Friday, March 11, 2016

ಕಿರಗೂರು ದೃಶ್ಯರೂಪದಲ್ಲೇನಿದೆ.. ಏನಿಲ್ಲಾ..?

ಒಂದು ಜನಪ್ರಿಯ ಕಾದಂಬರಿಗೆ ದೃಶ್ಯ ರೂಪ ಕೊಡುವ ಕೆಲಸ ಸಾಮಾನ್ಯವಾದುದಲ್ಲ. ಏಕೆಂದರೆ ಬರಹದಲ್ಲಿ ಒಂದು ಸಾಲಿನಲ್ಲಿ ಹೇಳಿದ್ದನ್ನು ತೋರಿಸಲು ಒಂದು ಶಾಟ್ ಸಾಕಾಗಬಹುದು, ಅಥವಾ ದೃಶ್ಯಗಳೇ ಬೇಕಾಗಬಹುದು. ಸುಮನ ಕಿತ್ತೂರು ಈ ಹಿಂದೆ ಎದೆಗಾರಿಕೆ ಮಾಡಿದ್ದಾಗ ಮೂಲ ಕಾದಂಬರಿಗೆ ನ್ಯಾಯ ಒದಗಿಸಬಲ್ಲರೆ ಎನ್ನುವುದು ಪ್ರಶ್ನೆಯಾಗಿತ್ತು. ಏಕೆಂದರೆ ಕಾದಂಬರಿಯಲ್ಲಿ ಹೆಚ್ಚು ಬರುವುದು ಮತ್ತು ನಿರೂಪಿತವಾಗುವುದು ಕಾದಂಬರಿಕಾರನ ಕತೆ. ಅವನ ದೃಷ್ಟಿಕೋನದ ಮೂಲಕ ಕತೆ ಸಾಗುತ್ತದೆ. ಅವನು ವಿವರಿಸುತ್ತಾ ಸಾಗುವ ಕತೆಯಲ್ಲಿ ಪರಿಚಯವಾಗುವುದು "ಅವನ" ಕತೆ. ಅದನ್ನು ಒಬ್ಬ ನಿರ್ದೇಶಕ/ಕಿ ಹೇಗೆ ತೆರೆಯ ಮೇಲೆ ತರಬಹುದು ಎನ್ನುವ ಕುತೂಹಲ ನನಗಂತೂ ಇತ್ತು. ಇತ್ತ ಕಾದಂಬರಿ ಎನಿಸಿಕೊಳ್ಳುವಷ್ಟು ದೊಡ್ಡದೂ ಅಲ್ಲದ, ನೀಳ್ಗತೆ ಎನಿಸಿಕೊಳ್ಳುವಷ್ಟು ಚಿಕ್ಕದು ಅಲ್ಲದ ಎದೆಗಾರಿಕೆಯನ್ನು ನಾನು ಅದೆಷ್ಟು ಸಲ ಓದಿದ್ದೆ ಎಂಬುದು ನನಗೆ ಲೆಕ್ಕವಿರಲಿಲ್ಲ. ಕೊನೆಯಲ್ಲಿ "ಅವನು" ಹೇಗೆ ಡಿಸೈಡ್ ಆಗಿದೆ, ಗನ್ ನಲ್ಲಿ ಸಾಯಿಸುತ್ತೀರಾ..? ಎಂಬರ್ಥದಲ್ಲಿ ಪ್ರಶ್ನಿಸುತ್ತಾನೆ. ನಿರೂಪಕ ಹಾಗೆ ಮೌನವಾಗುತ್ತಾನೆ. ನಿಜಕ್ಕೂ ನನ್ನ ಸ್ಥಿತಿಯೂ ಅದೇ ಆಗಿತ್ತು.  ಆದರೆ  ಸೋನಾ ನ ಕತೆಯನ್ನು ದೃಶ್ಯ ರೂಪದಲ್ಲಿ ಹೆಚ್ಚು ತರುವ ಮೂಲಕ ನ್ಯಾಯ ಒದಗಿಸಿದ್ದರು ಸುಮನಾ ಕಿತ್ತೂರು. ಸಿನಿಮಾ ಖುಷಿ ಕೊಟ್ಟಿತ್ತು.
ಆದರೆ ಅದೇ ಮಾತನ್ನು ಕಿರಗೂರಿಗೆ ಹೇಳುವುದು ಕಷ್ಟ. ಈಗಾಗಲೇ ಕಾದಂಬರಿ ಓದಿದವರಿಗೆ ಕಿರುಗೂರು ಸಿನಿಮಾ ರೂಪ ಖುಷಿ ಕೊಡುವುದೇ..? ಹೇಳುವುದು ಕಷ್ಟ.  ಕಿರಗೂರು ಗಯ್ಯಾಳಿಗಳು ಕತೆಯ ಮುಖ್ಯ ಅಂಶ ಅಲ್ಲಿನ ಹೆಂಗಸರ ಬಜಾರಿತನವಷ್ಟೇ ಅಲ್ಲ, ಅವರ ಮಾತುಗಳು. ಕತೆಯಲ್ಲಿ ಹಲವಾರು ಕೊವೆಗಳಿವೆ. ಆದರೆ ಸಿನಿಮಾ ರೂಪ ಎಂದಾಗ ಅಲ್ಲಿರುವ ಅಷ್ಟೂ ಕತೆಯನ್ನು ಪ್ರತಿ ಪುಟವನ್ನು ತೆರೆಯ ಮೇಲೆ ತರಬೇಕು ಎನ್ನುವಂತಿಲ್ಲ. ಕೆಲವೇ ಪುಟಗಳನ್ನೂ ತೆಗೆದುಕೊಂಡ ಪುಟ್ಟಣ್ಣ ಬೆಳ್ಳಿಮೋಡ ಮಾಡಿ ಗೆದ್ದಿದ್ದಾರೆ,. ಬರೀ ಥೀಮ್ ಅಷ್ಟೇ ತೆಗೆದುಕೊಂಡ ಸ್ಲಂ ಡಾಗ್ ಚಿತ್ರ ಬೇರೆಯದೇ ಕತೆಯಾಗಿ ಇಷ್ಟವಾಗುತ್ತದೆ. ದೃಶ್ಯರೂಪ ಎಂದಾಗ ಬರಹಗಾರ/ಲೇಖಕ ಪಕ್ಕಕ್ಕೆ ಸರಿಯುತ್ತಾನೆ, ಅಲ್ಲಿ ಸಾರ್ವಭಾಮನಾಗುವುದು ಕಲಾವಿದ. ಕಿರಗೂರು ಚಿತ್ರದಲ್ಲಿ ಗಯ್ಯಾಳಿಗಳ ಪಾತ್ರದಲ್ಲಿ ಶ್ವೇತಾ, ಮಾನಸ ಜೋಷಿ, ಸೋನು, ಸುಕೃತ ವಾಗ್ಲೆ ಇದ್ದಾರೆ. ಆದರೆ ಅವರ ಸಂಭಾಷಣೆ ದೇಸಿಯ ವಾಗಿದೆ, ಆದರೆ ಅದನ್ನು ಒಪ್ಪಿಸುವ ಪರಿ ಮಾತ್ರ ಸಹಜವಾಗಿಲ್ಲ. ಏಕೆಂದರೆ ಕಲಾವಿದರಿಗೆ ಆಯಾ ಭಾಷೆಯಾ ಸೊಗಡನ್ನು ಹಾಗೆಯೇ ಸಹಜವಾಗಿ ಒಪ್ಪಿಸಲು ಸಾಧ್ಯವಾಗಿಲ್ಲ. ಅವರ ಬೈಗುಳ, ದಿಟ್ಟತನದ ಮಾತುಗಳು ಮತ್ತು ಶೈಲಿ ಇಲ್ಲಿ ಕೈಕೊಟ್ಟಿದೆ.
ಮೊನ್ನೆ ಬೆಂಗಳೂರು ಸಿನಿಮೊತ್ಸವದಲ್ಲಿ ರಾಮ್ ರೆಡ್ಡಿ ನಿರ್ದೇಶನದ "ತಿಥಿ" ಚಿತ್ರ ನೋಡಿದಾಗ ನನಗನ್ನಿಸಿದ್ದು ಏನೆಂದರೆ ಆ ಸಿನೆಮಾವನ್ನು ಯಾವ ಆಸ್ಕರ್ ಪಡೆದ ನಟನನ್ನು ಕರೆದು ತಂದು ಅಭಿನಯಿಸುವಂತೆ ಮಾಡಿದ್ದರೂ ಆ ಸೊಗಸು ಬರುತ್ತಿರಲಿಲ್ಲವೇನೋ ಎಂಬುದು. ಏಕೆಂದರೆ ಅದೇ ಊರಿನ ಒಂದಷ್ಟು ಜನರನ್ನು ಆಯ್ಕೆಮಾಡಿ ಅವರಿಗೆ ಹೀಗೆ ಹೇಳಿ, ಇಷ್ಟು ಹೇಳಿ ಎಂದು ಅವರ ಕೈಯಲ್ಲಿ ಅಭಿನಯ ತೆಗಿಸಿರುವ ಪರಿ ಅನನ್ಯ. ಹಾಗೆಯೇ ಮೊನ್ನೆ ಮೊನ್ನೆ ಗೀತಾ ಬ್ಯಾಂಗಲ್ ಸ್ಟೋರ್ ಎನ್ನುವ ಸಿನಿಮಾ ಬಂದಿತ್ತು. ಅದರಲ್ಲಿಯೂ ಒಂದು ಪ್ರಾಂತ್ಯದ ಸೊಗಡನ್ನು ನಿರ್ದೇಶಕರು ಅದ್ಭುತವಾಗಿ ತೆರೆಯ ಮೇಲೆ ತಂದಿದ್ದರು. ಆದರೆ ಅದೇ ಕೆಲಸವನ್ನು ಸುಮನ ಕಿತ್ತೂರು ಶ್ರಮಪಟ್ಟರೂ ಸಂಪೂರ್ಣ ತರುವಲ್ಲಿ ಯಶಸ್ವಿಯಾಗಿಲ್ಲ. ಹಾಗೆಯೇ ಚಿತ್ರಕತೆಗೆ ಗೊತ್ತು ಗುರಿಯಿಲ್ಲದಿರುವುದು ಮತ್ತು ನಿರೂಪಣೆಯಲ್ಲಿ ಸ್ಪಷ್ಟತೆ ಇಲ್ಲದಿರುವುದು ಕೂಡ ಚಿತ್ರದ ಮೈನಸ್ ಪಾಯಿಂಟ್. ಉದಾಹರಣೆಗೆ ಚಿತ್ರ ಪ್ರಾರಂಭವಾಗುತ್ತಲೇ ಪರಿಚಯವಾಗುವ ಗಯ್ಯಾಳಿ ಪಾತ್ರಗಳ ಗುಣಾವಗುಣ ಪರಿಚಯವಾದರೂ ಅವರ ಕುಟುಂಬಗಳ ಪರಿಚಯ ಸ್ಪಷ್ಟವಾಗಿಲ್ಲ. ಹಾಗೆಯೇ ಕಿರಗೂರು ನಲ್ಲಿನ ಎರಡು ಜಾತಿಗಳ ನಡುವಣ ಜನರ ಸಂಬಂಧದ ಅನಾವರಣದ ಸ್ಪಷ್ಟತೆ ಕೂಡ ಇಲ್ಲ.
ಇವೆಲ್ಲದರ ನಡುವೆಯೂ ಸಿನಿಮಾ ಓಕೆ ಎನಿಸುವುದು ಅದರ ಕಥಾದೃಷ್ಟಿಯಿಂದ. ಒಂದು ಒಳ್ಳೆಯ ಕತೆಯನ್ನು ಸಿನಿಮಾಕ್ಕೆ ಆಯ್ದುಕೊಳ್ಳುವ ಪದ್ಧತಿ ಮತ್ತು ಸಂಪ್ರದಾಯ ಚಿತ್ರರಂಗಕ್ಕೆ ಅತೀ ಮುಖ್ಯ. ಮಾತೆತ್ತಿದರೆ ರಿಮೇಕ್ ಎನ್ನುವ ಜನರ ನಡುವೆ ಅಥವಾ ಅವರದೇ ಆದ ಕತೆಯನ್ನು, ಅದು ಕತೆ ಎನಿಸದಿದ್ದರೂ ಸಿನಿಮಾ ಮಾಡುವ ಮಂದಿಯ ನಡುವೆ ಇಂತಹ ಚಿತ್ರಗಳನ್ನು ತೆರೆಗೆ ತರುವ ನಿರ್ದೇಶಕರನ್ನು ಪ್ರಶಂಸೆ ಮಾಡಲೇಬೇಕಾಗುತ್ತದೆ. ಆದರೆ ನಿರೀಕ್ಷೆ ಹುಟ್ಟುಹಾಕುವ ಅವರೇ ಅದನ್ನು ತಾಕದಿದ್ದಾಗ ಎಲ್ಲೋ ಒಂದು ಮೂಲೆಯಲ್ಲಿ ಇನ್ನೂ ಚೆನ್ನಾಗಿರಬೇಕಾಗಿತ್ತು ಎನಿಸಿದರೆ ಅದಕ್ಕೆ ಅವರೇ ಕಾರಣವಾಗುತ್ತಾರೆ. ಮತ್ತದೂ ಒಳ್ಳೆಯದು ಕೂಡ. ಹಾಗಾಗಿ ಕಿರಗೂರು ಚಿತ್ರ ನೋಡಬೇಕಾದ ಚಿತ್ರ, ನೋಡಿದ ಮೇಲೆ ಮಾತಾಡಬೇಕಾದ ಚಿತ್ರ, ಅದರ ಬಗ್ಗೆ ಚರ್ಚಿಸಬೇಕಾದ ಚಿತ್ರ. ಅದರ ಒಳ ಹೊರಗನ್ನು ವಿಶದಪಡಿಸಬೇಕಾದ ಚಿತ್ರ. ಹಾಗಾದಾಗ ಆದವರಿಗೆ ತಲುಪಿದಾಗ ಅವರ ಜವಾಬ್ದಾರಿಯೂ ಹೆಚ್ಚುತ್ತದೆ, ನಮ್ಮಂತಹ ಪ್ರೇಕ್ಷಕರಿಗೆ ನೋಡಲು ಮತ್ತೊಂದು ಒಳ್ಳೆಯ ಸಿನಿಮಾ ಅಪ್ಡೇಟ್ ಆಗಿ ಸಿಗುತ್ತದೆ.

Thursday, March 10, 2016

ಸಾಲು ಸಾಲು ಚಿತ್ರಗಳ ನಡುವೆ ನೋಡಬೇಕಾದದ್ದು..

ಪೂಚಂತೇ ಬರಹಗಳು ನನ್ನನ್ನು ಓದಿಸಿಕೊಂಡಿದ್ದು ಬಹಳ. ಅದೆಷ್ಟೇ ಸಲ ಓದಿದ್ದರೂ ಮತ್ತೊಮ್ಮೆ ಓದುವ ಎನ್ನುವಂತೆ ಮಾಡುವುದು ಅವರ ಬರಹಗಳ ವಿಶೇಷ. ಅವರ ಪರಿಸರದ ದಿನಗಳು ಮೊನ್ನೆ ಎಲ್ಲೋ ಹೋದಾಗ ಕೈ ಸಿಕ್ಕಿ ಅದೆಷ್ಟು ಆನಂದವಾಯಿತು ಎಂದರೆ ಅದನ್ನು ಇದಾಗಲೇ ಲೆಕ್ಕವಿಲ್ಲದಷ್ಟು ಸಲ ಓದಿದ್ದರೂ ಮತ್ತೊಮ್ಮೆ ಓದಿ ಆವಾಂತರ ಸೀನಪ್ಪ, ಮಾಸ್ತಿ ಭೈರ ಮುಂತಾದವರನ್ನು ಮನ'ತುಂಬಿಸಿಕೊಂಡದ್ದಾಯಿತು. ಪೂಚಂತೇ ಕಾದಂಬರಿಗಳು ಕತೆಗಳು ಸಿನಿಮಾ ರೂಪ ತಾಳಿವೆ. ಅವರ ತಬರನ ಕತೆ ಈವತ್ತಿಗೂ ಮನ ಮಿಡಿಸುತ್ತದೆ. ಅವರ ಜುಗಾರಿ ಕ್ರಾಸ್ ಸೂಪರ್ ಥ್ರಿಲ್ಲರ್. ಆ ನಿಟ್ಟಿನಲ್ಲಿ ಕಿರಗೂರಿನ ಗಯ್ಯಾಳಿಗಳು ನೀಳ್ಗತೆ ಒಂದು ಜಾಲಿ ರೈಡ್ ಎನ್ನಬಹುದು. ಅಲ್ಲಿನ ಸಂಭಾಷಣೆ ಮತ್ತು ನಡೆಯುವ ಘಟನೆಯೇ ಚಿತ್ರದ ಕತೆಯ ಹೈ ಲೈಟ್. ಅದು ಸಿನಿಮಾ ರೂಪಕ್ಕೆ ಬರುತ್ತಿರುವುದು ಮತ್ತು ಚಿತ್ರಕ್ಕೆ ನಿರ್ದೇಶಕಿ ಆಯ್ಕೆ ಮಾಡಿಕೊಂಡಿರುವ ತಾರಾಗಣ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚು ಮಾಡಿದೆ. ಹಾಗೆಯೇ ಎಂಟು ನಿಮಿಷಗಳ ಟ್ರೈಲರ್ ಮೂಲಕ ಮನಗೆದ್ದ ಸುನಿ ಅವರ ಸಿಂಪಲ್ ಆಗ್ ಇನ್ನೊಂದ್ ಲವ್ ಸ್ಟೋರಿ. ಅವರ ಮೊದಲ ಸಿನಿಮಾ ತೆರೆಗೆ ಬಂದಾಗ ಸ್ವಲ್ಪ ಅಗತ್ಯಕ್ಕಿಂತ ಜಾಸ್ತಿಯೇ ಅಬ್ಬರಿಸಿದ್ದ ಚಿತ್ರತಂಡವದು. ಒಮ್ಮೊಮ್ಮೆಗೆ ತಮ್ಮ ಬ್ಯಾನರ್ ನ ಐದಾರು ಚಿತ್ರಗಳನ್ನು ಘೋಷಣೆ ಮಾಡಿ ಹುಬ್ಬೇರಿಸುವಂತೆ ಮಾಡಿದ್ದ ಸುನಿ ಬಹುಪರಾಕ್ ನಂತರ ತೀರಾ ಮಂಕಾದದ್ದು ವಿಪರ್ಯಾಸ. ಅವರದೇ ನಿರ್ಮಾಣದ ಮತ್ತೊಂದು ಚಿತ್ರ ಉಳಿದವರು ಕಂಡಂತೆಯೇ ಚಿತ್ರದ ಸೋಲು ಅವರನ್ನು ಪೂರ್ತಿಯಾಗಿ ಹಳ್ಳ ಹಿಡಿಸಿದ್ದು ಸತ್ಯ. ಹಾಗೆ ನೋಡಿದರೆ ಎರಡೂ ಚಿತ್ರಗಳು ಹೊಸ ಪ್ರಯೋಗಗಳೇ. ಆದರೆ ಅದೆಲ್ಲೋ ಹಣಕಾಸಿನ ಲೆಕ್ಕಾಚಾರ ಉಲ್ಟಾ ಆಯಿತೇನೋ? ಆ ಎರಡು ಸಿನಿಮಾ ಗೆದ್ದಿದ್ದರೆ ಕನ್ನಡಕ್ಕೆ ಮತ್ತಷ್ಟು ಹೊಸ ನಿರ್ದೇಶಕರ ಪರಿಚಯವಾಗುತ್ತಿತ್ತೇನೋ? ಈಗ ಸದ್ದಿಲ್ಲದೇ ಸುನಿ ಮಾತ್ತೊಂದು ಸಿನಿಮಾ ತಂದಿದ್ದಾರೆ. ಅದರದ್ದೂ ಮಾರುದ್ದದ ಟ್ರೈಲರ್ ಬಿಟ್ಟಿದ್ದರೂ ಆ ಸಿನಿಮಾ ಮಾಡಿದ ಮೋಡಿಯನ್ನು ಈ ಸಿನಿಮಾ ಮಾಡಿಲ್ಲ. ಆದರೂ ಭರವಸೆಯಂತೂ ಇದ್ದೆ ಇದೆ.
ವಾರಕ್ಕೆ ಆರಾರು ಚಿತ್ರಗಳು ಬಿಡುಗಡೆಯಾಗುತ್ತಿದೆ. ಒಂದು ಸಿನಿಮಾ ಮಾಡುವುದು ವರ್ಷಗಟ್ಟಲೆ ಸಮಯದ ನೂರಾರು ಜನರ ಶ್ರಮದ ಮತ್ತು ಕೋಟ್ಯಾಂತರ ರೂಪಾಯಿಗಳ ಖರ್ಚಿನ ವಿಷಯ. ಆದರೆ ಕೆಲವೊಮ್ಮೆ ಅದನ್ನೂ ಅಷ್ಟೇ ಸುಲಭವಾಗಿ ಮಾಡಿಬಿಡುವ ನಿರ್ದೇಶಕರಿಗೆ ಒಂದೊಂದು ದೊಡ್ಡ ಸಲಾಂ ಹೊಡೆಯಲೇ ಬೇಕಾಗುತ್ತದೆ. ಫೆಬ್ರವರಿ ತಿಂಗಳಿನಲ್ಲಿ ಭಾಗ್ಯರಾಜ್, ದೇವರ ನಾಡಲ್ಲಿ, ಗಜಪಡೆ, ಜ್ವಲಂತಂ, ನಾನಿಲ್ದೆ ನೀನಿರ್ತೀಯ, ಪ್ರಿಯಾಂಕ, ಶಿವಯೋಗಿ ಪುಟ್ಟಯ್ಯಜ್ಜ, ಬನವಾಸಿ, ಪ್ರೀತಿಯಲ್ಲಿ ಸಹಜ, ಶಿವಲಿಂಗ, ಆಕ್ಟರ್, ಭಲೆಜೋಡಿ, ಮಧುರ ಸ್ವಪ್ನ, ನನ್ನ ಲವ್ ಟ್ರ್ಯಾಕ್, ರಾಜ್ ಬಹದ್ದೂರ್, ಯು ದಿ ಎಂಡ್ ಎ, 400, ಗೇಮ್. ಕೃಷ್ಣರುಕ್ಕು, ಮರೆಯಲಾರೆ, ಪ್ರೀತಿ ಕಿತಾಬು, ವಾಟ್ಸ್ ಅಪ್ ಲವ್ ಬಿಡುಗಡೆಯಾಗಿವೆ. ಅಂದರೆ ವಾರಕ್ಕೆ ಆರು ಚಿತ್ರಗಳು. ಅದರಲ್ಲಿ ಯಾವುದೂ ಗಮನ ಸೆಳೆದಿಲ್ಲ. ನೋಡುಗ ವಾರಕ್ಕೆರೆಡು ನೋಡಿದರೂ ಸಿನಿಮಾಗಳು ದಂಡಿಯಾಗಿ ಬಾಕಿ ಉಳಿಯುತ್ತವೆ. ಇವುಗಳಲ್ಲಿ ಕೆಲವಂತೂ ಕೆಲವು ಊರನ್ನು ಕಾಣುವುದೇ ಇಲ್ಲ. ಬೆಂಗಳೂರಿನ ಒಂದೆರೆಡು ಚಿತ್ರಮಂದಿರಗಳಲ್ಲಿ ಕಾಣಿಸಿಕೊಂಡರೆ ಆಮೇಲೆ ಅವನ್ನು ನಾವು ನೋಡುವುದಕ್ಕೂ ಸಾಧ್ಯವಿಲ್ಲ. ಮೊದಲೆಲ್ಲಾ ಮಿಸ್ಸಾದರೆ ಟಿವಿಯಲ್ಲಿ ಬರುತ್ತೆ ಎನ್ನಬಹುದಾಗಿತ್ತು. ಈಗ ಟಿವಿಯಲ್ಲಿ ಬರುವುದಿಲ್ಲ. ಬೇರೆ ತಾಲೂಕು, ಹೋಬಳಿ, ದೊಡ್ಡ ಊರುಗಳ ಟೆಂಟ್ ನಲ್ಲಿ ಕಾಣಿಸುವುದಿಲ್ಲ. ಹಾಗಾಗಿ ಬಂದದ್ದಷ್ಟೆ.. ಹೋದದ್ದಷ್ಟೇ. ಆನಂತರ ಆ ಸಿನಿಮಾ, ಆ ನಿರ್ದೇಶಕ, ಆ ನಿರ್ಮಾಪಕ, ಆ ಹಣ ಎಲ್ಲವೂ ಮಂಗಮಾಯ. ಆದರೂ ಸಿನೆಮಾವನ್ನು ಅಧ್ಯಯನ ಮಾಡದಯೇ ಕಣ್ಮುಚ್ಚಿಕೊಂಡು ಸಿನಿಮಾ ಮಾಡುವ ಅದನ್ನು ಬಿಡುಗಡೆ ಮಾಡುವವರಿಗೇನೂ ಕಡಿಮೆಯಿಲ್ಲ ಎನ್ನುವುದು ಬೇಸರದ ಸಂಗತಿ. ಹಾಗೆಯೇ ಈ ವಾರವೂ ಸಿನಿಮಾಗಳಿವೆ. ಎಲ್ಲವನ್ನೂ ನೋಡುವ ಎನಿಸಿದರೂ ಎ ಎರಡು ಚಿತ್ರಗಳು ಭರವಸೆ ಹುಟ್ಟಿಸಿವೆ.

Saturday, March 5, 2016

ರೇ...ರೇ.....

ದೇಸಾಯಿ ಕಳೆದುಹೋಗಿ ತುಂಬಾ ದಿನಗಳೇ ಆಗಿವೆ. ಆದರೆ ಅವರನ್ನು ಮತ್ತೆ ಮತ್ತೆ ಹುಡುಕುವ ಪ್ರೇಕ್ಷಕನ ಪ್ರಯತ್ನ ವಿಫಲವಾಗುತ್ತಲೇ ಇದೆ ಎಂಬುದು ರೆ ಚಿತ್ರದ ಒಂದು ಸಾಲಿನ ವಿಮರ್ಶೆ ಎಂದರೆ ತಪ್ಪಾಗಲಾರದು. 
ಅವನಿಗೆ ಮದುವೆ ಆಗಿಲ್ಲ, ಅವನಿಗೆ ಮದುವೆ ಮಾಡಬೇಕು, ಹಾಗಾದರೆ ಇದೊಂದು ಪ್ರೇಮ ಕೌಟುಂಬಿಕ ಮದುವೆ ಇತ್ಯಾದಿ ಸಂಗತಿಗಳ ಸಾಂಸಾರಿಕ ಚಿತ್ರ ಅಂದುಕೊಳ್ಳಬಹುದೇ..? ಮುಂದೆ ಕೇಳಿ..ಅವರೊಂದು ಮನೆಯಲ್ಲಿ ಅನಿವಾರ್ಯವಾಗಿ ಉಳಿಯಲೇ ಬೇಕು. ನಿಜ,, ಅಲ್ಲಿ ಒಂದಲ್ಲ ಎರಡಲ್ಲ ಐದು ಪ್ರೇತಾತ್ಮಗಳಿವೆ, ಅಯ್ಯೋ ಇದು ಹಾರರ್ ಇರಬಹುದಾ..?  ಆ ಪ್ರೆತಾತ್ಮಗಳಿಗೆ ಮುಕ್ತಿ ಸಿಗಬೇಕಾದರೆ ನಾಯಕನ ಮದ್ವೆ ಆಗಬೇಕು.. ಅದಕ್ಕಾಗಿ ಪ್ರೇತಗಳ ತಂತರ್ಗಾರಿಕೆ, ಉಪಾಯ.. ಒಹೋ ಇದು ಹಾರರ್ ಕಾಮಿಡಿ.. ಉಹೂ.. ಚಿತ್ರ ಕ್ಷಣ ಕ್ಷಣಕ್ಕೂ ಬದಲಾಗುತ್ತದೆ. ಪಾತ್ರಗಳು ಬರುತ್ತವೆ, ಮಾತನಾಡುತ್ತವೆ, ನಟಿಸುತ್ತವೆ, ಹೋಗುತ್ತವೆ. ಹಾಡುಗಳು ಬರುತ್ತವೆ. ಅವುಗಳು ಇಂಪಾಗಿದೆಯಾ? ಬೇಡ ಬಿಡಿ.. ಅವುಗಳು ಬರುವ ಸಂದರ್ಭ ಸಿನಿಮಾಕ್ಕೆ ಸೂಕ್ತವೆ..? ಉಹೂ..
ದೇಸಾಯಿ ಚಿತ್ರಗಳೆಂದರೆ ಅದರ ಖದರ್ರೆ ಬೇರೆ ಇರುತ್ತಿತ್ತು. ನಾನು ಹೈ ಸ್ಕೂಲ್ ನಲ್ಲಿದ್ದಾಗ ನಿಷ್ಕರ್ಷ ಬಿಡುಗಡೆಯಾಗಿತ್ತು. ವಿಷ್ಣುವರ್ಧನ್ ಅಷ್ಟೇ ನಮಗೆ ಮುಖ್ಯವಾಗಿದ್ದ ಸಮಯವದು. ವಿಷ್ಣುವರ್ಧನ್, ಸೈನಿಕನ ಡ್ರೆಸ್, ಕೈಯಲ್ಲಿ ಮಷೀನ್ ಗನ್ ಒಂದು ಸಿನಿಮಾ ನೋಡಲು ನಮಗೆ ಬೇರೆ ಯಾವ ಕಾರಣಗಳೂ ಬೇಕಿರಲಿಲ್ಲ. ಫೈಟ್ ಇರುತ್ತವೆ ಎನ್ನುವುದು ಆವತ್ತಿನ ಸಿನೆಮಾ ನೋಡಲು ಮುಖ್ಯವಾದ ಏಕೈಕ ಆಕರ್ಷಣೀಯ ಸಂಗತಿ. ಹಾಗಾಗಿ ಹುಚ್ಚೆದ್ದು ಸಿಎಂಮ ನೋಡಿದ್ದೆವು. ಆದರೆ ನಿಷ್ಕರ್ಷ ಮಾಮೂಲಿ ಫೈಟಿಂಗ್ ಸಿನಿಮಾದಂತಿರಲಿಲ್ಲ. ನಮಗೆ ಬೇಕಾದ ಅಂಶಗಳ ಜೊತೆಗೆ ಅದರದೇ ಆದ ಕಸುವಿತ್ತು ಸಿನಿಮಾದಲ್ಲಿ. ಅದೊಂದು ಅನುಭವವೇ ಬೇರೆಯಾಗಿತ್ತು. ಆಗ ನಮಗೆ ದೇಸಾಯಿ ಪರಿಚಯವಾದದ್ದು. ಆನಂತರ ಅವರ ತರ್ಕ, ಉತ್ಕರ್ಷ ಸಿನಿಮಾಗಳನ್ನು ಹುಡುಕಿಕೊಂಡು ಹೋಗಿ ನೋಡಿ ಖುಷಿ ಪಟ್ಟು ನಿರ್ದೇಶಕ ಎಂದರೆ ದೇಸಾಯಿ ಎನ್ನುವಂತಾಗಿತ್ತು. ಪುಟ್ಟಣ್ಣ ಎಂದರೆ ಒಂದು ಚಿತ್ರ ಮೂಡುತ್ತಿದ್ದ ಪಟ್ಟಿಯಲಿ ಈಗ ದೆಸಾಯಿಯವರ್ದೆ ಬೇರೆಯದೇ ಚಿತ್ರ ನಿಲ್ಲುತ್ತಿದ್ದು. ದೇಸಾಯಿ ಎಂದರೆ ರೋಚಕತೆ ಎನ್ನುವಮಟ್ಟಿಗೆ ದೇಸಾಯಿ ನಮ್ಮನ್ನು ಸೆಳೆದಿದ್ದರು. ಆನಂತರ ನಮ್ಮೂರ ಮಂದಾರ ಹೂವೆ ನೋಡಿ ಒಹೋ ದೇಸಾಯಿ ಹೀಗೂ ಮಾಡುತ್ತಾರೆ, ಹೇಗೆ ಬೇಕಾದರೂ ಮಾಡುತ್ತಾರೆ, ಏನು ಬೇಕಾದರೂ ಮಾಡುತ್ತಾರೆ ಅವರೊಬ್ಬ ಸಿನಿಮಾ ಮಾಂತ್ರಿಕ ಎನ್ನುವ ನಿರ್ಧಾರ ನನ್ನದಾಗಿತ್ತು.
ಆದರೆ ಆನಂತರ ದೇಸಾಯಿ ಕಳೆದುಹೋಗುತ್ತಾ ಬಂದರು. ಅವರನ್ನು ಹುಡುಕುವ ಕೆಲಸಕ್ಕೆ ನಾನು ನಿಂತುಕೊಂಡೆ. ಬಿಡುಗಡೆಯಾಗುವ ಅವರ ಚಿತ್ರದಲ್ಲಿ ಅದಿಲ್ಲದಿದ್ದರೆ, ಇದಿರಬಹುದು, ಇದಿಲ್ಲದಿದ್ದರೆ ಬೇರೇನೋ ಇರಬಹುದು.. ಹೀಗೆ. ಆದರೆ ದೇಸಾಯಿ ದೇಸಾಯಿಯಾಗಿಯೇ ಉಳಿದಿಲ್ಲ ಎಂಬುದು ಬೇಸರದ ಸಂಗತಿ. 
ಅವರ ಪರ್ವ, ಕ್ಷಣ ಕ್ಷಣ ಚಿತ್ರಗಳಲ್ಲಿದ್ದ ಗೊಂದಲ ರೇ ಚಿತ್ರದಲ್ಲಿಯೂ ಇದೆ ಎಂಬುದೇ ಬೇಸರ ತರಿಸುತ್ತದೆ. ಒಬ್ಬ ನಿರ್ದೇಶಕ ಅಪ್ಡೇಟ್ ಆಗದೆ ಇದ್ದರೂ ಪರವಾಗಿಲ್ಲ, ಆದರೆ ತಮ್ಮ ಹಳೆಯ ಖದರ್ ಬಿಟ್ಟುಕೊಡಬಾರದು. ಆದರೆ ದೇಸಾಯಿ ಅಲ್ಲೂ ಇಲ್ಲ, ಮುಂದೆಯೂ ಬಂದಿಲ್ಲ  ಎಂದರೆ ಬೇಸರವಾಗುತ್ತದೆ.
ದೇಸಾಯಿ ಮತ್ತೊಂದು ಸಿನಿಮ ಮಾಡುತ್ತಾರೆ, ಮಾಡಲೇಬೇಕು, ಸಿನಿಮಾ ಅಲ್ಲದೆ ಅವರು ಬೇರೇನೂ ಮಾಡಲು ಸಾಧ್ಯ? ದಶಕಗಳ ಸಿನೆಮಾವನ್ನೇ ಉಸಿರುಮಾಡಿಕೊಂಡ ನಿರ್ದೇಶಕನಿಗೆ ಬೇರೆ ಶಕ್ತಿಗಳಿಗಿಂತ ಸಿನೆಮವೇ ಶಕ್ತಿ. ಆ ದೇಸಾಯಿ ಬಂದ"ರೆ" ಕಾಣಿಸಿಕೊಂಡ"ರೇ:" ಅದಕ್ಕಿಂತ ಖುಷಿಯ ಸಂಗತಿ ನಮ್ಮಂತಹ ಸಿನಿಪ್ರೇಮಿಗಳಿಗೆ ಬೇರೇನಿದೆ.



Saturday, February 20, 2016

ಹೇಟ್ ಫುಲ್ ಏಟ್ ಮತ್ತು ಟರಂಟಿನೋ ರಕ್ತದಾಹ..

ಆಗ ತಾನೇ ಸಿಕ್ಕಿದ್ದಾಳೆ ಸಹೋದರಿ ಮಾತನಾಡಲು. ಅವಳಿಗೂ ಖುಷಿ. ನೆಲಮಾಲಿಗೆಯಿಂದ ಮೇಲೆ ಬಂದ ಅವನನ್ನು ಕಂಡು. ಎರಡೇ ಮಾತು. ಆತನ ತಲೆ ಚಿದ್ರವಾಗುತ್ತದೆ. ಅವನ ತಲೆಯಿಂದ ಹಾರಿದ ರಕ್ತ ಅವಳ ಮುಖವನ್ನು ತುಂಬುತ್ತದೆ. ತನ್ನನ್ನು ಎಳೆದುಕೊಂಡು ಹೋಗುತ್ತಿದ್ದವ ಕೈಗೂ ತನ್ನ ಕೈಗೂ ಸಂಕೋಲೆ ಇದೆ. ಆದರೆ ಅವನು ಸತ್ತು ಬಿದ್ದಿದ್ದಾನೆ. ಈಗೇನು ಮಾಡುವುದು.. ಸಂಕೋಲೆಯಾ ಬೀಗದ ಕೈ ಇಲ್ಲ. ಹಾಗಾಗಿ ಅವನ ಕೈಯನ್ನೇ ಕತ್ತರಿಸಿ ಬಿಡುತ್ತಾಳೆ ಪಾತಕಿ. ಆದರೆ ಅವಳನ್ನು ಅಲ್ಲೇ ಕಷ್ಟಪಟ್ಟು ಅವರಿಬ್ಬರೂ ಸೇರಿ ಹಗ್ಗ ಬಿಗಿದು ಸಾಯಿಸುತ್ತಾರೆ. ಇದಕ್ಕೂ ಮುನ್ನ ಅವಳ ಮುಖದ ಮೇಲಿನ ರಕ್ತವನ್ನು ಸೋಪುಹಾಕಿ ಮುಖ ತೊಳೆದ ನಂತರ ಕೈಯಲ್ಲೊಮ್ಮೆ ನೀರನ್ನು ಒರೆಸುವಂತೆ ಅವಳು ಒರೆಸಿಹಾಕಿರುತ್ತಾಳೆ... ಹೀಗೆ.
ಅವನು ಕ್ವೆಂಟನ್ ಟರಂಟಿನೋ. ಅವನು ಬದಲಾಗಿಲ್ಲ. ರಕ್ತವಿಲ್ಲದೇ ಬರ್ಬರವಾದ ಕೊಲೆಯಿಲ್ಲದೆ, ತಣ್ಣನೆಯ ಕ್ರೌರ್ಯವಿಲ್ಲದ ಅವನು ಸಿನಿಮಾ ಮಾಡುವುದಿಲ್ಲ. ಅವನ ಇತ್ತೀಚಿನ ಚಿತ್ರವಾದ ಹೇಟ್ಫುಲ್ ಏಟ್ ಕೂಡ ಅದೇ ಸಾಲಿನ ಚಿತ್ರ. ಒಂದು ಮನೆಯೊಳಗೇ ಒಂದಷ್ಟು ಜನರು ಸೇರಿಕೊಳ್ಳುವುದು ಒಬ್ಬರನ್ನೊಬ್ಬರು ಕೊಲ್ಲುವುದು ಚಿತ್ರದ ಕತೆ. ಚಿತ್ರದಲ್ಲಿ ರಕ್ತಪಾತವಿದೆ. ಆದರೆ ನಮ್ಮನ್ನು ಬೆಚ್ಚಿ ಬೀಳಿಸುವುದು. ಅವರು ಕೊಲ್ಲುವ ಆ ಹೀನ ಕಾರ್ಯವನ್ನು ಅನುಭವಿಸುವ ಆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಪರಿ. ಮಾತನಾಡುತ್ತಲೇ ಶೂಟ್ ಮಾಡುವುದು, ರಕ್ತ ಹರಿದರೆ ಅದನ್ನು ಒದ್ದೆಯಾದ ಶರ್ಟ್ ಅನ್ನು ಒರೆಸಿಕೊಳ್ಳುವಂತೆ ಒರೆಸಿಕೊಳ್ಳುವುದು, ಕೊಲೆ ಮಾಡುವ ಸಂದರ್ಭದಲ್ಲಿಯೂ ಆರಾಮವಾಗಿ ಮಾತನಾಡುವುದು...ಅಬ್ಬಬ್ಬಾ... 
ಟರಂಟಿನೋ ಸಿನಿಮಾಗಳೇ ಹಾಗೆ. ಆತನ ಪಲ್ಪ್ ಫಿಕ್ಷನ್  ಚಿತ್ರದಲ್ಲಿ ಕೊಲೆ ಮಾಡಲು ಬರುವ ಹಂತಕರಿಬ್ಬರು ಆರಾಮವಾಗಿ ಊರು ಕೇರಿಯ ವಿಷಯವನ್ನು ಮಾತನಾಡುತ್ತಾರೆ. ಕಾರು ಇಳಿದು, ಹಿಂದಿನ ಡಿಕ್ಕಿಯಲ್ಲಿನ ಗನ್ ತೆಗೆದುಕೊಂಡು ಅದನ್ನು ಜೋಡಿಸುತ್ತಲೂ ಅದೇ ಮಾತುಗಳನ್ನು ಮುಂದುವರೆಸುತ್ತಾರೆ. ಇದೆ ತಂತ್ರವನ್ನು ಜಂಗ್ಲಿ ಚಿತ್ರದಲ್ಲಿ ಸೂರಿ ಅಳವಡಿಸಿದ್ದರು. ವ್ಯಕ್ತಿಯೊಬ್ಬನನ್ನು ಕೊಲ್ಲಲು ಅವನನ್ನು ಕಾರಿನ ಹಿಂಬದಿಯಲ್ಲಿಟ್ಟುಕೊಂಡ ವಿಜಿ ಮತ್ತು ರಘು ಸುಮಾರು ಕಡೆ ಸುತ್ತಾಡುತ್ತಾರೆ, ಸುಮಾರು ಮಾತುಗಳನ್ನಾಡುತ್ತಾರೆ. ಕೊನೆಯಲ್ಲಿ ಅವನನ್ನು ಕೊಂದು ಸುಟ್ಟು ಹಾಕುತ್ತಾರೆ.
] ಟರಂಟಿನೋನ ಕಿಲ್ ಬಿಲ್ ಸರಣಿಯಲ್ಲಂತೂ ಹರಿಯುವ ರಕ್ತಕ್ಕೆ ಬಣ್ಣವಿಲ್ಲ ಅದೊಂದೇ ಸಮಾಧಾನಕರ ವಿಷಯ. ಕೈ ಕಾಲುಗಳು ತುಂಡಾಗುವ ಪರಿ, ತಲೆ ಸೀಳಿ ಹೋಗುವ ಪರಿ, ಅಡ್ಡಡ್ಡ ಉದ್ದುದ್ದ ಸಿಗಿದಾಕ್ತೀನಿ ಅನ್ನುವ ಮಾತನ್ನು ಅಕ್ಷರಶಃ ಚಿತ್ರೀಕರಿಸಿ ನಮ್ಮ ಮುಂದಿಟ್ಟಿರುವ ಪರಿ, ಘೋರ. ಹಾಗೆಯೇ ಅವರ ಇಂಗ್ಲೋರಿಯಸ್ ಬಾಸ್ಟರ್ಡ್ ನ ತಲೆಯ ಚರ್ಮವನ್ನು ಹೆರೆಯುವ ದೃಶ್ಯ ವ್ಯಕ್ತಿಯೊಬ್ಬನನ್ನು ಬ್ಯಾಟ್ ನಿಂದ ಹೊಡೆದು ಹೊಡೆದು ಸಾಯಿಸುವ ದೃಶ್ಯ ನೋಡಲು ಭಾರ. ಆತನ ನಿರ್ದೇಶನದ ಎಂಟು ಚಿತ್ರಗಳಲ್ಲಿ ಮೈ ಬೆಸ್ಟ್ ಫ್ರೆಂಡ್ ಬರ್ತ್ಡೇ ಮತ್ತು ಜಾಕಿ ಬ್ರೌನ್ ಸ್ವಲ್ಪ ಹಿಂಸೆಯಿಂದ ದೂರ. ಅದು ಬಿಟ್ಟರೆ ಇನ್ನೆಲ್ಲದರಲ್ಲೂ ರಕ್ತವೋ ರಕ್ತ.
ಈ ಹೇಟ್ಫುಲ್ ಇಷ್ಟವಾಗುವುದು ಚಿತ್ರದಲ್ಲಿನ ಮಾತು ಕತೆಗೆ. ಮಾಮೂಲಿ ತನ್ನದೇ ಶೈಲಿಯಾದ ಅಧ್ಯಾಯಗಳ ಮೂಲಕ ಒಂದೊಂದೇ ಕತೆಗಳನ್ನು ತೆರೆದಿಡುವ ಟರಂಟಿನೋ ಹೊರಗಿನ ಹಿಮದ ಹಿನ್ನೆಲೆಯನ್ನು ಅಷ್ಟೇ ಚೆನ್ನಾಗಿ ಸಿನಿಮಾ ಒಳಗೂ ತಂದಿದ್ದಾನೆ. ನೋಡುತ್ತಾ ನೋಡುತ್ತಾ ನಾವು ಆ ಹಿಮಕಾಡಿನ ನಡುವಣ ಮನೆಯಲ್ಲಿಯೇ ಇದ್ದೀವೇನೋ ಎನ್ನುವ ಭಾವವನ್ನು ಯಶಸ್ವೀಯಾಗಿ ಉಂಟು ಮಾಡುತ್ತಾನೆ. ಹಾಗಾಗಿಯೇ ಆ ಹಿಮಸುರಿಯುವ ಶಬ್ದ ಮತ್ತು ಮನೆಯೊಳಗಣ ಬಿಸಿ ನಮ್ಮನ್ನು ಕಾಯ್ದು ನೋಡಿಸಿಕೊಳ್ಳುವಂತೆ ಮಾಡುತ್ತದೆ. ಮನೆಯೊಳಗಿರುವ ಅಷ್ಟು ಜನರು ಮಾತಾಡುತ್ತಾ ಮಾತಾಡುತ್ತಾ ಮೊದಲಿಗೆ ಸುಳ್ಳುಗಳನ್ನು ಸತ್ಯದಂತೆ ತೆರೆದಿಡುತ್ತಾ ಸಾಗಿ ಸಾವಿನತ್ತ ಮುಖ ಮಾಡುವ ಚಿತ್ರಕತೆ ಅದಕ್ಕೂ ಮೀರಿದ ಸಂಭಾಷಣೆ ಸೂಪರ್. ಚಿತ್ರದ ಅವಧಿ ಸರಿ ಸುಮಾರು ಮೂರು ಘಂಟೆಗಳು. ಕಲಾವಿದರಿಂದ ಅಂತಹ ಅಭಿನಯ ಹೊರಹೊಮ್ಮಿಸದೆ ಇದ್ದರೆ ಸಿನಿಮಾ ಬೋರ್ ಆಗೇ ಆಗುತ್ತಿತ್ತು. ಆದರೆ ಕಲಾವಿದರೂ ಪಾತ್ರವನ್ನು ಎತ್ತಿ ಹಿಡಿದಿದ್ದಾರೆ. ಟರಂಟಿನೋ ಕೊನೆಯವರೆಗೂ ರಹಸ್ಯವನ್ನು ಅದರೊಂದಿಗಿನ ಕುತೂಹಲವನ್ನು ಜೊತೆಗೆ ರೋಮಾಂಚನವನ್ನು ಕಾಯ್ದುಕೊಂಡಿದ್ದಾರೆ.

Sunday, February 14, 2016

ಕಣ್ಣಲ್ಲಿನ ಸತ್ಯವನ್ನು ಹುಡುಕುತ್ತಾ?

2009ರಲ್ಲಿ ತೆರೆಕಂಡ ಅರ್ಜೆಂಟೀನಾದ ಬಹು ಜನಪ್ರಿಯ ಚಿತ್ರ ದಿ ಸೀಕ್ರೆಟ್ ಇನ್ ದೇರ್ ಐಯ್ಸ್ ಒಂದು ಅತ್ಯುತ್ತಮ ಚಿತ್ರ. ಒಂದು ಬರ್ಬರವಾದ ಅತ್ಯಾಚಾರ, ಕೊಲೆಯ ಬೆನ್ನತ್ತುವ ನಾಯಕನಿಗೆ ಕೊಲೆಗಾರ ಯಾರುಂ ಎಂಬುದು ಗೊತ್ತಾದರೂ ಅವನು ಕಣ್ಣಮುಂದೆಯೇ ಸಲೀಸಾಗಿ ನಡೆದುಹೋದಾಗ ಏನು ಮಾಡಬೇಕೆಂದು ತೋಚದೆ ತೊಳಲಾಡುತ್ತಾನೆ. ಅವನನ್ನು ಬಿಡುವುದಿಲ್ಲ, ಸಿಗಲಿ ಅವನಿಗೊಂದು ಗತಿ ಕಾಣಿಸುತ್ತೇನೆ ಎಂದುನ್ ಹೊರಡುವವನಿಗೆ ಏನೂ ಮಾಡಲಾಗದ ಅಸಹಾಯಕತೆ. ಇರಲಿ ಇದೆಲ್ಲಾ ನಡೆದು ಸುಮಾರು ಕಾಲು ಶತಮಾನವೇ ಕಳೆದುಹೋಗಿದೆ. ಈಗ ನಿವೃತ್ತನಾಗಿರುವ ನಾಯಕನಿಗೆ ಕಾದಂಬರಿ ಬರೆಯೋಣ ಎನಿಸುತ್ತದೆ. ತನ್ನ ಬದುಕಿನಲ್ಲಿ ನಡೆದ ಮರೆಯಲಾಗದ ಘಟನೆಗಳನ್ನು ಆಧರಿಸಿ ಬರೆಯೋಣ ಎಂದುಕೊಂಡವನಿಗೆ ನೆನಪಿಗೆ ಬರುವುದು ಮುಗ್ಧ ಯುವತಿಯ ಅತ್ಯಾಚಾರ ಮತ್ತು ಕೊಲೆಯ ಘಟನೆ. ಅದನ್ನೇ ಆಧರಿಸಿ ಬರೆಯೋಣ ಎಂದು ಹೊರಡುತ್ತಾನೆ.]
ಅವರಿಬ್ಬರದು ಅದ್ಭುತವಾದ ಸಂಸಾರ. ಆಕೆ ಸುಂದರಿ ಅವಳ ಗಂಡ ಆಕೆಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಆಕೆ ಬರ್ಬರವಾಗಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದರೆ ತಡೆದುಕೊಳ್ಳುವುದಾದರೂ ಹೇಗೆ..? ರಕ್ತ ಕುದಿಯುವುದಿಲ್ಲವೇ.. ಅವನು ಕೈಗೆ ಸಿಗಲಿ ಅವನಿಗೊಂದು ಗತಿ ಕಾಣಿಸೆ ತೀರುತ್ತೇನೆ, ಅವನು ಈ ಜಾಗಕ್ಕೆ ಬರಲೇಬೇಕು ಎಂದು ದಿನ ಅಲ್ಲಿ ಕಾಯುತ್ತಾ ಕುಳಿತುಕೊಳ್ಳುವ ಆಕೆಯ ಗಂಡನಿಗೆ ಅವನು ಸಿಗುವನೇ..? 
ಕಾದಂಬರಿ ಮುಗಿಯುತ್ತದೆ. ಎಲ್ಲಾ ಸರಿ. ಅದೇಕೋ ಅಂತ್ಯ ಸರಿಯಿಲ್ಲ ಎನಿಸುತ್ತದೆ. ಸರಿ ಈಗ ಬದುಕಿರುವ ಅವಳ ಪತಿಯನ್ನಾದರೂ ಕೇಳಿಯೇ ಬಿಡೋಣ, ಆತನ ಅಭಿಪ್ರಾಯವನ್ನು ಪಡೆದುಕೊಳ್ಳೋಣ ಎನ್ನುವ ನಾಯಕ ಅವನನ್ನು ಹುಡುಕಿಕೊಂಡು ಸಾಗುತ್ತಾನೆ. ಈಗವನು ಕೆಲಸದಿಂದ ನಿವೃತ್ತನಾಗಿದ್ದಾನೆ. ಊರಾಚೆ ತನ್ನದೇ ಆದ ಮನೆ ಕಟ್ಟಿಕೊಂಡು ತನ್ನ ಪಾಡಿಗೆ ನೆಮ್ಮದಿಯಾಗಿದ್ದಾನೆ. ನಾಯಕನಿಗೆ ಆಶ್ಚರ್ಯ ಅದೇಗೆ ಹೀಗೆ ಎಲ್ಲವನ್ನು ಮರೆತು ನೆಮ್ಮದಿಯಾಗಿರಲು ಸಾಧ್ಯ?
ಅವನು ಹೇಳುತ್ತಾನೆ, ಅದೆಲ್ಲಾ ನಡೆದು ವರ್ಷಗಳೇ ಸಂದಿವೆ. ಎಲ್ಲವನ್ನು ಮರೆಯಲೇ ಬೇಕಲ್ಲ.. ಆದರೆ ನಾಯಕ ಅವನ ಉತ್ತರಕ್ಕೆ ತೃಪ್ತನಾಗುವುದಿಲ್ಲ, ಬದಲಿಗೆ ಇನ್ನೂ ಸಂಶಯಕ್ಕೆ ಬೀಳುತ್ತಾನೆ. ಕೊನೆಗೆ ಅವನು ರಹಸ್ಯವನ್ನು ಬಿಚ್ಚಿಡುತ್ತಾನೆ. ಅಷ್ಟು ವರ್ಷದಿಂದ ಬಚ್ಚಿಟ್ಟುಕೊಂಡಿದ್ದ ರಹಸ್ಯವದು. ಸಿಕ್ಕ ಪಾಪಿಯನ್ನು ನಾನು ಆವತ್ತೇ ಮುಗಿಸಿದೆ. ಇಪ್ಪತ್ತೈದು ವರ್ಷಗಳು ಕಳೆದುಹೋಗಿವೆ ಎನ್ನುತ್ತಾನೆ. ನಾಯಕ ಮಾತಾಡದೆ ಅಲ್ಲಿಂದ ಬರುತ್ತಾನೆ. ಆ ಘಟನೆಯನ್ನು ಅವನ ಮಾತುಗಳನ್ನು ಈಗ ಹೇಳಿದ ವಿಷಯವನ್ನು ಮೆಲುಕುಹಾಕುತ್ತಾನೆ. ಆವತ್ತು ಅವನಾಡಿದ ಮಾತೊಂದು ನಾಯಕನನ್ನು ಕಾಡತೊಡಗುತ್ತದೆ. ಆತ, ಸಿಕ್ಕರೆ ಏನು ಮಹಾ ಆಗುತ್ತದೆ, ಗಲ್ಲು ಶಿಕ್ಷೆ... ಒಂದು ಕ್ಷಣದಲ್ಲಿ ಸತ್ತು  ಹೋಗುತ್ತಾನೆ.. ಅದು ಅವನು ಮಾಡಿದ ಪಾಪ ಕೃತ್ಯಕ್ಕೆ ತಕ್ಕ ಶಿಕ್ಷೆಯೇ..? ಎಂಬುದು ಅವನ ಮಾತು. ಅಂಥವನು ತಾನೇ ಕೊಂದೇ ಎನ್ನುತ್ತಿದ್ದಾನೆ..? ಇಲ್ಲ ಖಂಡಿತ ಅವನು ಕೊಂದಿರಲು ಸಾಧ್ಯವೇ ಇಲ್ಲ... ತಕ್ಷಣ ವಾಪಸ್ಸು ಹೋಗುತ್ತಾನೆ ಅಲ್ಲಿ ಬಯಲಾಗುತ್ತದೆ ರಹಸ್ಯ..
ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಚಿತ್ರದಲ್ಲಿ ಒಂದು ಒಳ್ಳೆಯ ಪ್ರೇಮಕತೆಯೂ ಇದೆ. ಹಾಗಾಗಿಯೇ ಎರಡು ಸಮವೇಗದಲ್ಲಿ ಸಾಗುತ್ತ ಇಡೀ ಚಿತ್ರ ಪ್ರೇಕ್ಷಕನನ್ನು ಆವರಿಸಿಕೊಳ್ಳುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ಹಿನ್ನೆಲೆ ಸಂಗೀತದ ಗುಂಗು ಸಿನಿಮಾ ಮುಗಿದ ಮೇಲೆ ಎಷ್ಟೋ ಹೊತ್ತಿನವರೆಗೂ ನಮ್ಮನ್ನು ಕಾಡೆ ಕಾಡುತ್ತದೆ. ಆದರೆ ಅದೆಲ್ಲದಕ್ಕಿಂತ ನಮ್ಮನ್ನು ಕಾಡುವುದು ತಾರಾಗಣ. ನಾಯಕನ ಪಾತ್ರಧಾರಿ ರಿಕಾರ್ಡೊ ಡರಿನ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾನೆ. ಆತನ ಸುಮಾರಷ್ಟು ಚಿತ್ರಗಳನ್ನು ನೋಡಿದ್ದೇನೆ. ಆದರೆ ಈ ಸಿನಿಮಾದಲ್ಲಿ ಇನ್ನೂ ಇಷ್ಟವಾಗುತ್ತಾನೆ. ಪಾತ್ರಧಾರಿ ಸಿನಿಮಾದ ಜೀವಾಳ. ಏಕೆಂದರೆ ಇದೆ ಚಿತ್ರ 2015 ಮತ್ತೆ ಹಾಲಿವುಡ್ ನಲ್ಲಿ ಪುನರ್ನಿರ್ಮಾಣವಾಗಿದೆ. ಅದೇಕೋ ಏನೋ ಇಡೀ ಚಿತ್ರ ಬೇಸರ ತರಿಸುತ್ತದೆ. ಮೂಲ ಚಿತ್ರದಲ್ಲಿದ್ದ ಬಿಗಿ ನಿರೂಪಣೆ ಕಾಣೆಯಾಗಿ ತೀರ ನಿಧಾನ ಎನಿಸುವ ಮಂದಗತಿ ಚಿತ್ರದಲ್ಲಿದೆ. ಇದೆಲ್ಲದಕ್ಕಿಂತ ಬೇಸರ ಹುಟ್ಟಿಸುವುದು ತಾರಾಗಣ. ನಾಯಕನ ಮಾತ್ರವನ್ನು ನಿರ್ವಹಿಸಿರುವ ವಿಚಿತ್ರ ಹೆಸರಿನ ನಾಯಕನ ಅಳುಮೋರೆ ಮುಸುಡಿ ಇಡೀ ಚಿತ್ರದ ಮೂಡನ್ನೇ ತಿಂದು ಹಾಕಿದೆ. ಇಲ್ಲಿ ನಿರ್ದೇಶಕ ಮೂಲಕ್ಕೆ ನಿಷ್ಠನಾಗಿಲ್ಲ. ಬದಲಿಗೆ ಅದರ ಮುಖ್ಯ ಅಂಶವನ್ನು ಇಟ್ಟುಕೊಂಡು ತನ್ನದೇ ಶೈಲಿಯನ್ನು ಚಿತ್ರಕತೆ ಬರೆದಿದ್ದಾನೆ. ಚಿತ್ರದಲ್ಲಿ ಸ್ಟಾರ್ ಗಳಾದ ನಿಕೋಲ್ ಕಿಡ್ಮನ್, ಜೂಲಿಯಾ ರಾಬರ್ಟ್ ಇದ್ದಾರೆ. ಆದರೂ ಸಿನಿಮಾ ಬೇಸರ ತರಿಸುತ್ತದೆ. 
ಅದೇಕೋ ಏನೋ ಕೆಲವು ರಿಮೇಕ್ ಗಳು ಬೇಸರ ತರಿಸುತ್ತದೆ. ಅಂತೋನಿ ಜಿಮ್ಮರ್ ನೋಡಿ ಇಷ್ಟ ಪಟ್ಟವರಿಗೆ ಜಾನಿ ಡೆಪ್, ಏಂಜಲನಾ ಜೂಲಿ ಇದ್ದೂ ಚಿತ್ರ ಇಷ್ಟವಾಗುವುದಿಲ್ಲ. ಹಾಗೆಯೇ ಕೋರಿಯನ್ ನ ಓಲ್ಡ್ ಬಾಯ್ ಹಾಲಿವುಡ್ ಓಲ್ಡ್ ಬಾಯ್ ಮುಂದೆ ಸಾವಿರ ಪಾಲು ಬೆಟರ್ ಅನಿಸುತ್ತದೆ. ಆದರೆ ಕಿಸ್ ಬಿಫೋರ್ ಡೈಯಿಂಗ್ ಗಿಂತ ಬಾಜಿಗರ್ ಸೂಪರ್ ಎನಿಸುತ್ತದೆ. ಕನ್ನಡದಲ್ಲೂ ಚಿನ್ನತಂಬಿ, ಬೇಟಾ ಚಿತ್ರಗಳಿಗಿಂತ ರಾಮಾಚಾರಿ, ಅಣ್ಣಯ್ಯ, ಸೂಪರ್ ಅನಿಸುತ್ತದೆ. ಹಾಗೆಯೇ ಕೋಟಿಗೊಬ್ಬ, ಹೊಸ ಜೀವನ, ಲವ್ ಮಾಡಿ ನೋಡು, ಮುಂತಾದ ಚಿತ್ರಗಳು ಮೂಲ ಚಿತ್ರಕ್ಕೆ ಸಡ್ಡು ಹೊಡೆಯುತ್ತವೆ. ಆದರೆ ಇನ್ನು ಕೆಲವು ಚಿತ್ರಗಳು ಯಾಕಾದರೂ ಇವರು ರಿಮೇಕ್ ಮಾಡಿದರೋ ಎನಿಸುವಂತೆ ಮಾಡಿಬಿಡುತ್ತವೆ.

Monday, February 8, 2016

ಮೋಹನಸ್ವಾಮಿಗಳು...

ನಾನಾಗ ಕಾಲೇಜಿನಲ್ಲಿ ಓದುತ್ತಿದ್ದಾಗ ಅಲ್ಲೊಬ್ಬ ವ್ಯಕ್ತಿಯಿದ್ದ. ಆಗಲೇ ಆತನ ವಯಸ್ಸು ಮೂವತ್ತೈದು ಮೀರಿತ್ತು. ಯಾವುದೋ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ ಆತ ಮದುವೆಯಾಗಿರಲಿಲ್ಲ. ತನ್ನೊಬ್ಬನಿಗೆ ಮನೆಯೊಂದನ್ನು ಮಾಡಿಕೊಂಡಿದ್ದ. ಟಿವಿ ಇದ್ದುದರಿಂದ ನಮ್ಮಲ್ಲಿನ ಕೆಲವು ಕ್ರಿಕೆಟ್ ಪ್ರೇಮಿಗಳು ಕಾಲೇಜಿಗೆ ಬಂಕ್ ಮಾಡಿ ಅವನ ಮನೆಗೆ ಹೋಗಿ ಬಿಡುತ್ತಿದ್ದರು. ಅಲ್ಲೇ ಊಟ ಮಾಡುತ್ತಿದ್ದರು. ಊರಿಗೆ ಹೋಗುವ ಕಡೆಯ ಬಸ್ ಮಿಸ್ಸಾದಾಗ ಪರಿಚಯದವನು ತಾನೇ ಎಂದು ಆ ರಾತ್ರಿ ಅಲ್ಲೇ ಮಲಗಲು ಹೋಗುತ್ತಿದ್ದರು. ಆದರೆ ಸರಿರಾತ್ರಿಯಲ್ಲಿ ಆತ ಅವರ ಮೈಮೇಲೆಲ್ಲಾ ಕೈಯಾಡಿಸಿಬಿಡುತ್ತಿದ್ದ. ಕೆಲವೊಮ್ಮೆ ಅದೆಲ್ಲ ಅದೆಷ್ಟು ಹಿಂಸಾತ್ಮಕ ಎಂದರೆ ಕೆಲವರು ಮಲಗಿ ನಿದ್ರೆ ಮಾಡುವವನಂತೆ ನಟಿಸಿ, ಅಸ್ಯಹಿಸಿ ಸೋತು ಹೋಗುತ್ತಿದ್ದರು. ಕೆಲವರು ಅಲ್ಲೇ ಕೊಸರಿಕೊಂಡು ಎದ್ದು ಕೈ ಬೀಸಾಕಿ ಜಗಳ ಮಾಡುತ್ತಿದ್ದರು. ಹೊಡೆದಾಟಗಳೂ ಆಗುತ್ತಿದ್ದವು. ಮಾರನೆಯ ದಿನ ಅವರು ಬಂದು ಕತೆಗಳನ್ನ ಹೇಳಿದಾಗ ನಾವೆಲ್ಲಾ ಅದ್ಯಾರೂ ಆ ಪುಣ್ಯಾತ್ಮ ಎಂದು ಬಸ್ ಸ್ಟಾಂಡ್ ನಲ್ಲಿ ಕಾಯುತ್ತಿದ್ದೆವು. ಅವನನ್ನು ನೋಡಿ ಮುಸಿ ಮುಸಿ ನಗುತ್ತಿದ್ದೆವು. ಅವನೊಡನೆ ಯಾರಾದರೂ ಇದ್ದರೆ ಅವನು ಅತ್ತ ಹೋದೊಡನೆಯೇ ಇವನನ್ನು ರೇಗಿಸಿ ಗೋಳುಹೊಯ್ದುಕೊಳ್ಳುತ್ತಿದ್ದೆವು.
ಅದ್ಯಾಕೆ ಹಾಗೆ ಮಾಡುತ್ತಿದ್ದೆವು? ಅದು ನಗುವ ವಿಷಯವಾಗಿರಲಿಲ್ಲ. ಆದರೆ ಆತ ತನ್ನ ಸಂಗಾತಿಯನ್ನು ಹುಡುಕಿಕೊಳ್ಳುವಲ್ಲಿ ಸೋಲುತ್ತಿದ್ದ ಎನಿಸುತ್ತದೆ. ಈ ಪೋಲಿ ಹುಡುಗರು ಇಷ್ಟವಿಲ್ಲದ ಹುಡುಗಿಯನ್ನು ರೇಗಿಸಿ ಕಿಚಾಯಿಸಿ ಉಗಿಸಿಕೊಳ್ಳುವಂತೆ ಸಿಕ್ಕ ಸಿಕ್ಕ ಹುಡುಗರಿಗೆ ಕೈ ಹಾಕುತ್ತಿದ್ದ.
ಬಹುಶ ಇಂತಹ ಘಟನೆಗಳೆ ನಮಗೆ ಸಲಿಂಗಿ ಎಂದರೆ ಬೇರೆಯದೇ ಆದ ಭಾವವನ್ನು ಮೂಡುವಂತೆ ಮಾಡಿದ್ದಿರಬಹುದೇನೋ?
ಇಷ್ಟಕ್ಕೂ ಸಲಿಂಗಿ ಎಂಬುದು ನಮಗೆ ನಿಲುಕದ ವಸ್ತುವಲ್ಲ. ಅದವರ ಖಾಸಗಿ ಕೋಣೆಯ ವಿಷಯವಷ್ಟೇ ಎಂಬುದಷ್ಟೇ ಸರಳವಾಗಿ ಮತ್ತು ಸಹಜವಾಗಿ ತೆಗೆದುಕೊಳ್ಳಲು ಮನಸ್ಸು ಸಿದ್ಧವಾಗಿಲ್ಲದೆ ಇದ್ದದ್ದು ಇದೇ ಕಾರಣವೇನೋ?. ಎಲ್ಲೋ ಬಸ್ಸಿನಲ್ಲಿ ಹೋಗುವಾಗ ವಿಚಿತ್ರವಾಗಿ ಸ್ಪರ್ಶಿಸಿ ನಗುವವರು, ಸೂಸು ಮಾಡುವಾಗ ಬಗ್ಗಿ ನೋಡುವವರು, ಕೈ ಕುಲುಕಿದರೆ ಅದನ್ನೇ ಹಿಸುಕುತ್ತಾ ನಿಲ್ಲುವವರು ನಮಗೆ ಈ ಭಾವವನ್ನು ಮೂಡಿಸಿರಬೇಕು. ಅವನು ಗೇ ಅಂತೆ ಎಂಬುದು ನಮ್ಮಲ್ಲಿ ಅಸಹನೀಯ ವಾಗುವುದಕ್ಕೆ ಕಾರಣವಾದರೂ ಏನು? ಪಕ್ಕದ ಮನೆಯವನು ಜೈಲಿಗೆ ಹೋಗಿಬಂದನಂತೆ, ಅವನ್ಯಾರೋ ಕುಡಿದು ಬಿದ್ದಿದ್ದನಂತೆ ಎಂಬೆಲ್ಲಾ ವಿಷಯಗಳು ನಮಗೆ ಪರವಾಗಿಲ್ಲ ಎನಿಸಿದರೂ ಇದ್ಯಾಕೆ ನಮಗೆ ಸಹಜ ಎಣಿಸಿಲ್ಲ ಎಂಬುದು ಪ್ರಶ್ನೆ. ಏಕೆಂದರೆ ನಾನೇ ಎಷ್ಟೋ ಸಾರಿ ಹೊಸಬರು/ಪರಿಚಿತರು ತೀರಾ ಹೆಗಲ ಮೇಲೆ ಕೈ ಹಾಕಿದರೆ, ಕೈ ಹಿಡಿದುಕೊಂಡರೆ, ಅನುಮಾನದಿಂದ ನೋಡಿದ್ದಿದ್ದೆ.
ವಸುಧೇಂದ್ರ ನನಗೆ ಕಾಲೇಜು ದಿನಗಳಲ್ಲಿ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಕತೆಗಳ ಮೂಲಕ ಪರಿಚಯವಾಗಿದ್ದರು.ಅವರ ಬರಹಗಳು, ಕತೆಗಳು ಎಂದರೆ ನನಗೆ ತುಂಬಾ ಇಷ್ಟವಾಗುತ್ತಿತ್ತು. ಹಾಗೆಯೇ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಬಂದಾಗ ವಾಹಿನಿಯೊಂದರ ಕಾರ್ಯಕ್ರಮದಲ್ಲಿ  ಸಂಚಿಕೆ ನಿರ್ದೇಶನಾಗಿದ್ದಾಗ ಒಮ್ಮೆ ಕತೆಗಾರ ವಸುಧೇಂದ್ರ ಅವರ ಸಂದರ್ಶನ ತೆಗೆದುಕೊಳ್ಳಿ ಎಂದಾಗ ಖುಷಿಯಾಗಿದ್ದೆ. ಫೋನ್ ನಂಬರ್ ತೆಗೆದುಕೊಂಡು ಮಾತಾಡಿ, ಅವರ ಕತೆಗಳ ಬಗ್ಗೆ ಮಾತನಾಡಿದೆ. ಅವರೂ ಖುಷಿಯಾಗಿದ್ದರು. ಆನಂತರ ಅವರ ಮನೆಗೆ ಚಿತ್ರೀಕರಣಕ್ಕೆ ಹೋದಾಗ ಒಂದಷ್ಟು ಮಾತನಾಡಿದೆವು. ಎಷ್ಟೆಲ್ಲಾ ಓದಿದ್ದೀಯಲ್ಲ ನೀನು, ಖುಷಿಯಾಗುತ್ತದೆ ಎಂದಿದ್ದರು ವಸುಧೇಂದ್ರ. ಅವರ ಕತೆಗಳು ಪ್ರಕಟವಾಗುತ್ತಿದ್ದಾಗ ಪತ್ರಿಕೆಯಲ್ಲಿ ಅವರ ಮೀಸೆ ಇರುವ ಫೋಟೋ ಒಂದು ಪ್ರಕಟವಾಗಿತ್ತು. ಆದರೆ ಎದುರಿಗಿದ್ದ ವಸುಧೇಂದ್ರರಿಗೆ ಮೀಸೆ ಇರಲಿಲ್ಲ. ನಾನದನ್ನು ಕೇಳಿಯೇ ಇದ್ದೆ, ಅದಕ್ಕೆ ಅವರು ಅದು ಹಳೆಯ ಫೋಟೋ ಕಣೋ ಎಂದಿದ್ದರು. ಆನಂತರ ಅವರ ಪುಸ್ತಕ ಬಿಡುಗಡೆಯ ಕಾರ್ಯಕರ್ಮಕ್ಕೆ ಚಿಕ್ಕ ವೀಡಿಯೊ ಬೇಕು ಎಂದಿದ್ದರು. ಆಗೊಂದಷ್ಟು ದಿನ ಅವರ ಜೊತೆ ಓಡಾಡಿದ್ದೆ. ಇವರ್ಯಾಕೆ ಮದುವೆಯಾಗಿಲ್ಲ, ಮಾತಾಡುವಾಗ ಸ್ವಲ್ಪ ವ್ಯತ್ಯಾಸವಿದೆಯಲ್ಲ..  ಎಂದೆಲ್ಲಾ ಎನಿಸಿತ್ತು. ಆದರೆ ಅದೆಲ್ಲದಕ್ಕೂ ಮೀರಿದ ಅವರ ಬರಹ, ಸಿನಿಮಾ ಜ್ಞಾನ ನನ್ನನ್ನು ಮೂಕವನ್ನಾಗಿಸಿತ್ತು. ಆನಂತರ ಅವರ ಮೋಹನ ಸ್ವಾಮಿ ಬಂದಾಗ ಇವರು ಸಲಿಂಗಿ ಇರಬಹುದು ಎನ್ನಿಸಿತ್ತು. ಇಲ್ಲವಾದಲ್ಲಿ ಅಷ್ಟು ಚೆನ್ನಾಗಿ ಅದೇಗೆ ಹಾಗೆ ಬರೆಯಲು ಸಾಧ್ಯ..? ಆ ಸಂವೇದನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಎನಿಸಿತ್ತು.
ಆದರೆ ಆವಾಗ ನನಗೆ ಕಾಡುತ್ತಿದ್ದ ಪ್ರಶ್ನೆ ಇಷ್ಟೇ. ಆರ್ಥಿಕವಾಗಿ ಸಾಮಾಜಿಕವಾಗಿ ವೈಚಾರಿಕವಾಗಿ ಸದೃಢವಾಗಿರುವ ಇವರು ಯಾಕೆ ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ..? ಬ್ರೋಕ್ ಬ್ಯಾಕ್ ಮೌಂಟನ್ , ಮಿಲ್ಕ್ ಮುಂತಾದ ಚಿತ್ರಗಳನ್ನು ನೋಡಿದಾಗ ಅದೇಕೋ ಒಳಗೆ ಸೇರಿರಲಿಲ್ಲ. ಆದರೆ ನೇಪಾಳಿ ಚಿತ್ರ ಸೂನ್ಗವಾ ನೋಡಿದಾಗ ಸಾಯುವಷ್ಟು ಇಷ್ಟವಾಗಿತ್ತು. ಯಾಕೆಂದರೆ ಅಲ್ಲಿದ್ದವರು ಸ್ತ್ರೀಸಲಿಂಗಿಗಳು. ಅಲ್ಲಿದ್ದ ಎರಡು ಹೆಣ್ಣುಮಕ್ಕಳು ಇಷ್ಟವಾಗಿದ್ದರಿಂದ ಸಿನಿಮಾ ಇಷ್ಟವಾಗಿತ್ತೇನೋ? ಆದರೆ ಸಲಿಂಗಿ ಎನ್ನುವ ವಿಷಯವೇ ನಮ್ಮದಲ್ಲ ಎನಿಸಿತ್ತು. ಆದರೆ ನಮ್ಮದಲ್ಲ ಎಂದಾದ ಮಾತ್ರಕ್ಕೆ ಜಗತ್ತಿನಲ್ಲಿ ಇರಲೇ ಬಾರದು ಎನ್ನುವುದಕ್ಕೆ ನಾವಾದರೂ ಯಾರು? ಮೊದಲೇ ಹೇಳಿದಂತೆ ಇದು ಅವರ ಅಂತಃಪುರದ ವಿಷಯ.
ಈಗ ವಸುಧೇಂದ್ರ ಒಪ್ಪಿಕೊಂಡಿದ್ದಾರೆ. ಮೊನ್ನೆ ಅವರ ಸಂದರ್ಶನ ಓದಿದಾಗ ನನ್ನಲ್ಲಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ಕೂಡ ಸಿಕ್ಕಿದೆ. ಅದು ಹೌದೋ ಅಲ್ಲವೋ..? ಸರಿಯೋ ತಪ್ಪೋ.. ಅವರವರ ಭಾವನೆ ಅವರದ್ದು. ಅವರವರ ಆಯ್ಕೆ ಅವರದ್ದು. ಮತ್ತದೇ ಸಹಜತೆ ಎನಿಸುತ್ತದೆ.

Friday, October 9, 2015

ಮಹಾಭಾರತ ನಡೆದದ್ದು ನಿಜವೇ? ಭಾಗ-1

ಕಿ.ಪೂ. ಅಕ್ಟೋಬರ್ 16, 5561.
ಅನಾಮತ್ತು ಎರಡು ವರ್ಷಗಳ ನನ್ನ ರಜೆ ಮುಗಿದಿದೆ. ಚಿತ್ರರಂಗದಿಂದ ಸ್ವಲ್ಪ ಬೇರೆಕಡೆ ಜೀವನೋಪಾಯಕ್ಕಾಗಿ ಹೊರಳಿಕೊಂಡಿದ್ದ ನಾನು ಮತ್ತೆ ಚಿತ್ರರಂಗಕ್ಕೆ ಧಾವಿಸಿದ್ದೇನೆ. ಈ ಸಾರಿ ಮೊದಲಿನ ತಪ್ಪುಗಳ ಬಗೆಗಿನ ಅರಿವಿದೆ. ಮೂರ್ಖತನದ ಸ್ಪಷ್ಟ ಚಿತ್ರಣವಿದೆ. ಸಾಧ್ಯವಾದಷ್ಟು ಕಡಿಮೆ ತಪ್ಪುಗಳನ್ನು ಮಾಡುತ್ತಾ ಈ ಸಾರಿ
ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದೇನೆ.
ಅದಕ್ಕೆ ಸಂಬಂಧಿಸಿದಂತೆ ನಾನು ಆಯ್ದುಕೊಂಡ ಕತೆಗೆ ಸ್ವಲ್ಪ ಮಹಾಭಾರತ ಹೋಲುತ್ತದೆ. ಪ್ರತಿ ಕತೆಯಲ್ಲಿಯೂ ಮಹಾಭಾರತದ ತುಣುಕು ಒಂದು ನನಗಂತೂ ಕಾಣಸಿಗುತ್ತದೆ. ಆದರೆ ನನ್ನದೇ ಚಿತ್ರದಲ್ಲಿ ಅದರ ಅಂಶ ಸ್ವಲ್ಪ ಜಾಸ್ತಿಯೇ ಇದೆ ಎನ್ನಬಹುದು. ಇದೊಂದು ಪ್ರೇಮಕತೆ, ದುಷ್ಟ ಸಂಹಾರದ ಕತೆ, ಧರ್ಮ ಯುದ್ಧದ ಕತೆ ಹೀಗೆ ನೀವು ಏನು ಬೇಕಾದರೂ ಹೇಳಬಹುದು. ನಾನು ಯಾವುದೇ ಶೈಲಿಯ ಕತೆ ಮಾಡಿದರೂ ಒಮ್ಮೆ ಕತೆ ಮಾಡಿದ ಮೇಲೆ ಅಥವಾ ಅದಕ್ಕೂ ಮುನ್ನ ಆ ಸಂಬಂಧಿ ಒಂದಷ್ಟು ಚರ್ಚೆ ಅಧ್ಯಯನ ಮಾಡುತ್ತೇನೆ. ಇನ್ನು ಮಹಾಭಾರತ ಎಂದಾಗ ಅದರ ಬಗ್ಗೆ ಅಧ್ಯಯನ ಮಾಡಲು ನನಗಂತೂ ಈ ಜನ್ಮ ಸಾಲುವುದಿಲ್ಲ ಎನಿಸಿಬಿಡುತ್ತದೆ.
ಮೊದಲೆಲ್ಲಾ ಮಹಾಭಾರತ ಎಂದರೆ ಅದೊಂದು ರೋಚಕ ಕಥಾನಕದ ಸಂಕಲನ ಎನಿಸುತ್ತಿತ್ತು. ಅದರಲ್ಲಿರುವ ಮಸಾಲೆ ಅಂಶಕ್ಕೆ ಲೆಕ್ಕವೆಲ್ಲಿದೆ? ಒಬ್ಬಳು ಐವರನ್ನು ಪತಿ ಎಂದು ಒಪ್ಪಿಕೊಳ್ಳುತ್ತಾಳೆ, ನಟ್ಟ ನಡುವಣ ಸಭೆಯಲ್ಲಿ ಹೆಂಗಸಿನ ಸೀರೆ ಸೆಳೆಯಲಾಗುತ್ತದೆ, ಅಣ್ಣ ತಮ್ಮಂದಿರು ಜೂಜಾಡಿ ಸೋಲುತ್ತಾರೆ,  ಅರಗಿನ ಮನೆಗೆ ಬೆಂಕಿ ಬೀಳುತ್ತದೆ.. ಒಂದೇ ಎರಡೇ ತಂತ್ರ, ಕುತಂತ್ರ, ಮಂತ್ರ, ರೋಚಕತೆ, ಪ್ರೀತಿ ,ಪ್ರಣಯ, ಸಾಹಸ, ಅನ್ಯಾಯ, ನ್ಯಾಯ, ಧರ್ಮ, ಅಧರ್ಮ.. ಹಿಂಸೆ, ಅಹಿಂಸೆ, .. ಸದಾಚಾರ, ಅನಾಚಾರ, ಅತ್ಯಾಚಾರ.. ಅಬ್ಬಬ್ಬಾ ಏನೇನಿದೆ ಅದರಲ್ಲಿ. ಮೊದಲೆಲ್ಲಾ ನಮ್ಮಪ್ಪ ನಮ್ಮನ್ನು ಕೂರಿಸಿಕೊಂಡು ದಿನಾ ರಾತ್ರಿ ಊಟದ ನಂತರ ವಿದ್ಯುತ ಇಲ್ಲದಾದಾಗ ಮಹಾಭಾರತದ ಒಂದೊಂದೇ ಅಧ್ಯಾಯವನ್ನು ಹೇಳುತ್ತಿದ್ದಾಗ ಮೈಯೆಲ್ಲಾ ರೋಮಾಂಚನ ಉಂಟಾಗುತ್ತಿತ್ತು. ಆನಂತರ ನಾನೇ ಒಂದಷ್ಟು ಓದತೊಡಗಿದೆ. ಹೊಸ ಹಳೆಯ ವಿಮರ್ಶಾತ್ಮಕ, ವಿಡಂಬನಾತ್ಮಕ, ವಿಶ್ಲೇಷಣಾತ್ಮಕ ಬರಹ ಕಾದಂಬರಿ ಪುಸ್ತಕಗಳನ್ನು ಆಗಾಗ ಸಿಕ್ಕ ಸಿಕ್ಕಲ್ಲಿ ಓದುತ್ತಿದ್ದೆ. ಹಿರಿಯರು ಸಿಕ್ಕರೆ ಕೇಳುತ್ತಿದ್ದೆ.
ನನಗೆ ಆವಾಗಲೆಲ್ಲಾ ಏಳುತ್ತಿದ್ದ ಪ್ರಶ್ನೆ ಒಂದೇ..
ಮಹಾಭಾರತ ನಿಜವಾಗಿಯೂ ನಡೆದ ಕತೆಯೇ? ಅಥವಾ ಕಪೋಲ ಕಲ್ಪಿತವೆ?
ಕತೆಯ ಹೂರಣ ನೋಡಿದರೆ ಅದು ಕಲ್ಪನೆ ಎನ್ನಲೂಬಹುದು, ಹಾಗೆಯೇ ವಾಸ್ತವ ಎನ್ನಲೂ ಬಹುದು. ಹಾಗಾದರೆ ಬಕಾಸುರ ಇದ್ದಾನೆ? ಕೃಷ್ಣನ ಚಕ್ರ ತಿರುಗುತ್ತಿತ್ತೆ..? ಹೀಗೆ ಸುಮ್ಮನ್ನೇ ನನ್ನನ್ನೇ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದೆ. ಆದರೆ ಅದರ ಬಗ್ಗೆ ಹೆಚ್ಚು ಅಧ್ಯಯನ ಮಾಡಲು ಹೋಗಿರಲಿಲ್ಲ. 
ಮೊನ್ನೆ ಮೊನ್ನೆ ನಮ್ಮ ಸಿನಿಮಾಕ್ಕಾಗಿ ಮಹಾಭಾರತದ ಕುರಿತಾದ ಒಂದಷ್ಟು ಅಧ್ಯಯನ ಕೈಗೊಂಡೆ. ಕೆಲವು ಅಚ್ಚರಿಗಳು ನನಗೆ ಎದುರಾದವು.ಹಾಗಂತ ನಾನೇನೋ ಸಂಶೋಧನೆ ಮಾಡಲಿಲ್ಲ, ಯಾರ್ಯಾರೋ ಬರೆದಿದ್ದ ಪುಸ್ತಕಗಳನ್ನು ಓದುತ್ತಾ ಓದುತ್ತಾ ಟಿಪ್ಪಣಿ ಹಾಕಿಕೊಂಡೆ ನೋಡಿ.
ಮಹಾಭಾರತ ನಡೆದದ್ದು ನಿಜವೇ ಎನಿಸುವ ಅಂಶ ಒಂದು ಪುಸ್ತಕದಲ್ಲಿ ದೊರಕಿತು.
ಕಿ.ಪೂ. ಅಕ್ಟೋಬರ್ 16, 5561 ರಂದು ಮಹಾಭಾರತದ ಕುರುಕ್ಷೇತ್ರ ಯುದ್ಧ ನಡೆದಿದೆ. ಅಂದರೆ ಸರಿ ಸುಮಾರು ಮಹಾಭಾರತ ಯುದ್ಧ ಜರುಗಿ ಈವತ್ತಿಗೆ 7575 ವರ್ಷಗಳಾಗಿವೆ. 
ಅಷ್ಟು ಕರಾರುವಕ್ಕಾಗಿ ಅದೇಗೆ ಅದ್ಯಾವ ಆಧಾರದ ಮೇಲೆ ಹೇಳಲು ಸಾಧ್ಯ ಎನ್ನುವುದು ಮೊದಲ ಪ್ರಶ್ನೆ. ಪುರಾಣ ಪುಸ್ತಕ ಅಥವಾ ಏನೋ.. ಅವುಗಳ ಪ್ರಕಾರ ನಮ್ಮದು ಕಲಿಯುಗದ ಮೊದಲ ಪಾದ. ಮಹಾಭಾರತ ಜರುಗಿದ್ದು ದ್ವಾಪರಯುಗದಲ್ಲಿ. ಅಂದರೆ ಕಲಿಯುಗ ಶುರುವಾದದ್ದು ಯಾವಾಗ ಎನ್ನುವುದು ಪ್ರಶ್ನೆ. ನಮ್ಮ ಪುರಾಣ ಪುಸ್ತಕಗಳ ಪ್ರಕಾರ ನಾಲ್ಕು ಲಕ್ಷ ಮೂವತ್ತೆರೆಡು ವರ್ಷಗಳಿರುವ ಕಲಿಯುಗದಲ್ಲಿ ಈಗ ಜರುಗಿರುವುದು ಕೇವಲ ಐದು ವರ್ಷಗಳು ಅಂದುಕೊಳ್ಳೋಣ. ಅಂದರೆ ಊಹಿಸಿ.. 
ಇರಲಿ.
ಮೊದಲಿಗೆ ಈ ಮಹಾಭಾರತ ಯುದ್ಧದ ದಿನಾಂಕವನ್ನು ಪತ್ತೆ ಮಾಡಿದ್ದು ಯಾವುದರ ಆಧಾರದ ಮೇಲೆ ಎಂಬುದು ಪ್ರಶ್ನೆ. ಈ ವೈಜ್ಞಾನಿಕ ಮಾರ್ಗದ ಮೂಲಕ ಕರಾರುವಕ್ಕಾದ ಮಹಾಭಾರತ ಯುದ್ಧದ ದಿನಾಂಕವನ್ನು ಸಂಶೋಧಕರು ಮೇಧಾವಿಗಳು ಪಡೆಯಲು ಹಲವಾರು ಮಾರ್ಗದ ಮೊರೆ ಹೋಗಿದ್ದಾರೆ. ಜ್ಯೋತಿಷ್ಯ ಶಾಸ್ತ್ರ, ಜೀನಿಯಾಲಜಿ, ಆ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಯಾತ್ರಿಕರ ಬರಹಗಳು, ಖಗೋಳ ವಿಜ್ಞಾನ, ಶಾಸನಗಳು, ಭಾಷಾಶಾಸ್ತ್ರ, ಪುರಾತತ್ವ ಶಾಸ್ತ್ರ, ಪುರಾಣ ಕತೆಗಳು, ವೇದಗಳು ಹೀಗೆ ಹತ್ತು ಹಲವು ವಿಷಯಗಳನ್ನು ಅಧ್ಯಯನ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ವ್ಯಾಸ ರಚಿಸಿದ ಮಹಾಭಾರತ ಮುಖ್ಯವಾದದ್ದು .
ಇರಲಿ ಓದುತ್ತಾ ಓದುತ್ತಾ ನಾನೂ ಲೆಕ್ಕ ಹಾಕಲು ಕುಳಿತುಕೊಂಡೆ. ಹಾಗೆಯೇ ಗೊತ್ತಿರದ ವಿಷಯಗಳನ್ನು ಗೂಗಲ್ ಮಾಡುತ್ತಾ ಸಾಗಿದೆ. ಯಾಕೋ ಒಂದು ಜನ್ಮಕ್ಕೆ ಮುಗಿಯದ ಕೆಲಸವಲ್ಲ ಎನಿಸಿತು. ಎನಿವೇ ನಾನು ಓದಿದ್ದನ್ನು ನನಗನಿಸಿದ್ದನ್ನು ಬರೆದಿಡೋಣ ಎನಿಸಿ ಬರೆದದ್ದು ಇದು.
ದಿ ಸೈಂಟಿಫಿಕ್ ಡೇಟಿಂಗ್ ಆಫ್ ಮಹಾಭಾರತ ವಾರ್ ಎನ್ನುವ ಪುಸ್ತಕವದು. ಒಮ್ಮೆ ಸಿಕ್ಕರೆ ನೀವು ಓದಿ.
ಈಗ ಸಿನಿಮಾದ ಬರವಣಿಗೆ ಕೆಲಸ ಮುಕ್ಕಾಲು ಪಾಲು ಮುಗಿದಿದೆ. ಇನ್ನೇನಿದ್ದರೂ ಚಿತ್ರೀಕರಣಕ್ಕೆ ಬೇಕಾದ ಜಾಗಗಳ ಹುಡುಕಾಟ, ಕಲಾವಿದರ ಹುಡುಕಾಟ. ಈ ಸಿನಿಮಾದಂತೆಯೇ ಈ ಪುಸ್ತಕವೂ ನನ್ನನ್ನು ಕಾಡುತ್ತಿರುವುದು ವಿಪರ್ಯಾಸ.
[ಮುಂದುವರೆಯುತ್ತದೆ]