Sunday, October 12, 2014

ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್.

ಆಕೆಯ ಕೈ ಮೀರಿ ಹೋಗಿತ್ತು. ಮಗಳು ಪಕ್ಕದಲ್ಲಿ ನಡುಗುತ್ತಾ ಕುಳಿತಿದ್ದಳು. ಏನು ಮಾಡುವುದು ಎಂದು ಇಬ್ಬರಿಗೂ ತೋಚದಂತಾಗಿತ್ತು. ಸುಮ್ಮನೆ ಮಾತನಾಡುತ್ತೇನೆ ಎಂದು ಬಂದವನು ತನ್ನ ಮಾಜಿ ಗಂಡ. ಐದು ವರ್ಷಗಳ ಹಿಂದೆಯೇ ವಿಚ್ಛೇದನ ಪಡೆದಾಗಿದೆ. ಅವನೀಗ್ ಎಲ್ಲಿದದ, ಏನು ಮಾಡುತ್ತಿದ್ದ ಎಂಬುದು ಮರೆತೇಹೋಗಿತ್ತೇನೋ? ಆದರೆ ನಿನ್ನೆ ಇದ್ದಕ್ಕಿದ್ದ ಹಾಗೆ ಪ್ರತ್ಯಕ್ಷವಾದವನು ತನ್ನ ಹುಳುಕು ಹಲ್ಲು ತೋರಿಸುತ್ತಾ ಹಲ್ಲು ಗಿಂಜಿದ್ದ. ನಿನ್ನ ಜೊತೆ ಮಾತನಾಡಬೇಕಿತ್ತು, ಸಿಕ್ತೀಯ ಎಂದವನನ್ನು ಮರು ಮಾತಾಡದೆ ಭೇಟಿ ಮಾಡಿದ್ದಳು. ಅಲ್ಲೇ ಮಾತು ಮುಗಿದು ಹೋಗಿತ್ತು. ಆದರೆ ಮನೆಗೆ ಬಂದು ಸ್ವಲ್ಪ ವಿರಾಮ ತೆಗೆದುಕೊಳ್ಳೋಣ ಎನ್ನುವಷ್ಟರಲ್ಲಿ ಅವನು ಮನೆಗೆ ಬಂದು ಬಿಟ್ಟಿದ್ದ. ಈಕೆಯೇನು ವಿಳಾಸ ಹೇಳಿರಲಿಲ್ಲ. ಅವನೇ ಬಂದಿದ್ದ ಇವಳನ್ನು ಹಿಂಬಾಲಿಸಿಕೊಂಡು. ಸುಮ್ಮನೆ ಅಕ್ಕ ಪಕ್ಕದವರಿಗೆ ಗೊತ್ತಾದರೆ ಸಮಸ್ಯೆ ಎಂದು ಒಳಬಿಟ್ಟುಕೊಂಡು ಖಡಕ್ಕಾಗಿ ಮಾತನಾಡಿ ಹೋಗುವಂತೆ ಹೇಳಿದ್ದಳು. ಒಂದಷ್ಟು ಉಳಿಸಿದ್ದ ಹಣವನ್ನು ಕೊಟ್ಟು ಇನ್ಯಾವತ್ತೂ ನಮ್ಮನ್ನು ನೋಡುವುದಕ್ಕೆ ಬರಬೇಡ ಎಂದು ಖಡಾಖಂಡಿತವಾಗಿ ನುಡಿದಿದ್ದಳು. ಅವನು ತಲೆಯಲ್ಲಾಡಿಸಿ ನಕ್ಕಿದ್ದ. ಅದರಲ್ಲಿ ಎಳ್ಳಷ್ಟೂ ನಂಬುವ ಭರವಸೆ ಇರಲಿಲ್ಲ. ಅದೆಲ್ಲಾ ಸರಿ ಇನ್ನೇನು ಹೋಗುವಷ್ಟರಲ್ಲಿ ಎಂತಹ ಅನಾಹುತ ಆಗಿಹೋಯಿತು. ಅವನನ್ನು ಕೊಲ್ಲಲೇ ಬೇಕಾಯಿತು. ಆತನ ಕತ್ತಿಗೆ ವೈರಿನಿಂದ ಬಿಗಿದರೆ ಮಗಳು ಸಹಾಯ ಮಾಡಿದ್ದಳು. ಇದೆಲ್ಲ ಅದೆಷ್ಟು ಬೇಗ ನಡೆದುಹೋಯಿತೆಂದರೆ ನಿಮಿಷಗಳ ಅಂತರದಲ್ಲಿ ಅವನು ಹೆಣವಾಗಿದ್ದ. ಇಬ್ಬರೂ ಕೊಲೆಗಾರರಾಗಿದ್ದರು.
ಅಷ್ಟರಲ್ಲಿ ಬಾಗಿಲು ಬಡಿದ ಶಬ್ದವಾಗಿ ಬಾಗಿಲು ತೆರೆದಾಗ ಎದುರಿಗೆ ಕಂಡದ್ದು ಪಕ್ಕದಲ್ಲಿ ವಾಸವಾಗಿದ್ದ ಗಣಿತ ಶಿಕ್ಷಕ. ಒಂದೇ ಮಾತಿಗೆ ಆತ ಹೇಳಿದ್ದಿಷ್ಟೇ. ಮುಂದೇನು ಮಾಡುತ್ತೀರಿ.. ಆಕೆ ನಡುಗಿ ಹೋದಳು. ಸೀದಾ ಹೋಗಿ ಪೋಲಿಸ್ ಗೆ ಶರಣಾಗತಿ ಆಗುವುದೇ ಸರಿ ಎಂದಳು. ಆತ ಸುಮ್ಮನೆ ಸ್ವಲ್ಪ ಹೊತ್ತು ಇದ್ದವನು ನೀವೇನು ಹೆದರಬೇಡಿ, ನಾನು ಹೇಳಿದಂತೆ ಮಾಡಿ, ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದ.
ಮಾರನೆಯ ದಿನ ಪಕ್ಕದ ಕೆರೆಯ ಪಕ್ಕ ಅನಾಥ ಶವವೊಂದು ಸಿಕ್ಕಿತ್ತು. ಆತನ ಬಟ್ಟೆ ಕಳಚಿ ವಿವಸ್ತ್ರಗೊಳಿಸಲಾಗಿತ್ತು. ಆತನ ಮುಖದ ಗುರುತು ಸಿಗದಂತೆ ಜಜ್ಜಿ ಹಾಕಲಾಗಿತ್ತು. ಕೈ ಬೆರಳುಗಳನ್ನು ಸುಟ್ಟುಹಾಕಲಾಗಿತ್ತು. ಆತನ ದವಡೆ ಹಲ್ಲುಗಳೂ ಗೊತ್ತಾಗದಂತೆ  ಜಜ್ಜಿ ಹಾಕಲಾಗಿತ್ತು. ಅಂದರೆ ಯಾವೊಂದು ಗುರುತೂ ಸಿಗದಂತೆ ಮುನ್ಸೂಚನೆ ತೆಗೆದುಕೊಂಡಿದ್ದರೂ ಕೆಲವೊಂದು ಕುರುಹನ್ನು ಉಳಿಸಲಾಗಿತ್ತು.
ಅದು ನಿಜಕ್ಕೂ ತಂತ್ರವಾ..?
ಇದು ಕೀಗೋ ಹಿಗಾಶಿನೋ ಬರೆದ ಕಾದಂಬರಿ ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಷ್ ಕಾದಂಬರಿ ಪ್ರಾರಂಭವಾಗುವ ರೀತಿ. ಸರಿ ಸುಮಾರು ನೂರೆಪ್ಪತ್ತು ಪುಟಗಳ ಈ ಕಾದಂಬರಿ ಓದುತ್ತಾ ಓದುತ್ತ ತನ್ನ
ತೆಕ್ಕೆಗೆ ಸೆಳೆದುಕೊಂಡು ಬಿಡುತ್ತದೆ. ಮೂಲ ಜಪಾನಿ ಕಾದಂಬರಿಯನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದವರು ಅಲೆಕ್ಸಾಂಡರ್ ಓ.ಸ್ಮಿತ್ ಮತ್ತು ಎಲ್ಯೇ ಜೆ.ಅಲೆಕ್ಸಾಂಡರ್.

ಇದು ಈಗಾಗಲೇ ಈ ಕಾದಂಬರಿ 2008 ಮತ್ತು 2012 ರಲ್ಲಿ ಚಿತ್ರ ರೂಪಕ್ಕೆ ತಾಳಿ ಯಶಸ್ವಿಯಾಗಿದೆ.ಇದರ ಬಗ್ಗೆ ಹೇಳಬೇಕೆಂದರೆ ಇದೀಗ ಭಾರತದಲ್ಲಿಯೂ ಕೂಡ ಅಧಿಕೃತವಾಗಿ ಸಿನಿಮಾ ರೂಪು ತಾಳಲಿದೆ. ಆದರೆ ಈಗಾಗಲೇ ಈ ಚಿತ್ರದ ಜೀವಾಳವನ್ನು ಮಲಯಾಳಂ ಚಿತ್ರದವರೂ ಎರವಲು ಪಡೆದುಬಿಟ್ಟಿದ್ದಾರೆ. ಮೋಹನ್ ಲಾಲ್ ಅಭಿನಯದ ದೃಶ್ಯಂ ಚಿತ್ರ ಇದೆ ಕಾದಂಬರಿಯ ಎರವಲು ಎನ್ನಬಹುದು. ಅದನ್ನು ಭಾರತೀಯ ಸೊಗಡಿಗೆ ರೂಪಾನತರ ಮಾಡಿದ್ದಾರೆ ನಿರ್ದೇಶಕ ಜೀತು ಜೋಸೆಫ್. ಇದೆ ಚಿತ್ರ ಕನ್ನಡದಲ್ಲಿ ರವಿಚಂದ್ರನ್ ಅಭಿನಯದಲ್ಲೂ ತೆಲುಗಿನಲ್ಲಿ ವೆಂಕಟೇಶ್ ಅಭಿನಯದಲ್ಲೂ ತೆರೆಕಂಡು ಯಶಸ್ವಿಯಾಗಿದೆ. ಅಷ್ಟೇ ಅಲ್ಲ ಈಗ ತಮಿಳು ಭಾಷೆಯಲ್ಲಿ ಖ್ಯಾತ ನಟ ಕಮಲ್ ಹಾಸನ್ ಅಭಿನಯದಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು , ಹಿಂದಿಯಲ್ಲೂ ರಿಮೇಕ್ ಆಗುವ ಲಕ್ಷಣಗಳಿವೆ.

Monday, September 22, 2014

ದೆವ್ವದ ಹಿಂದೆ...

ಆಕೆಗೋ ಅವನ ಮೇಲೆ ಪ್ರೀತಿ, ಆದರೆ ಅವನಿಗೆ ಅವಳಷ್ಟು ಚಂದ ಇದ್ದರೂ ಹೀರೋಯಿನ್ ಅವಳೇ ಆಗಿದ್ದರೂ ಅವಳ ಮೇಲೇಕೋ ಮನಸಿಲ್ಲ. ಅವಳು ಬಿಡುವುದಿಲ್ಲ. ಕೊನೆಗೆ ಅವನಿಂದ ತಿರಸ್ಕೃತಳಾಗಿ ಆತ್ಮಹತ್ಯೆ ಮಾಡಿಕೊಂಡು ಸತ್ತು ಆನಂತರ ದೆವ್ವವಾಗಿ ಕಾಡುತ್ತಾಳೆ...
ಅಥವಾ ಅದೊಂದು ಬಂಗಲೆ ನಾಲ್ಕಾರು ಜನ ಹುಡುಗರು ರಜಾ ಕಳೆಯಲೋ, ಸಾಕ್ಷ್ಯಚಿತ್ರ ಮಾಡಲೋ ಕಾಡಿಗೆ ಹೋಗಿ ಅಲ್ಲಿರುವ ಅದೇ ಬಂಗಲೆಗೆ ನುಗ್ಗುತ್ತಾರೆ. ಅಲ್ಲೊಬ್ಬ ಭಯಾನಕ ಮುಖದ/ ಮುಖಭಾವದ ಮನೆ ಆಳು..ಆನಂತರ ಕಾಟ ಇದ್ದದ್ದೇ...
ನನಗೆ ದೆವ್ವದ ಚಿತ್ರ ಭಯ ಹುಟ್ಟಿಸಿದ್ದು ಯಾವುದು ಎಂಬುದರ ಲೆಕ್ಕಾಚಾರದಲ್ಲೇ ಇನ್ನೂ ಇದ್ದೇನೆ. ಶರಪಂಜರದ ದೃಶ್ಯ ಭಯ ತರಿಸಿತ್ತು, ಆನಂತರ ನಾ ನಿನ್ನ ಬಿಡಲಾರೆ ಕೂಡ ಭಯ ತರಿಸಿತ್ತು. ಆವಾಗ ಚಿಕ್ಕವನಾದ್ದರಿಂದಲೋ ಏನೋ? ಆಮೇಲೆ ಕಾಲೇಜು ದಿನಗಳಲ್ಲಿ ಅದ್ಯಾರೋ ಈವಿಲ್ ಡೆಡ್ ಭಯಾನಕ ಸಿನಿಮಾ ಎಂದಿದ್ದರು. ಸಿನಿಮಾದಲ್ಲಿ ಭಯಕ್ಕಿಂತ ಶಾಕ್ ಹೆಚ್ಚಾಗಿತ್ತು. ಅದರ ಹಿನ್ನೆಲೆ ಶಬ್ದ ಭಯಾನಕ ಎನಿಸಿತ್ತು. ಅದು ಬಿಟ್ಟರೆ ದೆವ್ವವನ್ನು ಎದುರಿಸಲು ಅವರು ಗನ್, ಚಾಕು ಮುಂತಾದ ಆಯುಧ ಬಳಸುವುದನ್ನು ನೋಡಿ ನಗು ಬಂದಿತ್ತು. ಆದರೆ ಭಯದ ಜೊತೆಗೆ ಉದ್ವೇಗ ತರಿಸಿತ್ತು ಕೆಲವು ಚಿತ್ರಗಳಿವೆ. ಆದರೆ ನಾನು ಹೆದರಿದ ಚಿತ್ರ ಎಂದರೆ ಜೇಮ್ಸ್ ವ್ಯಾನ್ ನಿರ್ದೇಶನದ ಸಾ. ನನಗೆ ಭಯದ ಪ್ರಶ್ನೆಯಲ್ಲ. ತೆರೆಯ ಮೇಲಿನ ಪಾತ್ರಗಳ ಚಿಂತಾಜನಕ ಸ್ಥಿತಿ ಅದ್ಯಾವ ಸಮಯದಲ್ಲಿ ಅದ್ಯಾರನ್ನು ಹೊತ್ತುಕೊಂಡು ಹೋಗುತ್ತಾನೋ ಅನ್ನುವ ಭಯ. ಒಂದೇ ಏಟಿಗೆ ಕೊಂದರೆ ok. ಅದು ಬಿಟ್ಟು ಡಿಸೈನ್ ಡಿಸೈನ್ ಆಗಿ ನರಕ ಯಂತ್ರಗಳನ್ನು ಮಾಡಿ ಸಾಯಿಸುವ ಅವನ ಪರಿಗೆ ನಮ್ಮ ಜೀವ ಹೋಗದೆ ಇರುತ್ತಿತ್ತೆ..?
ಆಕೆ ನಟಿ. ನಿಮಗೆಲ್ಲಾ ಗೊತ್ತಿರುತ್ತಾರೆ. ಚಲನಚಿತ್ರ, ಧಾರಾವಾಹಿಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುತ್ತಾರೆ. ಅವರ ಮಗಳೂ ಕೂಡ ಈವತ್ತು ನಾಯಕಿಯಾಗಿದ್ದಾರೆ. ಆಕೆ ಹೇಳಿದ ಕತೆ ಇದು.
ಅವರು ಅವರ ತಂದೆ ಜೊತೆ ಇದ್ದರಂತೆ. ಬೆಳಿಗ್ಗೆಯಿಂದ ಯಾವುದೇ ಕೆಟ್ಟ ಅನುಭವವಾಗುತ್ತಿರಲಿಲ್ಲವಂತೆ. ಆದರೆ ರಾತ್ರಿ ಮಲಗಿದ ಮೇಲೆ ಮೈ ತುಂಬಾ ರಗ್ಗು ಹೊದ್ದುಕೊಂಡರೆ ಯಾರೋ ನಿಧಾನಕ್ಕೆ ಮೈ ಮೇಲೆ ಸವರಿದ ಅನುಭವವಾಗುತ್ತಿತ್ತಂತೆ.  ಅದು ಪ್ರಾರಂಭವಾದದ್ದು ಹೀಗೆ. ಅದೊಂದು ದಿನ ಊಟ ಮಾಡಿ ಹಾಸಿಗೆಯ ಮೇಲೆ ಅಡ್ದಾದರಂತೆ. ಸ್ವಲ್ಪ ಸುಸ್ತಾಗಿದ್ದರಿಂದ ಹಠಾತ್ತನೆ ನಿದ್ರೆ ಬಂದಿದೆ. ಮಧ್ಯರಾತ್ರಿಯಲ್ಲಿ ಯಾಕೋ ಎಚ್ಚರವಾಗಿದೆ. ಸುಮ್ಮನೆ ಮಗ್ಗುಲು ಬದಲಿಸಿದವರಿಗೆ ಯಾರೋ ಪಕ್ಕದಲ್ಲಿ ಮಲಗಿದಂತೆ ಭಾಸವಾಗಿದೆ. ಸುಮ್ಮನೆ ಕೈ ಯಾಡಿಸಿದರೆ ಯಾರೂ ಇಲ್ಲ. ಆದರೆ ಉಸಿರಾಟ ನಿಧಾನಕ್ಕೆ ಕ್ಷೀಣವಾಗಿ ಕೇಳಿಸುತ್ತಲೇ ಇದೆ. ಒಂದು ಕ್ಷಣ ಇದು ಕನಸೋ ಭ್ರಮೆಯೋ ಎಂಬುದು ಆಕೆಗೆ ಗೊತ್ತಾಗದ ಸ್ಥಿತಿ. ಜೊತೆಗೆ ಪಕ್ಕದಲ್ಯಾರೋ ಮಲಗಿದ ರೀತಿಯಲ್ಲಿ ಬೆಚ್ಚನೆಯ ಅನುಭವ ಬೇರೆ. ಆಕೆ ಎದ್ದು ಕುಳಿತವರು ಸುಮಾರು ಹೊತ್ತು ನಿದ್ರೆ ಮಾಡದೆ ಭಯದಲ್ಲೇ ಕುಳಿತಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಅದು ಹಾಗೆ ಸರಿದು ಹೋಗಿದೆ.
ಇದಾದ ಮಾರನೆಯ ದಿನದಿಂದ ಅದು ಪುನರಾವರ್ತನೆಯಾಗುತ್ತಾ ಹೋಗಿದೆ. ಆಕೆ ಏನು ಮಾಡಿದರೂ ಯಾವುದೇ ಯಂತ್ರ, ತಾಯತ ಹಾಕಿಸಿದರೂ ಅದು ಹೋಗೆ ಇಲ್ಲ. ಆನಂತರ ಮೈಮೇಲೆ ಆವರಿಸಿಕೊಳ್ಳುವ ತರದಲ್ಲಿ ಫೀಲ್ ಆಗತೊಡಗಿದೆ.
ಸುಮಾರು ಇದೆ ಅನುಭವ ಆದ ನಂತರ ಅದೊಂದು ದಿನ ಎಚ್ಚರವಾದ ಆಕೆಗೆ  ಮಂಚದ  ಪಕ್ಕದಲ್ಲಿ ಯಾರೋ ನಿಂತ ಅನುಭವವಾಗಿದೆ. ಕಣ್ಣು ಬಿಟ್ಟು ನೋಡಿದರೆ ಒಬ್ಬ ಎತ್ತರಕ್ಕಿರುವ ಕಪ್ಪನೆಯ ಮನುಷ್ಯ ನಿಂತಿದ್ದಾನೆ. ಸ್ವಲ್ಪ ಹೊತ್ತು ಇವರನ್ನೇ ನೋಡಿದ ಆತ ನಿಧಾನಕ್ಕೆ ಹಾಗೆ ಸರಿದು ಬಾಗಿಲ ಹತ್ತಿರ ಹೋಗಿದ್ದಾನೆ.
ಆವತ್ತೇ ಕೊನೆ. ಆಮೇಲಿಂದ ಆತ ಕಾಣಿಸಿಕೊಂಡೆ ಇಲ್ಲ.
"ಆತನ ಮುಖ ನನಗೆ ಚೆನ್ನಾಗಿ ನೆನಪಿದೆ. ಕಪ್ಪಗಿದ್ದ. ಮೀಸೆ ಬಿಟ್ಟಿದ್ದ. ದಪ್ಪ ದಪ್ಪ ಕಣ್ಣುಗಳಿದ್ದವು. ಅದಾದ ಸುಮಾರು ವರ್ಷದವರೆಗೆ ಯಾರಾದ್ರೂ ನಿಂತ ಕಡೆ ಅವನನ್ನೇ ಹುಡುಕುತ್ತಿದ್ದೆ. ಅದೇ ಮುಖ ಚಹರೆ ಹೋಲುವ ಯಾವನಾದರೂ ಇರಬಹುದಾ.. ಅಥವಾ ಬದುಕಿದ್ದನಾ? ನನಗ್ಯಾಕೆ ಕಾಣಿಸಿಕೊಂಡ ಎನ್ನುವುದು ಇನ್ನೂ ನಿಗೂಡವಾಗಿದೆ ..ಈಗಲೂ ಆತನ ಮುಖ ಚಹರೆ ಹೋಲುವ ವ್ಯಕ್ತಿ ಯನ್ನು ಹುಡುಕುತ್ತಿದ್ದೇನೆ.." ಎಂದರವರು.
ಒಟ್ಟಿನಲ್ಲಿ ಕೆಲವು ಘಟನೆಗಳು ನಮ್ಮ ನಿಲುಕಿಗೆ ಸಿಕ್ಕುವುದಿಲ್ಲ ಎಂಬುದಷ್ಟೇ ಸತ್ಯ ಎನಿಸಿತು. ಹೀಗೆ ಆಯಿತು ಎಂದಷ್ಟೇ ಹೇಳಬಹುದು.. ಅದೇನು..? ಅದ್ಯಾಕೆ ಎಂಬ ಪ್ರಶ್ನೆಗೆ ಹೇಗೆ ಉತ್ತರ ಹುಡುಕಲು ಸಾಧ್ಯ?
ಚಿತ್ರದ ಕತೆ ಸಿದ್ಧ ಮಾಡಲು ಘಟನೆ ಹುಡುಕುತ್ತಾ ಹೋದವನಿಗೆ ಸಿಕ್ಕ ಅನುಭವಗಳಲ್ಲಿ ಇದೂ ಒಂದು. ಒಂದೊಂದು ಭಯಾನಕವಾಗಿದ್ದರೆ, ಕೆಲವು ತಮಾಷೆಯಾಗಿರುವವು ಇವೆ. ಅಂದರೆ ಈ ವ್ಯಕ್ತಿಗಳು ಸುಮ್ಮನೆ ಸುಳ್ಳು ಹೇಳುತ್ತಿರುವರಾ? ಎನ್ನುವ ಅನುಮಾನವನ್ನು ಮೂಡಿಸುತ್ತವೆ ಕೆಲವು.
ಆದರೆ ಅದೊಂದು ವೀಡಿಯೊ ನೋಡಿದ ಮೇಲೆ ನನಗೆ ಯಾವುದೇ ನಿರ್ಧಾರ ತಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇರಲಿ. ಈಗ ಕತೆ ಒಂದು ಹಂತಕ್ಕೆ ಮುಗಿದಿದೆ, ಇನೇನಿದ್ದರೂ ಸಂಭಾಷಣೆ, ಚಿತ್ರಕತೆ ಇತ್ಯಾದಿ. ಮುಖ್ಯ ತಂತ್ರಜ್ಞರ ಆಯ್ಕೆಯಾಗಿದೆಯಾದರೂ ಕಲಾವಿದರ ಶೋಧ ನಡೆಯುತ್ತಿದೆ.ಇನ್ನೂ ಫೋಟೋಶೂಟ್ ಆಗಿಲ್ಲದ ಕಾರಣ ಗೆಳೆಯ ಒಂದಷ್ಟು ಇಂಟರ್ನೆಟ್ ಆಧರಿಸಿ ಅಲ್ಲಿನ ಫೋಟೋಗಳಿಂದ ಒಂದಷ್ಟು ಪೋಸ್ಟರ್ ಸಿದ್ಧ ಮಾಡಿದ್ದಾರೆ.


Tuesday, September 9, 2014

ಭೂತದ ಬೆನ್ನು ಬಿದ್ದು.

ಅವರು ಕನ್ನಡದಲ್ಲಿ ಹೆಸರು ಮಾಡಿದ ಖ್ಯಾತ ಪೋಷಕ ನಟರು. ತಮಿಳು ಚಿತ್ರರಂಗದಲ್ಲೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೇವರು ದೆವ್ವ ಮುಂತಾದವುಗಳ ಬಗ್ಗೆ ನಂಬಿಕೆ ಇಲ್ಲದ ಹಾಗೆಯೇ ಮೂರ್ತಿ ಪೂಜೆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದವರು. ತಾವಾಯಿತು ತಮ್ಮ ಕೆಲಸವಾಯಿತು ಎಂದು ತಮ್ಮ ಪಾಡಿಗೆ ಇರುವವರು.
ಒಮ್ಮೆ ಯಾವುದೂ ಚಿತ್ರದ ಶೂಟಿಂಗ್ ಗಾಗಿ ಬೆಂಗಳೂರಿನಿಂದ ಮುನ್ನೂರು ಕಿಲೋಮೀಟರುಗಳ ದೂರಕ್ಕೆ ಹೋಗಿದ್ದರು. ಚಿತ್ರೀಕರಣ ಮುಗಿದಾಗ ಸಂಜೆ ಎಂಟು ಘಂಟೆ. ಇಡೀ ಚಿತ್ರತಂಡ ನಾಳೆ ಬೆಳಿಗ್ಗೆಯೇ ಹೋದರಾಯಿತು ಉಳಿದುಕೊಳ್ಳಿ ಎಂದಿದೆ. ಆದರೆ ಸುಖಾ ಸುಮ್ಮನೆ ಯಾಕೆ ಉಳಿಯುವುದು ನೀಟಾಗಿ ಊಟ ಮಾಡಿಕೊಂಡು ಹೊರತುಬಿಡೋಣ ಎಂದು ಆ ತಕ್ಷಣ ತಮ್ಮದೇ ಕಾರಿನಲ್ಲಿ ಹೊರಟಿದ್ದಾರೆ.ಆದರೆ ಮಾರ್ಗ ಮದ್ಯದಲ್ಲಿ ಯಾಕೋ ಸುಸ್ತಾದಂತೆನಿಸಿ ಇಲ್ಲಿ ಎಲ್ಲಾದರೂ ಹೋಟೆಲ್ ರೂಂ ಮಾಡಿ ಮಲಗಿಬಿಡೋಣ ಎನಿಸಿ ಸುತ್ತ ಮುತ್ತಲ ಊರನ್ನು ಹುಡುಕಾಡಿದ್ದಾರೆ. ಅದೊಂದು ಚಿಕ್ಕ ನಗರ. ಇರುವುದೊಂದೇ ಲಾಜ್.ಅದರಲ್ಲಿ ಹೋಗಿ ಕೇಳಿದಾಗ ಸಾರ್ ಇರುವೆಲ್ಲಾ ಕೋಣೆಗಳು ಈಗಾಗಲೇ ಬುಕ್ ಆಗಿಹೋಗಿವೆ. ಒಂದೇ ಒಂದು ಕೋಣೆ ಇದೆ. ನೀವು ಬೇಕೇ ಬೇಕು ಎಂದರೆ ನಾನು ಅದನ್ನೇ ಕೊಡುತ್ತೇನೆ. ಎಂದಿದ್ದಾನೆ. ಇವರು ಬೇಕಪ್ಪಾ.. ಅದಕ್ಕಲ್ಲವೇ ಕೇಳುತ್ತಿರುವುದು ಎಂದಿದ್ದಾರೆ.ಆತ ಸ್ವಲ್ಪ ಹಿಂದೆ ಮುಂದೆ ನೋಡಿದವನು ಕೀ ಕೊಟ್ಟು ಹುಷಾರು ಸಾರ್, ಏನಾದರೂ ಬೇಕಾದರೆ ಒಂಬತ್ತಕ್ಕೆ ಕರೆ ಮಾಡಿ ಎಂದಿದ್ದಾನೆ. ಆತನ ಮಾತಿನಲ್ಲಿದ್ದ ಬಿಗುವನ್ನು ಇವರು ಗಮನಿಸದೆ ಆಯಿತು ಎಂಬಂತೆ ತಲೆಯಲ್ಲಾಡಿಸಿ ಅಲ್ಲಿಂದ ಹೊರಟು ಬಂದಿದ್ದಾರೆ.
ದಣಿವಾದ್ದರಿಂದ ಕೋಣೆಗೆ ಬಂದವರೇ ಹಾಸಿಗೆ ಮೇಲೆ ಅಡ್ದಾಗಿದ್ದಾರೆ. ತಟ್ಟನೆ ನಿದ್ರೆಯೂ ಆವರಿಸಿಬಿಟ್ಟಿದೆ. ಸ್ವಲ್ಪ ಸಮಯವಾಗಿರಬಹುದು. ತಟ್ಟನೆ ಯಾರೋ ಬಡಿದು ಎಬಿಸಿದಂತೆ ಎಚ್ಚರವಾಗಿದೆ. ಕಣ್ಣು ಬಿಟ್ಟು ಸುಮ್ಮನೇ  ಅತ್ತಿತ್ತ ತಲೆಯಲ್ಲಾಡಿಸಿ ಮಂಚದ ಪಕ್ಕ ಇದ್ದ ಕುರ್ಚಿಯ ಮೇಲೆ ಮನುಷ್ಯ ಆಕೃತಿಯೊಂದು ಇವರತ್ತಲೇ ನೋಡುತ್ತಾ ಕುಳಿತಿದೆ. ಮೊದಲಿಗೆ ಎದೆ ಝಾಲ್ ಎಂದಿದೆ. ಇವನ್ಯಾರು.. ಕಳ್ಳನಾ..? ದರೋಡೆ ಕೋರನಾ... ಈ ಕ್ಷಣ ಏನು ಮಾಡುವುದು ಇದೆಲ್ಲಾ ನನ್ನ ಭ್ರಮೆಯ ಎಂಬಿತ್ಯಾದಿ ಗೊಂದಲಗಳು ಆ ಕ್ಷಣದಲ್ಲಿ ಹಾಗೆಯೇ ಬಂದು ಹೋಗಿವೆ. ಆದರೆ ಆತ ನಿಚ್ಚಳವಾಗಿ ಕುಳಿತಿದ್ದಾನೆ. ಕಣ್ಣ ಬಾಲಿ ಪ್ರಕಾಶಮಾನವಾದ ಎರಡು ಹರಳುಗಳಿವೆ. ಅದು ಬಿಟ್ಟರೆ ಇಡೀ ಆಕೃತಿ ಬರಿಯ ಛಾಯೆಯಂತಿದೆ. ಮಂದ ಬೆಳಕಿನಲ್ಲಿ ಇವರತ್ತಲೇ ಮುಖ ಮಾಡಿ ಕುಳಿತಿರುವ ಆತನ ಮುಖ ಮಂದ ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಮೊದಲಿಗೆ ಗಾಬರಿಯಾದರೂ ಸ್ವಲ್ಪ ಧೈರ್ಯ ತಂದು ಕೊಂಡವರು ಏಯ್ ಯಾರಪ್ಪಾ ನೀನು... ಎಂದಿದ್ದಾರೆ. ಉತ್ತರ ಬಂದಿಲ್ಲ. ಯಾರೋ ನೀನು ಸ್ವಲ್ಪ ದನಿ ಏರಿಸಿದ್ದಾರೆ. ಸ್ವಲ್ಪ ತಡಬಡಾಯಿಸಿದ್ದಾರೆ.
ಆಗ ನಿಧಾನಕ್ಕೆ ಮೇಲೆ ಎದ್ದು ನಿಂತಿದೆ ಆ ಆಕೃತಿ. ಒಂದು ತಾರಾ ಹೊಗೆಯ ಆಕೃತಿಯಂತೆ ಭಾಸವಾಗಿದೆ ಇವರಿಗೆ. ನಿಧಾನಕ್ಕೆ ಎದ್ದ ಅದು ಹಾಗೆಯೇ ಬಾಗಿಲು ಹತ್ತಿರ ಸರಿದು ಹೋಗಿದೆ. ಅಷ್ಟೇ. ಅದಾದ ನಂತರ ಎದ್ದು ಲೈಟ್ ಆನ್ ಮಾಡಿದವರಿಗೆ ಹಾಕಿದ ಬಾಗಿಲು ಚಿಲಕ ಅಣಕಿಸಿದಂತಾಗಿದೆ. ಆದರೆ ಅದು ಯಾರು? ದೆವ್ವ ಭೂತ ಯಾವುದನ್ನೂ ನಂಬದ ಅವರಿಗೆ ಏನು ಮಾಡಬೇಕೋ ತೋಚಿಲ್ಲ. ಇದೆನ್ನ ಭ್ರಮೆಯಾ ಅಥವಾ ನಿಜಕ್ಕೂ ಅದ್ಯಾರೋ ಕುಳಿತಿದ್ದರಾ? ಹಾಗಾದರೆ ಅದು ದೆವ್ವ ಇರಬಹುದಾ?
ಸುಮಾರು ಹೊತ್ತು ನಿದ್ರೆ ಮಾಡದೆ ಹಾಗೆಯೇ ಒಂದರ ಮೇಲೊಂದು ಸಿಗರೇಟು ಸುಡುತ್ತಾ ಅದೇ ಶಾಕ್ ನಲ್ಲಿ ಕುಳಿತುಬಿ್ಟ್ಟಿದಾರೆ. ಬೆಳಿಗ್ಗೆಯಾದ ತಕ್ಷಣ ರಿಸೆಪ್ಶನ್ ಕೌಂಟರ್ ಗೆ ಓಡಿ ಹೋದರೆ ಆತ ಅಲ್ಲೇ ಕವುಚಿ ಮಲಗಿದ್ದಾನೆ. ಇವರೇ ಎಬ್ಬಿಸಿದ್ದಾರೆ. ನಡೆದ ವಿಷಯ ಹೇಳಿದ್ದಾರೆ. ಸಾರ್.. ನಾವು ಆ ರೂಂ ಯಾರಿಗೂ ಕೊಡೋದಿಲ್ಲ ಸಾರ್. ಅಲ್ಲೊಬ್ಬ ವ್ಯಕ್ತಿ ಸುಮಾರು ದಿನದ ಹಿಂದೆ ಬಂದವನು ವಾರಗಟ್ಟಲೆ ಆ ರೂಮಲ್ಲೇ ಇದ್ದ. ಬೆಳಿಗ್ಗೆಯಿಂದ ಸಂಜೆಯವರೆಗೂ ಅಲ್ಲೇ ಇರೋನು. ಸಂಜೆ ಒಂದು ಸುತ್ತು ಬಂದು ಸುತ್ತಾಡಿ ಮತ್ತೆ ಎಣ್ಣೆ ಬಾಟಲು ತಗೊಂಡು ಒಳಗೆ ಹೋಗೋವ್ನು..ಯಾರ್ನೂ ಮಾತಾಡಿಸ್ತಾನೆ ಇರ್ಲಿಲ್ಲ...ನೋಡಿದ್ರೆ ಸ್ಮೈಲ್ ಮಾಡೋನು ಅಷ್ಟೇ.. ಸ್ವಲ್ಪ ದಿನ ಆದ್ಮೇಲೆ ಅವನು ಹೊರಗೆ ಬರ್ಲಿಲ್ಲ. ಹೋಗಿ ನೋಡಿದ್ರೆ ಅಲ್ಲೇ ನೇಣು ಹಾಕ್ಕೊಂಡು ಸತ್ತು ಹೋಗಿದ್ದ ಸಾರ್.. ಆಮೇಲಿಂದ ಆ ರೂಮಲ್ಲಿ ಕಾಟ ಶುರುವಾಯಿತು ನೋಡಿ. ಯಾರಾದ್ರೂ ರೂಮಿಗೆ ಬಂದ್ರೆ ಹಾಸಿಗೆ ಪಕ್ಕದಲ್ಲಿ ಮಲಗಿದಂತೆ...ಪಕ್ಕದಲ್ಲಿ ಕೂತಂಗೆ...ನೇತಾಡೋ ಹಂಗೆ.. ಆಮೇಲೆ ನಮ್ಮ ಸಾವುಕಾರ್ರು ಮಾಡೋ ಪೂಜೆ ಎಲ್ಲಾ ಮಾಡಿಸಿದರು.. ಆದರೂ ಕಂಪ್ಲೇಂಟ್ ಇದ್ದೇ ಇತ್ತು. ಅದಕ್ಕೆ ಅದನ್ನು ಯಾರಿಗೂ ಕೊಡ್ತಿರಲಿಲ್ಲ.. ರಾತ್ರಿ ನೀವು ರೂಮು ಬೇಕೇ ಬೇಕು ಅಂದ್ರಲ್ಲಾ..ಅದಕ್ಕೆ ಕೊಟ್ಟಿದ್ದು ಎಂದ.
ಅದಾದ ನಂತರ ಊರು ಸೇರಿಕೊಂಡ ಅವರಿಗೆ ಮೂರು ದಿನ ಜ್ವರ ಬಂದು ನರಳುವ ಹಾಗೆ ಆಯಿತಂತೆ. ಆನಂತರ ದೇವರ ಪೂಜೆ ಮಾಡಿಸಿ, ಈಗ ದೇವರನ್ನು ನಂಬುತ್ತಾರೆ.
ಸುಮ್ಮನೆ ದೆವ್ವ ಭೂತದ ಕತೆಯಿಟ್ಟುಕೊಂಡು ಸಿನಿಮಾ ಮಾಡಿಕೊಡಿ ಎಂದಾಗ ನನಗೆ ಏನು ಕತೆ ಮಾಡುವುದು ಎನಿಸದೇ ಇರಲಿಲ್ಲ. ಯಾಕೆಂದರೆ ಸತ್ತ ಆತ್ಮ/ಪ್ರೇಮಿ .. ಒಂದು ಹಾಂಟೆಡ್ ಹೌಸ್ ಇದನ್ನು ಬಿಟ್ಟು ತಾರ್ಕಿಕವಾಗಿ ಏನಾದರೂ ಮಾಡಿದರೆ ಜನರು ಒಪ್ಪಬಹುದೇನೋ? ಆದರೆ ನಿರ್ಮಾಪಕರು ಒಪ್ಪಬೇಕಲ್ಲ. ಪ್ರಯೋಗ ಎಲ್ಲಾ ಬೇಡಿ ಸಾರ್.. ಸುಮ್ನೆ ಒಂದು ದೆವ್ವದ ಫಿಲಂ ಮಾಡಿ.. ಎಂದು ಅಂದುಬಿಟ್ಟರೆ ಏನು ಮಾಡುವುದು. ಇಷ್ಟಕ್ಕೂ ಹಾರರ್ ಸಿನಿಮಾ ಮಾಡುವುದು ಒಂದು ಸವಾಲೇ. ಆದರೆ ಇತ್ತೀಚಿಗೆ ಅದರಲ್ಲೂ 6-5 ಬಂದ ಮೇಲೆ ಅದರ ಪರಿಕಲ್ಪನೆಯೇ ಬದಲಾಗಿದೆ. ಎಲ್ಲರೂ ನಿಜ ದೆವ್ವ ತೋರಿಸುವ ಎಂದೆ ಹೊರಟಿದ್ದಾರೆ. ಅಲುಗಾಡುತ್ತಾ ಸಾಗುವ ಕ್ಯಾಮೆರಾ, ಕತ್ತಲಲ್ಲಿ ಒಬ್ಬೊಬ್ಬರೇ ಹೋಗುವ ಬುದ್ದಿಗೇಡಿಗಳು, ಮುಖದ ತುಂಬಾ ಪೌಡರ್ ಹಚ್ಚಿಕೊಂಡ ದೆವ್ವ, ಪಿಕ್ನಿಕ್ ಗೆ ಹೋಗಿ ಸಿಕ್ಕಿ ಕೊಳ್ಳುವ ಹುಡುಗ ಹುಡಿಗಿಯರು... ಹೀಗೆ. ಆಡದೆ ಕ್ಲೀಷೆ ಎನಿಸುತ್ತಾದರೂ ಬೇರೆ ಏನು ಸಾದ್ಯತೆಗಳಿವೆ ಎಂಬ ಪ್ರಶ್ನೆ ನನ್ನಲ್ಲೇ ಹಾಕಿಕೊಂಡೆ.
ಇದೆಲ್ಲದಕ್ಕೂ ಮೊದಲು ದೆವ್ವ ಭೂತ ಎಂಬುದರ ಸ್ಪಷ್ಟ ಅರ್ಥ ಬೇಕು. ನಿಜವಾ ಸುಳ್ಳಾ ..ಇದನ್ನೆಲ್ಲಾ ಸುಮ್ಮೆನೆ ಒಂದಷ್ಟು ಅದ್ಯಯನ ಮಾಡೋಣ ಎನ್ನುವ ನಿಟ್ಟಿನಲ್ಲಿ ಆರು ತಿಂಗಳು ಕಳೆದೆ ನೋಡಿ. ಒಂದಷ್ಟು ಜನರನ್ನು ಭೇಟಿ ಮಾಡಿದೆ, ಅವರ ಅನುಭವ ಕೇಳಿದೆ. ಅದೆಲ್ಲಾ ರೋಚಕ ನಿಗೂಡ ಎನಿಸದೇ ಇರಲಿಲ್ಲ.
ಮನುಷ್ಯನಿಗೆ ನಿಲುಕದ ಯಾವುದೋ ಅಗೋಚರವಾದದ್ದು ಇರಬೇಕು ಎನಿಸಿತು. ಹಾಗೆಯೇ ಜನರ ಒಂದಷ್ಟು ಅನುಭವ ಕೂಡ ತರ್ಕಕ್ಕೆ ನಿಲುಕಲಿಲ್ಲ. ಅಂತಹ ಅನುಭವದಲ್ಲಿ ಮೇಲಿನ ಅನುಭವ ಕಥನ ಕೂಡ ಒಂದು.

Sunday, August 10, 2014

ಹೀಗೆ ಸುಮ್ಮನೆ...

ಸಿನಿಮಾದ ಚಿತ್ರಕತೆಯೇ ಸಿನಿಮಾದ ಕತೆಯ ಆಧಾರ ಸ್ಥಂಭ. ಹಾಗಾಗಿ ಚಿತ್ರಕತೆಯ ಮೇಲೆ ಒಂದಿಡೀ ಸಿನಿಮಾ ಆಧಾರವಾಗಿರುತ್ತದೆ. ಹಾಗೆಯೇ ಒಂದು ಕತೆಯನ್ನು ಭಿನ್ನವಾಗಿ ನಿರೂಪಿಸಬೇಕೆಂದರೆ ಅದಕ್ಕೆ ಚಿತ್ರಕತೆಯೇ ಮುಖ್ಯವಾದದ್ದು. ಮೊದಲಿಗೆ ಏನನ್ನೋ ತೋರಿಸಿ ಆಮೇಲೆ ಏನನ್ನೋ ತೋರಿಸಿ ತಳಕುಹಾಕಿ ಹೀಗೆ. ಒಂದು ಕತೆಯನ್ನು ಆಸಕ್ತಿಕರ ಮಾಡಿಬಿಡಬಹುದು. ಸುಮ್ಮನೆ ಕುತೂಹಲ ಕೆರಳಿಸುತ್ತಾ ಸಾಗಿ ಕೊನೆಯಲ್ಲಿ ಆ ರಹಸ್ಯವನ್ನು ಬಿಚ್ಚಿಟ್ಟರೆ ನೋಡುಗ ಫುಲ್ ಖುಷಿ.
ನೋಡುತ್ತಾ ನೋಡುತ್ತಾ ಊಹೆ ಮಾಡುತ್ತಾ ಸಾಗುವ ವೀಕ್ಷಕನಿಗೆ ಕೊನೆಯಲ್ಲಿ ಅವನಿಗೆ ನಿಲುಕದ್ದು ಇದ್ದು ಬಿಟ್ಟರೆ ಅವನ ಸಂತಸಕ್ಕೆ ಪಾರವಿಲ್ಲ. ಏಕೆಂದರೆ ಅದು ಬುದ್ದಿವಂತಿಕೆಯ ಪ್ರಶ್ನೆ. ಯಾವಾಗಲೂ ಗೆಲ್ಲುವುದು ಆ ಬುದ್ದಿವಂತಿಕೆಯೇ. ಹಾಗಾಗಿಯೇ ಮೊದಲಿಗೆ ಉಪೇಂದ್ರ ತಮ್ಮ ಎ ಚಿತ್ರದ ಅಡಿಬರಹದಲ್ಲಿ ಬುದ್ದಿವಂತರಿಗೆ ಮಾತ್ರ ಎಂದಿದ್ದರು.
ಆದರೆ ಎ ಚಿತ್ರದ ಚಿತ್ರಕತೆ ಏನೇ ತಿರುವು ಮುರುಗಾಗಿದ್ದರೂ ಕತೆಗಿಂತ ಚಿತ್ರಕತೆಯಲ್ಲಿ ಸತ್ವವಿತ್ತು. ಬರೀ ದೃಶ್ಯದಲ್ಲೇ ಮಜಾ ಇತ್ತು. ಹಾಗಾಗಿಯೇ ಸಿನಿಮಾ ಅರ್ಥವಾಗದಿದ್ದರೆ ಇನ್ನೊಮ್ಮೆ ನೋಡಲೂ ಸಿನಿಮಾ ಬೇಸರ ಆಗುತ್ತಿರಲಿಲ್ಲ. ಮೊದಲ ಸಿನಿಮಾದೊಳಗಿನ ಸಿನಿಮಾದಲ್ಲಿನ ದೃಶ್ಯಗಳು ವಿಡಂಬನೆ ಜೊತೆಗೆ ಮಾಸ್ ಆಗಿತ್ತು. ಅದರಲ್ಲಿ ಅಬ್ಬರ ಆರ್ಭಟ ಇತ್ತು. ಇನ್ನೊಮ್ಮೆ ಮಗದೊಮ್ಮೆ ನೋಡುವ ಪ್ರೇಕ್ಷಕ ಅರ್ಥ ಮಾಡಿಕೊಳ್ಳುವ ಜೊತೆಗೆ ದೃಶ್ಯದ ದ್ರವ್ಯಕ್ಕೆ ಮಾರುಹೋಗುತ್ತಿದ್ದ. ಅದನ್ನು ನೋಡಿ ಮಜಾ ಮಾಡುತ್ತಿದ್ದ. ಎಲ್ಲಾ ತಿರುವು ಮುರುಗು ಚಿತ್ರಕತೆಯ ಸಿನಿಮಾಗಳಿಗೆ ಗೊಂದಲಮಯ ನಿರೂಪಣೆಗೆ ಮುಖ್ಯವಾದದ್ದು ಅಂತಹುದ್ದೆ ಮಜಾ ಕೊಡುವ ಚಿತ್ರಕತೆ ಎನ್ನಬಹುದು. ಅದು ಪದೇ ಪದೇ ನೋಡಿಸಿಕೊಳ್ಳುವಂತಿದ್ದರೆ ಸೂಪರ್. ಇಲ್ಲವಾದಲ್ಲಿ ಸಿನಿಮಾ ಮೊದಲ ವೀಕ್ಷಣೆಗೆ ಗೊಂದಲ ಮೂಡಿಸಿದರೂ ಎರಡನೆಯ ಸಾರಿ ನೋಡಿ ತಿಳಿಯೋಣ ಅಂದುಕೊಂಡರೂ ಚಿತ್ರಮಂದಿರದೊಳಗೆ ಹೋಗಲು ಮನಸ್ಸು ಹಿಂಜರಿದೆ ಹಿಂಜರಿಯುತ್ತದೆ.
ನೋಲನ್ ನಿರ್ದೇಶನದ ಫಾಲೋಯಿಂಗ್, ಮೆಮೆಂಟೊ ಗಿಂತ ಮಜಾ ಕೊಡುವುದು ಇನ್ಸೆಪ್ಶನ್ . ಅದಕ್ಕೆ ಕಾರಣ ಮೊದಲೆರೆಡು ಚಿತ್ರಗಳಲ್ಲಿ ನೋಡಿಸಿಕೊಳ್ಳುವ ದೃಶ್ಯ ವೈಭವ ಇಲ್ಲ. ಆದರೆ ವಸ್ತುವಿದೆ. ಆದರೆ ಇನ್ಸೆಪ್ಶನ್ ನಲ್ಲಿ ವಸ್ತು, ದೃಶ್ಯ ವೈಭವ ಎರಡೂ ಇದೆ.
ಮೊನ್ನೆ ನೋಡಿದ ಬಹುಪರಾಕ್, ಅದಕ್ಕೂ ಮುನ್ನ ಬಂದ ಉಳಿದವರು ಕಂಡಂತೆ , ಲೂಸಿಯ ಚಿತ್ರಗಳನ್ನು ನೋಡಿದಾಗ ನನಗನ್ನಿಸಿದ್ದು. ಬಹುಪರಾಕ್ ಒಬ್ಬನ ಜೀವನ ಕಥನ. ಅದನ್ನು ನಿರ್ದೇಶಕ ಸುನಿ ಮೂರು ಭಾಗಗಳಾಗಿ ಮಾಡಿದ್ದಾರೆ. ಮೂರರ ಘಟ್ಟಗಳನ್ನು ಒಂದರಪಕ್ಕ ಒಂದರಂತೆ ಜೋಡಿಸುತ್ತಾ ಸಾಗಿದ್ದಾರೆ. ಹಾಗಂತ ಮೂರೂ ಕತೆಗಳೂ ಒಬ್ಬನದು ಎಂದು ನಿಖರವಾಗಿ ಹೇಳುವ ಹಾಗಿಲ್ಲ. ಹೇಳುವುದಾದರೂ ಕಾಲಘಟ್ಟವನ್ನು ಹೆಸರಿಸುವ ಹಾಗಿಲ್ಲ. ಉದಾಹರಣೆಗೆ ಅವಳಿ ನಾಯಕಿಯರನ್ನು ಪ್ರೀತಿಸುವ ನಾಯಕನದೆ ಇಡೀ ಸಿನೆಮಾದ ಕತೆ ಅವನದೇ ಎನ್ನುವುದಾದರೆ ಆತ ಮುದುಕನಾಗುವವರೆಗೆ ಕತೆ ಅವಲೋಕಿಸಿದರೆ, ಅದ್ಯಾವ ಕಾಲಘಟ್ಟದಲ್ಲಿ ನಡೆಯುತ್ತದೆ ಎಂಬುದು ಗೊಂದಲಕ್ಕೀಡು ಮಾಡುತ್ತದೆ. ಈವತ್ತಿನ ಮೊಬೈಲ್, ಪರಿಸ್ಥಿತಿ ಅಲ್ಲೂ ಇದೆ. ಮುದುಕನ ಕತೆಯಲ್ಲೂ ಇದೆ. ಭೂಗತದೊರೆ ಕತೆಯಲ್ಲೂ ಇದೆ. ಅಂದರೆ ಕತೆ ಈವತ್ತಿಗೆ ಪ್ರಾರಂಭವಾಗಿದ್ದರೆ ಮುಂದಿನ ನಲವತ್ತು ವರ್ಷದ ಚಿತ್ರಣ ಅಲ್ಲಿರಬೇಕಿತ್ತು. ಅಥವಾ ಕತೆ ಈವತ್ತಿಗೆ ಮುಗಿದಿದ್ದರೆ ಹಿಂದಿನ ನಲವತ್ತು ವರ್ಷದ ಚಿತ್ರಣ ಇರಬೇಕಿತ್ತು. ಆದರೆ ಮೂರು ಕತೆಗಳು ಸಮಾನ ಕಾಲಘಟ್ಟದಲ್ಲಿ ನಡೆಯುತ್ತವೆ. ಸರಿ ಇದಕ್ಕೊಂದು ಉದಾತ ಅರ್ಥವನ್ನು ಕೊಟ್ಟು ಅದು ಎಲ್ಲರ ಕತೆಯೂ ಇರಬಹುದು, ಯಾವಾಗ ಬೇಕಾದರೂ ನಡೆಯಬಹುದು ಎಂದು ಬರೆದುಬಿಡಬಹುದು. ಓದಿದವರು ಅದನ್ನು ಮೆಚ್ಚಲೂ ಬಹುದು. ಆದರೆ ನೋಡುಗ?
ಬಹಳ ಜಾಗರೂಕತೆಯಿಂದ ಚಿತ್ರಕತೆ ಹೆಣೆದು ಕೊನೆಯವರೆಗೂ ಸಾಗಿಸಿ ಕೊನೆಯಲ್ಲಿ ಒಂದೇ ಕಥನ ಎನ್ನುವುದನ್ನು ಒಂದೇ ದೃಶ್ಯದಲ್ಲಿ ಸಾದರ ಪಡಿಸುತ್ತಾರೆ ಸುನಿ. ಆದರೆ ಅಲ್ಲಿಯವರೆಗೆ ನೋಡಿ ಅಕಸ್ಮಾತ್ ಅರ್ಥವಾಗದೆ ಇದ್ದರೇ ಮತ್ತೊಮ್ಮೆ ನೋಡಿ ಅರ್ಥ ಮಾಡಿಕೊಳ್ಳೋಣ ಎನ್ನಲು ದೃಶ್ಯ ಕಥನದಲ್ಲಿ ಮಜಾ ಸಿಗುವುದಿಲ್ಲ. ಮತ್ತು ಮೊದಲ ನೋಟಕ್ಕೆ ಪ್ರೇಕ್ಷಕ ಹೈರಾಣ ಆಗಿರುತ್ತಾನಾದ್ದರಿಂದ ಆತನ ಆಸಕ್ತಿ ಕರಗಿಹೋಗಿರುತ್ತದೆ. ಬಹುಶ ಉಳಿದವರು ಕಂಡಂತೆ ಚಿತ್ರದ ಸೋಲಿಗೂ ಇದೇ ಕಾರಣವಿರಬಹುದು. ಉಳಿದವರು ಕಂಡಂತೆ ಚಿತ್ರದ ಕತೆಯ ಭಾಗ ಭಾಗ ನಿರೂಪಣೆಯಲ್ಲಿ ಮಜಾ ಇರಲಿಲ್ಲವಾದರೂ ಚಿತ್ರಣದಲ್ಲಿ ಅಚ್ಚುಕಟ್ಟಿತ್ತು. ಆದರೆ ಮತ್ತೊಮ್ಮೆ ನೋಡೋಣ ಎಂದುಕೊಳ್ಳದ ಪ್ರೇಕ್ಷಕ ತಲೆಬಿಸಿ ಎಂದುಕೊಂಡ...ಬಹುಪರಾಕ್ ಕೂಡ ಅದೇ ನಿಟ್ಟಿನಲ್ಲಿದೆಯಾ?
ಪ್ರಯೋಗಾತ್ಮಕ ಚಿತ್ರವನ್ನು ಮಾಡುವಾಗ ಯಾವ ಪ್ರೇಕ್ಷಕನಿಗೆ ನಾವದನ್ನು ನೀಡುತ್ತಿದ್ದೇವೆ ಎಂದುಕೊಂಡರೆ ಒಳ್ಳೆಯದು ಎನ್ನಬಹುದು. ಯಾಕೆಂದರೆ ಅದನ್ನು ಸರ್ವ ರೀತಿಯ ಎಲ್ಲಾ ವರ್ಗದ ವೀಕ್ಷಕರು ನೋಡಲಿ ಎನ್ನಬಹುದಾದರೆ ದೃಶ್ಯಾವಳಿಗಳಲ್ಲಿ ಆ ತನವನ್ನು ಸೇರಿಸಲೇಬೇಕಾಗುತ್ತದೆ. ಇಲ್ಲವಾದಲ್ಲಿ ಒಟ್ಟಾರೆ ಮಜಾ ಕೊಡಬಹುದು ಎಂದುಕೊಳ್ಳುವ ಅಂಶ ಬಿಡಿಯಾಗಿ ನೀರಸ ಎನಿಸುತ್ತದೆ ಅಥವಾ ಬಿಡಿಯಾಗಿ ಸೂಪರ್ ಎನಿಸುವ ಅಂಶ ಒಟ್ಟಾರೆಯಾಗಿ ಪೇಲವ ಎನಿಸುತ್ತದೆ.
ಹಾಗೆಯೇ ಕೆಲವು ಕತೆಗಳಿಗೆ ಅದರದೇ ಆದ ಮಿತಿಗಳಿರುವುದು ಸತ್ಯ. ನನ್ನದೇ ಚಿತ್ರದ ಉದಾಹರಣೆ ತೆಗೆದುಕೊಂಡರೆ ನನ್ನ ಕತೆ ಹೇಳಿ ನಿರ್ಮಾಪಕರಿಗೆ ಹೇಳಿದ್ದೆ. ನಮ್ಮದು ಒಮ್ಮೆ ಮಾತ್ರ ನೋಡುವ ಸಿನಿಮಾ ಯಾಕೆಂದರೆ ಒಂದು ಸಸ್ಪೆನ್ಸ್ ಚಿತ್ರದ ಅಂತ್ಯ ಒಮ್ಮೆ ಗೊತ್ತಾದರೆ ಮತ್ತೊಮ್ಮೆ ಯಾಕೆ ನೋಡುತ್ತಾನೆ ಪ್ರೇಕ್ಷಕ ಎಂದು. ಅದು ಸತ್ಯವೇ ಆಗಿದ್ದರೂ ನಿರ್ಮಾಪಕರು ನನ್ನ ಮುಖ ನೋಡಿದ್ದರು.
ಒಟ್ಟಿನಲ್ಲಿ ಒಬ್ಬ ಚಿತ್ರಕರ್ಮಿ ಒಂದು ಕತೆ ಮಾಡಿದ ನಂತರ ಕತೆಯ ಹೊರಗೆ ನಿಂತು ಒಮ್ಮೆ ವಿಮರ್ಶೆ ಮಾಡಿದರೆ ಒಳ್ಳೆಯದೇನೋ? ಇಲ್ಲವಾದಲ್ಲಿ ಭ್ರಮಾನಿರಸನ ಕಟ್ಟಿಟ್ಟ ಬುತ್ತಿ.

  

Wednesday, July 30, 2014

ಹೀಗೊಂದು ತಲೆ ಹರಟೆ.

ಮೊನ್ನೆ ಒಗ್ಗರಣೆ ಚಿತ್ರ ನೋಡುತ್ತಿದ್ದೆ. ಅನಿವಾರ್ಯವಾಗಿಯಾದರೂ ಮೂರು ಮೂರು ಸಾರಿ ಇಷ್ಟಪಟ್ಟು ನೋಡಿದ ಸಿನಿಮಾ ಒಗ್ಗರಣೆ. ಅಲ್ಲೊಂದು ದೃಶ್ಯವಿದೆ. ನಾಯಕ ಕಾಳಿದಾಸ ಕಾಡಿನಜೀವಿ ಜಗ್ಗಯ್ಯನನ್ನು ಕರೆತಂದು ಮನೆಯಲ್ಲಿರಿಸಿಕೊಂಡಾಗ ಅದು ರಾಜಕಾರಣಿಗೆ ಗೊತ್ತಾಗುತ್ತದೆ. ಆ ಸನ್ನಿವೇಶದಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆಯುತ್ತದೆ. ಆಗ ರಾಜಕಾರಣಿ ಇನ್ಮೇಲೆ ನಾನೇ ನಿನಗೆ ವಿಲನ್ ತಿಳ್ಕೋ ಎನ್ನುತ್ತಾನೆ. ಆಗ ಪ್ರತಿಕ್ರಿಯಿಸುವ ಪ್ರಕಾಶ್ ರಾಜ್ ನನಗೆ ವಿಲ್ಲನ್ನಾ? ಎನ್ನುತ್ತಾರೆ. ಆ ಒಂದು ಸಂಭಾಷಣೆಗೆ ಇಡೀ ಚಿತ್ರಮಂದಿರ ಶಿಳ್ಳೆ ಹಾಕಿತ್ತು.
ಆ ಕ್ಷಣದಲ್ಲಿ ಅಲ್ಲಿನ ಅಸಹಾಯಕ ಕಾಳಿದಾಸನನ್ನು ಮರೆತ ಪ್ರೇಕ್ಷಕ ಮಾಮೂಲಿ ಖಳ ಪ್ರಕಾಶ ರಾಜನನ್ನು ತಟ್ಟನೆ ಮನಸ್ಸಿಗೆ ತಂದುಕೊಂಡಿದ್ದ. ಅಂದರೆ ಪ್ರಕಾಶ ತಮ್ಮ ಖಳನಾಯಕನ ಪಾತ್ರದಲ್ಲಿ ಅದೆಷ್ಟರ ಮಟ್ಟಿಗೆ ಬೇರೂರಿದ್ದಾರೆ ಜನಮಾನಸದಲ್ಲಿ ಎನಿಸದಿರಲಿಲ್ಲ. 
ಒಬ್ಬ ಕಲಾವಿದ ಕೆಲವು ಪಾತ್ರಗಳಿಂದ ಜನರಲ್ಲಿ ಬೇರೂರಿ ಬಿಡುತ್ತಾನೆ. ಅದು ಒಳ್ಳೆಯದಾ ಕೆಟ್ಟದಾ? ಅದು ಗೊತ್ತಾಗದ ಉತ್ತರವಿಲ್ಲದ ಪ್ರಶ್ನೆ. ಕೆಲವೊಮ್ಮೆ ಅದೇ ವರವಾದರೆ ಮತ್ತೆ ಕೆಲವೊಮ್ಮೆ ಅದೇ ಶಾಪವಾಗುತ್ತದೆ. ಉದಾಹರಣೆಗೆ ಕನ್ನಡೇತರ ಭಾಷೆಗಳಲ್ಲಿ ದೊಡ್ಡ ನಾಯಕರುಗಳಿಗೆ ಕೇರ್ ಮಾಡದ ಅಬ್ಬರಿಸುವ ಪ್ರಕಾಶ್ ರಾಜ್ ಕನ್ನಡಕ್ಕೆ ಬಂದಾಗ ಅಸಹಾಯಕರಂತೆ ಆಗಿಬಿಡುತ್ತಾರೆ. ಅವರ ನಾನು ನನ್ನ ಕನಸು ಚಿತ್ರದಲ್ಲೂ ಒದ್ದಾಡುತ್ತಾರೆ. ಎಲ್ಲಿ ಹೋದ ಆ ಖದರ್ ಖಳನಾಯಕ ಎನಿಸದೇ ಇರದು ಪ್ರೇಕ್ಷಕನಿಗೆ. ನನಗೆ ಎಷ್ಟೋ ಸಲ ಹಾಗೆ ಅನಿಸಿದ್ದಿದ್ದೆ.
ಇನ್ನೊಂದು ಚಿತ್ರ ರೋಜ್ ನಲ್ಲಿ ಸಾಯಿಕುಮಾರ್ ಅಭಿನಯಿಸಿದ್ದಾರೆ. ಅದೂ ಖಾಕಿಧಾರಿಯಾಗಿ. ಇನ್ನು ಕೇಳಬೇಕೆ. ? ನಾಯಕನಾಗಿ, ಪೋಲಿಸ್ ಆಗಿ  ಖಳರನ್ನು ದುಷ್ಟರನ್ನು  ಬರೀ ಹೊಡೆಯುವುದರಲ್ಲಷ್ಟೇ ನಿಷ್ಣಾತರಲ್ಲ ಸಾಯಿ. ಮುಲಾಜಿಲ್ಲದೆ ಅವಾಚ್ಯ ಶಬ್ಧಗಳಿಂದ ಅಕ್ಕನ, ಅಮ್ಮನ್, ಗಾಂಡು ಚೂತ್ಯ ಬೈಯುವುದರಲ್ಲಿ ಎತ್ತಿದ ಕೈ. ಎದುರಿನವನು ಯಾರೇ ಆಗಿರಲಿ ಬೈದೆ ಮಾತನಾಡುವುದು ಅವರ ಗುಣ. ರೋಜ್ ಚಿತ್ರದಲ್ಲಿ ಅವರು ಬಂದ ತಕ್ಷಣ ಜನರಿಗೆಲ್ಲಾ ರೋಮಾಂಚನ. ಅದರಲ್ಲೂ ಮುಂದಿನ ಬೆಂಚಿನ ಅಭಿಮಾನಿಗಳಂತೂ ಅವರ ಬಾಯಿಯಿಂದ ಉದುರುವ ಶಬ್ಧಗಳನ್ನು ಕೇಳಲು ಕಾತುರರಾಗತೊಡಗಿದರು. ಅಲ್ಲಿಯವರೆಗೆ ಆಕಳಿಸುತ್ತಾ ಏನೇನೋ ಕೌಂಟರ್ ಕೊಡುತ್ತಿದ್ದ ಪ್ರೇಕ್ಷಕನಿಗೆ ಸಾಯಿ ಕುಮಾರ್ ಬಾಯಿ ಮುಚ್ಚಿಸಿದ್ದರು. ಆದರೆ ಚಿತ್ರದಲ್ಲಿ ಸಾಯಿಕುಮಾರ್ ಗೆ ನಿರ್ದೇಶಕರು ಕಡಿವಾಣ ಹಾಕಿದ್ದರಿಂದ ಅವರು ಯಾರನ್ನೂ ಬೈಯಲಿಲ್ಲ. ಪ್ರೇಕ್ಷಕನಿಗೆ ಬೇಸರವಾದದ್ದಂತೂ ಸತ್ಯ.
ಹೌದು. ಕೆಲವು ಕಲಾವಿದರು ಹಾಗಿದ್ದರೆನೆ ಚೆನ್ನ ಎನಿಸಿಬಿಡುತ್ತದೆ. ಅವರೂ ನಮಗೆ ಇದೆ ತಕ್ಕದ್ದು ಎನ್ನುವಂತೆ ಮಾಡುತ್ತಾರೆ. ಅದರಿಂದ ಹೊರಬರುತ್ತಾರೋ ಇಲ್ಲವೋ? ಪ್ರೇಕ್ಷಕ ಮಾತ್ರ ಅದರಿಂದ ಹೊರಬರುವುದಿಲ್ಲ. ನನಗೆ ಹಾಲಿವುಡ್ ಚಿತ್ರದಲ್ಲಿ ಟಾಮ್ ಲಿ ಜೋನ್ಸ್ ಇದ್ದರೆ ಆತ ಯಾರನ್ನೋ ಹುಡುಕೆ ಹುಡುಕುತ್ತಾನೆ ಎನಿಸುತ್ತದೆ.  ಆತನ ಸಿನಿಮಾಗಳನ್ನು ನೋಡಿ ಬಹುತೇಕ ಚಿತ್ರದಲ್ಲಿ ಆತನ ಕೆಲಸ ಹುಡುಕುವುದು. ಯಾವುದೋ ಕೊಲೆಯನ್ನೂ ಕೊಲೆಗಾರರನ್ನು ಬೆನ್ನಟ್ಟುವುದು ತಾಮಿಲಿ ಜೋನ್ಸ್ ಗೆ ಖುಷಿ ಎನಿಸುತ್ತದೆ. ಒಂದು ಚಿತ್ರದಲ್ಲಂತೂ ಅತಿರೇಕ ಎನ್ನುವಂತೆ ತನ್ನನ್ನೇ ಹುಡುಕುತ್ತಿರುತ್ತಾನೆ.
ಹಾಗೆಯೇ ಇಮ್ರಾನ್ ಹಶ್ಮಿ ಯ ಬಗ್ಗೆ ನನ್ನ ಗೆಳೆಯನೊಬ್ಬ ಹೇಳುತ್ತಿದ್ದ. ಇವನೇನು ಗುರು ಕಂಡವರ ಹೆಂಡ್ರು ಅಂದ್ರೆ ಬಾಯಿ ಬಿಡ್ತಾನೆ ಎಂದು. ಕೇಳಲಿಕ್ಕೆ ನಗು ತರಿಸುತ್ತಾದರೂ ಇಮ್ರಾನ್ ಪರಪತ್ನಿ ಪ್ರೇಮಿ ಎನಿಸುತ್ತದೆ. ಹಾಗೆ ಇಮ್ರಾನ್ ಬೇರೆ ನಾಯಕರ ರೀತಿ ಪ್ರೀತಿಸುವುದಿಲ್ಲ. ಪ್ರೀತಿಯೋ ಮದುವೆಯೋ ಮೊದಲಿಗೆ ಮಂಚಕ್ಕೆ ಎಳೆದುಕೊಳ್ಳಲೆ ಬೇಕು, ಮುತ್ತಿಡಬೇಕು...ಜನರಿಗೂ ಇಮ್ರಾನ್ ಹೀಗೆ ಮಾಡಿದರೆ ಖುಷಿ. ಅದು ಬಿಟ್ಟು ಆತ ಯಾರೇ ನೀನು ಚಲುವೆ ನಾಯಕನಂತೆ, ಬೆಳದಿಂಗಳ ಬಾಲೆಯ ರೇವಂತ್ ನಂತೆ ಮುಖ ನೋಡದೆ, ಮುಟ್ಟದೆ ಮುತ್ತಿಡದೆ, ಬೆತ್ತಲೆ ಬೆನ್ನ ಮೇಲೆ ಕೈಯಾಡಿಸದೆ ಪ್ರೀತಿಸಲಾರನೇನೋ ಎನಿಸುತ್ತದೆ. ಹಾಗೆ ಆತ ಪ್ರೀತಿಸಿದರೂ ನಾಯಕಿಯನ್ನು ಆತ ಮುಟ್ಟದಿದ್ದರೆ ಜನರಿಂದ ಬೈಸಿಕೊಳ್ಳಲಿಕ್ಕೂ ಸಾಕು..
ಹಾಗೆಯೇ ಕೆಲವು ದಿವಸಗಳ ಹಿಂದೆ ದೇವರಾಜ್ ಪೋಲಿಸ್ ಡಿಪಾರ್ಟ್ಮೆಂಟ್ ಅನ್ನು ಗುತ್ತಿಗೆ ತೆಗೆದುಕೊಂಡ ಹಾಗೆ ಆದೆ ಪಾತ್ರಗಳನ್ನೂ ನಿರ್ವಹಿಸಿದ್ದರು. ಆಗೆಲ್ಲಾ ಏನು ದೇವರಾಜ್ ಅವರು ಶೂಟಿಂಗ್ ಎಂದಾಕ್ಷಣ ಮನೆಯಿಂದಲೇ ಪೋಲಿಸ್ ಯುನಿಫಾರ್ಮ್ ಹಾಕಿಕೊಂಡು ಹೋಗಿಬಿಡುತ್ತಾರಾ? ಎನಿಸುತ್ತಿತ್ತು.
ಹಾಗೆಯೇ ಅಲ್ಲಿಂದಿಲ್ಲಿಗೆ ಚಾಡಿ ಹೇಳಲು,  ಹಾಗೆಯೇ ಮನೆ ಮುರಿಯಲು ಸುಂದರರಾಜ್, ಹೆಣ್ಣು ಮಗಳನ್ನು ಮದುವೆ ಮಾಡಿಕೊಡುತ್ತೇನೆ ಎಂದರೂ ಬಿಡದೆ ಅತ್ಯಾಚಾರ ಮಾಡಲು ಮುಂದಾಗುವ ಕೀರ್ತಿ ರಾಜ್, ಕಂಡ ತಕ್ಷಣ ಮಾಸ್ತರ್ ಎನಿಸುವ ಸದಾಶಿವ ಬ್ರಹ್ಮಾವರ್, ಬಜಾರಿ ಅತ್ತೆಯಾಗಿ ಸತ್ಯಭಾಮ ಮುಂತಾದವರು ನಮ್ಮ ಮನಸ್ಸಿನಲ್ಲಿ ಆಯಾ ಪಾತ್ರಗಳ ಮೂಲಕ ಬೇರೂರಿಬಿಟ್ಟಿದ್ದಾರೆ. ಕೀರ್ತಿರಾಜ್ ಹುಡುಗಿಯೊಂದಿಗೆ ಸಭ್ಯವಾಗಿ ಮಾತನಾಡುತ್ತಾ ನಿಂತಿದ್ದರೂ ಅದೆಲ್ಲಿ ಪಕ್ಕಕ್ಕೆಳೆದೊಯ್ಯುತ್ತಾರೋ, ರೇಪ್ ಮಾಡುತ್ತಾರೋ ಎನಿಸುತ್ತದೆ. ಮಂಗಳಾರತಿ ತಟ್ಟೆ ಹಿಡಿದು ಸೊಸೆಯನ್ನು ಸತ್ಯಭಾಮ ಸಂತೋಷದಿಂದ ಮನೆಗೆ ಬರಮಾಡಿಕೊಂಡರೂ ಅದರಲ್ಲಿ ಏನೋ ಹುನ್ನಾರವಿರಬೇಕು ಎನಿಸದೇ ಇರದು. ಹಾಗೆಯೇ ಕಾಶಿನಾತ್ ಸುಮ್ಮನೆ ಮಾತನಾಡಿದರೂ ಅದರಲ್ಲಿ ಪೋಲಿತನವನ್ನೂ ಕಲ್ಪ್ಸಿಕೊಳ್ಳುವ ಪ್ರೇಕ್ಷಕರಿಗೆ ಕೊರತೆಯಿಲ್ಲ.ಎಷ್ಟೇ ಅಶಕ್ತ ಕೇಡಿಯಿದ್ದರೂ ಅನಂತನಾಗ್, ರಿಷಿ ಕಪೂರ್ ಹೊಡೆದಾಡಲು ಹಿಂದೆ ಮುಂದೆ ನೋಡುತ್ತಾರೆ ಎನಿಸುತ್ತದೆ. ಹಾಗೆಯೇ ಒಂದಷ್ಟು ದಿನದ ಹಿಂದೆ ರಮೇಶ್ ಪ್ರೀತಿಸಿ ಮನಸ್ಸಿನಲ್ಲಿಯೇ ಆ ಪ್ರೀತಿಯನ್ನು ಇಟ್ಟುಕೊಳ್ಳುತ್ತಿದ್ದರು. ಪ್ರೇಯಸಿಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಅವರ ಮದುವೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಕಣ್ಣೀರಿಡುತ್ತಾ ನಿಂತುಕೊಳ್ಳುತ್ತಿದ್ದರು.ನಮ್ಮೂರಲ್ಲಿ ದೂರದರ್ಶನವಿದ್ದ ಸಮಯದಲ್ಲಿ ಮುನ್ನೋಟ ಎನ್ನುವ ಕಾರ್ಯಕ್ರಮ ಪ್ರತಿ ಭಾನುವಾರ ಬರುತ್ತಿತ್ತು. ಅದರಲ್ಲಿ ವಾರದ ಪ್ರಮುಖ ಕಾರ್ಯಕ್ರಮಗಳನ್ನು ಹೇಳುತ್ತಿದ್ದಾಗ ಮುಂದಿನ ಭಾನುವಾರದ ಸಿನಿಮಾ ಯಾವುದಿರಬಹುದು ಎಂಬ ಕುತೂಹಲ ನಮ್ಮನ್ನು ಕಾಡುತ್ತಿತ್ತು. ಅದೇನಾದರೂ ರಾಜ್, ಅನಂತನಾಗ್ ಅವರದ್ದಾದರೆ ನಮ್ಮೂರ ಹೆಂಗೆಳೆಯರು ಖುಷಿ. ಯಾಕೆಂದರೆ ಸಂಸಾರಿಕ ಕತೆ ಅಲ್ಲಿರುತ್ತಿತ್ತು. ಆದರೆ ನಾವು ಹುಡುಗರು ಬೇಸರ ಪಟ್ಟುಕೊಳ್ಳುತ್ತಿದ್ದೆವು. ಯಾಕೆಂದರೆ ಕೊಲೆ ಸುಲಿಗೆ ಹೊಡೆದಾಟ ಯಾವುದೂ ಇಲ್ಲದ ಸಿನಿಮಾ ನೋಡುವುದು ನಮಗೆ ಚಿತ್ರಹಿಂಸೆ. ಆದರೆ ವಿಷ್ಣು ಅಂಬಿ ಶಂಕರ್ ನಾಗ್ ಎಂದರೆ ನಾವು ಕುಣಿದಾಡುತ್ತಿದ್ದೆವು.
ಈಗಲೂ ಕೆಲ ಕಲಾವಿದರು ಹೀಗೆಯೇ ಇದ್ದರೇ ಚೆನ್ನ ಎನಿಸುತ್ತದೆ. ಅಂತವರ ಪಟ್ಟಿಯಲ್ಲಿ ನಿಮ್ಮ ಮೆಚ್ಚಿನ ಕಲಾವಿದರು ಯಾರಿರಬಹುದು..?

Saturday, June 21, 2014

ಚಿತ್ರಕತೆ ಬರವಣಿಗೆ:

ಚಿತ್ರಕತೆ ಬರೆಯುವುದು ಹೇಗೆ ಎನ್ನುವ ಪ್ರಶ್ನೆ ನನ್ನನ್ನು ತುಂಬಾ ದಿನಗಳವರೆಗೆ ಕಾಡಿದ ಪ್ರಶ್ನೆ ಎನ್ನಬಹುದು. ಅಂದರೆ ಶೈಲಿ ಹೇಗೆ, ಹೇಗೆ ಪ್ರಾರಂಭಿಸಬೇಕು ಮತ್ತು ಯಾವ ರೀತಿ ಬರೆಯುವುದು ಸರಿಯಾದದ್ದು ಮತ್ತು ಅನುಕೂಲಕರವಾದದ್ದು ಎಂಬುದು ಪ್ರಶ್ನೆ.
ಆದರೆ ಚಿತ್ರರಂಗಕ್ಕೆ ಬಂದ ಮೇಲೆ ನನಗೆ ಅದರ ಸ್ಪಷ್ಟ ರೂಪ ಗೊತ್ತಾಯಿತು ಎನ್ನಬಹುದು.
ಆದರೆ ಮೈಸೂರಿನಲ್ಲಿ ಇದ್ದಾಗಲೇ ಅದರ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದೆ. ಆಗ ಗಾಂಧೀ ಸಿನಿಮಾದ ಚಿತ್ರಕತೆ ಪುಸ್ತಕದ ರೂಪದಲ್ಲಿ ಸಿಕ್ಕಿತ್ತು. ಅದನ್ನು ನನ್ನ ಟೆಕ್ಸ್ಟ್ ಪುಸ್ತಕಕ್ಕಿಂತ ಹೆಚ್ಚಾಗಿ ಹಗಲು ರಾತ್ರಿ ಓದಿದ್ದೆ ಅನ್ನುವುದಕ್ಕಿಂತ ಅದನ್ನು ಗಮನಿಸಿದ್ದೆ. ಅದೇನು ಇಂಟೀರಿಯರ್, ಎಕ್ಷ್ತೇರಿಯರ್, ಕಟ್ ಟು, ಫೇಡ್ ಔಟ್, ಫೇಡ್ ಇನ್ ...ಅದರ ಬಗ್ಗೆ ವಿಸ್ತೃತವಾಗಿ ಅದ್ಯಯನ ಮಾಡಿದ ನಂತರ ಅದರ ರೀತಿಯಲ್ಲೇ ಬರೆಯಲು ಪ್ರಾರಂಭಿಸಿ ನಾನಂದುಕೊಂಡ ಒಂದಿಡೀ ಕತೆ ಚಿತ್ರಕತೆಯನ್ನು ಬರೆದುಬಿಟ್ಟಿದ್ದೆ.
ಆದರೆ ಇಲ್ಲಿ ಬಂದಾಗ ಅದು ಚಿತ್ರೀಕರಣಕ್ಕೆ ಅಷ್ಟು ಉಪಯೋಗವಾಗುವುದಿಲ್ಲ ಎನಿಸಿತು. ಈಗೀಗಂತೂ ಅದರ ಉಪಯೋಗವಿಲ್ಲ ಎನಿಸಿತು. 
ಹಾಳೆಯ ಒಂದು ಮಗ್ಗಲಲ್ಲಿ ಅಂದರೆ ಎಡಭಾಗದಲ್ಲಿ ದೃಶ್ಯದ ಸಂಖ್ಯೆ, ಸ್ಥಳ, ಪಾತ್ರಧಾರಿಗಳು ಮುಂತಾದವುಗಳನ್ನು ಬರೆದು a ಪುಟದ ಅರ್ಧ ಭಾಗದಲ್ಲಿ ಎಡಭಾಗಕ್ಕೆ ಚಿತ್ರಕತೆ ಸಂಭಾಷಣೆ ಬರೆಯುವುದು ಒಳ್ಳೆಯದು. ಯಾಕೆಂದರೆ ಚಿತ್ರೀಕರಣದ ಸಮಯದಲ್ಲಿ ಮುಂದೆ ಸಂಕಲನಕ್ಕೆ ಉಪಯೋಗವಾಗಲೆಂದು ಎಡಿಟಿಂಗ್ ರಿಪೋರ್ಟ್ ಬರೆಯುತ್ತಾರೆ. ಅದರಿಂದ ಅದರ ರೀಡಿಂಗ್ ನಿಂದ ok ಯಾದ, ok ಆಗದ ದೃಶಿಕೆಗಳನ್ನ ವಿಂಗಡಿಸುವುದು ಸುಲಭ ಸಾಧ್ಯ. ಹಾಗೆಯೇ ಚಿತ್ರೀಕರಣದ ಸಮಯದಲ್ಲಿ ಶಾಟ್ ವಿಭಜನೆ, ಸಂಯೋಜನೆ ದಾಖಲೆಗಳನ್ನು ಬರೆದುಕೊಳ್ಳಲು ಸುಲಭ. ಹಾಗಾಗಿ ಒಂದು ಅರ್ಧ ಭಾಗ ಖಾಲಿಯಿದ್ದಾಗ ok ಶಾಟ್, ಅಥವಾ ಏನಾದರೂ ತಿದ್ದುಪಡಿ ಇದ್ದರೇ, ಅಥವಾ ಆಯಾ ಶಾಟ್ ನ ಕ್ಯಾಮೆರಾ ಕ್ಲಿಪ್ ನಂಬರ್ ಮುಂತಾದವುಗಳನ್ನು ನಮೂದಿಸಲು ಉಪಯೋಗವಾಗುತ್ತದೆ ಎನ್ನಬಹುದು.
ಆದರೆ ಹಾಲಿವುಡ್ ಶೈಲಿಯಲ್ಲಿ ಅದಕ್ಕೆ ಆಸ್ಪದವಿಲ್ಲ. ನೋಡಲು ಓದಲು ಅದು ಚೆನ್ನಾಗಿರುತ್ತದೆ. ಪ್ರಾಯೋಗಿಕವಾಗಿ ಇಷ್ಟು ಅನುಕೂಲಕಾರಿಯಲ್ಲ .
ಅಂದ ಹಾಗೆ ರಕ್ಷಿತ್ ಶೆಟ್ಟಿ ತಮ್ಮ ಉಳಿದವರು ಕಂಡಂತೆ ಚಿತ್ರದ ಸ್ಕ್ರಿಪ್ಟ್ ಪ್ರತಿಯನ್ನು ಅಂತರ್ಜಾಲದಲ್ಲಿ ಹಾಕಿದ್ದಾರೆ. ಮತ್ತದು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದಾರೆ. ಒಂದು ಚಿತ್ರ ಭರ್ಜರಿ ಯಶಸ್ಸು ಕಂಡರೆ ಅದರ ಪುಸ್ತಕಗಳು ಬರುವುದು ಸಾಮಾನ್ಯ. ಕನ್ನಡದಲ್ಲಿ ಮಠ, ಎದ್ದೇಳು ಮಂಜುನಾಥ ಚಿತ್ರಗಳು ಬರಹರೂಪದಲ್ಲಿ ಬಂದಿವೆ. ಹಾಗೆ ನೋಡಿದರೆ ಉಕ ಅದ್ಭುತ ಯಶಸ್ವೀ ಚಿತ್ರವಲ್ಲ. ಹಾಗಂತ ತೆಗೆದು ಹಾಕುವ ಚಿತ್ರವೂ ಅಲ್ಲ. ಅದೊಂತರ ಚಿತ್ರ. ನಾನು ಸಿನಿಮಾ ನೋಡುತ್ತಾ ನೋಡುತ್ತಾ ಬೋರ್ ಆಯಿತು ಎನಿಸಿದೆ. ನೋಡಿದ ಮೇಲೆ ಇದೇನು ಕುತೂಹಲವೇ ಇಲ್ಲವಲ್ಲ ಎನಿಸಿದೆ. ಆದರೆ ಅಷ್ಟರ ನಡುವೆಯೂ ನೋಡಿಸಿಕೊಂಡಿದೆ. 
ಒಂದು ಚಿತ್ರದಲ್ಲಿ ಭರವಸೆ, ಅತಿ ಭರವಸೆ ನಿರೀಕ್ಷೆ ಗಳು ಸಿನಿಮಾವನ್ನು ಸಾಮಾನ್ಯವಾಗಿ ನೋಡಲು ಬಿಡುವುದಿಲ್ಲ ಎನ್ನುವುದಕ್ಕೆ ಉಕ ಉತ್ತಮ ಉದಾಹರಣೆ ಎನ್ನಬಹುದು, ಅದರ ಪ್ರಚಾರ, ಪ್ರೊಮೊ, ರಕ್ಷಿತ್ ಶೆಟ್ಟಿ ಇವುಗಳನ್ನು ಸಿನಿಮಾದ ಮೇಲೆ ಅದೆಂತಹ ಪರಿಣಾಮ ಬೀರಿದ್ದವು ಎಂದರೆ ಚಿತ್ರ ನೋಡಿದವರು ಇಲ್ಲಾ ಹೊಗಳಬೇಕು, ಇಲ್ಲಾ ತೆಗಳಬೇಕು ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟರು. ಹಾಗಾಗಿ ಮುಖಪುಸ್ತಕದಲ್ಲಿ ಅಲ್ಲಲ್ಲಿ ಅದರ ಚರ್ಚೆಗಳು ಬೈಗುಳ ಹೊಗಳಿಕೆಗಳು ಎಗ್ಗಿಲ್ಲದೆ ನಡೆದವು ಎನ್ನಬಹುದು. ಹೇಗೆ ವಸ್ತು ಮಾನ್ಯಕ್ಕಿಂತ ಹೆಚ್ಚು ಹೊಗಳಿದರೆ ತಡೆದುಕೊಳ್ಳಲಾಗುವುದಿಲ್ಲವೋ ಹಾಗೆಯೇ ವಿನಾಕಾರಣ ತೆಗಳಿದರೆ ತಡೆದುಕೊಳ್ಳಲಾಗುವುದಿಲ್ಲ. ಸಿನಿಮಾ ಅಂದ್ರೆ. ಸಿನಿಮಾ ಅಷ್ಟೇ.ಏನೇ ಪ್ಯಾಶನ್, ಅದೂ ಇದೂ ಎಂದರೂ ಕತ್ತಲೆಯಲ್ಲಿ ಎರಡೂವರೆ ಗಂಟೆಯ ಜಗತ್ತಿನ ಅನುಭವವೇ ಅಂತಿಮ. ಹಾಗಾಗಿ ಒಂದು ಚಿತ್ರವನ್ನು ಹೊಗಳುವುದಕ್ಕಿಂತ ಅಥವಾ ಪೋಸ್ಟ್ ಮಾರ್ಟಂ ಮಾಡುವುದಕ್ಕಿಂತ ಸುಮ್ಮನೆ ನೋಡಬೇಕು ಅಲ್ಲವೇ?
ಉಕ ಚಿತ್ರಕತೆಯ ಬರಹದ ಪ್ರತಿಯನ್ನು ರಕ್ಷಿತ್ ಅಂತರ್ಜಾಲದಲ್ಲಿ ಬಿಟ್ಟಿದ್ದಾರೆ. ನಿಜಕ್ಕೂ ಅದು ಸಂತೋಷದ ವಿಷಯ. ಸಿನಿಮಾ ನೋಡಿ ಅರ್ಥವಾಗಲಿಲ್ಲ ಎಂದು ಕೊಳ್ಳುವವರು ಅದನ್ನೊಮ್ಮೆ ಓದಿ ಅರ್ಥ ಮಾಡಿಕೊಳ್ಳಬಹುದು ಎಂಬುದಕ್ಕಿಂತ ಸಿನಿಮಾಕ್ಕೆ ಬರಲು ಅಪೇಕ್ಷೆ ಇರುವವರಿಗೆ ಚಿತ್ರಕತೆ ಬರೆಯುವ ಶೈಲಿಯ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಅದು ಅತ್ಯವಶ್ಯ. ಆದರೆ ಅದರ ಶೈಲಿ ಹಾಲಿವುಡ್ ಚಿತ್ರಗಳ ಬರಹದ ಪ್ರತಿಯ ಹಾಗಿರುವುದು ಮತ್ತು ಪ್ರಾಯೋಗಿಕವಾಗಿ ಅದರ ಉಪಯೋಗ ನಾನು ಕಂಡ ಮಟ್ಟಿಗೆ ಇಲ್ಲದಿರುವುದು ಬೇಸರದ ಸಂಗತಿ. ಜಗತ್ತಿನ ಚಿತ್ರಕರ್ಮಿಗಳ ಕಾರ್ಯರೂಪವನ್ನು ಅನುಸರಿಸುವುದು ಅವಶ್ಯ. ಅದು ನಮ್ಮಲ್ಲಿನ ಕೆಲಸಕ್ಕೆ ಎಷ್ಟು ಅನುಕೂಲ ಎನ್ನುವುದನ್ನು ಮನಗಂಡಾಗ ಆ ಕೆಲಸಕ್ಕೂ ಒಂದು ಸಾರ್ಥಕತೆ ಬರುತ್ತದೆ.ಹಾಗಾಗಿ ರಕ್ಷಿತ್ ಕೆಲಸವನ್ನು ಮೆಚ್ಚಿಕೊಳ್ಳುತ್ತಲೇ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಬೇಕಾಗುತ್ತದೆ.
ಅದರ ಜೊತೆಗೆ ಚಿತ್ರದಲ್ಲಿ ಬಳಸಿರುವ ಹೊಸ ತಂತ್ರಜ್ಞಾನಗಳ ಬಗ್ಗೆ ಸ್ವಾನುಭವವನ್ನು ಅದರ ಪ್ರಾಯೋಗಿಕವಾಗಿ ಆದ ಲಾಭ ನಷ್ಟಗಳನ್ನು ಹಂಚಿಕೊಂಡರೆ ಚಿತ್ರಕರ್ಮಿಗಳಿಗೆ ಇನ್ನೂ ಲಾಭದಾಯಕವಾಗುತ್ತದೆ ಎನಿಸುತ್ತದೆ.
ಅವರು ಬಿಡುವಿದ್ದಾಗ ಅದನ್ನು ಮಾಡಲಿ ಎಂಬುದು ನನ್ನ ಆಶಯ..

Monday, June 16, 2014

ಕೌಂಟರ್ ವೀರರು:


ಇಲ್ಲಿ ಕೌಂಟರ್ ವೀರರು ಎಂದರೆ ನಾನಾ ಅರ್ಥ ಬರಬಹುದು. ಬಾರ್ ನಲ್ಲಿ ಒಳ ಹೋಗಿ ಮಟ್ಟಸವಾದ ಟೇಬಲ್ ಹಿಡಿದು ಕುಳಿತುಕೊಂಡು ನಿಧಾನಕ್ಕೆ ಗುಟುಕರಿಸುವ ಮದ್ಯಪಾನಿಯ ಹೊರತಾಗಿ ಆತುರಾತುರವಾಗಿ ಬಾರ್ ಕೌಂಟರ್ ನಲ್ಲಿಯೇ ಒಂದೆರೆಡು ಕಾಳು ಉಪ್ಪಿನಕಾಯಿ ಕೊಯ್ಲಿ ಹಿಡಿದು ಲಬಕ್ಕನೆ ಇಡೀ ಲೋಟದ ಪಾನೀಯವನ್ನು ಗಂಟಲಿಗೆ ಸುರಿದುಕೊಂಡು  ಆ ಕ್ಷಣದಲ್ಲೇ ಉಪ್ಪಿನಕಾಯಿ ನೆಕ್ಕಿ ಏನೋ ಕೆಲಸವಾಯಿತಪ್ಪ ಎನ್ನುವಂತೆ ಮುಖಭಾವ ವ್ಯಕ್ತ ಪಡಿಸುವವರನ್ನೂ ಕೂಡ ಕೌಂಟರ್ ವೀರರು ಎನ್ನಬಹುದು. ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಆ ಕೌಂಟರ್ ವೀರರ ಬಗ್ಗೆಯಲ್ಲ.
ನಮ್ಮ  ಸಿನಿಮಾದಲ್ಲಿ ಡೈಲಾಗ್ ಕೌಂಟರ್ ಡೈಲಾಗ್ ಎಂಬ ಪದಗಳನ್ನು ಬಳಸುತ್ತೇವೆ. ಡೈಲಾಗ್ ಗೆ ಪ್ರತಿಯಾಗಿ ಎದುರುತ್ತರ ಎನ್ನಬಹುದು. ಈ ಎದುರುಮಾತುಗಳು ಅಲ್ಲಲ್ಲಿ ಬಂದಾಗ ಜನರಲ್ಲಿ ನಗೆ ಉಕ್ಕಿಸಬಹುದು, ಅಥವಾ ರೋಮಾಂಚನ ಉಂಟು ಮಾಡಬಹುದು. ಹಾಗಾಗಿ ಪಂಚಿಂಗ್ ಡೈಲಾಗ್ ಎಂದೆ ಕರೆಯಲ್ಪಡುವ ಈ ಮಾತುಗಳೇ ಕೆಲಚಿತ್ರಗಳ ಬಂಡವಾಳ ಎನ್ನಬಹುದು. ಅದರಲ್ಲೂ ಹಾಸ್ಯ ಚಿತ್ರಗಳಿಗೆ ಈ ಪಂಚಿಂಗ್ ಡೈಲಾಗ್ ಗಳು ಬೇಕೇ ಬೇಕು.
ಆದರೆ ಇವೆಲ್ಲಾ ಸಿನಿಮ ಒಳಗಿನ ಕತೆಯಾಯಿತು. ನೀವು ಚಿತ್ರಮಂದಿರದೊಳಗೆ ಹೋದಾಗ ಅಲ್ಲೂ ಪಂಚಿಂಗ್ ಡೈಲಾಗ್ ಹೇಳುವವರನ್ನು ಕಾಣಬಹುದು. ಅವರೇ ಪ್ರೇಕ್ಷಕರು. ಸುಖಾ ಸುಮ್ಮನೆ ಎಲ್ಲಾ ಸಿನಿಮಾಗಳಿಗೂ ಇವರೇನು ಪಂಚಿಂಗ್ ಡೈಲಾಗ್ ಹರಿ ಬಿಡುವುದಿಲ್ಲ. ಚಿತ್ರ ಬೋರಾದಾಗ, ಆಕಳಿಕೆ ಹೆಚ್ಚಾದಾಗ ತೆರೆಯ ಮೇಲಿನ ಪಾತ್ರಧಾರಿಗಳ ಮಾತಿಗೆ ಸರಿಯಾದ ಎದುರುತ್ತರವನ್ನು ಹೊರಗೆ ಕುಳಿತೆ ನೀಡುವವರು. ಅವರ ಮಾತುಗಳು ಕೆಲವೊಮ್ಮೆ ಸಿನಿಮಾದ ಬೋರ್ ಕಳೆಯುತ್ತದೆ ಎಂದರೆ ಅದನ್ನು ಅತಿಶಯೋಕ್ತಿ ಎನ್ನುವ ಹಾಗಿಲ್ಲ. ಮಲ್ಟಿಫ್ಲೆಕ್ಸ್ ನಲ್ಲಿ ಇವರು ಕಡಿಮೆ ಎನ್ನಬಹುದು. ಯಾಕೆಂದರೆ ಅಲ್ಲಿ ಬರುವವರೆಲ್ಲಾ ಡೀಸೆಂಟ್ ಆಗಿರಬೇಕು ಎಂದುಕೊಂಡು ಮೊದಲೇ ನಿರ್ಧಾರ ಮಾಡಿಬಿಟ್ಟಿರುತ್ತಾರೆ. ಆದರೆ ನಮ್ಮವರು ಆಗಲ್ಲ. ಯಾವ ಹಿಂಜರಿಕೆಯೂ ಇಲ್ಲದೆ ತಮ್ಮ ಅನಿಸಿಕೆ ಅಭಿಪ್ರಾಯ ಕೆಲವೊಮ್ಮೆ ಸಿನಿಮಾದ ಒಂದು ಸಾಲಿನ ವಿಮರ್ಶೆಯನ್ನು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ವ್ಯಕ್ತಪಡಿಸುತ್ತಿರುತ್ತಾರೆ.
ಮೊನ್ನೆ ಗಜಕೇಸರಿ ಚಿತ್ರಕ್ಕೆ ಹೋಗಿದ್ದೆ. ನಾನು ಸಾಮಾನ್ಯವಾಗಿ ದ್ವಿತೀಯ ತರಗತಿಗೆ ಹೋಗುತ್ತೇನೆ. ಅಲ್ಲಾದರೆ ಪ್ರೇಕ್ಷಕರು ಜಾಸ್ತಿಯೂ ಇರುತ್ತಾರೆ. ಸ್ವಲ್ಪ ಹಣ ಉಳಿದು ಮಧ್ಯಂತರದ ಖರ್ಚಿಗೂ ಆಗುತ್ತದೆ ಎನ್ನುವುದು ನನ್ನ ಹುನ್ನಾರ. ನನ್ನ ಪಕ್ಕದಲ್ಲಿ ಅಭಿಮಾನಿಯೊಬ್ಬ ಕುಳಿತುಬಿಟ್ಟಿದ್ದ. ಅವನಾಗಲೇ ಭಜರಂಗಿ ಚಿತ್ರವನ್ನು ನೋಡಿ ಬಿಟ್ಟಿದ್ದ ಅಲ್ಲದೆ ಗಜಕೇಸರಿ ಚಿತ್ರದ ಕತೆ ಸ್ವಲ್ಪ ಭಜರಂಗಿ ಚಿತ್ರದ್ದನ್ನೇ ಹೋಲುತ್ತದಲ್ಲಾ ಅವನಿಗೆ ಸ್ವಲ್ಪ ಬೋರಾಗಲು ತೊಡಗಿತು. ಶುರುವಾಯಿತು ನೋಡಿ ಅವನ ಆರ್ಭಟ.
ಹಿಂದುಗಡೆ ಸಾಲಿನಲ್ಲಿ ಕುಳಿತ ಯಾರಿಗೂ ಫೋನ್ ಬಂದು ಆತ ರಿಸೀವ್ ಮಾಡಿ ಗುರು ನಾನು ಸಿನಿಮಾ ನೋಡ್ತಿದ್ದೀನಿ.. ಎಂದ. ಆ ಕಡೆಯವನು ಯಾವ ಸಿನಿಮಾ ಎಂದು ಕೇಳೆ ಕೇಳುತ್ತಾನೆ ಎಂಬುದನ್ನು  ಊಹಿಸಿದ ನಮ್ಮ ಕೌಂಟರ್ ವೀರ ಗುರು ಭಜರಂಗಿ-2 ನೋಡ್ತಿದ್ದೀನಿ ಅಂತ ಹೇಳು ಎಂದು ಜೋರಾಗಿ ಕಿರುಚಿದ. ಚಿತ್ರಮಂದಿರ ಒಮ್ಮೆ ಗೊಳ್ ಎಂದು ನಕ್ಕಿತ್ತು.
ಯಶ್ ನ ಬಾಹುಬಲಿ ಪಾತ್ರಕ್ಕೆ ಖಳನಾಯಕ ವಿಷ ಕುಡಿಸಿದಾಗ ಸಾಯಲು ಹತ್ತೇ ನಿಮಿಷ ಇದೆ ಎಂದಾಗ ಹೊಡೆದಾಡುವ ಮುನ್ನ ಬಾಹುಬಲಿ ವೀರಾವೇಶದ ಒಂದಷ್ಟು ಮಾತುಗಳನ್ನು ಆಡುತ್ತಾನೆ. ಅದರಲ್ಲಿ ಕನ್ನಡದ ವೀರರ ಘನತೆ, ಇತಿಹಾಸ ಮುಂತಾದವೆಲ್ಲಾ ತುಂಬಿರುತ್ತದೆ. ಆದರೆ ನಮ್ಮ ಕೌಂಟರ್ ವೀರ ಅದಾವುದನ್ನೂ ಗಮನಿಸಲಿಲ್ಲ.
ಗುರು.. ಇರದೇ ಹತ್ತು ನಿಮಿಷ ...ಟೈಮ್ ವೇಸ್ಟ್ ಮಾಡಬೇಡ...ಹೊಡೆದಾಕು.. ಆಮೇಲೆ ಟೈಮ್ ಇದ್ರೆ ಮಾತಾಡೋವಂತೆ...
ಎಂಬ ಕೌಂಟರ್ ಕೊಟ್ಟ. ಯಶ್ ಬಿಟ್ಟು ಎಲ್ಲರೂ ನಕ್ಕರು.
ಫ್ಲಾಶ್ ಬ್ಯಾಕ್ ಮುಗಿದು ಆನೆ ಮುಂದೆ ನಿಂತ ನಾಯಕ ಹೇಳುತ್ತಾನೆ ಈ ಕತೆಯಲ್ಲಾ ನಾನು ನಂಬಬೇಕಾ...ಎಂದೆಲ್ಲಾ ಮಾತಾಡುವಾಗ ನಾಯಕಿ ಅಮೂಲ್ಯ ಬಂದು ಒಂದಷ್ಟು ಮಾತಾಡಿ ಕನ್ವಿನ್ಸ್ ಮಾಡುತ್ತಾಳೆ. ಆದರೆ ನಮ್ಮ ಕೌಂಟರ್ ವೀರ ಅಷ್ಟು ಕಾಯದೆ.
ನೀನು ನಂಬಬೇಕು ಗುರು.. ಇದಕ್ಕೂ ಮುನ್ನ ಭಜರಂಗಿ ನೋಡ್ ಬಂದಿದ್ರೆ ನಿಂಗೆ ಎಲ್ಲಾ ಗೊತ್ತಾಗಿರೋದು ಎಂದ.
ಆಮೇಲೆ ಅದೆಷ್ಟೋ ಕೌಂಟರ್ ಗಳು ಬಂದವೆಂದರೆ ಸಿನಿಮಾ ಮುಗಿಯೋವರೆಗೂ ನಗುವುದೇ ಆಗಿತ್ತು.
ಇಂತಹ ಕೌಂಟರ್ ವೀರರನ್ನು ನಾನು ಪ್ರತಿ ಚಿತ್ರಮಂದಿರದಲ್ಲೂ ಗಮನಿಸುತ್ತೇನೆ. ಅದರಲ್ಲೂ ಸಿನಿಮಾ ಚೆನ್ನಾಗಿಲ್ಲದಿದ್ದರಂತೂ ಅದರ ಮಜಾವೇ ಬೇರೆ. ಕೆಲವು ಅಂತಹ ಕೌಂಟರ್ ಗಳಿವೆ.
ಚಪ್ಪಾಳೆ ಚಿತ್ರದ ಕೊನೆಯ ದೃಶ್ಯದಲ್ಲಿ ಖಳರು ನಾಯಕನನ್ನು ಹೊಡೆದು ಬೀಳಿಸುತ್ತಾರೆ. ಆಗ ಆತನ ಸ್ನೇಹಿತರು ಎಲ್ಲಾ ಬಂದು ಅಲ್ಲೇ ಒಂದು ಬ್ಯಾಂಡ್ ಸೆಟ್, ಡ್ರಮ್ ಸೆಟ್ ರೆಡಿ ಮಾಡಿ ಭಾರಿಸುತ್ತಾರೆ. ಆಗ ನಾಯಕ ಎಚ್ಚರಗೊಳ್ಳುತ್ತಾನೆ.
ಗುರು..ಬರೀ ಆ ಡ್ರಮ್ ಭಾರಿಸೋವಷ್ಟೇ ಏಟು ಕೇಡಿಗಳಿಗೆ ಭಾರಿಸಿದ್ರೆ ಅವನು ಆರಾಮವಾಗಿ ಮಲಗಿರ್ತಿದ್ದ.. ಏಳೋದೇ  ಬೇಕಿರಲಿಲ್ಲವಲ್ಲಪ್ಪ..
***

ನಾಯಕ: ನೀನು ಹೀಗೆ ಮಾಡ್ತೀಯ ಅಂತ ನನಗೆ ಗೊತ್ತಿರಲಿಲ್ಲ...ಎಂತ ಕೆಲಸ ಮಾಡ್ಬಿಟ್ಟೆ..
ಕೌಂಟರ್ ವೀರ: ನಮಗೂ ನೀನು ಇಷ್ಟು ಬೋರ್ ಮಾಡ್ತೀಯ ಅಂತ ಗೊತ್ತಿರಲಿಲ್ಲ. ಎಂತ ಕೆಲಸ ಮಾಡ್ಬಿಟ್ಟೆ..
***
ನಾಯಕಿ: ನೀನು ನನ್ನ ಸರ್ವಸ್ವ ಕಣೋ...ನಿನಗೆ ಏನು ಬೇಕೋ ಕೇಳು ..
ಕೌಂಟರ್ ವೀರ: ಆಮೇಲೆ ಅವನಿಗೆ ಏನು ಬೇಕೋ ಕೊಡುವಿಯಂತೆ ತಾಯಿ..ನಮಗೆ ನಮ್ಮ ಟಿಕೆಟ್ ದುಡ್ಡು ಕೊಟ್ಬಿಡವ್ವಾ..
****
ನಾಯಕ: ನನಗೆ ಎಷ್ಟು ಕೋಪ ಬರ್ತಿದೆ ಅಂದ್ರೆ... ಆದ್ರೆ ಏನ್ಮಾಡ್ಲಿ..
ಕೌಂಟರ್ ವೀರ: ಏನ್ ಮಾಡ್ತೀಯ ಗುರು ..ನಮಗೂ ಬರ್ತಿದೆ... ಪರದೆ ಹರಿದು ಹಾಕಬೇಕಷ್ಟೇ..


ಹೀಗೆ ಎಷ್ಟೋ ಕೌಂಟರ್ ವೀರರ ಕೌಂಟರ್ ಗಳು ಸಿನಿಮಾದ ಹೊರಗೆ ಮಜಾ ಕೊಡುತ್ತವೆ. ನಿಮಗೂ ಇಂತಹ ಕೌಂಟರ್ ವೀರರ ಭೇಟಿಯಾಗಿದ್ದರೆ, ಅವರ ಮಾತುಗಳನ್ನು ಹರಿಬಿಟ್ಟರೆ ನಾವು ಖುಷಿ ಪಡಬಹುದು.