ಕೊರಿಯನ್ ಭಾಷೆಯಲ್ಲಿ
ಒಂದಷ್ಟು ಅತ್ಯುತ್ತಮ ನಟ ನಟಿಯರಿದ್ದಾರೆ. ಅವರುಗಳನ್ನು ಮುಖ ನೋಡಿ ಕಂಡುಹಿಡಿಯಬಹುದೇ ಹೊರತು
ಹೆಸರುಗಳನ್ನೂ ನೆನಪಲ್ಲಿರಿಸಿಕೊಳ್ಳುವುದು ಕಷ್ಟ. ಮೊದಲಿಗೆ ಅದರ ಉಚ್ಚಾರಣೆ ಸರಿಯಿದೆಯೇ ಎಂಬುದೇ
ಗೊತ್ತಾಗುವುದಿಲ್ಲ. ಅದರಲ್ಲೂ ನನಗೆ ನಟ ಲಿಂ ಜೆಯೊಂಗ್ ಚಾಂಗ್ ಎಂದರೆ ಬಹಳ ಇಷ್ಟ. ಅವನು
ಅಭಿನಯಿಸಿದ ಸೆಕ್ಸ್ ಈಸ್ ಝೀರೋ ನೋಡಿದ ಮೇಲೆ ಅವನ ಅಭಿನಯಕ್ಕೆ ಮರುಳಾಗಿಬಿಟ್ಟೆ. ಆನಂತರ ಅದೇ
ಚಿತ್ರದ ಮುಂದಿನ ಸರಣಿಯಾದ ಸೆಕ್ಸ್ ಈಸ್ ಝೀರೋ ಭಾಗ-2 ನೋಡಿದೆ. ಆ ಚಿತ್ರವೇನೂ ಅಷ್ಟು
ಪರಿಣಾಮಕಾರಿಯಾಗಿರಲಿಲ್ಲ. ಆದರೆ ಲಿಂ ನ ಅಭಿನಯವಿತ್ತಲ್ಲ..ಇಡೀ ಸಿನಿಮಾವನ್ನು ಒಂಚೂರು ಬೋರ್ ಹೊಡೆಸದಿರುವ
ಹಾಗೆ ಮಾಡಿಬಿಟ್ಟಿತ್ತು. ಆನಂತರ ಲಿಂ ಜೆಯೊಂಗ್ ಚಾಂಗ್ ಅಭಿನಯದ ಚಿತ್ರಗಳನ್ನು ಹುಡುಕಿ ಹುಡುಕಿ
ನೋಡತೊಡಗಿದೆ. ಸಿನಿಮಾ ಹೇಗೆ ಇರಲಿ ಅವನನ್ನು ತೆಗೆದುಹಾಕುವ ಹಾಗಿಲ್ಲ. ಆತನ ಸಂಭಾಷಣೆ ಹೇಳುವ
ಪರಿ, ಅವನ ಮುಖ ಭಾವ ವ್ಯಕ್ತ ಪಡಿಸುವ ರೀತಿ ಅನನ್ಯ.
ಮಿರಾಕಲ್ ಆನ್ ಫಸ್ಟ್
ಸ್ಟ್ರೀಟ್ ಚಿತ್ರ ಕೂಡ ಅವನ ಅಭಿನಯದಿಂದಲೇ ಗಮನ ಸೆಳೆಯುತ್ತದೆ. ಕಥೆ ತುಂಬಾ ಸರಳವಾದದ್ದು. ಆದರೆ
ಲಿಮ್ ಅಭಿನಯ ಮಾತ್ರ ನಗೆ ಉಕ್ಕಿಸದಿದ್ದರೆ ಕೇಳಿ. ಚಿತ್ರದ ನಾಯಕಿಗೆ[ದಯವಿಟ್ಟು ಹೆಸರು ಕೇಳಬೇಡಿ]
ಬಾಕ್ಸಿಂಗ್ ಚಾಂಪಿಯನ್ ಆಗಬೇಕೆಂಬುದು ಆಸೆಯಲ್ಲ. ಗುರಿ. ಅದಕ್ಕೆ ಕಾರಣವಿದೆ. ಅವರ ಬೀದಿಗೆ ಕೆಲಸದ
ನಿಮಿತ್ತವಾಗಿ ನಾಯಕ ಬರುತ್ತಾನೆ. ನಾಯಕ ನಾಯಕಿ ಪ್ರಥಮ ಬಾರಿಗೆ ಬೇಟಿಯಾಗುವುದು ಶೌಚಾಲಯದಲ್ಲಿ.
ಅಲ್ಲಿಂದ ಶುರುವಾಗುವ ಪರಿಚಯ ಮುಂದೆ ಎಲ್ಲೆಲ್ಲೋ ಸಾಗುತ್ತದೆ. ನಾಯಕ ಕೆಲಸ ಮರೆತು ಆಕೆಗೆ ಇಡೀ
ಏರಿಯಾಗೆ ಸಹಾಯ ಮಾಡಲು ಮುಂದಾಗುತ್ತಾನೆ. ಕೊನೆಯಲ್ಲಿ ಇಬ್ಬರು ಒಂದಾಗುತ್ತಾರೆ. ಇವರ ಜೊತೆಗೆ
ಇನ್ನೊಂದು ಜೋಡಿಯ ಉಪಕಥೆಯೂ ಇದೆ. ಕಥೆ ಇಷ್ಟೇ ಆದರೂ ಹಾಸ್ಯ ದೃಶ್ಯಗಳಿಗೆ ಸಂಭಾಷಣೆಗಳಿಗೆ
ಕೊರತೆಯಿಲ್ಲ.
ನಾನು ಕಂಡಂತೆ ಒಂದು
ಕಮರ್ಷಿಯಲ್ ಚಿತ್ರಕ್ಕೆ ಚಿತ್ರಕಥೆಯನ್ನು ಕೊರಿಯನ್ನರು ಅದ್ಭುತವಾಗಿ ರಚಿಸುತ್ತಾರೆ. ಅದರಲ್ಲೂ
ರೋಮ್ಯಾಂಟಿಕ್ ಕಾಮಿಡಿ ಕೊರಿಯನ್ ಚಿತ್ರಗಳನ್ನು ನೋಡಬೇಕು. ಅವರ ದೇಸಿ ಸೊಗಡಿನ ಜೊತೆಗೆ ನಾಯಕ
ನಾಯಕಿ ಅಭಿನಯ ನಮ್ಮನ್ನು ಎಳೆದು ಕೂರಿಸಿಬಿಡುತ್ತದೆ. ಲಿಮ್ ಜೆಯೊಂಗ್ ಚಾಂಗ್ ಅಭಿನಯದ ಇನ್ನಿತರ
ಚಿತ್ರಗಳೆಂದರೆ ಸಿಸಿಲಿ 2 ಕೆ, ಗ್ರಾಂಡ್ ಮಾ ಗಾಂಗ್ಸ್ ಸ್ಟರ್ಸ್ ಮುಂತಾದವು. ಸಮಯ ಮಾಡಿಕೊಂಡು
ಒಮ್ಮೆ ನೋಡಿ...ನಿಮ್ಮನ್ನು ಲಿಮ್ ಮೋಡಿ ಮಾಡದಿದ್ದರೆ ಕೇಳಿ..!
No comments:
Post a Comment