Monday, November 25, 2013

ಜಟ್ಟ ಚಿತ್ರ ಸಂವಾದ...

ನಿನ್ನೆ ಸಂವಾದ ಡಾಟ್ ಕಾಂ ಆಯೋಜಿಸಿದ್ದ ಜಟ್ಟ ಚಿತ್ರದ ಪ್ರದರ್ಶನ ಮತ್ತು ಸಂವಾದಕ್ಕೆ ಹೋಗಿದ್ದೆ. ನಾನು ಅಷ್ಟಾಗಿ ಸಂವಾದಗಳಿಗೆ ಹೋಗುವುದಿಲ್ಲ. ಹೋಗುವುದಿಲ್ಲ ಎನ್ನುವುದಕ್ಕಿಂತ ಹೋಗುವುದಕ್ಕೆ ಅವಕಾಶಗಳು ಅಷ್ಟಾಗಿ ಕೂಡಿ ಬರುವುದಿಲ್ಲ. ಆದರೂ ಈ ಭಾನುವಾರ ಆ ತರಹ ಮಾಡುವುದಕ್ಕೆ ಕೆಲಸಗಳೇನೂ ಇಲ್ಲದ್ದರಿಂದ ಜಟ್ಟ ಸಂವಾದಕ್ಕೆ ಹೋಗಿದ್ದೆ. ಮೊದಲಿಗೆ ಜಟ್ಟ ಚಿತ್ರದ ಪ್ರದರ್ಶನವಿತ್ತು. ನಾನು ಜಟ್ಟ ಚಿತ್ರವನ್ನು ಬಿಡುಗಡೆಯ ದಿನವೇ ನೋಡಿದ್ದೆನಾದರೂ ಮತ್ತೊಮ್ಮೆ ನೋಡಲು ಕುಳಿತುಕೊಂಡೆ. ತುಂಬಾ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಇಷ್ಟವಾಯಿತು.
ಜಟ್ಟ ಒಂದು ಒಳ್ಳೆಯ ಕಥೆಯಿರುವ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೇವಲ ಮೂರೇ ಪಾತ್ರಗಳಲ್ಲಿ ಒಂದಿಡೀ ಸಮಾಜದ ಮುಖಗಳನ್ನು ತೋರಿಸಲು ಪ್ರಯತ್ನಿಸಿರುವ ಗಿರಿರಾಜ್ ನಿಜಕ್ಕೂ ಅಭಿನಂದನಾರ್ಹರು. ಹಾಗಂತ ಚಿತ್ರದಲ್ಲಿ ಋಣಾತ್ಮಕ ಅಂಶಗಳು ಇಲ್ಲವೇ ಇಲ್ಲ ಅಂತಲ್ಲ. ಋಣಾತ್ಮಕ ಅಂಶಗಳಿರದ ಸಿನೆಮಾ ಇಡೀ ಚಿತ್ರಜಗತ್ತಿನಲ್ಲಿಯೇ ಇನ್ನೂ ಬಂದಿಲ್ಲವೇನೋ...ಸಂವಾದದಲ್ಲಿ ಕೆಲವು ಪ್ರಶ್ನೆಗಳು ಉದ್ಭವವಾದವು.ಸ್ತ್ರೀವಾದ ಎಂಬುದು ಬರೀ ಪುರುಷದ್ವೇಷವಾ...ಅದನ್ಯಾಕೆ ಹಾಗೆ ಬಿಂಬಿಸಿದ್ದೀರಿ..ಚಿತ್ರವನ್ನು ಇನ್ನೂ ಪರಿಣಾಮಕಾರಿಯಾಗಿ ತೆಗೆಯಬಹುದಿತ್ತು..ಮಾತುಗಳು, ಭಾಷಣಗಳು ಜಾಸ್ತಿಯಾಯಿತು..ಸಿನಿಮಾ ಒಂದು ದೃಶ್ಯ ಮಾಧ್ಯಮ ಹಾಗಾಗಿ ವಾಚ್ಯ ಮಾಡಿದ್ದು ಸರಿ ಕಾಣಲಿಲ್ಲ...ಹೀಗೆ.
ಪುರುಷ ದ್ವೇಷ, ಸ್ತ್ರೀ ವಾದ , ರಾಜಕೀಯ ..ಹೀಗೆ ಮುಂತಾದವುಗಳನ್ನು ಅಷ್ಟು ಸುಲಭವಾಗಿ ಒಂದು ಸಿನೆಮಾದಲ್ಲಿ ಸಂಪೂರ್ಣವಾಗಿ ಅಳವಡಿಸಿ ಅದನ್ನು ತೋರಿಸಿ ಎಲ್ಲರಿಂದಲೂ ಸೈ ಎನಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಥವಾ ತುಂಬಾ ಆಳವಾಗಿ ಇಂತಹ ವಿಷಯಗಳನ್ನು ಅದ್ಯಯನ ಮಾಡಿ ಅದನ್ನು ಕಥಾ ಚಿತ್ರವನ್ನಾಗಿ ಮಾಡಲು ಸಾಧ್ಯವಿಲ್ಲ ಅಥವಾ ಕಷ್ಟ ಸಾಧ್ಯ.ಹಾಗೂ ಹೀಗೂ ಮಾಡಿದರೆ ಅದೊಂದು ಸಾಕ್ಷ್ಯ ಚಿತ್ರವಾಗಬಹುದೇನೋ?ಅಥವಾ ಬೋರಿಂಗ್ ಅನಿಸಬಹುದಾ..? ಮತ್ತು ಅದೆಲ್ಲವನ್ನೂ ಒಂದು ಪಾತ್ರದ ಮೂಲಕ ವ್ಯಕ್ತ ಪಡಿಸುವುದು ಕಷ್ಟ ಸಾಧ್ಯ. ಹಾಗಾಗಿ ಒಂದಂಶವನ್ನು ರೂಪಿಸಬಹುದೇನೋ? ಹಾಗೆಯೇ ಸಿನೆಮಾ ದೃಶ್ಯ ಮಾಧ್ಯಮವೇ. ನಾವೆಲ್ಲಾ ಮುಂಗಾರು ಮಳೆ ಬಂದಾಗ ವಾಚ್ಯ ಎಂದುಕೊಳ್ಳಲಿಲ್ಲ. ಅಲ್ಲಿನ ಪ್ರತಿ ಮಾತುಗಳನ್ನೂ ಕೇಳಿ ಮಜಾ ಮಾಡಿದೆವು. ಅನುಕರಿಸಿದೆವು. ಹಾಗೆಯೇ ಕೆಲವು ಸಿನಿಮಾಗಳನ್ನು ನೋಡುವಾಗ ಮಾತಾಡದೆ ತಡಕಾಡುತ್ತಿದ್ದಾಗ[ಭಾವ ವ್ಯಕ್ತ ಪಡಿಸುತ್ತಿದ್ದಾಗ] ಗುರು ಅದೇನು ಹೇಳಬೇಕೆಂದುಕೊಂಡಿದ್ದೀಯೋ ಹೇಳಪ್ಪಾ ಮಾರಾಯ ಅಂತ ಕೂಗಿದ್ದೂ ಇದೆ. ಹಾಗಾಗಿ ಕೇಳುವಷ್ಟು ಚೆನ್ನಾಗಿದ್ದಾಗ ಹೇಳುವ ಮಾತುಗಳು ನಮ್ಮದೂ ಮಾತುಗಳಾದಾಗ ಬಹುಶಃ ವಾಚ್ಯ ಎನಿಸುವುದಿಲ್ಲವೇನೋ..ಎದ್ದೇಳು ಮಂಜುನಾಥನನ್ನು ಇಷ್ಟಪಟ್ಟರೂ ಡೈರೆಕ್ಟರ್'ಸ್ ಸ್ಪೆಷಲ್ ಬೋರಾದದ್ದು, ಮಾತೆ ಆಡದ ಬರ್ಫೀ ಕಥೆ ಇಷ್ಟವಾದದ್ದು ಆರ್ಟಿಸ್ಟ್ ಸಿನೆಮಾ ಖುಷಿ ಕೊಟ್ಟದ್ದು .. ರಾಜಕುಮಾರ್ ಅವರ ಸುಲಲಿತ ಕನ್ನಡ ಮಾತುಗಳು, ಉಪೇಂದ್ರರ ಒರಟು ಮಾತುಗಳು, ರವಿಚಂದ್ರನ್ ಉಡಾಫೆ ಮಾತುಗಳು, ಗಣೇಶ್ ರ ಉದ್ದುದ್ದನೆಯ ಮಾತುಗಳು, ಸಾಯಿಕುಮಾರ್ ಅವರ ಬೈಗುಳದಂತಹ ಭಾಷಣಗಳು..ಹೀಗೆ. ಮಾತುಗಳು ಸಿನಿಮಾದ ಒಂದು ಪ್ರಮುಖ ಭಾಗವೇ..ಹೀಗೆ. ಸಿನಿಮಾದಲ್ಲಿ ಎಲ್ಲವೂ ಬೇಕು. ಹಾಡೇ ಇಲ್ಲದೆ ನೋಡಿಸಿಕೊಳ್ಳುವ ನಿಷ್ಕರ್ಷ, ಪೋಲಿಸ್ ಸ್ಟೋರಿ, ನಾಯಿನೆರಳು, ಹಾಡುಗಳಿಲ್ಲದ ಹಾಗೆ ಕಲ್ಪಿಸಿಕೊಳ್ಳಲಾಗದ ಮೈನೆ ಪ್ಯಾರ್ ಕಿಯಾ, ಹಂ ಆಪ್ಕೆ ಹಾಯ್ ಕೌನ್, ಡಿಡಿಎಲ್ ಜೆ, ಮುಂಗಾರುಮಳೆ,...ಹೀಗೆ. ಇಷ್ಟೆಲ್ಲಾ ಮಾತಾಡಿದ ಮೇಲೂ ನಮಗನಿಸುವುದು ಸಿನೆಮಾದ ಅಂಶಗಳಲ್ಲಿ ಎಲ್ಲವೂ ಬೇಕು. ಅದೆಲ್ಲವೂ ಕಥೆಗೆ ಕಥೆಯಲ್ಲಿನ ಪಾತ್ರಕ್ಕೆ ಪೂರಕವಾಗಿರಬೇಕು ಎನ್ನುವುದು.
ಜಟ್ಟ ಚಿತ್ರದಲ್ಲಿನ ಪಾತ್ರಗಳು ಅವುಗಳ ಹಿನ್ನೆಲೆಗೆ ತಕ್ಕಂತೆ ವರ್ತಿಸುತ್ತವೆ. ಮತ್ತದು ಸರಿಯಾಗಿದೆಯಾ..? ಪರಿಪೂರ್ಣವಾ..ಅಂತಹ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ಒಟ್ಟಾರೆ ಸಿನಿಮಾದ ಆಶಯ ಪೂರ್ಣವಾಗಿದೆಯಾ..? ಕಥೆಗೆ ತಕ್ಕಂತಹ ಗತಿ ಇದೆಯಾ...ಎನ್ನುವ ಅಂಶಗಳನ್ನು ಗಮನಿಸಬೇಕೆನೋ? ಆ ನಿಟ್ಟಿನಲ್ಲಿ ಗಿರಿರಾಜ್ ಅಭಿನಂದನಾರ್ಹರು.
ನಾನು ಎಲ್ಲಾ ಸಿನಿಮಾಕ್ಕೂ ಖಾಲಿ ತಲೆಯಲ್ಲಿಯೇ ಹೋಗುತ್ತೇನೆ. ನಿರ್ದೇಶಕ ಯಾರಾದರೆ ನನಗೇನು..ನನಗೇನು ದುಡ್ಡು ಕೊಟ್ಟಿದ್ದಾನಾ ಸಿನೆಮಾ ನೋಡಲಿಕ್ಕೆ ನನ್ನ ಸಮಯ ನನ್ನ ದುಡ್ಡು..ಅವನ ಬಗ್ಗೆ ನಾನ್ಯಾಕೆ ಯೋಚನೆ ಮಾಡಲಿ.. ಎನ್ನುವ ಜಾಯಮಾನದಿಂದ ಪೂರ್ವಗ್ರಹಪೀಡಿತನಾಗದೆ ಸಿನಿಮಾ ನೋಡುತ್ತೇನೆ. ಚೆನ್ನಾಗಿದ್ದರೆ ಖುಷಿ.
ಮೊನ್ನೆ ಕಲರ್ಸ್ ಇನ್ ಬ್ಯಾಂಗಲೋರ್ ಎನ್ನುವ ಸಿನಿಮಾಕೆ ಸಪ್ನಾ ಚಿತ್ರ ಮಂದಿರಕ್ಕೆ ಹೋಗಿದ್ದೆ. ನಿಜಕ್ಕೂ ಆ ನಿರ್ದೇಶಕನನ್ನು ಕಂಡು ಒಮ್ಮೆ ಮಾತಾಡಿಸಬೇಕು ಎನಿಸಿತು. ಅಥವಾ ಈ ತರಹದ ಒಂದು ಸಂವಾದ ಇಟ್ಟುಕೊಂಡು ಆ ಸಿನಿಮಾ ಹಾಕಿ ಅವರ ಜೊತೆ ಚರ್ಚಿಸಬೇಕು ಎನಿಸಿತು. ಅದೇಗೆ ಈ ರೀತಿ ಸಿನಿಮಾ ಮಾಡಲು ಸಾಧ್ಯ ಎಂದು ಕೇಳಬೇಕು. ಅದೇಗೆ ಕಥೆ ಬರೆದಿರಿ, ಅದ್ಯಾಕೆ ಹಾಗೆ ನಟಿಸಲು ಬಿಟ್ಟಿರಿ, ಅದ್ಯಾರು ನಿಮ್ಮನ್ನು ಸಿನಿಮಾ ಮಾಡಲು ಪ್ರೇರೇಪಿಸಿದವರು ಮತ್ತು ಆ ಕಥೆ[?]ಯನ್ನು ಯಾಕೆ ನಮ್ಮೆಲ್ಲರ ಮುಂದಿಡಬೇಕು ಎಂದು ಕೇಳಬೇಕು ಎನಿಸಿಬಿಟ್ಟಿದೆ.
ಚಿತ್ರದಲ್ಲಿ ಒಂದು ಪಾತ್ರವನ್ನು ಪರಿಚಯಿಸುತ್ತಾ ನಿರೂಪಕ ಇವನನ್ನು ಸಾಮಾನ್ಯ ಅಂದುಕೊಳ್ಳಬೇಡಿ ..ನಮ್ಮ ಕಥೆಗೆ ತಿರುವು ಕೊಡುವವನು ಇವನೇ ಅನ್ನುತ್ತಾನೆ..ಆನಂತರ ಆ ಚಿತ್ರದಲ್ಲಿ ತಿರುವೂ ಬರುವುದಿಲ್ಲ, ಆ ಪಾತ್ರವೂ ಬರುವುದಿಲ್ಲ.. ಈ ತರಹದ್ದೇ ದೃಶ್ಯಗಳು ಇಡೀ ಸಿನೆಮಾದ ತುಂಬ ತು೦ಬಿವೆ. ಒಂದು ಒಳ್ಳೆಯ ಸಿನಿಮಾ ಅಲ್ಲ..ಎಂದು ಬಿಟ್ಟುಬಿಡಬಹುದೇನೋ..ಒಳ್ಳೆಯದೋ ಕೆಟ್ಟದ್ದೋ ಸಿನಿಮಾ ಮಾಡಲು ಲಕ್ಷಾಂತರ ಹಣವಂತೂ ಖರ್ಚಾಗಿರುತ್ತದೆ. ಸ್ವಲ್ಪ ತಲೆ ಓಡಿಸಿದರೆ ಕೊನೆಗೆ ಒಂದುವಿಭಾಗದ ಜನರಾದರೂ ನೋಡುವಂತೆ ಮಾಡಬಹುದಲ್ಲಾ ಎನಿಸಿತು.ಅದನ್ನು ಸುಮ್ಮನೆ ಕುಳಿತು ಹೀಗೆಯೇ ಮಾಡೋಣ..ಹುಚ್ಚುಚ್ಚಾಗಿ ಮಾಡೋಣ ಎಂದರೂ ಮಾಡಲು ಸಾಧ್ಯವೇ ಇಲ್ಲ..ಅದೇಗೆ ಸಾಧ್ಯವಾಯಿತು ಎನ್ನುವ ಮಾತನ್ನು ಒಮ್ಮೆ ನಿರ್ದೇಶಕರಿಗೆ ಕೇಳಬೇಕು..ಅಲ್ಲವೇ?
ಸುಮ್ಮನೆ ಆ ಚಿತ್ರದ ವಿಮರ್ಶೆ ಓದಬೇಕೆನಿಸಿದರೆ ಇಲ್ಲಿದೆ ನೋಡಿ: ಕಲರ್ಸ್ ಇನ್ ಬೆಂಗಳೂರು ಚಿತ್ರ ವಿಮರ್ಶೆ
 

Sunday, November 24, 2013

ಬನ್ಸಾಲಿಯ ಲೋಕಕ್ಕೆ ಮಾರುಹೋಗುತ್ತಾ...?

ಸಂಜಯ ಲೀಲಾ ಬನ್ಸಾಲಿಯವರ ರೋಮಿಯೋ ಜೂಲಿಯೆಟ್ ನಾಟಕ ಆಧಾರಿತ ರಾಮ್ ಲೀಲಾ ಕಥೆಯ ವಿಷಯದಲ್ಲಿ ಬರಹದ ವಿಷಯದಲ್ಲಿ ಅದ್ಭುತ ಚಿತ್ರವಲ್ಲ. ಆದರೆ ದೃಶ್ಯ ರಚನೆಯ ವಿಷಯದಲ್ಲಿ ಒಂದೇ ಮಾತು 'ಅದ್ಭುತ.
ರಾಮ್ ಲೀಲಾ ಚಿತ್ರವನ್ನು ವಿಮರ್ಶೆ ಮಾಡುವುದಾಗುವುದಿಲ್ಲ.ಅಥವಾ ಆ ಪದ ಸರಿಯಾದ ಬಳಕೆ ಎನಿಸುವುದಿಲ್ಲ. ಬದಲಿಕೆ ವರ್ಣನೆ ಮಾಡಬಹುದು.ಅಂತಹ ಊರು, ಅಂತಹ ಜನರು ಅಂತಹ ಸಂಸ್ಕೃತಿ ..ನಮ್ಮದೇ ಸ್ಲಮ್ ಅಥವಾ ಚಿಕ್ಕದಾದ ಊರು ಅಂದುಕೊಳ್ಳಿ.ಬಂದೂಕುಗಳನ್ನು ಮಾರುವ ಊರದು.ಬಂದೂಕುಗಳನ್ನು ಮಾರಲು ಅಲ್ಲಿನ ಜನರಿಗೆ ಮುಕ್ತ ಅವಕಾಶವಿದೆ. ಅಲ್ಲಿಯ ಜನರಿಗೆ ಬಂದೂಕು ಎಂದರೆ ಆಟದ ಸಾಮಾನು. ಗುಂಡುಗಳು ಎಂದರೇ ಹುಣಸೇ ಬೀಜಕ್ಕಿಂತ ಕಡೆ.ಮಾತೆತ್ತಿದರೆ ಆಕಾಶಕ್ಕೆ ಗುಂಡು ಹಾರಿಸಿ ಮಜಾ ತೆಗೆದುಕೊಳ್ಳುವ ಜನರವರು.ಅವನು ರಾಮ್. ಸರಸಿ, ಶೋಕಿಲಾಲ..ರಸಿಕ ಸಾಹಸಿ. ನೋಡಲು ಸ್ಫುರದ್ರೂಪಿ. ಅವಳು ಲೀಲಾ. ತ್ರಿಪುರ ಸುಂದರಿ. ಅವರಿಬ್ಬರ ಪ್ರೀತಿಗೆ ತಡೆಗೋಡೆ ಎಂದರೆ ಜಾತಿ. ಆ ಜಾತಿಯವರದೊಂದು ಕೋಮು..ಇವರದೊಂದು ಕೋಮು.. ಮುಂದೆ ಗೋಲಿಯೋಂಕ ರಾಸಲೀಲೆ..
ಚಿತ್ರದ ಪ್ರಾರಂಭದಲ್ಲೇ ಇದು ರೋಮಿಯೋ ಜೂಲಿಯೆಟ್ ಕಥೆಯಾಧಾರಿತ ಎನ್ನುವುದನ್ನು ಬನ್ಸಾಲಿ ಅನಾವರಣ ಮಾಡಿಬಿಡುವುದರಿಂದ ಚಿತ್ರದ ಅಂತ್ಯದ ಬಗ್ಗೆ ನೋಡುಗನಿಗೆ ಕುತೂಹಲವೇನೂ ಉಳಿಯದು.ಹಾಗಾಗಿಯೇ ಕಥೆಯ ವಿಷಯದಲ್ಲಿ ವಿಶೇಷ, ಅಚ್ಚರಿ ಹೊಸತನ ಯಾವುದೂ ಇಲ್ಲ. ಆದರೆ ಚಿತ್ರೀಕರಣದ ಶ್ರೀಮಂತಿಕೆಯ ವಿಷಯದಲ್ಲಿ ನಿರೂಪಣೆಯ ಸೊಗಸಿನಲ್ಲಿ ಬನ್ಸಾಲಿಯನ್ನು ಮೆಚ್ಚದೇ ಬೇರೆ ದಾರಿಯೇ ಇಲ್ಲ.ಕಲಾವಿದನ ಕಲಾಕೃತಿಯ ರೀತಿಯಲ್ಲಿ ಪ್ರತಿಯೊಂದು ದೃಶಿಕೆಯನ್ನು ಸಂಯೋಜಿಸಿರುವ ಶೈಲಿ ನೋಡಲು ಖುಷಿ ಕೊಡುತ್ತದೆ.
ನೂರಾರು ಕೋಟಿ ವೆಚ್ಚಗಳನ್ನು ವಿದೇಶದಲ್ಲಿನ ಚಿತ್ರೀಕರಣಕ್ಕೆ ಹೆಲಿಕ್ಯಾಪ್ಟರ್ , ಕಾರುಗಳನ್ನು ಉಡಾಯಿಸುವುದಕ್ಕೆ ವೆಚ್ಚ ಮಾಡಿ ಶ್ರೀಮಂತಿಕೆ ಸಿನಿಮಾ ಎನ್ನಬಹುದು. ಹಾಗೆಯೇ ವಿ ಎಫ್ ಎಕ್ಸ್ ಅಥವಾ ಕಲ್ಪಿತ ದೃಶ್ಯ ವೈಭವಕ್ಕೆ ಖರ್ಚು ಮಾಡಿಬಿಡಬಹುದು. ಆದರೆ ಅದ್ಯಾವುದಕ್ಕೂ ಅಲ್ಲದೆ ಬೇರೆಯ ಲೋಕಕ್ಕೆ ಕರೆದೊಯ್ಯುವ ರೀತಿಗೆ ಖರ್ಚು ಮಾಡುವುದನ್ನು ಬನ್ಸಾಲಿ ನೋಡಿಯೇ ಕಲಿಯಬೇಕು.
ಸಿನಿಪ್ರಿಯರು, ಚಿತ್ರಕರ್ಮಿಗಳು ಮತ್ತು ಪ್ರೇಕ್ಷಕರು ಚಿತ್ರಣದ ಸೊಗಸಿಗೆ ನೋಡಲೇ ಬೇಕಾದ ಚಿತ್ರ ರಾಮ್ ಲೀಲಾ.

Monday, November 18, 2013

ನಾಯಕನ್ಯಾಕೆ ಬದಲಾದ....

ಏಕೆ ನಮ್ಮ ಚಿತ್ರಗಳ ನಾಯಕ ಬದಲಾಗಿ ಬಿಟ್ಟ..? ಎಂಬ ಪ್ರಶ್ನೆ ನನ್ನನ್ನು ಆವಾಗಾವಾಗ ಕಾಡುತ್ತಲೇ ಇರುತ್ತದೆ. ಏನಾಗಿದೆ ಅವನಿಗೆ ಎನ್ನಬಹುದು.ಅದರಲ್ಲೂ ಕನ್ನಡದ ಚಿತ್ರಗಳ ನಾಯಕನಂತೂ ತುಂಬಾ ಬದಲಾಗಿದ್ದಾನೆ. ಸುಮ್ಮನೆ ಗಮನಿಸಿದರೆ ಮೊದಲೆಲ್ಲಾ ನಾಯಕ ಎಂದರೆ ಅವನ ಗುಣಗಳನ್ನು ದೊಡ್ಡವರು ಮಕ್ಕಳಿಗೆ ಉದಾಹರಣೆಯಾಗಿ ಕೊಡುತ್ತಿದ್ದರು. ತುಂಬಾ ಕರುಣೆ, ಒಳ್ಳೆಯವನಾದರೆ ಇವನ್ನು ನೋಡು ಮುಂದೆ ರಾಜಕುಮಾರ್ ತರಾ ಆಗತಾನೆ ಅನ್ನುತ್ತಿದ್ದರು. ನಿಜವಾಗಲೂ ಅಲ್ಲಿ ರಾಜಕುಮಾರ್ ಇರುತ್ತಿರಲಿಲ್ಲ. ಬದಲಿಗೆ ಅಲ್ಲಿರುತ್ತಿದ್ದದ್ದು ಸಂಪತ್ತಿಗೆ ಸವಾಲ್ ಚಿತ್ರದ ರಾಜೀವನೋ, ಕಸ್ತೂರಿ ನಿವಾಸದ ರವಿಯೋ ...ಆದರೆ ಚಿತ್ರದಲ್ಲಿನ ನಾಯಕರ ಉದಾತ್ತ ಗುಣ ಮಾತ್ರ ನಾಯಕ ಎಂದರೆ ಹೀಗೆ ಇರಬೇಕು ಎಂಬಂತೆ ಇರುತ್ತಿತ್ತು. ಅವನು ಒಳ್ಳೆಯದನ್ನೇ ಮಾಡುತ್ತಿದ್ದ. ಅದರಲ್ಲೂ ಅವನು ರೌಡಿಯೇ ಆಗಿರಲಿ, ಕೊಲೆಗಾರನೆ ಆಗಿರಲಿ ಅದೆಲ್ಲ ದುಷ್ಟರ ಪಾಲಿಗೆ. ಶಿಷ್ಟರಿಗಂತೂ ಆತ ಯಾವತ್ತಿಗೂ ಅನ್ಯಾಯ ಮಾಡುತ್ತಿರಲಿಲ್ಲ. ಹಾಗೆಯೇ ಆಡುವ ಮಾತಿನಲ್ಲಿ ತೂಕವಿರುತ್ತಿತ್ತು. ಆತನ ಮಾತುಗಳಿಗೆ ಚಿತ್ರದೊಳಗಿನ ಮಂದಿಯಲ್ಲ, ಹೊರಗಿನ ಪ್ರೇಕ್ಷಕ ಕೂಡ ತಲೆ ದೂಗುತಿದ್ದರು.
ರಾಜಕುಮಾರ್ ಅವರ ಕಸ್ತೂರಿನಿವಾಸ ನೋಡುತ್ತಾ ನೋಡುತ್ತಾ ನಮ್ಮ ಮನೆಯಲ್ಲಿ ಕುಳಿತ ಹೆಂಗಸರೆಲ್ಲಾ ಕಣ್ಣೀರಾಗಿದ್ದರು. ಅದನ್ನೆಲ್ಲಾ ಕಣ್ಣಂಚಿನಲ್ಲೇ ನೋಡುತ್ತಾ ನಾವುಗಳು ಹುಡುಗರು ಮುಸಿ ಮುಸಿ ನಗುತ್ತಿದ್ದರು. ಅದರಲ್ಲೂ ನಮೂರಿನ ರಂಗಜ್ಜಿ ಅಂತೂ ರಾಜಕುಮಾರ್ ಚಿತ್ರವೆಂದರೆ ಆವತ್ತು ನಮ್ಮ ಮನೆಯ ಟಿವಿಯ ಮುಂದೆ ಅರ್ಧ ಗಂಟೆ ಮುಂಚಿತವಾಗಿಯೇ ಕುಳಿತು ಬಿಟ್ಟಿರುತ್ತಿದ್ದಳು. ಅವಳು ಅಳುವುದನ್ನು ಚಿತ್ರದಲ್ಲಿನ ಕೇಡಿಗಳನ್ನ ಶಾಪ ಹಾಕುವುದನ್ನು ನೋಡಲಾಗದೆ ಮುಸಿ ಮುಸಿ ನಕ್ಕು ನಾಲ್ಕಾರು ಜನಕ್ಕೂ ತೋರಿಸಿ ಅದೂ ಬೇಸರವಾದಾಗ 'ಅಮ್ಮೋ..ಅದು ಸುಮ್ನೆ..ನಾಟಕ ಕಣಮ್ಮೋ..' ಎಂದು ಯಾವುದಾದರೂ ಕಿಲಾಡಿ ಹೇಳಲು ಹೋಗಿ ಎಕ್ಕಾ ಮಕ್ಕಾ ಉಗಿಸಿಕೊಳ್ಳುತ್ತಿದ್ದ.
ಆದರೆ ಉಪೇಂದ್ರರ ಎ ಬಂದಾಗ ನಾಯಕನ ಪರಿಕಲ್ಪನೆ ಹೀಗಿರಬೇಕು ಎಂಬ ಕಲ್ಪನೆ ಬೇರೆಯಾಯಿತು ಎನ್ನಬಹುದು. ಅಲ್ಲಿಯವರೆಗೆ ಆ ತರಹದ ಋಣಾತ್ಮಕ ಖಳ ಛಾಯೆಯ ಪಾತ್ರ ಬಂದಿರಲಿಲ್ಲ ಎಂದಲ್ಲ. ಆದರೆ ಖಳ ಛಾಯೆಯ ಹಿಂದುಗಡೆ ನಾಯಕನ ಮುಖ ಇದ್ದೇ ಇರುತ್ತಿತ್ತು.
ಆದರೆ ಎ, ಉಪೇಂದ್ರದಲ್ಲಿ ನಾಯಕನ ಪರಿಕಲ್ಪನೆ ತೀರಾ ಬದಲಾಯಿತು. ಕಣ್ಣೆತ್ತಿಯೂ ಪರಸ್ತ್ರೀ ಕಡೆ ನೋಡದ ನಾಯಕ ಸ್ಲೀವ್ ಲೆಸ್ ಹಾಕಿಕೊಂಡು ಬಂದ ಹೆಂಗಸನ್ನು ಅಸಹ್ಯವಾಗಿ ಅಟ್ಟಾಡಿಸಿ ಅದಕ್ಕೆ ಸಮರ್ಥನೆಯನ್ನು ಕೊಟ್ಟ. ಗಾಳಿ ಬೆಳಕು ವಿಶಾಲವಾಗಿದೆ ಎಂದು ಕರೆವೆಣ್ಣನ್ನು ಬಟಾಬಯಲಿನಲ್ಲಿ ಮಲಗಿಸಿ ಅಸಹ್ಯಕರ ಸದ್ದು ಹೊರಡಿಸಿದ. ಆದರೆ ಅದೆಲ್ಲದಕ್ಕೂ ಚಿತ್ರದ ಅಂತ್ಯದಲ್ಲಿ ಒಂದು ಒಳ್ಳೆಯಾ ಅಲೌಕಿಕ ಸಮರ್ಥನೆ ಅರ್ಥ ಕೊಡಲು ಉಪೇಂದ್ರ ಪ್ರಯತ್ನಿಸಿದ್ದರು. ಆದರೆ ಅದನ್ನು ಹೆಚ್ಚು ಜನ ಪ್ರೇಕ್ಷಕರು ತೆಗೆದುಕೊಳ್ಳಲಿಲ್ಲ.
ಚಿತ್ರ ಬಂದ ಹೊಸದರಲ್ಲಿ ನಮ್ಮ ಊರಿನ ಬಸ್ ಸ್ಟಾಂಡ್ ನಲ್ಲಿ ದಿನಕ್ಕೊಂದು ಜಗಳ ಹುಡುಗಿಯ ಕಾರಣಕ್ಕೆ ನಡೆಯುತ್ತಿದ್ದವು.ಮೊದಲೆಲ್ಲಾ ರಕ್ತದಲ್ಲಿ ಹೆಸರು ಬರೆದುಕೊಂಡು, ಪ್ರೇಮ ಪತ್ರ ಬರೆದು ಹಿಂದೆ ಬಿದ್ದು ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದವರಲ್ಲಿ ಈಗ ಬದಲಾವಣೆಯಾಗಿತ್ತು.' ಯಾಕೆ ಲವ್ ಮಾಡಲ್ಲ ನೀನು..ನನಗೇನು ಕಡಿಮೆಯಿದೆ ಹೇಳು..ನೋಡ್ತೀನಿ ಅದನ್ಯಾರನ್ನೂ ನೀನು ಲವ್ ಮಾಡ್ತೀಯಾಂತ ..' ಎನ್ನುವ ಉದ್ದನೆಯ ಮಾತುಗಳನ್ನು ಆಡುತ್ತ ಪುಂಡ ಪ್ರೇಮಿಗಳು ಉಪೇಂದ್ರ ತರದಲ್ಲಿ ಹುಡುಗಿಯರನ್ನು ಕಿಚಾಯಿಸಿ ಜಗಳ ಹುಟ್ಟಿಹಾಕುತ್ತಿದ್ದರು.
ಆದರೆ ಉಪೇಂದ್ರರ ನಾಯಕನನ್ನು ಚಿತ್ರ ಮಂದಿ ಅಷ್ಟಾಗಿ ಅನುಸರಿಸಲಿಲ್ಲ. ಯಾಕೆಂದರೆ ಆ ತರಹದ ಪಾತ್ರ ಪೋಷಣೆ ತುಂಬಾ ಕಷ್ಟದ್ದಿತ್ತು.
ನಾಯಕ ಮತ್ತೆ ತನ್ನ ಪಾಡಿಗೆ ತಾನಿರುತ್ತಿದ್ದ. ಪ್ರೀತಿಸಿ ತ್ಯಾಗ ಮಾಡುತ್ತಿದ್ದ. ಅವಳನ್ನು ಚೆನ್ನಾಗಿರಲಿ ಎಂದು ಹರಸಿ ತಾನು ಮಾತ್ರ ಒಬ್ಬನೇ ಕಣ್ಣೀರು ಹಾಕುತ್ತಿದ್ದ.
ಒಮ್ಮೆಲೇ ಮುಂಗಾರು ಮಳೆ ಬಂದಿತು ನೋಡಿ. ಮಾತು ಮಾತಿಗೂ ನಗಿಸುವ ಪ್ರೀತಂ ಇಷ್ಟವಾಗಿ ಬಿಟ್ಟ. ಉಡಾಫೆಯ ಮಾತನ್ನಾಡುತ್ತಾ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ ನಾಯಕ ಅಮ್ಮನ ಮಾತನ್ನು, ಮರ್ಯಾದೆಯನ್ನು ಉಳಿಸಲು ಪ್ರೀತಿಯನ್ನು ತ್ಯಾಗ ಮಾಡಿದ್ದನಾದರೂ ಆತನ ಆ ಗುಣಕ್ಕಿಂತ ನಮ್ಮ  ಚಿತ್ರಕರ್ಮಿಗಳಿಗೆ ಉಡಾಫೆ ಮಾತಿನ ನಾಯಕನೇ ಇಷ್ಟವಾದ. ಅದಕ್ಕೆ ಹೆಚ್ಚು ಗಮನಕೊಟ್ಟ ನಮ್ಮವರು ಆ ನಂತರ ಪುಂಖಾನುಪುಂಖ ಮಾತನ್ನಾಡುವ ನಾಯಕನನ್ನು ಹುಟ್ಟುಹಾಕಿಬಿಟ್ಟರು. ನಮ್ಮ ನಾಯಕ ಏನೂ ಮಾಡುತ್ತಿರಲಿಲ್ಲ. ಮಾಡುವವರನ್ನೇ ಗೇಲಿ ಮಾಡುತ್ತಿದ್ದ. ಹುಡುಗಿಯ ಮುಂದೆ ಸಭ್ಯನ ಹಾಗೆ ನಡೆದು ಕೊಳ್ಳದೆ ತೀರಾ ಉಡಾಫೆಯಿಂದಲೇ ನಡೆದುಕೊಳ್ಳುತ್ತಿದ್ದ. ಯಾವುದೇ ಗಂಭೀರ ವಿಷಯವನ್ನು ಹಗುರಕ್ಕೆ ತೆಗೆದುಕೊಂಡು ನಗುತ್ತಿದ್ದ. ಪ್ರೀತಿಯ ವಿಷಯದಲ್ಲೂ ಅಷ್ಟೇ..ಆ ತೀವ್ರತೆ ಅಷ್ಟಕಷ್ಟೇ. ನೀನಿಲ್ಲ ಅಂದ್ರೆ ದೇಶ ಮುಳುಗಲ್ಲಾ ಕಣೆ...ನೀವು ಹುಡುಗೀರು ಇಷ್ಟೇ ಎಂದೆಲ್ಲಾ ಅವರೆದುರು ಕೂಗಾಡಿ ಅವಮಾನ ಮಾಡಿ ಕಪಾಳಕ್ಕೆ ಒಂದು ಹೊಡೆದೂ ಹೋಗುತ್ತಿದ್ದ.
ಆನಂತರ ಮತ್ತೆ ಸಿಂಪಲ್ ಲವ್ ಸ್ಟೋರಿ ಬಂತು ನೋಡಿ ನಾಯಕನಾಯಕಿ ಇಬ್ಬರೂ ತುಂಟತನದ ಪರಿಧಿಯ ತೀರಾ ಹತ್ತಿರಕ್ಕೆ ಬಂದು ಬಿಟ್ಟರು. ಹೆಣ್ಣು ಮಕ್ಕಳು ಹೀಗೆಲ್ಲಾ ಮಾತನಾಡುತ್ತಾರಾ ಎಂಬ ಪರದೆ ಸರಿಸಿ ಸಲೀಸಾಗಿ ಮಾತಾಡತೊಡಗಿದರಾದರೂ ತೀರಾ ಅಸಹ್ಯ ಮಾಡಲಿಲ್ಲ. ಆದರೆ ಆನಂತರದ ನಾಯಕನ್ನು ನೀವು ನೋಡಬೇಕು. ಅದರಲ್ಲೂ ಹೊಸಬರ ಚಿತ್ರಗಳ ನಾಯಕರನ್ನು. ತೀರಾ ಸಭ್ಯತೆ ಮೀರಿದ ಮಾತುಗಳೇ ಅವರ ಬ್ರಹ್ಮಾಸ್ತ್ರ. ಸೊಂಟದ ಕೆಳಗೆ ಕೇಂದ್ರೀಕರಿಸುವ ಮಾತುಗಳೇ ಅವರ ಬಂಡವಾಳ. ಅದರಲ್ಲೂ ಹೆಣ್ಣು ಗಂಡು ಅನ್ನದೆ ನಮ್ಮ ಯುವ ನಿರ್ದೇಶಕರು ಪೋಲಿತನದ ಮಾತುಗಳನ್ನು ಕಿವಿ ಮುಚ್ಚುಕೊಳ್ಳುವಂತೆ ಆಡಿಸ ತೊಡಗಿದ್ದಾರೆ. ಉಡಾಫೆಯ ಮಾತಿನ ನಾಯಕ ಈಗ ಪೋಲಿಯಾಗಿ ಅದಕ್ಕೂ ಕಡೆಯಾಗಿ ಬದಲಾಗಿದ್ದಾನೆ. 
ಸುಮ್ಮನೆ ಯೂ ಟ್ಯೂಬ್ ನಲ್ಲಿನ ಕನ್ನಡದ ಹೊಸ ಹುಡುಗರ ಒಂದಷ್ಟು ಟ್ರೈಲರ್ ಗಳಿವೆ. ನಾಲ್ಕು ನಿಮಿಷ ಎಂಟು ನಿಮಿಷ ಹೀಗೆ ..ಅವುಗಳನ್ನು ನೋಡುತ್ತಿದ್ದರೆ ಹೇಗಪ್ಪಾ ಇವರ ಇಡೀ ಸಿನೆಮಾವನ್ನು ಸಹಿಸಿಕೊಳ್ಳುವುದು ಎನಿಸುತ್ತದೆ. ಪೋಲಿ ಮಾತಿನ ಅಸಹ್ಯಕರ ಮಾತಿನ ಸರಪಳಿಯನ್ನೇ ಜೋಡಿಸಿ ಎಲ್ಲರೂ ಭಟ್ಟ ರಂತೆ ಆಗಲು ಹೊರಟುಬಿಟ್ಟಿದ್ದಾರೆ. ಭಟ್ಟರ ಹಿಂದಿನ ಶ್ರಮ, ಮಾತಿನ ಮರ್ಮಗಳ ಬಗ್ಗೆ ಅರಿತುಕೊಳ್ಳದೆ ಮೇಲ್ನೋಟದ ಅರ್ಥಕ್ಕಷ್ಟೇ ಮತ್ತು ಅದು ಕೊಡುವ ಪಂಚಿಗಷ್ಟೇ ತಲೆ ಕೆಡಿಸಿಕೊಂಡು ಪುಂಖಾನುಪುಂಖ ಮಾತುಗಳನ್ನು ಜೋಡಿಸಿದ್ದಾರೆ.
ಬದಲಾದ ನಾಯಕನನ್ನು ನೋಡಿ ಬೇಸರವಾಗುತ್ತದೆ. ಹೀರೋ ತರ ನಮ್ಮ ಹುಡುಗ ಆಗಬೇಕು, ಹುಡುಗ ಸಿಗಬೇಕು. ಅಣ್ಣ ಅಂದ್ರೆ ಹೀಗಿರಬೇಕು ಎನ್ನುವ ಮಾತುಗಳೆಲ್ಲಾ ಅರ್ಥ ಕಳೆದುಕೊಂಡಿವೆ. ಬದಲಿಗೆ ನಾಯಕ ಕೆಲಸ ಮಾಡದೆ ಹುಡುಗಿಯ ಹಿಂದೆ ಬಿದ್ದು ಕೆಟ್ಟದಾಗಿ ಮಾತಾಡುತ್ತ ಅದರಲ್ಲೇ ಅತಿ ಬುದ್ದಿವಂತಿಕೆ ಪ್ರದರ್ಶಿಸುತ್ತಿದ್ದಾನೆ...
ಬದಲಾದ ನಾಯಕ ಬೇಸರ ತರಿಸುತ್ತಿದ್ದಾನೆ..ನಿಮಗೇನನ್ನಿಸುತ್ತದೆ..?

Tuesday, November 12, 2013

ಒಟ್ಟಾರೆ ಒಂದಷ್ಟು ಸಿನಿಮಾಗಳು:


ಬ್ಯಾಡ್ಜೆಸ್ ಆಫ್ ಫ್ಯೂರಿ, ಫಾಸ್ಟ್ ಅಂಡ್ ಫ್ಯೂರಿಯಸ್ ಸಿಕ್ಸ್, ಗುಡ್ ಡೇ ಟು ಡೈ ಹಾರ್ಡ್, ಅಸಾಲ್ಟ್ ಆನ್ ವಾಲ್ ಸ್ಟ್ರೀಟ್, ಒಬ್ಲಿವಿಒನ್ ವರ್ಲ್ಡ್ ವಾರ್ ಝೆಡ್ ಚಿತ್ರಗಳು ಈ ವಾರದಲ್ಲಿ ನಾನು ನೋಡಿದ ಚಿತ್ರಗಳು. ಎಲ್ಲಾ ಪಕ್ಕ ಕಮರ್ಷಿಯಲ್, ಮಸಾಲೆ  ಅಂಶಗಳಿರುವ ಸಿನೆಮಾಗಳು ಇವು. ಕಥೆಯ ಬಗ್ಗೆ ಕೇಳುವ ಹಾಗಿಲ್ಲ. ಹೇಳುವುದಕ್ಕೂ ಗೊತ್ತಾಗುವುದಿಲ್ಲ. ಹಾಗಂತ ಬೇರೆಯವರಿಗೆ ಈ ಸಿನೆಮಾ ನೋಡಿ ಎಂದು ಹೇಳಿದರೆ, ಶಿಪಾರಸ್ಸು ಮಾಡಿದರೆ ಯಾಕೆ ನೋಡಬೇಕು ಎಂಬೊಂದು ಪ್ರಶ್ನೆಯನ್ನು ಅವರು ಒಗಾಯಿಸಿದರೆ ನಿಮ್ಮಲ್ಲಿ ಅಂತಹ ಸಮರ್ಥವಾದ ಉತ್ತರವೂ ಇರುವುದಿಲ್ಲ.
ಬ್ಯಾಡ್ಜೆಸ್ ಆಫ್ ಫ್ಯೂರಿ ಈ ವರ್ಷ ಬಿಡುಗಡೆಯಾದ ಚಿತ್ರ. ನಮ್ಮಲ್ಲಿ ಬರುತ್ತಿದ್ದ ಕಳ್ಳ ಪೋಲಿಸ್ ಹೊಡೆದಾಟ ರೌಡಿ ಸಾಮ್ರಾಜ್ಯ ಇತ್ಯಾದಿ ಇತ್ಯಾದಿ ಕಥೆಯಿರುವ ಚಿತ್ರ. ಜಪಾನಿ ನಾಯಕ ಜೆಟ್ ಲಿ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದು ಚಿತ್ರವನ್ನು  ನಿರ್ದೇಶನ ಮಾಡಿದ್ದಾರೆ. ಸಿನೆಮಾದಲ್ಲಿ ಕಥೆಗಿಂತ ಅಲ್ಲಲ್ಲಿ ಬರುವ ಹಾಸ್ಯ ಪ್ರಸಂಗ ಇಷ್ಟವಾಗುತ್ತದೆ. ಅದೆಲ್ಲವನ್ನೂ ಮೀರಿ ಗಮನ ಸೆಳೆಯುವುದು ಚಿತ್ರದಲ್ಲಿರುವ ಮೂರು ಹೊಡೆದಾಟದ ದೃಶ್ಯಗಳು. ಕುಂಗ್ ಫು ಹೊಡೆದಾಟವನ್ನು ಅದ್ಭುತವಾಗಿ ಸಿನಿಮೀಯಗೊಳಿಸಲಾಗಿರುವ ಹೊಡೆದಾಟಗಳು ಮಜಾ ಕೊಡುತ್ತವೆ. ಹುಬ್ಬೇರಿಸುವಂತೆ ಮಾಡುತ್ತವೆ. ಇಷ್ಟರ ಮೇಲೆ ಇನ್ನೇನಾದರೂ ಇದೆಯಾ ಎಂದರೆ ಏನಿಲ್ಲ ಸ್ವಾಮೀ ಎಂದು ಬಿಡಬೇಕಷ್ಟೇ. ಫೈಟಿಂಗ್ ಇಷ್ಟಪಡುವವರು  ಚಿತ್ರವನ್ನೊಮ್ಮೆ ನೋಡಬಹುದು ಅಥವಾ ಡಿವಿಡಿ ತಂದು ಬರೀ ಫೈಟ್ ಅಷ್ಟನ್ನೇ ನೋಡಿ ಖುಷಿ ಪಡಬಹುದು.
ಮೇಲಿನ ವಿವರಗಳು ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರಕ್ಕೂ ಅನ್ವಯವಾಗುತ್ತದೆ. ಇದು ಆ ಸರಣಿಯ ಆರನೆಯ ಚಿತ್ರ. ಒಂದಷ್ಟು ವಾಹನಗಳ ಹಾರಾಟ, ತೂರಾಟ ಈ ಸರಣಿಯ ಮುಖ್ಯ ಅಂಶಗಳು. ಈ ಚಿತ್ರದಲ್ಲಿ ಅವೆಲ್ಲಕ್ಕಿಂತ ಒಂದು ಕೈ ಹೆಚ್ಚಗಿನ ಸಾಹಸವಿದೆ. ಒಂದು ಕಡೆ ಸಾಹಸಿಗಳು, ಮತ್ತೊಂದು ಕಡೆ ಪೊಲೀಸರು, ಜೊತೆ ಸೇರಿ ದುಷ್ಟರನ್ನು ಮಟ್ಟ ಹಾಕುವುದು ಚಿತ್ರದ ಸಾರಾಂಶ.
ಜೀಪಿನಲ್ಲಿ ಹೋಗುತ್ತಾ ದೊಡ್ಡ ವಿಮಾನಕ್ಕೆ ಹುಕ್ ಹಾಕಿ ಅದನ್ನೇ ನೆಲಸಮ ಮಾಡುವ ಸನ್ನಿವೇಶ, ಅದರ
ಚಿತ್ರಣ ರೋಮಾಂಚನ ಉಂಟುಮಾಡುತ್ತದೆ. ಚಿತ್ರದ ಕೊನೆಯಲ್ಲಿ ದೊಡ್ಡ ಸೇತುವೆಯ ಮೇಲೆ ನಡೆಯುವ ಅದ್ದೂರಿ ಭಯಾನಕ ಚೇಸ್  ಉಸಿರುಗಟ್ಟಿಸುತ್ತದೆ. ಯುದ್ಧದಲ್ಲಿ ಬಳಸುವ ಟ್ಯಾಂಕರ್ ತೆಗೆದುಕೊಂಡು ಬರುವ ಖಳರನ್ನು ಮಾಮೂಲಿ ಕಾರಿನಲ್ಲೇ ಹೊಡೆದು ಹಾಕುವ ಚಿತ್ರಣ ರೋಮಾಂಚಕ. ಬರೀ ಅಷ್ಟಕ್ಕಾದರೂ ಒಮ್ಮೆ ಚಿತ್ರವನ್ನೊಮ್ಮೆ ನೋಡಲಡ್ಡಿಯಿಲ್ಲ.ಚಿತ್ರದಲ್ಲಿ ವಿನ್ ಡೀಸಲ್, ಪಾಲ್ ವಾಕರ್ , ರಾಕ್ ಅಂತಹ ನಟರುಗಳ ದೊಡ್ಡ ತಾರಾಗಣವಿದೆ. ಚಿತ್ರದ ಕೊನೆಯಲ್ಲಿ ಟ್ರಾನ್ಸ್ಪೋರ್ಟರ್  ಚಿತ್ರದ ನಾಯಕ ಜಾಸನ್ ಸ್ತಾಥಂ ತೋರಿಸುವುದರ ಮೂಲಕ ಈ ಸರಣಿಯ ಏಳನೆಯ ಭಾಗದಲ್ಲಿ ಖಳನಾಗಿ ಸ್ತಾಥಂ ಇರುತ್ತಾರೆ ಎಂಬ ಸೂಚನೆ ಕೊಡುತ್ತಾರೆ ನಿರ್ದೇಶಕರು.
ಅಂದ ಹಾಗೆ ಏಳರಲ್ಲಿ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರಂತೆ ಮತ್ತು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ಖ್ಯಾತ ನಿರ್ದೇಶಕ ಜೇಮ್ಸ್ ವಾನ್.
ಬ್ರೂಸ್ ವಿಲ್ಲಿಸ್ ಡೈ ಹಾರ್ಡ್ ಸರಣಿಗಳಿಗೆ ಹೆಸರುವಾಸಿಯಾದವರು. ಭರ್ಜರಿ ಸಾಹಸ ತುಸು ಹಾಸ್ಯ  ಈ ಸರಣಿ ಚಿತ್ರಗಳ ವಿಶೇಷಗಳು. ಮಗನನ್ನು ಹುಡುಕಿಕೊಂಡು ಬರುವ ಬ್ರೂಸ್ ವಿಲ್ಲಿಸ್ ಅವನಿಗರಿವಿಲ್ಲದೆ ಒಂದು ವಿಷವರ್ತುಲದಲ್ಲಿ ಸಿಕ್ಕಿ ಕೊಳ್ಳುತ್ತಾನೆ. ಇನ್ನೇನು ಮುಂದೆ ಇದ್ದೆ ಇರುತ್ತಲ್ಲ..ಮಾರಿಹಬ್ಬ..
   ಚಿತ್ರದ ಪ್ರಾರಂಭದಲ್ಲಿ ಹದಿನೈದು ನಿಮಿಷಕ್ಕಿಂತಲೂ ಹೆಚ್ಚಾದ ಒಂದು ಚೇಸ್ ಇದೆ. ಅದೇ ಚಿತ್ರದ ಪ್ರಮುಖ ನೋಡಲೇ ಬೇಕಾದ ಅಂಶ. ಉಳಿದದ್ದು ನಿಮಗೆ ಬಿಟ್ಟದ್ದು. ಹೆಲಿಕ್ಯಾಪ್ಟರ್ ನೆಲಕ್ಕುರುಳುತ್ತವೆ..ಕಟ್ಟಡಗಳು ನೆಲಸಮವಾಗುತ್ತವೆ...ಗುಂಡು ಮದ್ದುಗಳು ಟನ್ ಗಟ್ಟಲೆ ಚೆಲ್ಲಾಡುತ್ತವೆ. ಅದಕ್ಕೆಲ್ಲಾ ನಿಮಗೆ ಸಾಕ್ಷಿಯಾಗುವ ಆಸೆಯಿದ್ದರೆ ಒಮ್ಮೆ ನೋಡಬಹುದು.
ಈ ಎಲ್ಲಾ ಸಿನಿಮಾಗಳ ನಡುವೆ ಅಸಾಲ್ಟ್ ಆನ್ ವಾಲ್ ಸ್ಟ್ರೀಟ್ ತಲೆ ಬುಡವಿಲ್ಲದ ಚಿತ್ರ. ಇದೊಂದು ಆಕ್ಷನ್ ಚಿತ್ರವಾದರೂ ಬಜೆಟ್ ಕೊರತೆಯಿಂದಾಗಿ ಚಿತ್ರದಲ್ಲಿ ಏನೂ ಇಲ್ಲ ಎನ್ನುವ ಭಾವನೆ ಮೂಡುತ್ತದೆ. ಶೇರು ಮಾರುಕಟ್ಟೆಯ ಏರುಪೇರು, ಅಲ್ಲಿನವರ ಸ್ವಾರ್ಥದಿಂದಾಗಿ ನಾಯಕನ ವೈಯಕ್ತಿಕ ಬದುಕು ಏರುಪೇರಾಗುತ್ತದೆ. ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದುಕೊಂಡು ನಮ್ಮ ಟೈಗರ್ ಪ್ರಭಾಕರ್ ರೀತಿ ಸಿಕ್ಕಸಿಕ್ಕಲ್ಲಿ ಕೊಲ್ಲುತ್ತ  ಬರುತ್ತಾನೆ ನಾಯಕ. ಚಿತ್ರದಲ್ಲಿ ಯಾವೊಂದು ಅಂಶವೂ ನೋಡತಕ್ಕುದಲ್ಲ. ಬಜೆಟ್ ಇಲ್ಲದಿದ್ದಾಗ ಬರವಣಿಗೆಯಾದರೂ ಕುತೂಹಲಕರವಾಗಿದ್ದರೆ ಚಿತ್ರವನ್ನು ತೂಗಿಸಿಕೊಂಡು ಹೋಗುತ್ತದೆ. ಈ ಚಿತ್ರದಲ್ಲಿ ಎರಡೂ ಇಲ್ಲ.
ಒಬ್ಲಿವಿಯನ್ ಖ್ಯಾತ ನಟ ಟಾಮ್ ಕ್ರುಯಿಸ್ ಅಭಿನಯದ ಚಿತ್ರ. ಇದರ ನಿರ್ದೇಶಕ . ಹಾಗಾಗಿ ಒಂದು ಮಟ್ಟಗಿನ ಕುತೂಹಲ ಇದ್ದೆ ಇರುತ್ತದೆ. ಚಿತ್ರ ನೋಡಿದ ಮೇಲೆ ಆ ಕುತೂಹಲವೆಲ್ಲಾ ಮಾಯವಾಗಿ ಇಬ್ಬರೂ ನಮ್ಮ ನಿರೀಕ್ಷೆಗಳನ್ನು ಮಣ್ಣುಪಾಲು ಮಾಡಿದರು ಎನಿಸುತ್ತದೆ. ಚಿತ್ರ ನಡೆಯುವುದು ಭವಿಷ್ಯದ ಕಾಲಘಟ್ಟದಲ್ಲಿ. ತಲೆಬುಡವಿಲ್ಲದ ಚಿತ್ರಕಥೆ ನೋಡುಗನನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತದೆ.ಇಬ್ಬರು ದಿಗ್ಗಜರು ಸೇರಿಕೊಂಡು ಹೀಗೆಲ್ಲಾ ಮಾಡುತ್ತಾರಾ..ಎನಿಸಿಬಿಡುತ್ತದೆ. ಚಿತ್ರದಲ್ಲಿ ಒಂದಷ್ಟು ವಿಶುಯಲ್ ಎಫೆಕ್ಟ್ಸ್ ಚೆನ್ನಾಗಿದೆ. ಅದೇ ಚಿತ್ರದ ಆರಂಭದಲ್ಲಿ ಏನೋ ಇದೆ ಎನ್ನುವ ಕುತೂಹಲ ಮೂಡಿಸುತ್ತದೆ.
ವರ್ಲ್ಡ್ ವಾರ ಝೆಡ್ ಬ್ರಾಡ್ ಪಿಟ್ ಅಭಿನಯದ ಚಿತ್ರ. ಝೊ೦ಬಿಗಳು ಮಾನವ ಕುಲವನ್ನು ನಾಶಮಾಡಿ ತಮ್ಮದೇ ಸಾಮ್ರ್ಯಾಜ್ಯವನ್ನು ಸ್ಥಾಪಿಸಲು ನೋಡುತ್ತವೆ.ಅವುಗಳನ್ನು ರಕ್ತ ಬಿಜಾಸುರರು ಎನ್ನಬಹುದಾ..? ಚಿತ್ರದಲ್ಲಿ ಒಮ್ಮೆ ಅಲ್ಲಿನ ವಿಜ್ಞಾನಿ ಮಾತನಾಡುತ್ತಾ ಝೊ೦ಬಿಗಳ ಬಗ್ಗೆ ವಿವರ ಕೊಡುತ್ತ ಭಾರತದ ಪ್ರಸ್ತಾಪ ಮಾಡಿ ‘ ಅಲ್ಲಿ ರಾಕ್ಷಸ ‘[ಅವರು ರಕ್ಷಾಸ’ ಎಂದು ಉಚ್ಚರಿಸುತ್ತಾರೆ] ಎನ್ನುವ ಪಂಗಡದೊಂದಿಗೆ ಹೊಡೆದಾಡುತ್ತಿದ್ದರು ಎನ್ನುತ್ತಾನೆ. ಹಾಗಾಗಿ ನಮ್ಮಲ್ಲಿನ ರಾಕ್ಷಸರಿಗೆ ಝೊ೦ಬಿಗಳು ಸಮವಾ...? ಗೊತ್ತಾಗುವುದಿಲ್ಲ. ಪ್ರಾರಂಭದಲ್ಲಿ ಮಕ್ಕಳ ಜೊತೆ ರಜಾದಲ್ಲಿ ಮಜಾ ಮಾಡಲು ಹೊರಟ ನಾಯಕ ಟ್ರಾಫಿಕ್ ಜಾಮ್ ನಲ್ಲಿದ್ದಾಗ ಝೊ೦ಬಿಗಳು ಆಕ್ರಮಣ ಮಾಡಿ ಸಿಕ್ಕಸಿಕ್ಕವರಿಗೆ ಕಚ್ಚಿ ರಕ್ತ ಹೀರಿ ಅದರ ರಕ್ತವನ್ನು ಸೇರಿಸಿ ತಮ್ಮತರಹ ಮಾಡಿಕೊಳ್ಳುತ್ತವೆ. ಅವುಗಳ ಮೂಲ ಹುಡುಕುತ್ತಾ ಹೋಗುವ ನಾಯಕ ಅವುಗಳ ಬಗ್ಗೆ ಕೆಲವು ಅಂಶಗಳನ್ನು ಅರ್ಥ ಮಾಡಿಕೊಳ್ಳುತ್ತಾನೆ.. ಅದೆಂದರೆ ಝೊ೦ಬಿಗಳು ಆರೋಗ್ಯವಂತ ಮನುಷ್ಯನನ್ನೇ ಆಕ್ರಮಣ ಮಾಡುತ್ತವೆ. ನಿಶ್ಯಕ್ತರು, ರೋಗಿಗಳು, ಮುದುಕರನ್ನು ಆಕ್ರಮಣ ಮಾಡುವುದಿಲ್ಲ ಎಂಬುದು. ಈ ಒಂದು ಸೂತ್ರದ ಮೂಲಕ ಮನುಕುಲವನ್ನು ಝೊ೦ಬಿಗಳಿಂದ ರಕ್ಷಿಸಲು ಹೊರಡುತ್ತಾನೆ.
ಚಿತ್ರದಲ್ಲಿ ಗಮನ ಸೆಳೆಯುವುದು ಚಿತ್ರಕಥೆ. ಕುತೂಹಲಕಾರಿ, ಎಲ್ಲೂ ಬೋರ್ ಆಗದ ಚಿತ್ರಕಥೆ ನಿಮ್ಮನ್ನು ಹಿಡಿದು ಕೂರಿಸುತ್ತದೆ. ಹಾಗೆಯೇ ಚಿತ್ರದಲ್ಲಿ ಬರುವ ದೃಶ್ಯವೈಭವ, ವಿಶುಯಲ್ ಎಫೆಕ್ಟ್ಸ್ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಉತ್ತಮ ಸಾಹಸ, ವಿಶುಯಲ್ ಎಫೆಕ್ಟ್ಸ್ ಗಳನ್ನೊಳಗೊಂಡ ಒಳ್ಳೆಯ ಥ್ರಿಲ್ಲರ್ ಚಿತ್ರವಿದು.

Sunday, November 10, 2013

ಇಸ್ತ್ರೀ ಪುರಾಣ- ಲಲಿತ ಪ್ರಬಂಧ.



ಇಡೀ ಊರಿನಲ್ಲಿ ಅಂಗಿಗಳಿಗೆ ಗರಿಗರಿಯಾದ ಇಸ್ತ್ರೀ ಮಾಡಿಕೊಂಡು ಮನೆಯಿಂದ ಹೊರ ಬೀಳುತ್ತಿದ್ದವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಎಂದರೆ ನೀವು ನಂಬಲೇ ಬೇಕು. ಹಬ್ಬ, ಹರಿದಿನ, ಅಪರೂಪಕ್ಕೆ ಪಕ್ಕದ ನಗರ ನಂಜನಗೂಡಿಗೆ, ಯಾವುದೋ ಮದುವೆಗೆ, ಮುಂಜಿಗೆ ಮಾತ್ರ ಇಸ್ತ್ರೀ ಹಾಕಿದ ಬಟ್ಟೆ ಧರಿಸುತ್ತಿದ್ದ ನಮ್ಮೂರಿನ ಜನಕ್ಕೆ ಅದರ ಹೊರತಾಗಿ ಬಟ್ಟೆಗಳಿಗೆ ಇಸ್ತ್ರೀ ಹಾಕುವುದು ವ್ಯರ್ಥ ಎನಿಸುತ್ತಿತ್ತು. ಇಸ್ತ್ರೀ ಹಾಕಲಿಕ್ಕೆ ಇದ್ದ ಧಿರಿಸಾದರೂ ಎಂತಹದು. ಒಂದು ಬಿಳಿಯ ಪಂಚೆ, ಬಿಳಿಯ ಅಂಗಿ ಮಾತ್ರ. ನಮೂರಿನ ಬಹುತೇಕರು ಪ್ಯಾಂಟು ಧರಿಸುತ್ತಿರಲಿಲ್ಲ. ಅದೆಲ್ಲ ಸರ್ಕಾರಿ ಕೆಲಸದಲ್ಲಿರುವವರಿಗೆ ಮತ್ತು ದಿನ ಬೆಳಿಗ್ಗೆ ಪೇಟೆಗೆ ಹೋಗಿ ಬರುವವರಿಗೆ ಸೂಕ್ತ, ಹೊಲದಲ್ಲಿ ಕೆಲಸ ಮಾಡುವ ನಮ್ಮಂಥವರಿಗೆ ಪ್ಯಾಂಟು ಎಂಬುದು ಸೋಮಾರಿತನ ಕಲಿಸಿಕೊಡುವ ಕೆಟ್ಟ ಸಾಧನ ಎನ್ನುವರೀತಿಯಾಗಿ ಜನ ಅಭಿಪ್ರಾಯ ಹೊಂದಿದ್ದರು. ಇದೆಲ್ಲಾ ಕಾರಣಗಳಿಂದಲೇ ನಮ್ಮೂರಿನಲ್ಲಿ ನಮ್ಮ ಮನೆಯಲ್ಲಿದ್ದ ಏಕೈಕ ಇಸ್ತ್ರೀ ಪೆಟ್ಟಿಗೆಗೆ ಭಯಾನಕ ಬೇಡಿಕೆಯಿತ್ತು. ನಮ್ಮಪ್ಪ ಶಾಲಾ ಶಿಕ್ಷಕರಾದ್ದರಿಂದ ದಿನಾ ಇಸ್ತ್ರೀ ಮಾಡುತ್ತಿದ್ದರು. ನಾವು ಶಾಲೆಗೆ ಹೋಗುತ್ತಿದ್ದರಿಂದ ಇಸ್ತ್ರೀ ಮಾಡಿಕೊಳ್ಳುತ್ತಿದ್ದೆವು. ಆರು ತಿಂಗಳಿಗೋ ವರ್ಷಕ್ಕೋ ಬೇಕಾಗುವ ಇಸ್ತ್ರೀ ಪೆಟ್ಟಿಗೆಗೆ ವಿನಾಕರಾಣ ಬಂಡವಾಳ ಹಾಕಲು ನಮ್ಮೂರಿನ ಜನ ಮನಸು ಮಾಡಿರಲಿಲ್ಲ. ಹಾಗಾಗಿ ಬೇಕಾದಾಗ ನಮ್ಮ ಮನೆಗೆ ಬಂದು ಇಸ್ತ್ರೀ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿದ್ದರು.
ನಮ್ಮ ಮನೆಯಲ್ಲಿದ್ದದ್ದು ದೊಡ್ಡದಾದ ಕಬ್ಬಿಣದ ಇದ್ದಿಲು ಹಾಕಿ ಶಾಖ ಕೊಡಬಹುದಾದಂತಹ ಇಸ್ತ್ರೀ ಪೆಟ್ಟಿಗೆ. ‘ಸಾರ್..ನಿಮ್ಮನೆ ಇಸ್ತ್ರೀ ಪೆಟ್ಟಿಗೆಗೆ ಕಾವಾಕೋದೇ ಬ್ಯಾಡ ಬುಡಿ..ಸುಮ್ಕೆ ಬಟ್ಟೆ ಮೇಲೆ ತಿಕ್ಕಿಬಿಟ್ರೆ ಇಸ್ತ್ರೀ ಆಗೋಯ್ತದೆ...ಒಳ್ಳೆ ರೋಡ ಮೇಲೆ ಬುಲ್ಡೋಜರ್ ಓಡಾಡ್ತದಲ್ಲ ಹಂಗೆ..’ಎನ್ನುವ ಮೆಚ್ಚುಗೆಯ ಮಾತುಗಳನ್ನಾಡಿ ನಮ್ಮನೆಯ ಇಸ್ತ್ರೀ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿದ್ದವರೂ ಇದ್ದರು.
ಅದರಲ್ಲೂ ಮದುವೆಯ ಸಂದರ್ಭಗಳಲ್ಲಿ ಇಸ್ತ್ರೀ ಪೆಟ್ಟಿಗೆ ಇಡೀ ಊರನ್ನೇ ಸುತ್ತಿ ಬರುತ್ತಿತ್ತು. ಆಗ ನಮ್ಮಪ್ಪ ಅದರಲ್ಲೂ ಏನಾದರೂ ಒಂದು ಲಾಭ ಪಡೆದುಕೊಳ್ಳೋಣ ಎಂದುಕೊಂಡು ಇಸ್ತ್ರೀ ಪೆಟ್ಟಿಗೆಯನ್ನು ಯಾರು ತೆಗೆದುಕೊಂಡು ಹೋಗುತ್ತಾರೋ ಅವರು ಖಾಲಿ ಇಸ್ತ್ರೀಪೆಟ್ಟಿಗೆ ತಂದು ಕೊಡಬಾರದು ಎಂದು ತಾಕೀತು ಮಾಡಿಬಿಟ್ಟಿದ್ದರು. ಆವಾಗಿಲಿಂದ ಖಾಲಿ ಇಸ್ತ್ರೀ ಪೆಟ್ಟಿಗೆ ಬರುವಾಗ ಇದ್ದಿಲು ತುಂಬಿಕೊಂಡು ಬರುತ್ತಿತ್ತು.
ಆದರೆ ಊರಲ್ಲಿ ಬರುಬರುತ್ತಾ ಇಸ್ತ್ರೀ ಮಾಡುವವರೂ ಪೇಟೆಗೆ ಹೋಗಿ ಬರುವವರೂ ಜಾಸ್ತಿಯಾಗಿದ್ದರು. ಅದರಿಂದ ನಮ್ಮ ಮನೆಯ ಇಸ್ತ್ರೀಪೆಟ್ಟಿಗೆ ನಮಗೆ ಸಿಗುವುದು ದುಸ್ತರವಾಗತೊಡಗಿತ್ತು. ದಾರಿಯಲ್ಲಿ ಸಿಕ್ಕ ಜನ ನಮ್ಮ ತಂದೆಗೆ ‘ಸಾರ್  ಈ ಆಯ್ತವಾರ ನಾನೊಂದು ಮದುವೆಗೆ ಹೋಬೇಕು.ಒಸಿ ಇಸ್ತ್ರೀ ಪೆಟ್ಟಿಗೆ ಇಟ್ಟಿರಿ ಯಾರ್ಗೂ ಕೊಡಬೇಡಿ..’ ಎಂದು ಮೊದಲೇ ಬುಕಿಂಗ್ ಮಾಡಿಕೊಂಡುಬಿಡುತ್ತಿದ್ದರು. ಆದರೂ ಅದರ ಹಿಂದಿನ ದಿನ ತೆಗೆದುಕೊಂಡು ಹೋದವರು ವಾಪಸು ಕೊಟ್ಟಿರದೆ ಬುಕಿಂಗ್ ಮಾಡಿದವರು ನಮ್ಮ ಮನೆಗೆ ಬಂದಾಗ ‘ಇಲ್ಲಾ...ರಾಮು..ಆ ಸಿದ್ಲಿಂಗು ಇನ್ನೂ ತಂದೆ ಕೊಟ್ಟಿಲ್ಲ..’ಎಂದರೆ ಕೆರಳಿದ ಅವರು ‘ಸಾರ್ ನಿಮಗೆ ಮೊದಲೇ ಹೇಳಿದ್ನಲ್ಲಾ ಸಾ...ಏನ್ ಸಾ ನೀವು ಹಿಂಗ್ ಮಾಡಿಬುಟ್ರಿ..’ ಎಂದು ನಮ್ಮಪ್ಪನನ್ನೇ ದೂಷಿಸಿ, ‘ಇರೀ ಅವನಿಗೊಂದು ಭೂತ ಬುಡಿಸ್ತೀನಿ..ಏನ್ ಅವರಪ್ಪನ ಮನೆದು ಅನ್ಕಂಡಿದ್ದಾನಾ..’ ಎಂದು ನಮ್ಮೆದುರಿಗೆ ಬೈದು ‘ಸಾರ್..ಅವನಿಗೆ ಇನ್ಯಾವತ್ತೂ ಕೊಡಲೇಬೇಡಿ ಸಾರ್..’ ಎಂದು ನಮಗೆ ಆಜ್ಞಾಪಿಸಿ ಅಲ್ಲಿಂದ ಅವರ ಮನೆಯ ಕಡೆಗೆ ಗೂಳಿಯಂತೆ ನುಗ್ಗುತ್ತಿದ್ದರು.
ಆ ಇಸ್ತ್ರೀಪೆಟ್ಟಿಗೆ ಊರಿನಲ್ಲಿ ನಮಗೊಂದು ವಿಶೇಷ ಮರ್ಯಾದೆಯನ್ನು ತಂದುಕೊಟ್ಟಿತ್ತು. ಎಲ್ಲರೂ ಸಂತೋಷದಿಂದ ಮಾತಾಡಿಸುತ್ತಿದ್ದರಲ್ಲದೆ, ನಮ್ಮ ಮನೆಯ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಿದ್ದರು. ಆದರೆ ಅದರಿಂದ ಚಿಕ್ಕಪುಟ್ಟ ಅವಾಂತರಗಳೂ, ನಮ್ಮ ಇಸ್ತ್ರೀ ಪೆಟ್ಟಿಗೆಯಿಂದ ಜಗಳಗಳೂ ನಡೆಯುತ್ತಿದ್ದ ಸಂದರ್ಭಗಳೂ ಇದ್ದವು.   
ಅದೊಂದು ದಿನ ನಮ್ಮೂರಿನವರೇ ಆದ ಇಬ್ಬರು ಮಹಿಳೆಯರು ಜುಟ್ಟು ಜುಟ್ಟು ಹಿಡಿದುಕೊಂಡು ಜಗಳವಾಡಿಕೊಂಡಿದ್ದರು. ಅದಕ್ಕೆ ಕಾರಣವಾದದ್ದು ನಮ್ಮ ಮನೆಯ ಇಸ್ತ್ರೀ ಪೆಟ್ಟಿಗೆಯಾಗಿತ್ತು. ರತ್ನಮ್ಮ ನಮ್ಮ ಮನೆಯಲ್ಲಿ ಬಂದು ಆವತ್ತು ಇಸ್ತ್ರೀ ಪೆಟ್ಟಿಗೆ ಕೇಳಿದ್ದಳು. ತನ್ನ ಮಗಳು-ಅಳಿಯ ಊರಿಗೆ ಬಂದು ವಾರವಾಗಿದ್ದು ನಾಳೆ ಹೋಗುತ್ತಿದ್ದಾರೆ, ನಮ್ಮ ಅಳಿಯ ಇಸ್ತ್ರೀಯಿಲ್ಲದೆ ಬಟ್ಟೆ ಧರಿಸುವುದೇ ಇಲ್ಲ ಎಂದು ಅಲವತ್ತುಗೊಂಡಿದ್ದಳು. ಆದರೆ ಆಕೆಯ ದುರಾದೃಷ್ಟಕ್ಕೆ ಆವತ್ತೇ ಲಕ್ಷ್ಮಿ ತನ್ನ ಮನೆಗೆ ತೆಗೆದುಕೊಂಡು ಹೋಗಿಬಿಟ್ಟಿದ್ದಳು. ಆಗ ಕೈ ಕೈ ಹೊಸಕಿಕೊಂಡ ರತ್ನಮ್ಮ ಹೆಂಗಾರ ಮಾಡಿ ತನಗೆ ಆ ಇಸ್ತ್ರೀ ಪೆಟ್ಟಿಗೆಯನ್ನು ಈಸಿ ಕೊಡಬೇಕೆಂದು ಇದು ನಮ್ಮ ಮನೆಯ ಮಾನ ಮರ್ಯಾದೆಯ ಪ್ರಶ್ನೆ, ಬೀಗರ ಮುಂದೆ ನಮ್ಮ ಮರ್ಯಾದೆ ಹೋಗಿ ಬಿಡುತ್ತದೆ, ನೀವೇ ಬಂದು ಲಕ್ಷ್ಮಿ ಹತ್ತಿರ ಇಸ್ತ್ರೀಪೆಟ್ಟಿಗೆ ಈಸಿಕೊಟ್ಟು ಉಪಕಾರ ಮಾಡಬೇಕು ಎಂದು ನಮ್ಮಪ್ಪನನ್ನು ಗೋಗೆರೆದಿದ್ದಳು. ನಮ್ಮಮ್ಮ ಅಲ್ಲೋಗಿ ಕೇಳು ಅವಳು ಕೊಡುತ್ತಾಳೆ ಎಂದು ಎಷ್ಟೇ ಹೇಳಿದರೂ ಆಕೆ ಲಕ್ಷ್ಮಮ್ಮನ ಬಳಿ ಹೋಗಲು ತಯಾರಿರಲಿಲ್ಲ. ಯಾಕೆಂದರೆ ರತ್ನಮ್ಮ ಮತ್ತು ಲಕ್ಷ್ಮಿ ಇಬ್ಬರೂ ವಾರಗಿತ್ತಿಯರಾಗಿದ್ದರು ಮತ್ತು  ಅವರ ಮನೆಗಳು ಎದುರು ಬದುರೆ ಇದ್ದದ್ದರಿಂದ ದಿನಾ ಜಗಳವಾಡುತ್ತಿದ್ದರು. ಕೊನೆಗೆ ಸೋತ ನಮ್ಮಪ್ಪ ನನ್ನನ್ನು ಹೋಗಿ ಅವಳ ಮನೆಯಿಂದ ಇಸ್ತ್ರೀ ಪೆಟ್ಟಿಗೆಯನ್ನು ಈಸಿಕೊಡುವಂತೆ ಹೇಳಿದರು. ನಾನು ರತ್ನಮ್ಮ ಜೊತೆ ಲಕ್ಷ್ಮಮ್ಮನ ಮನೆಗೆ ಹೋಗಿ ಅವರ ಮನೆಯಿಂದ ಇಸ್ತ್ರೀ ಪೆಟ್ಟಿಗೆ ತೆಗೆದುಕೊಟ್ಟಿದ್ದಕ್ಕೆ ರತ್ನಮ್ಮ ಭಾವಪರವಶಳಾಗಿ ನನ್ನನ್ನು ಕೊಂಡಾಡಿದ್ದಳು.
ಆನಂತರ ಮನೆಗೆ ಖುಷಿಯಿಂದ ಬಂದಿದ್ದಾಳೆ. ಮಗಳ ಕೈಯಲ್ಲಿ ಅಳಿಯನ ಬಟ್ಟೆ ಕೊಡುವಂತೆ ಕೇಳಿದ್ದಾಳೆ, ಮಗಳೂ ಅಷ್ಟೇ ಖುಷಿಯಿಂದ ಹೋಗಿ ಗಂಡನ ಹತ್ತಿರ ಅಮ್ಮ ಇಸ್ತ್ರೀ ಮಾಡಿಕೊಡುತ್ತಾಳೆ..ಬಟ್ಟೆ ಕೊಡಿ ಎಂದು ಕೇಳಿದ್ದಾಳೆ, ಅವನು ಕೊಟ್ಟಿದ್ದಾನೆ..ಅದೇ ಒಂದು ತರನಾದ ಗರ್ವದ ಜೊತೆಗೆ ರತ್ನಮ್ಮ ಇಸ್ತ್ರೀ ಮಾಡಲು ಕುಳಿತುಕೊಂಡಿದ್ದಾಳೆ.ಮೊದಲಿಗೆ ಎರಡು ರಗ್ಗನ್ನು ಮೂರು ಅಡಿ ಉದ್ದಕ್ಕೆ ಮಡಚಿ ಅದರ ಮೇಲೆ ಬಿಳಿಯ ಪಂಚೆ ಹಾಸಿ ಸಿದ್ಧಮಾಡಿದ್ದಾಳೆ. ಇಸ್ತ್ರೀ ಪೆಟ್ಟಿಗೆಗೆ ಮೊದಲಿಗೆ ಇದ್ದಲು ಹಾಕಿ, ಆನಂತರ ನಿಗಿ ನಿಗಿ ಕೆಂಡ ಹಾಕಿ ಮುಚ್ಚಿದ್ದಾಳೆ. ಆನಂತರ ಬಿಸಿಯಾಗಿದೆ ಎಂದಾಕ್ಷಣ ಅಳಿಯ ಹೊಸ ಮುದುರಿಹೋಗಿದ್ದ ರೇಶಿಮೆ ಅಂಗಿಯನ್ನು ಹಾಸಿ ಇಸ್ತ್ರೀ ಪೆಟ್ಟಿಗೆಯನ್ನು ಅದರ ಮೇಲೆ ಇಟ್ಟಿದ್ದಾಳೆ. ಆನಂತರ ಮೇಲೆತ್ತಿದ್ದರೆ ಇಡೀ ಇಸ್ತ್ರೀ ಪೆಟ್ಟಿಗೆ ಅಂಗಿಗೆ ಆಂಟಿಕೊಳ್ಳಬೇಕೆ..?ಜೋರಾಗಿ ಒದರಿದಾಗ ಇಸ್ತ್ರೀ ಪೆಟ್ಟಿಗೆ ಅಷ್ಟೂ ಜಾಗವನ್ನು ಆಪೋಶನ ತೆಗೆದುಕೊಂಡಿದೆ. ಅಳಿಯನ ಬಟ್ಟೆಯ ಸ್ಥಿತಿ ಕಂಡ ರತ್ನಮ್ಮ ಹೌಹಾರಿದ್ದಾಳೆ. ಇನ್ನು ಗಂಡ ಬಂದರೆ ಭಾರಿಸುವುದು ಖಾತರಿಯಾಗಿದೆಯಾದರೂ ಇದಕ್ಕೆಲ್ಲಾ ಕಾರಣ ಲಕ್ಷ್ಮಿ ಎಂದೆ ಎನಿಸಿಬಿಟ್ಟಿದೆ.
ಇಸ್ತ್ರೀ ಪೆಟ್ಟಿಗೆ ತೆಗೆದುಕೊಂಡು ಹೋದವರು ಬಟ್ಟೆಗಳನ್ನು ಸುಟ್ಟುಕೊಳ್ಳುವುದು ಸರ್ವೇ ಸಾಮಾನ್ಯವಾಗಿತ್ತಾದರೂ ವಾಪಸು ಕೊಡುವಾಗ ಬುಡದಲ್ಲಿ ಶಾಖ ಜಾಸ್ತಿಯಾಗಿ ಅಂಟಿಕೊಂಡಿದ್ದ ಕರಗಿದ್ದ ಬಟ್ಟೆಯನ್ನೆಲ್ಲಾ ಕೆರೆದು ಕೊಡುತ್ತಿದ್ದರು. ನಾವೂ ಅಷ್ಟೇ! ಇಸ್ತ್ರೀ ಮಾಡುವ ಮೊದಲು ತಳವನ್ನೊಮ್ಮೆ ನೋಡಿಯೇ ಮುಂದುವರೆಯುತ್ತಿದ್ದೆವು. ತಕ್ಷಣ ಇದೆಲ್ಲಾ ಆ ಲಕ್ಷ್ಮಿ ಬೇಕೆಂತಲೇ ಮಾಡಿದ್ದಾಳೆ, ತಾನೇ ಬಟ್ಟೆ ಸುಟ್ಟುಕೊಂಡು ತಳ ಕೆರೆಯದೆ ಹಾಗೆ ಕೊಟ್ಟಿದ್ದಾಳೆ, ತನ್ನ ಮಾನ ಕಳೆಯಲು ಹುನ್ನಾರ ಮಾಡಿದ್ದಾಳೆ ಎಂದುಕೊಂಡ ರತ್ನಮ್ಮ ಇನ್ನು ಮುಂದೆ ಯೋಚಿಸಲು ಹೋಗದೆ ಸೀದಾ ಅವಳ ಮನೆಗೆ ನುಗ್ಗಿ ಶರಂಪರ ಜಗಳವಾಡಿದ್ದಾಳೆ. ಇಲ್ಲಾ...ಅದು ಮೇಸ್ಟ್ರು ಕೊಟ್ಟಾಗಲೇ ಹಾಗಿತ್ತು ಬೇಕಾದ್ರೆ ಅವರನ್ನೇ ಕೇಳು..ನನ್ನ ತಂಟೆಗೆ ಬರಬೇಡ ಎಂದು ಲಕ್ಷ್ಮಿ ಜೋರು ಮಾಡಿದ್ದಾಳೆ. ಇದು ತಾರಕಕ್ಕೇರಿ ಕೊನೆಗೆ ಸಾಕ್ಷಿಗಾಗಿ ಅವರ ದಂಡು ನಮ್ಮ ಮನೆಯ ಮುಂದೆ ಬಂದಿದೆ.
‘ಹೇಳಿ ಸಾ..ನೀವು ಕೊಡುವಾಗ ಹಂಗೆ ಇರ್ನಿಲ್ವಾ..’
‘ಅದ್ಯಾಕಂಮಿ ಮೇಸ್ಟ್ರು ಸುಟ್ಟುಕೊಟ್ಟಾರು..ನಿಂಗೆ ಮನೆವರ್ತೆ ಮಾಡಕ್ಕೆ ಬರ್ಲ್ಲಾಂದ್ರೆ ಯಾರ್ಗೂ ಬರಾಕಿಲ್ವಾ..ಕತ್ತೆ ಲೌಡಿ ನೀನು ಬೇಕಂದೆ ಮಾಡಿದೆಯ್ ..ಎಂದು ಇವಳು...ಕೊನೆಗೆ ಅದೇ ಮನೆಯ ಅಳಿಯನ ಮಧ್ಯಸ್ಥಿಕೆಯಿಂದಾಗಿ ಆ ಜಗಳ ಬಗೆಹರಿದದ್ದು ಬೇರೆ ಮಾತು.
ನಮ್ಮೂರಿನಲ್ಲಿ ಪುಟ್ಟಪ್ಪನೊಬ್ಬನೇ ಅಗಸನಿದ್ದದ್ದು. ಆದರೆ ಅಲ್ಯಾರೂ ಬಟ್ಟೆ ಹೊಗೆಯಲು ಅವನ ಕೈಗೆ ಕೊಡುತ್ತಿರಲಿಲ್ಲ. ಮುಟ್ಟಿನ, ಸೂತಕದ ಮುಂತಾದ ಬಟ್ಟೆಗಳನ್ನು ಮಾತ್ರ ಅವನ ಕೈಗೆ ಕೊಟ್ಟು ಒಗೆಸುವ ಸಂಪ್ರಾದಾಯ ನಮ್ಮೂರಲ್ಲಿತ್ತು. ಹಾಗಾಗಿ ಅವನ ಮೂಲ ಕಸುಬಿನಿಂದ ಅವನಿಗೆ ಅಂತಹ ಲಾಭವಾಗುತ್ತಿರಲಿಲ್ಲ. ಊರವರು ವರ್ಷಕ್ಕೊಮ್ಮೆ ಒಂದಷ್ಟು ದವಸ ಧಾನ್ಯ ಕೊಡುತ್ತಿದ್ದರಾದರೂ ಅದು ಅಲ್ಲಿಗಲ್ಲಿಗೆ ಸರಿ ಹೋಗುತ್ತಿತ್ತು.
ಅದೊಂದು ದಿನ ಹೀಗೆ ನಮ್ಮ ಮನೆಗೆ ಬಂದ ಪುಟ್ಟಪ್ಪನಿಗೆ ನಮ್ಮಪ್ಪ ಅದೂ ಇದೂ ಮಾತಾಡುತ್ತ ಇಸ್ತ್ರಿಯ ವಿಚಾರ ತೆಗೆದಿದ್ದರು. ‘ಅಲ್ವೋ ಪುಟ್ಟ ..ಹೆಂಗೂ ಒಂದು ಇಸ್ತ್ರೀ ಅಂಗಡಿ ಇಟ್ಕಂದ್ರೆ ಜನಕ್ಕೂ ಒಳ್ಳೆದಾಗ್ತದೆ..ನಿನಗೂ ಒಂದಷ್ಟು ಕಾಸಾಗ್ತದೆ..’ ಎಂದದ್ದಕ್ಕೆ ಒಮ್ಮೆ ನೆಲಕ್ಕೆ ತುಪಕ್ಕನೆ ಉಗಿದ ಪುಟ್ಟಪ್ಪ, ‘ಸುಮ್ಕಿರಿ ಸಾ.. ನಮ್ಮೂರ ಜನ ಕಾಸು ಕೊಟ್ಟು ಇಸ್ತ್ರೀ ಹಾಕಿಸ್ಕ೦ಡಾರ..? ತಾಮ್ರದ ಚೆಂಬೋಳಕ್ಕೆ ಕೆಂಡಸುರ್ಕೊಂದು ತಾವೇ ಬಟ್ಟೆ ಮೇಲೆ ತಿಕ್ಕೊಳ್ಳೋ ಜನ ..’ ಎಂದೆಲ್ಲಾ ದೂಷಣೆಯ ಮಾತುಗಳನ್ನಾಡಿದನಾದರೂ ಕೊನೆಕೊನೆಗೆ ನಮ್ಮಪ್ಪನ ಮಾತಿನಲ್ಲೂ ಅರ್ಥ ಇದೆ ಅನಿಸಿತು. ನಮ್ಮಪ್ಪನೂ ಅದಕ್ಕೆ ಬೇಕಾದ ಉದಾಹರಣೆಗೆಳನ್ನೂ ಊರು ಬೆಳೆಯುತ್ತಿರುವ ರೀತಿ, ಶಾಲೆಯ ಹುಡುಗರು ಕಾಲೇಜಿಗೆ ಕಾಲು ಇಡುತ್ತಿರುವುದು ಜನರೆಲ್ಲಾ ಪ್ಯಾಂಟನ್ನು ಬಳಸಲು ಕಲಿತಿರುವುದು ಮುಂತಾದ ಇಸ್ತ್ರೀಗೆ ಅನುಕೂಲಕರವಾದ ಅಂಶಗಳನ್ನು ಅವನ ತಲೆಗೆ ತುಂಬಿದ್ದರು. ಕೊನೆಗೆ ‘ಸರಿ ಸಾ.. ಆದೂ ಆಗೋಗ್ಲಿ..ಹೆಂಗೋ ನಂಗೆ ಮೊದಲ್ನಂಗೆ ಹೊಲದಲ್ಲಿ ಕೆಲಸ ಮಾಡಕ್ಕಾಗಲ್ಲ..ಕುಂತ ಜಾಗದಲ್ಲೇ ಒಂದಷ್ಟು ಕಾಸು ಬರದಾದ್ರೆ ಆಗ್ಲಿ ಬುಡಿ...ಹೆಂಗೋ ಒಂದ್ ಇಸ್ತ್ರೀ ಪೆಟ್ಟಿಗೆ, ಒಂದಷ್ಟು ಇದ್ದಿಲು ತಾನೇ ಬಂಡವಾಳ ..’ ಎಂದವನು ಒಂದು ಇಸ್ತ್ರೀ ಅಂಗಡಿಯನ್ನು ತೆರೆಯುವ ನಿರ್ಧಾರ ಮಾಡೇ ಬಿಟ್ಟಿದ್ದ. ‘ಸಾರ್..ಒಸಿ ಯವಾರ ಕೈ ಹತ್ತೊಗಂಟ ನಿಮ್ಮ ಇಸ್ತ್ರೀ ಪೆಟ್ಟಿಗೆ ಕೊಟ್ಟಿರಿ..ಆಮ್ಯಾಕೆ ನಾನೇ ಒಂದ್ ಕೊಂಡ್ಕತೀನಿ..ಎಂದಾಗ ನಮ್ಮಪ್ಪ ಹೌಹಾರಿದ್ದರು.
ನಮ್ಮ ಮನೆಯ ಇಸ್ತ್ರೀ ಪೆಟ್ಟಿಗೆ ಊರ ಬಹುತೇಕರ ಬಟ್ಟೆಗಳನ್ನು ಇಸ್ತ್ರೀ ಮಾಡಿ, ಸುಟ್ಟು ಹಾಕಿ ಅದರ ಬುಡವೆಲ್ಲ ಸವೆದು ಹೋಗಿತ್ತು. ಅದರಲ್ಲಿ ಇಸ್ತ್ರೀ ಮಾಡೋವಾಗ ಅತಿಯಾದ ಜಾಗರೂಕತೆ ವಹಿಸಬೇಕಾಗಿತ್ತು. ಹಾಗಾಗಿ ನಮಗೆ ಹೊಸದನ್ನು ತರುವ ಅನಿವಾರ್ಯ ಬಂದೊದಗಿತ್ತು. ಆದರೆ ಈ ಸಾರಿ ಇದ್ದಿಲು ಇಸ್ತ್ರೀ ಪೆಟ್ಟಿಗೆ ಬೇಡವೇ ಬೇಡ..ಕರೆಂಟ್ ದು ತನ್ನಿ ಎಂಬುದು ನಮ್ಮಮ್ಮ ಮತ್ತು ನಮ್ಮೆಲ್ಲರ ಒಕ್ಕೊರಳಿನ ಒತ್ತಾಯವಾಗಿತ್ತು. ‘ಅದೇಗೆ ಸಾಧ್ಯ..ನಾವೇನೆ ತಂದರೂ ಊರ ಜನ ಕೇಳದೆ ಬಿಡುವುದಿಲ್ಲ..ಕೊಡದಿದ್ದರೆ ನಿಷ್ಠೂರ..ಹಾಗಂತ ಕೊಟ್ಟರೆ ಅದನ್ನು ಬಳಸಲು ಬರದೆ ಹೆಚ್ಚು ಕಡಿಮೆ ಆಗುವ ಸಂಭವ ಜಾಸ್ತಿ..ಮೊದಲೇ ಕರೆಂಟಿನದು..ಸುಮ್ಮನೆ ಇಲ್ಲದ ಅಪಾಯ ಯಾಕೆ? ’ಎಂಬುದು ನಮ್ಮಪ್ಪನ ಅಳಲು. ಹಾಗಾಗಿ ಪುಟ್ಟಪ್ಪ ಇಸ್ತ್ರೀ ಅಂಗಡಿ ತೆರೆದರೆ ನಮಗೆ ಸ್ವಲ್ಪ ತೊಂದರೆ ತಪ್ಪಬಹುದು ಎಂಬುದು ನಮ್ಮಪ್ಪನ ಆಲೋಚನೆಯೂ ಆಗಿತ್ತೆನ್ನಬಹುದು.
ಹೊಸದಾದ ಇಸ್ತ್ರೀ ಪೆಟ್ಟಿಗೆ ತಂದ ಪುಟ್ಟಪ್ಪ ಅಂಗಡಿ ತೆರೆಯುವ ಹಿಂದಿನ ನಮ್ಮ ಮನೆಗೆ ಬಂದವನು ನಮ್ಮಪ್ಪನ ಕೈಯಲ್ಲಿ ಶರ್ಟುಗಳನ್ನು ಇಸ್ತ್ರೀ ಮಾಡುವ ಬಗೆ, ಪ್ಯಾಂಟುಗಳನ್ನೂ ಇಸ್ತ್ರೀ ಮಾಡುವ ಬಗೆ ಮುಂತಾದ ವಿಷಯಗಳನ್ನು ಗಂಟೆಗಟ್ಟಲೆ ಪ್ರಾಯೋಗಿಕವಾಗಿಯೇ ತಿಳಿದುಕೊಂಡು ಹೋಗಿದ್ದ.
ಮಾರನೆಯ ದಿನ ಭರ್ಜರಿಯಾಗಿ ಇಸ್ತ್ರೀ ಪೆಟ್ಟಿಗೆ ಅಂಗಡಿ ತೆರೆದ ಪುಟ್ಟಪ್ಪ ಮನೆಮನೆಗೂ ಹೋಗಿ ತಾನು ಇಸ್ತ್ರೀ ಪೆಟ್ಟಿಗೆ ಅಂಗಡಿ ತೆರೆದಿರುವುದಾಗಿ ಸಾರಿಕೊಂಡು ಬಂದಿದ್ದ. ಹೇಗೋ ವರ್ಷಾ ವರ್ಷಾ ಬಂದು ದವಸ ಧಾನ್ಯ ತೆಗೆದುಕೊಂಡು ಹೋಗುವ ಪುಟ್ಟಪ್ಪನಿಗೆ ತಾವು ಕೊಟ್ಟ ದವಸಕ್ಕೆ ಸರಿಯಾದ ಕೆಲಸ ತೆಗೆದುಕೊಳ್ಳಬೇಕು ಎಂದು ನಮ್ಮೂರ ಜನ ನಿರ್ಧಾರ ಮಾಡಿಬಿಟ್ಟು ಬಟ್ಟೆಯನ್ನೆಲ್ಲಾ ಅವನ ಕೈಲಿ ಕೊಟ್ಟು ಇಸ್ತ್ರೀ ಮಾಡಿಸಲು ಸಿದ್ಧರಾಗಿದ್ದರು.
ಆದರೆ ಒಂದೆ ವಾರಕ್ಕೆ ಪುಟ್ಟಪ್ಪನ ಅಂಗಡಿಯನ್ನು ಮುಚ್ಚುವ ಪ್ರಮೇಯ ಬಂದೊದಗಿತ್ತು. ಇನ್ನೂ ಅನುಭವವಿಲ್ಲದ ಕಾರಣ ಪುಟ್ಟಪ್ಪ ಇಸ್ತ್ರೀ ಪೆಟ್ಟಿಗೆಗೆ ಎರ್ರಾಬಿರ್ರಿ  ಇದ್ದಿಲು ಕೆಂಡ ಹಾಕಿಬಿಡುತ್ತಿದ್ದ. ಬಟ್ಟೆಗಳು ಸುಟ್ಟು ಹೋಗುತಿದ್ದವು.ಆನಂತರ ಅದನ್ನು ಮಡಚಿ ಮಟ್ಟಸವಾಗಿ ಕೊಡುತ್ತಿದ್ದ. ‘ಪರಾವಾಯಿಲ್ಲ ಕಣಯ್ಯಾ..ನೀನು ಕಸುಬು ಕಲ್ತು ಬುಟ್ಟೆ..’ ಎಂದರೇ, ‘ಏನೋ ಸಾಮಿ..ಇನ್ನಾ ಸಲ್ಪ ಪಕ್ಕಾ ಆಗ್ಬೇಕು...ಈ ವಾರದಾಗೆ ಎಲ್ಲಾ ಸರ್ಯೋತದೆ..’ ಎಂಬ ಮಾತುಗಳನ್ನು ಆಡುತ್ತಿದ್ದ. ಅವನ ಮಾತಿನ ಒಳಾರ್ಥ ಅರಿಯದ ಜನ ಕೈಗೆ ಚಿಲ್ಲರೆ ಕಾಸು ಕೊಟ್ಟು ಮನೆಗೆ ಹೋಗಿ ಬಟ್ಟೆಯನ್ನು ಬಿಡಿಸಿದರೆ ಅಲ್ಲಿರುತ್ತಿತ್ತು ಸುಟ್ಟು ಹೋದ ರಂಧ್ರಗಳ ಚಿತ್ತಾರ. ತೀರಾ ಸುಟ್ಟುಹೋಗದಿದ್ದರೂ ಇಸ್ತ್ರೀ ಪೆಟ್ಟಿಗೆಯ ಕೆಳ ಸಂಧಿಯಿಂದ ಹಾರುವ ಚಿಕ್ಕ ಚಿಕ್ಕ ಕಿಡಿಗಳು ಬಟ್ಟೆಗಳಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡುತ್ತಿದ್ದವು. ಒಳ್ಳೊಳ್ಳೆ ಮದುವೆ ಸೀರೆಗಳು , ಬಟ್ಟೆಗಳು ಸುಟ್ಟು ಹೋದ ನಂತರ ಜನರೆಲ್ಲಾ ಅವನ ಮನೆಯ ಹತ್ತಿರ ಹೋಗಿ ಅವನ ಇಸ್ತ್ರೀಪೆಟ್ಟಿಗೆ ಕಿತ್ತುಕೊಂಡು ಬದಲಿ ಹೊಸ ಬಟ್ಟೆ ಕೊಡುವಂತೆ ಜಗಳ ಮಾಡಿದ್ದರು. ಅವರನ್ನೆಲ್ಲಾ ಹೇಗೋ ಸಮಾಧಾನ ಮಾಡಿ ಕಳುಹಿಸಿದ ಪುಟ್ಟಪ್ಪನ ಮಗ ಗಂಗಯ್ಯ ಅಪ್ಪನಿಗೆ ಬೈಯ್ದು ‘ನೀನು ಮನೆಯಲ್ಲಿ ಬಿದ್ದಿರು..ಈ ಇಸ್ತ್ರೀನೂ ಮಾಡಬೇಡಾ..ಏನೂ ಮಾಡಬೇಡಾ..’ ಎಂದು ಗದರಿ ಅಂಗಡಿಯನ್ನು ಮುಚ್ಚಿದ್ದ.
ಅದೇ ಕೊನೆ. ಆನಂತರ ನಮ್ಮ ಊರಿನಲ್ಲಿ ಮತ್ತೆ ಯಾರೂ ಇಸ್ತ್ರೀ ಅಂಗಡಿ ಇಡಲಿಲ್ಲವಾದರೂ ಕೆಲವರು ಸ್ವಂತಕ್ಕೆ ಇಸ್ತ್ರೀಪೆಟ್ಟಿಗೆಯನ್ನು ಖರೀದಿ ಮಾಡಿದ್ದರು.ನಾವೊಂದು ಎಲೆಕ್ಟ್ರಿಕ್ ಇಸ್ತ್ರೀಪೆಟ್ಟಿಗೆ ತಂದೆವಾದರೂ ಹಳೆಯ ಇಸ್ತ್ರೀಪೆಟ್ಟಿಗೆ ಮಾತ್ರ ತನ್ನ ಊರು ಸುತ್ತುವ ಕಾರ್ಯಕ್ರಮವನ್ನು ಎಡೆಬಿಡದೆ ಮಾಡುತ್ತಿತ್ತು.
[ಇತ್ತೀಚಿಗೆ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ನನ್ನ ಪ್ರಬಂಧ]

Tuesday, October 29, 2013

ಜೋಗಿಯವರ ಚಿಕ್ಕಪ್ಪ...

ಚಿಕ್ಕಪ್ಪ ಸಾಮಾನ್ಯನಲ್ಲ, ಆತಯಾರು ಆ ಊರಿಗೆ ಅವನು ಬಂದದ್ದಕ್ಕೆ ನಿರ್ಧಿಷ್ಟವಾದ ಉದ್ದೇಶವೆನಾದರೂ ಇರಬಹುದಾ..? ಆತನ ಹಿನ್ನೆಲೆ ಏನು ಎಂಬಿತ್ಯಾದಿ ಪ್ರಶ್ನೆಗಳು ಚಿಕ್ಕಪ್ಪ ಕಾದಂಬರಿಯ ಲೇಖಕರನ್ನು ಕಾಡಿದಂತೆ ಓದುಗನನ್ನೂ ಕಾಡುತ್ತದೆ.ಚಿಕ್ಕಪ್ಪ ತೀರಾ ದೊಡ್ಡದಾದ ಪುಸ್ತಕವಲ್ಲ. ಮೂರು ತಾಸಿನಲ್ಲಿ ಓದಿಬಿಡಬಹುದಾದ ಪುಸ್ತಕ.ಚಿಕ್ಕಪ್ಪ ಎನ್ನುವವನ ಜೀವನದ ಕಥೆಯಲ್ಲ. ಬದಲಿಗೆ ಅದೊಂದು ವರದಿ ಎಂದರೆ ಸೂಕ್ತವೆನಿಸಬಹುದು.
ಚಿಕ್ಕಪ್ಪ ಕಾದಂಬರಿಯಲ್ಲಿ ಬರುವ ಚಿಕ್ಕಪ್ಪನ ಪಾತ್ರವೇ ಅಂತಹದ್ದು. ಹಂತಹಂತವಾಗಿ ತನ್ನ ಕಬಂಧ ಬಾಹುಗಳನ್ನು ಚಾಚುತ್ತಾ ಇಡೀ ಊರನ್ನೇ ಆ ಮೂಲಕ ಇಡೀ ಒಂದು ಸಮುದಾಯವನ್ನೇ ಅದರ ಜೊತೆಗೆ ಒಂದು ಪೀಳಿಗೆಯನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಚಿಕ್ಕಪ್ಪ ನಮ್ಮೆಲ್ಲರ ಮನಸ್ಸಿನಲ್ಲಿ ಉಳಿಯುವಂತೆ ಜೋಗಿಯವರು ಬರೆದಿದ್ದಾರೆ. ಅಥವಾ ಅವರೇ ಹೇಳುವಂತೆ ಅದನ್ನು ದಾಖಲಿಸಿದ್ದಾರೆ. ಅಲ್ಲಿ ಹೀಗೇನಾದರೂ ನಡೆದಿತ್ತಾ ಎಂಬ ಪ್ರಶ್ನೆ ಗೆ ನಡೆದಿದ್ದರೂ ನಡೆದಿರಬಹುದು ಎಂಬ ಉತ್ತರ ಬರುತ್ತದೆ. ಅದನ್ನು ಲೇಖಕರು ಕೊಡುವುದಿಲ್ಲ. ಅಥವಾ ಆ ಪಾತ್ರ ಸ್ಪಷ್ಟವಾಗಿ ಹೇಳುವುದಿಲ್ಲ. ಬದಲಿಗೆ ಓದುತ್ತಾ ಓದುತ್ತಾ ನಮಗೆ ಅನಿಸುತ್ತದೆ. ಜೊತೆಗೆ ನಮ್ಮೂರಿನಲ್ಲಿ ಇದ್ದ ಅವನನ್ನೇ ಹೋಲುವ ವ್ಯಕ್ತಿಯ ನೆನಪಾಗುತ್ತದೆ. ಹಾಗಾಗಿಯೇ ಜೋಗಿ ಇದು ನಿಮ್ಮೂರಿನ ಕಥೆಯೂ ಇರಬಹುದು ಅಥವಾ ನಿಮ್ಮೂರಲ್ಲಿಯೂ ಒಬ್ಬ ಚಿಕ್ಕಪ್ಪ ಇರಬಹುದು ಎನ್ನುತ್ತಾರೆ.
ಆದರೆ ಚಿಕ್ಕಪ್ಪ ಒಂದು ಕಾದಂಬರಿ ಎನಿಸಿಕೊಳ್ಳುವುದಕ್ಕಿಂತ ಒಬ್ಬ ವ್ಯಕ್ತಿಯ ಕುರಿತಾದ ವರದಿ ಎನಿಸಿಕೊಳ್ಳುತ್ತದೆ. ನನ್ನ ಪ್ರಕಾರ ಅದೇ ಪುಸ್ತಕದ ಧನಾತ್ಮಕ ಅಂಶ. ಹಾಗೆಯೇ ಅದುವೇ ಪುಸ್ತಕದ ಋಣಾತ್ಮಕ ಅಂಶ ಎನಿಸದೆ ಇರದು. ಒಬ್ಬ ವ್ಯಕ್ತಿಯ ಚಿತ್ರಣವನ್ನು ಜೋಗಿ ತುಂಬಾ ವಿವರವಾಗಿಯೇ ಕಟ್ಟಿಕೊಟ್ಟಿದ್ದಾರೆ. ಆದರೂ ಅದೊಂದು ಪರಿಪೂರ್ಣ ಕಾಲ್ಪನಿಕ ಕಥಾನಕ ಅನಿಸುವುದಿಲ್ಲ. ಅಥವಾ ಸಂಪೂರ್ಣ ವ್ಯಕ್ತಿಯೊಬ್ಬನ ಜೀವನ ಚರಿತ್ರೆ ಅನಿಸುವುದಿಲ್ಲ. ಹಾಗಾಗಿಯೇ ಚಿಕ್ಕಪ್ಪನ ಪಾತ್ರ ಇಷ್ಟವಾದರೂ ಕಾದಂಬರಿ ಕಾಡುವುದು ಅನುಮಾನ.ಸರಾಗವಾಗಿ ಓಡಿಸಿಕೊಂಡು ಹೋಗುವ ಕಾದಂಬರಿ ಬೇಗನೆ ಮುಗಿದುಹೋಗುತ್ತದೆ. ಕೊನೆಯಲ್ಲಿ ಇಷ್ಟೇನಾ..? ಇನ್ನೂ ಏನಾದರೂ ಇರಬೇಕಿತ್ತು ಎನಿಸುತ್ತದೆ.
ಚಿಕ್ಕಪ್ಪ ಕಾದಂಬರಿ ಓದುವಾಗ ಬೇಸರ ತರಿಸುವುದಿಲ್ಲವಾದರೂ ಜೋಗಿಯವರದೇ ಕೃತಿಯಾದ ಗುರುವಾಯನ ಕೆರೆಯ ರೀತಿ ಅಚ್ಚರಿ ಹುಟ್ಟಿಸುವುದಿಲ್ಲ. ಹಾಗೆಯೇ ಅದರಲ್ಲಿನ ಪಾತ್ರಗಳಂತೆ ಕಾಡುವುದಿಲ್ಲ.
ನನಗೆ ಮಂಗಳೂರು ಸುಳ್ಯ ಮುಂತಾದವುಗಳ ಪರಿಚಯ ಅಷ್ಟಾಗಿ ಇರಲಿಲ್ಲ. ಮೊದಲೆಲ್ಲಾ ಸಿನಿಮಾದ ಕೆಲಸಗಳಿಗೆ ಹೋಗುತ್ತಿದ್ದೆವಾದರೂ ಆವಾಗ ಊರನ್ನು ಅಷ್ಟು ಚೆನ್ನಾಗಿ ಗಮನಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನನಗೆ ಈಗ ಸುಳ್ಯ ಮಾವನ ಮನೆಯಾದ್ದರಿಂದ ಅಲ್ಲಿ ಹೋಗಿ ವಾರಗಟ್ಟಲೆ ಉಳಿಯುವುದರಂದ ಅಲ್ಲಿನ ಜನಜೀವನ ಸ್ಥಳ ಪರಿಚಿತವಾಗಿವೆ. ಹಾಗಾಗಿಯೇ ಜೋಗಿಯವರ ಚಿಕ್ಕಪ್ಪ ಓದುವಾಗ ಪುಸ್ತಕದಲ್ಲಿ ಬರುವ ಸಂಪಾಜೆ, ಉಪ್ಪಿನಂಗಡಿ, ಮಂಗಳೂರು ಮುಂತಾದವು ಪರಿಚಿತ ಅನಿಸುತ್ತದೆ. ಹಾಗೆಯೇ ಅಲ್ಲಿಯ ರಾಗಯುತವಾದ ಗ್ರಾಂಥಿಕ ಭಾಷೆ ಖುಷಿ ಕೊಡುತ್ತದೆ. ಅಲ್ಲಲ್ಲಿ ಕೇಳಿ ಬರುವ ಬರ್ಪುಂಡ..ಒಣಸಾಂಡ ತುಳು ಕಿವಿಗೆ ಹಿತ ಎನಿಸದಿದ್ದರೂ ಇತ್ತೀಚಿಗೆ ಕಿರಿಕಿರಿ ಉಂಟುಮಾಡುವುದಿಲ್ಲ. ಹಾಗಾಗಿಯೇ ಚಿಕ್ಕಪ್ಪ ಕಾದಂಬರಿ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಯಿತು ಎನ್ನಬಹುದು. ಆದರೂ ಅದ್ಯಾಕೆ ಬೇರೆ ಕಾದಂಬರಿಗಳ ಹಾಗೆ ಸೆಳೆಯಲಿಲ್ಲ ಎನ್ನುವ ಪ್ರಶ್ನೆ ಹಾಗೆಯೇ ನನ್ನಲ್ಲಿ ಉಳಿದುಕೊಂಡಿದೆ. ಚಿಟ್ಟೆ ಹೆಜ್ಜೆ ಜಾಡು, ಯಾಮಿನಿ, ಹಿಟ್ ವಿಕೆಟ್ ಮುಂತಾದ ಕಾದಂಬರಿಗಳು ಅವುಗಳ ಸತ್ವ ಚೆನ್ನಾಗಿಯೇ ಇದೆ. ಆದರೆ ಅದ್ಯಾಕೋ ತೀರಾ diluted ಎನಿಸುತ್ತದೆ. ಸುಮ್ಮನೆ ಕುಳಿತು ಸರಾಗವಾಗಿ ಬರೆದಂತೆ ಭಾಸವಾಗುತ್ತದೆ. ಅದರಲ್ಲೂ ಚಿಕ್ಕಪ್ಪ ಮತ್ತು ಚಿಟ್ಟೆಹೆಜ್ಜೆ ಜಾಡು ಕಥಾವಸ್ತುವಿನ ವಿಷಯದಲ್ಲಿ ತುಂಬಾ ಸತ್ವಯುತವಾದವುಗಳು. ಹಾಗೆಯೇ ಕಾದಂಬರಿಯ ದ್ರವ್ಯದಲ್ಲೇ ರೋಚಕತೆ, ರೋಮಾಂಚನವಿದೆ. ಆದರೆ ಕಾದಂಬರಿ ಹಿಡಿಯಾಗಿ ಅದನ್ನು ಕಟ್ಟಿಕೊಡುವದರಲ್ಲಿ ಯಶಸ್ವಿಯಾಗಿಲ್ಲವೇನೋ ಎನಿಸುತ್ತದೆ. ಒಂದು ಕಾದಂಬರಿ ನಾನು ತಿಳಿದ ಮಟ್ಟಿಗೆ ಅದರದೇ ಆದ ಪ್ರಪಂಚವನ್ನು ಹೊಂದಿರುತ್ತದೆ. ಓದುತ್ತಾ ಓದುತ್ತಾ ತನ್ಮಯರಾದಂತೆ ಕಣ್ಮುಂದೆ ಆ ಊರು ಅಲ್ಲಿನ ಘಟನೆಗಳು ಸನ್ನಿವೇಶಗಳು ಕಣ್ಮುಂದೆ ಬರಲು, ಮನಸ್ಸಿನಲ್ಲಿ ಅಚ್ಚೋತ್ತಲು ಪ್ರಾರಂಭಿಸುತ್ತವೆ. ಪುಸ್ತಕ ಓದಿ ಕೆಳಗಿಟ್ಟ ಮೇಲೆ ಆ ಪ್ರಪಂಚದಿಂದ ವಾಸ್ತವಕ್ಕೆ ಬರಲು ಸಮಯ ಹಿಡಿಯುತ್ತವೆ. ಅದರಲ್ಲಿನ ದಟ್ಟತೆ, ಭಾಷಾಪ್ರಯೋಗ ಅಥವಾ ಅಲ್ಲಿನ ದೃಷ್ಟಾಂತಗಳು  ಆ ತೆರೆನಾದ ಗಟ್ಟಿತನವನ್ನು ಅದಕ್ಕೆ ತಂದುಕೊಡುತ್ತವಾ..? 
ಒಟ್ಟಿನಲ್ಲಿ ಒಮ್ಮೆ ಓದಬಹುದಾದ ಪುಸ್ತಕ ಚಿಕ್ಕಪ್ಪ ಎನ್ನಬಹುದು...