Saturday, June 5, 2021

ಉಮ್ಮ

 ನಮ್ಮ ಶಾಲೆಗೆ  ಉಮ್ಮ  ಚುಚ್ಚಲು  ಬರುತ್ತಾರೆ ಎನ್ನುವ ಘೋಷಣೆ  ಅದು ಯಾವ ಮೂಲೆಯಿಂದಲೋ  ತೇಲಿ ನಮ್ಮಗಳ ಕಿವಿಗೆ ಬಿದ್ದು ಬಿಡುತ್ತಿತ್ತು.  ನಾವೆಲ್ಲಾ  ಹೆದರಿ ಗಡಗಡನೆ ನಡುಗಿಹೋಗುತ್ತಿದ್ದೆವು. ನಾವು ಶಾಲೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವ ಸಂಚು ಮಾಡುವ ಮೊದಲೇ ನಮ್ಮ ಕೋಣೆಯ ಬಾಗಿಲನ್ನು ಹೊರಗಡೆಯಿಂದ ಲಾಕ್  ಮಾಡಿಬಿಡುತ್ತಿದ್ದರು. ಆ ನಂತರ ಇಡೀ  ತರಗತಿಯಲ್ಲಿ ಅರಣ್ಯ ರೋಧನ. ಒಬ್ಬರ ಮುಖ್ಯ ಒಬ್ಬರು ನೋಡಿಕೊಂಡು ಅಳುತ್ತಾ ಗೋಳಾಡುತ್ತ ಕುಳಿತುಕೊಳ್ಳುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲಿಯೇ ಬಾಗಲಿನಿನ ಶಬ್ಧ ವಾಗುತ್ತಿದ್ದಂತೆ ನಾವು ಹಿಂದೆ ಹಿಂದೆ ಸರಿದು ಮೂಲೆ ಮೂಲೆ ಸೇರಿಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಆದರೆ ಇಬ್ಬರು ನಮ್ಮ ಸೀನೀಯರ್ರು ಗಳು ಒಳಗೆ ನುಗ್ಗಿ, ಹಾಜರಾತಿ ಕ್ರಮಸಂಖ್ಯೆ ಯ ಪ್ರಕಾರ ಹೆಸರನ್ನು ಕೂಗಿ, ಮೂಲೆಯಲ್ಲಿ ಅಡಗಿಕೊಳ್ಳಲು ಯತ್ನಿಸುತ್ತಿದ್ದವನನ್ನು  ಎಲೆದಾಡಿ, ಕೊನೆಗೆ  ಇಬ್ಬರು ಸೇರಿ ಹೊತ್ತುಕೊಂಡೇ ಹೋಗಿ ಬಿಡುತ್ತಿದ್ದರು. ಸೀನೀಯರುಗಳಿಗೆ ಕಿಂಚಿತ್ತೂ ಕರುಣೆಯಿಲ್ಲವೇ..? ಎಂಥ ಕಟುಕರು ಇವರು..? ಅವನ ರೋಧನವಂತೂ ಹೇಳ ತೀರದು. ಇನ್ನೂ ಕೆಲವೇ ಕ್ಷಣಗಳಲ್ಲಿ  ನೇಣು ಗಂಬ ಏರುವವನಂತೆ ಅಳುತ್ತಾ ಸಾಗುತ್ತಿದ್ದ, ನಾವೆಲ್ಲರೂ  ಮುಂದೆ ನಮ್ಮ ಸ್ಥಿತಿಯನ್ನು ಕಲ್ಪಿಸಿಕೊಂಡು ಇನ್ನೂ ಜೋರಾಗಿ ಅಳುತ್ತಿದ್ದೆವು. 

ಏಕೆಂದರೆ ಉಮ್ಮ ತೆಗೆದುಕೊಳ್ಳುವುದರಲ್ಲಿ ಭಯವಿತ್ತು. ಇಂಜೆಕ್ಷನ್ ಚುಚ್ಚಿ ಸಿಕೊಳ್ಳುವುದೇ ಭಯ. ಆನಂತರ ತೋಳು ಊದಿಕೊಳ್ಳುತ್ತಿತ್ತು. ಜ್ವರ ಬರುತ್ತಿತ್ತು. 

ಆದರೆ ಆರನೆಯ, ಏಳನೆಯ ತರಗತಿಗೆ ಬರುವಷ್ಟರಲ್ಲಿ  ನಮಗೆ ಉಮ್ಮ  ಭಯದ ಸಂಗತಿಯಾಗಿರಲಿಲ್ಲ.  ಬದಲಿಗೆ ಅದು ಬಂದರೆ ಸಾಕು ಎನ್ನುವಷ್ಟರ ಮಟ್ಟಿಗೆ ಅಪೇಕ್ಷೆ ಉಂಟಾಗಿತ್ತು.  ತೋಳು ಊದಿಕೊಳ್ಳುವುದರಿಂದ ಮನೆಯಲ್ಲಿ ಕೆಲಸ ಹೇಳುತ್ತಿರಲಿಲ್ಲ. ಜ್ವರದ ನೆಪವನ್ನು  ಹೇಳಿ, ಶಾಲೆಗೆ ಬಂಕ್ ಹೊಡೆಯಬಹುದಿತ್ತು. ಅಲ್ಲದೆ ಈ  ಬಂಕ್  ರಜಾವನ್ನು ವಾರದವರೆಗೆ ವಿಸ್ತರಿಸಿಕೊಳ್ಳ ಬಹುದಿತ್ತು.  ಜ್ವರ, ತಲೆನೋಯುತ್ತಿದೆ ಎಂದು ಹೇಳಿ, ಸುಮ್ಮನೆ ಮಲಗಿಕೊಂಡರೆ, ಮಲಗಿಕೊಂಡ ಜಾಗಕ್ಕೆ ಹಾಲು, ಊಟ ಇತ್ಯಾದಿಗಳು ಸಾರಬರಾಜಾಗುತ್ತಿತ್ತು. ಇಷ್ಟೆಲ್ಲಾ  ಸವಲತ್ತು  ತಂದುಕೊಂಡುವ ಉಮ್ಮವನ್ನು  ತಪ್ಪಿಸಿ ಕೊಳ್ಳ ಲಾದೀತೇ.. 

ಈಗ ನಾವೇ ಸೀನೀಯರ್  ಆಗಿದ್ದೇವೆಲ್ಲಾ..? ಆಳುವ ಹುಡುಗರನ್ನು ಕಿಂಚಿತ್ತೂ ಕರುಣೆ ತೋರಿಸದೆ ಹೊತ್ತು ಕೊಂಡು ಹೋಗಿ, ಚುಚ್ಚುವ ಡಾಕ್ಟರ್ , ನರ್ಸ್ ಮುಂದೆ ಕೂರಿಸಿದರೆ, ಆ ಹುಡುಗರು ಸಾಕ್ಷಾತ್ ಯಮನನ್ನು ಕಂಡ ಹಾಗೆ ಕೂಗಾಡಿದರೆ, ನಾವು ಬಿದ್ದು ಬಿದ್ದು ನಗುತ್ತಿದ್ದೆವು.   

ಆ ವ್ಯಾಕ್ಸಿನೇಶನ್ ಯಾವುದು..? ಯಾವುದಕ್ಕೆ ಹಾಕಿಸುತ್ತಿದ್ದರು ಎಂಬುದು ನಮಗವತ್ತು ಗೊತ್ತಿರಲಿಲ್ಲ.  ಅದಕ್ಕೆ ಉಣ್ಣೆ, ಉಮ್ಮ ಎಂದು ಯಾಕೆ ಕರೆಯುತ್ತಿದ್ದರು..? ಬಹುಶಃ ಮಕ್ಕಳಿಗೆ ಇಂಜೆಕ್ಷನ್ ಅನ್ನು ಸಾಮಾನ್ಯವಾಗಿ ಅಮ್ಮಂದಿರು ಉಮ್ಮ  ಚುಚ್ಚು ವುದು ಎಂದು ಹೇಳಿಕೊಡುತ್ತಿದ್ದರು. ಅದೇ ಆಡು ಭಾಷೆಯಾಗಿ ಬಂದಿತ್ತೇನೋ..? 

ನಾನು ವ್ಯಾಕ್ಸಿ ನೇಶನ್ ಹಾಕಿಸಿ ಕೊಳ್ಳುವಾಗ ಇದೆಲ್ಲಾ ನೆನಪಾಯಿತು.  


Thursday, April 29, 2021

ಆಸ್ಕರ್ ಕಣದ ಚಿತ್ರಗಳು: ಜುಡಾಸ್ ಅಂಡ್ ದಿ ಬ್ಲ್ಯಾಕ್ ಮೆಸ್ಸಯ್ಯ:

 

ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿದ್ದ ಓನೀಲ್ ಗೆ ಶ್ರೀಮಂತನಾಗುವ ಆಸೆ. ಆ ಆಸೆ  ಯಾರಿಗೆ ಇರುವುದಿಲ್ಲ ಅಲ್ಲವೇ..? ಹೀಗೆ ತಾನೇ ಪೋಲೀಸ್ ಎಂದು ನಕಲಿ ಗುರುತಿನ ಚೀಟಿ ತೋರಿಸಿ, ಕಾರೊಂದನ್ನು ಕಳ್ಳತನ ಮಾಡಲು ಹೋಗಿ ಸಿಕ್ಕಿಕೊಳ್ಳುತ್ತಾನೆ ನಿಜವಾದ ಎಫ್ ಬಿ ಐ ಕೈಗೆ. ಆಗ ಎಫ್ ಬಿ ಐ ನವರು ಓ ನೀಲ್ ಗೆ ಒಂದು ಕೆಲಸ ಕೊಡುತ್ತಾರೆ, ಅದೇನೆಂದರೆ ಓ ನೀಲ್ ಪೋಲೀಸಿನವರ ಜೊತೆಗೆ ಕೈ ಜೋಡಿಸಿ, ಮಾಹಿತಿದಾರನಾಗಿ ಕಾರ್ಯ ನಿರ್ವಹಿಸಬೇಕು, ಸಧ್ಯಕ್ಕೆ ಮುಂಚೂಣಿಯಲ್ಲಿರುವ ಕ್ರಾಂತಿಕಾರಿ ಸಂಘಟನೆಯಾದ ಬ್ಲ್ಯಾಕ್ಪಾಂಥರ್ ಪಾರ್ಟಿ ಒಳಗೆ


ಅವರಳೊಗೊಬ್ಬನಾಗಿ ನುಸುಳಬೇಕು
,ಅದರ ಚೇರ್ಮನ್ ಫ್ರೆಡ್ ಹ್ಯಾಂಪ್ಟನ್ ಗೆ ಹತ್ತಿರವಾಗಬೇಕು, ಅವನ ಅವನತಿಗೆ ಕಾರಣವಾಗಬೇಕು...ಎಂಬುದು. ಓ ನೀಲ್ ಒಪ್ಪಿಕೊಳ್ಳುತ್ತಾನೆ. ಮುಂದೆ...? ಹಾ.. ಅಂದ ಹಾಗೆ ಇದೆಲ್ಲವೂ ನಡೆಯುವುದು 1960 ರ ಕಾಲಘಟ್ಟದಲ್ಲಿ.

ಜುಡಾಸ್ ಅಂಡ್ ದಿ ಬ್ಲ್ಯಾಕ್ ಮೆಸ್ಸಯ್ಯ ಶಾಕಾಕಿಂಗ್  ನಿರ್ದೇಶನದ ಚಿತ್ರ. 1960 ರ ಇಸವಿಯಲ್ಲಿ ವರ್ಣಭೇದ ನೀತಿಯನ್ನು ಉಗ್ರವಾಗಿ ಖಂಡಿಸುತ್ತಿದ್ದ ಬ್ಲ್ಯಾಕ್  ಪಾಂಥರ್ ಪಾರ್ಟಿಯ ಚೇರ್ಮನ್ ಫ್ರೆಡ್ ನ ಹತ್ಯೆ ಕುರಿತಾದ ಚಿತ್ರ. ಚಿತ್ರದ ಜೀವನಚರಿತ್ರೆಯಾಧಾರಿತ ಸಿನಿಮಾವಾದರೂ ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾದಂತಹ ವಸ್ತುಗಳನ್ನೆಲ್ಲವನ್ನೂ ಹೊಂದಿರುವುದರಿಂದ ಸಿನಿಮ ನೋಡಿಸಿಕೊಂಡು ಹೋಗುತ್ತದೆ. ಸಾಮಾಜಿಕ ಪಿಡುಗಾದ ವರ್ಣಬೇಧ ನೀತಿಯ ಚಳುವಳಿಯ ಹಿನ್ನೆಲೆಯನ್ನು ಸೂಕ್ಷ್ಮವಾಗಿ ತೆರೆದಿಡುವ ಸಿನಿಮಾ ಹೆಚ್ಚಾಗಿ ಕೇಂದ್ರಿಕೃತವಾಗಿರುವುದು ಓನೀಲ್ ಪಾತ್ರದ ಮೇಲೆ.

ಈ ಚಿತ್ರಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಪೋಷಕ ನಟ ಮತ್ತು ಅತ್ಯುತ್ತಮ ಸಂಗೀತ ವಿಭಾಗಗಳಲ್ಲಿ. ಫ್ರೆಡ್ ಪಾತ್ರವನ್ನು ನಿರ್ವಹಿಸಿರುವ ಡೇನಿಯಲ್ ಕೇಲುಎ ರವರ ಪಾತ್ರಪೋಷಣೆ ಸೂಪರ್. ಚಿತ್ರದ ಕೊನೆಯಲ್ಲಿ ಫ್ರೆಡ್ ನ ನಿಜವಾದ ವಿಡಿಯೋವನ್ನು ತೋರಿಸುತ್ತಾರೆ, ಅದಕ್ಕೂ ಕೇಲುಎ ನ ಅಭಿನಯಕ್ಕೂ ತಾಳೆ ನೋಡಿದಾಗ ಆತನ ಸಾಮರ್ಥ್ಯ, ಆ ಪಾತ್ರಕ್ಕಾಗಿ ಆತ ಮಾಡಿಕೊಂಡಿರುವ ಅಧ್ಯಯನ, ತಯಾರಿ ಅರಿವಿಗೆ ಬರುತ್ತದೆ. ಹಾಗೆಯೇ ಓನೀಲ್ ಪಾತ್ರ ನಿರ್ವಹಿಸಿದ ಲಾಕೇತ್ ಸ್ಟ್ಯಾನ್ ಫೀಲ್ಡ್ ಗೆ ಪ್ರಶಸ್ತಿ ಸಿಗದಿರುವುದಕ್ಕೆ  ಬೇಸರವಾಗುತ್ತದೆ.

ಜೀವನಚರಿತ್ರೆ,  ಇತಿಹಾಸ ಆಧಾರಿತ ಸಿನಿಮಾ ನೋಡಲು ಇಷ್ಟಪಡುವವರಿಗೆ ಈ ಸಿನಿಮಾ ಮನರಂಜಿಸುತ್ತದೆ ಅಷ್ಟೇ ಅಲ್ಲ ನೋಡಿದ ನಂತರವೂ ಕಾಡುತ್ತದೆ.

 

Tuesday, April 27, 2021

ಆಸ್ಕರ್ ಕಣದ ಚಿತ್ರಗಳು: ನೊಮಡ್ಲ್ಯಾಂಡ್:

 

ಆಸ್ಕರ್ ಕಣದ ಚಿತ್ರಗಳು:ನೊಮಡ್ಲ್ಯಾಂಡ್:

ಆಕೆಗೀಗಲೇ ಅರವತ್ತು ದಾಟಿದೆ. ಗಂಡನನ್ನು ಕಳೆದುಕೊಂಡಿದ್ದಾಳೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಇನ್ನೇನು ಮಾಡುವುದಿದೆ ಬದುಕಿನಲ್ಲಿ.. ? ಎಲ್ಲಾದರೂ ಹೋಗಿಬಿಡೋಣವೇ ಎನಿಸುವುದು ಸಹಜ.. ತಕ್ಷಣ ಅಳಿದುಳಿದ ಹಣದಲ್ಲಿ ವ್ಯಾನ್ ಒಂದನ್ನು ಖರೀದಿಸಿ, ಅದರಲ್ಲಿಯೇ ಜೀವಿಸುತ್ತಾ ಊರು ಸುತ್ತಲು ಹೊರಟುಬಿಡುತ್ತಾಳೆ. ಅವಳ ಈ ಅಲೆಮಾರಿ ಬದುಕಿನಲ್ಲಿ ಸಿಗುವ ಮತ್ತಷ್ಟು ಅಲೆಮಾರಿಗಳ ಬದುಕು ಅವಳನ್ನು ಜೀವಂತವಾಗಿರುಸುತ್ತದೆ ಅಷ್ಟೆ ಅಲ್ಲ, ಬದುಕಿನ ಇನ್ನೊಂದು ಮಗ್ಗಲನ್ನು, ಅಂದರೇ ಆಕೆ ಕಾಣದ ಮತ್ತೊಂದು ಮಜಲನ್ನು ಪರಿಚಯಿಸುತ್ತದೆ..

ಇದು ನೊಮಡ್ಲ್ಯಾಂಡ್ ಚಿತ್ರದ ಕಥೆಯ ಎಳೆ. ಈ ಸಾರಿಯ ಆಸ್ಕರ್ ಕಣದಲ್ಲಿ ಮೂರು ವಿಭಾಗದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಚಿತ್ರವಿದು. ಕ್ಲೋ ಜಾಓ ನಿರ್ದೇಶನದ ಈ ಚಿತ್ರ ಅತ್ಯುತ್ತಮ ಚಿತ್ರ, ಅತ್ಯುತ್ತಮನಿರ್ದೇಶನ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಹಾಗೆ ನೋಡಿದರೆ ಹಾಲಿವುಡ್ ಸಿನಿಮಾಗಳಲ್ಲಿ, ಆಸ್ಕರ್ ಕಣದಲ್ಲಿದ್ದ ಸಿನಿಮಾಗಳಲ್ಲಿಯೇ ಬಜೆಟ್, ನಿರೂಪಣೆ, ತಂತ್ರಜ್ಞಾನ.. ಇದಾವುದರಲ್ಲಿಯೂ ಅತ್ಯುತ್ತಮ ಎನಿಸದ ಸಿನಿಮಾ ಇದು. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಸಾದಾರಣವಾಗಿ ತಯಾರಾಗಿರುವ ಈ ಚಿತ್ರ ತೀರಾ ಸಾದಾರಣ ಎನಿಸುವಷ್ಟರ ಮಟ್ಟಗಿನ ಚಿತ್ರಕತೆಯನ್ನು ಹೊಂದಿದೆ. ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಫ್ರಾನ್ಸಸ್ ಮೆಕ್ಡೋರ್ಮಾಂಡ್ ಪಾತ್ರೋಚಿತ ಅಭಿನಯ ನೀಡಿದ್ದಾರೆ. ಉಳಿದಂತೆ ಛಾಯಾಗ್ರಹಣ, ಸಂಗೀತ ಓಕೆ ಓಕೆ.

Saturday, April 10, 2021

ನಾಜಿ ಕಾನೆಂಟ್ರೇಶನ್ ಕ್ಯಾಂಪ್: ಒಂದು ಸಾಕ್ಷ್ಯಚಿತ್ರ

 

ಸ್ತಬ್ಧನಾಗಿ ಕುಳಿತುಬಿಟ್ಟಿದ್ದೇನೆ ಆ ಸಾಕ್ಷ್ಯಚಿತ್ರವನ್ನು ನೋಡಿ.ಎರಡು ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಜಾರ್ಜ್ ಸ್ಟೀವನ್ಸ್ ರವರ 59 ನಿಮಿಷಗಳ ನೈಜ ಚಿತ್ರಣಗಳ ಸಂಕಲನವದು. ಹಿಟ್ಲರ್ನ ಕ್ರೌರ್ಯಕ್ಕೆ ಸಾಕ್ಷಿಯಾದ ಕಾನ್ಸೆಂಟ್ರೇಷನ್ಸ್ ಕ್ಯಾಂಪ್ ಗಳ ಚಿತ್ರಣವದು. ಹಾಗೆ ನೋಡಿದರೆ ಈ ಕುರಿತಾದ ಚಲನಚಿತ್ರಗಳು ಹಲವಾರಿವೆ. ಹಾಗೆಯೆ ಸಾಕ್ಷ್ಯಚಿತ್ರಗಳೂ ಕೂಡ. ಆದರೇ ಇದು ಕಣ್ಣಿಗೆ ಕಟ್ಟುವ ಕಥಾನಕ.

ಈ ಸಾಕ್ಷ್ಯಚಿತ್ರವನ್ನು ತಯಾರಿಸಿದ ನಂತರ ನಿರ್ದೇಶಕ ಸ್ಟೀವನ್ಸ್ ಖಿನ್ನತೆಗೆ ಒಳಗಾಗಿಬಿಟ್ಟನಂತೆ. ಆತನಲ್ಲಿದ್ದ ಚಟುವಟಿಕೆ ಒಂದಷ್ಟು ದಿನಗಳು ಮಾಯವಾಯಿತಂತೆ. ಈ ಮೊದಲು ಹಾಸ್ಯಮಯ ರೊಮ್ಯಾಂಟಿಕ್ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಸ್ಟೀವನ್ಸ್  ಈ ಸಾಕ್ಷ್ಯಚಿತ್ರದ ನಂತರ ಗಂಭೀರ ಕಥಾವಸ್ತುಗಳಿರುವ ಸಿನಿಮಾಗಳನ್ನು ನಿರ್ದೇಶಿಸಿದ್ದಾನೆ.

ಸಾಕ್ಷ್ಯಚಿತ್ರವು ನಾಜಿ ಕಾನ್ಸೆಂಟ್ರೇಷನ್ ಕ್ಯಾಂಪ್ ಗಳನ್ನು ಅದರಲ್ಲಿನ ಖೈದಿಗಳನ್ನು, ಅದೃಷ್ಟವಶಾತ್ ಬದುಕುಳಿದವರನ್ನು ಸಂದರ್ಷಿಸುತ್ತಾ ಅವರ ಅಲ್ಲಿನ ಸ್ಥಿತಿಗತಿಗಳನ್ನು ತೋರಿಸುತ್ತದೆ. ಮೂಳೆ ಕಾಣುವಂತಹ ವ್ಯಕ್ತಿಗಳು, ಹೆಂಗಸರು ಗಂಡಸರು ಮಕ್ಕಳೆಂಬ ವ್ಯತ್ಯಾಸವಿಲ್ಲದೇ  ನಾಜಿಗಳು ಕೊಟ್ಟಂತಹ ಚಿತ್ರಹಿಂಸೆಗಳು, ಅನುಭವಿಸಿದ ನರಕಯಾತನೆಗಳು ಕಣ್ಣು ಕಟ್ಟುತ್ತವೆ,ಕಣ್ತುಂಬುವಂತೆ ಮಾಡುತ್ತವೆ.ಅವಶ್ಯವಾಗಿ ನೋಡಲೇಬೇಕಾದ ಸಾಕ್ಷ್ಯ ಚಿತ್ರವಿದು.

Friday, December 28, 2018

drops

1.
ಚುಮುಗುಡುವ ಚಳಿಯಲ್ಲಿ
ಮೇಲೇಳಲು ಬೇಸರ
ಬೆಚ್ಚನೆಯ ಹೊದಿಕೆಯನು
ಕಿತ್ತೊಗೆಯಲು ತಾತ್ಸಾರ..

ಹಾಗಂತ ಮಲಗುವನೆ ನೇಸರ..?
ತಾ ಬೇಗ ಎದ್ದು ನಮ್ಮನ್ನೆಲಾ ಎಬ್ಬಿಸುವನು
ಅವನಿಗೊಂದು ನಮಸ್ಕಾರ..

ಶುಭೋದಯ.
2.
ಎಲ್ಲಾ ಘಳಿಗೆಗೂ
ಅದರದೇ ಹಮ್ಮು...
ನಿಲ್ಲದೆ ಓಡುವ ಬಿಮ್ಮು
ತಾ ಕಾಯದೆ, ನಮ್ಮ ಮಾತ್ರ ಕಾಯಿಸಿ,
ಬಂದರೆಘಳಿಗೆ ಚಂದೆನಿಸಿ
ಕನಸಾಗುವ ಅರೆಕ್ಷಣದಲ್ಲಿ ಅನಿಸಿದ್ದು..

ನಾನಿದ್ದೆ, ಕ್ಷಣವಿತ್ತು
ನೀನಿರಬೇಕಿತ್ತು...ನೀನಿರಬೇಕಿತ್ತು...
3.
ಅದೇ ಬೆಳಗು
ಅದೇ ಸಂಜೆ...ಮತ್ತೇನಿದೆ
ಎಂದು ಮತ್ತೆ ಮಲಗಲೆತ್ನಿಸಿದ ಮನಕೆ

ಒಳ ಮನಸ್ಸು ಹೇಳಿದ್ದು:
ಬೆಳಗು ಅನಾದಿ ಕಾಲದ್ದು.
ನಿನ್ನ ಬದುಕಿಗದು ಪ್ರತಿ ದಿನ ಹೊಸದು..

ಏಳು..ಮೇಲೇಳು...

Thursday, December 7, 2017

ಕತೆಯನ್ನು ಚಿತ್ರಕತೆಯಾಗಿಸುವುದು ಹೇಗೆ..?

ಕತೆಯನ್ನು ಚಿತ್ರಕತೆಯಾಗಿಸುವುದು ಹೇಗೆ..?
ಇದೊಂದು ಕ್ಲಿಷ್ಟಕರ ಪ್ರಶ್ನೆ. ನಾವೇನೋ ಕತೆಯನ್ನು ಹೆಣೆದು ಹೇಳಿಬಿಡುತ್ತೇವೆ. ಆದರೆ ಚಿತ್ರಕತೆ ಮಾಡಲು ಕುಳಿತಾಗ ಒದ್ದಾಡುವಂತಾಗುತ್ತದೆ. ಅಂದುಕೊಂಡ ಕತೆಯನ್ನು ಅರವತ್ತು ಎಪ್ಪತ್ತು ದೃಶ್ಯಗಳನ್ನಾಗಿ ವಿಂಗಡಿಸಿ ಕತೆಯ ವಿವರಗಳನ್ನು ಸಂಭಾಷಣೆ ಮೂಲಕ ತುಂಬುತ್ತಾ ಹೋಗುವುದು ಸುಲಭವಾಗುವುದೇ ಇಲ್ಲ.
ಅದರಲ್ಲೂ ಒಂದೊಂದು ದೃಶ್ಯ ಬರೆದಾದ ಮೇಲೆಯೂ ಇದು ಅನಾವಶ್ಯಕವೇ..? ಎಂದು ಪ್ರಶ್ನಿಸಿಕೊಳ್ಳುತ್ತೇವೆ..? ಜೊತೆಗೆ ಈ ದೃಶ್ಯ ನೋಡಿಸಿಕೊಂಡು ಹೋಗುತ್ತದೆಯೇ..? ಇದರಲ್ಲಿ ಮಜಾ ಇದೆಯೇ..? ಕತೆಯ ಸತ್ವ ಇದರಲ್ಲಿದೆಯೇ..? ಇದೆಲ್ಲವನ್ನು ಚೆಕ್ ಮಾಡುವುದು ಸುಲಭದ ಕೆಲಸವಲ್ಲ.
ಹಾಗೆ ನೋಡಿದರೆ ಬೇರೆ ಭಾಷೆಗಳಿಗಿಂತ ನಮ್ಮಲ್ಲಿ ಬರಹಗಾರರು ಕಡಿಮೆ. ಇದ್ದ ಒಂದಷ್ಟು ಜನ ನಿರ್ದೇಶಕರಾಗಿ ಹೋಗಿದ್ದಾರೆ. ಇನ್ನು ಬರಹಗಾರರು ಸಾಹಿತ್ಯದಿಂದ ದೂರ, ಅವರು ಕತೆ ಕಾದಂಬರಿ ಓದುವುದೇ ಇಲ್ಲ, ಅಥವಾ ತುಂಬಾ ಅಂದರೆ ತುಂಬಾ ಕಡಿಮೆ. ಹಾಗಾಗಿಯೇ ನೀವು ಸಿನಿಮಾ ಹಿಟ್ ಆಗಿರಲಿ, ಕೋಟ್ಯಾಂತರ ಹಣ ಬಾಚಿರಲಿ, ಅದರಲ್ಲಿನ ಬರವಣಿಗೆಯ ಸತ್ವ ಅಷ್ಟಕಷ್ಟೇ ಎಂದೇ ಎನಿಸುತ್ತದೆ.
ಇತ್ತೀಚಿನ ಚಿತ್ರಗಳ ಚಿತ್ರಕತೆ ಗಮನಿಸಿ. ಮೂಲಕತೆ ಅಥವಾ ಮೂಲಕತೆಯ ಎಳೆ ಸರಿಯಾಗಿರುತ್ತದೆ, ಆದರೆ ಉಪಕತೆಗಳು ಅದರೊಳಗೆ ಸರಿಯಾಗಿ ಅಡಕವಾಗಿರುವುದಿಲ್ಲ. ಅಥವಾ ನಾಯಕಿ ಸೇರ್ಪಡೆ, ಹಾಸ್ಯ ದೃಶ್ಯಗಳು ಚಿತ್ರದ ಓಘ ಸಮರ್ಪಕವಾಗಿರುವುದಿಲ್ಲ. ಹಾಗಾಗಿಯೇ ಸಿನಿಮಾ ಚೆನ್ನಾಗಿದೆ, ಆದರೆ ನಾಯಕಿಯ ದೃಶ್ಯಾವಳಿಗಳು ಸರಿಯಿಲ್ಲ, ಹಾಸ್ಯ ದೃಶ್ಯಗಳು ಬೇಕಿರಲಿಲ್ಲ ಎನ್ನುವ ಮಾತು ಕೇಳಿ ಬರುತ್ತದೆ. ಆನಂತರ ಮತ್ತೊಂದಿದೆ. ನಮ್ಮಲ್ಲಿ ಬೌಂಡ್ ಸ್ಕ್ರಿಪ್ಟ್ ಎನ್ನುವ ಮಾತಿದೆ. ಅಂದರೆ ಕತೆಯಾದ ಮೇಲೆ ಚಿತ್ರಕತೆ ಸಂಭಾಷಣೆ ಎಲ್ಲವನ್ನೂ ಅಡಕಗೊಳಿಸಿದ ಬರಹದ ಪ್ರತಿ. ಒಮ್ಮೆ ಕತೆಯಾದ ನಂತರ ಅದನ್ನು ಅಷ್ಟಕ್ಕೇ ಬಿಟ್ಟು ಅದನ್ನಷ್ಟೇ ಚಿತ್ರೀಕರಿಸುತ್ತಾ ಸಾಗಬೇಕು. ಚಿತ್ರೀಕರಣ ಸಮಯದಲ್ಲಿ ಸಣ್ಣ ಪುಟ್ಟ ಬದಲಾವಣೆ ಬರುತ್ತದೆಯಾದರೂ ಅದು ಕತೆಗೆ ಧಕ್ಕೆಯಾಗುತ್ತದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ. ಚಿತ್ರೀಕರಣ ಸಮಯದಲ್ಲಿ ಒಂದಷ್ಟು ತಲೆಗೆ ಹೊಸ ಐಡಿಯಾಗಳು ಬಂದಾಗ ಅದನ್ನೆಲ್ಲಾ ಸೇರಿಸುತ್ತಾ ಸಾಗಿದರೆ ಸಿನಿಮಾ ಏನೋ ಆಗುತ್ತದೆ. ಬಹುತೇಕ ಚಿತ್ರಗಳ ಕತೆ ಇದೆ ಆಗಿದೆ.ಹೇಳಿದ ಕತೆಯೊಂದು ನೋಡುತ್ತಿರುವುದು ಇನ್ನೊಂದು ಎನ್ನುವ ಸ್ಥಿತಿ ಸುಮಾರು ಚಿತ್ರತಂಡದ್ದು.
ಇಷ್ಟಕ್ಕೂ ಕತೆ ಎಂದರೇನು..? ಎನ್ನುವುದು ಪ್ರಶ್ನೆ. ಒಂದು ಘಟನೆಗಳ ಸಂಚಯ, ಕಲ್ಪನೆಗಳ ಒಗ್ಗೂಡಿಸುವಿಕೆ ಏನೆಲ್ಲಾ ಅರ್ಥೈಸಬಹುದು. ನಾವು ದಿನಪತ್ರಿಕೆ, ವಾರಪತ್ರಿಕೆ, ಕತೆ ಕಾದಂಬರಿಗಳನ್ನು, ಕನ್ನಡದ ಸಾಹಿತಿಗಳನ್ನು ಓದಿಕೊಂಡರೆ ಕತೆಯ ಒಳಾರ್ಥ ಸಿಕ್ಕೆ ಸಿಗುತ್ತದೆ. ಯಾವುದೇ ಚಿತ್ರರಂಗ ಶ್ರೀಮಂತವಾಗಿರುವುದು ಸಾಹಿತ್ಯದಿಂದಾಗಿ ಮಾತ್ರ. ನೀವು ಈವತ್ತು ಹಾಲಿವುಡ್ ನ ಯಾವುದೇ ಚಿತ್ರ ತೆಗೆದುಕೊಳ್ಳಿ, ಅದರ ಮೂಲ ಸಾಹಿತ್ಯವೇ. ಹಾಗೆಯೇ ಅಲ್ಲಿನ ಬರಹಗಾರರ ಬಹುತೇಕ ಕತೆ, ಸಣ್ಣ ಕತೆ, ಕಾದಂಬರಿಗಳು ಸಿನಿಮಾ ಆಗಿ ಯಶಸ್ಸು ಕಂಡಿವೆ. ಜುರಾಸಿಕ್ ಪಾರ್ಕ್ ನಂತಹ ಸಿನಿಮಾವೇ ಕಾದಂಬರಿ ಆಧರಿಸಿದ್ದು ಎಂಬುದನ್ನು ಗಮನಿಸಿ. ಹಾಗೆಯೇ ಜೇಮ್ಸ್ ಬಾಂಡ್ ಸರಣಿಯ ಚಿತ್ರಗಳೂ ಕಾದಂಬರಿ ಆಧಾರಿತವೆ..!
ಆದರೆ ನಮ್ಮಲ್ಲಿ ಕಾದಂಬರಿ ಆಧಾರಿತ ಎಂದಾಕ್ಷಣ ಅದೊಂದು ಕಲಾತ್ಮಕ ಚಿತ್ರ ಇರಬಹುದು ಎನಿಸುತ್ತದೆ.ಅಥವಾ ಅವಾರ್ಡ್ ಸಿನಿಮಾ ಮಾಡಿರಬಹುದು ಎನಿಸುತ್ತದೆ..ನಮ್ಮಲ್ಲಿ ಕಮರ್ಷಿಯಲ್ ಸಿನಿಮಾದ ಕತೆಗಳಿಲ್ಲವೇ..? ಅಥವಾ ಇರುವ ಕತೆಯ ನಿರೂಪಣೆಯನ್ನು ಕಮರ್ಷಿಯಲ್ ಮಾಡಲು ಸಾಧ್ಯವಿಲ್ಲವೇ..? ಖಂಡಿತ ಸಾಧ್ಯವಿದೆ. ಭಾರತದ ಚಿತ್ರರಂಗದಲ್ಲಿ ಹೊಸ ಅಲೆ ಮೂಡಿಸಿದ “ಅಂತ” ಚಿತ್ರ ಕಾದಂಬರಿ ಆಧರಿಸಿದ್ದಲ್ಲವೇ..? ಹಾಗೆಯೇ ನಾಗರಹಾವು ಕಾದಂಬರಿ ಆಧಾರಿತ ತಾನೇ..?
ಅಂದರೆ ಈಗಿರುವ ಕತೆಯನ್ನು ಪರಿಣಾಮಕಾರಿ ಚಿತ್ರಕತೆಯನ್ನಾಗಿ ಪರಿವರ್ತಿಸುವ ಕಲೆ ನಮಗಷ್ಟು ಒಲಿದಿಲ್ಲವೇ ಎನ್ನುವುದು ಪ್ರಶ್ನೆ. ಆದರೆ ನಾವದನ್ನು ಓದಿಯೇ ಇಲ್ಲವಲ್ಲ. ನಾವುಗಳು ಕಾದಂಬರಿ-ಸಾಹಿತ್ಯ ಎಂದಾಕ್ಷಣ ಅಯ್ಯೋ ಅದೆಲ್ಲಾ ಸಿನಿಮಾಕ್ಕೆ ಆಗಿ ಬರುವುದಿಲ್ಲ, ಹಾಗಾಗಿ ಓದುವುದು ಯಾಕೆ..? ಎನ್ನುವ ಧೋರಣೆಗೆ ಬಿದ್ದಿದ್ದೇವೆ. ಫಲಿತಾಂಶ ಸಿನಿಮಾ ಸೂಪರ್ ಎನಿಸಿದರೂ ಅದಕ್ಕೆ ಕತೆ-ಚಿತ್ರಕತೆ ಮುಖ್ಯವಾಗಿದೆ, ಮೇಕಿಂಗ್ ಅದು ಇದು ಮುಖ್ಯ ಎನಿಸಿ, ಕೊನೆಯಲ್ಲಿ ಕತೆಯೇ ಇಲ್ಲ ಎನ್ನುವ ನಿರ್ಧಾರಕ್ಕೆ ಬರುವಂತಾಗಿದೆ.
ದಿ ಬೆಟ್ ಕತೆಯನ್ನು ಇಂಗ್ಲೀಷ್ ನಲ್ಲಿ ಓದಿ, ಅದರ ಕನ್ನಡ ಅನುವಾದಗಳನ್ನು ಓದಿಯಾದ ಮೇಲೆ, ಓದಿದವರೊಂದಿಗೆ ಚರ್ಚೆಗೆ ಕುಳಿತಾದ ಮೇಲೆ ಚಿತ್ರಕತೆಗೆ ಕುಳಿತಾಗ ಒದ್ದಾಟ ಶುರುವಾದದ್ದು ಖಂಡಿತ. ದೃಶ್ಯಗಳನ್ನು ವಿಂಗಡಿಸುತ್ತಾ, ಕತೆಯ ಸಾರವನ್ನು ಎಲ್ಲೂ ಜಾಲಾಗಿಸದೆ ಕಾಯ್ದುಕೊಳ್ಳುತ್ತಾ ಚಿತ್ರಕತೆ ಹೆಣೆಯುವ ಪ್ರಕ್ರಿಯೆಗೆ ಏನೆಲ್ಲಾ ಬೇಕು ಎನ್ನುವ ಯೋಚನೆ ಬಂದಿದ್ದೇ, ಇದನ್ನು ಬರೆಯಲು ಸಾಧ್ಯವಾಯಿತು ನೋಡಿ.


Thursday, November 23, 2017

ದರ್ಶನ್ ಹೆಚ್ಚೋ..ಸುದೀಪ್ ಹೆಚ್ಚೋ...?

ನಾನು ವಿಷ್ಣುವರ್ಧನ್ ಅಭಿಮಾನಿ. ನಾನು ಎಂಟನೆಯ ತರಗತಿಯಲ್ಲಿದ್ದಾಗ ವಿಷ್ಣುವರ್ಧನ್ ಅವರ ಭಾವಚಿತ್ರ ಅದಕ್ಕೆ ಬಣ್ಣ ಹಚ್ಚಿದ್ದೆ. ಆದರೆ ನನ್ನದೇ ಗೆಳೆಯ ರಾಜ್ಅಭಿಮಾನಿ ಅದರ ಮೇಲೆ ಪೆನ್ನಿನಿಂದ ಗೀಚಿ ವಿರೂಪಗೊಳಿಸಿದ್ದ. ಅದು ದೊಡ್ಡ ಜಗಳಕ್ಕೆ ಕಾರಣವಾಗಿತ್ತು. ಸುಮಾರು ವರ್ಷಗಳವರೆಗೆ ನಮ್ಮೂರಿನಲ್ಲಿ ಇದೊಂದು ಜಗಳ ನಡೆಯುತ್ತಲೇ ಇತ್ತು. ಹಬ್ಬಕ್ಕೆ ವಿಶೇಷ ದಿನಗಳಲ್ಲಿ ಟಿವಿ ಮತ್ತು ವಿಸಿಪಿ ತಂದು ಅದನ್ನು ಊರ ಚಾವಡಿಯ ಮುಂದೆ ಪ್ರದರ್ಶಿಸಲಾಗುತ್ತಿತ್ತು. ಹೆಚ್ಚಾಗಿ ಅದು ನಡೆಯುತ್ತಿದ್ದದ್ದು ಗಣೇಶ ಹಬ್ಬ ನಾಡದೇವತೆ ಹಬ್ಬಗಳಲ್ಲಿ ಅಂತಹ ಸಂದರ್ಭಗಳಲ್ಲಿ ಈ ಸ್ಟಾರ್ ವಾರ್ ತಾರಕಕ್ಕೇರುತ್ತಿತ್ತು. ದಿನಕ್ಕೆ ನಾಲ್ಕು ಕ್ಯಾಸೆಟ್ ಲೆಕ್ಕ.ಮುಗಿಯುವಷ್ಟರಲ್ಲಿ ಬೆಳಗಾಗುತ್ತಿತ್ತು ಅಥವಾ ಊರಜನರೆಲ್ಲಾ ನಿದ್ದೆ ಮಾಡಿಬಿಡುತ್ತಿದ್ದರು.ರಾತ್ರಿ ಒಂಭತ್ತಕ್ಕೆ ಚಾವಡಿಯ ಮುಂದೆ ಚಾಪೆ ಹಾಸಿಕೊಂಡು ಕುಟುಂಬಗಳು ನೆಲೆಗೊಳ್ಳುತ್ತಿದ್ದವು.
ಒಂದು ವಿಷ್ಣುವರ್ಧನ್, ಒಂದು ರಾಜಕುಮಾರ್, ಒಂದು ಅಂಬರೀಶ್ ಮತ್ತೊಂದು ದೇವರ ಚಿತ್ರ ಆಗ ಕಂಪಲ್ಸರಿ. ಯಾರ ಸಿನೆಮಾವೇನಾದರೂ ಮಿಸ್ಸಾದರೆ ಅಲ್ಲಿಗೆ ಆವತ್ತು ಸಿನಿಮಾ ನಡೆಯುತ್ತಲಿರಲಿಲ್ಲ. ಬದಲಿಗೆ ಆ ಅಭಿಮಾನಿತಂಡದವರು ಶೋ ಶುರುವಾಗುವವರೆಗೆ ಸುಮ್ಮನಿದ್ದು ಸ್ವಲ್ಪ ಹೊತ್ತಿಗೆ ಊರಾಚೆ ಹೋಗಿ ಲೈಟ್ ಕಂಭಕ್ಕೆ ಕಲ್ಲು ಹೊಡೆದು ಫ್ಯೂಸ್ ಹಾರಿಹೋಗುವಂತೆ ಮಾಡುತ್ತಿದ್ದರು. ಜಿದ್ದಾಜಿದ್ದಿಗೆ ಬಿದ್ದ ಅಭಿಮಾನಿ ಬಳಗದವರು ಲೈಟ್ ಕಂಭದ ಹತ್ತಿರ ಒಂದು ಗುಂಪನ್ನು ಕಾವಲಿಗೆ ನಿಲ್ಲಿಸುತ್ತಿದ್ದರು. ಅಲ್ಲೊಂದು ಜಟಾಪಟಿ ಶುರುವಾಗುತ್ತಿತ್ತು. ಅದು ಸಾಧ್ಯವಾಗದೆ ಹೋದರೆ ಸಿನಿಮಾ ನೋಡುತ್ತಾ ಕುಳಿತವರಿಗೆ ದೂರದಿಂದ ಕಲ್ಲು ಹೊಡೆಯುವ ಮಣ್ಣು ಎರಚುವ ಚೇಷ್ಟೆಗಳನ್ನೂ ಮಾಡಿ ಸಿನಿಮಾ ವೀಕ್ಷಣೆಗೆ ಭಂಗ ತರುತ್ತಿದ್ದರು. ಈ ಎಲ್ಲಾ ಕಾರಣಗಳಿಂದ ಉಭಯಸಂಘದ ಅಭಿಮಾನಿಗಳು ಈ ಒಮ್ಮತದ ನಿರ್ಣಯಕ್ಕೆ ಬಂದು ಯಾರೇ ಸಮಾರಂಭ ಮಾಡಿದರೂ ಮೂರು ಸ್ಟಾರ್ ನಟರುಗಳ ಸಿನೆಮಾವನ್ನು ತರುವ ಮೂಲಕ ಸೌಹಾರ್ದತೆ ಕಾಪಾಡಿಕೊಳ್ಳುವ ದೊಡ್ದತನ ತೋರಿದ್ದರು. ಆದರೆ ಇದರಲ್ಲಿಯೂ ಕುಚೇಷ್ಟೆಗಳು ಇಲ್ಲದಿರಲಿಲ್ಲ. ರಾಜ್ಕುಮಾರ್ ಅಭಿಮಾನಿಗಳು ಸಿನಿಮಾ ತಂದರೆ ಗಂಧದಗುಡಿ ತಂದು ಅದರಲ್ಲಿ ವಿಷ್ಣುವರ್ಧನ್ ಅವರನ್ನು ಖಳನಾಯಕನ್ನಾಗಿ ನೋಡಿ ವಿಚಿತ್ರ ಖುಷಿ ಪಡುತ್ತಿದ್ದರು. ಹಾಗೆಯೇ ವಿಷ್ಣು ಅಭಿಮಾನಿಗಳು ಶೂ ಏರ್ಪಡಿಸಿದರೆ ರಾಜಕುಮಾರ್ ರವರ ಫೈಟ್ ಜಾಸ್ತಿಯಿಲ್ಲದ ಮಜಾ ಕೊಡದ ಚಿತ್ರವನ್ನು ತರುತ್ತಿದ್ದರು. ಯಾರ ಸಿನಿಮಾ ಮೊದಲಿಗೆ ಪ್ರದರ್ಶನವಗುತ್ತದೋ ಅವರ ಅಭಿಮಾನಿಗಳು ಸಿನಿಮಾ ವೀಕ್ಷಣೆ ಏರ್ಪಡಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆದರೆ ಊರ ಹಿರಿಯರು, ಹೆಂಗಸರು ಮೊದಲಿಗೆ ದೇವರಸಿನೆಮಾ ಹಾಕಿಬಿಡಿ, ಆಮೇಲೆ ನಿಮಗಿಷ್ಟ ಬಂದದ್ದನ್ನು ಹಾಕಿ ಎಂದು ಜಗಳ ಮಾಡುವ ಸನ್ನಿವೇಶವೂ ಇರುತ್ತಿತ್ತು.

ಪುಟಾಣಿ ಸಫಾರಿ ಚಿತ್ರದಲ್ಲೂ ಇಂತಹದ್ದೊಂದು ಸನ್ನಿವೇಶವಿತ್ತು. ದರ್ಶನ್ ಮತ್ತು ಸುದೀಪ್ ಅಭಿಮಾನಿಗಳಾದ ಇಬ್ಬರು ಹುಡುಗರು ಜಗಳವಾಡುವ ದೃಶ್ಯ. ನಾವು ಸಿನಿಮಾ ಶೂಟ್ ಮಾಡುವ ಸಮಯಕ್ಕೆ ದರ್ಶನ್ ಮತ್ತು ಸುದೀಪ್ ಇಬ್ಬರ ನಡುವ ಗೆಳೆತನ ತುಂಬಾ ಚೆನ್ನಾಗಿತ್ತು.ಆದರೆ ಬಿಡುಗಡೆಯ ಸಮಯ ಹತ್ತಿರಕ್ಕೆ ಬರುತ್ತಿದ್ದಂತೆ ಇಬ್ಬರ ನಡುವಣ ಗೆಳೆತನ ಅಷ್ಟು ಸರಿಹೋಗಲಿಲ್ಲ. ದರ್ಶನ್ ನಾನು ಸುದೀಪ್ ಗೆಳೆಯನಲ್ಲ ಎಂಬರ್ಥದ ಟ್ವೀಟ್ ಮಾಡಿಬಿಟ್ಟರು.ಆರೋಗ್ಯಕರವಾಗಿದ್ದ ಈ ದೃಶ್ಯ ಆನಂತರ ಗೊಂದಲಕ್ಕೆ ಕಾರಣವಾಗಿತ್ತು. ಸುಖಾಸುಮ್ಮನೆ ವಾಗ್ವಾದ ವಿವಾದ ಆಗಿಬಿಡುತ್ತದೆ ಎನಿಸಿತು. ತುಂಬಾ ಜನ ಆಗಲಿ ಬಿಡಿ, ಅದರಿಂದ ನಿಮ್ಮ ಸಿನಿಮಾಕ್ಕೆ ಪ್ರಚಾರ ಸಿಗುತ್ತದೆ ಎಂದೂ ಕೂಡ ಸಲಹೆ ನೀಡಿದರು, ಅದನ್ನೇ ಸುದ್ದಿ ಮಾಡಿ ಎಂದರು. ಒಂದು ಸಿನಿಮಾದ ಪ್ರಚಾರ ಏನೇ ಆದರೂ ಧನಾತ್ಮಕವಾಗಿರಬೇಕು ಎಂಬುದು ನನ್ನ ಆಶಯ. ಸುಖಾಸುಮ್ಮನೆ ವಿವಾದ ಹುಟ್ಟು ಹಾಕುವುದು ಆ ಮೂಲಕ ಸಿನೆಮಾವನ್ನು ಪ್ರಮೋಟ್ ಮಾಡುವುದು ಮನಸ್ಸಿಗೆ ಒಗ್ಗುವುದೂ ಇಲ್ಲ. ಹಾಗಾಗಿ ಆ ಎರಡು ವಾಕ್ಯಗಳನ್ನು ಕತ್ತರಿಸಿದೆ.