Monday, June 16, 2014

ಕೌಂಟರ್ ವೀರರು:


ಇಲ್ಲಿ ಕೌಂಟರ್ ವೀರರು ಎಂದರೆ ನಾನಾ ಅರ್ಥ ಬರಬಹುದು. ಬಾರ್ ನಲ್ಲಿ ಒಳ ಹೋಗಿ ಮಟ್ಟಸವಾದ ಟೇಬಲ್ ಹಿಡಿದು ಕುಳಿತುಕೊಂಡು ನಿಧಾನಕ್ಕೆ ಗುಟುಕರಿಸುವ ಮದ್ಯಪಾನಿಯ ಹೊರತಾಗಿ ಆತುರಾತುರವಾಗಿ ಬಾರ್ ಕೌಂಟರ್ ನಲ್ಲಿಯೇ ಒಂದೆರೆಡು ಕಾಳು ಉಪ್ಪಿನಕಾಯಿ ಕೊಯ್ಲಿ ಹಿಡಿದು ಲಬಕ್ಕನೆ ಇಡೀ ಲೋಟದ ಪಾನೀಯವನ್ನು ಗಂಟಲಿಗೆ ಸುರಿದುಕೊಂಡು  ಆ ಕ್ಷಣದಲ್ಲೇ ಉಪ್ಪಿನಕಾಯಿ ನೆಕ್ಕಿ ಏನೋ ಕೆಲಸವಾಯಿತಪ್ಪ ಎನ್ನುವಂತೆ ಮುಖಭಾವ ವ್ಯಕ್ತ ಪಡಿಸುವವರನ್ನೂ ಕೂಡ ಕೌಂಟರ್ ವೀರರು ಎನ್ನಬಹುದು. ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಆ ಕೌಂಟರ್ ವೀರರ ಬಗ್ಗೆಯಲ್ಲ.
ನಮ್ಮ  ಸಿನಿಮಾದಲ್ಲಿ ಡೈಲಾಗ್ ಕೌಂಟರ್ ಡೈಲಾಗ್ ಎಂಬ ಪದಗಳನ್ನು ಬಳಸುತ್ತೇವೆ. ಡೈಲಾಗ್ ಗೆ ಪ್ರತಿಯಾಗಿ ಎದುರುತ್ತರ ಎನ್ನಬಹುದು. ಈ ಎದುರುಮಾತುಗಳು ಅಲ್ಲಲ್ಲಿ ಬಂದಾಗ ಜನರಲ್ಲಿ ನಗೆ ಉಕ್ಕಿಸಬಹುದು, ಅಥವಾ ರೋಮಾಂಚನ ಉಂಟು ಮಾಡಬಹುದು. ಹಾಗಾಗಿ ಪಂಚಿಂಗ್ ಡೈಲಾಗ್ ಎಂದೆ ಕರೆಯಲ್ಪಡುವ ಈ ಮಾತುಗಳೇ ಕೆಲಚಿತ್ರಗಳ ಬಂಡವಾಳ ಎನ್ನಬಹುದು. ಅದರಲ್ಲೂ ಹಾಸ್ಯ ಚಿತ್ರಗಳಿಗೆ ಈ ಪಂಚಿಂಗ್ ಡೈಲಾಗ್ ಗಳು ಬೇಕೇ ಬೇಕು.
ಆದರೆ ಇವೆಲ್ಲಾ ಸಿನಿಮ ಒಳಗಿನ ಕತೆಯಾಯಿತು. ನೀವು ಚಿತ್ರಮಂದಿರದೊಳಗೆ ಹೋದಾಗ ಅಲ್ಲೂ ಪಂಚಿಂಗ್ ಡೈಲಾಗ್ ಹೇಳುವವರನ್ನು ಕಾಣಬಹುದು. ಅವರೇ ಪ್ರೇಕ್ಷಕರು. ಸುಖಾ ಸುಮ್ಮನೆ ಎಲ್ಲಾ ಸಿನಿಮಾಗಳಿಗೂ ಇವರೇನು ಪಂಚಿಂಗ್ ಡೈಲಾಗ್ ಹರಿ ಬಿಡುವುದಿಲ್ಲ. ಚಿತ್ರ ಬೋರಾದಾಗ, ಆಕಳಿಕೆ ಹೆಚ್ಚಾದಾಗ ತೆರೆಯ ಮೇಲಿನ ಪಾತ್ರಧಾರಿಗಳ ಮಾತಿಗೆ ಸರಿಯಾದ ಎದುರುತ್ತರವನ್ನು ಹೊರಗೆ ಕುಳಿತೆ ನೀಡುವವರು. ಅವರ ಮಾತುಗಳು ಕೆಲವೊಮ್ಮೆ ಸಿನಿಮಾದ ಬೋರ್ ಕಳೆಯುತ್ತದೆ ಎಂದರೆ ಅದನ್ನು ಅತಿಶಯೋಕ್ತಿ ಎನ್ನುವ ಹಾಗಿಲ್ಲ. ಮಲ್ಟಿಫ್ಲೆಕ್ಸ್ ನಲ್ಲಿ ಇವರು ಕಡಿಮೆ ಎನ್ನಬಹುದು. ಯಾಕೆಂದರೆ ಅಲ್ಲಿ ಬರುವವರೆಲ್ಲಾ ಡೀಸೆಂಟ್ ಆಗಿರಬೇಕು ಎಂದುಕೊಂಡು ಮೊದಲೇ ನಿರ್ಧಾರ ಮಾಡಿಬಿಟ್ಟಿರುತ್ತಾರೆ. ಆದರೆ ನಮ್ಮವರು ಆಗಲ್ಲ. ಯಾವ ಹಿಂಜರಿಕೆಯೂ ಇಲ್ಲದೆ ತಮ್ಮ ಅನಿಸಿಕೆ ಅಭಿಪ್ರಾಯ ಕೆಲವೊಮ್ಮೆ ಸಿನಿಮಾದ ಒಂದು ಸಾಲಿನ ವಿಮರ್ಶೆಯನ್ನು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ವ್ಯಕ್ತಪಡಿಸುತ್ತಿರುತ್ತಾರೆ.
ಮೊನ್ನೆ ಗಜಕೇಸರಿ ಚಿತ್ರಕ್ಕೆ ಹೋಗಿದ್ದೆ. ನಾನು ಸಾಮಾನ್ಯವಾಗಿ ದ್ವಿತೀಯ ತರಗತಿಗೆ ಹೋಗುತ್ತೇನೆ. ಅಲ್ಲಾದರೆ ಪ್ರೇಕ್ಷಕರು ಜಾಸ್ತಿಯೂ ಇರುತ್ತಾರೆ. ಸ್ವಲ್ಪ ಹಣ ಉಳಿದು ಮಧ್ಯಂತರದ ಖರ್ಚಿಗೂ ಆಗುತ್ತದೆ ಎನ್ನುವುದು ನನ್ನ ಹುನ್ನಾರ. ನನ್ನ ಪಕ್ಕದಲ್ಲಿ ಅಭಿಮಾನಿಯೊಬ್ಬ ಕುಳಿತುಬಿಟ್ಟಿದ್ದ. ಅವನಾಗಲೇ ಭಜರಂಗಿ ಚಿತ್ರವನ್ನು ನೋಡಿ ಬಿಟ್ಟಿದ್ದ ಅಲ್ಲದೆ ಗಜಕೇಸರಿ ಚಿತ್ರದ ಕತೆ ಸ್ವಲ್ಪ ಭಜರಂಗಿ ಚಿತ್ರದ್ದನ್ನೇ ಹೋಲುತ್ತದಲ್ಲಾ ಅವನಿಗೆ ಸ್ವಲ್ಪ ಬೋರಾಗಲು ತೊಡಗಿತು. ಶುರುವಾಯಿತು ನೋಡಿ ಅವನ ಆರ್ಭಟ.
ಹಿಂದುಗಡೆ ಸಾಲಿನಲ್ಲಿ ಕುಳಿತ ಯಾರಿಗೂ ಫೋನ್ ಬಂದು ಆತ ರಿಸೀವ್ ಮಾಡಿ ಗುರು ನಾನು ಸಿನಿಮಾ ನೋಡ್ತಿದ್ದೀನಿ.. ಎಂದ. ಆ ಕಡೆಯವನು ಯಾವ ಸಿನಿಮಾ ಎಂದು ಕೇಳೆ ಕೇಳುತ್ತಾನೆ ಎಂಬುದನ್ನು  ಊಹಿಸಿದ ನಮ್ಮ ಕೌಂಟರ್ ವೀರ ಗುರು ಭಜರಂಗಿ-2 ನೋಡ್ತಿದ್ದೀನಿ ಅಂತ ಹೇಳು ಎಂದು ಜೋರಾಗಿ ಕಿರುಚಿದ. ಚಿತ್ರಮಂದಿರ ಒಮ್ಮೆ ಗೊಳ್ ಎಂದು ನಕ್ಕಿತ್ತು.
ಯಶ್ ನ ಬಾಹುಬಲಿ ಪಾತ್ರಕ್ಕೆ ಖಳನಾಯಕ ವಿಷ ಕುಡಿಸಿದಾಗ ಸಾಯಲು ಹತ್ತೇ ನಿಮಿಷ ಇದೆ ಎಂದಾಗ ಹೊಡೆದಾಡುವ ಮುನ್ನ ಬಾಹುಬಲಿ ವೀರಾವೇಶದ ಒಂದಷ್ಟು ಮಾತುಗಳನ್ನು ಆಡುತ್ತಾನೆ. ಅದರಲ್ಲಿ ಕನ್ನಡದ ವೀರರ ಘನತೆ, ಇತಿಹಾಸ ಮುಂತಾದವೆಲ್ಲಾ ತುಂಬಿರುತ್ತದೆ. ಆದರೆ ನಮ್ಮ ಕೌಂಟರ್ ವೀರ ಅದಾವುದನ್ನೂ ಗಮನಿಸಲಿಲ್ಲ.
ಗುರು.. ಇರದೇ ಹತ್ತು ನಿಮಿಷ ...ಟೈಮ್ ವೇಸ್ಟ್ ಮಾಡಬೇಡ...ಹೊಡೆದಾಕು.. ಆಮೇಲೆ ಟೈಮ್ ಇದ್ರೆ ಮಾತಾಡೋವಂತೆ...
ಎಂಬ ಕೌಂಟರ್ ಕೊಟ್ಟ. ಯಶ್ ಬಿಟ್ಟು ಎಲ್ಲರೂ ನಕ್ಕರು.
ಫ್ಲಾಶ್ ಬ್ಯಾಕ್ ಮುಗಿದು ಆನೆ ಮುಂದೆ ನಿಂತ ನಾಯಕ ಹೇಳುತ್ತಾನೆ ಈ ಕತೆಯಲ್ಲಾ ನಾನು ನಂಬಬೇಕಾ...ಎಂದೆಲ್ಲಾ ಮಾತಾಡುವಾಗ ನಾಯಕಿ ಅಮೂಲ್ಯ ಬಂದು ಒಂದಷ್ಟು ಮಾತಾಡಿ ಕನ್ವಿನ್ಸ್ ಮಾಡುತ್ತಾಳೆ. ಆದರೆ ನಮ್ಮ ಕೌಂಟರ್ ವೀರ ಅಷ್ಟು ಕಾಯದೆ.
ನೀನು ನಂಬಬೇಕು ಗುರು.. ಇದಕ್ಕೂ ಮುನ್ನ ಭಜರಂಗಿ ನೋಡ್ ಬಂದಿದ್ರೆ ನಿಂಗೆ ಎಲ್ಲಾ ಗೊತ್ತಾಗಿರೋದು ಎಂದ.
ಆಮೇಲೆ ಅದೆಷ್ಟೋ ಕೌಂಟರ್ ಗಳು ಬಂದವೆಂದರೆ ಸಿನಿಮಾ ಮುಗಿಯೋವರೆಗೂ ನಗುವುದೇ ಆಗಿತ್ತು.
ಇಂತಹ ಕೌಂಟರ್ ವೀರರನ್ನು ನಾನು ಪ್ರತಿ ಚಿತ್ರಮಂದಿರದಲ್ಲೂ ಗಮನಿಸುತ್ತೇನೆ. ಅದರಲ್ಲೂ ಸಿನಿಮಾ ಚೆನ್ನಾಗಿಲ್ಲದಿದ್ದರಂತೂ ಅದರ ಮಜಾವೇ ಬೇರೆ. ಕೆಲವು ಅಂತಹ ಕೌಂಟರ್ ಗಳಿವೆ.
ಚಪ್ಪಾಳೆ ಚಿತ್ರದ ಕೊನೆಯ ದೃಶ್ಯದಲ್ಲಿ ಖಳರು ನಾಯಕನನ್ನು ಹೊಡೆದು ಬೀಳಿಸುತ್ತಾರೆ. ಆಗ ಆತನ ಸ್ನೇಹಿತರು ಎಲ್ಲಾ ಬಂದು ಅಲ್ಲೇ ಒಂದು ಬ್ಯಾಂಡ್ ಸೆಟ್, ಡ್ರಮ್ ಸೆಟ್ ರೆಡಿ ಮಾಡಿ ಭಾರಿಸುತ್ತಾರೆ. ಆಗ ನಾಯಕ ಎಚ್ಚರಗೊಳ್ಳುತ್ತಾನೆ.
ಗುರು..ಬರೀ ಆ ಡ್ರಮ್ ಭಾರಿಸೋವಷ್ಟೇ ಏಟು ಕೇಡಿಗಳಿಗೆ ಭಾರಿಸಿದ್ರೆ ಅವನು ಆರಾಮವಾಗಿ ಮಲಗಿರ್ತಿದ್ದ.. ಏಳೋದೇ  ಬೇಕಿರಲಿಲ್ಲವಲ್ಲಪ್ಪ..
***

ನಾಯಕ: ನೀನು ಹೀಗೆ ಮಾಡ್ತೀಯ ಅಂತ ನನಗೆ ಗೊತ್ತಿರಲಿಲ್ಲ...ಎಂತ ಕೆಲಸ ಮಾಡ್ಬಿಟ್ಟೆ..
ಕೌಂಟರ್ ವೀರ: ನಮಗೂ ನೀನು ಇಷ್ಟು ಬೋರ್ ಮಾಡ್ತೀಯ ಅಂತ ಗೊತ್ತಿರಲಿಲ್ಲ. ಎಂತ ಕೆಲಸ ಮಾಡ್ಬಿಟ್ಟೆ..
***
ನಾಯಕಿ: ನೀನು ನನ್ನ ಸರ್ವಸ್ವ ಕಣೋ...ನಿನಗೆ ಏನು ಬೇಕೋ ಕೇಳು ..
ಕೌಂಟರ್ ವೀರ: ಆಮೇಲೆ ಅವನಿಗೆ ಏನು ಬೇಕೋ ಕೊಡುವಿಯಂತೆ ತಾಯಿ..ನಮಗೆ ನಮ್ಮ ಟಿಕೆಟ್ ದುಡ್ಡು ಕೊಟ್ಬಿಡವ್ವಾ..
****
ನಾಯಕ: ನನಗೆ ಎಷ್ಟು ಕೋಪ ಬರ್ತಿದೆ ಅಂದ್ರೆ... ಆದ್ರೆ ಏನ್ಮಾಡ್ಲಿ..
ಕೌಂಟರ್ ವೀರ: ಏನ್ ಮಾಡ್ತೀಯ ಗುರು ..ನಮಗೂ ಬರ್ತಿದೆ... ಪರದೆ ಹರಿದು ಹಾಕಬೇಕಷ್ಟೇ..


ಹೀಗೆ ಎಷ್ಟೋ ಕೌಂಟರ್ ವೀರರ ಕೌಂಟರ್ ಗಳು ಸಿನಿಮಾದ ಹೊರಗೆ ಮಜಾ ಕೊಡುತ್ತವೆ. ನಿಮಗೂ ಇಂತಹ ಕೌಂಟರ್ ವೀರರ ಭೇಟಿಯಾಗಿದ್ದರೆ, ಅವರ ಮಾತುಗಳನ್ನು ಹರಿಬಿಟ್ಟರೆ ನಾವು ಖುಷಿ ಪಡಬಹುದು.

No comments:

Post a Comment