Saturday, June 5, 2021

ಉಮ್ಮ

 ನಮ್ಮ ಶಾಲೆಗೆ  ಉಮ್ಮ  ಚುಚ್ಚಲು  ಬರುತ್ತಾರೆ ಎನ್ನುವ ಘೋಷಣೆ  ಅದು ಯಾವ ಮೂಲೆಯಿಂದಲೋ  ತೇಲಿ ನಮ್ಮಗಳ ಕಿವಿಗೆ ಬಿದ್ದು ಬಿಡುತ್ತಿತ್ತು.  ನಾವೆಲ್ಲಾ  ಹೆದರಿ ಗಡಗಡನೆ ನಡುಗಿಹೋಗುತ್ತಿದ್ದೆವು. ನಾವು ಶಾಲೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವ ಸಂಚು ಮಾಡುವ ಮೊದಲೇ ನಮ್ಮ ಕೋಣೆಯ ಬಾಗಿಲನ್ನು ಹೊರಗಡೆಯಿಂದ ಲಾಕ್  ಮಾಡಿಬಿಡುತ್ತಿದ್ದರು. ಆ ನಂತರ ಇಡೀ  ತರಗತಿಯಲ್ಲಿ ಅರಣ್ಯ ರೋಧನ. ಒಬ್ಬರ ಮುಖ್ಯ ಒಬ್ಬರು ನೋಡಿಕೊಂಡು ಅಳುತ್ತಾ ಗೋಳಾಡುತ್ತ ಕುಳಿತುಕೊಳ್ಳುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲಿಯೇ ಬಾಗಲಿನಿನ ಶಬ್ಧ ವಾಗುತ್ತಿದ್ದಂತೆ ನಾವು ಹಿಂದೆ ಹಿಂದೆ ಸರಿದು ಮೂಲೆ ಮೂಲೆ ಸೇರಿಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಆದರೆ ಇಬ್ಬರು ನಮ್ಮ ಸೀನೀಯರ್ರು ಗಳು ಒಳಗೆ ನುಗ್ಗಿ, ಹಾಜರಾತಿ ಕ್ರಮಸಂಖ್ಯೆ ಯ ಪ್ರಕಾರ ಹೆಸರನ್ನು ಕೂಗಿ, ಮೂಲೆಯಲ್ಲಿ ಅಡಗಿಕೊಳ್ಳಲು ಯತ್ನಿಸುತ್ತಿದ್ದವನನ್ನು  ಎಲೆದಾಡಿ, ಕೊನೆಗೆ  ಇಬ್ಬರು ಸೇರಿ ಹೊತ್ತುಕೊಂಡೇ ಹೋಗಿ ಬಿಡುತ್ತಿದ್ದರು. ಸೀನೀಯರುಗಳಿಗೆ ಕಿಂಚಿತ್ತೂ ಕರುಣೆಯಿಲ್ಲವೇ..? ಎಂಥ ಕಟುಕರು ಇವರು..? ಅವನ ರೋಧನವಂತೂ ಹೇಳ ತೀರದು. ಇನ್ನೂ ಕೆಲವೇ ಕ್ಷಣಗಳಲ್ಲಿ  ನೇಣು ಗಂಬ ಏರುವವನಂತೆ ಅಳುತ್ತಾ ಸಾಗುತ್ತಿದ್ದ, ನಾವೆಲ್ಲರೂ  ಮುಂದೆ ನಮ್ಮ ಸ್ಥಿತಿಯನ್ನು ಕಲ್ಪಿಸಿಕೊಂಡು ಇನ್ನೂ ಜೋರಾಗಿ ಅಳುತ್ತಿದ್ದೆವು. 

ಏಕೆಂದರೆ ಉಮ್ಮ ತೆಗೆದುಕೊಳ್ಳುವುದರಲ್ಲಿ ಭಯವಿತ್ತು. ಇಂಜೆಕ್ಷನ್ ಚುಚ್ಚಿ ಸಿಕೊಳ್ಳುವುದೇ ಭಯ. ಆನಂತರ ತೋಳು ಊದಿಕೊಳ್ಳುತ್ತಿತ್ತು. ಜ್ವರ ಬರುತ್ತಿತ್ತು. 

ಆದರೆ ಆರನೆಯ, ಏಳನೆಯ ತರಗತಿಗೆ ಬರುವಷ್ಟರಲ್ಲಿ  ನಮಗೆ ಉಮ್ಮ  ಭಯದ ಸಂಗತಿಯಾಗಿರಲಿಲ್ಲ.  ಬದಲಿಗೆ ಅದು ಬಂದರೆ ಸಾಕು ಎನ್ನುವಷ್ಟರ ಮಟ್ಟಿಗೆ ಅಪೇಕ್ಷೆ ಉಂಟಾಗಿತ್ತು.  ತೋಳು ಊದಿಕೊಳ್ಳುವುದರಿಂದ ಮನೆಯಲ್ಲಿ ಕೆಲಸ ಹೇಳುತ್ತಿರಲಿಲ್ಲ. ಜ್ವರದ ನೆಪವನ್ನು  ಹೇಳಿ, ಶಾಲೆಗೆ ಬಂಕ್ ಹೊಡೆಯಬಹುದಿತ್ತು. ಅಲ್ಲದೆ ಈ  ಬಂಕ್  ರಜಾವನ್ನು ವಾರದವರೆಗೆ ವಿಸ್ತರಿಸಿಕೊಳ್ಳ ಬಹುದಿತ್ತು.  ಜ್ವರ, ತಲೆನೋಯುತ್ತಿದೆ ಎಂದು ಹೇಳಿ, ಸುಮ್ಮನೆ ಮಲಗಿಕೊಂಡರೆ, ಮಲಗಿಕೊಂಡ ಜಾಗಕ್ಕೆ ಹಾಲು, ಊಟ ಇತ್ಯಾದಿಗಳು ಸಾರಬರಾಜಾಗುತ್ತಿತ್ತು. ಇಷ್ಟೆಲ್ಲಾ  ಸವಲತ್ತು  ತಂದುಕೊಂಡುವ ಉಮ್ಮವನ್ನು  ತಪ್ಪಿಸಿ ಕೊಳ್ಳ ಲಾದೀತೇ.. 

ಈಗ ನಾವೇ ಸೀನೀಯರ್  ಆಗಿದ್ದೇವೆಲ್ಲಾ..? ಆಳುವ ಹುಡುಗರನ್ನು ಕಿಂಚಿತ್ತೂ ಕರುಣೆ ತೋರಿಸದೆ ಹೊತ್ತು ಕೊಂಡು ಹೋಗಿ, ಚುಚ್ಚುವ ಡಾಕ್ಟರ್ , ನರ್ಸ್ ಮುಂದೆ ಕೂರಿಸಿದರೆ, ಆ ಹುಡುಗರು ಸಾಕ್ಷಾತ್ ಯಮನನ್ನು ಕಂಡ ಹಾಗೆ ಕೂಗಾಡಿದರೆ, ನಾವು ಬಿದ್ದು ಬಿದ್ದು ನಗುತ್ತಿದ್ದೆವು.   

ಆ ವ್ಯಾಕ್ಸಿನೇಶನ್ ಯಾವುದು..? ಯಾವುದಕ್ಕೆ ಹಾಕಿಸುತ್ತಿದ್ದರು ಎಂಬುದು ನಮಗವತ್ತು ಗೊತ್ತಿರಲಿಲ್ಲ.  ಅದಕ್ಕೆ ಉಣ್ಣೆ, ಉಮ್ಮ ಎಂದು ಯಾಕೆ ಕರೆಯುತ್ತಿದ್ದರು..? ಬಹುಶಃ ಮಕ್ಕಳಿಗೆ ಇಂಜೆಕ್ಷನ್ ಅನ್ನು ಸಾಮಾನ್ಯವಾಗಿ ಅಮ್ಮಂದಿರು ಉಮ್ಮ  ಚುಚ್ಚು ವುದು ಎಂದು ಹೇಳಿಕೊಡುತ್ತಿದ್ದರು. ಅದೇ ಆಡು ಭಾಷೆಯಾಗಿ ಬಂದಿತ್ತೇನೋ..? 

ನಾನು ವ್ಯಾಕ್ಸಿ ನೇಶನ್ ಹಾಕಿಸಿ ಕೊಳ್ಳುವಾಗ ಇದೆಲ್ಲಾ ನೆನಪಾಯಿತು.  


No comments:

Post a Comment