ಒಮ್ಮೊಮ್ಮೆ ಜಿಜ್ಞಾಸೆಗೆ ಬೀಳುವಂತಾಗುತ್ತದೆ. ನೇರವಾಗಿ
ವಿಷಯಕ್ಕೆ ಬರುವುದಾದರೆ ಮೊದಲೆಲ್ಲಾ ಚಿತ್ರ ನೋಡಿದ ಮೇಲೆ ಚಿಕ್ಕದೊಂದು ಟಿಪ್ಪಣಿ
ಮಾಡಿಡುತ್ತಿದ್ದೆ. ತೀರಾ ಚೆನ್ನಾಗಿದ್ದರೆ ಒಂದಷ್ಟು ಗೆಳೆಯರಿಗೆ ಹೇಳುತ್ತಿದ್ದೆ. ಸಾಧ್ಯವಾದರೆ
ಅವರುಗಳನ್ನು ಕರೆದುಕೊಂಡು ನಾನೂ ಅವರ ಜೊತೆಗೆ ಹೋಗಿ ಸಿನಿಮಾವನ್ನು ಇನ್ನೊಮ್ಮೆ ನೋಡುತ್ತಿದ್ದೆ.
ಆ ಚಿತ್ರ ನನ್ನದೇ ಏನೋ ಎಂಬಂತೆ ಮತ್ತೆ ನಮ್ಮ ಮನೆಯವರಿಗೆ ಹತ್ತಿರದವರಿಗೆ ನೋಡುವಂತೆ
ಹೇಳುತ್ತಿದ್ದೆ. ಚಿತ್ರ ಚೆನ್ನಾಗಿಲ್ಲದಿದ್ದರೆ ಬೈದುಕೊಂಡು ನಕ್ಕು ಹಗುರಾಗುತ್ತಿದ್ದೆ.
ಈಗ ಅದರ ಬಗ್ಗೆ ಒಂದಷ್ಟು ಬರೆಯುತ್ತೇನೆ. ಅದರ ಉದ್ದೇಶ
ಇಷ್ಟೇ. ಒಬ್ಬ ಪ್ರೇಕ್ಷಕನಾಗಿ ಆ ಚಿತ್ರವನ್ನು ನೋಡಿದಾಗ ನನಗೆನನ್ನಿಸುತ್ತದೋ ಅದನ್ನು ಹಾಗೆ
ಅಕ್ಷರಕ್ಕೆ ಇಳಿಸುವುದು.ನನ್ನ ಪ್ರಕಾರ ಇಲ್ಲಿ ವಿಮರ್ಶೆ ಪೋಸ್ಟ್ ಮಾರ್ಟಂ ಆಗಬಾರದು ಅಥವಾ ಇಡೀ
ಚಿತ್ರವನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಹುಡುಕಿ ಅಳೆದು ಗುಣಿಸಲೂಬಾರದು. ಮತ್ತು ಸಿನಿಮಾ
ಹೀಗಿರಬೇಕಿತ್ತು ಆದರೆ ಹೀಗೆಲ್ಲಾ ಮಾಡಿಬಿಟ್ಟಿದ್ದಾನೆ ಎಂದುಕೊಂಡು ಬೈಯ್ಯಲೂಬಾರದು. ಆ ಚಿತ್ರಕರ್ಮಿಯ
ಬಗ್ಗೆ ಆತನ ಹಿನ್ನೆಲೆಯ ಬಗ್ಗೆ ತಿಳಿದುಕೊಂಡಿರಬೇಕಾದರೂ ಅದಕ್ಕೂ ಆ ಸಿನಿಮಾಕ್ಕೂ ತಾಳೆ
ಹಾಕಬಾರದು. ಇದು ನಾನೇ ನನಗೆ ಹಾಕಿಕೊಂಡ ಮಾನದಂಡಗಳು. ಯಾಕೆಂದರೆ ನನ್ನ ಬರಹ ಓದಿದ ಗೆಳೆಯರಿಗೆ
ಸರಿಯಾದ ಚಿತ್ರಣ ಸಿಗಬೇಕು. ತೀರಾ ನನ್ನ ವೈಯಕ್ತಿಕ ಹಳವಂಡವನ್ನೂ ದೃಷ್ಟಿಕೋನವನ್ನೂ ಈರ್ಷೆ
ಮತ್ಸರಗಳನ್ನು ಕೋಪಗಳನ್ನೂ ಅದರಲ್ಲಿ ಸೇರಿಸಬಾರದು. ಹೀಗೆ ನನ್ನದೇ ಒಂದಷ್ಟು ಮಾನದಂಡಗಳನ್ನು
ಹಾಕಿಕೊಂಡು ಚಿತ್ರದ ಮೇಲೆ ನನ್ನ ಅಭಿಪ್ರಾಯಗಳನ್ನು ಬರೆಯತೊಡಗಿದೆ. ನನ್ನ ಪ್ರಕಾರ ಅದೆಷ್ಟು
ಸಾಮಾನ್ಯವಾಗಿರಬೇಕೆಂದರೆ ಸಾಮಾನ್ಯನೊಬ್ಬನ ಅಭಿಪ್ರಾಯ ಅದಾಗಿರಬೇಕುಎಂಬುದಾಗಿತ್ತು, ಎಂಬುದಾಗಿದೆ.
ಮೊದಲೆಲ್ಲಾ ನನ್ನ ಗೆಳೆಯರು ಒಂದು ಸಿನಿಮಾವನ್ನು ನೋಡುವಾಗ
ನೀನೊಬ್ಬ ತಂತ್ರಜ್ಞನಾಗಿ ನೋಡಬೇಡ ಎನ್ನುತ್ತಿದ್ದರು. ಅವರ ಪ್ರಕಾರ ತಂತ್ರಜ್ಞನಾಗಿ ನೋಡಿದರೆ
ಹೆಚ್ಚು ತಪ್ಪುಗಳನ್ನು ಹುಡುಕಬಹುದು ಎಂಬುದಾಗಿತ್ತು. ಆದರೆ ನನ್ನ ಪ್ರಕಾರ ಅದು ತಪ್ಪು. ಒಬ್ಬ
ಸಿನಿಮಾ ತಂತ್ರಜ್ಞ ಒಂದು ಸಿನಿಮಾ ನೋಡಿದಾಗ ಅದರಲ್ಲಿ ತಪ್ಪು ಹುಡುಕುವುದಾಗಲಿ ತಪ್ಪುಗಳಿಗೆ
ಬೈಯ್ಯುವುದಾಗಲಿ ಸಾಧ್ಯವಿಲ್ಲ.ಯಾಕೆಂದರೆ ಒಂದು ಚಿತ್ರದ ದೃಶ್ಯದ ಸಂದರ್ಭದಲ್ಲಿ ಅದೆಷ್ಟು ಕಷ್ಟ
ಕೋಟಲೆಗಳಿರುತ್ತವೋ..ಅದೆಲ್ಲಿ ರಾಜಿಯಾಗಿರಬೇಕಾಗುತ್ತೋ.. ಆ ತಾರೆಯರ ನಿರ್ಮಾಪಕರ
ನಖರಗಳೆನಿರುತ್ತವೋ ...ಯಾಕೆಂದರೆ ಒಂದು ಚಿತ್ರ ಟೀಂ ವರ್ಕ್. ಯಾರೇ ಒಬ್ಬರು ತಪ್ಪಿದರೂ
ಚಿತ್ರದಲ್ಲಿ ಅದನ್ನು ಸರಿದೂಗಿಸುವುದು ಕಷ್ಟದ ಕೆಲಸ. ಹತ್ತು ಗಂಟೆಗೆ ಬರಬೇಕೆಂದುಕೊಂಡ ನಟ
ಕಾರಣದಿಂದ ಹನ್ನೊಂದಕ್ಕೆ ಬರಬಹುದು..ಚಿತ್ರೀಕರಣದ ಸಮಯದಲ್ಲಿ ಮಳೆ ಬಂದುಬಿಡಬಹುದು..ಹೀಗೆ. ಈ
ಎಲ್ಲವನ್ನು ತಲೆಯಲ್ಲಿಟ್ಟುಕೊಳ್ಳುವ ಅದರ ಅರಿವಿರುವ ಚಿತ್ರ ತಂತ್ರಜ್ಞ ಅದೇಗೆ ಬೈಯಲು ಸಾಧ್ಯ
ಹೇಳಿ. ಆದರೆ ಪ್ರೇಕ್ಷಕ ಹಾಗಲ್ಲ.ಅದೆಲ್ಲ ಅವನಿಗೆ ಬೇಕಾಗೂ ಇಲ್ಲ. ಒಂದು ಹೊತ್ತಿನ ಊಟಕ್ಕಾಗುವ
ಹಣವನ್ನು ಮತ್ತು ಕೆಲಸ ಮಾಡುವ ಸಮಯವನ್ನು ಆತ ಕಳೆದಿರುತ್ತಾನೆ. ಆತನಲ್ಲಿ ಏನೋ ನಿರೀಕ್ಷೆ
ಇರುತ್ತದೆ. ಆತ ಚಿತ್ರದ ನಿಜವಾದ ಮಾಲೀಕ. ಹಾಗಾಗಿ ಚಿತ್ರದಲ್ಲಿ ಅದೇನು ಕಷ್ಟಪಟ್ಟಿದ್ದರೂ
ಅವನಿಗೆನಾಗಬೇಕು ಕೊಟ್ಟ ಕಾಸಿಗೆ ಅಂದುಕೊಂಡ ನಿರೀಕ್ಷೆಗೆ ಸ್ವಲ್ಪವೂ ನ್ಯಾಯ ಒದಗಿಸದ ಬದಲಿಗೆ
ಮಾನಸಿಕ ಹಿಂಸೆ ಕೊಟ್ಟು ತಲೆ ನೋವು ಬರಿಸಿದರೆ ಅದೇಕೆ ತಡೆದುಕೊಳ್ಳಬೇಕು. ಹಾಗಾಗಿ ಬೈಯ್ದು ಎದ್ದು
ಹೋಗುವ ಹಕ್ಕು ಆತನಿಗೆ ಯಾವತ್ತಿಗೂ ಇದ್ದೇ ಇದೆ. ನಾನು ಚಿತ್ರ ನೋಡುವಾಗ ಅದೇ ಮನಸ್ಥಿತಿಯಲ್ಲಿ
ಕುಳಿತುಕೊಳ್ಳುತ್ತೇನೆ.
ಮೊನ್ನೆ ಬಿಡುಗಡೆಯಾದ ‘ಉಳಿದವರು ಕಂಡಂತೆ’ ಚಿತ್ರ ನೋಡಿದಾಗ ನನಗನ್ನಿಸಿದ್ದನು ಬರೆದಾದ ಮೇಲೆ
ಒಂದಷ್ಟು ಪತ್ರಿಕೆಗಳ ವಿಮರ್ಶೆಯಲ್ಲಿ ಚಿತ್ರದ ಬಗ್ಗೆ ತೀರಾ ಧನಾತ್ಮಕ ಮಾತುಗಳನ್ನಾಡಿದ್ದು
ನೋಡಿದೆ. ಅವರ ಕೆಲವು ಸಾಲುಗಳು ಹೀಗಿದ್ದವು. ಚಿತ್ರ ಬೇಸರ ತರಿಸಿದರೂ ಅದರ ಹಿಂದಿನ ಶ್ರಮ
ಮೆಚ್ಚತಕ್ಕದ್ದು,.. ಅದರ ಹಿಂದಿನ ಪ್ರಾಮಾಣಿಕ ಪ್ರಯತ್ನವನ್ನು ತಳ್ಳಿ ಹಾಕುವ ಹಾಗಿಲ್ಲ..ಕಡಲ
ಮೊರೆತ ಮೀನಿನ ವಾಸನೆ..ಅಲ್ಲಿನ ಜನಜೀವನವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ
ಎಂಬಿತ್ಯಾದಿ. ಹೌದು. ಇದೆಲ್ಲವೂ ನಿಜವೇ. ಆದರೆ ಉಳಿದವರು ಕಂಡಂತೆ ಚಿತ್ರ ಟ್ರೈಲರ್ ನಲ್ಲಿ
ಸುದ್ದಿ ಮಾಡಿತ್ತು. ಅದರ ನಾಲ್ಕು ಚಿಲ್ಲರೆ ನಿಮಿಷಗಳ ಪ್ರೊಮೊ ಅತ್ಯಂತ ಆಕರ್ಷಕವಾಗಿತ್ತು.
ಮತ್ತದರ ಪೋಸ್ಟರ್ ಗಳು , ಅದರ ಬಗೆಗೆ ಚಿತ್ರತಂಡದ ಭರವಸೆಯ ಮಾತುಗಳನ್ನು ಇಡೀ ಚಿತ್ರತಂಡವನ್ನು
ನಮಗೆ ಆಪ್ತವಾಗಿಸಿದ್ದವು. ಹಾಗಾಗಿ ಚಿತ್ರ ನೋಡುತ್ತಾ ನೋಡುತ್ತಾ ಬೇಸರವಾದರೂ ಅದನ್ನು ಮರೆಯಲೆತ್ನಿಸಿ
ಅಥವಾ ಅದನ್ನು ಭರಿಸಲು ಅಥವಾ ಅದನ್ನು ಗಮನಕ್ಕೆ ತಂದುಕೊಳ್ಳದೆ ತನ್ಮಯನಾಗಿ ನೋಡಲು ತುಂಬಾ ಜನ
ಕಷ್ಟ ಪಟ್ಟಿರಬಹುದು. ನಾನು ಚಿತ್ರ ಮಂದಿರಕ್ಕೆ ಹೋದಾಗ ಬಹುಪಾಲು ಪ್ರೇಕ್ಷಕರಲ್ಲಿ ಕಂಡದ್ದು ಇದೇ
ಮನೋಭಾವವನ್ನು. ಪ್ರತಿ ಪಾತ್ರವನ್ನು ಚಿತ್ರದಲ್ಲಿ ಪರಿಚಯಿಸಿದಾಗ ಮುಂದೇನೋ ಅದ್ಭುತ ನಡೆಯಲಿದೆ
ಎಂದುಕೊಂಡು ಶಿಳ್ಳೆ ಹಾಕುತ್ತಿದ್ದರು..ಕೂಗಾಡುತ್ತಿದ್ದರು..ಚಪ್ಪಾಳೆಯನ್ನೂ
ತಟ್ಟುತ್ತಿದ್ದರು.ಆದರೆ ಬರುಬರುತ್ತಾ ಅದು ಬೇಸರಕ್ಕೆ ಆತ್ಮೀಯರ ಮೇಲೆ ಉಂಟಾಗುವ ಕೋಪಕ್ಕೆ ತಿರುಗಿ
ಬೇರೆ ತರಹದ ದಾಂಧಲೆಗೆ ತಿರುಗಿತು ಎನ್ನಬಹುದು.
ಹಾಗಾಗಿ ಒಂದು ಬರಹವನ್ನು ನಂಬಿಕೊಂಡು ಹೋಗುವ
ಚಿತ್ರರಸಿಕನಿಗೆ ಆ ಬರಹ ಏನಿಲ್ಲಾ ಎಂದರೂ ಪ್ರತಿಶತಃ ಅರವತ್ತು ಭಾಗವಾದರೂ ಸತ್ಯ ಎನಿಸದಿದ್ದರೆ
ಅದು ಮೊದಲ ಸೋಲು ಎನಿಸುತ್ತದೆ. ನಮ್ಮೊಬ್ಬರಿಗೆ ಸಿನಿಮ ಇಷ್ಟವಾಗಬಹುದು. ಹಾಗಂತ ಇಡೀ
ಸಿನಿಮಾವನ್ನು ನಾವೊಬ್ಬರೇ ಅನುಭವಿಸಬೇಕು. ಆದರೆ ಬೇರೆಯವರಿಗೆ ಅದನ್ನು ತೆರೆದಿಡುತ್ತೇನೆ ಎಂದಾಗ ಅಲ್ಲಿ
ಒಂದಷ್ಟು ವಿಷಯಗಳನ್ನು ಸರಳಗೊಳಿಸಿಕೊಳ್ಳಬೇಕು. ದೃಷ್ಟಿಕೋನದಲ್ಲಿ ಒಂದಷ್ಟು ಬದಲಾವಣೆ
ಮಾಡಿಕೊಳ್ಳಬೇಕೆನೋ?
ಇಲ್ಲವಾದಲ್ಲಿ ಸಾರಾಸಗಟಾಗಿ ಹೊಗಳಿದ ಚಿತ್ರವನ್ನು ಹತ್ತು
ಜನ ನೋಡಿ ಐದೂ ಜನವೂ ಇಷ್ಟಪಡದಿದ್ದರೆ ಅಥವಾ ಎಲ್ಲಾ ವಿಭಾಗವನ್ನೂ ಸಾರಾಸಗಟಾಗಿ ಉಗಿದು ನೋಡಲು
ಅನರ್ಹ ಎಂಬ ಚಿತ್ರವನ್ನು ನೋಡಿದವರೆಲ್ಲಾ ಸೂಪರ್ ಅಂದುಬಿಟ್ಟರೆ ಆ ಚಿತ್ರದ ಮೇಲಿನ ಬರಹಕ್ಕೆ ಬೆಲೆ
ಇದೆಯೇ ಎಂಬುದು ನನ್ನ ಪ್ರಶ್ನೆ.
ಯಾಕೆಂದರೆ ಪ್ರತಿಯೊಂದು ಚಿತ್ರದ ಹಿಂದೆ ಲಾಭ, ಆಸೆಗಳ
ಬಲೆಯಿದ್ದರೂ ಪ್ರಯತ್ನ ಪರಿಶ್ರಮ ಇದ್ದೇ ಇರುತ್ತದೆ. ಕೆಲವೊಮ್ಮೆ ಅದನ್ನೂ ಹೊರಗಿಡಲು ಆ
ಚಿತ್ರಕರ್ಮಿಗೆ ಸಾಧ್ಯವಾಗದೆ ಇರಬಹುದೇನೋ? ಹಾಗಾಗಿ ನಮಗೆ ಗೊತ್ತಾದ, ಅಥವಾ ಗೊತ್ತು ಮಾಡಿದ
ಚಿತ್ರಕರ್ಮಿಯ ಚಿತ್ರ ಚೆನ್ನಾಗಿಲ್ಲವಾದರೂ ನಮ್ಮವನು ಎಂಬ ಕಾರಣಕ್ಕೆ ಒಳ್ಳೆಯ ಮಾತನಾಡಿ, ಗೊತ್ತೇ
ಇಲ್ಲದ ನಿರ್ದೇಶಕ ಏನನ್ನೋ ಹೇಳಲು ಹೊರಟು ಹೇಳಲಾಗದೆ ಸೋತಿದ್ದರೆ ಆತನನ್ನು ನಮಗೆ ಆತ, ಆತನ
ಹಿಂದಿನ ಶ್ರಮ ಗೊತ್ತಿಲ್ಲದ ಕಾರಣದಿಂದ ಸಾರಾಸಗಟಾಗಿ ಬೈಯ್ಯುವುದು ಎಷ್ಟರ ಮಟ್ಟಿಗೆ ಸರಿ ಅಲ್ಲವೇ.
ಹಾಗಾಗಿಯೇ ಚಿತ್ರ ನೋಡುವಾಗ ಅದರ ಹಿಂದೆ,ಮುಂದೆ,
ವ್ಯಕ್ತಿ, ವಿಷಯಗಳನ್ನು, ನಿರೀಕ್ಷೆಗಳನ್ನೂ ಪಕ್ಕಕ್ಕಿಟ್ಟು ಸುಮ್ಮನೆ ಖಾಲಿ ತಲೆಯಲ್ಲಿ ಟಿಕೆಟ್
ಗೆ ಕೊಟ್ಟ ಹಣವನ್ನು ನೆನಪಿಸಿಕೊಂಡು ಸಿನಿಮಾವನ್ನು ನೋಡಿದರೆ ಇದ್ಯಾವುದೂ ಲೆಕ್ಕಕ್ಕೆ ಸಿಗದೇ ಬರೀ
ಸಿನಿಮಾವಷ್ಟೇ ಲೆಕ್ಕಕ್ಕೆ ಸಿಗಬಹುದೇನೋ?
No comments:
Post a Comment