Monday, November 18, 2013

ನಾಯಕನ್ಯಾಕೆ ಬದಲಾದ....

ಏಕೆ ನಮ್ಮ ಚಿತ್ರಗಳ ನಾಯಕ ಬದಲಾಗಿ ಬಿಟ್ಟ..? ಎಂಬ ಪ್ರಶ್ನೆ ನನ್ನನ್ನು ಆವಾಗಾವಾಗ ಕಾಡುತ್ತಲೇ ಇರುತ್ತದೆ. ಏನಾಗಿದೆ ಅವನಿಗೆ ಎನ್ನಬಹುದು.ಅದರಲ್ಲೂ ಕನ್ನಡದ ಚಿತ್ರಗಳ ನಾಯಕನಂತೂ ತುಂಬಾ ಬದಲಾಗಿದ್ದಾನೆ. ಸುಮ್ಮನೆ ಗಮನಿಸಿದರೆ ಮೊದಲೆಲ್ಲಾ ನಾಯಕ ಎಂದರೆ ಅವನ ಗುಣಗಳನ್ನು ದೊಡ್ಡವರು ಮಕ್ಕಳಿಗೆ ಉದಾಹರಣೆಯಾಗಿ ಕೊಡುತ್ತಿದ್ದರು. ತುಂಬಾ ಕರುಣೆ, ಒಳ್ಳೆಯವನಾದರೆ ಇವನ್ನು ನೋಡು ಮುಂದೆ ರಾಜಕುಮಾರ್ ತರಾ ಆಗತಾನೆ ಅನ್ನುತ್ತಿದ್ದರು. ನಿಜವಾಗಲೂ ಅಲ್ಲಿ ರಾಜಕುಮಾರ್ ಇರುತ್ತಿರಲಿಲ್ಲ. ಬದಲಿಗೆ ಅಲ್ಲಿರುತ್ತಿದ್ದದ್ದು ಸಂಪತ್ತಿಗೆ ಸವಾಲ್ ಚಿತ್ರದ ರಾಜೀವನೋ, ಕಸ್ತೂರಿ ನಿವಾಸದ ರವಿಯೋ ...ಆದರೆ ಚಿತ್ರದಲ್ಲಿನ ನಾಯಕರ ಉದಾತ್ತ ಗುಣ ಮಾತ್ರ ನಾಯಕ ಎಂದರೆ ಹೀಗೆ ಇರಬೇಕು ಎಂಬಂತೆ ಇರುತ್ತಿತ್ತು. ಅವನು ಒಳ್ಳೆಯದನ್ನೇ ಮಾಡುತ್ತಿದ್ದ. ಅದರಲ್ಲೂ ಅವನು ರೌಡಿಯೇ ಆಗಿರಲಿ, ಕೊಲೆಗಾರನೆ ಆಗಿರಲಿ ಅದೆಲ್ಲ ದುಷ್ಟರ ಪಾಲಿಗೆ. ಶಿಷ್ಟರಿಗಂತೂ ಆತ ಯಾವತ್ತಿಗೂ ಅನ್ಯಾಯ ಮಾಡುತ್ತಿರಲಿಲ್ಲ. ಹಾಗೆಯೇ ಆಡುವ ಮಾತಿನಲ್ಲಿ ತೂಕವಿರುತ್ತಿತ್ತು. ಆತನ ಮಾತುಗಳಿಗೆ ಚಿತ್ರದೊಳಗಿನ ಮಂದಿಯಲ್ಲ, ಹೊರಗಿನ ಪ್ರೇಕ್ಷಕ ಕೂಡ ತಲೆ ದೂಗುತಿದ್ದರು.
ರಾಜಕುಮಾರ್ ಅವರ ಕಸ್ತೂರಿನಿವಾಸ ನೋಡುತ್ತಾ ನೋಡುತ್ತಾ ನಮ್ಮ ಮನೆಯಲ್ಲಿ ಕುಳಿತ ಹೆಂಗಸರೆಲ್ಲಾ ಕಣ್ಣೀರಾಗಿದ್ದರು. ಅದನ್ನೆಲ್ಲಾ ಕಣ್ಣಂಚಿನಲ್ಲೇ ನೋಡುತ್ತಾ ನಾವುಗಳು ಹುಡುಗರು ಮುಸಿ ಮುಸಿ ನಗುತ್ತಿದ್ದರು. ಅದರಲ್ಲೂ ನಮೂರಿನ ರಂಗಜ್ಜಿ ಅಂತೂ ರಾಜಕುಮಾರ್ ಚಿತ್ರವೆಂದರೆ ಆವತ್ತು ನಮ್ಮ ಮನೆಯ ಟಿವಿಯ ಮುಂದೆ ಅರ್ಧ ಗಂಟೆ ಮುಂಚಿತವಾಗಿಯೇ ಕುಳಿತು ಬಿಟ್ಟಿರುತ್ತಿದ್ದಳು. ಅವಳು ಅಳುವುದನ್ನು ಚಿತ್ರದಲ್ಲಿನ ಕೇಡಿಗಳನ್ನ ಶಾಪ ಹಾಕುವುದನ್ನು ನೋಡಲಾಗದೆ ಮುಸಿ ಮುಸಿ ನಕ್ಕು ನಾಲ್ಕಾರು ಜನಕ್ಕೂ ತೋರಿಸಿ ಅದೂ ಬೇಸರವಾದಾಗ 'ಅಮ್ಮೋ..ಅದು ಸುಮ್ನೆ..ನಾಟಕ ಕಣಮ್ಮೋ..' ಎಂದು ಯಾವುದಾದರೂ ಕಿಲಾಡಿ ಹೇಳಲು ಹೋಗಿ ಎಕ್ಕಾ ಮಕ್ಕಾ ಉಗಿಸಿಕೊಳ್ಳುತ್ತಿದ್ದ.
ಆದರೆ ಉಪೇಂದ್ರರ ಎ ಬಂದಾಗ ನಾಯಕನ ಪರಿಕಲ್ಪನೆ ಹೀಗಿರಬೇಕು ಎಂಬ ಕಲ್ಪನೆ ಬೇರೆಯಾಯಿತು ಎನ್ನಬಹುದು. ಅಲ್ಲಿಯವರೆಗೆ ಆ ತರಹದ ಋಣಾತ್ಮಕ ಖಳ ಛಾಯೆಯ ಪಾತ್ರ ಬಂದಿರಲಿಲ್ಲ ಎಂದಲ್ಲ. ಆದರೆ ಖಳ ಛಾಯೆಯ ಹಿಂದುಗಡೆ ನಾಯಕನ ಮುಖ ಇದ್ದೇ ಇರುತ್ತಿತ್ತು.
ಆದರೆ ಎ, ಉಪೇಂದ್ರದಲ್ಲಿ ನಾಯಕನ ಪರಿಕಲ್ಪನೆ ತೀರಾ ಬದಲಾಯಿತು. ಕಣ್ಣೆತ್ತಿಯೂ ಪರಸ್ತ್ರೀ ಕಡೆ ನೋಡದ ನಾಯಕ ಸ್ಲೀವ್ ಲೆಸ್ ಹಾಕಿಕೊಂಡು ಬಂದ ಹೆಂಗಸನ್ನು ಅಸಹ್ಯವಾಗಿ ಅಟ್ಟಾಡಿಸಿ ಅದಕ್ಕೆ ಸಮರ್ಥನೆಯನ್ನು ಕೊಟ್ಟ. ಗಾಳಿ ಬೆಳಕು ವಿಶಾಲವಾಗಿದೆ ಎಂದು ಕರೆವೆಣ್ಣನ್ನು ಬಟಾಬಯಲಿನಲ್ಲಿ ಮಲಗಿಸಿ ಅಸಹ್ಯಕರ ಸದ್ದು ಹೊರಡಿಸಿದ. ಆದರೆ ಅದೆಲ್ಲದಕ್ಕೂ ಚಿತ್ರದ ಅಂತ್ಯದಲ್ಲಿ ಒಂದು ಒಳ್ಳೆಯಾ ಅಲೌಕಿಕ ಸಮರ್ಥನೆ ಅರ್ಥ ಕೊಡಲು ಉಪೇಂದ್ರ ಪ್ರಯತ್ನಿಸಿದ್ದರು. ಆದರೆ ಅದನ್ನು ಹೆಚ್ಚು ಜನ ಪ್ರೇಕ್ಷಕರು ತೆಗೆದುಕೊಳ್ಳಲಿಲ್ಲ.
ಚಿತ್ರ ಬಂದ ಹೊಸದರಲ್ಲಿ ನಮ್ಮ ಊರಿನ ಬಸ್ ಸ್ಟಾಂಡ್ ನಲ್ಲಿ ದಿನಕ್ಕೊಂದು ಜಗಳ ಹುಡುಗಿಯ ಕಾರಣಕ್ಕೆ ನಡೆಯುತ್ತಿದ್ದವು.ಮೊದಲೆಲ್ಲಾ ರಕ್ತದಲ್ಲಿ ಹೆಸರು ಬರೆದುಕೊಂಡು, ಪ್ರೇಮ ಪತ್ರ ಬರೆದು ಹಿಂದೆ ಬಿದ್ದು ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದವರಲ್ಲಿ ಈಗ ಬದಲಾವಣೆಯಾಗಿತ್ತು.' ಯಾಕೆ ಲವ್ ಮಾಡಲ್ಲ ನೀನು..ನನಗೇನು ಕಡಿಮೆಯಿದೆ ಹೇಳು..ನೋಡ್ತೀನಿ ಅದನ್ಯಾರನ್ನೂ ನೀನು ಲವ್ ಮಾಡ್ತೀಯಾಂತ ..' ಎನ್ನುವ ಉದ್ದನೆಯ ಮಾತುಗಳನ್ನು ಆಡುತ್ತ ಪುಂಡ ಪ್ರೇಮಿಗಳು ಉಪೇಂದ್ರ ತರದಲ್ಲಿ ಹುಡುಗಿಯರನ್ನು ಕಿಚಾಯಿಸಿ ಜಗಳ ಹುಟ್ಟಿಹಾಕುತ್ತಿದ್ದರು.
ಆದರೆ ಉಪೇಂದ್ರರ ನಾಯಕನನ್ನು ಚಿತ್ರ ಮಂದಿ ಅಷ್ಟಾಗಿ ಅನುಸರಿಸಲಿಲ್ಲ. ಯಾಕೆಂದರೆ ಆ ತರಹದ ಪಾತ್ರ ಪೋಷಣೆ ತುಂಬಾ ಕಷ್ಟದ್ದಿತ್ತು.
ನಾಯಕ ಮತ್ತೆ ತನ್ನ ಪಾಡಿಗೆ ತಾನಿರುತ್ತಿದ್ದ. ಪ್ರೀತಿಸಿ ತ್ಯಾಗ ಮಾಡುತ್ತಿದ್ದ. ಅವಳನ್ನು ಚೆನ್ನಾಗಿರಲಿ ಎಂದು ಹರಸಿ ತಾನು ಮಾತ್ರ ಒಬ್ಬನೇ ಕಣ್ಣೀರು ಹಾಕುತ್ತಿದ್ದ.
ಒಮ್ಮೆಲೇ ಮುಂಗಾರು ಮಳೆ ಬಂದಿತು ನೋಡಿ. ಮಾತು ಮಾತಿಗೂ ನಗಿಸುವ ಪ್ರೀತಂ ಇಷ್ಟವಾಗಿ ಬಿಟ್ಟ. ಉಡಾಫೆಯ ಮಾತನ್ನಾಡುತ್ತಾ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ ನಾಯಕ ಅಮ್ಮನ ಮಾತನ್ನು, ಮರ್ಯಾದೆಯನ್ನು ಉಳಿಸಲು ಪ್ರೀತಿಯನ್ನು ತ್ಯಾಗ ಮಾಡಿದ್ದನಾದರೂ ಆತನ ಆ ಗುಣಕ್ಕಿಂತ ನಮ್ಮ  ಚಿತ್ರಕರ್ಮಿಗಳಿಗೆ ಉಡಾಫೆ ಮಾತಿನ ನಾಯಕನೇ ಇಷ್ಟವಾದ. ಅದಕ್ಕೆ ಹೆಚ್ಚು ಗಮನಕೊಟ್ಟ ನಮ್ಮವರು ಆ ನಂತರ ಪುಂಖಾನುಪುಂಖ ಮಾತನ್ನಾಡುವ ನಾಯಕನನ್ನು ಹುಟ್ಟುಹಾಕಿಬಿಟ್ಟರು. ನಮ್ಮ ನಾಯಕ ಏನೂ ಮಾಡುತ್ತಿರಲಿಲ್ಲ. ಮಾಡುವವರನ್ನೇ ಗೇಲಿ ಮಾಡುತ್ತಿದ್ದ. ಹುಡುಗಿಯ ಮುಂದೆ ಸಭ್ಯನ ಹಾಗೆ ನಡೆದು ಕೊಳ್ಳದೆ ತೀರಾ ಉಡಾಫೆಯಿಂದಲೇ ನಡೆದುಕೊಳ್ಳುತ್ತಿದ್ದ. ಯಾವುದೇ ಗಂಭೀರ ವಿಷಯವನ್ನು ಹಗುರಕ್ಕೆ ತೆಗೆದುಕೊಂಡು ನಗುತ್ತಿದ್ದ. ಪ್ರೀತಿಯ ವಿಷಯದಲ್ಲೂ ಅಷ್ಟೇ..ಆ ತೀವ್ರತೆ ಅಷ್ಟಕಷ್ಟೇ. ನೀನಿಲ್ಲ ಅಂದ್ರೆ ದೇಶ ಮುಳುಗಲ್ಲಾ ಕಣೆ...ನೀವು ಹುಡುಗೀರು ಇಷ್ಟೇ ಎಂದೆಲ್ಲಾ ಅವರೆದುರು ಕೂಗಾಡಿ ಅವಮಾನ ಮಾಡಿ ಕಪಾಳಕ್ಕೆ ಒಂದು ಹೊಡೆದೂ ಹೋಗುತ್ತಿದ್ದ.
ಆನಂತರ ಮತ್ತೆ ಸಿಂಪಲ್ ಲವ್ ಸ್ಟೋರಿ ಬಂತು ನೋಡಿ ನಾಯಕನಾಯಕಿ ಇಬ್ಬರೂ ತುಂಟತನದ ಪರಿಧಿಯ ತೀರಾ ಹತ್ತಿರಕ್ಕೆ ಬಂದು ಬಿಟ್ಟರು. ಹೆಣ್ಣು ಮಕ್ಕಳು ಹೀಗೆಲ್ಲಾ ಮಾತನಾಡುತ್ತಾರಾ ಎಂಬ ಪರದೆ ಸರಿಸಿ ಸಲೀಸಾಗಿ ಮಾತಾಡತೊಡಗಿದರಾದರೂ ತೀರಾ ಅಸಹ್ಯ ಮಾಡಲಿಲ್ಲ. ಆದರೆ ಆನಂತರದ ನಾಯಕನ್ನು ನೀವು ನೋಡಬೇಕು. ಅದರಲ್ಲೂ ಹೊಸಬರ ಚಿತ್ರಗಳ ನಾಯಕರನ್ನು. ತೀರಾ ಸಭ್ಯತೆ ಮೀರಿದ ಮಾತುಗಳೇ ಅವರ ಬ್ರಹ್ಮಾಸ್ತ್ರ. ಸೊಂಟದ ಕೆಳಗೆ ಕೇಂದ್ರೀಕರಿಸುವ ಮಾತುಗಳೇ ಅವರ ಬಂಡವಾಳ. ಅದರಲ್ಲೂ ಹೆಣ್ಣು ಗಂಡು ಅನ್ನದೆ ನಮ್ಮ ಯುವ ನಿರ್ದೇಶಕರು ಪೋಲಿತನದ ಮಾತುಗಳನ್ನು ಕಿವಿ ಮುಚ್ಚುಕೊಳ್ಳುವಂತೆ ಆಡಿಸ ತೊಡಗಿದ್ದಾರೆ. ಉಡಾಫೆಯ ಮಾತಿನ ನಾಯಕ ಈಗ ಪೋಲಿಯಾಗಿ ಅದಕ್ಕೂ ಕಡೆಯಾಗಿ ಬದಲಾಗಿದ್ದಾನೆ. 
ಸುಮ್ಮನೆ ಯೂ ಟ್ಯೂಬ್ ನಲ್ಲಿನ ಕನ್ನಡದ ಹೊಸ ಹುಡುಗರ ಒಂದಷ್ಟು ಟ್ರೈಲರ್ ಗಳಿವೆ. ನಾಲ್ಕು ನಿಮಿಷ ಎಂಟು ನಿಮಿಷ ಹೀಗೆ ..ಅವುಗಳನ್ನು ನೋಡುತ್ತಿದ್ದರೆ ಹೇಗಪ್ಪಾ ಇವರ ಇಡೀ ಸಿನೆಮಾವನ್ನು ಸಹಿಸಿಕೊಳ್ಳುವುದು ಎನಿಸುತ್ತದೆ. ಪೋಲಿ ಮಾತಿನ ಅಸಹ್ಯಕರ ಮಾತಿನ ಸರಪಳಿಯನ್ನೇ ಜೋಡಿಸಿ ಎಲ್ಲರೂ ಭಟ್ಟ ರಂತೆ ಆಗಲು ಹೊರಟುಬಿಟ್ಟಿದ್ದಾರೆ. ಭಟ್ಟರ ಹಿಂದಿನ ಶ್ರಮ, ಮಾತಿನ ಮರ್ಮಗಳ ಬಗ್ಗೆ ಅರಿತುಕೊಳ್ಳದೆ ಮೇಲ್ನೋಟದ ಅರ್ಥಕ್ಕಷ್ಟೇ ಮತ್ತು ಅದು ಕೊಡುವ ಪಂಚಿಗಷ್ಟೇ ತಲೆ ಕೆಡಿಸಿಕೊಂಡು ಪುಂಖಾನುಪುಂಖ ಮಾತುಗಳನ್ನು ಜೋಡಿಸಿದ್ದಾರೆ.
ಬದಲಾದ ನಾಯಕನನ್ನು ನೋಡಿ ಬೇಸರವಾಗುತ್ತದೆ. ಹೀರೋ ತರ ನಮ್ಮ ಹುಡುಗ ಆಗಬೇಕು, ಹುಡುಗ ಸಿಗಬೇಕು. ಅಣ್ಣ ಅಂದ್ರೆ ಹೀಗಿರಬೇಕು ಎನ್ನುವ ಮಾತುಗಳೆಲ್ಲಾ ಅರ್ಥ ಕಳೆದುಕೊಂಡಿವೆ. ಬದಲಿಗೆ ನಾಯಕ ಕೆಲಸ ಮಾಡದೆ ಹುಡುಗಿಯ ಹಿಂದೆ ಬಿದ್ದು ಕೆಟ್ಟದಾಗಿ ಮಾತಾಡುತ್ತ ಅದರಲ್ಲೇ ಅತಿ ಬುದ್ದಿವಂತಿಕೆ ಪ್ರದರ್ಶಿಸುತ್ತಿದ್ದಾನೆ...
ಬದಲಾದ ನಾಯಕ ಬೇಸರ ತರಿಸುತ್ತಿದ್ದಾನೆ..ನಿಮಗೇನನ್ನಿಸುತ್ತದೆ..?

1 comment:

  1. Kshamisi...!! Sampathige Sawaal alli Badhri... VeeraBhadhra... Rajeeva Bangaradha Manushya anisuthe...

    ReplyDelete