Monday, September 28, 2015

ನಾನು ಅವನಲ್ಲ ಮತ್ತು ಬ್ಯೂಟಿಫುಲ್ ಬಾಕ್ಸರ್...

ಪ್ರಕಾಶ್ ರಾಜ್ ಅಭಿನಯದ ಒಗ್ಗರಣೆ ಚಿತ್ರದ ಬಿಡುಗಡೆಯ ದಿನ ಮೊದಲ ಪ್ರದರ್ಶನ ನೋಡಲು ಹೋಗಿದ್ದಾಗ ಅಲ್ಲಿದ್ದ ಕಲಾವಿದರೊಬ್ಬರು ಪರಿಚಯ ಮಾಡಿಕೊಂಡಿದ್ದರು, ಅಲ್ಲದೆ ಚಿತ್ರಮಂದಿರದ ಒಳಗಡೆವರೆಗೂ ನನ್ನ ಜೊತೆಯಲ್ಲಿಯೇ ಬಂದು ಸಿನಿಮಾ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆಯೇ ನಾನೂ ಕೂಡ ಒಂದು ಪಾತ್ರವನ್ನು ಮಾಡಿದ್ದೇನೆ ಎಂದಿದ್ದರು. ನಾನು ಆಗಲಿ ಎಂದು ಸಿನಿಮಾ ನೋಡುವ ಕಾತುರತೆಯಿಂದ ಚಿತ್ರಮಂದಿರ ಹೊಕ್ಕಿದ್ದೆ. ಆದರೆ ಸಿನಿಮಾ ನೋಡಿದ ಮೇಲೆ ಎಲ್ಲಿ, ಯಾವ ಪಾತ್ರ ಮಾಡಿದ್ದು ಆತ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿದ್ದೆ. ಆಮೇಲೆ ಗೊತ್ತಾಯಿತು ಅಲ್ಲಿದ್ದ ಲೈಂಗಿಕ ಅಲ್ಪಸಂಖ್ಯಾತ ಹೆಣ್ಣಿನ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬುದಾಗಿ. ನಾನು ಅವನಲ್ಲ ಅವಳು ಒಳ್ಳೆಯ ಸಾಕ್ಷ್ಯಚಿತ್ರ ಮಾದರಿಯ ಜೀವನಚರಿತ್ರೆಯ ಚಿತ್ರ. ಮಾದೇಶನ ವಿದ್ಯಾ ಆಗುವಲ್ಲಿನ ಜೀವನದ ಪಯಣವನ್ನು ಸಾರುತ್ತಾ ಸಾಗುವ ಚಿತ್ರ. ಯಾವುದೇ ಪರಿಸ್ಥಿತಿಯಲ್ಲಿಯೂ ಸಿನಿಮೀಯ ಪಾತ್ರಗಳನ್ನೂ ಸೃಷ್ಟಿಸದೇ, ಅತಿರೇಕಕ್ಕೆ ಎಡೆ ಮಾಡದೆ ಇದ್ದುದ್ದನ್ನು ಇದ್ದ ಹಾಗೆ ತೋರಿಸುತ್ತಾ ಹೋಗಿರುವುದು ಚಿತ್ರದ ಹೈ ಲೈಟ್. ನಿಜಕ್ಕೂ ಸಂಚಾರಿ ವಿಜಯ್ ಅಭಿನಯ ಅತ್ಯುತ್ತಮ ಮತ್ತು ರಾಷ್ಟ್ರ ಪ್ರಶಸ್ತಿಗೆ ಅರ್ಹ.ಮಾದೇಶ, ವಿದ್ಯಾಳಾಗುವ ಕಥಾನಕ, ಆ ಪಯಣದಲ್ಲಿನ ಯಾತನೆ, ಖುಷಿಯನ್ನು ಅವರೆಡೆಗೆ ಸಮಾಜಕ್ಕಿರುವ ಅನಾದರವನ್ನು ಅಲ್ಲಲ್ಲಿ ಸೂಕ್ಷ್ಮವಾಗಿ ವಿಶದ ಪಡಿಸಿರುವ ಪರಿ ಮೆಚ್ಚುಗೆಗೆ ಅರ್ಹ. ನೋಡಲೇಬೇಕಾದ ಸಿನಿಮಾದ ಪಟ್ಟಿಗೆ ಸೇರಿಸಬಹುದಾದ ಚಿತ್ರವಿದು. ಹಾಗೆಯೇ ಹಿಜಡಾ ಜಗತ್ತಿನ ಒಳಹೊರಗುಗಳನ್ನು ಅವುಗಳ ಪ್ರಕ್ರಿಯೆಯನ್ನು ಎಷ್ಟೋ ಅವಶ್ಯಕವೋ ಅಷ್ಟೇ ತೋರಿಸುತ್ತಾ ಸಾಗುವುದು ನಿಜಕ್ಕೂ ಅಭಿನಂದನಾರ್ಹ.
ನಂಗೆ ಈ ಲಿಂಗಪರಿವರ್ತಿತರ ಸಿನಿಮಾ ಎಂದಾಗ ನನ್ನನ್ನು ಹೆಚ್ಚು ಕಾಡುವುದು  ಬ್ಯೂಟಿಫುಲ್ ಬಾಕ್ಸರ್. ಚಿತ್ರದ ಶೀರ್ಷಿಕೆ ಇಷ್ಟವಾಗಿತ್ತು. ಸಿಂಗಪೂರ್ ಮೂಲದ ಚಿತ್ರವನ್ನು ಏಕಚೈ ಉಕ್ರೋಗಾತಂ ಎನ್ನುವ ಹೆಸರಿನ ನಿರ್ದೇಶಕರು ನಿರ್ದೇಶನ ಮಾಡಿದ್ದರು. ಗಂಡಾಗಿ ಹುಟ್ಟಿದ ಪರಿನ್ಯಾ ತನ್ನೊಳಗಿನ ಹೆಣ್ತನವನ್ನು ಸಾಕಾರಗೊಳಿಸಿಕೊಳ್ಳಲು ಗಂಡಸ್ತನವಿಲ್ಲದ ಗಂಡಸ್ತನವನ್ನು ಹೆಣ್ಣಾಗಿ ಮಾಡಿಕೊಳ್ಳಲು ಪಡುವ ಪಾಡಿನ ಕತೆಯದು. ಬಾಲ್ಯದಿಂದಲೇ ಹೆಣ್ತನದ ಸೆಳೆತದಿಂದಾಗಿ ಲಿಪ್ ಸ್ಟಿಕ್ ಹಾಕಿಕೊಳ್ಳುವುದು ಹೆಣ್ಣಂತೆ ಸಿಂಗರಿಸಿಕೊಳ್ಳುವುದು ಮಾಡುವ ಪರಿನ್ಯಾ ಆ ಕಾರಣದಿಂದಲೇ ಅದ್ಭುತವಾಗಿ ವಾಲಿಬಾಲ್ ಆಡುತ್ತಿದ್ದರೂ ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗುವುದಿಲ್ಲ. ಹಾಗಾಗಿ ಬಾಕ್ಸಿಂಗ್ ಗೆ ಇಳಿಯುವ ಪರಿನ್ಯಾಳ ಗುರಿ ಹಣ ಸಂಪಾದಿಸುವುದು ಮತ್ತು ಆ ಹಣದಿಂದ ಹೆಣ್ಣಾಗುವುದು. ಗುದ್ದಾಡಿ ಗುದ್ದಾಡಿ ಗಂಡಸರನ್ನು ಮಣ್ಣು ಮುಕ್ಕಿಸುವ ಪರಿನ್ಯಾ ಹಣ ಸಂಪಾದನೆ ಮಾಡಿ ಅದನ್ನು ತನ್ನ ಲಿಂಗ ಬದಲಾವಣೆಯಾ ಕನಸು ನನಸು ಮಾಡಿಕೊಳ್ಳುತ್ತಾನೆ, ಆ ಮೂಲಕ ಅವನು ಅವಳಾಗುತ್ತಾನೆ.ಚಿತ್ರದ್ದು ನೈಜಕತೆ ಎಂದು ತಿಳಿದಾಗ ಅದನ್ನು ಮತ್ತೆ ಮತ್ತೆ ನೋಡಿದ್ದೆ. 
ಈ ನಿಟ್ಟಿನಲ್ಲಿ ನನಗೆ ಹಲವಾರು ಸಿನಿಮಾಗಳು ಕಾಡಿವೆ. ಹಾಗೆಯೇ ವಸುಧೇಂದ್ರ ಬರೆದ ಮೋಹನಸ್ವಾಮೀ ಕಥಾ ಸಂಕಲನದಲ್ಲಿನ ಒಂದು ಕತೆ ತುಂಬಾ ಕನಲುವಂತೆ ಮಾಡಿತ್ತು. ಊರಲ್ಲಿ ಹೆಣ್ಣಿಗನಾಗಿದ್ದ ಶಂಕರಗೌಡ ಅದೊಂದು ದಿನ ಊರು ಬಿಟ್ಟು ಮರೆಯಾಗುತ್ತಾನೆ. ಆದರೆ ಒಂದಷ್ಟು ದಿನದ ನಂತರ ವಾಪಸ್ಸು ಊರಿಗೆ ಬರುವ ಶಂಕರ ಹೆಣ್ಣಾಗಿರುತ್ತಾನೆ. ಊರ ಜನ ಅವನನ್ನು ಅಚ್ಚರಿಯಿಂದ ನೋಡುವಂತೆ ಮಾಡಿಬಿಡುತ್ತಾನೆ. ತನ್ನದೇ ಮನೆಗೆ ಹೋಗಿ ನಾನೀಗ ಹೆಣ್ಣು ಎಂದು ಘೋಷಣೆ ಮಾಡುತ್ತಾನೆ, ನನಗೆ ಆಸ್ತಿಯಲ್ಲಿ ಪಾಲು ಬೇಕು ಎನ್ನುತ್ತಾನೆ. ಊರ ಗಂಡಸರ ಸಹವಾಸ ಮಾಡುತ್ತಾನೆ. ತನಗಿಷ್ಟ ಬಂದ ಹಾಗೆ ಬದುಕುವ ಶಂಕರನನ್ನು ಅವನೇ ಮನೆಯವರೇ ಸಾಯಿಸಿ ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿಬಿಡುತ್ತಾರೆ. ಕತೆ ಓದಿ ತುಂಬಾ ದಿನ ಯೋಚಿಸಿದ್ದೆ. ಇಲ್ಲಿ ಯಾರ ತಪ್ಪು, ಯಾರು ಸರಿ ಎಂಬುದಕ್ಕಿಂತ ಹೀಗೆ ನಡೆಯಿತಲ್ಲಾ ಎನ್ನುವ ವಿಷಾದ ನನ್ನನ್ನು ಬಹುದಿನಗಳವರೆಗೆ ಕಾಡಿತ್ತು.