Saturday, October 19, 2013

ಅದಲಾಲ್ ಕಾದಲ್ ಸೇವೀರ್...



ಅದೊಂದು ಕಾಲೇಜು. ಅಲ್ಲೊಂದಷ್ಟು ಹುಡುಗಿ, ಹುಡುಗರು. ಆ ವಯಸ್ಸಿನಲ್ಲಿ ಇರಬಹುದಾದ ಕುತೂಹಲ ಚೆಲ್ಲಾಟ ಮೊಂಡಾಟ ಎಲ್ಲವೂ ಇದೆ. ಅಂತ ಹುಡುಗರ ಪೈಕಿ ಕಾರ್ತಿಕ್ ಇದ್ದಾನೆ. ಅದೇ ಗೆಳೆಯರ ಗುಂಪಲ್ಲಿ ಶ್ವೇತಾ ಇದ್ದಾಳೆ. ಅವರಿಬ್ಬರೂ ಪ್ರೀತಿಸುತ್ತಾರೆ. ಒಂದಷ್ಟು ಕದ್ದು ಮುಚ್ಚಿ ಓಡಾಡುತ್ತಾರೆ. ಆನಂತರ ಅದೊಂದು ದಿನ ತಮ್ಮ ವಯಸಿನ ಬಿಸಿಯಲ್ಲಿ ನಡೆಯಬಾರದ್ದು ನಡೆದುಹೋಗುತ್ತದೆ. ಮುಂದೆ..ಸುಮಾರು ವರ್ಷಗಳ ಹಿಂದೆ ತೇಜಾ ನಿರ್ದೇಶನದ ಚಿತ್ರಂ ಕಥೆಯಿದ್ದ ಹಾಗಿದೆ ಎಂದರೆ ಅದಕ್ಕೂ ಅರ್ಧ ಡಜನ್ ಇದೆ ರೀತಿಯ ಕಥೆಯಿರುವ ಸಿನಿಮಾಗಳನ್ನು ಹೇಳಿಬಿಡಬಹುದು. ಆದರೆ ನಿರ್ದೇಶಕ ಸುಸೀಂದ್ರನ್  ನಿರ್ದೇಶನದ ಅದಲಾಲ್ ಕಾದ ಸೇಯ್ವೀರ್ ಚಿತ್ರದ ಅದರ ಅತ್ಯುತ್ತಮ ಅಂತ್ಯದಿಂದಾಗಿ ನೋಡಿದ ಸುಮಾರು ಹೊತ್ತು ಮನಸ್ಸಿನಲ್ಲಿ ಉಳಿಯುತ್ತದೆ. ಇಷ್ಟು ಚಿಕ್ಕ ಕಥೆಯನ್ನು ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದೋ, ಕಥೆಯೇನೋ ಚೆನ್ನಾಗಿದೆ, ಆದರೆ ಇದು ಸಿನಿಮಾಕ್ಕೆ ಸರಿಬರುವುದಿಲ್ಲ ಎಂಬಂತಹ ಮಾತುಗಳನ್ನು ನೀವು ನಮ್ಮಲ್ಲಿ ಕೇಳಬಹುದು.ಆದರೆ ಅಂತಹ ಕಥೆಗಳನ್ನು ಸಿನಿಮಾ ರೂಪಕ್ಕೆ ತಂದು ಸೈ ಎನಿಸಿಕೊಳ್ಳುವುದರಲ್ಲಿ ತಮಿಳರದು ಎತ್ತಿದ ಕೈ. ಅವರು ಒಂದು ಕಥೆ ಇಟ್ಟುಕೊಂಡರೆ ಅದಕ್ಕೆ ತಕ್ಕಂತೆ ಚಿತ್ರಕಥೆ ಹೆಣೆಯುತ್ತಾ ಸಾಗುತ್ತಾರೆಯೇ ಹೊರತು ಅದರಲ್ಲಿ ಬಲವಂತವಾಗಿ ಮನರಂಜನಾ ಅಂಶಗಳನ್ನು ತುರುಕುವುದಕ್ಕೆ ಹೋಗುವುದಿಲ್ಲ. ಹಾಗಂತ ತೀರಾ ಪ್ರಯೋಗವನ್ನೂ ಮಾಡುವುದಿಲ್ಲ. ಕಥೆಯ ನೆಲೆಗಟ್ಟಿನಲ್ಲಿ ನಡೆಯಬಹುದಾದ ವಾಸ್ತವಿಕ ಅಂಶಗಳನ್ನು ಜೋಡಿಸುತ್ತಾ ಸಾಗುತ್ತಾರೆ. ನಾನು ಗಮನಸಿದ ಹಾಗೆ ನಮ್ಮಲ್ಲಿ ಅದು ಸ್ವಲ್ಪ ಕಡಿಮೆ. ಉದಾಹರಣೆಗೆ ಈ ಚಿತ್ರವನ್ನೇ ತೆಗೆದುಕೊಳ್ಳಿ. ಇದು ಕೇವಲ ಒಂದು ಘಂಟೆ ಮೂವತ್ತು ನಿಮಿಷಗಳ ಚಿತ್ರ. ಒಂದು ಸಿನಿಮಾ ಅದೂ ಹಾಡುಗಳಿರುವ ಪ್ರೇಮ ಕಥೆ ಕೇವಲ ಒಂದೂವರೆ ಘಂಟೆ ಎಂಬುದನ್ನು ಊಹಿಸುವುದು ನಮ್ಮಲ್ಲಿ ಕಷ್ಟ. ಹೇಳಿಕೊಳ್ಳುವಂತಹ ನಾಯಕ –ನಾಯಕಿ ಇಲ್ಲ. ಆದರೆ ಕಥೆ ಮತ್ತು ಚಿತ್ರಕಥೆ ನಿಮ್ಮನ್ನು ಕುರ್ಚಿಗೆ ಅಂಟಿಸಿ ಕೂರಿಸಿಬಿಡುತ್ತದೆ. ಕೊನೆಯ ದೃಶ್ಯವಂತೂ ನಿಮ್ಮ ಕಣ್ಣಲ್ಲಿ ಒಂದು ಹನಿ ನೀರು ತರಿಸಿಬಿಡುತ್ತದೆ. ಹಾಗಂತ ಇದು ದುರಂತಮಯ ಚಿತ್ರವಲ್ಲ. ನಾಯಕ –ನಾಯಕಿ ಕೊನೆಯಲ್ಲಿ ಸುಖವಾಗಿಯೇ ಇರುತ್ತಾರೆ..ಆದರೂ..ಏನು ಎಂಬ ಪ್ರಶ್ನೆಗೆ ಉತ್ತರ ಬೇಕಾದಲ್ಲಿ ನೀವೇ ಒಮ್ಮೆ ಈ ಸಿನೆಮಾ ನೋಡಿಬಿಡಿ..ಅಥವಾ ಕಾಯಿರಿ. ಯಾರಾದರೂ ಕನ್ನಡದ ಪುಣ್ಯಾತ್ಮರು ಇದನ್ನು ರೀಮೇಕ್ ಮಾಡಿದರೂ ಮಾಡಬಹುದು.ನಿರ್ದೇಶಕ ಸುಶೀಂದ್ರನ್ ಸಣ್ಣಕಥೆಯಾಧಾರಿತ ಚಿಕ್ಕ ಬಜೆಟ್ಟಿನ ಪರಿಣಾಮಕಾರಿ ಚಿತ್ರಕಥೆಯ ಚಿತ್ರಗಳಿಗೆ ಹೆಸರುವಾಸಿಯಾದವರು. ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಹೊತ್ತಿರುವ ಈ ಯುವ ನಿರ್ದೇಶಕರು ಪ್ರಯೋಗಗಳಿಗಿಂತ ಹೆಚ್ಚಾಗಿ ಉತ್ತಮ ಮನಮಿಡಿಯುವ ಕಥೆಗಳಿಗೆ ಹೆಸರುವಾಸಿಯಾದವರು. ಇವರು ನಿರ್ದೇಶನದ ವೆನಿಲ್ಲಾ ಕಬಡ್ಡಿಕುಳಂ ಕಬಡ್ಡಿ ಕ್ರೀಡೆಯ ಬಗ್ಗೆ ಬಂದಂತಹ ಅತ್ಯುತ್ತಮ ಚಿತ್ರ. ಅದಾದ ನಂತರ ಅಳಗಿರಿಸಾಮಿಯನ್ ಕುದುರೈ ಪ್ರಶಸ್ತಿ ವಿಜೇತ ಸಣ್ಣ ಕಥೆಯಾಧಾರಿತ ಚಿತ್ರ. 

1 comment:

  1. ಆದಲಾಲ್ ಕಾದಲ್ ಸೇಯ್ವೀರ್ ಚಿತ್ರವನ್ನ ನಾನು ನೋಡಿದೆ.. ಚಿತ್ರ ಒಳ್ಳೆಯ ಸಂದೇಶವನ್ನ ಬೀರುವುದು ನಿಜ. ಚಿತ್ರದ ಕೊನೆಯ ದೃಶ್ಯ ಖಂಡಿತ ಎಲ್ಲರ ಕಣ್ ಮನವನ್ನ ತೋಯಿಸುತ್ತದೆ. ಚಿತ್ರದ ಹಾಡುಗಳು ಮತ್ತೆ ಮತ್ತೆ ಕೇಳುವಂತೆ ಗುನುಗುವಂತಿವೆ.

    ReplyDelete