Thursday, October 27, 2016

ಅಪ್ಪ ಅಂದರೆ ಏನೋ ಹರುಷವು...2

ನಮ್ಮ ಸಿನಿಮಾಕ್ಕೆ ಮಕ್ಕಳು ಬೇಕಾಗಿದ್ದಾರೆ ಎಂದಾಗ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದ ಎಲ್ಲಾ ಅಪ್ಪಂದಿರಲ್ಲಿ ನನ್ನಪ್ಪನ ಪ್ರತಿಬಿಂಬ ಕಾಣುತ್ತಿತ್ತು. ಮಕ್ಕಳು ಏನಾದರೂ ಮಾಡಿದರೆ ಅವರ ಖುಷಿ ಹೇಳತೀರದು.ನಮ್ಮದೇನು ಮುಗಿಯಿತಲ್ಲ, ಮಕ್ಕಳ ಭವಿಷ್ಯ ಸರಿಯಾದರೆ ಸಾಕು ಎನ್ನುವುದು ಎಲ್ಲಾ ಪ್ರತಿಯೊಬ್ಬ ಅಪ್ಪನ ಮನೋಭಾವ. ಕೆಲವು ವ್ಯತಿರಿಕ್ತ ಜನರೂ ಇರಬಹುದು. ಅದಿರಲಿ. ನಾನು ಓದುತ್ತಿದ್ದೆ. ಚೆನ್ನಾಗಿಯೇ. ಪಾಠಕ್ಕಿಂತ ಹೆಚ್ಚಾಗಿ ಕತೆ ಕಾದಂಬರಿ ಕವನಗಳನ್ನು. ನಮ್ಮಪ್ಪ ಮಾಸ್ತರರಾದ್ದರಿಂದ ಮನೆಯಲ್ಲಿ ಪುಸ್ತಕಗಳಿಗೆ ಕೊರತೆಯಿರಲಿಲ್ಲ. ಕೇವಲ ನಾಲ್ಕನೆಯ ತರಗತಿ ಓದಿದ ನನ್ನಮ್ಮ ತುಂಬಾ ಪುಸ್ತಕಗಳನ್ನು ಓದುತ್ತಿದ್ದರು. ಹಾಗಾಗಿ ನಾನು ಚಿಕ್ಕಂದಿನಲ್ಲಿಯೇ ಕಾದಂಬರಿ ಓದುವುದನ್ನು ರೂಢಿಸಿಕೊಂಡು ಬಿಟ್ಟಿದ್ದೆ. ನಾನು ಮೊದಲ ಕಾದಂಬರಿ ಓದಿದ್ದು ಅರ್ಪಣೆ ಎಂಬುದು. ಅದರ ಲೇಖಕರ ಹೆಸರು ನೆನಪಿಲ್ಲ. ಆದರೆ ಬರೀ ರೇಡಿಯೋ ಒಂದೇ ಮನರಂಜನೆಯ ಸಾಧನವಾಗಿದ್ದ ಆ ಸಮಯದಲ್ಲಿ ಪುಸ್ತಕಗಳು ಭರಪೂರ ಮನರಂಜನೆ ಒದಗಿಸುತ್ತಿದ್ದದ್ದು ಸತ್ಯ. ನನ್ನ ಐದನೆಯ ತರಗತಿಯಿಂದ ಆರನೆಯ ತರಗತಿ ವರೆಗಿನ ಒಂದು ವರ್ಷದ ಅವಧಿಯಲ್ಲಿ ನಾನು ಭೈರಪ್ಪನವರ ಹತ್ತಕ್ಕೂ ಹೆಚ್ಚು  ಕಾದಂಬರಿಗಳನ್ನು ಓದಿಬಿಟ್ಟಿದ್ದೆ. ಆನಂತರ ಕೈಗೆ ಸಿಕ್ಕ ಪುಸ್ತಕಗಳು, ಕಾದಂಬರಿಗಳು ಓದುತ್ತಿದ್ದೆ. ನಮ್ಮಪ್ಪ ಓದು ಓದು ಅದರಿಂದ ಮನಸ್ಸು ವಿಶಾಲವಾಗುತ್ತದೆ ಎನ್ನುತ್ತಿದ್ದರು.
ಆದರೆ ಓದುತ್ತಾ ಓದುತ್ತಾ ಬರೆಯುವ ಮನಸ್ಸಾಯಿತು. ಹಾಗಾಗಿ ಏಳನೆಯ ತರಗತಿಯಲ್ಲಿ ಮೊದಲ ಕತೆ ಬರೆದೆ. ಸಂಕೋಚದಲ್ಲಿಯೇ ನಮ್ಮಪ್ಪನಿಗೆ ತೋರಿಸಿದೆ. ನಮ್ಮಪ್ಪ ಅದೆಷ್ಟು ಖುಷಿ ಪಟ್ಟರೆಂದರೆ ಕುಣಿದಾಡಿಬಿಟ್ಟರು. ಅವರ ಓರಗೆಯ ಗೆಳೆಯರು ನಿನ್ನ ಮಗ ತರಗತಿಯ ಪುಸ್ತಕಗಳಿಗಿಂತ ಬೇರೆ ಪುಸ್ತಕಗಳನ್ನೇ ಓದುತ್ತಾನೆ, ಹೀಗಾದರೆ ಅವನು ಓದಿನಲ್ಲಿ ಹಿಂದುಳಿದು ಬಿಡುತ್ತಾನೆ ಎಂದರೆ, ರಿಸಲ್ಟ್ ಬರಲಿ ನೋಡೋಣ ಎಂದು ತುಂಬು ಭರವಸೆಯಿಂದ ಹೇಳುತ್ತಿದ್ದರು. ಅವರ ಭರವಸೆಯನ್ನು ನಾನು ಕೊನೆಯವರೆಗೂ ಉಳಿಸಿಕೊಂಡಿದ್ದೆ.
ನನ್ನ ಮೊದಲ ಕತೆ ದಿನಪತ್ರಿಕೆಯಲ್ಲಿ ಪ್ರಕಟವಾಯಿತು, ಅದು ನಮ್ಮ ಮನೆಗೆ ಅಂಚೆಯ ಮೂಲಕ ತಲುಪಿತು. ನಾನು ನನ್ನ ಕತೆಯನ್ನು ಪತ್ರಿಕೆಗೆ ಕಳುಹಿಸಿದ್ದನ್ನು ಹೇಳಿರಲಿಲ್ಲ. ದಿನಪತ್ರಿಕೆ ಅಂಚೆಯ ಮೂಲಕ ಮನೆಗೆ ಬಂದಾಗ ಎಲ್ಲರಿಗೂ ಆಶ್ಚರ್ಯ ಮತ್ತು ಗಾಬರಿ. ಅದರಲ್ಲಿದ್ದ ನನ್ನ ಕತೆ ನೋಡಿ, ನಮ್ಮಪ್ಪ ಅಕ್ಷರಶಃ ಕುಣಿದಾಡಿಬಿಟ್ಟರು. ತಮ್ಮ ಶಾಲೆಯ ಸಹೋದ್ಯೋಗಿಗಳಿಗೆ ತೋರಿಸಿ ಕತೆಯನ್ನು ಓದಿ ಹೇಳಿಯೇಬಿಟ್ಟರು. ಈ ವಯಸ್ಸಿಗೆ ನಿಮ್ಮ ಮಗನಿಗೆ ಇದೆಲ್ಲಾ ಹೇಗೆ ಬಂತು ಎನ್ನುವ ಮೆಚ್ಚುಗೆಯ ಮಾತುಗಳು ಅವರನ್ನು ಅಟ್ಟಕ್ಕೇರಿಸಿದ್ದವು. ಅದೊಂದು ಪತ್ರಿಕೆಯನ್ನು ಜತನದಿಂದ ತಮ್ಮ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದರು. ಮನೆಗೆ ನೆಂಟರು ಬಂದರೆ, ದಾರಿಯಲ್ಲಿ ಯಾರಾದರೂ ಸಿಕ್ಕರೆ, ಹೀಗೆ ಎಲ್ಲರಿಗೂ ಹೆಮ್ಮೆಯಿಂದ ಪತ್ರಿಕೆಯನ್ನು ತೋರಿಸುತ್ತಿದ್ದರು. ಕೇಳಿದವರಿಗೆ ಅದರ ಜೆರಾಕ್ಸ್ ತೆಗೆಸಿಕೊಟ್ಟಿದ್ದರು. ನಮ್ಮಪ್ಪನ ಸಂಭ್ರಮದ ಅತಿರೇಕಕ್ಕೆ ಅಮ್ಮ ಒಮ್ಮೆ ಸಾಕು ಬಿಡಿ, ಅದೇನು ಎಲ್ಲರಿಗೂ ತೋರಿಸಿಕೊಂಡು ಓಡಾಡ್ತೀರಿ ಎಂದದ್ದಕ್ಕೆ ಅಮ್ಮನಿಗೆ ರೇಗಿದ್ದರು.
ನಾನು ಕಾಲೇಜಿಗೆ ಮೈಸೂರಿಗೆ ಸೇರಿಕೊಂಡೆ. ಹಾಸ್ಟೆಲ್ಲಿನಲ್ಲಿ ಮಾಡುವುದಕ್ಕೆ ಕೆಲಸವಾದರೂ ಏನಿತ್ತು. ಕತೆ ಬರೆಯುತ್ತಾ ಹೋದೆ. ವಾರಕ್ಕೆ ಎರೆಡೆರಡು ಪತ್ರಿಕೆಯಲ್ಲಿ ನನ್ನ ಕತೆಗಳು ಪ್ರಕಟವಾಗತೊಡಗಿದವು. ತಿಂಗಳ ಕಥಾ ಸ್ಪರ್ಧೆಯಲ್ಲಿ ನನಗೆ ಬಹುಮಾನಗಳು ಬರತೊಡಗಿದವು. ಅನನ್ಯ, ರಾಬಿನ್ ವೆಂಶಿ, ನಾಗೇಂದ್ರಕುಮಾರ್ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಕತೆಗಳನ್ನು ಬರೆಯತೊಡಗಿದ್ದೆ. ಪ್ರತಿ ಭಾನುವಾರ ಒಂದಲ್ಲ ಒಂದು ಪತ್ರಿಕೆಯಲ್ಲಿ ನನ್ನ ಕತೆಗಳು ಪ್ರಕಟವಾದವು. ಕರ್ನಾಟಕದ ಬಹುತೇಕ ದಿನಪತ್ರಿಕೆ, ವಾರಪತ್ರಿಕೆಗ, ಮಾಸಿಕಗಳಲ್ಲಿ ನನ್ನ ಕತೆಗಳು ಪ್ರಕಟವಾದವು. ಆದರೆ ಅದ್ಯಾವುದನ್ನು ನಾನು ಮನೆಗೆ ತಿಳಿಸಲು ಹೋಗಲೇ ಇಲ್ಲ. ಅದನ್ನು ಸಂಗ್ರಹಿಸಿ ಒಂದು ಫೈಲ್ ಮಾಡಿ ಇಡತೊಡಗಿದ್ದೆ. ಗೆಳೆಯರು ಕೇಳಿದ್ದಕ್ಕೆ ನಮ್ಮಪ್ಪ ಬರೀ ಒಂದು ಕತೆ ಪ್ರಕಟವಾಗಿದ್ದಕ್ಕೆ ಆ ಪರಿ ಸಂಭ್ರಮ ಪಟ್ಟರು, ಈ ಸಾರಿ ರಜೆಗೆ ಮನೆಗೆ ಹೋದಾಗ ಈ ಬಂಡಲ್ ಇಡ್ತೇನೆ..ಆವಾಗ ಅಷ್ಟೇ..ಎನ್ನುತ್ತಿದ್ದೆ. ನನ್ನ ಉದ್ದೇಶವೂ ಅದೇ ಆಗಿತ್ತು..ಅಷ್ಟೂ ಪ್ರಕಟಿತ ಕತೆಯನ್ನು ಅವರ ಮುಂದಿಟ್ಟು ಅವರ ಖುಷಿಯನ್ನು ನೋಡುವುದಿತ್ತು..
ಆದರೆ ಬದುಕು ದಿಕ್ಕು ಬದಲಿಸಿತ್ತು. ಅದೊಂದು ದಿನ ಅಚಾನಕ್ ಆಗಿ ನಮ್ಮಣ್ಣ ಹಾಸ್ಟೆಲ್ಲಿಗೆ ಬಂದವನು ಅಪ್ಪನಿಗೆ ಹುಷಾರಿಲ್ಲ ಎಂದದ್ದಷ್ಟೇ, ಅದಾದ ಒಂದೇ ತಿಂಗಳಿಗೆ ಅಪ್ಪ ನಮ್ಮೊಂದಿಗಿರಲಿಲ್ಲ. ನಾನು ಅಪ್ಪನಿಗಾಗಿ ಬೇಡದ ಮೂರು ವರ್ಷಗಳ ಕಾಲೇಜ್ ವ್ಯಾಸಂಗವನ್ನು ಮಾಡಿದ್ದೆ, ಸಿನಿಮಾದ ಆಸೆಯನ್ನು ಅದುಮಿಟ್ಟುಕೊಂಡಿದ್ದೆ..
ಅದೊಂದು ದಿನ ಹಾಸ್ಟೆಲ್ನಿಂದ ತೆರವು ಮಾಡಿಕೊಂಡು ಮನೆಗೆ ಬಂದು ಕತೆಗಳ ಬಂಡಲನ್ನು ಅಮ್ಮನ ಮುಂದೆ ತೆರೆದಿಟ್ಟೆ. ನಿಮ್ಮಪ್ಪ ಇದ್ದಿದ್ರೆ ಇಷ್ಟೂ ಪ್ರಕಟಣೆ ನೋಡಿ ಅದೆಷ್ಟು ಖುಷಿ ಪಡುತ್ತಿದ್ದರೋ? ಎಂದು ಕಣ್ಣೀರಾದರು. ನಾನು ಬಂಡಲನ್ನು ಹಾಗೆಯೇ ಕಟ್ಟಿ ಅಟ್ಟಕ್ಕೆ ಬೀಸಾಕಿದೆ.
ಅದಾದ ನಂತರ ನಾನು ಹೊಸ ಕತೆಯನ್ನು ಬರೆದಿಲ್ಲ. ಬರೆದರೆ ಓದುವುದಕ್ಕೆ ಓದುಗರಿರಬಹುದು, ಆದರೆ ಸಂಭ್ರಮಿಸಲು ಅಪ್ಪ ಇಲ್ಲವಲ್ಲ...


Wednesday, October 19, 2016

ಅಪ್ಪ ಅಂದರೆ ಏನೋ ಹರುಷವು...

ನಮ್ಮ ಮನೆಯಿದ್ದದ್ದು  ಬಸ್ ಸ್ಟಾಪ್  ನಿಂದ  ಒಂದು  ಕಿಲೋಮೀಟರು ದೂರದಲ್ಲಿ. ಅದು ಟೀಚರ್ ಸ್ ಕ್ವಾರ್ಟರ್ಸ್ .  ನನ್ನ ಕಾಲೇಜು  ಐದಕ್ಕೆ  ಮುಗಿದರೂ  ಆರರಿಂದ ಎಂಟರವರೆಗೆ  ನಂಜನಗೂಡಿನ  ಗ್ರಂಥಾಲಯದಲ್ಲಿ  ಪುಸ್ತಕ ಸೋಸುವಿಕೆಯಲ್ಲಿ ತೊಡಗಿಸಿಕೊಂಡು  ಕೊನೆಯ  ಎಂಟೂವರೆ  ಬಸ್ಸಿಗೆ ಹತ್ತಿದರೆ  ಊರಿಗೆ ಬರುವಷ್ಟರಲ್ಲಿ ಒಂಭತ್ತೂವರೆಯಾಗುತ್ತಿತ್ತು. ನಮ್ಮೂರಲ್ಲಿ  ಬಸ್ ಸ್ಟಾಂಡ್ ಒಂದರಲ್ಲಿ ಬಿಟ್ಟರೆ ಬೇರೆಲ್ಲೂ  ಬೀದಿದೀಪ  ಇರಲಿಲ್ಲ.  ಹಾಗಾಗಿ  ಕತ್ತಲೆಯಲ್ಲಿಯೇ  ನಡೆದುಸಾಗಬೇಕು. ನನಗೂ  ಗ್ರಂಥಾಲಯದಲ್ಲಿ  ಕುಳಿತಾಗ, ಪುಸ್ತಕ  ಓದುವಾಗ, ಅಥವಾ ಸಿನಿಮಾ  ನೋಡುವಾಗ ಯಾವುದೇ  ಭಯ ಭಾವ ಕಾಡುತ್ತಿರಲಿಲ್ಲ.  ಆದರೆ  ಬಸ್ಸತಿದಾಕ್ಷಣ ಹೇಗಪ್ಪಾ  ಕತ್ತಲೆಯಲ್ಲಿ  ನಡೆದುಕೊಂಡು  ಸಾಗುವುದು ಎನ್ನುವ ಭಯ  ಕಾಡತೊಡಗುತ್ತಿತ್ತು. ಅದಕ್ಕೆ ಕಾರಣವೂ ಇಟ್ಟು. ನಮ್ಮೂರಲ್ಲಿ  ಆಕಸ್ಮಿಕವಾಗಿ ಸತ್ತವರಲ್ಲಿ ಅನೇಕರು ದೆವ್ವಗಳಾಗದೆ ಇರುತ್ತಿರಲಿಲ್ಲ. ಹಾಗಾಗಿ ಬೇಲಿಯ ಮರೆಯಲ್ಲಿ ಸದ್ದಾದರೂ  ಅದು ನಿಂಗಪ್ಪನದೋ ಜಲಜಕ್ಕನದೋ  ಪ್ರೇತ ಎನ್ನುವ ನಿರ್ಣಯಕ್ಕೆ ಬಂದುಬಿಡಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ನಾನು ಬಸ್ಸಿಳಿದ ತಕ್ಷಣ ನನ್ನ ಹೆಸರನ್ನು ಕೂಗುತ್ತಿದ್ದರು ನಮ್ಮಪ್ಪ. ನಾನು ಖುಷಿಯಾಗಿಬಿಡುತ್ತಿದ್ದೆ. ಕಾಲೇಜು  ನಾಲ್ಕು  ಘಂಟೆಗೆ ಬಿಡುತ್ತದೆ, ಎಲ್ಲರೂ  ಐದರ ಬಸ್ಸಿಗೆ ಬಂದಿಳಿದರೆ ನೀನ್ಯಾಕೆ ಇಷ್ಟು ಲೇಟು ಎಂದು ನಮ್ಮಪ್ಪ ಒಂದೂ  ದಿನಕ್ಕೂ ಕೇಳುತ್ತಿರಲಿಲ್ಲ. ಬದಲಿಗೆ, ಬಂದ್ಯಾ ಬಾ.. ಎಂದು  ಜೊತೆಯಲ್ಲಿ  ನಡೆಯುತ್ತಿದ್ದರು. ಇಬ್ಬರೂ ನನ್ನ ಕಾಲೇಜಿನದು, ಅವರ ಶಾಲೆಯದು ಅದೂ ಇದೂ  ಮಾತನಾಡುತ್ತಾ ಜೊತೆಯಾಗಿ ಸಾಗುತ್ತಿದ್ದೆವು.  ಆನಂತರ  ನಾನು ಮೈಸೂರಿನ  ಕಾಲೇಜಿಗೆ ಉನ್ನತ ವ್ಯಾಸಂಗಕ್ಕೆ ಸೇರಿಕೊಂಡೆ. ಹಾಸ್ಟೆಲ್ಲಿನಲ್ಲಿ  ಉಳಿದುಕೊಂಡೆ. ವಾರಕ್ಕೆ ಒಮ್ಮೆ ಊರಿಗೆ ಬರುತ್ತಿದೆ. ಯಥಾಪ್ರಕಾರ ನಾನು  ಬರುತ್ತಿದ್ದದ್ದೆ ಕೊನೆಯ  ಬಸ್ಸಿಗೆ. ಆವಾಗಿನ್ನೂ  ಮೊಬೈಲ್  ಬಂದಿರಲಿಲ್ಲವಲ್ಲ. ಆಮೇಲೆ ನಾನೀಗ ಹೆದರಿಕೊಳ್ಳುವಷ್ಟು ಚಿಕ್ಕವನು ಇರಲಿಲ್ಲ. ಆದರೂ  ಕೊನೆಯ  ಬಸ್ಸಿಳಿದಾಕ್ಷಣ ಅತ್ತಿತ್ತ  ನೋಡುತ್ತಿದ್ದಂತೆಯೇ ಅಪ್ಪ ನನ್ನ ಹೆಸರು  ಕೂಗುತ್ತಿದ್ದರು. ಯಥಾಪ್ರಕಾರ  ನಡೆದುಕೊಂಡು ಇಬ್ಬರೂ ನಮ್ಮ ನಮ್ಮ ವಿಷಯಗಳನ್ನು ಮಾತಾಡುತ್ತಾ ನಗುತ್ತಾ ದಾರಿ ಸವೆಸುತ್ತಿದ್ದೆವು. ಆದರೆ ನನಗೆ ಆಶ್ಚರ್ಯವಾಗುತ್ತಿದ್ದದ್ದು ನಾನು ಊರಿಗೆ ಬರುವ ಯಾವುದೇ ಮುನ್ಸೂಚನೆಯನ್ನೂ ಕೊಡುತ್ತಿರಲಿಲ್ಲ.  ಬರುಬರುತ್ತಾ ವಾರಕ್ಕೆ ಬದಲಿಗೆ ಹದಿನೈದು ದಿನಕ್ಕೊಮ್ಮೆ, ಪ್ರತಿ ಶನಿವಾರ ಬದಲಿಗೆ ಸಮಯ ಸಿಕ್ಕಾಗ ಮನಸ್ಸು ಬಂದಾಗ ಊರಿಗೆ ಬರುತ್ತಿದ್ದೆ. ನಾನು ಊರಿಗೆ ಬರುವ ದಿನಗಳು ಬದಲಾದರೂ ಸಮಯದಲ್ಲಿ ಮಾತ್ರ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಹಾಗೆಯೇ ಬಸ್ಸಿಳಿದ ತಕ್ಷಣ ನನ್ನ ಹೆಸರು ಕೂಗುವ ಅಪ್ಪನೂ  ಬದಲಾಗಿರಲಿಲ್ಲ. ಒಂದೂ ಸಲವೂ ಮಿಸ್ಸಾಗದಂತೆ ಬಸ್ ನಿಲ್ದಾಣಕ್ಕೆ ಬಂದು ನಿಲ್ಲುತ್ತಿದ್ದರು ನಮ್ಮಪ್ಪ. ನಾನು ಹಾಸ್ಟೆಲಿನಲ್ಲಿ ಇದ್ದಾಗಲೂ ಅವರು ಪ್ರತಿದಿನ ಬಸ್ ಸ್ಟಾಂಡ್ ಗೆ  ಬಂದು  ನಿಲ್ಲುತ್ತಿದ್ದರು. ಕೊನೆಯ ಬಸ್ಸು ಬಂದು, ನಿಂತು ಜನರನ್ನು ಇಳಿಸಿದಾಗ ನಾನು ಕಾಣಿಸದಿದ್ದಾಗ ಓ..ಈವತ್ತು  ಬಂದಿಲ್ಲ  ಎಂದುಕೊಂಡು ಮನೆಗೆ ಹೊರಡುತ್ತಿದ್ದರು. ಇದನ್ನವರು ಅವರ ಕೊನೆಯ ಉಸಿರಿರುವವರೆಗೂ  ಮಾಡಿದ್ದರು. ಆದರೆ ಈ ಯಾವ ಸೂಕ್ಷ್ಮವೂ ನನಗೆ ಗೊತ್ತಾಗದೆ ನಾನು ಇಷ್ಟ ಬಂದಾಗ ಬರುತ್ತಿದ್ದೆ, ಅವರು ಕಂಡಾಗ ಖುಷಿಯಾಗುತ್ತಿದ್ದೆ. ಆದರೆ ಅವರು ಪ್ರತಿದಿನವೂ ನಾನು ಬಂದರೂ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದರಲ್ಲ.. ಅದಕ್ಕೆ ಏನು ಹೇಳುವುದು..?
ನನಗೆ ಅಪ್ಪ ಯಾವತ್ತಿಗೂ ಮಾದರಿ. ಇಷ್ಟು ವರ್ಷಗಳಲ್ಲಿ ನಾನು ಅಪ್ಪನನ್ನು ಮಿಸ್ ಮಾಡಿಕೊಳ್ಳದ ಕ್ಷಣಗಳಿಲ್ಲ. ಪ್ರತಿದಿನ ಪ್ರತಿಕ್ಷಣ ನನ್ನ ಕಣ್ಮುಂದೆ ಬರುವುದು ನನ್ನಪ್ಪ. ಹಾಗಾಗಿ ಅಪ್ಪನ ಲಾಲಿ  ಚಿತ್ರ ನೋಡಿದಾಗ ನಿಜಕ್ಕೂ ಕನಲಿಹೋಗಿದ್ದೆ. ಆದರೆ ಅದಕ್ಕೂ ಮೀರಿ ಕಣ್ಣೀರಾಗಿದ್ದು ಲೈಫ್ ಈಸ್  ಬ್ಯೂಟಿಫುಲ್ ಸಿನೆಮಾವನ್ನು ನೋಡಿದಾಗ. ಆ ಸಿನೆಮಾವನ್ನು ಅದೆಷ್ಟು ಸಾರಿ ನೋಡಿದನೆಂದರೆ ಲೆಕ್ಕವಿಲ್ಲ.. ನೋಡುತ್ತಾ ನೋಡುತ್ತಾ ಅಪ್ಪ ನೆನಪಿಗೆ ಬರುತ್ತಿದ್ದರು, ತಮ್ಮ ಇತಿಮಿತಿಯಲ್ಲಿಯೇ ನಮಗೆ ಒಂದು ಚೂರು ಕೊರತೆಯಾಗದ ಹಾಗೆ ಬೆಳೆಸಿದರಲ್ಲ..ಅದು ನೆನೆಪಿಸಿಕೊಂಡು  ಕಣ್ಣೀರಾಗಿದ್ದೇನೆ. ಅಂತಹ ಸಂದರ್ಭದಲ್ಲಿ ಕೋರಿಯನ್ ಭಾಷೆಯ ಮಿರಾಕಲ್ ಇನ್ ಸೆಲ್ ನಂಬರ್ ಸೆವೆನ್ ಚಿತ್ರ ನೋಡಿದೆ. ಅದರದೇ ರೀತಿಯ ಸಿನಿಮಾಗಳನ್ನು ಈ ಹಿಂದೆ ನೋಡಿದ್ದೇ. ಅಜಯ ದೇವಗನ್ ಅಭಿನಯದ ಮೈ ಐಸಾ ಹೀ ಹೂ, ಐ  ಅಂ ಸ್ಯಾಮ್, ಟುಗೆದರ್, ದೈವ ತಿರುಮಗನ್  ಹೀಗೆ. ಆದರೆ ಮಿರಾಕಲ್  ಮಾತ್ರ ನನ್ನನ್ನು  ಕಾಡಿಬಿಟ್ಟಿತ್ತು. ಲೈಫೇ ಈಸ್  ಬ್ಯೂಟಿಫುಲ್ ಚಿತ್ರ  ನೋಡಿ, ನನ್ನದೇ ನನ್ನ ತಂದೆಯದೇ ಒಂದಷ್ಟು ಅಂಶಗಳನ್ನು ಸೇರಿಸಿ ಸಿನಿಮಾ ಕತೆ ಮಾಡಿದ್ದವನಿಗೆ ಮಿರಾಕಲ್  ಚಿತ್ರ ಮತ್ತಷ್ಟು ಅಂಶಗಳನ್ನು ದೊರಕಿಸಿಕೊಟ್ಟಿತು. ಅದೇ ಸಂದರ್ಭದಲ್ಲಿ ಗೆಳೆಯನೊಬ್ಬ ಈ ಚಿತ್ರವನ್ನು ಕನ್ನಡೀಕರಿಸಿದರೆ  ಹೇಗೆ ಎನ್ನುವ ಪ್ರಶ್ನೆಯನ್ನು ಎತ್ತಿಬಿಟ್ಟಿದ್ದ. ಕನ್ನಡೀಕರಿಸುವುದು ಸುಲಭದ ಕೆಲಸವಲ್ಲ. ರಿಮೇಕ್ ಮಾಡುವುದು ಸುಲಭ. ಏಕೆಂದರೆ ಅಲ್ಲಿಯ ಪಾತ್ರಗಳನ್ನೂ, ದೃಶ್ಯಗಳನ್ನು ಯಥಾವತ್ತು ಇಳಿಸಿಬಿಟ್ಟರೆ  ಮುಗಿಯಿತು. ಆದರೆ ಅದಕ್ಕೆ ನಮ್ಮದೇ ಸೊಗಡು ತುಂಬುವ ಕೆಲಸವಿದೆಯಲ್ಲ ಅದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ನೋಡಿದ ಸಿನಿಮಾ  ಮರೆತು ಕತೆ ಮಾಡುತ್ತಾ ಸಾಗಬೇಕು. ಅಲ್ಲಿನ ದೃಶ್ಯದ ಹೋಲಿಕೆ ಸಿಕ್ಕಿತು ಎನಿಸಿದರೆ ತಕ್ಷಣ ಬದಲಿಸಬೇಕು. ಹಾಗಾಗಿ ಅನಾಮತ್ತು ಮೂರು ವರ್ಷಗಳು ಅದಕ್ಕಾಗಿ ತೆಗೆದುಕೊಂಡೆ. ಮೂರುವರ್ಷಗಳಲ್ಲಿ  ಪಾತ್ರದ ಹಿನ್ನೆಲೆ ವ್ಯಕ್ತಿತ್ವ ಬದಲಿಸಿದೆ. ಈಗಾಗಲೇ ಮಾನಸಿಕ ಕುಬ್ಜನ  ಪಾತ್ರಗಳನ್ನೂ ವಿಕ್ರಂ ಮುಂತಾದವರು  ಮಾಡಿದ್ದರಿಂದ ಮತ್ತು ಒಬ್ಬ ಆಟಿಸ್ತಿಕ್ ಅಪ್ಪನಿಗಿಂತ ಸಾಮಾನ್ಯ ಅಪ್ಪನ ಬವಣೆಗಳನ್ನು ಲವಲವಿಕೆಯ ಜೊತೆಗೆ ಕತೆ ಹೇಳುವ ನಿರೂಪಣೆ  ಆಯ್ದುಕೊಂಡೆ. ಎಲ್ಲವೂ ಮುಗಿಯಿತು. ನನ್ನ ಅಸಂಖ್ಯಾತ ಕೆಲಸಗಳ ನಡುವೆ ಯಾವುದೇ ನಿರ್ಮಾಪಕರು ಇಲ್ಲದೆ ಇದ್ದಾಗಲೂ ಇಡೀ ಸ್ಕ್ರಿಪ್ಟ್ ಬರೆದು ಮುಗಿಸಲು ಮೂರು  ವರ್ಷಗಳು ತೆಗೆದುಕೊಂಡಿತ್ತು. ಕತೆಯಾಯಿತು.. ಮುಂದೇನು ಎನ್ನುವ ಪ್ರಶ್ನೆ..? ಕತೆ ಹೇಳಬೇಕು, ನಿರ್ಮಾಪಕರಿಗೆ, ಕಲಾವಿದರಿಗೆ...ನನ್ನ ಕತೆಗೆ ಸೂಕ್ತ ಪಾತ್ರಧಾರಿ ಕಮಲ್ ಹಾಸನ್ ಎನಿಸಿತು. ಆದರೆ ಅವರನ್ನು ರೀಚ್ ಮಾಡುವುದು ಕಷ್ಟ ಎನಿಸಿತು, ಅಲ್ಲಿಂದ ಮೋಹನ್ ಲಾಲ್, ಪ್ರಕಾಶ್ ರಾಜ್... ಹೀಗೆ ಕೊನೆಗೆ ಪಾತ್ರಧಾರಿ ಪ್ರಕಾಶ್ ರಾಜ್ ಆದರೆ ಸೂಪರ್ ಎನಿಸಿತು. ಸೀದಾ ಎದ್ದವನೇ ಬಿ.ಸುರೇಶ ಅವರಿಗೆ ಕತೆ ಹೇಳಿದೆ, ಕಂಪ್ಲೀಟ್ ಬೌಂಡ್ ಸ್ಕ್ರಿಪ್ಟ್ ಕೊಟ್ಟೆ. ಅದನ್ನು ಅಷ್ಟೇ ಸಾವಧಾನವಾಗಿ ಸಮಯ ತೆಗೆದುಕೊಂಡು ಓದಿದ ಬಿ.ಸುರೇಶ ಒಂದಷ್ಟು ಬದಲಾವಣೆ ಸೂಚಿಸಿದರು. ಆನಂತರ ಅದೇ ಕತೆಯನ್ನು ಯೋಗರಾಜ್ ಭಟ್ ಅವರ ಮುಂದೆ ಇರಿಸಿದೆ. ಶಿವಣ್ಣ ಅವರಿಗೆ ಮಾಡಿದರೆ ಹೇಗೆ ಎಂದರು. ಅಷ್ಟರಲ್ಲಾಗಲೇ ದಿಕ್ಕು  ಬದಲಾಗಿತ್ತು. ಕೊನೆಗೆ ರಮೇಶ್ ಅರವಿಂದ್ ಅವರಿಗೆ ಕತೆ ಹೇಳೋಣ ಎಂದುಕೊಂಡೆ. ಫೋನ್ ಮಾಡಿದೆ. ಆದರೆ ಫೋನ್ ಸಿಗಲಿಲ್ಲ. ಅವರಿಗೆ ಇಮೇಲ್ ಮೂಲಕ ಸಂಪೂರ್ಣ ಸ್ಕ್ರಿಪ್ಟ್ ಕಳುಹಿಸಿಕೊಟ್ಟೆ. ಆದರೆ ನನಗೆ ಗೊತ್ತಿಲ್ಲದ ವಿಷಯವೇನೆಂದರೆ ಅಷ್ಟರಲ್ಲಾಗಲೇ ಮಿರಾಕಲ್ ಚಿತ್ರದ ರಿಮೇಕ್ ಕನ್ನಡದಲ್ಲಿ ಆಗುತ್ತಿತ್ತು.
ಈಗ ತಿಳಿದುಬಂದ ವಿಷಯವೆಂದರೆ ಮೂಲಚಿತ್ರದ ಅಧಿಕೃತ ರಿಮೇಕ್ ಹಕ್ಕನ್ನು ಮತ್ಯಾರೋ ತಂದಿದ್ದಾರಂತೆ. ಆದರೆ ನಾನು ಸೃಜಿಸಿದ ಕತೆಯಲ್ಲಿ ಮಿರಾಕಲ್  ಚಿತ್ರದ ಕೆಲವು  ಅಂಶವಿತ್ತಾದರೂ ವಿಷಯಗೊತ್ತಾದಾಗ ಆ ಭಾಗವನ್ನು ಪುನರ್ರಚಿಸಿದೆ. ಪ್ರಸ್ತುತ ಪುಟಾಣಿ ಸಫಾರಿ ಚಿತ್ರದ ಪೋಸ್ಟ್ ಪ್ರೊಡಕ್ಷನ್  ನಡೆಯುತ್ತಿದೆ.

Saturday, August 27, 2016

ಸಫಾರಿ ಶೂಟಿಂಗ್...

ಸ್ಟಾರ್ ಗಳನ್ನಿಟ್ಟುಕೊಂಡು  ಸಿನಿಮಾ  ಮಾಡುವುದು ಕಷ್ಟ ಎಂಬುವುದು ನಮ್ಮ ಚಿತ್ರರಂಗದಲ್ಲಿ ಸಾಮಾನ್ಯವಾದ ಮಾತು. ಅದರಲ್ಲಿ ಸತ್ಯವೂ ಇದೆ, ಸುಳ್ಳೂ ಇದೆ. ಏಕೆಂದರೆ ಒಬ್ಬ ಸ್ಟಾರ್ ತನ್ನ ಅಭಿಮಾನಿಗಳು, ಅವರ ನಿರೀಕ್ಷೆ  ಮುಂತಾದವುಗಳನ್ನು ಅಂದಾಜು ಮಾಡಿಕೊಂಡೆ ಕತೆ ಕೇಳುತ್ತಾನೆ. ಮತ್ತು  ಕತೆ ಆ ಇಮೇಜ್ ಗೆ ತಕ್ಕಂತಿರಲಿ ಎನ್ನುತ್ತಾನೆ. ಇದು ತಪ್ಪಲ್ಲ. ಏಕೆಂದರೆ ದರ್ಶನ್ ನಂತಹ ಮಾಸ್ , ಚಾಲೆಂಜಿಂಗ್ ಸ್ಟಾರ್ ಮನೆಯೇ ಮಂತ್ರಾಲಯದಂತಹ  ಸಿನಿಮಾದಲ್ಲಿ ಮಾಡಿದರೆ ನನಗೆ ನೋಡಲು  ಇಷ್ಟವಾಗುವುದಿಲ್ಲ. ಹಾಗೆಯೇ ಶರಣ್ ಸಿಂಘಂ ಚಿತ್ರದಲ್ಲಿ ಅಭಿನಯಿಸಿದರೆ ನೋಡುವುದಕ್ಕೆ ತಮಾಷೆಯಾಗಿರುತ್ತದೆ. ಹಾಗಂತ ಇಮೇಜ್ ಗೆ ಕಟ್ಟು ಬಿದ್ದರೆ ಸ್ಟಾರ್ ಒಳಗಿನ ಕಲಾವಿದನನ್ನು ಕೊಂದುಹಾಕಿದಂತಲ್ಲವೇ..? ಅದೂ ನಿಜವೇ. ಆದರೆ ಸ್ಟಾರ್ ಇಮೇಜ್ ಮತ್ತು ಅದಕ್ಕೆ ತಕ್ಕುದಾದ ಕತೆ-ಚಿತ್ರಕತೆಯಲ್ಲಿ ಯಶಸ್ಸಿದೆ. ಅಥವಾ ಪ್ರಯೋಗಕ್ಕೂ ಗೆಲುವಿದೆ. ಆದರೆ ಅವರನ್ನು ಸಂಬಾಲಿಸುವುದು ಕಷ್ಟದ ಕೆಲಸವೇ. ನಮ್ಮ ಚಿತ್ರ ಪುಟಾಣಿ ಸಫಾರಿಯಲ್ಲಿ ಯಾವುದೇ ಸ್ಟಾರ್ ಇಲ್ಲ. ಆದರೆ ಮಕ್ಕಳನ್ನು ತಾರಾಬಳಗದಲ್ಲಿಟ್ಟುಕೊಂಡು ಸಿನಿಮಾ  ಮಾಡುವುದು ಸುಲಭದ ಕೆಲಸವಲ್ಲ. ತೀರಾ ಗದರಿದರೆ ಮುಖ ಕೆಡಿಸಿಕೊಳ್ಳುತ್ತವೆ. ಇಲ್ಲ  ಅಳುತ್ತವೆ. ಆವಾಗ ಯಾವ ಬ್ರಹ್ಮ ಬಂದರೂ ಅವರಿಂದ ಅಭಿನಯ ಹೊರಗೆ ತೆಗೆಯುವುದು ಕಷ್ಟ. ಹಾಗೆಯೇ ಅವರನ್ನು ತೀರಾ ಬಳಲುವ ಹಾಗೆ ಕೆಲಸ ತೆಗಿಸಲು ಸಾಧ್ಯವಿಲ್ಲ. ಸ್ವಲ್ಪ ವಾತಾವರಣ  ಏರುಪೇರಾದರೂ ಶೀತ ಜ್ವರದಂತಹವು ಅಮರಿಕೊಳ್ಳುತ್ತವೆ. ಇವೆಲ್ಲವನ್ನೂ ನಿವಾರಿಸಿಕೊಂಡು ಸಿನಿಮಾ  ತೆಗೆಯುವುದು ಸ್ಟಾರ್  ಗಳನ್ನ ನಿಭಾಯಿಸುವುದಕ್ಕಿಂತ ಕಷ್ಟದ್ದಾಗುತ್ತವೆ. 
ಅದರ ಜೊತೆಗೆ ಇರಲಿ ಎಂಬಂತೆ ಮತ್ತೊಂದು ಕಷ್ಟವನ್ನು ತಲೆಯ ಮೇಲೆ  ಎಳೆದುಕೊಂಡಿದ್ದೇನೆ. ನಾನು ಅಯ್ತುಕೊಂಡಿರುವುದು ಕಾಡಿನಲ್ಲಿ ನಡೆಯುವ ಕತೆ. ಸಫಾರಿ ಎಂದ ಮೇಲೆ ಪ್ರಾಣಿಗಳಿರಲೇ ಬೇಕಲ್ಲವೇ? ಈ ಪ್ರಾಣಿಗಳಿಗೆ  ಯಾವ ಸ್ಟಾರ್  ಕೂಡ  ಸರಿಗಟ್ಟಲಾರರು. ಮೊನ್ನೆ  ಒಂದಷ್ಟು  ಶೂಟ್  ಮಾಡಿಕೊಂಡು  ಬಂದುಬಿಡೋಣ ಎಂದು ನಮ್ಮ ತಂಡ ಹೊರಟೆವು ನೋಡಿ. ಅದರ ಕಷ್ಟಗಳನ್ನು  ಹೇಳುವುದಾದರೂ ಹೇಗೆ. ಈ ಅರಣ್ಯಜೀವಿ ಚಿತ್ರೀಕರಣ ಬಜೆಟ್, ಸಮಯ ಮತ್ತು ಸಾವಧಾನವನ್ನು ಬೇಡುತ್ತವೆ. ಯಾವುದಾದರೂ ಒಂದು  ಮಿಸ್  ಆದರೂ ಅಲ್ಲಿಗೆ ಆವತ್ತಿನ ಚಿತ್ರೀಕರಣ ಮುಗಿದಂತೆ. ಒಂದೇ ಉದಾಹರಣೆ  ಹೇಳುತ್ತೇನೆ ಕೇಳಿ. ಅದೊಂದು ಜಾಗದಲ್ಲಿ ಹಿಂಡುಹಿಂಡಾಗಿ ಆನೆಗಳು  ಬರುತ್ತವೆ ಎಂಬುದನ್ನು ಗೆಳೆಯ ಚಂದ್ರಶೇಖರ್  ಹೇಳಿದಾಗ ನಾವು ಅಲ್ಲಿಗೆ ಹೊರಟುನಿಂತಿದ್ದೆವು. ಅವುಗಳು  ಬರುವುದು ಸಂಜೆ ನಾಲ್ಕರ ಹೊತ್ತಿಗೆ. ಹಾಗಂತ ಬರಲೇಬೇಕು ಎಂಬುದಿಲ್ಲ. ಬಂದರೆ  ಬರಬಹುದು, ಇಲ್ಲವೆಂದರೆ ಇಲ್ಲ. ಇಷ್ಟಕ್ಕೂ  ಚಿತ್ರೀಕರಣ ಎಂದಾಗ  ಮೇಕಪ್  ಮತ್ತಿಕೊಂಡು ಓಡಿಬಂದು ಪೋಸು ಕೊಡಲಿಕ್ಕೆ ಅವೇನು  ನಾವೇ..? ಅವುಗಳಿಗೆ ಹಣ, ಸ್ಟಾರ್ ಗಿರಿ, ಬಿಲ್ಡ್ ಅಪ್ ಮುಂತಾದ  ಆಮಿಷ ತೋರಿಸಿ  ಕರೆಸಲಾದೀತೇ.. ಮದ್ಯಾಹ್ನ  ಎರಡು ಘಂಟೆಗೆ  ನಿಗದಿತ ಜಾಗಕ್ಕೆ ಹೋಗಿ  ಕುಳಿತುಕೊಂಡೆವು, ಅಷ್ಟೇ.. ನಾಲ್ಕೂವರೆ  ಅಷ್ಟೊತ್ತಿಗೆ ಬಂದದ್ದು ಆನೆಗಳ  ಹಿಂಡು, ಸುಮಾರು  ಏಳು  ಅನೆಗಳಿದ್ದವು.. ಅದಕ್ಕೂ ಮುನ್ನ  ನವಿಲು, ಜಿಂಕೆ, ನರಿಗಳು, ಕಾಡುನಾಯಿಗಳು ನಮ್ಮನ್ನು ಭೇಟಿ  ಮಾಡಿಹೋಗಿದ್ದವು. ಬಂದದ್ದು ನಿಂತದ್ದು  ಕೇವಲ  ಹದಿನೈದು  ನಿಮಿಷಗಳು.. ಅಷ್ಟೇ. ಆಮೇಲೆ ಕಾಡೊಳಗೆ ಓಡಿಹೋದವು. ಆನಂತರ  ಕತ್ತಲಾಗುವವರಗೂ  ಕಾಯ್ದು  ಬಂದದ್ದಾಯಿತು. ಇದು  ಒಂದು  ದಿನದ ಕತೆ. ಆದರೆ  ನಮ್ಮ  ಸಫಾರಿ  ಚಿತ್ರೀಕರಣ  ಅಷ್ಟೂ  ದಿನಗಳಲ್ಲಿ  ಚಿತ್ರೀಕರಿಸಿದ್ದಕ್ಕಿಂತ  ಕಾಯ್ದದ್ದೆ ಹೆಚ್ಚು. ಅದರಲ್ಲೂ  ಸಾಕು ಆನೆಯಾದರೆ  ಭಯವಿಲ್ಲ. ಆದರೆ ಕಾಡಾನೆಗಳನ್ನೂ  ನಂಬುವುದಾದರೂ  ಹೇಗೆ. ನಾವು  ಅವಿತುಕುಳಿತ  ಪೊದೆಯೊಳಗೆ ಪಕ್ಕದಲ್ಲಿಯೇ  ಹಾವಿದ್ದರೆ..? ಎಂಬಿತ್ಯಾದಿ  ಭಯಗಳು ನಮ್ಮನ್ನು  ಮತ್ತಷ್ಟೂ  ನಡುಗುವಂತೆ ಮಾಡುತ್ತಿದ್ದದ್ದು ಸತ್ಯ. ನಮ್ಮ ಸಿನಿಮಾದಲ್ಲಿ ಒಟ್ಟಾರೆ ನಿಮಿಷಗಟ್ಟಲೆ ಬರುವ ಚಿತ್ರಣಕ್ಕೆ ದಿನಗಟ್ಟಲೆ ಕ್ಯಾಮೆರಾ ಹಿಡಿದಿದ್ದೇವೆ. ವಾರಗಟ್ಟಲೆ  ಕಾದಿದ್ದೇವೆ. ನೂರಾರು  ಕಿಲೋಮೀಟರು ಹಾದಿ  ಸವೆಸಿದ್ದೇವೆ.
ನೀವು ಇದೆ ರಸ್ತೆಯಲ್ಲಿ ಓಡಾಡಿದರೆ  ಕಾಡು ಪ್ರಾಣಿಗಳು  ರಸ್ತೆಗೆ ಬರುತ್ತವೆ  ಎಂದು ಸ್ಥಳೀಕರು ಹೇಳಿದಾಗ ಕ್ಯಾಮೆರಾ ಸಿದ್ಧಪಡಿಸಿಕೊಂಡು ರಸ್ತೆಯಲ್ಲಿ  ಅಡ್ಡಾಡುತ್ತಿದ್ದೆವು. ಎದುರಿಗೆ ಆನೆಗಳು ಎದುರಾಗಬೇಕೆ.? ನಮ್ಮ ಕ್ಯಾಮರಾಮನ್ ಜೀವನ ಕ್ಯಾಮೆರಾ ಸಿದ್ಧಪಡಿಸಿಕೊಂಡು ಅದರ ಹಿಂದಿಂದೆ  ಹೋಗುತ್ತಾ ಚಿತ್ರೀಕರಿಸಿದರು. ಆದರೆ  ಅಷ್ಟರಲ್ಲಿ ಅದ್ಯಾರೋ ಒಬ್ಬ ನಮ್ಮನ್ನು ಓವರ್  ಟೇಕ್  ಮಾಡಿ  ಮುಂದೆ  ನುಗ್ಗಿ ಬಿಡಬೇಕೇ.. ಹಾಗೆ  ಭರ್ರೆಂದು ಸಾಗಿ ಹೋದವನು, ಆನೆ ಕಂಡು ಅಷ್ಟೇ ರಭಸದಲ್ಲಿ ಬ್ರೇಕ್ ತುಳಿದಿದ್ದಾನೆ. ಆನೆಗಳು ಸ್ವಲ್ಪ  ವಿಚಲಿತರಾದಂತೆ ಕಂಡು  ಬಂದವು. ತನ್ನ ಸೊಂಡಿಲನ್ನು ಮೇಲೆತ್ತಿ  ಒಮ್ಮೆ ಗುಟುರು  ಹಾಕಿದ ಆನೆ, ನಿಧಾನಕ್ಕೆ  ನಡೆಯುತ್ತಾ  ರಿವರ್ಸ್  ತೆಗೆಯಲಾಗದ  ಆ ವಾಹನದತ್ತ  ಬಂದು ಬಿಟ್ಟಿತು.  ಚಾಲಕ  ನಡುಗಿ ಹೋಗಿರಬೇಕು. ಇತ್ತ ಕಡೆ ಬಾಗಿಲಿನಿಂದ ಮಹಿಳೆಯೊಬ್ಬಳು ಹೆದರಿಕೆಯಿಂದ ಬಾಗಿಲು ತೆರೆದು ಇಳಿಯಲು ಪ್ರಾರಂಭಿಸಿದಳು. ಕೇವಲ  ಮೂವತ್ತು  ಅಡಿ ದೂರವಿದ್ದ  ನಾವು ಹಿಂದೆಯೂ  ಹೋಗಲಾಗದೆ, ಮುಂದೆಯೂ  ಹೋಗಲಾಗದೆ ಭಯದಿಂದ ಹಾಗೆಯೇ ನಿಂತುಬಿಟ್ಟಿದ್ದೆವು. ಈಗಾಗಲೇ ವಾಟ್ ಸ್ ಅಪ್ ನಲ್ಲಿ ನೋಡಿದ್ದ  ಆನೆಯ ದೃಶ್ಯವೊಂದು ಕಣ್ಣಿಗೆ ಛಾಪಿಸಿ ನಮ್ಮನ್ನು ಮತ್ತಷ್ಟು ಅಧೀರನನ್ನಾಗಿ ಮಾಡಿಬಿಟ್ಟಿತ್ತು. ಅಕಸ್ಮಾತ್ ಆನೆ ಏನಾದರೂ ವಾಹನವನ್ನು ತಳ್ಳಿ, ಆನಂತರ ನುಗ್ಗಿದರೆ ನಾವು ಗೂಡೊಳಗೆ ಬಂದಿಯಾದ ಹಕ್ಕಿಗಳಂತೆ ಹೊರಬರಲಾರದೆ ನಜ್ಜು ಗುಜ್ಜಾಗುವ ಸಾಧ್ಯತೆ ಇದೆ.  ಆದರೆ ಅದೇನು ಅದೃಷ್ಟವೋ ಏನೋ.. ಒಮ್ಮೆ ತನ್ನ ಸೊಂಡಿಲನ್ನು ಆ ವಾಹನದ ಕಿಟಕಿಯ ಒಳಗೆ ಹಾಕಿದ ಆನೆ, ಆನಂತರ ಹೊರಗೆ ತೆಗೆದುನಿಧಾನಕ್ಕೆ ತನ್ನ ಬಳಗದ ಜೊತೆಗೆ ಹೊರಟು ಹೋಯಿತು.
ನಾವು ನಿಟ್ಟುಸಿರು ಬಿಟ್ಟೆವು.

Thursday, August 18, 2016

ಸೆನ್ಸಾರ್ ಬಗೆಗಿನ ಪುಸ್ತಕ ಬರೆದದ್ದು ಯಾಕೆಂದರೆ..?


ನನ್ನದೇ ಉದಾಹರಣೆ  ಹೇಳುತ್ತೇನೆ ಕೇಳಿ..ನಮ್ಮ ಚಿತ್ರ ಮಾರ್ಚ್ 23 ಒಂದು ಬರ್ಬರತೆ ಮತ್ತು ಕ್ರೌರ್ಯವನ್ನು  ಒಳಗೊಂಡಿದ್ದ ಥ್ರಿಲ್ಲರ್ ಚಿತ್ರ. ಅದನ್ನು ನಾನು  ಹಾರರ್ ಥ್ರಿಲ್ಲರ್ ಎಂದೆ ಕರೆಯುತ್ತೇನೆ. ಏಕೆಂದರೆ ಅದರಲ್ಲಿ ವ್ಯಕ್ತಿಯೊಬ್ಬನ ಕೊರಳನ್ನು ಗರಗಸದಿಂದ ಕುಯ್ಯುವ ದೃಶ್ಯವಿದೆ, ಮತ್ತೊಬ್ಬನನ್ನು ಮುಳ್ಳಿನ ಕುರ್ಚಿಯ ಮೇಲೆ ಕೂರಿಸಿ ಶಿಕ್ಷೆ ಕೊಡುವಾಗ ಅವನ ಅಂಡು ರಕ್ತಮಯವಾಗುವ ಸನ್ನಿವೇಶವಿದೆ, ಸೊಂಟಕ್ಕೆ ಈಟಿಯಿಂದ ರಕ್ತ  ಚಿಮ್ಮುವಂತೆ ಚುಚ್ಚುವ ಶಾಟ್ ಇದೆ. ಜೊತೆಗೆ ಸ್ವಾಮಿಜಿಯೊಬ್ಬನನ್ನು ಚಿತ್ರಹಿಂಸೆ ಕೊಡುವ ದೃಶ್ಯವಿದೆ. ಈಗ ಹೇಳಿ ನನ್ನ ಚಿತ್ರಕ್ಕೆ ಯಾವ ಪ್ರಮಾಣ ಪತ್ರ ಕೊಡಬಹುದು..?
ಆವತ್ತಿಗೆ ಮತ್ತು ಈವತ್ತಿಗೂ ಸೆನ್ಸಾರ್ ಮತ್ತು ಚಿತ್ರಕರ್ಮಿಗಳ ಯುದ್ಧ ನಡೆಯುತ್ತಲೇ ಇತ್ತು. ಯಾವುದೇ ಮುಲಾಜಿಲ್ಲದೆ ನಮ್ಮ ಚಿತ್ರಕ್ಕೆ ಎ ಪ್ರಮಾಣ ಪತ್ರ ಬಂದುಬಿಡುತ್ತದೆ ಸಾರ್, ಆಮೇಲೆ ಉಪಗ್ರಹ ಹಕ್ಕು ಮಾರಾಟವಾಗುವುದಿಲ್ಲ, ಎ ಸರ್ಟಿಫಿಕೇಟ್ ಎಂದಾಕ್ಷಣ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಕಾಲಿಕ್ಕುವುದಿಲ್ಲ..ಎಂದು ಅಲವತ್ತುಗೊಂಡಿದ್ದರು ನಿರ್ಮಾಪಕರು. ಅವರ ಕಷ್ಟ ನನಗೆ ಅರ್ಥವಾಗುತ್ತದೆ. ಕೋಟಿ ರೂಪಾಯಿ ಹಣ ಸುರಿದಾಗ ಎಲ್ಲೆಲ್ಲಿ ಸೇಫ್ ಆಗಬಹುದೋ ಅಲ್ಲೆಲ್ಲಾ ಸೇಫ್ ಆಗುವುದಕ್ಕೆ ನೋಡುವುದರಲ್ಲಿ ತಪ್ಪಿಲ್ಲ.
 ಸಾರ್ ಯೋಚಿಸಬೇಡಿ.. ಒಂದು ಕತ್ತರಿ ಪ್ರಯೋಗವಿಲ್ಲದೆ  ಸಿನಿಮಾಕ್ಕೆ ಯುಎ ಬರುತ್ತದೆ. ಯಾವ ಶಬ್ಧವೂ ಮ್ಯೂಟ್ ಆಗುವುದಿಲ್ಲ ... ಎಂದು ನಾನು ಹೇಳಿದ್ದಕ್ಕೆ ಮಾತಾಡದೆ ಸುಮ್ಮನೆ ನನ್ನ ಮುಖ ನೋಡಿದ್ದರು ನಿರ್ಮಾಪಕರು. ಅವರಷ್ಟೇ ಅಲ್ಲ, ಸಾಕಷ್ಟು ಜನ. ನಾನು ಭರವಸೆಯಿಂದ ನುಡಿಯಲು ನನ್ನದೇ ಆದ ಕಾರಣವಿತ್ತು. ನಾನು ಸ್ಕ್ರಿಪ್ಟ್  ಬರೆಯುವ ಸಮಯದಲ್ಲಿ ಸೆನ್ಸಾರ್ ಮಂಡಳಿಗೆ ಹೋದವನೇ ಅಲ್ಲಿ ದೊರೆಯುವ ನಿಯಮಾವಳಿ ಪುಸ್ತಕವನ್ನು ತೆಗೆದುಕೊಂಡು ಬಂದಿದ್ದೆ. ಅದನ್ನು ವಿವರವಾಗಿ ಅದ್ಯಯನ ಮಾಡಿದ್ದೆ. ಹಾಗಾಗಿ ಅದರ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿದ್ದೆ.
ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ, ಒಂದೇ ಕತ್ತರಿ ಪ್ರಯೋಗ, ಮತ್ತು  ಒಂದೇ ಮ್ಯೂಟ್ ಜೊತೆಗೆ ನನಗೆ ಯುಎ ಸಿಕ್ಕಾಗ ನಿರ್ಮಾಪಕರು ಖುಷಿಯಾಗಿದ್ದರು. ಲೀಟರ್ ಗಟ್ಟಲೆ ರಕ್ತ ಚಲ್ಲಿದ್ದನ್ನು ಸೆನ್ಸಾರ್ ಮಂದಿ ಸುಮ್ಮನೆ ಬಿಟ್ಟಿದ್ದರು, ಕತ್ತರಿಸಿದ್ದು, ಕುಯ್ದದ್ದು ಹಾಗೆಯೇ ಬಿಟ್ಟಿದ್ದರು. ಆದರೆ ಸ್ವಾಮಿಜಿಯ ದೃಶ್ಯದಲ್ಲಿ ಅದು ನಿಜವಾದ ಸ್ವಾಮಿಜಿಯ ವೀಡಿಯೊಗೆ ಹೋಲುತ್ತದೆ ಎನ್ನುವ ಕಾರಣದಿಂದ ಕತ್ತರಿಸಲು ಹೇಳಿದ್ದರು, ಅದೂ ಕೇವಲ ಹನ್ನೊಂದು ಸೆಕೆಂಡ್ಸ್...
ಸೆನ್ಸಾರ್ ಮಂದಿ  ಚಿತ್ರರಂಗ ಇಬ್ಬರದೂ ಅವಿನಾಭಾವ ಮತ್ತು  ಅನಿವಾರ್ಯ  ಸಂಬಂಧ ಇದ್ದೇ ಇದೆ. ಸೆನ್ಸಾರ್  ಇಲ್ಲದೆ  ಸಿನಿಮಾ ಬಿಡುಗಡೆ ಮಾಡುವ ಹಾಗೆ ಇಲ್ಲ. ಆದರೆ  ಈ ಸೆನ್ಸಾರ್  ಮಂದಿ  ಮತ್ತು  ಚಿತ್ರಕರ್ಮಿಗಳ ನಡುವಣ ಗುದ್ದಾಟಕ್ಕೆ ಇತಿಹಾಸವಿದೆ. ಏಕೆ ಹೀಗಾಗುತ್ತದೆ..?
ಸೆನ್ಸಾರ್  ಮಂದಿ  ಸರಿಯಾಗಿ  ಸಿನೆಮಾವನ್ನು  ನೋಡುವುದಿಲ್ಲ, ಅರ್ಥೈಸಿಕೊಳ್ಳುವುದಿಲ್ಲ...
ಅವರು ಸುಖಾಸುಮ್ಮನೆ ಕೆಂಪು ಕಡೆ ರಕ್ತ ಅನ್ನುತ್ತಾರೆ, ಕಟ್  ಮಾಡಿಸುತ್ತಾರೆ...
ಮಾಮೂಲಿ ಜನರು ಆಡುವ ಮಾತು ಮಾತಿಗೂ  ಕತ್ತರಿ  ಹಾಕುತ್ತಾರೆ..
ಒಟ್ಟಾರೆ ಇಡೀ  ಸಿನಿಮಾದ ಒಟ್ಟಾರೆ ಭಾವವನ್ನು ಕೊಂದು ಬಿಡುವ ಅಥವಾ  ಗಣನೀಯ  ಪ್ರಮಾಣದಲ್ಲಿ  ಕಡಿಮೆ ಮಾಡುವುದರಲ್ಲಿ ಸೆನ್ಸಾರ್  ಮಂದಿ  ಯಾವತ್ತಿಗೂ ಮುಂದು..
ಎಂಬಿತ್ಯಾದಿ  ಆರೋಪಗಳನ್ನು ಸರ್ವೇ ಸಾಮಾನ್ಯವಾಗಿ ನಾವು ಕೇಳಬಹುದು.ಆದರೆ ಸೆನ್ಸಾರ್  ಮಂದಿ ತುಂಬಾ ವಿವರವಾಗಿ ಸಿನಿಮಾ ನೋಡುತ್ತಾರೆ, ಅದನ್ನು ಸ್ಕ್ರಿಪ್ಟ್ ಜೊತೆಗೆ ತಾಳೆ ಹಾಕುತ್ತಾರೆ, ಮುಂದೆ ಕೂರಿಸಿಕೊಂಡು ಸ್ಪಷ್ಟೀಕರಣ ಕೇಳುತ್ತಾರೆ. ಆಮೇಲೆ ಸರ್ಟಿಫಿಕೇಟ್ ಬಗ್ಗೆ ಮಾತನಾಡುತ್ತಾರೆ. ಒಬ್ಬ ಚಿತ್ರಕರ್ಮಿಗೆ ಮೊದಲೇ ಸೆನ್ಸಾರ್  ಬಗೆಗೆ ತಿಳಿದುಹೋದರೆ ಕತ್ತರಿ ಪ್ರಯೋಗಕ್ಕೆ ಕತ್ತರಿ ಹಾಕಿಬಿಡಬಹುದು. ಎಷ್ಟನ್ನು ಚಿತ್ರೀಕರಿಸಬೇಕು, ಯಾವ ಪದ ಬಳಸಬೇಕು, ಸೆನ್ಸಾರ್ ಕಾಯಿದೆ ಏನು ಹೇಳುತ್ತದೆ, ಕಾನೂನಿನ ಚೌಕಟ್ಟಿನಲ್ಲಿ ಏನಿದೆ..? ಪರಿಷ್ಕರಣ ಸಮಿತಿ ಎಲ್ಲಿದೆ..? ಸೆನ್ಸಾರ್  ನಮಗೆ ಸಮಂಜಸ ಎನಿಸದಿದ್ದಾಗ ನಮ್ಮ ಮುಂದಿನ ನಡೆ ಏನು..? ಇತ್ಯಾದಿಗಳ ಬಗ್ಗೆ ಚಿತ್ರಕರ್ಮಿ ಅರಿತುಕೊಳ್ಳುವುದು ಅಗತ್ಯ. ಏಕೆಂದರೆ ಚಿತ್ರೀಕರಿಸಿದ ಮೇಲೆ ಅದನ್ನು ಕತ್ತರಿಸಿದರೆ, ಮಂಕಾಗಿಸಿದರೆ ಸಮಯ ಹಣ ಮತ್ತು ದೃಶ್ಯದ ಭಾವ ಮೂರು ವ್ಯರ್ಥವಾಗಿಬಿಡುತ್ತದೆ. ಒಂದೊಂದು ಶಾಟ್ ತೆಗೆಯಲು ಗಂಟೆಗಟ್ಟಲೆ ಸಮಯ, ಹಲವಾರು ಜನರ ಶ್ರಮ ಮತ್ತು ಲಕ್ಷಾಂತರ ಹಣ ಖರ್ಚಾಗಿರುತ್ತದೆ. ಅದನ್ನು ಸೆನ್ಸಾರ್ ಮಂದಿ ಸಾರಾಸಗಟಾಗಿ ಕತ್ತರಿಸಿ ಎಂದರೆ ಮೈಯೆಲ್ಲಾ ಉರಿಯುತ್ತದೆ.
ಮೇಡಂ ರೇಖಾರಾಣಿ ಅದೊಂದು  ದಿನ  ಕರೆಮಾಡಿ ಸೆನ್ಸಾರ್ ಮಂಡಳಿಯಾ ನಿಯಮಾವಳಿಗಳ ಪುಸ್ತಕ ಇಂಗ್ಲೀಷ್ ನಲ್ಲಿದೆ, ಅದನ್ಯಾಕೆ ನೀವು ಕನ್ನಡೀಕರಿಸಬಾರದು ಎಂದರು. ಹಾಗಂದದ್ದೇ ನನಗೂ ಹೌದಲ್ಲ ಎನಿಸಿದ್ದೆ ಬರೆಯಲು ಪ್ರಾರಂಭಿಸಿದೆ. ಆವಾಗ ಅಚಾನಕ್ ಆಗಿ ಸಿಕ್ಕ ಹುಬ್ಬಳ್ಳಿಯ ಶಿವಾನಂದ್ ಮುತ್ತನ್ನನವರ್ ಸಾರ್ ನೀವು ಬರೆಯಿರಿ, ನಾನದನ್ನು ಪ್ರಕಟಿಸುತ್ತೇನೆ, ಅದನ್ನು ಉಚಿತವಾಗಿಯೇ ಆಸಕ್ತರಿಗೆ ನೀಡೋಣ ಎಂದುಬಿಟ್ಟರು.ಪರಮೇಶ್ವರ್ ಹೆಗಲ ಮೇಲೆ ಕುಳಿತು ಬರೆಯಲೇ ಬೇಕೆಂದರು, ಜಗದೀಶ್ ಮತ್ತು ಚಂದ್ರಶೇಖರ್ ಬರೆದುಬಿಡಿ ನಾವಿದ್ದೀವಿ ಎಂದರು, ಗೆಳೆಯರು ಕೈಜೋಡಿಸಿದರು... ಇನ್ನು ಮಾತಾಡುವುದು ಏನಿದೆ.. ಅದೊಂದು ಪುಸ್ತಕ ಬರೆದುಬಿಟ್ಟೆ. ಅದು  ಮಾಜಿಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಕೈಯಿಂದ ಆಗಸ್ಟ್ 15  ra ಸ್ವಾತಂತ್ರ್ಯದಿನಾಚರಣೆಯಂದು ಅದ್ದೂರಿಯಾಗಿ  ಬಿಡುಗಡೆಯಾಯಿತು..

Thursday, August 11, 2016

ವಿಮರ್ಶೆಗೆ ಅಲ್ಪವಿರಾಮ ಹೇಳುತ್ತಾ..?

ನನ್ನೆಲ್ಲಾ  ಕೆಲಸಗಳ ನಡುವೆ  ನನಗೆ ಖುಷಿಕೊಟ್ಟದ್ದು  ಸಿನಿಮಾಗಳಿಗೆ  ವಿಮರ್ಶೆ  ಬರೆಯುವುದು. ಬರುವ  ಸಿನೆಮಾಗಳನ್ನು ನೋಡುವ  ನನಗೆ ಅದನ್ನು ನೋಡಲು, ಅದರ ಬಗ್ಗೆ  ಬರೆಯಲು  ಹಣ ಸಿಗುವುದಾದರೆ  ಅದಕ್ಕಿಂತ  ಖುಷಿಯ  ಸಂಗತಿ  ಏನಿದೆ ಹೇಳಿ..? ಆದರೆ  ವಿಮರ್ಶೆ  ಬರೆಯುವುದು ಅಷ್ಟು ಸುಲಭದ  ಕೆಲಸವಲ್ಲ. ಯಾವುದೋ  ಮೂಡಿನಲ್ಲಿ, ಯಾವುದೋ  ನಿರೀಕ್ಷೆಯಲ್ಲಿ, ಪೂರ್ವಗ್ರಹಪೀಡಿತನಾಗಿ, ಪಕ್ಷಪಾತವಾಗಿ  ಸಿನಿಮಾ ನೋಡಲು ಬಾರದು. ಅದಕ್ಕೆ ಖಾಲಿ ತಲೆಯಲ್ಲಿ ಹೋಗಬೇಕು. ಆಮೇಲೆ  ತೀರಾ ನೇರವಂತಿಕೆ, ನಿಷ್ಠುರ ಮನಸ್ಥಿತಿಯೂ ಸಲ್ಲ, ಹಾಗೆಯೇ  ದಾಕ್ಷಿಣ್ಯ, ಧಾರಾಳತನವೂ ಸಲ್ಲ. ಒಂದು ಸಿನಿಮಾ  ನೋಡಿ  ಆ ಕ್ಷಣ  ಅನಿಸಿದ್ದನ್ನು  ಬರೆದುಬೀಸಾಕಿ, ಕೈ ತೊಳೆದುಕೊಳ್ಳುವುದು ವಿಮರ್ಶೆ  ಎನಿಸಿಕೊಳ್ಳುವುದಿಲ್ಲ. ಸಿನೆಮಾಗಳಲ್ಲಿ ಕಲಾತ್ಮಕ, ಹಾರರ್, ಪ್ರೇಮಕತೆ, ಶೃಂಗಾರಮಯ ಎನ್ನುವ ವಿವಿಧ ವಿಭಾಗಗಳಿರುವ ಹಾಗೆ ವಿಮರ್ಶೆಯಲ್ಲಿಲ್ಲ. ಆ ತಕ್ಕಡಿಯಲ್ಲಿ  ಒಂದೇ ತೂಕ,. ಇದಿಷ್ಟನ್ನು  ಅರ್ಥ ಮಾಡಿಕೊಂಡು  ಸಿನಿಮಾ ನೋಡುವುದು, ಅದರ ಬಗ್ಗೆ  ಬರೆಯುವುದು, ಸಿನಿಮಾದ ಒಟ್ಟಾರೆ ಅಂಶ, ನಿರ್ದೇಶಕ ಆಶಯ, ಸಿನಿಮಾ ಬೀರುವ ಪರಿಣಾಮ.. ಹೀಗೆ. ಇದೆನ್ನೆಲ್ಲಾ  ಅಂದಾಜು ಮಾಡಿಕೊಂಡು ಸಿನಿಮಾ  ನೋಡಬೇಕು.
ನಾನು  ಪ್ರತಿ ಸಿನೆಮಾವನ್ನು ಗುಣಮಟ್ಟ ಮತ್ತು ವ್ಯಾಪಾರಿ ಮಾನದಂಡಗಳನ್ನಿಟ್ಟುಕೊಂಡು  ಸಿನಿಮಾ  ನೋಡುತ್ತಿದ್ದೆ. ಸಿನಿಮಾ  ನೋಡುತ್ತಾ ನೋಡುತ್ತಾ ಅದರ  ಆಗುಹೋಗುಗಳನ್ನೂ ಇಷ್ಟದ ಇಷ್ಟವಾಗದ ಅಂಶಗಳನ್ನು ಸುಮ್ಮನೆ ಮನಸ್ಸಿನಲ್ಲಿಯೇ ಪಟ್ಟಿಮಾಡಿಕೊಳ್ಳುತ್ತಿದ್ದೆ. ಒಬ್ಬ ನಿರ್ದೇಶಕನ ಕನಸನ್ನು ಹೀಗಿರಬೇಕು, ಹಾಗಿರಬೇಕಿತ್ತು ಎನ್ನಲು ನಾವ್ಯಾರು..? ಒಂದು ಸಿನೆಮವಾಗಿ  ಅದು ನಮಗೆ ಯಾವ ರೀತಿಯ ಪರಿಣಾಮ ಬೀರಿತು ಎನ್ನುವುದಷ್ಟೇ ಮುಖ್ಯ ಅಲ್ಲವೇ? ಒಬ್ಬ  ವಿಮರ್ಶಕನ  ವಿಮರ್ಶೆ  ಓದುವವರ್ಯಾರು..? ಯಾರಿಗಾಗಿ  ಬರೆಯುತ್ತಿದ್ದೇವೆ..? ಎನ್ನುವುದೂ ಮುಖ್ಯವಾಗುತ್ತದೆ. ನಾನು  ಸಿನಿಮಾ  ನೋಡಿದ  ನಂತರ  ಒಂದು  ಅದರ ಭವಿಷ್ಯದ  ಬಗೆಗೆ  ಒಂದು  ಅಂದಾಜು  ಮಾಡಿಕೊಂಡು ನನ್ನ  ಡೈರಿಯಲ್ಲಿ  ಬರೆದಿಡುತ್ತಿದ್ದೆ. ಮತ್ತು  ಅದನ್ನು  ಮೂರ್ನಾಲ್ಕು  ವಾರಗಳವರೆಗೆ ಗಮನಿಸುತ್ತಿದ್ದೆ.  ಖುಷಿಯ  ಸಂಗತಿ  ಎಂದರೆ  ನನ್ನ  ಅಂದಾಜಿನ  ನಿಖರತೆ  ನೂರಕ್ಕೆ  ತೊಂಭತ್ತೊಂಭತ್ತು ...ಅಂದರೆ  ಈ ಸಿನಿಮಾ  ಹೀಗಿದೆ, ನಾನು  ಗ್ರಹಿಸಿದ್ದು  ಸರಿಯಾಗಿದೆ, ನಾನು  ಚಿತ್ರಕರ್ಮಿಗಾಗಲಿ, ನನ್ನ ವಿಮರ್ಶೆ  ಓದುವ ಓದುಗನಿಗಾಗಲಿ ಮೋಸ  ಮಾಡಿಲ್ಲ ಎನ್ನುವ ತೃಪ್ತಿ ನನಗಿರುತ್ತಿತ್ತು.
ಯಾಕೆಂದರೆ  ಯಾರೋ  ಒಂದು  ಅದ್ಭುತವಾದ ಸಿನಿಮಾ ಎಂದು ಬರೆದಿರುತ್ತಾರೆ, ಅದನ್ನು ನಂಬಿಕೊಂಡು ಚಿತ್ರರಸಿಕ ಚಿತ್ರಮಂದಿರಕ್ಕೆ ದೌಡಾಯಿಸಿದರೆ  ಬರುವಾಗ ಸಿನೆಮಾವನ್ನೂ,ಬರೆದು ಹಾದಿ  ತಪ್ಪಿಸಿದವನನ್ನೂ ಬೈಯ್ಯದೆ ಇರುತ್ತಾನೆಯೇ..? ಅಥವಾ ಒಂದು  ಸಿನಿಮಾ  ವೈಯಕ್ತಿಕವಾಗಿ  ಇಷ್ಟವಾಗದೆ  ಇದ್ದಾಗ ಅದನ್ನು ಸಾರ್ವತ್ರಿಕವಾಗಿ ಬರೆದು, ನೋಡಬೇಕೆಂದುಕೊಂಡವ ಚೆನ್ನಾಗಿಲ್ಲವೆಂದು ಹಿಂದೆ ಸರಿದು ಟಿವಿಯಲ್ಲೋ ಇನ್ನೆಲ್ಲೋ  ನೋಡಿ, ಅಯ್ಯೋ  ಚೆನ್ನಾಗಿತ್ತಲ್ಲ, ನಾನ್ಯಾಕೆ  ನೋಡಲಿಲ್ಲ  ಎಂದುಕೊಂಡರೆ ಅದೂ ಸರಿಯಲ್ಲ. ಹಾಗಾಗಿ  ಈ ತೂಗುಕತ್ತಿಯಡಿಯಲಿ ಕೆಲಸ ಮಾಡುವ ಅನುಭವವೇ ಬೇರೆ.
ಕರೆಮಾಡಿ  ಬೈದವರಿದ್ದಾರೆ, ಬೇಡಿಕೊಂಡವರಿದ್ದಾರೆ, ಖ್ಯಾತ  ನಿರ್ದೇಶಕರೊಬ್ಬರು  ಕರೆ ಮಾಡಿ, ಹೀಗೆಲ್ಲಾ  ಬರೆದರೆ ಅಷ್ಟೇ, ನಿನ್ನನ್ನು ಪ್ರೆಸ್ ಮೀಟ್  ಕರೆದು  ಮಾನ  ಕಳೆಯುತ್ತೇನೆ ಎಂದು ಧಮಕಿ ಹಾಕಿದ ಉದಾಹರಣೆಯಿದೆ..ಬೇಕಿದ್ರೆ ನೋಡಿಕೊಳ್ಳುವ ಒಂದಷ್ಟು  ಬಿಲ್ಡ್  ಅಪ್  ಕೊಟ್ಟು  ಬರೆಯಿರಿ  ಅಂದಿದ್ದಾರೆ,.. ಹೀಗೆ. ನಾನು ಒಟ್ಟೊಟ್ಟಿಗೆ ಎರಡು ಎರಡು ಮಾಧ್ಯಮಗಳಿಗೆ ವಿಮರ್ಶೆ  ಬರೆದಿದ್ದೇನೆ. ಹೆಸರು  ಹಾಕಿಕೊಳ್ಳದೆ  ಬರೆದಿದ್ದೇನೆ..ಇಲ್ಲಿ ಬರಹವಷ್ಟೇ ಮುಖ್ಯ ಎನ್ನುವಂತೆ ಬೀಗಿದ್ದೇನೆ. ನೀನೊಂದು  ಸಿನಿಮಾ ಮಾಡು ಆವಾಗ ಗೊತ್ತಾಗುತ್ತೆ  ಎಂದು  ಗದರಿದ ಸಿನಿಕರ್ಮಿಗೆ ಅದನ್ನು ಮೊದಲು  ಮಾಡಿದ್ದೇನೆ ಸರ್  ಎಂದು ಅಳಲುತೋಡಿಕೊಂಡಿದ್ದೇನೆ. ನಿನಗೇನೂ ಶುಕ್ರವಾರ  ಆಯಿತು ಎಂದರೆ ಸಾಕು, ಸಿನಿಮಾ ನೋಡಿ, ಅವರ ಮಾನ ಕಳೆಯಲು  ನಿಂತುಬಿಡುತ್ತೀಯ  ಎಂದು  ಗದರಿದ್ದಾರೆ, ಗಾಂಧಿನಗರದಲ್ಲಿ  ನೀನು ಸಿಕ್ಕರೆ ಗ್ಯಾರಂಟಿ ಎಂದು ಸ್ನೇಹಿತರು ನಕ್ಕಿದ್ದಾರೆ.. ಇದೆಲ್ಲದಕ್ಕೂ  ಒಂದು ಅಲ್ಪವಿರಾಮ ಇಡುವ ಸಮಯ ಬಂದಿದೆ. ಏಕೆಂದರೆ ನಾನೇ  ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ. ಅದರ ಕೆಲಸದ ನಡುವೆ ಬರೆಯುವುದು ಕಷ್ಟ ಎಂದಲ್ಲ. ಆದರೆ  ಬರೆಯಲು ಮನಸ್ಥಿತಿ ಬೇಕಲ್ಲ.. 
ಇನ್ನೇನಿದ್ದರೂ ಸಧ್ಯಕ್ಕೆ  ವಿಮರ್ಶೆ ಯ ಕಡೆಗೆ  ತಲೆ ಹಾಕುವುದಿಲ್ಲ. ಬಹುಶಃ ಕೋಟಿಗೊಬ್ಬ-2 ನನ್ನ ವೃತ್ತಿಪರ ವಿಮರ್ಶೆಯ ಕೊನೆಯ ಚಿತ್ರವಾಗಬಹುದೇನೋ? ಆನಂತರವೇನಿದ್ದರೂ  ನನ್ನ  ಸಿನಿಮಾ ಇರುತ್ತದೆ, ಬೈಯ್ಯುವವರ,  ಹೊಗಳುವವರ ಮಾತುಗಳಿಗೆ  ಕಿವಿ ತೆರೆದು ಕುಳಿತು ಪುಳಕ  ಅನುಭವಿಸುವ  ಖುಷಿಯಷ್ಟೇ  ನನ್ನದಾಗಲಿದೆ...

Friday, August 5, 2016

ಸಂತೆಯಲ್ಲಿ ನಿಂತವನನ್ನು ನಾವು ಗಮನಿಸದೆ ಇದದ್ದು,...

ಮಹಾತ್ಮ ಕಬೀರ  ಚಿತ್ರದಲ್ಲಿ ಪವಾಡ ಜಾಸ್ತಿಯಿದೆ. ಆದರೆ ಅನುಸೂಯಾದೇವಿ ಅವರ ಸಂಗೀತ ಖುಷಿ ಕೊಡುತ್ತದೆ. ಕೆಲವರು ಆ ಕಾಲಕ್ಕೆ ಅದು ಸೂಪರ್ ಎನ್ನಬಹುದೇನೋ?ಅದು ನಿಜವೂ ಹೌದು. ಮಗ್ಗ ನೇಯದ ಕಬೀರ ರಾಮಜಪ ಮಾಡುತ್ತಾ  ಕುಳಿತುಕೊಂಡರೆ ಮಗ್ಗ  ರಾಮನ ದಯೆಯಿಂದ ತಾನಾಗಿಯೇ ನೇಯುತ್ತದೆ. ಅಮ್ಮ  ಒಳ ಹೋಗಿ ಬರುವಷ್ಟರಲ್ಲಿ ಬಟ್ಟೆ ರೆಡಿ!. ಇಂತಹ ಪವಾಡಗಳು, ಪ್ರತ್ಯಕ್ಷನಾಗುವ ದೇವರುಗಳು ಇವೆಲ್ಲ  ಕಬೀರದಲ್ಲಿದೆ.  ಹಾಡು ಹಾಡುತ್ತಾ ಮಾತನಾಡುತ್ತ ಮಾತಿನಲ್ಲಿ ಬುದ್ದಿವಾದ  ಹೇಳುತ್ತಾ ಸಾಗುವ ಕಬೀರ  ಮೊದಲಿಗೆ ಅಪ್ಪ ಅಮ್ಮನನ್ನು  ಸರಿಯಾಗಿ ನೋಡಿಕೊಳ್ಳದ ಮಗನಾಗಿ ಕಾಣುತ್ತಾನೆ. ಪತ್ನಿಗಿಂತ ಭಕ್ತಿರಸದಲ್ಲಿ  ಮುಳುಗಿ ಆಕೆಯೂ ನಲುಗುವಂತೆ ಮಾಡುತ್ತಾನೆ. ಅವನಿದ್ದದ್ದೆ ಹಾಗೆ ಅಂದರೆ  ಸಿನಿಮಾ ಅವನ ಪಾತ್ರದ ವಿಮರ್ಶೆಯಿಂದ ದೂರ.. ಆದರೆ  ಸಂತೆಯಲ್ಲಿ ನಿಂತ ಕಬೀರನದೂ ಹೆಚ್ಚು ಕಡಿಮೆ ಅದೇ ಬುದ್ದಿಯಾದರೂ ಇಲ್ಲಿ ಪವಾಡಗಳ ಹಂಗಿಲ್ಲ. ಸಂತೆಯಲ್ಲಿ  ಬಟ್ಟೆ ಮಾರಲು ಬರುವ ಕಬೀರ ಹಾಡುತ್ತಲೇ ಜನರ ಗಮನ ಸೆಳೆಯುತ್ತಾನೆ, ಹಿಂದೂ ಮುಸ್ಲಿಂ ಎಂದು ಜನರು ಕಟ್ಟಿ ಮಸೆಯುತ್ತಾ ನಿಂತಾಗ ಮಧ್ಯ ನಿಂತು ಇಬ್ಬರ ಪರವಾಗಿಯೂ ಇಬ್ಬರ ವಿರೋಧವಾಗಿಯೂ ಮಾತನಾಡುತ್ತಾನೆ.
ಸೋಮವಾರದಂದು ಸಿನಿಮಾ ನೋಡಲು  ಚಿತ್ರಮಂದಿರಕ್ಕೆ ಹೋದಾಗ ಬೆರಳೆಣಿಕೆಯ ಜನರಿದ್ದದ್ದು ನೋಡಿ ಕಳವಳ ಉಂಟಾದದ್ದು ದೇವರಾಣೆ ಸತ್ಯ. ಲಾಂಗು ಹಿಡಿದು ಹೊಡೆದಾಡುವ ರೌಡಿಯ ಕತೆಗೆ ತುಂಬಿ ಬರುವ ಜನರು, ಸತ್ತು ದೆವ್ವವಾಗಿ ಕಾಡುವ ದೆವ್ವಕ್ಕೆ ಮುಗಿ ಬೀಳುವ ಜನರು ಒಳ್ಳೆಯದ್ದು ಹೇಳುವ ಕಬೀರನನ್ಯಾಕೆ ದೂರ ಮಾಡಿದರು ಎಂಬುದು ಪ್ರಶ್ನೆ. ಆವತ್ತು  ಹಿಂದೂ ಮುಸ್ಲಿಂ ಬಗೆಗೆ ನೀತಿ ಪಾಠ ಹೇಳಿದ ಕಬೀರನನ್ನು ದೂರ ಮಾಡಿದ ಅವರಿಗೂ ಈವತ್ತು  ಕಬೀರನಿಗೆ  ಸೊಪ್ಪು ಹಾಕದ ನಮಗೋ ಅಂತಹ ವ್ಯತ್ಯಾಸವಿಲ್ಲ ಎನಿಸುತ್ತದೆ. 
ಇದೆಲ್ಲ ಪಕ್ಕಕ್ಕಿಡೋಣ.
ಕಬೀರ ಒಂದು ಸಿನೆಮವಾಗಿ ಗೆಲ್ಲುವುದು ಸೋಲುವುದು ವಿಷಯವಲ್ಲ. ಮನಮುಟ್ಟುವುದು ಬೇಕಾದದ್ದು. ನೋಡಿದ ಪ್ರೇಕ್ಷಕನಿಗಾದರೂ ಸಿನಿಮಾ ತಲುಪಿಬಿಟ್ಟರೆ ಅಷ್ಟು ಸಾರ್ಥಕ. ಆದರೆ ಸಿನಿಮಾ ನೋಡುತ್ತ ನೋಡುತ್ತ ಸಾಗಿದಂತೆ ಸೆಳೆಯುವುದೇ ಇಲ್ಲ. ಮೊದಲಾರ್ಧ  ಒಂದಷ್ಟು ದೃಶ್ಯಗಳ ಕೊಲಾಜ್ ನಂತೆ ಕಾಣುತ್ತದೆ. ಒಂದಕ್ಕೊಂದು ಸಂಬಂಧವನ್ನು ಅದೇಗೆ ಹೊಂದಿಸಬೇಕೋ ಚಿತ್ರಮಂದಿರದಲ್ಲಿ  ಕುಳಿತ ಪ್ರೇಕ್ಷಕ  ನೋಡುವುದರ ಜೊತೆಗೆ  ಈ ಎಕ್ಸ್ಟ್ರಾ ಕೆಲ್ಸಕ್ಕೆ ಒದ್ದಾಡಿಹೋಗುತ್ತಾನೆ..ಕಬೀರ ಅವನ ಹಿನ್ನೆಲೆ ಅವನ ಆಶಯಗಳು ಸಿನಿಮಾದಲ್ಲಿ ಹೈ ಲೈಟ್ ಆಗುವುದಿಲ್ಲ. ಇನ್ನು  ಶರತ್ ಕುಮಾರ್  ಮೈನಾ ಚಿತ್ರದಲ್ಲಿ ನಿರ್ವಹಿಸಿದ್ದ ಪೋಲಿಸ್ ಪಾತ್ರವನ್ನೇ ಇಲ್ಲಿಯೂ ರಾಜನಂತೆ ಮುಂದುವರೆಸಿದ್ದಾರೆ. ಅಲ್ವೇನ್ರಿ ಕಬೀರ್ ಎನ್ನುತ್ತಾ ಬಯಲಿನಲ್ಲಿಯೇ ಮಾತನಾಡುವ ರಾಜ ಅವರು.
ಅದೇಕೋ ಏನೋ ಸಿನಿಮಾ ನೋಡುತ್ತಾ ನೋಡುತ್ತಾ ಎಲ್ಲೋ  ಮಿಸ್  ಹೊಡೆಯುತ್ತದೆ ಎನಿಸುತ್ತದೆ. ಆದರೆ ನೋಡಿಯಾದ ಮೇಲೆ ಕಬೀರ ನಮ್ಮನ್ನು ಕಾಡುವುದಿಲ್ಲ. ಬದಲಿಗೆ ಬಹಳ ಬೋರಿಂಗ್ ಮನುಷ್ಯನಾಗಿ, ಹಾಡುಗಳು ಕಾಡದೆ ಕಬೀರ ನಮ್ಮನ್ನು ಆ ಕಾಲದ ಅಂದರೆ ಅವನ ಕಾಲದ ಜನರಂತೆಯೇ ಅವನ ದ್ವೇಷಿಯನ್ನಾಗಿ ಮಾಡಿಬಿಡುತ್ತಾನೆ.
ಮಹಾತ್ಮರ, ಸಂತರ ಬದುಕಿನಲ್ಲಿ  ಮಸಾಲೆ ಅಂಶಗಳು ಕಡಿಮೆಯೇ ಎನ್ನಬಹುದೇನೋ? ಅಥವಾ ಅದನ್ನು ಚಿತ್ರದಲ್ಲಿ ತೋರಿಸಲಿಕ್ಕೆ ನೈಜತೆ ಅಡ್ಡಬರುತ್ತದೆ. ಕಬೀರ ಯಾರೋ  ಹೊಡೆಯುವವರನ್ನು ತಡೆದಾಗ ಅದನ್ನು ಫೈಟ್ ನೊಂದಿಗೆ ತೋರಿಸಲು ಸಾಧ್ಯವೇ? ಹಾಗೆಯೇ ತನ್ನ ಪತ್ನಿಯ ಜೊತೆಗೆ ಕಳೆಯುವ ರಸಮಯ ಸಮಯಕ್ಕೆ ಆದೆಷ್ಟರ ಮಟ್ಟಿಗೆ ಶೃಂಗಾರ ತುಂಬಿ, ದ್ರಾಕ್ಷಿ ಗೋಡಂಬಿ ಬಳಸಲು ಸಾಧ್ಯ..? ಹಾಗಾಗಿ ಸಿನಿಮಾದ ಇತಿಮಿತಿ ಕತೆಯ ಪಾತ್ರದಲ್ಲಿಯೇ ಇರುತ್ತದೆ. ಇಷ್ಟರ ನಡುವೆಯೂ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ ಬೋರಿಂಗ್ ಅಲ್ಲ. ಅದು ರೋಚಕ. ಒಂದು ನಿಟ್ಟಿನಲ್ಲಿ ನೋಡಿದರೆ ಕಬೀರನದ್ದು ಅತಿ ರೋಚಕ. ಎರಡೂ ಕಡೆಯಿಂದ ಮತಾಂಧರು ಎದುರು ನಿಂತು ಹೊಡೆಯುವ ಬಡಿಯುವ ಸಾಯಿಸಲು ಪ್ರಯತ್ನಿಸುವ ಪ್ರಸಂಗಕ್ಕಿಂತ ರೋಚಕತೆ ಯಾವ ಕಮರ್ಷಿಯಲ್ ಪಾತ್ರಕ್ಕಿದ್ದೀತು.. ಆದರೆ ಅದನ್ನು ಹಿತಮಿತವಾಗಿ ನೋಡುವಂತೆ ಮಾಡಬೇಕಷ್ಟೆ. ಬಹುಶಃ ಚಿತ್ರಕತೆ ಇಲ್ಲಿ ಕೆಲಸ ಮಾಡುತ್ತದೆ. ಆದರೆ ಸಂತೆಗೆ ಬಂದು ಜನರ ಮುಂದೆ ನಿಂತವನ ನೇಯ್ಗೆಯಲ್ಲಿ ಕಸುವಿಲ್ಲದೆ ಇರುವ ಕಾರಣ ನೂಲಿನದ್ದಾ..? ಮಗ್ಗದ್ದಾ ನೋಡಿದವರು ಹೇಳ್ಬೇಕು.. ಹೇಳುವುದಕ್ಕಾದರೂ ಒಮ್ಮೆ ನೋಡಬೇಕಿತ್ತು ಅಲ್ಲವೇ? ಇಲ್ಲವಾದಲ್ಲಿ ಕಬೀರ ನಮ್ಮನ್ನು  ತಿದ್ದಿದಂತೆ ನಮ್ಮಂತಹ ಚಿತ್ರಕರ್ಮಿಗಳನ್ನು ತಿದ್ದುವವರಾರು..?

Friday, July 15, 2016

ದೆವ್ವದ ಪ್ರಶಸ್ತಿ ಕೊಡೋಣ ಬನ್ನಿ...

ಕಾಲಕ್ಕೆ ತಕ್ಕಂತೆ  ದೆವ್ವಗಳು  ಬದಲಾಗಿವೆ. ಅವುಗಳಲ್ಲೂ ಕೆಟ್ಟ ದೆವ್ವಗಳು, ಒಳ್ಳೆಯ  ದೆವ್ವಗಳು  ಹುಟ್ಟಿಕೊಂಡಿವೆ, ಹಾ  ಇಲ್ಲಿ ಸತ್ತು. ! ದೇವರು  ಎಂದರೆ  ಕಿಲೋಮೀಟರ್ ದೂರ ಓಡುತ್ತಿದ್ದ  ದೆವ್ವಗಳು  ಈಗ  ದೇವರ ವಿಗ್ರಹದ ಮುಂದೆ ಕುಣಿದು ಕುಪ್ಪಳಿಸಿ  ದೇವರನ್ನೇ  ಹೊಗಳಿ ಪಟಾಯಿಸಿಕೊಳ್ಳುತ್ತಿವೆ. ದೇವರಿಂದ ಶಕ್ತಿಯನ್ನು  ಎರವಲು  ಪಡೆದುಕೊಳ್ಳುತ್ತಿವೆ. ಅದಿರಲಿ. ಸಧ್ಯಕ್ಕೆ  ಕನ್ನಡ  ಚಿತ್ರರಂಗದಲ್ಲಿ  ದೆವ್ವದ ಕಾಲ. ಅಥವಾ ದೆವ್ವಗಳ ಪರ್ವ ಕಾಲ. ತರಾವರಿ ದೆವ್ವಗಳ  ಆಟಾಟೋಪ ಖುಷಿ ಕೊಡುವಂತಹದ್ದೆ ಬಿಡಿ.
ವರ್ಷದ  ಪ್ರಾರಂಭದಲ್ಲಿ  ಬಂದ  ದೆವ್ವದ ಮೂಲ ಉದ್ದೇಶ  ಹಗೆತನವಾದರೂ ನಗಿಸಿದ್ದಂತೂ ನಿಜ. ನಮ್ಮ  ಪ್ರಿಯಾಮಣಿಯಂತಹ ಸುಂದರಿ ದೆವ್ವವಾಗಿಯೂ ಕಾಡಬಹುದು ಎಂಬುದನ್ನು ತೋರಿಸಿಕೊಟ್ಟ ಚಿತ್ರವದು. ಬಂದದ್ದೆ ದೆವ್ವ ಕಾಡಲಿಲ್ಲ. ಬದಲಿಗೆ ನಿರ್ದೇಶಕನನ್ನೇ ಬಳಸಿಕೊಂಡು ಸಿನಿಮಾದ ಒಳಗೊಂದು ಸಿನಿಮಾ ತೆಗೆಯುವ ನಾಟಕವಾಡಿ ವಿಲನ್ ನನ್ನು ಬಗ್ಗು  ಬಡಿದ ದೆವ್ವವದು. ಆಮೇಲೆ  ಕಾಣಿಸಿಕೊಂಡದ್ದು ಗಂಡು ದೆವ್ವ. ಆವರಿಸಿದ್ದು ಮಾತ್ರ ಹೆಣ್ಣನ್ನು. ಪಾಪ ಮದುವೆಯಾಗಿ ಹನಿಮೂನ್ ಮತ್ತು  ಡ್ಯೂಟಿ ಎರಡನ್ನೂ ಒಂದೇ ಕಡೆ ಮಾಡುವ ಮೂಲಕ ಸ್ವಾಮೀ ಕಾರ್ಯ ಸ್ವಕಾರ್ಯ  ಮಾಡಿಕೊಳ್ಳೋಣ ಎಂದು ನಮ್ಮ ಶಿವಣ್ಣ ಪ್ಲಾನ್ ಮಾಡಿದರೆ ಅವರ ಪತ್ನಿಗೆ ಆವರಿಸಿಕೊಳ್ಳುವುದೇ..? ಅದರಲ್ಲೂ ಮೇಲಧಿಕಾರಿಗಿಂತ ಹೆಚ್ಚಾಗಿ ಕೊಂದವನನ್ನು ಹಿಡಿಯದಿದ್ದರೆ ಅಷ್ಟೇ ಎನ್ನುವ ಧಮಕಿ ಬ್ಲಾಕ್ ಮೇಲ್ ಬೇರೆ. ತನ್ನನ್ನು ಕೊಲೆಮಾಡಿದವರು ಯಾರು ಎಂಬುದನ್ನು ತಿಳಿದುಕೊಳ್ಳಲು ಆ ದೆವ್ವ ಕಡಿಮೆ ಅಬ್ಬರಿಸಲಿಲ್ಲ ಬಿಡ್ರೀ...
ಆಮೇಲೆ ಅನಂತ್ ನಾಗ್ ಸತ್ತು ದೆವ್ವವಾಗಿ ಮತ್ತೊಂದು ಆತ್ಮಕ್ಕೆ ಕತೆ ಹೇಳಿದ್ದು ಹೊಸಬರ ಪ್ರಯತ್ನದಲ್ಲಿ. ಇಲ್ಲಿ ದೆವ್ವಕ್ಕೆ maturity ಇತ್ತು, ಹಾಗೆಯೇ ದೆವ್ವದ ಮನೆ ಆಳಾಗಿದ್ದ ಆಫ್ ಕೋರ್ಸ್ ಮತ್ತೊಂದು ದೆವ್ವ ರಾಜು ತಾಳಿಕೋಟೆ ಸಹ ಯಾವುದೇ ಕಾಟ ಕೊಡಲಿಲ್ಲ. ಆಮೇಲೆ ಒಟ್ಟೊಟ್ಟಿಗೆ ಆವರಿಸಿಕೊಂಡದ್ದು ಐದೈದು ದೆವ್ವಗಳು. ನಮಗೆ ಸರಿಯಾದ ಶ್ರಾಧ ಮಾಡಿಲ್ಲ , ನಮಗೆ ಮೋಕ್ಷ ಸಿಕ್ಕಿಲ್ಲ, ಅದಕ್ಕಾಗಿ ಮದುವೆ ಮಾಡಿಕೊ ಎಂದು ರಮೇಶ್ ಅರವಿಂದ್ ಗೆ ಕಾಡಿದ್ದು ದೆವ್ವಗಳು.  ಆಮೇಲೆ ಒಂದು ಮನೆಯೊಳಗೇ ಒಂದು ದೆವ್ವ ಕಾಡಿತ್ತಾದರೂ ಮತ್ತೊಂದು ದೆವ್ವ ತಂತ್ರ ಮಾಡಿ ಸೇಡು ತೀರಿಸಿಕೊಂಡಿತು. ಆದರೆ ಸಾಯುವ ಕಡೆಗಳಿಗೆಯಲ್ಲಿ ಸುಂದರಿ ನೋಡಿ ಪ್ರೀತಿಸಲೇ ಬೇಕೆಂಬಾಸೆಯನ್ನು ಮನಸ್ಸಿನಲ್ಲಿಟ್ಟು ಕೊಂಡು ಅತೃಪ್ತ ಆತ್ಮವಾಗಿ ಕಾಡಿದ ದೆವ್ವ ಮುಟ್ಟದೆ ಲವ್ ಮಾಡೋಣ ಅನ್ನೋದೇ. ಪಾಪ ಸುಂದರಿಗೇನು ಗೊತ್ತು..? ಇವನ್ಯಾರೂ ಈ ಕಡುಕಲಿಗಾಲದಲ್ಲೂ ಹೀಗೆಲ್ಲ ಮಾತನಾಡುತ್ತಿದ್ದಾನಲ್ಲ ಎಂಬ ಅನುಮಾನ ಪಡದೆ ಇವನ್ಯಾರೋ ಸಭ್ಯರಲ್ಲಿ ಸಭ್ಯ ಅಂದುಕೊಂಡು ಪ್ರೀತಿಸಿದರೆ ಆಮೇಲೆ ಗೊತ್ತಾದದ್ದು ನಾನು ಪ್ರೀತಿಸಿದ್ದು ದೆವ್ವವನ್ನು ಎಂಬುದು. ಇದೆಲ್ಲದರ ಜೊತೆಗೆ ಅನ್ಯಾಯವಾಗಿ ಕೊಲೆಗೀಡಾದ ನಾಲ್ಕು ಆತ್ಮಗಳು ದೆವ್ವವಾಗಿ ಪ್ರೇಕ್ಷಕನಿಗೆ ಸಿನಿಮಾ ಕತೆ ಹೇಳಿದ ಉದಾಹರಣೆಯೂ ನಡೆದುಹೋಯಿತಲ್ಲ. ಸತ್ತು ಬಿದ್ದ ಭಗ್ನಪ್ರೇಮಿ, ಸಹ ನಿರ್ದೇಶಕ ಒಬ್ಬ ಚಿಕ್ಕ ಹುಡುಗ.. ಎಲ್ಲರೂ ಸೇರಿಕೊಂಡು ಮನುಷ್ಯರಿಗೆ ಕತೆ ಹೇಳಿ ನಂಬಿಸಿಬಿಟ್ಟದ್ದೂ ಉಂಟು.
ಇದರ ನಡುವೆ ಒಂದೆರೆಡು ದೆವ್ವಗಳು ಮನೆಯಲ್ಲಿಯೇ ಇದ್ದು ಬಂದ ಬಂದವರನ್ನು ಹೆದರಿಸಿದ್ದೂ ಉಂಟು. ಆದರೆ ಇವುಗಳ ನಡುವೆ ಅದೊಂದು ಹೆಣ್ಣು ದೆವ್ವ ರಸ್ತೆ ನಡುವಣ ಕಲ್ಲು ಸರಿಸಿದ್ದದ್ದನ್ನೇ ನೆಪಮಾಡಿಕೊಂಡು ಭಯಂಕರ ಪ್ಲಾನ್ ಮಾಡಿ ಹತ್ತಾರು ಸರಣಿ ಕೊಲೆಗಳನ್ನು ಮಾಡಿ ಸೈ ಅನಿಸಿಕೊಂಡಿತು ನೋಡಿ. ಅದರದೂ ಒಂದು ಅಹವಾಲು.. ನನ್ನನ್ನು ಕೊಂದವರು ಯಾರು ಎಂಬುದು ಗೊತ್ತಾಗಬೇಕು ಎಂಬುದು.ಅಲ್ಲಮ್ಮಾ.. ಮನುಷ್ಯ ಮಾತ್ರದವರು ಗೊತ್ತಿಲ್ಲದೇ ಕಲ್ಲು ಸರಿಸಿ ಸಾಯಿಸಿದರೂ ಎಂಬುದನ್ನೇ ನೆಪವಾಗಿಟ್ಟುಕೊಂಡು ಕಲ್ಲು ಸರಿಸಿದವರನ್ನೆಲ್ಲಾ ಸಾಯಿಸುತ್ತೀಯಲ್ಲ ಇದೇನು ನ್ಯಾಯ.. ಹಾಗಾದರೆ ನಾವ್ಯಾಕೆ ಸತ್ತೆವು, ನಾವು ಮಾಡದ ತಪ್ಪಿಗಾಗಿ ಸುಮ್ಮನೆ ಸತ್ತೆ ಹೋದೆವಲ್ಲಾ ಎಂಬೊಂದು ಕೊರಗಿಟ್ಟುಕೊಂಡೆ ಸತ್ತ ಆ ಹತ್ತು ಜನರೂ ದೆವ್ವಗಳಾದರೆ ನಿನ್ನ ಗತಿಯೇನು..?  ಇಷ್ಟಕ್ಕೂ ತೀರಾ ಬುದ್ದಿವಂತೆಯಾದ ನೀನು ಬರೀ ಕಲ್ಲು ಜರುಗಿಸಿದವರ ಮೇಲಷ್ಟೇ ಸೇಡು ತೀರಿಸಿಕೊಳ್ಳುವುದು ಅದ್ಯಾವ ನ್ಯಾಯಾ..? ಆ ರಸ್ತೆ/ಹಾರುಸೇತುವೆಗಾಗಿ ಕೋಟ್ಯಾಂತರ ಹಣ ಸರ್ಕಾರ ಮಂಜೂರು ಮಾಡಿದ್ದರೂ ಖರ್ಚು ಮಾಡದೆ ತಮ್ಮ ಬೊಕ್ಕಸಕ್ಕೆ ಹಾಕಿಕೊಂಡು ರಾಜಕಾರಣಿಗಳು, ಆ ಎಂಜಲನ್ನು ಬಿಡದೆ ನೆಕ್ಕಿದ ಅಧಿಕಾರಿಗಳು ಮುಂತಾದವರನ್ನು ವಿಚಾರಿಸಿಕೊಂಡಿದ್ದರೆ ಮೂಲಕ್ಕೆ ಕೈ ಹಾಕಬಹುದಿತ್ತಲ್ಲ ಮತ್ತು  ಒಂದು ರಸ್ತೆಯಷ್ಟೇ ಅಲ್ಲ, ಹಲವಾರು ರಸ್ತೆಯ ಸ್ಥಿತಿಗತಿ ಚೆನ್ನಾಗಿರುತ್ತಿತ್ತಲ್ಲ ಎಂದು ಕೂರಿಸಿಕೊಂಡು ಬುದ್ದಿವಾದ ಹೇಳಬಹುದಾಗಿತ್ತು. ಏಕೆಂದರೆ ಅದೇನುತಲೆ ಬಾಚದೇ  ಕೂದಲು ಕೆದರಿಕೊಂಡು , ಎರ್ರಾಬಿರ್ರಿ ಕಾಡಿಗೆಯನ್ನು ಕಣ್ಣಿಗೆ ಬಳಿದುಕೊಂಡು ಹೆದರಿಸುವ ಅಶಿಸ್ತು ದೆವ್ವವಲ್ಲವಲ್ಲ..ಸಾವಧಾನವಾಗಿ ಕುಳಿತುಮಾತನಾಡುತ್ತಿತ್ತು.. ಆದರೆ  ಆ ಧೈರ್ಯವಿರಲಿಲ್ಲ ಯಾರಿಗೂ ಎನಿಸುತ್ತದೆ.
ಆನಂತರ ಬಂದದ್ದು ನಮ್ಮ ಸವಾಲ್ ಗೆ ಸವಾಲ್ ಎನ್ನುವ ಸ್ಟಾರ್ ಗೆ ಆಟವಾಡಿಸುವ ದೆವ್ವ. ಈ ದೆವ್ವದ್ದು ಕಾಟವಿಲ್ಲ ಬಿಡಿ. ಮೊಮ್ಮಗನನ್ನು ಒಳ್ಳೆ ದಾರಿಗೆ ತರಬೇಕು ಎನ್ನುವ ಹಪಾಹಪಿಯ ದೆವವ್ವಿದು. ಒಟ್ಟಿನಲ್ಲಿ ಈ ವರ್ಷದ ಅತ್ಯಂತ ಒಳ್ಳೆಯದೆವ್ವ ಪ್ರಶಸ್ತಿ ಇದಕ್ಕೆ ಸಿಗಬೇಕೇನೋ..? ಆನಂತರದ್ದು ಹಳೆಯ ಆಪ್ತಮಿತ್ರ ನೆನಪಿಗೆ ತರುವ ದೆವ್ವ. ಚಿಕ್ಕ ಹುಡುಗಿಯ ದೆವ್ವವಾದರೂ  ಮುಲಾಜಿಲ್ಲದೆ ದೊಡ್ಡವರನ್ನು ಕಾಡಿದ ದೆವ್ವ. ಈಗ ಸಧ್ಯಕ್ಕೆ ಉಪೇಂದ್ರ ಅವರನ್ನು ಆವರಿಸಿಕೊಂಡ ದೆವ್ವ. ಸುಮ್ಮನಿದ್ದರೂ ಅಬ್ಬರಿಸುವ ಉಪ್ಪಿ ಮೇಲೆ ದೆವ್ವ ಆವರಿಸಿದರೆ ಗತಿ ಏನು ಶಿವನೆ ಎನ್ನುವ ಹಾಗಿಲ್ಲ ಬಿಡಿ. ಈ ದೆವ್ವ  ದೇವರ ಫ್ರೆಂಡ್ಶಿಪ್ ಮಾಡಿಕೊಂಡ ದೆವ್ವ..
ಒಟ್ಟಿನಲ್ಲಿ ಏಳು ತಿಂಗಳಿನಲ್ಲಿ ಇಷ್ಟೆಲ್ಲಾ ದೆವ್ವಗಳನ್ನು ನೋಡಿದ ನಾವು ಅತ್ಯುತ್ತಮ ಒಳ್ಳೆಯ ದೆವ್ವ, ಅತ್ಯುತ್ತಮ ಕೆಟ್ಟ ದೆವ್ವ, ಪೋಷಕ ದೆವ್ವ, ನಗಿಸಿದ ದೆವ್ವ, ಅಳಿಸಿದ ದೆವ್ವ, ಬಾಲ ದೆವ್ವ .. ಹೀಗೆ ಪ್ರಶಸ್ತಿ ಕೊಟ್ಟೆ ಬಿಡುವುದಾದರೆ ನಿಮ್ಮ  ಆಯ್ಕೆ  ಯಾವುದು ಎಂಬುದನ್ನು  ಹೇಳುವ ಮುನ್ನ ಹುಷಾರು..? ದೆವ್ವಕ್ಕೆ ನಿಮ್ಮ ಆಯ್ಕೆ  ತೃಪ್ತಿ ತರದೇ ಇದ್ದರೆ ಕಾಡುವುದಿಲ್ಲ ಎನ್ನುವುದಕ್ಕೆ ಖಾತರಿಯಿಲ್ಲ..

Thursday, July 14, 2016

ಆವಾಹನೆಗೊಳಗಾದ ಸಿದ್ದಿಕಿಗಾಗಿ ಚಿತ್ರ ನೋಡಬೇಕು..

ಸರ್..ನಾನು ದೇವರೊಂದಿಗೆ  ಮಾತನಾಡುತ್ತೇನೆ, ಅವನು ಯಾರನ್ನೋ  ನನ್ನ ಬಳಿಗೆ ಕಳುಹಿಸೋ ಎನ್ನುತ್ತಾನೋ ಅವರನ್ನು ಕಳಿಸುತ್ತೇನೆ, ನಾವೆಲ್ಲಾ  ಯಮನ ಏಜೆಂಟ್ ಇದ್ದ ಹಾಗೆ. ನಿಮಗಂತೂ ಲೈಸೆನ್ಸ್ ಇದೆ. ನೀವು ಸಾಯಿಸಿದರೆ ನಿಮಗೆ ಸವಲತ್ತು ಸಿಗುತ್ತದೆ. ..ಎನ್ನುತ್ತಾನೆ ಎದುರಿಗೆ ಕುಳಿತವನು. ಅಲ್ಲಿಗೆ ಪೋಲಿಸ್ ಅಧಿಕಾರಿಗೆ ಆತ ಕೊಲೆಗಾರ ಎನಿಸುವುದಕ್ಕಿಂತ ತಿಕ್ಕಲು ಮನುಷ್ಯ ಎನಿಸುತ್ತದೆ. ಹುಚ್ಚುಹುಚ್ಚಾಗಿ ಮಾತಾಡಿ, ಸುಮ್ಮನೆ ಜೈಲಿನಲ್ಲಿ ಕುಳಿತು ತಿನ್ನೋಣ ಎಂದುಕೊಂಡಿರುವ ಹುಚ್ಚ ಎನಿಸಿ ಅವನನ್ನು ಒಂದು ಕೋಣೆಯೊಳಗೆ ಬಂಧಿಸಿ ಮರೆತುಬಿಡುತ್ತಾರೆ. ಅಲ್ಲಿಂದ ಚಿತ್ರ ತೆರೆದುಕೊಳ್ಳುತ್ತದೆ. ರಮಣ ರಾಘವ ಅಲ್ಲಿನ ಜನರನ್ನು ಪೋಲಿಸರನ್ನು ಕಾಡುವಷ್ಟೇ ನವಾಜುದ್ದೀನ್ ಸಿದ್ದಿಕಿ ನಮ್ಮನ್ನು ಕಾಡುತ್ತಾರೆ. ನಮ್ಮನ್ನು ಹೆದರಿಸುತ್ತಾರೆ. ಅದೆಲ್ಲಿ ಮಾತನಾಡುತ್ತಾ ಕಬ್ಬಿಣದ ಕೋಲಿನಿಂದ ಹೊಡೆಯುತ್ತಾನೋ ಎನಿಸುವಷ್ಟು ಭಯಾನಕ ಭಯವನ್ನು ತುಂಬುತ್ತಾರೆ.
ಈ ಹಿಂದೆ ವರ್ಮ ರಮಣ ರಾಘವ ಎನ್ನುವ ಕೊಲೆಪಾತಕನನ್ನು ಕುರಿತು ಸಿನಿಮಾ ಮಾಡಿದ್ದರು.ಹಾಗೆ ನೋಡಿದರೆ ಸರಣಿ ಹಂತಕರು, ಅತ್ಯಾಚಾರಿಗಳು ರೌಡಿಗಳು ಮುಂತಾದ ಅಪರಾಧಿಗಳ ಬಗೆಗೆ ಸಿನಿಮಾ ತಯಾರಾಗಿರುವಷ್ಟು ಮಹಾತ್ಮರ ಬಗೆಗೆ ಚಿತ್ರ ಮಾಡಿರುವುದು ಕಡಿಮೆಯೇ. ಇದು ಬಹುಶಃ ಎಲ್ಲಾ ಭಾಷೆಯಲ್ಲಿಯೂ ಸತ್ಯ. ರಮಣ ರಾಘವ 2.0 ಇಷ್ಟವಾಗುವುದು ಅದರ ಕತೆಗಿಂತಲೂ ನಾಯಕ ನವಾಜುದ್ದೀನ್ ಅವರ ಅಭಿನಯದಿಂದ. ತನ್ಮಯತೆ ಅದೂ ಇದೂ ಎಲ್ಲವನ್ನು ಬಿಟ್ಟಾಕಿ. ಆ ಪಾತ್ರವನ್ನು ತನ್ನಂತೆ ಮತ್ತು ತನಗೆ ಒಪ್ಪಿಗೆಯಾಗುವಂತೆ ಆವಾಹಿಸಿಕೊಂಡು ಅಭಿನಯಿಸುವ ಸಿದ್ದಿಕಿ ಆ ಪಾತ್ರದ ಬಗೆಗೆ ಹೇವರಿಕೆ ಕೋಪ ಬರುವಂತೆ ಮಾಡುತ್ತಾರೆ. ಹಾಗೆಯೇ ತಮ್ಮ ಅಭಿನಯದ ಬಗೆಗೆ ಮೆಚ್ಚುವಂತೆ ಅಭಿನಯಿಸುತ್ತಾರೆ.
ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರ ಎಲ್ಲಾ ಪ್ರೇಕ್ಷಕರಿಗೂ ಹೇಳಿ ಮಾಡಿಸಿದ್ದಲ್ಲ. ಚಿತ್ರವನ್ನು ತುಂಬಾ ಒರಟಾಗಿ ನಿರೂಪಿಸಿರುವ ಕಶ್ಯಪ್ ಚಿತ್ರದಲ್ಲಿನ ಕತೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿಯೇ ನಿರೂಪಿಸಿದ್ದಾರೆ. ಇಲ್ಲಿ ಹೀರೋ ಎನಿಸಿಕೊಳ್ಳುವ ಪಾತ್ರವಾಗಲಿ, ವಿಲನ್ ಎನಿಸಿಕೊಳ್ಳುವ ಪಾತ್ರವಾಗಲಿ ಇಲ್ಲ. ಸರಣಿ ಹಂತಕನ ಮನಸ್ಥಿತಿ ಅವನ ಪೈಶಾಚಿಕತೆ ಮತ್ತು  ಪೋಲೀಸರ ಹುಡುಕಾಟ ಇವಷ್ಟನ್ನೂ ಸೇರಿಸಿ ಕತೆ ಹೆಣೆದಿದ್ದಾರೆ ನಿರ್ದೇಶಕರು. ಒಂದು ಕ್ರೈಂ ಥ್ರಿಲ್ಲರ್, ಒಬ್ಬ  ಸೈಕೋಪಾತ್ ನ ಕತೆ ಇದಾಗಿದ್ದರೂ ನವಾಜುದ್ದೀನ್ ಸಿದ್ದಿಕಿ ಅವರ ಅಭಿನಯಕ್ಕಾಗಿ ನೋಡಲೇಬೇಕಾದ ಚಿತ್ರವಿದು.

Tuesday, July 12, 2016

ಸಂಭಾಷಣೆಕಾರನಿಗೂ ನಿರ್ದೇಶಕನಿಗೂ ಬಂದಾರೆ ಮುನಿಸು...

ಚಿತ್ರಗಳಿಗೆ ಸಂಭಾಷಣೆ ಬರೆಯುವ ಕೆಲಸ ಒಂತರಾ ಖುಷಿ ಕೊಡುವ ಕೆಲಸವಾದರೂ ಅದು ಸವಾಲಿನ ಕೆಲಸ.. ಯಾಕೆಂದರೆ ಕತೆಯನ್ನು ತಲೆಗೆ ಹಾಕಿಕೊಂಡು ಇರುವ ದೃಶ್ಯಕ್ಕೆ ಸಂಭಾಷಣೆಯನ್ನು, ಮತ್ತು ಇಲ್ಲದ ದೃಶ್ಯವನ್ನು ಸೃಷ್ಟಿಸಿ ಹಾಗೆಯೇ ಆ ಸಂದರ್ಭ ಮತ್ತು ದೃಶ್ಯದ ಪ್ರಾಮುಖ್ಯತೆಯನ್ನು ಮನಗಂಡು ಹಾಗೆಯೇ ದೃಶ್ಯದಲ್ಲಿ ಅನಾವರಣಗೊಳ್ಳಬೇಕಾದ ಮುಖ್ಯ ಅಂಶ ಮತ್ತು ಮತ್ತು ದೃಶ್ಯಕ್ಕೆ ಒಟ್ಟಾರೆ ಚಿತ್ರದಲ್ಲಿರಬಹುದಾದ ನಿಗದಿತ ಸಮಯ ಇವೆಲ್ಲವನ್ನೂ ಲೆಕ್ಕ ಹಾಕಿ ಸಂಭಾಷಣೆ ಬರೆಯಬೇಕಾಗುತ್ತದೆ. ಮೂಲಕತೆ ಸಂಭಾಷಣೆಕಾರನದೆ ಆದರೆ, ಅಥವಾ ಸಂಭಾಷಣೆಕಾರನೇ ಕತೆಗಾರನಾದರೆ ಅಥವಾ ನಿರ್ದೇಶಕನೇ ಕತೆಗಾರ ಸಂಭಾಷಣೆಕಾರನಾಗಿದ್ದರೆ ಅದವರ ಮರ್ಜಿಗೆ ಬಿಟ್ಟದ್ದು. ಅಥವಾ ಸಿನಿಮ ರಿಮೇಕ್ ಆಗಿದ್ದರಂತೂ ಸಂಭಾಷಣೆಯಲ್ಲಿ ಸೃಜನಶೀಲತೆ ನೆಪಮಾತ್ರ ಎನ್ನಬಹುದು. ಆದರೆ ಬೇರೆಯವರ ಕತೆಗೆ ಸಂಭಾಷಣೆ ಬರೆದು ಅದನ್ನು ಒಪ್ಪಿಸುವ ಕೆಲಸ ಸುಲಭದ್ದಲ್ಲ. ಕೆಲವೊಮ್ಮೆ ನಿರ್ದೇಶಕನ ಆಶಯ, ಕತೆಯ ಆಶಯ, ಪಾತ್ರಧಾರಿಗಳ ಪಾತ್ರಪೋಷಣೆ ಇವೆಲ್ಲವೂ ಏರುಪೇರಾಗಿ ಬಿಡುತ್ತವೆ. ಜೊತೆಗೆ ದೃಶ್ಯದಲ್ಲಿರಬಹುದಾದ ಪಾತ್ರಗಳಿಗೆ ಹೆಚ್ಚು ಪಾತ್ರಗಳಿದ್ದರೆ ಸಂಭಾಷಣೆ ಹಂಚುವ ಮತ್ತು ಅವರುಗಳ ಸ್ವಂತಿಕೆ/ಪಾತ್ರಪೋಷಣೆ ಕಾಯ್ದುಕೊಳ್ಳುವ ಕೆಲಸ ಇವೆಲ್ಲಾ ತುಂಬಾ ಜಾಗರೂಕತೆಯಿಂದ ಮಾಡುವಂತಹದ್ದು. ಅದೊಂದು ಸಿನಿಮಾಕ್ಕೆ ಸಂಭಾಷಣೆ ಬರೆಯಲು ಒಪ್ಪಿಕೊಂಡ ಸಂಭಾಷಣೆಕಾರನಿಗೆ ನಿರ್ದೇಶಕರು ಕತೆಯನ್ನು ವಿವರವಾಗಿ ಬಿಚ್ಚಿಟ್ಟಿರಲಿಲ್ಲ..ಬದಲಿಗೆ ಹೀಗೂ ಇರಬಹುದು, ಅಥವಾ ಅದನ್ನು ಹೇಗಾದರೂ ಬರೆಯಬಹುದು, ಅಥವಾ ನಿಮಗಿಷ್ಟ ಬಂದ ಹಾಗೆ ಬರೆಯಿರಿ ಸಾರ್ ಎಂದೆ ಹೇಳುತ್ತಿದ್ದರು. ಕತೆಯನ್ನು ನಿರ್ಮಾಪಕರ ಮುಂದೆ, ಕಲಾವಿದರ ಮುಂದೆ ನಿರೂಪಣೆ ಕೊಡಲು ಸಂಭಾಷಣೆಕಾರನನ್ನು ಕರೆದುಕೊಂಡು ಹೋಗುತ್ತಿದ್ದರು. ಎಲ್ಲವೂ ಸೆಟ್ ಆಯಿತು. ನಿರ್ಮಾಪಕರಿಗೆ, ಕಲಾವಿದರುಗಳಿಗೆ ಎಲ್ಲರಿಗೂ ಕತೆಯನ್ನು ಸಂಭಾಷಣೆಯನ್ನು ಒಪ್ಪಿಸುವ ಜವಾಬ್ದಾರಿಯನ್ನು ಸಂಭಾಷಣೆಕಾರ ಮಾಡಿದ್ದರು. ಆದರೆ ಅಷ್ಟೆಲ್ಲಾ ಆದ ನಂತರ ನಿರ್ದೇಶಕರಿಗೂ ಸಂಭಾಷಣೆಕಾರರಿಗೂ ಯಾವುದೋ ಕಾರಣಕ್ಕೆ ಕಿರಿಕ್ಕು ಬಂದಿತ್ತು, ಯಾವಾಗ ಕೆಲಸಗಳೆಲ್ಲವೂ ಮುಗಿದಿತ್ತೋ ನಿರ್ದೇಶಕರೂ ಸಂಭಾಷಣೆಕಾರರನ್ನು ಸ್ವಲ್ಪ ಜೋರಾಗಿಯೇ ಝಾಡಿಸಿದ್ದರು. ಇದರಿಂದ ಕೋಪಗೊಂಡ ಸಂಭಾಷಣೆಕಾರ ತಾನು ಬರೆದಿದ್ದೆಲ್ಲವನ್ನು ಒಂದು ಪುಟವನ್ನೂ ಬಿಡದೆ ತೆಗೆದುಕೊಂಡು ಮನೆಗೆ ಬಂದವರು ಸಂಭಾಷಣೆ ಬೇಕಾದರೆ ನನ್ನೊಡನೆ ರಾಜಿಯಾಗಲಿ ಎಂದರು. ಆದರೆ ನಿರ್ದೇಶಕರು ತುಟಿಕ್ ಪಿಟಿಕ್ ಎನ್ನಲಿಲ್ಲ. ಶೂಟಿಂಗ್ ದಿನಗಳು ಹತ್ತಿರ ಬಂದರೂ ಉಹೂ .. ನಿರ್ದೇಶಕರ ಪತ್ತೆಯಿಲ್ಲ. ಈಗ ಸಂಭಾಷಣೆಕಾರಿಗೆ ಆಶ್ಚರ್ಯ ಇಡೀ ಸ್ಕ್ರಿಪ್ಟ್ ನನ್ನತ್ರವೇ ಇದೆ. ಶೂಟಿಂಗ್ ಬೇರೆ ಹತ್ತಿರ ಬರುತ್ತಿದೆ. ಅದೇಗೆ ನಿರ್ದೇಶಕರು ನಿರುಮ್ಮಳವಾಗಿದ್ದಾರೆ ಎಂದು. ಆದರೆ ಶೂಟಿಂಗ್ ಪ್ರಾರಂಭವಾಗಿ ಅನಾಯಾಸವಾಗಿ ನಡೆಯತೊಡಗಿದಾಗ ಬೆಚ್ಚಿ ಬಿದ್ದ ಸಂಭಾಷಣೆಕಾರರು ಚಿತ್ರತಂಡದವರನ್ನು ಸಂಪರ್ಕಿಸಿದಾಗ ಅದು ನಿರ್ದೇಶಕರ ಕಿವಿಗೆ ಬಿದ್ದಾಗ ಅವರು ಹೇಳಿದ್ದಿಷ್ಟು. "ಎಲ್ಲಾ ತಲೇಲಿ ಇದೆಯಮ್ಮ, ಸುಮ್ನೆ ನಾನು ಕುಳಿತ್ಕೊಂಡು ಬರೆಯೋಕ್ಕಾಗಲ್ಲವಲ್ಲ ಅದಕ್ಕೆ ಬರೆಸಿದ್ದು.. "
ಚಿತ್ರರಂಗದಲ್ಲಿ  ಇದೊಂದು ಆರೋಪ ಇದ್ದೇ ಇದೆ. ಅದೊಮ್ಮೆ  ಸ್ಕೈಲೈನ್ ಸ್ಟುಡಿಯೋ ಮುಂದೆ ಸಿಕ್ಕ ಸಂಭಾಷಣೆಕಾರ-ನಿರ್ದೇಶಕ ರಾಮ್ ನಾರಾಯಣ್ ಏನೇ ಆಗಲಿ ಕಣ್ರೀ ನಾವೇನೋ ಅಷ್ಟು ಚೆನ್ನಾಗಿ ಬರೆದುಕೊಡ್ತೀವಿ.. ಆದ್ರೆ ನಿರ್ದೇಶಕರು ಅದನ್ನು ತಗೋಳ್ಲೋದೆ ಇಲ್ಲ ಬಿಡಿ.. ಏನೇನೋ ಮಾಡಿ ಬಿಡ್ತಾರೆ, ಅದಕ್ಕೆ ಒಮ್ಮೊಮ್ಮೆ ಬೇಸರ ಆಗೋಗುತ್ತೆ.. ಇನ್ಮುಂದೆ ಸುಮ್ನೆ ನಾವು ಚೆನ್ನಾಗಿ ಸಂಭಾಷಣೆ-ಸ್ಕ್ರಿಪ್ಟ್ ಬರೆದು ನಿರ್ದೇಶಕರಿಗೆ ಕೊಟ್ಟು ಅದು ಹಾಳಾಗಿ ಅವರನ್ನು ಬೈದುಕೊಳ್ಳೋದಕ್ಕಿಂತ ಸುಮ್ನೆ ನಮ್ಮ ನಮ್ಮ ಸ್ಕ್ರಿಪ್ಟ್ ನಾವೇ ಡೈರೆಕ್ಟ್ ಮಾಡೋದು ಒಳ್ಳೇದು ಎಂದಿದ್ದರು. ಇದು ನಿಜವೂ ಹೌದು. ಸಂಭಾಷಣೆಕಾರ ಮತ್ತು  ನಿರ್ದೇಶಕ ಇಬ್ಬರ ಸಮಾಗಮ ಅಷ್ಟು ಸುಲಭವಲ್ಲ. ನಿರ್ದೇಶಕನ ಆಶಯವಷ್ಟೂ ಸಂಭಾಷಣೆಕಾರನ ತಲೆಗೆ ಅಚ್ಚೋತ್ತಬೇಕು.
ಮೊನ್ನೆ ಮೊನ್ನೆ ರನ್ ಅಂಟನಿ ಚಿತ್ರದ್ದು ಅದೇ ಕತೆ. ಸಂಭಾಷಣೆಕಾರ ಹರಿ ಪಾರಖ್ ನಾನು ಬರೆದ ಸಂಭಾಷಣೆಗಳಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದರು. ನಾನು ಸಂಭಾಷಣೆಕಾರನಾಗಿ ಚಿತ್ರರಂಗ ಪ್ರವೇಶಿಸಿದ ಹೊಸತರಲ್ಲಿ ಸಂಭಾಷಣೆ ಬರೆದು ಆನಂತರ ಸಿನೆಮಾವನ್ನು ಮೊದಲ ದಿನವೇ ನೋಡಿ, ನಾವು ಬರೆದ ಸಂಭಾಷಣೆ ಎಲ್ಲಿ ಎಂಬುದನ್ನು ಹುಡುಕುವುದೇ ಆಗಿತ್ತು. ಆದರೆ ನಾವೇ ಅಂದುಕೊಂಡಿದ್ದ ಮುಖ್ಯ ಎನಿಸಿದ್ದ ಸಂಭಾಷಣೆಗಳು ಅಲ್ಲಿರದೆ ಇದ್ದಾಗ ಬೇಸರವೂ ಆಗುತ್ತಿತ್ತು. ಕೇಳಿದರೆ ಅದಿಲ್ಲ ಇದಿಲ್ಲ, ಹಾಗಲ್ಲ ಹೀಗಲ್ಲ ಎಂಬೆಲ್ಲಾ ಉತ್ತರಗಳು ಬಂದುಬಿಡುತ್ತಿದ್ದವು. ತೀರಾ ಮಾತಾಡಿದರೆ ಬರವಣಿಗೆ ನಂಬಿಕೊಂಡ ನಮ್ಮಂತವರಿಗೆ ಮುಂದಿನ ಸಿನೆಮಾಗಳಲ್ಲಿ ಅವಕಾಶಗಳು ಸಿಗುವುದಿರಲಿ, ಬೇರೆ ಸಿನೆಮಾಗಳ ಅವಕಾಶಗಳು ತಪ್ಪಿಹೋಗುತ್ತಿದ್ದವು. ಹಾಗಾಗಿ ಹಣವಷ್ಟನ್ನೇ ತಲೆಯಲ್ಲಿಟ್ಟುಕೊಂಡು ಸಂಭಾಷಣೆ ಬರೆದು ಒಪ್ಪಿಸಿಬಂದು ಕೈ ತೊಳೆದುಕೊಳ್ಳುತಿದ್ದೆವು.
ನಾನು ಒಂದು ಚಿತ್ರಕ್ಕೆ ಸಂಭಾಷಣೆ ಬರೆಯಲು ಒಪ್ಪಿಕೊಂಡಿದ್ದೆ. ಸುಮಾರು 73 ದೃಶ್ಯಗಳಿದ್ದ ಸಿನಿಮಾದಲ್ಲಿ 64 ದೃಶ್ಯಗಳನ್ನು ಬರೆದು ಒಪ್ಪಿಸಿಬಿಟ್ಟಿದ್ದೆ. ಇನ್ನುಳಿದ 9 ದೃಶ್ಯಗಳು ಹಾಸ್ಯಮಯ ದೃಶ್ಯವಾಗಿದ್ದರಿಂದ ಅದಕ್ಕೆ ಒಂದಷ್ಟು ಸಮಯ ಕೋರಿದ್ದೆ. ಇದಾದ ಸ್ವಲ್ಪ ದಿನದಲ್ಲೇ ಕರೆ ಮಾಡಿದ ನಿರ್ದೇಶಕರು ಬೇಗನೆ ಭೇಟಿಯಾಗುವಂತೆ ಹೇಳಿದಾಗ ಹೋಗಿ ಭೇಟಿಯಾಗಿದ್ದೆ. ಅಲ್ಲಿ ಕನ್ನಡದ ಈವತ್ತಿನ ಪ್ರಮುಖ ಹಾಸ್ಯನಟರಲ್ಲಿ ಒಬ್ಬರಾದವರು ಕುಳಿತಿದ್ದು ಇವರು ಹಾಸ್ಯದೃಶ್ಯಗಳನ್ನು ಬರೆಯುತ್ತಾರೆ, ನಿಮ್ಮ ಅಭ್ಯಂತರ ಇಲ್ಲವೇ ಎಂದರು ನಿರ್ದೇಶಕರು. ನಾನು ಆಗಲಿ, ಒಳ್ಳೆಯದೇ ಎಂದೆ. ಇದಾದ ನಂತರ ಪತ್ರಿಕಾಗೋಷ್ಠಿ ಯಲ್ಲಿ ಸಂಭಾಷಣೆಕಾರ ಎಂದು ಅವರ ಹೆಸರನ್ನೇ ಪ್ರಮುಖವಾಗಿ ಘೋಷಿಸಿದ್ದರು. ಆನಂತರ ವೇದಿಕೆಯ ಕೆಳಗೆ ಬಂದ ಹಾಸ್ಯನಟರು ಬೇಸರಿಸಿಕೊಳ್ಳಬೇಡಿ, ನಾನು ಎಷ್ಟು ಹೇಳಿದರೂ ನಿರ್ದೇಶಕರು ಕೇಳಲಿಲ್ಲ, ಕೇವಲ ಒಂಭತ್ತು ದೃಶ್ಯ ಬರೆದು ಇಡೀ ಸಿನಿಮಾದ ಸಂಭಾಷಣೆಯ ಕ್ರೆಡಿಟ್ ತೆಗೆದುಕೊಳ್ಳುವುದು ನನಗೂ ಸರಿಹೋಗಲಿಲ್ಲ ಎಂದು ನುಡಿದಿದ್ದರು. ಅಷ್ಟರಲ್ಲಾಗಲೇ ನನಗೆ ಅದೆಲ್ಲಾ ರೂಢಿಯಾಗಿದ್ದರಿಂದ ನಕ್ಕು ಸುಮ್ಮನಾಗಿದ್ದೆ.
ಹಾಗಾದರೆ ಬರಹಗಾರರಿಗೆ ಬೆಲೆ ಇಲ್ಲವೇ..? ಅವರಿಗೆ ಸಿಗಬೇಕಾದ ಮರ್ಯಾದೆ ಸಿಗುತಿಲ್ಲವೇ..? ಅವರ ಬರವಣಿಗೆಗೆ ಕಿಮ್ಮತ್ತಿಲ್ಲವೇ..? ಖಂಡಿತ ಇದೆ. ಆದರೆ ಅದು ಒಬ್ಬ ನಿರ್ದೇಶಕನಿಗೆ ಗೊತ್ತಿರಬೇಕಾಗುತ್ತದೆ. ಒಂದು ಸಿನಿಮಾಕ್ಕೆ ಯಾವ ಯಾವ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು. ಏಕೆಂದರೆ ಬರಹ ಮತ್ತು ಸಂಗೀತ, ಸಾಹಿತ್ಯ ಇವು ಭಾವಕ್ಕೆ ಸಂಬಂಧಿಸಿದವು. ಶೈಲಿಗೆ ಸಂಬಂಧಿಸಿದವು. ಒಂದು ಸಿನೆಮಾವನ್ನು ನಿರ್ದೇಶಿಸಹೊರಡುವ ನಿರ್ದೇಶಕ ಮೊದಲಿಗೆ ತಾನು ಯಾವ ಕ್ಯಾಟೆಗರಿ ಸಿನಿಮಾ ಮಾಡುತ್ತಿದ್ದೇನೆ ಎಂಬುದನ್ನು ಅರಿತಿರಬೇಕು ಮತ್ತು ಅದರ ಬಗ್ಗೆ ಒಂದು ವಿಶದವಾದ ಅದ್ಯಯನ ಮಾಡಿರಬೇಕಾಗುತ್ತದೆ. ಏಕೆಂದರೆ ಪ್ರೇಮಕತೆ, ಥ್ರಿಲ್ಲರ್, ಹಾರರ್.. ಹೀಗೆ ನಾವೇನೆ ವಿಭಾಗಗಳನ್ನು ಮಾಡಿಕೊಂಡರೂ ಅದೆಲ್ಲದಕ್ಕೂ ಅದರದೇ ಆದ ನಿರೂಪಣೆಯ ಶೈಲಿ ವೇಗ, ಗತಿ ಇದ್ದೆ ಇರುತ್ತದೆ. ಇದರ ಜೊತೆಗೆ ನಿರ್ದೇಶಕನ ಶೈಲಿಯೂ ಸೇರಿಕೊಳ್ಳುತ್ತದೆ. ಅದು ಪಕ್ಕವಾದನಂತರ ನಾವು ಕಲಾವಿದರನ್ನು ಪಾತ್ರಕ್ಕೆ ತಕ್ಕಂತೆ ಹೇಗೆ ಆಯ್ಕೆ ಮಾಡುತ್ತೇವೆಯೋ ಹಾಗೆಯೇ ತಂತ್ರಜ್ಞರನ್ನೂ ಆಯ್ಕೆ ಮಾಡಬೇಕಾಗುತ್ತದೆ. ಇಲ್ಲಿ ನಿರ್ದೇಶಕ ಆಯಾ ತಂತ್ರಜ್ಞರ ಪರಣತಿಯನ್ನು ಅರಿತು ಅವರನ್ನು ಅಯ್ಕೆಮಾಡಿಕೊಳ್ಳಬೇಕಾಗುತ್ತದೆ ಅಥವಾ ಆಯ್ಕೆ ಮಾಡಿದ ತಂತ್ರಜ್ಞರಿಂದ ಇಚ್ಚಿತ ಕೆಲಸವನ್ನು ತೆಗೆದುಕೊಳ್ಳಬೇಕಾಗುತ್ತದೆ. ಎರಡೂ ಸಲ್ಲತಕ್ಕದ್ದೆ ಆದರೂ ಎರಡನೆಯದು ರಿಸ್ಕಿನ ಕೆಲಸ. ಇರಲಿ. ಅದರಲ್ಲೂ ಒಬ್ಬ ಬರಹಗಾರ, ಸಂಭಾಷಣೆಕಾರ ಎಂದಾಗ ಆತನ ವಿಶೇಷತೆ ಏನು ಎಂಬುದನ್ನು ಮನಗಾಣಬೇಕು. ಅವನ ಕಸುಬುದಾರಿಕೆಗೆ ಅವನ ಪ್ರಾವೀಣ್ಯತೆಗೆ ನಮ್ಮ ಸಿನಿಮಾದಲ್ಲಿ ಅವಕಾಶವಿದೆಯೇ, ಆತನ ಪ್ರತಿಭೆಗೆ ಸಾಟಿಯಾಗುವ ಕತೆ ನಮ್ಮ ಚಿತ್ರದ್ದೇ ಎಂಬುದನ್ನು ವಿಶ್ಲೇಷಣೆ ಮಾಡಬೇಕಾಗುತ್ತದೆ. ಆಗಾದಾಗ ಮಾತ್ರ ಅವರ ಪ್ರತಿಭೆಗೂ ನಮ್ಮ ಸಿನೆಮಾಕ್ಕೂ ಸಮಾಗಮ-ಸರಿಗಮ ಎನ್ನಬಹುದು. ಚುರುಕು ಮಾತುಗಳಿಂದ-ಬರಹಗಳಿಂದ, ತಮ್ಮ ವಿಶೇಷ ಪದಜೋಡನೆಯಿಂದ ಹೆಸರು ಮಾಡಿದವರ ಸಂಭಾಷಣೆಗೆ ಥ್ರಿಲ್ಲರ್ ಚಿತ್ರಗಳಲ್ಲಿ ಜಾಗ ಕಡಿಮೆಯೇ. ಹಾಗೆಯೇ ತುಂಬಾ ಗಂಭೀರವಾಗಿ, ವಸ್ತು ನಿಷ್ಟವಾಗಿ ಮತ್ತು ಅಂಕಿ ಅಂಶಗಳನ್ನ ಇಟ್ಟುಕೊಂಡು ಬರೆಯುವವರಿಗೆ ತಿಳಿ ಹಾಸ್ಯದ ಚಿತ್ರವನ್ನೂ ಕೊಟ್ಟುಬಿಟ್ಟರೆ ಸಿನಿಮಾದ ಕತೆ ಏನಾಗಬೇಡ ನೀವೇ ಹೇಳಿ. ಇತ್ತ ಅವರ ಪ್ರತಿಭೆಗೂ - ಸಿನಿಮಾದ ಆಶಯಕ್ಕೂ ಅಜಗಜಾಂತರವಾಗಿಬಿಡುತ್ತದೆ. ಆನಂತರ ನಿರ್ದೇಶಕರಿಗೆ ಬರೆದದ್ದು ಸಮಂಜಸ ಎನಿಸದೆ ತಮಗನ್ನಿಸಿದ್ದನ್ನು ಬರೆದುಕೊಳ್ಳುತ್ತಾರೆ. ಅಲ್ಲಿಗೆ ಮತ್ತೊಂದು ಆರೋಪ ಪಟ್ಟಿ ಶುರುವಾಗುತ್ತದೆ.
ಇದು ಕೇವಲ ಬರಹಗಾರನಿಗಷ್ಟೇ ಸಂಬಂಧಿಸಿದ್ದಲ್ಲ. ಸಂಗೀತ, ಸಾಹಿತ್ಯ, ಸಂಕಲನ, ಛಾಯಾಗ್ರಹಣ ಪ್ರತಿಯೊಂದಕ್ಕೂ ಸಂಬಂಧಿಸಿದ್ದು. ಹಾಗಾಗಿ ಮತ್ತು ಸಾಮಾನ್ಯವಾಗಿ ಎಲ್ಲರ ಆಯ್ಕೆ ನಿರ್ದೇಶಕನ ನಿರ್ಧಾರವಾದ್ದರಿಂದ ಆತನಿಗೆ ಅದರ ಸಂಪೂರ್ಣ ಅರಿವಿದ್ದರೆ ಪ್ರತಿಭೆಗೆ ನ್ಯಾಯ ಒದಗಿಸಬಹುದೇನೋ..?

Sunday, June 26, 2016

ರಿಮೇಕ್ ಮಾಡುವುದು ಕಷ್ಟ ಕಣ್ರೀ....

ಒಂದು ರಿಮೇಕ್ ಚಿತ್ರವನ್ನು ವಿಮರ್ಶೆ ಮಾಡುವುದು ಹೇಗೆ..? ಇಷ್ಟಕ್ಕೂ ಅದರಲ್ಲಿ ಏನಿದೆ ಏನಿಲ್ಲ ಎಂಬುದು ಈಗಾಗಲೇ ಪ್ರೇಕ್ಷಕನಿಗೆ ಅದರಲ್ಲೂ ಕನ್ನಡದ ಪ್ರೇಕ್ಷಕನಿಗೆ ಗೊತ್ತೇ ಇರುತ್ತದೆ. ಹಾಗಂತ ಅದನ್ನು ಅದಕ್ಕೂ ಇದಕ್ಕೂ ಹೋಲಿಕೆ ಮಾಡುತ್ತಾ ಕುಳಿತರೆ ಅದು ವಿಮರ್ಶೆಯಾಗುತ್ತದೆಯೇ..? ಒಂದು ಸೂಪರ್ ಹಿಟ್ ಸಿನಿಮಾವನ್ನು ಬೇರೆ ಭಾಷೆಗೆ ತಂದಾಗ ಅದ ಫಲಿತಾಂಶದ ಅಂದಾಜು ಮೊದಲೇ ಆಗಿರುತ್ತದೆ. ಯಾಕೆಂದರೆ ಅಲ್ಲಿ ಹಣ ಗಳಿಸಿ, ಪ್ರೇಕ್ಷಕನ ಮೆಚ್ಚುಗೆಗಳಿಸಿದ ಮೇಲೆಯೇ ಅದನ್ನು ಬೇರೆ ಭಾಷೆಗೆ ರಿಮೇಕ್ ಮಾಡಲಾಗುತ್ತದೆ. ಹಾಗಾಗಿ ಅಲ್ಲಿ ಎಲ್ಲವೂ ಫಿಟ್ ಅಂದ ಮೇಲೆಯೇ ಇಲ್ಲಿ ತೊಡಿಸುವ ಪ್ರಯತ್ನ.. ಆದರೆ ಅದು ಪರ್ಫೆಕ್ಟ್ ಆಗಬಹುದು.. ಇಷ್ಟವಾಗಬೇಕಲ್ಲವೇ..ಹಾಗೆ ನೋಡಿದರೆ ರಿಮೇಕ್ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗಿರಬೇಕು..ಆದರೆ ಅದಾಗಿಲ್ಲ.. ರಿಮೇಕ್ ಸ್ವಮೇಕ್ ಲೆಕ್ಕ ತೆಗೆದರೆ ಲಾಭ ನಷ್ಟ ಸಮವಾಗಿಯೇ ಇದೆ. ಹಾಗಾದರೆ ಲೆಕ್ಕಾಚಾರ ತಪ್ಪಿದ್ದೆಲ್ಲಿ..?
ಒಂದು ಸಿನಿಮಾ ಹಿಟ್ ಆಗುವುದು ಯಾವುದೋ ಒಂದು ಅಂಶದಿಂದಲ್ಲ. ಒಂದು ಚಿತ್ರದ ಒಂದು ಹಾಡು, ಕುಣಿತ, ಸಾಹಸ ಸನ್ನಿವೇಶ ಸಿನಿಮಾಕ್ಕೆ ಒಂದು ಆಕರ್ಷಣೆ ತಂದುಕೊಡುವುದರಲ್ಲಿ ಎರಡು ಮಾತಿಲ್ಲ. ಆದರೆ ಅದೊಂದೇ ಯಶಸ್ಸನ್ನು ಹೊತ್ತೊಯ್ಯಲಾರದು. ಅದೊಂದರ ಸೆಳೆತದಿಂದಾಗಿ ಒಳಹೊಕ್ಕವನಿಗೆ ಇಡೀ ಸಿನಿಮಾ ಇಷ್ಟವಾಗಬೇಕೆಂದರೆ ಆ ಚಿತ್ರದ ಪ್ರತಿಯೊಂದು ಅಂಶವೂ ಕರಾರುವಕ್ಕಾಗಿರಬೇಕು.ಸ್ಟಾರ್ ನಟನ ಆಕರ್ಷಣೆಗೆ ಚಿತ್ರಮಂದಿರಕ್ಕೆ ಮೊದಲ ದಿನವೇ ಹರಸಾಹಸ ಮಾಡಿ ಒಳನುಗ್ಗುವ ಪ್ರೇಕ್ಷಕ/ಅಭಿಮಾನಿ ಆನಂತರ ಅವನನ್ನು ಕೊನೆಯವರೆಗೂ ಕೂರಿಸಿಕೊಳ್ಳಲು,ಮತ್ತು ಒಂದಷ್ಟು ಜನರಿಗೆ ಬಾಯ್ಮಾತಿನ ಪ್ರಚಾರ ಮಾಡಲು ಸಿನಿಮಾ ಚೆನ್ನಾಗಿರಬೇಕಾಗುತ್ತದೆ. 
ಆದರೆ ರಿಮೇಕ್ ಎನ್ನುವಾಗ ಅದೆಷ್ಟು  ಸುಲಭದ ಕೆಲಸ ಅಲ್ಲವೇ ಎನಿಸುವುದು ಸತ್ಯ. ಅಲ್ಲೆಲ್ಲಾ ಚಿತ್ರೀಕರಸಿದ್ದು ಕಣ್ಣ ಮುಂದೆಯೇ ಇರುವಾಗ ಅದನ್ನು ಹಾಗೆ ನಕಲು ಮಾಡಲು ಅದ್ಯಾವ ಪ್ರತಿಭೆ ಬೇಕು ಎನ್ನುವುದು ಪ್ರಶ್ನೆ. ಆದರೆ ಹಾಗೆ ನೋಡಿದರೆ ಅದು ಸುಲಭದ ಕೆಲಸವಲ್ಲ. ಒಂದು ಪರ್ಫೆಕ್ಟ್ ರಿಮೇಕ್ ಎಂದರೆ ಮತ್ತೆ ಅದೇ ಸಿನೆಮಾವನ್ನು ಭಾವ ಕೆಡಿಸದೆ ಮತ್ತೊಮ್ಮೆ ನಿರ್ಮಿಸುವುದು, ಸಾಧ್ಯವಾದರೆ ಅದಕ್ಕಿಂತ ಹೆಚ್ಚು  ಪರಿಣಾಮಕಾರಿಯಾಗಿ. ಉದಾಹರಣೆಗೆ ಹಾಲಿವುಡ್ ಅಲ್ ಪಸಿನೋ ಅಭಿನಯದ 1983 ರಲ್ಲಿ ಬಿಡುಗಡೆಯಾದ ಸ್ಕಾರ್ ಫೇಸ್. ಸುಮಾರು ಎರಡು ಘಂಟೆ ಐವತ್ತು ನಿಮಿಷಗಳ ಚಿತ್ರವಿದು. ಆದರೆ ಈ ಚಿತ್ರಕ್ಕೆ ಮೂಲವಾದ 1932 ರ ಸ್ಕಾರ್ಫೇಸ್ ಒಂದು ಘಂಟೆ ಮೂವತ್ತೆರೆಡು ನಿಮಿಷಗಳು ಮಾತ್ರ ಉದ್ದವಿದೆ. ಅಂದರೆ ಮೂಲ ಕತೆಗೆ ಒಂದಷ್ಟು ಸೇರಿಸಿದ ಚಿತ್ರ ಮೂಲಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನಬಹುದು.ಹಾಗೆಯೇ  ಎ ಕಿಸ್ ಬಿಫೋರ್ ಡೈಯಿಂಗ್ ಅನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು. ಅಂದರೆ ಒಂದು ಸಿನೆಮಾವನ್ನು ಒಂದು ಕತೆಯಂತೆ ಪರಿಗಣಿಸಿ ರಿಮೇಕ್ ಮಾಡಿದಾಗ ಅದು ಒಪ್ಪಬಹುದಾಗುತ್ತದೆ. ಅಲ್ಲಿ ನಿರ್ದೇಶಕನ ಜಾಣ್ಮೆ, ಬರಹಗಾರನ ಕೌಶಲ, ಮತ್ತು ಭಾಷೆಯ ಭಾಷಾಂತರದ ಸೊಗಡುವ ವಾಸ್ತವತೆ ಮತ್ತು ನಿರ್ಮಾಣವಾಗುತ್ತಿರುವ ಕಾಲಘಟ್ಟ ಎಲ್ಲವೂ ಸೇರಿಕೊಳ್ಳುತ್ತದೆ. ಆದರೆ ಬರೀ ಅಲ್ಲಿಯದನ್ನು ಇಲ್ಲಿಗೆ ಕಾಪಿ ಪೇಸ್ಟ್ ಮಾಡಿದಾಗ ಬೇರೆಲ್ಲಾ ತಂತ್ರಜ್ಞರು ಸೃಜನಶೀಲತೆಯಿಂದಲೇ ಕೆಲಸ ಮಾಡಿದರೂ ನಿರ್ದೇಶಕ ಮಾತ್ರ ಸಪ್ಪೆ ಎನಿಸದಿರುವುದಿಲ್ಲ.
ರಿಮೇಕ್ ನಲ್ಲಿ ಅದಾಗಬೇಕಾಗುತ್ತದೆ.ಅಂದರೆ ಒಂದು ಸಿನಿಮಾ ಇಷ್ಟವಾದಾಗ ಅದನ್ನು ಇನ್ನೊಂದು ಭಾಷೆಗೆ ರಿಮೇಕ್ ಮಾಡುವಾಗ ಅದರ ಕತೆಯನ್ನಷ್ಟೇ ಆಯ್ದುಕೊಂಡು ಹಾಗೆಯೇ ಮೂಲಕ್ಕೆ ಧಕ್ಕೆ ಬಾರದ ಹಾಗೆ ಪುನರ್ನಿರ್ದೇಶನ ಮಾಡುವುದು ನಿರ್ದೇಶಕರ ಜಾಣ್ಮೆ. ಆಗ ರಿಮೇಕ್ ಎಂದಾಗ ಮೂಗು ಮುರಿಯುವ ಪ್ರಮೇಯ ಬಂದೊದಗುವುದಿಲ್ಲ. ಅದೊಂತರ ಕಾದಂಬರಿಯನ್ನೂ ಕತೆಯನ್ನೂ ಸಿನಿಮಾ ಮಾಡಿದಷ್ಟೇ ಶ್ರಮ ಬೇಡುತ್ತದೆಯಾದರೂ ಸಿನಿಮಾ ಪಕ್ಕ ನಮ್ಮದೇ ಎನಿಸುವುದರಲ್ಲಿ ಸಂದೇಹವಿಲ್ಲ.
ಆ ತರಹದ ಪ್ರಯತ್ನಗಳು ಸಾಕಷ್ಟು ಆಗಿವೆ. ಉದಾಹರಣೆಗೆ ಬಾಜಿಗರ್ ಚಿತ್ರದ ಮೂಲದಲ್ಲಿನ ನಾಯಕನಿಗೆ ಅಷ್ಟು ಬಲವಾದ ಕಾರಣಗಳಿರಲಿಲ್ಲ. ಅವನ ಕಣ್ಣಿದ್ದದ್ದು ಆಸ್ತಿಯ ಮೇಲೆ. ಆದರೆ ಬಾಜಿಗರ್ ಚಿತ್ರದಲ್ಲಿ ಅದಕ್ಕೆ ಸ್ಪಷ್ಟವಾದ ಮತ್ತು ಹೌದು ಎನಿಸುವ ಹಿನ್ನೆಲೆ ನೀಡಲಾಯಿತು. ಈವತ್ತಿಗೂ ಮ್ಯಾಟ್ ದಿಲ್ಲೊನ್ ಗಿಂತ ಶಾರುಕ್ ಹೆಚ್ಚು ಇಷ್ಟವಾಗುವುದು, ಬಾಜಿಗರ್ ನಮಗೆ ಹೆಚ್ಚು ಆಪ್ತ ಎನಿಸುವುದು ಅದಕ್ಕೆ ಎನಿಸುತ್ತದೆ. ತಮಿಳಿನ ಸಿಂಘಂ ಚಿತ್ರವನ್ನು ಹಿಂದಿಗೆ ತಂದಾಗ ನಿರ್ದೇಶಕರು ಬರೀ ಕತೆಯ ಎಳೆಯನ್ನಷ್ಟೇ ಇಟ್ಟುಕೊಂಡು ಉಳಿದದ್ದನ್ನು ಬದಲಾಯಿಸಿದರು. ಹಾಗಾಗಿ ಅದು ಮೂಲ ಚಿತ್ರಕ್ಕಿಂತಲೂ ಹೆಚ್ಚು ಥ್ರಿಲ್ ಕೊಡುತ್ತದೆ. ಘಜಿನಿ ಹಿಂದಿಯಲ್ಲಿ ಆದಾಗ ಅದರಲ್ಲಿದ್ದ ಲೋಪಗಳನ್ನು ತಿದ್ದಲಾಯಿತು. ಹಾಗಾಗಿ ಮೂಲದಲ್ಲಿದ್ದ ಅವಳಿ ಖಳರು ಮಾಯವಾದರು. ಮಣಿಚಿತ್ರತಾಲ್ ನಲ್ಲಿ ಮಧ್ಯಂತರಕ್ಕೆ ಬರದೆ ಮೊದಲೇ ಬಂದರು ವಿಷ್ಣುವರ್ಧನ್. ಚಾಪ್ಲಿನ್ ನ ಸಿಟಿ  ಲೈಟ್ಸ್ ಅನುರಾಗ ಸಂಗಮ, ತುಳ್ಲಾದ ಮನಂ ತುಳ್ಳುಂ ಆದಾಗಲೂ ಮೂಲ ಕತೆಯನ್ನು ತೆಗೆದುಕೊಂಡು ಅದನ್ನು ನಮ್ಮಲ್ಲಿಗೆ ತಕ್ಕಂತೆ ಕತೆಯನ್ನು ನೇಯಲಾಯಿತು..ಆನಂತರ ಅದನ್ನು ಮತ್ತೆ ನಮ್ಮಲ್ಲಿಗೆ ಓ ನನ್ನ ನಲ್ಲೆ ಹೆಸರಿಗೆ ತರಲಾಯಿತು ಬಿಡಿ... 
ಹಾಗೆ ರಿಮೇಕ್ ಮಾಡುವಾಗ ಎರ್ರಾಬಿರ್ರಿ ಬದಲಾಯಿಸಿ "ಗುರುವೇ.. ಅದೇ  ಸೂಪರ್  ಆಗಿತ್ತಲ್ಲ.." ಎನ್ನುವಂತೆ ಮಾಡಿದ ರಿಮೇಕ್ ಗಳೂ ಇದೆ. ಹಾಗಾಗಿಯೇ ರಿಮೇಕ್ ಎಂಬುದು ಕಷ್ಟದ ಕೆಲಸ. ಅದರ ಮೂಲವನ್ನು ಉಳಿಸಿಕೊಂಡು ನಮ್ಮತನವನ್ನು ತೋರಿಸುತ್ತಾ ಸಿನಿಮಾ ಮಾಡುವುದು ಜಾಣ್ಮೆ.
ಇದನ್ನೆಲ್ಲಾ ಏಕೆ ಪ್ರಸ್ತಾಪವಾಯ್ತೆಂದರೆ ಮೊನ್ನೆ ಎರಡು ಚಿತ್ರಗಳು ಬಿಡುಗಡೆಯಾದವು. ಒಂದು ಜಿಗರ್ಥಂಡ ಮತ್ತೊಂದು ಲಕ್ಷ್ಮಣ. ಎರಡೂ ಅದ್ದೂರಿ ಚಿತ್ರಗಳೇ. ಎರಡನ್ನೂ ಕನ್ನಡದ ಖ್ಯಾತನಾಮರೆ ನಿರ್ಮಿಸಿದ್ದಾರೆ, ನಿರ್ದೇಶಿಸಿದ್ದಾರೆ. ಎರಡರ ಮೂಲ ಚಿತ್ರಗಳೂ ಸೂಪರ್ ಹಿಟ್ ಗಳೇ. ಆದರೆ ಎರಡನ್ನೂ ನೋಡಿದಾಗ ಇಷ್ಟೆಲ್ಲಾ ಶ್ರೀಮಂತಿಕೆ, ತಂತ್ರಜ್ಞರು ಸೇರಿಕೊಂಡು ಭಾಷೆ ಬದಲಾಯಿಸಿದಂತಹ ಅನುಭವಕೊಡುವ ಚಿತ್ರವನ್ನು ನಿರ್ಮಿಸಬೇಕಿತ್ತೆ ಎನಿಸುತ್ತದೆ.

Friday, June 17, 2016

ಸೆನ್ಸಿಬಲ್ ನಿರ್ಮಾಪಕರು ಬೇಕಿದ್ದಾರೆ..

ಈವತ್ತಿನ ಮಟ್ಟಿಗೆ ಕನ್ನಡದಲ್ಲಿ ಒಂದಷ್ಟು ಒಳ್ಳೆಯ ಚಿತ್ರಗಳು ಬಿಡುಗಡೆಯಾಗಿದೆ ಎನ್ನುವುದು ಖುಷಿಯ ಸಂಗತಿಯೇ. ಹಾಗಾಗಿಯೇ ಅಂತಹ ಒಳ್ಳೆಯ ಚಿತ್ರಗಳನ್ನು ನಮಗೆ ನೀಡಿದ ನಿರ್ದೇಶಕರನ್ನು ಪ್ರಶಂಸೆ ಮಾಡುವುದು ಚಿತ್ರಪ್ರೇಕ್ಷಕರಾದ ನಮ್ಮ ಕರ್ತವ್ಯ. ಆದರೆ ಈ ಒಂದು ವಿಷಯದಲ್ಲಿ ನಾವು ನಿಜಕ್ಕೂ ಪ್ರಶಂಸಿಸಬೇಕಾದದ್ದು ನಿರ್ಮಾಪಕರನ್ನು. ನಿರ್ದೇಶಕ ಹೊಸತನವನ್ನು ಹೊಸಕತೆಯನ್ನು ಕೊಂಡೊಯ್ದಾಗ ವ್ಯಾವಹಾರಿಕವಾಗಿ ನಿರ್ಮಾಪಕ ಯೋಚನೆ ಮಾಡುವುದು ತಪ್ಪಲ್ಲ, ಆದರೆ ಕತೆಯ ಬಗ್ಗೆ ಗ್ರಹಿಸದೆ ಇರುವುದು ಸರಿಯಲ್ಲ. ನಮ್ಮಲ್ಲಿ ಅಂತಹ ಸೂಕ್ಷ್ಮಗ್ರಾಹಿ ನಿರ್ಮಾಪಕರ ಸಂಖ್ಯೆ ಕಡಿಮೆಯೇ.
ನಾನು ಒಬ್ಬ ನಿರ್ಮಾಪಕರಿಗೆ ಕತೆ ಹೇಳಲು ಹೋದಾಗ ಅವರು ಅರ್ಧ ಘಂಟೆ ಅದೂ ಇದೂ ಮಾತಾಡಿ ಕೊನೆಗೆ "ನೋಡಪ್ಪ..ಒಂದ್ ಕೆಲಸ ಮಾಡು.. ಅವರಿಗೆ ಸ್ಟೋರಿ ಹೇಳಿ ಒಪ್ಪಿಸಿಬಿಡು..ಅವರದ್ದು ಕಾಲ್ ಶೀಟ್ ತಂದ್ಬಿಡು..ಸಿನಿಮಾ ಮಾಡೋಣ .." ಅಂದರು. ನಾನು ಆಯ್ತು ಸಾರ್, ಆದರೂ ಒಮ್ಮೆ ಕತೆ ಕೇಳಿ ಎಂದದ್ದಕ್ಕೆ "ನಮಗೆ ಅದೆಲ್ಲಾ ಅರ್ಥ ಆಗಲ್ಲ ಗುರು.." ಎಂದು ಸಾರಾಸಗಟಾಗಿ ತಿರಸ್ಕರಿಸಿಬಿಟ್ಟರು. ಆಮೇಲೆ ಅದೂ ಇದೂ ಮಾತಾಡುತ್ತಾ ಅಲ್ಲೇ ಟಿವಿಯಲ್ಲಿ ಬರುತ್ತಿದ್ದ ತಮಿಳು ಸಿನಿಮಾ ಹೊಗಳುತ್ತಾ ಏನ್ ಸಿನಿಮಾ ಮಾಡ್ತಾರೆ ಇವ್ರು ಎಂದು ಲೋಚ್ಚಿಕ್ಕಿದರು. ನಾನು ಅಲ್ಲೇ ಹೇಳಿದೆ, ಸಾರ್ ಅಲ್ಲಿನ ನಿರ್ಮಾಪಕರು ಸ್ವಲ್ಪನಾದ್ರೂ ಕತೆ ಕೇಳ್ತಾರೆ, ಆದ್ರೆ ನೀವು ಕತೆಗಿಂತ ಸ್ಟಾರ್ ಗೆ ಹೆಚ್ಚು ಮಹತ್ವ ಕೊಡ್ತೀರಲ್ವಾ? ಹಾಗಾಗಿ ಸ್ಟಾರ್ ನಟನನ್ನು ಒಪ್ಪಿಸದಿದ್ದರೆ ಸಿನಿಮಾ ಆಗಲ್ಲ ಎನ್ನುವುದಾದರೆ ಸ್ಟಾರ್ ಗಳ ಹಿತಾಸಕ್ತಿಗೆ ತಕ್ಕಂತೆ ಕತೆ ಬದಲಾವಣೆ ಮಾಡಬೇಕಾಗುತ್ತದೆ.. ಎಂದೆ. ಹೇಳೋದ್ ಸುಲಭ ಕಣ್ರೀ ಸಿನಿಮಾಕ್ಕೆ ಹಣ ಹಾಕುವಾಗ ಗೊತ್ತಾಗುತ್ತೆ , ನಿಮಗೇನು ಗೊತ್ತು.. ನಿರ್ಮಾಪಕ  ಪೈಸೆ ಪೈಸೆ ಗೆ ಎಷ್ಟು ಒದ್ದಾಡ್ತಾನೆ ಅಂತ ಎಂದವರು ಆ ನಿಟ್ಟಿನಲ್ಲಿ  ನಷ್ಟ ಅನುಭವಿಸಿದವರ  ಹೆಸರುಗಳ ಪಟ್ಟಿಯನ್ನೇ ನನ್ನ ಮುಂದಿಟ್ಟರು. ನಾನು ಅವರು ನಿರ್ಮಿಸಿದ  ಚಿತ್ರಗಳ ಪಟ್ಟಿಯನ್ನು ಅವರ ಮುಂದಿಟ್ಟು ಅದರ ಬಗ್ಗೆ ಮಾತಾಡಿದೆ..ಇದೆಲ್ಲಾ ಸ್ವಯಂಕೃತ ಸರ್..ಅದೇಕೆ ಈ ಕತೆಯನ್ನು  ಸಿನಿಮಾ ಮಾಡಿದ್ದು, ಅದ್ಯಾಕೆ ಅದನ್ನು  ಹಾಗೆ ತೆಗೆದದ್ದು ..ನಿರ್ಮಿಸುವ ಇದರ ಬಗ್ಗೆ ಯಾಕೆ ಯೋಚಿಸಲಿಲ್ಲ, ಸೋಲೂ ಗೆಲುವುಗಳನ್ನೂ ಬ್ರಹ್ಮನೂ ಯೋಜಿಸಲಾರನೇನೋ.. ಆದರೆ ಒಂದು  ಅಂದಾಜಂತೂ ಮಾಡಬಹುದು..ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನ್ನುವುದನ್ನು ಗ್ರಹಿಸಿಕೊಳ್ಳಬಹುದು. ಇಷ್ಟೆಲ್ಲದರ ನಂತರದ್ದು ದೈವೇಚ್ಛೆ ಎನ್ನಬಹುದೇನೋ..? ಆದರೆ  ಅದಾವುದನ್ನು  ಮಾಡದೆ  ಒಂಟಿ ಕಣ್ಣಲ್ಲಿ ಸಿನಿಮಾ ಮಾಡಿ ಕಳೆದುಕೊಂಡು ಚಿತ್ರಜಗತ್ತೆ ಸರಿಯಿಲ್ಲ ಎನ್ನುವ ನಿರ್ಣಯದಿಂದ ಮೊದಲ್ಗೊಂಡು  ನಾನಾಕಾರಣಗಳನ್ನೂ ಪಟ್ಟಿ ಮಾಡುತ್ತಾ ಹೋದರೆ ಹೇಗೆ?
ಇದನ್ನು ಯಾಕೆ ಹೇಳಿದೆ ಎಂದರೆ ಒಬ್ಬ ನಿರ್ಮಾಪಕ ಕತೆಯನ್ನು ಕೇಳಿ, ಚರ್ಚಿಸಿ ಸಿನಿಮಾ ಮಾಡಿದರೆ ಅದು ಸಂತಸದ ಸಂಗತಿ. ಅಥವಾ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಅದಕ್ಕೊಬ್ಬ ಸಾಹಿತ್ಯ, ಸಿನಿಮಾ ಪರಿಣತರನ್ನು ಕೂರಿಸಿ ಆತನಿಂದ ಬರುವ ಕತೆಗಳನ್ನು ಪರಾಮರ್ಷಣೆ ಮಾಡಿಸಿದರೆ ಒಳ್ಳೆಯದು. ಹಾಲಿವುಡ್ ನಲ್ಲಿ ಇದಾಗುತ್ತದೆ. ಮಾರುಕಟ್ಟೆಗೆ ಬಂದ ಹೊಸ ಹೊಸ ಕಾದಂಬರಿಗಳನ್ನು  ಆ ಚಿತ್ರಸಂಸ್ಥೆ ಬರಹಗಾರರಿಂದ ನೂರಾರು ಪುಟಗಳ  ಬರಹವನ್ನು ಹತ್ತಾರು  ಪುಟಕ್ಕೆ  ಸಂಕ್ಷಿಪ್ತಗೊಳಿಸುತ್ತದೆ. ಆನಂತರ ಅದು ಸಿನಿಮಾಕ್ಕೆ  ಯೋಗ್ಯವೇ ಎನ್ನುವುದನ್ನು  ಕಂಪನಿಯ ಸೃಜನಶೀಲರು ಚರ್ಚಿಸುತ್ತಾರೆ. ಹಾಗಾಗಿಯೇ ಬಹುತೇಕ ಬೆಸ್ಟ್ ಸೆಲ್ಲರ್ ಎನಿಸಿಕೊಳ್ಳುವ ಪುಸ್ತಕಗಳು ಅಲ್ಲಿ ಸಿನಿಮಾ ರೂಪ ತಾಳುತ್ತವೆ. ಆದರೆ ನಮ್ಮಲ್ಲಿ ಚಿತ್ರನಿರ್ಮಾಣ ಸಂಸ್ಥೆಯಲ್ಲಿ ಅವರನ್ನು ಹೊರತುಪಡಿಸಿ ಬೇರೆಯವರೆಲ್ಲಾ ಇದ್ದಾರೆ, ಕಾದಂಬರಿ  ಕಮರ್ಷಿಯಲ್ ಗೆ ಆಗ್ಬರಲ್ಲ ಬಿಡಪ್ಪ  ಎಂದು ಸುರುವಿನಲ್ಲಿಯೇ ರಾಗ ಎಳೆದುಬಿಡುತ್ತಾರೆ. ಹಾಗೆಯೇ ಅಂತಹ ಕ್ರಿಯೇಟಿವ್  ಹೆಡ್ ಕುರ್ಚಿ ಸೃಷ್ಟಿಸಿ ಅದಕ್ಕೊಬ್ಬ ಸೂಕ್ತ ವ್ಯಕ್ತಿಯನ್ನು  ಕೂರಿಸೋಣ ಎಂದುಕೊಂಡರೆ ನಮ್ಮಲ್ಲಿ ಸಿಗುವವರು ತೀರಾ ಕಡಿಮೆಯೇ. ಈವತ್ತು  ನಮ್ಮಲ್ಲಿ ಚಿತ್ರಸಾಹಿತಿ,  ಛಾಯಾಗ್ರಹಾಕ, ನೃತ್ಯ ನಿರ್ದೇಶಕ, ನಿರ್ಮಾಪಕ, ಸಂಕಲನಕಾರ, ಸಾಹಸ ನಿರ್ದೇಶಕ .. ಹೀಗೆ  ಯಾರೂ  ಅವರು ಅವರಾಗಿಯೇ ಉಳಿದಿಲ್ಲ..ಅವರು ಒಂದಲ್ಲ ಒಂದು ದಿನ ನಿರ್ದೇಶಕನ ಕುರ್ಚಿ ಏರಿ ಸುಮ್ಮನಾಗಿಬಿಡುತ್ತಾರೆ. ಹಾಗಾಗಿಯೇ ನಮ್ಮಲ್ಲಿ ಒಂದೊಳ್ಳೆ ತಂತ್ರಜ್ಞ ತಂತ್ರಜ್ಞನಾಗಿಯಷ್ಟೇ ಉಳಿಯದೆ  ನಿರ್ದೇಶಕನ ಟೊಪ್ಪಿಗೆ ಧರಿಸುವ ಹಪಾಹಪಿ ತೋರಿಸಿ ಅವರ ನೈಪುಣ್ಯತೆಯಿದ್ದ  ವಿಭಾಗದಿಂದ  ಜಾರಿ ಹೋಗಿರುವ ಉದಾಹರಣೆಗಳಿವೆ. ಹಾಗಾಗಿಯೇ ನಮ್ಮಲ್ಲೀಗ  ಚಿ.ಉದಯಶಂಕರ್, ವರದಪ್ಪ  ಅಂತಹ ಮಹಾನ್ ಕಥೆಯ ತೀರ್ಪುಗಾರರು ಕಡಿಮೆ ಅಥವಾ ಇಲ್ಲವೇ ಇಲ್ಲ. ಹಾಗಾಗಿಯೇ  ಈ ಸಾಧ್ಯತೆಗಳೆಲ್ಲಾ ಕನ್ನಡದ ಮಟ್ಟಿಗೆ ಕಡಿಮೆಯೇ. ಅದರಲ್ಲೂ ಈವತ್ತು ನಿರ್ಮಾಪಕರ ಸಾಲಿನ ಬಹುತೇಕರು ಕತೆ ಕೇಳಿ ಸಿನಿಮಾ ಮಾಡುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ಸ್ಟಾರ್ ನಟನ ಕಾಲ್ ಶೀಟ್ ಅಥವಾ ರಿಮೇಕ್ ಹಕ್ಕುಗಳ ಮೇಲೆಯೇ ಸಿನಿಮಾ ಮಾಡುವುದಕ್ಕೆ ಮುನ್ನುಗ್ಗುತ್ತಾರೆ. ನಿರಂತರವಾಗಿ ಸಿನಿಮಾ  ಮಾಡುವ, ಅದರ ಹೊರಾತಾಗಿ  ಬೇರೇನೂ ಮಾಡದ  ಚಿತ್ರ  ನಿರ್ಮಾಪಕರುಗಳು  ಹೊಸತನ, ಹೊಸ ಅಲೆಯತ್ತ  ತಲೆ ಕೆಡಿಸಿಕೊಳ್ಳದೆ ತಮ್ಮ  ಎಂದಿನ  ಹಾದಿಯಲ್ಲಿ  ಮುನ್ನುಗ್ಗುತ್ತಿರುವುದು ಮತ್ತು ಹೊಸ ಪ್ರಯೋಗಗಳನ್ನು ಹೊಸಬರಷ್ಟೇ[ಬಹುತೇಕ] ಮಾಡುತ್ತಿರುವುದು ಕಣ್ಮುಂದಿರುವ ಸಂಗತಿ.
ಉದಾಹರಣೆಗೆ ತಿಥಿಯಂತಹ ಕತೆಯನ್ನು ಮಾಮೂಲಿ ನಿರ್ಮಾಪಕರ ಮುಂದೆ ಹರವಿದ್ದರೆ ಅವರು ಹೌಹಾರದೆ ಇರುತ್ತಿದ್ದರೆ..? ಅಯ್ಯೋ ಗುರುವೇ ಇದು ನೆಗೆಟಿವ್ ಟೈಟಲ್...ಎಲ್ಲಿ ಹೋಗುತ್ತೆ ಗುರುವೇ ಅನ್ನುವುದರಿಂದಲೇ ಪ್ರಾರಂಭಿಸುತ್ತಿದ್ದರು. ಅವರ ಲೆಕ್ಕಾಚಾರಗಳೇ  ಬೇರೆ ಇರುತ್ತವೆ. ಮುಂದಿನವಾರದಿಂದ  ನಿಮ್ಮ ಮೆಚ್ಚಿನ ಚಿತ್ರಮಂದಿರದಲ್ಲಿ  ತಿಥಿ ಅಂತಲೋ, ಪ್ರೇಕ್ಷಕ ಬಾರೋ  ತಿಥಿಗೆ ಹೋಗೋಣ ಅಂತಲೂ ಹೇಗೆ ಮಾತನಾಡಿಕೊಳ್ಳುತ್ತಾನೆ ಎನ್ನುವ ಅನಿಸಿಕೆ ಅವರದ್ದು. ಹಾಗೆಯೇ ಇನ್ನು ಈವತ್ತಿನ ವಿಶೇಷ ಎನಿಸಿದ ಚಿತ್ರವಾದ ಗೋದಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಕತೆಯನ್ನು ನಿರ್ಮಾಪಕರ ಎದುರಿಗೆ ಕುಳಿತು ಸಾವಧಾನವಾಗಿ ನಿರೂಪಿಸಲು ಸಾಧ್ಯವಿತ್ತೆ..ತಪ್ಪಿಸಿಕೊಂಡ ಅಪ್ಪ, ಹುಡುಕುವ ಮಗ, ಓಪನಿಂಗ್ ಸಾಂಗ್ ಇಲ್ಲ, ಕೇಡಿಗಳಿದ್ದರೂ ಫೈಟ್ ಇಲ್ಲ, ಕಾಮಿಡಿ ಇಲ್ಲವೇ ಇಲ್ಲ.. ನಮ್ಮ ಕೈಲಿ ಆಗಲ್ಲಪ್ಪ ಎಂದು ಬುದ್ದಿವಾದ ಹೇಳಿ ಕಳುಹಿಸಿಬಿಡುತ್ತಿದ್ದರೇನೋ? ಅಥವಾ  ಅದನ್ನು  ಹೀಗೆ ಮಾಡಿದರೆ ಹೇಗೆ, ಹಾಗೆ ಮಾಡಿದರೆ ಹೇಗೆ, ಕೇಡಿಗಳು  ಈಗಾಗಲೇ ಇರುವುದರಿಂದ  ಫೈಟ್ ಇಡಬಹುದಲ್ಲಾ, ವಸಿಷ್ಠ  ಅಚ್ಯುತ್ ಅವರನ್ನು  ಕುಡಿಯಲು ಕರೆದುಕೊಂಡು ಹೋಗಿದ್ದನ್ನೇ ನೆಪ  ಮಾಡಿಕೊಂಡು ಒಂದು ಐಟಂ ಡಾನ್ಸ್ ಹಾಕಿಬಿಡೋಣ ಎನ್ನುವ ಸಲಹೆಯಂತೂ  ದೇವರಾಣೆ ಬರುತ್ತಿತ್ತೇನೋ? ಆದರೆ  ನಿರ್ಮಾಪಕರು ನಿರ್ದೇಶಕರ ಕತೆ, ಅದರಲ್ಲಿರುವ ಸೂಕ್ಷ್ಮತೆಯನ್ನು ಗ್ರಹಿಸಿದ್ದಾರೆ, ಹಾಗಾಗಿಯೇ  ಚಿತ್ರ ಹಾಗೆಯೇ ಮೂಡಿ ಬಂದಿದೆ, ಗಾಂಧಿನಗರದಲ್ಲಿನ ಸಿದ್ಧಸೂತ್ರಗಳನ್ನು ಪಕ್ಕಕ್ಕೆ ತೂರಿ ಗಂಭೀರ ಕತೆಯ  ಚಿತ್ರ ಮೂಡಿದೆ, ಮತ್ತದು ಪ್ರೇಕ್ಷಕರಿಗೆ ಇಷ್ಟವಾಗಿದೆ.
ಅದಕ್ಕೆ ಹೇಳಿದ್ದು ಒಂದು ಹೊಸತನದ  ಸಿನಿಮಾದ ಹಿಂದೆ ನಿರ್ದೇಶಕನ ವಿಷನ್ ಎಷ್ಟಿರುತ್ತದೋ ಅಷ್ಟೇ ಟ್ರಸ್ಟ್ ನಿರ್ಮಾಪಕರದ್ದಿರುತ್ತದೆ. ನಿರ್ಮಾಪಕರ ಸೂಕ್ಷ್ಮಗ್ರಹಿಕೆ ಮತ್ತು ಅವರ ಬುದ್ದಿವಂತಿಕೆಯೇ ಹೊಸತನಕ್ಕೆ ದಾರಿಯಾಗುತ್ತದೆ. ಸುಮ್ಮನೆ  ಗಮನಿಸಿ, ಆವತ್ತಿನಿಂದ ಈವತ್ತಿನವರೆಗೆ ಯಾವುದಾದರೂ ಹೊಸ ಪ್ರಯತ್ನ, ಹುಬ್ಬೇರಿಸುವ ಸಿನಿಮಾಗಳೆಲ್ಲಾ ಬಂದಾಗ ನಿರ್ಮಾಪಕರು ಬಹುತೇಕ  ಹೊಸಬರೇ ಆಗಿರುತ್ತಾರೆ. ಆನಂತರ ಅವರು ಅದನ್ನು  ಕಾಯ್ದುಕೊಳ್ಳದೆ ಹೋಗುವುದು ಬಿಡುವುದು ಅವರಿಗೆ ಬಿಟ್ಟದ್ದು.
ಹಾಗಾಗಿ ನಮಗೆ ಸೂಕ್ಷ್ಮಗ್ರಾಹಿ, ಅಭಿರುಚಿಯುಳ್ಳ ಹಾಗೆಯೇ ಒಂದು ವಿಷನ್ ಇರುವ ನಿರ್ಮಾಪಕರು ಸಿಕ್ಕಿದ್ದಾರೆ. ಅವರನ್ನು ಉಳಿಸಿಕೊಳ್ಳುವುದು ನಿರ್ದೇಶಕರ ಬಹುದೊಡ್ಡ ಜವಾಬ್ದಾರಿಯಾಗಿದೆ..

Tuesday, June 14, 2016

ಸೈರಾಟ್ ಕನ್ನಡಕ್ಕೆ...

ನಮ್ಮ  ಕನ್ನಡದಲ್ಲಿ  ದಕ್ಷಿಣ ಭಾರತದ ಇತರೆ ಭಾಷೆಗಳಾದ ತೆಲುಗು ತಮಿಳು  ರಿಮೇಕ್  ಆಗುತ್ತಿದ್ದದ್ದೆ  ಹೆಚ್ಚು. ಒಂದಷ್ಟು ಹಿಂದಿ ಚಿತ್ರಗಳನ್ನು  ಹೊರತು ಪಡಿಸಿದರೆ  ಬೆಂಗಾಲಿ, ಒರಿಸ್ಸಾ, ಮರಾಠಿ  ಚಿತ್ರಗಳು ಕನ್ನಡ ರೂಪ ತಳೆದದ್ದು ಅಪರೂಪ. ಈಗ  ಮರಾಠಿ ಚಿತ್ರ  ಸೈರಾಟ್  ಕನ್ನಡಕ್ಕೆ  ರಿಮೇಕ್  ಆಗುತ್ತಿದೆ. ನಮ್ಮ ಹೆಸರಾಂತ  ನಿರ್ಮಾಪಕರಾದ ರಾಕಲೈನ್  ವೆಂಕಟೇಶ್  ಕನ್ನಡಕ್ಕೆ ತರುತ್ತಿದ್ದಾರೆ. ಆ ಮೂಲಕ  ಸೂಪರ್ ಹಿಟ್ ಚಿತ್ರಗಳು  ಯಾವುದೇ ಭಾಷೆಯಲ್ಲಿ ಬಂದರೂ ನಾವು ಕನ್ನಡಿಗರು  ರಿಮೇಕ್  ಮಾಡಲು ಸಿದ್ಧ  ಎಂಬುದು  ಸಾಬೀತಾದಂತಾಗಿದೆ.
ಸೈರಾಟ್  ಸರಿ ಸುಮಾರು  ಮೂರು  ಘಂಟೆ  ಅವಧಿಯ ಚಿತ್ರ. ಚಿತ್ರದ ಕತೆಯಾಗಲಿ, ಚಿತ್ರಕತೆಯಾಗಲಿ  ಯಾವುದೂ ಹೊಸತಲ್ಲ. ಅಥವಾ ಸಿನಿಮಾದಲ್ಲಿ ಸಮಾಜಕ್ಕೆ ಬೇಕಾದಂತಹ  ಸಂದೇಶವೂ ಇಲ್ಲ. ಮರ್ಯಾದೆ ಹತ್ಯೆಯನ್ನು ವೈಭವೀಕರಿಸಿರುವ  ಚಿತ್ರದಲ್ಲಿನ ಕತೆ ಚಿತ್ರಕತೆ ನಮ್ಮಲ್ಲಿಯೇ ತೆರೆಕಂಡ ಚಲುವಿನ ಚಿತ್ತಾರವನ್ನು ಆಲ್ಮೋಸ್ಟ್ ನೆನಪಿಸುತ್ತದೆ.ಮೊದಲಾರ್ಧ  ದೀರ್ಘವಾದರೂ ನೋಡಿಸಿಕೊಂಡು ಹೋಗುತ್ತದೆ. ಆಮೇಲೆ ಸ್ವಲ್ಪ ಮಟ್ಟಿಗೆ ಬೋರ್ ಎನಿಸಿದರೂ ಅಂತ್ಯ ಮಾತ್ರ ಮನಸ್ಸನ್ನು ಕಲಕುತ್ತದೆ. ಆ ಒಂದು ವಿಷಯದಲ್ಲಿ  ನಿರ್ದೇಶಕ ನಾಗರಾಜ್ ಮಂಗಳೆ ಅವರನ್ನು ಮೆಚ್ಚಲೇಬೇಕಾಗುತ್ತದೆ. ಅಂತ್ಯದಲ್ಲಿ ಯಾವುದೇ ಅಬ್ಬರವಿಲ್ಲದೆ, ಬರ್ಬರತೆಯಿಲ್ಲದೆ ಅದನ್ನು ನೋಡುಗನ ಕಣ್ಣಲ್ಲಿ ನೀರು ಬರುವ ಹಾಗೆ ಹತ್ತಿಕ್ಕಲಾಗದ ವಿಷಾದ ಆವರಿಸುವ ಹಾಗೆ ನಿರ್ದೆಶಿಸಿರುವುದು ಅವರ ಪ್ರತಿಭೆಯನ್ನು ಎತ್ತಿ ಹಿಡಿಯುತ್ತದೆ.ಆದರೂ ಬರೀ ಯಶಸ್ಸಿನ ಮಾನದಂಡದಿಂದಷ್ಟೇ ಅದನ್ನು ಕನ್ನಡಕ್ಕೆ ತರುತ್ತಿರುವುದು ಎಂಬುದು ಅರಗಿಸಿಕೊಳ್ಳಬೇಕಾದ ವಿಷಯ.
ಇದು ಕನ್ನಡಕ್ಕೆ ಹೊಸದೇನಲ್ಲ.. ಈ ಹಿಂದೆ "ಅವರ್ ಹಾಸ್ಪಿಟಾಲಿಟಿ" ಚಿತ್ರವನ್ನು ದಿನೇಶ್ ಬಾಬು ಬಲಗಾಲಿಟ್ಟು ಒಳಗೆ  ಬಾ ಎನ್ನುವ ಹೆಸರಿನಲ್ಲಿ ಕನ್ನಡದಲ್ಲಿ ತೆರೆಗೆ ತಂದಿದ್ದರು. ಆನಂತರ ರಾಜಮೌಳಿ ಅದನ್ನೇ ತೆಲುಗಿನಲ್ಲಿ "ಮರ್ಯಾದಾ ರಾಮಣ್ಣ" ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದರೆ ಮತ್ತದು ಇದೆ ಹೆಸರಿನಲ್ಲಿಯೇ ಕನ್ನಡಕ್ಕೆ ಕೋಮಲ್ ನಾಯಕತ್ವದಲ್ಲಿ ಅಧಿಕೃತವಾಗಿ ರಿಮೇಕ್ ಆಗಿತ್ತು.  ಹಾಗೆಯೇ  "ಮಣಿಚಿತ್ರತಾಳ್" ಕನ್ನಡದಲ್ಲಿ ಆಪ್ತಮಿತ್ರ  ಆಗುವ ಮುನ್ನವೇ "ಸಾಗರಿ" ಹೆಸರಿನಲ್ಲಿ ತೆರೆಕಂಡಿತ್ತು. ಹಾಗಾಗಿ ಕತೆ ಹೇಗೋ ಏನೋ ಅಲ್ಲಿ ಯಶಸ್ಸಾದರೆ ಇಲ್ಲಿ ತರೋಣ ಎನ್ನುವ ಮನೋಭಾವವೇ ಕನ್ನಡದಲ್ಲಿ ರಿಮೇಕ್ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿದೆ.
ಇನ್ನು ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್ ಕನ್ನಡದಲ್ಲಿ ಯಶಸ್ವೀ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ ಅವರ ಸಂಸ್ಥೆಯಿಂದ ಹೆಚ್ಚು ರಿಮೇಕ್ ಚಿತ್ರಗಳು ನಿರ್ಮಾಣವಾಗಿರುವುದು ಸ್ವಲ್ಪ ಬೇಸರದ ಸಂಗತಿ. ಈವತ್ತು ರಾಷ್ಟ್ರಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಪಕನೆಂದು ಗುರುತಿಸಿಕೊಂಡಿರುವ ರಾಕಲೈನ್ ಸ್ವಮೇಕ್ ಚಿತ್ರಗಳತ್ತ ಗಮನ ಹರಿಸದೆ ಇರುವುದು, ಕನ್ನಡದ ಕಥೆಗಳನ್ನು ಹೆಚ್ಚು ಸಿನಿಮಾ ಮಾಡದೆ ಇರುವುದು ಬೇಸರ ತರಿಸದೇ ಇರದು. ಪರಭಾಷೆಯಲ್ಲಿ ಅದ್ದೂರಿಯಾಗಿ ಸಿನಿಮಾ  ನಿರ್ಮಿಸುವ ಅವರು ಆಯಾರಂಗದಲ್ಲಿ ಸ್ವಮೇಕ್ ಚಿತ್ರಗಳನ್ನು ಹೆಚ್ಚು ನಿರ್ಮಿಸಿದ್ದಾರೆ. ಆದರೆ ಅದೇಕೋ ಏನೋ ಕನ್ನಡಕ್ಕೆ ಬಂದರೆ ಹೊಸ ಕತೆಯೂ ಇಲ್ಲ, ಸ್ವಮೇಕೂ ಇಲ್ಲ ಎನ್ನುತ್ತಾರೆ. ಈವತ್ತು ನಾವೆಲ್ಲಾ ಹೆಮ್ಮೆ ಪಡುವಂತಹ ಸಂಸ್ಥೆಯಾದ ರಾಕ್ ಲೈನ್  ಪ್ರೊಡಕ್ಷನ್ ನಲ್ಲಿ ಅದ್ಭುತ ಕತೆಯ ಸ್ಮರಣೀಯ ಎನಿಸುವ ಸ್ವಮೇಕ್ ಚಿತ್ರದ ಕೊರತೆಯಿದೆ. ಹಾಗಂತ ರಾಕ್ ಲೈನ್ ಸ್ವಮೇಕ್ ಮಾಡೇ ಇಲ್ಲ ಅಂತಲ್ಲ. ಆದರೆ ಅವರು ಜಾಸ್ತಿ ಮೊರೆ ಹೋಗಿರುವುದು ರಿಮೇಕ್ ಚಿತ್ರಗಳತ್ತ ಎನ್ನುವುದು ಸತ್ಯ. ಒಂದು ಲಾಲಿ, ಸೂಪರ್ ಅಂತಹ ಸ್ವಮೇಕ್ ಚಿತ್ರಗಳನ್ನೂ ನೀಡಿದೆ ಅವರ ಸಂಸ್ಥೆ. ಆದರೆ ಯಾವುದೇ ರೀತಿಯಲ್ಲಿಯೂ ಹೊಸತನದ ಹೊಸ ಅಲೆಯ ಚಿತ್ರಗಳ ಕಡೆಗೆ ಗಮನ ಹರಿಸದೆ ಇರುವುದು, ಪಕ್ಕಾ ಮಸಾಲೆ ಮನರಂಜನೆ -ರಿಮೇಕ್ ಚಿತ್ರಗಳಿಗಷ್ಟೇ ಪ್ರಾಮುಖ್ಯತೆ ಕೊಟ್ಟಿರುವುದು ಹೆಚ್ಚಾಗಿ ಕಂಡುಬರುತ್ತದೆ. ಸಿನಿಮಾ ವ್ಯವಹಾರವನ್ನು ತುಂಬಾ ಚೆನ್ನಾಗಿ ಅರಿತಿರುವ ಮತ್ತು ನಿರ್ಮಾಣದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿರುವ ರಾಕ್ ಲೈನ್ ಕನ್ನಡ ಚಿತ್ರರಂಗದ ಆಸ್ತಿ. ಅವರು ಸ್ವಮೇಕ್ ಚಿತ್ರಗಳತ್ತ, ಹೊಸ ಪ್ರತಿಭೆಗಳ ಅನಾವರಣದತ್ತ ಸ್ವಲ್ಪ ಆಸಕ್ತಿ ತೋರಿಸಿದರೆ ಕನ್ನಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವ ಎಲ್ಲಾ ಸಾಧ್ಯತೆಗಳಿವೆ. ಅವರು ಮನಸ್ಸು ಮಾಡಬೇಕಷ್ಟೆ...

Saturday, June 4, 2016

ಗೋದಿ ಬಣ್ಣ ಸಾಧಾರಣ ಮೈಕಟ್ಟು-ಚಿತ್ರವಿಮರ್ಶೆ

ಮಾತಿಗೆ ಮೊದಲೇ ಹೇಳಬೇಕೆಂದರೆ ಇದೊಂದು ಭಾವಪೂರ್ಣ ಚಿತ್ರ. ಇಡೀ ಚಿತ್ರದ ತುಂಬಾ ನೋಡುಗನನ್ನು ಆವರಿಸಿಕೊಳ್ಳುವುದು ಭಾವುಕತೆ. ಈವತ್ತಿನ ಬ್ಯುಸಿ ಜಗತ್ತಿನ ಮಗ, ಅರಳುಮರಳು ಖಾಯಿಲೆಯ ಅಪ್ಪ ಇವರ ನಡುವಣ ಸಂಬಂಧಗಳ ಸೂಕ್ಷ್ಮಗಳ ಜೊತೆಗೆ ಒಂದಷ್ಟು ಥ್ರಿಲ್ಲರ್ ಅಂಶಗಳನ್ನು ಬೆರೆಸಿರುವ ಚಿತ್ರವಿದು. ಹಾಗಾಗಿ ಒಂದೊಳ್ಳೆ ಕೌಟುಂಬಿಕ ಚಿತ್ರವನ್ನು ನೋಡಬೇಕೆನ್ನುವ ಹಗುರ ಮನದ ನೋಡುಗರಿಗೆ ಹೇಳಿ ಮಾಡಿಸಿದ ಚಿತ್ರವಿದು.
ಚಿತ್ರದ ಕತೆ ಸಾಧಾರಣವಾದದ್ದೆ. ಅಲ್ಜಮೈರ್ ಖಾಯಿಲೆಯ ತಂದೆಯನ್ನು ಮನೆಯಲ್ಲಿಟ್ಟುಕೊಳ್ಳಲಾಗದ ಅನಿವಾರ್ಯ ಪರಿಸ್ಥಿತಿಯಿಂದಾಗಿ ಆತನನ್ನು ಸರ್ಕಾರೇತರ ಸಂಸ್ಥೆಗೆ ಸೇರಿಸುತ್ತಾನೆ ಶಿವ, ಅಥವಾ ಈಗಾಗಲೇ ಸೇರಿಸಿದ್ದಾನೆ. ತಂದೆಯನ್ನು ನೋಡಲು ಬಂದು ಮತ್ತೆ ಅವನನ್ನು ವಾಪಸ್ಸು ಕರೆತರುವಾಗ ತನ್ನದೇ ನಿರ್ಲಕ್ಷ್ಯದಿಂದಾಗಿ ತಂದೆ ವೆಂಕೋಬರಾವ್ ತಪ್ಪಿಸಿಕೊಳ್ಳುವಂತಾಗುತ್ತದೆ. ಸಂಸ್ಥೆಯ ತಾಯಿಗರುಳಿನ ವೈದ್ಯೆ ಸಹನಾ ಜೊತೆಗೆ ತಂದೆಯನ್ನು ಹುಡುಕುತ್ತಾ ಸಾಗುವ ಶಿವನಿಗೆ ಅಪ್ಪನ ಗೈರುಹಾಜರಿಯಲ್ಲಿ ಅಪ್ಪ ಸಿಗುತ್ತಾ ಹೋಗುತ್ತಾನೆ. ತಪ್ಪಿಸಿಕೊಂಡ ತಂದೆ ಸಿಗುತ್ತಾರಾ..?
ಚಿತ್ರ ಪ್ರಾರಂಭದಿಂದಲೇ ಮಂದಗತಿಯಲ್ಲಿ ಪಯಣ ಆರಂಭಿಸುತ್ತದೆ.. ನಿರ್ದೇಶಕರ ಸ್ಕ್ರಿಪ್ಟ್ ರಚನೆ ಮತ್ತು  ನಿರೂಪಣೆ ಯಾವುದೇ ಧಾವಂತವಿಲ್ಲದೆ ಕತೆ ಹೇಳುತ್ತಾ ಸಾಗುತ್ತದೆ. ಚಿಕ್ಕ ಚಿಕ್ಕ ಅಂಶಗಳನ್ನು ಜೋಡಿಸುತ್ತಾ ಚಿತ್ತಾರ ಬಿಡಿಸುತ್ತಾ ಸಾಗುವ ನಿರ್ದೇಶಕರು ತಮ್ಮ ಪಾತ್ರಗಳ ಆಯ್ಕೆಯಲ್ಲಿಯೇ ಅರ್ಧ ಗೆದ್ದಿದ್ದಾರೆ.  ಸಿನಿಮಾದ ಸಿದ್ಧ ಸೂತ್ರಗಳನ್ನು ಬದಿಗಿಟ್ಟು ಒಂದು ಕಾದಂಬರಿ ರೀತಿಯಲ್ಲಿ ಕತೆ ಹೇಳುತ್ತಾ ಸಾಗುತ್ತಾರೆ. ಒಮ್ಮೊಮ್ಮೆ ಏನಾಗುತ್ತದೆಯೋ ಎನ್ನುವ ಕಾತುರ ಕಳವಳ ಉಂಟು ಮಾಡುವ ಚಿತ್ರಕತೆ ಅಲ್ಲಲ್ಲಿ ಆದ್ರಗೊಳಿಸುತ್ತಾ ಸಾಗುತ್ತದೆ.
ಚಿತ್ರದ ಮುಖ್ಯಭೂಮಿಕೆಯಲ್ಲಿ ಅನಂತ ನಾಗ್ ನಟಿಸಿದ್ದಾರೆ. ಅವರ ಅನುಭವ, ಅವರ ವಯೋಮಾನಕ್ಕೆ ಎರಡೂ ಕತೆಯ ಪಾತ್ರಕ್ಕೆ ಸಾಥ್ ನೀಡಿರುವುದರಿಂದ ಅವರ ಅಭಿನಯದ ಬಗ್ಗೆ ಹೇಳಲು ಅವರು ಏನನ್ನೂ ಉಳಿಸುವುದಿಲ್ಲ. ನಾಯಕನಾಗಿ ರಕ್ಷಿತ್ ಶೆಟ್ಟಿ, ನಾಯಕಿಯಾಗಿ ಶ್ರುತಿಹರಿಹರನ್ ಅಚ್ಚುಕಟ್ಟಾಗಿ ಅಭಿನಯಿಸಿದ್ದರೂ ವಸಿಷ್ಠ ಸಿಂಹ ಗಮನ ಸೆಳೆಯುತ್ತಾರೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಸಿನಿಮಾಕ್ಕೆ ಪೂರಕವಾಗಿದೆ. ತಮ್ಮ ಮೊದಲ ಚಿತ್ರದಲ್ಲಿಯೇ ಒಂದು ಕೌಟುಂಬಿಕ ಕತೆಯನ್ನು ಕೈಗೆತ್ತಿಕೊಂಡಿರುವ ಹೇಮಂತ್ ಮೆಚ್ಚುಗೆ ಗಳಿಸುತ್ತಾರೆ.

ಜೊತೆಗೆ ಇಡೀ ಚಿತ್ರದಲ್ಲಿ ಒಂದೇ ಭಾವ ಸಾಗುತ್ತದೆ. ಹಾಗಾಗಿ ಒಂದಷ್ಟು ಹಾಸ್ಯ ಮನರಂಜನೆ ಇತ್ಯಾದಿ ಇತ್ಯಾದಿ ಬಯಸುವ ಹಾಡು ಕುಣಿತ ಅಪೇಕ್ಷೆ ಪಡುವ ಅಥವಾ ಜಾಲಿ ಸಿನಿಮಾ ಬೇಕೆನ್ನುವ ಪ್ರೇಕ್ಷಕ ನೀವಾಗಿದ್ದರೆ ಗೋದಿಬಣ್ಣ ಸಾಧಾರಣ ಎನಿಸುವ ಸಾಧ್ಯತೆ ಇದೆ. ಅಲ್ಲಲ್ಲಿ ತುಸುವೇ ನಿಧಾನ ಎನಿಸುವ ಸಾಧ್ಯತೆಯೂ ಇಲ್ಲದಿಲ್ಲ. ಅದಷ್ಟನ್ನು ಪಕ್ಕಕ್ಕಿಟ್ಟು ಹೊಸಬರ ಪ್ರಯತ್ನವನ್ನು ಶ್ಲಾಘಿಸುವ ಮನಸ್ಸಿದ್ದರೆ ಗೋದಿಬಣ್ಣ ನಿಮಗೆ ಮೋಸ ಮಾಡುವುದಿಲ್ಲ.

Thursday, June 2, 2016

ಯೋಗರಾಜ್ ಭಟ್ಟರ ಪತ್ರ ಮತ್ತು ರವಿಚಂದ್ರನ್ ಅಪೂರ್ವ...

ಅಪೂರ್ವ ರವಿಚಂದ್ರನ್ ಚಿತ್ರ. ಅವರದೇ ಕನಸು ಕನವರಿಕೆ ಕನಲಿಕೆಯನ್ನು ಒಳಗೊಂಡಿರುವ ಚಿತ್ರ. ಆದರೆ ಅದು ಪ್ರೇಕ್ಷಕರನ್ನು ತಟ್ಟುವಲ್ಲಿ ಯಶಸ್ವಿಯಾಗದೆ ಇರುವುದು ನೋಡುಗನಲ್ಲಿ ಬೇಸರ ಉಂಟುಮಾಡಿದ್ದು ಸತ್ಯ. ರವಿಚಂದ್ರನ್ ಎನ್ನುವ ಕನ್ನಡದ ಕ್ರೇಜಿಸ್ಟಾರ್ , ಶೋ ಮ್ಯಾನ್ ಬಗೆಗೆ ಒಂದಷ್ಟು ಎಳಸು ಚಿತ್ರಕರ್ಮಿಗಳು ಎಳಸಾಗಿ ಮಾತನಾಡಿದ್ದು ಕಂಡ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಒಂದು ಪತ್ರವನ್ನು ಬರೆದಿದ್ದಾರೆ, ಅದನ್ನು ಬರಹಗಾರ ಜೋಗಿ ಪ್ರಕಟಿಸಿದ್ದಾರೆ. ಒಕ್ಕಣೆ ಓದಿದಾಗ ಭಟ್ಟರ ಕಳಕಳಿ ಇಷ್ಟವಾಗುವುದಕ್ಕಿಂತ ಆಪ್ತವಾಗುತ್ತದೆ. ಹೌದಲ್ಲ, ರವಿಚಂದ್ರನ್ ಅವರ ಒಂದು ಅಪೂರ್ವ ಅದರ ಹಿಂದಿನ ಒಂದು ಬೇಸರವನ್ನು ಇಟ್ಟುಕೊಂಡು ಸುಖಾಸುಮ್ಮನೆ ಬ್ರಹ್ಮನಂತೆ ನಾವು ಮಾತನಾಡುವ ಯೋಗ್ಯತೆ ನಮಗೆ ಇದೆಯಾ ಎನಿಸುತ್ತದೆ. ಏಕೆಂದರೆ ರವಿಚಂದ್ರನ್ ಕನ್ನಡಕ್ಕೆ ಗ್ಲಾಮರ್ ತಂದುಕೊಟ್ಟವರು, ಶ್ರೀಮಂತಿಕೆ ತಂದುಕೊಟ್ಟವರು, ಅವರು ತುಟಿಗೆ ತುಟಿ ಇಟ್ಟು ಚುಂಬಿಸಿದರೆ ನಮಗೆ ಅಂತಹ ಮುಜುಗರವಾಗುವುದಿಲ್ಲ, ಅವರು ಹೊಕ್ಕಳ ಮೇಲೆ ದ್ರಾಕ್ಷಿ ಹಾಕಿದರೆ ಅದು ಅಸಹ್ಯ ಎನಿಸುವುದಿಲ್ಲ, ಆ ಮಟ್ಟಿಗೆ ನಮ್ಮ ಮನೆಮನೆಗಳಲ್ಲಿ ಮನದಾಳದಲ್ಲಿ ಹೆಸರು ಮಾಡಿದ್ದು ರವಿಚಂದ್ರನ್. ಸುಮ್ಮನೆ ಗಮನಿಸಿದರೆ ರವಿಚಂದ್ರನ್ ಅವರ ಶೃಂಗಾರ ಚಿತ್ರಣದ ಅರ್ಧದಷ್ಟನ್ನು ಕಾಶಿನಾಥ್ ಮಾಡಿದರೆ ಸಾಕು, ಅದು ಪೋಲಿ ಸಿನಿಮವಾಗುತ್ತದೆ, ಹೆಂಗಸರು ಮೂಗು ಮುರಿಯದೆ ಇರಲಾರರು, ಆದರೆ ರವಿಚಂದ್ರನ್ ಹೆಂಗೆಳೆಯರಿಗೆ ಅಚ್ಚುಮೆಚ್ಚು,  ಅವರು ಪೋಲಿಯಲ್ಲ, ಬದಲಿಗೆ ತುಂಟ..ಇಂತಹ ಒಂದು ಇಮೇಜ್ ಸೃಷ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಆವತ್ತಿಗೆ ಹಳ್ಳಿಮೇಷ್ಟ್ರು ಸಿನೆಮಾವನ್ನು ಇಡೀ ಊರಿಗೆ ಊರೇ ಬಸ್ಸಿನಲ್ಲಿ, ಎತ್ತಿನ ಗಾಡಿಗಳಲ್ಲಿ ಕುಟುಂಬ ಸಮೇತರಾಗಿ ಬಂದು ನೋಡಿದ್ದಿದೆ. ಏಯ್ ರವಿಚಂದ್ರನ್ ಸಿನಿಮಾ ನೋಡಬೇಡ ಎಂದು ನಮಗೆ ಹಿರಿಯರು ಹೇಳಿದ್ದು ನೆನಪಿಲ್ಲ, ಆದರೆ ಕಾಶಿನಾಥ್ ಸಿನಿಮಾ ನೋಡಿದಾಗ ಬೈದದ್ದು ನೆನಪಿದೆ.[ನಮ್ಮಲ್ಲಿ ಇಂಗ್ಲೀಷ್, ಮಲಯಾಳಂ ಭಕ್ತಿಚಿತ್ರಗಳನ್ನು ನೋಡಿದಾಗಲೂ ಬರೀ ಆ ಭಾಷೆಯಿಂದಲೇ ಅದೊಂದು ಅಶ್ಲೀಲ ಎಂದುಕೊಂಡು ಬೈದವರಿದ್ದಾರೆ]
ಸುಮ್ಮನೆ ಗಮನಿಸಿದರೆ ರವಿಚಂದ್ರನ್ ಕನ್ನಡದಲ್ಲಿ ಸಿರಿವಂತಿಕೆ ತಂದದ್ದು ಸತ್ಯ. ಅವರ ಪ್ರೇಮಲೋಕ  ಚಿತ್ರದ ನಂತರ ಇಲ್ಲಿಯವರೆಗೆ ರವಿಚಂದ್ರನ್ ಸುಮಾರು ಅರವತ್ತೆಂಟಕ್ಕೂ  ಹೆಚ್ಚು   ಚಿತ್ರಗಳಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಅನಾಮತ್ತು ನಲವತ್ತನಾಲ್ಕು  ಚಿತ್ರಗಳು ಅಧಿಕೃತ ರಿಮೇಕ್ ಗಳು. ಇನ್ನು  ಅವರೇ ಇಷ್ಟಪಟ್ಟು ಸ್ವಮೇಕ್ ಮಾಡಿದ ಅದ್ದೂರಿ ಚಿತ್ರಗಳಲ್ಲಿ  ಶಾಂತಿಕ್ರಾಂತಿ, ಚಿನ್ನ, ಕಿಂದರಜೋಗಿ, ರಸಿಕ, ಜಾಣ, ಕಲಾವಿದ, ಮೊಮ್ಮಗ, ಹಠವಾದಿ ಮುಂತಾದ ಚಿತ್ರಗಳು ಯಾವುದೇ ರೀತಿಯಲ್ಲಿಯೂ ಗಮನ ಸೆಳೆಯುವಂತಹದ್ದಲ್ಲ. ಸೂಪರ್ ಡೂಪರ್ ಹಿಟ್ ಚಿತ್ರವಾದ ಮಲ್ಲ  ಚಿತ್ರದಲ್ಲಿಯೂ ಯಶಸ್ಸಿಗೆ ಬೇರೆ ಮಾನದಂಡವನ್ನು ಹುಡುಕಬಹುದು.
ದೃಶ್ಯಮಾಧ್ಯಮದಲ್ಲಿ ಏನೆಲ್ಲಾ ಹೊಸತನ್ನು ಸಿರಿವಂತಿಕೆಯನ್ನು ಕನ್ನಡಕ್ಕೆ ತಂದುಕೊಟ್ಟ ಇಂತಹ ನಿರ್ಮಾಪಕ ನಿರ್ದೇಶಕ ಉತ್ತಮ ಬರಹಗಾರರನ್ನು ಕತೆಗಾರರನ್ನು ಹುಟ್ಟುಹಾಕದೆ ಇದ್ದದ್ದು ವಿಪರ್ಯಾಸ. ಹಂಸಲೇಖರಂತಹ ಮಹಾನ್  ಸಂಗೀತ  ನಿರ್ದೇಶಕ ಸಾಹಿತ್ಯಕಾರನನ್ನು ಪೋಷಿಸಿದ ರವಿಚಂದ್ರನ್ ಯಾಕೆ ಕತೆಯ ವಿಷಯದಲ್ಲಿ ತಲೆ ಕೆಡಿಸಿಕೊಳ್ಳಲಿಲ್ಲ ಎಂಬುದು ಪ್ರಶ್ನೆ. ಕತೆಗಾರರನ್ನು, ಚಿತ್ರಕತೆಗಾರರನ್ನು ಹುಟ್ಟು ಹಾಕುವ ಕಡೆಗೆ ಅಥವಾ ನಮ್ಮಲ್ಲಿನ ಕಾದಂಬರಿಯನ್ನೂ ಕತೆಯನ್ನೂ ಸಿನಿಮಾರೂಪಕ್ಕೆ ತರುವ ಕಡೆಗೆ ರವಿಚಂದ್ರನ್ ಗಮನ ಹರಿಸಿದ್ದರೆ ಬಹುಶಃ ಈವತ್ತು ಕನ್ನಡದ ರವಿಚಂದ್ರನ್ ಬೇರೆ ಭಾಷೆಗಳಲ್ಲಿ ಬರೀ ಉತ್ತಮ ತಂತ್ರಜ್ಞ ಎಂದಷ್ಟೇ ಹೆಸರಾಗುತ್ತಿರಲಿಲ್ಲ.  ರವಿಚಂದ್ರನ್ ಅವರ ಸಿನಿಮಾ ಪಟ್ಟಿಯಲ್ಲಿ ಯಶಸ್ವಿ ಚಿತ್ರಗಳು ದೊರೆಯುತ್ತವೆಯೇ ಹೊರತು ಸ್ವಂತಿಕೆಯ ನಮ್ಮದೇ ಎನಿಸುವ ಹೆಮ್ಮೆಯಿಂದ ಹೇಳಿಕೊಳ್ಳುವ ಚಿತ್ರಗಳ ಸಂಖ್ಯೆ ಕಡಿಮೆ ಅಥವಾ ಇಲ್ಲವೇ ಇಲ್ಲ. ಒಬ್ಬ ನಟ ನಿರ್ಮಾಪಕ ಬರೀ ರಿಮೇಕ್ ಚಿತ್ರಗಳಿಂದಲೇ ತನ್ನ ಸ್ಥಾನವನ್ನು ಗುರುತಿಸಿಕೊಂಡದ್ದು ಒಂದು ರೀತಿಯಲ್ಲಿ ಬೇಸರದ ಸಂಗತಿಯೇ. ನಮ್ಮಲ್ಲಿನ ಒಂದಷ್ಟು ಕತೆಗಾರರನ್ನು ಚಿತ್ರಕತೆಗಾರರನ್ನು ರವಿಚಂದ್ರನ್ ಹುಟ್ಟುಹಾಕಿ ಸ್ವಂತಿಕೆಯ ಚಿತ್ರಗಳನ್ನು ನೀಡಿದ್ದರೇ ಅದರ ಖದರ್ರೆ ಬೇರೆಯಾಗುತ್ತಿತ್ತೇನೋ? ಆದರೆ  ರವಿಚಂದ್ರನ್ ಸ್ವಮೇಕ್ ಚಿತ್ರಗಳನ್ನು ಮಾಡಿದಾಗಲೆಲ್ಲಾ ಬಹುತೇಕ ಸೋತಿದ್ದಾರೆ. ಅವರ ಪ್ರೇಮಲೋಕ[ಅದು ಇಂಗ್ಲೀಷಿನ ಗ್ರೀಸ್ ನ ಸ್ಫೂರ್ತಿ] ಹೊರತುಪಡಿಸಿದರೆ ಆನಂತರ ಅವರು ಕೈಗೆತ್ತಿಕೊಂಡದ್ದು ಕಿಂದರಜೋಗಿ.ಆ  ಚಿತ್ರವನ್ನು. ಲೆಕ್ಕವಿಲ್ಲದಷ್ಟು ದಿನ ಚಿತ್ರೀಕರಣ ಮಾಡಿದ್ದು, ಮರು ಚಿತ್ರೀಕರಣ ಮಾಡಿದ್ದು ಅವರ ಆ ಸಿನಿಮಾದ ಹೆಗ್ಗಳಿಕೆ. ಆದರೆ ಚಿತ್ರ ಅವರಿಗೆ ಯಶಸ್ಸು ತಂದುಕೊಡಲಿಲ್ಲ..ಆನಂತರ ಮತ್ತೆ ರಾಮಾಚಾರಿಯಿಂದ ಚೇತರಿಸಿಕೊಂಡು ಶಾಂತಿಕ್ರಾಂತಿ ಬಿಡುಗಡೆಗೊಳಿಸಿದ್ದು ಅವರಿಗಾಗಲಿ, ಪ್ರೇಕ್ಷಕನಿಗಾಗಲಿ ಖುಷಿ ಕೊಡಲಿಲ್ಲ..ಅದಾದ ನಂತರ ಸಾಲು ಸಾಲು ರಿಮೇಕ್ ಮಾಡಿ ಗೆದ್ದ ಕ್ರೇಜಿಸ್ಟಾರ್ ಮತ್ತೆ ಸ್ವಮೇಕ್ ಎಂದು ಚಿನ್ನ ಮಾಡಿ ಸೋತರು. ಹೀಗೆ ಗಮನಿಸುತ್ತಾ ಹೋದರೆ ರವಿಚಂದ್ರನ್ ಅವರ ಯಶಸ್ಸು ನಿಂತಿರುವುದು ರಿಮೇಕ್ ಮೇಲೆಯೇ ಎನಿಸುತ್ತದೆ. ಇದು ಸರಿಯೋ ತಪ್ಪೋ...ಅಂತೂ ಬೇರೆ ನಿರ್ದೇಶಕರ, ಬೇರೆ ಭಾಷೆಯ ಸಿನಿಮಾ ಕತೆಗಳನ್ನು ತಂದು ಇಲ್ಲಿ ಸಿನಿಮಾ ಮಾಡಿ ಗೆದ್ದ ರವಿಚಂದ್ರನ್ ನಮ್ಮಲ್ಲಿನ ಕತೆಗಳನ್ನು, ಕತೆಗಾರರನ್ನು ನಂಬದೆ ಇದ್ದದ್ದು ವಿಪರ್ಯಾಸ.
ಈವತ್ತಿಗೂ ಏಕಾಂಗಿ ಆಗಿರಬಹುದು, ಅಥವಾ ಇತ್ತೀಚಿನ ಅಪೂರ್ವ ಆಗಿರಬಹುದು. ಏನಾದರೂ ಒಂದು ವಿಭಿನ್ನವಾದ ಅಥವಾ ವಿಶೇಷವಾದದ್ದನ್ನು ಮಾಡಬೇಕೆನ್ನುವ ತುಡಿತ ಆ ಚಿತ್ರಗಳಲ್ಲಿ ಕಾಣಸಿಗುವುದು ಸತ್ಯ. ಆದರೆ ಬರೀ ಆಶಯವಷ್ಟೇ ಸಿನಿಮಾ ಅಲ್ಲವಲ್ಲ. ಅಥವಾ ಎಲ್ಲವನ್ನು ಒಬ್ಬರೇ ಒಂದೆಡೆಯೇ ಕುಳಿತುಮಾಡಲು ಸಾಧ್ಯವೇ..? ಅದೀಗ ಮತ್ತೆ ಪ್ರೂವ್ ಆಗಿದೆ ಅಷ್ಟೇ. ಅಪೂರ್ವ ಚಿತ್ರದಲ್ಲಿನ ಒಂದೇ ಲಿಫ್ಟ್, ಹತ್ತೊಂಭತ್ತರ ಯುವತಿ ಮತ್ತು ಅರವತ್ತೊಂದರ ವೃದ್ಧನ ನಡುವಣ ಪ್ರೀತಿ ನಿರೀಕ್ಷಿತ ಭಾವನೆಗಳನ್ನು ಹುಟ್ಟುಹಾಕದೆ ಇದ್ದದ್ದಕ್ಕೆ ತಾಂತ್ರಿಕ ಅಂಶಗಳು ಏನೇ ಇರಲಿ, ಚಿತ್ರಕತೆ-ಕತೆ ಮುಖ್ಯ ಕಾರಣ. ಅದಕ್ಕೆ ಬೇಕಾದಂತಹ ಕತೆಯನ್ನು ರವಿಚಂದ್ರನ್ ನಮ್ಮಲ್ಲಿನ ಕತೆಗಾರರ ಕೈಯಲ್ಲಿ ಹೆಣಿಸಬಹುದಿತ್ತೇನೋ?ಆದರೆ ಎಲ್ಲವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡದ್ದರ ಪರಿಣಾಮವೋ ಏನೋ..?ಭಾರಕ್ಕೆ ಜಗ್ಗಿದಂತಾಗಿದೆ ಸಿನಿಮಾ. ಒಬ್ಬ ನಿರ್ದೇಶಕ ನಟ, ನಟಿ ಅದೆಷ್ಟೇ ಇಷ್ಟವಾಗಲಿ, ಅವರ ಹಿಂದಿನ ಚಿತ್ರಗಳ ಸವಿನೆನಪು ಅದೆಷ್ಟೇ ಗಾಢವಾಗಿರಲಿ,  ಅವರದೇ ಸಿನಿಮಾ  ನಿರೀಕ್ಷಿಸಿದಂತೆ ಇರದಿದ್ದರೆ  ಚಿತ್ರಮಂದಿರದ ಒಳಗಣ ಎರಡೂವರೆ ಘಂಟೆ ಯಾತನಾಮಯ ಅನಿಸುವುದು ಸತ್ಯ. ಹಾಗಾಗಿಯೇ ಒಂದಷ್ಟು ಜನರು ಆ ಅಸಹನೆಯನ್ನು ಹೊರಹಾಕಿದ್ದಾರೆ ಎನಿಸುತ್ತದೆ. ಅಷ್ಟೇ.. ಅದರಾಚೆಗೆ ಬೇರೇನನ್ನೂ ಊಹಿಸಿಕೊಳ್ಳುವುದು ಸಮಂಜಸ ಅಲ್ಲವೇನೋ?

Monday, May 16, 2016

ರಮಾಬಾಯಿ ನೋಡಿದ್ರಾ..? ಇಂಗಳೆ ಯಾರು..?ಬಸವಣ್ಣ ಹೇಳಿದ್ದೇನು..?

ನಾನು ಫೇಸ್ಬುಕ್  ಇನ್ನಿತರ ಸಾಮಾಜಿಕ ಜಾಲತಾಣಗಳನ್ನೂ  ಗಮನಿಸುತ್ತೇನೆ. ಸಿನಿಮಾ, ಸಾಹಿತ್ಯ ಸಂಬಂಧಿ ಪೋಸ್ಟ್ ಗಳನ್ನ ಬಿಟ್ಟರೆ ಬೇರೆ ಪೋಸ್ಟ್ ಗಳಿಗೆ  ಪ್ರತಿಕ್ರಿಯಿಸುವುದಿಲ್ಲ. ಆದರೂ ಈ ಕೆಲವು ಜಾತ್ಯಾತೀತರು, ಜಾತಿವಾದಿಗಳು, ರಾಜಕೀಯಪ್ರಿಯರು, ಸಮಾಜ ಸುಧಾರಕರ ಮುಖವಾಡ ಹೊತ್ತವರು, ಬುದ್ದಿಜೀವಿಗಳೆನಿಸಿಕೊಂಡವರು ಮುಂತಾದವರ ಆರ್ಭಟಗಳನ್ನು ಸುಮ್ಮನೆ ಗಮನಿಸುತ್ತಾ ಸಾಗುತ್ತೇನೆ. ನನಗೆ ರಾಜಕೀಯ ಆಕರ್ಷಿಸುವುದಿಲ್ಲವಾದರೂ ಅದನ್ನು ಉದಾಸೀನ ಮಾಡುವ ಹಾಗಿಲ್ಲ. ಇನ್ನು ಮತ, ಧರ್ಮ, ಜಾತಿ ಬಿಡಿ. ಅದವರ ವೈಯಕ್ತಿಕ. ಎಲ್ಲಾ ಜಾತಿಗಳೂ, ಧರ್ಮಗಳೂ ಸರಿ ಎಂದರೆ ಸರಿ ತಪ್ಪು ಎಂದರೆ ತಪ್ಪು. ತಪ್ಪು ಹುಡುಕಲು ಹೊರಟರೆ ಸಾವಿರಾರು, ಶ್ರೇಷ್ಠ ಎಂದುಕೊಂಡರೆ ಅದೇ ಶ್ರೇಷ್ಠ. ಇರಲಿ. ಆದರೆ ಯಾವುದಾದರೊಂದು ವಿಷಯವಾದಾಗ. ವಿವಾದವಾದಾಗ ಯಾರಾದರೂ ಎಲ್ಲೋ ಮಾತಿನ ಭರದಲ್ಲಿ ಏನೋ ಮಾತಾಡಿದಾಗ, ಅಥವಾ ಇನ್ನೇನೋ ಆದಾಗ ಅದನ್ನಿಡಿದುಕೊಂಡು ಕೆಸರೆರೆಚಾಟ ಮಾಡುವವರನ್ನು ಕಂಡಾಗ ಮತ್ತು ಏನೋ ಒಂದು ತೆರನಾಗುತ್ತದೆ. ಇಡೀ ಸಮಾಜವೇ ಸರಿಯಿಲ್ಲ, ನಾವು ಸರಿಯಾಗಿದ್ದೇವೆ ಎನ್ನುವ ಅವರ ನಡೆ ನುಡಿ ಕಂಡಾಗ ಗಾಬರಿಯೂ ಆಗುತ್ತದೆ. 
ಮೊನ್ನೆ ಮೊನ್ನೆ ರಮಾಬಾಯಿ ಎನ್ನುವ ಚಿತ್ರ ಬಿಡುಗಡೆಯಾಗಿತ್ತು. ಚಿತ್ರಮಂದಿರದಲ್ಲಿ ಬೆರೆಳೆಣಿಕೆಯ ಜನರೂ ಇರಲಿಲ್ಲ. ರಮಾಬಾಯಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊದಲ ಪತ್ನಿ.  ಅಂಬೇಡ್ಕರ್ ಜನ್ಮದಿನದಂದೇ ಬಿಡುಗಡೆಯಾದ ಈ ಚಿತ್ರದಲ್ಲಿ ಅಂಬೇಡ್ಕರ್ ಅವರ ಬದುಕನ್ನು ಅವರ ಪತ್ನಿಯ ದೃಷ್ಟಿಕೋನದಲ್ಲಿ ನಿರೂಪಿಸಲಾಗಿತ್ತು. ಆದರೆ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ, ಅವರ ಏಳಿಗೆಗಾಗಿಯೇ ದುಡಿಯುತ್ತಿದ್ದೇವೆ ಎನ್ನುವ ರೀತಿ ಫೇಸ್ಬುಕ್ ನಲ್ಲಿ ಪೋಸ್ ಕೊಡುವ ಒಬ್ಬರೂ ಆ ಚಿತ್ರದ ಬಗ್ಗೆ ಬರೆದದ್ದು ಕಾಣಿಸಲಿಲ್ಲ. ಕೊನೆಗೆ ಹೀಗೊಂದು ಅಪರೂಪದ ಸಿನೆಮಾವನ್ನು ಮಾಡಿದ್ದಾರೆ, ಒಮ್ಮೆ ನೋಡೋಣ ಎಂದಾಗಲಿ, ನೋಡಿದೆ, ಹೀಗಿದೆ, ಹೀಗಿರಬೇಕಿತ್ತು ಎಂದಾಗಲಿ ಒಬ್ಬರೂ ಅದರ ಬಗ್ಗೆ ಪ್ರಸ್ತಾಪಿಸಲಿಲ್ಲ. ಈವತ್ತು ಸಿನಿಮಾ ಮಾಡುವುದು ಸುಲಭದ ಅಥವಾ ಕಡಿಮೆ ಕರ್ಚಿನ ವಿಷಯವಲ್ಲ. ಏನೇ ಕಡಿಮೆ ಎಂದರೆ ಲಕ್ಷಗಟ್ಟಲೆ ಹಣ ಬೇಕೇ ಬೇಕು. ಹಾಗಾಗಿಯೂ ಒಬ್ಬ ವ್ಯಕ್ತಿ ಅಂತಹ ಅಪರೂಪದ ಪ್ರಯತ್ನ ಪಟ್ಟಾಗ ಅದರ ಬಗ್ಗೆ ಮಾತೇ ಆಡದವರು ಅಂಬೇಡ್ಕರ್ ಬಗ್ಗೆ, ಹಿಂದುಳಿದ ವರ್ಗಗಳ ಏಳಿಗೆಯ ಬಗ್ಗೆ, ಸರ್ಕಾರ ಮಾಡದ ಕಾರ್ಯಗಳ ಬಗ್ಗೆ ಮಾತಾಡುತ್ತಾರಲ್ಲ ಅದೆಲ್ಲ ಒಣ ಪ್ರತಿಷ್ಠೆಯಿರಬಹುದಾ..? ಎನಿಸದಿರಲಿಲ್ಲ. ಹಾಗೆಯೇ ಇದಕ್ಕೂ ಮುನ್ನ ಕನ್ನಡದಲ್ಲಿಯೇ ಇಂಗಳೆಮಾರ್ಗ  ಚಿತ್ರ ಬಂದಿತ್ತು. ಘನಶ್ಯಾಮ್ ಭಾಂಡಗೆ ನಿರ್ಮಿಸಿದ್ದ  ಈ ಚಿತ್ರವೂ ದೇವರಾಯ ಇಂಗಳೆ ಅವರ ಜೀವನ ಚರಿತ್ರೆಯನ್ನು ಆಧರಿಸಿರಿತ್ತು. 2014 ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನೂ ಪ್ರೋತ್ಸಾಹಿಸಿದ್ದು ಕಡಿಮೆ. ಹಾಗೆಯೇ ಗಾಂಧಿಜಿ ಕುರಿತಾದ ಚಿತ್ರಗಳು ಲೇಖನಗಳು, ಅಂಬೇಡ್ಕರ್ ಅವರ ಭಾಷಣದ ವಿವರಣೆ ಮುಂತಾದವುಗಳ ಬಗೆಗೆ ಬರೆದದ್ದಕ್ಕಿಂತ ಅವರು ಹೀಗೆಂದರು ಇವರು ಹಾಗಂದರು ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಯಾಕೆ ಮಾತನಾಡುತ್ತಾರೆ ಎಂಬುದು ನನ್ನ ಪ್ರಶ್ನೆ. 
ಇಲ್ಲಿ  ಬರೀ ಸಿನಿಮಾದ ವಿಷಯವಷ್ಟನ್ನೇ ಮಾತಾಡುವುದಾದರೆ ಒಬ್ಬ ವ್ಯಕ್ತಿಯ ತತ್ವಗಳನ್ನು ನಾವು ಅನುಸರಿಸುವಾಗ, ಗೌರವಿಸುವಾಗ ಅವರ ಬಗೆಗೆ ಒಬ್ಬ ವ್ಯಕ್ತಿ ತೆಗಳಿದರೆ, ವ್ಯತಿರಿಕ್ತವಾಗಿ ಮಾತನಾಡಿದರೆ ಅದನ್ನು ವಿರೋಧಿಸುವುದು ಸರಿ. ಆದರೆ ಅವರ ಬಗೆಗೆ ಚಿತ್ರವನ್ನೋ, ಪುಸ್ತಕವನ್ನೂ ಬರೆದಾಗ ಅದನ್ನು ಪ್ರಶಂಸಿಸಬಹುದಲ್ಲವೇ..? ಆ ಸಿನೆಮಾವನ್ನು ನೋಡಿ, ಮತ್ತೊಂದಷ್ಟು ಜನರನ್ನು ನೋಡುವಂತೆ ಪ್ರೇರೇಪಿಸಿ., ಅದರ ಬಗೆಗೆ ಚರ್ಚೆ ನಡೆಸಿದ್ದರೆ ಅದನ್ನು ನಿರ್ಮಿಸಿದ್ದವರಿಗೆ, ನಿರ್ದೇಶನ ಮಾಡಿದ್ದವರಿಗೆ ಉತ್ತೇಜನ ಸಿಕ್ಕಿರುತ್ತಿತ್ತಲ್ಲವೇ..?
ಮೇಲ್ನೋಟಕ್ಕೆ ಗಮನಿಸಿದಾಗ ಇಲ್ಲಿ  ಆಗುತ್ತಿರುವುದು ಇದೆ. ಮೋದಿ ಕೇರಳವನ್ನು ಸೋಮಾಲಿಯ ಎಂದರು, ಸೋಮಯಾಗಕ್ಕೆ ಮೇಕೆ ಬಲಿ ಕೊಟ್ಟರು ಎಂಬೊಂದು ಸುದ್ದಿಯನ್ನು ಒಬ್ಬರು ಸುದ್ದಿ ಮಾಡಿ ಅದರ ಬಗ್ಗೆ ಮಾತಾಡಿ ವಿರೋಧಿಗಳಿಂದ, ಪರವಾದಿಗಳಿಂದ ಲೈಕ್, ಡಿಸ್ ಲೈಕ್ ಪಡೆದು ಮಾತಾಡಿದರೆ, ಮತ್ತೊಬ್ಬರು ಸಿದ್ಧರಾಮಯ್ಯ ಸಭೆಯಲ್ಲಿ ನಿದ್ರೆ ಮಾಡಿದರು, ಸೋನಿಯಾ ಗಾಂಧೀ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್ ನಲ್ಲಿಟ್ಟಿದ್ದಾರೆ, ರಾಹುಲ್ ಗಾಂಧಿ ಪೆದ್ದ ಎಂಬುದಾಗಿ ಪೋಸ್ಟ್ ಹಾಕಿ ಮತ್ತದೇ ಲೈಕ್ ಡಿಸ್ ಲೈಕ್ ಆಟ ಆಡುವುದಾದರೂ ಏತಕ್ಕೆ..? ಗೋಮಾಂಸ ತಿನ್ನುವುದು ಅಪರಾಧ ಎಂದೂ, ಅದು ತಿನ್ನುವುದು ನಮ್ಮ ಹಕ್ಕೆಂದೂ, ಹಿಂದೂ ಧರ್ಮದಲ್ಲಿ ಹುಳುಕಿದೆ ಎಂದೂ, ಅವನು ಸರಿ, ಇವನು ಸರಿ, ಅವನು ತಪ್ಪು ಇವನು ತಪ್ಪು ಎನ್ನುವ ಕೆಸರೆರಚಾಟಕ್ಕೆ ಅಂಬೇಡ್ಕರ್, ಬಸವಣ್ಣ, ಬುದ್ಧ, ಗಾಂಧೀ ಅವರ ಉದ್ದೇಶ, ಬರಹ, ಮಾತುಗಳನ್ನು ಭಗವದ್ಗೀತೆ, ಕುರಾನ್, ಬೈಬಲ್ ನಲ್ಲಿನ ಉಲ್ಲೇಖಗಳನ್ನು ಉಲ್ಲೇಖಿಸುವುದು ಅದೆಷ್ಟರ ಮಟ್ಟಿಗೆ ಸರಿ...?
ಈ ಮಾತನ್ನು ಬರೀ ಈ ಎರಡು ಚಿತ್ರಕ್ಕಷ್ಟೇ ನಾನು ಹೇಳುತ್ತಿಲ್ಲ. ಅಥವಾ ಬರೀ ಸಿನಿಮಾದ ವಿಷಯವೇ ಅಲ್ಲ. ನಾವು ಮುಂದಿನ ಪೀಳಿಗೆಗೆ ಅವರ ಉದ್ದೇಶ-ಸಾಧನೆಯನ್ನು ವಿಶದಪಡಿಸುತ್ತಿಲ್ಲ. ಬದಲಿಗೆ ಅವರನ್ನು ನಮ್ಮವರು-ನಿಮ್ಮವರು ಎಂದು ವಿಂಗಡಣೆ ಮಾಡಿಬಿಡುತ್ತಿದ್ದೇವೆ. ಕ್ರಾಂತಿಕಾರಿ ಬಸವಣ್ಣ ಸಿನೆಮಾವನ್ನು ನೋಡಿದವರೆಷ್ಟು ಜನ ಅದರ ಬಗ್ಗೆ ಮಾತನಾಡುತ್ತಾರೆ. ಸರ್ದಾರ್ ಚಿತ್ರವನ್ನು ಯಾರು ಏಕೆ ಉಲ್ಲೇಖಿಸುವುದಿಲ್ಲ, ಮಮ್ಮುಟ್ಟಿ ಅಭಿನಯದ ಅಂಬೇಡ್ಕರ್, ಕನ್ನಡದ್ದೇ ಬಾಲಕ ಅಂಬೇಡ್ಕರ್,  ನೇತಾಜಿ ಸುಭಾಶ್ ಚಂದ್ರ ಬೋಸ್, ಇಂದಿರಾಗಾಂಧಿ:ದಿ ಡೆತ್ ಆಫ್ ಮದರ್ ಇಂಡಿಯ.. ಮುಂತಾದ ಸಾಧಕರ ಚಿತ್ರಗಳನ್ನು ನಾವೇಕೆ ಪುರಸ್ಕರಿಸುವುದಿಲ್ಲ. ನಾವೆಲ್ಲಾ ಅವರ ಸಾಧನೆಯ ಹಾದಿಯ ಬಗೆಗೆ ಮಾತನಾಡುವುದಕ್ಕಿಂತ ಅವರನ್ನಿಟ್ಟುಕೊಂಡು ವಾದ ವಿವಾದ ಮಾಡುವುದೇ ಜಾಸ್ತಿಯಾಗಿದೆಯಲ್ಲ ಎನಿಸುತ್ತದೆ.

Saturday, May 14, 2016

ಚಕ್ರವ್ಯೂಹದಲ್ಲಿ ನಿರ್ದೇಶಕರೇ ಸಿಲುಕಿದ್ದೇಕೆ..?-ಒಂದು ಹರಟೆ..

ಮೊನ್ನೆ ಮತ್ತೊಮ್ಮೆ  ಅನಿವಾರ್ಯ ಕಾರಣಗಳಿಂದಾಗಿ ಚಕ್ರವ್ಯೂಹ  ಚಿತ್ರವನ್ನು ನೋಡಬೇಕಾಗಿ  ಬಂದಿತ್ತು. ಸಿನಿಮಾ ಅದೆಷ್ಟೇ ಒಳ್ಳೆಯದಿರಲಿ, ಕೆಟ್ಟದ್ದಿರಲಿ  ಪದೇ ಪದೇ ನೋಡಲು  ನನಗಡ್ಡಿಯಿಲ್ಲ. ಒಮ್ಮೆ  ಹಮನಿಸಿದ, ಯೋಚಿಸಿದ, ಗ್ರಹಿಸಿದ  ವಿಷಯಗಳನ್ನು ಪಕ್ಕಕ್ಕಿಟ್ಟು ಮತ್ತೊಂದು ಬೇರೆಯದೇ ಆದ ವಿಷಯವನ್ನು ಅದರಲ್ಲಿ ಹುಡುಕುವ ಪ್ರಯತ್ನ ಮಾಡುತ್ತಾ ಸಿನಿಮಾ ನೋಡುವುದು ನನಗೆ ಖುಷಿಯಾ ಸಂಗತಿ. ನಾನು ಸಿನಿಮಾಕ್ಕೆ ಎರಡನೆಯ ಬಾರಿ ಹೋದದ್ದು ಚಿತ್ರ ಬಿಡುಗಡೆಯಾದ ಹತ್ತನೆಯ ದಿನಕ್ಕೆ. ಚಿತ್ರಮಂದಿರದಲ್ಲಿ ಬೆರಳೆಣಿಕೆಯಾ ಜನವಿದ್ದರು, ಅದರಲ್ಲೂ ಬಾಲ್ಕನಿಯಲ್ಲಿ ಇದ್ದದ್ದು ಇಪ್ಪತ್ತು-ಇಪ್ಪತ್ತೈದು ಜನರು ಮಾತ್ರ. ಅದು ಸಂಜೆಯ ಪ್ರದರ್ಶನದಲ್ಲಿ. ಕನ್ನಡದಲ್ಲಿ  ಬೃಹತ್  ಅಭಿಮಾನಿಗಳನ್ನು  ಹೊಂದಿರುವ, ನಟನೆಯಲ್ಲಿ, ನೃತ್ಯದಲ್ಲಿ, ಹೊಡೆದಾಟದಲ್ಲಿ  ಸೈ ಎನಿಸಿಕೊಂಡಿರುವ ಕಲಾವಿದ ಪವರ್ ಸ್ಟಾರ್ ಪುನೀತ್  ರಾಜಕುಮಾರ್. ಗುಣಮಟ್ಟಕ್ಕೆ ಹೆಚ್ಚು ಗಮನ ಕೊಡುವ ಕತೆ ಚಿತ್ರಕತೆಗೆ ಹೆಚ್ಚು ಗಮನ ಹರಿಸುವ ಪುನೀತ್ ರಾಜಕುಮಾರ್ ಅವರ ಚಿತ್ರದ
ಪ್ರದರ್ಶನದಲ್ಲಿ ಕಡಿಮೆ ಪ್ರೇಕ್ಷಕರನ್ನು ಕಂಡು ನನಗೆ ಒಂದು ರೀತಿಯಾಯಿತು. ಇಷ್ಟಕ್ಕೂ ಚಕ್ರವ್ಯೂಹ ಚಿತ್ರದಲ್ಲಿ ಇಲ್ಲದೆ ಇರುವುದೇನು? ಭರಪೂರ ಹೊಡೆದಾಟಗಳು, ಹಾಡುಗಳು, ಶ್ರೀಮಂತ ಲೊಕೇಶನ್ಗಳು, ಅನುಭವಿ ಕಲಾವಿದರುಗಳು, ಪರಿಣತ ತಂತ್ರಜ್ಞರು... ಹೀಗೆ. ಇಷ್ಟೆಲ್ಲಾ ಇದ್ದು ಮೇಲಾಗಿ ಪವರ್ ಸ್ಟಾರ್ ಪುನೀತ್ ಇದ್ದು  ಸಿನಿಮಾ ಜನರನ್ನು ಆಕರ್ಷಣೆ ಮಾಡುತಿಲ್ಲವಲ್ಲ ಏಕೆ? ಎಂಬ ಪ್ರಶ್ನೆ ನನ್ನನ್ನು ಕಾಡಿದ್ದು ಸತ್ಯ. ಹಾಗೆ ಸಿನಿಮಾ ಒಂದು ಕೈಗೆ ಸಿಗುವುದಿಲ್ಲ, ಇದಿಷ್ಟೇ ಸಿನಿಮಾ ಎಂದು ಯಾವ ಚಿತ್ರಬ್ರಹ್ಮನೂ ಹೇಳಲು ಸಾಧ್ಯವಿಲ್ಲ. ಇಂತಹದ್ದೇ ಯಶಸ್ಸಿನ ಸೂತ್ರ, ಈ ಕತೆ ಪಕ್ಕ ಹಿಟ್ ಆಗುವ ಕತೆ ಎಂದೆಲ್ಲಾ ಹೇಳಲು, ಅಂದಾಜು ಮಾಡಲು ಸಾಧ್ಯವೇ ಇಲ್ಲ. ಆದರೂ ಕೆಲವೊಂದು ಗೆಸ್ ಗಳನ್ನೂ ಮಾಡಬಹುದು. ಪ್ರೇಕ್ಷಕ ಏನನ್ನು ಕೇಳುತ್ತಾನೆ, ಭರಪೂರ ಮನರಂಜನೆ. ಅದರಲ್ಲೂ ಸ್ಟಾರ್ ನಟ ಎಂದಾಗ ಅವನ ನಿರೀಕ್ಷೆ ಇನ್ನೂ ಹೆಚ್ಚಾಗುತ್ತದೆ. ಆದರೆ ಅದನ್ನು ಸಂಧಿಸಲು ಚಿತ್ರಕರ್ಮಿ, ಅದರಲ್ಲೂ ನಿರ್ದೇಶಕ, ನಿರೂಪಕ ಚಿತ್ರಕತೆಗಾರ ಕಷ್ಟ ಪಡಬೇಕಾಗುತ್ತದೆ.. ತಾನೂ ಪ್ರೇಕ್ಷಕನಾಗಿ ಅಭಿಮಾನಿಯಾಗಿ ಆ ಸಿನಿಮಾವನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ.
ಚಕ್ರವ್ಯೂಹ ಚಿತ್ರದ ಕತೆ ತಮಿಳಿನ ಇವನ ವೇರ ಮಾದಿರಿ ಚಿತ್ರದ್ದು. ಅದರ ರಿಮೇಕ್ ಆದ ಚಕ್ರವ್ಯೂಹಕ್ಕೆ ನಿರ್ದೇಶಕ ಅದರ ತಿರುಳನ್ನಷ್ಟೇ ಆಯ್ದುಕೊಂಡಿದ್ದಾರೆ. ಉಳಿದಂತೆ ಇಲ್ಲಿಗೆ ಬೇರೆಯದೇ ಆದ ಚಿತ್ರಕತೆ ರಚಿಸಿದ್ದಾರೆ. ಆ ಸಿನಿಮಾ ನೋಡಿದವರಿಗೆ ಇಲ್ಲೇನು ಮಿಸ್ ಆಗಿದೆ ಎಂಬುದು ಗೊತ್ತಾಗುತ್ತದೆ. ಚಕ್ರವ್ಯೂಹದಲ್ಲಿ ಮಿಸ್ ಆಗಿರುವುದು ಡೀಟೇಲ್ಸ್. ಯಾವುದೇ ಚಿತ್ರದಲ್ಲಿ ಹೀರೋ ಸ್ಟ್ರಾಂಗ್ ಆಗಬೇಕಾದರೆ ವಿಲನ್ ಅವನಿಗಿಂತ ಸ್ಟ್ರಾಂಗ್ ಎಂದು ತೋರಿಸಬೇಕು. ಖಳಪಾತ್ರ ಪೋಷಣೆ ಗಟ್ಟಿಯಾಗಿದ್ದಾಗ ಅವನನ್ನು ಮೆಟ್ಟಿ ನಿಲ್ಲುವ ನಾಯಕನ ಶಕ್ತಿ ಯುಕ್ತಿಗೆ ಒಂದು ಖದರ್ ಬಂದು ಬಿಡುತ್ತದೆ. ನಿರ್ದೇಶಕ ಶರವಣನ್ ತಮಿಳಿನಲ್ಲಿ ಆ ಪಾತ್ರವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ನಾಯಕನನ್ನು ಸುಮ್ಮನೆ ಆಸ್ಪತ್ರೆಯಲ್ಲಿ ಅನಾವರಣಗೊಳಿಸುವ ನಿರ್ದೇಶಕರು ಅದಕ್ಕೂ ಮುನ್ನ ಖಳನ ಕೇಡಿತನವನ್ನು ತುಂಬಾ ಚೆನ್ನಾಗಿ ವಿಶದ ಪಡಿಸಿದ್ದಾರೆ. ಅವನ ಕೃತ್ಯಗಳ ವಿವರಣೆ ನೀಡಿದ್ದಾರೆ. ಅದೆಲ್ಲವನ್ನು ದೃಶ್ಯರೂಪದಲ್ಲಿ ತೋರಿಸಿದ್ದಾರೆ. ಹಾಗೆಯೇ ಚಿತ್ರವನ್ನು ನೇರಾ ನೇರಾ ಪ್ರಾರಂಭಿಸಿದ್ದಾರೆ. ಆದರೆ ಚಕ್ರವ್ಯೂಹದಲ್ಲಿ ಫ್ಲಾಶ್ ಬ್ಯಾಕ್ ತಂತ್ರವನ್ನು ಉಪಯೋಗಿಸಿದ್ದಾರೆ. ಅಲ್ಲದೆ ನಾಯಕನನ್ನೇ ಮೊದಲಿಗೆ ಪರಿಚಯಿಸಿ, ಕತೆಯುದ್ದಕ್ಕೂ ನಾಯಕನನ್ನು ತಂದಿದ್ದಾರೆ. ಹಾಗಾಗಿ ಖಳ ಪಾತ್ರ ಸೊರಗಿ, ಅದು ಹೀರೋಇಸಂ ಗೂ ಮಾರಕವಾಗಿಬಿಟ್ಟಿದೆ.
ಹಾಗೆಯೇ ತಮಿಳಿನಲ್ಲಿರುವ ಮತ್ತೊಂದು ಗಮನಾರ್ಹ ಅಂಶವೆಂದರೆ ತಿರುವುಗಳು. ಒಂದು ಚಿಕ್ಕ ಚಿಕ್ಕ ಸುಳಿವುಗಳು, ಮತ್ತವುಗಳನ್ನು ನಾಯಕ ಮೆಟ್ಟಿ ನಿಲ್ಲುವ ಪರಿ ಕುತೂಹಲ ಹುಟ್ಟಿಸುತ್ತದೆ. ಉದಾಹರಣೆಗೆ ಖಳನನ್ನು ಹೊಡೆದು ತಂದು ರೂಮಿಗೆ ಕೂಡಿಹಾಕುವಾಗಲ್ಲಿನ ಹೊಡೆದಾಟದಲ್ಲಿ ಅವನ ಜೇಬಿನಿಂದ ಆಸ್ಪತ್ರೆಯ ಸ್ಲಿಪ್ ಬಿದ್ದು ಕಾರಿನ ಚಕ್ರಕ್ಕೆ ಸಿಲುಕಿರುತ್ತದೆ. ಕಾರನ್ನು ನೋಡಿ, ಅದನ್ನು ಪರೀಕ್ಷಿಸುವಾಗ ಕಾನೂನು ಮಂತ್ರಿಯ ಕೈಗೆ ಆ ಸ್ಲಿಪ್ ಸಿಕ್ಕಿ ಅವನು ಆಸ್ಪತ್ರೆಯನ್ನು ಹುಡುಕಿಕೊಂಡು ಹೋಗಿ ಅದು ಯಾರಿಗೆ ಬರೆದುಕೊಟ್ಟ ಸ್ಲಿಪ್ ಎಂಬುದನ್ನು ಹುಡುಕಿ ಎಂದು ಹೇಳಿದಾಗ ನಾಯಕ ಆ ಫೈಲ್ ಅನ್ನು ಕಾಣೆಯಾಗಿಸುತ್ತಾನೆ. ಆದರೆ ಕನ್ನಡದಲ್ಲಿ  ಈ ಸನ್ನಿವೇಶವೇ ಇಲ್ಲದಿರುವುದು ಒಂದು ಕುತೂಹಲಕರ ದೃಶ್ಯ ಇಲ್ಲದಂತಾಗಿದೆ. ಹಾಗೆಯೆ ಮಧ್ಯಂತರದ ನಂತರ ಚಿತ್ರ ಬಹುಬೇಗ ಮುಗಿಯುತ್ತದೆ. ತಮಿಳಿನ ಚಿತ್ರದ ಅವಧಿ ಎರಡು ಘಂಟೆ, ಮೂವತ್ತು ನಿಮಿಷ  ಇದ್ದರೆ ಕನ್ನಡದಲ್ಲಿ ಎರಡು ಘಂಟೆ ಹದಿನಾಲ್ಕು ನಿಮಿಷ ಮಾತ್ರವಿದೆ. ಹಾಗೆಯೇ ಕನ್ನಡದಲ್ಲಿ ಅನಗತ್ಯವಾದ ಎರಡು ಹೊಡೆದಾಟಗಳು ಸೇರ್ಪಡೆಯಾಗಿವೆ. ಇವೆಲ್ಲ ಕತೆಯ, ಕುತೂಹಲಕರ ಮೈಂಡ್ ಗೇಮ್ ಇರಬಹುದಾಗಿದ್ದ ಸಮಯವನ್ನು ತಿಂದುಬಿಟ್ಟಿದ್ದು ಸಿನಿಮಾವನ್ನು ಸರಳೀಕರಿಸಿದೆ. ಹಾಗಾಗಿಯೇ ಚಿತ್ರದ ತುಂಬಾ ಸಾದಾರಣ ಎನಿಸುತ್ತದೆ. ಉಸಿರುಬಿಗಿಹಿಡಿದು ಕಾಯಬೇಕಾಗಿದ್ದ ಪ್ರೇಕ್ಷಕ ನಿರಾಳವಾಗಿ ಸಿನಿಮಾ ನೋಡುವಂತೆ ಮಾಡಿಬಿಟ್ಟಿದೆ. ನಾಯಕಿಯನು ಕಿಡ್ನಾಪ್ ಮಾಡಿದಂದಿನಿಂದ ಬಿಡಿಸುವವರೆಗಿನ ಕತೆ ಸುಮಾರು ಸಮಯ ತೆಗೆದುಕೊಂಡು ಬಿಡುತ್ತದೆ. ವಿಷಯ ಕಡಿಮೆಯಿದ್ದು ಅದರ ನಿರೂಪಣೆ ಸಮಯ ಹಿಗ್ಗಿದ್ದು ಅದು ನೋಡಿದ ನಂತರ ಇಷ್ಟೇನಾ ಎನಿಸುವಂತೆ ಮಾಡಿಬಿಡುತ್ತದೆ. ಹಾಗೆಯೇ ಶರವಣ ತಮಿಳು ಆವೃತ್ತಿಯನ್ನು ಹೆಚ್ಚು ದೃಶ್ಯಗಳಿಂದ ಸೆರೆಹಿಡಿದಿದ್ದರೆ, ಚಕ್ರವ್ಯೂಹವನ್ನು ವಾಚ್ಯವಾಗಿಸಿದ್ದಾರೆ. ನಾಯಕನ ಸ್ವಗತವನ್ನು ಅಲ್ಲಲ್ಲಿ ಸೇರಿಸುವ ಮೂಲಕ ಭಾವತೀವ್ರತೆಯನ್ನು ತೆಳುಗೊಳಿಸಿದ್ದಾರೆ.
ಅದೇಕೋ ಒಂದೇ ಚಿತ್ರವನ್ನು ಬೇರೆ ಬೇರೆ ಭಾಷೆಯಲ್ಲಿ ನಿರ್ದೇಶಿಸಿ ಗೆದ್ದ ನಿರ್ದೇಶಕರ ನಡುವೆ ಪವರ್ ಸ್ಟಾರ್ ಅಂತಹ ಸ್ಟಾರ್ ಇದ್ದು ಶರವಣ ಗೆಲುವು ಸಾಧಿಸದೆ ಇದ್ದದ್ದು ವಿಷಾದನೀಯ ಎನಿಸುತ್ತದೆ. ಪಿ.ವಾಸು ಆಪ್ತಮಿತ್ರವನ್ನು ಆಪ್ತರಕ್ಷಕವನ್ನು ತಮಿಳು ತೆಲುಗು ಎಲ್ಲಾ ಕಡೆ ನಿರ್ದೇಶನ ಮಾಡಿ ಗೆದ್ದಿದ್ದಾರೆ, ಹಾಗೆಯೇ ಮುರುಗದಾಸ್ ಘಜಿನಿ, ತುಪಾಕಿ ಚಿತ್ರಗಳನ್ನು  ಬಾಲಿವುಡ್ ವರೆಗೂ ತೆಗೆದುಕೊಂಡು ಹೋಗಿ ಗೆಲ್ಲಿಸಿದ್ದಾರೆ. ಆದರೆ ಪುನೀತ್ ವಿಷಯದಲ್ಲಿ ಕನ್ನಡದ ವಿಷಯದಲ್ಲಿ ಪುನರಾವರ್ತನೆಯಾಗದೆ ಇದ್ದದ್ದು ಬೇಸರದ ಸಂಗತಿ. ತಮಿಳಿನಲ್ಲಿ ಯಶಸ್ಸು ಕಂಡ ಪೋರಾಳಿ ಚಿತ್ರವನ್ನು ತಾವೇ ಖುದ್ದು ನಿಂತು ಯಾರೇ ಕೂಗಾಡಲಿ ಎಂದು ಭಾಷಾಂತರಿಸಿದ ಸಮುದ್ರಕನಿ ಆ ಚಿತ್ರದ ಮೂಲಕ ಪ್ರಭಾವ ಬೀರಲೇ ಇಲ್ಲ. ಈಗ ಶರವಣ ಕೂಡ ಎಲ್ಲೋ ಎಡವಿದ್ದಾರೆ. ತಮ್ಮದೇ ಕತೆಯನ್ನು ಅದಕ್ಕಿಂತ ಪ್ರಭಾವಕಾರಿಯಾಗಿ ಪವರ್ಫುಲ್ ಆಗಿ ನಿರೂಪಿಸುತ್ತಾರೆ ಎನ್ನುವ ನಿರೀಕ್ಷೆ ಯನ್ನು ಸುಳ್ಳು ಮಾಡಿದ್ದಾರೆ.
ಇದೆಲ್ಲಾ ಸಿನಿಮಾದ ಫಲಿತಾಂಶ ಬಂದ ಮೇಲೆ ಮಾತಾಡುವುದು ಸುಲಭ ಎನಿಸುವುದಾದರೂ ಒಮ್ಮೆ ಚಿತ್ರದ ಹೊರಗೆ ನಿಂತು ಚಿತ್ರಕರ್ಮಿ ಆ ಚಿತ್ರವನ್ನು ಊಹಿಸಿಕೊಂಡಲ್ಲಿ ಒಂದಷ್ಟು ಬದಲಾವಣೆಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ಆದರೆ ಸ್ವಲ್ಪ ಆಲೋಚನೆಗಳು ಏಕಮುಖ ಆದಾಗ ಹೀಗಾಗುತ್ತದೆ.

Thursday, May 12, 2016

ವಿಮರ್ಶೆ, ಕಟು ವಿಮರ್ಶೆ, ದೋಷಗಳು..ಇತ್ಯಾದಿ..ಇತ್ಯಾದಿ

 ತಿಥಿ ಸಿನಿಮಾ ನೋಡಿ ಜನ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಸಿದ್ಧ ಸೂತ್ರಗಳನ್ನು ಪಕ್ಕಕ್ಕಿಟ್ಟ ಸಾದಾರಣ ಸರಳ ಕತೆ, ಸರಳ ನಿರೂಪಣೆಯ ಚಿತ್ರದ ನೈಜತೆ ಪ್ರೇಕ್ಷಕರನ್ನು ಮೋಡಿ ಮಾಡಿದ್ದು, ಗ್ರಾಮೀಣ ಸೊಗಡನ್ನು ಅದು ಹಾಗೆಯೇ ತೆರೆಯ ಮೇಲೆ ತಂದಿರುವ ಪರಿಗೆ ಅಚ್ಚರಿ ಪಡುವಂತಹದ್ದೆ. 
ಆದರೆ ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲಿನ ದೋಷಗಳನ್ನು ಕುರಿತಾಗಿ ಚರ್ಚೆಯೂ ನಡೆಯುತ್ತಿದೆ. ಅಷ್ಟು ಹೊಗಳುವ ಸಿನಿಮಾ ತಿಥಿ ಅಲ್ಲ, ಅದೊಂದು ಸಾಮಾನ್ಯ ಚಿತ್ರ, ಅದರಲ್ಲಿ ತಪ್ಪುಗಳಿವೆ ಎಂದು ಶುರುವಾಗುವ ಚರ್ಚೆ, ಒಕ್ಕಲಿಗರು ಹೆಣವನ್ನು ಸುಡುವುದಿಲ್ಲ, ಮಾಂಸದ ಊಟಕ್ಕೆ ಶ್ಯಾನುಭೋಗ, ತಿಥಿ ದಿನಾಂಕ ಗೊತ್ತು ಮಾಡಿದ ವ್ಯಕ್ತಿ ಯಾಕೆ ಬಂದರು, ಸೆಂಚುರಿ ಗೌಡನ ಮಕ್ಕಳು ನಾಲ್ವರಾದರೆ ಗಡ್ಡಪ್ಪ ಮಾತ್ರ ಕಾಣಿಸಿಕೊಂಡಿದ್ದಾರೆ, ಉಳಿದವರು ಎಲ್ಲಿ..? ಹೀಗೆ. ಸುಮ್ಮನೆ ಇದನ್ನೆಲ್ಲಾ ಓದಿದರೆ ಹೌದಲ್ಲ  ಎನಿಸದೆ ಇರದು. ಆದರೆ ಒಂದು ಚಿತ್ರದಲ್ಲಿ ದೋಷಗಳು ಇರುವುದು ದೊಡ್ಡ ದೋಷವೇ..? ಹಾಗಾದರೆ ವಿಮರ್ಶೆ ಎಂದರೆ ಏನು..? ಅದು ಪೋಸ್ಟ್ ಮಾರ್ಟಂ ಅಲ್ಲ. ಇಷ್ಟಕ್ಕೂ ಒಂದು ಸಿನಿಮಾ ಎಂದರೆ ಮನರಂಜನೆ, ಕತೆಯ ನಿರೂಪಣೆ...ಹೀಗೆ. ಅದೊಂದು ಸಮಗ್ರ ಕಲೆಗಳ ಮಿಶ್ರಣ. ಹಾಗಾಗಿ ಹಲವಾರು ಕಲಾಪ್ರಕಾರಗಳು ಒಂದೆಡೆ ಸರಿದಾಗ ಎಲ್ಲವನ್ನು ಕರಾರುವಕ್ಕಾಗಿ ಅಚ್ಚಿಳಿಸುವುದು ಸಾಧ್ಯವೇ ಇಲ್ಲ. ಅಲ್ಲದೆ ಅದು ಒಬ್ಬರ ಕೈ ಅಡುಗೆ ಅಲ್ಲ.. ನಿರ್ದೇಶಕನಿಂದ ಪ್ರಾರಂಭ ಟೀ ಕಾಫಿ ಕೊಡುವ ಹುಡುಗನ ತನಕ ಎಲ್ಲರ ಕೊಡುಗೆಯೂ ಸಿನಿಮಾದಲ್ಲಿರುತ್ತದೆ. ತೆರೆಯ ಮೇಲೆ ಕಲಾವಿದರ ಕಾಣಿಸಿದರೆ, ಸಂಗೀತ ಮಾತುಗಳು ಕೇಳಿಸಿದರೆ ಅದರ ಹಿಂದೆ ಹಲವರ ಕೈಚಳಕ ಇದ್ದೇ ಇರುತ್ತದೆ.
ನಮ್ಮ ಸಿನೆಮಾಗಳಲ್ಲಿನ ದೋಷಗಳನ್ನು ತಾಂತ್ರಿಕ ದೋಷಗಳು, ವಸ್ತು-ನಿಖರತೆ ದೋಷಗಳು, ನಿರಂತರತೆಯಲ್ಲಿನ ದೋಷಗಳು ಎಂದೆಲ್ಲಾ ಪಟ್ಟಿ ಮಾಡಬಹುದು. ಇವುಗಳ ಸಿನಿಮಾದ ಓಘಕ್ಕೆ ಗತಿಗೆ ಅದೆಷ್ಟರ ಮಟ್ಟಿಗೆ ಪ್ರಭಾವ ಬೀರುತ್ತವೋ ಇಲ್ಲವೋ ದೋಷವಂತೂ ಇದ್ದೇ ಇರುತ್ತದೆ ಎಂದು ದಾಖಲಿಸಬಹುದಷ್ಟೇ. ಕೇಳಿಕೊಳ್ಳುವ ಪ್ರಶ್ನೆಗೆ ಉತ್ತರಿಸಲು ಸಿನಿಮಾದಲ್ಲಿ ಯಾರಿರುತ್ತಾರೆ ಹೇಳಿ...? ಸಿನಿಮ  ಪ್ರೇಕ್ಷಕನನ್ನು ತನ್ನೊಳಗೆ ಸೆಳೆದುಕೊಳ್ಳುತ್ತಾ ಸಾಗಿದಾಗ ಅದೆಲ್ಲಾ ಗೌಣ. ಆಮೇಲೆ ಸುಮ್ಮನೆ ಎಲ್ಲೋ ಕುಳಿತುಕೇಳಿಕೊಳ್ಳಬಹುದು. ಆದರೆ ಪ್ರೇಕ್ಷಕ ತಪ್ಪು ಹುಡುಕುವುದಿಲ್ಲ, ಅವನು ಕೇಳುವುದು ಸಿನೆಮಾದಲ್ಲಿನ ನಿರೀಕ್ಷಿತ ಭಾವವನ್ನು. ಸೆಂಟಿಮೆಂಟ್ ಎಂದುಕೊಂಡ ಸಿನಿಮಾಕ್ಕೆ ಹೋದರೆ ಅದರಲ್ಲಿ ಹಾರರ್ ಇದ್ದು, ಅದು ಇಷ್ಟ ಪಡಿಸದೇ ಇದ್ದಾಗ ರೊಚ್ಚಿಗೇಳದೇ ಹೇಗಿರುತ್ತಾನೆ ಹೇಳಿ..? ಸಾಯಿಕುಮಾರ್ ಅಭಿನಯದ ಪೋಲಿಸ್ ಚಿತ್ರವೊಂದರಲ್ಲಿ ಹೊಡೆದಾಟವೆ ಇಲ್ಲದೆ, ಕ್ಲೈಮಾಕ್ಸ್ ಹಾಡಿನಲ್ಲಿ ಕೊನೆಯಾದಾಗ ಕೂಗಾಡಿದ ಪ್ರೇಕ್ಷಕರಿದ್ದಾರೆ, ಹಾಗೆಯೇ ವಯಸ್ಕರ ಚಿತ್ರವೊಂದಕ್ಕೆ ಮೈಮನಗಳನ್ನು ಬಿಸಿ ಮಾಡಿಕೊಳ್ಳಲು ಪ್ರೇಕ್ಷಕ ಬಂದಿದ್ದರೆ ಅದರಲ್ಲಿ ಮಾಮೂಲಿ ಸಿನೆಮದಲ್ಲಿರುವಷ್ಟೂ ರೋಮ್ಯಾನ್ಸ್ ಇಲ್ಲದೆ ಇದ್ದಾಗ ಕೋಪಗೊಂಡ ಅವನು ಕುದಿಯುತ್ತಿರುವಾಗಲೇ, ಅಷ್ಟು ಸಾಲದೆಂಬಂತೆ ಮಧ್ಯ ಡಾ. ಅಶೋಕ್ ಪೈ ಬಂದು ಪಾಠ ಮಾಡಿದರೆ ಕುರ್ಚಿ ಮುರಿಯದೆ ಬಿಡುತ್ತಾನೆಯೇ..?ಹಾಸ್ಯ ಎಂದುಕೊಂಡು ಹೋದವರಿಗೆ ಸೆಂಟಿಮೆಂಟ್ ತಗ್ಲಾಕಿಕೊಂಡರೆ ಅದೆಷ್ಟು ಕೋಪ ಬರುತ್ತದೆ ಅಲ್ಲವೇ..? ಇದೆಲ್ಲಾ ಸಿನಿಮಾದಲ್ಲಿ ಆಗಿರುವಂತಹದ್ದೆ. ಸಿನಿಮಾ ತನ್ನ ಪೋಸ್ಟರ್ ಗಳಿಂದ, ಟ್ರೈಲರ್ ಗಳಿಂದ, ಹಾಡುಗಳಿಂದ, ನಿರ್ದೇಶಕರಿಂದ, ನಟರಿಂದ ಬರೀ ನಿರೀಕ್ಷೆಯಂನಷ್ಟೇ ಹುಟ್ಟುಹಾಕಿರುವುದಿಲ್ಲ, ಜೊತೆಗೆ ಒಂದಷ್ಟು ಸುಳಿವು ನೀಡಿರುತ್ತದೆ, ಒಂದು ಊಹೆಯನ್ನು ಕಲ್ಪನೆಯನ್ನು ಪ್ರೇಕ್ಷಕನಲ್ಲಿ ತುಂಬಿರುತ್ತದೆ, ಹಾಗೆಯೇ ಅವನನ್ನು ಸಿನಿಮಾಕ್ಕೆ ತಯಾರಿ ಮಾಡಿರುತ್ತದೆ. ಆ ಭಾವದ ಸಿನೆಮಾವನ್ನು ನೋಡಲು ಉತ್ಸುಕನಾಗಿ ಮಾನಸಿಕವಾಗಿ ತಯಾರಾಗಿ ಬಂದ ಪ್ರೇಕ್ಷಕನಿಗೆ ಒಳಗೆ ಬೇರೆಯದನ್ನು ತೋರಿಸಿದರೆ ಅದು ಅದೆಲ್ಲವನ್ನು ಮರೆಸುವಷ್ಟು ಚೆನ್ನಾಗಿರಬೇಕಾಗುತ್ತದೆ. ಇಲ್ಲವಾದಲ್ಲಿ ಅದರಲ್ಲಿನ ತಪ್ಪುಗಳು ರಾಚುತ್ತವೆ.
ನಮ್ಮ ಸಿನೆಮಾಗಳಲ್ಲಿ ತಾಂತ್ರಿಕ-ದೋಷಗಳು ಸರ್ವೇ ಸಾಮಾನ್ಯ. ಬೆಳಕಿನ ಸಾಮ್ಯತೆ, ಕ್ಯಾಮೆರಾ ಕೋನದಲ್ಲಿ ಬದಲಾವಣೆಯಾದಾಗ ವ್ಯತ್ಯಾಸವಾಗುವುದು ಇತ್ಯಾದಿ ಇತ್ಯಾದಿ. ಹಾಗೆಯೇ ನಿರಂತರತೆಯ ದೋಷವನ್ನು ತಡೆಯಲು ಕಷ್ಟ. ಲಾಂಗ್ ಶಾಟ್ ನಲ್ಲಿ ಚಿತ್ರಣವಿದ್ದಾಗ ಇದ್ದ ಮುಖ್ಯ ಕಲಾವಿದರನ್ನು ಹೊರತುಪಡಿಸಿ ಹಿಂದೆ ಮುಂದೆ ಇದ್ದ ಜನರು, ವಸ್ತುಗಳು ಶಾಟ್ ಬದಲಾದಾಗ ಕಾಣೆಯಾಗಬಹುದು, ಬದಲಾಗಬಹುದು, ಹಾಗೆಯೇ ನಾಯಕನ ಶರ್ಟ್, ಪ್ಯಾಂಟ್, ಬೆಲ್ಟ್, ಸ್ಥಳ ಹೀಗೆ ಚಿತ್ರೀಕರಣಕ್ಕೆ ಅನುಕೂಲಕ್ಕೆ ತಕ್ಕಂತೆ, ಅದನ್ಯಾರು ಗಮನಿಸುತ್ತಾರೆ ಬಿಡು ಎಂದು ಚಿತ್ರತಂಡ ನಿರ್ಲಕ್ಷ್ಯ ತೋರಿದಾಗ ಇಂತಹ ದೋಷಗಳು ಸರ್ವೇ ಸಾಮಾನ್ಯ. ಹಾಗೆಯೇ ವಸ್ತು ನಿಖರತೆ ದೋಷಗಳು- ಈಗ ತಿಥಿಯಲ್ಲಿ ಪಟ್ಟಿ ಮಾಡಿರುವಂತಹದ್ದು ಇದೆ. ಆದರೆ ಇದನ್ನು ಸಂಪೂರ್ಣ ದೋಷ ಎಂದೂ ಹೇಳಲಾಗುವುದಿಲ್ಲ, ಜ್ಯೋತಿಷ್ಯ ಹೇಳಿ, ದಿನಾಂಕ ನಿಗದಿ ಪಡಿಸುವವ ಬ್ರಾಹ್ಮಣನೆ ಆಗಬೇಕೆಂದಿಲ್ಲ, ಹಾಗೆಯೇ ಊರಲೊಬ್ಬ ಸಸ್ಯಾಹಾರಿ ಮಾಂಸದ ಊಟವನ್ನು ರೂಢಿಸಿಕೊಂಡಿರಬಹುದು, ಶ್ಯಾನುಭೋಗ ಎಂಬುದು ಅವನ ಹೆಸರು, ಹುದ್ದೆ, ಅಡ್ಡ ಹೆಸರು ಇರಬಹುದು, ಅಥವಾ ಅವನು ಮಾಂಸ ತಿನ್ನುವಂತವನಾಗಿರಬಹುದು, ಇನ್ನು ಗಡ್ದಪ್ಪನ ಸೋದರರಲ್ಲಿ ಎಲ್ಲರೂ ಸತ್ತಿರಬಹುದು, ಅಥವಾ ಬೇರೆ ಬೇರೆ ಊರಲ್ಲಿರಬಹುದು, ಅಥವಾ ಅಲ್ಲಿ ಬಂದಿದ್ದರೂ ಕತೆಗೆ ಬೇಕಾಗಿಲ್ಲವಾದ್ದರಿಂದ ಅವರನ್ನು ನಿರ್ದೇಶಕ ನಮಗೆ[ಪ್ರೇಕ್ಷಕ]ರಿಗೆ ಪರಿಚಯಿಸಿಲ್ಲದೆ ಇರಬಹುದು... ಹೀಗೆ ಸಮರ್ಥನೆ ನೀಡುತ್ತಾ ಸಾಗಬಹುದು. ಇಷ್ಟಕ್ಕೂ ತಿಥಿ ಜೀವನ ಚರಿತ್ರೆಯಲ್ಲ, ಸಾಕ್ಷ್ಯ ಚಿತ್ರವೂ ಅಲ್ಲ, ಅದೊಂದು ಕಾಲ್ಪನಿಕ ಕತೆ. ಹಾಗೆ ನೋಡಿದರೆ ಪ್ರತಿಯೊಂದು ಚಿತ್ರದಲ್ಲೂ ಇಂತಹ ಪ್ರಶ್ನೆಗಳು ಪ್ರೇಕ್ಷಕನನ್ನು ಕಾಡದೆ ಇರದು. ಆದರೆ ಅದೆಲ್ಲವನ್ನು ಮರೆಸಿಕೊಂಡು ಸಿನಿಮಾ ನೋಡಿಸಿಕೊಂಡು ಬಿಟ್ಟರೆ ಅದು ಆ ಸಿನಿಮಾದ ಸಾರ್ಥಕತೆ. ಉದಾಹರಣೆಗೆ ರಂಗಿತರಂಗ. ಗೆಳೆಯರ ಜೊತೆಗೆ ಹಾಡಿ ಕುಣಿದು, ಪ್ರೇಯಸಿಗೆ ಹಳೆಯ ಗೆಳೆಯರನ್ನು ಭೇಟಿ ಮಾಡಿಕೊಂಡು ಬರುತ್ತೇನೆ ಎಂದು ಹೋಗುವ ನಾಯಕ ಅಪಘಾತದಲ್ಲಿ ಸತ್ತು ಬೇರೆ ವ್ಯಕ್ತಿಯಾಗುತ್ತಾನೆ, ಕಾದಂಬರಿಕಾರನಾಗಿ, ಮದುವೆಯಾಗಿ ಬದುಕು ನಡೆಸುತ್ತಾನೆ. ಓಕೆ. ಆದರೆ ಅವನ ಗೆಳೆಯರು, ಮನೆಯವರು ಇವನೆಲ್ಲಿ ಕಾಣೆಯಾದ ಎಂದು ಹುಡುಕುವುದಿಲ್ಲವೇ..? ಅವನ ಪ್ರೇಯಸಿ ಬಿಟ್ಟರೆ ಬೇರ್ಯಾರಿಗೂ ಅವನು ಮಾಯವಾದ ಬಗೆ ಅಚ್ಚರಿ ಗಾಬರಿ ಹುಟ್ಟಿಸುವುದಿಲ್ಲವೇ..? ಹಾಗೆಯೇ ಅಪಘಾತದಲ್ಲಿ ಸತ್ತವರ ಕುಟುಂಬಗಳು ಅವರನ್ನು ಹುಡುಕುವುದಿಲ್ಲವೇ..? ಅಪಘಾತಕ್ಕೂ ಮೊದಲು ನಾಯಕಿ ಅಪಘಾತ/ಕೊಲೆ ಮಾಡಿ ಅವಳನ್ನು ಕಾಡುತ್ತಿದ್ದ ಪ್ರಭಾವಿ-ಶ್ರೀಮಂತ ಯುವಕನನ್ನು ಸಾಯಿಸುತ್ತಾಳಲ್ಲಾ ಅವನ ಹೆಣದ, ಕೊಲೆಯ ಇನ್ವೆಸ್ಟಿಗೇಷನ್ ಇತ್ಯಾದಿ ನಡೆಯುವುದಿಲ್ಲವೆ..? ಹೀಗೆ ಪ್ರಶ್ನಿಸಲೂ ಬಹುದು. ಮತ್ತದಕ್ಕೆ ಉತ್ತರವನ್ನು ನೀಡಬಹುದು. ಕಾಣೆಯಾದ ನಾಯಕನ ಗೆಳೆಯರು/ಕುಟುಂಬದವರು ಸತ್ತನೆಂದು ತಿಳಿದಿರಬಹುದು, ಹುಡುಕುತ್ತಿರಬಹುದು, ನಾಯಕಿ ಸಾಯಿಸಿದ ವ್ಯಕ್ತಿಯ ತನಿಖೆ ಕೂಡ ನಡೆಯುತ್ತಿರಬಹುದು, ಸಿನಿಮಾದ ಕತೆಯ ನಿರೂಪಣೆಯ ದಿಕ್ಕು ಬೇರೆಯಾದ್ದರಿಂದ ಅದು ಬೇರೆ ದಿಕ್ಕಿನಲ್ಲಿ/ಟ್ರ್ಯಾಕ್ ನಲ್ಲಿ ನಡೆಯುತ್ತಿದ್ದು ಸಿನಿಮಾದಲ್ಲಿ ಕಾಣುವುದು ಒಂದು ಮುಖ ಮಾತ್ರ ಎನ್ನಬಹುದು. ಇದು ಸಮರ್ಥನೆಯೂ ಹೌದು, ಉತ್ತರವೂ ಹೌದು. ಅಥವಾ ಅದು ಇರೋದೇ, ಇದ್ದಿದೆ ಹೌದು ಎನ್ನಬಹುದು. ಇನ್ನು ಕಮರ್ಷಿಯಲ್ ಚಿತ್ರಗಳಲ್ಲಿ ಇಂತಹ ಪ್ರಶ್ನೆಗಳು ದೋಷಗಳು ದಂಡಿಯಾಗಿ ಸಿಗುತ್ತವೆ. ಹಾಗೆಯೇ ಕಲಾತ್ಮಕ ಚಿತ್ರಗಳಲ್ಲೂ ಹುಡುಕಬಹುದು. ಆದರೆ ತಪ್ಪು ಹುಡುಕಿ ಮಾರ್ಕ್ಸ್ ಕೊಡಲು ಯಾರಿದ್ದಾರೆ, ಅದು ಯಾರಿಗೆ ಬೇಕಿದೆ. ಚಿತ್ರಮಂದಿರಕ್ಕೆ ಹೊಕ್ಕವನಿಗೆ ರಂಜಿಸಿದರೆ ಎಲ್ಲಾ ತಪ್ಪು ಮಾಫಿ.. ಇಲ್ಲವಾದಲ್ಲಿ ಎಷ್ಟೇ ಚಂದವಿದ್ದರೂ ತಥ್..ಅಲ್ಲವೇ..?
ಬಹುಶ ವಿಮರ್ಶೆ ಎಂದರೆ ಇದೆ ಇರಬೇಕು. ಹೀಗಿರಬೇಕಿತ್ತು, ಹಾಗೇಕಿದೆ, ಹೀಗಿರಬಾರದಿತ್ತು ಎನ್ನುವುದು ವಿಮರ್ಶೆಯೇ..? ಇರುವುದರಲ್ಲಿ ಇಲ್ಲದ್ದನ್ನು ಇಲ್ಲದ್ದರಲ್ಲಿ ಇರುವುದನ್ನು ಹುಡುಕುವುದು ಅದ್ಯಾವ ವಿಮರ್ಶೆ..? ಸಿನಿಮಾದ ಆಶಯ ಮತ್ತು ಅದರ ಫಲಿತಾಂಶ- ಇವೆರೆಡು ಶೇಕಡಾ ಲೆಕ್ಕದಲ್ಲಿ ಅರವತ್ತಷ್ಟಾದರೂ ಹೊಂದಿಕೆಯಾದರೆ ಅದೊಂದು ಸಿನಿಮಾ ಎನಿಸಿಕೊಳ್ಳುತ್ತದೆ. ವಿಮರ್ಶಕರು ಅಷ್ಟನ್ನು ಮಾತ್ರ ಹೊಂದಿಸುತ್ತಾ ಸಾಗಿದರೆ ಸಿನಿಮಾದ ಲೆಕ್ಕ ಪಕ್ಕಾಗುತ್ತದೇನೋ? ಇಲ್ಲವಾದಲ್ಲಿ ಸಿನಿಮಾದ ವಿಮರ್ಶೆ-ವಿಮರ್ಶಕನಿಗೂ- ನೋಡುಗನಿಗೂ ಚಿತ್ರಕರ್ಮಿಗೂ ಅಜಗಜಾಂತರ ವ್ಯತ್ಯಾಸ ಬಂದುಬಿಡುತ್ತದೆ. ಸಿನಿಮಾದ ಬಗೆಗೆ ಬರೆದದ್ದು ಅದನ್ನು ಓದಿಕೊಂಡು ಹೋದ ಬಹುಪಾಲು ಪ್ರೇಕ್ಷಕ/ಓದುಗನಿಗೆ ಅಹುದು ಎನಿಸದಿದ್ದರೆ ಅದು ಚಿಕಿತ್ಸೆಯಾಗದೆ, ಪೋಸ್ಟ್ ಮಾರ್ಟಂ ಆಗುತ್ತದೆ ಅಷ್ಟೇ..ಸಿನೆಮಾವನ್ನು ಇನ್ನಷ್ಟು ಜೀವಂತ ಗೊಳಿಸುವ ಚಿಕಿತ್ಸೆ ತೆರನಾಗಿ ವಿಮರ್ಶೆ ಇದ್ದರೆ ಅದಕ್ಕೆ ಬೆಲೆ, ಇಲ್ಲವಾದಲ್ಲಿ ಅದು ಪೋಸ್ಟ್ ಮಾರ್ಟಂ. ಅಷ್ಟೇ ಅಲ್ಲವೇ..?
ಒಂದೂ ದೋಷವಿಲ್ಲದ, ಎಲ್ಲದರಲ್ಲೂ ನಿಖರತೆಯಿರುವ ಚಿತ್ರವನ್ನು ಮಾಡಲು ಸಾಧ್ಯವಿದೆಯೇ....? ಇರಬಹುದು. ಆದರೆ ಅದನ್ನು ಸಂಪೂರ್ಣವಾಗಿ ನೋಡಿ ಅನುಭವಿಸಿ, ಖುಷಿ ಪಡಲು ನಮ್ಮಿಂದ ಸಾಧ್ಯವೇ..? ಹೇಳುವುದು ಕಷ್ಟ...

Saturday, May 7, 2016

ತಿಥಿ ಸಿನಿಮಾದಿಂದ ಕಲಿಯಬೇಕಾದದ್ದು...

ಕನ್ನಡದಲ್ಲಿ ತಿಥಿ ಎನ್ನುವ ಸಿನಿಮಾ ಈಗ ಸದ್ದು ಮಾಡುತ್ತಿದೆ. ಕನ್ನಡದ, ಮೈಸೂರು ಮಂಡ್ಯ ಪ್ರಾದೇಶಿಕ ಸೊಗಡನ್ನು ಅಲ್ಲಿಯ ಸ್ಥಳೀಯರನ್ನು  ಸಿನೆಮಾದಲ್ಲಿನ ಪಾತ್ರಗಳನ್ನಾಗಿ  ಬಳಸಿ ಒಂದು ಸಾವಿನ ಮತ್ತದರ ಉತ್ತರಾಧಿಕ್ರಿಯಾ ಸುತ್ತ  ನಡೆಯುವ ಕತೆಯನ್ನು ಸ್ವಾಭಾವಿಕವಾಗಿ ತೆರೆಯ ಮೇಲೆ ತರಲಾಗಿದೆ. ಭಾಷೆಯ ಸೊಗಡನ್ನು ಅರಿತಿರುವವರಿಗೆ ಸಿನಿಮಾ ಹಬ್ಬ, ಹಾಗೆಯೇ ಭಾಷೆಯ ಸೊಗಡು ಗೊತ್ತಿಲ್ಲದಿದ್ದರೂ ಸಿನಿಮಾ ಒಂದು ಅನುಭವವಾಗಿ ಕಾಡುತ್ತದೆ. ಹಾಗಾಗಿ ಕನ್ನಡಕ್ಕೆ ಬಂದ ಅಪರೂಪದ ಚಿತ್ರ ತಿಥಿ.
ಇದಿಷ್ಟರ ಜೊತೆಗೆ ತಿಥಿ ಸಿನಿಮಾದಲ್ಲಿ ಒಬ್ಬ ಚಿತ್ರಕರ್ಮಿ ಕಲಿಯಬೇಕಾದ ಹಲವಾರು ಅಂಶಗಳಿವೆ. ನಮ್ಮ ಚಿತ್ರರಂಗದಲ್ಲಿ ಸಿನಿಮಾಕ್ಕೆ ಅದರದೇ ಆದ ನಂಬಿಕೆ, ಸಿದ್ಧಸೂತ್ರಗಳಿವೆ. ಮೊದಲನೆಯದಾಗಿ ಕಲಾತ್ಮಕ ಮತ್ತು ಕಮರ್ಷಿಯಲ್ ಎನ್ನುವ ಒಂದು ಸುಳ್ಳು ವಿಭಜನೆ. ಹಾಗೆ ನೋಡಿದರೆ ನಮ್ಮಲ್ಲಿ ಕಲಾತ್ಮಕ ಚಿತ್ರಗಳು ಎಂದಾಕ್ಷಣ ಅದರಲ್ಲಿ ಮನರಂಜನೀಯ ಅಂಶಗಳು ಕಡಿಮೆ ಎನ್ನುವ ನಿರ್ಧಾರಕ್ಕೆ ಪ್ರೇಕ್ಷಕ ಇರಲಿ, ಸಿನಿಮಾ ಮಂದಿಯೇ ಬಂದು ಬಿಡುತ್ತಾರೆ. ನಿಧಾನಗತಿಯ ಕ್ಯಾಮೆರಾ ಚಲನೆ, ಹಾಡು ಹೊಡೆದಾಟ ಇರಬಾರದು, ಮತ್ತು ಸಿನಿಮಾ ಕತೆ ಕಡ್ಡಾಯವಾಗಿ ಸಾಮಾಜಿಕ ಕಳಕಳಿಯನ್ನು ಅಂದರೆ ಯಾವುದಾದರೂ ಸಾಮಾಜಿಕ ಸಮಸ್ಯೆಯನ್ನು ಕುರಿತಿರಬೇಕು ಎಂಬುದು. ಈ ನೀತಿ ನಿಯಮ ಅದ್ಯಾರು ಮಾಡಿದರೋ ಗೊತ್ತಿಲ್ಲ, ಹಾಗೆಯೇ ಇದೆಲ್ಲೂ ದಾಖಲಾಗೂ ಇಲ್ಲ. ಆದರೆ ಈ ಅಲಿಖಿತ ನಿಯಮವನ್ನು ಪಾಲಿಸಿಕೊಂಡು ಬರುವವರಿಗೆ ನಮ್ಮಲ್ಲಿ ಕಡಿಮೆಯಿಲ್ಲ. ಒಂದು ಕಲಾತ್ಮಕ ಚಿತ್ರವೆಂದರೆ ಅದಕ್ಕೆ ಸಬ್ಸಿಡಿ, ಪ್ರಶಸ್ತಿ ಹಣವೇ ಮುಖ್ಯ  ಆದಾಯ, ಬಿಡುಗಡೆ ಆಗಬಹುದು, ಆಗದೆಯೂ ಇರಬಹುದು ಎನ್ನುವಂತಿದೆ ಸಧ್ಯದ ಸನ್ನಿವೇಶ. ಇಂತಹ ಸಂದರ್ಭದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿದ ತಿಥಿ ಚಿತ್ರದ ಬಿಡುಗಡೆಗಾಗಿ ಪ್ರೇಕ್ಷಕ ಕಾದದ್ದು, ನೋಡಿ ಖುಷಿ ಪಡುತ್ತಿರುವುದನ್ನು ನೋಡಿದರೆ ಕಲಾತ್ಮಕ, ಅವಾರ್ಡ್ ಸಿನಿಮಾ, ಮನರಂಜನೆ ಸಿನಿಮಾ ಇವುಗಳ ನಡುವಣ ಅಂತರವಿಲ್ಲ. ಎಲ್ಲದಕ್ಕೂ ಒಂದೇ ಶಬ್ದ ಮತ್ತು ಒಂದೇ ಅರ್ಥ ಅದು ಸಿನಿಮಾ ಎನ್ನುವುದು ತಿಥಿಯ ಮೂಲಕ ಕಲಿತಂತಾಗಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಸ್ಟಾರ್ ಕಾಸ್ಟ್, ಸ್ಟಾರ್ ನಿರ್ದೇಶಕರಿಲ್ಲದೆ ಪ್ರಶಸ್ತಿ ಪುರಸ್ಕೃತ ಚಿತ್ರವೊಂದಕ್ಕೆ ಪ್ರೇಕ್ಷಕ ಕಾದದ್ದು, ಸಪ್ನಾದಂತಹ ಚಿತ್ರಮಂದಿರ ಹೌಸ್ ಫುಲ್ ಆದದ್ದು  ತಿಥಿಯ ಮೂಲಕವೇ.
ಇನ್ನು ಎರಡನೆಯದಾಗಿ ನೀವು ಗಾಂಧಿನಗರಕ್ಕೆ ತಿಥಿಯಂತಹ ಚಿತ್ರದ ಕತೆಯನ್ನು ಯಾವುದೇ ನಿರ್ಮಾಪಕರ ಹತ್ತಿರಕ್ಕಾದರೂ ಹೋದರೆ ಅವರು ಸಿನಿಮಾ ಮಾಡುವರೇ..? ನೆವರ್. ಕತೆಯಿರಲಿ. ಸಿನಿಮಾದ ಶೀರ್ಷಿಕೆಯನ್ನೇ ಮೊದಲಿಗೆ ತೆಗೆದು ಬೀಸಾಕುತ್ತಿದ್ದರು. ಸಿನಿಮಾದ ಹೆಸರೇ ತಿಥಿ ಎಂದಾಕ್ಷಣ ಅಲ್ಲೇ ಹೌಹಾರದೆ ಇರುತ್ತಿರಲಿಲ್ಲ. ಏಕೆಂದರೆ ನಮ್ಮಲ್ಲಿ ನೆಗೆಟಿವ್, ಪೊಸಿಟಿವ್ ಕ್ಯಾಚಿ ಹೀಗೆ ಟೈಟಲ್ ವಿಷಯದಲ್ಲೂ ಒಂದಷ್ಟು ವಿಂಗಡಣೆ ಇವೆ. ಅಂತಹುದರಲ್ಲಿ ತಿಥಿ ನೆಗಟಿವ್ ಎನ್ನುವ ಲಿಸ್ಟ್ ಗೆ ಸೇರುತ್ತದೆ. ನಾನು ನನ್ನದೇ ಸಿನಿಮಾ ಮೃತ್ಯು ಎಂದು ಶೀರ್ಷಿಕೆ ಇಟ್ಟಾಗ ಅದೆಷ್ಟು ಜನರು ಹೌಹಾರಿದ್ದರೆಂದರೆ ಪ್ರತಿಯೊಬ್ಬರೂ ಈ ವಿಷಯದಲ್ಲಿ ಸಲಹೆ ಕೊಟ್ಟಿದ್ದರು. ಮೊದಲ ಸಿನಿಮಾ, ಇದು ಆಗಲ್ಲ, ಈ ಟೈಟಲ್ ನೆಗೆಟಿವ್ ಎಂದಿದ್ದರು. ಅದೆಷ್ಟರ ಮಟ್ಟಿಗೆ ನಿಜವೋ ಸುಳ್ಳೋ ಆ ಸಿನಿಮಾ ಆ ಶೀರ್ಷಿಕೆ ಇಟ್ಟುಕೊಂಡು ಎರಡ್ಮೂರು ವರ್ಷ ಒದ್ದಾಡಿ ಕೊನೆಗೆ ಬೇರೆ ದಾರಿ ಕಾಣದೆ ಬದಲಾವಣೆ ಮಾಡಬೇಕಾಯಿತಾದರೂ ಅದರ ಫಲಿತಾಂಶ ಮಾತ್ರ ಅಷ್ಟೇ ಆದದ್ದು ಬೇರೆ ವಿಷಯ ಬಿಡಿ. ಆದರೆ ವಾಹಿನಿಯವರು ಆವಾಗೆಲ್ಲಾ ದಂಡಿ ದಂಡಿಯಾಗಿ ಸಿನಿಮಾ ಉಪಗ್ರಹ ಪ್ರಸಾರದ ಹಕ್ಕಿಗೆ ತೆಗೆದುಕೊಳ್ಳುತ್ತಿದ್ದರಲ್ಲ, ನಾವು ಅವರನ್ನು ಸಮೀಪಿಸಿದಾಗ ಸಿನಿಮಾ ನೋಡಿ ಮೆಚ್ಚಿದ ಅವರು ರಿಜೆಕ್ಟ್ ಮಾಡಿದ್ದು ಮಾತ್ರ ಟೈಟಲ್ ನಿಂದಾಗಿ ಎಂದರು. ಅವರು ಕೊಟ್ಟ ಕಾರಣ, "ಅಲ್ರೀ .. ಮೃತ್ಯು ಅಂತ ಹೆಸರು ಇಟ್ಟಿದ್ದೀರಾ..? ನಾವು ಅದನ್ನು ಟಿವಿಲಿ ಪ್ರಸಾರ ಮಾಡುವಾಗ ಮುಂದಿನವಾರ ನಿಮ್ಮ ಮನೆಗೆ ಮೃತ್ಯು, ನಿಮ್ಮ ಮನೆಯಲ್ಲಿ ಮೃತ್ಯು ಅಂತ ಅನೌನ್ಸ್ ಮಾಡೋಕ್ಕಾಗುತ್ತೆನ್ರಿ .." ಎಂದಿದ್ದರು. ನನಗೂ ಹೌದಲ್ಲ ಎನಿಸಿತ್ತು. ಹಾಗೆಯೇ ಜನ ಹೇಗೆ ಚಿತ್ರಮಂದಿರಕ್ಕೆ ಬರ್ತಾರೀ..ಬಾ ಮೃತ್ಯುಗೆ ಹೋಗೋಣ, ಮೃತ್ಯುಗೆ ಹೋಗಿದ್ಯಾ, ಮೃತ್ಯು ನೋಡಾಯ್ತಾ..? ಎಂದೆಲ್ಲಾ ಮಾತಾಡೋದು ನೆಗಟಿವ್ ವೈಬ್ರೇಶನ್ ಆಲ್ವಾ ಎಂದಿದ್ದರು..ಈಗ ತಿಥಿ ಅದೆಲ್ಲವನ್ನು ಮೀರಿ ನಿಂತಿದೆ. ಈಗಲೂ ಸಿನಿಮಾದಲ್ಲಿ ಪ್ರಸಾರವಾಗಬೇಕಾದರೆ ಮುಂದಿನವಾರ ನಿಮ್ಮ ಮನೆಯಲ್ಲಿ ತಿಥಿ ಎನ್ನಲೇಬೇಕು, ಬಾ ತಿಥಿಗೆ
ಹೋಗೋಣ, ತಿಥಿ ಎಲ್ಲಿ? ಎನ್ನಲೇ ಬೇಕು. ಆದರೆ ನೆಗಟಿವ್, ಪೊಸಿಟಿವ್ ಗಳಿಗಿಂತ ಸಿನಿಮಾ ಮುಖ್ಯ, ಅದನ್ನು ಜನರಿಗೆ ತಲುಪಿಸುವುದು ಮುಖ್ಯ ಎನ್ನುವುದನ್ನು ಸಿನಿಮಾ ತೋರಿಸಿಕೊಟ್ಟಿದೆ.
ಮೂರನೆಯದಾಗಿ ಸಿನಿಮಾ ಕತೆ. ಚಿತ್ರಕತೆ. ಕತೆ ಎನ್ನುವುದು ಒಂದು ಪ್ರವಾಹ. ಅದು ಹರಿಯುತ್ತಾ ಸಾಗಬೇಕು. ನಾವೆಲ್ಲಾ ಒಂದು ಡಿಫರೆಂಟ್ ಎನ್ನುವ ಕತೆ ಮಾಡಬೇಕು ಎಂದೆ ಒದ್ದಾದುತ್ತೇವೆ, ದೃಶ್ಯಗಳು ಅದ್ಭುತವಾಗಿ ಡಿಫರೆಂಟ್ ಆಗಿರಬೇಕು ಎನ್ನುವ ಹವಣಿಕೆ ಸಿನೆಮಾವನ್ನು ದೃಶ್ಯಗಳನ್ನೂ ವಿಕೃತ ಗೊಳಿಸುತ್ತಿದೆ ಎಂದರೆ ತಪ್ಪಾಗಲಾರದು. ಈ ಡಿಫರೆಂಟ್ ಭೂತದಿಂದಾಗಿ ಅಸಹಜ ಪಾತ್ರಗಳು ಅಸಹಜ ಸನ್ನಿವೇಶಗಳು ಸೃಷ್ಟಿಯಾಗಿ ಹೇವರಿಕೆ ಹುಟ್ಟಿಸುತ್ತಿವೆ. ಆದರೆ ತಿಥಿ ಚಿತ್ರದಲ್ಲಿನ ಚಿತ್ರಕತೆ ಪ್ರವಾಹವಾಗಿ ಹರಿಯುತ್ತದೆ. ಬೇಕು ಬೇಡದ ಸನ್ನಿವೇಶಗಳು ಎನ್ನುವ ವಿಭಜನೆಯೇ ಇಲ್ಲದೆ ಸಿನಿಮಾ ಮುಂದು ಸಾಗುತ್ತದೆ. ಈ ಮಾತನ್ನು ಯಾಕೆ ಹೇಳಿದೆನೆಂದರೆ ಮುಖ್ಯವಾಹಿನಿಯ ಸಿನಿಮಾದಲ್ಲಿ  ಸಂಕಲನದ ಹಂತದಲ್ಲಿ ಫೈನಲ್ ಟ್ರಿಮ್ ನಡೆಯುವಾಗ ಲ್ಯಾಗ್ ಎನಿಸುವ ಶಾಟ್ ಗಳು ಮೊದಲಿಗೆ ಕತ್ತರಿಗೆ ಒಳಗಾಗುತ್ತವೆ, ಆನಂತರ ಅನವಶ್ಯಕ ಎನಿಸುವ ದೃಶ್ಯಗಳು.. ಹೀಗೆ ಉದ್ದ ಕಡಿತವಾಗುತ್ತಾ ಸಾಗುತ್ತದೆ. ಆ ಸಿನಿಮಾತಂಡ ಅದೇ ಕತೆಯಲ್ಲಿ ಮುಳುಗಿಹೋಗಿರುತ್ತಾದ್ದರಿಂದ ಅವರಿಗೆ ಆ ಕತೆ ತೀರಾ ಚಿರಪರಿಚಿತವಾಗಿರುತ್ತಾದ್ದರಿಂದ ಸಿನಿಮಾದಲ್ಲಿನ ಡೀಟೇಲ್ಸ್ ಇಷ್ಟು ಬೇಕಾ? ಜಾಸ್ತಿಯಾಯಿತು ಎನಿಸಿ ಮೊದಲಿಗೆ ಶಾಟ್ಸ್ ಲೆಕ್ಕದಲ್ಲಿ, ಆನಂತರ ಸೀನ್ ಲೆಕ್ಕದಲ್ಲಿ ಕತ್ತರಿಸಿ, ಸಿನಿಮಾದ ಒಟ್ಟಾರೆ ಉದ್ದ ಇಷ್ಟೇ ಇರಬೇಕು ಎನ್ನುವ ಸುಳ್ಳು ನಿಯಮವನ್ನು ಪಾಲಿಸಲು ಪ್ರಯತ್ನಿಸುತ್ತಾರೆ. ಆದರೆ ಹೊಸದಾಗಿ ನೋಡುವ ಪ್ರೇಕ್ಷಕನಿಗೆ ಡೀಟೇಲ್ಸ್ ಸಿಗುವುದಿಲ್ಲ. ಎಲ್ಲವೂ ಹೀಗೆ ಬಂದು ಹಾಗೆ ಹೋದಂತೆ ಭಾಸವಾಗುತ್ತದೆ. ಸಿನಿಮಾದ ಒಟ್ಟಾರೆ ಫೀಲ್ ಸಿಗುವುದೇ ಇಲ್ಲ. ಆದರೆ ತಿಥಿಯಲ್ಲಿ ಹಾಗಾಗಿಲ್ಲ. ಅಲ್ಲಿ ಉದ್ದನೆಯ ಶಾಟ್ಸ್ ಗಳಿವೆ. ಕೋಳಿ, ಹಸು ದನ ಕರುಗಳ ಉದ್ದುದ್ದದ ರಿಯಾಕ್ಷನ್ ಸ್ ಇವೆ. ಲ್ಯಾಗ್ ಎಂದು ಅದನ್ನೆಲ್ಲಾ ಕತ್ತರಿಸಿದ್ದರೆ ಈಗ ಸಿಗುವ ಫೀಲ್ ಮಂಗಮಾಯವಾಗುತ್ತಿದ್ದರಲ್ಲಿ ಸಂದೇಹವಿಲ್ಲ.
ನಾಲ್ಕನೆಯದಾಗಿ ಪಾತ್ರಗಳು ಮತ್ತು ಕಲಾವಿದರು. ತಿಥಿ ಸಿನಿಮಾವನ್ನು ಯಾರೇ ವೃತ್ತಿಪರ ಕಲಾವಿದರ ಕೈಯಲ್ಲಿ ಮಾಡಿಸಲು ಹೋಗಿದ್ದರೆ ನಿರ್ದೇಶಕರು ಹರಸಾಹಸ ಪಡಬೇಕಾಗುತ್ತಿತ್ತು, ಅಷ್ಟೇ ಅಲ್ಲ. ಮತ್ತು ಅಷ್ಟು ಸಾಹಸ ಪಟ್ಟರೂ ಆ ನೈಜತೆ ಬರುತ್ತಿತ್ತಾ ಎನ್ನುವುದು ಪ್ರಶ್ನೆ. ನಾವೀಗಾಗಲೇ ನೋಡಿದ್ದೇವೆ. ಇತ್ತೀಚಿಗೆ ಬಂದ ಚಿತ್ರಗಳಲ್ಲಿ ನೈಜತೆ ಮಾಯವಾಗಿ ಕಲಾವಿದರೆಲ್ಲಾ ಕೃತಕವಾಗಿ ಕಂಡ ಉದಾಹರಣೆಯನ್ನು. ಹಾಗಾಗಿ ಒಂದು ಪ್ರಾಂತ್ಯದ ಸೊಬಗನ್ನು ತರಲು ತಿಥಿ ಚಿತ್ರತಂಡ ಅಲ್ಲಿಯದೇ ಜನರನ್ನು ಪಾತ್ರಧಾರಿಗಳನ್ನಾಗಿ ಆಯ್ದು ಕೊಂಡದ್ದು ಕಾಸ್ಟಿಂಗ್-ತಾರಾಗಣದ ಆಯ್ಕೆ ಎನ್ನುವುದಕ್ಕೆ ಹೊಸ ಭಾಷೆ ಬರೆದಿದೆ.
2002 ರಲ್ಲಿ ಬಿಡುಗಡೆಯಾದ ಮೊರೆಲ್ಲಿ ಫೆರ್ನಂಡಿಸ್ ನಿರ್ದೇಶನದ ಬ್ರೆಜಿಲ್ ಚಿತ್ರ ಸಿಟಿ ಆಫ್ ಗಾಡ್ ಚಿತ್ರದಲ್ಲೂ ಇಂತಹದ್ದೇ ಪ್ರಯೋಗ ನಡೆದಿತ್ತು. ಇಡೀ ಚಿತ್ರದಲ್ಲಿ ಒಬ್ಬೆ ಒಬ್ಬ ಕಲಾವಿದನನ್ನು ಹೊರಟು ಪಡಿಸಿ ನಿರ್ದೇಶಕರು ಉಳಿದೆಲ್ಲಾ ಪಾತ್ರಧಾರಿಗಳನ್ನು ಅಲ್ಲಿಯ ಸ್ಥಳೀಯ ಕಲಾವಿದರನ್ನು ಹುಡುಕಿದ್ದರು. ಹಾಗಾಗಿಯೇ ಸಿಟಿ ಆಫ್ ಗಾಡ್  ಮಾಸ್ಟರ್ ಪೀಸ್ ಎನಿಸಿಕೊಂಡದ್ದು. ಹಾಗೆಯೇ ಆ ವಿಷಯದಲ್ಲಿ ತಿಥಿ ಕೂಡ ಕನ್ನಡದಲ್ಲಿ ಮಾಸ್ಟರ್ ಪೀಸ್ ಎಂದರೆ ತಪ್ಪಾಗಲಾರದು.
ಇನ್ನು ಐದನೆಯದಾಗಿ ಕತೆ-ನಿರೂಪಣೆ ವಿಷಯಕ್ಕೆ ಬಂದರೆ ಸಿನಿಮಾ ಸಿದ್ಧಸೂತ್ರಗಳನ್ನು ಬೀಸಾಕುವುದರ ಮೂಲಕ ನಮಗೆಲ್ಲಾ ಪಾಠ ಕಲಿಸಿದೆ. ಶೀರ್ಷಿಕೆ ಮುನ್ನ, ಮಧ್ಯಂತರದ ಶಾಕ್, ಕ್ಲೈಮಾಕ್ಸ್ ಹೀಗೆ ಇದಾವುದನ್ನು ತಲೆ ಗೆಡಿಸಿಕೊಳ್ಳದೆ ಸಿನಿಮಾ ಮಾಡಲಾಗಿದೆ. ಕತೆಗೆ ತಕ್ಕಂತೆ ನಿರೂಪಣೆ ಸಾಗುತ್ತದೆ. ಪಾತ್ರಧಾರಿಗಳು ಸನ್ನಿವೇಶಕ್ಕೆ ತಕ್ಕಂತೆ ಮಾತನಾಡುತ್ತಾರೆ. ಅದರಲ್ಲಿ ಪಂಚಿಂಗ್ ಇರಬಹುದು, ಹಾಸ್ಯ ಇರಬಹುದು ಫಿಲಾಸಫಿ ಇರಬಹುದು, ಬೈಗುಳ ಇರಬಹುದು. ಯಾವುದೂ ಬಲವಂತವಾಗಿ ತುರುಕಲಾಗಿಲ್ಲ. ಅದು ಕತೆಯ ಜೊತೆಗೆ ದೃಶ್ಯದ ಓಘಕ್ಕೆ ಸಹಾಯವಾಗುವಂತೆ ಹೆಚ್ಚೂ ಇಲ್ಲದೆ, ಕಡಿಮೆಯೂ ಇಲ್ಲದೆ ಸ್ಫುರಿಸಿದೆ. ಇದು ಪಂಚಿಂಗ್, ಇದು ಮುಖ್ಯವಾದದ್ದು, ಇಲ್ಲಿ ಸ್ಟ್ರೆಸ್ ಮಾಡಿ ಹೇಳ್ಬೇಕು, ಎಂದೆಲ್ಲಾ ಮಾತುಗಾರಿಕೆಯನ್ನು ವಿಭಜಿಸದೆ ಮತ್ತದರ ಪರಿವೂ ಇಲ್ಲದೆ ಪಾತ್ರಗಳು ಮಾತಾಡುತ್ತವೆ. ಸಂಭಾಷಣೆಗಳು ಇಚ್ಚಿತ ಭಾವವನ್ನು ಯಶಸ್ವಿಯಾಗಿ ಕೊಟ್ಟಿದೆ.
ಈ ಎಲ್ಲವೂ ತಿಥಿಯ ಚಿತ್ರದ ಕೊಡುಗೆ. ಒಬ್ಬ ಸಿನಿಮಾ ಕರ್ಮಿ ಹಾಲಿವುಡ್, ಬಾಲಿವುಡ್ ಸಿನೆಮಾಗಳಿಂದ ಕಲಿಯುತ್ತಾ ಸಿನಿಮಾ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ನೋಡಿದರೆ ತಿಥಿ ಮಾಸ್ಟರ್ ಡಿಗ್ರಿ ಮಾಡಿದಷ್ಟು ವಿಷಯಗಳನ್ನು ನಮಗೆ ತಿಳಿಸುತ್ತದೆ. ನೋಡುತ್ತಾ, ಖುಷಿ ಪಡಿಸುತ್ತಾ, ಕಲಿಸುತ್ತಾ ಸಾಗುವ ಸಿನಿಮಾ ತಿಥಿ, ನಿರ್ದೇಶಕ ರಾಮ್ ರೆಡ್ಡಿ,  ಬರಹಗಾರ ಈರೆ ಗೌಡ ಮತ್ತು ಅಷ್ಟೂ ಕಲಾವಿದರನ್ನು ಮೆಚ್ಚಿಕೊಳ್ಳುತ್ತಾ ಅವರ ಅದ್ಭುತ ಪ್ರತಿಭೆಗಳ ಬಗ್ಗೆ ಹೆಮ್ಮೆ ಪಡುತ್ತಾ ಸಿನಿಮಾ ನೋಡುವ ಖುಷಿ ನಮ್ಮ ನಿಮ್ಮದಾಗಲಿ..