ಅವನನ್ನುತ್ತಾನೆ ನಾನು ನೈರೋಬಿಗೆ ಹೋಗುತ್ತೇನೆ, ಸಿನೆಮಾದಲ್ಲಿ ಅಭಿನಯಿಸುತ್ತೇನೆ..ಬೇಡಪ್ಪ..ನೈರೋಬಿಯೆಂದರೆ ಕಳ್ಳ ಕಾಕರ, ಮೋಸಗಾರರ ತವರು ನೀನಲ್ಲಿ ಹೋದರೆ ನೀನು ನೀನಾಗಿ ಇರುವುದಕ್ಕೆ ಸಾಧ್ಯವಾಗುವುದೇ ಇಲ್ಲ ಎಂಬ ಉತ್ತರ ಬರುತ್ತದೆ. ಆದರೂ ಅವನು ಮಾತ್ರ ನೈರೋಬಿಯಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಲೇಬೇಕೆಂದು ನಿರ್ಧರಿಸಿಬಿಡುತ್ತಾನೆ.ಇರುವ ಊರಲ್ಲಿ ಡಿವಿಡಿಗಳನ್ನ ಮನೆಮನೆಗೆ ಸರಬರಾಜು ಮಾಡುವ ಕೆಲಸ ಅವನದು. ಅದವನ ಇಷ್ಟದ ಕೆಲಸವಾದ್ದರಿಂದ ಅದರಲ್ಲಿ ಅಷ್ಟಾಗಿ ಹಣವಿಲ್ಲದಿದ್ದರೂ ಖುಷಿಯಿದೆ. ಊರಲ್ಲಿ ತಾನು ನೋಡಿದ ಚಿತ್ರಗಳ ಮುಖ್ಯ ಪಾತ್ರಗಳ ಅಭಿನಯವನ್ನು ಅನುಕರಣೆ ಮಾಡಿ ತೋರಿಸುತ್ತಾನೆ. ಹಾಗಾಗಿಯೇ ಅವನನ್ನು ಕಂಡರೆ ಎಲ್ಲರಿಗೂ ಖುಷಿ.
ಅದೊಂದು ದಿನ ತನ್ನ ಸಂಬಂಧಿಯಿಂದ ನೆರವು ಪಡೆದು ನೈರೋಬಿಗೆ ಹೊರಟುನಿಲ್ಲುತ್ತಾನೆ.
ಆದರೆ ನೈರೋಬಿ ಅವನು ಪಾದಾರ್ಪಣೆ ಮಾಡಿದ ತಕ್ಷಣ ತನ್ನ ಕರಾಳ ಮುಖವನ್ನು ತೋರಿಸಿಬಿಡುತ್ತದೆ.ತನ್ನ ಊರಿನ ಬಸ್ಸಿನಿಂದ ಇಳಿದವನನ್ನು ನಾಲ್ಕು ಜನರ ಗುಂಪೊಂದು ಅಮಾನುಷವಾಗಿ ದೋಚುತ್ತದೆ. ಅಲ್ಲಿಂದ ಹೇಗೋ ನಡೆದುಬರುತ್ತಿದ್ದಾಗ ಪೋಲಿಸರು ವಿನಾಕಾರಣ ಹಿಡಿದುಕೊಂಡು ಹೋಗಿ ಅತ್ಯಂತ ಕೆಟ್ಟದಾದ ಕೊಳಕಾದ ಜೈಲಿಗೆ ಹಾಕಿಬಿಡುತ್ತಾರೆ. ಅಲ್ಲಿಗೆ ಅವನಿಗೆ ನೈರೋಬಿಯ ಕರಾಳ ಮುಖದ ಪರಿಚಯವಾಗುತ್ತದೆ.
ಮುಂದೆ ಆತ ನಟನಾಗುತ್ತಾನಾ?
ಅಥವಾ ತನ್ನ ಕನಸುಗಳನ್ನು ಮೂಟೆ ಕಟ್ಟಿಟ್ಟು ಬೇರೆ ದಾರಿ ಹಿಡಿಯುತ್ತಾನ?
2012ರಲ್ಲಿ ಬಿಡುಗಡೆಯಾದ ನೈರೋಬಿ ಹಾಫ್ ಲೈಫ್ ಚಿತ್ರದ ಕಥೆ ಇದು. ಈಗಾಗಲೇ ನೀವು ಮೊರೆಲ್ಲಿ ಫೆರ್ನಾಂಡಿಸ್ ನ ಸಿಟಿ ಆಫ್ ಗಾಡ್ ನೋಡಿದ್ದರೆ ಈ ಚಿತ್ರ ಕೂಡ ನಿಮಗೆ ಇಷ್ಟವಾಗುತ್ತದೆ. ಅಷ್ಟೇ ಅಲ್ಲ. ಮನಕಲಕುತ್ತದೆ. ಚಿತ್ರದ ಕಥೆಯಲ್ಲೇನೋ ಮಹತ್ವದ್ದು ಹೊಸತನವಿಲ್ಲ. ಆದರೆ ನಿರ್ದೇಶಕ ಹೇಳಬೇಕಾದ್ದನ್ನು ನಾಯಕನ ಕೈಯಲ್ಲಿ ಕೊನೆಯ ದೃಶ್ಯದಲ್ಲಿ ಹೇಳಿಸುತ್ತಾನೆ. ಅಲ್ಲಿನ ಸಂಭಾಷಣೆ ಇಡೀ ಚಿತ್ರದ ಕಥೆಯನ್ನು ಹೇಳುತ್ತದೆ. ಜೊತೆಗೆ ಕೀನ್ಯಾವನ್ನು ತೆರೆದು ನಮ್ಮ ಮುಂದಿಡುತ್ತದೆ.
ಚಿತ್ರ ಇಷ್ಟವಾಗುವುದು ಚಿತ್ರದಲ್ಲಿನ ಪಾತ್ರಧಾರಿಗಳ ಅಭಿನಯದಿಂದಾಗಿ. ಜೋಸೆಫ್ ವೈರಮು ಹೆಸರಿನ ಆ ಹುಡುಗನ ಅಭಿನಯ ನಮ್ಮನ್ನು ನಿಜವಾದ ಕನಸುಗಾರನ ಲೋಕಕ್ಕೆ ಕರೆದೊಯ್ಯುತ್ತದೆ. ಹಾಗೆಯೇ ಹತಾಶೆಗಳನ್ನೂ ಆತ ಮೆಟ್ಟಿ ನಿಲ್ಲುವ ರೀತಿ ನಮಗೆ ಸ್ಫೂರ್ತಿದಾಯಕ ಎನಿಸುತ್ತದೆ.
ಜೈಲಿನಲ್ಲಿ ಕೊಳಕಾದ ಶೌಚಾಲಯವನ್ನು ತೊಳೆಯ ಬೇಕಾಗಿ ಬಂದಾಗ ಅಲ್ಲೇ ವಾಂತಿ ಮಾಡಿಕೊಳ್ಳುವ ಆನಂತರ ಅಲ್ಲೇ ಅದನ್ನು ಮರೆತು ಜೋರಾಗಿ ಹಾಡಿಕೊಳ್ಳುತ್ತಾ ಸ್ವಚ್ಚಮಾಡುವ ದೃಶ್ಯ ನಿಜಕ್ಕೂ ಆತನ ಇಡೀ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತದೆ. ಆ ಕ್ಷಣಕ್ಕೆ ಆ ಸಂದರ್ಭಕ್ಕೆ ಆತ ಹಿಂದಡಿಯಿಕ್ಕಿದರೂ ಮರುಕ್ಷಣದಲ್ಲೇ ಅದನ್ನು ಸ್ವೀಕರಿಸುವ ಅದಕ್ಕೆ ಹೊಂದಿಕೆಯಾಗುವ ಅವನ ಗುಣ ಹಿಡಿಸುತ್ತದೆ ಅಷ್ಟೇ ಅಲ್ಲ. ಅವನ ಅಸಹಾಯಕತೆಯನ್ನು ಎತ್ತಿ ಹಿಡಿಯುತ್ತದೆ.ಸ್ವಾಹಿಲಿ ಭಾಷೆಯಲ್ಲಿರುವ ಈ ಚಿತ್ರವನ್ನು ಆರಾಮವಾಗಿ ನೋಡಲೇಬೇಕಾದ ಚಿತ್ರಗಳ ಪಟ್ಟಿಯಲ್ಲಿ ಸೇರಿಸಬಹುದು.
No comments:
Post a Comment