Sunday, April 3, 2016

ಅಂದರ್ ಕಿ ಬಾತ್ ಅಲಗ್ ಹೈ ಭಾಯಿ...

ಆ ಸಿನಿಮಾದ ಹೆಸರು ಹೋಗಿ ಬಾ ಮಗಳೇ. ಸಿನಿಮಾದ ಹೆಸರೇ ಹಾಗಿರುವುದರಿಂದ ಒಬ್ಬ ಪ್ರೇಕ್ಷಕನಾಗಿ ನಾನು ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಹೇಳಿ. ಸಿನಿಮಾ ಹೋಗುವ ಮುನ್ನ, ಪೋಸ್ಟರ್ ನೋಡಿ ನಾವುಗಳು ನಮ್ಮ ನಮ್ಮ ತಲೆಗೆ ಬುದ್ದಿ ಕೊಟ್ಟೆ ಕೊಡುತ್ತೇವೆ. ಪೋಸ್ಟರ್, ಶೀರ್ಷಿಕೆ ಹುಟ್ಟು ಹಾಕುವ ನಿರೀಕ್ಷೆ ಗಳಿಗೆ ನೋಡಿದಂದಿನಿಂದ ಚಿತ್ರಮಂದಿರದ ಒಳಗೆ ಕುಳಿತು ಸಿನಿಮಾ ಶುರುವಾಗುವವರೆಗೂ ಆ ಸಿನಿಮಾದ ಮೇಲೆ ಅದರ ಕತೆಯ ಮೇಲೇ ನಮ್ಮದೊಂದು ಅಂದಾಜು ಇದ್ದೇ ಇರುತ್ತದೆ. ಹಾಗಾಗಿ ಹೋಗಿ ಬಾ ಮಗಳೇ ಎಂಬುದು ಒಂದು ಕೌಟುಂಬಿಕ ಚಿತ್ರವಾಗಿರುತ್ತದೆ, ಜೊತೆಗೆ ಸಿನಿಮಾದಲ್ಲಿ ತಂದೆ ತಾಯಿ ಮಗಳು ಮಾಡುವೆ ಮುಂತಾದ ಸೆಂಟಿಮೆಂಟ್ ಇರುತ್ತದೆ ಎಂದುಕೊಂಡಿದ್ದೆ. ಸಿನಿಮಮಂದಿರದ ಒಳಗಿದ್ದ ಅನೇಕ ಮಂದಿಯೂ ಹಾಗೆಯೇ ಅಂದುಕೊಂಡಿದ್ದರೆನೋ? ಆದರೆ ಸಿನಿಮಾ ಶುರುವಾಯಿತು ನೋಡಿ, ಇಡೀ ಚಿತ್ರಣವೇ ಬದಲಾಯಿತು. ಅದೊಂದು ಶೃಂಗಾರಮಯ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ರಿವೆಂಜ್ ಇರುವ ಕತೆ. ಗೆಳೆಯ ಮತ್ತವನ ತಂಗಿಯನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳಲು ನಾಯಕ ಹಠ ತೊಡುತ್ತಾನೆ. ಮದುವೆಯಾದ ಮೊದಲ ರಾತ್ರಿ ನನ್ನದೊಂದು ಗುರಿ ಇದೆ, ಗುರಿ ತಲುಪುವವರೆಗೂ ಇದೆಲ್ಲಾ ಬೇಡ ಎನ್ನುತ್ತಾನೆ, ಅವಳು ಸ್ನಾನದ ಮನೆಗೆ ಹೋಗಿ ತಲೆತುಂಬಾ ತಣ್ಣೀರು ಸುರಿದುಕೊಳ್ಳುತ್ತಾಳೆ. ಇವನು ನೆಲಮಾಳಿಗೆಗೆ ಹೋಗಿ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುತ್ತಾನೆ. ಆನಂತರ ಬಾಕ್ಸಿಂಗ್ ಆಡಿ ಮೂವರನ್ನು ಕೊಲ್ಲುತ್ತಾನೆ, ಗುರಿ ತೀರಿತು, ನಡಿ ಹನಿಮೂನಿಗೆ ಎಂದು ಕರೆದುಕೊಂಡು ಹೋಗುತ್ತಾನೆ, ಅಲ್ಲೊಬ್ಬ ಪರಿಚಯವಾಗಿ ಅವಳ ಹಿಂದೆ ಬೀಳುತ್ತಾನೆ, ಫ್ರೆಂಡ್ ಆಗಿ, ನಾಯಕನನ್ನು ಫ್ರೆಂಡ್ ಮಾಡಿಕೊಂಡು ಸಮಯ ಸಾಧಿಸಿ ನಾಯಕನನ್ನು ಕೊಲ್ಲಲು ಸುಫಾರಿ ಹಂತಕನಿಗೆ ಡೀಲ್ ಕೊಡುತ್ತಾನೆ. ಒಂದು ಹಾಡಿನ ನಂತರ ಇಬ್ಬರೂ ಸೇರಿ ಅವನನ್ನು ಕೊಲ್ಲುತ್ತಾರೆ. ಆನಂತರ ಅಪಘಾತದಲ್ಲಿ ಗಾಯಗೊಂಡಿದ್ದ ಸುಫಾರಿ ಹಂತಕನನ್ನು ಕಾಪಾಡುತ್ತಾಳೆ ನಾಯಕಿ, ಅವನನ್ನು ಮನೆಗೆ ಕರೆತಂದು ಸುಶ್ರೂಷೆ ಮಾಡುತ್ತಾಳೆ, ಅಲ್ಲಿ ಅವನಿಗೆ ಅವಳ ಮೇಲೆ ಪ್ರೀತಿ ಹುಟ್ಟುತ್ತದೆ, ನಾಯಕಿಯೂ ಮನಸೋತು ತನ್ನ ಗಂಡನನ್ನು ಕೊಂದವನನ್ನು ಕೊಲ್ಲು, ಆಮೇಲೆ ಎಲ್ಲಾದರೂ ಓಡಿ ಹೋಗೋಣ ಎಂದಾಗ ಓಕೇ ಎಂದವನು ಸುಫಾರಿ ಕೊಟ್ಟವನನ್ನ್ನು ಫಿನಿಶ್ ಮಾಡುತ್ತಾನೆ. ಫಿನಿಶ್ ಮಾಡಿ ಮನೆಗೆ ಬಂದರೆ, ನಾಯಕಿ ಅವನನ್ನು ಕೊಲ್ಲುತ್ತಾಳೆ.
ಈಗ ಸಂಪೂರ್ಣ ಕತೆ ಹೇಳಿದ್ದೇನೆ, ಹೇಳಿ ಇದಕ್ಕೆ ಹೋಗಿ ಬಾ ಮಗಳೇ ಶೀರ್ಷಿಕೆಯನ್ನು ಒಪ್ಪಿಕೊಳ್ಳುವುದು ಹೇಗೆ...? ಇಲ್ಲಿ ಮಗಳಿಗೂ ಕತೆಗೂ ಸಂಬಂಧವೆ ಇಲ್ಲ ಎನಿಸುವುದಿಲ್ಲವೇ? 
ನಮ್ಮಲ್ಲಿ ಪ್ರೇಕ್ಷಕರನ್ನು ವಿಭಾಗಿಸುವುದು ಕಡಿಮೆ. ಹಾಲಿವುಡ್ ನಲ್ಲಿ ಬಾಲಿವುಡ್ ನಲ್ಲಿ ಪ್ರೇಕ್ಷಕರಿಗಾಗಿಯೇ ಸಿನಿಮಾಗಳು ನಿರ್ಮಾಣವಾಗುತ್ತವೆ. ಅಲ್ಲಿ ವಿಭಾಗಗಳಿಗೆ ಬೆಲೆ ಇದೆ. ನಮ್ಮಲ್ಲಿ ಅದಿಲ್ಲ. ಮಲ್ಟಿಪ್ಲೆಕ್ಷ್  ವೀಕ್ಷಕರಿಗೆ, ಥ್ರಿಲ್ಲರ್ ಪ್ರಿಯರಿಗೆ, ಆಕ್ಷನ್ ಪ್ರಿಯರಿಗೆ ಆಯಾ ಪ್ರೇಕ್ಷಕರನ್ನು ತಲೆಯಲ್ಲಿಟ್ಟುಕೊಂಡು ಸಿನಿಮಾ ಬರುತ್ತದೆ. ಅದರ ಪೋಸ್ಟರ್, ಟ್ರೈಲರ್ ಗಳು ಶೀರ್ಷಿಕೆಗಳು ಆ ಮೂಡ್ ಕಟ್ಟಿಕೊಡುತ್ತವೆ. ಪ್ರೇಕ್ಷಕರನ್ನು ಆ ಚಿತ್ರಕ್ಕೆ ತಯಾರು ಮಾಡುತ್ತವೆ. ಹಾಲಿವುಡ್ ನಲ್ಲಿ ಅದನ್ನು ಪಕ್ಕಾ ಮಾಡುತ್ತಾರೆ, ಅವರ ಟ್ರೈಲರ್ ನಲ್ಲೆ ಅದ್ಯಾವ ಕ್ಯಾಟೆಗರಿ ಚಿತ್ರ ಎಂಬುದು ಗೊತ್ತಾಗಿ ಬಿಡುತ್ತದೆ. ಅವರ ಸಿನಿಮಾ ನಿರ್ಮಾಪಕರ ಲಾಂಛನ ಬರುವಾಗಲೇ ಹಿನ್ನೆಲೆ ಸಂಗೀತ ಅವರ ಸಿನಿಮಾದ ಮೂಡ್ ಅನ್ನು ವಿಶದ ಪಡಿಸುತ್ತದೆ. ಅಲ್ಲಿ ಅಷ್ಟಾಗಿ ನೋ ಸರ್ಪ್ರೈಸ್. ಆದರೆ ನಮ್ಮಲ್ಲಿ ಆಗಾಗ ಸರ್ಪ್ರೈಸ್ ಬರುತ್ತವೆ. ಮಣಿಚಿತ್ರತಾಳ್ ನ ರಿಮೇಕ್ ಎಂದು ಗೊತ್ತಿರದೇ ಸುಮ್ಮನೆ ಆಪ್ತಮಿತ್ರ ಚಿತ್ರಕ್ಕೆ ಹೋದರೆ ಅದೊಂದು ಹಾರರ್ ಎಂಬುದು ಗೊತ್ತಾಗಿ ಅಚ್ಚರಿ ಪಟ್ಟವರಿದ್ದಾರೆ. ಏಕೆಂದರೆ ರಮೇಶ್, ವಿಷ್ಣುವರ್ಧನ್ ಮತ್ತು ಆಪ್ತಮಿತ್ರ ಚಿತ್ರದ ಶೀರ್ಷಿಕೆ ಇದಾವುದೋ ಗೆಳೆಯರ ನಡುವಣ ಸೆಂಟಿಮೆಂಟ್ ಕತೆ ಇರಬಹುದು ಎಂದುಕೊಂಡವರಿದ್ದಾರೆ. ಆದರೆ ಒಳಗಣ ಮರ್ಮ ಖುಷಿ ಕೊಟ್ಟದ್ದು ನಿಜ. ಹಾಗೆಯೇ ಶಿವಣ್ಣ ಅಭಿನಯದ ಅಂದರ ಬಾಹರ್ ನೋಡಿ ಅದರ ಪೋಸ್ಟರ್ ನೋಡಿ ನಾನಂತೂ ಇದು ಮಾಫಿಯಾ ಸಂಬಂಧಿ, ಡಾನ್ ತರಹದ  ಸಿನಿಮಾ ಇರಬಹುದು ಎಂದುಕೊಂಡಿದ್ದೆ. ಆದರೆ ಅದರಲ್ಲಿ ಸೆಂಟಿಮೆಂಟ್ ಜಾಸ್ತಿ ಇತ್ತು. ಮೊನ್ನೆ ಮೊನ್ನೆ ಬಂದ ಜೆಸ್ಸಿ ಚಿತ್ರದ್ದು ಅದೇ ಕತೆ. ಹೊರಗೆಲ್ಲಾ ತ್ರಿಕೋನ ಪ್ರೇಮಕತೆ ಎನಿಸಿದರೆ ಒಳಗೆ ಇದ್ದದ್ದು ಆತ್ಮದ ಕತೆ. ಒಳಗೆ ಹೋದರೆ ಅಚ್ಚರಿ. ಆದರೆ ಇಂತಹದ್ದೇ ಸಿನಿಮಾ ನನ್ನ ಟೇಸ್ಟ್ ಎಂದುಕೊಂಡು ಹೋದವನಿಗೆ ಮಾತ್ರ ಏರುಪೇರಾಗುವುದ್ದಂತೂ ಸತ್ಯ, ದಿನೇಶ್ ಬಾಬು ನಿರ್ದೇಶನದ ಅಮೃತವರ್ಷಿಣಿ ಚಿತ್ರದ್ದೂ ಅದೇ ಕತೆ. ಆಗೆಲ್ಲಾ ತ್ಯಾಗಮಯಿ ಎನಿಸಿಕೊಂಡಿದ್ದ, ತಾನೂ ಪ್ರೀತಿಸಿದ ಹುಡುಗಿಯನ್ನು ಧಾರಾಳವಾಗಿ ಬಿಟ್ಟುಕೊಡುವ ಗುಣದ ರಮೇಶ್, ಮತ್ತೊಬ್ಬನ ಹೆಂಡತಿಗೆ ಕಣ್ಣು ಹಾಕುವುದು, ಅದಕ್ಕಾಗಿ ಗೆಳೆಯನನ್ನೇ ಕೊಲ್ಲುವುದು ಆವತ್ತಿಗೆ ಊಹಿಸುವುದು ಸಾಧ್ಯವಿತ್ತೆ..?
ನಮ್ಮಲ್ಲಿ ಸಿನಿಮಾದ ಗತಿ ಬಗ್ಗೆ ಕೂಡ ಹೆಚ್ಚು ಚಿತ್ರಕರ್ಮಿಗಳು ತಲೆಕೆಡಿಸಿಕೊಂಡಿದ್ದು ಕಡಿಮೆ. ಒಂದು ಸಿನಿಮಾ ಅದರ ಕತೆಗೆ ತಕ್ಕಂತೆ ಚಿತ್ರಿಕೆ ಸಂಯೋಜನೆ ಪಡೆಯುತ್ತದೆ. ಹಾಗಾದಾಗಲೇ ಅದರ ಸಿನಿಮಾ ಪರಿಣಾಮಕಾರಿ ಎನಿಸುವುದು. ಮೂಡ್ ಕಟ್ಟಿಕೊಡುವುದು. ಗಾಡ್ ಫಾದರ್ ಸರಣಿಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಆದರೆ ನಮ್ಮಲ್ಲಿ ಅದೇಕೋ ಏನೋ ಅದರ ಬಗ್ಗೆ ಯೋಚಿಸುವವರು ಕಡಿಮೆ. ಉದಾಹರಣೆಗೆ ಇತ್ತೀಚಿಗೆ ನಮ್ಮಲ್ಲಿ ಡ್ರೋನ್ ಬೆಲೆ ಕಡಿಮೆಯಾಗಿರುವುದರಿಂದ ಸಿನಿಮಾಗಳಲ್ಲಿ ಸುಖಾಸುಮ್ಮನೆ ಪಕ್ಷಿನೋಟದ ಶಾಟ್ ಇರುತ್ತದೆ. ಹಾಗೆಯೇ ಪ್ರಯೋಗಾತ್ಮಕವಾಗಿ ಸಿನಿಮಾ ಮಾಡೋಣ ಎಂದುಕೊಂಡು ಸಂದಿಗೊಂದಿಗಳಲ್ಲಿ ಕ್ಯಾಮೆರಾ ಇಟ್ಟು ಶೂಟ್ ಮಾಡಿದವರೂ ಇದ್ದಾರೆ. ಇದೆಲ್ಲಾ ತಪ್ಪು ಎನುವುದಲ್ಲ. ಬದಲಿಗೆ ಅಗತ್ಯ ಇತ್ತೇ ಎನ್ನುವುದು ಪ್ರಶ್ನೆ.
ಸಿನಿಮಾದ ಶೀರ್ಷಿಕೆಯಿಂದ ಮೊದಲ್ಗೊಂಡು poster, ಛಾಯಾಗ್ರಹಣ,  ಶಾಟ್ ಸಂಯೋಜನೆ, ಹಿನ್ನೆಲೆ ಸಂಗೀತ ಮುಂತಾದವುಗಳ ಮೂಲಕ ಸಿನಿಮಾ ಕಟ್ಟಿಕೊಡಬೇಕು ಮತ್ತು ಪ್ರೇಕ್ಷಕನನ್ನು ಆ ಚಿತ್ರಕ್ಕೆ ತಯಾರಿಗೊಳಿಸಬೇಕು. ಹಾಗಾದಾಗ ಪ್ರೇಕ್ಷಕ ತಯಾರಾಗುತ್ತಾನೆ. ಸರ್ಪ್ರೈಸ್ ಎಂದಾಗ ಸಿನಿಮಾ ಅಷ್ಟೇ ಚೆನ್ನಾಗಿದ್ದು ಅವನನ್ನೂ ಮೆಚ್ಚಿಸುವಂತಿರಬೇಕು. ಅದಿರಲಿ. ನೀವು ಕೂಡ ಅಂದುಕೊಂಡಿದ್ದು ಬೇರೆ, ಒಳಗೆ ತೋರಿಸಿದ್ದು ಬೇರೆ ಅನುಭವಕ್ಕೆ ತುತ್ತಾಗಿದ್ದೀರಾ..?

Friday, March 25, 2016

ಸೆನ್ಸಾರ್ ...ಸೆನ್ಸ್ ಇರಲಿ ಸಾರ್..?

ಮೊನ್ನೆ ಕಿರಗೂರಿನ ಗಯ್ಯಾಳಿಗಳು ಚಿತ್ರದಲ್ಲಿನ ಒಂದಷ್ಟು ಬೈಗುಳಿಗೆ ಮ್ಯೂಟ್ ಮಾಡಿದ್ದರಿಂದ ಸೆನ್ಸಾರ್ ಮಂಡಳಿ ಸಿನೆಮಾದವರ ಕೆಂಗಣ್ಣಿಗೆ ಗುರಿಯಾದದ್ದು ಸತ್ಯ. ಹಾಗೆ ನೋಡಿದರೆ ಸೆನ್ಸಾರ್ ಮಂದಿ ಮತ್ತು ಸಿನೆಮಾದವರ ಶೀತಲ ಸಮರ ನಿನ್ನೆ ಈವತ್ತಿನದಲ್ಲ.  ಸಂಸ್ಕಾರ ಚಿತ್ರಕ್ಕೆ ಪ್ರಮಾಣ ಪತ್ರವನ್ನೇ ನೀಡಲು ಸಾಧ್ಯವಿಲ್ಲ ಎನ್ನುವುದರ ಜೊತೆಗೆ ಮೊನ್ನೆ ಮೊನ್ನೆ ಗಾಳಿಬೀಜ ಎನ್ನುವ ಚಿತ್ರಕ್ಕೂ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಹಾಗೆಯೇ ಕೆಲವು ಸಿನಿಮಾಗಳನ್ನು ಪೂರ್ಣಪ್ರಮಾಣದ ಚಲನಚಿತ್ರ ಎನ್ನಲು ಸಾಧ್ಯವಿಲ್ಲ ಎಂದು ಪ್ರಮಾಣ ಪತ್ರ ನಿರಾಕರಿಸಿದ ಪ್ರಸಂಗಗಳೂ ಇವೆ. ಹಾಗೆ ನೋಡಿದರೆ ಸೆನ್ಸಾರ್ ಮಂದಿ ಒಂದು ಸಿನೆಮಾವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ. ಅದವರ ಕೆಲಸ. ಅವರು ಸಿನಿಮಾ ನೋಡುವ ಹಾಗೆ ನಾವೂ ನೋಡಲಾಗುವುದಿಲ್ಲ. ದಿನಕ್ಕೆರಡು ಸಿನೆಮಾದಿಂದ ನಾಲ್ಕೈದು ಸಿನಿಮಾಗಳವರೆಗೆ ಸಿನಿಮಾ ನೋಡುವ ಅನಿವಾರ್ಯ ಅವರಿಗೆ ಬಂದೊದಗುತ್ತದೆ. ಬೋರ್ ಆದರೆ ಬೇರೆ ಕಡೆ ಗಮನ ಹರಿಸುವುದಾಗಲಿ, ನಿದ್ರೆ ಬಂತೆಂದು ಮಲಗುವುದಾಗಲಿ, ಎದ್ದು ಹೊರಗೆ ಬಂದು ಸ್ವಲ್ಪ ಹೊತ್ತು ಕಾಲ ಹರಣಮಾಡುವುದಾಗಲಿ ಮಾಡುವ ಸ್ವತಂತ್ರ ಅವರಿಗಿಲ್ಲ. ನೋಡಬೇಕು, ನೋಡಲೇ ಬೇಕಷ್ಟೇ. ಪಕ್ಕದಲ್ಲಿ ಸೆನ್ಸಾರ್ ಸ್ಕ್ರಿಪ್ಟ್ ಇಟ್ಟುಕೊಂಡು ಸಿನಿಮಾ ನೋಡುತ್ತಾ ಸ್ಕ್ರಿಪ್ಟ್ ಗಮನಿಸುತ್ತಾ ಅಲ್ಲಿರುವುದು ಇಲ್ಲಿರುವುದು ಎರಡೂ ಸರಿ ಇದೆಯಾ ಎಂದು ಪರೀಕ್ಷೆ ಮಾಡುತ್ತಾ ನೋಡಾದ ಮೇಲೆ ಅದರ ಬಗೆಗೆ ಚರ್ಚೆ ಮಾಡಿ ಸೆನ್ಸಾರ್ ಮಂಡಳಿಯ ನೀತಿ ನಿಯಮಗಳ ಒಳಗೆ ಸಿನಿಮಾ ಇದೆಯೇ ಎಂಬುದನ್ನು ತುಲನೆ ಮಾಡಿ ಆನಂತರವೇ ಸೆನ್ಸಾರ್ ಪ್ರಮಾಣ ಪತ್ರ ನೀಡುತ್ತಾರೆ. ಇದು ಕಷ್ಟದ ಯಾತನಮಯ ಕೆಲಸವಲ್ಲದೇ ಮತ್ತೇನು..? ಸೆನ್ಸಾರ್ ಮಂಡಳಿಯವರಿಗೆ ಆಯ್ಕೆಗಳಿಲ್ಲ. ಈ ಸಿನಿಮಾ ಬೇಡ ಅನಿಸುತ್ತೆ, ಇದು ಚಂದ ಅನಿಸುತ್ತೆ ಎನ್ನುವ ಮಾತೆ ಇಲ್ಲ, ಎಲ್ಲವನ್ನು ನೋಡಬೇಕು.
ನನ್ನದೇ ಸಿನಿಮಾದ ಸೆನ್ಸಾರ್ ಸಮಯದಲ್ಲಿ ನನಗೆ ಅಂತಹ ಕೆಟ್ಟ ಅನುಭವವೇನೂ ಆಗಲಿಲ್ಲ. ಸಿನೆಮದಲ್ಲಿದ್ದ ಅಷ್ಟೂ ಕ್ರೌರ್ಯ, ರಕ್ತ, ಹಿಂಸೆಗೆ ಮೊದಲೇ ನನಗ್ಯಾವ ಪ್ರಮಾಣ ಪತ್ರ ಬರುತ್ತದೆ ಎಂಬುದನ್ನು ನಾನು ಊಹಿಸಿದ್ದೆ. ಆದರೂ ಅದೆಲ್ಲಿ ಅಲ್ಲಿ  ಮಂಕು ಮಾಡಿ, ಇಲ್ಲಿ ಕತ್ತರಿಸಿ ಎನ್ನುತ್ತಾರೋ ಎನ್ನುವ ಭಯ ನಮ್ಮದಾಗಿತ್ತು. ಏಕೆಂದರೆ ನಮ್ಮ ಸಿನಿಮಾದ ಬಹುತೇಕ ದೃಶ್ಯಗಳಲ್ಲಿ ರಕ್ತವಿತ್ತು. ಹಿಂಸೆಯಿತ್ತು. ಅದನ್ನೆಲ್ಲಾ ಸುಮ್ಮನೆ ಬ್ಲರ್ ಮಾಡಿ ಎಂದಿದ್ದರೂ ನಮ್ಮ ಸಿನಿಮಾದ ಬಹುತೇಕ ಕಡೆಯಲ್ಲಿ ಬರೀ ಮಂಕು ಮಂಕು ಕಾಣಿಸುತ್ತಿತ್ತೇನೋ? ಆದರೆ ಸೆನ್ಸಾರ್ ಅಧಿಕಾರಿ ಅದ್ಯಾವುದನ್ನೂ ಹೇಳಲಿಲ್ಲ. ಬದಲಿಗೆ, ನಿಮ್ಮ ಸಿನಿಮಾ ಚೆನ್ನಾಗಿದೆ, ಸಿನಿಮಾದ ಒಟ್ಟಾರೆ ಭಾವ ಕೆಡಬಾರದು ಎಂದು ನಾನು ನಿಮಗೆ ರಕ್ತವಿದ್ದ ಕಡೆಗೆ ಬ್ಲರ್ ಮಾಡಲು ಹೇಳುತ್ತಿಲ್ಲ, ಆದರೆ ಸ್ವಾಮೀಜಿ ಮತ್ತು ಆ ಹೆಂಗಸಿನ ದೃಶ್ಯವನ್ನು ಕತ್ತರಿಸಲೇಬೇಕು ಎಂದಿದ್ದರು.
ಇಲ್ಲಿ ಮತ್ತೊಂದು ವಿಷಯವೂ ಇದೆ. ಕನ್ನಡ ಭಾಷೆಯ ಎಷ್ಟೋ ಬೈಗುಳಗಳು ಅಲ್ಲಿನವರಿಗೆ ಆ ಸಮಯದಲ್ಲಿ ನೋಡುವವರಿಗೆ ಗೊತ್ತೇ ಇರುವುದಿಲ್ಲ. ಉದಾಹರಣೆಗೆ ಕನ್ನಡದ ಒಂದು ಸಿನೆಮವಿದೆ. ಅದರಲ್ಲಿ ಒಂದು ಶಬ್ದ ಬಂದು ಹೋಗುತ್ತದೆ. ಮಾತಿನ ಭರದಲ್ಲಿ ಬಂದು ಹೋಗುವ ಆ ಅಶ್ಲೀಲ ಪದ ಬಹುತೇಕರಿಗೆ ಗೊತ್ತೇ ಇಲ್ಲದ ಕಾರಣ ಈವತ್ತಿಗೂ ಸಿನಿಮಾದ ಆ ದೃಶ್ಯದಲ್ಲಿ ಆ ಶಬ್ದ ಹಾಗೆಯೇ ಉಳಿದುಕೊಂಡಿದೆ. ಹಾಗೆಯೇ ಎರಡ್ಮೂರು ವರ್ಷದ ಹಿಂದೆ ಬಿಡುಗಡೆಯಾದ ರಿಮೇಕ್ ಚಿತ್ರದಲ್ಲಿ ಮಾತೀನ ಭರದಲ್ಲಿ ಬರುವ ಸಂಭಾಷಣೆಯಲ್ಲಿ ಮತ್ತೊಂದು ಅಶ್ಲೀಲ[?] ಶಬ್ದ ನುಸುಳಿದೆ. ಆದರೆ ಅದೂ ಕೂಡ ಸೆನ್ಸಾರ್ ನಿಂದ ತಪ್ಪಿಸಿಕೊಳ್ಳಲು ಕಾರಣ ಆ ಶಬ್ದ ಬಳಕೆ ಸೆನ್ಸಾರ್ ಮಂಡಳಿಯ ನೋಡುಗರಿಗೆ ಗೊತ್ತಿಲ್ಲದೇ ಇದ್ದದ್ದು. ಹೀಗೆ ಹಲವಾರು ಚಿತ್ರಗಳಲ್ಲಿ ಈ ರೀತಿ ಆದ ಅನುಭವವಿದೆ.
ಹಾಗೆಯೇ ಇಲ್ಲಿ ಸೆನ್ಸಾರ್ ಮಂಡಳಿ ನೋಡಿ, ಪರೀಷ್ಕೃತ ವೀಕ್ಷಣೆಗೆ ಬಾಂಬೆಗೆ ಹೋದರೆ ಅಲ್ಲಿ ಕನ್ನಡ ಪದಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಮೊನ್ನೆ ಮೊನ್ನೆ ಒಂದು ಸಿನೆಮಾಗೆ ಹಾಗೆ ಆಯಿತು. ಇಲ್ಲಿ ವೀಕ್ಷಿಸಿ ಸುಮಾರಷ್ಟು ಕತ್ತರಿ ಪ್ರಯೋಗ ಹೇಳಿದಾಗ ಆ ಸಿನೆಮಾವನ್ನು ಟ್ರಿಬ್ಯೂನಲ್ ಗೆ ಕಳುಹಿಸಲಾಯಿತು. ಅಲ್ಲಿ ಬಿಚ್, ಡರ್ಟಿ ಬಿಚ್, ಬಾಸ್ಟರ್ಡ್ ಪದಗಳನ್ನು ಮ್ಯೂಟ್ ಮಾಡಲಾಯಿತು. ಕನ್ನಡದ ದ್ವಂದ್ವಾರ್ಥ, ಅಶ್ಲೀಲ ಎನಿಸುವ ಪದಗಳು ಹಾಗೆಯೇ ಉಳಿದುಕೊಂಡಿದ್ದವು. ಹಾಗೆಯೇ ಟ್ರಿಬ್ಯೂನಲ್ ಮತ್ತು ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಸೆನ್ಸಾರ್ ವೀಕ್ಷಣೆಯಲ್ಲಿಯೂ ಸಾಕಷ್ಟು ವ್ಯತ್ಯಾಸಗಳಾಗುತ್ತವೆ. ಚುಂಬನ, ಒಂದಷ್ಟು ತೆರೆದೆದೆ ಮುಂತಾದ ಬಿಚ್ಚಾಟಗಳಿಗೆ ಹಿಂದೆ ಮುಂದೆ ನೋಡದೆ ನಮ್ಮಲ್ಲಿ ಎ ಕೊಟ್ಟರೆ, ಅದೇ ಟ್ರಿಬ್ಯೂನಲ್ ನಲ್ಲಿ ಯುಎ ಆಗುತ್ತದೆ. ಅದಕ್ಕೆ ಕಾರಣವಿದೆ. ಅಲ್ಲಿ ಅಂದರೆ ಬಾಲಿವುಡ್ ನಲ್ಲಿ ಚುಂಬನ ಹೆಚ್ಚು ಕಡಿಮೆ ಸರ್ವೇ ಸಾದಾರಣ. ವಿ ವಾಹಿನಿಯ ಹಲವಾರು ಧಾರಾವಾಹಿಗಳಲ್ಲೇ ಚುಂಬನದ ದೃಶ್ಯಗಳು ಸರ್ವೇ ಸಾದಾರಣ ಆದ್ದರಿಂದ ಅಲ್ಲಿ ಅದಕ್ಕೆ ಸ್ವಲ್ಪ ಮಟ್ಟದ ರಿಯಾಯತಿ ಸಿಕ್ಕಿ ಬಿಡುತ್ತದೆ. ಆದರೆ ನಮ್ಮಲ್ಲಿ ಅದಕ್ಕೆ ಎ ಠಸ್ಸೆ ಬೀಳುತ್ತದೆ.
ಆದರೆ ಇದೆಲ್ಲದಕ್ಕೂ ಕಿರಿ ಕಿರಿ ಎನಿಸುವುದು ಧೂಮ್ರಪಾನ ಮತ್ತು ಮಧ್ಯಪಾನದ ಸಂದೇಶ. ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ನಿರ್ಮಾಪಕ ಬಿಟ್ಟಿಯಾಗಿ ಸರ್ಕಾರದ ಸಂದೇಶವನ್ನು ಪ್ರಚಾರ ಮಾಡಬೇಕಾದದ್ದು ಯಾವ ನ್ಯಾಯ? ಇಷ್ಟಕ್ಕೂ ಸರ್ಕಾರಕ್ಕೆ ಅದರದ್ದೇ ಆದ ಫಂಡ್ಸ್ ಇದೆ. ಪ್ರತಿಯೊಂದು ಸಾರ್ವಜನಿಕ ಹಿತಾಸಕ್ತಿಯ ಸಂದೇಶಕ್ಕಾಗಿ ಕೋಟಿ ಕೋಟಿ ಖರ್ಚು ಮಾಡುವ ಸರ್ಕಾರ ಧೂಮ್ರಪಾನಕ್ಕೆ ಮಾತ್ರ ಸಿನೆಮಾದವರ ತಲೆ ತಿನ್ನುತ್ತದೆ. ಅತ್ಲಾಗೆ ಧೂಮಪಾನದಿಂದ ಕ್ಯಾನ್ಸರ್ ಬಂದು ಸತ್ತೆ ಹೋಗುತ್ತೀರಿ ಎನ್ನುವ ಸರ್ಕಾರ ಮಾತ್ರ ಅದನ್ನು ಬ್ಯಾನ್ ಮಾಡುವುದಿಲ್ಲ. ಬದಲಿಗೆ ಅದಿರಲಿ, ಅದರ ಹಣವೂ ಬರುತಿರಲಿ, ನೀವು ಮಾತ್ರ ಸಿನಿಮಾದಲ್ಲಿ ತೋರಿಸಬೇಡಿ, ತೋರಿಸಿದರೆ ಅದರ ಕೆಳಗೆ ಸಂದೇಶ ಬರಲಿ ಎನ್ನುತ್ತದೆ ಸರ್ಕಾರ. ಆದರೆ ನಮ್ಮ ಸಿನೆಮಾಗಳಲ್ಲಿ ಅದೊಂದೇ ಇರುವುದಿಲ್ಲವಲ್ಲ. ಕತೆಗೆ ಬೇಕಾದಂತೆ ಅತ್ಯಾಚಾರ ಇರುತ್ತದೆ, ಕೊಲೆ ಇರುತ್ತದೆ..ಮೋಸ ದಗಾ ವಂಚನೆ ಇರುತ್ತದೆ. ಆದರೆ ಸರ್ಕಾರ ಅದ್ಯಾವುದನ್ನು ಕೇರ್ ಮಾಡುವುದಿಲ್ಲ. ಅತ್ಯಾಚಾರ, ಕೊಲೆ ದೃಶ್ಯಗಳು ಬಂದಾಗ ಅದರ ಬಗ್ಗೆ ಏನೂ ಹೇಳುವುದಿಲ್ಲ, ಒಂದಷ್ಟು ಎಲ್ಲಿಯಾದರೂ ದೇಹಭಾಗ ಕಾಣಿಸಿದರೆ, ರಕ್ತ ಕಾಣಿಸಿದರೆ ಮಂಕು ಮಾಡಿ ಎನ್ನುತ್ತದೆ, ಆದರೆ ಸಂದೇಶ ಹಾಕುವ ಗೊಡವೆ ಇಲ್ಲ..ಆದರೆ ಧೂಮಪಾನ.. ಅದಕ್ಕಂತೂ ಹಾಕಲೇಬೇಕು. ಮೊನ್ನೆ ದುನಿಯಾ ಸೂರಿ ನಿರ್ದೇಶನದ ಕಡ್ಡಿಪುಡಿ ಚಿತ್ರದಲ್ಲಿ ಮೂರು ಜನ ಕಿರಾತಕರು ಒಂದು ಹುಡುಗಿಯನ್ನು ರೇಪ್ ಮಾಡಿ ಸಾಯಿಸುವ ದೃಶ್ಯವಿತ್ತು. ಅದರಲ್ಲಿ ಚೆನ್ನಾಗಿ ಕುಡಿದು ಸಿಗರೇಟು ಸೇದುತ್ತಾ ಅತ್ಯಾಚಾರ ಮಾಡುತ್ತಾರೆ, ಕೊಲೆ ಮಾಡುತ್ತಾರೆ, ಅಷ್ಟೂ ದೃಶ್ಯದಲ್ಲಿ ತೆರೆಯ ಮೇಲೆ ಧೂಮಪಾನ, ಮದ್ಯಪಾನ ಮಾಡಬೇಡಿ ಅರ್ಥದ ಸಂದೇಶ ಬರುತ್ತಲೇ ಇರುತ್ತದೆ. ಬೇಕಿದ್ದರೆ ರೇಪ್, ಕೊಲೆ ಮಾಡಿ ಆದರೆ ಧೂಮಪಾನ, ಮದ್ಯಪಾನ ಮಾತ್ರ ಮಾಡಬೇಡಿ ಎನ್ನುವ ಅರ್ಥ ಕೊಡುವುದಿಲ್ಲವೇ ಇದು..?
ಏನೇ ಆಗಲಿ. ಸಿನಿಮಾಕ್ಕೆ ಸೆನ್ಸಾರ್ ಬೇಕು. ಇಲ್ಲವಾದಲ್ಲಿ ನಮ್ಮಲ್ಲಿನ ಕೆಲವು ಕಿರಾತಕರು ದೃಶ್ಯಮಾಧ್ಯಮವನ್ನು ವಿಕೃತ, ಹಿಂಸೆ, ಅಶ್ಲೀಲ ಗಳಿಗೆ ಬಳಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಹಾಗಂತ ಸಿನಿಮಾದ ಒಟ್ಟಾರೆ ಭಾವವನ್ನು ಗಮನಿಸದೆ ಸುಖಾಸುಮ್ಮನೆ ಕತ್ತರಿ ಪ್ರಯೋಗ ಮಾಡುವುದರ ಬಗ್ಗೆ ಸೆನ್ಸಾರ್ ಮಂಡಳಿ ಯೋಚಿಸಿದರೆ ಒಳ್ಳೆಯದು.

Monday, March 21, 2016

ಕೇಳುವುದಕ್ಕೂ ನೋಡುವುದಕ್ಕೂ ವ್ಯತ್ಯಾಸವಿದೆ...


ಇದೊಂದು ಘಟನೆ ಕೇಳಿ. ವಿಷ್ಣುವರ್ಧನ್ ಅಭಿನಯದ ಸುಪ್ರಭಾತ ಚಿತ್ರ ಬಿಡುಗಡೆಯಾದಾಗ ನಾನಿನ್ ನು ಚಿಕ್ಕವನು. ಹಾಗಾಗಿ ಆ ಸಿನೆಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೋಡುವ ಸಾಧ್ಯತೆ ಇರಲೇ ಇಲ್ಲ. ಆದರೆ ವಿಷ್ಣುವರ್ಧನ್ ಚಿತ್ರಗಳೆಂದರೆ ನನಗಂತೂ ಹುಚ್ಚು. ಆದರೆ ನೋಡುವುದೆಲ್ಲಿ..? ನಮ್ಮೂರು ಪಕ್ಕದ ನಂಜನಗೂಡಿಗೆ ಹೋಗಿ ನೋಡಿಬರುವುದು ಸಾಧ್ಯವಿರಲಿಲ್ಲ. ಆದರೆ ಆವಾಗ ಟೇಪ್ ರೆಕಾರ್ಡರ್ ಇತ್ತಲ್ಲಾ, ಸ್ಟೋರಿ ಕ್ಯಾಸೆಟ್ ತಂದು ಅದನ್ನು ಹಾಕಿಕೊಂಡು ಕೇಳುತ್ತಾ ದೃಶ್ಯಗಳನ್ನೂ ಫೈಟ್ ಗಳನ್ನೂ ತುಣುಕು ಹಾಡನ್ನು ಎಂಜಾಯ್ ಮಾಡುತ್ತಿದ್ದೆವು. ರೇಡಿಯೋ ದಲ್ಲಿ ಪ್ರತಿಭಾನುವಾರ ಮದ್ಯಾಹ್ನ ಸಿನಿಮಾ ಕತೆ ಪ್ರಸಾರ ಮಾಡಿದರೂ ನಮಗಿಷ್ಟದ ಸಿನಿಮಾಕ್ಕೆ ಟೇಪ್ ರೆಕಾರ್ಡರ್ ಒಂದೇ ಮಾರ್ಗವಾಗಿತ್ತು. ಆವಾಗ ಸುಪ್ರಭಾತ ಚಿತ್ರದ ಸ್ಟೋರಿಯನ್ನು ತುಂಬಾ ಸಲ ಕೇಳಿ ಅದರ ಕತೆಯನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದೆವು. ಎರಡು ಚಿಲ್ಲರೆ ಘಂಟೆಗ;ಅ ಸಿನಿಮಾವನ್ನು ಒಂದು ಘಂಟೆಗೆ ಇಳಿಸುವುದು ಸುಲಭದ ಮಾತಲ್ಲವಾದರೂ ಅದಕ್ಕೆ ಮೊದಲೆಲ್ಲಾ ಅವಕಾಶ ಇತ್ತು. ಹಾಡುಗಳ ಲೆಕ್ಕದಲ್ಲಿ ಅರ್ಧ ಘಂಟೆ ಎಗರಿಹೋಗುತ್ತಿತ್ತು. ಇನ್ನು ಫೈಟ್ ಲೆಕ್ಕದಲ್ಲಿ ಐದಾರು ನಿಮಿಷ ಕಾಣೆಯಾಗುತ್ತಿತ್ತು. ಉಳಿದ ಬಿಲ್ಡ್ ಅಪ್ ಮ್ಯೂಸಿಕ್ ಬಿಲ್ಡ್ ಅಪ್ ಅದೂ ಇದೂ ಸೇರಿ ಉಳಿದ ನಿಮಿಷಗಳು ಸಂಕಲಿತವಾಗಿ ಕೇವಲ ಒಂದು ಘಂಟೆ ಸ್ಟೋರಿ ಸಿಗುತ್ತಿತ್ತು.
ನನಗೆ ಸುಪ್ರಭಾತ ಚಿತ್ರದ ಸ್ಟೋರಿ ಕೇಳಿದಾಗ ಅದೊಂದು ವಿಷಾದದೊಂದಿಗೆ ಕೊನೆಯಾಗುವ ಚಿತ್ರ ಎಂದೇ ಎನಿಸಿತ್ತು. ಸುಹಾಸಿನಿಯೊಂದಿಗೆ ಪ್ರೀತಿಯಾಗಿ ಕೊನೆಯಲ್ಲಿ ಆಕೆಗೆ ಮಗು ಇರುವ ವಿಷಯ ಗೊತ್ತಾಗಿ ಆ ಮಗುವನ್ನು ಚಿತ್ರದ ನಾಯಕ ತಂದು ನಾಯಕಿಗೆ ಒಪ್ಪಿಸಿ, ನಿನ್ನ ಮಗಳನನ್ನು ನಿನಗೆ ಸೇರಿಸಿದ್ದೀನಿ, ಯಾವಾಗಲಾದರೂ ನಿನ್ನ ಮಗಳಿಗೆ ಅಪ್ಪ ಬೇಕು ಎನಿಸಿದರೆ ಈ ಬೆಟ್ಟದ ಮೇಲಿರುವ ಪೆಟ್ರೋಲ್ ಬಂಕ್ ತೋರಿಸು ಎನ್ನುತ್ತಾನೆ. ಆಗ ಮ್ಯೂಸಿಕ್ ಬರುತ್ತದೆ. ಅದೇ ಮ್ಯೂಸಿಕ್ ನೊಂದಿಗೆ ಚಿತ್ರ ಕೊನೆಯಾಗುತ್ತಿದೆ. ಬರೀ ಕೇಳಿಸಿಕೊಳ್ಳುವವ ಏನು ಅರ್ಥ ಮಾಡಿಕೊಳ್ಳಬೇಕು ಹೇಳಿ. ನಾನರ್ಥ ಮಾಡಿಕೊಂಡದ್ದು ಅದನ್ನೇ. ನಾಯಕಿ ಹಾಗೆ ಹೇಳಿ, ಮಗುವನ್ನು ಕರೆದುಕೊಂಡು ಹೋಗಿಬಿಡುತ್ತಾಳೆ. ವಿಷ್ಣುವರ್ಧನ್ ತ್ಯಾಗಮಯಿಯಾಗಿ ನೋಡುತ್ತಾ ನಿಂತುಕೊಳ್ಳಬಹುದು ಎಂಬುದಾಗಿ. ಯಾಕೆಂದರೆ ಆವಾಗೆಲ್ಲಾ ಚಿತ್ರದ ನಾಯಕ ತ್ಯಾಗಕ್ಕೆ, ಅದರಲ್ಲೂ ಪ್ರೀತಿಯನ್ನು ತ್ಯಜಿಸುವ ಕಾಯಕಕ್ಕೆ ಔರ್ದಾಯಕ್ಕೆ ಹೆಸರುವಾಸಿಯಲ್ಲವೇ..? ಆದರೆ ಅದೆಲ್ಲಾ ಕಳೆದು ನಾನು ಕಾಲೇಜಿಗೆ ಹೋಗುವ ಸಮಯ ಬಂದಾಗ ಮತ್ತೊಮ್ಮೆ ಸುಪ್ರಭಾತ ಚಿತ್ರಮಂದಿರಕ್ಕೆ ಬಂದಾಗ ಅದನ್ನು ನೋಡಿದೆ. ಆದರೆ ಅಲ್ಲಿನ ಕ್ಲೈಮಾಕ್ಸ್ ಬೇರೆ. ಅದು ಸುಖಾಂತ್ಯ. ಅಷ್ಟು ಡೈಲಾಗ್ ಮುಗಿದ ಮೇಲೆ ಕಾರ್ ಹತ್ತಿರಕ್ಕೆ ಹೋಗುವ ಸುಹಾಸಿನಿ, ಆನಂತರ ಮನಸ್ಸು ಬದಲಿಸಿ ಓಡಿಬಂದು ಅಪ್ಪಿಕೊಳ್ಳುತ್ತಾಳೆ. ಇಬ್ಬರು ಖುಷಿಯಾಗುತ್ತಾರೆ. ಆದರೆ ಕೇಳುವಿಕೆ ಇಡೀ ಚಿತ್ರದ ಕತೆಯನ್ನೇ ನನ್ನ ಪಾಲಿಗೆ ಉಲ್ಟಾ ಮಾಡಿದ್ದಂತೂ ಸತ್ಯ.
ಇದೆಲ್ಲಾ ಯಾಕೆ ಹೇಳಿದೆನೆಂದರೆ ಸಿನಿಮಾ ಎಂಬುದು ದೃಶ್ಯ ಮಾಧ್ಯಮ. ಅದನ್ನು ನೋಡುತ್ತಲೇ ಕಣ್ತುಂಬಿಕೊಳ್ಳಬೇಕು. ಅದರಲ್ಲೋ ದೊಡ್ಡ ಪರದೆಯ ಮೇಲೆ ನೋಡುತ್ತಾ ನೋಡುತ್ತಾ ಅದಕ್ಕೆ ನಮ್ಮನ್ನು ನಾವು ಅಂಟಿಸಿಕೊಂಡಾಗಲೇ ಮಜಾ. ಅದು ಬಿಟ್ಟು ಟಿವಿಯಲ್ಲಿ ಲ್ಯಾಪ್ ಟಾಪ್ ನಲ್ಲಿ ಮೊಬೈಲ್ ನಲ್ಲಿ ಸಿನಿಮಾ ನೋಡುವುದು ಏನು ಮಜಾ. ಜೊತೆಗೆ ಸಿನಿಮಾ ನಮ್ಮ ಕೈಯಲ್ಲಿರಬಾರದು. ನಮಗೆ ಬೇರೆಯ ಆಯ್ಕೆಗಳಿರಬಾರದು. ದೃಶ್ಯ ಚೆನ್ನಾಗಿರಲಿ, ಬೋರ್ ಆಗುತ್ತಿರಲಿ ನೋಡೇ ತೀರಬೇಕು ಎನ್ನುವ ಹಾಗಿರಬೇಕು. ಆದ್ರೆ ಈವತ್ತು ನಾವೆಲ್ಲಾ ಟಿವಿಯಲ್ಲಿಯೇ ಸಿನಿಮಾ ನೋಡುತ್ತೇವೆ, ಸ್ವಲ್ಪ ಬೋರ್ ಎನಿಸಿದರೂ ಅದನ್ನು ಬದಲಿಸುತ್ತೇವೆ, ಅಥವಾ ಬೇರೆ ಸಿನಿಮಾ ಹಾಕುತ್ತೇವೆ, ಮುಂದಕ್ಕೆ ಓಡಿಸುತ್ತೇವೆ. ಒಟ್ಟಿನಲ್ಲಿ ಸಿನಿಮಾವನ್ನು ನಮ್ಮ ಕೈಗೊಂಬೆ ಮಾಡಿಕೊಳ್ಳುತ್ತೇವೆ. ಲಾಕ್ ಅಪ್ ಡೆತ್ ಚಿತ್ರದ ಒಂದು ಚೇಸ್, ಪೋಲಿಸ್ ಸ್ಟೋರಿ ಯಾ "ಚಂದನೆಯ ಬೈಗುಳ", ಪ್ರೇಮಲೋಕದ ಹಾಡುಗಳು, .. ಹೀಗೆ ಇಂತಹ ಬಿಡಿಬಿಡಿ ಸನ್ನಿವೇಶಗಳಿಗಾಗಿಯೇ ಸಿನಿಮಾವನ್ನು  ಹತ್ತಾರು  ಬಾರಿ ನೋಡಿದ್ದಿದೆ. ಇಡೀ ಸಿನಿಮಾ ಕಣ್ಣಿಗೆ ತುಂಬಿಕೊಳ್ಳುತ್ತಾ ಆ ದೃಶ್ಯ ಬಂದಾಗ ಫುಲ್ ಅಲರ್ಟ್ ಆಗಿ ಕುರ್ಚಿಯ ತುದಿಗೆ ಕುಳಿತು ಅನುಭವಿಸಿದ್ದಿದೆ. ಆದರೆ ಈವತ್ತು ಇಷ್ಟವಾದ ಹಾಡನ್ನು ಮೊಬೈಲ್ ಗೆ ತುಂಬಿಕೊಳ್ಳುತ್ತೇವೆ, ದೃಶ್ಯವೂ ಮೊಬೈಲ್ ನಲ್ಲಿರುತ್ತದೆ. ಅಲ್ಲೇ ನೋಡುತ್ತೇವೆ, ಅಲ್ಲೇ ಡಿಲೀಟ್ ಮಾಡುತ್ತೇವೆ.
ಮನೆಗಳಲ್ಲಿ ತರಕಾರಿ ಕತ್ತರಿಸುತ್ತಾ ತಲೆಯೆತ್ತದೆಯೇ ಧಾರಾವಾಹಿ ನೋಡುತ್ತೇವೆ. ಅಲ್ಲಿ ನೋಡಲೇಬೇಕು ಅನ್ನುವಂತಹದ್ದು ಏನಿಲ್ಲ, ಅದೇ ಮುಖ, ಅದೇ ಘಟನೆ, ಇಬ್ಬರು ಮಾತನಾಡುತ್ತಾ ಮಾತನಾಡುತ್ತಾ ಕುಳಿತರೆ, ನಿಂತರೆ ಅವರ ರಿಯಾಕ್ಷನ್ ಅದುನ್ ಇದೂ ಸೇರಿ ನಿಮಿಷಗಟ್ಟಲೆ ಒಂದೇ ಒಂದೇ ದೃಶ್ಯ ನಡೆಯುತ್ತದೆ. ಹಾಗಾಗಿ ಸುಮ್ಮನೆ ಕೇಳಿಸಿಕೊಂಡರೆ ಸಾಕಷ್ಟೇ. ಅಲ್ಲಿ ನಷ್ಟದ ಮಾತೆ ಇಲ್ಲ. ಆದರೆ ಸಿನಿಮಾ ಹಾಗಲ್ಲ. ಅಲ್ಲಿ ಮಾತು ಬೆಳ್ಳಿ, ಮೌನ ಬಂಗಾರ. ಆದರೆ ಇತ್ತೀಚಿಗೆ ಬಂದ ಕೆಲವು ಸಿನಿಮಾಗಳು ಅದನ್ನು ಸುಳ್ಳು ಮಾಡಿದ್ದು ಸತ್ಯ. ಸಿಂಪಲ್ ಲವ್ ಸ್ಟೋರಿ, ಎದ್ದೇಳು ಮಂಜುನಾಥ ಮುಂತಾದ ಸಿನಿಮಾಗಳನ್ನು ನೋಡಲೆಬೇಕಿಲ್ಲ, ಕೇಳಿಸಿಕೊಂಡರೂ ಸಾಕು. ಏಕೆಂದರೆ ತೆರೆಯ ಮೇಲೆ ಜಾಸ್ತಿ ಆಕ್ಷನ್ ಇರುವುದೇ ಇಲ್ಲವಲ್ಲ. ಮಾತಾಡುತ್ತಾ, ಮಾತಾಡುತ್ತಾ ಕತೆ ಮುಂದುವರೆದರೆ ಮಾತೆ ಸಾಕಲ್ಲವೇ? ಪಂಚಿಂಗ್ ಡೈಲಾಗ್, ಡಬಲ್ ಮೀನಿಂಗ್ ಡೈಲಾಗ್ ಮುಂತಾದವುಗಳನ್ನು ಸಿನಿಮಾದಲ್ಲಿರಿಸಿದರೆ ಸಿನಿಮಾ ನೋಡುವುದಕ್ಕಿಂತ ಕೇಳುವುದೇ ಖುಷಿ ಎನಿಸುತ್ತದೆ. ಆ ಮೂಲಕ ದೃಶ್ಯಮಾಧ್ಯಮದ ಮುಖ್ಯಾಂಶವೆ ನೆಗೆದುಬಿದ್ದುಹೋದ ಹಾಗಾಗುತ್ತದೆ. ಎಲ್ಲವನ್ನು ಹೇಳುವ ಮೂಲಕವೇ ವಿಶದ ಪಡಿಸುವುದಕ್ಕಿಂತ ತೋರಿಸಿದರೆ ಕಣ್ಮುಂದೆ ನಡೆದರೆ ಹೆಚ್ಚು ಕಾಲ ಮನಸ್ಸಲ್ಲಿ ಉಳಿಯುತ್ತವೆ, ಇಲ್ಲವಾದರೆ ಬೇಗೆ ಕಿವಿಗೆ ಬೀಳುತ್ತವೆ, ಹಾಗೆ ಮರೆತೂಹೋಗುತ್ತವೆ.
ನಿರ್ದೇಶಕ ವಿಜಯಾನಂದ್ ಒಂದು ಮಾತು ಹೇಳಿದ್ದರು, ನಾನು ಕತೆಯನ್ನು  ಹೇಳಲಾರೆ, ನೋಡಬಲ್ಲೆ ಎಂದು. ಬಹುಶ ಪ್ರತಿಯೊಬ್ಬ ಚಿತ್ರಕರ್ಮಿ ಇದನ್ನೇ ಪಾಲಿಸಿದರೆ ಸಿನಿಮಾ ನೋಡುವ ಸೊಗಸು ಹೆಚ್ಚುತ್ತದೆ.  ಅಲ್ಲವೇ?

Thursday, March 17, 2016

ಸಿನಿಮಾ ಇಷ್ಟು ಸಿಂಪಲ್ ಆಗೋದ್ರೆ ಹೆಂಗೆ..?

ಇದೊಂದು ದೃಶ್ಯ ತೆಗೆದುಕೊಳ್ಳಿ.. ಕೇಡಿಗಳು ನಾಯಕಿಯನ್ನು ನಾಯಕನಿಂದ ಎಳೆದುಕೊಂಡು ಹೋಗಿ ಟಾಟಾಸುಮೋ ಬಾಗಿಲು ತೆರೆದು ಒಳಗೆ ಕೂರಿಸಿ ಬಾಗಿಲು ಹಾಕುತ್ತಾರೆ. ಆಮೇಲೆ ನಾಯಕನತ್ತ ಬಂದು ಅವನಿಗೆ ಹೊಡೆಯಲು ಪ್ರಾರಂಭಿಸುತ್ತಾರೆ. ನಾಯಕ ಅವರನ್ನೆಲ್ಲಾ ಹೊಡೆದು ಉರುಳಿಸಿ ಓಡಿ ಟಾಟಾ ಸುಮೋ ಹತ್ತಿರ ಬರುತ್ತಾನೆ, ಅವಳನ್ನು ಕಾಪಾಡುತ್ತಾನೆ.ಈ ದೃಶ್ಯದಲ್ಲಿ ತಪ್ಪೇನಿದೆ ಎಂದು ಕೇಳಬಹುದು. ಟಾಟಾಸುಮೋ ದಲ್ಲಿ ಕೂರಿಸಿ ಹೋದ ನಂತರ ನಾಯಕಿ ಯಾಕೆ ಟಾಟಾಸುಮೋದಿಂದ ಇಳಿಯುವುದಿಲ್ಲ. ಕಿಟಕಿ ಗಾಜು ಕೆಳೆಗೆ ಇಳಿದಿದೆ. ಮತ್ತು ಇಡೀ ಸುಮೋದಲ್ಲಿ ಯಾರೂ ಇಲ್ಲ, ಹಾಗೆ ಅದರ ಲಾಕ್ ಕೂಡ ಹಾಕಿಲ್ಲ, ಆಮೇಲೆ ಅದರ ಎಲ್ಲಾ ಗಾಜುಗಳು ಕೆಳಗೆ ಇವೆಯಲ್ಲ. ಆದರೂ ಆಕೆ  ನಾಯಕ ಬಂದು ಬಾಗಿಲು  ತೆರೆಯುವವರೆಗೆ ಆರಾಮವಾಗಿ ಕುಳಿತದ್ದು ಯಾಕೆ?ಇದನ್ನು ಏನು ಹೇಳುವುದು. ನಿರ್ದೇಶಕರ ನಿರ್ಲಕ್ಷ್ಯವಾ?
ಇರಲಿ. ಅವಳು ಪೋಲಿಸ್ ಅಧಿಕಾರಿ. ಬಂದವಳೇ ಜೀಪಿನಿಂದ ಬೈನಾಕ್ಯೂಲರ್ ತೆಗೆದು ಅದರಲ್ಲಿ ನೋಡುತ್ತಾಳೆ. ದೂರದ ಕಾಲೇಜಿನಲ್ಲಿ ಒಂದು ಮರದ ಕೆಳಗೆ ಕೇಡಿಗಳು ಡ್ರಗ್ಸ್ ವ್ಯವಹಾರ ಮಾಡುತ್ತಿರುವುದು ಗೊತ್ತಾಗುತ್ತದೆ. ವಾಪಸು ಜೀಪಿಗೆ ಅದನ್ನು ಇಟ್ಟವಳೇ ಅಲ್ಲಿಂದಲೇ ಹಾರುತ್ತಾಳೆ ಕೇಡಿಗಳ ಕಡೆಗೆ, ಅವರ ಜೊತೆಗೆ ಹೊಡೆದಾಡುವಾಗ ಗೊತ್ತಾಗುತ್ತದೆ ಜೀಪು ಮರದಿಂದ ಸ್ವಲ್ಪವೇ, ಅಂದರೆ ಜಿಗಿಯುವಷ್ಟು, ನಡೆಯುವಷ್ಟೇ ದೂರದಲ್ಲಿದೆ ಎಂಬುದು.. ಹಾಗಾದರೆ ಬೈನಾಕ್ಯೂಲರ್ ನೋಡುವ ಬಿಲ್ಡ್ ಅಪ್ ಯಾಕೆ ಬೇಕಿತ್ತು ಎನ್ನುವುದು ಪ್ರಶ್ನೆ..
ಬಿಡುಗಡೆಯಾಗುವ ಬಹುತೇಕ ಎಲ್ಲಾ ಚಿತ್ರಗಳನ್ನು ನೋಡುತ್ತೇನೆ. ಅದರಲ್ಲೂ ಹೊಸಬರ ಚಿತ್ರಗಳನ್ನು ನೋಡುವ ಖುಷಿ ತವಕವೇ ಬೇರೆ. ಆದರೆ ಸಿನಿಮಾ ಎನ್ನುವ ಮಾಧ್ಯಮವನ್ನೇ ಕೇರ್ ಮಾಡದೆ ಇಷ್ಟ ಬಂದ ಹಾಗೆ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ನಿರ್ದೇಶನ ಮಾಡಿರುತ್ತಾರಲ್ಲಾ ಆಗ ಬೇಸರವಾಗುತ್ತದೆ. ಈವತ್ತು ಒಬ್ಬ ನಿರ್ಮಾಪಕನನ್ನು ಒಪ್ಪಿಸಿ, ಅಷ್ಟೊಂದು ತಂತ್ರಜ್ಞರ ಜೊತೆಗೂಡಿಸಿ, ಕಲಾವಿದರನ್ನು ಒಟ್ಟುಗೂಡಿಸಿ, ಸಿನಿಮಾ ಮಾಡಿ ಅದನ್ನು ಬಿಡುಗಡೆ ಮಾಡುವುದು ಸುಲಭದ ಮಾತಲ್ಲ. ಒಬ್ಬ ನಿರ್ದೇಶಕನಿಗೆ ಅದು ಸುವರ್ಣಾವಕಾಶ. ಆದರೆ ಅದನ್ನೇ ಆರಾಮವಾಗಿ ಬೇಕೆಂದ ಹಾಗೆ ಮಾಡಿ ಬೀಸಾಕಿರುತ್ತಾರಲ್ಲ.. ಅವರ ಪಾಲಿಗೆ ಸಿನಿಮಾ ಎಂದರೆ ಸಿಂಪಲ್..
ಸಿನಿಮ ಎಂದರೆ ಸಿಂಪಲ್ ಆಗಿ ತೆಗೆದುಕೊಂಡವರು, ಇಷ್ಟು ಸಾಕು ಬಿಡು ಎನ್ನುವವರು ಈ ರೀತಿ ಮಾಡುತ್ತಾರೆ ಎನಿಸುತ್ತದೆ. ಅದಕ್ಕೆಲ್ಲ ಲಾಜಿಕ್ ಯಾಕೆ ಎನ್ನುತ್ತಾರಾ..? ಮೊನ್ನೆ ಸಿಂಪಲ್ ಆಗ್ ಇನ್ನೊಂದು ಲವ್ ಸ್ಟೋರಿ ನೋಡುವಾಗ ಅನಿಸಿದ್ದು ಇದೇನೇ.. ತೀರಾ ಸರಳಾತಿಸರಳ ಎನ್ನುವ ಕತೆಗೆ ದೃಶ್ಯ ಜೋಡಿಸಿ ಬರೀ ಮಾತಿನಿಂದಲೇ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಆದರೆ ಆದಷ್ಟು ಸುಲಭವೇ.. ಹುಡುಗ ಹುಡುಗಿ ಮಾತಾಡುತ್ತಾ ಮಾತಾಡುತ್ತಾ ಸಿನಿಮಾದ
ಕ್ಲೈಮಾಕ್ಸ್ ವರಗೂ ಪಯಣಿಸುವ ಕತೆ ಹೇಗೆ ಪ್ರೇಕ್ಷಕನನ್ನು ಹಿಡಿದುಕೂರಿಸಿಕೊಳ್ಳುತ್ತದೆ.. ಹಾಗಾದರೆ ಸಿನಿಮಾಕ್ಕೊಂದು ಗಟ್ಟಿ ಕತೆ ಬೇಕು ಎಂಬುದು ಸುಳ್ಳಾ..? ಮೂಗಿಗಿಂತ ಮೂಗುತಿ ಭಾರವಾದಾಗ ಸಿನಿಮಾ ಸೋತಿದೆ, ಅಥವಾ ಪರಿಣಾಮಕಾರಿಯಾಗಿ ಮೂಡಿ ಬರದೆ ಇರುವ ಉದಾಹರಣೆಗಳಿವೆ. ಕಷ್ಟಪಟ್ಟು, ಕೋಟ್ಯಾಂತರ ಸುರಿದು ನಿರ್ಮಿಸಿದ ಸ್ಟಾರ್ ಚಿತ್ರಗಳೇ ಇತ್ತೀಚಿಗೆ ಚಿತ್ರ ಮಂದಿರದಿಂದ ಅವಸರವಸರವಾಗಿ ಕಾಲ್ತೆಗೆದದ್ದು  ಗೊತ್ತಿರುವ ವಿಷಯವೇ. ಆದರೂ ಹೀಗೆ ಸಿನಿರಂಗವನ್ನೇ ಸರಳೀಕರಿಸಿ ಸಿನಿಮಾ ಮಾಡುವುದು ಧೈರ್ಯವೇ ಸರಿ.
ಒಂದು ಸಿನಿಮಾ ಎಂದಾಗ ಅದಕ್ಕೆ ಕತೆ ಎನ್ನುವ ದೊಡ್ಡ ವಿಷಯ ಮೂಲ ಇರುತ್ತದೆ. ಎಲ್ಲೇ ಆಗಲಿ ಯಾವುದೇ ಭಾಷೆಯಲ್ಲಾಗಲಿ, ಒಳ್ಳೆಯ ಕತೆ ಸಿಕ್ಕಿಲ್ಲ, ಅದ್ಭುತ ಕತೆ ಎನಿಸಿತು, ಎನ್ನುವ ಮಾತುಗಳು ಸರ್ವೇ ಸಾಮಾನ್ಯ. ಆದರೆ ಕತೆಯನ್ನೇ ಪಕ್ಕಕ್ಕೆ ತಳ್ಳಿ ಬೇರೆ ಬೇರೆ ವಿಷಯಗಳನ್ನು ಮುಖ್ಯವಾಹಿನಿಗೆ ತಳ್ಳಿ ಸಿನಿಮಾ ಮಾಡಿದ್ದು ಇತ್ತೀಚಿನ ಚಿತ್ರಕರ್ಮಿಗಳು. ಅದರಲ್ಲೂ ನಮ್ಮ ಕನ್ನಡದ ಕೆಲವು ಚಿತ್ರಗಳಲ್ಲಿ ಮುಖ್ಯವಾದದ್ದು ಎನಿಸಿದ್ದು ಸಂಭಾಷಣೆ. ಆದರೆ ಸಂಭಾಷಣೆಯೇ ಸಿನಿಮಾ ಎಂಬರ್ಥದ ಮಾದರಿಯಲ್ಲಿ ಬಂದ ಸಿನಿಮಾಗಳೆಲ್ಲಾ ಯಶಸ್ಸು ಕಾಣಲಿಲ್ಲ. ಸ್ಟಾರ್ ಇದ್ದರೆ ಸಾಕು, ಹಾಡುಗಳು ಹಿಟ್ ಆದರೆ ಸಾಕು, ಟ್ರೆಂಡ್ ನಡೆಯುತ್ತಿದೆ, ನಾವು ಈ ನಿಟ್ಟಿನಲ್ಲಿ ನಮ್ಮದೂ ಒಂದು ಸಿನಿಮಾ ಮಾಡಿ ಬಿಡೋಣ ಅಂದುಕೊಂಡು ಸಿನಿಮಾ ಮಾಡಿದವರೂ ಇದ್ದಾರೆ. ಇದರ ಜೊತೆಗೆ ಉಪಗ್ರಹ ಹಕ್ಕಿಗಾಗಿ ಸಿನಿಮಾ ಮಾಡಿ, ಅದನ್ನು ಕುಲಗೆಡಿಸಿ ಚಿತ್ರರಂಗದ ಗುಣಮಟ್ಟವನ್ನು ಹಳ್ಳ ಹಿಡಿಸಿದ ಪುಣ್ಯಾತ್ಮರೂ ಇದ್ದಾರೆ. ಅವರಿಗೆಲ್ಲಾ ಸಿನಿಮಾ ಸಿಂಪಲ್. 

Friday, March 11, 2016

ಕಿರಗೂರು ದೃಶ್ಯರೂಪದಲ್ಲೇನಿದೆ.. ಏನಿಲ್ಲಾ..?

ಒಂದು ಜನಪ್ರಿಯ ಕಾದಂಬರಿಗೆ ದೃಶ್ಯ ರೂಪ ಕೊಡುವ ಕೆಲಸ ಸಾಮಾನ್ಯವಾದುದಲ್ಲ. ಏಕೆಂದರೆ ಬರಹದಲ್ಲಿ ಒಂದು ಸಾಲಿನಲ್ಲಿ ಹೇಳಿದ್ದನ್ನು ತೋರಿಸಲು ಒಂದು ಶಾಟ್ ಸಾಕಾಗಬಹುದು, ಅಥವಾ ದೃಶ್ಯಗಳೇ ಬೇಕಾಗಬಹುದು. ಸುಮನ ಕಿತ್ತೂರು ಈ ಹಿಂದೆ ಎದೆಗಾರಿಕೆ ಮಾಡಿದ್ದಾಗ ಮೂಲ ಕಾದಂಬರಿಗೆ ನ್ಯಾಯ ಒದಗಿಸಬಲ್ಲರೆ ಎನ್ನುವುದು ಪ್ರಶ್ನೆಯಾಗಿತ್ತು. ಏಕೆಂದರೆ ಕಾದಂಬರಿಯಲ್ಲಿ ಹೆಚ್ಚು ಬರುವುದು ಮತ್ತು ನಿರೂಪಿತವಾಗುವುದು ಕಾದಂಬರಿಕಾರನ ಕತೆ. ಅವನ ದೃಷ್ಟಿಕೋನದ ಮೂಲಕ ಕತೆ ಸಾಗುತ್ತದೆ. ಅವನು ವಿವರಿಸುತ್ತಾ ಸಾಗುವ ಕತೆಯಲ್ಲಿ ಪರಿಚಯವಾಗುವುದು "ಅವನ" ಕತೆ. ಅದನ್ನು ಒಬ್ಬ ನಿರ್ದೇಶಕ/ಕಿ ಹೇಗೆ ತೆರೆಯ ಮೇಲೆ ತರಬಹುದು ಎನ್ನುವ ಕುತೂಹಲ ನನಗಂತೂ ಇತ್ತು. ಇತ್ತ ಕಾದಂಬರಿ ಎನಿಸಿಕೊಳ್ಳುವಷ್ಟು ದೊಡ್ಡದೂ ಅಲ್ಲದ, ನೀಳ್ಗತೆ ಎನಿಸಿಕೊಳ್ಳುವಷ್ಟು ಚಿಕ್ಕದು ಅಲ್ಲದ ಎದೆಗಾರಿಕೆಯನ್ನು ನಾನು ಅದೆಷ್ಟು ಸಲ ಓದಿದ್ದೆ ಎಂಬುದು ನನಗೆ ಲೆಕ್ಕವಿರಲಿಲ್ಲ. ಕೊನೆಯಲ್ಲಿ "ಅವನು" ಹೇಗೆ ಡಿಸೈಡ್ ಆಗಿದೆ, ಗನ್ ನಲ್ಲಿ ಸಾಯಿಸುತ್ತೀರಾ..? ಎಂಬರ್ಥದಲ್ಲಿ ಪ್ರಶ್ನಿಸುತ್ತಾನೆ. ನಿರೂಪಕ ಹಾಗೆ ಮೌನವಾಗುತ್ತಾನೆ. ನಿಜಕ್ಕೂ ನನ್ನ ಸ್ಥಿತಿಯೂ ಅದೇ ಆಗಿತ್ತು.  ಆದರೆ  ಸೋನಾ ನ ಕತೆಯನ್ನು ದೃಶ್ಯ ರೂಪದಲ್ಲಿ ಹೆಚ್ಚು ತರುವ ಮೂಲಕ ನ್ಯಾಯ ಒದಗಿಸಿದ್ದರು ಸುಮನಾ ಕಿತ್ತೂರು. ಸಿನಿಮಾ ಖುಷಿ ಕೊಟ್ಟಿತ್ತು.
ಆದರೆ ಅದೇ ಮಾತನ್ನು ಕಿರಗೂರಿಗೆ ಹೇಳುವುದು ಕಷ್ಟ. ಈಗಾಗಲೇ ಕಾದಂಬರಿ ಓದಿದವರಿಗೆ ಕಿರುಗೂರು ಸಿನಿಮಾ ರೂಪ ಖುಷಿ ಕೊಡುವುದೇ..? ಹೇಳುವುದು ಕಷ್ಟ.  ಕಿರಗೂರು ಗಯ್ಯಾಳಿಗಳು ಕತೆಯ ಮುಖ್ಯ ಅಂಶ ಅಲ್ಲಿನ ಹೆಂಗಸರ ಬಜಾರಿತನವಷ್ಟೇ ಅಲ್ಲ, ಅವರ ಮಾತುಗಳು. ಕತೆಯಲ್ಲಿ ಹಲವಾರು ಕೊವೆಗಳಿವೆ. ಆದರೆ ಸಿನಿಮಾ ರೂಪ ಎಂದಾಗ ಅಲ್ಲಿರುವ ಅಷ್ಟೂ ಕತೆಯನ್ನು ಪ್ರತಿ ಪುಟವನ್ನು ತೆರೆಯ ಮೇಲೆ ತರಬೇಕು ಎನ್ನುವಂತಿಲ್ಲ. ಕೆಲವೇ ಪುಟಗಳನ್ನೂ ತೆಗೆದುಕೊಂಡ ಪುಟ್ಟಣ್ಣ ಬೆಳ್ಳಿಮೋಡ ಮಾಡಿ ಗೆದ್ದಿದ್ದಾರೆ,. ಬರೀ ಥೀಮ್ ಅಷ್ಟೇ ತೆಗೆದುಕೊಂಡ ಸ್ಲಂ ಡಾಗ್ ಚಿತ್ರ ಬೇರೆಯದೇ ಕತೆಯಾಗಿ ಇಷ್ಟವಾಗುತ್ತದೆ. ದೃಶ್ಯರೂಪ ಎಂದಾಗ ಬರಹಗಾರ/ಲೇಖಕ ಪಕ್ಕಕ್ಕೆ ಸರಿಯುತ್ತಾನೆ, ಅಲ್ಲಿ ಸಾರ್ವಭಾಮನಾಗುವುದು ಕಲಾವಿದ. ಕಿರಗೂರು ಚಿತ್ರದಲ್ಲಿ ಗಯ್ಯಾಳಿಗಳ ಪಾತ್ರದಲ್ಲಿ ಶ್ವೇತಾ, ಮಾನಸ ಜೋಷಿ, ಸೋನು, ಸುಕೃತ ವಾಗ್ಲೆ ಇದ್ದಾರೆ. ಆದರೆ ಅವರ ಸಂಭಾಷಣೆ ದೇಸಿಯ ವಾಗಿದೆ, ಆದರೆ ಅದನ್ನು ಒಪ್ಪಿಸುವ ಪರಿ ಮಾತ್ರ ಸಹಜವಾಗಿಲ್ಲ. ಏಕೆಂದರೆ ಕಲಾವಿದರಿಗೆ ಆಯಾ ಭಾಷೆಯಾ ಸೊಗಡನ್ನು ಹಾಗೆಯೇ ಸಹಜವಾಗಿ ಒಪ್ಪಿಸಲು ಸಾಧ್ಯವಾಗಿಲ್ಲ. ಅವರ ಬೈಗುಳ, ದಿಟ್ಟತನದ ಮಾತುಗಳು ಮತ್ತು ಶೈಲಿ ಇಲ್ಲಿ ಕೈಕೊಟ್ಟಿದೆ.
ಮೊನ್ನೆ ಬೆಂಗಳೂರು ಸಿನಿಮೊತ್ಸವದಲ್ಲಿ ರಾಮ್ ರೆಡ್ಡಿ ನಿರ್ದೇಶನದ "ತಿಥಿ" ಚಿತ್ರ ನೋಡಿದಾಗ ನನಗನ್ನಿಸಿದ್ದು ಏನೆಂದರೆ ಆ ಸಿನೆಮಾವನ್ನು ಯಾವ ಆಸ್ಕರ್ ಪಡೆದ ನಟನನ್ನು ಕರೆದು ತಂದು ಅಭಿನಯಿಸುವಂತೆ ಮಾಡಿದ್ದರೂ ಆ ಸೊಗಸು ಬರುತ್ತಿರಲಿಲ್ಲವೇನೋ ಎಂಬುದು. ಏಕೆಂದರೆ ಅದೇ ಊರಿನ ಒಂದಷ್ಟು ಜನರನ್ನು ಆಯ್ಕೆಮಾಡಿ ಅವರಿಗೆ ಹೀಗೆ ಹೇಳಿ, ಇಷ್ಟು ಹೇಳಿ ಎಂದು ಅವರ ಕೈಯಲ್ಲಿ ಅಭಿನಯ ತೆಗಿಸಿರುವ ಪರಿ ಅನನ್ಯ. ಹಾಗೆಯೇ ಮೊನ್ನೆ ಮೊನ್ನೆ ಗೀತಾ ಬ್ಯಾಂಗಲ್ ಸ್ಟೋರ್ ಎನ್ನುವ ಸಿನಿಮಾ ಬಂದಿತ್ತು. ಅದರಲ್ಲಿಯೂ ಒಂದು ಪ್ರಾಂತ್ಯದ ಸೊಗಡನ್ನು ನಿರ್ದೇಶಕರು ಅದ್ಭುತವಾಗಿ ತೆರೆಯ ಮೇಲೆ ತಂದಿದ್ದರು. ಆದರೆ ಅದೇ ಕೆಲಸವನ್ನು ಸುಮನ ಕಿತ್ತೂರು ಶ್ರಮಪಟ್ಟರೂ ಸಂಪೂರ್ಣ ತರುವಲ್ಲಿ ಯಶಸ್ವಿಯಾಗಿಲ್ಲ. ಹಾಗೆಯೇ ಚಿತ್ರಕತೆಗೆ ಗೊತ್ತು ಗುರಿಯಿಲ್ಲದಿರುವುದು ಮತ್ತು ನಿರೂಪಣೆಯಲ್ಲಿ ಸ್ಪಷ್ಟತೆ ಇಲ್ಲದಿರುವುದು ಕೂಡ ಚಿತ್ರದ ಮೈನಸ್ ಪಾಯಿಂಟ್. ಉದಾಹರಣೆಗೆ ಚಿತ್ರ ಪ್ರಾರಂಭವಾಗುತ್ತಲೇ ಪರಿಚಯವಾಗುವ ಗಯ್ಯಾಳಿ ಪಾತ್ರಗಳ ಗುಣಾವಗುಣ ಪರಿಚಯವಾದರೂ ಅವರ ಕುಟುಂಬಗಳ ಪರಿಚಯ ಸ್ಪಷ್ಟವಾಗಿಲ್ಲ. ಹಾಗೆಯೇ ಕಿರಗೂರು ನಲ್ಲಿನ ಎರಡು ಜಾತಿಗಳ ನಡುವಣ ಜನರ ಸಂಬಂಧದ ಅನಾವರಣದ ಸ್ಪಷ್ಟತೆ ಕೂಡ ಇಲ್ಲ.
ಇವೆಲ್ಲದರ ನಡುವೆಯೂ ಸಿನಿಮಾ ಓಕೆ ಎನಿಸುವುದು ಅದರ ಕಥಾದೃಷ್ಟಿಯಿಂದ. ಒಂದು ಒಳ್ಳೆಯ ಕತೆಯನ್ನು ಸಿನಿಮಾಕ್ಕೆ ಆಯ್ದುಕೊಳ್ಳುವ ಪದ್ಧತಿ ಮತ್ತು ಸಂಪ್ರದಾಯ ಚಿತ್ರರಂಗಕ್ಕೆ ಅತೀ ಮುಖ್ಯ. ಮಾತೆತ್ತಿದರೆ ರಿಮೇಕ್ ಎನ್ನುವ ಜನರ ನಡುವೆ ಅಥವಾ ಅವರದೇ ಆದ ಕತೆಯನ್ನು, ಅದು ಕತೆ ಎನಿಸದಿದ್ದರೂ ಸಿನಿಮಾ ಮಾಡುವ ಮಂದಿಯ ನಡುವೆ ಇಂತಹ ಚಿತ್ರಗಳನ್ನು ತೆರೆಗೆ ತರುವ ನಿರ್ದೇಶಕರನ್ನು ಪ್ರಶಂಸೆ ಮಾಡಲೇಬೇಕಾಗುತ್ತದೆ. ಆದರೆ ನಿರೀಕ್ಷೆ ಹುಟ್ಟುಹಾಕುವ ಅವರೇ ಅದನ್ನು ತಾಕದಿದ್ದಾಗ ಎಲ್ಲೋ ಒಂದು ಮೂಲೆಯಲ್ಲಿ ಇನ್ನೂ ಚೆನ್ನಾಗಿರಬೇಕಾಗಿತ್ತು ಎನಿಸಿದರೆ ಅದಕ್ಕೆ ಅವರೇ ಕಾರಣವಾಗುತ್ತಾರೆ. ಮತ್ತದೂ ಒಳ್ಳೆಯದು ಕೂಡ. ಹಾಗಾಗಿ ಕಿರಗೂರು ಚಿತ್ರ ನೋಡಬೇಕಾದ ಚಿತ್ರ, ನೋಡಿದ ಮೇಲೆ ಮಾತಾಡಬೇಕಾದ ಚಿತ್ರ, ಅದರ ಬಗ್ಗೆ ಚರ್ಚಿಸಬೇಕಾದ ಚಿತ್ರ. ಅದರ ಒಳ ಹೊರಗನ್ನು ವಿಶದಪಡಿಸಬೇಕಾದ ಚಿತ್ರ. ಹಾಗಾದಾಗ ಆದವರಿಗೆ ತಲುಪಿದಾಗ ಅವರ ಜವಾಬ್ದಾರಿಯೂ ಹೆಚ್ಚುತ್ತದೆ, ನಮ್ಮಂತಹ ಪ್ರೇಕ್ಷಕರಿಗೆ ನೋಡಲು ಮತ್ತೊಂದು ಒಳ್ಳೆಯ ಸಿನಿಮಾ ಅಪ್ಡೇಟ್ ಆಗಿ ಸಿಗುತ್ತದೆ.

Thursday, March 10, 2016

ಸಾಲು ಸಾಲು ಚಿತ್ರಗಳ ನಡುವೆ ನೋಡಬೇಕಾದದ್ದು..

ಪೂಚಂತೇ ಬರಹಗಳು ನನ್ನನ್ನು ಓದಿಸಿಕೊಂಡಿದ್ದು ಬಹಳ. ಅದೆಷ್ಟೇ ಸಲ ಓದಿದ್ದರೂ ಮತ್ತೊಮ್ಮೆ ಓದುವ ಎನ್ನುವಂತೆ ಮಾಡುವುದು ಅವರ ಬರಹಗಳ ವಿಶೇಷ. ಅವರ ಪರಿಸರದ ದಿನಗಳು ಮೊನ್ನೆ ಎಲ್ಲೋ ಹೋದಾಗ ಕೈ ಸಿಕ್ಕಿ ಅದೆಷ್ಟು ಆನಂದವಾಯಿತು ಎಂದರೆ ಅದನ್ನು ಇದಾಗಲೇ ಲೆಕ್ಕವಿಲ್ಲದಷ್ಟು ಸಲ ಓದಿದ್ದರೂ ಮತ್ತೊಮ್ಮೆ ಓದಿ ಆವಾಂತರ ಸೀನಪ್ಪ, ಮಾಸ್ತಿ ಭೈರ ಮುಂತಾದವರನ್ನು ಮನ'ತುಂಬಿಸಿಕೊಂಡದ್ದಾಯಿತು. ಪೂಚಂತೇ ಕಾದಂಬರಿಗಳು ಕತೆಗಳು ಸಿನಿಮಾ ರೂಪ ತಾಳಿವೆ. ಅವರ ತಬರನ ಕತೆ ಈವತ್ತಿಗೂ ಮನ ಮಿಡಿಸುತ್ತದೆ. ಅವರ ಜುಗಾರಿ ಕ್ರಾಸ್ ಸೂಪರ್ ಥ್ರಿಲ್ಲರ್. ಆ ನಿಟ್ಟಿನಲ್ಲಿ ಕಿರಗೂರಿನ ಗಯ್ಯಾಳಿಗಳು ನೀಳ್ಗತೆ ಒಂದು ಜಾಲಿ ರೈಡ್ ಎನ್ನಬಹುದು. ಅಲ್ಲಿನ ಸಂಭಾಷಣೆ ಮತ್ತು ನಡೆಯುವ ಘಟನೆಯೇ ಚಿತ್ರದ ಕತೆಯ ಹೈ ಲೈಟ್. ಅದು ಸಿನಿಮಾ ರೂಪಕ್ಕೆ ಬರುತ್ತಿರುವುದು ಮತ್ತು ಚಿತ್ರಕ್ಕೆ ನಿರ್ದೇಶಕಿ ಆಯ್ಕೆ ಮಾಡಿಕೊಂಡಿರುವ ತಾರಾಗಣ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚು ಮಾಡಿದೆ. ಹಾಗೆಯೇ ಎಂಟು ನಿಮಿಷಗಳ ಟ್ರೈಲರ್ ಮೂಲಕ ಮನಗೆದ್ದ ಸುನಿ ಅವರ ಸಿಂಪಲ್ ಆಗ್ ಇನ್ನೊಂದ್ ಲವ್ ಸ್ಟೋರಿ. ಅವರ ಮೊದಲ ಸಿನಿಮಾ ತೆರೆಗೆ ಬಂದಾಗ ಸ್ವಲ್ಪ ಅಗತ್ಯಕ್ಕಿಂತ ಜಾಸ್ತಿಯೇ ಅಬ್ಬರಿಸಿದ್ದ ಚಿತ್ರತಂಡವದು. ಒಮ್ಮೊಮ್ಮೆಗೆ ತಮ್ಮ ಬ್ಯಾನರ್ ನ ಐದಾರು ಚಿತ್ರಗಳನ್ನು ಘೋಷಣೆ ಮಾಡಿ ಹುಬ್ಬೇರಿಸುವಂತೆ ಮಾಡಿದ್ದ ಸುನಿ ಬಹುಪರಾಕ್ ನಂತರ ತೀರಾ ಮಂಕಾದದ್ದು ವಿಪರ್ಯಾಸ. ಅವರದೇ ನಿರ್ಮಾಣದ ಮತ್ತೊಂದು ಚಿತ್ರ ಉಳಿದವರು ಕಂಡಂತೆಯೇ ಚಿತ್ರದ ಸೋಲು ಅವರನ್ನು ಪೂರ್ತಿಯಾಗಿ ಹಳ್ಳ ಹಿಡಿಸಿದ್ದು ಸತ್ಯ. ಹಾಗೆ ನೋಡಿದರೆ ಎರಡೂ ಚಿತ್ರಗಳು ಹೊಸ ಪ್ರಯೋಗಗಳೇ. ಆದರೆ ಅದೆಲ್ಲೋ ಹಣಕಾಸಿನ ಲೆಕ್ಕಾಚಾರ ಉಲ್ಟಾ ಆಯಿತೇನೋ? ಆ ಎರಡು ಸಿನಿಮಾ ಗೆದ್ದಿದ್ದರೆ ಕನ್ನಡಕ್ಕೆ ಮತ್ತಷ್ಟು ಹೊಸ ನಿರ್ದೇಶಕರ ಪರಿಚಯವಾಗುತ್ತಿತ್ತೇನೋ? ಈಗ ಸದ್ದಿಲ್ಲದೇ ಸುನಿ ಮಾತ್ತೊಂದು ಸಿನಿಮಾ ತಂದಿದ್ದಾರೆ. ಅದರದ್ದೂ ಮಾರುದ್ದದ ಟ್ರೈಲರ್ ಬಿಟ್ಟಿದ್ದರೂ ಆ ಸಿನಿಮಾ ಮಾಡಿದ ಮೋಡಿಯನ್ನು ಈ ಸಿನಿಮಾ ಮಾಡಿಲ್ಲ. ಆದರೂ ಭರವಸೆಯಂತೂ ಇದ್ದೆ ಇದೆ.
ವಾರಕ್ಕೆ ಆರಾರು ಚಿತ್ರಗಳು ಬಿಡುಗಡೆಯಾಗುತ್ತಿದೆ. ಒಂದು ಸಿನಿಮಾ ಮಾಡುವುದು ವರ್ಷಗಟ್ಟಲೆ ಸಮಯದ ನೂರಾರು ಜನರ ಶ್ರಮದ ಮತ್ತು ಕೋಟ್ಯಾಂತರ ರೂಪಾಯಿಗಳ ಖರ್ಚಿನ ವಿಷಯ. ಆದರೆ ಕೆಲವೊಮ್ಮೆ ಅದನ್ನೂ ಅಷ್ಟೇ ಸುಲಭವಾಗಿ ಮಾಡಿಬಿಡುವ ನಿರ್ದೇಶಕರಿಗೆ ಒಂದೊಂದು ದೊಡ್ಡ ಸಲಾಂ ಹೊಡೆಯಲೇ ಬೇಕಾಗುತ್ತದೆ. ಫೆಬ್ರವರಿ ತಿಂಗಳಿನಲ್ಲಿ ಭಾಗ್ಯರಾಜ್, ದೇವರ ನಾಡಲ್ಲಿ, ಗಜಪಡೆ, ಜ್ವಲಂತಂ, ನಾನಿಲ್ದೆ ನೀನಿರ್ತೀಯ, ಪ್ರಿಯಾಂಕ, ಶಿವಯೋಗಿ ಪುಟ್ಟಯ್ಯಜ್ಜ, ಬನವಾಸಿ, ಪ್ರೀತಿಯಲ್ಲಿ ಸಹಜ, ಶಿವಲಿಂಗ, ಆಕ್ಟರ್, ಭಲೆಜೋಡಿ, ಮಧುರ ಸ್ವಪ್ನ, ನನ್ನ ಲವ್ ಟ್ರ್ಯಾಕ್, ರಾಜ್ ಬಹದ್ದೂರ್, ಯು ದಿ ಎಂಡ್ ಎ, 400, ಗೇಮ್. ಕೃಷ್ಣರುಕ್ಕು, ಮರೆಯಲಾರೆ, ಪ್ರೀತಿ ಕಿತಾಬು, ವಾಟ್ಸ್ ಅಪ್ ಲವ್ ಬಿಡುಗಡೆಯಾಗಿವೆ. ಅಂದರೆ ವಾರಕ್ಕೆ ಆರು ಚಿತ್ರಗಳು. ಅದರಲ್ಲಿ ಯಾವುದೂ ಗಮನ ಸೆಳೆದಿಲ್ಲ. ನೋಡುಗ ವಾರಕ್ಕೆರೆಡು ನೋಡಿದರೂ ಸಿನಿಮಾಗಳು ದಂಡಿಯಾಗಿ ಬಾಕಿ ಉಳಿಯುತ್ತವೆ. ಇವುಗಳಲ್ಲಿ ಕೆಲವಂತೂ ಕೆಲವು ಊರನ್ನು ಕಾಣುವುದೇ ಇಲ್ಲ. ಬೆಂಗಳೂರಿನ ಒಂದೆರೆಡು ಚಿತ್ರಮಂದಿರಗಳಲ್ಲಿ ಕಾಣಿಸಿಕೊಂಡರೆ ಆಮೇಲೆ ಅವನ್ನು ನಾವು ನೋಡುವುದಕ್ಕೂ ಸಾಧ್ಯವಿಲ್ಲ. ಮೊದಲೆಲ್ಲಾ ಮಿಸ್ಸಾದರೆ ಟಿವಿಯಲ್ಲಿ ಬರುತ್ತೆ ಎನ್ನಬಹುದಾಗಿತ್ತು. ಈಗ ಟಿವಿಯಲ್ಲಿ ಬರುವುದಿಲ್ಲ. ಬೇರೆ ತಾಲೂಕು, ಹೋಬಳಿ, ದೊಡ್ಡ ಊರುಗಳ ಟೆಂಟ್ ನಲ್ಲಿ ಕಾಣಿಸುವುದಿಲ್ಲ. ಹಾಗಾಗಿ ಬಂದದ್ದಷ್ಟೆ.. ಹೋದದ್ದಷ್ಟೇ. ಆನಂತರ ಆ ಸಿನಿಮಾ, ಆ ನಿರ್ದೇಶಕ, ಆ ನಿರ್ಮಾಪಕ, ಆ ಹಣ ಎಲ್ಲವೂ ಮಂಗಮಾಯ. ಆದರೂ ಸಿನೆಮಾವನ್ನು ಅಧ್ಯಯನ ಮಾಡದಯೇ ಕಣ್ಮುಚ್ಚಿಕೊಂಡು ಸಿನಿಮಾ ಮಾಡುವ ಅದನ್ನು ಬಿಡುಗಡೆ ಮಾಡುವವರಿಗೇನೂ ಕಡಿಮೆಯಿಲ್ಲ ಎನ್ನುವುದು ಬೇಸರದ ಸಂಗತಿ. ಹಾಗೆಯೇ ಈ ವಾರವೂ ಸಿನಿಮಾಗಳಿವೆ. ಎಲ್ಲವನ್ನೂ ನೋಡುವ ಎನಿಸಿದರೂ ಎ ಎರಡು ಚಿತ್ರಗಳು ಭರವಸೆ ಹುಟ್ಟಿಸಿವೆ.

Saturday, March 5, 2016

ರೇ...ರೇ.....

ದೇಸಾಯಿ ಕಳೆದುಹೋಗಿ ತುಂಬಾ ದಿನಗಳೇ ಆಗಿವೆ. ಆದರೆ ಅವರನ್ನು ಮತ್ತೆ ಮತ್ತೆ ಹುಡುಕುವ ಪ್ರೇಕ್ಷಕನ ಪ್ರಯತ್ನ ವಿಫಲವಾಗುತ್ತಲೇ ಇದೆ ಎಂಬುದು ರೆ ಚಿತ್ರದ ಒಂದು ಸಾಲಿನ ವಿಮರ್ಶೆ ಎಂದರೆ ತಪ್ಪಾಗಲಾರದು. 
ಅವನಿಗೆ ಮದುವೆ ಆಗಿಲ್ಲ, ಅವನಿಗೆ ಮದುವೆ ಮಾಡಬೇಕು, ಹಾಗಾದರೆ ಇದೊಂದು ಪ್ರೇಮ ಕೌಟುಂಬಿಕ ಮದುವೆ ಇತ್ಯಾದಿ ಸಂಗತಿಗಳ ಸಾಂಸಾರಿಕ ಚಿತ್ರ ಅಂದುಕೊಳ್ಳಬಹುದೇ..? ಮುಂದೆ ಕೇಳಿ..ಅವರೊಂದು ಮನೆಯಲ್ಲಿ ಅನಿವಾರ್ಯವಾಗಿ ಉಳಿಯಲೇ ಬೇಕು. ನಿಜ,, ಅಲ್ಲಿ ಒಂದಲ್ಲ ಎರಡಲ್ಲ ಐದು ಪ್ರೇತಾತ್ಮಗಳಿವೆ, ಅಯ್ಯೋ ಇದು ಹಾರರ್ ಇರಬಹುದಾ..?  ಆ ಪ್ರೆತಾತ್ಮಗಳಿಗೆ ಮುಕ್ತಿ ಸಿಗಬೇಕಾದರೆ ನಾಯಕನ ಮದ್ವೆ ಆಗಬೇಕು.. ಅದಕ್ಕಾಗಿ ಪ್ರೇತಗಳ ತಂತರ್ಗಾರಿಕೆ, ಉಪಾಯ.. ಒಹೋ ಇದು ಹಾರರ್ ಕಾಮಿಡಿ.. ಉಹೂ.. ಚಿತ್ರ ಕ್ಷಣ ಕ್ಷಣಕ್ಕೂ ಬದಲಾಗುತ್ತದೆ. ಪಾತ್ರಗಳು ಬರುತ್ತವೆ, ಮಾತನಾಡುತ್ತವೆ, ನಟಿಸುತ್ತವೆ, ಹೋಗುತ್ತವೆ. ಹಾಡುಗಳು ಬರುತ್ತವೆ. ಅವುಗಳು ಇಂಪಾಗಿದೆಯಾ? ಬೇಡ ಬಿಡಿ.. ಅವುಗಳು ಬರುವ ಸಂದರ್ಭ ಸಿನಿಮಾಕ್ಕೆ ಸೂಕ್ತವೆ..? ಉಹೂ..
ದೇಸಾಯಿ ಚಿತ್ರಗಳೆಂದರೆ ಅದರ ಖದರ್ರೆ ಬೇರೆ ಇರುತ್ತಿತ್ತು. ನಾನು ಹೈ ಸ್ಕೂಲ್ ನಲ್ಲಿದ್ದಾಗ ನಿಷ್ಕರ್ಷ ಬಿಡುಗಡೆಯಾಗಿತ್ತು. ವಿಷ್ಣುವರ್ಧನ್ ಅಷ್ಟೇ ನಮಗೆ ಮುಖ್ಯವಾಗಿದ್ದ ಸಮಯವದು. ವಿಷ್ಣುವರ್ಧನ್, ಸೈನಿಕನ ಡ್ರೆಸ್, ಕೈಯಲ್ಲಿ ಮಷೀನ್ ಗನ್ ಒಂದು ಸಿನಿಮಾ ನೋಡಲು ನಮಗೆ ಬೇರೆ ಯಾವ ಕಾರಣಗಳೂ ಬೇಕಿರಲಿಲ್ಲ. ಫೈಟ್ ಇರುತ್ತವೆ ಎನ್ನುವುದು ಆವತ್ತಿನ ಸಿನೆಮಾ ನೋಡಲು ಮುಖ್ಯವಾದ ಏಕೈಕ ಆಕರ್ಷಣೀಯ ಸಂಗತಿ. ಹಾಗಾಗಿ ಹುಚ್ಚೆದ್ದು ಸಿಎಂಮ ನೋಡಿದ್ದೆವು. ಆದರೆ ನಿಷ್ಕರ್ಷ ಮಾಮೂಲಿ ಫೈಟಿಂಗ್ ಸಿನಿಮಾದಂತಿರಲಿಲ್ಲ. ನಮಗೆ ಬೇಕಾದ ಅಂಶಗಳ ಜೊತೆಗೆ ಅದರದೇ ಆದ ಕಸುವಿತ್ತು ಸಿನಿಮಾದಲ್ಲಿ. ಅದೊಂದು ಅನುಭವವೇ ಬೇರೆಯಾಗಿತ್ತು. ಆಗ ನಮಗೆ ದೇಸಾಯಿ ಪರಿಚಯವಾದದ್ದು. ಆನಂತರ ಅವರ ತರ್ಕ, ಉತ್ಕರ್ಷ ಸಿನಿಮಾಗಳನ್ನು ಹುಡುಕಿಕೊಂಡು ಹೋಗಿ ನೋಡಿ ಖುಷಿ ಪಟ್ಟು ನಿರ್ದೇಶಕ ಎಂದರೆ ದೇಸಾಯಿ ಎನ್ನುವಂತಾಗಿತ್ತು. ಪುಟ್ಟಣ್ಣ ಎಂದರೆ ಒಂದು ಚಿತ್ರ ಮೂಡುತ್ತಿದ್ದ ಪಟ್ಟಿಯಲಿ ಈಗ ದೆಸಾಯಿಯವರ್ದೆ ಬೇರೆಯದೇ ಚಿತ್ರ ನಿಲ್ಲುತ್ತಿದ್ದು. ದೇಸಾಯಿ ಎಂದರೆ ರೋಚಕತೆ ಎನ್ನುವಮಟ್ಟಿಗೆ ದೇಸಾಯಿ ನಮ್ಮನ್ನು ಸೆಳೆದಿದ್ದರು. ಆನಂತರ ನಮ್ಮೂರ ಮಂದಾರ ಹೂವೆ ನೋಡಿ ಒಹೋ ದೇಸಾಯಿ ಹೀಗೂ ಮಾಡುತ್ತಾರೆ, ಹೇಗೆ ಬೇಕಾದರೂ ಮಾಡುತ್ತಾರೆ, ಏನು ಬೇಕಾದರೂ ಮಾಡುತ್ತಾರೆ ಅವರೊಬ್ಬ ಸಿನಿಮಾ ಮಾಂತ್ರಿಕ ಎನ್ನುವ ನಿರ್ಧಾರ ನನ್ನದಾಗಿತ್ತು.
ಆದರೆ ಆನಂತರ ದೇಸಾಯಿ ಕಳೆದುಹೋಗುತ್ತಾ ಬಂದರು. ಅವರನ್ನು ಹುಡುಕುವ ಕೆಲಸಕ್ಕೆ ನಾನು ನಿಂತುಕೊಂಡೆ. ಬಿಡುಗಡೆಯಾಗುವ ಅವರ ಚಿತ್ರದಲ್ಲಿ ಅದಿಲ್ಲದಿದ್ದರೆ, ಇದಿರಬಹುದು, ಇದಿಲ್ಲದಿದ್ದರೆ ಬೇರೇನೋ ಇರಬಹುದು.. ಹೀಗೆ. ಆದರೆ ದೇಸಾಯಿ ದೇಸಾಯಿಯಾಗಿಯೇ ಉಳಿದಿಲ್ಲ ಎಂಬುದು ಬೇಸರದ ಸಂಗತಿ. 
ಅವರ ಪರ್ವ, ಕ್ಷಣ ಕ್ಷಣ ಚಿತ್ರಗಳಲ್ಲಿದ್ದ ಗೊಂದಲ ರೇ ಚಿತ್ರದಲ್ಲಿಯೂ ಇದೆ ಎಂಬುದೇ ಬೇಸರ ತರಿಸುತ್ತದೆ. ಒಬ್ಬ ನಿರ್ದೇಶಕ ಅಪ್ಡೇಟ್ ಆಗದೆ ಇದ್ದರೂ ಪರವಾಗಿಲ್ಲ, ಆದರೆ ತಮ್ಮ ಹಳೆಯ ಖದರ್ ಬಿಟ್ಟುಕೊಡಬಾರದು. ಆದರೆ ದೇಸಾಯಿ ಅಲ್ಲೂ ಇಲ್ಲ, ಮುಂದೆಯೂ ಬಂದಿಲ್ಲ  ಎಂದರೆ ಬೇಸರವಾಗುತ್ತದೆ.
ದೇಸಾಯಿ ಮತ್ತೊಂದು ಸಿನಿಮ ಮಾಡುತ್ತಾರೆ, ಮಾಡಲೇಬೇಕು, ಸಿನಿಮಾ ಅಲ್ಲದೆ ಅವರು ಬೇರೇನೂ ಮಾಡಲು ಸಾಧ್ಯ? ದಶಕಗಳ ಸಿನೆಮಾವನ್ನೇ ಉಸಿರುಮಾಡಿಕೊಂಡ ನಿರ್ದೇಶಕನಿಗೆ ಬೇರೆ ಶಕ್ತಿಗಳಿಗಿಂತ ಸಿನೆಮವೇ ಶಕ್ತಿ. ಆ ದೇಸಾಯಿ ಬಂದ"ರೆ" ಕಾಣಿಸಿಕೊಂಡ"ರೇ:" ಅದಕ್ಕಿಂತ ಖುಷಿಯ ಸಂಗತಿ ನಮ್ಮಂತಹ ಸಿನಿಪ್ರೇಮಿಗಳಿಗೆ ಬೇರೇನಿದೆ.