ಯಾರೇ ಆಗಲಿ ತಂದೆ ಕಳೆದುಕೊಂಡರೆ ಅದರ ದುಃಖವಿದೆಯಲ್ಲ ಅದನ್ನು ಭರಿಸುವುದು ಸುಲಭದ
ಕೆಲಸವಲ್ಲ. ನನ್ನ ತಂದೆಯೆಂದರೆ ನನಗೆ ಪ್ರಾಣ. ನಾವಿಬ್ಬರೂ ಅಪ್ಪ-ಮಕ್ಕಳ ತರಾ ಇರಲೇ ಇಲ್ಲ.
ಗೆಳೆಯರಂತಿದ್ದೆವು. ನಮ್ಮ ಮನೆಯಲ್ಲಿ ಅಮ್ಮ ಒಂದು ಕಡೆಯಾದರೆ ನಾನು-ಅಪ್ಪ ಒಂದು ಕಡೆ. ನಾವಿಬ್ಬರು
ಊರೆಲ್ಲಾ ಸುತ್ತಾಡುತ್ತಿದ್ದೆವು. ಅಪ್ಪ ನನ್ನನ್ನು ಬೇಟೆಯಾಡಲು ಕರೆದುಕೊಂಡು ಹೋಗುತ್ತಿದ್ದರು.
ಬೇಟೆಯಾಡುವುದರಲ್ಲಿ ಅಪ್ಪ ಎತ್ತಿದ ಕೈ. ಕೆರೆಯ ಪಕ್ಕದ ಕಲ್ಲಿನ ಮೇಲೆ ಕುಳಿತ ಹಕ್ಕಿಗೆ ಅಪ್ಪ
ಗುರಿಯಿಡುತ್ತಿರಲಿಲ್ಲ. ಅದರ ತಲೆಯಿಂದ ಸ್ವಲ್ಪ ಮೇಲೆ ಶೂನ್ಯದತ್ತ ಗುರಿ ನೆಟ್ಟಿರುತ್ತಿದ್ದರು.
ಏನೇ ಆದರೂ ಕಣ್ಣಿನ ದೃಷ್ಟಿಯನ್ನು ಅಲ್ಲಿಂದ ಕೀಳುತ್ತಿರಲಿಲ್ಲ. ಹಕ್ಕಿ ತಾನು ಕುಳಿತ ಜಾಗದಿಂದ
ರೆಕ್ಕೆ ಬಡಿಯುತ್ತ ಮೇಲೆ ಹಾರಲು ಪ್ರಯತ್ನಿಸುತ್ತಿದ್ದಂತೆ ಗುಂಡು ಹೊಡೆಯುತ್ತಿದ್ದರು. ಮೇಲೆ
ಹಾರಿದ ಹಕ್ಕಿ ಆಯಾ ತಪ್ಪಿ ಅಲ್ಲೇ ಸತ್ತು ಕೆಳಬೀಳುತ್ತಿತ್ತು. ನನಗೂ ಗುರಿಯಿಡಬೇಕಾದರೆ ಏನು
ಮಾಡಬೇಕು, ಅದೆಂತಹ ಏಕಾಗ್ರತೆ ಬೇಕು ಎಂಬುದನ್ನು ಪ್ರಾಯೋಗಿಕವಾಗಿ ಕಲಿಸಿದ್ದರು.
ಇಂತಹ ಅಪ್ಪ ಅಪಘಾತದಲ್ಲಿ ಸತ್ತರೆಂದಾಗ ನನಗೆ ನಂಬಲೇ ಆಗಿರಲಿಲ್ಲ. ಅವರ ದೇಹ, ಅದರಲ್ಲೂ ಮುಖ
ಅಜ್ಜುಗುಜ್ಜಾಗಿತ್ತು. ಅವರ ಅಂತ್ಯಸಂಸ್ಕಾರದಂದು ನನಗೆ ಅವರು ಸತ್ತರೆಂಬುದನ್ನು ಒಪ್ಪಿಕೊಳ್ಳಲು
ಸಾಧ್ಯವೇ ಆಗಿರಲಿಲ್ಲ. ಆದರೆ ನನಗೆ ಇನ್ನೂ ಆಶ್ಚರ್ಯವಾದದ್ದು ಅವರ ತಮ್ಮ ಅಂದರೆ ನಮ್ಮ ಚಿಕ್ಕಪ್ಪ
ಅವರು ಸತ್ತ ದಿನ ಪ್ರತ್ಯಕ್ಷವಾದದ್ದು. ಅಲ್ಲಿಯವರೆಗೆ ನಾನು ನನ್ನ ಚಿಕ್ಕಪ್ಪನ ಮುಖ ನೋಡೇ
ಇರಲಿಲ್ಲ. ಫೋಟೋದಲ್ಲೂ. ಅಪ್ಪ ಮಾತ್ರ ಒಂದೆರೆಡು ಸಾರಿ ಅವರ ಬಗ್ಗೆ ಹೇಳುತ್ತಾ, ‘ಅವನು ಊರೂರು
ಸುತ್ತುತ್ತಾ ಇರುತ್ತಾನೆ, ಇಡೀ ಜಗತ್ತೆಲ್ಲವನ್ನೂ ಸುತ್ತಿದ್ದಾನೆ..ಯಾವಾಗ ಬರುತ್ತಾನೋ
ಗೊತ್ತಿಲ್ಲ...ಈಗ ಸಧ್ಯಕ್ಕೆ ಆಫ್ರಿಕಾದಲ್ಲಿದ್ದಾನೆ ..’ಎಂದಿದ್ದರು.
ಅಪ್ಪ ಸತ್ತ ನಂತರ ನಮ್ಮ ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯಲು ಪ್ರಾರಂಭಿಸಿದವು...ಅಥವಾ
ಚಿಕ್ಕಪ್ಪ ನಮ್ಮ ಮನೆಯಲ್ಲಿ ನೆಲೆ ನಿಂತ ಮೇಲೆ ಎನ್ನಬಹುದು. ಕೇವಲ ಎರಡು ಮೂರು ದಿನಗಳವರೆಗೆ ಇರಲು
ಬಂದ ಚಿಕ್ಕಪ್ಪ ಆನಂತರ ಎಲ್ಲಾ ಸರಿ ಹೋಗುವವರೆಗೆ ಇಲ್ಲೇ ಇರುತ್ತೇನೆ ಎಂದರು. ಯಾಕೋ ಗೊತ್ತಿಲ್ಲ.
ಆತನನ್ನು ಕಂಡರೆ ನನಗೆ ವಿಚಿತ್ರ ಭಯಾ, ಹಿಂಸೆಯಾಗುತ್ತಿತ್ತು. ಅಮ್ಮ ಚಿಕ್ಕಪ್ಪನೊಂದಿಗೆ
ಅಗತ್ಯಕ್ಕಿಂತ ಹೆಚ್ಚು ಸಲುಗೆಯಿಂದಿರುವುದನ್ನು ನನಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದನ್ನು
ಬಾಯಿತೆರೆದು ಅಮ್ಮನಿಗೆ ಹೇಳಿದರೂ ಅಮ್ಮ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಚಿಕ್ಕಪ್ಪನ
ವ್ಯಕ್ತಿತ್ವದಲ್ಲಿ ವಿಚಿತ್ರವಾದ ಆಕರ್ಷಣೆಯಿತ್ತು. ಮಾತಿಗೆ ಮೊದಲು ಮುಗುಳ್ನಗುತ್ತಿದ್ದ
ಚಿಕ್ಕಪ್ಪ ಯಾರನ್ನು ಬೇಕಾದರೂ ಮರುಳು ಮಾಡಿಬಿಡುತ್ತಿದ್ದ. ಅದೊಂದು ದಿನ ಅಡಿಗೆಯವರ ಜೊತೆ ಜಗಳ
ಮಾಡಿದ್ದ ಚಿಕ್ಕಪ್ಪ. ಆನಂತರ ಅಡಿಗೆಯವರು ಬರಲೇ ಇಲ್ಲ.ಬಹುಶ ಕೆಲಸ ಬಿಟ್ಟರೆಂದು ನಾನು
ತಿಳಿದುಕೊಂಡಿದ್ದೆ. ಆದರೆ ಮುಂದೊಂದು ದಿನ ನನಗೆ ಗೊತ್ತಾದ ವಿಷಯವೆಂದರೆ ಅಡಿಗೆಯವರು
ನಾಪತ್ತೆಯಾಗಿದ್ದಾರೆ ಎಂದು. ಆನಂತರ ನನ್ನಜ್ಜಿ ದೂರದ ಊರಿಂದ ಬಂದವರು ಚಿಕ್ಕಪ್ಪನ ಬಗ್ಗೆ ಏನೋ
ಹೇಳಲು ಪ್ರಯತ್ನಿಸಿದರಾದರೂ ಅಮ್ಮ ಕೇಳದೆ ಅವಳನ್ನೇ ಬೈದುಕಳುಹಿಸಿದ್ದಳು. ಆದರೆ ನನ್ನ ಬಳಿ ಬಂದ
ಅಜ್ಜಿ ಅವಳ ಫೋನ್ ಸಂಖ್ಯೆಯನ್ನು ನನಗೆ ಒಂದು ಚೀಟಿಯಲ್ಲಿ ಬರೆದುಕೊಟ್ಟು ಫೋನ್ ಮಾಡು
ಮಾತಾಡುವುದಿದೆ ಎಂದರು.
ಅದೊಂದು ದಿನ ಚಿಕ್ಕಪ್ಪ ಮತ್ತು ಅಮ್ಮ ಅಗತ್ಯಕ್ಕಿಂತ ಹೆಚ್ಚು ಹತ್ತಿರವಾಗಿದ್ದನ್ನು ಕಂಡಾಗ
ನನಗೆ ಎಂಥದೋ ಆವೇಶ ನನ್ನಾವರಿಸಿತ್ತು. ಅವತ್ತು ಆ ಆವೇಶದಲ್ಲಿ ಹುಚ್ಚುಚ್ಚಾಗಿ ವರ್ತಿಸಿದ ನನಗೇನು
ಗೊತ್ತಿತ್ತು..ಅದು ನನ್ನ ಸಹಪಾಠಿಯ ಸಾವಿಗೆ ಕಾರಣವಾಗುತ್ತದೆ ಎಂದು. ಆದರೆ ನನ್ನ ಕಣ್ಣ ಮುಂದೆಯೇ
ನಡೆದ ಆ ಕೊಲೆ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಚಿಕ್ಕಪ್ಪ ಸೊಂಟದ ಬೆಲ್ಟನ್ನು ಅವನ
ಕುತ್ತಿಗೆಗೆ ಬಿಗಿದು ಎರಡೂ ಕೈಯಲಿ ಬೆಲ್ಟ್ ಎಳೆಯುತ್ತ ಕಾಲಿನಿಂದ ಅವನ ಸೊಂಟದ ತುಳಿಯುತ್ತಾ
ಸಾಯಿಸಿದ್ದರು. ಸತ್ತ ನಂತರ ಚಿಕ್ಕಪ್ಪ ಲವಲೇಶವೂ ಅದುರಿರಲಿಲ್ಲ. ಸಾವಧಾನವಾಗಿ ಅವನ ಹೆಣವನ್ನು
ಬಟ್ಟೆಯಲ್ಲಿ ಸುತ್ತಿ ಕಾರಲ್ಲಿ ಹೊತ್ತು ತಂದು
ನಮ್ಮ ಮನೆಯ ಹಿಂಭಾಗದ ವಿಶಾಲವಾದ ಹುಲ್ಲು ಮೈದಾನದಲ್ಲಿ ಹಳ್ಳ ತೆಗೆದು ಹೂತಿದ್ದರು. ಅದಾದ ನಂತರ ಅಲ್ಲೇ
ಇದ್ದ ದೊಡ್ಡ ಕಲ್ಲುಬಂಡೆಯನ್ನು ಉರುಳಿಸಿಕೊಂಡು ಬಂದು ಹೆಣ ಹೂತ ಜಾಗದ ಮೇಲಿಟ್ಟಿದ್ದದ್ದು ಅವರ
ಬುದ್ದಿವಂತಿಕೆಗೆ ಸಾಕ್ಷಿ ಎನ್ನಬಹುದು. ಯಾಕೋ ನನಗೆ ಅನುಮಾನ ಬಂದು ನೋಡಿದಾಗ ಅಲ್ಲಿ ಅಂತಹುದೇ
ಮೂರು ಕಡೆ ಬಂಡೆಕಲ್ಲು ಜೋಡಿಸಿಟ್ಟಿದ್ದು ಕಾಣಿಸಿತ್ತು..ಅಂದರೆ...ಅಜ್ಜಿ..! ಆ ತಕ್ಷಣ ನನ್ನ
ಮೊಬೈಲಿನಿಂದ ಅಜ್ಜಿ ಕೊಟ್ಟಿದ್ದ ನಂಬರಿಗೆ ಡಯಲ್ ಮಾಡಿದ್ದೆ. ಭೂಗರ್ಭದಿಂದ ಅದರ ರಿಂಗ್ ಟೋನ್
ಕೇಳಿಸಿದ್ದು ನನ್ನ ಭ್ರಮೆಯಾ..?
ಆ ದಿನದ ನಂತರ ನನಗೆ ಅನುಮಾನ ಬರಲು ಶುರುವಾಯಿತು. ನಿಜಕ್ಕೂ ಚಿಕ್ಕಪ್ಪ ಯಾರು? ಎಲ್ಲಿಂದ
ಬಂದವರು. ಕಾಣೆಯಾದ ವ್ಯಕ್ತಿಗಳ ಹಿಂದೆ ಚಿಕ್ಕಪ್ಪನ ಕೈವಾಡ ಇರಬಹುದಾ? ಸಧ್ಯಕ್ಕೆ ಚಿಕ್ಕಪ್ಪ ನಮ್ಮ
ಮನೆಯಲ್ಲಿ ಉಳಿದಿರುವ ಉದ್ದೇಶ ಏನು? ಹಾಗಾದರೆ ಚಿಕ್ಕಪ್ಪ ದುಷ್ಟನಾ..? ಜಗತ್ತನ್ನು ಸುತ್ತಿ
ಬಂದಂತಹ ವ್ಯಕ್ತಿಗೆ ಇಂತಹ ದುರ್ಗುಣ ಇರಲು ಸಾಧ್ಯವಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ
ಶೀಘ್ರದಲ್ಲಿ ಕಂಡುಕೊಳ್ಳಬೇಕಿತ್ತು. ಅದೂ ಮತ್ಯಾರಾದರೂ ಕಾಣೆಯಾಗುವ ಮುನ್ನಾ..? ಅಥವಾ ನಾನೇ
ಇಲ್ಲವಾಗುವ ಮುನ್ನಾ..?
2013 ರಲ್ಲಿ ತೆರೆಗೆ ಬಂದ ಸ್ಟೋಕರ್ ಕೋರಿಯನ್ ನಿರ್ದೇಶಕ ಚಾನ್ ವೂಕ್ ಪಾರ್ಕ್ ನಿರ್ದೇಶನದ
ಹಾಲಿವುಡ್ ಚಿತ್ರ. ವೆಂಜಿಯನ್ಸ್ ಟ್ರೈಲಾಜಿ ಎಂದೆ ಪ್ರಖ್ಯಾತವಾಗಿರುವ ಕೋರಿಯನ್ ಚಿತ್ರಗಳಾದ
ಸಿಂಪಥಿ ಫಾರ್ ಲೇಡಿ ವೆಂಜಯಾಯ್ನ್ಸ್, ಸಿಂಪಥಿ ಫಾರ್ ಮಿಸ್ಟರ್ ವೆಂಜಿಯನ್ಸ್, ಓಲ್ಡ್ ಬಾಯ್ ಚಿತ್ರಗಳನ್ನು
ನಿರ್ದೇಶಿಸಿ ಹೆಸರು ಮಾಡಿದವನು. ಸ್ಟೋಕರ್ ಮಂದಗತಿ ನಿರೂಪನೆಯಿರುವ ಕುತೂಹಲಕಾರಿ ಚಿತ್ರ. ನಿಕೊಲ್
ಕಿಡ್ಮನ್ ಅಭಿನಯಿಸಿರುವ ಈ ಚಿತ್ರದ ಅವಧಿ ಒಂದೂವರೆ ಘಂಟೆಗಳು ಮಾತ್ರ. ತಣ್ಣನೆಯ ಥ್ರಿಲ್ಲರ್
ಪ್ರಿಯರಿಗೆ ಸ್ಟೋಕರ್ ತಕ್ಕ ಸಿನಿಮಾ ಎನ್ನಬಹುದು.
in my list now!! thank u
ReplyDelete