗಿದ್ದವು. ಚಿತ್ರ ಬೇಸರ ತರಿಸಿದರೂ ಅದರ ಹಿಂದಿನ ಶ್ರಮ ಮೆಚ್ಚತಕ್ಕದ್ದು,.. ಅದರ ಹಿಂದಿನ ಪ್ರಾಮಾಣಿಕ ಪ್ರಯತ್ನವನ್ನು ತಳ್ಳಿ ಹಾಕುವ ಹಾಗಿಲ್ಲ..ಕಡಲ ಮೊರೆತ ಮೀನಿನ ವಾಸನೆ..ಅಲ್ಲಿನ ಜನಜೀವನವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬಿತ್ಯಾದಿ. ಹೌದು. ಇದೆಲ್ಲವೂ ನಿಜವೇ. ಆದರೆ ಉಳಿದವರು ಕಂಡಂತೆ ಚಿತ್ರ ಟ್ರೈಲರ್ ನಲ್ಲಿ ಸುದ್ದಿ ಮಾಡಿತ್ತು. ಅದರ ನಾಲ್ಕು ಚಿಲ್ಲರೆ ನಿಮಿಷಗಳ ಪ್ರೊಮೊ ಅತ್ಯಂತ ಆಕರ್ಷಕವಾಗಿತ್ತು. ಮತ್ತದರ ಪೋಸ್ಟರ್ ಗಳು , ಅದರ ಬಗೆಗೆ ಚಿತ್ರತಂಡದ ಭರವಸೆಯ ಮಾತುಗಳನ್ನು ಇಡೀ ಚಿತ್ರತಂಡವನ್ನು ನಮಗೆ ಆಪ್ತವಾಗಿಸಿದ್ದವು. ಹಾಗಾಗಿ ಚಿತ್ರ ನೋಡುತ್ತಾ ನೋಡುತ್ತಾ ಬೇಸರವಾದರೂ ಅದನ್ನು ಮರೆಯಲೆತ್ನಿಸಿ ಅಥವಾ ಅದನ್ನು ಭರಿಸಲು ಅಥವಾ ಅದನ್ನು ಗಮನಕ್ಕೆ ತಂದುಕೊಳ್ಳದೆ ತನ್ಮಯನಾಗಿ ನೋಡಲು ತುಂಬಾ ಜನ ಕಷ್ಟ ಪಟ್ಟಿರಬಹುದು. ನಾನು ಚಿತ್ರ ಮಂದಿರಕ್ಕೆ ಹೋದಾಗ ಬಹುಪಾಲು ಪ್ರೇಕ್ಷಕರಲ್ಲಿ ಕಂಡದ್ದು ಇದೇ ಮನೋಭಾವವನ್ನು. ಪ್ರತಿ ಪಾತ್ರವನ್ನು ಚಿತ್ರದಲ್ಲಿ ಪರಿಚಯಿಸಿದಾಗ ಮುಂದೇನೋ ಅದ್ಭುತ ನಡೆಯಲಿದೆ ಎಂದುಕೊಂಡು ಶಿಳ್ಳೆ ಹಾಕುತ್ತಿದ್ದರು..ಕೂಗಾಡುತ್ತಿದ್ದರು..ಚಪ್ಪಾಳೆಯನ್ನೂ ತಟ್ಟುತ್ತಿದ್ದರು.ಆದರೆ ಬರುಬರುತ್ತಾ ಅದು ಬೇಸರಕ್ಕೆ ಆತ್ಮೀಯರ ಮೇಲೆ ಉಂಟಾಗುವ ಕೋಪಕ್ಕೆ ತಿರುಗಿ ಬೇರೆ ತರಹದ ದಾಂಧಲೆಗೆ ತಿರುಗಿತು ಎನ್ನಬಹುದು.
ಹಾಗಾಗಿ ಒಂದು ಬರಹವನ್ನು ನಂಬಿಕೊಂಡು ಹೋಗುವ ಚಿತ್ರರಸಿಕನಿಗೆ ಆ ಬರಹ ಏನಿಲ್ಲಾ ಎಂದರೂ ಪ್ರತಿಶತಃ ಅರವತ್ತು ಭಾಗವಾದರೂ ಸತ್ಯ ಎನಿಸದಿದ್ದರೆ ಅದು ಮೊದಲ ಸೋಲು ಎನಿಸುತ್ತದೆ. ನಮ್ಮೊಬ್ಬರಿಗೆ ಸಿನಿಮ ಇಷ್ಟವಾಗಬಹುದು. ಹಾಗಂತ ಇಡೀ ಸಿನಿಮಾವನ್ನು ನಾವೊಬ್ಬರೇ ಅನುಭವಿಸಬೇಕು. ಆದರೆ ಬೇರೆಯವರಿಗೆ ಅದನ್ನು ತೆರೆದಿಡುತ್ತೇನೆ ಎಂದಾಗ ಅಲ್ಲಿ ಒಂದಷ್ಟು ವಿಷಯಗಳನ್ನು ಸರಳಗೊಳಿಸಿಕೊಳ್ಳಬೇಕು. ದೃಷ್ಟಿಕೋನದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕೆನೋ?
ಇಲ್ಲವಾದಲ್ಲಿ ಸಾರಾಸಗಟಾಗಿ ಹೊಗಳಿದ ಚಿತ್ರವನ್ನು ಹತ್ತು ಜನ ನೋಡಿ ಐದೂ ಜನವೂ ಇಷ್ಟಪಡದಿದ್ದರೆ ಅಥವಾ ಎಲ್ಲಾ ವಿಭಾಗವನ್ನೂ ಸಾರಾಸಗಟಾಗಿ ಉಗಿದು ನೋಡಲು ಅನರ್ಹ ಎಂಬ ಚಿತ್ರವನ್ನು ನೋಡಿದವರೆಲ್ಲಾ ಸೂಪರ್ ಅಂದುಬಿಟ್ಟರೆ ಆ ಚಿತ್ರದ ಮೇಲಿನ ಬರಹಕ್ಕೆ ಬೆಲೆ ಇದೆಯೇ ಎಂಬುದು ನನ್ನ ಪ್ರಶ್ನೆ.
ಯಾಕೆಂದರೆ ಪ್ರತಿಯೊಂದು ಚಿತ್ರದ ಹಿಂದೆ ಲಾಭ, ಆಸೆಗಳ ಬಲೆಯಿದ್ದರೂ ಪ್ರಯತ್ನ ಪರಿಶ್ರಮ ಇದ್ದೇ ಇರುತ್ತದೆ. ಕೆಲವೊಮ್ಮೆ ಅದನ್ನೂ ಹೊರಗಿಡಲು ಆ ಚಿತ್ರಕರ್ಮಿಗೆ ಸಾಧ್ಯವಾಗದೆ ಇರಬಹುದೇನೋ? ಹಾಗಾಗಿ ನಮಗೆ ಗೊತ್ತಾದ, ಅಥವಾ ಗೊತ್ತು ಮಾಡಿದ ಚಿತ್ರಕರ್ಮಿಯ ಚಿತ್ರ ಚೆನ್ನಾಗಿಲ್ಲವಾದರೂ ನಮ್ಮವನು ಎಂಬ ಕಾರಣಕ್ಕೆ ಒಳ್ಳೆಯ ಮಾತನಾಡಿ, ಗೊತ್ತೇ ಇಲ್ಲದ ನಿರ್ದೇಶಕ ಏನನ್ನೋ ಹೇಳಲು ಹೊರಟು ಹೇಳಲಾಗದೆ ಸೋತಿದ್ದರೆ ಆತನನ್ನು ನಮಗೆ ಆತ, ಆತನ ಹಿಂದಿನ ಶ್ರಮ ಗೊತ್ತಿಲ್ಲದ ಕಾರಣದಿಂದ ಸಾರಾಸಗಟಾಗಿ ಬೈಯ್ಯುವುದು ಎಷ್ಟರ ಮಟ್ಟಿಗೆ ಸರಿ ಅಲ್ಲವೇ.

ಹಾಗಾಗಿಯೇ ಚಿತ್ರ ನೋಡುವಾಗ ಅದರ ಹಿಂದೆ,ಮುಂದೆ, ವ್ಯಕ್ತಿ, ವಿಷಯಗಳನ್ನು, ನಿರೀಕ್ಷೆಗಳನ್ನೂ ಪಕ್ಕಕ್ಕಿಟ್ಟು ಸುಮ್ಮನೆ ಖಾಲಿ ತಲೆಯಲ್ಲಿ ಟಿಕೆಟ್ ಗೆ ಕೊಟ್ಟ ಹಣವನ್ನು ನೆನಪಿಸಿಕೊಂಡು ಸಿನಿಮಾವನ್ನು ನೋಡಿದರೆ ಇದ್ಯಾವುದೂ ಲೆಕ್ಕಕ್ಕೆ ಸಿಗದೇ ಬರೀ ಸಿನಿಮಾವಷ್ಟೇ ಲೆಕ್ಕಕ್ಕೆ ಸಿಗಬಹುದೇನೋ?