Thursday, April 29, 2021

ಆಸ್ಕರ್ ಕಣದ ಚಿತ್ರಗಳು: ಜುಡಾಸ್ ಅಂಡ್ ದಿ ಬ್ಲ್ಯಾಕ್ ಮೆಸ್ಸಯ್ಯ:

 

ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿದ್ದ ಓನೀಲ್ ಗೆ ಶ್ರೀಮಂತನಾಗುವ ಆಸೆ. ಆ ಆಸೆ  ಯಾರಿಗೆ ಇರುವುದಿಲ್ಲ ಅಲ್ಲವೇ..? ಹೀಗೆ ತಾನೇ ಪೋಲೀಸ್ ಎಂದು ನಕಲಿ ಗುರುತಿನ ಚೀಟಿ ತೋರಿಸಿ, ಕಾರೊಂದನ್ನು ಕಳ್ಳತನ ಮಾಡಲು ಹೋಗಿ ಸಿಕ್ಕಿಕೊಳ್ಳುತ್ತಾನೆ ನಿಜವಾದ ಎಫ್ ಬಿ ಐ ಕೈಗೆ. ಆಗ ಎಫ್ ಬಿ ಐ ನವರು ಓ ನೀಲ್ ಗೆ ಒಂದು ಕೆಲಸ ಕೊಡುತ್ತಾರೆ, ಅದೇನೆಂದರೆ ಓ ನೀಲ್ ಪೋಲೀಸಿನವರ ಜೊತೆಗೆ ಕೈ ಜೋಡಿಸಿ, ಮಾಹಿತಿದಾರನಾಗಿ ಕಾರ್ಯ ನಿರ್ವಹಿಸಬೇಕು, ಸಧ್ಯಕ್ಕೆ ಮುಂಚೂಣಿಯಲ್ಲಿರುವ ಕ್ರಾಂತಿಕಾರಿ ಸಂಘಟನೆಯಾದ ಬ್ಲ್ಯಾಕ್ಪಾಂಥರ್ ಪಾರ್ಟಿ ಒಳಗೆ


ಅವರಳೊಗೊಬ್ಬನಾಗಿ ನುಸುಳಬೇಕು
,ಅದರ ಚೇರ್ಮನ್ ಫ್ರೆಡ್ ಹ್ಯಾಂಪ್ಟನ್ ಗೆ ಹತ್ತಿರವಾಗಬೇಕು, ಅವನ ಅವನತಿಗೆ ಕಾರಣವಾಗಬೇಕು...ಎಂಬುದು. ಓ ನೀಲ್ ಒಪ್ಪಿಕೊಳ್ಳುತ್ತಾನೆ. ಮುಂದೆ...? ಹಾ.. ಅಂದ ಹಾಗೆ ಇದೆಲ್ಲವೂ ನಡೆಯುವುದು 1960 ರ ಕಾಲಘಟ್ಟದಲ್ಲಿ.

ಜುಡಾಸ್ ಅಂಡ್ ದಿ ಬ್ಲ್ಯಾಕ್ ಮೆಸ್ಸಯ್ಯ ಶಾಕಾಕಿಂಗ್  ನಿರ್ದೇಶನದ ಚಿತ್ರ. 1960 ರ ಇಸವಿಯಲ್ಲಿ ವರ್ಣಭೇದ ನೀತಿಯನ್ನು ಉಗ್ರವಾಗಿ ಖಂಡಿಸುತ್ತಿದ್ದ ಬ್ಲ್ಯಾಕ್  ಪಾಂಥರ್ ಪಾರ್ಟಿಯ ಚೇರ್ಮನ್ ಫ್ರೆಡ್ ನ ಹತ್ಯೆ ಕುರಿತಾದ ಚಿತ್ರ. ಚಿತ್ರದ ಜೀವನಚರಿತ್ರೆಯಾಧಾರಿತ ಸಿನಿಮಾವಾದರೂ ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾದಂತಹ ವಸ್ತುಗಳನ್ನೆಲ್ಲವನ್ನೂ ಹೊಂದಿರುವುದರಿಂದ ಸಿನಿಮ ನೋಡಿಸಿಕೊಂಡು ಹೋಗುತ್ತದೆ. ಸಾಮಾಜಿಕ ಪಿಡುಗಾದ ವರ್ಣಬೇಧ ನೀತಿಯ ಚಳುವಳಿಯ ಹಿನ್ನೆಲೆಯನ್ನು ಸೂಕ್ಷ್ಮವಾಗಿ ತೆರೆದಿಡುವ ಸಿನಿಮಾ ಹೆಚ್ಚಾಗಿ ಕೇಂದ್ರಿಕೃತವಾಗಿರುವುದು ಓನೀಲ್ ಪಾತ್ರದ ಮೇಲೆ.

ಈ ಚಿತ್ರಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಪೋಷಕ ನಟ ಮತ್ತು ಅತ್ಯುತ್ತಮ ಸಂಗೀತ ವಿಭಾಗಗಳಲ್ಲಿ. ಫ್ರೆಡ್ ಪಾತ್ರವನ್ನು ನಿರ್ವಹಿಸಿರುವ ಡೇನಿಯಲ್ ಕೇಲುಎ ರವರ ಪಾತ್ರಪೋಷಣೆ ಸೂಪರ್. ಚಿತ್ರದ ಕೊನೆಯಲ್ಲಿ ಫ್ರೆಡ್ ನ ನಿಜವಾದ ವಿಡಿಯೋವನ್ನು ತೋರಿಸುತ್ತಾರೆ, ಅದಕ್ಕೂ ಕೇಲುಎ ನ ಅಭಿನಯಕ್ಕೂ ತಾಳೆ ನೋಡಿದಾಗ ಆತನ ಸಾಮರ್ಥ್ಯ, ಆ ಪಾತ್ರಕ್ಕಾಗಿ ಆತ ಮಾಡಿಕೊಂಡಿರುವ ಅಧ್ಯಯನ, ತಯಾರಿ ಅರಿವಿಗೆ ಬರುತ್ತದೆ. ಹಾಗೆಯೇ ಓನೀಲ್ ಪಾತ್ರ ನಿರ್ವಹಿಸಿದ ಲಾಕೇತ್ ಸ್ಟ್ಯಾನ್ ಫೀಲ್ಡ್ ಗೆ ಪ್ರಶಸ್ತಿ ಸಿಗದಿರುವುದಕ್ಕೆ  ಬೇಸರವಾಗುತ್ತದೆ.

ಜೀವನಚರಿತ್ರೆ,  ಇತಿಹಾಸ ಆಧಾರಿತ ಸಿನಿಮಾ ನೋಡಲು ಇಷ್ಟಪಡುವವರಿಗೆ ಈ ಸಿನಿಮಾ ಮನರಂಜಿಸುತ್ತದೆ ಅಷ್ಟೇ ಅಲ್ಲ ನೋಡಿದ ನಂತರವೂ ಕಾಡುತ್ತದೆ.

 

Tuesday, April 27, 2021

ಆಸ್ಕರ್ ಕಣದ ಚಿತ್ರಗಳು: ನೊಮಡ್ಲ್ಯಾಂಡ್:

 

ಆಸ್ಕರ್ ಕಣದ ಚಿತ್ರಗಳು:ನೊಮಡ್ಲ್ಯಾಂಡ್:

ಆಕೆಗೀಗಲೇ ಅರವತ್ತು ದಾಟಿದೆ. ಗಂಡನನ್ನು ಕಳೆದುಕೊಂಡಿದ್ದಾಳೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಇನ್ನೇನು ಮಾಡುವುದಿದೆ ಬದುಕಿನಲ್ಲಿ.. ? ಎಲ್ಲಾದರೂ ಹೋಗಿಬಿಡೋಣವೇ ಎನಿಸುವುದು ಸಹಜ.. ತಕ್ಷಣ ಅಳಿದುಳಿದ ಹಣದಲ್ಲಿ ವ್ಯಾನ್ ಒಂದನ್ನು ಖರೀದಿಸಿ, ಅದರಲ್ಲಿಯೇ ಜೀವಿಸುತ್ತಾ ಊರು ಸುತ್ತಲು ಹೊರಟುಬಿಡುತ್ತಾಳೆ. ಅವಳ ಈ ಅಲೆಮಾರಿ ಬದುಕಿನಲ್ಲಿ ಸಿಗುವ ಮತ್ತಷ್ಟು ಅಲೆಮಾರಿಗಳ ಬದುಕು ಅವಳನ್ನು ಜೀವಂತವಾಗಿರುಸುತ್ತದೆ ಅಷ್ಟೆ ಅಲ್ಲ, ಬದುಕಿನ ಇನ್ನೊಂದು ಮಗ್ಗಲನ್ನು, ಅಂದರೇ ಆಕೆ ಕಾಣದ ಮತ್ತೊಂದು ಮಜಲನ್ನು ಪರಿಚಯಿಸುತ್ತದೆ..

ಇದು ನೊಮಡ್ಲ್ಯಾಂಡ್ ಚಿತ್ರದ ಕಥೆಯ ಎಳೆ. ಈ ಸಾರಿಯ ಆಸ್ಕರ್ ಕಣದಲ್ಲಿ ಮೂರು ವಿಭಾಗದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಚಿತ್ರವಿದು. ಕ್ಲೋ ಜಾಓ ನಿರ್ದೇಶನದ ಈ ಚಿತ್ರ ಅತ್ಯುತ್ತಮ ಚಿತ್ರ, ಅತ್ಯುತ್ತಮನಿರ್ದೇಶನ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಹಾಗೆ ನೋಡಿದರೆ ಹಾಲಿವುಡ್ ಸಿನಿಮಾಗಳಲ್ಲಿ, ಆಸ್ಕರ್ ಕಣದಲ್ಲಿದ್ದ ಸಿನಿಮಾಗಳಲ್ಲಿಯೇ ಬಜೆಟ್, ನಿರೂಪಣೆ, ತಂತ್ರಜ್ಞಾನ.. ಇದಾವುದರಲ್ಲಿಯೂ ಅತ್ಯುತ್ತಮ ಎನಿಸದ ಸಿನಿಮಾ ಇದು. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಸಾದಾರಣವಾಗಿ ತಯಾರಾಗಿರುವ ಈ ಚಿತ್ರ ತೀರಾ ಸಾದಾರಣ ಎನಿಸುವಷ್ಟರ ಮಟ್ಟಗಿನ ಚಿತ್ರಕತೆಯನ್ನು ಹೊಂದಿದೆ. ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಫ್ರಾನ್ಸಸ್ ಮೆಕ್ಡೋರ್ಮಾಂಡ್ ಪಾತ್ರೋಚಿತ ಅಭಿನಯ ನೀಡಿದ್ದಾರೆ. ಉಳಿದಂತೆ ಛಾಯಾಗ್ರಹಣ, ಸಂಗೀತ ಓಕೆ ಓಕೆ.