ಸಿನಿಮಾದ ಚಿತ್ರಕತೆಯೇ ಸಿನಿಮಾದ ಕತೆಯ ಆಧಾರ ಸ್ಥಂಭ. ಹಾಗಾಗಿ ಚಿತ್ರಕತೆಯ ಮೇಲೆ
ಒಂದಿಡೀ ಸಿನಿಮಾ ಆಧಾರವಾಗಿರುತ್ತದೆ. ಹಾಗೆಯೇ ಒಂದು ಕತೆಯನ್ನು ಭಿನ್ನವಾಗಿ ನಿರೂಪಿಸಬೇಕೆಂದರೆ
ಅದಕ್ಕೆ ಚಿತ್ರಕತೆಯೇ ಮುಖ್ಯವಾದದ್ದು. ಮೊದಲಿಗೆ ಏನನ್ನೋ ತೋರಿಸಿ ಆಮೇಲೆ ಏನನ್ನೋ ತೋರಿಸಿ
ತಳಕುಹಾಕಿ ಹೀಗೆ. ಒಂದು ಕತೆಯನ್ನು ಆಸಕ್ತಿಕರ ಮಾಡಿಬಿಡಬಹುದು. ಸುಮ್ಮನೆ ಕುತೂಹಲ ಕೆರಳಿಸುತ್ತಾ
ಸಾಗಿ ಕೊನೆಯಲ್ಲಿ ಆ ರಹಸ್ಯವನ್ನು ಬಿಚ್ಚಿಟ್ಟರೆ ನೋಡುಗ ಫುಲ್ ಖುಷಿ.
ನೋಡುತ್ತಾ ನೋಡುತ್ತಾ ಊಹೆ ಮಾಡುತ್ತಾ ಸಾಗುವ ವೀಕ್ಷಕನಿಗೆ ಕೊನೆಯಲ್ಲಿ ಅವನಿಗೆ
ನಿಲುಕದ್ದು ಇದ್ದು ಬಿಟ್ಟರೆ ಅವನ ಸಂತಸಕ್ಕೆ ಪಾರವಿಲ್ಲ. ಏಕೆಂದರೆ ಅದು ಬುದ್ದಿವಂತಿಕೆಯ
ಪ್ರಶ್ನೆ. ಯಾವಾಗಲೂ ಗೆಲ್ಲುವುದು ಆ ಬುದ್ದಿವಂತಿಕೆಯೇ. ಹಾಗಾಗಿಯೇ ಮೊದಲಿಗೆ ಉಪೇಂದ್ರ ತಮ್ಮ ಎ
ಚಿತ್ರದ ಅಡಿಬರಹದಲ್ಲಿ ಬುದ್ದಿವಂತರಿಗೆ ಮಾತ್ರ ಎಂದಿದ್ದರು.
ಆದರೆ ಎ ಚಿತ್ರದ ಚಿತ್ರಕತೆ ಏನೇ ತಿರುವು ಮುರುಗಾಗಿದ್ದರೂ ಕತೆಗಿಂತ
ಚಿತ್ರಕತೆಯಲ್ಲಿ ಸತ್ವವಿತ್ತು. ಬರೀ ದೃಶ್ಯದಲ್ಲೇ ಮಜಾ ಇತ್ತು. ಹಾಗಾಗಿಯೇ ಸಿನಿಮಾ
ಅರ್ಥವಾಗದಿದ್ದರೆ ಇನ್ನೊಮ್ಮೆ ನೋಡಲೂ ಸಿನಿಮಾ ಬೇಸರ ಆಗುತ್ತಿರಲಿಲ್ಲ. ಮೊದಲ ಸಿನಿಮಾದೊಳಗಿನ
ಸಿನಿಮಾದಲ್ಲಿನ ದೃಶ್ಯಗಳು ವಿಡಂಬನೆ ಜೊತೆಗೆ ಮಾಸ್ ಆಗಿತ್ತು. ಅದರಲ್ಲಿ ಅಬ್ಬರ ಆರ್ಭಟ ಇತ್ತು.
ಇನ್ನೊಮ್ಮೆ ಮಗದೊಮ್ಮೆ ನೋಡುವ ಪ್ರೇಕ್ಷಕ ಅರ್ಥ ಮಾಡಿಕೊಳ್ಳುವ ಜೊತೆಗೆ ದೃಶ್ಯದ ದ್ರವ್ಯಕ್ಕೆ
ಮಾರುಹೋಗುತ್ತಿದ್ದ. ಅದನ್ನು ನೋಡಿ ಮಜಾ ಮಾಡುತ್ತಿದ್ದ. ಎಲ್ಲಾ ತಿರುವು ಮುರುಗು ಚಿತ್ರಕತೆಯ
ಸಿನಿಮಾಗಳಿಗೆ ಗೊಂದಲಮಯ ನಿರೂಪಣೆಗೆ ಮುಖ್ಯವಾದದ್ದು ಅಂತಹುದ್ದೆ ಮಜಾ ಕೊಡುವ ಚಿತ್ರಕತೆ
ಎನ್ನಬಹುದು. ಅದು ಪದೇ ಪದೇ ನೋಡಿಸಿಕೊಳ್ಳುವಂತಿದ್ದರೆ ಸೂಪರ್. ಇಲ್ಲವಾದಲ್ಲಿ ಸಿನಿಮಾ ಮೊದಲ
ವೀಕ್ಷಣೆಗೆ ಗೊಂದಲ ಮೂಡಿಸಿದರೂ ಎರಡನೆಯ ಸಾರಿ ನೋಡಿ ತಿಳಿಯೋಣ ಅಂದುಕೊಂಡರೂ ಚಿತ್ರಮಂದಿರದೊಳಗೆ
ಹೋಗಲು ಮನಸ್ಸು ಹಿಂಜರಿದೆ ಹಿಂಜರಿಯುತ್ತದೆ.
ನೋಲನ್ ನಿರ್ದೇಶನದ ಫಾಲೋಯಿಂಗ್, ಮೆಮೆಂಟೊ ಗಿಂತ ಮಜಾ ಕೊಡುವುದು ಇನ್ಸೆಪ್ಶನ್ .
ಅದಕ್ಕೆ ಕಾರಣ ಮೊದಲೆರೆಡು ಚಿತ್ರಗಳಲ್ಲಿ ನೋಡಿಸಿಕೊಳ್ಳುವ ದೃಶ್ಯ ವೈಭವ ಇಲ್ಲ. ಆದರೆ
ವಸ್ತುವಿದೆ. ಆದರೆ ಇನ್ಸೆಪ್ಶನ್ ನಲ್ಲಿ ವಸ್ತು, ದೃಶ್ಯ ವೈಭವ ಎರಡೂ ಇದೆ.
ಮೊನ್ನೆ ನೋಡಿದ ಬಹುಪರಾಕ್, ಅದಕ್ಕೂ ಮುನ್ನ ಬಂದ ಉಳಿದವರು ಕಂಡಂತೆ , ಲೂಸಿಯ
ಚಿತ್ರಗಳನ್ನು ನೋಡಿದಾಗ ನನಗನ್ನಿಸಿದ್ದು. ಬಹುಪರಾಕ್ ಒಬ್ಬನ ಜೀವನ ಕಥನ. ಅದನ್ನು ನಿರ್ದೇಶಕ
ಸುನಿ ಮೂರು ಭಾಗಗಳಾಗಿ ಮಾಡಿದ್ದಾರೆ. ಮೂರರ ಘಟ್ಟಗಳನ್ನು ಒಂದರಪಕ್ಕ ಒಂದರಂತೆ ಜೋಡಿಸುತ್ತಾ
ಸಾಗಿದ್ದಾರೆ. ಹಾಗಂತ ಮೂರೂ ಕತೆಗಳೂ ಒಬ್ಬನದು ಎಂದು ನಿಖರವಾಗಿ ಹೇಳುವ ಹಾಗಿಲ್ಲ. ಹೇಳುವುದಾದರೂ
ಕಾಲಘಟ್ಟವನ್ನು ಹೆಸರಿಸುವ ಹಾಗಿಲ್ಲ. ಉದಾಹರಣೆಗೆ ಅವಳಿ ನಾಯಕಿಯರನ್ನು ಪ್ರೀತಿಸುವ ನಾಯಕನದೆ ಇಡೀ
ಸಿನೆಮಾದ ಕತೆ ಅವನದೇ ಎನ್ನುವುದಾದರೆ ಆತ ಮುದುಕನಾಗುವವರೆಗೆ ಕತೆ ಅವಲೋಕಿಸಿದರೆ, ಅದ್ಯಾವ
ಕಾಲಘಟ್ಟದಲ್ಲಿ ನಡೆಯುತ್ತದೆ ಎಂಬುದು ಗೊಂದಲಕ್ಕೀಡು ಮಾಡುತ್ತದೆ. ಈವತ್ತಿನ ಮೊಬೈಲ್, ಪರಿಸ್ಥಿತಿ
ಅಲ್ಲೂ ಇದೆ. ಮುದುಕನ ಕತೆಯಲ್ಲೂ ಇದೆ. ಭೂಗತದೊರೆ ಕತೆಯಲ್ಲೂ ಇದೆ. ಅಂದರೆ ಕತೆ ಈವತ್ತಿಗೆ
ಪ್ರಾರಂಭವಾಗಿದ್ದರೆ ಮುಂದಿನ ನಲವತ್ತು ವರ್ಷದ ಚಿತ್ರಣ ಅಲ್ಲಿರಬೇಕಿತ್ತು. ಅಥವಾ ಕತೆ ಈವತ್ತಿಗೆ
ಮುಗಿದಿದ್ದರೆ ಹಿಂದಿನ ನಲವತ್ತು ವರ್ಷದ ಚಿತ್ರಣ ಇರಬೇಕಿತ್ತು. ಆದರೆ ಮೂರು ಕತೆಗಳು ಸಮಾನ
ಕಾಲಘಟ್ಟದಲ್ಲಿ ನಡೆಯುತ್ತವೆ. ಸರಿ ಇದಕ್ಕೊಂದು ಉದಾತ ಅರ್ಥವನ್ನು ಕೊಟ್ಟು ಅದು ಎಲ್ಲರ ಕತೆಯೂ
ಇರಬಹುದು, ಯಾವಾಗ ಬೇಕಾದರೂ ನಡೆಯಬಹುದು ಎಂದು ಬರೆದುಬಿಡಬಹುದು. ಓದಿದವರು ಅದನ್ನು ಮೆಚ್ಚಲೂ
ಬಹುದು. ಆದರೆ ನೋಡುಗ?
ಬಹಳ ಜಾಗರೂಕತೆಯಿಂದ ಚಿತ್ರಕತೆ ಹೆಣೆದು ಕೊನೆಯವರೆಗೂ ಸಾಗಿಸಿ ಕೊನೆಯಲ್ಲಿ ಒಂದೇ
ಕಥನ ಎನ್ನುವುದನ್ನು ಒಂದೇ ದೃಶ್ಯದಲ್ಲಿ ಸಾದರ ಪಡಿಸುತ್ತಾರೆ ಸುನಿ. ಆದರೆ ಅಲ್ಲಿಯವರೆಗೆ ನೋಡಿ
ಅಕಸ್ಮಾತ್ ಅರ್ಥವಾಗದೆ ಇದ್ದರೇ ಮತ್ತೊಮ್ಮೆ ನೋಡಿ ಅರ್ಥ ಮಾಡಿಕೊಳ್ಳೋಣ ಎನ್ನಲು ದೃಶ್ಯ ಕಥನದಲ್ಲಿ
ಮಜಾ ಸಿಗುವುದಿಲ್ಲ. ಮತ್ತು ಮೊದಲ ನೋಟಕ್ಕೆ ಪ್ರೇಕ್ಷಕ ಹೈರಾಣ ಆಗಿರುತ್ತಾನಾದ್ದರಿಂದ ಆತನ
ಆಸಕ್ತಿ ಕರಗಿಹೋಗಿರುತ್ತದೆ. ಬಹುಶ ಉಳಿದವರು ಕಂಡಂತೆ ಚಿತ್ರದ ಸೋಲಿಗೂ ಇದೇ ಕಾರಣವಿರಬಹುದು.
ಉಳಿದವರು ಕಂಡಂತೆ ಚಿತ್ರದ ಕತೆಯ ಭಾಗ ಭಾಗ ನಿರೂಪಣೆಯಲ್ಲಿ ಮಜಾ ಇರಲಿಲ್ಲವಾದರೂ ಚಿತ್ರಣದಲ್ಲಿ
ಅಚ್ಚುಕಟ್ಟಿತ್ತು. ಆದರೆ ಮತ್ತೊಮ್ಮೆ ನೋಡೋಣ ಎಂದುಕೊಳ್ಳದ ಪ್ರೇಕ್ಷಕ ತಲೆಬಿಸಿ
ಎಂದುಕೊಂಡ...ಬಹುಪರಾಕ್ ಕೂಡ ಅದೇ ನಿಟ್ಟಿನಲ್ಲಿದೆಯಾ?
ಪ್ರಯೋಗಾತ್ಮಕ ಚಿತ್ರವನ್ನು ಮಾಡುವಾಗ ಯಾವ ಪ್ರೇಕ್ಷಕನಿಗೆ ನಾವದನ್ನು
ನೀಡುತ್ತಿದ್ದೇವೆ ಎಂದುಕೊಂಡರೆ ಒಳ್ಳೆಯದು ಎನ್ನಬಹುದು. ಯಾಕೆಂದರೆ ಅದನ್ನು ಸರ್ವ ರೀತಿಯ ಎಲ್ಲಾ
ವರ್ಗದ ವೀಕ್ಷಕರು ನೋಡಲಿ ಎನ್ನಬಹುದಾದರೆ ದೃಶ್ಯಾವಳಿಗಳಲ್ಲಿ ಆ ‘ತನ’ವನ್ನು ಸೇರಿಸಲೇಬೇಕಾಗುತ್ತದೆ. ಇಲ್ಲವಾದಲ್ಲಿ
ಒಟ್ಟಾರೆ ಮಜಾ ಕೊಡಬಹುದು ಎಂದುಕೊಳ್ಳುವ ಅಂಶ ಬಿಡಿಯಾಗಿ ನೀರಸ ಎನಿಸುತ್ತದೆ ಅಥವಾ ಬಿಡಿಯಾಗಿ
ಸೂಪರ್ ಎನಿಸುವ ಅಂಶ ಒಟ್ಟಾರೆಯಾಗಿ ಪೇಲವ ಎನಿಸುತ್ತದೆ.
ಹಾಗೆಯೇ ಕೆಲವು ಕತೆಗಳಿಗೆ ಅದರದೇ ಆದ ಮಿತಿಗಳಿರುವುದು ಸತ್ಯ. ನನ್ನದೇ ಚಿತ್ರದ ಉದಾಹರಣೆ
ತೆಗೆದುಕೊಂಡರೆ ನನ್ನ ಕತೆ ಹೇಳಿ ನಿರ್ಮಾಪಕರಿಗೆ ಹೇಳಿದ್ದೆ. ನಮ್ಮದು ಒಮ್ಮೆ ಮಾತ್ರ ನೋಡುವ
ಸಿನಿಮಾ ಯಾಕೆಂದರೆ ಒಂದು ಸಸ್ಪೆನ್ಸ್ ಚಿತ್ರದ ಅಂತ್ಯ ಒಮ್ಮೆ ಗೊತ್ತಾದರೆ ಮತ್ತೊಮ್ಮೆ ಯಾಕೆ
ನೋಡುತ್ತಾನೆ ಪ್ರೇಕ್ಷಕ ಎಂದು. ಅದು ಸತ್ಯವೇ ಆಗಿದ್ದರೂ ನಿರ್ಮಾಪಕರು ನನ್ನ ಮುಖ ನೋಡಿದ್ದರು.
ಒಟ್ಟಿನಲ್ಲಿ ಒಬ್ಬ ಚಿತ್ರಕರ್ಮಿ ಒಂದು ಕತೆ ಮಾಡಿದ ನಂತರ ಕತೆಯ ಹೊರಗೆ ನಿಂತು
ಒಮ್ಮೆ ವಿಮರ್ಶೆ ಮಾಡಿದರೆ ಒಳ್ಳೆಯದೇನೋ? ಇಲ್ಲವಾದಲ್ಲಿ ಭ್ರಮಾನಿರಸನ ಕಟ್ಟಿಟ್ಟ ಬುತ್ತಿ.
No comments:
Post a Comment