ಇದೊಂದು ಘಟನೆಯನ್ನು ನನಗೆ ಯಾರೋ ಒಬ್ಬರು ಹೇಳಿದ್ದರು. ಒಮ್ಮೆ ಪೋಸ್ಟರ್ ವಿನ್ಯಾಸಕಾರನ ಹತ್ತಿರ ಹೋದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ತಮ್ಮ ಚಿತ್ರ ರಂಗನಾಯಕಿ ಗೆ ಸೂಕ್ತವಾದ ಪೋಸ್ಟರ್ ವಿನ್ಯಾಸ ಮಾಡಿಕೊಡುವಂತೆ ಕೇಳಿಕೊಂಡರು. ತಮ್ಮ ಚಿತ್ರದ ಕತೆಯನ್ನು ಅದರ ಆಶಯವನ್ನು ಸಂಪೂರ್ಣವಾಗಿ ವಿವರಿಸಿದ ಖ್ಯಾತರು ತಮಗೆ ಒಬ್ಬ ಕಲಾವಿದೆಯ ಜೀವನದಲ್ಲಿ ಮದುವೆ ಎಂಬುವುದು ಹೇಗೆ ಆಕೆಯ ಕಲೆಯನ್ನು ಮರೆಯುವಂತೆ ಮಾಡಿ ಬಿಟ್ಟಿತು ಅಥವಾ ಮದುವೆಯೇ ಆಕೆಯ ಕಲೆಗೆ ಹೇಗೆ ಅಡ್ಡಗಾಲು ಹಾಕಿತು ಎಂಬುದನ್ನು ಸೂಚ್ಯವಾಗಿ ವಿವರಿಸುವ ಪೋಸ್ಟರ್ ರಚಿಸುವಂತೆ ಹೇಳಿದಾಗ ಕಲಾವಿದರು ಗೊಂದಲಕ್ಕೆ ಬಿದ್ದರಂತೆ. ಅಷ್ಟೂ ಕತೆಯನ್ನು ಹೇಗೆ ಒಂದೇ ಚಿತ್ರದಲ್ಲಿ ತೋರಿಸುವುದು ಎನ್ನುವುದನ್ನು ದಿನಗಟ್ಟಲೆ ಯೋಚಿಸಿದರೂ ಹೊಳೆಯದಿದ್ದಾಗ ಅವರು ಪುಟ್ಟಣ್ಣ ಅವರಲ್ಲೇ ಅದಕ್ಕೊಂದು ಐಡಿಯಾ ಕೊಡುವಂತೆ ಕೇಳಿಕೊಂಡರು.
ಸ್ವಲ್ಪ ಹೊತ್ತು ಯೋಚಿಸಿದ ಪುಟ್ಟಣ್ಣ ಹೇಳಿದರಂತೆ.
" ಒಂದು ಕೆಲಸ ಮಾಡಿ ಒಂದು ಬಾಗಿಲು ಕಟಾ೦ಜನವನ್ನು ಮಧ್ಯದಲ್ಲಿ ಬರೆಯಿರಿ. ಅದರ ಮೇಲೆ ಅಂದರೆ ಹೊಸ್ತಿಲ ಮೇಲೆ ಒಂದು ಮದುವೆಯಾಗಿ ಬಂದ ಹೆಣ್ಣು ಮಗಳು ಒದೆಯುವ ಅಕ್ಕಿ ತುಂಬಿದ ಸೇರು ಇರಲಿ. ಒಂದು ತುದಿಯಿಂದ ಪ್ರಾರಂಭವಾಗುವ ಹೆಜ್ಜೆ ಗುರುತುಗಳು ಆ ಹೊಸ್ತಿಲನ್ನು ದಾಟಿ ಇನ್ನೊಂದು ತುದಿಗೆ ಸಾಗಲಿ. ಹೊಸ್ತಿಲ ಆಚೆಯಿರುವ ಹೆಜ್ಜೆಗಳು ವರ್ಣರಂಜಿತವಾಗಿರಲಿ. ಹೊಸ್ತಿಲ ಹತ್ತಿರಕ್ಕೆ ಬರುಬರುತ್ತಾ ಅವುಗಳ ಬಣ್ಣ ಕಡಿಮೆಯಾಗಲಿ. ಹೊಸ್ತಿಲು ದಾಟಿದ ಮೇಲೆ ಅದರ ಬಣ್ಣ ಸಂಪೂರ್ಣ ಮಾಸಿಹೋಗಲಿ .."
ಅಂದರೆ ಹೊಸ್ತಿಲಾಚೆಗಿನ ಹೆಜ್ಜೆಗಳು ಆಕೆಯ ಕಲಾಜೀವನದ ಹೆಜ್ಜೆಗಳು. ಹಾಗಾಗಿಯೇ ಬಣ್ಣದ ಲೋಕದ ಹೆಜ್ಜೆಗಳು, ಬಣ್ಣದ ಹೆಜ್ಜೆಗಳು. ಹೊಸ್ತಿಲು ಒಳ ಹೋಗುವುದು ಮದುವೆಯ ಸಂಕೇತ. ಆನಂತರ ಮಾಸಿದ ಬಣ್ಣದ ಹೆಜ್ಜೆ ಗುರುತುಗಳು...
ನಿಜಕ್ಕೂ ಇದಕ್ಕಿಂತ ಅದ್ಭುತವಾದ ಆ ಸಿನಿಮಾಕ್ಕೆ ಒಪ್ಪುವ ಪೋಸ್ಟರ್ ವಿನ್ಯಾಸ ಇಲ್ಲ ಎನ್ನಬಹುದು.
ಉಪೇಂದ್ರರ ಎ ಚಿತ್ರದ ಪೋಸ್ಟರ್ ಕೂಡ ಅದ್ಭುತಗಳ ಸಾಲಿಗೆ ಸೇರುತ್ತದೆ ಎನ್ನಬಹುದು.ಚಿತ್ರದಲ್ಲಿರುವ ನಾಯಕನ ತುಮುಲ, ನಿರೂಪಣೆಯಲ್ಲಿನ ಗೊಂದಲವನ್ನು ಪೋಸ್ಟರ್ ನಲ್ಲೆ ಸೂಕ್ಷ್ಮವಾಗಿ ವಿವರಿಸಿದ್ದು ಆ ಚಿತ್ರದ ಪೋಸ್ಟರ್ ವಿನ್ಯಾಸದ ವಿಶೇಷ ಎನ್ನಬಹುದು.
ಹಾಗೆಯೇ ಹಾಲಿವುಡ್ನ ಹ್ಯಾರಿಸನ್ ಫೋರ್ಡ್ ಅಭಿನಯದ ಫ್ಯೂಜಿಟಿವ್ ಚಿತ್ರದ ಪೋಸ್ಟರ್ ಗಮನಿಸಿ. ಚಿತ್ರದ ತುಂಬಾ ತಪ್ಪಿಸಿಕೊಂಡು ಓಡುವ ನಾಯಕ ಪೋಸ್ಟರ್ ನಲ್ಲೂ ಓಡುತ್ತಿರುತ್ತಾನೆ. ಚಿತ್ರದ ಕತೆಗೆ ತಕ್ಕಂತೆ ಆ ಪೋಸ್ಟರ್ ಇದೆ ಎನ್ನಬಹುದು. ಆದರೆ ಇತ್ತೀಚಿಗೆ ಬಂದ ಒಂದಷ್ಟು ಚಿತ್ರಗಳ ಪೋಸ್ಟರ್ ಗಳನ್ನೂ ಗಮನಿಸಿ. ನಾಯಕರು ಓಡುತ್ತಲೇ ಇರುತ್ತಾರೆ. ಮಹೇಶ್ ಬಾಬು ಅಭಿನಯದ ಪೋಕಿರಿ ಚಿತ್ರದಿಂದ ಪ್ರಾರಂಭವಾದ ಪೋಸ್ಟರ್ ಓಟ ಈಗಲೂ ನಡೆಯುತ್ತಲೇ ಇದೆ. ಇತ್ತೀಚಿಗೆ ಬಂದ ಕನ್ನಡವೂ ಸೇರಿದಂತೆ ಸುಮಾರಷ್ಟು ಚಿತ್ರಗಳ ನಾಯಕರು ಓಡುತ್ತಲೇ ಇರುವುದನ್ನು ನಾವು ಕಾಣಬಹುದು. ಅದೆಲ್ಲಿಗೆ ಓಡುತ್ತಿದ್ದಾರೆ, ಅದ್ಯಾಕೆ ಓಡುತ್ತಿದ್ದಾರೆ. ಇವರೇ ಯಾರನ್ನಾದರೂ ಅಟ್ಟಿಸಿಕೊಂಡು ಹೋಗುತ್ತಿದ್ದಾರಾ..? ಅಥವಾ ಇವರನ್ನು ಯಾರಾದರೂ ಅಟ್ಟಿಸಿಕೊಂಡು ಹೋಗುತ್ತಿದ್ದಾರಾ..? ಅಥವಾ ತಮಾಷೆಗೆ ಹೇಳುವುದಾದರೆ ಯಾವುದಾದರೂ ಸ್ಪರ್ದೆಯಲ್ಲಿ ಭಾಗವಹಿಸುತ್ತಿದ್ದಾರಾ? ಎಂಬ ಪ್ರಶ್ನೆ ಎದುರಾಗದೆ ಇರದು.
ಯಾಕೆಂದರೆ ಆ ಪೋಸ್ಟರ್ ಚಿತ್ರಗಳನ್ನೆಲ್ಲಾ ನಾನು ನೋಡಿದ್ದೇನೆ. ಅವುಗಳಲ್ಲಿ ಅಂತಹ ಓಟ ಇಲ್ಲ. ನಾಯಕ ಯಾವುದೋ ಹೊಡೆದಾಟದ ಸಂದರ್ಭದಲ್ಲಿ ಓಡಿರಬಹುದೇನೋ? ಅದು ಬಿಟ್ಟರೆ ಚಿತ್ರದ ಕತೆಗೆ ಓಟಕ್ಕೆ ಸಂಬಂಧವಿಲ್ಲ. ಪೋಸ್ಟರ್ ನಲ್ಲಿ ಅಷ್ಟು ಫೋರ್ಸ್ ನಿಂದ ಓಡುವ ನಾಯಕನ ಸಿನಿಮಾ ಎಷ್ಟೋ ಸಾರಿ ಆಮೆವೇಗದಲ್ಲಿದ್ದು ಜನರೇ ಚಿತ್ರಮಂದಿರದಿಂದ ಹೊರಕ್ಕೆ ಓಟಕಿತ್ತ ಉದಾಹರಣೆ ಇಲ್ಲದಿಲ್ಲ.
ಮೊನ್ನೆ ಬಿಡುಗಡೆಯಾದ ಚಿತ್ರಗಳ ಪೋಸ್ಟರ್ ಗಮನಿಸಿ. ನಾಯಕಿ ಕೈಹಿಡಿದು ಕೊಂಡು ಓಡುತ್ತಿರುವ, ಗುಂಪು ಕಟ್ಟಿಕೊಂಡು ಓಡುತ್ತಿರುವ, ಕೈ ಯಲ್ಲಿ ಆಯುಧ ಹಿಡಿದು ಓಡುತ್ತಿರುವ, ಖುಷಿಯಿಂದ ಓಡುತ್ತಿರುವ, ಕೋಪದಿಂದ ಮುನ್ನುಗ್ಗಿ ಓಡುತ್ತಿರುವ, ತಪ್ಪಿಸಿಕೊಂಡು ಓಡುತ್ತಿರುವ ಹೀಗೆ ತರಹೇವಾರಿ ಓಟಗಾರರನ್ನು ಕಾಣಬಹುದು.ಆದರೆ ಸಿನಿಮಾದ ಕತೆಯಲ್ಲಿ ಆತರಹದ ಪಲಾಯನ, ತಪ್ಪಿಸಿಕೊಳ್ಳುವಿಕೆ ಇಲ್ಲ. ಸಾಮಾನ್ಯ ಪ್ರೇಮಕತೆಯ ಚಿತ್ರವಾದರೂ ನಾಯಕ ಓಡಿದರೆ ಏನು ಮಾಡೋಣ.
ಅಥವಾ ಬೇಗ ಬನ್ನಿ ಇಲ್ಲವಾದರೆ ನಾನೂ ಚಿತ್ರಮಂದಿರದಿಂದಲೇ ಓಡಿಬಿಡುತ್ತೇನೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತಿರಬಹುದಾ?
No comments:
Post a Comment