Wednesday, January 25, 2017

ಅವರು ಗಡ್ಡಪ್ಪ.. ನಾವೂ ದಡ್ಡಪ್ಪ...


ನಾವು ಚಿತ್ರಕರ್ಮಿಗಳು ಸ್ಫೂರ್ತಿಗೊಳಗಾಗುವುದು ತಪ್ಪಲ್ಲ. ಯಾವುದೇ ಕತೆ ಕವನ ಸ್ಫೂರ್ತಿಯಿಲ್ಲದೆ ಹುಟ್ಟುವ ಸಂಭವ ಕಡಿಮೆ. ಸಿನಿಮಾಕ್ಕೆ, ಪುಸ್ತಕಕ್ಕೆ ಅಥವಾ ವರದಿಗಳಿಗೆ ಒಂದಷ್ಟು ಬರೆಯಬಹುದೇನೋ? ಆದರೆ ಸ್ಫುರಿಸದೆ ಜನ್ಮ ತಾಳುವ ಕತೆಗೆ ಆಯಸ್ಸು ಕಡಿಮೆಯೇ..?
ಹಾಗಾದರೆ ನಾವು ಯಾವುದರಿಂದ ಸ್ಫೂರ್ತಿಗೊಳ್ಳಬೇಕು ಎಂಬುದು ಪ್ರಶ್ನೆ. ಸಧ್ಯಕ್ಕೆ ಒಂದು ಸಿನಿಮಾ ಎರ್ರಾಬಿರ್ರಿ ಯಶಸ್ವೀಯಾಗಿಬಿಡುತ್ತದೆ. ಆ ತಕ್ಷಣಕ್ಕೆ ನಮಗದು ಸ್ಫೂರ್ತಿ. ಈ ತರಹದ ಚಿತ್ರವನ್ನು ನಾವೂ ಮಾಡಬೇಕು ಎನಿಸುತ್ತದೆ. ಅಥವಾ ಅದರಲ್ಲಿನ ಕತೆಯ ಎಳೆ ನಮ್ಮ ಮನದಾಳದಲ್ಲಿ ಈ ಮೊದಲೆಲ್ಲೋ ಜನ್ಮ ತಾಳಿದ್ದರೆ ಆಗ ಅದಕ್ಕೆ ಹುರುಪು ಬಂದು, ನಾನು ಮೊದಲೇ ಈ ಐಡಿಯಾ ಅಂದುಕೊಂಡಿದ್ದೆನಲ್ಲಾ .. ಎನಿಸಿ ಮತ್ತೆ ಅದಕ್ಕೆ ಮಸಾಲೆ ಅರೆಯಲು ಪ್ರಾರಂಭಿಸುತ್ತೇವೆ. ಇದು ಸರಿಯಾದದ್ದೇ. ಆದರೆ ಕೆಲವೊಮ್ಮೆ ಅಥವಾ ಬಹುತೇಕ ನಾವುಗಳ ಮೂಲಕೃತಿಯ ಅಂತಃಸತ್ವವನ್ನು ಅರಿತುಕೊಳ್ಳುವುದಿಲ್ಲ. ಅಥವಾ ಅಭ್ಯಾಸ, ಅಧ್ಯಯನ ಮಾಡುವುದಿಲ್ಲ.
ಈಗ ಸಧ್ಯಕ್ಕೆ ತಿಥಿ ಚಿತ್ರವನ್ನೇ ತೆಗೆದುಕೊಳ್ಳಿ. ಅದರಲ್ಲಿದ್ದ ಪಾತ್ರಗಳು ಪಾತ್ರಧಾರಿಗಳು ಕತೆ ಎಲ್ಲವೂ ಉತ್ತಮವಾದದ್ದೇ. ಮತ್ತದು ನೈಜವಾಗಿ ಬರಲು ಅದರ ಬರಹಗಾರ/ನಿರ್ದೇಶಕರ ವಿಷನ್, ಪ್ರತಿಭೆ ಕಾರಣ. ಅದೆಲ್ಲದರ ಜೊತೆಗೆ ಅದರಲಿದ್ದ ಕತೆ. ತಿಥಿಯ ಬಗ್ಗೆ ಒಂದು ಸಿನಿಮಾ ಮಾಡಿದ್ದಾರೆ, ನಾವು ಮದುವೆ ಇಟ್ಟುಕೊಂಡು ಸಿನಿಮಾ ಮಾಡಿಬಿಡೋಣ ಎಂದುಕೊಂಡು ಹೊರಡುವುದು ಜಾಣತನ ಎನಿಸುವುದಿಲ್ಲ. ತಿಥಿಯಲ್ಲಿ ದೃಶ್ಯದಿಂದ ದೃಶ್ಯಕ್ಕೆ ಕುತೂಹಲ ಕೆರಳಿಸುವ ಕತೆ ಇದೆ. ಹುಡುಗಿಯ ಹಿಂದೆ ಬೀಳುವ ಹುಡುಗನಿಗೆ ಹುಡುಗಿ ಸಿಗುತ್ತಾಳಾ ಎನ್ನುವ ಕತೆಯ ಜೊತೆಗೆ, ಹಣಕ್ಕಾಗಿ ಪರಿಪಾಟಲು ಪಡುವ ತಮ್ಮಣ್ಣ, ಸುತ್ತಿ ಬಳಸಿ ಅಲ್ಲಲ್ಲೇ ಓಡಾಡುವ ಗಡ್ಡಪ್ಪ ಅವರ ಮುಂದಿನ ನಡೆಗಳು ಕುತೂಹಲ ಹುಟ್ಟಿಸುತ್ತವೆ. ಪ್ರಾರಂಭದಿಂದ ತಮ್ಮಣ್ಣನಿಗೆ ಹಣ ಸಿಕ್ಕೆಬಿಟ್ಟಿತು, ಆಲ್ ಇಸ್ ವೆಲ್ ಎಂದುಕೊಂಡರೆ ಕೊನೆಯಲ್ಲಿ ಉಲ್ಟಾ ಆಗುತ್ತದೆ, ಹಾಗೆಯೇ ಪ್ರಾರಂಭದಿಂದಲೂ ಸ್ವಲ್ಪವೂ ಮೃದುಧೋರಣೆ ತೋರದೆ ತಿರಸ್ಕರಿಸುತ್ತಲೇ ಸಾಗುವ ಕಾವೇರಿ, ಕೊನೆಯಲ್ಲಿ ಅಚಾನಕ್ ಆಗಿ ಅಭಿಗೆ ಒಲಿಯುತ್ತಾಳೆ. ನಿರೀಕ್ಷೆ ಮೀರಿ ಇದೆಲ್ಲವೂ ಚಿತ್ರದಲ್ಲಿ ಸಾಗುತ್ತದೆ. ಹಾಗಾಗಿಯೇ ತಿಥಿ ಕಲಾತ್ಮಕವಾಗಿಯೂ, ಕಮರ್ಷಿಯಲ್ ಆಗಿಯೂ ಸೂಪರ್ ಎನಿಸಿಕೊಳ್ಳುತ್ತದೆ. ಈ ಅಂತಃಸತ್ವವನ್ನು ಅರಿತುಕೊಳ್ಳದೆ ಬರೀ ತಿಥಿಯ ಮೇಲ್ಪದರವನ್ನು ಕಣ್ಣಿಗೊತ್ತಿಕೊಂಡಾಗ ವಿಕೃತಿಗಳು ಜನ್ಮ ತಾಳುತ್ತವೆ.
ಹಾಗೆಯೇ ತಿಥಿಯ ಕಲಾವಿದರನ್ನು ತೆಗೆದುಕೊಳ್ಳೋಣ. ಕ್ಯಾಮೆರಾ ಎದುರಿಸಿ ಗೊತ್ತಿಲ್ಲದ, ಹಳ್ಳಿಜನ ಅವರು. ನಿರ್ದೇಶಕರು/ಬರಹಗಾರರು ಅವರನ್ನು ಅರ್ಥೈಸಿಕೊಂಡು, ಅಧ್ಯಯನ ಮಾಡಿ, ಅವರ ವ್ಯಕ್ತಿತ್ವ, ಶಕ್ತಿಯನ್ನು ಅರಿತುಕೊಂಡು, ದೌರ್ಬಲ್ಯಗಳನ್ನು ನೆನಪಲ್ಲಿಟ್ಟುಕೊಂಡು ಪಾತ್ರ ಹೆಣೆದಿದ್ದು ಗೊತ್ತೇ ಇದೆ. ಹಾಗೆಯೇ ಸಂಭಾಷಣೆಗಳೂ ಕೂಡ ಆ ಸಂದರ್ಭಕ್ಕೆ ಅವರು ಮಾತಾಡುವುದೇ ಆಗಿತ್ತು.
ಆದರೆ ನಾವು ಅದನ್ನು ತಪ್ಪಾಗಿ ಅರ್ಥೈಸಿಕೊಂಡೆವು. ತಿಥಿ ಕಲಾವಿದರ ಬಲ ಎಂದರೆ ದ್ವಂದ್ವಾರ್ಥ ಪೋಲಿ ಮಾತುಗಳು ಎಂದುಕೊಂಡದ್ದೆ ಪುಂಖಾನುಪುಂಖವಾಗಿ ಅದನ್ನು ಬರೆದು ಅವರನ್ನು ಬಳಸಿಕೊಂಡು ಸಿನಿಮಾ ಮಾಡಲು ತೊಡಗಿದೆವು. ತಿಥಿಯ ನಂತರ ಈವರೆಗೆ ಎರಡು ಚಿತ್ರಗಳು ಬಿಡುಗಡೆಯಾಗಿವೆ, ಇನ್ನು ಮೂರ್ನಾಲ್ಕು ಚಿತ್ರಗಳು ಇಷ್ಟರಲ್ಲೇ ಬಿಡುಗಡೆಯಾಗಲಿವೆ. ಎಲ್ಲದರಲ್ಲೂ ಸಾಮಾನ್ಯವಾದ ಒಂದೇ ಅಂಶ ಎಂದರೆ ಅದು ದ್ವಂದ್ವಾರ್ಥ, ಪೋಲಿ, ಅಶ್ಲೀಲ ಬೈಗುಳಯುಕ್ತ ಮಾತುಗಳು.ಸುಮ್ಮನೆ ಗಮನಿಸಿ, ನಮಗೊಂದಿಷ್ಟು ಕಲಾವಿದರಿದ್ದಾರೆ, ಅವರಿಗೆ ಅವರದೇ ಆದ ಬಲಾಬಲಗಳಿವೆ ಎಂಬುದನ್ನು ಅರ್ಥೈಸಿಕೊಂಡು, ಅವರನ್ನು ಬಳಸಿಕೊಂಡರೆ, ಹಣ ಹಾಕಲು ನಿರ್ಮಾಪಕರು ಸಿಗುತ್ತಾರೆ ಎಂದುಕೊಳ್ಳುವುದಾದರೆ, ಒಂದೊಳ್ಳೆ ಹಳ್ಳಿಸೊಗಡಿನ ಚಿತ್ರವನ್ನೇ ಮಾಡಬಹುದಲ್ಲವೇ? ಬದಲಿಗೆ ಅವಸರದ ಅಡುಗೆಯಿಂದ ಲಾಭವಿದೆಯೇ? ಇಷ್ಟಕ್ಕೂ ಸಿನಿಮಾ ದೃಶ್ಯ ಮಾಧ್ಯಮವಲ್ಲವೇ? ಬರೀ ಅಶ್ಲೀಲ ದ್ವಂದ್ವಾರ್ಥದ ಮಾತುಗಳಿಂದಲೇ ಯಶಸ್ಸಿದೆಯೇ..? ಖಂಡಿತಾ ಇಲ್ಲ.
ಚಿತ್ರರಂಗಕ್ಕೆ ಇದೇನೂ ಹೊಸದಲ್ಲ. ನಮ್ಮಲ್ಲಿ ಅಂತಃಸತ್ವ ಅರಿಯದೆ ಸಿನಿಮಾ ಮಾಡುವವರು ಕಡಿಮೆಯೇನಲ್ಲ. ಪೋಲಿಸ್ ಸ್ಟೋರಿ ಬಂದಾಕ್ಷಣ ಅಕ್ಕನ್-ಅಮ್ಮನ್ ಬೈಗುಳದ ಸಿನಿಮಾಗಳು ಸಾಲು ಸಾಲಾಗಿ ಬಂದವು, ಆದರೆ ಮಾಸ್ಟರ್ ಪೀಸ್ ಎನಿಸಿಕೊಂಡದ್ದು ಪೋಲಿಸ್ ಸ್ಟೋರಿ ಮಾತ್ರ. ಹಾಗೆಯೇ ಓಂ ಬಂದಾಕ್ಷಣ ಲಾಂಗು ಹಿಡಿದು ಝಳಪಿಸುವ ಚಿತ್ರಗಳು ಅಬ್ಬರಿಸಿದವು. ಆದರೆ ಓಂ ಮೀರಿಸಿದ ಚಿತ್ರ ಬರಲಿಲ್ಲ. ಎ ಚಿತ್ರದ ನಂತರ ತಿಕ್ಕಲು ನಿರೂಪಣೆಯ, ಮುಂಗಾರುಮಳೆ ನಂತರ ಮಾತಿನ ಮಂಟಪದ ಚಿತ್ರಗಳು ಬಂದವು, ಹೋದವು. ಹೊಸಬರು, ಯುವ ನಿರ್ದೇಶಕರು ಎಲ್ಲರೂ ಜಾಲಾಡಿದರು, ಆದರೆ ಸಿನೆಮಾಗಳ ಗುಣಮಟ್ಟ ಕುಸಿಯಿತೆ ಹೊರತು ಮೇಲೇಳಲಿಲ್ಲ.
ಇನ್ನು ಟ್ರೈಲರ್ ಗಳದ್ದೂ ಅದೇ ಕತೆ. ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಕನ್ನಡದ ಮಟ್ಟಿಗೆ ಟ್ರೈಲರ್ ಜಗತ್ತಿನಲ್ಲಿ ಅಬ್ಬರಿಸಿದ ಚಿತ್ರ. ಅದರಲ್ಲಿ ದ್ವಂದ್ವಾರ್ಥ ಇತ್ತಾದರೂ ಅದಕ್ಕೂ ಮೀರಿದ ತುಂಟತನವಿತ್ತು, ಮಾಧುರ್ಯವಿತ್ತು, ಭಾವನೆ ಇತ್ತು. ಆದರೆ ಅದು ಎರ್ರಾಬಿರ್ರಿ ಹಿಟ್ ಆದದ್ದೇ ಆದದ್ದು ಅದರ ಅಂತಃಸತ್ವ ಅರಿಯದ ಗೆಳೆಯರು ದ್ವಂದ್ವಾರ್ಥ ತುಂಬಿದ ಕಿವಿ ಮುಚ್ಚಿಕೊಳ್ಳುವ, ನಾಲ್ಕುಜನ ಗೆಳೆಯರು, ಖಾಸಗಿಯಾಗಿ ಮಾತಾಡಿಕೊಳ್ಳುವ ಭಾಷೆಯನ್ನೂ ಹೆಣ್ಣು ಗಂಡು ಬೇಧವಿಲ್ಲದೆ, ವಯೋಮಿತಿಯ ಅಂತರವಿಲ್ಲದೆ ಆಡುವ ಅಸಹ್ಯಗಳನ್ನು ಟ್ರೈಲರ್ ನಲ್ಲಿ ಬಿತ್ತರಿಸಿದರು. ಡಬಲ್ ಮೀನಿಂಗ್ ಇದ್ದರೆ ಯೂ ಟ್ಯೂಬ್ ಗೆ ಲೈಕ್ಸ್ ಜಾಸ್ತಿಯಾಗುತ್ತದೆ ಎಂದು ಅದ್ಯಾವ ಪುಣ್ಯಾತ್ಮ ಹೇಳಿದನೋ? ಈವತ್ತಿಗೆ ಸುಮ್ಮನೆ ತೆರೆದುನೋಡಿ, ಒಳ್ಳೊಳ್ಳೆ ಚಿತ್ರದ ಟ್ರೈಲರ್ ಗಿಂತ ಅಶ್ಲೀಲ-ದ್ವಂದ್ವಾರ್ಥ ಸಂಭಾಷಣೆ ಇರುವ ಟ್ರೈಲರ್ ಗಳು ಲೆಕ್ಕವಿಲ್ಲದಷ್ಟು ಸಿಗುತ್ತವೆ. ಹುಡುಗ ಹುಡುಗಿ ಮಾತಾಡುವ ಮಾತಿನಲ್ಲಿ ಸೆಕ್ಸ್ ಒಂದೇ ತುಂಬಿರುತ್ತದೆ, ಎನ್ನುವ ಕಲ್ಪನೆ ನೀಡುವ ಟ್ರೈಲರ್ ಗಳು ನೋಡಲು ಖುಷಿ ಕೊಡುತ್ತವೆಯೋ ಅಥವಾ ಮುಜುಗರ ತರುತ್ತವೋ? ಅವರವರ ಭಾವಕ್ಕೆ ಭಕುತಿಗೆ ಎಂದುಕೊಂಡು ಅವರವರವ ಇಷ್ಟಕ್ಕೆ ಬಿಟ್ಟುಬಿಡಬಹುದೇನೋ?ಆದರೆ ಇಂದಿನ ಯುವಜನಾಂಗ ಬರೀ ಸೆಕ್ಸ್ ಬಗ್ಗೆಯೇ ತಲೆ ಕೆಡಿಸಿಕೊಳ್ಳುತ್ತದೆ, ಅಶ್ಲೀಲವಾಗಿ ಲಿಂಗ ತಾರತಮ್ಯವಿಲ್ಲದೆ ಹಿಗ್ಗಾಮುಗ್ಗಾ ಪೋಲಿ ಮಾತುಗಳನ್ನು ಆಡುತ್ತದೆ, ಜವಾಬ್ದಾರಿಯುತವಾಗಿ ಮುಂದಿನ ಪೀಳಿಗೆಗೆ ಮಾದರಿಯಾಗುವುದಿಲ್ಲ ಎಂಬಿತ್ಯಾದಿ  ಸಂದೇಶಗಳನ್ನು ನಮ್ಮ ಸಿನೆಮಾಗಳ ಮೂಲಕ ಸಾರ್ವಜನಿಕರಿಗೆ ನಾವೇ ಉಣ ಬಡಿಸಿದಂತಾಗುತ್ತದೆ ಅಲ್ಲವೇ?
ಇದರ ಜೊತೆಗೆ ನಾವು ಅಂದರೆ ಚಿತ್ರಕರ್ಮಿಗಳು ಒಂದು ಮಿತಿಯನ್ನು ನಾವೇ ಹಾಕಿಕೊಂಡಹಾಗಾಗುತ್ತದೆಯಲ್ಲದೇ, ಪ್ರೇಕ್ಷಕರನ್ನೂ ನಿರ್ಧಿಷ್ಟಮಿತಿಗೆ ಸೀಮಿತಗೊಳಿಸಿದಂತಾಗುತ್ತದೆಯಲ್ಲವೇ? ಚಿತ್ರರಂಗದ ಗುಣಮಟ್ಟವೂ ಕುಸಿಯುವುದರ ಜೊತೆಗೆ ಸಿನಿಮಾ ಎಂದರೆ ಒಂದು ಕತೆಯ ದೃಶ್ಯಕಾವ್ಯ ಎಂಬುದು ಹಾರಿಹೋಗಿ, ಸಿನಿಮಾ ಎಂದರೆ ಪೋಲಿಮಾತುಗಳು, ಸಿನಿಮಾ ಎಂದರೆ ಬೈಗುಳಗಳೂ ಎನಿಸಿಬಿಡುತ್ತದಂತೂ ಸತ್ಯ.ಏನಂತೀರಿ..?

Monday, January 23, 2017

ನಿನ್ನ ಕಣ್ಣ ನೋಟದಲ್ಲಿ ನೂರು ಅಸೆ ಕಂಡೆನು

“ಮುಖದಲ್ಲಿನ ಸೌಂದರ್ಯ ಮೋಸ ಮಾಡಬಹುದು, ಆದರೆ ಕಣ್ಣಲ್ಲಿನ ಸತ್ಯವನ್ನು ಮರೆ ಮಾಚಲು ಸಾಧ್ಯವಾಗದು..” ಎನ್ನುವ ಮಾತಂತೂ ಖಂಡಿತ ಸತ್ಯ. ಕಣ್ಣುಗಳು ಕತೆ ಹೇಳುತ್ತವೆ, ಭಾವ ವ್ಯಕ್ತ ಪಡಿಸುತ್ತವೆ, ಸೆಳೆಯುತ್ತವೆ, ತಿರಸ್ಕರಿಸುತ್ತವೆ.. ವ್ಯಕ್ತಿ ಎದುರಿದ್ದಾಗಲೂ ಅಷ್ಟೇ, ಅಥವಾ ಆತನ/ಆಕೆಯ ಫೋಟೋ ನೋಡಿದಾಗಲೂ ಅಷ್ಟೇ. ಅಯ್ಯೋ ಫೋಟೋದಲ್ಲಿ ನೋಡಿದ್ರೆ ಎದುರಿಗೆ ಬಂದಂಗಾಗುತ್ತೆ ಎನ್ನುವಂತೆ ಮಾಡುವ ಶಕ್ತಿ ಇರುವುದು ಕಣ್ಣುಗಳಿಗೆ ಕಾಂತಿಗೆ ಮಾತ್ರ.
ಎಲ್ ಸೀಕ್ರೆಟೋ ಡಿ ಸುಸ್ ಒಜೋಸ್ ಎನ್ನುವ ಸ್ಪ್ಯಾನಿಷ್ ಭಾಷೆಯ ಚಿತ್ರವಿದೆ. ಅದನ್ನೇ ಅದೇ ಅರ್ಥದ ಇಂಗ್ಲೀಷ್ ನಲ್ಲಿ ದಿ ಸೀಕ್ರೆಟ್ ಇನ್ ದೈರ್ ಐಯ್ಸ್ ಎಂದು ಹಾಲಿವುಡ್ ನಲ್ಲಿ ರಿಮೇಕ್ ಮಾಡಿದ್ದರು. ಒಬ್ಬ ಸುಂದರಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ಬರ್ಬರವಾಗಿ ಕೊಲೆಯಾಗಿ ಬಿಡುತ್ತಾಳೆ. ಅದರ ಪತ್ತೆಯ ಜಾಡು ಹಿಡಿದುಹೊರಡುವ ಪತ್ತೆದಾರನಿಗೆ ಸಿಗುವ ಫೋಟೋ, ಅದರಲ್ಲಿದ್ದ ವ್ಯಕ್ತಿಯ ಕಣ್ಣುಗಳು ಸತ್ಯ ಹೇಳಿಬಿಡುತ್ತವೆ.
ನಮ್ಮ ಶಾಲಾ, ಕಾಲೇಜು ದಿನಗಳಲ್ಲಿ, ಈಗಲೂ ಮೊದಲ ಆಕರ್ಷಣೆ ಕಣ್ಣುಗಳೇ ಎಂಬುದನ್ನು ಒಪ್ಪಿಕೊಳ್ಳಬೇಕು. ಫೋಟೋ ನೋಡಿದ ತಕ್ಷಣ ಸೆಳೆಯುವುದು ನನ್ನ ಮಟ್ಟಿಗೆ ಕಣ್ಣುಗಳೇ.ಅರಳುಗಣ್ಣು, ಬೆಕ್ಕಿನ ಕಣ್ಣು, ಸೂಜಿಗಣ್ಣು, ಬಟ್ಟಲು ಕಣ್ಣು, ಬೆಕ್ಕಿನಕಣ್ಣು, ಮೀನಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ, ಗಿಣಿ ಕಣ್ಣು, ನವಿಲುಕಣ್ಣು, ಜಿಂಕೆ ಕಣ್ಣು... ಹೀಗೆ ಕಣ್ಣುಗಳ ಬಗ್ಗೆ ಬರೆಯುತ್ತೇವೆ. ಹಾಗೆಯೇ ನಿಸ್ತೇಜ ಕಣ್ಣು, ಭಾವರಹಿತ ಕಣ್ಣು ಎಂತಲೂ ಬರೆಯುತ್ತೇವೆ. ಕಣ್ಣುಗಳಲ್ಲಿ ಕಾಂತಿ ಇರಲಿಲ್ಲ, ದುರುಗುಟ್ಟಿ ನೋಡಿದ, ಅವನಿಗೆ ಜೊತೆಯಲ್ಲಿರಲು ಇಷ್ಟವಿರಲಿಲ್ಲ ಎಂಬುದು ಅವನ ದೃಷ್ಟಿಯಲ್ಲಿಯೇ ಗೊತ್ತಾಗುತ್ತಿತ್ತು, ಕಣ್ಸನ್ನೆಯಲ್ಲಿ ಕರೆದಳು.. ಹೀಗೆ ನಾವು ಒಂದಲ್ಲ ಒಂದು ರೀತಿಯಲ್ಲಿ ಕಣ್ಣಿನ ಸತ್ಯಕ್ಕೆ ತೆರೆದುಕೊಂಡದ್ದು ಅಪ್ಪಿಕೊಂಡದ್ದು ಇದ್ದೇ ಇದೆ. ಇಷ್ಟವಾದವರೂ ಅದೆಷ್ಟೇ ದೂರವಿದ್ದರೂ, ಕಣ್ಣುಗಳು ಸಂಧಿಸಿ ಮಾತಾಡುವ ಪರಿಗೆ ಅದೇಗೆ ವಿವರಣೆ ಕೊಡಲು ಸಾಧ್ಯ ನೀವೇ ಹೇಳಿ? ಅದ್ಯಾವ ಜೂಮ್ ಲೆನ್ಸ್ ಇದಕ್ಕೆ ಸರಿಗಟ್ಟಲು ಸಾಧ್ಯ?
ಆ ಸುಂದರಿ ಅವನನ್ನು ಕೊಲೆ ಮಾಡಿದಳು ಎನ್ನುವ ಹೆಡ್ ಲೈನ್ ಬರೆಯುತ್ತೇವೆ, ನಾನು ಮಾಧ್ಯಮದಲ್ಲಿ  ಕೆಲಸ ಮಾಡುತ್ತಿದ್ದಾಗ ಕೆಲವೊಬ್ಬರನ್ನು ಸಂಧಿಸುವ ಅವಕಾಶ ಒದಗುತ್ತಿತ್ತು. ಇಷ್ಟು ಚಂದನೆಯ ಹುಡುಗಿ ಕೊಲೆ ಮಾಡಿಸಲು ಸಾಧ್ಯವೇ? ಅದಕ್ಕೆ ಪ್ಲಾನ್ ಮಾಡಲು, ಅದರ ಪ್ರತಿಕ್ಷಣದ ವರದಿ ತರಿಸಿಕೊಳ್ಳಲು ಸಾಧ್ಯವೇ ಎಂದೆಲ್ಲಾ ಯೋಚಿಸುತ್ತಿತ್ತು, ಆದರೆ ಎದುರಿಗೆ ಕಂಡಾಗ ಕಣ್ಣುಗಳಲ್ಲಿ ಕ್ರೌರ್ಯ ಇಣುಕುತ್ತಿತ್ತು. ಮುಖದಲ್ಲಿನ ಅಮಾಯಕತೆಯ ಮುಖವಾಡವನ್ನು ಅದು ಕ್ಷಣ ಮಾತ್ರದಲ್ಲಿ ನಿವಾಳಿಸಿ ಎಸೆದುಬಿಡುತ್ತಿತ್ತು. ಕಣ್ಣುಗಳು ಹೇಗಿದ್ದರೆ ಚಂದ ಎನ್ನುವುದು ಮಿಲಿಯನ್ ಡಾಲರು ಪ್ರಶ್ನೆ. ಮುಖ ಅಂದಕ್ಕೆ ಕಾಣಬೇಕಾದರೆ ಬಟ್ಟಲುಗಣ್ಣು ಇರಬೇಕೆ? ಅಥವಾ ಸೂಜಿ ಗಣ್ಣು ಇರಬೇಕೆ? ಆದರೆ ಕಣ್ಣುಗಳಲ್ಲಿ ಭಾವ ಇರಬೇಕು, ಮತ್ತದು ಮನದಾಳದ ಭಾವವಾಗಿರಬೇಕು. ಹಾಗಾದಾಗಲೇ ವ್ಯಕ್ತಿ ಇಷ್ಟವಾಗುತ್ತ ಹೋಗುವುದಲ್ಲವೇ? ಫೋಟೋ ನೋಡಿ, ಎಷ್ಟು ಚಂದ ಇದ್ದಾಳೆ ಎಂದುಕೊಂಡು ಸಾಂಗತ್ಯ ಬೆಳಸಿದರೆ ಹತ್ತಿರಕ್ಕೆ ನೋಡಿದಾಗ ಅದರಲ್ಲಿ ಕೃತಕತೆ ಕಾಣಿಸಿಬಿಟ್ಟರೆ..? ಅದಕ್ಕೆ ಹೇಳುವುದು ಕಣ್ಣಲ್ಲಿನ ಸತ್ಯವನ್ನು ಮರೆಮಾಚುವುದು ಕಷ್ಟದ ಕೆಲಸ ಎಂದು.
ಆದರೂ ಕೆಲವು ಸುಂದರಿಯರ ಕಣ್ಣುಗಳು ಅಚಾನಕ್ ಆಗಿ ಸೆಳೆದುಬಿಡುತ್ತದೆ. ಯಾವುದೋ ಜನಜಂಗುಳಿಯಲ್ಲಿರಬಹುದು, ನಾವು ಕೆಲಸ ಮಾಡುವ ಜಾಗದಲ್ಲಿರಬಹುದು, ಅವರು ಪರಿಚಿತರಿರಬಹುದು, ಅಪರಿಚಿತರಿರಬಹುದು.. ನನಗಂತೂ ತುಂಬಾ ಸಲ ಆಗಿದೆ, ಈ ಫೇಸ್ಬುಕ್ ನಲ್ಲಿನ ಕೆಲವು ಫೋಟೋಗಳು ಸೆಳೆದಿವೆ. ಅವರ ಕಣ್ಣಲ್ಲಿನ ಕಾಂತಿಗೆ, ಭಾವಕ್ಕೆ ಸೆಳೆತಕ್ಕೆ ಬೀಳದೆ, ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎನಿಸಿದೆ.. ಸೆಳೆಯುವ ಸುಂದರಿಗೆ ದುಂಬಾಲು ಬೀಳುವ ಮನಸ್ಸನ್ನು ಹತೋಟಿಗೆ ತರುವುದು ಸಾಧ್ಯವೇ?
ಇನ್ನು ಸಿನೆಮಾಗಳಲ್ಲಿ ಕಣ್ಣುಗಳನ್ನೂ ವರ್ಣಿಸಿದ ಹಾಡುಗಳಿಗೆ ಬರವಿಲ್ಲ.
“ನಿನ್ನ ಕಣ್ಣ ನೋಟದಲ್ಲಿ  ನೂರು ಅಸೆ ಕಂಡೆನು..”
“ಕಣ್ಣಂಚಿನ ಈ ಮಾತಲಿ...”
“ನಿನ್ನ ಕಣ್ಣುಗಳು ..”
“ನಯನ ನಯನ ಮಿಲನ..”
“ನಗುವ ನಯನ, ಮಧುರ ಮೌನ..”
“ನಯನದಲ್ಲಿ ನೀನಿರಲು..”
“ನಯನದಲಿ ನೀನಿರಲು...”


ಹೀಗೆ ಪಟ್ಟಿ ಉದ್ದವಾಗುತ್ತದೆ. ನಿನ್ನ ಕಣ್ಣ ನೋಟದಲ್ಲಿ ಹಾಡು ಕೇಳುತ್ತಾ ಕೇಳುತ್ತಾ ನನ್ನಲ್ಲೇ ಕಳೆದುಹೋದೆ ನೋಡಿ, ಇಷ್ಟೆಲ್ಲಾ ಬರೆಯಬೇಕಾಯಿತು. ಸೆಳೆಯುವ, ಆಕರ್ಷಣೀಯ ಎಂದು ನಿಮಗನಿಸಿದ ಕಣ್ಣು ಯಾರದು..?

Sunday, January 15, 2017

ಚಿತ್ರಸಂತೆಯಲ್ಲಿ ಒಂದು ಕನವರಿಕೆ:

ಬಿಎಡ್ ನಲ್ಲಿ ಟೀಚಿಂಗ್ ಏಡ್ ಇರುತ್ತದೆ. ಅಂದರೆ ವಿದ್ಯಾರ್ಥಿ ಶಿಕ್ಷಕರು ಪಾಠ ಮಾಡುವಾಗ ಪಾಠವನ್ನು ಪರಿಣಾಮಕಾರಿಯನ್ನಾಗಿ ಮಾಡಲು ಆ ಪಾಠಕ್ಕೆ ಸಂಬಂಧಿಸಿದ ಚಿತ್ರಗಳನ್ನು ಮಕ್ಕಳಿಗೆ ತೋರಿಸಿದರೆ ಪಾಠ ಮಕ್ಕಳ ಮನಸ್ಸಿಗೆ ಇಳಿಯುತ್ತದೆ ಎಂಬುದಾಗಿ. ನನಗೆ ಟೀಚಿಂಗ್ ಏಡ್ ಅತೀ ಸುಲಭದ ಕೆಲಸವಾಗಿತ್ತು. ಹಾಗೆಯೇ ನಮ್ಮ ವಾರಾಂತ್ಯದ ಖರ್ಚಿಗೆ ದಾರಿಯೂ ಆಗಿತ್ತು. ಕುವೆಂಪು, ಕಾರಂತ ಮುಂತಾದ ಲೇಖಕರ, ಗಾಂಧೀ, ಬೋಸ್, ಮುಂತಾದ ಸ್ವಾತಂತ್ರ್ಯ ಹೋರಾಟಗಾರರ, ವಿಜ್ಞಾನಿಗಳ ಭಾವಚಿತ್ರಗಳು, ಪರಿಸರ, ನದಿ, ಸೇತುವೆ, ಉಪಕರಣಗಳು, ನಕ್ಷೆಗಳು... ಹೀಗೆ ಇವೆಲ್ಲವನ್ನೂ ನಮ್ಮ ಹಾಸ್ಟೆಲ್ ರೂಮಿಗೆ ವಿದ್ಯಾರ್ಥಿಗಳು ತೆಗೆದುಕೊಂಡು ಬಂದು ಕೊಡುತ್ತಿದ್ದರು, ಒಂದು ಡ್ರಾಯಿಂಗ್ ಶೀಟ್ನ ಜೊತೆಗೆ. ದಿನಕ್ಕೆರೆಡು ಬರೆದರೆ ಆವತ್ತಿನ ಹಾಸ್ಟೆಲ್ ಊಟಕ್ಕೆ ಬೈ ಹೇಳಿ, ಹೋಟೆಲ್ಲಿಗೆ ನುಗ್ಗಲು ಅಣಿಯಾಗುತ್ತಿದ್ದೆವು. ನಾಲ್ಕೈದು ಬರೆದರಂತೂ ಸಿನಿಮಾ, ಊಟ ಎಲ್ಲದಕ್ಕೂ ಹಣ ಆಗುತ್ತಿತ್ತು. 
ಬೆಂಗಳೂರಿಗೆ ಸಿನಿಮಾ ಜಗತ್ತಿಗೆ ಬಂದಾಗ ಮತ್ತದೇ ಚಿತ್ರಕಲೆ ನನಗೆ ಸಹಾಯ ಮಾಡಿದ್ದಂತೂ ಸತ್ಯ. ಹಾಗೆಯೇ ನನ್ನ ಮೊದಲ ಚಿತ್ರವೂ ಅಚ್ಚುಕಟ್ಟಾಗಿ ಮೂಡಿ ಬರಲು ಕಾರಣ ನನ್ನದೇ ಚಿತ್ರಕಲೆ. ಆವಾಗ ಸ್ಟೋರಿ ಬೋರ್ಡ್ ಅಪರೂಪವಾಗಿತ್ತು. ನಾನು ಮಾತ್ರ ನನ್ನ ಚಿತ್ರದ ಪ್ರಮುಖ ದೃಶ್ಯಗಳಿಗೆ ಸ್ಟೋರಿ ಬೋರ್ಡ್ ಮಾಡಿದ್ದೆ. ಹಾಗಾಗಿ ಹಣ, ಸಮಯ ಎರಡೂ ಉಳಿದಿತ್ತು.
ಇಂತಹದ್ದೇ ಸಮಯದಲ್ಲಿ ಚಿತ್ರಸಂತೆ ಬಂದಿತ್ತು. ನಾನು ಚಿತ್ರ ಬರೆಯುವುದನ್ನು ನೋಡಿದ ನಾದಿನಿ ಮಾನಸ ಬರೆಯಲು ಹುರಿದುಂಬಿಸಿದಳು. ಸಹನಾ,ಸ್ವಸ್ತಿಕ ಬರೆಯಲೇ ಬೇಕೆಂದು ಹಠ ಹಿಡಿದರು. ಅವರ ಆಸಕ್ತಿಯಿಂದಾಗಿ ಆ ವರ್ಷದ ಚಿತ್ರಸಂತೆಯಲ್ಲಿ ಒಂದು ಪ್ರದರ್ಶನ ಇಟ್ಟುಬಿಡೋಣ ಎಂದುಕೊಂಡು ಪೇಯಿಂಟ್ ಬ್ರಷ್ ಕೈಗೆತ್ತಿಕೊಂಡಿದ್ದೆ. ಒಂದು ತಿಂಗಳ ಸಮಯದಲ್ಲಿ ಒಂದಷ್ಟು ಪೇಯಿಂಟ್ ಮಾಡಿದೆ. ಅವೆಲ್ಲವನ್ನೂ ಚಿತ್ರಸಂತೆಯಲ್ಲಿ ಪ್ರದರ್ಶನಕ್ಕಿಟ್ಟೆ. ಬೇರೆ ಬೇರೆ ಕಾರಣಗಳಿಂದ ನಮಗೆ ಸಿಕ್ಕಿದ್ದ ಜಾಗ ಬದಲಾಗಿ, ಚಿತ್ರಸಂತೆಯ ಆಯೋಜಕರು ದಿಕ್ಕಾಪಾಲಾಗಿ ಅವ್ಯವಸ್ತೆಯುಂಟಾಗಿ ನಮಗೆ ಬದಲಿ ಜಾಗವನ್ನು ಕೊಡುವಾಗಲೇ ಮದ್ಯಾಹ್ನವಾಗಿತ್ತು. ಆದರೆ ಆವಾಗ ಸಿಕ್ಕ ಪ್ರೋತ್ಸಾಹ ಮುಂದಿನ ಚಿತ್ರಸಂತೆಯಲ್ಲಿ ಇನ್ನಷ್ಟು ಚಿತ್ರಗಳನ್ನು ಬರೆದು ಪ್ರದರ್ಶನಕ್ಕಿಡಬೇಕು ಎನಿಸಿಬಿಟ್ಟಿತ್ತು, ವ್ಯವಸ್ತಿತವಾಗಿ ಮತ್ತು ಚಿಂತಾನಾತ್ಮಕವಾಗಿ ಬೇರೆ ಬೇರೆ ಶೈಲಿಯಲ್ಲಿ ಚಿತ್ರಗಳನ್ನು ರಚಿಸಲು ಮನಸ್ಸು ಸಿದ್ಧಗೊಂಡಿತ್ತು.
ಆದರೆ ಆನಂತರ ಮತ್ತೆ ಬ್ರಷ್ ಹಿಡಿಯಲು ಸಾಧ್ಯವಾಗಿಲ್ಲ. ಪೇಂಟಿಂಗ್ ಗಳನ್ನೂ ನೋಡಿದಾಗ ಬರೆಯಲು ಮನಸ್ಸಾಗುತ್ತದೆಯಾದರೂ ಅದೇಕೋ ಏನೋ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈವತ್ತು ಚಿತ್ರಸಂತೆಗೆ ಹೋದಾಗ ಇದೆಲ್ಲಾ ನೆನಪಾಯಿತು, ಬರುವ ವರ್ಷದ ಚಿತ್ರಸಂತೆಗೆ ಭಾಗವಹಿಸಲೇಬೇಕು ಎಂದು ನಿರ್ಧರಿಸಿದೆ.

ಸಾಧ್ಯವಾಗುತ್ತದಾ..?

Tuesday, January 10, 2017

ಮೋಹನಸ್ವಾಮಿಯ ರಂಗರೂಪ

ಮೊನ್ನೆ ವಸುಧೇಂದ್ರ ಅವರ ಮೋಹನಸ್ವಾಮಿಯ ರಂಗರೂಪವನ್ನು ನೋಡಲು ಹೋಗಿದ್ದೆ. ಅದೇಕೋ ಏನೋ ಗೊತ್ತಿಲ್ಲ, ಯಾರಾದರೂ ನನ್ನನ್ನು ನೋಡಿದವರು ನಾನೂ ಗೇ ಎಂದುಕೊಳ್ಳಬಹುದಾ..? ಎಂಬೊಂದು ಅಳುಕು ಕ್ಷಣದಲ್ಲಿ ಕಾಡಿಬಿಟ್ಟಿತ್ತು. ಇಷ್ಟಕ್ಕೂ ಸಲಿಂಗಿಗಳ ಕಥಾನಕವನ್ನು ಆಧರಿಸಿದ ಕತೆಯನ್ನು ಓದಲು, ಸಿನಿಮಾ ನೋಡಲು ಸಲಿಂಗಿಯೇ ಆಗಬೇಕಾಗಿಲ್ಲ. ಆದರೆ ಅದೇಕೋ ಏನೋ ಆ ಕ್ಷಣದಲ್ಲಿ ಒಂದು ಮಟ್ಟದ ಹಿಂಜರಿಕೆ ಉಂಟಾದದ್ದು ಸತ್ಯ. ಅದೆಷ್ಟೇ ನಾನು ವಿಶಾಲವಾಗಿ ಯೋಚಿಸುವವನು ಅಂದುಕೊಂಡರೂ, ಹಾಗೆ ಸಮಾಜದ ಮುಂದೆ ಪೋಸು ಕೊಟ್ಟರೂ ಮನದಾಳದಲ್ಲಿ ಈ ತರಹದ ಭಾವನೆ ಇರುವ ಬಗೆಗೆ ನನಗೆ ಬೇಸರವಾದದ್ದಂತೂ ಸತ್ಯ. ನಾನು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾಗ ಕ್ವೀರ್ ಫೆಸ್ಟಿವಲ್ ಗೆ ಹೋಗಿದ್ದೇನೆ. ಹಲವರನ್ನು ಸಂದರ್ಶನವನ್ನೂ ಮಾಡಿದ್ದೇನೆ. ಅದೇನೇ ಇರಲಿ, ಮೊನ್ನೆ ಮೊನ್ನೆ ಆ ಹಿಂಜರಿಕೆ ಮಾತ್ರ ನನ್ನನ್ನು ಅಲ್ಲಾಡಿಸಿದ್ದು ಸತ್ಯ
ಸಲಿಂಗಿಗಳ ಬಗೆಗೆ ನ್ಯೂಟ್ರಲ್ ಅಭಿಪ್ರಾಯ ನನ್ನದು.ಆದರೆ ಆದಕ್ಕೆ ಸಂಬಂಧಿಸಿದ ಸಿನಿಮಾ, ಕಿರುಚಿತ್ರ, ಪುಸ್ತಕಗಳನ್ನು ಓದಿದ್ದು ಕಡಿಮೆಯೇ. ಅದೇಕೋ ಏನೋ ಸ್ತ್ರೀಸಲಿಂಗಿಗಳ ಕತೆಯಿದ್ದ ನೇಪಾಳಿ ಭಾಷೆಯ “ಸೂನ್ಗವ” ಚಿತ್ರವನ್ನು ಸುಮಾರು ಬಾರಿ ನೋಡಿದ್ದೇನೆ. ಅದಕ್ಕೆ ಕಾರಣ ಅದರಲ್ಲಿ ನಟಿಸಿರುವ ಸುಂದರಿಯರಾದ ಇಬ್ಬರು ಹೆಣ್ಣುಮಕ್ಕಳಿರಬಹುದೇನೋ? ಆದರೆ ಬ್ರೋಕ್  ಬ್ಯಾಕ್ ಮೌಂಟನ್, ಮಿಲ್ಕ್ ಮುಂತಾದವುಗಳನ್ನು ನೋಡಿದ್ದೇನಾದರೂ ರುಚಿಸಿಲ್ಲ.
ನಾನಾಗ ಚಿತ್ರರಂಗದಿಂದ ದೂರವಿದ್ದ ಸಂದರ್ಭದಲ್ಲಿ ಬೇರೆ ಕಡೆ ಕೆಲಸ ಮಾಡುತ್ತಿದ್ದೆ. ನನ್ನ ಸಹೋದ್ಯೋಗಿಯೊಬ್ಬಳು ತುಂಬಾ ಸುಂದರವಾಗಿದ್ದಳು. ಆಕೆಯ ಹೆಸರು ಶ್ವೇತಾ ಎಂದುಕೊಳ್ಳಿ. ಅದೇಕೋ ಏನೋ ಪರಿಚಯವಾದ ವಾರದಲ್ಲೇ ಇಬ್ಬರೂ ಕ್ಲೋಸ್ ಆಗಿದ್ದೆವು. ಆಕೆ ಹೆಚ್ಚು ಇಂಗ್ಲೀಷ್ ಸಾಹಿತ್ಯ ಓದಿದ್ದಳು. ನನಗೆ ಒಂದಷ್ಟು ಕಾದಂಬರಿಕಾರರು ಬಿಟ್ಟರೆ ಬೇರೆ ಗೊತ್ತಿರಲಿಲ್ಲ. ಹಾಗೆಯೇ ಹಿಂದಿ ಗಝಲ್ ಗಳ ಬಗ್ಗೆ ಮಾತನಾಡುತ್ತಿದ್ದಳು, ಭಾವುಕವಾಗಿ, ಕಣ್ಮುಚ್ಚಿಕೊಂಡು ತನ್ಮಯತೆಯಿಂದ ತನ್ನ ಸುಂದರವಾದ ಕಂಠದಲ್ಲಿ ಹಾಡುತ್ತಿದ್ದಳು. ಅರ್ಥವಾಗದಿದ್ದರೂ ನಾನು ಕೇಳುತ್ತಿದ್ದೆ. ಬದುಕು ರಸಮಯವಾಗಿ ವರ್ಣಮಯವಾಗಿ ಮುಂದುವರೆಯುತ್ತಿತ್ತು. ಹಾಗೆ ರಜಾ ಬಂದಾಗ ನಾವಿಬ್ಬರು ಬೇರೆ ಕಡೆ ಹೋಗೋಣವೆ..? ಎಂದು ಕೇಳಿದ್ದಳು. ನಾನು ಹೂ ಅಂದಿದ್ದೆ. ಹೋಗಿ, ಐದು ದಿನ ಇದ್ದು, ಬರುವುದು ಎಂದು ಪ್ಲಾನ್ ಮಾಡಿಕೊಂಡೆವು. ಅಲ್ಲೆಲ್ಲೋ ಬೇರೆಯದೇ ಆದ ಭಾಷೆ ಗೊತ್ತಿಲ್ಲದ ರಾಜ್ಯದಲ್ಲಿ ಒಂದು ಕೋಣೆಯಲ್ಲಿ ಅದೂ ಶುದ್ಧ ಗೆಳೆತಿಯ ಜೊತೆಗೆ ಕೋಣೆ ಹಂಚಿಕೊಳ್ಳುವುದು ಹೇಗೆ..? ಎನ್ನುವ ಪ್ರಶ್ನೆಯಲ್ಲಿಯೇ ಪುಳಕವಿತ್ತು. ಅಲ್ಲಿ ನನ್ನ ಫ್ರೆಂಡ್ ಜಾಯಿನ್ ಆಗುತ್ತಾಳೆ ಎಂದಿದ್ದಳು ಶ್ವೇತಾ.
ಹೋಟೆಲ್ಲಿನ ಕೋಣೆ ಸ್ವಲ್ಪ ದೊಡ್ಡದಾಗಿಯೇ ಇತ್ತು. ದೊಡ್ಡ ಮಂಚವಿತ್ತು. ಮಲಗುವ ಸಮಯದಲ್ಲಿ ನಾನು ಎಲ್ಲ ರೀತಿಯಿಂದಲೂ ಒಳ್ಳೆಯವನಾಗುವ ಭರದಲ್ಲಿ ಮಂಚವನ್ನು ಬೇರ್ಪಡಿಸೋಣ ಅಥವಾ ನಾನು ಹಾಸಿಗೆ ಹಾಸಿಕೊಂಡು ಕೆಳಗೆ ಮಲಗಲಾ ಎಂದು ಕೇಳಿದ್ದೆ. ಅದಕ್ಕೆ ಜೋರಾಗಿ ನಕ್ಕಿದ್ದ ಶ್ವೇತಾ, ಮಾರಾಯ ತಲೆ ಕೆಡಿಸಿಕೊಳ್ಳಬೇಡ , ನಿನ್ನ ಮೇಲೆ, ಮತ್ತು ನನ್ನ ಮೇಲೆ ನಂಬಿಕೆಯಿದೆ ಎಂದವಳೇ ನೈಟ್ ಪ್ಯಾಂಟ್, ಟೀ ಶರ್ಟ್ ತೊಟ್ಟು ನನ್ನ ಕಡೆಗೆ ಬೆನ್ನು ಮಾಡಿ, ಗುಡ್ ನೈಟ್ ಹೇಳಿ ಮಲಗಿಬಿಟ್ಟಿದ್ದಳು. ನಾನು ಆವತ್ತು ಜೀನ್ಸ್ ಪ್ಯಾಂಟ್ ನಲ್ಲಿಯೇ ಮಲಗಿದ್ದೆ, ಮತ್ತು ನಿದ್ರೇ ಬಾರದೆ ಒದ್ದಾಡಿದ್ದೆ.
ಬೆಳಿಗ್ಗೆ ಆಕೆಯ ಗೆಳತಿ ಬಂದು ನಮ್ಮನ್ನು ಸೇರಿದ್ದಳು. ಆ ಐದು ದಿನದಲ್ಲಿ ಅವರಿಬ್ಬರೂ ಅಗತ್ಯಕ್ಕಿಂತ ಹೆಚ್ಚು ಹತ್ತಿರವಾಗಿದ್ದರು. ಆಕೆ ಬಂದ ಮೇಲೆ ನಾನು ಪ್ರತ್ಯೇಕ ಕೋಣೆಯಲ್ಲಿದ್ದೆ. ನಾಲ್ಕು ದಿನ ಇದ್ದ ನಂತರ ಆಕೆ ಹೊರಟು ಹೋಗಿದ್ದಳು. ಮತ್ತೆ ಇಬ್ಬರೂ ಒಂದೇ ಕೋಣೆಗೆ ಸೇರಿದೆವು. ಆದರೆ ಆವತ್ತು ಶ್ವೇತಾ ಬಿಕ್ಕಿಬಿಕ್ಕಿ ಅಳುತ್ತಿದ್ದಳು. ನನಗೆ ಕಾರಣ ಗೊತ್ತಾಗದೆ ತಬ್ಬಿಬ್ಬಾಗಿದ್ದೆ. ನಾನು ಬಲವಂತ ಮಾಡಿದ ನಂತರ ಆಣೆ ಪ್ರಮಾಣ ಮಾಡಿಸಿಕೊಂಡು ಆಕೆ ಬಾಯಿಬಿಟ್ಟಿದ್ದಳು. ಗೆಳತಿಗೆ ಮದುವೆ ನಿಗದಿಯಾಗಿದೆ.. ಆದರೆ ನಾವಿಬ್ಬರು ಲೆಸ್ಬಿಯನ್ಸ್..ನಾನು ಒಂದು ಕ್ಷಣ ಆಕೆಯೆಡೆಗೆ ನೋಡಿದ್ದೆ. ತಕ್ಷಣಕ್ಕೆ ಎದ್ದು ಪಕ್ಕದ ಕೋಣೆಗೆ ಹೋಗಿ ಮಲಗಿಬಿಡಬೇಕು ಎನಿಸಿತ್ತು. ಅದ್ಯಾಕೆ ಹಾಗನ್ನಿಸಿತು ಗೊತ್ತಾಗಲಿಲ್ಲ.
ವಾಪಸ್ಸು ಬಂದ ನಂತರ ಕೆಲವೇ ವಾರದಲ್ಲಿ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಳು. ಗೆಳತಿ ಮದುವೆಯಾದ ಮೇಲೆ ಬದಲಾಗಿ ಸಂಸಾರ ಮಾಡಿದಳಾ..? ಅವರ ಬದುಕೇನು ಆಯಿತು..? ಗೊತ್ತಾಗಲಿಲ್ಲ. ಆದರೆ ಶ್ವೇತಾ ಸಾವಿನ ಕಾರಣ ಯಾರಿಗೂ ಗೊತ್ತಾಗಲಿಲ್ಲ, ಬಹುಶಃ ನನಗೂ ಗೊತ್ತಾಗುತ್ತಿರಲಿಲ್ಲವೇನೋ? ಆದರೆ ಆ ಪ್ರವಾಸದ ನಂತರ ಆಕೆ ಬಹಳಷ್ಟು ಮಾತನಾಡಿದ್ದಳು. ಮನೆಯಲ್ಲಿ ಮದುವೆ ವಿಷಯ ಎತ್ತಿದರೆ ಮೈ ಉರಿಯುತ್ತದೆ ಎನ್ನುತ್ತಿದ್ದಳು, ತನಗೆ ಪುರುಷರು ಯಾವ ಭಾವನೆಯನ್ನು ಹುಟ್ಟಿಸುವುದಿಲ್ಲ..ಆದರೆ ಮನೆಯವರು ಬಲವಂತ ಮಾಡಿ ಮದ್ವೆ ಮಾಡೇ ಮಾಡಿಸುತ್ತಾರೆ ಎಂದೆಲ್ಲಾ ಗೋಳಾಡಿದ್ದಳು, ಮನೆಯವರಿಗೆ ಹೇಳಿಬಿಡು ಎಂದದ್ದಕ್ಕೆ ಆಗ ಮನೆಯವರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅತ್ತಿದ್ದಳು.
ಮೊನ್ನೆ ಮೋಹನಸ್ವಾಮಿ ನೋಡುತ್ತಾ ನೋಡುತ್ತಾ ಅದರಲ್ಲಿನ ಶಂಕರೇಗೌಡನ ದುರಂತ ಕತೆ ಮನದಾಳಕ್ಕೆ ಇಳಿಯುತ್ತಿದ್ದಂತೆ ನನಗೆ ನೆನಪಾಗುತ್ತಿದ್ದವಳು ಶ್ವೇತಾ. ನಗುನಗುತ್ತಾ ಮಾತನಾಡುತ್ತಿದ್ದ ಸುಂದರಿ ತನ್ನಿಷ್ಟಕ್ಕೆ ಬದುಕದೇ ಸತ್ತೆ ಹೋದಳಲ್ಲಾ..? ಹಾಗಂತ ಹೊಂದಿಕೊಂಡು(?) ಹೋಗಲು ಸಾಧ್ಯವಿತ್ತೆ..? ಥೂ ಅದೊಂದು ಬದುಕಾ? ನಿನಗೆಲ್ಲಿ ಅರ್ಥವಾಗುತ್ತೆ..ಹಾಗಾದರೆ ನೀನು ನಮ್ಮಂತೆ ಬದುಕಲು ಸಾಧ್ಯವಾ? ಎಂದೆಲ್ಲಾ ಪ್ರಶ್ನೆ ಹಾಕಿದಾಗ ನಾನು ಉತ್ತರ ಕಂಡುಕೊಳ್ಳುವ ಪ್ರಯತ್ನ ಪಟ್ಟಿದ್ದೆ.
ಮೋಹನಸ್ವಾಮಿ ನಾಟಕ ರೂಪ ಅತ್ಯಂತ ಖುಷಿ ಕೊಟ್ಟದ್ದು ಕಲಾವಿದರ ಅಭಿನಯದಿಂದಾಗಿ. ಈಗಾಗಲೇ ಮೋಹನಸ್ವಾಮಿಯಲ್ಲಿನ ಅಷ್ಟೂ ಕತೆಗಳನ್ನು ಓದಿದ್ದರಿಂದ ಅದರ ರಂಗರೂಪ ಹೇಗಿರಬಹುದೆಂಬ ಕುತೂಹಲ ಇದ್ದೆ ಇತ್ತು.  ನಾರ್ಮಲ್ ಆಗಿ ಕಾಣಿಸಿಕೊಳ್ಳುವ ಮೋಹನ, ಬರುಬರುತ್ತಾ ಪೊರೆ ಕಳಚಿ ಮೋಹನಸ್ವಾಮಿಯಾಗುವ ಘಟ್ಟಗಳನ್ನು ತನ್ನ ಅಭಿನಯದ ಮೂಲಕ ಅದ್ಭುತವಾಗಿ ಪ್ರೇಕ್ಷಕರ ಮುಂದಿರಿಸಿದ್ದು ಹರೀಶ್ ಎನ್ನುವ ಕಲಾವಿದರು. ಕನ್ನಡದ ಮಟ್ಟಿಗೆ ಅಪರೂಪದ ನಾಟಕ ಎನಿಸಿತು. 

Saturday, January 7, 2017

ಅವರು ತರುವ ಮುಂಚೆ ಇವರು ಮಾಡಿಯಾಗಿತ್ತು?



ಮಲಯಾಳಂ ನ ದೃಶ್ಯಂ ಅತ್ಯುತ್ತಮ ಕೌಟುಂಬಿಕ ಥ್ರಿಲ್ಲರ್ ಚಿತ್ರ. ಅದು ಜಪಾನಿ ಲೇಖಕ ಕಿಎಗೋ ಹಿಗಶಿನೋ ಬರೆದ ಕಾದಂಬರಿಯಲ್ಲಿದ್ದ ಕೆಲವು ಅಂಶಗಳನ್ನು ಹೊಂದಿತ್ತು. ಒಂದು ಕೊಲೆಯನ್ನು ಮುಚ್ಚಿಡುವುದಕ್ಕಾಗಿ ಒಂದಿಡೀ ದಿನವನ್ನು ಪುನರ್ಸೃಷ್ಟಿಸುವ ಕತೆ ಕಾದಂಬರಿಯದ್ದು. ಅದನ್ನು ಕೋರಿಯನ್ ಮತ್ತು ಜಪಾನಿ ಎರಡೂ ಭಾಷೆಯಲ್ಲಿ ಸಿನಿಮಾ ಮಾಡಲಾಗಿತ್ತು. ಸಸ್ಪೆಕ್ಟ್ ಎಕ್ಸ್ ಎಂದು ಜಪಾನಿ ಭಾಷೆಯಲ್ಲಿಯೂ, ಪ್ರೈವೇಟ್ ನಂಬರ್ ಎಂಬುದಾಗಿ ಕೋರಿಯನ್ ಭಾಷೆಯಲ್ಲಿಯೂ ಸಿನಿಮಾ ಆಗಿ ಯಶಸ್ಸು ಕಂಡಿದೆ. ಸಿನಿಮಾ ನೋಡಿ, ಕತೆಗೆ ಮಾರುಹೋದ ಬಾಲಿವುಡ್ ನ ಹೆಸರಾಂತ ನಿರ್ಮಾಪಕಿ, ಅದರ ಮೂಲ ಹುಡುಕಿ. ಅದರ ಹಕ್ಕುಗಳನ್ನು ಅಧಿಕೃತವಾಗಿಯೇ ಹಣ ಕೊಟ್ಟು ತಂದೇ ಬಿಟ್ಟರು. ಅಷ್ಟರಲ್ಲಿ, ಮಲಯಾಳಂ ನ ದೃಶ್ಯಂ ಸೂಪರ್ ಹಿಟ್. ಅದನ್ನೇ ಹಿಂದಿಗೂ ರಿಮೇಕ್ ಮಾಡುವ ಸಮಯದಲ್ಲಿ ಆ ನಿರ್ಮಾಪಕಿ ತಲೆ ತಲೆ ಚಚ್ಚಿಕೊಂಡು, ನ್ಯಾಯಾಲಯ ಎಂದೆಲ್ಲಾ ಹೋರಾಡಿದ್ದು, ಓಡಾಡಿದ್ದೂ ಆಯಿತು, ಆದರೆ ಹಿಂದಿಯಲ್ಲಿಯೂ ಸಿನಿಮಾ ಹಿಟ್ ಆಗಿತ್ತು.
ಹಾಗೆಯೇ ಸಧ್ಯಕ್ಕೆ ಪುಷ್ಪಕವಿಮಾನ ಕೋರಿಯನ್ ಭಾಷೆಯ ಮಿರಾಕಲ್ ಇನ್ ಸೆಲ್ ನಂಬರ್ 7 ನ ನೇರ ನಕಲು. ಪ್ರತಿ ದೃಶ್ಯವನ್ನೂ ಚಾಚೂ ತಪ್ಪದೆ ಕನ್ನಡೀಕರಿಸಿರುವ ನಿರ್ದೇಶಕರು ಅದನ್ನು ಸ್ಫೂರ್ತಿ ಎನ್ನಲು ಶುರು ಮಾಡಿದ್ದು ಇತ್ತೀಚಿಗೆ. ಮೂಲಗಳ ಪ್ರಕಾರ ಕನ್ನಡದ ಶ್ರೀನಗರ ಕಿಟ್ಟಿ, ತಮ್ಮ ಪುತ್ರಿಯ ಜೊತೆ ಅಭಿನಯಿಸಿ, ನಿರ್ಮಿಸುವ ಇರಾದೆಯಿಂದ ಕೋರಿಯನ್ ಸಿನಿಮಾದ ಹಕ್ಕುಗಳನ್ನು ಅಧಿಕೃತವಾಗಿಯೇ ತಂದಿದ್ದರಂತೆ. ಅವರು ಅದನ್ನು ತಂದು ನೋಡುವಷ್ಟರಲ್ಲಿ ಇಲ್ಲಿ ಸಿನೆಮಾವೆ ಮುಗಿದುಹೋಗಿತ್ತಲ್ಲ..
ಸುಮ್ಮನೆ ಚಿತ್ರರಂಗದಲ್ಲಿ ಒಳಹೊಕ್ಕು ನೋಡಿದರೆ ಈ ತರಹದ್ದು ನಡೆದಿವೆ. ನಡೆಯುತ್ತಲೇ ಇರುತ್ತವೆ. ಉದಾಹರಣೆಗೆ ಇಂದ್ರಜಿತ್ ಲಂಕೇಶ್ ನಿರ್ದೇಶನದ ಐಶ್ವರ್ಯ ಚಿತ್ರದಲ್ಲಿ ಘಜಿನಿಯ ಪೂರ್ವಾರ್ಧವನ್ನು ಭಟ್ಟಿ ಇಳಿಸಲಾಗಿತ್ತು. ಈವಾಗೆನಾದರೂ ಘಜಿನಿ ರಿಮೇಕ್ ಮಾಡಬೇಕೆಂದರೆ ಹೊಸ ಕತೆ ಬರೆಯಲೇ ಬೇಕಾಗುತ್ತದೆ ..ಹಾಗೆಯೇ ಫೋನ್ ಭೂತ ಚಿತ್ರವನ್ನು ಬಾಲಿವುಡ್ ನಲ್ಲಿ ಕದ್ದು ಸಿನಿಮಾ ಮಾಡಿದ್ದರು, ಗೊತ್ತಾದ ಮೂಲ ಚಿತ್ರದ ನಿರ್ಮಾಪಕರು ಬಿಡುಗಡೆ ತಡೆ ಹಿಡಿದು ಕೋಟ್ಯಾಂತರ ರೂಪಾಯಿ ಪೀಕಿಸಿದ್ದರು, ಆದರೆ ಅಧಿಕೃತ ಹಕ್ಕು ಪಡೆದಿದ್ದ ಅಸಲಿ ನಿರ್ಮಾಪಕರು ಆ ಸಿನೆಮಾವನ್ನು ನಿರ್ಮಾಣ ಮಾಡಲೇ ಇಲ್ಲ. ಹಾಗೆಯೇ ಗೊತ್ತೇ ಇರದ ಸಂಗತಿಯೆಂದರೆ ಅದನ್ನು ಕನ್ನಡದಲ್ಲಿಯೂ ಶರಣ್ ಅಭಿನಯದಲ್ಲಿ ಸುಂದರಿ ಗಂಡ ಸದಾನಂದ ಎಂದು  ಪುನರ್ನಿರ್ಮಾಣ ಮಾಡಲಾಗಿತ್ತು. ಆದರೆ ಕನ್ನಡದ ಸುದ್ದಿ ಹಾಲಿವುಡ್ ತಲುಪಲೇ ಇಲ್ಲ, ಹಾಗಾಗಿ ಕನ್ನಡವರು ಸೇಫ್.ಹಾಗೆಯೇ ಆಪ್ತಮಿತ್ರಕ್ಕೂ ಮುನ್ನ ಸಾಗರಿ ಬಿಡುಗಡೆಯಾಗಿತ್ತು. ಅದನ್ನು ಅಧಿಕೃತ ಹಕ್ಕಿನ ಜೊತೆಯಲ್ಲಿ ಮತ್ತೆ ನಿರ್ಮಿಸಿದ್ದು ಇತಿಹಾಸ.
ಜಗತ್ತಿನ ಎಲ್ಲಾ ಕಡೆಯಲ್ಲಿಯೂ ಇದೆ ನಡದೇ ಇದೆ. ಹಾಗೆಯೇ ದೃಶ್ಯಗಳು ಅನಾಮತ್ತಾಗಿ ಲಿಫ್ಟ್ ಆಗಿ ಬೇರೆ ಚಿತ್ರಗಳಲ್ಲಿ ಕಾಣಸಿಗುತ್ತವೆ. ಅದಕ್ಕೆ ಯಾರು ರೈಟ್ ಸ್ ತೆಗೆದುಕೊಳ್ಳುತ್ತಾರೆ ಹೇಳಿ. ನಾನೊಂದು ರಿಮೇಕ್ ಸಿನಿಮಾಕ್ಕೆ ಸಂಭಾಷಣೆ ಬರೆಯುತ್ತಿದ್ದೆ, ಹಕ್ಕುಗಳನ್ನು ತಂದಿದ್ದ ನಿರ್ಮಾಪಕರು, ನಿರ್ದೇಶಕರು,, ಅದರ ಡಿವಿಡಿ ಕೊಟ್ಟು ಸಿನಿಮಾ ನೋಡಿ, ಚರ್ಚಿಸಿ ಬರೆಯಲು ಕುಳಿತುಕೊಂಡಾಗ ಗೊತ್ತಾದದ್ದು ಆ ಚಿತ್ರದ ಎಲ್ಲಾ ಹಾಸ್ಯ ದೃಶ್ಯಗಳೂ ಈಗಾಗಲೇ ಕನ್ನಡದಲ್ಲಿ ಬಂದಿದೆ ಎಂಬುದಾಗಿ. ಅದೂ ನಾಲ್ಕಾರು ಸಿನೆಮಾಗಳಲ್ಲಿ. ಕೇಸ್ ಹಾಕಿಕೊಂಡು ಓಡಾಡಲು ಸಾಧ್ಯವಾಗುತ್ತದೆಯೇ..? ಹಾಗಾಗಿ ಬೇರೆ ಹಾಸ್ಯ ದೃಶ್ಯಗಳನ್ನ ರಚಿಸೋಣ ಎಂದುಕೊಂಡೆವು. ಅಷ್ಟರಲ್ಲಿ ನಿರ್ದೇಶಕರು ಬೇರೆ ಸಿನಿಮಾದ ಹಾಸ್ಯ ದೃಶ್ಯಗಳನ್ನು ಎತ್ತಿಬಿಡೋಣ ಎನ್ನುವ ಅದ್ಭುತ ಐಡಿಯಾ ಕೊಟ್ಟರು. ನಾವು ಸುಮ್ಮನಿದ್ದೆವು.

Tuesday, January 3, 2017

ನಾಟ್ ಸೇಫ್ ಟು ಬಿ ಫ್ರೀ

ಹಾಗೆ ನೋಡಿದರೆ ಅಂತರರಾಷ್ಟ್ರೀಯ ಚಿತ್ರೋತ್ಸವಗಳು ಚಿತ್ರಕರ್ಮಿಗಳಿಗೆ ಸಂಭ್ರಮ ತರದೇ ಇರವು. ಆದರೆ ಸಿನೆಮರಂಗದಲ್ಲಿ ಇಷ್ಟು ವರ್ಷ ಸಕ್ರಿಯನಾಗಿದ್ದರೋ ಅದೇಕೋ ಏನೋ ನನಗೆ ಚಿತ್ರೋತ್ಸವ ಎಂದರೆ ಕಿಂಚಿತ್ತೂ ಇಷ್ಟವಿಲ್ಲ. ಯಾವು ಯಾವುದೋ ತಲೆಬುಡ ಅರ್ಥವಾಗದೆ, ಮೇಲಾಗಿ ಮನರಂಜನೆ ಇರದ ಸಿನಿಮಾಗಳು, ಅದನ್ನೇ ತೀರಾ ಗಂಭೀರವಾಗಿ ಬೋರಾದರೂ ಅಕ್ಕಪಕ್ಕದವರು ಏನಾದರೂ ಅಂದುಕೊಳ್ಳುತ್ತಾರೆ ಎನ್ನುವ ಭಯದಿಂದ ನೋಡುವ ಕ್ಲಾಸ್ ಪ್ರೇಕ್ಷಕರು,..ನನಗೆ ನಗುತರಿಸುತ್ತಾರೆ. ಇರಲಿ. ಆದರೂ ಒತ್ತಾಯದ ಮೇರೆಗೆ ನಾನು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸುತ್ತೇನೆ. ಸುಮ್ಮನೆ ಅನ್ಯಮನಸ್ಕನಾಗಿ ಸಿನಿಮಾ ನೋಡುತ್ತೇನೆ.
ಈ ಸಾರಿ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅದ್ಯಾವುದೋ ಭಾಷೆಯೇ ಅರ್ಥವಾಗದ ಸಿನಿಮಾ ನೋಡಿ, ಅದೂ ಸಾಯುವಷ್ಟು ಬೋರಾದಾಗ ಯಾರು ಏನಾದರೂ ಅಂದುಕೊಳ್ಳಲಿ ಎಂದು ಎದ್ದು ಹೊರಬಂದಿದ್ದೆ. ಆಗ ನನ್ನ ಕಣ್ಣಿಗೆ ಬಿದ್ದದ್ದು ಅವಳು. ಒಂದೆರೆಡು ಸಿನೆಮಾಗಳಲ್ಲಿ ನಟಿಸಿದ್ದ ನಟಿ. ಒಂದು ಬಿಡುಗಡೆಯಾಗಿತ್ತು. ಮತ್ತೊಂದು ಬಿಡುಗಡೆಯಾಗಿರಲಿಲ್ಲ. ಅಗತ್ಯಕ್ಕಿಂತ ಹೆಚ್ಚಾಗಿ ತುಂಡುಡುಗೆ ಹಾಕಿಕೊಂಡಿದ್ದಳು. ಹಾಗಾಗಿ ಅಲ್ಲಿ ಓಡಾಡುವರು ಒಮ್ಮೆ ಅವಳ ಕಡೆಗೆ ನೋಡಿಯೇ ಹೋಗುತ್ತಿದ್ದರು. ಅಷ್ಟರಲ್ಲಿ ಅಲ್ಲಿದ್ದ ಕೆಲವು ಸಿನಿಮಾ ಪೋಸ್ಟರ್ಗಳ ಮುಂದೆ, ನಿರ್ದೇಶಕರ ಜೊತೆಯಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದಳು. ಆ ತಕ್ಷಣಕ್ಕೆ ಅವಳ ಅಂದ ಚಂದ ನನ್ನನ್ನು ಸೆಳೆದುಬಿಟ್ಟಿತ್ತು. ಹೋಗಿ ಅವಳನ್ನು ಪರಿಚಯ ಮಾಡಿಕೊಳ್ಳುವುದು ಕಷ್ಟವಿರಲಿಲ್ಲ ಬಿಡಿ. ನಾನೂ ಸಿನಿಮಾರಂಗದಲ್ಲಿಯೇ ಇರುವವನು ತಾನೇ. ಅದರಲ್ಲೂ ನಿರ್ದೇಶಕ ಎಂದರೆ ಆಕೆ ಆತ್ಮೀಯಳಾಗದೆ ಇರುತ್ತಾಳೆಯೆ..? ನೀವೇನೆಂದು ಅಂದುಕೊಳ್ಳುತ್ತೀರೋ ಆ ಕ್ಷಣಕ್ಕೆ ಅವಳ ಸಂಭ್ರಮ ನೋಡಿ, ಅವಳ ಸುತ್ತಮುತ್ತಲಿನ ಜನರನ್ನು ನೋಡಿ, ಅಕಸ್ಮಾತ್ ಆಕೆ ತಟ್ಟನೆ ಬಿದ್ದುಬಿಟ್ಟರೆ ಈ ಜನ ಹೇಗೆ ಪ್ರತಿಕ್ರಿಯಿಸಬಹುದು ಎನ್ನುವ ಆಲೋಚನೆ ಬಂದೆ ಬಿಟ್ಟಿತು. ಅಕಸ್ಮಾತ್ ಸತ್ತು ಹೋದರೆ.. ಮನಸ್ಸು ಇನ್ನೂ ಮುಂದಕ್ಕೆ ಯೋಚಿಸಿತು. ಅವಳು ಕೊಲೆಯಾಗಿ ಬಿಟ್ಟರೆ...ಇಲ್ಲೆಲ್ಲಾ ಅಲ್ಲೋಲಕಲ್ಲೋಲ ಆಗಿಬಿಡಬಹುದಲ್ಲ ಎನಿಸಿತು. ಸುಮ್ಮನೆ ಅಡ್ಡಾಡುವುದಕ್ಕಿಂತ ನಾನೇ ಕೊಲೆ ಮಾಡಿಬಿಟ್ಟರೆ ಹೇಗೆ.? ಅದೊಂತರ ಥ್ರಿಲ್, ಜೊತೆಗೆ ಪೊಲೀಸರಿಗೆ ಚಾಲೆಂಜ್.. ಏಕೆಂದರೆ ಅವಳ ಮೊಬೈಲ್, ಗೆಳೆಯರು, ಏನೇ ಹುಡುಕಿದರೂ ನಾನು ಸಿಗುವ ಅವಕಾಶ ಇಲ್ಲವೇ ಇಲ್ಲ. ಏಕೆಂದರೆ ಆಕೆ ಪರಿಚಯವೇ ಇಲ್ಲವಲ್ಲ. ಅದರ ಜೊತೆಗೆ ಪೊಲೀಸರು ಮೊದಲಿಗೆ ಕೊಲೆಗೆ ಮೋಟಿವ್ ಏನು ಎಂಬುದಾಗಿ ತಲೆ ಕೆಡಿಸಿಕೊಳ್ಳುತ್ತಾರೆ. ಅಥವಾ ಆಕೆಯ ಮೇಲೆ ಅತ್ಯಾಚಾರ ಪ್ರಯತ್ನ ನಡೆದಿದೆಯೇ ಎಂದೂ ಯೋಚಿಸುತ್ತಾರೆ, ಆದರೆ ಅದ್ಯಾವುದೂ ಸಿಕ್ಕದೆ ಇದ್ದಾಗ ಅವರ ತಲೆ ಮೊಸರುಗಡಿಗೆಯಾಗದೆ ಇರದಲ್ಲವೇ..?
ಅದೇಕೋ ಏನೋ ಇಷ್ಟು ಆಲೋಚನೆ ಬಂದದ್ದೆ ಕೊಂದೇ ಬಿಡುವ ಎನಿಸಿತು. ಕೊಂದು ಪೊಲೀಸರ ಪ್ರತಿಯೊಂದು ಚಲನೆಯನ್ನು ಗಮನಿಸಿ, ಅದಕ್ಕೆ ಪ್ರತಿತಂತ್ರರೂಪಿಸುತ್ತಾ ಹೋದರೆ ಅದೆಷ್ಟು ಥ್ರಿಲ್ಲಿಂಗ್ ಆಗಿರುತ್ತದಲ್ಲವೇ..? ಆದರೆ ಎಲ್ಲೂ ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಡಬಾರದು.
ಅಷ್ಟೇ. ಹಾಗನ್ನಿಸಿದ ಎರಡೇ ಘಂಟೆಗಳಲ್ಲಿ ಆಕೆಯನ್ನು ನನ್ನ ಕೋಣೆಗೆ ಬರುವಂತೆ ಮಾಡಿ, ಕೊರಳಿಗೆ ವೈರ್ ಬಿಗಿದು ಕೊಲೆ ಮಾಡಿಯೇ ಬಿಟ್ಟಿದ್ದೆ. ಆಕೆ ಅರಳುಕಣ್ಣುಗಳಿಂದ ಕೋಣೆಯೊಳಗೆ ಬಂದದ್ದೆ ನಿಮಿಷಗಳಲ್ಲಿ ಹೆಣವಾಗಿದ್ದಳು. ಆದರೆ ಸಣ್ಣಕ್ಕೆ ಬಳ್ಳಿಯಂತಿದ್ದ ಆಕೆಯ ಶಕ್ತಿ ನನಗೆ ಅಚ್ಚರಿ ತರಿಸಿತ್ತು. ಕೊಲೆ ಮಾಡಿದ್ದಾಯಿತು. ಇಲ್ಲಿಂದ ಗೇಮ್ ಶುರುಮಾಡಬೇಕು ಎನಿಸಿತು. ಅಷ್ಟರಲ್ಲಿ ಕಾಲಿಂಗ್ ಬೆಲ್ ರಿಂಗಣಿಸಿತು.
ಬೆಂಗಳೂರಿನ ಆಚೆಗೆ ಹೋದಾಗಲೆಲ್ಲಾ ನನ್ನ ಕೈಹಿಡಿಯುವುದು ಪುಸ್ತಕಗಳೇ. ಅದರಲ್ಲೂ ಜೇಮ್ಸ್ ಹಾಡ್ಲಿ ಚೇಸ್. ಆತನ “ನಾಟ್ ಸೇಫ್ ಟು ಬಿ ಫ್ರೀ” ಕಾದಂಬರಿ ಶುರುವಾಗುವುದು ಹೀಗೆ. ಮಾನಸಿಕವಾಗಿ ಆರೋಗ್ಯಕರವಾಗಿಲ್ಲದ ದೊಡ್ಡ ಸಿನಿಮಾ ನಿರ್ಮಾಪಕರ ಮಗ, ವಿನಾಕಾರಣ ಕೊಲೆಯೊಂದನ್ನು ಮಾಡಿಬಿಡುತ್ತಾನೆ. ಮುಂದೆ ...?

Thursday, October 27, 2016

ಅಪ್ಪ ಅಂದರೆ ಏನೋ ಹರುಷವು...2

ನಮ್ಮ ಸಿನಿಮಾಕ್ಕೆ ಮಕ್ಕಳು ಬೇಕಾಗಿದ್ದಾರೆ ಎಂದಾಗ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದ ಎಲ್ಲಾ ಅಪ್ಪಂದಿರಲ್ಲಿ ನನ್ನಪ್ಪನ ಪ್ರತಿಬಿಂಬ ಕಾಣುತ್ತಿತ್ತು. ಮಕ್ಕಳು ಏನಾದರೂ ಮಾಡಿದರೆ ಅವರ ಖುಷಿ ಹೇಳತೀರದು.ನಮ್ಮದೇನು ಮುಗಿಯಿತಲ್ಲ, ಮಕ್ಕಳ ಭವಿಷ್ಯ ಸರಿಯಾದರೆ ಸಾಕು ಎನ್ನುವುದು ಎಲ್ಲಾ ಪ್ರತಿಯೊಬ್ಬ ಅಪ್ಪನ ಮನೋಭಾವ. ಕೆಲವು ವ್ಯತಿರಿಕ್ತ ಜನರೂ ಇರಬಹುದು. ಅದಿರಲಿ. ನಾನು ಓದುತ್ತಿದ್ದೆ. ಚೆನ್ನಾಗಿಯೇ. ಪಾಠಕ್ಕಿಂತ ಹೆಚ್ಚಾಗಿ ಕತೆ ಕಾದಂಬರಿ ಕವನಗಳನ್ನು. ನಮ್ಮಪ್ಪ ಮಾಸ್ತರರಾದ್ದರಿಂದ ಮನೆಯಲ್ಲಿ ಪುಸ್ತಕಗಳಿಗೆ ಕೊರತೆಯಿರಲಿಲ್ಲ. ಕೇವಲ ನಾಲ್ಕನೆಯ ತರಗತಿ ಓದಿದ ನನ್ನಮ್ಮ ತುಂಬಾ ಪುಸ್ತಕಗಳನ್ನು ಓದುತ್ತಿದ್ದರು. ಹಾಗಾಗಿ ನಾನು ಚಿಕ್ಕಂದಿನಲ್ಲಿಯೇ ಕಾದಂಬರಿ ಓದುವುದನ್ನು ರೂಢಿಸಿಕೊಂಡು ಬಿಟ್ಟಿದ್ದೆ. ನಾನು ಮೊದಲ ಕಾದಂಬರಿ ಓದಿದ್ದು ಅರ್ಪಣೆ ಎಂಬುದು. ಅದರ ಲೇಖಕರ ಹೆಸರು ನೆನಪಿಲ್ಲ. ಆದರೆ ಬರೀ ರೇಡಿಯೋ ಒಂದೇ ಮನರಂಜನೆಯ ಸಾಧನವಾಗಿದ್ದ ಆ ಸಮಯದಲ್ಲಿ ಪುಸ್ತಕಗಳು ಭರಪೂರ ಮನರಂಜನೆ ಒದಗಿಸುತ್ತಿದ್ದದ್ದು ಸತ್ಯ. ನನ್ನ ಐದನೆಯ ತರಗತಿಯಿಂದ ಆರನೆಯ ತರಗತಿ ವರೆಗಿನ ಒಂದು ವರ್ಷದ ಅವಧಿಯಲ್ಲಿ ನಾನು ಭೈರಪ್ಪನವರ ಹತ್ತಕ್ಕೂ ಹೆಚ್ಚು  ಕಾದಂಬರಿಗಳನ್ನು ಓದಿಬಿಟ್ಟಿದ್ದೆ. ಆನಂತರ ಕೈಗೆ ಸಿಕ್ಕ ಪುಸ್ತಕಗಳು, ಕಾದಂಬರಿಗಳು ಓದುತ್ತಿದ್ದೆ. ನಮ್ಮಪ್ಪ ಓದು ಓದು ಅದರಿಂದ ಮನಸ್ಸು ವಿಶಾಲವಾಗುತ್ತದೆ ಎನ್ನುತ್ತಿದ್ದರು.
ಆದರೆ ಓದುತ್ತಾ ಓದುತ್ತಾ ಬರೆಯುವ ಮನಸ್ಸಾಯಿತು. ಹಾಗಾಗಿ ಏಳನೆಯ ತರಗತಿಯಲ್ಲಿ ಮೊದಲ ಕತೆ ಬರೆದೆ. ಸಂಕೋಚದಲ್ಲಿಯೇ ನಮ್ಮಪ್ಪನಿಗೆ ತೋರಿಸಿದೆ. ನಮ್ಮಪ್ಪ ಅದೆಷ್ಟು ಖುಷಿ ಪಟ್ಟರೆಂದರೆ ಕುಣಿದಾಡಿಬಿಟ್ಟರು. ಅವರ ಓರಗೆಯ ಗೆಳೆಯರು ನಿನ್ನ ಮಗ ತರಗತಿಯ ಪುಸ್ತಕಗಳಿಗಿಂತ ಬೇರೆ ಪುಸ್ತಕಗಳನ್ನೇ ಓದುತ್ತಾನೆ, ಹೀಗಾದರೆ ಅವನು ಓದಿನಲ್ಲಿ ಹಿಂದುಳಿದು ಬಿಡುತ್ತಾನೆ ಎಂದರೆ, ರಿಸಲ್ಟ್ ಬರಲಿ ನೋಡೋಣ ಎಂದು ತುಂಬು ಭರವಸೆಯಿಂದ ಹೇಳುತ್ತಿದ್ದರು. ಅವರ ಭರವಸೆಯನ್ನು ನಾನು ಕೊನೆಯವರೆಗೂ ಉಳಿಸಿಕೊಂಡಿದ್ದೆ.
ನನ್ನ ಮೊದಲ ಕತೆ ದಿನಪತ್ರಿಕೆಯಲ್ಲಿ ಪ್ರಕಟವಾಯಿತು, ಅದು ನಮ್ಮ ಮನೆಗೆ ಅಂಚೆಯ ಮೂಲಕ ತಲುಪಿತು. ನಾನು ನನ್ನ ಕತೆಯನ್ನು ಪತ್ರಿಕೆಗೆ ಕಳುಹಿಸಿದ್ದನ್ನು ಹೇಳಿರಲಿಲ್ಲ. ದಿನಪತ್ರಿಕೆ ಅಂಚೆಯ ಮೂಲಕ ಮನೆಗೆ ಬಂದಾಗ ಎಲ್ಲರಿಗೂ ಆಶ್ಚರ್ಯ ಮತ್ತು ಗಾಬರಿ. ಅದರಲ್ಲಿದ್ದ ನನ್ನ ಕತೆ ನೋಡಿ, ನಮ್ಮಪ್ಪ ಅಕ್ಷರಶಃ ಕುಣಿದಾಡಿಬಿಟ್ಟರು. ತಮ್ಮ ಶಾಲೆಯ ಸಹೋದ್ಯೋಗಿಗಳಿಗೆ ತೋರಿಸಿ ಕತೆಯನ್ನು ಓದಿ ಹೇಳಿಯೇಬಿಟ್ಟರು. ಈ ವಯಸ್ಸಿಗೆ ನಿಮ್ಮ ಮಗನಿಗೆ ಇದೆಲ್ಲಾ ಹೇಗೆ ಬಂತು ಎನ್ನುವ ಮೆಚ್ಚುಗೆಯ ಮಾತುಗಳು ಅವರನ್ನು ಅಟ್ಟಕ್ಕೇರಿಸಿದ್ದವು. ಅದೊಂದು ಪತ್ರಿಕೆಯನ್ನು ಜತನದಿಂದ ತಮ್ಮ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದರು. ಮನೆಗೆ ನೆಂಟರು ಬಂದರೆ, ದಾರಿಯಲ್ಲಿ ಯಾರಾದರೂ ಸಿಕ್ಕರೆ, ಹೀಗೆ ಎಲ್ಲರಿಗೂ ಹೆಮ್ಮೆಯಿಂದ ಪತ್ರಿಕೆಯನ್ನು ತೋರಿಸುತ್ತಿದ್ದರು. ಕೇಳಿದವರಿಗೆ ಅದರ ಜೆರಾಕ್ಸ್ ತೆಗೆಸಿಕೊಟ್ಟಿದ್ದರು. ನಮ್ಮಪ್ಪನ ಸಂಭ್ರಮದ ಅತಿರೇಕಕ್ಕೆ ಅಮ್ಮ ಒಮ್ಮೆ ಸಾಕು ಬಿಡಿ, ಅದೇನು ಎಲ್ಲರಿಗೂ ತೋರಿಸಿಕೊಂಡು ಓಡಾಡ್ತೀರಿ ಎಂದದ್ದಕ್ಕೆ ಅಮ್ಮನಿಗೆ ರೇಗಿದ್ದರು.
ನಾನು ಕಾಲೇಜಿಗೆ ಮೈಸೂರಿಗೆ ಸೇರಿಕೊಂಡೆ. ಹಾಸ್ಟೆಲ್ಲಿನಲ್ಲಿ ಮಾಡುವುದಕ್ಕೆ ಕೆಲಸವಾದರೂ ಏನಿತ್ತು. ಕತೆ ಬರೆಯುತ್ತಾ ಹೋದೆ. ವಾರಕ್ಕೆ ಎರೆಡೆರಡು ಪತ್ರಿಕೆಯಲ್ಲಿ ನನ್ನ ಕತೆಗಳು ಪ್ರಕಟವಾಗತೊಡಗಿದವು. ತಿಂಗಳ ಕಥಾ ಸ್ಪರ್ಧೆಯಲ್ಲಿ ನನಗೆ ಬಹುಮಾನಗಳು ಬರತೊಡಗಿದವು. ಅನನ್ಯ, ರಾಬಿನ್ ವೆಂಶಿ, ನಾಗೇಂದ್ರಕುಮಾರ್ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಕತೆಗಳನ್ನು ಬರೆಯತೊಡಗಿದ್ದೆ. ಪ್ರತಿ ಭಾನುವಾರ ಒಂದಲ್ಲ ಒಂದು ಪತ್ರಿಕೆಯಲ್ಲಿ ನನ್ನ ಕತೆಗಳು ಪ್ರಕಟವಾದವು. ಕರ್ನಾಟಕದ ಬಹುತೇಕ ದಿನಪತ್ರಿಕೆ, ವಾರಪತ್ರಿಕೆಗ, ಮಾಸಿಕಗಳಲ್ಲಿ ನನ್ನ ಕತೆಗಳು ಪ್ರಕಟವಾದವು. ಆದರೆ ಅದ್ಯಾವುದನ್ನು ನಾನು ಮನೆಗೆ ತಿಳಿಸಲು ಹೋಗಲೇ ಇಲ್ಲ. ಅದನ್ನು ಸಂಗ್ರಹಿಸಿ ಒಂದು ಫೈಲ್ ಮಾಡಿ ಇಡತೊಡಗಿದ್ದೆ. ಗೆಳೆಯರು ಕೇಳಿದ್ದಕ್ಕೆ ನಮ್ಮಪ್ಪ ಬರೀ ಒಂದು ಕತೆ ಪ್ರಕಟವಾಗಿದ್ದಕ್ಕೆ ಆ ಪರಿ ಸಂಭ್ರಮ ಪಟ್ಟರು, ಈ ಸಾರಿ ರಜೆಗೆ ಮನೆಗೆ ಹೋದಾಗ ಈ ಬಂಡಲ್ ಇಡ್ತೇನೆ..ಆವಾಗ ಅಷ್ಟೇ..ಎನ್ನುತ್ತಿದ್ದೆ. ನನ್ನ ಉದ್ದೇಶವೂ ಅದೇ ಆಗಿತ್ತು..ಅಷ್ಟೂ ಪ್ರಕಟಿತ ಕತೆಯನ್ನು ಅವರ ಮುಂದಿಟ್ಟು ಅವರ ಖುಷಿಯನ್ನು ನೋಡುವುದಿತ್ತು..
ಆದರೆ ಬದುಕು ದಿಕ್ಕು ಬದಲಿಸಿತ್ತು. ಅದೊಂದು ದಿನ ಅಚಾನಕ್ ಆಗಿ ನಮ್ಮಣ್ಣ ಹಾಸ್ಟೆಲ್ಲಿಗೆ ಬಂದವನು ಅಪ್ಪನಿಗೆ ಹುಷಾರಿಲ್ಲ ಎಂದದ್ದಷ್ಟೇ, ಅದಾದ ಒಂದೇ ತಿಂಗಳಿಗೆ ಅಪ್ಪ ನಮ್ಮೊಂದಿಗಿರಲಿಲ್ಲ. ನಾನು ಅಪ್ಪನಿಗಾಗಿ ಬೇಡದ ಮೂರು ವರ್ಷಗಳ ಕಾಲೇಜ್ ವ್ಯಾಸಂಗವನ್ನು ಮಾಡಿದ್ದೆ, ಸಿನಿಮಾದ ಆಸೆಯನ್ನು ಅದುಮಿಟ್ಟುಕೊಂಡಿದ್ದೆ..
ಅದೊಂದು ದಿನ ಹಾಸ್ಟೆಲ್ನಿಂದ ತೆರವು ಮಾಡಿಕೊಂಡು ಮನೆಗೆ ಬಂದು ಕತೆಗಳ ಬಂಡಲನ್ನು ಅಮ್ಮನ ಮುಂದೆ ತೆರೆದಿಟ್ಟೆ. ನಿಮ್ಮಪ್ಪ ಇದ್ದಿದ್ರೆ ಇಷ್ಟೂ ಪ್ರಕಟಣೆ ನೋಡಿ ಅದೆಷ್ಟು ಖುಷಿ ಪಡುತ್ತಿದ್ದರೋ? ಎಂದು ಕಣ್ಣೀರಾದರು. ನಾನು ಬಂಡಲನ್ನು ಹಾಗೆಯೇ ಕಟ್ಟಿ ಅಟ್ಟಕ್ಕೆ ಬೀಸಾಕಿದೆ.
ಅದಾದ ನಂತರ ನಾನು ಹೊಸ ಕತೆಯನ್ನು ಬರೆದಿಲ್ಲ. ಬರೆದರೆ ಓದುವುದಕ್ಕೆ ಓದುಗರಿರಬಹುದು, ಆದರೆ ಸಂಭ್ರಮಿಸಲು ಅಪ್ಪ ಇಲ್ಲವಲ್ಲ...