Friday, June 17, 2016

ಸೆನ್ಸಿಬಲ್ ನಿರ್ಮಾಪಕರು ಬೇಕಿದ್ದಾರೆ..

ಈವತ್ತಿನ ಮಟ್ಟಿಗೆ ಕನ್ನಡದಲ್ಲಿ ಒಂದಷ್ಟು ಒಳ್ಳೆಯ ಚಿತ್ರಗಳು ಬಿಡುಗಡೆಯಾಗಿದೆ ಎನ್ನುವುದು ಖುಷಿಯ ಸಂಗತಿಯೇ. ಹಾಗಾಗಿಯೇ ಅಂತಹ ಒಳ್ಳೆಯ ಚಿತ್ರಗಳನ್ನು ನಮಗೆ ನೀಡಿದ ನಿರ್ದೇಶಕರನ್ನು ಪ್ರಶಂಸೆ ಮಾಡುವುದು ಚಿತ್ರಪ್ರೇಕ್ಷಕರಾದ ನಮ್ಮ ಕರ್ತವ್ಯ. ಆದರೆ ಈ ಒಂದು ವಿಷಯದಲ್ಲಿ ನಾವು ನಿಜಕ್ಕೂ ಪ್ರಶಂಸಿಸಬೇಕಾದದ್ದು ನಿರ್ಮಾಪಕರನ್ನು. ನಿರ್ದೇಶಕ ಹೊಸತನವನ್ನು ಹೊಸಕತೆಯನ್ನು ಕೊಂಡೊಯ್ದಾಗ ವ್ಯಾವಹಾರಿಕವಾಗಿ ನಿರ್ಮಾಪಕ ಯೋಚನೆ ಮಾಡುವುದು ತಪ್ಪಲ್ಲ, ಆದರೆ ಕತೆಯ ಬಗ್ಗೆ ಗ್ರಹಿಸದೆ ಇರುವುದು ಸರಿಯಲ್ಲ. ನಮ್ಮಲ್ಲಿ ಅಂತಹ ಸೂಕ್ಷ್ಮಗ್ರಾಹಿ ನಿರ್ಮಾಪಕರ ಸಂಖ್ಯೆ ಕಡಿಮೆಯೇ.
ನಾನು ಒಬ್ಬ ನಿರ್ಮಾಪಕರಿಗೆ ಕತೆ ಹೇಳಲು ಹೋದಾಗ ಅವರು ಅರ್ಧ ಘಂಟೆ ಅದೂ ಇದೂ ಮಾತಾಡಿ ಕೊನೆಗೆ "ನೋಡಪ್ಪ..ಒಂದ್ ಕೆಲಸ ಮಾಡು.. ಅವರಿಗೆ ಸ್ಟೋರಿ ಹೇಳಿ ಒಪ್ಪಿಸಿಬಿಡು..ಅವರದ್ದು ಕಾಲ್ ಶೀಟ್ ತಂದ್ಬಿಡು..ಸಿನಿಮಾ ಮಾಡೋಣ .." ಅಂದರು. ನಾನು ಆಯ್ತು ಸಾರ್, ಆದರೂ ಒಮ್ಮೆ ಕತೆ ಕೇಳಿ ಎಂದದ್ದಕ್ಕೆ "ನಮಗೆ ಅದೆಲ್ಲಾ ಅರ್ಥ ಆಗಲ್ಲ ಗುರು.." ಎಂದು ಸಾರಾಸಗಟಾಗಿ ತಿರಸ್ಕರಿಸಿಬಿಟ್ಟರು. ಆಮೇಲೆ ಅದೂ ಇದೂ ಮಾತಾಡುತ್ತಾ ಅಲ್ಲೇ ಟಿವಿಯಲ್ಲಿ ಬರುತ್ತಿದ್ದ ತಮಿಳು ಸಿನಿಮಾ ಹೊಗಳುತ್ತಾ ಏನ್ ಸಿನಿಮಾ ಮಾಡ್ತಾರೆ ಇವ್ರು ಎಂದು ಲೋಚ್ಚಿಕ್ಕಿದರು. ನಾನು ಅಲ್ಲೇ ಹೇಳಿದೆ, ಸಾರ್ ಅಲ್ಲಿನ ನಿರ್ಮಾಪಕರು ಸ್ವಲ್ಪನಾದ್ರೂ ಕತೆ ಕೇಳ್ತಾರೆ, ಆದ್ರೆ ನೀವು ಕತೆಗಿಂತ ಸ್ಟಾರ್ ಗೆ ಹೆಚ್ಚು ಮಹತ್ವ ಕೊಡ್ತೀರಲ್ವಾ? ಹಾಗಾಗಿ ಸ್ಟಾರ್ ನಟನನ್ನು ಒಪ್ಪಿಸದಿದ್ದರೆ ಸಿನಿಮಾ ಆಗಲ್ಲ ಎನ್ನುವುದಾದರೆ ಸ್ಟಾರ್ ಗಳ ಹಿತಾಸಕ್ತಿಗೆ ತಕ್ಕಂತೆ ಕತೆ ಬದಲಾವಣೆ ಮಾಡಬೇಕಾಗುತ್ತದೆ.. ಎಂದೆ. ಹೇಳೋದ್ ಸುಲಭ ಕಣ್ರೀ ಸಿನಿಮಾಕ್ಕೆ ಹಣ ಹಾಕುವಾಗ ಗೊತ್ತಾಗುತ್ತೆ , ನಿಮಗೇನು ಗೊತ್ತು.. ನಿರ್ಮಾಪಕ  ಪೈಸೆ ಪೈಸೆ ಗೆ ಎಷ್ಟು ಒದ್ದಾಡ್ತಾನೆ ಅಂತ ಎಂದವರು ಆ ನಿಟ್ಟಿನಲ್ಲಿ  ನಷ್ಟ ಅನುಭವಿಸಿದವರ  ಹೆಸರುಗಳ ಪಟ್ಟಿಯನ್ನೇ ನನ್ನ ಮುಂದಿಟ್ಟರು. ನಾನು ಅವರು ನಿರ್ಮಿಸಿದ  ಚಿತ್ರಗಳ ಪಟ್ಟಿಯನ್ನು ಅವರ ಮುಂದಿಟ್ಟು ಅದರ ಬಗ್ಗೆ ಮಾತಾಡಿದೆ..ಇದೆಲ್ಲಾ ಸ್ವಯಂಕೃತ ಸರ್..ಅದೇಕೆ ಈ ಕತೆಯನ್ನು  ಸಿನಿಮಾ ಮಾಡಿದ್ದು, ಅದ್ಯಾಕೆ ಅದನ್ನು  ಹಾಗೆ ತೆಗೆದದ್ದು ..ನಿರ್ಮಿಸುವ ಇದರ ಬಗ್ಗೆ ಯಾಕೆ ಯೋಚಿಸಲಿಲ್ಲ, ಸೋಲೂ ಗೆಲುವುಗಳನ್ನೂ ಬ್ರಹ್ಮನೂ ಯೋಜಿಸಲಾರನೇನೋ.. ಆದರೆ ಒಂದು  ಅಂದಾಜಂತೂ ಮಾಡಬಹುದು..ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನ್ನುವುದನ್ನು ಗ್ರಹಿಸಿಕೊಳ್ಳಬಹುದು. ಇಷ್ಟೆಲ್ಲದರ ನಂತರದ್ದು ದೈವೇಚ್ಛೆ ಎನ್ನಬಹುದೇನೋ..? ಆದರೆ  ಅದಾವುದನ್ನು  ಮಾಡದೆ  ಒಂಟಿ ಕಣ್ಣಲ್ಲಿ ಸಿನಿಮಾ ಮಾಡಿ ಕಳೆದುಕೊಂಡು ಚಿತ್ರಜಗತ್ತೆ ಸರಿಯಿಲ್ಲ ಎನ್ನುವ ನಿರ್ಣಯದಿಂದ ಮೊದಲ್ಗೊಂಡು  ನಾನಾಕಾರಣಗಳನ್ನೂ ಪಟ್ಟಿ ಮಾಡುತ್ತಾ ಹೋದರೆ ಹೇಗೆ?
ಇದನ್ನು ಯಾಕೆ ಹೇಳಿದೆ ಎಂದರೆ ಒಬ್ಬ ನಿರ್ಮಾಪಕ ಕತೆಯನ್ನು ಕೇಳಿ, ಚರ್ಚಿಸಿ ಸಿನಿಮಾ ಮಾಡಿದರೆ ಅದು ಸಂತಸದ ಸಂಗತಿ. ಅಥವಾ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಅದಕ್ಕೊಬ್ಬ ಸಾಹಿತ್ಯ, ಸಿನಿಮಾ ಪರಿಣತರನ್ನು ಕೂರಿಸಿ ಆತನಿಂದ ಬರುವ ಕತೆಗಳನ್ನು ಪರಾಮರ್ಷಣೆ ಮಾಡಿಸಿದರೆ ಒಳ್ಳೆಯದು. ಹಾಲಿವುಡ್ ನಲ್ಲಿ ಇದಾಗುತ್ತದೆ. ಮಾರುಕಟ್ಟೆಗೆ ಬಂದ ಹೊಸ ಹೊಸ ಕಾದಂಬರಿಗಳನ್ನು  ಆ ಚಿತ್ರಸಂಸ್ಥೆ ಬರಹಗಾರರಿಂದ ನೂರಾರು ಪುಟಗಳ  ಬರಹವನ್ನು ಹತ್ತಾರು  ಪುಟಕ್ಕೆ  ಸಂಕ್ಷಿಪ್ತಗೊಳಿಸುತ್ತದೆ. ಆನಂತರ ಅದು ಸಿನಿಮಾಕ್ಕೆ  ಯೋಗ್ಯವೇ ಎನ್ನುವುದನ್ನು  ಕಂಪನಿಯ ಸೃಜನಶೀಲರು ಚರ್ಚಿಸುತ್ತಾರೆ. ಹಾಗಾಗಿಯೇ ಬಹುತೇಕ ಬೆಸ್ಟ್ ಸೆಲ್ಲರ್ ಎನಿಸಿಕೊಳ್ಳುವ ಪುಸ್ತಕಗಳು ಅಲ್ಲಿ ಸಿನಿಮಾ ರೂಪ ತಾಳುತ್ತವೆ. ಆದರೆ ನಮ್ಮಲ್ಲಿ ಚಿತ್ರನಿರ್ಮಾಣ ಸಂಸ್ಥೆಯಲ್ಲಿ ಅವರನ್ನು ಹೊರತುಪಡಿಸಿ ಬೇರೆಯವರೆಲ್ಲಾ ಇದ್ದಾರೆ, ಕಾದಂಬರಿ  ಕಮರ್ಷಿಯಲ್ ಗೆ ಆಗ್ಬರಲ್ಲ ಬಿಡಪ್ಪ  ಎಂದು ಸುರುವಿನಲ್ಲಿಯೇ ರಾಗ ಎಳೆದುಬಿಡುತ್ತಾರೆ. ಹಾಗೆಯೇ ಅಂತಹ ಕ್ರಿಯೇಟಿವ್  ಹೆಡ್ ಕುರ್ಚಿ ಸೃಷ್ಟಿಸಿ ಅದಕ್ಕೊಬ್ಬ ಸೂಕ್ತ ವ್ಯಕ್ತಿಯನ್ನು  ಕೂರಿಸೋಣ ಎಂದುಕೊಂಡರೆ ನಮ್ಮಲ್ಲಿ ಸಿಗುವವರು ತೀರಾ ಕಡಿಮೆಯೇ. ಈವತ್ತು  ನಮ್ಮಲ್ಲಿ ಚಿತ್ರಸಾಹಿತಿ,  ಛಾಯಾಗ್ರಹಾಕ, ನೃತ್ಯ ನಿರ್ದೇಶಕ, ನಿರ್ಮಾಪಕ, ಸಂಕಲನಕಾರ, ಸಾಹಸ ನಿರ್ದೇಶಕ .. ಹೀಗೆ  ಯಾರೂ  ಅವರು ಅವರಾಗಿಯೇ ಉಳಿದಿಲ್ಲ..ಅವರು ಒಂದಲ್ಲ ಒಂದು ದಿನ ನಿರ್ದೇಶಕನ ಕುರ್ಚಿ ಏರಿ ಸುಮ್ಮನಾಗಿಬಿಡುತ್ತಾರೆ. ಹಾಗಾಗಿಯೇ ನಮ್ಮಲ್ಲಿ ಒಂದೊಳ್ಳೆ ತಂತ್ರಜ್ಞ ತಂತ್ರಜ್ಞನಾಗಿಯಷ್ಟೇ ಉಳಿಯದೆ  ನಿರ್ದೇಶಕನ ಟೊಪ್ಪಿಗೆ ಧರಿಸುವ ಹಪಾಹಪಿ ತೋರಿಸಿ ಅವರ ನೈಪುಣ್ಯತೆಯಿದ್ದ  ವಿಭಾಗದಿಂದ  ಜಾರಿ ಹೋಗಿರುವ ಉದಾಹರಣೆಗಳಿವೆ. ಹಾಗಾಗಿಯೇ ನಮ್ಮಲ್ಲೀಗ  ಚಿ.ಉದಯಶಂಕರ್, ವರದಪ್ಪ  ಅಂತಹ ಮಹಾನ್ ಕಥೆಯ ತೀರ್ಪುಗಾರರು ಕಡಿಮೆ ಅಥವಾ ಇಲ್ಲವೇ ಇಲ್ಲ. ಹಾಗಾಗಿಯೇ  ಈ ಸಾಧ್ಯತೆಗಳೆಲ್ಲಾ ಕನ್ನಡದ ಮಟ್ಟಿಗೆ ಕಡಿಮೆಯೇ. ಅದರಲ್ಲೂ ಈವತ್ತು ನಿರ್ಮಾಪಕರ ಸಾಲಿನ ಬಹುತೇಕರು ಕತೆ ಕೇಳಿ ಸಿನಿಮಾ ಮಾಡುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ಸ್ಟಾರ್ ನಟನ ಕಾಲ್ ಶೀಟ್ ಅಥವಾ ರಿಮೇಕ್ ಹಕ್ಕುಗಳ ಮೇಲೆಯೇ ಸಿನಿಮಾ ಮಾಡುವುದಕ್ಕೆ ಮುನ್ನುಗ್ಗುತ್ತಾರೆ. ನಿರಂತರವಾಗಿ ಸಿನಿಮಾ  ಮಾಡುವ, ಅದರ ಹೊರಾತಾಗಿ  ಬೇರೇನೂ ಮಾಡದ  ಚಿತ್ರ  ನಿರ್ಮಾಪಕರುಗಳು  ಹೊಸತನ, ಹೊಸ ಅಲೆಯತ್ತ  ತಲೆ ಕೆಡಿಸಿಕೊಳ್ಳದೆ ತಮ್ಮ  ಎಂದಿನ  ಹಾದಿಯಲ್ಲಿ  ಮುನ್ನುಗ್ಗುತ್ತಿರುವುದು ಮತ್ತು ಹೊಸ ಪ್ರಯೋಗಗಳನ್ನು ಹೊಸಬರಷ್ಟೇ[ಬಹುತೇಕ] ಮಾಡುತ್ತಿರುವುದು ಕಣ್ಮುಂದಿರುವ ಸಂಗತಿ.
ಉದಾಹರಣೆಗೆ ತಿಥಿಯಂತಹ ಕತೆಯನ್ನು ಮಾಮೂಲಿ ನಿರ್ಮಾಪಕರ ಮುಂದೆ ಹರವಿದ್ದರೆ ಅವರು ಹೌಹಾರದೆ ಇರುತ್ತಿದ್ದರೆ..? ಅಯ್ಯೋ ಗುರುವೇ ಇದು ನೆಗೆಟಿವ್ ಟೈಟಲ್...ಎಲ್ಲಿ ಹೋಗುತ್ತೆ ಗುರುವೇ ಅನ್ನುವುದರಿಂದಲೇ ಪ್ರಾರಂಭಿಸುತ್ತಿದ್ದರು. ಅವರ ಲೆಕ್ಕಾಚಾರಗಳೇ  ಬೇರೆ ಇರುತ್ತವೆ. ಮುಂದಿನವಾರದಿಂದ  ನಿಮ್ಮ ಮೆಚ್ಚಿನ ಚಿತ್ರಮಂದಿರದಲ್ಲಿ  ತಿಥಿ ಅಂತಲೋ, ಪ್ರೇಕ್ಷಕ ಬಾರೋ  ತಿಥಿಗೆ ಹೋಗೋಣ ಅಂತಲೂ ಹೇಗೆ ಮಾತನಾಡಿಕೊಳ್ಳುತ್ತಾನೆ ಎನ್ನುವ ಅನಿಸಿಕೆ ಅವರದ್ದು. ಹಾಗೆಯೇ ಇನ್ನು ಈವತ್ತಿನ ವಿಶೇಷ ಎನಿಸಿದ ಚಿತ್ರವಾದ ಗೋದಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಕತೆಯನ್ನು ನಿರ್ಮಾಪಕರ ಎದುರಿಗೆ ಕುಳಿತು ಸಾವಧಾನವಾಗಿ ನಿರೂಪಿಸಲು ಸಾಧ್ಯವಿತ್ತೆ..ತಪ್ಪಿಸಿಕೊಂಡ ಅಪ್ಪ, ಹುಡುಕುವ ಮಗ, ಓಪನಿಂಗ್ ಸಾಂಗ್ ಇಲ್ಲ, ಕೇಡಿಗಳಿದ್ದರೂ ಫೈಟ್ ಇಲ್ಲ, ಕಾಮಿಡಿ ಇಲ್ಲವೇ ಇಲ್ಲ.. ನಮ್ಮ ಕೈಲಿ ಆಗಲ್ಲಪ್ಪ ಎಂದು ಬುದ್ದಿವಾದ ಹೇಳಿ ಕಳುಹಿಸಿಬಿಡುತ್ತಿದ್ದರೇನೋ? ಅಥವಾ  ಅದನ್ನು  ಹೀಗೆ ಮಾಡಿದರೆ ಹೇಗೆ, ಹಾಗೆ ಮಾಡಿದರೆ ಹೇಗೆ, ಕೇಡಿಗಳು  ಈಗಾಗಲೇ ಇರುವುದರಿಂದ  ಫೈಟ್ ಇಡಬಹುದಲ್ಲಾ, ವಸಿಷ್ಠ  ಅಚ್ಯುತ್ ಅವರನ್ನು  ಕುಡಿಯಲು ಕರೆದುಕೊಂಡು ಹೋಗಿದ್ದನ್ನೇ ನೆಪ  ಮಾಡಿಕೊಂಡು ಒಂದು ಐಟಂ ಡಾನ್ಸ್ ಹಾಕಿಬಿಡೋಣ ಎನ್ನುವ ಸಲಹೆಯಂತೂ  ದೇವರಾಣೆ ಬರುತ್ತಿತ್ತೇನೋ? ಆದರೆ  ನಿರ್ಮಾಪಕರು ನಿರ್ದೇಶಕರ ಕತೆ, ಅದರಲ್ಲಿರುವ ಸೂಕ್ಷ್ಮತೆಯನ್ನು ಗ್ರಹಿಸಿದ್ದಾರೆ, ಹಾಗಾಗಿಯೇ  ಚಿತ್ರ ಹಾಗೆಯೇ ಮೂಡಿ ಬಂದಿದೆ, ಗಾಂಧಿನಗರದಲ್ಲಿನ ಸಿದ್ಧಸೂತ್ರಗಳನ್ನು ಪಕ್ಕಕ್ಕೆ ತೂರಿ ಗಂಭೀರ ಕತೆಯ  ಚಿತ್ರ ಮೂಡಿದೆ, ಮತ್ತದು ಪ್ರೇಕ್ಷಕರಿಗೆ ಇಷ್ಟವಾಗಿದೆ.
ಅದಕ್ಕೆ ಹೇಳಿದ್ದು ಒಂದು ಹೊಸತನದ  ಸಿನಿಮಾದ ಹಿಂದೆ ನಿರ್ದೇಶಕನ ವಿಷನ್ ಎಷ್ಟಿರುತ್ತದೋ ಅಷ್ಟೇ ಟ್ರಸ್ಟ್ ನಿರ್ಮಾಪಕರದ್ದಿರುತ್ತದೆ. ನಿರ್ಮಾಪಕರ ಸೂಕ್ಷ್ಮಗ್ರಹಿಕೆ ಮತ್ತು ಅವರ ಬುದ್ದಿವಂತಿಕೆಯೇ ಹೊಸತನಕ್ಕೆ ದಾರಿಯಾಗುತ್ತದೆ. ಸುಮ್ಮನೆ  ಗಮನಿಸಿ, ಆವತ್ತಿನಿಂದ ಈವತ್ತಿನವರೆಗೆ ಯಾವುದಾದರೂ ಹೊಸ ಪ್ರಯತ್ನ, ಹುಬ್ಬೇರಿಸುವ ಸಿನಿಮಾಗಳೆಲ್ಲಾ ಬಂದಾಗ ನಿರ್ಮಾಪಕರು ಬಹುತೇಕ  ಹೊಸಬರೇ ಆಗಿರುತ್ತಾರೆ. ಆನಂತರ ಅವರು ಅದನ್ನು  ಕಾಯ್ದುಕೊಳ್ಳದೆ ಹೋಗುವುದು ಬಿಡುವುದು ಅವರಿಗೆ ಬಿಟ್ಟದ್ದು.
ಹಾಗಾಗಿ ನಮಗೆ ಸೂಕ್ಷ್ಮಗ್ರಾಹಿ, ಅಭಿರುಚಿಯುಳ್ಳ ಹಾಗೆಯೇ ಒಂದು ವಿಷನ್ ಇರುವ ನಿರ್ಮಾಪಕರು ಸಿಕ್ಕಿದ್ದಾರೆ. ಅವರನ್ನು ಉಳಿಸಿಕೊಳ್ಳುವುದು ನಿರ್ದೇಶಕರ ಬಹುದೊಡ್ಡ ಜವಾಬ್ದಾರಿಯಾಗಿದೆ..

Tuesday, June 14, 2016

ಸೈರಾಟ್ ಕನ್ನಡಕ್ಕೆ...

ನಮ್ಮ  ಕನ್ನಡದಲ್ಲಿ  ದಕ್ಷಿಣ ಭಾರತದ ಇತರೆ ಭಾಷೆಗಳಾದ ತೆಲುಗು ತಮಿಳು  ರಿಮೇಕ್  ಆಗುತ್ತಿದ್ದದ್ದೆ  ಹೆಚ್ಚು. ಒಂದಷ್ಟು ಹಿಂದಿ ಚಿತ್ರಗಳನ್ನು  ಹೊರತು ಪಡಿಸಿದರೆ  ಬೆಂಗಾಲಿ, ಒರಿಸ್ಸಾ, ಮರಾಠಿ  ಚಿತ್ರಗಳು ಕನ್ನಡ ರೂಪ ತಳೆದದ್ದು ಅಪರೂಪ. ಈಗ  ಮರಾಠಿ ಚಿತ್ರ  ಸೈರಾಟ್  ಕನ್ನಡಕ್ಕೆ  ರಿಮೇಕ್  ಆಗುತ್ತಿದೆ. ನಮ್ಮ ಹೆಸರಾಂತ  ನಿರ್ಮಾಪಕರಾದ ರಾಕಲೈನ್  ವೆಂಕಟೇಶ್  ಕನ್ನಡಕ್ಕೆ ತರುತ್ತಿದ್ದಾರೆ. ಆ ಮೂಲಕ  ಸೂಪರ್ ಹಿಟ್ ಚಿತ್ರಗಳು  ಯಾವುದೇ ಭಾಷೆಯಲ್ಲಿ ಬಂದರೂ ನಾವು ಕನ್ನಡಿಗರು  ರಿಮೇಕ್  ಮಾಡಲು ಸಿದ್ಧ  ಎಂಬುದು  ಸಾಬೀತಾದಂತಾಗಿದೆ.
ಸೈರಾಟ್  ಸರಿ ಸುಮಾರು  ಮೂರು  ಘಂಟೆ  ಅವಧಿಯ ಚಿತ್ರ. ಚಿತ್ರದ ಕತೆಯಾಗಲಿ, ಚಿತ್ರಕತೆಯಾಗಲಿ  ಯಾವುದೂ ಹೊಸತಲ್ಲ. ಅಥವಾ ಸಿನಿಮಾದಲ್ಲಿ ಸಮಾಜಕ್ಕೆ ಬೇಕಾದಂತಹ  ಸಂದೇಶವೂ ಇಲ್ಲ. ಮರ್ಯಾದೆ ಹತ್ಯೆಯನ್ನು ವೈಭವೀಕರಿಸಿರುವ  ಚಿತ್ರದಲ್ಲಿನ ಕತೆ ಚಿತ್ರಕತೆ ನಮ್ಮಲ್ಲಿಯೇ ತೆರೆಕಂಡ ಚಲುವಿನ ಚಿತ್ತಾರವನ್ನು ಆಲ್ಮೋಸ್ಟ್ ನೆನಪಿಸುತ್ತದೆ.ಮೊದಲಾರ್ಧ  ದೀರ್ಘವಾದರೂ ನೋಡಿಸಿಕೊಂಡು ಹೋಗುತ್ತದೆ. ಆಮೇಲೆ ಸ್ವಲ್ಪ ಮಟ್ಟಿಗೆ ಬೋರ್ ಎನಿಸಿದರೂ ಅಂತ್ಯ ಮಾತ್ರ ಮನಸ್ಸನ್ನು ಕಲಕುತ್ತದೆ. ಆ ಒಂದು ವಿಷಯದಲ್ಲಿ  ನಿರ್ದೇಶಕ ನಾಗರಾಜ್ ಮಂಗಳೆ ಅವರನ್ನು ಮೆಚ್ಚಲೇಬೇಕಾಗುತ್ತದೆ. ಅಂತ್ಯದಲ್ಲಿ ಯಾವುದೇ ಅಬ್ಬರವಿಲ್ಲದೆ, ಬರ್ಬರತೆಯಿಲ್ಲದೆ ಅದನ್ನು ನೋಡುಗನ ಕಣ್ಣಲ್ಲಿ ನೀರು ಬರುವ ಹಾಗೆ ಹತ್ತಿಕ್ಕಲಾಗದ ವಿಷಾದ ಆವರಿಸುವ ಹಾಗೆ ನಿರ್ದೆಶಿಸಿರುವುದು ಅವರ ಪ್ರತಿಭೆಯನ್ನು ಎತ್ತಿ ಹಿಡಿಯುತ್ತದೆ.ಆದರೂ ಬರೀ ಯಶಸ್ಸಿನ ಮಾನದಂಡದಿಂದಷ್ಟೇ ಅದನ್ನು ಕನ್ನಡಕ್ಕೆ ತರುತ್ತಿರುವುದು ಎಂಬುದು ಅರಗಿಸಿಕೊಳ್ಳಬೇಕಾದ ವಿಷಯ.
ಇದು ಕನ್ನಡಕ್ಕೆ ಹೊಸದೇನಲ್ಲ.. ಈ ಹಿಂದೆ "ಅವರ್ ಹಾಸ್ಪಿಟಾಲಿಟಿ" ಚಿತ್ರವನ್ನು ದಿನೇಶ್ ಬಾಬು ಬಲಗಾಲಿಟ್ಟು ಒಳಗೆ  ಬಾ ಎನ್ನುವ ಹೆಸರಿನಲ್ಲಿ ಕನ್ನಡದಲ್ಲಿ ತೆರೆಗೆ ತಂದಿದ್ದರು. ಆನಂತರ ರಾಜಮೌಳಿ ಅದನ್ನೇ ತೆಲುಗಿನಲ್ಲಿ "ಮರ್ಯಾದಾ ರಾಮಣ್ಣ" ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದರೆ ಮತ್ತದು ಇದೆ ಹೆಸರಿನಲ್ಲಿಯೇ ಕನ್ನಡಕ್ಕೆ ಕೋಮಲ್ ನಾಯಕತ್ವದಲ್ಲಿ ಅಧಿಕೃತವಾಗಿ ರಿಮೇಕ್ ಆಗಿತ್ತು.  ಹಾಗೆಯೇ  "ಮಣಿಚಿತ್ರತಾಳ್" ಕನ್ನಡದಲ್ಲಿ ಆಪ್ತಮಿತ್ರ  ಆಗುವ ಮುನ್ನವೇ "ಸಾಗರಿ" ಹೆಸರಿನಲ್ಲಿ ತೆರೆಕಂಡಿತ್ತು. ಹಾಗಾಗಿ ಕತೆ ಹೇಗೋ ಏನೋ ಅಲ್ಲಿ ಯಶಸ್ಸಾದರೆ ಇಲ್ಲಿ ತರೋಣ ಎನ್ನುವ ಮನೋಭಾವವೇ ಕನ್ನಡದಲ್ಲಿ ರಿಮೇಕ್ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿದೆ.
ಇನ್ನು ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್ ಕನ್ನಡದಲ್ಲಿ ಯಶಸ್ವೀ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ ಅವರ ಸಂಸ್ಥೆಯಿಂದ ಹೆಚ್ಚು ರಿಮೇಕ್ ಚಿತ್ರಗಳು ನಿರ್ಮಾಣವಾಗಿರುವುದು ಸ್ವಲ್ಪ ಬೇಸರದ ಸಂಗತಿ. ಈವತ್ತು ರಾಷ್ಟ್ರಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಪಕನೆಂದು ಗುರುತಿಸಿಕೊಂಡಿರುವ ರಾಕಲೈನ್ ಸ್ವಮೇಕ್ ಚಿತ್ರಗಳತ್ತ ಗಮನ ಹರಿಸದೆ ಇರುವುದು, ಕನ್ನಡದ ಕಥೆಗಳನ್ನು ಹೆಚ್ಚು ಸಿನಿಮಾ ಮಾಡದೆ ಇರುವುದು ಬೇಸರ ತರಿಸದೇ ಇರದು. ಪರಭಾಷೆಯಲ್ಲಿ ಅದ್ದೂರಿಯಾಗಿ ಸಿನಿಮಾ  ನಿರ್ಮಿಸುವ ಅವರು ಆಯಾರಂಗದಲ್ಲಿ ಸ್ವಮೇಕ್ ಚಿತ್ರಗಳನ್ನು ಹೆಚ್ಚು ನಿರ್ಮಿಸಿದ್ದಾರೆ. ಆದರೆ ಅದೇಕೋ ಏನೋ ಕನ್ನಡಕ್ಕೆ ಬಂದರೆ ಹೊಸ ಕತೆಯೂ ಇಲ್ಲ, ಸ್ವಮೇಕೂ ಇಲ್ಲ ಎನ್ನುತ್ತಾರೆ. ಈವತ್ತು ನಾವೆಲ್ಲಾ ಹೆಮ್ಮೆ ಪಡುವಂತಹ ಸಂಸ್ಥೆಯಾದ ರಾಕ್ ಲೈನ್  ಪ್ರೊಡಕ್ಷನ್ ನಲ್ಲಿ ಅದ್ಭುತ ಕತೆಯ ಸ್ಮರಣೀಯ ಎನಿಸುವ ಸ್ವಮೇಕ್ ಚಿತ್ರದ ಕೊರತೆಯಿದೆ. ಹಾಗಂತ ರಾಕ್ ಲೈನ್ ಸ್ವಮೇಕ್ ಮಾಡೇ ಇಲ್ಲ ಅಂತಲ್ಲ. ಆದರೆ ಅವರು ಜಾಸ್ತಿ ಮೊರೆ ಹೋಗಿರುವುದು ರಿಮೇಕ್ ಚಿತ್ರಗಳತ್ತ ಎನ್ನುವುದು ಸತ್ಯ. ಒಂದು ಲಾಲಿ, ಸೂಪರ್ ಅಂತಹ ಸ್ವಮೇಕ್ ಚಿತ್ರಗಳನ್ನೂ ನೀಡಿದೆ ಅವರ ಸಂಸ್ಥೆ. ಆದರೆ ಯಾವುದೇ ರೀತಿಯಲ್ಲಿಯೂ ಹೊಸತನದ ಹೊಸ ಅಲೆಯ ಚಿತ್ರಗಳ ಕಡೆಗೆ ಗಮನ ಹರಿಸದೆ ಇರುವುದು, ಪಕ್ಕಾ ಮಸಾಲೆ ಮನರಂಜನೆ -ರಿಮೇಕ್ ಚಿತ್ರಗಳಿಗಷ್ಟೇ ಪ್ರಾಮುಖ್ಯತೆ ಕೊಟ್ಟಿರುವುದು ಹೆಚ್ಚಾಗಿ ಕಂಡುಬರುತ್ತದೆ. ಸಿನಿಮಾ ವ್ಯವಹಾರವನ್ನು ತುಂಬಾ ಚೆನ್ನಾಗಿ ಅರಿತಿರುವ ಮತ್ತು ನಿರ್ಮಾಣದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿರುವ ರಾಕ್ ಲೈನ್ ಕನ್ನಡ ಚಿತ್ರರಂಗದ ಆಸ್ತಿ. ಅವರು ಸ್ವಮೇಕ್ ಚಿತ್ರಗಳತ್ತ, ಹೊಸ ಪ್ರತಿಭೆಗಳ ಅನಾವರಣದತ್ತ ಸ್ವಲ್ಪ ಆಸಕ್ತಿ ತೋರಿಸಿದರೆ ಕನ್ನಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವ ಎಲ್ಲಾ ಸಾಧ್ಯತೆಗಳಿವೆ. ಅವರು ಮನಸ್ಸು ಮಾಡಬೇಕಷ್ಟೆ...

Saturday, June 4, 2016

ಗೋದಿ ಬಣ್ಣ ಸಾಧಾರಣ ಮೈಕಟ್ಟು-ಚಿತ್ರವಿಮರ್ಶೆ

ಮಾತಿಗೆ ಮೊದಲೇ ಹೇಳಬೇಕೆಂದರೆ ಇದೊಂದು ಭಾವಪೂರ್ಣ ಚಿತ್ರ. ಇಡೀ ಚಿತ್ರದ ತುಂಬಾ ನೋಡುಗನನ್ನು ಆವರಿಸಿಕೊಳ್ಳುವುದು ಭಾವುಕತೆ. ಈವತ್ತಿನ ಬ್ಯುಸಿ ಜಗತ್ತಿನ ಮಗ, ಅರಳುಮರಳು ಖಾಯಿಲೆಯ ಅಪ್ಪ ಇವರ ನಡುವಣ ಸಂಬಂಧಗಳ ಸೂಕ್ಷ್ಮಗಳ ಜೊತೆಗೆ ಒಂದಷ್ಟು ಥ್ರಿಲ್ಲರ್ ಅಂಶಗಳನ್ನು ಬೆರೆಸಿರುವ ಚಿತ್ರವಿದು. ಹಾಗಾಗಿ ಒಂದೊಳ್ಳೆ ಕೌಟುಂಬಿಕ ಚಿತ್ರವನ್ನು ನೋಡಬೇಕೆನ್ನುವ ಹಗುರ ಮನದ ನೋಡುಗರಿಗೆ ಹೇಳಿ ಮಾಡಿಸಿದ ಚಿತ್ರವಿದು.
ಚಿತ್ರದ ಕತೆ ಸಾಧಾರಣವಾದದ್ದೆ. ಅಲ್ಜಮೈರ್ ಖಾಯಿಲೆಯ ತಂದೆಯನ್ನು ಮನೆಯಲ್ಲಿಟ್ಟುಕೊಳ್ಳಲಾಗದ ಅನಿವಾರ್ಯ ಪರಿಸ್ಥಿತಿಯಿಂದಾಗಿ ಆತನನ್ನು ಸರ್ಕಾರೇತರ ಸಂಸ್ಥೆಗೆ ಸೇರಿಸುತ್ತಾನೆ ಶಿವ, ಅಥವಾ ಈಗಾಗಲೇ ಸೇರಿಸಿದ್ದಾನೆ. ತಂದೆಯನ್ನು ನೋಡಲು ಬಂದು ಮತ್ತೆ ಅವನನ್ನು ವಾಪಸ್ಸು ಕರೆತರುವಾಗ ತನ್ನದೇ ನಿರ್ಲಕ್ಷ್ಯದಿಂದಾಗಿ ತಂದೆ ವೆಂಕೋಬರಾವ್ ತಪ್ಪಿಸಿಕೊಳ್ಳುವಂತಾಗುತ್ತದೆ. ಸಂಸ್ಥೆಯ ತಾಯಿಗರುಳಿನ ವೈದ್ಯೆ ಸಹನಾ ಜೊತೆಗೆ ತಂದೆಯನ್ನು ಹುಡುಕುತ್ತಾ ಸಾಗುವ ಶಿವನಿಗೆ ಅಪ್ಪನ ಗೈರುಹಾಜರಿಯಲ್ಲಿ ಅಪ್ಪ ಸಿಗುತ್ತಾ ಹೋಗುತ್ತಾನೆ. ತಪ್ಪಿಸಿಕೊಂಡ ತಂದೆ ಸಿಗುತ್ತಾರಾ..?
ಚಿತ್ರ ಪ್ರಾರಂಭದಿಂದಲೇ ಮಂದಗತಿಯಲ್ಲಿ ಪಯಣ ಆರಂಭಿಸುತ್ತದೆ.. ನಿರ್ದೇಶಕರ ಸ್ಕ್ರಿಪ್ಟ್ ರಚನೆ ಮತ್ತು  ನಿರೂಪಣೆ ಯಾವುದೇ ಧಾವಂತವಿಲ್ಲದೆ ಕತೆ ಹೇಳುತ್ತಾ ಸಾಗುತ್ತದೆ. ಚಿಕ್ಕ ಚಿಕ್ಕ ಅಂಶಗಳನ್ನು ಜೋಡಿಸುತ್ತಾ ಚಿತ್ತಾರ ಬಿಡಿಸುತ್ತಾ ಸಾಗುವ ನಿರ್ದೇಶಕರು ತಮ್ಮ ಪಾತ್ರಗಳ ಆಯ್ಕೆಯಲ್ಲಿಯೇ ಅರ್ಧ ಗೆದ್ದಿದ್ದಾರೆ.  ಸಿನಿಮಾದ ಸಿದ್ಧ ಸೂತ್ರಗಳನ್ನು ಬದಿಗಿಟ್ಟು ಒಂದು ಕಾದಂಬರಿ ರೀತಿಯಲ್ಲಿ ಕತೆ ಹೇಳುತ್ತಾ ಸಾಗುತ್ತಾರೆ. ಒಮ್ಮೊಮ್ಮೆ ಏನಾಗುತ್ತದೆಯೋ ಎನ್ನುವ ಕಾತುರ ಕಳವಳ ಉಂಟು ಮಾಡುವ ಚಿತ್ರಕತೆ ಅಲ್ಲಲ್ಲಿ ಆದ್ರಗೊಳಿಸುತ್ತಾ ಸಾಗುತ್ತದೆ.
ಚಿತ್ರದ ಮುಖ್ಯಭೂಮಿಕೆಯಲ್ಲಿ ಅನಂತ ನಾಗ್ ನಟಿಸಿದ್ದಾರೆ. ಅವರ ಅನುಭವ, ಅವರ ವಯೋಮಾನಕ್ಕೆ ಎರಡೂ ಕತೆಯ ಪಾತ್ರಕ್ಕೆ ಸಾಥ್ ನೀಡಿರುವುದರಿಂದ ಅವರ ಅಭಿನಯದ ಬಗ್ಗೆ ಹೇಳಲು ಅವರು ಏನನ್ನೂ ಉಳಿಸುವುದಿಲ್ಲ. ನಾಯಕನಾಗಿ ರಕ್ಷಿತ್ ಶೆಟ್ಟಿ, ನಾಯಕಿಯಾಗಿ ಶ್ರುತಿಹರಿಹರನ್ ಅಚ್ಚುಕಟ್ಟಾಗಿ ಅಭಿನಯಿಸಿದ್ದರೂ ವಸಿಷ್ಠ ಸಿಂಹ ಗಮನ ಸೆಳೆಯುತ್ತಾರೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಸಿನಿಮಾಕ್ಕೆ ಪೂರಕವಾಗಿದೆ. ತಮ್ಮ ಮೊದಲ ಚಿತ್ರದಲ್ಲಿಯೇ ಒಂದು ಕೌಟುಂಬಿಕ ಕತೆಯನ್ನು ಕೈಗೆತ್ತಿಕೊಂಡಿರುವ ಹೇಮಂತ್ ಮೆಚ್ಚುಗೆ ಗಳಿಸುತ್ತಾರೆ.

ಜೊತೆಗೆ ಇಡೀ ಚಿತ್ರದಲ್ಲಿ ಒಂದೇ ಭಾವ ಸಾಗುತ್ತದೆ. ಹಾಗಾಗಿ ಒಂದಷ್ಟು ಹಾಸ್ಯ ಮನರಂಜನೆ ಇತ್ಯಾದಿ ಇತ್ಯಾದಿ ಬಯಸುವ ಹಾಡು ಕುಣಿತ ಅಪೇಕ್ಷೆ ಪಡುವ ಅಥವಾ ಜಾಲಿ ಸಿನಿಮಾ ಬೇಕೆನ್ನುವ ಪ್ರೇಕ್ಷಕ ನೀವಾಗಿದ್ದರೆ ಗೋದಿಬಣ್ಣ ಸಾಧಾರಣ ಎನಿಸುವ ಸಾಧ್ಯತೆ ಇದೆ. ಅಲ್ಲಲ್ಲಿ ತುಸುವೇ ನಿಧಾನ ಎನಿಸುವ ಸಾಧ್ಯತೆಯೂ ಇಲ್ಲದಿಲ್ಲ. ಅದಷ್ಟನ್ನು ಪಕ್ಕಕ್ಕಿಟ್ಟು ಹೊಸಬರ ಪ್ರಯತ್ನವನ್ನು ಶ್ಲಾಘಿಸುವ ಮನಸ್ಸಿದ್ದರೆ ಗೋದಿಬಣ್ಣ ನಿಮಗೆ ಮೋಸ ಮಾಡುವುದಿಲ್ಲ.

Thursday, June 2, 2016

ಯೋಗರಾಜ್ ಭಟ್ಟರ ಪತ್ರ ಮತ್ತು ರವಿಚಂದ್ರನ್ ಅಪೂರ್ವ...

ಅಪೂರ್ವ ರವಿಚಂದ್ರನ್ ಚಿತ್ರ. ಅವರದೇ ಕನಸು ಕನವರಿಕೆ ಕನಲಿಕೆಯನ್ನು ಒಳಗೊಂಡಿರುವ ಚಿತ್ರ. ಆದರೆ ಅದು ಪ್ರೇಕ್ಷಕರನ್ನು ತಟ್ಟುವಲ್ಲಿ ಯಶಸ್ವಿಯಾಗದೆ ಇರುವುದು ನೋಡುಗನಲ್ಲಿ ಬೇಸರ ಉಂಟುಮಾಡಿದ್ದು ಸತ್ಯ. ರವಿಚಂದ್ರನ್ ಎನ್ನುವ ಕನ್ನಡದ ಕ್ರೇಜಿಸ್ಟಾರ್ , ಶೋ ಮ್ಯಾನ್ ಬಗೆಗೆ ಒಂದಷ್ಟು ಎಳಸು ಚಿತ್ರಕರ್ಮಿಗಳು ಎಳಸಾಗಿ ಮಾತನಾಡಿದ್ದು ಕಂಡ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಒಂದು ಪತ್ರವನ್ನು ಬರೆದಿದ್ದಾರೆ, ಅದನ್ನು ಬರಹಗಾರ ಜೋಗಿ ಪ್ರಕಟಿಸಿದ್ದಾರೆ. ಒಕ್ಕಣೆ ಓದಿದಾಗ ಭಟ್ಟರ ಕಳಕಳಿ ಇಷ್ಟವಾಗುವುದಕ್ಕಿಂತ ಆಪ್ತವಾಗುತ್ತದೆ. ಹೌದಲ್ಲ, ರವಿಚಂದ್ರನ್ ಅವರ ಒಂದು ಅಪೂರ್ವ ಅದರ ಹಿಂದಿನ ಒಂದು ಬೇಸರವನ್ನು ಇಟ್ಟುಕೊಂಡು ಸುಖಾಸುಮ್ಮನೆ ಬ್ರಹ್ಮನಂತೆ ನಾವು ಮಾತನಾಡುವ ಯೋಗ್ಯತೆ ನಮಗೆ ಇದೆಯಾ ಎನಿಸುತ್ತದೆ. ಏಕೆಂದರೆ ರವಿಚಂದ್ರನ್ ಕನ್ನಡಕ್ಕೆ ಗ್ಲಾಮರ್ ತಂದುಕೊಟ್ಟವರು, ಶ್ರೀಮಂತಿಕೆ ತಂದುಕೊಟ್ಟವರು, ಅವರು ತುಟಿಗೆ ತುಟಿ ಇಟ್ಟು ಚುಂಬಿಸಿದರೆ ನಮಗೆ ಅಂತಹ ಮುಜುಗರವಾಗುವುದಿಲ್ಲ, ಅವರು ಹೊಕ್ಕಳ ಮೇಲೆ ದ್ರಾಕ್ಷಿ ಹಾಕಿದರೆ ಅದು ಅಸಹ್ಯ ಎನಿಸುವುದಿಲ್ಲ, ಆ ಮಟ್ಟಿಗೆ ನಮ್ಮ ಮನೆಮನೆಗಳಲ್ಲಿ ಮನದಾಳದಲ್ಲಿ ಹೆಸರು ಮಾಡಿದ್ದು ರವಿಚಂದ್ರನ್. ಸುಮ್ಮನೆ ಗಮನಿಸಿದರೆ ರವಿಚಂದ್ರನ್ ಅವರ ಶೃಂಗಾರ ಚಿತ್ರಣದ ಅರ್ಧದಷ್ಟನ್ನು ಕಾಶಿನಾಥ್ ಮಾಡಿದರೆ ಸಾಕು, ಅದು ಪೋಲಿ ಸಿನಿಮವಾಗುತ್ತದೆ, ಹೆಂಗಸರು ಮೂಗು ಮುರಿಯದೆ ಇರಲಾರರು, ಆದರೆ ರವಿಚಂದ್ರನ್ ಹೆಂಗೆಳೆಯರಿಗೆ ಅಚ್ಚುಮೆಚ್ಚು,  ಅವರು ಪೋಲಿಯಲ್ಲ, ಬದಲಿಗೆ ತುಂಟ..ಇಂತಹ ಒಂದು ಇಮೇಜ್ ಸೃಷ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಆವತ್ತಿಗೆ ಹಳ್ಳಿಮೇಷ್ಟ್ರು ಸಿನೆಮಾವನ್ನು ಇಡೀ ಊರಿಗೆ ಊರೇ ಬಸ್ಸಿನಲ್ಲಿ, ಎತ್ತಿನ ಗಾಡಿಗಳಲ್ಲಿ ಕುಟುಂಬ ಸಮೇತರಾಗಿ ಬಂದು ನೋಡಿದ್ದಿದೆ. ಏಯ್ ರವಿಚಂದ್ರನ್ ಸಿನಿಮಾ ನೋಡಬೇಡ ಎಂದು ನಮಗೆ ಹಿರಿಯರು ಹೇಳಿದ್ದು ನೆನಪಿಲ್ಲ, ಆದರೆ ಕಾಶಿನಾಥ್ ಸಿನಿಮಾ ನೋಡಿದಾಗ ಬೈದದ್ದು ನೆನಪಿದೆ.[ನಮ್ಮಲ್ಲಿ ಇಂಗ್ಲೀಷ್, ಮಲಯಾಳಂ ಭಕ್ತಿಚಿತ್ರಗಳನ್ನು ನೋಡಿದಾಗಲೂ ಬರೀ ಆ ಭಾಷೆಯಿಂದಲೇ ಅದೊಂದು ಅಶ್ಲೀಲ ಎಂದುಕೊಂಡು ಬೈದವರಿದ್ದಾರೆ]
ಸುಮ್ಮನೆ ಗಮನಿಸಿದರೆ ರವಿಚಂದ್ರನ್ ಕನ್ನಡದಲ್ಲಿ ಸಿರಿವಂತಿಕೆ ತಂದದ್ದು ಸತ್ಯ. ಅವರ ಪ್ರೇಮಲೋಕ  ಚಿತ್ರದ ನಂತರ ಇಲ್ಲಿಯವರೆಗೆ ರವಿಚಂದ್ರನ್ ಸುಮಾರು ಅರವತ್ತೆಂಟಕ್ಕೂ  ಹೆಚ್ಚು   ಚಿತ್ರಗಳಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಅನಾಮತ್ತು ನಲವತ್ತನಾಲ್ಕು  ಚಿತ್ರಗಳು ಅಧಿಕೃತ ರಿಮೇಕ್ ಗಳು. ಇನ್ನು  ಅವರೇ ಇಷ್ಟಪಟ್ಟು ಸ್ವಮೇಕ್ ಮಾಡಿದ ಅದ್ದೂರಿ ಚಿತ್ರಗಳಲ್ಲಿ  ಶಾಂತಿಕ್ರಾಂತಿ, ಚಿನ್ನ, ಕಿಂದರಜೋಗಿ, ರಸಿಕ, ಜಾಣ, ಕಲಾವಿದ, ಮೊಮ್ಮಗ, ಹಠವಾದಿ ಮುಂತಾದ ಚಿತ್ರಗಳು ಯಾವುದೇ ರೀತಿಯಲ್ಲಿಯೂ ಗಮನ ಸೆಳೆಯುವಂತಹದ್ದಲ್ಲ. ಸೂಪರ್ ಡೂಪರ್ ಹಿಟ್ ಚಿತ್ರವಾದ ಮಲ್ಲ  ಚಿತ್ರದಲ್ಲಿಯೂ ಯಶಸ್ಸಿಗೆ ಬೇರೆ ಮಾನದಂಡವನ್ನು ಹುಡುಕಬಹುದು.
ದೃಶ್ಯಮಾಧ್ಯಮದಲ್ಲಿ ಏನೆಲ್ಲಾ ಹೊಸತನ್ನು ಸಿರಿವಂತಿಕೆಯನ್ನು ಕನ್ನಡಕ್ಕೆ ತಂದುಕೊಟ್ಟ ಇಂತಹ ನಿರ್ಮಾಪಕ ನಿರ್ದೇಶಕ ಉತ್ತಮ ಬರಹಗಾರರನ್ನು ಕತೆಗಾರರನ್ನು ಹುಟ್ಟುಹಾಕದೆ ಇದ್ದದ್ದು ವಿಪರ್ಯಾಸ. ಹಂಸಲೇಖರಂತಹ ಮಹಾನ್  ಸಂಗೀತ  ನಿರ್ದೇಶಕ ಸಾಹಿತ್ಯಕಾರನನ್ನು ಪೋಷಿಸಿದ ರವಿಚಂದ್ರನ್ ಯಾಕೆ ಕತೆಯ ವಿಷಯದಲ್ಲಿ ತಲೆ ಕೆಡಿಸಿಕೊಳ್ಳಲಿಲ್ಲ ಎಂಬುದು ಪ್ರಶ್ನೆ. ಕತೆಗಾರರನ್ನು, ಚಿತ್ರಕತೆಗಾರರನ್ನು ಹುಟ್ಟು ಹಾಕುವ ಕಡೆಗೆ ಅಥವಾ ನಮ್ಮಲ್ಲಿನ ಕಾದಂಬರಿಯನ್ನೂ ಕತೆಯನ್ನೂ ಸಿನಿಮಾರೂಪಕ್ಕೆ ತರುವ ಕಡೆಗೆ ರವಿಚಂದ್ರನ್ ಗಮನ ಹರಿಸಿದ್ದರೆ ಬಹುಶಃ ಈವತ್ತು ಕನ್ನಡದ ರವಿಚಂದ್ರನ್ ಬೇರೆ ಭಾಷೆಗಳಲ್ಲಿ ಬರೀ ಉತ್ತಮ ತಂತ್ರಜ್ಞ ಎಂದಷ್ಟೇ ಹೆಸರಾಗುತ್ತಿರಲಿಲ್ಲ.  ರವಿಚಂದ್ರನ್ ಅವರ ಸಿನಿಮಾ ಪಟ್ಟಿಯಲ್ಲಿ ಯಶಸ್ವಿ ಚಿತ್ರಗಳು ದೊರೆಯುತ್ತವೆಯೇ ಹೊರತು ಸ್ವಂತಿಕೆಯ ನಮ್ಮದೇ ಎನಿಸುವ ಹೆಮ್ಮೆಯಿಂದ ಹೇಳಿಕೊಳ್ಳುವ ಚಿತ್ರಗಳ ಸಂಖ್ಯೆ ಕಡಿಮೆ ಅಥವಾ ಇಲ್ಲವೇ ಇಲ್ಲ. ಒಬ್ಬ ನಟ ನಿರ್ಮಾಪಕ ಬರೀ ರಿಮೇಕ್ ಚಿತ್ರಗಳಿಂದಲೇ ತನ್ನ ಸ್ಥಾನವನ್ನು ಗುರುತಿಸಿಕೊಂಡದ್ದು ಒಂದು ರೀತಿಯಲ್ಲಿ ಬೇಸರದ ಸಂಗತಿಯೇ. ನಮ್ಮಲ್ಲಿನ ಒಂದಷ್ಟು ಕತೆಗಾರರನ್ನು ಚಿತ್ರಕತೆಗಾರರನ್ನು ರವಿಚಂದ್ರನ್ ಹುಟ್ಟುಹಾಕಿ ಸ್ವಂತಿಕೆಯ ಚಿತ್ರಗಳನ್ನು ನೀಡಿದ್ದರೇ ಅದರ ಖದರ್ರೆ ಬೇರೆಯಾಗುತ್ತಿತ್ತೇನೋ? ಆದರೆ  ರವಿಚಂದ್ರನ್ ಸ್ವಮೇಕ್ ಚಿತ್ರಗಳನ್ನು ಮಾಡಿದಾಗಲೆಲ್ಲಾ ಬಹುತೇಕ ಸೋತಿದ್ದಾರೆ. ಅವರ ಪ್ರೇಮಲೋಕ[ಅದು ಇಂಗ್ಲೀಷಿನ ಗ್ರೀಸ್ ನ ಸ್ಫೂರ್ತಿ] ಹೊರತುಪಡಿಸಿದರೆ ಆನಂತರ ಅವರು ಕೈಗೆತ್ತಿಕೊಂಡದ್ದು ಕಿಂದರಜೋಗಿ.ಆ  ಚಿತ್ರವನ್ನು. ಲೆಕ್ಕವಿಲ್ಲದಷ್ಟು ದಿನ ಚಿತ್ರೀಕರಣ ಮಾಡಿದ್ದು, ಮರು ಚಿತ್ರೀಕರಣ ಮಾಡಿದ್ದು ಅವರ ಆ ಸಿನಿಮಾದ ಹೆಗ್ಗಳಿಕೆ. ಆದರೆ ಚಿತ್ರ ಅವರಿಗೆ ಯಶಸ್ಸು ತಂದುಕೊಡಲಿಲ್ಲ..ಆನಂತರ ಮತ್ತೆ ರಾಮಾಚಾರಿಯಿಂದ ಚೇತರಿಸಿಕೊಂಡು ಶಾಂತಿಕ್ರಾಂತಿ ಬಿಡುಗಡೆಗೊಳಿಸಿದ್ದು ಅವರಿಗಾಗಲಿ, ಪ್ರೇಕ್ಷಕನಿಗಾಗಲಿ ಖುಷಿ ಕೊಡಲಿಲ್ಲ..ಅದಾದ ನಂತರ ಸಾಲು ಸಾಲು ರಿಮೇಕ್ ಮಾಡಿ ಗೆದ್ದ ಕ್ರೇಜಿಸ್ಟಾರ್ ಮತ್ತೆ ಸ್ವಮೇಕ್ ಎಂದು ಚಿನ್ನ ಮಾಡಿ ಸೋತರು. ಹೀಗೆ ಗಮನಿಸುತ್ತಾ ಹೋದರೆ ರವಿಚಂದ್ರನ್ ಅವರ ಯಶಸ್ಸು ನಿಂತಿರುವುದು ರಿಮೇಕ್ ಮೇಲೆಯೇ ಎನಿಸುತ್ತದೆ. ಇದು ಸರಿಯೋ ತಪ್ಪೋ...ಅಂತೂ ಬೇರೆ ನಿರ್ದೇಶಕರ, ಬೇರೆ ಭಾಷೆಯ ಸಿನಿಮಾ ಕತೆಗಳನ್ನು ತಂದು ಇಲ್ಲಿ ಸಿನಿಮಾ ಮಾಡಿ ಗೆದ್ದ ರವಿಚಂದ್ರನ್ ನಮ್ಮಲ್ಲಿನ ಕತೆಗಳನ್ನು, ಕತೆಗಾರರನ್ನು ನಂಬದೆ ಇದ್ದದ್ದು ವಿಪರ್ಯಾಸ.
ಈವತ್ತಿಗೂ ಏಕಾಂಗಿ ಆಗಿರಬಹುದು, ಅಥವಾ ಇತ್ತೀಚಿನ ಅಪೂರ್ವ ಆಗಿರಬಹುದು. ಏನಾದರೂ ಒಂದು ವಿಭಿನ್ನವಾದ ಅಥವಾ ವಿಶೇಷವಾದದ್ದನ್ನು ಮಾಡಬೇಕೆನ್ನುವ ತುಡಿತ ಆ ಚಿತ್ರಗಳಲ್ಲಿ ಕಾಣಸಿಗುವುದು ಸತ್ಯ. ಆದರೆ ಬರೀ ಆಶಯವಷ್ಟೇ ಸಿನಿಮಾ ಅಲ್ಲವಲ್ಲ. ಅಥವಾ ಎಲ್ಲವನ್ನು ಒಬ್ಬರೇ ಒಂದೆಡೆಯೇ ಕುಳಿತುಮಾಡಲು ಸಾಧ್ಯವೇ..? ಅದೀಗ ಮತ್ತೆ ಪ್ರೂವ್ ಆಗಿದೆ ಅಷ್ಟೇ. ಅಪೂರ್ವ ಚಿತ್ರದಲ್ಲಿನ ಒಂದೇ ಲಿಫ್ಟ್, ಹತ್ತೊಂಭತ್ತರ ಯುವತಿ ಮತ್ತು ಅರವತ್ತೊಂದರ ವೃದ್ಧನ ನಡುವಣ ಪ್ರೀತಿ ನಿರೀಕ್ಷಿತ ಭಾವನೆಗಳನ್ನು ಹುಟ್ಟುಹಾಕದೆ ಇದ್ದದ್ದಕ್ಕೆ ತಾಂತ್ರಿಕ ಅಂಶಗಳು ಏನೇ ಇರಲಿ, ಚಿತ್ರಕತೆ-ಕತೆ ಮುಖ್ಯ ಕಾರಣ. ಅದಕ್ಕೆ ಬೇಕಾದಂತಹ ಕತೆಯನ್ನು ರವಿಚಂದ್ರನ್ ನಮ್ಮಲ್ಲಿನ ಕತೆಗಾರರ ಕೈಯಲ್ಲಿ ಹೆಣಿಸಬಹುದಿತ್ತೇನೋ?ಆದರೆ ಎಲ್ಲವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡದ್ದರ ಪರಿಣಾಮವೋ ಏನೋ..?ಭಾರಕ್ಕೆ ಜಗ್ಗಿದಂತಾಗಿದೆ ಸಿನಿಮಾ. ಒಬ್ಬ ನಿರ್ದೇಶಕ ನಟ, ನಟಿ ಅದೆಷ್ಟೇ ಇಷ್ಟವಾಗಲಿ, ಅವರ ಹಿಂದಿನ ಚಿತ್ರಗಳ ಸವಿನೆನಪು ಅದೆಷ್ಟೇ ಗಾಢವಾಗಿರಲಿ,  ಅವರದೇ ಸಿನಿಮಾ  ನಿರೀಕ್ಷಿಸಿದಂತೆ ಇರದಿದ್ದರೆ  ಚಿತ್ರಮಂದಿರದ ಒಳಗಣ ಎರಡೂವರೆ ಘಂಟೆ ಯಾತನಾಮಯ ಅನಿಸುವುದು ಸತ್ಯ. ಹಾಗಾಗಿಯೇ ಒಂದಷ್ಟು ಜನರು ಆ ಅಸಹನೆಯನ್ನು ಹೊರಹಾಕಿದ್ದಾರೆ ಎನಿಸುತ್ತದೆ. ಅಷ್ಟೇ.. ಅದರಾಚೆಗೆ ಬೇರೇನನ್ನೂ ಊಹಿಸಿಕೊಳ್ಳುವುದು ಸಮಂಜಸ ಅಲ್ಲವೇನೋ?

Monday, May 16, 2016

ರಮಾಬಾಯಿ ನೋಡಿದ್ರಾ..? ಇಂಗಳೆ ಯಾರು..?ಬಸವಣ್ಣ ಹೇಳಿದ್ದೇನು..?

ನಾನು ಫೇಸ್ಬುಕ್  ಇನ್ನಿತರ ಸಾಮಾಜಿಕ ಜಾಲತಾಣಗಳನ್ನೂ  ಗಮನಿಸುತ್ತೇನೆ. ಸಿನಿಮಾ, ಸಾಹಿತ್ಯ ಸಂಬಂಧಿ ಪೋಸ್ಟ್ ಗಳನ್ನ ಬಿಟ್ಟರೆ ಬೇರೆ ಪೋಸ್ಟ್ ಗಳಿಗೆ  ಪ್ರತಿಕ್ರಿಯಿಸುವುದಿಲ್ಲ. ಆದರೂ ಈ ಕೆಲವು ಜಾತ್ಯಾತೀತರು, ಜಾತಿವಾದಿಗಳು, ರಾಜಕೀಯಪ್ರಿಯರು, ಸಮಾಜ ಸುಧಾರಕರ ಮುಖವಾಡ ಹೊತ್ತವರು, ಬುದ್ದಿಜೀವಿಗಳೆನಿಸಿಕೊಂಡವರು ಮುಂತಾದವರ ಆರ್ಭಟಗಳನ್ನು ಸುಮ್ಮನೆ ಗಮನಿಸುತ್ತಾ ಸಾಗುತ್ತೇನೆ. ನನಗೆ ರಾಜಕೀಯ ಆಕರ್ಷಿಸುವುದಿಲ್ಲವಾದರೂ ಅದನ್ನು ಉದಾಸೀನ ಮಾಡುವ ಹಾಗಿಲ್ಲ. ಇನ್ನು ಮತ, ಧರ್ಮ, ಜಾತಿ ಬಿಡಿ. ಅದವರ ವೈಯಕ್ತಿಕ. ಎಲ್ಲಾ ಜಾತಿಗಳೂ, ಧರ್ಮಗಳೂ ಸರಿ ಎಂದರೆ ಸರಿ ತಪ್ಪು ಎಂದರೆ ತಪ್ಪು. ತಪ್ಪು ಹುಡುಕಲು ಹೊರಟರೆ ಸಾವಿರಾರು, ಶ್ರೇಷ್ಠ ಎಂದುಕೊಂಡರೆ ಅದೇ ಶ್ರೇಷ್ಠ. ಇರಲಿ. ಆದರೆ ಯಾವುದಾದರೊಂದು ವಿಷಯವಾದಾಗ. ವಿವಾದವಾದಾಗ ಯಾರಾದರೂ ಎಲ್ಲೋ ಮಾತಿನ ಭರದಲ್ಲಿ ಏನೋ ಮಾತಾಡಿದಾಗ, ಅಥವಾ ಇನ್ನೇನೋ ಆದಾಗ ಅದನ್ನಿಡಿದುಕೊಂಡು ಕೆಸರೆರೆಚಾಟ ಮಾಡುವವರನ್ನು ಕಂಡಾಗ ಮತ್ತು ಏನೋ ಒಂದು ತೆರನಾಗುತ್ತದೆ. ಇಡೀ ಸಮಾಜವೇ ಸರಿಯಿಲ್ಲ, ನಾವು ಸರಿಯಾಗಿದ್ದೇವೆ ಎನ್ನುವ ಅವರ ನಡೆ ನುಡಿ ಕಂಡಾಗ ಗಾಬರಿಯೂ ಆಗುತ್ತದೆ. 
ಮೊನ್ನೆ ಮೊನ್ನೆ ರಮಾಬಾಯಿ ಎನ್ನುವ ಚಿತ್ರ ಬಿಡುಗಡೆಯಾಗಿತ್ತು. ಚಿತ್ರಮಂದಿರದಲ್ಲಿ ಬೆರೆಳೆಣಿಕೆಯ ಜನರೂ ಇರಲಿಲ್ಲ. ರಮಾಬಾಯಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊದಲ ಪತ್ನಿ.  ಅಂಬೇಡ್ಕರ್ ಜನ್ಮದಿನದಂದೇ ಬಿಡುಗಡೆಯಾದ ಈ ಚಿತ್ರದಲ್ಲಿ ಅಂಬೇಡ್ಕರ್ ಅವರ ಬದುಕನ್ನು ಅವರ ಪತ್ನಿಯ ದೃಷ್ಟಿಕೋನದಲ್ಲಿ ನಿರೂಪಿಸಲಾಗಿತ್ತು. ಆದರೆ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ, ಅವರ ಏಳಿಗೆಗಾಗಿಯೇ ದುಡಿಯುತ್ತಿದ್ದೇವೆ ಎನ್ನುವ ರೀತಿ ಫೇಸ್ಬುಕ್ ನಲ್ಲಿ ಪೋಸ್ ಕೊಡುವ ಒಬ್ಬರೂ ಆ ಚಿತ್ರದ ಬಗ್ಗೆ ಬರೆದದ್ದು ಕಾಣಿಸಲಿಲ್ಲ. ಕೊನೆಗೆ ಹೀಗೊಂದು ಅಪರೂಪದ ಸಿನೆಮಾವನ್ನು ಮಾಡಿದ್ದಾರೆ, ಒಮ್ಮೆ ನೋಡೋಣ ಎಂದಾಗಲಿ, ನೋಡಿದೆ, ಹೀಗಿದೆ, ಹೀಗಿರಬೇಕಿತ್ತು ಎಂದಾಗಲಿ ಒಬ್ಬರೂ ಅದರ ಬಗ್ಗೆ ಪ್ರಸ್ತಾಪಿಸಲಿಲ್ಲ. ಈವತ್ತು ಸಿನಿಮಾ ಮಾಡುವುದು ಸುಲಭದ ಅಥವಾ ಕಡಿಮೆ ಕರ್ಚಿನ ವಿಷಯವಲ್ಲ. ಏನೇ ಕಡಿಮೆ ಎಂದರೆ ಲಕ್ಷಗಟ್ಟಲೆ ಹಣ ಬೇಕೇ ಬೇಕು. ಹಾಗಾಗಿಯೂ ಒಬ್ಬ ವ್ಯಕ್ತಿ ಅಂತಹ ಅಪರೂಪದ ಪ್ರಯತ್ನ ಪಟ್ಟಾಗ ಅದರ ಬಗ್ಗೆ ಮಾತೇ ಆಡದವರು ಅಂಬೇಡ್ಕರ್ ಬಗ್ಗೆ, ಹಿಂದುಳಿದ ವರ್ಗಗಳ ಏಳಿಗೆಯ ಬಗ್ಗೆ, ಸರ್ಕಾರ ಮಾಡದ ಕಾರ್ಯಗಳ ಬಗ್ಗೆ ಮಾತಾಡುತ್ತಾರಲ್ಲ ಅದೆಲ್ಲ ಒಣ ಪ್ರತಿಷ್ಠೆಯಿರಬಹುದಾ..? ಎನಿಸದಿರಲಿಲ್ಲ. ಹಾಗೆಯೇ ಇದಕ್ಕೂ ಮುನ್ನ ಕನ್ನಡದಲ್ಲಿಯೇ ಇಂಗಳೆಮಾರ್ಗ  ಚಿತ್ರ ಬಂದಿತ್ತು. ಘನಶ್ಯಾಮ್ ಭಾಂಡಗೆ ನಿರ್ಮಿಸಿದ್ದ  ಈ ಚಿತ್ರವೂ ದೇವರಾಯ ಇಂಗಳೆ ಅವರ ಜೀವನ ಚರಿತ್ರೆಯನ್ನು ಆಧರಿಸಿರಿತ್ತು. 2014 ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನೂ ಪ್ರೋತ್ಸಾಹಿಸಿದ್ದು ಕಡಿಮೆ. ಹಾಗೆಯೇ ಗಾಂಧಿಜಿ ಕುರಿತಾದ ಚಿತ್ರಗಳು ಲೇಖನಗಳು, ಅಂಬೇಡ್ಕರ್ ಅವರ ಭಾಷಣದ ವಿವರಣೆ ಮುಂತಾದವುಗಳ ಬಗೆಗೆ ಬರೆದದ್ದಕ್ಕಿಂತ ಅವರು ಹೀಗೆಂದರು ಇವರು ಹಾಗಂದರು ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಯಾಕೆ ಮಾತನಾಡುತ್ತಾರೆ ಎಂಬುದು ನನ್ನ ಪ್ರಶ್ನೆ. 
ಇಲ್ಲಿ  ಬರೀ ಸಿನಿಮಾದ ವಿಷಯವಷ್ಟನ್ನೇ ಮಾತಾಡುವುದಾದರೆ ಒಬ್ಬ ವ್ಯಕ್ತಿಯ ತತ್ವಗಳನ್ನು ನಾವು ಅನುಸರಿಸುವಾಗ, ಗೌರವಿಸುವಾಗ ಅವರ ಬಗೆಗೆ ಒಬ್ಬ ವ್ಯಕ್ತಿ ತೆಗಳಿದರೆ, ವ್ಯತಿರಿಕ್ತವಾಗಿ ಮಾತನಾಡಿದರೆ ಅದನ್ನು ವಿರೋಧಿಸುವುದು ಸರಿ. ಆದರೆ ಅವರ ಬಗೆಗೆ ಚಿತ್ರವನ್ನೋ, ಪುಸ್ತಕವನ್ನೂ ಬರೆದಾಗ ಅದನ್ನು ಪ್ರಶಂಸಿಸಬಹುದಲ್ಲವೇ..? ಆ ಸಿನೆಮಾವನ್ನು ನೋಡಿ, ಮತ್ತೊಂದಷ್ಟು ಜನರನ್ನು ನೋಡುವಂತೆ ಪ್ರೇರೇಪಿಸಿ., ಅದರ ಬಗೆಗೆ ಚರ್ಚೆ ನಡೆಸಿದ್ದರೆ ಅದನ್ನು ನಿರ್ಮಿಸಿದ್ದವರಿಗೆ, ನಿರ್ದೇಶನ ಮಾಡಿದ್ದವರಿಗೆ ಉತ್ತೇಜನ ಸಿಕ್ಕಿರುತ್ತಿತ್ತಲ್ಲವೇ..?
ಮೇಲ್ನೋಟಕ್ಕೆ ಗಮನಿಸಿದಾಗ ಇಲ್ಲಿ  ಆಗುತ್ತಿರುವುದು ಇದೆ. ಮೋದಿ ಕೇರಳವನ್ನು ಸೋಮಾಲಿಯ ಎಂದರು, ಸೋಮಯಾಗಕ್ಕೆ ಮೇಕೆ ಬಲಿ ಕೊಟ್ಟರು ಎಂಬೊಂದು ಸುದ್ದಿಯನ್ನು ಒಬ್ಬರು ಸುದ್ದಿ ಮಾಡಿ ಅದರ ಬಗ್ಗೆ ಮಾತಾಡಿ ವಿರೋಧಿಗಳಿಂದ, ಪರವಾದಿಗಳಿಂದ ಲೈಕ್, ಡಿಸ್ ಲೈಕ್ ಪಡೆದು ಮಾತಾಡಿದರೆ, ಮತ್ತೊಬ್ಬರು ಸಿದ್ಧರಾಮಯ್ಯ ಸಭೆಯಲ್ಲಿ ನಿದ್ರೆ ಮಾಡಿದರು, ಸೋನಿಯಾ ಗಾಂಧೀ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್ ನಲ್ಲಿಟ್ಟಿದ್ದಾರೆ, ರಾಹುಲ್ ಗಾಂಧಿ ಪೆದ್ದ ಎಂಬುದಾಗಿ ಪೋಸ್ಟ್ ಹಾಕಿ ಮತ್ತದೇ ಲೈಕ್ ಡಿಸ್ ಲೈಕ್ ಆಟ ಆಡುವುದಾದರೂ ಏತಕ್ಕೆ..? ಗೋಮಾಂಸ ತಿನ್ನುವುದು ಅಪರಾಧ ಎಂದೂ, ಅದು ತಿನ್ನುವುದು ನಮ್ಮ ಹಕ್ಕೆಂದೂ, ಹಿಂದೂ ಧರ್ಮದಲ್ಲಿ ಹುಳುಕಿದೆ ಎಂದೂ, ಅವನು ಸರಿ, ಇವನು ಸರಿ, ಅವನು ತಪ್ಪು ಇವನು ತಪ್ಪು ಎನ್ನುವ ಕೆಸರೆರಚಾಟಕ್ಕೆ ಅಂಬೇಡ್ಕರ್, ಬಸವಣ್ಣ, ಬುದ್ಧ, ಗಾಂಧೀ ಅವರ ಉದ್ದೇಶ, ಬರಹ, ಮಾತುಗಳನ್ನು ಭಗವದ್ಗೀತೆ, ಕುರಾನ್, ಬೈಬಲ್ ನಲ್ಲಿನ ಉಲ್ಲೇಖಗಳನ್ನು ಉಲ್ಲೇಖಿಸುವುದು ಅದೆಷ್ಟರ ಮಟ್ಟಿಗೆ ಸರಿ...?
ಈ ಮಾತನ್ನು ಬರೀ ಈ ಎರಡು ಚಿತ್ರಕ್ಕಷ್ಟೇ ನಾನು ಹೇಳುತ್ತಿಲ್ಲ. ಅಥವಾ ಬರೀ ಸಿನಿಮಾದ ವಿಷಯವೇ ಅಲ್ಲ. ನಾವು ಮುಂದಿನ ಪೀಳಿಗೆಗೆ ಅವರ ಉದ್ದೇಶ-ಸಾಧನೆಯನ್ನು ವಿಶದಪಡಿಸುತ್ತಿಲ್ಲ. ಬದಲಿಗೆ ಅವರನ್ನು ನಮ್ಮವರು-ನಿಮ್ಮವರು ಎಂದು ವಿಂಗಡಣೆ ಮಾಡಿಬಿಡುತ್ತಿದ್ದೇವೆ. ಕ್ರಾಂತಿಕಾರಿ ಬಸವಣ್ಣ ಸಿನೆಮಾವನ್ನು ನೋಡಿದವರೆಷ್ಟು ಜನ ಅದರ ಬಗ್ಗೆ ಮಾತನಾಡುತ್ತಾರೆ. ಸರ್ದಾರ್ ಚಿತ್ರವನ್ನು ಯಾರು ಏಕೆ ಉಲ್ಲೇಖಿಸುವುದಿಲ್ಲ, ಮಮ್ಮುಟ್ಟಿ ಅಭಿನಯದ ಅಂಬೇಡ್ಕರ್, ಕನ್ನಡದ್ದೇ ಬಾಲಕ ಅಂಬೇಡ್ಕರ್,  ನೇತಾಜಿ ಸುಭಾಶ್ ಚಂದ್ರ ಬೋಸ್, ಇಂದಿರಾಗಾಂಧಿ:ದಿ ಡೆತ್ ಆಫ್ ಮದರ್ ಇಂಡಿಯ.. ಮುಂತಾದ ಸಾಧಕರ ಚಿತ್ರಗಳನ್ನು ನಾವೇಕೆ ಪುರಸ್ಕರಿಸುವುದಿಲ್ಲ. ನಾವೆಲ್ಲಾ ಅವರ ಸಾಧನೆಯ ಹಾದಿಯ ಬಗೆಗೆ ಮಾತನಾಡುವುದಕ್ಕಿಂತ ಅವರನ್ನಿಟ್ಟುಕೊಂಡು ವಾದ ವಿವಾದ ಮಾಡುವುದೇ ಜಾಸ್ತಿಯಾಗಿದೆಯಲ್ಲ ಎನಿಸುತ್ತದೆ.

Saturday, May 14, 2016

ಚಕ್ರವ್ಯೂಹದಲ್ಲಿ ನಿರ್ದೇಶಕರೇ ಸಿಲುಕಿದ್ದೇಕೆ..?-ಒಂದು ಹರಟೆ..

ಮೊನ್ನೆ ಮತ್ತೊಮ್ಮೆ  ಅನಿವಾರ್ಯ ಕಾರಣಗಳಿಂದಾಗಿ ಚಕ್ರವ್ಯೂಹ  ಚಿತ್ರವನ್ನು ನೋಡಬೇಕಾಗಿ  ಬಂದಿತ್ತು. ಸಿನಿಮಾ ಅದೆಷ್ಟೇ ಒಳ್ಳೆಯದಿರಲಿ, ಕೆಟ್ಟದ್ದಿರಲಿ  ಪದೇ ಪದೇ ನೋಡಲು  ನನಗಡ್ಡಿಯಿಲ್ಲ. ಒಮ್ಮೆ  ಹಮನಿಸಿದ, ಯೋಚಿಸಿದ, ಗ್ರಹಿಸಿದ  ವಿಷಯಗಳನ್ನು ಪಕ್ಕಕ್ಕಿಟ್ಟು ಮತ್ತೊಂದು ಬೇರೆಯದೇ ಆದ ವಿಷಯವನ್ನು ಅದರಲ್ಲಿ ಹುಡುಕುವ ಪ್ರಯತ್ನ ಮಾಡುತ್ತಾ ಸಿನಿಮಾ ನೋಡುವುದು ನನಗೆ ಖುಷಿಯಾ ಸಂಗತಿ. ನಾನು ಸಿನಿಮಾಕ್ಕೆ ಎರಡನೆಯ ಬಾರಿ ಹೋದದ್ದು ಚಿತ್ರ ಬಿಡುಗಡೆಯಾದ ಹತ್ತನೆಯ ದಿನಕ್ಕೆ. ಚಿತ್ರಮಂದಿರದಲ್ಲಿ ಬೆರಳೆಣಿಕೆಯಾ ಜನವಿದ್ದರು, ಅದರಲ್ಲೂ ಬಾಲ್ಕನಿಯಲ್ಲಿ ಇದ್ದದ್ದು ಇಪ್ಪತ್ತು-ಇಪ್ಪತ್ತೈದು ಜನರು ಮಾತ್ರ. ಅದು ಸಂಜೆಯ ಪ್ರದರ್ಶನದಲ್ಲಿ. ಕನ್ನಡದಲ್ಲಿ  ಬೃಹತ್  ಅಭಿಮಾನಿಗಳನ್ನು  ಹೊಂದಿರುವ, ನಟನೆಯಲ್ಲಿ, ನೃತ್ಯದಲ್ಲಿ, ಹೊಡೆದಾಟದಲ್ಲಿ  ಸೈ ಎನಿಸಿಕೊಂಡಿರುವ ಕಲಾವಿದ ಪವರ್ ಸ್ಟಾರ್ ಪುನೀತ್  ರಾಜಕುಮಾರ್. ಗುಣಮಟ್ಟಕ್ಕೆ ಹೆಚ್ಚು ಗಮನ ಕೊಡುವ ಕತೆ ಚಿತ್ರಕತೆಗೆ ಹೆಚ್ಚು ಗಮನ ಹರಿಸುವ ಪುನೀತ್ ರಾಜಕುಮಾರ್ ಅವರ ಚಿತ್ರದ
ಪ್ರದರ್ಶನದಲ್ಲಿ ಕಡಿಮೆ ಪ್ರೇಕ್ಷಕರನ್ನು ಕಂಡು ನನಗೆ ಒಂದು ರೀತಿಯಾಯಿತು. ಇಷ್ಟಕ್ಕೂ ಚಕ್ರವ್ಯೂಹ ಚಿತ್ರದಲ್ಲಿ ಇಲ್ಲದೆ ಇರುವುದೇನು? ಭರಪೂರ ಹೊಡೆದಾಟಗಳು, ಹಾಡುಗಳು, ಶ್ರೀಮಂತ ಲೊಕೇಶನ್ಗಳು, ಅನುಭವಿ ಕಲಾವಿದರುಗಳು, ಪರಿಣತ ತಂತ್ರಜ್ಞರು... ಹೀಗೆ. ಇಷ್ಟೆಲ್ಲಾ ಇದ್ದು ಮೇಲಾಗಿ ಪವರ್ ಸ್ಟಾರ್ ಪುನೀತ್ ಇದ್ದು  ಸಿನಿಮಾ ಜನರನ್ನು ಆಕರ್ಷಣೆ ಮಾಡುತಿಲ್ಲವಲ್ಲ ಏಕೆ? ಎಂಬ ಪ್ರಶ್ನೆ ನನ್ನನ್ನು ಕಾಡಿದ್ದು ಸತ್ಯ. ಹಾಗೆ ಸಿನಿಮಾ ಒಂದು ಕೈಗೆ ಸಿಗುವುದಿಲ್ಲ, ಇದಿಷ್ಟೇ ಸಿನಿಮಾ ಎಂದು ಯಾವ ಚಿತ್ರಬ್ರಹ್ಮನೂ ಹೇಳಲು ಸಾಧ್ಯವಿಲ್ಲ. ಇಂತಹದ್ದೇ ಯಶಸ್ಸಿನ ಸೂತ್ರ, ಈ ಕತೆ ಪಕ್ಕ ಹಿಟ್ ಆಗುವ ಕತೆ ಎಂದೆಲ್ಲಾ ಹೇಳಲು, ಅಂದಾಜು ಮಾಡಲು ಸಾಧ್ಯವೇ ಇಲ್ಲ. ಆದರೂ ಕೆಲವೊಂದು ಗೆಸ್ ಗಳನ್ನೂ ಮಾಡಬಹುದು. ಪ್ರೇಕ್ಷಕ ಏನನ್ನು ಕೇಳುತ್ತಾನೆ, ಭರಪೂರ ಮನರಂಜನೆ. ಅದರಲ್ಲೂ ಸ್ಟಾರ್ ನಟ ಎಂದಾಗ ಅವನ ನಿರೀಕ್ಷೆ ಇನ್ನೂ ಹೆಚ್ಚಾಗುತ್ತದೆ. ಆದರೆ ಅದನ್ನು ಸಂಧಿಸಲು ಚಿತ್ರಕರ್ಮಿ, ಅದರಲ್ಲೂ ನಿರ್ದೇಶಕ, ನಿರೂಪಕ ಚಿತ್ರಕತೆಗಾರ ಕಷ್ಟ ಪಡಬೇಕಾಗುತ್ತದೆ.. ತಾನೂ ಪ್ರೇಕ್ಷಕನಾಗಿ ಅಭಿಮಾನಿಯಾಗಿ ಆ ಸಿನಿಮಾವನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ.
ಚಕ್ರವ್ಯೂಹ ಚಿತ್ರದ ಕತೆ ತಮಿಳಿನ ಇವನ ವೇರ ಮಾದಿರಿ ಚಿತ್ರದ್ದು. ಅದರ ರಿಮೇಕ್ ಆದ ಚಕ್ರವ್ಯೂಹಕ್ಕೆ ನಿರ್ದೇಶಕ ಅದರ ತಿರುಳನ್ನಷ್ಟೇ ಆಯ್ದುಕೊಂಡಿದ್ದಾರೆ. ಉಳಿದಂತೆ ಇಲ್ಲಿಗೆ ಬೇರೆಯದೇ ಆದ ಚಿತ್ರಕತೆ ರಚಿಸಿದ್ದಾರೆ. ಆ ಸಿನಿಮಾ ನೋಡಿದವರಿಗೆ ಇಲ್ಲೇನು ಮಿಸ್ ಆಗಿದೆ ಎಂಬುದು ಗೊತ್ತಾಗುತ್ತದೆ. ಚಕ್ರವ್ಯೂಹದಲ್ಲಿ ಮಿಸ್ ಆಗಿರುವುದು ಡೀಟೇಲ್ಸ್. ಯಾವುದೇ ಚಿತ್ರದಲ್ಲಿ ಹೀರೋ ಸ್ಟ್ರಾಂಗ್ ಆಗಬೇಕಾದರೆ ವಿಲನ್ ಅವನಿಗಿಂತ ಸ್ಟ್ರಾಂಗ್ ಎಂದು ತೋರಿಸಬೇಕು. ಖಳಪಾತ್ರ ಪೋಷಣೆ ಗಟ್ಟಿಯಾಗಿದ್ದಾಗ ಅವನನ್ನು ಮೆಟ್ಟಿ ನಿಲ್ಲುವ ನಾಯಕನ ಶಕ್ತಿ ಯುಕ್ತಿಗೆ ಒಂದು ಖದರ್ ಬಂದು ಬಿಡುತ್ತದೆ. ನಿರ್ದೇಶಕ ಶರವಣನ್ ತಮಿಳಿನಲ್ಲಿ ಆ ಪಾತ್ರವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ನಾಯಕನನ್ನು ಸುಮ್ಮನೆ ಆಸ್ಪತ್ರೆಯಲ್ಲಿ ಅನಾವರಣಗೊಳಿಸುವ ನಿರ್ದೇಶಕರು ಅದಕ್ಕೂ ಮುನ್ನ ಖಳನ ಕೇಡಿತನವನ್ನು ತುಂಬಾ ಚೆನ್ನಾಗಿ ವಿಶದ ಪಡಿಸಿದ್ದಾರೆ. ಅವನ ಕೃತ್ಯಗಳ ವಿವರಣೆ ನೀಡಿದ್ದಾರೆ. ಅದೆಲ್ಲವನ್ನು ದೃಶ್ಯರೂಪದಲ್ಲಿ ತೋರಿಸಿದ್ದಾರೆ. ಹಾಗೆಯೇ ಚಿತ್ರವನ್ನು ನೇರಾ ನೇರಾ ಪ್ರಾರಂಭಿಸಿದ್ದಾರೆ. ಆದರೆ ಚಕ್ರವ್ಯೂಹದಲ್ಲಿ ಫ್ಲಾಶ್ ಬ್ಯಾಕ್ ತಂತ್ರವನ್ನು ಉಪಯೋಗಿಸಿದ್ದಾರೆ. ಅಲ್ಲದೆ ನಾಯಕನನ್ನೇ ಮೊದಲಿಗೆ ಪರಿಚಯಿಸಿ, ಕತೆಯುದ್ದಕ್ಕೂ ನಾಯಕನನ್ನು ತಂದಿದ್ದಾರೆ. ಹಾಗಾಗಿ ಖಳ ಪಾತ್ರ ಸೊರಗಿ, ಅದು ಹೀರೋಇಸಂ ಗೂ ಮಾರಕವಾಗಿಬಿಟ್ಟಿದೆ.
ಹಾಗೆಯೇ ತಮಿಳಿನಲ್ಲಿರುವ ಮತ್ತೊಂದು ಗಮನಾರ್ಹ ಅಂಶವೆಂದರೆ ತಿರುವುಗಳು. ಒಂದು ಚಿಕ್ಕ ಚಿಕ್ಕ ಸುಳಿವುಗಳು, ಮತ್ತವುಗಳನ್ನು ನಾಯಕ ಮೆಟ್ಟಿ ನಿಲ್ಲುವ ಪರಿ ಕುತೂಹಲ ಹುಟ್ಟಿಸುತ್ತದೆ. ಉದಾಹರಣೆಗೆ ಖಳನನ್ನು ಹೊಡೆದು ತಂದು ರೂಮಿಗೆ ಕೂಡಿಹಾಕುವಾಗಲ್ಲಿನ ಹೊಡೆದಾಟದಲ್ಲಿ ಅವನ ಜೇಬಿನಿಂದ ಆಸ್ಪತ್ರೆಯ ಸ್ಲಿಪ್ ಬಿದ್ದು ಕಾರಿನ ಚಕ್ರಕ್ಕೆ ಸಿಲುಕಿರುತ್ತದೆ. ಕಾರನ್ನು ನೋಡಿ, ಅದನ್ನು ಪರೀಕ್ಷಿಸುವಾಗ ಕಾನೂನು ಮಂತ್ರಿಯ ಕೈಗೆ ಆ ಸ್ಲಿಪ್ ಸಿಕ್ಕಿ ಅವನು ಆಸ್ಪತ್ರೆಯನ್ನು ಹುಡುಕಿಕೊಂಡು ಹೋಗಿ ಅದು ಯಾರಿಗೆ ಬರೆದುಕೊಟ್ಟ ಸ್ಲಿಪ್ ಎಂಬುದನ್ನು ಹುಡುಕಿ ಎಂದು ಹೇಳಿದಾಗ ನಾಯಕ ಆ ಫೈಲ್ ಅನ್ನು ಕಾಣೆಯಾಗಿಸುತ್ತಾನೆ. ಆದರೆ ಕನ್ನಡದಲ್ಲಿ  ಈ ಸನ್ನಿವೇಶವೇ ಇಲ್ಲದಿರುವುದು ಒಂದು ಕುತೂಹಲಕರ ದೃಶ್ಯ ಇಲ್ಲದಂತಾಗಿದೆ. ಹಾಗೆಯೆ ಮಧ್ಯಂತರದ ನಂತರ ಚಿತ್ರ ಬಹುಬೇಗ ಮುಗಿಯುತ್ತದೆ. ತಮಿಳಿನ ಚಿತ್ರದ ಅವಧಿ ಎರಡು ಘಂಟೆ, ಮೂವತ್ತು ನಿಮಿಷ  ಇದ್ದರೆ ಕನ್ನಡದಲ್ಲಿ ಎರಡು ಘಂಟೆ ಹದಿನಾಲ್ಕು ನಿಮಿಷ ಮಾತ್ರವಿದೆ. ಹಾಗೆಯೇ ಕನ್ನಡದಲ್ಲಿ ಅನಗತ್ಯವಾದ ಎರಡು ಹೊಡೆದಾಟಗಳು ಸೇರ್ಪಡೆಯಾಗಿವೆ. ಇವೆಲ್ಲ ಕತೆಯ, ಕುತೂಹಲಕರ ಮೈಂಡ್ ಗೇಮ್ ಇರಬಹುದಾಗಿದ್ದ ಸಮಯವನ್ನು ತಿಂದುಬಿಟ್ಟಿದ್ದು ಸಿನಿಮಾವನ್ನು ಸರಳೀಕರಿಸಿದೆ. ಹಾಗಾಗಿಯೇ ಚಿತ್ರದ ತುಂಬಾ ಸಾದಾರಣ ಎನಿಸುತ್ತದೆ. ಉಸಿರುಬಿಗಿಹಿಡಿದು ಕಾಯಬೇಕಾಗಿದ್ದ ಪ್ರೇಕ್ಷಕ ನಿರಾಳವಾಗಿ ಸಿನಿಮಾ ನೋಡುವಂತೆ ಮಾಡಿಬಿಟ್ಟಿದೆ. ನಾಯಕಿಯನು ಕಿಡ್ನಾಪ್ ಮಾಡಿದಂದಿನಿಂದ ಬಿಡಿಸುವವರೆಗಿನ ಕತೆ ಸುಮಾರು ಸಮಯ ತೆಗೆದುಕೊಂಡು ಬಿಡುತ್ತದೆ. ವಿಷಯ ಕಡಿಮೆಯಿದ್ದು ಅದರ ನಿರೂಪಣೆ ಸಮಯ ಹಿಗ್ಗಿದ್ದು ಅದು ನೋಡಿದ ನಂತರ ಇಷ್ಟೇನಾ ಎನಿಸುವಂತೆ ಮಾಡಿಬಿಡುತ್ತದೆ. ಹಾಗೆಯೇ ಶರವಣ ತಮಿಳು ಆವೃತ್ತಿಯನ್ನು ಹೆಚ್ಚು ದೃಶ್ಯಗಳಿಂದ ಸೆರೆಹಿಡಿದಿದ್ದರೆ, ಚಕ್ರವ್ಯೂಹವನ್ನು ವಾಚ್ಯವಾಗಿಸಿದ್ದಾರೆ. ನಾಯಕನ ಸ್ವಗತವನ್ನು ಅಲ್ಲಲ್ಲಿ ಸೇರಿಸುವ ಮೂಲಕ ಭಾವತೀವ್ರತೆಯನ್ನು ತೆಳುಗೊಳಿಸಿದ್ದಾರೆ.
ಅದೇಕೋ ಒಂದೇ ಚಿತ್ರವನ್ನು ಬೇರೆ ಬೇರೆ ಭಾಷೆಯಲ್ಲಿ ನಿರ್ದೇಶಿಸಿ ಗೆದ್ದ ನಿರ್ದೇಶಕರ ನಡುವೆ ಪವರ್ ಸ್ಟಾರ್ ಅಂತಹ ಸ್ಟಾರ್ ಇದ್ದು ಶರವಣ ಗೆಲುವು ಸಾಧಿಸದೆ ಇದ್ದದ್ದು ವಿಷಾದನೀಯ ಎನಿಸುತ್ತದೆ. ಪಿ.ವಾಸು ಆಪ್ತಮಿತ್ರವನ್ನು ಆಪ್ತರಕ್ಷಕವನ್ನು ತಮಿಳು ತೆಲುಗು ಎಲ್ಲಾ ಕಡೆ ನಿರ್ದೇಶನ ಮಾಡಿ ಗೆದ್ದಿದ್ದಾರೆ, ಹಾಗೆಯೇ ಮುರುಗದಾಸ್ ಘಜಿನಿ, ತುಪಾಕಿ ಚಿತ್ರಗಳನ್ನು  ಬಾಲಿವುಡ್ ವರೆಗೂ ತೆಗೆದುಕೊಂಡು ಹೋಗಿ ಗೆಲ್ಲಿಸಿದ್ದಾರೆ. ಆದರೆ ಪುನೀತ್ ವಿಷಯದಲ್ಲಿ ಕನ್ನಡದ ವಿಷಯದಲ್ಲಿ ಪುನರಾವರ್ತನೆಯಾಗದೆ ಇದ್ದದ್ದು ಬೇಸರದ ಸಂಗತಿ. ತಮಿಳಿನಲ್ಲಿ ಯಶಸ್ಸು ಕಂಡ ಪೋರಾಳಿ ಚಿತ್ರವನ್ನು ತಾವೇ ಖುದ್ದು ನಿಂತು ಯಾರೇ ಕೂಗಾಡಲಿ ಎಂದು ಭಾಷಾಂತರಿಸಿದ ಸಮುದ್ರಕನಿ ಆ ಚಿತ್ರದ ಮೂಲಕ ಪ್ರಭಾವ ಬೀರಲೇ ಇಲ್ಲ. ಈಗ ಶರವಣ ಕೂಡ ಎಲ್ಲೋ ಎಡವಿದ್ದಾರೆ. ತಮ್ಮದೇ ಕತೆಯನ್ನು ಅದಕ್ಕಿಂತ ಪ್ರಭಾವಕಾರಿಯಾಗಿ ಪವರ್ಫುಲ್ ಆಗಿ ನಿರೂಪಿಸುತ್ತಾರೆ ಎನ್ನುವ ನಿರೀಕ್ಷೆ ಯನ್ನು ಸುಳ್ಳು ಮಾಡಿದ್ದಾರೆ.
ಇದೆಲ್ಲಾ ಸಿನಿಮಾದ ಫಲಿತಾಂಶ ಬಂದ ಮೇಲೆ ಮಾತಾಡುವುದು ಸುಲಭ ಎನಿಸುವುದಾದರೂ ಒಮ್ಮೆ ಚಿತ್ರದ ಹೊರಗೆ ನಿಂತು ಚಿತ್ರಕರ್ಮಿ ಆ ಚಿತ್ರವನ್ನು ಊಹಿಸಿಕೊಂಡಲ್ಲಿ ಒಂದಷ್ಟು ಬದಲಾವಣೆಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ಆದರೆ ಸ್ವಲ್ಪ ಆಲೋಚನೆಗಳು ಏಕಮುಖ ಆದಾಗ ಹೀಗಾಗುತ್ತದೆ.

Thursday, May 12, 2016

ವಿಮರ್ಶೆ, ಕಟು ವಿಮರ್ಶೆ, ದೋಷಗಳು..ಇತ್ಯಾದಿ..ಇತ್ಯಾದಿ

 ತಿಥಿ ಸಿನಿಮಾ ನೋಡಿ ಜನ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಸಿದ್ಧ ಸೂತ್ರಗಳನ್ನು ಪಕ್ಕಕ್ಕಿಟ್ಟ ಸಾದಾರಣ ಸರಳ ಕತೆ, ಸರಳ ನಿರೂಪಣೆಯ ಚಿತ್ರದ ನೈಜತೆ ಪ್ರೇಕ್ಷಕರನ್ನು ಮೋಡಿ ಮಾಡಿದ್ದು, ಗ್ರಾಮೀಣ ಸೊಗಡನ್ನು ಅದು ಹಾಗೆಯೇ ತೆರೆಯ ಮೇಲೆ ತಂದಿರುವ ಪರಿಗೆ ಅಚ್ಚರಿ ಪಡುವಂತಹದ್ದೆ. 
ಆದರೆ ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲಿನ ದೋಷಗಳನ್ನು ಕುರಿತಾಗಿ ಚರ್ಚೆಯೂ ನಡೆಯುತ್ತಿದೆ. ಅಷ್ಟು ಹೊಗಳುವ ಸಿನಿಮಾ ತಿಥಿ ಅಲ್ಲ, ಅದೊಂದು ಸಾಮಾನ್ಯ ಚಿತ್ರ, ಅದರಲ್ಲಿ ತಪ್ಪುಗಳಿವೆ ಎಂದು ಶುರುವಾಗುವ ಚರ್ಚೆ, ಒಕ್ಕಲಿಗರು ಹೆಣವನ್ನು ಸುಡುವುದಿಲ್ಲ, ಮಾಂಸದ ಊಟಕ್ಕೆ ಶ್ಯಾನುಭೋಗ, ತಿಥಿ ದಿನಾಂಕ ಗೊತ್ತು ಮಾಡಿದ ವ್ಯಕ್ತಿ ಯಾಕೆ ಬಂದರು, ಸೆಂಚುರಿ ಗೌಡನ ಮಕ್ಕಳು ನಾಲ್ವರಾದರೆ ಗಡ್ಡಪ್ಪ ಮಾತ್ರ ಕಾಣಿಸಿಕೊಂಡಿದ್ದಾರೆ, ಉಳಿದವರು ಎಲ್ಲಿ..? ಹೀಗೆ. ಸುಮ್ಮನೆ ಇದನ್ನೆಲ್ಲಾ ಓದಿದರೆ ಹೌದಲ್ಲ  ಎನಿಸದೆ ಇರದು. ಆದರೆ ಒಂದು ಚಿತ್ರದಲ್ಲಿ ದೋಷಗಳು ಇರುವುದು ದೊಡ್ಡ ದೋಷವೇ..? ಹಾಗಾದರೆ ವಿಮರ್ಶೆ ಎಂದರೆ ಏನು..? ಅದು ಪೋಸ್ಟ್ ಮಾರ್ಟಂ ಅಲ್ಲ. ಇಷ್ಟಕ್ಕೂ ಒಂದು ಸಿನಿಮಾ ಎಂದರೆ ಮನರಂಜನೆ, ಕತೆಯ ನಿರೂಪಣೆ...ಹೀಗೆ. ಅದೊಂದು ಸಮಗ್ರ ಕಲೆಗಳ ಮಿಶ್ರಣ. ಹಾಗಾಗಿ ಹಲವಾರು ಕಲಾಪ್ರಕಾರಗಳು ಒಂದೆಡೆ ಸರಿದಾಗ ಎಲ್ಲವನ್ನು ಕರಾರುವಕ್ಕಾಗಿ ಅಚ್ಚಿಳಿಸುವುದು ಸಾಧ್ಯವೇ ಇಲ್ಲ. ಅಲ್ಲದೆ ಅದು ಒಬ್ಬರ ಕೈ ಅಡುಗೆ ಅಲ್ಲ.. ನಿರ್ದೇಶಕನಿಂದ ಪ್ರಾರಂಭ ಟೀ ಕಾಫಿ ಕೊಡುವ ಹುಡುಗನ ತನಕ ಎಲ್ಲರ ಕೊಡುಗೆಯೂ ಸಿನಿಮಾದಲ್ಲಿರುತ್ತದೆ. ತೆರೆಯ ಮೇಲೆ ಕಲಾವಿದರ ಕಾಣಿಸಿದರೆ, ಸಂಗೀತ ಮಾತುಗಳು ಕೇಳಿಸಿದರೆ ಅದರ ಹಿಂದೆ ಹಲವರ ಕೈಚಳಕ ಇದ್ದೇ ಇರುತ್ತದೆ.
ನಮ್ಮ ಸಿನೆಮಾಗಳಲ್ಲಿನ ದೋಷಗಳನ್ನು ತಾಂತ್ರಿಕ ದೋಷಗಳು, ವಸ್ತು-ನಿಖರತೆ ದೋಷಗಳು, ನಿರಂತರತೆಯಲ್ಲಿನ ದೋಷಗಳು ಎಂದೆಲ್ಲಾ ಪಟ್ಟಿ ಮಾಡಬಹುದು. ಇವುಗಳ ಸಿನಿಮಾದ ಓಘಕ್ಕೆ ಗತಿಗೆ ಅದೆಷ್ಟರ ಮಟ್ಟಿಗೆ ಪ್ರಭಾವ ಬೀರುತ್ತವೋ ಇಲ್ಲವೋ ದೋಷವಂತೂ ಇದ್ದೇ ಇರುತ್ತದೆ ಎಂದು ದಾಖಲಿಸಬಹುದಷ್ಟೇ. ಕೇಳಿಕೊಳ್ಳುವ ಪ್ರಶ್ನೆಗೆ ಉತ್ತರಿಸಲು ಸಿನಿಮಾದಲ್ಲಿ ಯಾರಿರುತ್ತಾರೆ ಹೇಳಿ...? ಸಿನಿಮ  ಪ್ರೇಕ್ಷಕನನ್ನು ತನ್ನೊಳಗೆ ಸೆಳೆದುಕೊಳ್ಳುತ್ತಾ ಸಾಗಿದಾಗ ಅದೆಲ್ಲಾ ಗೌಣ. ಆಮೇಲೆ ಸುಮ್ಮನೆ ಎಲ್ಲೋ ಕುಳಿತುಕೇಳಿಕೊಳ್ಳಬಹುದು. ಆದರೆ ಪ್ರೇಕ್ಷಕ ತಪ್ಪು ಹುಡುಕುವುದಿಲ್ಲ, ಅವನು ಕೇಳುವುದು ಸಿನೆಮಾದಲ್ಲಿನ ನಿರೀಕ್ಷಿತ ಭಾವವನ್ನು. ಸೆಂಟಿಮೆಂಟ್ ಎಂದುಕೊಂಡ ಸಿನಿಮಾಕ್ಕೆ ಹೋದರೆ ಅದರಲ್ಲಿ ಹಾರರ್ ಇದ್ದು, ಅದು ಇಷ್ಟ ಪಡಿಸದೇ ಇದ್ದಾಗ ರೊಚ್ಚಿಗೇಳದೇ ಹೇಗಿರುತ್ತಾನೆ ಹೇಳಿ..? ಸಾಯಿಕುಮಾರ್ ಅಭಿನಯದ ಪೋಲಿಸ್ ಚಿತ್ರವೊಂದರಲ್ಲಿ ಹೊಡೆದಾಟವೆ ಇಲ್ಲದೆ, ಕ್ಲೈಮಾಕ್ಸ್ ಹಾಡಿನಲ್ಲಿ ಕೊನೆಯಾದಾಗ ಕೂಗಾಡಿದ ಪ್ರೇಕ್ಷಕರಿದ್ದಾರೆ, ಹಾಗೆಯೇ ವಯಸ್ಕರ ಚಿತ್ರವೊಂದಕ್ಕೆ ಮೈಮನಗಳನ್ನು ಬಿಸಿ ಮಾಡಿಕೊಳ್ಳಲು ಪ್ರೇಕ್ಷಕ ಬಂದಿದ್ದರೆ ಅದರಲ್ಲಿ ಮಾಮೂಲಿ ಸಿನೆಮದಲ್ಲಿರುವಷ್ಟೂ ರೋಮ್ಯಾನ್ಸ್ ಇಲ್ಲದೆ ಇದ್ದಾಗ ಕೋಪಗೊಂಡ ಅವನು ಕುದಿಯುತ್ತಿರುವಾಗಲೇ, ಅಷ್ಟು ಸಾಲದೆಂಬಂತೆ ಮಧ್ಯ ಡಾ. ಅಶೋಕ್ ಪೈ ಬಂದು ಪಾಠ ಮಾಡಿದರೆ ಕುರ್ಚಿ ಮುರಿಯದೆ ಬಿಡುತ್ತಾನೆಯೇ..?ಹಾಸ್ಯ ಎಂದುಕೊಂಡು ಹೋದವರಿಗೆ ಸೆಂಟಿಮೆಂಟ್ ತಗ್ಲಾಕಿಕೊಂಡರೆ ಅದೆಷ್ಟು ಕೋಪ ಬರುತ್ತದೆ ಅಲ್ಲವೇ..? ಇದೆಲ್ಲಾ ಸಿನಿಮಾದಲ್ಲಿ ಆಗಿರುವಂತಹದ್ದೆ. ಸಿನಿಮಾ ತನ್ನ ಪೋಸ್ಟರ್ ಗಳಿಂದ, ಟ್ರೈಲರ್ ಗಳಿಂದ, ಹಾಡುಗಳಿಂದ, ನಿರ್ದೇಶಕರಿಂದ, ನಟರಿಂದ ಬರೀ ನಿರೀಕ್ಷೆಯಂನಷ್ಟೇ ಹುಟ್ಟುಹಾಕಿರುವುದಿಲ್ಲ, ಜೊತೆಗೆ ಒಂದಷ್ಟು ಸುಳಿವು ನೀಡಿರುತ್ತದೆ, ಒಂದು ಊಹೆಯನ್ನು ಕಲ್ಪನೆಯನ್ನು ಪ್ರೇಕ್ಷಕನಲ್ಲಿ ತುಂಬಿರುತ್ತದೆ, ಹಾಗೆಯೇ ಅವನನ್ನು ಸಿನಿಮಾಕ್ಕೆ ತಯಾರಿ ಮಾಡಿರುತ್ತದೆ. ಆ ಭಾವದ ಸಿನೆಮಾವನ್ನು ನೋಡಲು ಉತ್ಸುಕನಾಗಿ ಮಾನಸಿಕವಾಗಿ ತಯಾರಾಗಿ ಬಂದ ಪ್ರೇಕ್ಷಕನಿಗೆ ಒಳಗೆ ಬೇರೆಯದನ್ನು ತೋರಿಸಿದರೆ ಅದು ಅದೆಲ್ಲವನ್ನು ಮರೆಸುವಷ್ಟು ಚೆನ್ನಾಗಿರಬೇಕಾಗುತ್ತದೆ. ಇಲ್ಲವಾದಲ್ಲಿ ಅದರಲ್ಲಿನ ತಪ್ಪುಗಳು ರಾಚುತ್ತವೆ.
ನಮ್ಮ ಸಿನೆಮಾಗಳಲ್ಲಿ ತಾಂತ್ರಿಕ-ದೋಷಗಳು ಸರ್ವೇ ಸಾಮಾನ್ಯ. ಬೆಳಕಿನ ಸಾಮ್ಯತೆ, ಕ್ಯಾಮೆರಾ ಕೋನದಲ್ಲಿ ಬದಲಾವಣೆಯಾದಾಗ ವ್ಯತ್ಯಾಸವಾಗುವುದು ಇತ್ಯಾದಿ ಇತ್ಯಾದಿ. ಹಾಗೆಯೇ ನಿರಂತರತೆಯ ದೋಷವನ್ನು ತಡೆಯಲು ಕಷ್ಟ. ಲಾಂಗ್ ಶಾಟ್ ನಲ್ಲಿ ಚಿತ್ರಣವಿದ್ದಾಗ ಇದ್ದ ಮುಖ್ಯ ಕಲಾವಿದರನ್ನು ಹೊರತುಪಡಿಸಿ ಹಿಂದೆ ಮುಂದೆ ಇದ್ದ ಜನರು, ವಸ್ತುಗಳು ಶಾಟ್ ಬದಲಾದಾಗ ಕಾಣೆಯಾಗಬಹುದು, ಬದಲಾಗಬಹುದು, ಹಾಗೆಯೇ ನಾಯಕನ ಶರ್ಟ್, ಪ್ಯಾಂಟ್, ಬೆಲ್ಟ್, ಸ್ಥಳ ಹೀಗೆ ಚಿತ್ರೀಕರಣಕ್ಕೆ ಅನುಕೂಲಕ್ಕೆ ತಕ್ಕಂತೆ, ಅದನ್ಯಾರು ಗಮನಿಸುತ್ತಾರೆ ಬಿಡು ಎಂದು ಚಿತ್ರತಂಡ ನಿರ್ಲಕ್ಷ್ಯ ತೋರಿದಾಗ ಇಂತಹ ದೋಷಗಳು ಸರ್ವೇ ಸಾಮಾನ್ಯ. ಹಾಗೆಯೇ ವಸ್ತು ನಿಖರತೆ ದೋಷಗಳು- ಈಗ ತಿಥಿಯಲ್ಲಿ ಪಟ್ಟಿ ಮಾಡಿರುವಂತಹದ್ದು ಇದೆ. ಆದರೆ ಇದನ್ನು ಸಂಪೂರ್ಣ ದೋಷ ಎಂದೂ ಹೇಳಲಾಗುವುದಿಲ್ಲ, ಜ್ಯೋತಿಷ್ಯ ಹೇಳಿ, ದಿನಾಂಕ ನಿಗದಿ ಪಡಿಸುವವ ಬ್ರಾಹ್ಮಣನೆ ಆಗಬೇಕೆಂದಿಲ್ಲ, ಹಾಗೆಯೇ ಊರಲೊಬ್ಬ ಸಸ್ಯಾಹಾರಿ ಮಾಂಸದ ಊಟವನ್ನು ರೂಢಿಸಿಕೊಂಡಿರಬಹುದು, ಶ್ಯಾನುಭೋಗ ಎಂಬುದು ಅವನ ಹೆಸರು, ಹುದ್ದೆ, ಅಡ್ಡ ಹೆಸರು ಇರಬಹುದು, ಅಥವಾ ಅವನು ಮಾಂಸ ತಿನ್ನುವಂತವನಾಗಿರಬಹುದು, ಇನ್ನು ಗಡ್ದಪ್ಪನ ಸೋದರರಲ್ಲಿ ಎಲ್ಲರೂ ಸತ್ತಿರಬಹುದು, ಅಥವಾ ಬೇರೆ ಬೇರೆ ಊರಲ್ಲಿರಬಹುದು, ಅಥವಾ ಅಲ್ಲಿ ಬಂದಿದ್ದರೂ ಕತೆಗೆ ಬೇಕಾಗಿಲ್ಲವಾದ್ದರಿಂದ ಅವರನ್ನು ನಿರ್ದೇಶಕ ನಮಗೆ[ಪ್ರೇಕ್ಷಕ]ರಿಗೆ ಪರಿಚಯಿಸಿಲ್ಲದೆ ಇರಬಹುದು... ಹೀಗೆ ಸಮರ್ಥನೆ ನೀಡುತ್ತಾ ಸಾಗಬಹುದು. ಇಷ್ಟಕ್ಕೂ ತಿಥಿ ಜೀವನ ಚರಿತ್ರೆಯಲ್ಲ, ಸಾಕ್ಷ್ಯ ಚಿತ್ರವೂ ಅಲ್ಲ, ಅದೊಂದು ಕಾಲ್ಪನಿಕ ಕತೆ. ಹಾಗೆ ನೋಡಿದರೆ ಪ್ರತಿಯೊಂದು ಚಿತ್ರದಲ್ಲೂ ಇಂತಹ ಪ್ರಶ್ನೆಗಳು ಪ್ರೇಕ್ಷಕನನ್ನು ಕಾಡದೆ ಇರದು. ಆದರೆ ಅದೆಲ್ಲವನ್ನು ಮರೆಸಿಕೊಂಡು ಸಿನಿಮಾ ನೋಡಿಸಿಕೊಂಡು ಬಿಟ್ಟರೆ ಅದು ಆ ಸಿನಿಮಾದ ಸಾರ್ಥಕತೆ. ಉದಾಹರಣೆಗೆ ರಂಗಿತರಂಗ. ಗೆಳೆಯರ ಜೊತೆಗೆ ಹಾಡಿ ಕುಣಿದು, ಪ್ರೇಯಸಿಗೆ ಹಳೆಯ ಗೆಳೆಯರನ್ನು ಭೇಟಿ ಮಾಡಿಕೊಂಡು ಬರುತ್ತೇನೆ ಎಂದು ಹೋಗುವ ನಾಯಕ ಅಪಘಾತದಲ್ಲಿ ಸತ್ತು ಬೇರೆ ವ್ಯಕ್ತಿಯಾಗುತ್ತಾನೆ, ಕಾದಂಬರಿಕಾರನಾಗಿ, ಮದುವೆಯಾಗಿ ಬದುಕು ನಡೆಸುತ್ತಾನೆ. ಓಕೆ. ಆದರೆ ಅವನ ಗೆಳೆಯರು, ಮನೆಯವರು ಇವನೆಲ್ಲಿ ಕಾಣೆಯಾದ ಎಂದು ಹುಡುಕುವುದಿಲ್ಲವೇ..? ಅವನ ಪ್ರೇಯಸಿ ಬಿಟ್ಟರೆ ಬೇರ್ಯಾರಿಗೂ ಅವನು ಮಾಯವಾದ ಬಗೆ ಅಚ್ಚರಿ ಗಾಬರಿ ಹುಟ್ಟಿಸುವುದಿಲ್ಲವೇ..? ಹಾಗೆಯೇ ಅಪಘಾತದಲ್ಲಿ ಸತ್ತವರ ಕುಟುಂಬಗಳು ಅವರನ್ನು ಹುಡುಕುವುದಿಲ್ಲವೇ..? ಅಪಘಾತಕ್ಕೂ ಮೊದಲು ನಾಯಕಿ ಅಪಘಾತ/ಕೊಲೆ ಮಾಡಿ ಅವಳನ್ನು ಕಾಡುತ್ತಿದ್ದ ಪ್ರಭಾವಿ-ಶ್ರೀಮಂತ ಯುವಕನನ್ನು ಸಾಯಿಸುತ್ತಾಳಲ್ಲಾ ಅವನ ಹೆಣದ, ಕೊಲೆಯ ಇನ್ವೆಸ್ಟಿಗೇಷನ್ ಇತ್ಯಾದಿ ನಡೆಯುವುದಿಲ್ಲವೆ..? ಹೀಗೆ ಪ್ರಶ್ನಿಸಲೂ ಬಹುದು. ಮತ್ತದಕ್ಕೆ ಉತ್ತರವನ್ನು ನೀಡಬಹುದು. ಕಾಣೆಯಾದ ನಾಯಕನ ಗೆಳೆಯರು/ಕುಟುಂಬದವರು ಸತ್ತನೆಂದು ತಿಳಿದಿರಬಹುದು, ಹುಡುಕುತ್ತಿರಬಹುದು, ನಾಯಕಿ ಸಾಯಿಸಿದ ವ್ಯಕ್ತಿಯ ತನಿಖೆ ಕೂಡ ನಡೆಯುತ್ತಿರಬಹುದು, ಸಿನಿಮಾದ ಕತೆಯ ನಿರೂಪಣೆಯ ದಿಕ್ಕು ಬೇರೆಯಾದ್ದರಿಂದ ಅದು ಬೇರೆ ದಿಕ್ಕಿನಲ್ಲಿ/ಟ್ರ್ಯಾಕ್ ನಲ್ಲಿ ನಡೆಯುತ್ತಿದ್ದು ಸಿನಿಮಾದಲ್ಲಿ ಕಾಣುವುದು ಒಂದು ಮುಖ ಮಾತ್ರ ಎನ್ನಬಹುದು. ಇದು ಸಮರ್ಥನೆಯೂ ಹೌದು, ಉತ್ತರವೂ ಹೌದು. ಅಥವಾ ಅದು ಇರೋದೇ, ಇದ್ದಿದೆ ಹೌದು ಎನ್ನಬಹುದು. ಇನ್ನು ಕಮರ್ಷಿಯಲ್ ಚಿತ್ರಗಳಲ್ಲಿ ಇಂತಹ ಪ್ರಶ್ನೆಗಳು ದೋಷಗಳು ದಂಡಿಯಾಗಿ ಸಿಗುತ್ತವೆ. ಹಾಗೆಯೇ ಕಲಾತ್ಮಕ ಚಿತ್ರಗಳಲ್ಲೂ ಹುಡುಕಬಹುದು. ಆದರೆ ತಪ್ಪು ಹುಡುಕಿ ಮಾರ್ಕ್ಸ್ ಕೊಡಲು ಯಾರಿದ್ದಾರೆ, ಅದು ಯಾರಿಗೆ ಬೇಕಿದೆ. ಚಿತ್ರಮಂದಿರಕ್ಕೆ ಹೊಕ್ಕವನಿಗೆ ರಂಜಿಸಿದರೆ ಎಲ್ಲಾ ತಪ್ಪು ಮಾಫಿ.. ಇಲ್ಲವಾದಲ್ಲಿ ಎಷ್ಟೇ ಚಂದವಿದ್ದರೂ ತಥ್..ಅಲ್ಲವೇ..?
ಬಹುಶ ವಿಮರ್ಶೆ ಎಂದರೆ ಇದೆ ಇರಬೇಕು. ಹೀಗಿರಬೇಕಿತ್ತು, ಹಾಗೇಕಿದೆ, ಹೀಗಿರಬಾರದಿತ್ತು ಎನ್ನುವುದು ವಿಮರ್ಶೆಯೇ..? ಇರುವುದರಲ್ಲಿ ಇಲ್ಲದ್ದನ್ನು ಇಲ್ಲದ್ದರಲ್ಲಿ ಇರುವುದನ್ನು ಹುಡುಕುವುದು ಅದ್ಯಾವ ವಿಮರ್ಶೆ..? ಸಿನಿಮಾದ ಆಶಯ ಮತ್ತು ಅದರ ಫಲಿತಾಂಶ- ಇವೆರೆಡು ಶೇಕಡಾ ಲೆಕ್ಕದಲ್ಲಿ ಅರವತ್ತಷ್ಟಾದರೂ ಹೊಂದಿಕೆಯಾದರೆ ಅದೊಂದು ಸಿನಿಮಾ ಎನಿಸಿಕೊಳ್ಳುತ್ತದೆ. ವಿಮರ್ಶಕರು ಅಷ್ಟನ್ನು ಮಾತ್ರ ಹೊಂದಿಸುತ್ತಾ ಸಾಗಿದರೆ ಸಿನಿಮಾದ ಲೆಕ್ಕ ಪಕ್ಕಾಗುತ್ತದೇನೋ? ಇಲ್ಲವಾದಲ್ಲಿ ಸಿನಿಮಾದ ವಿಮರ್ಶೆ-ವಿಮರ್ಶಕನಿಗೂ- ನೋಡುಗನಿಗೂ ಚಿತ್ರಕರ್ಮಿಗೂ ಅಜಗಜಾಂತರ ವ್ಯತ್ಯಾಸ ಬಂದುಬಿಡುತ್ತದೆ. ಸಿನಿಮಾದ ಬಗೆಗೆ ಬರೆದದ್ದು ಅದನ್ನು ಓದಿಕೊಂಡು ಹೋದ ಬಹುಪಾಲು ಪ್ರೇಕ್ಷಕ/ಓದುಗನಿಗೆ ಅಹುದು ಎನಿಸದಿದ್ದರೆ ಅದು ಚಿಕಿತ್ಸೆಯಾಗದೆ, ಪೋಸ್ಟ್ ಮಾರ್ಟಂ ಆಗುತ್ತದೆ ಅಷ್ಟೇ..ಸಿನೆಮಾವನ್ನು ಇನ್ನಷ್ಟು ಜೀವಂತ ಗೊಳಿಸುವ ಚಿಕಿತ್ಸೆ ತೆರನಾಗಿ ವಿಮರ್ಶೆ ಇದ್ದರೆ ಅದಕ್ಕೆ ಬೆಲೆ, ಇಲ್ಲವಾದಲ್ಲಿ ಅದು ಪೋಸ್ಟ್ ಮಾರ್ಟಂ. ಅಷ್ಟೇ ಅಲ್ಲವೇ..?
ಒಂದೂ ದೋಷವಿಲ್ಲದ, ಎಲ್ಲದರಲ್ಲೂ ನಿಖರತೆಯಿರುವ ಚಿತ್ರವನ್ನು ಮಾಡಲು ಸಾಧ್ಯವಿದೆಯೇ....? ಇರಬಹುದು. ಆದರೆ ಅದನ್ನು ಸಂಪೂರ್ಣವಾಗಿ ನೋಡಿ ಅನುಭವಿಸಿ, ಖುಷಿ ಪಡಲು ನಮ್ಮಿಂದ ಸಾಧ್ಯವೇ..? ಹೇಳುವುದು ಕಷ್ಟ...