Tuesday, July 10, 2012

ಭೂತದ ಭವಿಷ್ಯ....!!!


ಮಗೆಲ್ಲಾ ಗೊತ್ತಿ(?)ರುವಂತೆ ಭೂತಗಳ ಆವಾಸಸ್ಥಾನ ಹಳೆಯ, ಪಾಳುಬಿದ್ದ ಕಟ್ಟಡಗಳು, ಮರಗಳು ಇತ್ಯಾದಿ. ಅದರಲ್ಲೂ ಪಾಳುಬಂಗಲೆಗಳೆಂದರೆ ಅವುಗಳಿಗೆ ಹಬ್ಬವೇ ಸರಿ. ಅವು ಅದರಲ್ಲೂ ಸ್ಮಶಾನದ ಅಕ್ಕಪಕ್ಕ ಇದ್ದರಂತೂ ಅವುಗಳನ್ನು ತಡೆಯುವವರ್ಯಾರು. ಅದು ಅಂತಹುದ್ದೇ ಒಂದು ಬೃಹತ್ ಭೂತಬಂಗಲೆ. ಅದರ ಮಾಲೀಕ ಸತ್ತ ಕ್ಷಣದಿಂದ ಭೂತವಾಗಿ ಆರಾಮವಾಗಿ ಅಲ್ಲೆ ವಾಸಿಸುತ್ತಿರುತ್ತಾನೆ. ಆದರೆ ನಗರಾಭಿವೃದ್ಧಿಯಾಗುತ್ತಿದ್ದಂತೆ ಹಳೆಯ, ಪಾಳುಬಿದ್ದ ಕಟ್ಟಡಗಳನ್ನೆಲ್ಲಾ ನೆಲಸಮ ಮಾಡಿ ಆ ಜಾಗದಲ್ಲಿ ಮಾರಾಟಮಳಿಗೆ, ಮನೆ ಅಪಾರ್ಟ್‌ಮೆಂಟುಗಳನ್ನು ಮಾನವರು ಕಟ್ಟತೊಡಗಿದಾಗ ಅಲ್ಲಿದ್ದ ಭೂತಗಳು ನಿರಾಶ್ರಿತವಾಗುತ್ತವೆ. ರಸ್ತೆ ಬದಿಯ ಮರಗಳನ್ನೂ ಕಡಿದು ರಸ್ತೆ ಅಗಲೀಕರಣ ಮಾಡಿದಾಗ ಮರದ ಮೇಲೆ ನೆಲೆ ಕಂಡುಕೊಂಡಿದ್ದ ಭೂತಗಳ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಅವೆಲ್ಲವೂ ಭೂತಬಂಗಲೆಗೆ ಬಂದಾಗ ಆ ಭೂತಬಂಗಲೆಯ ಮಾಲೀಕ ಎಲ್ಲರನ್ನೂ ಸೇರಿಸಿಕೊಳ್ಳಲು ಸಾಧ್ಯವಿಲ್ಲ.ಒಂದು ಇಂಟರ್ವ್ಯೂ ಇಟ್ಟುಕೊಳ್ಳೋಣ..ಎಂದು ಇಂಟರ್ವ್ಯೂ ಮಾಡಿ ಒಂದಷ್ಟು ಭೂತಗಳನ್ನು ಸೇರಿಸಿಕೊಂಡು ಆ ಮನೆಗೆ ಹೌಸ್‌ಫುಲ್ ಬೋರ್ಡ್ ನೇತುಹಾಕಿಬಿಡುತ್ತವೆ.ಅವುಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ನಾಯಕಿ, ಬ್ರಿಟಿಷರ ಅಧಿಕಾರಿ, ಜಮೀನ್ದಾರ, ಭಗ್ನ ಪ್ರೇಯಸಿ, ಕಲ್ಕತ್ತಾಟಾಂಗಾವಾಲಾ, ಸೇನಾಧಿಕಾರಿ ಇನ್ನೂ ಮುಂತಾದವರ ಭೂತಗಳಿರುತ್ತವೆ. ಈಗ ತಮ್ಮದೇ ಒಂದು ಬಂಗಲೆಯಾಯಿತೆ೦ದು ಖುಷಿಯಾಗಿರುವಾಗಿಷ್ಟರಲ್ಲಿ ಸಿನಿಮಾದವರು ಶೂಟಿಂಗಿಗಾಗಿ ಅಲ್ಲಿಗೆ ಬಂದುಬಿಡುತ್ತಾರೆ. ಮತ್ತೇ ತಮ್ಮ ಜಾಗಕ್ಕೆ ಕುತ್ತುಬಂದಿತೆಂದು ಭೂತಗಳೆಲ್ಲಾ ಭಾವಿಸಿ ಭೂತನಾಯಕಿಯನ್ನು ಕಳುಹಿಸಿ ಆ ಸಿನಿಮಾದ ನಾಯಕಿಯ ಪಾತ್ರಧಾರಿಗೆ ಹೆದರಿಸಿ ಆ ಬಂಗಲೆಯಲ್ಲಿ ನಡೆಯುತ್ತಿದ್ದ ಶೂಟಿಂಗ್ ನಿಲ್ಲಿಸಿ ಖುಷಿಯಿಂದ ಬೀಗಬೇಕೆನ್ನುವಷ್ಟರಲ್ಲಿ ಸಾಹುಕಾರನೊಬ್ಬ ಆ ಬಂಗಲೆಯನ್ನು ಖರೀದಿಸಿ ಅಲ್ಲೊಂದು ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಿಸಬೇಕೆಂದುಕೊಳ್ಳುತ್ತಾನೆ ..ಈ ಭೂತಗಳು ನಿಜಕ್ಕೂ ಗಾಬರಿಯಾಗುತ್ತವೆ.. ಸಾಹುಕಾರ ಬಂಗಲೆಯನ್ನು ಖರೀದಿ ಮಾಡದಂತೆ ಹೇಗೆ ತಡೆಯುವುದು ಎಂಬ ಯೋಚನೆಗೆ ಬೀಳುತ್ತವೆ..ಹಾಗಂತ ಸುಮ್ಮನಿರಲಾದೀತೆ..? ಅದಕ್ಕೆ ಒಂದು ಮಾಸ್ಟರ್ಪ್ಲಾನ್ ಮಾಡುತ್ತವೆ..ಮುಂದೆ..?
ಅನಿಕ್ ದತ್ತ
ಇದು 2012 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಬೆಂಗಾಲಿ ಸಿನಿಮಾ ಭೂತೆರ್ ಭಬಿಷ್ಯಾತ್ ನ ಕಥೆ. ಅನಿಕ್ ದತ್ತ ನಿರ್ದೇಶನದ ಈ ಚಿತ್ರ ಈವತ್ತಿನ ನಗರಜೀವನ, ಸಿನಿಮಾರಂಗ ಮುಂತಾದವುಗಳನ್ನು ಯಾವೊಂದು ಪೂರ್ವಗ್ರಹವಿಲ್ಲದೆ ವಿಡಂಬನೆ ಮಾಡುತ್ತಾ ಸಾಗುತ್ತದೆ. ಈ ಚಿತ್ರದಲ್ಲಿ ನನಗಿಷ್ಟವಾದದ್ದು ಕಥೆಯಲ್ಲಿನ ಹೊಸತನ. ಇಂತಹಾ ಒಂದು ಕಥೆಯನ್ನೂ ಸಿನಿಮಾ ಮಾಡಬಹುದಾ.? ಎಂಬ ಪ್ರಶ್ನೆ ಮೂಡುವಂತಹ ಕಥೆಗಳನ್ನು ಸಿನಿಮಾ ಮಾಡುವಲ್ಲಿ ನನಗೆ ಗೊತ್ತಿರುವಂತೆ ಬೆಂಗಾಲಿ ಮತ್ತು ಮಳಯಾಳಂ ಭಾಷಿಗರು ಮೊದಲಿಗರು. ಸಣ್ಣ ಸಣ್ಣ ನೀತಿಕಥೆಗಳು, ಕೇವಲ ಒಂದೇ ಎಳೆಯ ಕಥೆಗಳು, ದೊಡ್ಡ ಕಾದಂಬರಿಗಳು ಹೀಗೆ ಯಾವುದನ್ನೂ ಬೇಕಾದರೂ ಸಿನಿಮಾ ಮಾಡಿಬಿಡುತ್ತಾರೆ.
ಭೂತೆರ್ ಭಬಿಷ್ಯಾತ್ ಕೂಡ ಅಂತಹುದೇ ಒಂದು ಚಿತ್ರವಾದರೂ ನಿರೂಪಣೆಯಲ್ಲಿರುವ ತಿಳಿಹಾಸ್ಯ, ಕಲಾವಿದರ  ಪಾತ್ರೋಚಿತ ಅಭಿನಯ ಮುಂತಾದವು ಸಿನಿಮಾವನ್ನು ಎತ್ತರಕ್ಕೇರಿಸುತ್ತವೆ.
ಬಿಡುವು  ಮಾಡಿಕೊಂಡು ಈ ಸಿನಿಮಾವನ್ನೊಮ್ಮೆ ನೋಡಿ..





No comments:

Post a Comment