Saturday, May 7, 2016

ತಿಥಿ ಸಿನಿಮಾದಿಂದ ಕಲಿಯಬೇಕಾದದ್ದು...

ಕನ್ನಡದಲ್ಲಿ ತಿಥಿ ಎನ್ನುವ ಸಿನಿಮಾ ಈಗ ಸದ್ದು ಮಾಡುತ್ತಿದೆ. ಕನ್ನಡದ, ಮೈಸೂರು ಮಂಡ್ಯ ಪ್ರಾದೇಶಿಕ ಸೊಗಡನ್ನು ಅಲ್ಲಿಯ ಸ್ಥಳೀಯರನ್ನು  ಸಿನೆಮಾದಲ್ಲಿನ ಪಾತ್ರಗಳನ್ನಾಗಿ  ಬಳಸಿ ಒಂದು ಸಾವಿನ ಮತ್ತದರ ಉತ್ತರಾಧಿಕ್ರಿಯಾ ಸುತ್ತ  ನಡೆಯುವ ಕತೆಯನ್ನು ಸ್ವಾಭಾವಿಕವಾಗಿ ತೆರೆಯ ಮೇಲೆ ತರಲಾಗಿದೆ. ಭಾಷೆಯ ಸೊಗಡನ್ನು ಅರಿತಿರುವವರಿಗೆ ಸಿನಿಮಾ ಹಬ್ಬ, ಹಾಗೆಯೇ ಭಾಷೆಯ ಸೊಗಡು ಗೊತ್ತಿಲ್ಲದಿದ್ದರೂ ಸಿನಿಮಾ ಒಂದು ಅನುಭವವಾಗಿ ಕಾಡುತ್ತದೆ. ಹಾಗಾಗಿ ಕನ್ನಡಕ್ಕೆ ಬಂದ ಅಪರೂಪದ ಚಿತ್ರ ತಿಥಿ.
ಇದಿಷ್ಟರ ಜೊತೆಗೆ ತಿಥಿ ಸಿನಿಮಾದಲ್ಲಿ ಒಬ್ಬ ಚಿತ್ರಕರ್ಮಿ ಕಲಿಯಬೇಕಾದ ಹಲವಾರು ಅಂಶಗಳಿವೆ. ನಮ್ಮ ಚಿತ್ರರಂಗದಲ್ಲಿ ಸಿನಿಮಾಕ್ಕೆ ಅದರದೇ ಆದ ನಂಬಿಕೆ, ಸಿದ್ಧಸೂತ್ರಗಳಿವೆ. ಮೊದಲನೆಯದಾಗಿ ಕಲಾತ್ಮಕ ಮತ್ತು ಕಮರ್ಷಿಯಲ್ ಎನ್ನುವ ಒಂದು ಸುಳ್ಳು ವಿಭಜನೆ. ಹಾಗೆ ನೋಡಿದರೆ ನಮ್ಮಲ್ಲಿ ಕಲಾತ್ಮಕ ಚಿತ್ರಗಳು ಎಂದಾಕ್ಷಣ ಅದರಲ್ಲಿ ಮನರಂಜನೀಯ ಅಂಶಗಳು ಕಡಿಮೆ ಎನ್ನುವ ನಿರ್ಧಾರಕ್ಕೆ ಪ್ರೇಕ್ಷಕ ಇರಲಿ, ಸಿನಿಮಾ ಮಂದಿಯೇ ಬಂದು ಬಿಡುತ್ತಾರೆ. ನಿಧಾನಗತಿಯ ಕ್ಯಾಮೆರಾ ಚಲನೆ, ಹಾಡು ಹೊಡೆದಾಟ ಇರಬಾರದು, ಮತ್ತು ಸಿನಿಮಾ ಕತೆ ಕಡ್ಡಾಯವಾಗಿ ಸಾಮಾಜಿಕ ಕಳಕಳಿಯನ್ನು ಅಂದರೆ ಯಾವುದಾದರೂ ಸಾಮಾಜಿಕ ಸಮಸ್ಯೆಯನ್ನು ಕುರಿತಿರಬೇಕು ಎಂಬುದು. ಈ ನೀತಿ ನಿಯಮ ಅದ್ಯಾರು ಮಾಡಿದರೋ ಗೊತ್ತಿಲ್ಲ, ಹಾಗೆಯೇ ಇದೆಲ್ಲೂ ದಾಖಲಾಗೂ ಇಲ್ಲ. ಆದರೆ ಈ ಅಲಿಖಿತ ನಿಯಮವನ್ನು ಪಾಲಿಸಿಕೊಂಡು ಬರುವವರಿಗೆ ನಮ್ಮಲ್ಲಿ ಕಡಿಮೆಯಿಲ್ಲ. ಒಂದು ಕಲಾತ್ಮಕ ಚಿತ್ರವೆಂದರೆ ಅದಕ್ಕೆ ಸಬ್ಸಿಡಿ, ಪ್ರಶಸ್ತಿ ಹಣವೇ ಮುಖ್ಯ  ಆದಾಯ, ಬಿಡುಗಡೆ ಆಗಬಹುದು, ಆಗದೆಯೂ ಇರಬಹುದು ಎನ್ನುವಂತಿದೆ ಸಧ್ಯದ ಸನ್ನಿವೇಶ. ಇಂತಹ ಸಂದರ್ಭದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿದ ತಿಥಿ ಚಿತ್ರದ ಬಿಡುಗಡೆಗಾಗಿ ಪ್ರೇಕ್ಷಕ ಕಾದದ್ದು, ನೋಡಿ ಖುಷಿ ಪಡುತ್ತಿರುವುದನ್ನು ನೋಡಿದರೆ ಕಲಾತ್ಮಕ, ಅವಾರ್ಡ್ ಸಿನಿಮಾ, ಮನರಂಜನೆ ಸಿನಿಮಾ ಇವುಗಳ ನಡುವಣ ಅಂತರವಿಲ್ಲ. ಎಲ್ಲದಕ್ಕೂ ಒಂದೇ ಶಬ್ದ ಮತ್ತು ಒಂದೇ ಅರ್ಥ ಅದು ಸಿನಿಮಾ ಎನ್ನುವುದು ತಿಥಿಯ ಮೂಲಕ ಕಲಿತಂತಾಗಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಸ್ಟಾರ್ ಕಾಸ್ಟ್, ಸ್ಟಾರ್ ನಿರ್ದೇಶಕರಿಲ್ಲದೆ ಪ್ರಶಸ್ತಿ ಪುರಸ್ಕೃತ ಚಿತ್ರವೊಂದಕ್ಕೆ ಪ್ರೇಕ್ಷಕ ಕಾದದ್ದು, ಸಪ್ನಾದಂತಹ ಚಿತ್ರಮಂದಿರ ಹೌಸ್ ಫುಲ್ ಆದದ್ದು  ತಿಥಿಯ ಮೂಲಕವೇ.
ಇನ್ನು ಎರಡನೆಯದಾಗಿ ನೀವು ಗಾಂಧಿನಗರಕ್ಕೆ ತಿಥಿಯಂತಹ ಚಿತ್ರದ ಕತೆಯನ್ನು ಯಾವುದೇ ನಿರ್ಮಾಪಕರ ಹತ್ತಿರಕ್ಕಾದರೂ ಹೋದರೆ ಅವರು ಸಿನಿಮಾ ಮಾಡುವರೇ..? ನೆವರ್. ಕತೆಯಿರಲಿ. ಸಿನಿಮಾದ ಶೀರ್ಷಿಕೆಯನ್ನೇ ಮೊದಲಿಗೆ ತೆಗೆದು ಬೀಸಾಕುತ್ತಿದ್ದರು. ಸಿನಿಮಾದ ಹೆಸರೇ ತಿಥಿ ಎಂದಾಕ್ಷಣ ಅಲ್ಲೇ ಹೌಹಾರದೆ ಇರುತ್ತಿರಲಿಲ್ಲ. ಏಕೆಂದರೆ ನಮ್ಮಲ್ಲಿ ನೆಗೆಟಿವ್, ಪೊಸಿಟಿವ್ ಕ್ಯಾಚಿ ಹೀಗೆ ಟೈಟಲ್ ವಿಷಯದಲ್ಲೂ ಒಂದಷ್ಟು ವಿಂಗಡಣೆ ಇವೆ. ಅಂತಹುದರಲ್ಲಿ ತಿಥಿ ನೆಗಟಿವ್ ಎನ್ನುವ ಲಿಸ್ಟ್ ಗೆ ಸೇರುತ್ತದೆ. ನಾನು ನನ್ನದೇ ಸಿನಿಮಾ ಮೃತ್ಯು ಎಂದು ಶೀರ್ಷಿಕೆ ಇಟ್ಟಾಗ ಅದೆಷ್ಟು ಜನರು ಹೌಹಾರಿದ್ದರೆಂದರೆ ಪ್ರತಿಯೊಬ್ಬರೂ ಈ ವಿಷಯದಲ್ಲಿ ಸಲಹೆ ಕೊಟ್ಟಿದ್ದರು. ಮೊದಲ ಸಿನಿಮಾ, ಇದು ಆಗಲ್ಲ, ಈ ಟೈಟಲ್ ನೆಗೆಟಿವ್ ಎಂದಿದ್ದರು. ಅದೆಷ್ಟರ ಮಟ್ಟಿಗೆ ನಿಜವೋ ಸುಳ್ಳೋ ಆ ಸಿನಿಮಾ ಆ ಶೀರ್ಷಿಕೆ ಇಟ್ಟುಕೊಂಡು ಎರಡ್ಮೂರು ವರ್ಷ ಒದ್ದಾಡಿ ಕೊನೆಗೆ ಬೇರೆ ದಾರಿ ಕಾಣದೆ ಬದಲಾವಣೆ ಮಾಡಬೇಕಾಯಿತಾದರೂ ಅದರ ಫಲಿತಾಂಶ ಮಾತ್ರ ಅಷ್ಟೇ ಆದದ್ದು ಬೇರೆ ವಿಷಯ ಬಿಡಿ. ಆದರೆ ವಾಹಿನಿಯವರು ಆವಾಗೆಲ್ಲಾ ದಂಡಿ ದಂಡಿಯಾಗಿ ಸಿನಿಮಾ ಉಪಗ್ರಹ ಪ್ರಸಾರದ ಹಕ್ಕಿಗೆ ತೆಗೆದುಕೊಳ್ಳುತ್ತಿದ್ದರಲ್ಲ, ನಾವು ಅವರನ್ನು ಸಮೀಪಿಸಿದಾಗ ಸಿನಿಮಾ ನೋಡಿ ಮೆಚ್ಚಿದ ಅವರು ರಿಜೆಕ್ಟ್ ಮಾಡಿದ್ದು ಮಾತ್ರ ಟೈಟಲ್ ನಿಂದಾಗಿ ಎಂದರು. ಅವರು ಕೊಟ್ಟ ಕಾರಣ, "ಅಲ್ರೀ .. ಮೃತ್ಯು ಅಂತ ಹೆಸರು ಇಟ್ಟಿದ್ದೀರಾ..? ನಾವು ಅದನ್ನು ಟಿವಿಲಿ ಪ್ರಸಾರ ಮಾಡುವಾಗ ಮುಂದಿನವಾರ ನಿಮ್ಮ ಮನೆಗೆ ಮೃತ್ಯು, ನಿಮ್ಮ ಮನೆಯಲ್ಲಿ ಮೃತ್ಯು ಅಂತ ಅನೌನ್ಸ್ ಮಾಡೋಕ್ಕಾಗುತ್ತೆನ್ರಿ .." ಎಂದಿದ್ದರು. ನನಗೂ ಹೌದಲ್ಲ ಎನಿಸಿತ್ತು. ಹಾಗೆಯೇ ಜನ ಹೇಗೆ ಚಿತ್ರಮಂದಿರಕ್ಕೆ ಬರ್ತಾರೀ..ಬಾ ಮೃತ್ಯುಗೆ ಹೋಗೋಣ, ಮೃತ್ಯುಗೆ ಹೋಗಿದ್ಯಾ, ಮೃತ್ಯು ನೋಡಾಯ್ತಾ..? ಎಂದೆಲ್ಲಾ ಮಾತಾಡೋದು ನೆಗಟಿವ್ ವೈಬ್ರೇಶನ್ ಆಲ್ವಾ ಎಂದಿದ್ದರು..ಈಗ ತಿಥಿ ಅದೆಲ್ಲವನ್ನು ಮೀರಿ ನಿಂತಿದೆ. ಈಗಲೂ ಸಿನಿಮಾದಲ್ಲಿ ಪ್ರಸಾರವಾಗಬೇಕಾದರೆ ಮುಂದಿನವಾರ ನಿಮ್ಮ ಮನೆಯಲ್ಲಿ ತಿಥಿ ಎನ್ನಲೇಬೇಕು, ಬಾ ತಿಥಿಗೆ
ಹೋಗೋಣ, ತಿಥಿ ಎಲ್ಲಿ? ಎನ್ನಲೇ ಬೇಕು. ಆದರೆ ನೆಗಟಿವ್, ಪೊಸಿಟಿವ್ ಗಳಿಗಿಂತ ಸಿನಿಮಾ ಮುಖ್ಯ, ಅದನ್ನು ಜನರಿಗೆ ತಲುಪಿಸುವುದು ಮುಖ್ಯ ಎನ್ನುವುದನ್ನು ಸಿನಿಮಾ ತೋರಿಸಿಕೊಟ್ಟಿದೆ.
ಮೂರನೆಯದಾಗಿ ಸಿನಿಮಾ ಕತೆ. ಚಿತ್ರಕತೆ. ಕತೆ ಎನ್ನುವುದು ಒಂದು ಪ್ರವಾಹ. ಅದು ಹರಿಯುತ್ತಾ ಸಾಗಬೇಕು. ನಾವೆಲ್ಲಾ ಒಂದು ಡಿಫರೆಂಟ್ ಎನ್ನುವ ಕತೆ ಮಾಡಬೇಕು ಎಂದೆ ಒದ್ದಾದುತ್ತೇವೆ, ದೃಶ್ಯಗಳು ಅದ್ಭುತವಾಗಿ ಡಿಫರೆಂಟ್ ಆಗಿರಬೇಕು ಎನ್ನುವ ಹವಣಿಕೆ ಸಿನೆಮಾವನ್ನು ದೃಶ್ಯಗಳನ್ನೂ ವಿಕೃತ ಗೊಳಿಸುತ್ತಿದೆ ಎಂದರೆ ತಪ್ಪಾಗಲಾರದು. ಈ ಡಿಫರೆಂಟ್ ಭೂತದಿಂದಾಗಿ ಅಸಹಜ ಪಾತ್ರಗಳು ಅಸಹಜ ಸನ್ನಿವೇಶಗಳು ಸೃಷ್ಟಿಯಾಗಿ ಹೇವರಿಕೆ ಹುಟ್ಟಿಸುತ್ತಿವೆ. ಆದರೆ ತಿಥಿ ಚಿತ್ರದಲ್ಲಿನ ಚಿತ್ರಕತೆ ಪ್ರವಾಹವಾಗಿ ಹರಿಯುತ್ತದೆ. ಬೇಕು ಬೇಡದ ಸನ್ನಿವೇಶಗಳು ಎನ್ನುವ ವಿಭಜನೆಯೇ ಇಲ್ಲದೆ ಸಿನಿಮಾ ಮುಂದು ಸಾಗುತ್ತದೆ. ಈ ಮಾತನ್ನು ಯಾಕೆ ಹೇಳಿದೆನೆಂದರೆ ಮುಖ್ಯವಾಹಿನಿಯ ಸಿನಿಮಾದಲ್ಲಿ  ಸಂಕಲನದ ಹಂತದಲ್ಲಿ ಫೈನಲ್ ಟ್ರಿಮ್ ನಡೆಯುವಾಗ ಲ್ಯಾಗ್ ಎನಿಸುವ ಶಾಟ್ ಗಳು ಮೊದಲಿಗೆ ಕತ್ತರಿಗೆ ಒಳಗಾಗುತ್ತವೆ, ಆನಂತರ ಅನವಶ್ಯಕ ಎನಿಸುವ ದೃಶ್ಯಗಳು.. ಹೀಗೆ ಉದ್ದ ಕಡಿತವಾಗುತ್ತಾ ಸಾಗುತ್ತದೆ. ಆ ಸಿನಿಮಾತಂಡ ಅದೇ ಕತೆಯಲ್ಲಿ ಮುಳುಗಿಹೋಗಿರುತ್ತಾದ್ದರಿಂದ ಅವರಿಗೆ ಆ ಕತೆ ತೀರಾ ಚಿರಪರಿಚಿತವಾಗಿರುತ್ತಾದ್ದರಿಂದ ಸಿನಿಮಾದಲ್ಲಿನ ಡೀಟೇಲ್ಸ್ ಇಷ್ಟು ಬೇಕಾ? ಜಾಸ್ತಿಯಾಯಿತು ಎನಿಸಿ ಮೊದಲಿಗೆ ಶಾಟ್ಸ್ ಲೆಕ್ಕದಲ್ಲಿ, ಆನಂತರ ಸೀನ್ ಲೆಕ್ಕದಲ್ಲಿ ಕತ್ತರಿಸಿ, ಸಿನಿಮಾದ ಒಟ್ಟಾರೆ ಉದ್ದ ಇಷ್ಟೇ ಇರಬೇಕು ಎನ್ನುವ ಸುಳ್ಳು ನಿಯಮವನ್ನು ಪಾಲಿಸಲು ಪ್ರಯತ್ನಿಸುತ್ತಾರೆ. ಆದರೆ ಹೊಸದಾಗಿ ನೋಡುವ ಪ್ರೇಕ್ಷಕನಿಗೆ ಡೀಟೇಲ್ಸ್ ಸಿಗುವುದಿಲ್ಲ. ಎಲ್ಲವೂ ಹೀಗೆ ಬಂದು ಹಾಗೆ ಹೋದಂತೆ ಭಾಸವಾಗುತ್ತದೆ. ಸಿನಿಮಾದ ಒಟ್ಟಾರೆ ಫೀಲ್ ಸಿಗುವುದೇ ಇಲ್ಲ. ಆದರೆ ತಿಥಿಯಲ್ಲಿ ಹಾಗಾಗಿಲ್ಲ. ಅಲ್ಲಿ ಉದ್ದನೆಯ ಶಾಟ್ಸ್ ಗಳಿವೆ. ಕೋಳಿ, ಹಸು ದನ ಕರುಗಳ ಉದ್ದುದ್ದದ ರಿಯಾಕ್ಷನ್ ಸ್ ಇವೆ. ಲ್ಯಾಗ್ ಎಂದು ಅದನ್ನೆಲ್ಲಾ ಕತ್ತರಿಸಿದ್ದರೆ ಈಗ ಸಿಗುವ ಫೀಲ್ ಮಂಗಮಾಯವಾಗುತ್ತಿದ್ದರಲ್ಲಿ ಸಂದೇಹವಿಲ್ಲ.
ನಾಲ್ಕನೆಯದಾಗಿ ಪಾತ್ರಗಳು ಮತ್ತು ಕಲಾವಿದರು. ತಿಥಿ ಸಿನಿಮಾವನ್ನು ಯಾರೇ ವೃತ್ತಿಪರ ಕಲಾವಿದರ ಕೈಯಲ್ಲಿ ಮಾಡಿಸಲು ಹೋಗಿದ್ದರೆ ನಿರ್ದೇಶಕರು ಹರಸಾಹಸ ಪಡಬೇಕಾಗುತ್ತಿತ್ತು, ಅಷ್ಟೇ ಅಲ್ಲ. ಮತ್ತು ಅಷ್ಟು ಸಾಹಸ ಪಟ್ಟರೂ ಆ ನೈಜತೆ ಬರುತ್ತಿತ್ತಾ ಎನ್ನುವುದು ಪ್ರಶ್ನೆ. ನಾವೀಗಾಗಲೇ ನೋಡಿದ್ದೇವೆ. ಇತ್ತೀಚಿಗೆ ಬಂದ ಚಿತ್ರಗಳಲ್ಲಿ ನೈಜತೆ ಮಾಯವಾಗಿ ಕಲಾವಿದರೆಲ್ಲಾ ಕೃತಕವಾಗಿ ಕಂಡ ಉದಾಹರಣೆಯನ್ನು. ಹಾಗಾಗಿ ಒಂದು ಪ್ರಾಂತ್ಯದ ಸೊಬಗನ್ನು ತರಲು ತಿಥಿ ಚಿತ್ರತಂಡ ಅಲ್ಲಿಯದೇ ಜನರನ್ನು ಪಾತ್ರಧಾರಿಗಳನ್ನಾಗಿ ಆಯ್ದು ಕೊಂಡದ್ದು ಕಾಸ್ಟಿಂಗ್-ತಾರಾಗಣದ ಆಯ್ಕೆ ಎನ್ನುವುದಕ್ಕೆ ಹೊಸ ಭಾಷೆ ಬರೆದಿದೆ.
2002 ರಲ್ಲಿ ಬಿಡುಗಡೆಯಾದ ಮೊರೆಲ್ಲಿ ಫೆರ್ನಂಡಿಸ್ ನಿರ್ದೇಶನದ ಬ್ರೆಜಿಲ್ ಚಿತ್ರ ಸಿಟಿ ಆಫ್ ಗಾಡ್ ಚಿತ್ರದಲ್ಲೂ ಇಂತಹದ್ದೇ ಪ್ರಯೋಗ ನಡೆದಿತ್ತು. ಇಡೀ ಚಿತ್ರದಲ್ಲಿ ಒಬ್ಬೆ ಒಬ್ಬ ಕಲಾವಿದನನ್ನು ಹೊರಟು ಪಡಿಸಿ ನಿರ್ದೇಶಕರು ಉಳಿದೆಲ್ಲಾ ಪಾತ್ರಧಾರಿಗಳನ್ನು ಅಲ್ಲಿಯ ಸ್ಥಳೀಯ ಕಲಾವಿದರನ್ನು ಹುಡುಕಿದ್ದರು. ಹಾಗಾಗಿಯೇ ಸಿಟಿ ಆಫ್ ಗಾಡ್  ಮಾಸ್ಟರ್ ಪೀಸ್ ಎನಿಸಿಕೊಂಡದ್ದು. ಹಾಗೆಯೇ ಆ ವಿಷಯದಲ್ಲಿ ತಿಥಿ ಕೂಡ ಕನ್ನಡದಲ್ಲಿ ಮಾಸ್ಟರ್ ಪೀಸ್ ಎಂದರೆ ತಪ್ಪಾಗಲಾರದು.
ಇನ್ನು ಐದನೆಯದಾಗಿ ಕತೆ-ನಿರೂಪಣೆ ವಿಷಯಕ್ಕೆ ಬಂದರೆ ಸಿನಿಮಾ ಸಿದ್ಧಸೂತ್ರಗಳನ್ನು ಬೀಸಾಕುವುದರ ಮೂಲಕ ನಮಗೆಲ್ಲಾ ಪಾಠ ಕಲಿಸಿದೆ. ಶೀರ್ಷಿಕೆ ಮುನ್ನ, ಮಧ್ಯಂತರದ ಶಾಕ್, ಕ್ಲೈಮಾಕ್ಸ್ ಹೀಗೆ ಇದಾವುದನ್ನು ತಲೆ ಗೆಡಿಸಿಕೊಳ್ಳದೆ ಸಿನಿಮಾ ಮಾಡಲಾಗಿದೆ. ಕತೆಗೆ ತಕ್ಕಂತೆ ನಿರೂಪಣೆ ಸಾಗುತ್ತದೆ. ಪಾತ್ರಧಾರಿಗಳು ಸನ್ನಿವೇಶಕ್ಕೆ ತಕ್ಕಂತೆ ಮಾತನಾಡುತ್ತಾರೆ. ಅದರಲ್ಲಿ ಪಂಚಿಂಗ್ ಇರಬಹುದು, ಹಾಸ್ಯ ಇರಬಹುದು ಫಿಲಾಸಫಿ ಇರಬಹುದು, ಬೈಗುಳ ಇರಬಹುದು. ಯಾವುದೂ ಬಲವಂತವಾಗಿ ತುರುಕಲಾಗಿಲ್ಲ. ಅದು ಕತೆಯ ಜೊತೆಗೆ ದೃಶ್ಯದ ಓಘಕ್ಕೆ ಸಹಾಯವಾಗುವಂತೆ ಹೆಚ್ಚೂ ಇಲ್ಲದೆ, ಕಡಿಮೆಯೂ ಇಲ್ಲದೆ ಸ್ಫುರಿಸಿದೆ. ಇದು ಪಂಚಿಂಗ್, ಇದು ಮುಖ್ಯವಾದದ್ದು, ಇಲ್ಲಿ ಸ್ಟ್ರೆಸ್ ಮಾಡಿ ಹೇಳ್ಬೇಕು, ಎಂದೆಲ್ಲಾ ಮಾತುಗಾರಿಕೆಯನ್ನು ವಿಭಜಿಸದೆ ಮತ್ತದರ ಪರಿವೂ ಇಲ್ಲದೆ ಪಾತ್ರಗಳು ಮಾತಾಡುತ್ತವೆ. ಸಂಭಾಷಣೆಗಳು ಇಚ್ಚಿತ ಭಾವವನ್ನು ಯಶಸ್ವಿಯಾಗಿ ಕೊಟ್ಟಿದೆ.
ಈ ಎಲ್ಲವೂ ತಿಥಿಯ ಚಿತ್ರದ ಕೊಡುಗೆ. ಒಬ್ಬ ಸಿನಿಮಾ ಕರ್ಮಿ ಹಾಲಿವುಡ್, ಬಾಲಿವುಡ್ ಸಿನೆಮಾಗಳಿಂದ ಕಲಿಯುತ್ತಾ ಸಿನಿಮಾ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ನೋಡಿದರೆ ತಿಥಿ ಮಾಸ್ಟರ್ ಡಿಗ್ರಿ ಮಾಡಿದಷ್ಟು ವಿಷಯಗಳನ್ನು ನಮಗೆ ತಿಳಿಸುತ್ತದೆ. ನೋಡುತ್ತಾ, ಖುಷಿ ಪಡಿಸುತ್ತಾ, ಕಲಿಸುತ್ತಾ ಸಾಗುವ ಸಿನಿಮಾ ತಿಥಿ, ನಿರ್ದೇಶಕ ರಾಮ್ ರೆಡ್ಡಿ,  ಬರಹಗಾರ ಈರೆ ಗೌಡ ಮತ್ತು ಅಷ್ಟೂ ಕಲಾವಿದರನ್ನು ಮೆಚ್ಚಿಕೊಳ್ಳುತ್ತಾ ಅವರ ಅದ್ಭುತ ಪ್ರತಿಭೆಗಳ ಬಗ್ಗೆ ಹೆಮ್ಮೆ ಪಡುತ್ತಾ ಸಿನಿಮಾ ನೋಡುವ ಖುಷಿ ನಮ್ಮ ನಿಮ್ಮದಾಗಲಿ..

Wednesday, April 27, 2016

ವರ್ಮಾ ಬಂದಿದ್ದಾರೆ...

ಭಾರತೀಯ ಚಿತ್ರರಂಗ ಕಂಡ ಚುರುಕಾದ ಪಾದರಸದಂತಹ ನಿರ್ದೇಶಕ ರಾಮ್ ಗೋಪಾಲ್ ವರ್ಮ. ನನ್ನಂತಹ ಸಿನಿಮಾ ಪ್ರೇಮಿಗಳಿಗೂ ಯಾವತ್ತಿಗೂ ಸ್ಫೂರ್ತಿಯಾಗಿದ್ದವರು ವರ್ಮ. ಒಬ್ಬ ಚಿತ್ರಕರ್ಮಿ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟವರು. ತಾನೂ ಬೆಳೆಯುವುದರ ಜೊತೆ ಜೊತೆಯಲ್ಲಿಯೇ ಪ್ರತಿಭಾವಂತರಿಗೂ ಅವಕಾಶ ಕೊಡುವ ವಿಶಾಲ ಮನೋಭಾವದ ವರ್ಮಾ ಗರಡಿಯಿಂದ ಅದೆಷ್ಟು ಪ್ರತಿಭಾವಂತರು ಅನಾವರಣಗೊಂಡಿಲ್ಲ ಹೇಳಿ. ಮೊದಲ ನಿರ್ದೇಶನದ ಶಿವ ದ ಬೆನ್ನಲ್ಲೇ ಗೋವಿಂದ ಗೋವಿಂದ ಎನ್ನುವ ಸಿನಿಮಾ ನಿರ್ಮಿಸಿದ್ದು ವರ್ಮ ಅವರ ಹೆಗ್ಗಳಿಕೆ. ಬಾಲಿವುಡ್ ಗೆ ಮಣಿರತ್ನಂ ಅವರನ್ನು ಪರಿಚಯಿಸಿದ್ದು, ಎ.ಆರ್ ರಹಮಾನ್ ಅವರನ್ನು  ಆ ತಕ್ಷಣಕ್ಕೆ ಹಿಂದಿಗೆ ಎಳೆದುಕೊಂಡದ್ದು, ಇಡೀ ಬಾಲಿವುಡ್ ಚಿತ್ರರಂಗವೇ ಒಂದು ದಿಕ್ಕಿನಲ್ಲಿ ಸಾಗುತ್ತಿದ್ದರೆ, ವರ್ಮಾ ಅವರದ್ದೇ ಬೇರೆ ದಾರಿ ಎಂಬಂತೆ ತನ್ನದೇ ಆದ ಶೈಲಿ ನಿರ್ಮಿಸಿಕೊಂಡದ್ದು, ಸಿನಿಮಾ ಫ್ಯಾಕ್ಟರಿ ತರದಲ್ಲಿ ಒಂದರ ಹಿಂದೆ ಒಂದೊಂದು ಸಿನಿಮಾ ನಿರ್ಮಿಸಿದ್ದು, ಪ್ರತಿಭೆ ಇಟ್ಟುಕೊಂಡು ಬಂದವರಿಗೆ ಕರೆದು ಅವಕಾಶ ಕೊಟ್ಟದ್ದು, ಸ್ಟಾರ್ ನಟರನ್ನು ಪಕ್ಕಕ್ಕಿಟ್ಟಿದ್ದು ಸಾಮಾನ್ಯ ಕೆಲಸಗಳೇ...? ಇವೆಲ್ಲವನ್ನೂ ಮೆಚ್ಚದಿರಲು ಹೇಗೆ ಸಾಧ್ಯ..? ಸತ್ಯ, ರಂಗೀಲಾ, ಸರ್ಕಾರ್, ಸರ್ಕಾರ್ ರಾಜ್  ಕಂಪನಿ ಸೂಪರ್ ಹಿಟ್ ಸಿನೆಮಗಳಷ್ಟೇ ಅಲ್ಲದೆ, ಟ್ರೆಂಡ್ ಸೆಟ್ಟರ್ ಕೂಡ. ವಿಮರ್ಶೆ, ಕಟು ವಿಮರ್ಶೆ, ಹೊಗಳಿಕೆ ತೆಗಳಿಕೆ ಯಾವುದಕ್ಕೂ ಸೊಪ್ಪು ಹಾಕದೆ ಸಿನಿಮ ಸಿನಿಮಾ ಎಂದು ಅದರಲ್ಲಿಯೇ ತನ್ನನ್ನು ತೊಡಗಿಸಿಕೊಂಡದ್ದು ಹೆಗ್ಗಳಿಕೆಯಲ್ಲದೆ ಮತ್ತೇನು..?
ಇಂತಿಪ್ಪ ವರ್ಮಾ ಆನಂತರ ತಮ್ಮ ಏಕತಾನತೆಯಿಂದ ಸೋಲುತ್ತಾ ಬಂದರು. ಬರೀ ಸೋತದ್ದಷ್ಟೇ ಅಲ್ಲ, ಪಾತಾಳಕ್ಕಿಳಿದುಬಿಟ್ಟರು. ಹಾಗೆ ನೋಡಿದರೆ ಮಣಿರತ್ನಂ ವೃತ್ತಿಜೀವನದಲ್ಲೂ ಯಶಸ್ಸಿನಷ್ಟೇ  ಸೋಲೂ ಇದೆ. ಆದರೆ ಮಣಿರತ್ನಂ ತಮ್ಮ ತೂಕ ಕಳೆದುಕೊಂಡಿಲ್ಲ. ಆದರೆ ಒಂದು ಹಂತದ ನಂತರ ವರ್ಮಾ ತಮಗಿಷ್ಟ ಬಂದ ಹಾಗೆ ಸಿನಿಮಾ ಮಾಡಲು ತೊಡಗಿದರು. ತೀರಾ ಕಳಪೆ ಎನ್ನುವಂತಹ ಸಿನಿಮಾ ನೀಡಿದರು. ಒಬ್ಬ  ನಿರ್ದೇಶಕ ಹೇಗಿರಬೇಕು ಎನ್ನುವುದಕ್ಕೆ
ಉದಾಹರಣೆಯಾಗಿದ್ದ ವರ್ಮಾ ಆನಂತರ ಒಬ್ಬ ಸಿನೆಮಕರ್ಮಿ ಹೇಗಿರಬಾರದು ಎನ್ನುವುದಕ್ಕೂ ಮಾದರಿಯಾದದ್ದು ವಿಪರ್ಯಾಸ. ಆಮೇಲೆ  ಬಾಲಿವುಡ್ ನಲ್ಲಿ ವರ್ಮಾ ಏನೇ ಸಿನಿಮಾ ಮಾಡಿದರೂ "ಥೂ" ಎನ್ನುವ ಹಾಗೆ ಅವರ ಇಮೇಜ್ ಬೆಳೆದದ್ದು ತೀರಾ ಶೋಚನೀಯ. ತಕ್ಷಣ ಗಂಟು ಮೂಟೆ ಕಟ್ಟಿದ ವರ್ಮಾ ಮತ್ತೆ ತಮ್ಮ ತವರು ನೆಲಕ್ಕೆ ಬಂದವರು ಐದು ದಿನದಲ್ಲಿ ಸಿನಿಮಾ ಮಾಡಿದರು, ಸಿಕ್ಕ ಸಿಕ್ಕ ಕ್ಯಾಮೆರಾಗಳಲ್ಲಿ ಶೂಟ್ ಮಾಡಿದರು, ವಿತರಕರು ಸಿಗದೇ ಇದ್ದಾಗ ಆನ್ಲೈನ್ ವಿತರಣೆ ಮಾಡಿದರು... ಹೀಗೆ ಅದೇಕೋ ಏನೋ ಅವರು ಮಾಡಿದ್ದ ಒಂದೂ ಸಿನೆಮಾವು ಗಮನ ಸೆಳೆಯಲಿಲ್ಲ. ತೆಲುಗಿಗೆ ಮತ್ತೆ ಬಂದ ವರ್ಮಾ, ಎರಡೇ ವರ್ಷದಲ್ಲಿ ಎಂಟೋ೦ಭತ್ತು  ಸಿನಿಮಾ ಮಾಡಿದರು ಎಂದರೆ ಅದರ ಗುಣಮಟ್ಟವನ್ನು  ಕಲ್ಪಿಸಿಕೊಳ್ಳಬಹುದು. ಅದೇನೇ ಇರಲಿ ಸಿನಿಮಾ ಪ್ರೇಮಿಗಳು, ಖುದ್ದು ನಾವೇ ಅವರ ಅಭಿಮಾನಿಗಳು ವರ್ಮ ಬಗ್ಗೆ ಆಸಕ್ತಿ ಕಳೆದುಕೊಂಡದ್ದು ಸತ್ಯ. ಈಗ ಕನ್ನಡಕ್ಕೆ ಬಂದಿದ್ದಾರೆ. ಅವರ ಉತ್ತುಂಗದ ಸಮಯದಲ್ಲಿ ಕನ್ನಡಕ್ಕೆ ವರ್ಮಾ ಬಂದರೆ ಸಾಕು ಎಂದೆಲ್ಲಾ ಕಾತುರದಿಂದ ಕಾಯುತ್ತಿದ್ದ ನಾವುಗಳು ಈಗ ಬಂದಿದ್ದಾರೆ ಏನು ಮಾಡಲು ಸಾಧ್ಯ ಎನ್ನುವ ಪ್ರಶ್ನೆ ಕೇಳಿಕೊಳ್ಳುವಂತಾಗಿದೆ. ಅವರ ಮೊದಲ ಕನ್ನಡ ನಿರ್ದೇಶನದ ಚಿತ್ರ ಕಿಲ್ಲಿಂಗ್ ವೀರಪ್ಪನ್ ಓಕೆ ಎನ್ನುವಂತಹ ಚಿತ್ರವೇ ಹೊರತು ಆಹಾಒಹೋ  ಎನ್ನುವ ಪ್ರಯತ್ನವಲ್ಲ. ಈಗ ಒಂದಷ್ಟು ಸಿನಿಮಾಗಳನ್ನು ಕನ್ನಡದಲ್ಲಿ ಘೋಷಣೆ ಮಾಡಿದ್ದಾರೆ,  ಒಳ್ಳೆಯದೇ. ಆದರೆ ತೆಲುಗಿನಲ್ಲಿ ಮಾಡಿದಂತೆ ಇಲ್ಲಿಯೂ ಮಾಡಿದರೆ ..? ಎನ್ನುವ ಭಯವಂತೂ ಕಾಡುತ್ತದೆ. ವರ್ಮಾ ಹಾಗಾದಿರಲಿ ಮತ್ತೆ ಮೈಕೊಡವಿಕೊಂಡು ನಮ್ಮ ಮುಂದೆ ಅದೇ "ವರ್ಮಾ" ಆಗಿ ಕನ್ನಡದಲ್ಲಿ ರಾರಾಜಿಸಲಿ ಎಂಬುದು ಆಶಯ. ಹಾಗಾಗುತ್ತದೆಯೇ ಎನ್ನುವ ಪ್ರಶ್ನೆ ವಾಸ್ತವಕ್ಕೆ ಸಂಬಂಧ ಪಟ್ಟದ್ದು.

Saturday, April 23, 2016

ಅದು ಲುಸಿಡ್ ಮಾತ್ರೆ ಮಹಿಮೆಯಾ..?

ಅದು ಕನ್ನಡ ಚಿತ್ರರಂಗದ ಸಮಾರಂಭ. ಸುಚಿತ್ರ ಫಿಲಂ ಸೊಸೈಟಿಯಲ್ಲಿ ಸಮಾರಂಭದ ಜೊತೆಗೆ ಚಿತ್ರರಂಗದ ಹಿರಿಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ನನಗೆ ಮಾಡಲು ಏನೂ ಕೆಲಸ ಇರಲಿಲ್ಲ, ನಾನು ನೋಡಲೇ ಬೇಕಾದ ಕನ್ನಡದ ನೂರೊಂದು ಚಿತ್ರಗಳು ಪುಸ್ತಕ ಬರೆದ ಹೊಸತು. ಸಿನಿಮಾ ಸಂಬಂಧಿ ಸಮಾರಂಭ ಇರುವ ಕಡೆಗೆ ಪುಸ್ತಕ ಪ್ರದರ್ಶನ ಮಾರಾಟ ಇರುತ್ತಿತ್ತು. ಸಮಯವಿರುತ್ತಿದ್ದರೆ ನಾನು ಅಲ್ಲಿ ಭಾಗವಹಿಸುತ್ತಿದೆ. ಆವತ್ತು ಅದೇ ಆಗಿತ್ತು. ನಾನು ಬಿಡುವಾಗಿದ್ದದರಿಂದ ಅಲ್ಲಿಗೆ ಹೋದೆ. ಪುಸ್ತಕವನ್ನು ಮಾರಲೂಬಹುದು, ಹಾಗೆಯೇ ಸಮಾರಂಭದಲ್ಲಿ ಭಾಗವಹಿಸಲು ಬಹುದು ಎನ್ನುವುದು ನನ್ನ ಉದ್ದೇಶವಾಗಿತ್ತು. ಸುಚಿತ್ರ ಫಿಲಂ ಸೊಸೈಟಿಯ ಆವರಣದಲ್ಲಿ ಪುಸ್ತಕಗಳನ್ನು ಇರಿಸಿ, ಆನಂತರ ಒಂದಷ್ಟು ಮಾರಿ, ಅಲ್ಲಿ ಬಂದಿದ್ದ ಸಿನೆಮಾದವರ, ಹಿರಿಯರ, ವಿಮರ್ಶಕರ ಮಾತುಗಳನ್ನು ಕೇಳುವುದು ಖುಷಿಯ ಸಂಗತಿಯಾಗಿತ್ತು.
ಮದ್ಯಾಹ್ನ ವಿರಾಮದ ವೇಳೆಯಲ್ಲಿ, ಸಂಜೆ ವಿರಾಮದ ವೇಳೆಯಲ್ಲಿ ಹೊರಗೆ ಬರುತ್ತಿದ್ದ ಗಣ್ಯರು ಸಿನಿಮಾ ಸಾಧಕರು ಪುಸ್ತಕದ ಬಳಿಗೆ ಬಂದು ಪುಸ್ತಕವನ್ನು ತೆರೆದು ನೋಡಿ, ಒಂದೆರೆಡು ಮಾತನಾಡುತ್ತಿದ್ದರು. ಹಾಗೆ ನೋಡಿದರೆ ನಾನು ಆ ಪುಸ್ತಕದ ಲೇಖಕ ಅನ್ನುವುದು ಅವರಿಗೆ ಗೊತ್ತೂ ಆಗುತ್ತಿರಲಿಲ್ಲ. ಪುಸ್ತಕದ ಮೇಲಿದ್ದ ನನ್ನ ಫೋಟೋಕ್ಕೂ ಎದುರಿದ್ದ ನನ್ನ ವೇಷಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಅದೊಂತರ ಬೇರೆಯದೇ ಆದ ಮಜಾ ಕೊಡುತ್ತಿದ್ದದ್ದಂತೂ ಸತ್ಯ. ಯಾಕೆಂದರೆ ಪುಸ್ತಕ ನೋಡಲು ಬರುತ್ತಿದ್ದವರು, ಪುಸ್ತಕ ತೆರೆದು ಆರಾಮವಾಗಿ ಅದರ ಬಗ್ಗೆ ಮಾತನಾಡುತ್ತಿದ್ದರು. ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಯಾವ ಹಿಂಜರಿಕೆಯೂ ಇಲ್ಲದೆ ಅಲ್ಲಿಯೇ ವ್ಯಕ್ತ ಪಡಿಸುತ್ತಿದ್ದರು. ಬೈಯ್ಯುತ್ತಿದ್ದರು, ಹೊಗಳುತ್ತಿದ್ದರು. ಕೆಲವರು ಅಲ್ಲೇ ನಿಂತು ಯಾರಿವನು, ಇಷ್ಟೊಂದು ಸಿನಿಮಾ ನೋಡಿದ್ದಾನೆ, ಪರವಾಗಿಲ್ಲ ಎಂದರೆ, ಇದೇನ್ರಿ ಪರಿವಿಡೀನೆ ಇಲ್ಲ ಪುಸ್ತಕದಲ್ಲಿ ಯಾವನ್ರೀ ರೈಟರ್ ಎಂದು ನನ್ನ ಎದುರೆ ಬೈದವರು ಇದ್ದಾರೆ. ಅದರಲ್ಲೂ ಹಿರಿಯ ನಟ ಶಿವರಾಂ ನನ್ನ ಹತ್ತಿರ ಬಂದವರು, ಪುಸ್ತಕ ತೆರೆದುನೋಡಿದವರು ಖುಷಿ ಪಟ್ಟು, ನೋಡಪ್ಪಾ, ನನಗೆ ನೀನು  ಡಿಸ್ಕೌಂಟ್ ರೇಟ್ ನಲ್ಲಿ ಕೊಡಬೇಕು, ನಿಮ್ಮ ರೈಟರ್ ಪಬ್ಲಿಶರ್ ಗೆ ಹೇಳು ಎಂದಿದ್ದರು.
ಹಾಗೆಯೇ ಗಿರೀಶ್ ಕಾಸರವಳ್ಳಿಯವರು ಪುಸ್ತಕ ತೆರೆದುನೋಡುತ್ತಾ ಅಲ್ಲೇ ಇದ್ದ ತಮ್ಮ ಗೆಳೆಯರೊಂದಿಗೆ, ಇನ್ನೇನು ಈ ಪುಸ್ತಕ ಓದಿ, ಸಿನಿಮಾ ಎಲ್ಲಾ ನೋಡಿದ್ದೀವಿ ಎಂದಾದರೆ ಸಾಯಲು ಅಡ್ಡಿಯಿಲ್ಲ ಬಿಡಿ ಎಂದು ನಕ್ಕಿದ್ದರು.
ಆದರೆ ನನಗೆ ಅಚ್ಚರಿ ಎನಿಸಿದ್ದು ಇದಕ್ಕಲ್ಲ. ಹೊರಬಂದ ಸಿನಿಮಾ ಪ್ರೇಮಿಗಳು, ಒಮ್ಮೆ ಪುಸ್ತಕದ ಕಡೆಗೆ ತಲೆ ತಿರುಗಿಸಿ ನೋಡಿಯಾದರೂ ಹೋಗುತ್ತಿದ್ದರು. ಆದರೆ ಆಗ ತಾನೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದ ಲೂಸಿಯ ನಿರ್ದೇಶಕ ಪವನ್ ಕುಮಾರ್ ಜೊತೆಗೆ ನಿರ್ದೇಶಕಿ ಮತ್ತೊಬ್ಬ ನಟ ಹೊರಗೆ ಬಂದವರು ನನ್ನದೇ ಪುಸ್ತಕದ ಟೇಬಲ್ ನಿಂದ ಮೂರು ಮಾರು ದೂರದಲ್ಲಿ ನಿಂತು ಏನನ್ನೋ ಚರ್ಚಿಸುತ್ತಿದ್ದರು. ಆದರೆ ಸಿನಿಮಾದ ಬಗೆಗಿನಪುಸ್ತಕ ಗಳನ್ನು ಇಟ್ಟುಕೊಂಡ ಇತ್ತ ಕುತೂಹಲಕ್ಕಾದರೂ ಒಮ್ಮೆ ನೋಡಬಾರದೇ..? ನಾನು ಕಂಡ ಹಾಗೆ ಸಿನಿಮಾಕ್ಕೆ ಸಂಬಂಧಿಸಿದ ಪುಸ್ತಕ ಸಿನಿಮಾ, ಸಿಡಿ ಎಲ್ಲೇ ಸಿಕ್ಕರೂ ಒಂದಷ್ಟು ನಿಮಿಷಗಳಾದರೂ ಅತ್ತ ಕಡೆಗೆ ಕಣ್ಣಾಯಿಸದೆ ಹೋಗಲು ಸಾಧ್ಯವಿಲ್ಲ. ಬರೀ ಮೂರು ಮಾರು ದೂರದಲ್ಲಿನ, ಕೈಯಳತೆಯ ದೂರದಲ್ಲಿರುವ ಪುಸ್ತಕಗಳನ್ನು  ಒಮ್ಮೆಯಾದರೂ ಏನಿರಬಹುದು ಎನ್ನುವ ಕುತೂಹಲವೂ ಇಲ್ಲದೆ ನಿಲ್ಲಲು ಹೇಗೆ ಸಾಧ್ಯ ಎನಿಸಿತ್ತು. ಜೊತೆಲಿದ್ದ ನಿರ್ದೇಶಕಿ ಕೂಡ ಇತ್ತ ಕಡೆಗೆ ತಲೆ ಹಾಕಲು ಇಲ್ಲ.
ಬಹುಶ: ನಾವಿನ್ನು ಓದುವುದು, ನೋಡುವುದು ಕನ್ನಡದಲ್ಲಿ ಯಾವುದೂ ಇಲ್ಲ ಎನಿಸಿರಬಹುದು, ಅಥವಾ ಈಗಾಗಲೇ ನಾವೆಲ್ಲಾ ಓದಿದ್ದೀವಿ ಎನಿಸಿರಬಹುದು, ಹೀಗೆ ನನಗೆ ನಾನಾರು ಆಲೋಚನೆಗಳು ಬಂದು ಹೋದವು. ಆದರೆ ಕನ್ನಡ ನನಗೆ ಸ್ವಲ್ಪ ಕಷ್ಟ ಎಂಬರ್ಥದ ಮಾತುಗಳನ್ನು ನಿರ್ದೇಶಕ ಪವನ್ ಆಡಿರುವುದು ಎಲ್ಲೋ ಒಂದು ಕಡೆ ಬೇಸರ ತರಿಸದೇ ಇರದು. ನನಗೆ ಇಂಗ್ಲೀಷ್ ಸುಲಭ, ಕನ್ನಡ ಕಷ್ಟ ಎನ್ನುವುದು ಹೆಗ್ಗಳಿಕೆಯಾ? ಅಸಹಾಯಕತೆಯ..? ಹಾಗಂದ ಮಾತ್ರಕ್ಕೆ ಆತ ಕನ್ನಡಾಭಿಮಾನಿ ಅಲ್ಲ ಎಂದು ತೆಗೆದುಹಾಕುವುದಾಗಲಿ, ಡಬ್ಬಿಂಗ್ ಪರ ಮಾತಾಡಿದ್ದಕ್ಕೆ ಕನ್ನಡ ವಿರೋಧಿ ಎಂದಾಗಲಿ ಲೇಬಲ್ ಹಚ್ಚ ಬೇಕಾಗಿಲ್ಲ. ಕನ್ನಡದಲ್ಲಿ ಸಿನಿಮಾಗಳನ್ನೂ ನೀಡಿ, ಅದನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಪವನ್ ಕುಮಾರ್, ಕನ್ನಡಿಗ ಎನ್ನುವ ಹೆಮ್ಮೆ ಎಲ್ಲರದು. ಹಾಗೆ ಹೇಳಿಕೊಳ್ಳುವಾಗಲೇ ನಿರ್ದೇಶಕ ಮಾತ್ರ ಇಂಗ್ಲೀಷ್ ಇಂಗ್ಲೀಷ್ ಎಂದು ಬಡಬಡಿಸುವುದು ಮಾತ್ರ ಅದೇಕೋ ಸೇರುತ್ತಿಲ್ಲ..

Sunday, April 10, 2016

ಅವರು ಅದೇ ಮಾಡುತ್ತಾರೆ, ನಾವು ಅದೇ ನೋಡುತ್ತೇವಾ?

ಒಂದೇ ಕತೆಯನ್ನು ಅಥವಾ ಒಂದೇ ಜಾನ್ರ್ ಯಲ್ಲಿ ಸಿನಿಮಾ ಮಾಡುವ ನಿರ್ದೇಶಕರು ನಮ್ಮಲ್ಲಿ ಬಹುತೇಕರಿದ್ದಾರೆ. ಆದರೆ ಅಂತಹ ವಿಷಯ ಬಂದಾಗ ಚಿತ್ರಕತೆ ಮಹತ್ವದ ಪಾತ್ರವನ್ನು ವಹಿಸಿಕೊಳ್ಳುತ್ತದೆ. ಹಿಂದಿಯ ರಾಕೇಶ್ ರೋಶನ್ ಈ ನಿಟ್ಟಿನಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಮಧ್ಯಂತರದ ವರೆಗೆ ನಾಯಕ ಹಾಡಿಕೊಂಡು ಸುಮ್ಮನಿದ್ದರೆ ಮಧ್ಯಂತರದ ನಂತರ ಅವನು ಸೇಡು ತೀರಿಸಿಕೊಳ್ಳುವುದು ಅವರ ಬಹುತೇಕ ಸಿನೆಮಾಗಳ ಕತೆಯ ಸಾರ. ಕರಣ್ ಅರ್ಜುನ್, ಕೊಯ್ಲಾ, ಕಹೋನಾ ಪ್ಯಾರ್ ಹೈ, ಕೋಯಿ ಮಿಲ್ ಗಯಾ, ಕ್ರಿಶ್ ಹೀಗೆ ಸಾಗುತ್ತದೆ ಪಟ್ಟಿ. ಕರಣ್ ಅರ್ಜುನ್ ನಲ್ಲಿ ಪಾಪದ ಸಹೋದರರು ಹಿಂಸೆ ಅನುಭವಿಸಿ ಸತ್ತು ಪುನರ್ಜನ್ಮ ಪಡೆದು ಖಳನನ್ನು ಹೊಡೆದು ಉರುಳಿಸಿದರೆ, ಕೊಯ್ಲಾದಲ್ಲಿ ಮೂಕ ನಾಯಕ ಜೀತ ಮಾಡಿಕೊಂಡು ಮಧ್ಯಂತರದವರೆಗೆ ಕಾಲ ತಳ್ಳಿ, ಆನಂತರ ರೊಚ್ಚಿಗೆದ್ದು ಖಳನನ್ನು ಹೊಡೆದು ಸಾಯಿಸುತ್ತಾನೆ, ಇನ್ನು ಕಹೋನ ಪ್ಯಾರ್ ನಲ್ಲಿ ನಾಯಕ ಸಾಧುವಾಗಿ ಮಧ್ಯಂತರದವರೆಗೆ ಹಾಡಿಕೊಂಡು ಕಾಲ ತಳ್ಳಿ, ಆನಂತರ ಸತ್ತು, ಅವನ ರೀತಿಯಲ್ಲಿರುವ ಮತ್ತೊಬ್ಬ ಬಂದು ಖಳನಾಯಕನನ್ನು.... ಹೀಗೆ ಸಾಗುತ್ತದೆ ಕತೆ. ಹಾಗೆಯೇ ನೀವು ಕೋರಿಯನ್ ನಿರ್ದೇಶಕ ಕಿಂ ಕಿ ಡಕ್, ಜಪಾನಿ ನಿರ್ದೇಶಕ ಶಿಯಾನ್ ಸೋನು, ತಮಿಳಿನ ನಿರ್ದೇಶಕರಾದ ಮಿಸ್ಕಿನ್, ಬಾಲಾ, ಮುಂತಾದವರಿದ್ದಾರೆ. ಅವರ ಚಿತ್ರಗಳಲ್ಲಿ ಕತೆ ಬದಲಾಗಬಹುದು ಆದರೆ ಸಾಮ್ಯತೆಯಂತೂ ಇದ್ದೇ ಇರುತ್ತದೆ. ಇದು ಅವರದೇ ಸಿನಿಮಾ ಎಂದು ಹೇಳಿಬಿಡುವಷ್ಟು. ಕಿಂ ಕೀ ಚಿತ್ರಗಳಲ್ಲಿ ಮಾತುಕಡಿಮೆ, ಆದರೆ ಅದೊಂದು ವಿಕ್ಷಿಪ್ತ ಲೋಕ, ಆತನ ಸಿನೆಮಾಗಳಲ್ಲಿ ಹಿಂಸೆಗಿಂತಲೂ ಭೀಭತ್ಸ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಶಿಯಾನ್ ಸೋನೊ ಹಾಗಲ್ಲ. ಅವನ ನಿರೂಪನೆಯಲ್ಲಿಯೇ ಕಸುವಿದೆ. ಬಾಲ ಬಿಡಿ. ಹಾಸ್ಯ ಎಂದರೂ ನಾಯಕರುಗಳು ನೀಟಾಗಿದ್ದರೆ ಅವರಿಗೆ ಸೇರುವುದಿಲ್ಲ. ಮತ್ತು ಅಲ್ಲೊಬ್ಬ ಅತ್ಯಂತ ಕೆಟ್ಟ ಖಳನಾಯಕನಿಲ್ಲದಿದ್ದರೆ ಅವರ ಸಿನಿಮಾ ಆಗುವುದಿಲ್ಲ. ಮತ್ತು ನಾಯಕ ಅವನನ್ನು ಬರ್ಬರವಾಗಿ ಸಾಯಿಸದಿದ್ದರೆ ಸಿನಿಮಾ ಮುಗಿಯುವುದಿಲ್ಲ.. ಇನ್ನು ಫ್ರೆಂಚ್ ನಿರ್ದೇಶಕ ಫ್ರಾನ್ಸಿಸ್ ವೆಬೇರ್ ಭಾಷೆ ಮರೆತು ನಗಿಸುತ್ತಾನೆ, ಅವನ ಚಿತ್ರಗಳು ನಗುವಿಲ್ಲದೆ ಇಲ್ಲ. ತೆಲುಗಿನ ಸುಕುಮಾರ್ ಚಿತ್ರಗಳ ಕತೆ ಒಂದೇ ಸಾಲಿನಲ್ಲಿರುತ್ತದೆ. ಆದರೆ ಅದಕ್ಕೆ ಹಿಡ್ನೆ ಮುಂದೆ ಬಾಲ ಜೋಡಿಸುತ್ತಾ ಸಾಗುತ್ತಾರೆ ಅವರು. ಇನ್ನು ವಿಕ್ರಮ್ ಭಟ್ ಜಗತ್ತಿನ ಯಾವುದೇ ಭಾಷೆಯಿಂದಾದರೂ ರಿಮೇಕ್, ರಿಮಿಕ್ಸ್ ಮಾಡಿರಲಿ ಅಥವಾ ತಾವೇ ಕುಳಿತು ಕತೆ ಬರೆಯಲಿ, ಸೆಕ್ಸ್ ಕ್ರೈಂ ಇಲ್ಲದೆ ಸಿನಿಮಾ ಮಾಡಿದರೆ ಅವರಿಗೆ ಉಂಡದ್ದು ಜೀರ್ಣ ಆಗುವುದಿಲ್ಲ. ಸೂರಜ್ ಆರ್ ಬಾರ್ಜಾತ್ಯಾ ಚಿತ್ರದಲ್ಲಿ ಬಡವರು ಕಡಿಮೆ, ಮನೆಯೆಂದರೆ ಅರಮನೆ, ವಾಹನ ಎಂದರೆ ಹೆಲಿಕ್ಯಾಪ್ಟರ್ ಎನ್ನುವವರು ಕರಣ್ ಜೋಹರ್ ,ಅನುರಾಗ್ ಕಶ್ಯಪ್ ಮದುವೆ ಮನೆ ಮಕ್ಕಳು ಎಂದು ಸಿನಿಮಾ ಮಾಡುವುದಿಲ್ಲ, ರಾಮ್ ಗೋಪಾಲ್ ವರ್ಮ ಏನು ಬೇಕಾದರೂ ಮಾಡಬಹುದು, ಆದರೆ ಎಲ್ಲದಕ್ಕೂ ಕ್ಯಾಮೆರಾ ಮಾತ್ರ ಮೂಲೆ ಮೂಲೆ ಸಂಧಿ ಗೊಂದಿಯಲ್ಲಿಡಲೇಬೇಕು, ಇಲ್ಲವಾದಲ್ಲಿ ಅವರದ್ದು ಸಿನಿಮಾ ಆಗುವುದಿಲ್ಲ. ರಾಜಮೌಳಿ ಹಳೆಯದ್ದೋ ಹೊಸದೊ ಕತೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಮನರಂಜಿಸಬೇಕಷ್ಟೇ, ಮಧ್ಯಮವರ್ಗದ ಕನಲಿಕೆ, ಜೀವನ ಶೈಲಿಯಾ ಕತೆ ಮಾನವೀಯ ತೊಳಲಾಟ ಕೆ ಬಾಲಚಂದರ್ ಅದ್ಭುತವಾಗಿ ನಿರೂಪಿಸುತ್ತಾರೆ. ಏನನ್ನಾದರೂ ಅದ್ಭುತ ಮಾಡಬೇಕು ಎಂದು ಒಮ್ಮೆ, ಹೇಗಾದರೂ ಹಿಟ್ ಕೊಡಲೇಬೇಕು ಎಂದೊಮ್ಮೆ ಕಮಲ್ ಹಾಸನ್ ಎದ್ದು ನಿಲ್ಲುತ್ತಾರೆ. ಆದರೆ ಫಲಿತಾಂಶ ಮಾತ್ರ ಅದೇ ಆಗಿರುತ್ತದೆ. ದಟ್ಟವಾದ ಕತೆಯಿಟ್ಟುಕೊಂಡು ಸಿನಿಮಾ ಮಾಡುವವನು ಇಟಾಲಿಯನ್ ನಿರ್ದೇಶಕ ಗಿಸಿಪಿ ಟಾರ್ನೇಟಾರ್. ಅವನ ಸಿನಿಮಾ ಪರಡಿಸೋ, ಮಲೀನಾ ಗಳಿಂದ ಹಿಡಿದು ಇತ್ತೀಚಿನ ದಿ ಬೆಸ್ಟ್ ಆಫರ್   ವರೆಗೆ ಅವನ ಯಾವುದೇ ಸಿನಿಮಾ ತೆಗೆದುಕೊಂಡರೂ ಅದರಲ್ಲಿ ತುಂಬಿರುವುದು ಭಾವುಕತೆ. ಹಾಗೆಯೇ ನಿರ್ದೇಶಕ ಜೇಮ್ಸ್ ವಾನ್, ಎಲಿ ರೋಥ್ ಕ್ರೌರ್ಯ ಬಿಟ್ಟು ಹೊರಬರಲು ಸಾಧ್ಯವೇ..? ಎಲ್ಲಾ ಮುಗಿದು ಅವರು ಚೆನ್ನಾಗಿ ನೂರ್ಕಾಲ ಬಾಳಿದರು ಎಂದು ಕ್ವೆಂಟನ್ ಟರಂಟನೋ ಚಿತ್ರಗಳ ಕ್ಲೈಮಾಕ್ಸ್ ಹೇಳಲು ಸಾಧ್ಯವೇ..? ಪಟ್ಟಿ ಮಾಡುತ್ತಾ ಸಾಗಿದರೆ ಅದು ಮುಗಿಯುವುದಿಲ್ಲ
ಆದರೆ ಕನ್ನಡದಲ್ಲಿ ಗಮನಿಸಿದರೆ ಅದದ್ದನ್ನೇ ಮಾಡಿದವರು ಬೇಸರ ತರಿಸಿದ್ದುಂಟು. ರವಿಚಂದ್ರನ್ ರಿಮೇಕ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮೂಲಕ್ಕಿಂತ ಇದೇ ಚೆನ್ನಾಗಿದೆಯಲ್ಲ  ಎನಿಸಿದ್ದು ಅವರ ಕೆಲವು ಚಿತ್ರಗಳ ಸಾಧನೆ. ಆದರೆ ಸುದೀಪ್ ಹಾಗಲ್ಲ. ಅಲ್ಲೇನಿದೆ, ಅಲ್ಯಾವ ಬಣ್ಣವಿದೆ, ಎಂಬುದನ್ನು ಸರಿಯಾಗಿ ಗಮನಿಸಿಯೇ ರಿಮೇಕ್ ಮಾಡುತ್ತಾರೆ. ಸಾಯಿಪ್ರಕಾಶ್ ಅವರಿಗೆ ಯಾವುದೇ ಜಾನ್ರ್ ಇಲ್ಲ. ಸಿನಿಮಾಗಳು ಮನರಂಜನೆ ಕೊಟ್ಟರೆ ಸಾಕು ಎಂದು ಅದು ಕೊಟ್ಟಾದ ಮೇಲೆ ಅದರ ಗುಣಮಟ್ಟ ಇನ್ನೂ ಚೆನ್ನಾಗಿರಬೇಕಿತ್ತು ಎಂದು.. ಹೀಗೆ ಪ್ರೇಕ್ಷಕ್ಟಿರಾದ ನಮ್ಮ ಪಟ್ಟಿ ಬೆಳೆಯುತ್ತದೆ. ಆದರೆ ಅದವರ ಶೈಲಿ ಎಂದುಕೊಂಡು ಸಿನಿಮಾ ನೋಡುವುದು, ಒಹ್ ಈ ನಿರ್ದೇಶಕ ಎಂದರೆ ಈ ರೀತಿಯ ಸಿನಿಮಾ ಇರುತ್ತದೆ ಎಂದು ನಂಬಿಕೊಂಡು, ಇವರ ಚಿತ್ರಗಳಲ್ಲಿ ಹಾಡುಗಳು ಸೂಪರ್, ಇವರ ಚಿತ್ರಗಳಲ್ಲಿ ಮಾತುಗಳು ಮಜಾ ಕೊಡುತ್ತವೆ ಎಂದು, ಇವರು ನಿರ್ದೇಶನ ಮಾಡಿದರೆ ಭರ್ಜರಿ ಫೈಟ್ ಇರುತ್ತದೆ ಎಂದೂ ಸಿನಿಮಾ ನೋಡುವವರಿದ್ದೇವೆ.

ಹನುಮಂತನ ನಾಮಧೇಯ, ಊರಿನಲ್ಲಿ ದುರುಳ ಮುಖಂಡ, ಅದನ್ನು ಸರಿ ಮಾಡಲು ಬರುವ ನಾಯಕ, ನಾಯಕಿ, ಹಾಡು ಹೊಡೆದಾಟ, ನಾಯಕನಿಗೆ ಹೊಟ್ಟೆಗೆ ಆರು ಮಡತೆಗಳು ಇತ್ತೀಚಿನ ಚಿತ್ರಗಳಲ್ಲಿನ ನಿರ್ದೇಶಕ ಹರ್ಷ ಅವರ ಫಿಕ್ಸೆಡ್ ಪಾಯಿಂಟ್ಸ್ ಗಳು. ನೋಡುವ ಪ್ರೇಕ್ಷಕನಿಗೆ ಇದೇನಪ್ಪಾ ಅದೇ ಕತೆ ಎಣಿಸುವಾಗ ನಿರ್ದೇಶಕರ್ಯಾಕೆ ಬದಲಾಗುವುದಿಲ್ಲ ಎನಿಸುವುದು ಅತಿರೇಕದ ವಿಷಯವಲ್ಲ..

ಒಂದೇ ಜಾನ್ರ್ ನಲ್ಲಿ ಅಥ್ವಾ ಒಂದೇ ಕತೆಯನ್ನು ತಿರುಚಿ ಮುರುಚಿ ಸಿನಿಮಾ ಮಾಡಿದವರಿದ್ದಾರೆ. ಅದು ಅವರಿಗಿರುವ ಪ್ಯಾಶನ್. ಆದರೆ ಇದೆ ಯಶಸ್ಸಿನ ಮಾನದಂಡ ಇರಬೇಕು, ಅಥವಾ ಇದು ಇದ್ದರೆ ಸಿನಿಮಾ ಗೆಲ್ಲುತ್ತದೆ ಎನ್ನುವ ಮನಸ್ಥಿತಿ ಇಂತಹ ಸಿನಿಮಾ ಮಾಡಿಸುತ್ತದಾ..? ಏಕೆಂದರೆ ಸುಮ್ಮನೆ ಗಮನಿಸಿದರೆಎಷ್ಟೋ ನಿರ್ದೇಶಕರುಿಗಳು ಿಾಇಂತಹದ್ದೇಂ ು .  ಸಿನಿಮಾ ಮಾಡಬೇಕು ಎಂದು ಬಂದಿರುವುದಿಲ್ಲ. ಅವರು ಬಂದ ದಾರಿಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಯಶಸ್ಸು ಸಿಗುವವರಗೆ ಅವರು ಅಂದುಕೊಂಡ ಚಿತ್ರಗಳನ್ನು ಮಾಡುತ್ತಾ ಸಾಗುತ್ತಾರೆ. ಆದರೆ ಒಂದು ಚಿತ್ರದಲ್ಲಿ ಯಶಸ್ಸು ಸಿಕ್ಕಿತು ಎಂದುಕೊಳ್ಳಿ ಅವರು ಅದನ್ನು ಬಿಟ್ಟು ಅತ್ತಿತ್ತ ನೋಡುವುದೂ ಇಲ್ಲ. ಸಂತೋಷ, ಮಿಂಚಿನ ಓಟ ಚಿತ್ರಗಳು ಸೋತ ನಂತರ ಎ ಎಂ ಆರ್ ರಮೇಶ್ ಸಯನೈಡು ಮಾಡಿ ಗೆದ್ದದ್ದೆ ನೈಜ ಘಟನೆಗಳನ್ನು ಸಿನಿಮಾಗಳಿಗೆ ಆರಿಸಿಕೊಂಡರು.. ಹಾಗಾಗಿಯೇ ಪೋಲಿಸ್ ಕ್ವಾರ್ಟರ್ಸ್ , ಅಟ್ಟಹಾಸ ಸಿನಿಮಾಗಳು ಬಂದದ್ದು. ನಿರ್ದೇಶಕ ಹರ್ಷ ಬಿರುಗಾಳಿ, ಗೆಳೆಯ, ಚಿಂಗಾರಿ ಎಂದೆಲ್ಲಾ ಮಾಡಿ ಸೋತಾಗ ಭಜರಂಗಿ ಮಾಡಿದರು ನೋಡಿ, ಇನ್ನೂ ಅಲ್ಲೇ ಇದ್ದಾರೆ. ಭಟ್ಟರು ಉಡಾಫೆ ಮಾತುಗಳಿಂದ, ದೇಸಾಯಿ ಗೊಂದಲದಿಂದ, ಓಂ ಪ್ರಕಾಶ್ ರಾವ್ ರಿಮಿಕ್ಸ್ ನಿಂದ, ........ ರವರು ...............ರಿಂದ ಹೊರಬಂದರೆ ನೋಡುಗನಿಗೆ ಅದಕ್ಕಿಂತ ಹಬ್ಬವಿಲ್ಲ ಎನ್ನುವುದು ನನ್ನ ಅನಿಸಿಕೆ.

Sunday, April 3, 2016

ಅಂದರ್ ಕಿ ಬಾತ್ ಅಲಗ್ ಹೈ ಭಾಯಿ...

ಆ ಸಿನಿಮಾದ ಹೆಸರು ಹೋಗಿ ಬಾ ಮಗಳೇ. ಸಿನಿಮಾದ ಹೆಸರೇ ಹಾಗಿರುವುದರಿಂದ ಒಬ್ಬ ಪ್ರೇಕ್ಷಕನಾಗಿ ನಾನು ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಹೇಳಿ. ಸಿನಿಮಾ ಹೋಗುವ ಮುನ್ನ, ಪೋಸ್ಟರ್ ನೋಡಿ ನಾವುಗಳು ನಮ್ಮ ನಮ್ಮ ತಲೆಗೆ ಬುದ್ದಿ ಕೊಟ್ಟೆ ಕೊಡುತ್ತೇವೆ. ಪೋಸ್ಟರ್, ಶೀರ್ಷಿಕೆ ಹುಟ್ಟು ಹಾಕುವ ನಿರೀಕ್ಷೆ ಗಳಿಗೆ ನೋಡಿದಂದಿನಿಂದ ಚಿತ್ರಮಂದಿರದ ಒಳಗೆ ಕುಳಿತು ಸಿನಿಮಾ ಶುರುವಾಗುವವರೆಗೂ ಆ ಸಿನಿಮಾದ ಮೇಲೆ ಅದರ ಕತೆಯ ಮೇಲೇ ನಮ್ಮದೊಂದು ಅಂದಾಜು ಇದ್ದೇ ಇರುತ್ತದೆ. ಹಾಗಾಗಿ ಹೋಗಿ ಬಾ ಮಗಳೇ ಎಂಬುದು ಒಂದು ಕೌಟುಂಬಿಕ ಚಿತ್ರವಾಗಿರುತ್ತದೆ, ಜೊತೆಗೆ ಸಿನಿಮಾದಲ್ಲಿ ತಂದೆ ತಾಯಿ ಮಗಳು ಮಾಡುವೆ ಮುಂತಾದ ಸೆಂಟಿಮೆಂಟ್ ಇರುತ್ತದೆ ಎಂದುಕೊಂಡಿದ್ದೆ. ಸಿನಿಮಮಂದಿರದ ಒಳಗಿದ್ದ ಅನೇಕ ಮಂದಿಯೂ ಹಾಗೆಯೇ ಅಂದುಕೊಂಡಿದ್ದರೆನೋ? ಆದರೆ ಸಿನಿಮಾ ಶುರುವಾಯಿತು ನೋಡಿ, ಇಡೀ ಚಿತ್ರಣವೇ ಬದಲಾಯಿತು. ಅದೊಂದು ಶೃಂಗಾರಮಯ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ರಿವೆಂಜ್ ಇರುವ ಕತೆ. ಗೆಳೆಯ ಮತ್ತವನ ತಂಗಿಯನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳಲು ನಾಯಕ ಹಠ ತೊಡುತ್ತಾನೆ. ಮದುವೆಯಾದ ಮೊದಲ ರಾತ್ರಿ ನನ್ನದೊಂದು ಗುರಿ ಇದೆ, ಗುರಿ ತಲುಪುವವರೆಗೂ ಇದೆಲ್ಲಾ ಬೇಡ ಎನ್ನುತ್ತಾನೆ, ಅವಳು ಸ್ನಾನದ ಮನೆಗೆ ಹೋಗಿ ತಲೆತುಂಬಾ ತಣ್ಣೀರು ಸುರಿದುಕೊಳ್ಳುತ್ತಾಳೆ. ಇವನು ನೆಲಮಾಳಿಗೆಗೆ ಹೋಗಿ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುತ್ತಾನೆ. ಆನಂತರ ಬಾಕ್ಸಿಂಗ್ ಆಡಿ ಮೂವರನ್ನು ಕೊಲ್ಲುತ್ತಾನೆ, ಗುರಿ ತೀರಿತು, ನಡಿ ಹನಿಮೂನಿಗೆ ಎಂದು ಕರೆದುಕೊಂಡು ಹೋಗುತ್ತಾನೆ, ಅಲ್ಲೊಬ್ಬ ಪರಿಚಯವಾಗಿ ಅವಳ ಹಿಂದೆ ಬೀಳುತ್ತಾನೆ, ಫ್ರೆಂಡ್ ಆಗಿ, ನಾಯಕನನ್ನು ಫ್ರೆಂಡ್ ಮಾಡಿಕೊಂಡು ಸಮಯ ಸಾಧಿಸಿ ನಾಯಕನನ್ನು ಕೊಲ್ಲಲು ಸುಫಾರಿ ಹಂತಕನಿಗೆ ಡೀಲ್ ಕೊಡುತ್ತಾನೆ. ಒಂದು ಹಾಡಿನ ನಂತರ ಇಬ್ಬರೂ ಸೇರಿ ಅವನನ್ನು ಕೊಲ್ಲುತ್ತಾರೆ. ಆನಂತರ ಅಪಘಾತದಲ್ಲಿ ಗಾಯಗೊಂಡಿದ್ದ ಸುಫಾರಿ ಹಂತಕನನ್ನು ಕಾಪಾಡುತ್ತಾಳೆ ನಾಯಕಿ, ಅವನನ್ನು ಮನೆಗೆ ಕರೆತಂದು ಸುಶ್ರೂಷೆ ಮಾಡುತ್ತಾಳೆ, ಅಲ್ಲಿ ಅವನಿಗೆ ಅವಳ ಮೇಲೆ ಪ್ರೀತಿ ಹುಟ್ಟುತ್ತದೆ, ನಾಯಕಿಯೂ ಮನಸೋತು ತನ್ನ ಗಂಡನನ್ನು ಕೊಂದವನನ್ನು ಕೊಲ್ಲು, ಆಮೇಲೆ ಎಲ್ಲಾದರೂ ಓಡಿ ಹೋಗೋಣ ಎಂದಾಗ ಓಕೇ ಎಂದವನು ಸುಫಾರಿ ಕೊಟ್ಟವನನ್ನ್ನು ಫಿನಿಶ್ ಮಾಡುತ್ತಾನೆ. ಫಿನಿಶ್ ಮಾಡಿ ಮನೆಗೆ ಬಂದರೆ, ನಾಯಕಿ ಅವನನ್ನು ಕೊಲ್ಲುತ್ತಾಳೆ.
ಈಗ ಸಂಪೂರ್ಣ ಕತೆ ಹೇಳಿದ್ದೇನೆ, ಹೇಳಿ ಇದಕ್ಕೆ ಹೋಗಿ ಬಾ ಮಗಳೇ ಶೀರ್ಷಿಕೆಯನ್ನು ಒಪ್ಪಿಕೊಳ್ಳುವುದು ಹೇಗೆ...? ಇಲ್ಲಿ ಮಗಳಿಗೂ ಕತೆಗೂ ಸಂಬಂಧವೆ ಇಲ್ಲ ಎನಿಸುವುದಿಲ್ಲವೇ? 
ನಮ್ಮಲ್ಲಿ ಪ್ರೇಕ್ಷಕರನ್ನು ವಿಭಾಗಿಸುವುದು ಕಡಿಮೆ. ಹಾಲಿವುಡ್ ನಲ್ಲಿ ಬಾಲಿವುಡ್ ನಲ್ಲಿ ಪ್ರೇಕ್ಷಕರಿಗಾಗಿಯೇ ಸಿನಿಮಾಗಳು ನಿರ್ಮಾಣವಾಗುತ್ತವೆ. ಅಲ್ಲಿ ವಿಭಾಗಗಳಿಗೆ ಬೆಲೆ ಇದೆ. ನಮ್ಮಲ್ಲಿ ಅದಿಲ್ಲ. ಮಲ್ಟಿಪ್ಲೆಕ್ಷ್  ವೀಕ್ಷಕರಿಗೆ, ಥ್ರಿಲ್ಲರ್ ಪ್ರಿಯರಿಗೆ, ಆಕ್ಷನ್ ಪ್ರಿಯರಿಗೆ ಆಯಾ ಪ್ರೇಕ್ಷಕರನ್ನು ತಲೆಯಲ್ಲಿಟ್ಟುಕೊಂಡು ಸಿನಿಮಾ ಬರುತ್ತದೆ. ಅದರ ಪೋಸ್ಟರ್, ಟ್ರೈಲರ್ ಗಳು ಶೀರ್ಷಿಕೆಗಳು ಆ ಮೂಡ್ ಕಟ್ಟಿಕೊಡುತ್ತವೆ. ಪ್ರೇಕ್ಷಕರನ್ನು ಆ ಚಿತ್ರಕ್ಕೆ ತಯಾರು ಮಾಡುತ್ತವೆ. ಹಾಲಿವುಡ್ ನಲ್ಲಿ ಅದನ್ನು ಪಕ್ಕಾ ಮಾಡುತ್ತಾರೆ, ಅವರ ಟ್ರೈಲರ್ ನಲ್ಲೆ ಅದ್ಯಾವ ಕ್ಯಾಟೆಗರಿ ಚಿತ್ರ ಎಂಬುದು ಗೊತ್ತಾಗಿ ಬಿಡುತ್ತದೆ. ಅವರ ಸಿನಿಮಾ ನಿರ್ಮಾಪಕರ ಲಾಂಛನ ಬರುವಾಗಲೇ ಹಿನ್ನೆಲೆ ಸಂಗೀತ ಅವರ ಸಿನಿಮಾದ ಮೂಡ್ ಅನ್ನು ವಿಶದ ಪಡಿಸುತ್ತದೆ. ಅಲ್ಲಿ ಅಷ್ಟಾಗಿ ನೋ ಸರ್ಪ್ರೈಸ್. ಆದರೆ ನಮ್ಮಲ್ಲಿ ಆಗಾಗ ಸರ್ಪ್ರೈಸ್ ಬರುತ್ತವೆ. ಮಣಿಚಿತ್ರತಾಳ್ ನ ರಿಮೇಕ್ ಎಂದು ಗೊತ್ತಿರದೇ ಸುಮ್ಮನೆ ಆಪ್ತಮಿತ್ರ ಚಿತ್ರಕ್ಕೆ ಹೋದರೆ ಅದೊಂದು ಹಾರರ್ ಎಂಬುದು ಗೊತ್ತಾಗಿ ಅಚ್ಚರಿ ಪಟ್ಟವರಿದ್ದಾರೆ. ಏಕೆಂದರೆ ರಮೇಶ್, ವಿಷ್ಣುವರ್ಧನ್ ಮತ್ತು ಆಪ್ತಮಿತ್ರ ಚಿತ್ರದ ಶೀರ್ಷಿಕೆ ಇದಾವುದೋ ಗೆಳೆಯರ ನಡುವಣ ಸೆಂಟಿಮೆಂಟ್ ಕತೆ ಇರಬಹುದು ಎಂದುಕೊಂಡವರಿದ್ದಾರೆ. ಆದರೆ ಒಳಗಣ ಮರ್ಮ ಖುಷಿ ಕೊಟ್ಟದ್ದು ನಿಜ. ಹಾಗೆಯೇ ಶಿವಣ್ಣ ಅಭಿನಯದ ಅಂದರ ಬಾಹರ್ ನೋಡಿ ಅದರ ಪೋಸ್ಟರ್ ನೋಡಿ ನಾನಂತೂ ಇದು ಮಾಫಿಯಾ ಸಂಬಂಧಿ, ಡಾನ್ ತರಹದ  ಸಿನಿಮಾ ಇರಬಹುದು ಎಂದುಕೊಂಡಿದ್ದೆ. ಆದರೆ ಅದರಲ್ಲಿ ಸೆಂಟಿಮೆಂಟ್ ಜಾಸ್ತಿ ಇತ್ತು. ಮೊನ್ನೆ ಮೊನ್ನೆ ಬಂದ ಜೆಸ್ಸಿ ಚಿತ್ರದ್ದು ಅದೇ ಕತೆ. ಹೊರಗೆಲ್ಲಾ ತ್ರಿಕೋನ ಪ್ರೇಮಕತೆ ಎನಿಸಿದರೆ ಒಳಗೆ ಇದ್ದದ್ದು ಆತ್ಮದ ಕತೆ. ಒಳಗೆ ಹೋದರೆ ಅಚ್ಚರಿ. ಆದರೆ ಇಂತಹದ್ದೇ ಸಿನಿಮಾ ನನ್ನ ಟೇಸ್ಟ್ ಎಂದುಕೊಂಡು ಹೋದವನಿಗೆ ಮಾತ್ರ ಏರುಪೇರಾಗುವುದ್ದಂತೂ ಸತ್ಯ, ದಿನೇಶ್ ಬಾಬು ನಿರ್ದೇಶನದ ಅಮೃತವರ್ಷಿಣಿ ಚಿತ್ರದ್ದೂ ಅದೇ ಕತೆ. ಆಗೆಲ್ಲಾ ತ್ಯಾಗಮಯಿ ಎನಿಸಿಕೊಂಡಿದ್ದ, ತಾನೂ ಪ್ರೀತಿಸಿದ ಹುಡುಗಿಯನ್ನು ಧಾರಾಳವಾಗಿ ಬಿಟ್ಟುಕೊಡುವ ಗುಣದ ರಮೇಶ್, ಮತ್ತೊಬ್ಬನ ಹೆಂಡತಿಗೆ ಕಣ್ಣು ಹಾಕುವುದು, ಅದಕ್ಕಾಗಿ ಗೆಳೆಯನನ್ನೇ ಕೊಲ್ಲುವುದು ಆವತ್ತಿಗೆ ಊಹಿಸುವುದು ಸಾಧ್ಯವಿತ್ತೆ..?
ನಮ್ಮಲ್ಲಿ ಸಿನಿಮಾದ ಗತಿ ಬಗ್ಗೆ ಕೂಡ ಹೆಚ್ಚು ಚಿತ್ರಕರ್ಮಿಗಳು ತಲೆಕೆಡಿಸಿಕೊಂಡಿದ್ದು ಕಡಿಮೆ. ಒಂದು ಸಿನಿಮಾ ಅದರ ಕತೆಗೆ ತಕ್ಕಂತೆ ಚಿತ್ರಿಕೆ ಸಂಯೋಜನೆ ಪಡೆಯುತ್ತದೆ. ಹಾಗಾದಾಗಲೇ ಅದರ ಸಿನಿಮಾ ಪರಿಣಾಮಕಾರಿ ಎನಿಸುವುದು. ಮೂಡ್ ಕಟ್ಟಿಕೊಡುವುದು. ಗಾಡ್ ಫಾದರ್ ಸರಣಿಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಆದರೆ ನಮ್ಮಲ್ಲಿ ಅದೇಕೋ ಏನೋ ಅದರ ಬಗ್ಗೆ ಯೋಚಿಸುವವರು ಕಡಿಮೆ. ಉದಾಹರಣೆಗೆ ಇತ್ತೀಚಿಗೆ ನಮ್ಮಲ್ಲಿ ಡ್ರೋನ್ ಬೆಲೆ ಕಡಿಮೆಯಾಗಿರುವುದರಿಂದ ಸಿನಿಮಾಗಳಲ್ಲಿ ಸುಖಾಸುಮ್ಮನೆ ಪಕ್ಷಿನೋಟದ ಶಾಟ್ ಇರುತ್ತದೆ. ಹಾಗೆಯೇ ಪ್ರಯೋಗಾತ್ಮಕವಾಗಿ ಸಿನಿಮಾ ಮಾಡೋಣ ಎಂದುಕೊಂಡು ಸಂದಿಗೊಂದಿಗಳಲ್ಲಿ ಕ್ಯಾಮೆರಾ ಇಟ್ಟು ಶೂಟ್ ಮಾಡಿದವರೂ ಇದ್ದಾರೆ. ಇದೆಲ್ಲಾ ತಪ್ಪು ಎನುವುದಲ್ಲ. ಬದಲಿಗೆ ಅಗತ್ಯ ಇತ್ತೇ ಎನ್ನುವುದು ಪ್ರಶ್ನೆ.
ಸಿನಿಮಾದ ಶೀರ್ಷಿಕೆಯಿಂದ ಮೊದಲ್ಗೊಂಡು poster, ಛಾಯಾಗ್ರಹಣ,  ಶಾಟ್ ಸಂಯೋಜನೆ, ಹಿನ್ನೆಲೆ ಸಂಗೀತ ಮುಂತಾದವುಗಳ ಮೂಲಕ ಸಿನಿಮಾ ಕಟ್ಟಿಕೊಡಬೇಕು ಮತ್ತು ಪ್ರೇಕ್ಷಕನನ್ನು ಆ ಚಿತ್ರಕ್ಕೆ ತಯಾರಿಗೊಳಿಸಬೇಕು. ಹಾಗಾದಾಗ ಪ್ರೇಕ್ಷಕ ತಯಾರಾಗುತ್ತಾನೆ. ಸರ್ಪ್ರೈಸ್ ಎಂದಾಗ ಸಿನಿಮಾ ಅಷ್ಟೇ ಚೆನ್ನಾಗಿದ್ದು ಅವನನ್ನೂ ಮೆಚ್ಚಿಸುವಂತಿರಬೇಕು. ಅದಿರಲಿ. ನೀವು ಕೂಡ ಅಂದುಕೊಂಡಿದ್ದು ಬೇರೆ, ಒಳಗೆ ತೋರಿಸಿದ್ದು ಬೇರೆ ಅನುಭವಕ್ಕೆ ತುತ್ತಾಗಿದ್ದೀರಾ..?

Friday, March 25, 2016

ಸೆನ್ಸಾರ್ ...ಸೆನ್ಸ್ ಇರಲಿ ಸಾರ್..?

ಮೊನ್ನೆ ಕಿರಗೂರಿನ ಗಯ್ಯಾಳಿಗಳು ಚಿತ್ರದಲ್ಲಿನ ಒಂದಷ್ಟು ಬೈಗುಳಿಗೆ ಮ್ಯೂಟ್ ಮಾಡಿದ್ದರಿಂದ ಸೆನ್ಸಾರ್ ಮಂಡಳಿ ಸಿನೆಮಾದವರ ಕೆಂಗಣ್ಣಿಗೆ ಗುರಿಯಾದದ್ದು ಸತ್ಯ. ಹಾಗೆ ನೋಡಿದರೆ ಸೆನ್ಸಾರ್ ಮಂದಿ ಮತ್ತು ಸಿನೆಮಾದವರ ಶೀತಲ ಸಮರ ನಿನ್ನೆ ಈವತ್ತಿನದಲ್ಲ.  ಸಂಸ್ಕಾರ ಚಿತ್ರಕ್ಕೆ ಪ್ರಮಾಣ ಪತ್ರವನ್ನೇ ನೀಡಲು ಸಾಧ್ಯವಿಲ್ಲ ಎನ್ನುವುದರ ಜೊತೆಗೆ ಮೊನ್ನೆ ಮೊನ್ನೆ ಗಾಳಿಬೀಜ ಎನ್ನುವ ಚಿತ್ರಕ್ಕೂ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಹಾಗೆಯೇ ಕೆಲವು ಸಿನಿಮಾಗಳನ್ನು ಪೂರ್ಣಪ್ರಮಾಣದ ಚಲನಚಿತ್ರ ಎನ್ನಲು ಸಾಧ್ಯವಿಲ್ಲ ಎಂದು ಪ್ರಮಾಣ ಪತ್ರ ನಿರಾಕರಿಸಿದ ಪ್ರಸಂಗಗಳೂ ಇವೆ. ಹಾಗೆ ನೋಡಿದರೆ ಸೆನ್ಸಾರ್ ಮಂದಿ ಒಂದು ಸಿನೆಮಾವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ. ಅದವರ ಕೆಲಸ. ಅವರು ಸಿನಿಮಾ ನೋಡುವ ಹಾಗೆ ನಾವೂ ನೋಡಲಾಗುವುದಿಲ್ಲ. ದಿನಕ್ಕೆರಡು ಸಿನೆಮಾದಿಂದ ನಾಲ್ಕೈದು ಸಿನಿಮಾಗಳವರೆಗೆ ಸಿನಿಮಾ ನೋಡುವ ಅನಿವಾರ್ಯ ಅವರಿಗೆ ಬಂದೊದಗುತ್ತದೆ. ಬೋರ್ ಆದರೆ ಬೇರೆ ಕಡೆ ಗಮನ ಹರಿಸುವುದಾಗಲಿ, ನಿದ್ರೆ ಬಂತೆಂದು ಮಲಗುವುದಾಗಲಿ, ಎದ್ದು ಹೊರಗೆ ಬಂದು ಸ್ವಲ್ಪ ಹೊತ್ತು ಕಾಲ ಹರಣಮಾಡುವುದಾಗಲಿ ಮಾಡುವ ಸ್ವತಂತ್ರ ಅವರಿಗಿಲ್ಲ. ನೋಡಬೇಕು, ನೋಡಲೇ ಬೇಕಷ್ಟೇ. ಪಕ್ಕದಲ್ಲಿ ಸೆನ್ಸಾರ್ ಸ್ಕ್ರಿಪ್ಟ್ ಇಟ್ಟುಕೊಂಡು ಸಿನಿಮಾ ನೋಡುತ್ತಾ ಸ್ಕ್ರಿಪ್ಟ್ ಗಮನಿಸುತ್ತಾ ಅಲ್ಲಿರುವುದು ಇಲ್ಲಿರುವುದು ಎರಡೂ ಸರಿ ಇದೆಯಾ ಎಂದು ಪರೀಕ್ಷೆ ಮಾಡುತ್ತಾ ನೋಡಾದ ಮೇಲೆ ಅದರ ಬಗೆಗೆ ಚರ್ಚೆ ಮಾಡಿ ಸೆನ್ಸಾರ್ ಮಂಡಳಿಯ ನೀತಿ ನಿಯಮಗಳ ಒಳಗೆ ಸಿನಿಮಾ ಇದೆಯೇ ಎಂಬುದನ್ನು ತುಲನೆ ಮಾಡಿ ಆನಂತರವೇ ಸೆನ್ಸಾರ್ ಪ್ರಮಾಣ ಪತ್ರ ನೀಡುತ್ತಾರೆ. ಇದು ಕಷ್ಟದ ಯಾತನಮಯ ಕೆಲಸವಲ್ಲದೇ ಮತ್ತೇನು..? ಸೆನ್ಸಾರ್ ಮಂಡಳಿಯವರಿಗೆ ಆಯ್ಕೆಗಳಿಲ್ಲ. ಈ ಸಿನಿಮಾ ಬೇಡ ಅನಿಸುತ್ತೆ, ಇದು ಚಂದ ಅನಿಸುತ್ತೆ ಎನ್ನುವ ಮಾತೆ ಇಲ್ಲ, ಎಲ್ಲವನ್ನು ನೋಡಬೇಕು.
ನನ್ನದೇ ಸಿನಿಮಾದ ಸೆನ್ಸಾರ್ ಸಮಯದಲ್ಲಿ ನನಗೆ ಅಂತಹ ಕೆಟ್ಟ ಅನುಭವವೇನೂ ಆಗಲಿಲ್ಲ. ಸಿನೆಮದಲ್ಲಿದ್ದ ಅಷ್ಟೂ ಕ್ರೌರ್ಯ, ರಕ್ತ, ಹಿಂಸೆಗೆ ಮೊದಲೇ ನನಗ್ಯಾವ ಪ್ರಮಾಣ ಪತ್ರ ಬರುತ್ತದೆ ಎಂಬುದನ್ನು ನಾನು ಊಹಿಸಿದ್ದೆ. ಆದರೂ ಅದೆಲ್ಲಿ ಅಲ್ಲಿ  ಮಂಕು ಮಾಡಿ, ಇಲ್ಲಿ ಕತ್ತರಿಸಿ ಎನ್ನುತ್ತಾರೋ ಎನ್ನುವ ಭಯ ನಮ್ಮದಾಗಿತ್ತು. ಏಕೆಂದರೆ ನಮ್ಮ ಸಿನಿಮಾದ ಬಹುತೇಕ ದೃಶ್ಯಗಳಲ್ಲಿ ರಕ್ತವಿತ್ತು. ಹಿಂಸೆಯಿತ್ತು. ಅದನ್ನೆಲ್ಲಾ ಸುಮ್ಮನೆ ಬ್ಲರ್ ಮಾಡಿ ಎಂದಿದ್ದರೂ ನಮ್ಮ ಸಿನಿಮಾದ ಬಹುತೇಕ ಕಡೆಯಲ್ಲಿ ಬರೀ ಮಂಕು ಮಂಕು ಕಾಣಿಸುತ್ತಿತ್ತೇನೋ? ಆದರೆ ಸೆನ್ಸಾರ್ ಅಧಿಕಾರಿ ಅದ್ಯಾವುದನ್ನೂ ಹೇಳಲಿಲ್ಲ. ಬದಲಿಗೆ, ನಿಮ್ಮ ಸಿನಿಮಾ ಚೆನ್ನಾಗಿದೆ, ಸಿನಿಮಾದ ಒಟ್ಟಾರೆ ಭಾವ ಕೆಡಬಾರದು ಎಂದು ನಾನು ನಿಮಗೆ ರಕ್ತವಿದ್ದ ಕಡೆಗೆ ಬ್ಲರ್ ಮಾಡಲು ಹೇಳುತ್ತಿಲ್ಲ, ಆದರೆ ಸ್ವಾಮೀಜಿ ಮತ್ತು ಆ ಹೆಂಗಸಿನ ದೃಶ್ಯವನ್ನು ಕತ್ತರಿಸಲೇಬೇಕು ಎಂದಿದ್ದರು.
ಇಲ್ಲಿ ಮತ್ತೊಂದು ವಿಷಯವೂ ಇದೆ. ಕನ್ನಡ ಭಾಷೆಯ ಎಷ್ಟೋ ಬೈಗುಳಗಳು ಅಲ್ಲಿನವರಿಗೆ ಆ ಸಮಯದಲ್ಲಿ ನೋಡುವವರಿಗೆ ಗೊತ್ತೇ ಇರುವುದಿಲ್ಲ. ಉದಾಹರಣೆಗೆ ಕನ್ನಡದ ಒಂದು ಸಿನೆಮವಿದೆ. ಅದರಲ್ಲಿ ಒಂದು ಶಬ್ದ ಬಂದು ಹೋಗುತ್ತದೆ. ಮಾತಿನ ಭರದಲ್ಲಿ ಬಂದು ಹೋಗುವ ಆ ಅಶ್ಲೀಲ ಪದ ಬಹುತೇಕರಿಗೆ ಗೊತ್ತೇ ಇಲ್ಲದ ಕಾರಣ ಈವತ್ತಿಗೂ ಸಿನಿಮಾದ ಆ ದೃಶ್ಯದಲ್ಲಿ ಆ ಶಬ್ದ ಹಾಗೆಯೇ ಉಳಿದುಕೊಂಡಿದೆ. ಹಾಗೆಯೇ ಎರಡ್ಮೂರು ವರ್ಷದ ಹಿಂದೆ ಬಿಡುಗಡೆಯಾದ ರಿಮೇಕ್ ಚಿತ್ರದಲ್ಲಿ ಮಾತೀನ ಭರದಲ್ಲಿ ಬರುವ ಸಂಭಾಷಣೆಯಲ್ಲಿ ಮತ್ತೊಂದು ಅಶ್ಲೀಲ[?] ಶಬ್ದ ನುಸುಳಿದೆ. ಆದರೆ ಅದೂ ಕೂಡ ಸೆನ್ಸಾರ್ ನಿಂದ ತಪ್ಪಿಸಿಕೊಳ್ಳಲು ಕಾರಣ ಆ ಶಬ್ದ ಬಳಕೆ ಸೆನ್ಸಾರ್ ಮಂಡಳಿಯ ನೋಡುಗರಿಗೆ ಗೊತ್ತಿಲ್ಲದೇ ಇದ್ದದ್ದು. ಹೀಗೆ ಹಲವಾರು ಚಿತ್ರಗಳಲ್ಲಿ ಈ ರೀತಿ ಆದ ಅನುಭವವಿದೆ.
ಹಾಗೆಯೇ ಇಲ್ಲಿ ಸೆನ್ಸಾರ್ ಮಂಡಳಿ ನೋಡಿ, ಪರೀಷ್ಕೃತ ವೀಕ್ಷಣೆಗೆ ಬಾಂಬೆಗೆ ಹೋದರೆ ಅಲ್ಲಿ ಕನ್ನಡ ಪದಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಮೊನ್ನೆ ಮೊನ್ನೆ ಒಂದು ಸಿನೆಮಾಗೆ ಹಾಗೆ ಆಯಿತು. ಇಲ್ಲಿ ವೀಕ್ಷಿಸಿ ಸುಮಾರಷ್ಟು ಕತ್ತರಿ ಪ್ರಯೋಗ ಹೇಳಿದಾಗ ಆ ಸಿನೆಮಾವನ್ನು ಟ್ರಿಬ್ಯೂನಲ್ ಗೆ ಕಳುಹಿಸಲಾಯಿತು. ಅಲ್ಲಿ ಬಿಚ್, ಡರ್ಟಿ ಬಿಚ್, ಬಾಸ್ಟರ್ಡ್ ಪದಗಳನ್ನು ಮ್ಯೂಟ್ ಮಾಡಲಾಯಿತು. ಕನ್ನಡದ ದ್ವಂದ್ವಾರ್ಥ, ಅಶ್ಲೀಲ ಎನಿಸುವ ಪದಗಳು ಹಾಗೆಯೇ ಉಳಿದುಕೊಂಡಿದ್ದವು. ಹಾಗೆಯೇ ಟ್ರಿಬ್ಯೂನಲ್ ಮತ್ತು ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಸೆನ್ಸಾರ್ ವೀಕ್ಷಣೆಯಲ್ಲಿಯೂ ಸಾಕಷ್ಟು ವ್ಯತ್ಯಾಸಗಳಾಗುತ್ತವೆ. ಚುಂಬನ, ಒಂದಷ್ಟು ತೆರೆದೆದೆ ಮುಂತಾದ ಬಿಚ್ಚಾಟಗಳಿಗೆ ಹಿಂದೆ ಮುಂದೆ ನೋಡದೆ ನಮ್ಮಲ್ಲಿ ಎ ಕೊಟ್ಟರೆ, ಅದೇ ಟ್ರಿಬ್ಯೂನಲ್ ನಲ್ಲಿ ಯುಎ ಆಗುತ್ತದೆ. ಅದಕ್ಕೆ ಕಾರಣವಿದೆ. ಅಲ್ಲಿ ಅಂದರೆ ಬಾಲಿವುಡ್ ನಲ್ಲಿ ಚುಂಬನ ಹೆಚ್ಚು ಕಡಿಮೆ ಸರ್ವೇ ಸಾದಾರಣ. ವಿ ವಾಹಿನಿಯ ಹಲವಾರು ಧಾರಾವಾಹಿಗಳಲ್ಲೇ ಚುಂಬನದ ದೃಶ್ಯಗಳು ಸರ್ವೇ ಸಾದಾರಣ ಆದ್ದರಿಂದ ಅಲ್ಲಿ ಅದಕ್ಕೆ ಸ್ವಲ್ಪ ಮಟ್ಟದ ರಿಯಾಯತಿ ಸಿಕ್ಕಿ ಬಿಡುತ್ತದೆ. ಆದರೆ ನಮ್ಮಲ್ಲಿ ಅದಕ್ಕೆ ಎ ಠಸ್ಸೆ ಬೀಳುತ್ತದೆ.
ಆದರೆ ಇದೆಲ್ಲದಕ್ಕೂ ಕಿರಿ ಕಿರಿ ಎನಿಸುವುದು ಧೂಮ್ರಪಾನ ಮತ್ತು ಮಧ್ಯಪಾನದ ಸಂದೇಶ. ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ನಿರ್ಮಾಪಕ ಬಿಟ್ಟಿಯಾಗಿ ಸರ್ಕಾರದ ಸಂದೇಶವನ್ನು ಪ್ರಚಾರ ಮಾಡಬೇಕಾದದ್ದು ಯಾವ ನ್ಯಾಯ? ಇಷ್ಟಕ್ಕೂ ಸರ್ಕಾರಕ್ಕೆ ಅದರದ್ದೇ ಆದ ಫಂಡ್ಸ್ ಇದೆ. ಪ್ರತಿಯೊಂದು ಸಾರ್ವಜನಿಕ ಹಿತಾಸಕ್ತಿಯ ಸಂದೇಶಕ್ಕಾಗಿ ಕೋಟಿ ಕೋಟಿ ಖರ್ಚು ಮಾಡುವ ಸರ್ಕಾರ ಧೂಮ್ರಪಾನಕ್ಕೆ ಮಾತ್ರ ಸಿನೆಮಾದವರ ತಲೆ ತಿನ್ನುತ್ತದೆ. ಅತ್ಲಾಗೆ ಧೂಮಪಾನದಿಂದ ಕ್ಯಾನ್ಸರ್ ಬಂದು ಸತ್ತೆ ಹೋಗುತ್ತೀರಿ ಎನ್ನುವ ಸರ್ಕಾರ ಮಾತ್ರ ಅದನ್ನು ಬ್ಯಾನ್ ಮಾಡುವುದಿಲ್ಲ. ಬದಲಿಗೆ ಅದಿರಲಿ, ಅದರ ಹಣವೂ ಬರುತಿರಲಿ, ನೀವು ಮಾತ್ರ ಸಿನಿಮಾದಲ್ಲಿ ತೋರಿಸಬೇಡಿ, ತೋರಿಸಿದರೆ ಅದರ ಕೆಳಗೆ ಸಂದೇಶ ಬರಲಿ ಎನ್ನುತ್ತದೆ ಸರ್ಕಾರ. ಆದರೆ ನಮ್ಮ ಸಿನೆಮಾಗಳಲ್ಲಿ ಅದೊಂದೇ ಇರುವುದಿಲ್ಲವಲ್ಲ. ಕತೆಗೆ ಬೇಕಾದಂತೆ ಅತ್ಯಾಚಾರ ಇರುತ್ತದೆ, ಕೊಲೆ ಇರುತ್ತದೆ..ಮೋಸ ದಗಾ ವಂಚನೆ ಇರುತ್ತದೆ. ಆದರೆ ಸರ್ಕಾರ ಅದ್ಯಾವುದನ್ನು ಕೇರ್ ಮಾಡುವುದಿಲ್ಲ. ಅತ್ಯಾಚಾರ, ಕೊಲೆ ದೃಶ್ಯಗಳು ಬಂದಾಗ ಅದರ ಬಗ್ಗೆ ಏನೂ ಹೇಳುವುದಿಲ್ಲ, ಒಂದಷ್ಟು ಎಲ್ಲಿಯಾದರೂ ದೇಹಭಾಗ ಕಾಣಿಸಿದರೆ, ರಕ್ತ ಕಾಣಿಸಿದರೆ ಮಂಕು ಮಾಡಿ ಎನ್ನುತ್ತದೆ, ಆದರೆ ಸಂದೇಶ ಹಾಕುವ ಗೊಡವೆ ಇಲ್ಲ..ಆದರೆ ಧೂಮಪಾನ.. ಅದಕ್ಕಂತೂ ಹಾಕಲೇಬೇಕು. ಮೊನ್ನೆ ದುನಿಯಾ ಸೂರಿ ನಿರ್ದೇಶನದ ಕಡ್ಡಿಪುಡಿ ಚಿತ್ರದಲ್ಲಿ ಮೂರು ಜನ ಕಿರಾತಕರು ಒಂದು ಹುಡುಗಿಯನ್ನು ರೇಪ್ ಮಾಡಿ ಸಾಯಿಸುವ ದೃಶ್ಯವಿತ್ತು. ಅದರಲ್ಲಿ ಚೆನ್ನಾಗಿ ಕುಡಿದು ಸಿಗರೇಟು ಸೇದುತ್ತಾ ಅತ್ಯಾಚಾರ ಮಾಡುತ್ತಾರೆ, ಕೊಲೆ ಮಾಡುತ್ತಾರೆ, ಅಷ್ಟೂ ದೃಶ್ಯದಲ್ಲಿ ತೆರೆಯ ಮೇಲೆ ಧೂಮಪಾನ, ಮದ್ಯಪಾನ ಮಾಡಬೇಡಿ ಅರ್ಥದ ಸಂದೇಶ ಬರುತ್ತಲೇ ಇರುತ್ತದೆ. ಬೇಕಿದ್ದರೆ ರೇಪ್, ಕೊಲೆ ಮಾಡಿ ಆದರೆ ಧೂಮಪಾನ, ಮದ್ಯಪಾನ ಮಾತ್ರ ಮಾಡಬೇಡಿ ಎನ್ನುವ ಅರ್ಥ ಕೊಡುವುದಿಲ್ಲವೇ ಇದು..?
ಏನೇ ಆಗಲಿ. ಸಿನಿಮಾಕ್ಕೆ ಸೆನ್ಸಾರ್ ಬೇಕು. ಇಲ್ಲವಾದಲ್ಲಿ ನಮ್ಮಲ್ಲಿನ ಕೆಲವು ಕಿರಾತಕರು ದೃಶ್ಯಮಾಧ್ಯಮವನ್ನು ವಿಕೃತ, ಹಿಂಸೆ, ಅಶ್ಲೀಲ ಗಳಿಗೆ ಬಳಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಹಾಗಂತ ಸಿನಿಮಾದ ಒಟ್ಟಾರೆ ಭಾವವನ್ನು ಗಮನಿಸದೆ ಸುಖಾಸುಮ್ಮನೆ ಕತ್ತರಿ ಪ್ರಯೋಗ ಮಾಡುವುದರ ಬಗ್ಗೆ ಸೆನ್ಸಾರ್ ಮಂಡಳಿ ಯೋಚಿಸಿದರೆ ಒಳ್ಳೆಯದು.

Monday, March 21, 2016

ಕೇಳುವುದಕ್ಕೂ ನೋಡುವುದಕ್ಕೂ ವ್ಯತ್ಯಾಸವಿದೆ...


ಇದೊಂದು ಘಟನೆ ಕೇಳಿ. ವಿಷ್ಣುವರ್ಧನ್ ಅಭಿನಯದ ಸುಪ್ರಭಾತ ಚಿತ್ರ ಬಿಡುಗಡೆಯಾದಾಗ ನಾನಿನ್ ನು ಚಿಕ್ಕವನು. ಹಾಗಾಗಿ ಆ ಸಿನೆಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೋಡುವ ಸಾಧ್ಯತೆ ಇರಲೇ ಇಲ್ಲ. ಆದರೆ ವಿಷ್ಣುವರ್ಧನ್ ಚಿತ್ರಗಳೆಂದರೆ ನನಗಂತೂ ಹುಚ್ಚು. ಆದರೆ ನೋಡುವುದೆಲ್ಲಿ..? ನಮ್ಮೂರು ಪಕ್ಕದ ನಂಜನಗೂಡಿಗೆ ಹೋಗಿ ನೋಡಿಬರುವುದು ಸಾಧ್ಯವಿರಲಿಲ್ಲ. ಆದರೆ ಆವಾಗ ಟೇಪ್ ರೆಕಾರ್ಡರ್ ಇತ್ತಲ್ಲಾ, ಸ್ಟೋರಿ ಕ್ಯಾಸೆಟ್ ತಂದು ಅದನ್ನು ಹಾಕಿಕೊಂಡು ಕೇಳುತ್ತಾ ದೃಶ್ಯಗಳನ್ನೂ ಫೈಟ್ ಗಳನ್ನೂ ತುಣುಕು ಹಾಡನ್ನು ಎಂಜಾಯ್ ಮಾಡುತ್ತಿದ್ದೆವು. ರೇಡಿಯೋ ದಲ್ಲಿ ಪ್ರತಿಭಾನುವಾರ ಮದ್ಯಾಹ್ನ ಸಿನಿಮಾ ಕತೆ ಪ್ರಸಾರ ಮಾಡಿದರೂ ನಮಗಿಷ್ಟದ ಸಿನಿಮಾಕ್ಕೆ ಟೇಪ್ ರೆಕಾರ್ಡರ್ ಒಂದೇ ಮಾರ್ಗವಾಗಿತ್ತು. ಆವಾಗ ಸುಪ್ರಭಾತ ಚಿತ್ರದ ಸ್ಟೋರಿಯನ್ನು ತುಂಬಾ ಸಲ ಕೇಳಿ ಅದರ ಕತೆಯನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದೆವು. ಎರಡು ಚಿಲ್ಲರೆ ಘಂಟೆಗ;ಅ ಸಿನಿಮಾವನ್ನು ಒಂದು ಘಂಟೆಗೆ ಇಳಿಸುವುದು ಸುಲಭದ ಮಾತಲ್ಲವಾದರೂ ಅದಕ್ಕೆ ಮೊದಲೆಲ್ಲಾ ಅವಕಾಶ ಇತ್ತು. ಹಾಡುಗಳ ಲೆಕ್ಕದಲ್ಲಿ ಅರ್ಧ ಘಂಟೆ ಎಗರಿಹೋಗುತ್ತಿತ್ತು. ಇನ್ನು ಫೈಟ್ ಲೆಕ್ಕದಲ್ಲಿ ಐದಾರು ನಿಮಿಷ ಕಾಣೆಯಾಗುತ್ತಿತ್ತು. ಉಳಿದ ಬಿಲ್ಡ್ ಅಪ್ ಮ್ಯೂಸಿಕ್ ಬಿಲ್ಡ್ ಅಪ್ ಅದೂ ಇದೂ ಸೇರಿ ಉಳಿದ ನಿಮಿಷಗಳು ಸಂಕಲಿತವಾಗಿ ಕೇವಲ ಒಂದು ಘಂಟೆ ಸ್ಟೋರಿ ಸಿಗುತ್ತಿತ್ತು.
ನನಗೆ ಸುಪ್ರಭಾತ ಚಿತ್ರದ ಸ್ಟೋರಿ ಕೇಳಿದಾಗ ಅದೊಂದು ವಿಷಾದದೊಂದಿಗೆ ಕೊನೆಯಾಗುವ ಚಿತ್ರ ಎಂದೇ ಎನಿಸಿತ್ತು. ಸುಹಾಸಿನಿಯೊಂದಿಗೆ ಪ್ರೀತಿಯಾಗಿ ಕೊನೆಯಲ್ಲಿ ಆಕೆಗೆ ಮಗು ಇರುವ ವಿಷಯ ಗೊತ್ತಾಗಿ ಆ ಮಗುವನ್ನು ಚಿತ್ರದ ನಾಯಕ ತಂದು ನಾಯಕಿಗೆ ಒಪ್ಪಿಸಿ, ನಿನ್ನ ಮಗಳನನ್ನು ನಿನಗೆ ಸೇರಿಸಿದ್ದೀನಿ, ಯಾವಾಗಲಾದರೂ ನಿನ್ನ ಮಗಳಿಗೆ ಅಪ್ಪ ಬೇಕು ಎನಿಸಿದರೆ ಈ ಬೆಟ್ಟದ ಮೇಲಿರುವ ಪೆಟ್ರೋಲ್ ಬಂಕ್ ತೋರಿಸು ಎನ್ನುತ್ತಾನೆ. ಆಗ ಮ್ಯೂಸಿಕ್ ಬರುತ್ತದೆ. ಅದೇ ಮ್ಯೂಸಿಕ್ ನೊಂದಿಗೆ ಚಿತ್ರ ಕೊನೆಯಾಗುತ್ತಿದೆ. ಬರೀ ಕೇಳಿಸಿಕೊಳ್ಳುವವ ಏನು ಅರ್ಥ ಮಾಡಿಕೊಳ್ಳಬೇಕು ಹೇಳಿ. ನಾನರ್ಥ ಮಾಡಿಕೊಂಡದ್ದು ಅದನ್ನೇ. ನಾಯಕಿ ಹಾಗೆ ಹೇಳಿ, ಮಗುವನ್ನು ಕರೆದುಕೊಂಡು ಹೋಗಿಬಿಡುತ್ತಾಳೆ. ವಿಷ್ಣುವರ್ಧನ್ ತ್ಯಾಗಮಯಿಯಾಗಿ ನೋಡುತ್ತಾ ನಿಂತುಕೊಳ್ಳಬಹುದು ಎಂಬುದಾಗಿ. ಯಾಕೆಂದರೆ ಆವಾಗೆಲ್ಲಾ ಚಿತ್ರದ ನಾಯಕ ತ್ಯಾಗಕ್ಕೆ, ಅದರಲ್ಲೂ ಪ್ರೀತಿಯನ್ನು ತ್ಯಜಿಸುವ ಕಾಯಕಕ್ಕೆ ಔರ್ದಾಯಕ್ಕೆ ಹೆಸರುವಾಸಿಯಲ್ಲವೇ..? ಆದರೆ ಅದೆಲ್ಲಾ ಕಳೆದು ನಾನು ಕಾಲೇಜಿಗೆ ಹೋಗುವ ಸಮಯ ಬಂದಾಗ ಮತ್ತೊಮ್ಮೆ ಸುಪ್ರಭಾತ ಚಿತ್ರಮಂದಿರಕ್ಕೆ ಬಂದಾಗ ಅದನ್ನು ನೋಡಿದೆ. ಆದರೆ ಅಲ್ಲಿನ ಕ್ಲೈಮಾಕ್ಸ್ ಬೇರೆ. ಅದು ಸುಖಾಂತ್ಯ. ಅಷ್ಟು ಡೈಲಾಗ್ ಮುಗಿದ ಮೇಲೆ ಕಾರ್ ಹತ್ತಿರಕ್ಕೆ ಹೋಗುವ ಸುಹಾಸಿನಿ, ಆನಂತರ ಮನಸ್ಸು ಬದಲಿಸಿ ಓಡಿಬಂದು ಅಪ್ಪಿಕೊಳ್ಳುತ್ತಾಳೆ. ಇಬ್ಬರು ಖುಷಿಯಾಗುತ್ತಾರೆ. ಆದರೆ ಕೇಳುವಿಕೆ ಇಡೀ ಚಿತ್ರದ ಕತೆಯನ್ನೇ ನನ್ನ ಪಾಲಿಗೆ ಉಲ್ಟಾ ಮಾಡಿದ್ದಂತೂ ಸತ್ಯ.
ಇದೆಲ್ಲಾ ಯಾಕೆ ಹೇಳಿದೆನೆಂದರೆ ಸಿನಿಮಾ ಎಂಬುದು ದೃಶ್ಯ ಮಾಧ್ಯಮ. ಅದನ್ನು ನೋಡುತ್ತಲೇ ಕಣ್ತುಂಬಿಕೊಳ್ಳಬೇಕು. ಅದರಲ್ಲೋ ದೊಡ್ಡ ಪರದೆಯ ಮೇಲೆ ನೋಡುತ್ತಾ ನೋಡುತ್ತಾ ಅದಕ್ಕೆ ನಮ್ಮನ್ನು ನಾವು ಅಂಟಿಸಿಕೊಂಡಾಗಲೇ ಮಜಾ. ಅದು ಬಿಟ್ಟು ಟಿವಿಯಲ್ಲಿ ಲ್ಯಾಪ್ ಟಾಪ್ ನಲ್ಲಿ ಮೊಬೈಲ್ ನಲ್ಲಿ ಸಿನಿಮಾ ನೋಡುವುದು ಏನು ಮಜಾ. ಜೊತೆಗೆ ಸಿನಿಮಾ ನಮ್ಮ ಕೈಯಲ್ಲಿರಬಾರದು. ನಮಗೆ ಬೇರೆಯ ಆಯ್ಕೆಗಳಿರಬಾರದು. ದೃಶ್ಯ ಚೆನ್ನಾಗಿರಲಿ, ಬೋರ್ ಆಗುತ್ತಿರಲಿ ನೋಡೇ ತೀರಬೇಕು ಎನ್ನುವ ಹಾಗಿರಬೇಕು. ಆದ್ರೆ ಈವತ್ತು ನಾವೆಲ್ಲಾ ಟಿವಿಯಲ್ಲಿಯೇ ಸಿನಿಮಾ ನೋಡುತ್ತೇವೆ, ಸ್ವಲ್ಪ ಬೋರ್ ಎನಿಸಿದರೂ ಅದನ್ನು ಬದಲಿಸುತ್ತೇವೆ, ಅಥವಾ ಬೇರೆ ಸಿನಿಮಾ ಹಾಕುತ್ತೇವೆ, ಮುಂದಕ್ಕೆ ಓಡಿಸುತ್ತೇವೆ. ಒಟ್ಟಿನಲ್ಲಿ ಸಿನಿಮಾವನ್ನು ನಮ್ಮ ಕೈಗೊಂಬೆ ಮಾಡಿಕೊಳ್ಳುತ್ತೇವೆ. ಲಾಕ್ ಅಪ್ ಡೆತ್ ಚಿತ್ರದ ಒಂದು ಚೇಸ್, ಪೋಲಿಸ್ ಸ್ಟೋರಿ ಯಾ "ಚಂದನೆಯ ಬೈಗುಳ", ಪ್ರೇಮಲೋಕದ ಹಾಡುಗಳು, .. ಹೀಗೆ ಇಂತಹ ಬಿಡಿಬಿಡಿ ಸನ್ನಿವೇಶಗಳಿಗಾಗಿಯೇ ಸಿನಿಮಾವನ್ನು  ಹತ್ತಾರು  ಬಾರಿ ನೋಡಿದ್ದಿದೆ. ಇಡೀ ಸಿನಿಮಾ ಕಣ್ಣಿಗೆ ತುಂಬಿಕೊಳ್ಳುತ್ತಾ ಆ ದೃಶ್ಯ ಬಂದಾಗ ಫುಲ್ ಅಲರ್ಟ್ ಆಗಿ ಕುರ್ಚಿಯ ತುದಿಗೆ ಕುಳಿತು ಅನುಭವಿಸಿದ್ದಿದೆ. ಆದರೆ ಈವತ್ತು ಇಷ್ಟವಾದ ಹಾಡನ್ನು ಮೊಬೈಲ್ ಗೆ ತುಂಬಿಕೊಳ್ಳುತ್ತೇವೆ, ದೃಶ್ಯವೂ ಮೊಬೈಲ್ ನಲ್ಲಿರುತ್ತದೆ. ಅಲ್ಲೇ ನೋಡುತ್ತೇವೆ, ಅಲ್ಲೇ ಡಿಲೀಟ್ ಮಾಡುತ್ತೇವೆ.
ಮನೆಗಳಲ್ಲಿ ತರಕಾರಿ ಕತ್ತರಿಸುತ್ತಾ ತಲೆಯೆತ್ತದೆಯೇ ಧಾರಾವಾಹಿ ನೋಡುತ್ತೇವೆ. ಅಲ್ಲಿ ನೋಡಲೇಬೇಕು ಅನ್ನುವಂತಹದ್ದು ಏನಿಲ್ಲ, ಅದೇ ಮುಖ, ಅದೇ ಘಟನೆ, ಇಬ್ಬರು ಮಾತನಾಡುತ್ತಾ ಮಾತನಾಡುತ್ತಾ ಕುಳಿತರೆ, ನಿಂತರೆ ಅವರ ರಿಯಾಕ್ಷನ್ ಅದುನ್ ಇದೂ ಸೇರಿ ನಿಮಿಷಗಟ್ಟಲೆ ಒಂದೇ ಒಂದೇ ದೃಶ್ಯ ನಡೆಯುತ್ತದೆ. ಹಾಗಾಗಿ ಸುಮ್ಮನೆ ಕೇಳಿಸಿಕೊಂಡರೆ ಸಾಕಷ್ಟೇ. ಅಲ್ಲಿ ನಷ್ಟದ ಮಾತೆ ಇಲ್ಲ. ಆದರೆ ಸಿನಿಮಾ ಹಾಗಲ್ಲ. ಅಲ್ಲಿ ಮಾತು ಬೆಳ್ಳಿ, ಮೌನ ಬಂಗಾರ. ಆದರೆ ಇತ್ತೀಚಿಗೆ ಬಂದ ಕೆಲವು ಸಿನಿಮಾಗಳು ಅದನ್ನು ಸುಳ್ಳು ಮಾಡಿದ್ದು ಸತ್ಯ. ಸಿಂಪಲ್ ಲವ್ ಸ್ಟೋರಿ, ಎದ್ದೇಳು ಮಂಜುನಾಥ ಮುಂತಾದ ಸಿನಿಮಾಗಳನ್ನು ನೋಡಲೆಬೇಕಿಲ್ಲ, ಕೇಳಿಸಿಕೊಂಡರೂ ಸಾಕು. ಏಕೆಂದರೆ ತೆರೆಯ ಮೇಲೆ ಜಾಸ್ತಿ ಆಕ್ಷನ್ ಇರುವುದೇ ಇಲ್ಲವಲ್ಲ. ಮಾತಾಡುತ್ತಾ, ಮಾತಾಡುತ್ತಾ ಕತೆ ಮುಂದುವರೆದರೆ ಮಾತೆ ಸಾಕಲ್ಲವೇ? ಪಂಚಿಂಗ್ ಡೈಲಾಗ್, ಡಬಲ್ ಮೀನಿಂಗ್ ಡೈಲಾಗ್ ಮುಂತಾದವುಗಳನ್ನು ಸಿನಿಮಾದಲ್ಲಿರಿಸಿದರೆ ಸಿನಿಮಾ ನೋಡುವುದಕ್ಕಿಂತ ಕೇಳುವುದೇ ಖುಷಿ ಎನಿಸುತ್ತದೆ. ಆ ಮೂಲಕ ದೃಶ್ಯಮಾಧ್ಯಮದ ಮುಖ್ಯಾಂಶವೆ ನೆಗೆದುಬಿದ್ದುಹೋದ ಹಾಗಾಗುತ್ತದೆ. ಎಲ್ಲವನ್ನು ಹೇಳುವ ಮೂಲಕವೇ ವಿಶದ ಪಡಿಸುವುದಕ್ಕಿಂತ ತೋರಿಸಿದರೆ ಕಣ್ಮುಂದೆ ನಡೆದರೆ ಹೆಚ್ಚು ಕಾಲ ಮನಸ್ಸಲ್ಲಿ ಉಳಿಯುತ್ತವೆ, ಇಲ್ಲವಾದರೆ ಬೇಗೆ ಕಿವಿಗೆ ಬೀಳುತ್ತವೆ, ಹಾಗೆ ಮರೆತೂಹೋಗುತ್ತವೆ.
ನಿರ್ದೇಶಕ ವಿಜಯಾನಂದ್ ಒಂದು ಮಾತು ಹೇಳಿದ್ದರು, ನಾನು ಕತೆಯನ್ನು  ಹೇಳಲಾರೆ, ನೋಡಬಲ್ಲೆ ಎಂದು. ಬಹುಶ ಪ್ರತಿಯೊಬ್ಬ ಚಿತ್ರಕರ್ಮಿ ಇದನ್ನೇ ಪಾಲಿಸಿದರೆ ಸಿನಿಮಾ ನೋಡುವ ಸೊಗಸು ಹೆಚ್ಚುತ್ತದೆ.  ಅಲ್ಲವೇ?