Friday, October 4, 2013

ಚಿಕ್ಕಪ್ಪ ಯಾರು?



ಯಾರೇ ಆಗಲಿ ತಂದೆ ಕಳೆದುಕೊಂಡರೆ ಅದರ ದುಃಖವಿದೆಯಲ್ಲ ಅದನ್ನು ಭರಿಸುವುದು ಸುಲಭದ ಕೆಲಸವಲ್ಲ. ನನ್ನ ತಂದೆಯೆಂದರೆ ನನಗೆ ಪ್ರಾಣ. ನಾವಿಬ್ಬರೂ ಅಪ್ಪ-ಮಕ್ಕಳ ತರಾ ಇರಲೇ ಇಲ್ಲ. ಗೆಳೆಯರಂತಿದ್ದೆವು. ನಮ್ಮ ಮನೆಯಲ್ಲಿ ಅಮ್ಮ ಒಂದು ಕಡೆಯಾದರೆ ನಾನು-ಅಪ್ಪ ಒಂದು ಕಡೆ. ನಾವಿಬ್ಬರು ಊರೆಲ್ಲಾ ಸುತ್ತಾಡುತ್ತಿದ್ದೆವು. ಅಪ್ಪ ನನ್ನನ್ನು ಬೇಟೆಯಾಡಲು ಕರೆದುಕೊಂಡು ಹೋಗುತ್ತಿದ್ದರು. ಬೇಟೆಯಾಡುವುದರಲ್ಲಿ ಅಪ್ಪ ಎತ್ತಿದ ಕೈ. ಕೆರೆಯ ಪಕ್ಕದ ಕಲ್ಲಿನ ಮೇಲೆ ಕುಳಿತ ಹಕ್ಕಿಗೆ ಅಪ್ಪ ಗುರಿಯಿಡುತ್ತಿರಲಿಲ್ಲ. ಅದರ ತಲೆಯಿಂದ ಸ್ವಲ್ಪ ಮೇಲೆ ಶೂನ್ಯದತ್ತ ಗುರಿ ನೆಟ್ಟಿರುತ್ತಿದ್ದರು. ಏನೇ ಆದರೂ ಕಣ್ಣಿನ ದೃಷ್ಟಿಯನ್ನು ಅಲ್ಲಿಂದ ಕೀಳುತ್ತಿರಲಿಲ್ಲ. ಹಕ್ಕಿ ತಾನು ಕುಳಿತ ಜಾಗದಿಂದ ರೆಕ್ಕೆ ಬಡಿಯುತ್ತ ಮೇಲೆ ಹಾರಲು ಪ್ರಯತ್ನಿಸುತ್ತಿದ್ದಂತೆ ಗುಂಡು ಹೊಡೆಯುತ್ತಿದ್ದರು. ಮೇಲೆ ಹಾರಿದ ಹಕ್ಕಿ ಆಯಾ ತಪ್ಪಿ ಅಲ್ಲೇ ಸತ್ತು ಕೆಳಬೀಳುತ್ತಿತ್ತು. ನನಗೂ ಗುರಿಯಿಡಬೇಕಾದರೆ ಏನು ಮಾಡಬೇಕು, ಅದೆಂತಹ ಏಕಾಗ್ರತೆ ಬೇಕು ಎಂಬುದನ್ನು ಪ್ರಾಯೋಗಿಕವಾಗಿ ಕಲಿಸಿದ್ದರು.
ಇಂತಹ ಅಪ್ಪ ಅಪಘಾತದಲ್ಲಿ ಸತ್ತರೆಂದಾಗ ನನಗೆ ನಂಬಲೇ ಆಗಿರಲಿಲ್ಲ. ಅವರ ದೇಹ, ಅದರಲ್ಲೂ ಮುಖ ಅಜ್ಜುಗುಜ್ಜಾಗಿತ್ತು. ಅವರ ಅಂತ್ಯಸಂಸ್ಕಾರದಂದು ನನಗೆ ಅವರು ಸತ್ತರೆಂಬುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಆಗಿರಲಿಲ್ಲ. ಆದರೆ ನನಗೆ ಇನ್ನೂ ಆಶ್ಚರ್ಯವಾದದ್ದು ಅವರ ತಮ್ಮ ಅಂದರೆ ನಮ್ಮ ಚಿಕ್ಕಪ್ಪ ಅವರು ಸತ್ತ ದಿನ ಪ್ರತ್ಯಕ್ಷವಾದದ್ದು. ಅಲ್ಲಿಯವರೆಗೆ ನಾನು ನನ್ನ ಚಿಕ್ಕಪ್ಪನ ಮುಖ ನೋಡೇ ಇರಲಿಲ್ಲ. ಫೋಟೋದಲ್ಲೂ. ಅಪ್ಪ ಮಾತ್ರ ಒಂದೆರೆಡು ಸಾರಿ ಅವರ ಬಗ್ಗೆ ಹೇಳುತ್ತಾ, ‘ಅವನು ಊರೂರು ಸುತ್ತುತ್ತಾ ಇರುತ್ತಾನೆ, ಇಡೀ ಜಗತ್ತೆಲ್ಲವನ್ನೂ ಸುತ್ತಿದ್ದಾನೆ..ಯಾವಾಗ ಬರುತ್ತಾನೋ ಗೊತ್ತಿಲ್ಲ...ಈಗ ಸಧ್ಯಕ್ಕೆ ಆಫ್ರಿಕಾದಲ್ಲಿದ್ದಾನೆ ..’ಎಂದಿದ್ದರು.
ಅಪ್ಪ ಸತ್ತ ನಂತರ ನಮ್ಮ ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯಲು ಪ್ರಾರಂಭಿಸಿದವು...ಅಥವಾ ಚಿಕ್ಕಪ್ಪ ನಮ್ಮ ಮನೆಯಲ್ಲಿ ನೆಲೆ ನಿಂತ ಮೇಲೆ ಎನ್ನಬಹುದು. ಕೇವಲ ಎರಡು ಮೂರು ದಿನಗಳವರೆಗೆ ಇರಲು ಬಂದ ಚಿಕ್ಕಪ್ಪ ಆನಂತರ ಎಲ್ಲಾ ಸರಿ ಹೋಗುವವರೆಗೆ ಇಲ್ಲೇ ಇರುತ್ತೇನೆ ಎಂದರು. ಯಾಕೋ ಗೊತ್ತಿಲ್ಲ. ಆತನನ್ನು ಕಂಡರೆ ನನಗೆ ವಿಚಿತ್ರ ಭಯಾ, ಹಿಂಸೆಯಾಗುತ್ತಿತ್ತು. ಅಮ್ಮ ಚಿಕ್ಕಪ್ಪನೊಂದಿಗೆ ಅಗತ್ಯಕ್ಕಿಂತ ಹೆಚ್ಚು ಸಲುಗೆಯಿಂದಿರುವುದನ್ನು ನನಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದನ್ನು ಬಾಯಿತೆರೆದು ಅಮ್ಮನಿಗೆ ಹೇಳಿದರೂ ಅಮ್ಮ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಚಿಕ್ಕಪ್ಪನ ವ್ಯಕ್ತಿತ್ವದಲ್ಲಿ ವಿಚಿತ್ರವಾದ ಆಕರ್ಷಣೆಯಿತ್ತು. ಮಾತಿಗೆ ಮೊದಲು ಮುಗುಳ್ನಗುತ್ತಿದ್ದ ಚಿಕ್ಕಪ್ಪ ಯಾರನ್ನು ಬೇಕಾದರೂ ಮರುಳು ಮಾಡಿಬಿಡುತ್ತಿದ್ದ. ಅದೊಂದು ದಿನ ಅಡಿಗೆಯವರ ಜೊತೆ ಜಗಳ ಮಾಡಿದ್ದ ಚಿಕ್ಕಪ್ಪ. ಆನಂತರ ಅಡಿಗೆಯವರು ಬರಲೇ ಇಲ್ಲ.ಬಹುಶ ಕೆಲಸ ಬಿಟ್ಟರೆಂದು ನಾನು ತಿಳಿದುಕೊಂಡಿದ್ದೆ. ಆದರೆ ಮುಂದೊಂದು ದಿನ ನನಗೆ ಗೊತ್ತಾದ ವಿಷಯವೆಂದರೆ ಅಡಿಗೆಯವರು ನಾಪತ್ತೆಯಾಗಿದ್ದಾರೆ ಎಂದು. ಆನಂತರ ನನ್ನಜ್ಜಿ ದೂರದ ಊರಿಂದ ಬಂದವರು ಚಿಕ್ಕಪ್ಪನ ಬಗ್ಗೆ ಏನೋ ಹೇಳಲು ಪ್ರಯತ್ನಿಸಿದರಾದರೂ ಅಮ್ಮ ಕೇಳದೆ ಅವಳನ್ನೇ ಬೈದುಕಳುಹಿಸಿದ್ದಳು. ಆದರೆ ನನ್ನ ಬಳಿ ಬಂದ ಅಜ್ಜಿ ಅವಳ ಫೋನ್ ಸಂಖ್ಯೆಯನ್ನು ನನಗೆ ಒಂದು ಚೀಟಿಯಲ್ಲಿ ಬರೆದುಕೊಟ್ಟು ಫೋನ್ ಮಾಡು ಮಾತಾಡುವುದಿದೆ ಎಂದರು.
ಅದೊಂದು ದಿನ ಚಿಕ್ಕಪ್ಪ ಮತ್ತು ಅಮ್ಮ ಅಗತ್ಯಕ್ಕಿಂತ ಹೆಚ್ಚು ಹತ್ತಿರವಾಗಿದ್ದನ್ನು ಕಂಡಾಗ ನನಗೆ ಎಂಥದೋ ಆವೇಶ ನನ್ನಾವರಿಸಿತ್ತು. ಅವತ್ತು ಆ ಆವೇಶದಲ್ಲಿ ಹುಚ್ಚುಚ್ಚಾಗಿ ವರ್ತಿಸಿದ ನನಗೇನು ಗೊತ್ತಿತ್ತು..ಅದು ನನ್ನ ಸಹಪಾಠಿಯ ಸಾವಿಗೆ ಕಾರಣವಾಗುತ್ತದೆ ಎಂದು. ಆದರೆ ನನ್ನ ಕಣ್ಣ ಮುಂದೆಯೇ ನಡೆದ ಆ ಕೊಲೆ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಚಿಕ್ಕಪ್ಪ ಸೊಂಟದ ಬೆಲ್ಟನ್ನು ಅವನ ಕುತ್ತಿಗೆಗೆ ಬಿಗಿದು ಎರಡೂ ಕೈಯಲಿ ಬೆಲ್ಟ್ ಎಳೆಯುತ್ತ ಕಾಲಿನಿಂದ ಅವನ ಸೊಂಟದ ತುಳಿಯುತ್ತಾ ಸಾಯಿಸಿದ್ದರು. ಸತ್ತ ನಂತರ ಚಿಕ್ಕಪ್ಪ ಲವಲೇಶವೂ ಅದುರಿರಲಿಲ್ಲ. ಸಾವಧಾನವಾಗಿ ಅವನ ಹೆಣವನ್ನು ಬಟ್ಟೆಯಲ್ಲಿ ಸುತ್ತಿ  ಕಾರಲ್ಲಿ ಹೊತ್ತು ತಂದು ನಮ್ಮ ಮನೆಯ ಹಿಂಭಾಗದ ವಿಶಾಲವಾದ ಹುಲ್ಲು ಮೈದಾನದಲ್ಲಿ ಹಳ್ಳ ತೆಗೆದು ಹೂತಿದ್ದರು. ಅದಾದ ನಂತರ ಅಲ್ಲೇ ಇದ್ದ ದೊಡ್ಡ ಕಲ್ಲುಬಂಡೆಯನ್ನು ಉರುಳಿಸಿಕೊಂಡು ಬಂದು ಹೆಣ ಹೂತ ಜಾಗದ ಮೇಲಿಟ್ಟಿದ್ದದ್ದು ಅವರ ಬುದ್ದಿವಂತಿಕೆಗೆ ಸಾಕ್ಷಿ ಎನ್ನಬಹುದು. ಯಾಕೋ ನನಗೆ ಅನುಮಾನ ಬಂದು ನೋಡಿದಾಗ ಅಲ್ಲಿ ಅಂತಹುದೇ ಮೂರು ಕಡೆ ಬಂಡೆಕಲ್ಲು ಜೋಡಿಸಿಟ್ಟಿದ್ದು ಕಾಣಿಸಿತ್ತು..ಅಂದರೆ...ಅಜ್ಜಿ..! ಆ ತಕ್ಷಣ ನನ್ನ ಮೊಬೈಲಿನಿಂದ ಅಜ್ಜಿ ಕೊಟ್ಟಿದ್ದ ನಂಬರಿಗೆ ಡಯಲ್ ಮಾಡಿದ್ದೆ. ಭೂಗರ್ಭದಿಂದ ಅದರ ರಿಂಗ್ ಟೋನ್ ಕೇಳಿಸಿದ್ದು ನನ್ನ ಭ್ರಮೆಯಾ..?
ಆ ದಿನದ ನಂತರ ನನಗೆ ಅನುಮಾನ ಬರಲು ಶುರುವಾಯಿತು. ನಿಜಕ್ಕೂ ಚಿಕ್ಕಪ್ಪ ಯಾರು? ಎಲ್ಲಿಂದ ಬಂದವರು. ಕಾಣೆಯಾದ ವ್ಯಕ್ತಿಗಳ ಹಿಂದೆ ಚಿಕ್ಕಪ್ಪನ ಕೈವಾಡ ಇರಬಹುದಾ? ಸಧ್ಯಕ್ಕೆ ಚಿಕ್ಕಪ್ಪ ನಮ್ಮ ಮನೆಯಲ್ಲಿ ಉಳಿದಿರುವ ಉದ್ದೇಶ ಏನು? ಹಾಗಾದರೆ ಚಿಕ್ಕಪ್ಪ ದುಷ್ಟನಾ..? ಜಗತ್ತನ್ನು ಸುತ್ತಿ ಬಂದಂತಹ ವ್ಯಕ್ತಿಗೆ ಇಂತಹ ದುರ್ಗುಣ ಇರಲು ಸಾಧ್ಯವಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಶೀಘ್ರದಲ್ಲಿ ಕಂಡುಕೊಳ್ಳಬೇಕಿತ್ತು. ಅದೂ ಮತ್ಯಾರಾದರೂ ಕಾಣೆಯಾಗುವ ಮುನ್ನಾ..? ಅಥವಾ ನಾನೇ ಇಲ್ಲವಾಗುವ ಮುನ್ನಾ..?
2013 ರಲ್ಲಿ ತೆರೆಗೆ ಬಂದ ಸ್ಟೋಕರ್ ಕೋರಿಯನ್ ನಿರ್ದೇಶಕ ಚಾನ್ ವೂಕ್ ಪಾರ್ಕ್ ನಿರ್ದೇಶನದ ಹಾಲಿವುಡ್ ಚಿತ್ರ. ವೆಂಜಿಯನ್ಸ್ ಟ್ರೈಲಾಜಿ ಎಂದೆ ಪ್ರಖ್ಯಾತವಾಗಿರುವ ಕೋರಿಯನ್ ಚಿತ್ರಗಳಾದ ಸಿಂಪಥಿ ಫಾರ್ ಲೇಡಿ ವೆಂಜಯಾಯ್ನ್ಸ್, ಸಿಂಪಥಿ ಫಾರ್ ಮಿಸ್ಟರ್ ವೆಂಜಿಯನ್ಸ್, ಓಲ್ಡ್ ಬಾಯ್ ಚಿತ್ರಗಳನ್ನು ನಿರ್ದೇಶಿಸಿ ಹೆಸರು ಮಾಡಿದವನು. ಸ್ಟೋಕರ್ ಮಂದಗತಿ ನಿರೂಪನೆಯಿರುವ ಕುತೂಹಲಕಾರಿ ಚಿತ್ರ. ನಿಕೊಲ್ ಕಿಡ್ಮನ್ ಅಭಿನಯಿಸಿರುವ ಈ ಚಿತ್ರದ ಅವಧಿ ಒಂದೂವರೆ ಘಂಟೆಗಳು ಮಾತ್ರ. ತಣ್ಣನೆಯ ಥ್ರಿಲ್ಲರ್ ಪ್ರಿಯರಿಗೆ ಸ್ಟೋಕರ್ ತಕ್ಕ ಸಿನಿಮಾ ಎನ್ನಬಹುದು.

Thursday, October 3, 2013

ವೇದಾ ಮೇಡಂ ಕಥೆಗೊಂದು ಹೆಸರು ಕೊಡಿ:



ಅಂತೂ ಇಂತೂ ವೇದಾ ಮೇಡಂ ಕಥೆ ಮುಗಿದಿದೆ. ಸುಮ್ಮನೆ ನೀಳ್ಗತೆ ಬರೆಯೋಣ ಎಂದುಕೊಂಡು ಬರೆಯಲು ಪ್ರಾರಂಭಿಸಿದ ಕಥೆ ಅದು. ಮೂರೇ ಪಾತ್ರಗಳು, ಒಂದು ಆಫೀಸು ಪ್ರೇಮವೆನಿಸದ ಪ್ರೇಮಕಥೆಯದು. ಕಥೆಯ ಪ್ರಾರಂಭದಲ್ಲಿ ಇಂಗ್ಲಿಷ್ ಶೀರ್ಷಿಕೆ ಎನ್ ಅಫೇರ್ ವಿಥ್ ಗರ್ಲ್ ವುಮನ್ ಅಂಡ್ ಸೋಲ್ ಎಂದು ಅಂದುಕೊಂಡೆನಾದರೂ ಮುಗಿದ ಮೇಲೆ ಅದಕ್ಕೊಂದು ಕನ್ನಡ ಶೀರ್ಷಿಕೆ ಇಡೋಣ ಎಂದು ಕೊಂಡಿದ್ದೆ. ಕಥೆ ಮುಗಿಯಿತೇ ಹೊರತು ಇನ್ನೂ ನನಗೆ ಅದಕ್ಕೆ ತಕ್ಕದು ಎನಿಸಬಹುದಾದ ಶೀರ್ಷಿಕೆ ಸಿಕ್ಕಿಲ್ಲ.
ಒಬ್ಬ ವಿವಾಹಿತ ಸುಂದರಿಯ ಮಾನಸಿಕ ತುಮುಲಗಳನ್ನು ಕಥೆಯಾಗಿಸ ಹೊರಟಾಗ ಒಂದಷ್ಟು ಸವಾಲುಗಳು ಎದುರಾದವು. ಅದನ್ನೆಲ್ಲಾ ಬರೆದು ಈ ವಾರ, ಮುಂದಿನವಾರ ಮುಗಿಸಿಬಿಡೋಣ ಎಂದು ಕೊಂಡೇನಾದರೂ ಅದ್ಯಾಕೋ ಅದು ಉದ್ದವಾಗುತ್ತ ಕಿರುಕಾದಂಬರಿ ಮಟ್ಟಕ್ಕೆ ಬೆಳೆದುಕೊಂಡು ಹೋಯಿತು. ಸುಮಾರು ಜನ ನಾನು ಬರೆಯುವುದಕ್ಕೆ ಬ್ರೇಕ್ ಹಾಕಿದಾಗ ‘ಯಾಕೆ ಬರೆದಿಲ್ಲ..ಬರೆದಿಲ್ಲ ಎಂದು ಕೇಳಿ ಬರೆಸಿದ್ದವರಿದ್ದಾರೆ. ಮುಗಿದ ಮೇಲೂ ಇಷ್ಟು ಬೇಗ ಮುಗಿಯಬಾರದಿತ್ತು ಎಂದು ಕೆಲವರು ಹೇಳಿದರೆ ನನ್ನ ಗೆಳತಿ ಕರೆ ಮಾಡಿ ‘ಇನ್ನೂ ರಬ್ಬರ್ ತರಾ ಎಳೀತಾ ಇದ್ದೀಯಾ..ಬೇಗ ಮುಗಿಸೋ ಮಾರಾಯಾ..’ ಎಂದು ಗದರಿದ್ದೂ ಉಂಟು. ಮುಗಿಯಿತು ಎನ್ನುವ ಪೋಸ್ಟ್ ನೋಡಿ, ಫೋನ್ ಮಾಡಿದ ಗೆಳೆಯರು ಅದ್ಯಾಕೋ ಅಷ್ಟು ಅವಸರದಲ್ಲಿ ಮುಗಿಸಿಬಿಟ್ಟೆ ಎಂದದ್ದೂ ಉಂಟು.ಇನ್ನೇನು ಬರೆಯಲು ಸಾಧ್ಯ ಗುರುವೇ..ಬೇಕಾದರೆ ಇನ್ನು ಮುಂದಕ್ಕೆ ನೀವೇ ಮುಂದುವರೆಸಿ ಎಂದು ಅವರಿಗೆ ಬಾಂಬ್ ಹಾಕಿದ್ದೂ ಉಂಟು.
ಇದು ನನ್ನದೇ ಕಥೆ ರವೀಂದ್ರಜಿ ಎಂದವರು ನನ್ನ ಫೇಸ್ಬುಕ್ ಗೆಳತಿಯೊಬ್ಬರು. ಕಥೆಯ ಪ್ರತಿಕಂತನ್ನೂ ಬಿಡದೇ ಓದಿ ಇಲ್ಲಿ ನನ್ನದೇ ತುಮುಲಗಳಿವೆ , ಆ ಎರಡೂ ಪಾತ್ರಗಳು ನನ್ನ ಹತ್ತಿರವೇ ಇದೆ.ಎಂದವರು ಅವರು. ನಾನು ನಿಮ್ಮದೇ ಕಥೆಯನ್ನು ನಿಮ್ಮ ಶೈಲಿಯಲ್ಲಿ ಬರೆಯಿರಿ ಎಂದು ಹೇಳಿ ಅವರ ಕಥೆಗಾಗಿ ಕಾದಿದ್ದೇನೆ.
ಇದೆಲ್ಲದರ ಜೊತೆಗೆ ‘ಗುರು ಯಾರು ಗುರು ಅದು ಆಂಟಿ ಪಟಾಯ್ಸಿದ್ದೀಯಲ್ಲ..ಯಾರೋ ಮಾರಾಯ..’ ಎಂದು ಸಿಕ್ಕಾಗಲೆಲ್ಲಾ ಕಿಚಾಯಿಸಿದ ಗೆಳೆಯರು ಕಮ್ಮಿಯಲ್ಲ. ಅದೀಗ ನೂರಾ ಅರವತ್ತು ಪುಟಗಳ ಕಿರುಕಾದಂಬರಿ ರೂಪ ತಾಳುತ್ತಿದೆ. ಯಾವಾಗ ಬಿಡುಗಡೆಯಾಗುತ್ತದೆ ಮುಂತಾದವುಗಳು ನನಗೂ ಗೊತ್ತಿಲ್ಲ. ಈಗ ನನಗೆ ಬೇಕಾಗಿರುವುದು ಒಂದು ಶೀರ್ಷಿಕೆ. ಒಂದು ಆಪ್ತವಾದ ನವಿರಾದ ಚಂದನೆಯ ಶೀರ್ಷಿಕೆ ಬೇಕೇ ಬೇಕು.
ದಯಮಾಡಿ ಆ ತರಹದ ಶೀರ್ಷಿಕೆಯೊಂದನ್ನು ಕೊಡಿ ಎಂಬ ಕೋರಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.

Wednesday, October 2, 2013

ರೌಡಿಸಂ ನಡೆದು ಬಂದ ದಾರಿ..



ಓಂ ಚಿತ್ರ ಬರುವವರೆಗೂ ರೌಡಿ, ರೌಡಿಸಂ ಪರಿಕಲ್ಪನೆಗಳು ಕನ್ನಡದ ಸಿನೆಮಾಗಳಲ್ಲಿ ಬೇರೆಯದೇ ಇದ್ದವು. ರೌಡಿ ಏನಾದರೂ ಚಿತ್ರದ ನಾಯಕನಾಗಿದ್ದರೆ ಆತ ಒಳ್ಳೆಯವನಾಗಿರುತ್ತಿದ್ದ. ಅವನು ಕೇಡಿಗಳಿಗೆ ಮಾತ್ರ ಹೊಡೆಯುತ್ತಿದ್ದ. ಒಂದು ಪ್ರಭಾಕರ್ ಅಭಿನಯದ ಚಿತ್ರದಲ್ಲಿ ಇನ್ನಿತರ ಕೇಡಿಗಳನ್ನು ಹೊಡೆದ ನಮ್ಮ ರೌಡಿ ಪ್ರಭಾಕರ್ ತಾನೇ ಖುದ್ದಾಗಿ ಅವರನ್ನೆಲ್ಲಾ ಪೋಲಿಸ್ ಸ್ಟೇಷನ್ ಗೆ ಕರೆತಂದು ಲೇಡಿ ಇನ್ಸ್  ಪೆಕ್ಟರ್ ಗೆ ಒಪ್ಪಿಸಿ ಆಕೆಯ ಮನ ಗೆಲ್ಲುತ್ತಾರೆ. ಆಗ ಲೇಡಿ ಇನ್ಸ್ ಪೆಕ್ಟರ್ ಒಂದು ಬಿಂಕದ ದೃಷ್ಟಿ ಬೀರಿ ಆಮೇಲೆ ಹಾಡಿನ ಲೋಕಕ್ಕೆ ಹೋಗಿಬಿಡುತ್ತಾರೆ.
ಹಾಗೆ ಆವತ್ತಿನ ಸಿನಿಮಾಗಳಲ್ಲಿ ರೌಡಿಗಳನ್ನು ಗುರುತಿಸುವುದೂ ಸುಲಭವಾಗಿತ್ತು. ಖಡ್ಡಾಯವಾಗಿ ಹಣೆಗೊಂದು ಟೇಪ್ ಅಥವಾ ಹಗ್ಗ ಅಥವಾ ಕರವಸ್ತ್ರ. ಆಮೇಲೆ ಒಳಗೊಂದು ಕೆಂಪು ಬಣ್ಣದ ಟೀ ಶರ್ಟ್ ಮೇಲೆ ಜಾಕೀಟ್ ಅಥವಾ ಜರ್ಕಿನ್. ಇವಷ್ಟನ್ನು ರೌಡಿ ಹಾಕಲೆಬೇಕಾಗಿತ್ತು. ಆಮೇಲೆ ಈಗಿನ ತರಹದ ಡೀಲ್ ಗಳೆಲ್ಲಾ ಇರುತ್ತಿರಲಿಲ್ಲ. ಸಿನಿಮಾದ ಕೊನೆಯವರೆಗೂ ನಾಯಕನ ತಂದೆ ತಾಯಿ ಗೆ ಏನೋ ಕೆಡಕು ಮಾಡಿದ್ದ ಕೇಡಿಗೆ ಬುದ್ದಿ ಕಲಿಸುವುದೇ ಆತನ ಗುರಿಯಾಗಿತ್ತು.
ಹಾಗೆ ಒಬ್ಬ ಒಳ್ಳೆಯವನಾದ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದರೆ ಕೇಡಿ ಯಾವುದಾದರೊಂದು ಕಾರಣ ಹುಡುಕಿಕೊಂಡು ಬಂದು ಅಪ್ಪ ಅಮ್ಮನನ್ನು ಕೊಲೆ ಮಾಡಿದರೆ ಇಬ್ಬರು ಮಕ್ಕಳಲ್ಲಿ ಒಬ್ಬ ರೌಡಿ ಗ್ಯಾರಂಟಿ .. ಇನ್ನೊಬ್ಬ ನಟ ಯಾರು ಎಂಬುದರ ಮೇಲೆ ಮತ್ತೊಬ್ಬನ ಕೆಲಸವನ್ನು ನಾವು ಊಹೆ ಮಾಡಬಹುದಿತ್ತು. ಚಿತ್ರದಲ್ಲೆನಾದರೂ ದ್ವೀಪಾತ್ರವಿದ್ದರೆ ಮತ್ತೊಬ್ಬ ಪೋಲಿಸ್ ಆಗಿರುತ್ತಿದ್ದ.
ನೀವು ಬಂಗಾರದ ಕಳಸ ಚಿತ್ರವನ್ನೊಮ್ಮೆ ನೋಡಿ. ಅಲ್ಲಿ ನಾಯಕ ರೌಡಿ. ಯಾವುದೇ ಡೀಲ್ ಮಾಡುವುದಿಲ್ಲ. ಊರ ಜನ ಹೊತ್ತು ಹೊತ್ತಿಗೆ ಊಟ ಕಳಿಸಿಬಿಟ್ಟರೆ ಮುಗೀತು. ದೇವಸ್ಥಾನದಲ್ಲಿ ತನ್ನ ಪಾಡಿಗೆ ತಾನಿದ್ದು ಬಿಡುತ್ತಾನೆ. ಮಹಾಭಾರತದ ಬಕಾಸುರನನ್ನು ನೆನಪಿಸಿಕೊಳ್ಳಬಹುದು.. ಜೊತೆಗೆ ಆ ರೌಡಿ ಬುದ್ದಿವಾದ ಹೇಳುವ ‘ಆಹಾ ಅನ್ನೋ ಕೆಲಸ ಮಾಡದೆ ಕನ್ನಡ ನಾಡಲ್ಲಿ ಹುಟ್ಟಿದ ಮೇಲೆ..’ ಹಾಡನ್ನು ಹಾಡಿಕೊಂಡು ಕುಣಿಯುವುದು ವಿಪರ್ಯಾಸ ಎನಿಸಬಹುದು.
ಹಾಗಾದರೆ ರೌಡಿ ಇನ್ನೇನು ಕೆಲಸ ಮಾಡುತ್ತಿದ್ದ ಚಿತ್ರಗಳಲ್ಲಿ ಎಂಬ ಪ್ರಶ್ನೆ ಬಂದರೆ ಅದಕ್ಕೆ ಹಲವಾರು ಉತ್ತರಗಳಿವೆ. ಅವನು ಕೊಬ್ಬಿದ ಶ್ರೀಮಂತರ ಮನೆಯ ಹುಡುಗಿಗೆ ಬುದ್ದಿ ಕಲಿಸುತ್ತಿದ್ದ. ಅಮಾಯಕ ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸುತ್ತಿದ್ದ. ಯಥಾಪ್ರಕಾರ ಕೊನೆಯಲ್ಲಿ ದೊಡ್ಡ ಕೇಡಿಗೆ ಹೊಡೆದು ಹಣ್ಣು ಗಾಯಿ ನೀರು ಗಾಯಿ ಮಾಡುತ್ತಿದ್ದ.
ಇನ್ನು ಕೆಲವು ಚಿತ್ರಗಳಲ್ಲಿ ರೌಡಿ ಎಂದರೆ ಅವನು ಹೆಚ್ಚಾಗಿ ಮಾರುಕಟ್ಟೆಗೆ ಬಂದವನು ತರಕಾರಿ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುವವನು. ಅಥವಾ ಚೆಂದದ ಹುಡುಗಿಯರನ್ನು ರೇಗಿಸುವವನು. ಅವನ ಹಣೆಯ ಮೇಲೋ ಕೆನ್ನೆಯ ಮೇಲೋ ಒಂದು ಗಾಯದ ಗುರುತಂತೂ ಇದ್ದೇ ಇರುತ್ತಿತ್ತು. ಆದರೆ ಅದೇ ರೌಡಿ ನಾಯಕನಾಗಿದ್ದರೆ ಮಾರುಕಟ್ಟೆಯ ಜನರಿಗೆ ಹಿತರಕ್ಷಣೆ ನೀಡುವವನಾಗಿರುತ್ತಾನೆ.ಅವರನ್ನು ಕಾಯುತ್ತಾನೆ. ಅಲ್ಲಿಗೆ ಬಂದು ಕೊಬ್ಬು ತೋರಿಸುವ ಶ್ರೀಮಂತರ ಮನೆಯ ಕೊಬ್ಬಿದ ಹುಡುಗಿಗೆ ಬುದ್ದಿ ಕಲಿಸುತ್ತಾನೆ. ರಸ್ತೆಯಲ್ಲಿರುವ ಅಮಾಯಕರಿಗೆ ಊಟ ತಿಂಡಿ ಕೊಡಿಸುತ್ತಾನೆ..ಹೀಗೆ.
ಆದರೆ ಒಮ್ಮೆ ಓಂ ಬಂದಿತು ನೋಡಿ. ಇಡೀ ರೌಡಿಸಂ ಚಿತ್ರಣವೇ ಬದಲಾಗಿ ಹೋಯಿತು. ಅವನು ಹಿಡಿಯುವ ಆಯುಧವೂ ಬದಲಾಯಿತು. ಮಾರುದ್ದದ ಮಚ್ಚು ಲಾಂಗು ಹೆಸರಲ್ಲಿ ಬೆಳಕಿಗೆ ಬಂದುಬಿಟ್ಟಿತು. ಆಮೇಲೆ ಒಂದಷ್ಟು ದಿನ ಸಿನಿಮಾಗಳಲ್ಲಿ ಲಾಂಗುಗಳ ಝಳಪಂತೂ ಸಹಿಸಲಸಾಧ್ಯವಾಗಿತ್ತು.ವೇಶ ಭೂಷಣ , ನಡೆ ನುಡಿಗೆ ನೈಜತೆಯ ಸ್ಪರ್ಶ ಬಂದದ್ದು ಓಂ ಚಿತ್ರದಿಂದ.
ಈಗಲೂ ನನಗೆ ಆಶ್ಚರ್ಯವೆಂದರೆ ಎಲ್ಲಿಂದಾದರೂ ಬೆಂಗಳೂರಿಗೆ ಬಂದರೆ ಮೊದಲು ಆತ ಭೂಗತಲೋಕಕ್ಕೆ ಎಂಟ್ರಿ ಕೊಡುತ್ತಾನೆ. ಲಾಂಗು ಕೈಯಲ್ಲಿ ಹಿಡಿಯುತ್ತಾನೆ.ಹೌದಾ..?ನನಗೆ ಉತ್ತರ ಸಿಕ್ಕಿಲ್ಲ.
ಆದರೆ ಈವತ್ತಿಗೂ ಹೆಚ್ಚು ಗಮನ ಸೆಳೆಯುವುದು ಈ ಭೂಗತಜಗತ್ತಿನ ಚಿತ್ರಗಳೇ. ನಾಯಗನ್, ಓಂ, ಸತ್ಯ, ಸರ್ಕಾರ್, ಗಾಡ್ ಫಾದರ್, ಸ್ಕಾರ ಫೇಸ್ ಹೀಗೆ. ನನಗಂತೂ ಇಂತಹ ಚಿತ್ರಗಳು ಭರಪೂರ ಮನರಂಜನೆ  ನೀಡಿವೆ. ಒಂದು ಹಾಲಿನ ಕ್ಯಾನ್ ತರಹದ ಡಬ್ಬದಲ್ಲಿ ಹಣ ವಸೂಲಿ ಮಾಡಿಕೊಂಡು ಬರುವ ರೌಡಿ, ಹಣೆಗೆ ಕೆಂಪು ಟೀಪು ಕಟ್ಟಿಕೊಂಡ ಸ್ಟೀಲ್ ರಿಂಗುಗಳುಳ್ಳ ವಿಚಿತ್ರ ಜಾಕೆಟ್ ಧರಿಸಿಕೊಂಡ ರೌಡಿ, ಪರೋಪಕಾರಿ ರೌಡಿ, ಪೋಲಿಸ್ ರಿಗೆ ಸಹಾಯ ಮಾಡುವ ರೌಡಿ, ಕೊಲೆ ಮಾಡದ ರೌಡಿ, ದಂಧೆ ಮಾಡದ, ದಂಧೆ ಮಾಡುವವರನ್ನು ಸದೆಬಡಿಯುವ ರೌಡಿ,..ಹೀಗೆ ಎಂತೆಂಥ ರೌಡಿಗಳನ್ನು ನೋಡಿಬಿಟ್ಟಿದ್ದೇವೆ. ಆದರೂ ನನಗೆ ತಮಾಷೆ ಎನಿಸುವುದು ಚರಣ್ ರಾಜ್ ಅಭಿನಯದ ಚಿತ್ರವೊಂದಿದೆ. ಅದರ ಹೆಸರೇ ‘ರಿಯಲ್ ರೌಡಿ’ ರಿಯಲ್ ಹೀರೋ ಎಂದಾಗ ಅದಕ್ಕೆ ಸಮರ್ಥನೆ ಕೊಡಬಹುದು. ಹೀರೋ ಎಂಬ ಶಬ್ದಾರ್ಥವೆ ಸಿನಿಮೀಯ ಎನಿಸುವುದರಿಂದ ಮತ್ತು ಸಿನಿಮಾವೇ ಕಾಲ್ಪನಿಕ-ಪುನರ್ನಿರ್ಮಾನವಾದ್ದರಿಂದ ಅಲ್ಲಿ ರಿಯಲ್ ಸ್ಟಾರ್, ರಿಯಲ್ ಹೀರೋ, ರಿಯಲ್ ಸ್ಟೋರಿ, ರಿಯಲ್ ಸ್ಟಂಟ್ ಮುಂತಾದವುಗಳಿಗೆ ಸಮರ್ಥನೆ ಇದ್ದೆ ಇದೆ. ಆದರೆ ರಿಯಲ್ ರೌಡಿ ಎಂಬುದೇ ಸಿನಿಮಾದ ಶೀರ್ಷಿಕೆಯೇ ಆದ್ದರಿಂದ  ಆ ಹೆಸರಿಗೆ ಏನು ಸಮರ್ಥನೆ ಕೊಟ್ಟಿರಬಹುದು ನಿರ್ದೇಶಕ ಎಂದು ಅದೊಂದು ದಿನ ಆ ಚಿತ್ರವನ್ನು ನೋಡಿಯೇಬಿಟ್ಟೆ.
ರಿಯಲ್ ರೌಡಿ ಯಾರು ಎಂಬುದು ನನಗೆ ಸ್ಪಷ್ಟವಾಗಿ ಅರ್ಥವಾಯಿತು...ತಿಳಿದುಕೊಳ್ಳುವ ಆಸೆಯಿದ್ದರೆ ನೀವು ಒಮ್ಮೆ ನೋಡಬಹುದು..ನೋಡಿದ ಮೇಲೆ ನೀವು ಲಾಂಗ್ ಎತ್ತಿಕೊಂಡರೂ ಎತ್ತಿಕೊಳ್ಳಬಹುದೇನೋ?