ಕನ್ನಡದಲ್ಲಿ ಉತ್ತಮ ಚಿತ್ರಗಳಾವುವು?
ನಾನು ನನ್ನ ಪುಸ್ತಕ ನೋಡಲೇ ಬೇಕಾದ ನೂರೊಂದು ಚಿತ್ರಗಳು ಪುಸ್ತಕಕ್ಕಾಗಿ ಈ ಒಂದು ಪ್ರಶ್ನೆಯನ್ನು ಕೇಳಿಕೊಂಡು ಅದಕ್ಕೆ ಉತ್ತರ ಹುಡುಕಲು ಪ್ರಯತ್ನಿಸಿದ್ದೆ. ಯಾಕೆಂದರೆ ಇಲ್ಲಿಯವರೆಗೆ ಮೂರು ಸಾವಿರ ಚಿಲ್ಲರೆ ಚಿತ್ರಗಳು ಬಿಡುಗಡೆಯಾಗಿರುವ ಕನ್ನಡ ಚಿತ್ರರಂಗದಲ್ಲಿ ಯಾವ ಮಾನದಂಡದ ಮೇಲೆ ಚಿತ್ರಗಳನ್ನು ಆಯ್ಕೆ ಮಾಡುವುದು ಎನ್ನುವುದು ಯಕ್ಷ ಪ್ರಶ್ನೆ.
ಇರಲಿ ಹೇಗೋ ಹಾಗೆ ಒಂದಷ್ಟು ಮಾನದಂಡಗಳನ್ನೂ ನಮ್ಮಲ್ಲೇ ಹೇರಿಕೊಂಡು ಒಂದಷ್ಟು ಚಿತ್ರಗಳನ್ನು ಆಯ್ಕೆ ಮಾಡಬಹುದು. ಕನ್ನಡದ ಮಟ್ಟಿಗೆ ಅವೇ ಉತ್ತಮ ಚಿತ್ರಗಳು ಎನ್ನಬಹುದು.
ಹಾಗೆಯೇ ತಮಿಳಿನಲ್ಲಿ ನೋಡಲೇಬೇಕಾದ ಚಿತ್ರಗಳು, ತೆಲುಗಿನಲ್ಲಿ..ಹೀಗೆ ಆಯಾ ಭಾಷೆಯಲ್ಲಿ ಒಂದಷ್ಟು ಚಿತ್ರಗಳನ್ನು ಪಟ್ಟಿಮಾಡಬಹುದು.
ನಾನು ಮನೆಯಲ್ಲಿ ಟಿವಿಯ ಮುಂದೆ ಕುಳಿತಾಗ ಸುಮ್ಮನೆ ಚಾನಲ್ಗಳನ್ನೂ ಚೇಂಜ್ ಮಾಡುತ್ತಾ ಇರುತ್ತೇನೆ. ಅದರಲ್ಲೋ ಬರೀ ಡಬ್ಬಿಂಗ್ ಚಿತ್ರಗಳನ್ನು ಹಾಕುವ ಹಿಂದಿ ಚಾನಲುಗಳನ್ನು ಅಲ್ಲಿ ಬರುವ ಚಿತ್ರಗಳನ್ನು ನೋಡುತ್ತೇನೆ. ಪಾಪ. ಹಿಂದಿ ಭಾಷಿಕರ ಕರ್ಮ ಹೇಳತೀರದು ಎನಿಸುತ್ತದೆ.ಅಜಯ್ ದೇವಗನ್ ಅಭಿನಯದ ಸಿಂಘಂ, ಸೂರ್ಯ ಸಿಂಘಂ ಕನ್ನಡ ಬಾಜಿರಾವ್ ಸಿಂಘಂ ಮೂರೂ ಹಿಂದಿ ಭಾಷೆಯಲ್ಲೇ ಪ್ರಸಾರವಾಗುತ್ತವೆ. ಹಾಗೆಯೇ ವೀರ ಮದಕರಿ, ರೌಡಿ ರಾಥೋಡ್, ತೆಲುಗಿನ ವೀರ ಮದಕರಿ ಕೂಡ ಹಿಂದಿಯಲ್ಲಿ ಬಂದುಹೋಗುತ್ತವೆ.ಹಿಂದಿ ಭಾಷಿಕರ ತಮ್ಮ ಸಿನಿಮಾ ಯಾವುದು ಇದು ಯಾವುದು ಎಂಬುದನ್ನು ವಿಂಗಡಿಸಲು ಸಾಧ್ಯವೇ ಆಗುವುದಿಲ್ಲ. ಅದರಲ್ಲೂ ಮೊನ್ನೆ ಯಾವುದೋ ಸಾಯಿಕುಮಾರ್ ಥ್ರಿಲ್ಲರ್ ಮಂಜು ಅಭಿನಯದ ಚಿತ್ರವೊಂದು ಹಿಂದಿಯಲ್ಲಿ ಡಬ್ ಆಗಿ ಪ್ರಸಾರವಾಗುತ್ತಿತ್ತು. ನಮ್ಮಲ್ಲಿ ಪಂಚಿಂಗ್ ಕಡಕ್ ಸಂಭಾಷಣೆಗೆ ಹೆಸರಾದ ಡೈಲಾಗ್ ಕಿಂಗ್ ನನ್ನು ಹಿಂದಿಯಲ್ಲಿ ಡಬ್ ಮಾಡಿದ ಕಂಠದಾನ ಕಲಾವಿದ ಅದ್ಯಾವುದನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಇಷ್ಟ ಬಂದ ಹಾಗೆ ಹಿಂದಿಯಲ್ಲಿ ಮಾತುಗಳನ್ನು ಒಪ್ಪಿಸಿದ್ದ. ಹಾಗಾಗಿ ನಮ್ಮ ಸಾಯಿಕುಮಾರ್ ಅಬ್ಬರ ಅಲ್ಲಿ ಯಾವನೋ ಒಬ್ಬ ಮುದುಕ ಮಾತನಾಡಿದ ರೀತಿಯಿತ್ತು. ನನ್ನ ಪ್ರಕಾರ ಒಂದು ಗಂಡು ಧ್ವನಿ ಮತ್ತೊಂದು ಹೆಣ್ಣು ಧ್ವನಿ ಇಡೀ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಧ್ವನಿ ನೀಡಿದ ರೀತಿಯಿತ್ತು. ಇರಲಿ. ನಾನು ಅಲ್ಲಿನ ಸುಮಾರು ಕನ್ನಡದಿಂದ ಡಬ್ ಆದ ಚಿತ್ರಗಳನ್ನು ಗಮನಿಸಿದ್ದೇನೆ. ಇಲ್ಲಿ ಎರಡೇ ದಿನಕ್ಕೆ ಚಿತ್ರಮಂದಿರದಿಂದ ನಾಪತ್ತೆಯಾದ, ಪ್ರೇಕ್ಷಕರಿಂದ ವಿಮರ್ಶಕರಿಂದ ಉಗಿಸಿಕೊಂಡ ಕೀಳು ಅಭಿರುಚಿಯ ಚಿತ್ರಗಳ ಸಂಖ್ಯೆಯೇ ಅವುಗಳಲ್ಲಿ ಜಾಸ್ತಿ ಎನಿಸಿದೆ.
ಹಾಗಾದರೆ ಅದ್ಯಾವ ಮಾನದಂಡದ ಮೇಲೆ ಅವರು ಡಬ್ ಮಾಡುತ್ತಾರೆ ಎಂಬ ಪ್ರಶ್ನೆಯನ್ನು ಸುಮಾರು ಸಾರಿ ಕೇಳಿಕೊಂಡೆ.ಉತ್ತರ ಗೊತ್ತಾಯಿತು. ರಕ್ತಪಾತದ, ಆಕ್ಷನ್ ಇರುವ ಚಿತ್ರಗಳನ್ನು ಡಬ್ ಮಾಡುತ್ತಾರೆ. ಒಟ್ಟಿನಲ್ಲಿ ಯತೇಚ್ಛವಾದ ಮಸಾಲೆ ಅಂಶ ಅದರಲ್ಲಿ ತುಂಬಿರಬೇಕು. ಇದು ವಾಹಿನಿಗಳ ವಿಷಯ ಇನ್ನು ಅಲ್ಲಿ ಚಿತ್ರ ಮಂದಿರಗಳಲ್ಲಿ ಇನ್ನೂ ಒಂದು ವಿಭಾಗದ ಡಬ್ಬಿಂಗ್ ಗೆ ಹೆಚ್ಚು ಅವಕಾಶ ಬೇಡಿಕೆ ಇದೆ ಎಂಬುದು ಗೊತ್ತಾಯಿತು. ಅದು ವಯಸ್ಕರ ಚಿತ್ರಗಳು.
ಅಂದರೆ ನಾವುಗಳು ನಮ್ಮ ಕನ್ನಡದ ಉತ್ತಮ ಚಿತ್ರಗಳನ್ನು ಹಿಂದಿಯವರಿಗೆ ತೋರಿಸಲು ಸಾಧ್ಯವಿಲ್ಲವೇ..ಅಥವಾ ಅಂತಹವುಗಳನ್ನು ಡಬ್ಬಿಂಗ್ ಮಾಡುವವರು ಖರೀದಿಸುವುದಿಲ್ಲವೇ ಎನ್ನುವುದು ಪ್ರಶ್ನೆಯಲ್ಲ.
ನಮ್ಮಲ್ಲೂ ಡಬ್ಬಿಂಗ್ ಬಂದರೆ ಇದೇ ಮುಂದುವರೆಯಬಹುದಾ ಎಂಬುದು ಪ್ರಶ್ನೆ. ಸಿನಿಮ ಗುಣಮಟ್ಟವನ್ನು ಲೆಕ್ಕಿಸದ ಮಂದಿ ಬರೀ ಹಣವನ್ನೇ ಮುಖ್ಯಾಂಶ ಎಂದುಕೊಂಡಿರುವವರು ಅದ್ಯಾಕೆ ರಿಸ್ಕು ತೆಗೆದುಕೊಳ್ಳುತ್ತಾರೆ ಎನಿಸದಿರಲಿಲ್ಲ. ವಯಸ್ಕರ, ಮಸಾಲೆಭರಿತ ಚಿತ್ರಗಳು ಮೊದಲಿಗೆ ಡಬ್ ಆಗುತ್ತವೆ. ಏಕೆಂದರೆ ಅವುಗಳಿಗೆ ಬೇಡಿಕೆ ಜಾಸ್ತಿ. ಇನ್ನು ಸ್ಟಾರ್ ನಟರ ಸಿನಿಮಾಗಳನ್ನೂ ಆಯಾ ಭಾಷೆಯ ನಿರ್ಮಾಪಕರೂ ಕನ್ನಡಕ್ಕೆ ತಾವೇ ಡಬ್ ಮಾಡಿ ಎಲ್ಲಾ ಅವತರಣಿಕೆಯನ್ನೂ ತಾವೇ ಬಿಡುಗಡೆ ಮಾಡುತ್ತಾರೆ. ಹಾಗಾಗಿ ನಮ್ಮ ಇಲ್ಲಿ ಡಬ್ಬಿಂಗ್ ನಿಂದ ಒಂದಷ್ಟು ಹಣ ಮಾಡಿಕೊಳ್ಳಬಹುದು ಎನ್ನುವವರಿಗೆ ತಾರಾಮೌಲ್ಯದ ಅಥವಾ ಅದ್ದೂರಿ ಚಿತ್ರಗಳು ಡಬ್ಬಿಂಗ್ ಗೆ ಸಿಗುವುದಿಲ್ಲ. ಆಗ ಅವರಾದರೂ ಏನು ಮಾಡಲು ಸಾಧ್ಯ. ಕೈಗೆ ಸಿಕ್ಕ ಚಿತ್ರಗಳಿಗೆ ಕನ್ನಡ ಮಾತಿನ ಲೇಪನ ಮಾಡಿಸುತ್ತಾರೆ.
ಪೊರ್ಕಿ, ಹೀಗೊಬ್ಬ ಪೋಕಿರಿ, ಶಕ್ತಿವಂತ ಪೋಕಿರಿ, ವಾಂಟೆಡ್ ಪೋಕಿರಿ, ಸಿಂಘಂ, ಕೆಂಪೇಗೌಡ, ಮತ್ತೆ ಬಂದ ಕೆಂಪೇಗೌಡ, ಬಾಜಿರಾವ್ ಕೆಂಪೇಗೌಡ, ಕೆಂಪೇಗೌಡ ಐ.ಪಿ.ಎಸ್, ರಾಜಾಹುಲಿ, ನಮ್ಮೂರ ಹುಲಿ, ಮತ್ತೆ ಬಂದ ಹೆಬ್ಬುಲಿ, ಕಿರಾತಕ, ಪಕ್ಕಾ ಕಿರಾತಕ, ಮರ್ಯಾದೆ ರಾಮಣ್ಣ, ಇವನೇ ಮರ್ಯಾದೆ ಶಾಮಣ್ಣ, ಮರ್ಯಾದೆ ಮೀರದ ರಾಮಣ್ಣ, ಮಾಣಿಕ್ಯ, ಪಕ್ಕಾ ಮಾಣಿಕ್ಯ , ಅವನೇ ಮಾಣಿಕ್ಯ, ಕಿಕ್, ಪಕ್ಕಾ ಕಿಕ್, ಕಿಕ್ಕಂದ್ರೆ ಕಿಕ್ಕು ..ಹೀಗೆ. ಚಿತ್ರ ಮಂದಿರದ ವಿಷಯ ಬಿಟ್ಟಾಕಿ. ನಮ್ಮ ವಾಹಿನಿಗಳಲ್ಲಿ ಒಂದೇ ಕತೆಯ ಒಂದೇ ಚಿತ್ರದ ಬೇರೆ ಬೇರೆ ಭಾಷೆಯ ಚಿತ್ರಗಳು ಹೀಗೆಲ್ಲಾ ಶೀರ್ಷಿಕೆ ಹೊತ್ತುಕೊಂಡು ಬರಬಹುದಾ..?ಯಾಕೆಂದರೆ ಈಗ ಬೇರೆ ವಾಹಿನಿಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಅಲ್ಲಿ ನಡೆಯುತ್ತಿರುವುದು ಇದೆ. ನಮ್ಮ ಕನ್ನಡದ ಅತ್ಯುತ್ತಮ ಚಿತ್ರ ಅಂದುಕೊಂಡ ಸಿನಿಮ ಅಲ್ಲಿ ಡಬ್ ಆಗಿಲ್ಲ. ನಮ್ಮಲ್ಲಿ ಹೊಸತನ ಮೆರೆದ, ನವೀನತೆ ಎತ್ತಿಹಿಡಿದ ನಮ್ಮ ನೆಲದ ಸೊಗಡನ್ನು ಪಸರಿಸಿದ ಚಿತ್ರ ಯಾವುದೂ ಅಲ್ಲಿ ಭಾಷಾಂತರ ಆಗಿಲ್ಲ.
ಹಾಗೆಯೇ ಅಲ್ಲಿನ ಅದ್ಭುತ ಎನಿಸಿದ, ನೋಡಲೇ ಬೇಕೆನಿಸಿದ ಭಾವಪೂರ್ಣ ಚಿತ್ರಗಳು ಕನ್ನಡಕ್ಕೆ ಬರಬಹುದಾ..? ಬಂದರೂ ಅವುಗಳ ಸಂಖ್ಯೆಯನ್ನು ತೂರಿ ಬಿಡುವಷ್ಟು ಸಂಖ್ಯೆಯಲ್ಲಿ ಬೇರೆ ಭಾಷಾಂತರಗೊಂಡ ಚಿತ್ರಗಳು ಬಂದುಬಿಡಬಹುದಾ..?
Adbhuta enisuvantide nimmee baravanige mattu ee lekhana.. munduvaresi :)
ReplyDeleteSariyaage helideeri idhu nam janakke artha aaguththilla ashte
ReplyDeleteಕ೦ಟ್ರೋಲ್ಡ್ ಡಬ್ಬಿ೦ಗ್ ಮಾಡಲು ಸಾಧ್ಯವೇ?. ಇಲ್ಲದಿದ್ದರೆ ಕೊಚ್ಚೆ ಸಿಕ್ಕ ಸಿಕ್ಕಲ್ಲಿ, ತಗ್ಗು ಪ್ರದೇಶಗಳಲ್ಲಿ ಹರಿಯುವುದು ಗ್ಯಾರ೦ಟಿ
ReplyDeleteಬೆಳೆದಿದ್ದೆಲ್ಲಾ ಕಾಳಾಗಬೇಕೆಂಬ ನಿಯಮವೇನೂ ಇಲ್ಲ ವಲ್ಲ..ಹಾಗೆ ಇದು ಕೂಡ..ಜೊಳ್ಳು ಬರುತ್ತೆ..ಕಾಳು ಬರುತ್ತೆ..ನಮಗೆ ಯಾವುದು ಬೇಕೊ ಅದನ್ನ ಆರಿಸಿಕೊಳ್ಳುವ..ಏನಂತೀರಾ?
ReplyDelete