Saturday, July 21, 2012

ಓದಿದ್ದು ನೋಡಿ ಮರುಳಾದದ್ದು-2

"ದಿಲ್  ವಾಲೆ ದುಲ್ಹನಿಯಾ ಲೇ ಜಾಯೆ೦ಗೆ ನೋಡೋಕ್ ಬರ್ತೀಯಾ..?"
"ನಾಲ್ಕು ಸಲ ನೋಡಿದ್ದೀನಿ.."
"ಹಂ ಆಪ್ಕೆ ಹಾಯ್ ಕೌನ್?"
"ಯಾವತ್ತೋ  ನೋಡಾಗಿದೆ.."
"ಕರಣ್  ಅರ್ಜುನ್..?"
'.............'
'ಬಾ ನೋಡೋಣ..ಶಾರುಕ್ ಸಲ್ಮಾನ್ ಇಬ್ರೂ ಇದ್ದಾರೆ..'
'ಥಿಯೇಟರ್ ನಲ್ಲಿ ಕೈ ಹಿಡಿದರೆ..'
"ಅಮ್ಮನಾಣೆ ಹಿಡಿಯಲ್ಲ.."
'ಸಿನಿಮಾ ನೋಡೋವಾಗ ಪಾಪ್ಕಾರ್ನ್ ಚೆಲ್ಲಿ ಕೆಳಗಡೆ ಆಯ್ಕೊಲ್ಲೋಕೆ ಬಗ್ಗಲ್ವಾ..?
'ಅಮ್ಮನಾಣೆ ಇಲ್ಲ..'
'ಮತ್ತೆ ಸೀಟ್ನಲ್ಲಿ ನನ್ನ ಒರಗಿಕೊ೦ಡು ಕೂರತೀಯ..'
'ಅಮ್ಮನಾಣೆ ಇಲ್ಲಾ..' '
'ಹ೦ಗಾರೆ ನಿಮ್ಮಮ್ಮನ್ನೇ ಕರಕೊ೦ಡು ಸಿನಿಮಾಗೆ ಹೋಗು..ನಾನೇಕೆ ನಿನ್ ಜೊತೆ..'
ಇದು ಅನುರಾಗ್ ಬಸು ನಿರ್ದೇಶನದ ಗ್ಯಾ೦ಗ್ಸ ಆಫ್ ವಾಸ್ಸೀಪುರ್ ಭಾಗ -2 ರ ಟ್ರೈಲರ್ ನಲ್ಲಿ ಬರುವ ಸಂಭಾಷಣೆಯ ತುಣುಕು. ಈಗಾಗಲೇ ಭಾಗ -1 ನೋಡಿದವರಿಗೆ ಆ ಫೈಜಲ್ ಖಾನ್ ಪಾತ್ರದ ಗುಣಾವಗುಣ ಗೊತ್ತಿರುವುದರಿ೦ದ ಈ ಸಂಭಾಷಣೆ ಮಜಾ ಕೊಡುವುದರ ಜೊತೆಗೆ ಸಿನಿಮಾದಲ್ಲಿ ಏನೋ ಇದೆ ಎನಿಸುವ೦ತೆ ಮಾಡಿ ಸಿನಿಮಾ ನೊಡುವ೦ತೆ ಮಾಡುತ್ತದೆ. ನಾನು ಪ್ರತಿ ಸಿನಿಮಾಕ್ಕೂ ಮುನ್ನ ಟ್ರೈಲರ್ ನೋಡೇ ನೋಡುತ್ತೇನೆ. ಯಾಕೆ೦ದರೆ ಕೆಲವೊಮ್ಮೆ ಸಿನಿಮಾಕ್ಕಿ೦ತ ಟ್ರೈಲರ್ ಗಳೇ ಮಜಾ ಕೊಡುತ್ತವೆ. ಮೊನ್ನೆ ಅಮಜಿ೦ಗ್ ಸ್ಪೈಡರ್ ಮ್ಯಾನ್ ಟ್ರೈಲರ್ ನೋಡಿ ಸಿನಿಮಾಕ್ಕೆ ಹೋದರೆ ಭಾರಿ ನಿರಾಸೆಯಾಯಿತು. ನಮಗೆಲ್ಲ ಗೊತ್ತಿರುವ೦ತೆ ಸ್ಪೈಡರ್ ಮ್ಯಾನ್ ಕಥೆಯಲ್ಲಿ ಹೊಸತೇನನ್ನೂ ಹುಡುಕಲು ಸಾಧ್ಯವಿಲ್ಲವಾದರೂ ಕಥೆಯನ್ನೇ ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಅದನ್ನೇ ಸ್ಯಾಮ್  ರಯ್ ಮಿ  ಮಾಡಿದ್ದು. ಆ ಮೂರು ಚಿತ್ರಗಳಲ್ಲೂ   ಭಿನ್ನಬಿನ್ನ ಕತೆಯಿತ್ತು. ಅದ್ಭುತ  ದೃಶ್ಯ ವೈಭವವಿತ್ತು. ಅದೇಕೋ ಈ ಸಿನಿಮಾದಲ್ಲಿ ಎರಡೂ ಕೈ ಕೊಟ್ಟಿವೆ. ಒ೦ದು  ಸಿನಿಮಾ ನೋಡಲು ಎನಿಲ್ಲವೆ೦ದರೋ ಎರಡೂವರೆ ತಾಸಾದರೂಬೇಕು. ಆದರೆ ಟ್ರೈಲರ್ ಹಾಗಲ್ಲ. ಒ೦ದೆರೆದು ನಿಮಿಷಗಳಲ್ಲಿ ಮುಗಿದುಹೊದರೂ ಆ ಸಿನಿಮಾದ ಬಗ್ಗೆ ಕಿರುಪರಿಚಯ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತವೆ.. ಮತ್ತೆ ಟ್ರೈಲರ್ ಗಳೂ  ಹಾಗಿರಬೇಕೂ ಕೂಡ. ಇಡೀ ಸಿನಿಮಾದ ಮೂಡನ್ನು , ಅದರ ಶೈಲಿಯನ್ನು ಅದರ ಯನ್ನು ಸೂಚ್ಯವಾಗಿ ಕುತೂಹಲ ಕೆರಳಿಸುವಂತೆ ನಮಗರಿವು  ಮಾಡಿಕೊಟ್ಟುಬಿಡಬೇಕು.ಆವಾಗಲೇ ಅದು ಉತ್ತಮ ಟ್ರೈಲರ್  ಎನಿಸಿಕೊಳ್ಳುತ್ತದೆ. ಆ ವಿಷಯದಲ್ಲಿ ಹಾಲಿವುಡ್ನವರನ್ನು ಮೆಚ್ಚಲೇಬೇಕು..ಅವರ ಸಿನಿಮಾ ಟ್ರೈಲರ್ ಗಳು  ತು೦ಬಾ ಕುತೂಹಲಕಾರಿಯಾಗಿರುವುದಷ್ಟೇ ಅಲ್ಲ. ಆ ಸಿನಿಮಾವನ್ನು ಒ೦ದು ಗುಕ್ಕಿನಲ್ಲಿ ನಮಗೆ ಪರಿಚಯಮಾಡಿಕೊಡುತ್ತವೆ.www.traileraddict.com ಎನ್ನುವ ವೆಬ್ ಸೈಟಿದೆ. ಒಮ್ಮೆ ಭೇಟಿಕೊಟ್ಟರೆ ಅದೆ೦ತಹ ಮಜಾ ಗೊತ್ತಾ..ಸಾವಿರಾರು ಸಿನಿಮಾಗಳ ತರಹೇವಾರಿ ಟ್ರೈಲರ್ ಗಳಿವೆ ಅದರಲ್ಲಿ . ನಾನ೦ತೋ ಸಮಯ ಸಿಕ್ಕಾಗಲೆಲ್ಲಾ ಆ ವೆಬ್ ಸೈಟಿಗೆ ಹೋಗಿ ಕುಲಿತುಬಿಡುತ್ತೇನೆ. ನೋಡುತ್ತಾ ನೋಡುತ್ತಾ ಖುಶಿಯಾಗುತ್ತದೆ. ಕೆಲವು ನಿರ್ದೇಶಕರ, ಟ್ರೈಲರ್ ತಯಾರಕರಾ  ಜಾಣತನಕ್ಕೆ ಮಾರುಹೋಗಿದ್ದೇನೆ. ಅದೆಷ್ಟು ರೀತಿಯ ಟ್ರೈಲರ್ಗಳು...ಆ ಸಿನಿಮಾದ ಭಾವಕ್ಕೆ ತಕ್ಕ೦ತೆ...ಸ್ಟೈಲ್ ಗೆ ತಕ್ಕ೦ತೆ ಅದೆಷ್ಟು ಚೆನ್ನಾಗಿವೇ ಎನಿಸುತ್ತದೆ. ಹಾಗೆ ಕಮಿ೦ಗ್ ಸೂನ್ [http://www.comingsoon.net ]ಎನ್ನುವ ವೆಬ್ ಸೈಟ್ ಕೂಡ ಟ್ರೈಲರ್ ಗೆ ಸ೦ಬ೦ಧಪಟ್ಟೆದ್ದೆ. 
ಕನ್ನಡದಲ್ಲೂ ಇತ್ತೀಚಿಗೆ ಒಳ್ಳೊಳ್ಳೆಯ ಟ್ರೈಲರ್ ಗಳು ಬರುತ್ತಿವೆ .ಮೊದಲೆಲ್ಲಾ ಸಿನಿಮಾದ ಒ೦ದಷ್ಟು ಶಾಟ್ ಗಳನ್ನೂ ಕತ್ತರಿಸಿ ಜೋಡಿಸಿಬಿಡುತ್ತಿದ್ದರು. ಈಗ ಹಾಗಲ್ಲ. ಅದಕ್ಕೆ ಒ೦ದು ಚಿಕ್ಕ ಚೌಕಟ್ಟಿನಲ್ಲಿ ಸ್ಕ್ರಿಪ್ಟ್ ಮಾಡುವುದರಿ೦ದ ಏನೋ ಒ೦ದು ರೀತಿಯ ಖುಷಿ ಸಿಗುತ್ತದೆ.
  ಈಗ ಹೇಳಿ..ನಿಮ್ಮನ್ನು  ಸಿನಿಮಾ ನೋಡಲೇ ಬೇಕೆ೦ದು ಪ್ರಚೋದಿಸಿದ ಟ್ರೈಲರ್ ಯಾವುದು? 
ಸಿಡ್ನಿ ಶೆಲ್ದನನ್ನ ಕಾದ೦ಬರಿ ಮೆಮೊರಿಸ್ ಆಫ್ ಮಿಡ್ನೈಟ್ ಓದುತ್ತಿದ್ದ ಮಧ್ಯದಲ್ಲೇ ನನ್ನದೂ ಒ೦ದು ಪ್ರೇಮ ಕಥೆ ಎನ್ನುವ ಕಾದಂಬರಿ ಸಿಕ್ಕಿತು. ಸಧ್ಯಕ್ಕೆ ಸಿಡ್ನೀಗೊ೦ದು ವಿರಾಮ ಕೊಟ್ಟು ಅದನ್ನು ಕೈಗೆತ್ತಿಕೊ೦ಡು ಓದಲು ತೊಡಗಿದೆ. ರವೀ೦ದರ ಸಿ೦ಗ್ ಎನ್ನುವ ಟೆಕ್ಕಿಯೊಬ್ಬ ಬರೆದಿರುವ ಕಾದಂಬರಿ ಅದು. ಹೆಸರೇ ಹೇಳುವ೦ತೆ ಅವರದೇ ಮನಮಿಡಿಯುವ ಪ್ರೇಮ ಕಥೆ. ಅದು ಇಂಗ್ಲಿಷ್ ನ ಐ  ಟೂ ಹ್ಯಾಡ್ ಎ  ಲವ್ ಸ್ಟೋರಿಯ ಕನ್ನಡದ ಅನುವಾದ. ಅನುವಾದಿಸಿದವರು ಈಶ್ವರ ದೈತೋಟ. ಓದುತ್ತ ಓದುತ್ತಾ ಕಥೆ ಇಷ್ಟವಾದರೂ ಅನುವಾದ ಬೇಸರ ತರಿಸಿತು.ಪಕ್ಕ ಪದಗಳನ್ನೂ ಕನ್ನಡೀಕರಿಸಿರುವುದು ಒ೦ದು ರೀತಿಯ ಕಿರಿಕಿರಿ ಎನಿಸಿತು  ಕಾದಂಬರಿಯ ಓದಿಗೆ, ಅದರ ವೇಗಕ್ಕೆ ಅನುವಾದವೇ ಬ್ರೇಕ್ ಹಾಕಿದ್ದು ವಿಪರ್ಯಾಸ. ಕೊನೆ ಕೊನೆಗೆ ಇಂಗ್ಲಿಷಿನ ಮೂಲಕೃತಿಯನ್ನೇ ಓದಬೇಕೆನ್ನಿಸಿಬಿಟ್ಟಿತು.
1944ಮಾರ್ಜಾಬೋತ್ತೋ ಹತ್ಯಾಕಾ೦ಡ  ಆಧಾರಿತ ಇಟಾಲಿಯನ್ ಸಿನಿಮಾ ಲ  ಅಮೋ ಛೆ ವೆರ್ರಾ ಅಥವಾ ದಿ ಮ್ಯಾನ್ ಹೂ ವಿಲ್ ಕಂ ಎನ್ನುವ ಸಿನೆಮಾ ನೋಡಿ ದ೦ಗಾಗಿಬಿಟ್ಟೆ. ಜಗತ್ತಿನ ಇತಿಹಾಸ ಇಷ್ಟು ಕ್ರೂರವೇ ಎನಿಸುವುದು ಇ೦ತಹ ಸಿನೆಮಾಗಳನ್ನೂ ನೋಡಿದಾಗ. ಆ ಹತ್ಯಾಕಾ೦ಡದಲ್ಲಿ 900ಕ್ಕೋ ಹೆಚ್ಚು ಅಮಾಯಕರ ಮಾರಣ ಹೋಮವಾಯಿತು. ಅದರ ಹಿನ್ನೆಲೆಯ ಕಥೆಯಿರುವ ಈ ಸಿನೆಮಾ ಒ೦ದು ಎಂಟು ವರ್ಷದ ಮಾರ್ಟಿನ ಎನ್ನ್ನುವ ಬಾಲಕಿಯ ಬದುಕಿನ ವೈಪರೀತ್ಯಗಳ ಮೇಲೆ ನಿರೂಪಿಸಲ್ಪಟ್ಟಿದೆ. ಚಿತ್ರದ ಪ್ರಾರಂಭದಲ್ಲಿ ಒ೦ದು ಕುಟು೦ಬದ ಕಥೆ ಎನಿಸುತ್ತದೆ. ಸಹೋದರನನ್ನು ಕಳೆದುಕೊಳ್ಳುವ ಹುಡುಗಿಯೊಬ್ಬಳು ಮಾತು ಆಡುವುದನ್ನೇ ನಿಲ್ಲುಸುತ್ತಾಳೆ. ಈಗ ತಾಯಿ ಮತ್ತೊಮ್ಮೆ ಗರ್ಭಿಣಿ. ಮತ್ತೆ ಸಹೋದರ ಬಂದರೆ ಅವಳು ಮಾತನಾಡಳು ಪ್ರಾರ೦ಭಿ ಸುವಳೆನೋ ಎನ್ನುವ ಆಸೆ ಎಲ್ಲರದು...ಆದರೆ ವಿಧಿ ಬೇರೆಯದೇ ರೀತಿಯಲ್ಲಿ ತನ್ನ ಸ೦ಚು ಹೂಡಿರುತ್ತದೆ...ತು೦ಬಾ ಮನಮಿಡಿಯುವ ಕಥೆ, ಅಭಿನಯವಿರುವ ಈ ಸಿನಿಮಾವನ್ನೊಮ್ಮೆ ತಪ್ಪದೆ ನೋಡಿ.




Wednesday, July 18, 2012

ವಿ'ಚಿತ್ರ'ಗಳು-3


ಕೆಲವೊಂದು ಚಿತ್ರಗಳನ್ನು ದಾಖಲೆಗಾಗಿಯೇ ತೆಗೆಯಲಾಗುತ್ತದೆ. ಮತ್ತದು ತಪ್ಪೆಂದು ಹೇಳಲಾಗದಿದ್ದರೂ ಒಂದು ಸಿನಿಮಾ ಹೆಚ್ಚಾಗಿ ತಾನು ಹೇಳಬೇಕೆಂದಿರುವ ವಿಷಯವನ್ನು ಅಚ್ಚುಕಟ್ಟಾಗಿ ಮನಮುಟ್ಟುವಂತೆ ಹೇಳಿದರೆ ಅದೇ ದೊಡ್ಡ ಸಾಧನೆ ಎನ್ನಬಹುದು. ಉತ್ತಮ ದಾಖಲೆ ಎಂದು ಅರ್ಥೈಸಬಹುದು. ಸಿನಿಮಾದ ಸಾರ್ಥಕತೆ ಇರುವುದು ಅಲ್ಲೇ. ಆದರೂ ಕೆಲವೊಮ್ಮೆ ಹೇಳಿದ್ದನ್ನು ಬೇರೆಬೇರೆಯಾಗಿ ಹೇಳಿ, ಒಂದರ್ಥದಲ್ಲಿ ಎಲ್ಲಾ ರೀತಿಯ ಕಥೆಗಳನ್ನು ತಮ್ಮ ಮಿತಿಯೊಳಗೆ ವಿಭಿನ್ನ ರೀತಿಯಲ್ಲಿ ನಿರೂಪಿಸಿ ಬೇಸರವಾದಾಗ, ಅಥವಾ ಅದೇಕೋ ಏಕತಾನತೆ ಎನಿಸಿದಾಗ ಚಿತ್ರಕರ್ಮಿಗಳು ಏನಾದರೊಂದು ವಿಶೇಷವನ್ನು ಸಿನಿಮಾರಂಗದಲ್ಲಿ ಮಾಡಲು ಪ್ರಯತ್ನಿಸುತ್ತಾರೆ. ಸರಳವಾಗಿ ಕಥೆ ಹೇಳುತ್ತೇನೆ ಕೇಳಿ. ಅವನೊಬ್ಬ ಬಡವ. ಅವನಿಗೀಗ ಕೆಲಸ ಸಿಕ್ಕಿದೆ. ಅದೂ ಕಾಡಿನ ರಕ್ಷಕ ಅಥವಾ ಫಾರೆಸ್ಟ್ ಗಾರ್ಡ್ ಆಗಿ. ಕೆಲಸಕ್ಕಾಗಿ ಹಾತೊರೆಯುವ ಆತ ಯಾವ ಕೆಲಸವಾದರೂ ಮಾಡಲು ಸಿದ್ಧನಿದ್ದರಿಂದ ಆ ಕೆಲಸವನ್ನು ಬಹಳ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಅವನು  ನಿರ್ಜನವಾದ ಕಾಡೊಂದರಲ್ಲಿ ಗಾರ್ಡ್ ಆಗಿ ನೇಮಕಗೊಳ್ಳುತ್ತಾನೆ. ದೋಣಿಯೊಂದು ಆ ನಿರ್ಜನ ಕಾಡಿನಲ್ಲಿ ಅವನನ್ನು ಬಿಟ್ಟು ಹೊರಟುಹೋಗುತ್ತದೆ. ಈಗ ಇಡೀ ಕಾಡೊಳಗೆ ಅವನನ್ನು ಬಿಟ್ಟರೆ ಅವನ ಕಣ್ಣಿಗೆ ಬೀಳುವುದು ಪ್ರಾಣಿ ಪಕ್ಷಿ ಸರ್ಪಗಳು ಮಾತ್ರ. ನಾಯಕ ಅವುಗಳೊಂದಿಗೆ ತನ್ನ ಜೀವನ ಪ್ರಾರಂಭಿಸುತ್ತಾನೆ. ಕೆಲವೇ ದಿನಗಳಲ್ಲಿ ತನ್ನ ಒಂಟಿತನ ಮರೆಯುತ್ತಾನೆ. ಅಷ್ಟರಲ್ಲಿ ಅಲ್ಲಿ ತಾನೊಬ್ಬನೇ ಇಲ್ಲ ಎಂಬ ಗುಮಾನಿ ಮೂಡಲು ಪ್ರಾರಂಭಿಸುತ್ತದೆ..ಮುಂದೆ..?
ಇದು 2001 ರಲ್ಲಿ ಏಕನಟನಿದ್ದ ಕಾರಣಕ್ಕೆ ಗಿನ್ನೆಸ್ ದಾಖಲೆ ಸೇರಿದ ಮಳಯಾಳಮ್ ಚಿತ್ರ ದಿ ಗಾರ್ಡ್‌ನ ಕಥೆ. ಕಳಾಭವನ್ ಮಣೀ ಅಭಿನಯದ ಈ ಚಿತ್ರದ ನಿರ್ದೇಶಕ ಹಕೀಮ್ ರಾಥರ್. ಯಾವುದೇ ದಾಖಲೆಯ ಮನ್ನಣೆಗೆ ಪಾತ್ರವಾದ ಸಿನಿಮಾಗಳಲ್ಲಿರುವಂತೆಯೇ ಈ ಚಿತ್ರದಲ್ಲೂ ಕೆಲವೊಂದು ಋಣಾತ್ಮಕ ಅಂಶಗಳಿವೆ. ಒಬ್ಬನೇ ನಟ ಮತಾಡುವುದು, ಓಡಾಡುವುದು ಮತ್ತು ಹೆಚ್ಚೆಚ್ಚು ಘಟನೆಗಳು ನಡೆಯದಿರುವುದು ನೋಡುಗರಿಗೆ ಬೋರ್ ತರಿಸುತ್ತದೆ. ಇಲ್ಲಿ ನಿರ್ದೇಶಕ ಹಕೀಮ್ ಒಂದಷ್ಟು ಬುದ್ದಿವಂತಿಕೆ ಮೆರೆದಿದ್ದಾರೆ. ಅದೇನೆಂದರೆ ನಾಯಕನಾಗಿ ಕಲಾಭವನ್ ಮಣಿಯನ್ನು ಆಯ್ಕೆ ಮಾಡಿರುವುದು. ಈ ಕಲಾವಿದನ ವಿಶೇಷತೆಯೆಂದರೆ ತುಂಬಾ ಒಳ್ಳೆಯ ಅಣುಕು ಕಲಾವಿದ. ಆದ್ದರಿಂದ ಅರ್ಧ ಸಿನಿಮಾ ಆತನ ಅಣುಕು ಅಭಿನಯ, ಸಂಭಾಷಣೆಗಳಿಂದ ಸಹನೀಯವೆನಿಸುತ್ತದೆ. ಇದರೊಟ್ಟಿಗೆ ಛಾಯಾಗ್ರಹಣ ಈ ಚಿತ್ರದ ಇನ್ನೊಂದು ಗಮನಾರ್ಹ ಅಂಶ. ಅಂದಹಾಗೆ ಈ ಚಿತ್ರದಲ್ಲಿ ಹಾಡುಗಳೂ ಇವೆ.
ಕುತೂಹಲವಿದ್ದರೆ ಮೋಸರ್‌ಬೇರ್ ಕಂಪನಿಯ ಡಿವಿಡಿಗಳು ಲಭ್ಯವಿದೆ. ಒಮ್ಮೆ ನೋಡಬಹುದು.
ಇದೇ ನಿಟ್ಟಿನಲ್ಲಿ ಇನ್ನು ಹೆಸರಿಸಬೇಕಾದ ಸಿನಿಮಾಗಳೆಂದರೆ ಕನ್ನಡದ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಶಾಂತಿ, ಸುನೀಲ್ ದತ್ ನಟಿಸಿ ನಿರ್ದೇಶಿಸಿದ್ದ ಯಾದೇ. 2004 ರಲ್ಲಿ ಬಿಡುಗಡೆಯಾದ ಶಾಂತಿ ಚಿತ್ರದಲ್ಲಿ ಭಾವನ ಮುಖ್ಯಭೂಮಿಕೆಯಲ್ಲಿದ್ದರು. ಕಲಾವಿದೆಯೊಬ್ಬಳ ಜೀವನದ ಕಥೆ ಇದಾಗಿತ್ತು. ಹಾಗೆ ಯಾದೇ ಚಿತ್ರದಲ್ಲಿ ಕೇವಲ ಇಬ್ಬರು ಕಲಾವಿದರು ಮಾತ್ರ ನಟಿಸಿದ್ದರು. ಅದರಲ್ಲೂ ಸುನಿಲ್ ದತ್ ಬಿಟ್ಟರೆ ಇನ್ನೊಂದು ಪಾತ್ರಧಾರಿ ನರ್ಗೀಸ್ ದತ್  ನೆರಳು ಮಾತ್ರ ಸಿನಿಮಾದಲ್ಲಿತ್ತು. ಈ ಚಿತ್ರ 1954ರಲ್ಲಿ ತೆರೆಗೆ ಬಂದು ಗಿನ್ನೆಸ್ ದಾಖಲೆಯ ಹಿರಿಮೆಯನ್ನು ತನ್ನದಾಗಿಸಿಕೊಂಡಿತ್ತು. ಹಾಗೆ 2010ರಲ್ಲಿ ತೆರೆಗೆ ಬಂದ ಬರೀಡ್ ಚಿತ್ರವೂ ಕೇವಲ ಒಬ್ಬನೇ ಒಬ್ಬ ಪ್ರಮುಖ ಪಾತ್ರಧಾರಿಯನ್ನು ಹೊ೦ದಿತ್ತು.ಅದು ಒ೦ದೆ ಸ್ಥಳದಲ್ಲಿ ಕೂಡ ಚಿತ್ರಿಸಲಾಗಿತ್ತು.


Tuesday, July 17, 2012

ನೋಡಲೇಬೇಕಾದ ಚಿತ್ರಗಳು-10

ಒಬ್ಬ ವ್ಯಕ್ತಿಯ ಜೀವನಾಧಾರಿತ ಕಥೆಗಳು ಸಿನಿಮಾ ರೂಪ ತಾಳಿದರೆ ಅದೊಂದು ಇತಿಹಾಸದ ದಾಖಲೆಯಾಗಿ ಉಳಿದುಬಿಡುತ್ತದೆ.ಆದರೆ ಚಿತ್ರತ೦ಡ ಯಾವುದೇ ಪ್ರಲೋಭನೆಗೊಳಗಾಗಿರಬಾರದು  ಹಾಗೆ  ಪಕ್ಷಪಾತ ರಹಿತವಾಗಿರಬೇಕು. ಆದರೂ ಒ೦ದು ಸಿನಿಮಾದ ಮೂಲಕ ಒಬ್ಬ ವ್ಯಕ್ತಿಯ ಇತಿಹಾಸವನ್ನು , ಆವತ್ತಿನ, ಅವನ ಯಥಾಚಿತ್ರಣವನ್ನು ಸಮರ್ಥವಾಗಿ ಕಟ್ಟಿಕೊಡಬೇಕಾದರೆ ಚಿತ್ರದ ಬರವಣಿಗೆ ಎಷ್ಟು ಮುಖ್ಯವೋ ಆ ಪಾತ್ರಧಾರಿಯೂ ಅಷ್ಟೇ ಮುಖ್ಯವಾಗಿರುತ್ತಾನೆ. ಕಾರಣ ಒಬ್ಬ ವ್ಯಕ್ತಿಯನ್ನು ಸಿನಿಮಾದಲ್ಲಿ ಪ್ರತಿನಿಧಿಸುವುದು, ಆತನ ಪ್ರತಿರೂಪವೇ ಆಗಿಬಿಡುವುದು ಕಲಾವಿದನ ಸಾಮರ್ಥ್ಯಕ್ಕೆ ಒಂದು ಸವಾಲೇ ಸರಿ. ಈಗಾಗಲೇ ಜನರು ಆ ವ್ಯಕ್ತಿಯ ಬಗ್ಗೆ ಕೇಳಿರುತ್ತಾರೆ, ಹತ್ತಿರದಿ೦ದಾಗದಿದ್ದರೂ ದೂರದಿ೦ದಾದರೋ ನೋಡಿರುತ್ತಾರೆ..ಅವನಿಗೆ ಸ೦ಬ೦ಧ  ಪಟ್ಟ   ಘಟನೆಗಳನ್ನೂ ಕೇಳಿರುತ್ತಾರೆ..ಹಾಗಾಗಿ ಪಾತ್ರಧಾರಿ ಭಾರಿ ಎಚ್ಚರಿಕೆಯಿ೦ದ ಅಭಿನಯಿಸಬೇಕಾಗುತ್ತದೆ. ಅಷ್ಟೇ  ಪೂರ್ವ ತಯಾರಿಗಳನ್ನು ಮಾಡಿಕೊ೦ಡಿರಬೇಕಾಗುತ್ತದೆ.
ಫಾರೆಸ್ಟ್ ವ್ಹೈಟೆಕರ್ ಅಭಿನಯದ ದಿ ಲಾಸ್ಟ್ ಕಿ೦ಗ್ ಆಫ್ ಸ್ಕಾಟ್ಲ್ಯಾಂಡ್ ಚಿತ್ರವನ್ನ ನೋಡಿದಾಗ ಈದಿ ಅಮೀನನೆ ಎದುರಿಗೆ ಬ೦ದ೦ತನಿಸುವುದರ ಕಾರಣ ಫಾರೆಸ್ಟ್ ನ ಅದ್ಭುತ ಅಭಿನಯ. ಉಗಾ೦ಡದ ಸರ್ವಾಧಿಕಾರಿಯಾದ ಈದಿ ಅಮೀನನ ಬಗೆಗಿನ ಈ ಸಿನಿಮಾದಲ್ಲಿ ಆತನ ತಣ್ಣಗಿನ ಕ್ರೌರ್ಯ, ಅಮಾನವೀಯ ಮನಸ್ಥಿತಿಯನ್ನ, ಪೆದ್ದು ಪೆದ್ದಾಗಿ ವರ್ತಿಸುವ ಅವನ ಅತಿ ಜಾಣತನವನ್ನು   ಅಷ್ಟೇ ಕರಾರುವಕ್ಕಾಗಿ ನಮಗೆ ತೋರಿಸಿದ್ದಾನೆ ಫಾರೆಸ್ಟ್. ನಾಯಕನನ್ನು ತನ್ನ ಮನೆಯ೦ಗಳಕ್ಕೆ ಕರೆದು ಬಹುಮರ್ಯಾದೆ ಕೊಡುವಾಗ,, ಹೆ೦ಡತಿ ಮೋಸ ಮಾಡಿದಳು ಎ೦ದು ಗೊತ್ತಾದಾಗ ಆಕೆಯ ಕೈಕಾಲುಗಳನ್ನು ಬೇರ್ಪಡಿಸಿ ಕಾಲಿದ್ದ ಕಡೆ ಕೈಯನ್ನೂ , ಭುಜಕ್ಕೆ ಕಾಲುಗಳನ್ನು ಸೇರಿಸಿ ಹೊಲಿದು ಅಷ್ಟೇ ತಣ್ಣಗೆ 'ಅವಳೆನೆಗೆ ಮೋಸ ಮಾಡಿದ್ದಳು, ಅದಕ್ಕೆ ಅವಳಿಗೆ ತಕ್ಕುದಾದ ಶಿಕ್ಷೆ ನೀಡಿದೆ..' ಎ೦ದು ಹೇಳಿ ಆರಾಮವಾಗಿ ಸಿ೦ಹಾಸನದ ಮೇಲೆ ಕುಳಿತು ನೃತ್ಯ ನೋಡುತ್ತಾ ಮಜಮಾಡುವಾಗ, ನಾಯಕನ ಎದೆಗೆ ಕಬ್ಬಿಣದ ಕೊಕ್ಕೆ ತೂರಿಸಿ ಅವನನ್ನು ನೇತುಹಾಕಿ ಮಾತಾಡುವಾಗ ಅವನ ಅಭಿನಯವನ್ನ ಗಮನಿಸಬೇಕು..ಒ೦ದೆ ಮಾತು.. ಸೂಪರ್.!
ಈದಿ ಅಮೀನ ನಾವೆಲ್ಲಾ ಓದಿ ಕೇಳಿ ತಿಳಿದುಕೊ೦ಡಿರುವ೦ತೆ  ಅವನೊಬ್ಬ ನರರೂಪದ ರಾಕ್ಷಸ ಎ೦ದೆ ಹೇಳಬಹುದು. ಆತನ ಬಗ್ಗೆ ಹಲವಾರು ದ೦ತಕಥೆಗಳು ಇವೆ. ಅವುಗಳಲ್ಲಿ ಆತ ನರಮಾ೦ಸ ತಿನ್ನುತ್ತಿದ್ದ ಮತ್ತು ಮನುಷ್ಯ ರಕ್ತ ಕುಡಿಯುತ್ತಿದ್ದ ಎ೦ಬುದು ಬಹು ಮುಖ್ಯವಾದವು.. ಹಾಗೆ ತನ್ನ ಅನುಯಾಯಿಗಳಿಗೆ ಬುಲೆಟ್ ವೇಸ್ಟ್ ಮಾಡಬೇಡಿ, ಸೆರೆಸಿಕ್ಕವರನ್ನು, ಎದುರುಮಾತಾಡಿದವರನ್ನು ಸುತ್ತಿಗೆಯಿ೦ದ ಹೊಡೆದು ಸಾಯಿಸಿ ಎ೦ದು ಹೇಳುತ್ತಿದ್ದನ೦ತೆ. ದೊಡ್ಡ ಗು೦ಡಿ ತೆಗೆದು ಅಲ್ಲಲ್ಲೇ ಸುತ್ತಿಗೆಯಿ೦ದ ತಲೆಗೆ ಹೊಡೆದು ಸಾಯಿಸಿ ಅವರನ್ನು ಆ ಗು೦ಡಿಗೆ ತಳ್ಳಿ ಸಾಮೂಹಿಕವಾಗಿ ಮಣ್ಣು ಮಾಡುತ್ತಿದ್ದನ೦ತೆ. ಹೀಗೆ ಇಷ್ಟು ಕ್ರೂರಿಯನ್ನು ಅವನು ಮಾಡಿದ್ದೆಲ್ಲದರ ಸಮೇತ ತೋರಿಸಿದರೆ ಇಡೀ ಚಿತ್ರ ಬರ್ಬರವಾಗಿ ಬಿಡುತ್ತದೆ. ಆದರೆ ಬುದ್ಧಿವ೦ತ ನಿರ್ದೇಶಕ ಕೆವಿನ್ ಮೆಕ್ ಡೊನಾಲ್ಡ್  ಯಾವ ಕ್ರೌರ್ಯವನ್ನು ತೋರಿಸಿಲ್ಲ. ಯಾವ ಕೊಲೆಯನ್ನು ಬರ್ಬರವಾಗಿ ಚಿತ್ರಿಸಿಲ್ಲ. ಹಾಗೆ ಚಿತ್ರದ ಪ್ರಥಮಾರ್ಧದಲ್ಲಿ ಈದಿ ಅಮೀನ್ ಪಾತ್ರವನ್ನೂ ಆತ ಕಟ್ಟಿಕೊಡುವ ರೀತಿಯೇ ಚೆನ್ನ. ನಾವು ಕೂಡ ಅವನೊ೦ದಿಗೆ ಉಗಾ೦ಡಕ್ಕೆ ಕಾಲಿಟ್ಟ ಹಾಗೆ, ಮೊದಮೊದಲಿಗೆ ಈದಿ ಅಮೀನ್ ಪರಿಚಯವಾದ ಹಾಗೆ, ಅಲ್ಲಿನ ರಾಜಕೀಯ ಸ್ಥಿತಿ ಸ್ವಲ್ಪ ಸ್ವಲ್ಪವಾಗಿ ತಿಳಿದುಬ೦ದ ಹಾಗೆ, ಆನ೦ತರ ಅವನ ಇನ್ನೊ೦ದು ಮುಖದ ಅನಾವರಣ...ಹೀಗೆ ಇಡೀಚಿತ್ರದೊಳಗೆ, ಅಥವಾ ಉಗಾ೦ಡದಲ್ಲಿ ನಾವಿದ್ದೀವೇನೋ ಅನ್ನುವ ರೀತಿ ನಿರೂಪಿಸಿದ್ದಾನೆ. ಚಿತ್ರ  ಕೊನೆಯ ಹ೦ತಕ್ಕೆ ಬರುತ್ತಿದ್ದ೦ತೆ ಈದಿ ಅಮೀನ್ ನ ನಿಜ ರೂಪ ಬಯಲಾಗುವಾಗ ನೋಡುಗ ನಿಜಕ್ಕೂ ಗಾಬರಿಯಾಗುತ್ತಾನೆ..ಆತನ ಕ್ರೌರ್ಯಕ್ಕೆ ಬೆಚ್ಚುತ್ತಾನೆ...ಅದು ನಿರ್ದೇಶಕನ  ಗೆಲುವು.
2006ರಲ್ಲಿ  ತೆರೆಗೆ ಬ೦ದ ಗಿಲ್ಡ್ ಫೋಲ್ದನ್ ನ ಕಾದ೦ಬರಿ ಆಧಾರಿತ ಈ ಚಿತ್ರ ಉತ್ತಮ ಅಭಿನಯಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊ೦ಡಿತು.ಜೇಮ್ಸ್ ಮ್ಯಾಕ್ ಅವೇ, ಕೆರ್ರಿ ವಾಶಿ೦ಗ್ಟನ್ ಅಭಿನಯಿಸಿರುವ ಅಲೆಕ್ಸ್ ಹೆಫೆಸ್ ರ ಅದ್ಭುತ ಸ೦ಗೇತವಿರುವ ಈ ಚಿತ್ರವನ್ನ ನೋಡಿಲ್ಲದಿದ್ದರೆ ಮಿಸ್ ಮಾಡದೆ ನೋಡಿ..

Friday, July 13, 2012

ಒಂದು ಪುಸ್ತಕ , ಒಂದು ಸಿನಿಮಾ :


ಗ್ಯಾಂಗ್ಸ್ ಆಫ ವಾಸ್ಸೇಪುರ್
ದೊಂದು ಸಣ್ಣಕಥೆಯನ್ನು ಓದಿ ಸುಮಾರು ವರ್ಷಗಳೇ ಕಳೆದಿದ್ದರೂ ಅದರ ಒಂದೊಂದು ಸಾಲುಗಳೂ ನನ್ನಲ್ಲಿ ಅಚ್ಚಳಿಯದೇ ಹಾಗೇ ಉಳಿದಿವೆ.ಆತ ಸಿನಿಮಾಗಳಲ್ಲಿ ಅಭಿನಯಿಸುವ ಸಹನಟ ಅರ್ಥಾತ್ ಜ್ಯೂನಿಯರ್ ಆರ್ಟಿಸ್ಟ್. ಆವತ್ತೂ ಕೂಡ ಎಂದಿನಂತೆ ಸಿನಿಮಾವೊಂದರಲ್ಲಿ ಸಹನಟನ ಪಾತ್ರ ಸಿಕ್ಕಿದೆ. ಅವನ ಪಾತ್ರವಿಷ್ಟೆ. ನಾಯಕ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾನೆ. ರಸ್ತೆಯಲ್ಲಿ ಸುಮಾರು ಜನ ದಾರಿಹೋಕರೂ ನಡೆದುಕೊಂಡು ಹೋಗುತ್ತಿರುತ್ತಾರೆ. ಈತ ಮಾತ್ರ ನಾಯಕನಿಗೆ ಡಿಕ್ಕಿ ಹೊಡೆದು ಕ್ಷಮೆ ಕೇಳಿ ಮುಂದೆ ಹಾದುಹೋಗಬೇಕು. ಆಗ ಆ ಸಹನಟನಿಗೆ ಡಿಕ್ಕಿ ಹೊಡೆದ ಮೇಲೆ ಯಾವ ರೀತಿ ಪ್ರತಿಕ್ರಿಯಿಸಬೇಕು, ಆತನ ಪ್ರತಿಕ್ರಿಯೆ ಏನು? ನಾನು ಹೇಗೆ ಯಾವ ರೀತಿ ಡಿಕ್ಕಿ ಹೊಡೆಯಬೇಕು ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.ತೀರಾ ಒಂದು ನಿಮಿಷವೂ ಬರದ ಆ ಪಾತ್ರಕ್ಕೆ ಆ ಸಹನಟ ತಯಾರಿಯಾಗುವುದೇ ಕಥೆಯ ವಸ್ತು. ನಿಜಕ್ಕೂ ಸಿನಿಮಾದಲ್ಲಿನ ತನ್ಮಯತೆ ಮತ್ತು ಹೊಂದಾಣಿಕೆ, ಪೂರ್ವ ತಯಾರಿ, ಕಲಾವಿದನಿಗಿರಬೇಕಾದ ಅಭಿನಯದೆಡೆಗಿನ ಪೂಜ್ಯಭಾವನೆ ಮುಂತಾದವುಗಳನ್ನು ಮನಮುಟ್ಟುವಂತೆ ವಿವರಿಸಿದ್ದಾರೆ ಸತ್ಯಜಿತ್ ರೇ. ಹೌದು.ಈ ಕಥಾಲೇಖಕ ಬೇರಾರೂ ಅಲ್ಲ. ಖ್ಯಾತ ಭಾರತೀಯ ನಿರ್ದೇಶಕ ಸತ್ಯಜಿತ್ ರೇ. ಅವರ ಸಣ್ಣಕಥೆಗಳು ಒಂದಕ್ಕಿಂತ ಒಂದು ಸ್ವಾರಸ್ಯಕರವಾಗಿದೆ. ಮೊನ್ನೆ ಮೈ ಇಯರ್ಸ್ ವಿಥ್ ಅಪು ಕಾದಂಬರಿ ಓದಿ ಮುಗಿಸಿದಾಗ ಆವರು ವಿಶ್ವಮಾನ್ಯ ಚಲನಚಿತ್ರ ಪಥೇರ್ ಪಾಂಚಾಲಿ ಸರಣಿಯ ನಿರ್ದೇಶನಕ್ಕಾಗಿ ಪಟ್ಟ ಕಷ್ಟಗಳು, ಅದರ ಪೂರ್ವ ತಯಾರಿಗಳು ಮುಂತಾದವುಗಳನ್ನು ಓದಿದಾಗ ಒಬ್ಬ ಚಿತ್ರಕರ್ಮಿ ತನ್ನ ಕನಸಿನ ಸಾಕ್ಷಾತ್ಕಾರಕ್ಕಾಗಿ ಏನೇನಲ್ಲಾ ತ್ಯಾಗ ಮಾಡಲು ತಯಾರಾಗಿ ಬಿಡುತ್ತಾನೆಂಬುವುದು ಆಶ್ಚರ್ಯತರಿಸುತ್ತದೆ. ಮತ್ತದು ಎಲ್ಲರ ಕೈಯಲ್ಲೂ ಸಾಧ್ಯವೂ ಇಲ್ಲ ಬಿಡಿ.ಚಿತ್ರದಲ್ಲಿ ಬರುವ ಮನೆಯ ಸೂರಿನ ಒಂದು ತೊಲೆ ಹೇಗಿರಬೇಕು ಎನ್ನುವುದರಿಂದಾ ಹಿಡಿದು ನಾಯಕಿಯ ಗೆಳತಿಯ ಮೂಗುತಿ ಎಷ್ಟು ದೊಡ್ಡದಿರಬೇಕು ಎನ್ನುವವರೆಗೆ ರೇ ಮೊದಲೇ ನಿರ್ಧರಿಸುತ್ತಾರೆ. ಅದರಲ್ಲೂ ಸಾಕಷ್ಟು ಹಣಕಾಸನ್ನು, ಹೆಸರನ್ನು ಕೊಟ್ಟಿದ್ದ ಜಾಹಿರಾತು ವಿಭಾಗದಿಂದ ಸಿನಿಮಾಕ್ಕೇ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡೇ ಬಂದ ರೇ ಅವರನ್ನು ಸಿನಿಮಾ ಅಷ್ಟು ಸುಲಭವಾಗಿ ಬಿಗಿದಪ್ಪಿಕೊಳ್ಳುವುದಿಲ್ಲ. ಎಲ್ಲಾ ಒಂದು ರೀತಿಯಲ್ಲಿ ಸೆಟ್ ರೈಟ್ ಆಗಿದೆ, ಸರಿಯಾಗಿದೆ ಎನ್ನುವಷ್ಟರಲ್ಲಿ ಮತ್ತೆಲ್ಲೋ ಎಡವಟ್ಟುಗಳು, ಮತ್ತಿನ್ನೇನೋ ಸಮಸ್ಯೆಗಳು ಅದನ್ನು ಪರಿಹರಿಸುವಷ್ಟರಲ್ಲಿ ಹಣಕಾಸಿನ ತೊಂದರೆ..ಹೀಗೆ ಇಡೀ ಚಿತ್ರದುದ್ದಕ್ಕೂ ಒಂದಲ್ಲಾ ಒಂದು ಸಮಸ್ಯೆಗಳು ಅವರನ್ನು ಎಡೆಬಿಡದೆ ಕಾಡುತ್ತವೆ. ಆದರೆ ರೇ ಅವುಗಳನ್ನು ಅನುಭವ ಗಳೆಂದು ಪರಿಗಣಿಸಿ ತಮ್ಮನ್ನು ಸಿನಿಮಾದಲ್ಲಿ ತೊಡಗಿಸಿಕೊಳ್ಳುತ್ತಾರೆ. ಬಿಭೂತಿ ಭೂಷಣ್ ಬ್ಯಾನರ್ಜೀಯವರ ಕಾದಂಬರಿ ಈ ಕಲಾಕೃತಿಯಲ್ಲಿ ಬರುವ ಮುಖ್ಯಪಾತ್ರಧಾರಿಗಳನ್ನು ಆಯ್ಕೆಮಾಡುವುದಕ್ಕೇ ರೇ ಪಡುವ ಶ್ರಮ, ಅವರ ಪರಿಪಕ್ವತೆ, ನಿಖರತೆಗಳೂ ಕೂಡ ಆಶ್ಚರ್ಯತರಿಸುವಂತಹುದ್ದೆ. ಸಿನಿಮಾಕ್ಕಾಗಿ ಮನೆಯ ಆಭರಣಗಳನ್ನು ಒತ್ತೆಯಿಡುವಾಗ, ಹಣಕಾಸಿನ ವ್ಯವಸ್ಥೆಗಾಗಿ ದಿನಗಟಲೇ ಓಡಾಡುವಾಗ ಎಲ್ಲೂ ಕೂಡ ರೇ ಸಿನಿಮಾ ತಂದಿಟ್ಟ  
 ವಿಪರೀತ ಪರಿಸ್ಥಿತಿಗೆ ಕೊರಗುವುದಿಲ್ಲ, ಶಪಿಸುವುದಿಲ್ಲ. ಅದೆಲ್ಲದರ ನಡುವೆಯೇ ಅವರು ಸಿನಿಮಾದ ಚಿತ್ರಕಥೆಯ ಹೊಸಹೊಸ ಸಾಧ್ಯತೆಗಳ ಬಗ್ಗೆ, ತಿರುವುಗಳ ಜೋಡನೆಯ ಬಗ್ಗೆ ಅಲೋಚಿಸುತ್ತಾರೆ.ಇದೊಂದು ಪುಸ್ತಕವನ್ನು ಓದಿಲ್ಲದಿದ್ದರೆ ಒಮ್ಮೆ ಓದಿಬಿಡಿ. ಇಂಥ ಪುಸ್ತಕಗಳನ್ನೋದುವುದರಿಂದ ಅನೇಕ ಲಾಭವಿದೆ. ಆವತ್ತಿನ ರಾಜಕೀಯ ಪರಿಸ್ಥಿತಿ, ಸಿನಿಮಾಜಗತ್ತಿನ ಸ್ಥಿತಿಗತಿ, ಆವತ್ತಿನ ತಂತ್ರಜ್ಞಾನ, ಜನರ ದೃಷ್ಟಿ ಕಲಾವಿದರ ವರ್ತನೆಗಳು, ಆವತ್ತಿನ ಬಜೆಟ್ ಮುಂತಾದವುಗಳೂ ಕೂಡ ಗೊತ್ತಾಗಿಬಿಡುತ್ತವೆ.
   ಅನುರಾಗ್ ಕಶ್ಯಪ್ ನಿರ್ದೇಶನದ ಗ್ಯಾಂಗ್ಸ್ ಆಫ ವಾಸ್ಸೇಪುರ್ ಮತ್ತೊಂದು ರಕ್ತಚರಿತ್ರ ಎನಿಸಿಕೊಳ್ಳುತ್ತದೆ. ಹಾಗಂತ ಅನ್ನುವುದಕ್ಕೇ ನೇರ ಕಾರಣ ನಿರೂಪಣಾ ತಂತ್ರವಲ್ಲ. ಕಥೆಯ ವಸ್ತು. ಇಸವಿ 1941ರಲ್ಲಿ  ವಾಸ್ಸೇಪುರದಲ್ಲಿ ನಡೆಯುವ ರೈಲು ದರೋಡೆಯಿಂದ ಪ್ರಾರಂಭವಾಗುವ ಚಿತ್ರ ಒಂದು ಅನೂಹ್ಯ ರಕ್ತಸಿಕ್ತವೊಂದರ ಇತಿಹಾಸವನ್ನು ತೆರೆದಿಡುತ್ತಾ  
 ಸಾಗುತ್ತದೆ. ನನಗೆ ಪ್ರತಿಸಾರಿಯೂ ಒಂದು ಪ್ರಶ್ನೆ ಕಾಡುತ್ತಲೇ ಇರುತ್ತದೆ: ಮಾನವನ ಇತಿಹಾಸ ಇಷ್ಟು ಅಮಾನವೀಯವಾ? ಹೌದು ಜನ ಒಬ್ಬರನ್ನೊಬ್ಬರು ಕೊಚ್ಚಿಹಾಕುವ ಕಥೆ ರಕ್ತಚರಿತ್ರದ್ದು. ಇದು ಕೂಡ ಅಂತಹುದೇ ಕಥೆ. ಇಲ್ಯಾರನ್ನೂ ನಾಯಕ ಎಂದು ಬಿಂಬಿಸಲಾಗುವುದಿಲ್ಲ. ಅಥವಾ ಅವನು ಮಾಡಿದ್ದು ಸರಿ, ಅವನು ಹಾಗೆಯೇ ಮಾಡಬೇಕಿತ್ತು ಎಂದು ಒಂದು ಗಟ್ಟಿ ನಿರ್ಧಾರಕ್ಕೆ ಬರಲಾಗುವುದಿಲ್ಲ. ಬದಲಿಗೆ ಮೂರು ಹೊತ್ತು ತಿಂದು, ಚ೦ದಗೆ ಸಂಸಾರ ಮಾಡಿ ಅರವತ್ತೆಪ್ಪತ್ತು ವರ್ಷಕ್ಕೆ ಕೊನೆಯಾಗಿಬಿಡಬಹುದಾದ ಬದುಕನ್ನೇಕೆ   ರಕ್ತಸಿಕ್ತಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಕಾಡದೇ ಬಿಡುವುದಿಲ್ಲ. ಇಲ್ಲಿ ಯಾವ ಕೊಲೆಯನ್ನೂ  
ನಿರ್ದೇಶಕ ವೈಭವೀಕರಿಸಿಲ್ಲ. ಅದು ಆವತ್ತು ಹೇಗೆ ನಡೆದಿತ್ತೋ ಹಾಗೆ ಚಿತ್ರೀಕರಿಸಿದ್ದಾನೆ. ಆದರೂ ಕೆಲವೊಮ್ಮೆ ಚಿತ್ರದ ಕಥೆಯ ಬಗ್ಗೆಯೇ ರೇಜಿಗೆ ಹುಟ್ಟಿಬಿಡುವುದಂತೂ ಸತ್ಯ. ಇದು ಒಬ್ಬನ, ಒಂದು ಕುಟುಂಬದ ಕಥೆಯಲ್ಲ. ತಲೆತಲೆಮಾರುಗಳ ಸುದೀರ್ಘ ಕಥನ. ಕಥೆಯನ್ನು ಹೇಳಬೇಕೆಂದರೆ; ಅವರಪ್ಪನನ್ನು ಕೊಂದನೆಂದು ಅವನ ಮಗ ಇವನನ್ನು ಕೊಲ್ಲಲು ಸಂಚುಮಾಡುತ್ತಾನೆ..ಮಧ್ಯದಲ್ಲಿ ಮತ್ತೊಂದಿಷ್ಟು ಜನರು ಸಾಯುತ್ತಾರೆ, ಇವನನ್ನು ಕೊಂದರೆಂದು ಇವನ ಮಗ ಅವರ ವಂಶವನ್ನೆ ನಿರ್ನಾಮಮಾಡಲು ನಿರ್ಧರಿಸುತ್ತಾನೆ..ಮಧ್ಯದಲ್ಲಿ ಮತ್ತೊಂದಷ್ಟು ಜನರು ಬರ್ಬರವಾಗಿ ಕೊಲೆಯಾಗುತ್ತಾರೆ..ಮತ್ತದು ಹೀಗೆಯೇ ಮುಂದುವರೆಯುತ್ತದೆ..
ಇದೆಲ್ಲದರ ನಡುವೆಯೂ ನಮಗಿಷ್ಟವಾಗುವುದು ಮನೋಜ್ ಬಾಜಪಯಿಯವರ ಅದ್ಭುತ ಅಭಿನಯ. ಇಡೀ ಒಂದು ಮನುಷ್ಯನ ಜೀವಿತಾವಧಿಯ ಪಾತ್ರವನ್ನು, ಆಯಾ ವಯಸ್ಸಿನ ಭಾವನೆಗಳನ್ನು ನಡವಳಿಕೆಯನ್ನು ವ್ಯಕ್ತಪಡಿಸುವ ಅವರ ಅಭಿನಯ ಸಾಮರ್ಥ್ಯಕ್ಕೆ ತಲೆಬಾಗಲೆಬೇಕು. ಹಾಗೇ ಯಾರ ಪರವೂ ವಹಿಸದೇ ಇದ್ದದ್ದನ್ನು ಇದ್ದ ಹಾಗೆ ತಣ್ಣಗೆ ನಿರೂಪಿಸುವ ನಿರ್ದೇಶಕ ಅನುರಾಗ್ ಕಶ್ಯಪ್‌ಗೂ ನಮನಗಳನ್ನು ಸಲ್ಲಿಸಬೇಕಾಗುತ್ತದೆ.
ಅಂದಹಾಗೆ  ಎರಡನೆಯ ಭಾಗವೂ ಬರುತ್ತದೆ ಎನ್ನುವ ಸೂಚನೆ ಕೊಡುತ್ತಾ ಚಿತ್ರವನ್ನ ಮುಗಿಸುವ ನಿರ್ದೇಶಕರು ಕಥೆಯನ್ನ ಅರ್ಧಕ್ಕೆ ನಿಲ್ಲಿಸಿಬಿಡುತ್ತಾರೆ.




Tuesday, July 10, 2012

ಭೂತದ ಭವಿಷ್ಯ....!!!


ಮಗೆಲ್ಲಾ ಗೊತ್ತಿ(?)ರುವಂತೆ ಭೂತಗಳ ಆವಾಸಸ್ಥಾನ ಹಳೆಯ, ಪಾಳುಬಿದ್ದ ಕಟ್ಟಡಗಳು, ಮರಗಳು ಇತ್ಯಾದಿ. ಅದರಲ್ಲೂ ಪಾಳುಬಂಗಲೆಗಳೆಂದರೆ ಅವುಗಳಿಗೆ ಹಬ್ಬವೇ ಸರಿ. ಅವು ಅದರಲ್ಲೂ ಸ್ಮಶಾನದ ಅಕ್ಕಪಕ್ಕ ಇದ್ದರಂತೂ ಅವುಗಳನ್ನು ತಡೆಯುವವರ್ಯಾರು. ಅದು ಅಂತಹುದ್ದೇ ಒಂದು ಬೃಹತ್ ಭೂತಬಂಗಲೆ. ಅದರ ಮಾಲೀಕ ಸತ್ತ ಕ್ಷಣದಿಂದ ಭೂತವಾಗಿ ಆರಾಮವಾಗಿ ಅಲ್ಲೆ ವಾಸಿಸುತ್ತಿರುತ್ತಾನೆ. ಆದರೆ ನಗರಾಭಿವೃದ್ಧಿಯಾಗುತ್ತಿದ್ದಂತೆ ಹಳೆಯ, ಪಾಳುಬಿದ್ದ ಕಟ್ಟಡಗಳನ್ನೆಲ್ಲಾ ನೆಲಸಮ ಮಾಡಿ ಆ ಜಾಗದಲ್ಲಿ ಮಾರಾಟಮಳಿಗೆ, ಮನೆ ಅಪಾರ್ಟ್‌ಮೆಂಟುಗಳನ್ನು ಮಾನವರು ಕಟ್ಟತೊಡಗಿದಾಗ ಅಲ್ಲಿದ್ದ ಭೂತಗಳು ನಿರಾಶ್ರಿತವಾಗುತ್ತವೆ. ರಸ್ತೆ ಬದಿಯ ಮರಗಳನ್ನೂ ಕಡಿದು ರಸ್ತೆ ಅಗಲೀಕರಣ ಮಾಡಿದಾಗ ಮರದ ಮೇಲೆ ನೆಲೆ ಕಂಡುಕೊಂಡಿದ್ದ ಭೂತಗಳ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಅವೆಲ್ಲವೂ ಭೂತಬಂಗಲೆಗೆ ಬಂದಾಗ ಆ ಭೂತಬಂಗಲೆಯ ಮಾಲೀಕ ಎಲ್ಲರನ್ನೂ ಸೇರಿಸಿಕೊಳ್ಳಲು ಸಾಧ್ಯವಿಲ್ಲ.ಒಂದು ಇಂಟರ್ವ್ಯೂ ಇಟ್ಟುಕೊಳ್ಳೋಣ..ಎಂದು ಇಂಟರ್ವ್ಯೂ ಮಾಡಿ ಒಂದಷ್ಟು ಭೂತಗಳನ್ನು ಸೇರಿಸಿಕೊಂಡು ಆ ಮನೆಗೆ ಹೌಸ್‌ಫುಲ್ ಬೋರ್ಡ್ ನೇತುಹಾಕಿಬಿಡುತ್ತವೆ.ಅವುಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ನಾಯಕಿ, ಬ್ರಿಟಿಷರ ಅಧಿಕಾರಿ, ಜಮೀನ್ದಾರ, ಭಗ್ನ ಪ್ರೇಯಸಿ, ಕಲ್ಕತ್ತಾಟಾಂಗಾವಾಲಾ, ಸೇನಾಧಿಕಾರಿ ಇನ್ನೂ ಮುಂತಾದವರ ಭೂತಗಳಿರುತ್ತವೆ. ಈಗ ತಮ್ಮದೇ ಒಂದು ಬಂಗಲೆಯಾಯಿತೆ೦ದು ಖುಷಿಯಾಗಿರುವಾಗಿಷ್ಟರಲ್ಲಿ ಸಿನಿಮಾದವರು ಶೂಟಿಂಗಿಗಾಗಿ ಅಲ್ಲಿಗೆ ಬಂದುಬಿಡುತ್ತಾರೆ. ಮತ್ತೇ ತಮ್ಮ ಜಾಗಕ್ಕೆ ಕುತ್ತುಬಂದಿತೆಂದು ಭೂತಗಳೆಲ್ಲಾ ಭಾವಿಸಿ ಭೂತನಾಯಕಿಯನ್ನು ಕಳುಹಿಸಿ ಆ ಸಿನಿಮಾದ ನಾಯಕಿಯ ಪಾತ್ರಧಾರಿಗೆ ಹೆದರಿಸಿ ಆ ಬಂಗಲೆಯಲ್ಲಿ ನಡೆಯುತ್ತಿದ್ದ ಶೂಟಿಂಗ್ ನಿಲ್ಲಿಸಿ ಖುಷಿಯಿಂದ ಬೀಗಬೇಕೆನ್ನುವಷ್ಟರಲ್ಲಿ ಸಾಹುಕಾರನೊಬ್ಬ ಆ ಬಂಗಲೆಯನ್ನು ಖರೀದಿಸಿ ಅಲ್ಲೊಂದು ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಿಸಬೇಕೆಂದುಕೊಳ್ಳುತ್ತಾನೆ ..ಈ ಭೂತಗಳು ನಿಜಕ್ಕೂ ಗಾಬರಿಯಾಗುತ್ತವೆ.. ಸಾಹುಕಾರ ಬಂಗಲೆಯನ್ನು ಖರೀದಿ ಮಾಡದಂತೆ ಹೇಗೆ ತಡೆಯುವುದು ಎಂಬ ಯೋಚನೆಗೆ ಬೀಳುತ್ತವೆ..ಹಾಗಂತ ಸುಮ್ಮನಿರಲಾದೀತೆ..? ಅದಕ್ಕೆ ಒಂದು ಮಾಸ್ಟರ್ಪ್ಲಾನ್ ಮಾಡುತ್ತವೆ..ಮುಂದೆ..?
ಅನಿಕ್ ದತ್ತ
ಇದು 2012 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಬೆಂಗಾಲಿ ಸಿನಿಮಾ ಭೂತೆರ್ ಭಬಿಷ್ಯಾತ್ ನ ಕಥೆ. ಅನಿಕ್ ದತ್ತ ನಿರ್ದೇಶನದ ಈ ಚಿತ್ರ ಈವತ್ತಿನ ನಗರಜೀವನ, ಸಿನಿಮಾರಂಗ ಮುಂತಾದವುಗಳನ್ನು ಯಾವೊಂದು ಪೂರ್ವಗ್ರಹವಿಲ್ಲದೆ ವಿಡಂಬನೆ ಮಾಡುತ್ತಾ ಸಾಗುತ್ತದೆ. ಈ ಚಿತ್ರದಲ್ಲಿ ನನಗಿಷ್ಟವಾದದ್ದು ಕಥೆಯಲ್ಲಿನ ಹೊಸತನ. ಇಂತಹಾ ಒಂದು ಕಥೆಯನ್ನೂ ಸಿನಿಮಾ ಮಾಡಬಹುದಾ.? ಎಂಬ ಪ್ರಶ್ನೆ ಮೂಡುವಂತಹ ಕಥೆಗಳನ್ನು ಸಿನಿಮಾ ಮಾಡುವಲ್ಲಿ ನನಗೆ ಗೊತ್ತಿರುವಂತೆ ಬೆಂಗಾಲಿ ಮತ್ತು ಮಳಯಾಳಂ ಭಾಷಿಗರು ಮೊದಲಿಗರು. ಸಣ್ಣ ಸಣ್ಣ ನೀತಿಕಥೆಗಳು, ಕೇವಲ ಒಂದೇ ಎಳೆಯ ಕಥೆಗಳು, ದೊಡ್ಡ ಕಾದಂಬರಿಗಳು ಹೀಗೆ ಯಾವುದನ್ನೂ ಬೇಕಾದರೂ ಸಿನಿಮಾ ಮಾಡಿಬಿಡುತ್ತಾರೆ.
ಭೂತೆರ್ ಭಬಿಷ್ಯಾತ್ ಕೂಡ ಅಂತಹುದೇ ಒಂದು ಚಿತ್ರವಾದರೂ ನಿರೂಪಣೆಯಲ್ಲಿರುವ ತಿಳಿಹಾಸ್ಯ, ಕಲಾವಿದರ  ಪಾತ್ರೋಚಿತ ಅಭಿನಯ ಮುಂತಾದವು ಸಿನಿಮಾವನ್ನು ಎತ್ತರಕ್ಕೇರಿಸುತ್ತವೆ.
ಬಿಡುವು  ಮಾಡಿಕೊಂಡು ಈ ಸಿನಿಮಾವನ್ನೊಮ್ಮೆ ನೋಡಿ..





Monday, July 9, 2012

ನೋಡಲೇ ಬೇಕಾದ ಚಿತ್ರಗಳು -9


ಪಿಮ್ ಮತ್ತು ಪ್ಲಾಯ್ ಸಯಾಮಿ ಅವಳಿಗಳು. ಹುಟ್ಟಿದಾಗಿನಿಂದ ಹೊಟ್ಟೆಯ ಒಂದು ಭಾಗ ಅಂಟಿಕೊಂಡಿದ್ದರಿಂದ ಅವರಿಬ್ಬರಿಗೂ ಯಾವಾಗಲೂ ಜೊತೆಯಲ್ಲಿರಬೇಕಾದ ಅನಿವಾರ್ಯತೆ ಇದೆ.ಅದವರಿಗೆ ಬೇಸರವೂ ಇಲ್ಲ. ಮತ್ತು ರೇಜಿಗೆಯನ್ನೂ ಹುಟ್ಟಿಸಿಲ್ಲ. ಎರಡುದೇಹವಿದ್ದರೂ ಅದು ಒಂದಕ್ಕೊಂದು ಬೆಸೆದುಕೊಂಡಿರುವುದರಿಂದ ಎರಡುಜೀವ ಒಂದು ದೇಹವೆನ್ನುವಂತಾಗಿಬಿಟ್ಟಿರುತ್ತಾರೆ. ಅದರಲ್ಲೂ ಪ್ಲಾಯ್‌ಗೆ ಪಿಮ್ ಮೇಲೆ ಅತೀವ ಪ್ರೀತಿ. ಅತೀ ಎನ್ನುವಷ್ಟು ಪೊಸ್ಸೆಸಿವ್ ಆಗಿದ್ದರೂ ಪಿಮ್‌ಗೆ ಉಸಿರುಕಟ್ಟಿಹಾಕಿದಂತಾಗಿರುವುದಿಲ್ಲ. ಆ ಪ್ರೀತಿ ಅವಳಿಗೂ ಇಷ್ಟವೆ. ಆದರೆ ಅದೊಂದು ದಿನ ವೀ ಎನ್ನುವ ಹುಡುಗ ಪಿಮ್-ಪ್ಲಾಯ್‌ಗೆ ಪರಿಚಯವಾಗುತ್ತಾನೆ. ಅವನಿಗೆ ಪಿಮ್‌ನ ಮೇಲೆ ಪ್ರೀತಿ ಹುಟ್ಟುತ್ತದೆ. ಹಾಗೆ ಪಿಮ್‌ ಕೂಡ ಅವನಿಗೆ ಮನ ಸೋಲುತ್ತಾಳೆ.ಅವರ ಪ್ರೀತಿಗೆ ಅಡ್ಡಬರುವುದು ಇದೇ ಪ್ಲಾಯ್. ಪ್ಲಾಯ್ ಅವರಿಬ್ಬರು ಒಂದಾಗುವುದನ್ನು ಸಹಿಸದೆ ತಡೆಯಲು  ಪ್ರಾರಂಭಿಸುತ್ತಾಳೆ. ಅವರಿಬ್ಬರ ನಡುವೆ ತಾನೇ ತಡೆಗೋಡೆಯಾಗುತ್ತಾಳೆ.ಆಗ ಪಿಮ್ ಳಿಗೆ ಪ್ಲಾಯ್ ನ ಪ್ರೀತಿ ಚಿತ್ರಹಿ೦ಸೆಯಾಗಿ ಕಾಣತೊಡಗುತ್ತದೆ.ಜೀವನ ಪರ್ಯಂತ ನಾವು ಜೊತೆಯಲ್ಲೇ ಇರೋಣ ಎಂದು ಒಬ್ಬರೊನ್ನಬ್ಬರು ಹಚ್ಚಿಕೊಂಡಿದ್ದ ಸೋದರಿಯರಿಗೆ ಈಗ ಅರೆಘಳಿಗೆ ಜೊತೆಯಲ್ಲಿರುವುದೂ ಯಾತನಾಮಯವೆನಿಸುತ್ತದೆ.ಪಿಮ್ ವೈದ್ಯಕೀಯ ನೆರವಿನಿಂದ ಬೇರಾಗಲು ಯೋಚಿಸುತ್ತಾಳೆ.. ಆದರೆ ಪ್ಲಾಯ್ ಒಪ್ಪುವುದಿಲ್ಲ...ಇಂಥ ಸಂದಿಗ್ಧ ಪರಿಸ್ಥಿತಿ ಮುಂದೆ ಅದೆಷ್ಟು ಅವಘಡಗಳಿಗೆ ಕಾರಣವಾಗುತ್ತದೆಂದರೇ ಅದನ್ನು ನೋಡಿ ಅನುಭವಿಸುವುದೇ ಒಳ್ಳೆಯದು. ಹಾ..ಅಂದಹಾಗೆ ಇದು ಥೈವಾನ್ ಭಾಷೆಯ ಅಲೋನ್ ಚಿತ್ರದ ತಿರುಳು.
2007ರಲ್ಲಿ ತೆರೆಗೆ ಬಂದ ಈ ಚಿತ್ರದ ನಿರ್ದೇಶಕರು ಬಾಂಜೋಂಗ್ ಪಿಸನ್‌ತನುಕನ್ ಮತ್ತು ಪಾರ್ಕ್‌ಪೂಮ್ ವಾಂಗ್‌ಪೂಮ್. ಈ ನಿರ್ದೇಶಕದ್ವಯರ ಹಿಂದಿನ ಚಿತ್ರ ಶಟರ್ ನೀವು ನೋಡಿರಬಹುದಾದರೂ ಈ ಚಿತ್ರದ ವಿಭಿನ್ನ ಕಥೆ ಅವರ ನಿರ್ದೇಶನದ ಚಿತ್ರಗಳಲ್ಲೇ ವಿಶಿಷ್ಟವೆನಿಸುತ್ತದೆ. ಪ್ರಾರಂಭದಲ್ಲಿ ಹಾರರ್ ಭೂತ-ಪ್ರೇತ ಪಿಶಾಚಿಯ ಚಿತ್ರದಂತೆ ಭಾಸವಾದರೂ ಬರುಬರುತ್ತಾ ಮನಶಾಸ್ತ್ರದಡಿಯಲ್ಲಿ ಉತ್ತಮ ಮನೋವೈಜ್ಞಾನಿಕ ಚಿತ್ರವಾಗಿಯೂ, ಮನೋಜ್ಞ ಚಿತ್ರವಾಗಿಯೂ ನಮ್ಮ ಮನಗೆಲ್ಲುತ್ತದೆ. ಚಿತ್ರದ ಮಂದಗತಿಯ ನಿರೂಪಣೆ ಬೋರ್ ತರಿಸುವುದಿಲ್ಲ.
ಸಯಾಮಿ  ಅವಳಿಗಳ ಬಗ್ಗೆ ಸುಮಾರು ಸಿನೆಮಾಗಳು ಬಂದಿವೆ.ನೀವು ಖ್ಯಾತ ನಿರ್ದೇಶಕ ಬ್ರಯಾನ್ ಡಿ ಪಲ್ಮ ನಿರ್ದೇಶನದ 1973 ರಲ್ಲಿ ತೆರೆಗೆ ಬಂದ ಸಿಸ್ಟರ್ಸ್ ಸಿನೆಮಾ ನೋಡಿರಬಹುದು.ಅದು 2006 ರಲ್ಲೂ ಕೂಡ ಪುನರ್ನಿರ್ಮಾಣವಾಗಿತ್ತು. ಸಿಸ್ಟರ್ಸ್ ಹೆಚ್ಚುಕಡಿಮೆ ಇದೆ ರೀತಿಯ ಕಥೆ ಹೊಂದಿದ್ದರೂ ಅದರಲ್ಲಿ ಪತ್ತೆಧಾರಿಕೆಗೆ ಹೆಚ್ಚು ಗಮನಕೊಡಲಾಗಿತ್ತು.ಹಾಗೆ 2003ರಲ್ಲಿ ಬಂದ ಸ್ಟಕ್ ಆನ್ ಯೂ, 1999ರಲ್ಲಿ ಬಂದ ಟ್ವಿನ್ಸ್ ಫಾಲ್ಸ್ ಇಡಾಹೋ ಕೂಡ ಸಯಾಮಿ ಅವಳಿಗಳ ಕುರಿತಾದ ಸಿನೆಮಾಗಳಾಗಿವೆ.
ಈಗ ಕನ್ನಡದಲ್ಲೂ ಕೂಡ ದ್ವಾರಕೀಶ್ ನಿರ್ಮಾಣದ. ಪಿ.ಕುಮಾರ್ ನಿರ್ದೇಶನದ 'ಚಾರುಲತ' ಕೂಡ ಸಯಾಮಿ ಅವಳಿಸೋದರಿಯರ ಕಥೆಯಾಧಾರಿತ ಚಿತ್ರವಾಗಿದೆ.

.

Friday, July 6, 2012

ಓದಿ, ನೋಡಿ ಮರುಳಾದದ್ದು..


ವಾಗ  ಮೈಸೂರಿನ ಹಾಸ್ಟೆಲಿನಲ್ಲಿದ್ದೆವು. ಕಾಲೇಜು ಮುಗಿದ ನಂತರ ಲೈಬ್ರರಿ ಆಮೇಲೆ ಸಿನಿಮಾ ಇವೆರೆಡೇ ಆಯ್ಕೆಗಳಿದ್ದ ಟೈಮ್ ಅದು. ತರಗತಿ ಮುಗಿಸಿ, ಒಂದಷ್ಟು ಹರಟೆ ಹೊಡೆದು ಲೈಬ್ರರಿಯಲ್ಲೊಂದಷ್ಟು ಕಾಲವನ್ನು ವ್ಯಯಿಸಿ, ಊಟದ ಆಜುಬಾಜು ಸಮಯಕ್ಕೆ ಹಾಸ್ಟೆಲಿನ ಅಂಗಳದಲ್ಲಿ ಪ್ರತ್ಯಕ್ಷವಾಗಿ ಊಟ ಮುಗಿಸಿದರೆ ಮತ್ತೆ ಸಿನಿಮಾದ ಕಡೆ ಗಮನ ಹೋಗಿಬಿಡುತ್ತಿತ್ತು. ಆವಾಗ, ಈವಾಗಲೂ ನನಗೊಂದು ಚಟ ಇದೆ. ಸಿನಿಮಾ ಹೇಗೇ ಇರಲಿ ಕನ್ನಡವಾದರೇ ಅದನ್ನೊಮ್ಮೆ ನೋಡಲೇಬೇಕು, ನಾಯಕ, ನಾಯಕಿ, ನಿರ್ದೇಶಕ ಯಾರಾದರೂ ನನಗೆ ಅಷ್ಟೊಂದು ಮುಖ್ಯವೆನಿಸುತ್ತಿರಲಿಲ್ಲ. ಅದರಲ್ಲೂ ಹೊಸಬರ ಸಿನಿಮಾವಾದರಂತೂ ಏನನ್ನೂ ಕೇಳದೇ ಚಿತ್ರಮಂದಿರದೊಳಕ್ಕೆ ನುಗ್ಗಿ ಬಿಡುತ್ತಿದ್ದೆ. ಇಂಥ ಸುಮಾರು ಸಿನಿಮಾ ನೋಡಿ ನೋಡಿ ಹಿಂಸೆ ಪಟ್ಟುಕೊಂಡಿದ್ದಷ್ಟೇ ಅಲ್ಲ, ಗೆಳೆಯರಿಗೂ ಹಿಂಸೆ ಕೊಟ್ಟಿದ್ದೆ. ಆವಾಗ ಒಂದು ಹೊಸ ಸಿನಿಮಾ ಬಿಡುಗಡೆಯಾಗಿತ್ತು. ಯಾವುದೇ ನಿರೀಕ್ಷೆಗಳಿಲ್ಲದ, ಚೆನ್ನಾಗಿರೊಲ್ಲವೇನೋ ಎಂದು ಅನುಮಾನ ತರಿಸುವ  ಸಿನಿಮಾ ಅದು. ನನಗೋ ಒಮ್ಮೆ ನೋಡಲೇಬೇಕೆಬ್ಬಿಸಿತ್ತಾದರೂ ಗೆಳೆಯ ಚಂದ್ರ ಬೇಕಾದರೆ ಕತ್ತು ಕತ್ತರಿಸಿಕೊಳ್ಳುತ್ತೇನೆ, ಸಿನಿಮಾಕ್ಕೆ ಮಾತ್ರ ಬರಲು ತಯಾರಿಲ್ಲ ಎಂದು ಹಠ ಹಿಡಿದುಬಿಟ್ಟ. ಆಮೇಲೆ ಅವನೇ ಇರು ಒಂದು ಐಡಿಯ ಮಾಡೋಣ ಎಂದ. ನಮ್ಮ ರೂಮಲ್ಲಿದ್ದ ಇನ್ನಿಬ್ಬರು ರೂಮೇಟುಗಳನ್ನು ಹೇಗಾದರೂ ಮಾಡಿ ಸಿನಿಮಾಕ್ಕೆ ಕಳುಹಿಸುವುದು, ಅವರ ಅಭಿಪ್ರಾಯ ಕೇಳಿಕೊಂಡು ಸಿನಿಮಾಕ್ಕೆ ಹೋಗುವುದೋ ಬೇಡವೋ ನಿರ್ಧರಿಸುವುದೇ ಅವನ ಐಡಿಯ. ಸರಿ ಎಂದದ್ದೇ ಅವರು ರೂಮಲ್ಲಿದ್ದಾಗ ಊಟಕ್ಕೂ ಮುಂಚೆ ಮದ್ಯಾಹ್ನ ಒಂದು ಸಿನಿಮಾ ನೋಡಿದೆವು..ಎಂಥ ಅದ್ಭುತ ಸಿನಿಮಾ ಗೊತ್ತಾ..ಈವತ್ತು ಒಳ್ಳೇ ಸಿನಿಮಾಕ್ಕೇ ಪಬ್ಲಿಸಿಟೀನೆ ಕೊಡಲ್ಲಾ ಮಾರಾಯಾ..ಎಂದೆಲ್ಲಾ ಬೂಸಿಬಿಟ್ಟು, ಆ ಸಿನಿಮಾವನ್ನು ಆ ಕ್ಷಣ ನೋಡದಿದ್ದರೇ ಬದುಕಿದ್ದೂ ವ್ಯರ್ಥ ಎನ್ನುವ ರೇಂಜಿಗೆ ಹೇಳಿಬಿಟ್ಟೆವು. ಅವರಿಬ್ಬರು ತುರಾತುರಿಯಿಂದ ಊಟ ಮುಗಿಸಿದ್ದೇ ಸಿನಿಮಾಕ್ಕೇ ಓಡಿಬಿಟ್ಟರು. ನಾವು ನೆಮ್ಮದಿಯಾಗಿ ಮಲಗಿದೆವು.
ಸೆಕೆಂಡ್ ಶೋ ಮುಗಿಸಿ, ಸಿನಿಮಾದ ನರಕಯಾತನೇ ಮುಗಿಸಿಬಂದವರು ನಿದ್ರೆ ಮಾಡುತ್ತಿದ್ದರೂ ಬಿಡದೇ ನಮ್ಮನ್ನು ಎಬ್ಬಿಸಿದಾಗ, ಅವರ ಮುಖದಲ್ಲಿ ಚಿಮ್ಮುತ್ತಿದ್ದ ರೋಷಾವೇಶದ ಭಾವಗಳನ್ನು ನೋಡಿದಾಗ ನಮಗೆ ಆ ಸಿನಿಮಾದ ಬಗ್ಗೆ ಸಂಪೂರ್ಣ ತಿಳಿದುಹೋಗಿತ್ತು. ಮುಂದಿನದ್ದು ನೀವೇ ಊಹಿಸಬಹುದು.
ಮೊನ್ನೆ ಫೇಸ್‌ಬುಕಿನಲ್ಲಿ ನನ್ನ ಸ್ಟೇಟಸ್ ಅಪ್‌ಡೇಟ್ ಮಾಡುವಾಗ ಆ ವಾರ ಬಿಡುಗಡೆಯಾದ ಎಲ್ಲಾ ಮೂರು ಚಿತ್ರಗಳನ್ನೂ ನೋಡಿದ್ದನು ಹಂಚಿಕೊಂಡಿದ್ದೆ. ಆಗ ಗೆಳೆಯರೆಲ್ಲಾ ಅದನ್ನೂ ನೋಡಿದಾ..ನೀನು ಬಿಡು ಯಾವುದನ್ನೂ ಬಿಡಲ್ಲಾ ಎಂದೆಲ್ಲಾ ಫೋನ್ ಮಾಡಿ ಹೀಗೆಳೆದಿದ್ದರು. ಆದರೆ ನನಗೆ ಬರೀ ಕನ್ನಡದಲ್ಲಷ್ಟೇ ಅಲ್ಲ. ಬೇರೆಲ್ಲಾ ಭಾಷೆಯಲ್ಲೂ ಅತೀ ಕೆಟ್ಟದಾದ ಅರ್ಥವೇ ಇಲ್ಲದ ಸಿನಿಮಾಗಳನ್ನು ನೋಡಿಬಿಟ್ಟಿರುವುದರಿಂದ ಈವಾಗಾವಾಗ ಸಿನಿಮಾ ಚೆನ್ನಾಗಿಲ್ಲದಿದ್ದರೂ ತೀರಾ ಕೆಟ್ಟದಾಗಿಲ್ಲದಿದ್ದರೇ ಬೇಸರವೆನಿಸುತ್ತದೆ. ಅಲ್ಲಿನ ಬಾಲಿಶ ದೃಶ್ಯಗಳು, ಅರ್ಥವೇ ಇಲ್ಲದ ಮಾತುಗಳು, ಸುಖಾಸುಮ್ಮನೆ ಹೊಡೆತ ತಿನ್ನುವ ಖಳರು, ನೋಡಿದ ಘಳಿಗೆಯೇ ಯುಗಳಗೀತೆಯನ್ನು ಹಾಡಲು ಬೆಟ್ಟದ ತಪ್ಪಲಿಗೋ, ಪಾರ್ಕಿಗೋ ಓಡಿಹೋಗುವ ನಾಯಕ-ನಾಯಕಿಯರು... ನೆನಪಿಸಿಕೊಂಡು ನಗಲು ಇನ್ನೇನು ಬೇಕು..
ಸಿಡ್ನೀ ಶೆಲ್ಡನ್ ಬರೆದ ಮಾಸ್ಟರ್ ಆಫ್ ದಿ ಗೇಮ್ ಓದಿದೆ. ಪ್ರಾರಂಭದಲ್ಲಿ ತುಂಬಾ ರೋಚಕವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ತದನಂತರ ತಣ್ಣಗೆ ಏರಿಳಿತಗಳಿಲ್ಲದೇ ಬರೇ ಒಂದು ತಲೆಮಾರಿನ ಕಥೆಯನ್ನು ತೆರೆದಿಡುತ್ತದೆ.ಬಡತನದ ಬೇಗೆಯಲ್ಲಿ ಬೆಂದ ಹುಡುಗನೊಬ್ಬ ಆಫ್ರಿಕಾಗೆ ವಜ್ರದ ನಿಕ್ಷೇಪ ಹುಡುಕಿಕೊಂಡು ಹೋಗುತ್ತಾನೆ. ಯಾವೊಂದು ಪೂರ್ವ ತಯಾರಿಯೂ ಇಲ್ಲದೇ ಬರೇ ಗುರಿಯೊಂದನ್ನೇ ಅಚಲವಾಗಿಟ್ಟುಕೊಂಡು ಹೋಗುವ ಹುಡುಗ, ಏನೆಲ್ಲಾ ಕಷ್ಟ ಕಾರ್ಪಣ್ಯ ಅನುಭವಿಸಿ, ಮೋಸಹೋಗಿ ಹೇಗೆ ದೊಡ್ಡ ಶ್ರೀಮಂತನಾಗುತ್ತಾನೆ, ಆನಂತರ ಅವನ ತಲೆಮಾರು ಹೇಗೆ ನಡೆದುಕೊಂಡು ಬರುತ್ತದೆ ಎನ್ನುವುದನ್ನು ತುಂಬಾ ವಿವರವಾಗಿ ಬರೆದಿದ್ದಾನೆ ಶೆಲ್ಡನ್.
ಅವನ ಇನ್ನೊಂದು ಕಾದಂಬರಿ ಟೆಲ್ ಮಿ ಯುವರ್ ಡ್ರೀಮ್ಸ್ ಸ್ಪ್ಲಿಟ್ ಪರ್ಸನಾಲಿಟಿಯ ಬಗೆಗಿನ ಕಾದಂಬರಿ. ಇಲ್ಲಿ ಮೂರು ವಿಭಿನ್ನ ವ್ಯಕ್ತಿತ್ವ ಹೊಂದಿದ ನಾಯಕಿ ತನಗರಿವಿಲ್ಲದೇ ಸಾಲು ಸಾಲು ಕೊಲೆಗಳನ್ನು ಮಾಡುತ್ತಾ ಸಾಗುತ್ತಾಳೆ. ಅವಳನ್ನು ಪತ್ತೆ ಹಚ್ಚುವುದೇ ದೊಡ್ದ ಸಾಹಸವಾದರೂ ಶೆಲ್ಡನ್ ಕಾದಂಬರಿಯನ್ನು ಅಷ್ಟಕ್ಕೆ ಮುಗಿಸದೆ ಅಂಥವರನ್ನು ಗುಣ ಪಡಿಸುವ ಬಗೆಯನ್ನು ಬೋರ್ ಹೊಡೆಸದಂತೆ ತುಂಬಾ ವೈಜ್ಞಾನಿಕ ಅಂಶಗಳ ಸಹಾಯದೊಂದಿಗೆ ವಿವರಿಸುತ್ತಾ ಹೋದರೂ ರಹಸ್ಯವನ್ನು ಕೊನೆಯ ಪುಟದವರೆಗೂ ಕಾಪಾಡಿಕೊಂಡಿದ್ದಾನೆ.
ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಗುತ್ತಿದ್ದ ಜೋಗಿಯವರ ಗುರುವಾಯನ ಕೆರೆ ಮುಗಿದಿದ್ದು ಒಂದು ರೀತಿಯಲ್ಲಿ ಬೇಸರ ತರಿಸಿದೆ. ತೀರಾ ರಾಜಕೀಯ ವಿಷಯಗಳಿದ್ದಾಗೆಲ್ಲಾ ನನಗೆ ಅದರ ಬಗ್ಗೆ ಆಸಕ್ತಿಯಿಲ್ಲದ ಕಾರಣ ಹಾಯ್ ಬೆಂಗಳೂರ್ ಪತ್ರಿಕೆಯನ್ನು ಸಹನೀಯ ಮಾಡಿದ್ದೇ ಈ ಗುರುವಾಯನ ಕೆರೆ. ಜೋಗಿ ಬರಹಗಳು, ಅವರ ಪದಸಂಪತ್ತು, ಅವರ ಜ್ಞಾನಸಂಪತ್ತು ಯಾವಾಗಲೂ ಆಶ್ಚರ್ಯತರಿಸುತ್ತದೆ. ಯಾವುದೇ ಗಂಭೀರ ಜಟಿಲ ವಿಷಯವನ್ನೂ ಮನ ಮುಟ್ಟುವ ಹಾಗೆ ಸರಳವಾಗಿ ಬರೆಯುವ ಜೋಗಿಯವರ ಬರಹಗಳನ್ನು ನಾನು ಓದದೇ ಇರುವುದಿಲ್ಲ.
ಹಾಗೇ ಕ್ಲೋಪ್ಕ-ದಿ ಟ್ರ್ಯಾಪ್ ಎನ್ನುವ ಸೆರ್ಬಿಯನ್ ಭಾಷೆಯ ಚಲನಚಿತ್ರ ನೋಡಿದ ಮೇಲೆ ಒಂದು ಒಳ್ಳೆಯ ಥ್ರಿಲ್ಲರ್ ನೋಡಿದ ಅನುಭವವಾಯಿತು. ತುಂಬಾ ಸರಳ ಕಥೆಯ ಚಿತ್ರವಾದರೂ ನಿರ್ದೇಶಕ ನಿರೂಪಿಸಿರುವ ರೀತಿ ತುಂಬಾ ಪರಿಣಾಮಕಾರಿಯಾಗಿದೆ. ಮಗನಿಗೆ ಮಾರಣಾ೦ತಿಕ ಖಾಯಿಲೆಯಿದೆ. ಆಪರೇಶನ್ ಗೆ ಸುಮಾರು ಹಣ ಬೇಕು. ಆಪರೇಶನ್ ಮಾಡಿಸದಿದ್ದರೆ ಮಗ ಬದುಕುವುದಿಲ್ಲ. ಹಣ ಹೊಂದಿಸಲು ಸಮಯದ ಅಭಾವವಿದೆ. ಹಾಗೆ ಸುಲಭಕ್ಕೆ ಹಣ ಸಿಗುವ ಯಾವ ಮಾರ್ಗವೂ ಇಲ್ಲ. ಈ ಸಂದರ್ಭದಲ್ಲಿ ಒಂದು ಪತ್ರಿಕೆಯೊ೦ದಕ್ಕೆ ಗಂಡ ಹೆಂಡತಿ ಜಾಹಿರಾತು ನೀಡುತ್ತಾರೆ...ಆಗೊಬ್ಬ ವ್ಯಕ್ತಿ ಆಪರೇಶನ್ ಹಣ ಜೊತೆಗೆ ಓಡಾಟದ ಖರ್ಚು ಕೊಡುತ್ತೀನಿ,..ಬದಲಿಗೆ ನೀನೊಬ್ಬ ವ್ಯಕ್ತಿಯನ್ನು ಕೊಲ್ಲಬೇಕೆನ್ನುತ್ತಾನೆ...ಈ ಸಂಧಿಗ್ದ ಪರಿಸ್ಥಿತಿಯಲ್ಲಿ ನಾಯಕ ಒಪ್ಪಿಕೊಂಡು ಕೊಲೆ ಮಾಡುತ್ತಾನೆ..? ಮು೦ದೆನಾಗುತ್ತದೆ...ಸಮಯ ಸಿಕ್ಕಾಗ ಸಿನಿಮಾ ನೋಡಿ.