Sunday, April 20, 2014

ನಾನು ಅವನಾಗ ಹೊರಟು......

ನಿಮ್ಮ ಸಿನಿಮಾ ನಾಲೆಜ್ ಸೂಪರ್ ..ಹಾಗೆಯೇ ಸಾಹಿತ್ಯ ಕೂಡ ಚೆನ್ನಾಗಿಯೇ ಗೊತ್ತಿದೆ. ಭಾಷೆಯ ಮೇಲಿನ ಹಿಡಿತ ಅದ್ಭುತ ಇಷ್ಟಿದ್ದೂ ಯಾಕೆ ನೀವು ಈ ಮಾಸ್ತರಿಕೆ ಕೆಲಸ ಮಾಡಬೇಕು..?ಅದೇ ನಿಮ್ಮ ಗೆಳೆಯ ಅಂತೀರಿ ಅವನನ್ನ..ಕ್ಲಾಸ್ ಮೇಟ್ ಬೇರೆ. ನೋಡಿ ಈವತ್ತು ಸುಮಾರು ಸಿನಿಮಾ ಡೈರೆಕ್ಟ್ ಮಾಡೇ ಬಿಟ್ಟಾ..? ಇವತ್ತು ಪತ್ರಿಕೆಗಳಲ್ಲಿ, ಟಿವಿನಲ್ಲಿ ಅವನ ಹೆಸರು, ಸಂದರ್ಶನ ಎಲ್ಲಾ ಬರ್ತಾ ಇದೆ. ನೀವು ಯಾಕೆ ಟ್ರೈ ಮಾಡಬಾರದು..?
ನಮ್ಮ ಬಾಸ್ ಹಾಗೆ ಹೇಳಿದಾಗ ನಾನು ಯೋಚಿಸುವಂತಾದದ್ದು ನಿಜ. ಈವತ್ತು ಚಿತ್ರರಂಗದಲ್ಲಿ ನಿರ್ದೇಶಕನಾಗಿ ಕತೆಗಾರನಾಗಿ ಮಿಂಚುತ್ತಿರುವ ಅವನು ನನ್ನ ಕಾಲೇಜ್ ಮೇಟ್. ಹಾಗೂ ಹಾಸ್ಟೆಲ್ ಮೇಟ್. ಜೊತೆಯಲ್ಲಿಯೇ ಮೂರು ವರ್ಷ ಕಳೆದವರು. ಅವನೂ ಬ್ರಿಲ್ಲಿಯೆಂಟ್. ಆದರೂ ಆಗಾಗ ಕತೆ ಬರೆಯುತ್ತಿದ್ದ. ಇಬ್ಬರೂ ಜೊತೆ ಜೊತೆಯಾಗಿಯೇ ಸಿನಿಮಾ ನೋಡುತ್ತಿದ್ದೆವು. ಚರ್ಚಿಸುತ್ತಿದ್ದೆವು. ಆ ನಿರ್ದೇಶಕ ಹಾಗೆ ಈ ನಿರ್ದೇಶಕ ಹೀಗೆ ಎಂದೆಲ್ಲಾ ಆಯಾ ನಿರ್ದೇಶಕರ ಮಾನ ಮರ್ಯಾದೆ ಹರಾಜಾಗುತ್ತಿದ್ದೆವು.ಆ ಚಿತ್ರದ ಕತೆ ಚಿತ್ರಕತೆ ಬಗ್ಗೆ ಸಂಭಾಷಣೆ ನಿರ್ದೇಶನ ಅಭಿನಯ ಹೀಗೆ ಎಲ್ಲಾ ವಿಷಯಗಳನ್ನೂ ಚರ್ಚಿಸುತ್ತಿದ್ದೆವು. ಆಗಾಗ ಅವನು ನಾನೇನಾದರೂ ಮುಂದೆ ಸಿನಿಮಾ ಮಾಡಿದ್ರೆ ಹೀಗೆ ಮಾಡಲ್ಲಪ್ಪ ಎನ್ನುತ್ತಿದ್ದ. ಆಗ ನಾನೂ ಅವನ ಜೊತೆ ದನಿ ಗೂಡಿಸುತ್ತಿದ್ದೆ. ಹೌದು. ಒಳ್ಳೆ ಕನ್ನಡ ಚಿತ್ರ ಮಾಡಬೇಕು. ಎಂತೆಂಥ ಕತೆಗಳಿವೆ ಕನ್ನಡದಲ್ಲಿ. ಅದನ್ನೆಲ್ಲಾ ದೃಶ್ಯ ಮಾಧ್ಯಮಕ್ಕೆ ತರಬೇಕು.. ಎಂದೆಲ್ಲಾ ಮಧ್ಯರಾತ್ರಿಯವರೆಗೆ ಮಾತನಾಡುತ್ತಿದ್ದೆವು.
ನಮ್ಮ ಸಿನಿಮಾ ಹುಚ್ಚು ಎಷ್ಟಿತ್ತು ಎಂದರೆ ಇಡೀ ಹಾಸ್ಟೆಲ್ ಗೆಳೆಯರು, ಕಾಲೇಜು ಹುಡುಗರು ಬಿಡುಗಡೆಯಾದ ಹೊಸ ಚಿತ್ರಕ್ಕೆ ಹೋಗಬೇಕೆಂದರೆ ನಮ್ಮನ್ನೊಮ್ಮೆ ಕೇಳಿ ಅದರ ಬಗ್ಗೆ ತಿಳಿದುಕೊಂಡು ಹೋಗುತ್ತಿದ್ದರು. ಬಿಡುಗಡೆಯಾದ ಎಲ್ಲಾ ಚಿತ್ರವನ್ನೂ ಆಯಾದಿನವೇ ರಾತ್ರಿಯ ಆಟ ನೋಡಿಬಿಡುತ್ತಿದ್ದೆವು.
ಆನಂತರ ನಮ್ಮ ದಿಕ್ಕು ಬೇರೆ ಬೇರೆಯಾಯಿತು. ನಾನಂತೂ ಒಳ್ಳೆಯ ಅಂಕವಿದ್ದರಿಂದ ಸುಲಭವಾಗಿ ಕೆಲಸ ತೆಗೆದುಕೊಂಡಿದ್ದೆ. ಆನಂತರ ಮನೆಯಲ್ಲಿ ಸ್ವಲ್ಪ ಮಟ್ಟಿಗಿನ ನೆಮ್ಮದಿ ಇತ್ತು. ದಿನ ಕಳೆಯುತ್ತಿದ್ದಂತೆ ನನ್ನ ಜೀವನ ತನ್ನದೇ ಆದ ರೂಪು ಪಡೆದುಕೊಳ್ಳುತ್ತಿತ್ತು. ಈ ನಡುವೆ ಅವನು ಎನಾದಾ ? ಎಂಬುದನ್ನು ನಾನು ಮರತೆ ಬಿಟ್ಟಿದ್ದೆ. ಆಗಾಗ ಗೆಳೆಯರು ಸಿಕ್ಕರೆ ಅವನ ವಿಷಯ ಬಂದಾಗ ಮಾತನಾಡುತ್ತಿದ್ದೆವು. ಅವನಾ..ಅದೆಲ್ಲೋ ಬೆಂಗಳೂರಿಗೆ ಹೋಗಿದ್ದಾನಂತೆ ಅದ್ಯಾವುದೋ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾನಂತೆ..ಅವನಿಗೇನು ಮಾರಾಯ..ಎಲ್ಲಾ ಚೆನ್ನಾಗಿತ್ತು..ಆರಾಮವಾಗಿ ಬದುಕಬಹುದಿತ್ತು..ಅದು ಬಿಟ್ಟು ಇದೆಲ್ಲಾ ಪಡಿ ಪಾಟಲು ಬೇಕಿತ್ತಾ ಅವನಿಗೆ...ಹೀಗೆ ಅವನ ಮಾತಿಲ್ಲದೆ ನಮ್ಮ ಮಾತುಕತೆ ಮುಗಿಯುತ್ತಿರಲಿಲ್ಲ. ಆಗಾಗ ಅಲ್ಲೊಂದು ಇಲ್ಲೊಂದು ಪತ್ರಿಕೆಯಲ್ಲಿ ಅವನು ಬರೆದ ಬರಹಗಳು ಪ್ರಕಟವಾದಾಗ ನಾವೆಲ್ಲಾ ಗೆಳೆಯರು ಓದಿ ಮಾತಾಡಿಕೊಳ್ಳುತ್ತಿದ್ದೆವು. ಇಷ್ಟೆಲ್ಲಾ ಬರೆಯುವ ತಿಳಿದುಕೊಂಡಿರುವವ ಇನ್ನೂ ಸೆಟ್ಲ್ ಆಗದೆ ಒದ್ದಾಡುತ್ತಿರುವುದು ನಮಗೆ ಸ್ವಲ್ಪ ಬೇಸರ ತರಿಸುತ್ತಿತ್ತು.
ಆದರೆ ಇದೆಲ್ಲಾ ಒಂದು ಎಂಟು ವರ್ಷದ ನಂತರ ಬದಲಾಯಿತು. ಇದ್ದಕ್ಕಿದ್ದಂತೆ ಅವನು ಚಿತ್ರರಂಗದಲ್ಲಿ ಉದಯವಾದವನು ಹೆಸರು ಮಾಡಿದ. ಹಣ ಮಾಡಿದ. ಎಲ್ಲಾ ಕಡೆ ಅವನದೇ ಮಾತು ಕತೆ.ಇಂತಹ ಸಮಯದಲ್ಲೇ ನಮ್ಮ ಬಾಸ್ ಹಾಗೆ ಹೇಳಿದ್ದು.
ಯಾಕೋ ಆ ರಾತ್ರಿ ನನಗೆ ನಿದ್ರೆಯೇ ಬರಲಿಲ್ಲ. ಅವನದೇ ಯೋಚನೆ ನಾವೆಲ್ಲಾ ಕೆಲಸ ತೆಗೆದುಕೊಂಡು ಮದುವೆಯಾಗಿ ಸೆಟ್ಲ್ ಆದೆವು ಎಂಬ ಹಮ್ಮಿನಲ್ಲಿ ಓಡಾಡುತ್ತಿದ್ದಾಗ ಆತ ಏನೇನೂ ಇಲ್ಲದೆ ಅಲೆಯುತ್ತಿದ್ದ.ಆದರೆ ಈಗ ಅವನದೇ ಮಾತು. ಮೆಚ್ಚುಗೆಯಲ್ಲಾ ಅವನದೇ. ಹಾಗೆ ನೋಡಿದರೆ ನಮಗಿಂತ ಚೆನ್ನಾಗಿಯೇ ಹಣವಂತನಾಗಿಯೇ ಇದ್ದಾನೆ ಅವನು. ನಾನು ತಪ್ಪು ಮಾಡಿದೆನಾ..? ನಾನೂ ಯಾಕೆ ಒಂದು ಕೈ ನೋಡಬಾರದು. ಅವನೇ ಮಾಡಿದ್ದಾನೆಂದರೆ ನಾನು ಮಾಡಲು ಕಷ್ಟವೇನಲ್ಲ.
ಮಾರನೆಯ ದಿನವೇ ಆತನ ಸಿನಿಮಾಗಳ ಡಿವಿಡಿಗಳನ್ನೂ ಕೊಂಡು ತಂದವನು ಒಂದರ ಹಿಂದೆ ಒಂದರಂತೆ ನೋಡಿದ್ದೆ. ಆದ್ರೆ ಯಾಕೋ ಯಾವುದೂ ಮನಸ್ಸಿಗೆ ತಾಕಿರಲಿಲ್ಲ.ನಾವು ಕಾಲೇಜು ದಿನಗಳಲ್ಲಿ ಹೇಗೆ ಸಿನಿಮಾ ಮಾಡಬಾರದು ಎಂದೆಲ್ಲಾ ಬೈದಾಡಿದ್ದೆವೋ ಆತ ಅದನ್ನೆಲ್ಲಾ ಮರೆತವನಂತೆ ಹಾಗೆಯೇ ಅಥವಾ ಸ್ವಲ್ಪ ಅದಕ್ಕಿಂತ ವ್ಯತಿರಿಕ್ತವಾಗಿ ಮಾಡಿದ್ದ. ಅಷ್ಟೇ. ಅದು ಬಿಟ್ಟರೆ ಯಾವುದೂ ಅಂತಹ ಮಾಸ್ಟರ್ ಪೀಸ್ ಎನಿಸುವ ಹಾಗಿರಲಿಲ್ಲ. ಅದರಲ್ಲೂ ಆತನ ಮೂರನೆಯ ಸಿನಿಮಾವನ್ನು ಪೂರ್ತಿ ನೋಡಲು ನನಗೆ ಅದೆಷ್ಟು ಬೋರಾಗುತ್ತಿತ್ತು ಎಂದರೆ ಯಾವಾಗ ಮುಗಿಯುತ್ತದೋ ಎನಿಸುತ್ತಿತ್ತು.ಆದರೆ ಆ ಚಿತ್ರ ಅದ್ಭುತ ಯಶಸ್ಸು ಗಳಿಸಿತ್ತಲ್ಲದೆ ಒಂದೆರೆಡು ಪ್ರಶಸ್ತಿ ಪುರಸ್ಕಾರಗಳನ್ನೂ ಪಡೆದುಕೊಂಡಿತ್ತು.
ಹೌದು. ನಾನು ಇವನಿಗಿಂತ ಚೆನ್ನಾಗಿ ಸಿನಿಮಾ ಮಾಡಬಲ್ಲೆ. ಅದ್ಭುತವಾದ ಕತೆ, ಕಲ್ಪನೆ ನನ್ನಲ್ಲಿದೆ. ಇಷ್ಟೆಲ್ಲಾ ಸಾಧಿಸಲು ಅವನು ತೆಗೆದುಕೊಂಡಷ್ಟು ಸಮಯ ನನಗೆ ಬೇಕಾಗೂ ಇಲ್ಲ. ಯಾಕೆಂದರೆ ನಾನು ಅವನಿಗಿಂತ ಅಡ್ವಾನ್ಸ್ ಇದ್ದೇನೆ ಎನಿಸಿತು.
nanu ನಾನು ನಿರ್ಧರಿಸಿದೆ. ನಾನೂ ಒಂದು ಕೈ ನೋಡಿಯೇ ಬಿಡುತ್ತೇನೆ. ರಂಗಿನಲೋಕದಲ್ಲಿ ನನ್ನದು ಒಂದು ಹೋಳಿ ಆಟ ಆಡಿಯೇ ತೀರುತ್ತೇನೆ.
ಮಾರನೆಯ ದಿನ ಬೆಳಿಗ್ಗೆ ಬಾಸ್ ಗೆ ವಿಷಯ ಹೇಳಿದಾಗ ಮೊದಲಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು ಆನಂತರ ಒಮ್ಮೆ ಸರಿಯಾಗಿ ಯೋಚಿಸಿ ನಿರ್ಧಾರ ಮಾಡು ಎಂಬ ಅಪಸ್ವರದ ಮಾತನಾಡಿದ್ದು ನನಗೆ ಇಷ್ಟವಾಗಲಿಲ್ಲ. ಆದರೆ ನನ್ನ ನಿರ್ಧಾರ ಗಟ್ಟಿಯಾಗಿತ್ತು.
ನಾನು ಅವನನ್ನು ಮೀರಿಸಬೇಕಿತ್ತು.
ಮಾರನೆಯ ದಿನವೇ ಕೆಲಸ ಬಿಟ್ಟೆನಾದರೂ ಯಾವಾಗ ಬೇಕಾದರೂ ಬಂದು ಮತ್ತೆ ಕೆಲಸಕ್ಕೆ ಜಾಯಿನ್ ಆಗಬಹುದು ಎಂದು ನನ್ನ ಬಾಸ್ ಹೇಳಿದಾಗ ಖುಷಿಯಾಯಿತು.ಆದರೆ ಹೇಗೋ ಸಾಧನೆ ಮಾಡಲು ಹೊರತು ನಿಂತಿರುವೆ. ನಿನಗದರಲ್ಲಿ ಪ್ರಾಕ್ಟಿಕಲ್ ನಾಲೆಜ್ ಕಡಿಮೆ. ಒಮ್ಮೆ ಅವನ ಅಭಿಪ್ರಾಯ ಸಲಹೆ ಯಾಕೆ ತೆಗೆದುಕೊಳ್ಳಬಾರದು ಎಂದರು.ನನಗೆ ಉರಿದು ಹೋಯಿತು. ಅದರ ಅವಶ್ಯಕತೆ ನನಗಿಲ್ಲ ಎಂದವನೇ ದುರ್ದಾನ ತೆಗೆದುಕೊಂಡವನಂತೆ ಅಲ್ಲಿಂದ ಹೊರಟುಬಂದಿದ್ದೆ.
ಈಗ ನನ್ನ ಗುರಿ ಸ್ಪಷ್ಟವಾಗಿತ್ತು..ಮನಸ್ಸಿನಲ್ಲಿ ಅವನು ಬಂದು ಹೋದ. ಅವನನ್ನು ಪ್ರತಿಸ್ಪರ್ಧಿಯಾಗಿ ತೆಗೆದುಕೊಂಡಿರುವವನು ನಾನು..ಅವನ ಹತ್ತಿರ ಸಲಹೆ ಕೇಳುವ ಸಲಾಮು ಹೊಡೆಯುವುದು ನನಗೆ ಇಷ್ಟವಾಗಲಿಲ್ಲ. ಮೊದಲಿಗೆ ಏನೇನು ಮಾಡಬೇಕು ಎಂಬುದನ್ನು ಪಟ್ಟಿ ಮಾಡಿದೆ. ಒಂದೊಳ್ಳೆ ಕತೆ ಮಾಡುವುದು..ಆನಂತರ ಮುಂದಿನದರ ಬಗ್ಗೆ ಯೋಚಿಸೋಣ. ಕತೆಯಿಲ್ಲದೆ ರೀಮೇಕ್ ರೀಮಿಕ್ಸ್ ಗಳಲ್ಲಿ ಕಳೆದುಹೋಗಿ ಒದ್ದಾಡುತ್ತಿರುವ ಚಿತ್ರರಂಗಕ್ಕೆ ನಾನು ಓಯಸಿಸ್ ಆದರೂ ಆಗಬಹುದು. ನನ್ನ ಮನೆಯ ಮುಂದಿನ ಚಿತ್ರಕರ್ಮಿಗಳು ಸಾಲು ಗಟ್ಟಿ ನಿಲ್ಲಬಹುದು ಎನಿಸಿತು.
nanu ನಾನು ನಿರ್ಧರಿಸಿದೆ.
.....
...
ಚೇತನ್ ಭಗತ್ ಜೊತೆಯಲ್ಲೇ ಓದಿದ ಎಸ್.ವಿ.ದಿವಾಕರ್ ಬರೆದ ಬೀಟನ್ ಬಿ ಭಗತ್ ಕಾದಂಬರಿಯ ಭಾವಾನುವಾದವಿದು. ಜೊತೆಯಲ್ಲೇ ಓದಿದ ಗೆಳೆಯನೊಬ್ಬ ಏನೋ ಮಾಡಿದ ಎಂದು ಹಠಕ್ಕೆ ಬೀಳುವ ದಿವಾಕರ್ ಲಕ್ಷಗಟ್ಟಲೆ ಸಂಬಳವಿದ್ದ ಕೆಲಸವನ್ನು ಲೆಕ್ಕಿಸದೆ ಅವನ ತರಹವೇ ಆಗಬೇಕೆಂದು ಪಣತೊಡುತ್ತಾರೆ. ತಾನು ಬರೆಯುತ್ತೇನೆ. ಲಕ್ಷ ಲಕ್ಷ ಸಂಪಾದಿಸುತ್ತೇನೆ..ಹೆಸರು ಗಳಿಸುತ್ತೇನೆ ಎಂದೆಲ್ಲಾ ಕನಸು ಕಟ್ಟಿಕೊಂಡು ಪೆನ್ನು ಹಿಡಿಯುತ್ತಾರೆ.
ನಾನು ನಾನು ಅಷ್ಟೇ. ನಾನು ಬೇರೆ ಯಾರ ತರಹವೂ ಆಗಬೇಕಿಲ್ಲ ಆಗುವುದು ಸಾಧ್ಯವೂ ಇಲ್ಲ. ಹಾಗೆಯೇ ಸಾಧನೆಯ ಹಾದಿ ಅಷ್ಟು ಸುಲಭದ ಸರಾಗದ ಹಾದಿಯಲ್ಲ ಎಂಬುದು ಗೊತಾಗುವವರೆಗೆ ಅವರು ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಸಮಯವಿದ್ದರೆ ಒಮ್ಮೆ ಓದಬಹುದು. ಎಲ್ಲೂ ಬೋರ್ ಹೊಡೆಸದ ಕಾದಂಬರಿ ಇದು.
[ಅಂದ ಹಾಗೆ ಅದನ್ನು ನಾನು ನನಗನಿಸಿದ ರೀತಿಯಲ್ಲಿ ನನ್ನ ಅನುಭವದ ಜೊತೆಗೆ ಪರಿಚಯಿಸಿದ್ದೇನೆ. ಅಷ್ಟೇ]

No comments:

Post a Comment