Saturday, July 6, 2013

ಕಾಡುವ ಬರಹಗಾರರ ಕೃತಿಗಳು..

ನಾನು ಯಂಡಮೂರಿ ವೀರೇಂದ್ರನಾಥರ ಕಾದಂಬರಿಗಳನ್ನು ಓದುತ್ತಿದ್ದಾಗ ನನ್ನ ಹುಡುಕುವ,  ಅವರ ಕಾದಂಬರಿಗಳಿಗಾಗಿ ಪರಿತಪಿಸುವ ಪರಿ ನೋಡಿ ನನ್ನ ಗೆಳೆಯರು ನೀನು ಗ್ರೇಟ್ ಗುರು ಎನ್ನುತ್ತಿದ್ದರು. ನಾನು ಹಾಗೆಯೇ ಇದ್ದೆ. ನಾನು ಮೊದಲು ಯಂಡಮೂರಿಯವರ ಕಾದಂಬರಿ ದುಡ್ಡು ಟು ದಿ ಪವರ್ ಆಫ್ ದುಡ್ಡು ಓದಿದ್ದೆ. ಅದನ್ನು ನಾನು ಓದಿದ ಪರಿಯೇ ಹಾಗಿತ್ತು. ಬೆಳಿಗ್ಗೆ ಹತ್ತು ಘಂಟೆಗೆ ತಿಂಡಿ ತಿಂದು ಕುಳಿತವನು ಮದ್ಯಾಹ್ನ ಊಟವನ್ನೂ ಮಾಡದೆ ಸಂಜೆ ಐದು ಘಂಟೆಗೆ ಪೂರ್ತಿಯಾಗಿ ಓದಿ ಮತ್ತೆ ಪ್ರಮುಖವೆನಿಸಿದ್ದ ಇಷ್ಟವಾಗಿದ್ದ ಪುಟಗಳನ್ನ ಮತ್ತೊಮ್ಮೆ ತಿರುವಿ ಹಾಕಿದ್ದೆ. ಕಾದಂಬರಿಯ ನಿರೂಪಣೆ ಮತ್ತು ಅದರಲ್ಲಿದ್ದ ದ್ರವ್ಯ ನನ್ನನ್ನು ಹಿಡಿದು ಕೂರಿಸಿಬಿಟ್ಟಿತ್ತು. ಪಕ್ಕ ಸಿನಿಮಾ ಶೈಲಿಯ ಕಾದಂಬರಿ ಅದು. ಅಲ್ಲಿಯವರೆಗೆ ನಾನು ಎಸ್.ಎಲ್. ಭೈರಪ್ಪನವರ ಅದುವರೆವಿಗೂ ಪ್ರಕಟವಾಗಿದ್ದ ಕಾದಂಬರಿ ಎಲ್ಲವನ್ನೂ ಓದಿದ್ದೆ. ಹಾಗೆ ಆನಕೃ, ತರಾಸು, ಕೆಟಿ ಗಟ್ಟಿ,ಮಾಸ್ತಿ, ಸಾಯಿಸುತೆ, ...ಹೀಗೆ ಅಸಂಖ್ಯಾತ ಕಾದಂಬರಿಕಾರರ ಕಾದಂಬರಿಗಳನ್ನು ಓದಿದ್ದೆನಾದರೂ ಈ ರೀತಿಯ ಸಿನಿಮೀಯ ಕಾದಂಬರಿ ಓದಿರಲಿಲ್ಲ. ಆವಾಗ ಥ್ರಿಲ್ಲರ್ ಪುಸ್ತಕಗಳಲ್ಲಿ ಬರುತ್ತಿದ್ದ ನರಸಿಂಹಯ್ಯ, ಸಾಕೃ ಪ್ರಕಾಶ, ಸಾಸ್ಕಾಮೂರ್ತಿ, ಕೌಂಡಿನ್ಯ ಮುಂತಾದವರ ಇದೆ ರೀತಿಯ ಕಾದಂಬರಿಗಳನ್ನು ಓದಿದ್ದೆನಾದರೂ ಯಂಡಮೂರಿಯ ಕಾದಂಬರಿ ಕೊಟ್ಟ ಮಜಾವನ್ನು ಅದ್ಯಾವುದೂ ಕೊಟ್ಟಿರಲಿಲ್ಲ. ಅದಾದ ಮೇಲೆ ಶುರುವಾಯಿತು ಯಂಡಮೂರಿಯವರ ಕಾದಂಬರಿ ಓದುವ ಹುಚ್ಚು. ಹುಡುಕಿ ಹುಡುಕಿ ಅವರು ವರ್ಷಗಟ್ಟಲೆ ಬರೆದಿದ್ದನ್ನು ತಿಂಗಳಲ್ಲಿ ಓದಿ ಮುಗಿಸಿದ್ದೆ. ಹಾಗಾಗಿ ನನ್ನ ಬಗ್ಗೆ ಗೆಳೆಯ ಹೊಗಳಿದಾಗ ನನಗೂ ಹಾಗೆಯೇ ಅನಿಸಿತ್ತು. ಹೌದಲ್ಲ ನನ್ನಂತಹ ಯಂಡಮೂರಿಯವರ ಕಾದಂಬರಿ ಅಭಿಮಾನಿ ಜಗತ್ತಿನಲ್ಲಿಯೇ ಇರಲಿಕ್ಕೆ ಸಾಧ್ಯವೇ ಇಲ್ಲ ಎನಿಸಿತ್ತು. ನಾನು ಗರ್ವದಿಂದ ಬೀಗಿದ್ದೆ.
ಆದರೆ ಅದೊಂದು ದಿನ ಗೆಳೆಯ ಚಂದ್ರ ಅವನ ಸಹಪಾಠಿಯನ್ನು ನನಗೆ ಪರಿಚಯಿಸಿದ್ದ. ‘ಇವನೂ ಯಂಡಮೂರಿಯ ಅಭಿಮಾನಿ ..ನೋಡು ನಿನಗೆ ಜೋಡಿ ಸಿಕ್ಕಂತಾಯಿತು..” ಎಂದ. ನನಗೂ ಖುಷಿಯಾಯಿತು. ಓದಿದ ಮೇಲೆ, ನೋಡಿದ ಮೇಲೆ ಅದರ ಬಗ್ಗೆ ಮಾತನಾಡಲು ಯಾರೂ ಇರದಿದ್ದರೆ ಹೇಗೆ..? ಆದರೆ ನಾನೇ ಯಂಡಮೂರಿ ಕಾದಂಬರಿಯ ಅದ್ಭುತ ಅಭಿಮಾನಿ ಓದುಗನಾಗಿರುವುದರಿಂದ ಇವನ್ಯಾವ ಲೆಕ್ಕ ಎನಿಸದಿರಲಿಲ್ಲ. ಆದರೆ ವಿಷಯವೇ ಬೇರೆಯಿತ್ತು. ಮೈಸೂರಿನ ಪಕ್ಕದ ಆತ ಒಂದು ಯಂಡಮೂರಿಯವರ ಕನ್ನಡ ಅನುವಾದಿತ ಕೃತಿ ಓದಿದ್ದಾನೆ. ಇಷ್ಟವಾಗಿದೆ. ಆದರೆ ಅದು ಅನುವಾದ ಎಂದು ಗೊತ್ತಾದಾಗ ಅದ್ಯಾಕೋ ಒರಿಜಿನಲ್ ಎನಿಸಿಲ್ಲ. ಯಂಡಮೂರಿಯವರೇ ಬರೆದ ತೆಲುಗು ಮೂಲ ಕೃತಿಯನ್ನೇ ಓದಬೇಕೆನ್ನಿಸಿ ನಿರ್ಧರಿಸಿದ್ದೆ ತೆಲುಗು ಕಲಿಯಲು ಪ್ರಾರಂಭಿಸಿ, ಕಲಿತು ಒಂದಷ್ಟು ಓದಿ ಆನಂತರ ಯಂಡಮೂರಿಯವರ ಎಲ್ಲಾ ಕಾದಂಬರಿಯನ್ನೂ ತೆಲುಗು ಭಾಷೆಯಲ್ಲಿ ಓದಿಬಿಟ್ಟಿದ್ದ ಆಸಾಮಿ ಅದ್ಭುತ ಅಭಿಮಾನಿ ಅವನು.
ಅವನ ಬಗ್ಗೆ ಗೊತ್ತಾದ ನಂತರ ನಾನೇ ಅದ್ಭುತ ಓದುಗನೆಂದು ಕುಣಿದಾಡುತ್ತಿದ್ದ ನನಗೆ ತಕ್ಕ ಶಾಸ್ತಿಯಾದಂತೆನಿಸಿತ್ತು.
ವಿಷಯ ಅದಲ್ಲ. ಒಬ್ಬ ಬರಹಗಾರನ ತಾಕತ್ತೇ ಅಂತಹದು. ಅದಾದ ಮೇಲೆ ತುಂಬಾ ಬರಹಗಾರರ ಕಾದಂಬರಿ ಓದಿದ್ದೇನೆ. ಅವುಗಳಲ್ಲಿ ಸ್ಲಮ್ ಡಾಗ್ ಮಿಲಿಯನರ್ ಕಾದಂಬರಿಯನ್ನು ಅದೇ ರೀತಿ ಓದಿದ್ದೆ. ನನಗಿಷ್ಟವಾದದ್ದು ವಿಕಾಸ್ ಸ್ವರೂಪ್ ಶೈಲಿ ಮತ್ತು ಚಿಕ್ಕಚಿಕ್ಕ ವಿಷಯಕ್ಕೂ ಅವರು ಕೊಡುವ ವಿವರ. ಉದಾಹರಣೆಗೆ ಸ್ಲಮ್ ಡಾಗ್ ಕಾದಂಬರಿಯನ್ನು ಓದುವಾಗ ನನ್ನ ಕಣ್ಣ ಮುಂದೆಯೇ ಮುಂಬಯಿಯ ಸ್ಲಂ ಎದ್ದು ಬಂದಂತೆ ಭಾಸವಾಗಿತ್ತು. ಅದಾದ ನಂತರ ಅವರದೇ ಸಿಕ್ಸ್ ಸಸ್ಪೆಕ್ಟ್ಸ್ ಓದಿದೆ. ಅದರಲ್ಲಿ ಆರು ವಿಭಿನ್ನ ವರ್ಗದವರ ಕಥೆಯಿದೆ. ವಿಷಯ ಅದಲ್ಲ. ಆರು ಜನರ ಹಿನ್ನೆಲೆಯನ್ನು ವಿಕಾಸ್ ನಮ್ಮ ಮುಂದಿಡುವ ಪರಿ ಅದ್ಭುತ . ಒಂದು ಕಾದಂಬರಿಗಾಗಿ ಅವರ ಅದ್ಯಯನ ಇದೆಯಲ್ಲ ನಿಜಕ್ಕೂ ಮೆಚ್ಚಲಾರ್ಹ. ಹಾಗಂತ ಬರೀ ಸಂಶೋಧನೆಯೇ ಉತ್ತಮ ಕಾದಂಬರಿ ಆಗಲಾರದು. ಅದಕ್ಕೆ ತಕ್ಕಂತಹ ಸೃಜನಶೀಲತೆಯೂ ಬೇಕು.
ವಿಕಾಸ್ ಒಂದರ ಹಿಂದೆ ಒಂದರಂತೆ ಕಾದಂಬರಿ ಬರೆದವರೂ ಅಲ್ಲ. ಇದುವರೆವಿಗೂ ಬರೀ ಮೂರೇ ಕಾದಂಬರಿ ಬರೆದಿರುವ ವಿಕಾಸ್ ಪ್ರತಿ ಕಾದಂಬರಿಯ ವಸ್ತು-ವಿಷಯಕ್ಕೆ ವರ್ಷಗಟ್ಟಲೆ ಅದ್ಯಯನ ಮಾಡಿರುವುದು ಕಾದಂಬರಿ ಓದುವಾಗ ನಮಗೆ ಗೊತ್ತಾಗುತ್ತದೆ. ಅವರ ಮೊದಲ ಕಾದಂಬರಿ ಕ್ಯೂ ಅಂಡ್ ಎ [ಸ್ಲಂ ಡಾಗ್ ಮಿಲಿಯನರ್] ಬಿಡುಗಡೆಯಾದದ್ದು 2005 ರಲ್ಲಿ. ಅದಾದ ನಂತರ ಸಿಕ್ಸ್ ಸಸ್ಪೆಕ್ತ್ಸ್ 2008 ರಲ್ಲಿ ಬಿಡುಗಡೆಯಾಯಿತು. ಅದಾದ ಐದು ವರ್ಷಗಳ ನಂತರ ಅವರ ಈ ಹೊಸ ಕಾದಂಬರಿ ಆಕ್ಸಿಡೆಂಟಲ್ ಅಪ್ಪ್ರೆಂಟೈಸ್ ಬಿಡುಗಡೆಯಾಗಿದೆ. ಅಂದರೆ ಗಮನಿಸಿ ಪ್ರತಿ ಕಾದಂಬರಿಯ ನಡುವಿನ ಅಂತರವನ್ನು.ಮೊನ್ನೆ ಗೊತ್ತಾದಾಗ ಮತ್ತೆ ಓದಲಿಕ್ಕೆ ಏನೋ ಸಿಕ್ಕಿದೆ ಎನಿಸಿ ಖುಷಿಯಾದ್ದಂತೂ ನಿಜ. ಹಾಗಾಗಿ ಅದನ್ನು ಉತ್ಸುಕತೆಯಿಂದ ಓದಲು ಕಾಯುತ್ತಿದ್ದೇನೆ. ಓದಿದ ಮೇಲೆ ಬೇಕಾದರೆ ಅದರ ಬಗ್ಗೆ ಒಂದಷ್ಟು ಮಾತಾಡಬಹುದು.
ನಿಮ್ಮನ್ನು ಆ ರೀತಿ ಕಾಡಿ ಕಾಡಿ ಓದಿಸಿಕೊಂಡ ಕಾದಂಬರಿ/ಕಾದಂಬರಿಕಾರ ಯಾವುದು/ಯಾರು? 

Monday, July 1, 2013

ಚಿತ್ರಗಳು..ವಿಚಿತ್ರಗಳು..

ಕಳೆದವಾರ ಕನ್ನಡದಲ್ಲಿ ನಾಲ್ಕು ಚಿತ್ರಗಳು ಬಿಡುಗಡೆಯಾದವು. ಬಿಡಲಾರೆ ಎಂದೂ ನಿನ್ನ, ಚಂದ್ರ, ನಮ್ ದುನಿಯಾ ನಮ್ ಸ್ಟೈಲ್ ಮತ್ತು ಸೈಕಲ್  ಹಾಗೂ ಹಿಂದಿಯಲ್ಲಿ  ಘನ್ ಚಕ್ಕರ್. ಹಠಕ್ಕೆ ಬಿದ್ದು ಐದೂ ಚಿತ್ರಗಳನ್ನು ಒಂದೂವರೆ ದಿನದಲ್ಲಿ ನೋಡಿಯಾದ ಮೇಲೆ ಐದೂ ಚಿತ್ರಗಳು ತಲೆಯಲ್ಲಿ ಕುಣಿಯತೊಡಗಿದ್ದವು.ಘನ ಚಕ್ಕರ್ ಒಂದೊಳ್ಳೆ ಕಥಾ ಎಳೆಯಿರುವ ಚಿತ್ರ. ನಿರ್ದೇಶಕ ರಾಜಕುಮಾರ್ ಗುಪ್ತ ತಮ್ಮ ನೋ ಒನ್ ಕಿಲ್ಲೆಡ್ ಜೆಸ್ಸಿಕಾ ಚಿತ್ರದಲ್ಲೇ ತಮ್ಮ ಖದರ್ ತೋರಿಸಿದ್ದವರು. ಘನಚಕ್ಕರ್ ಕೂಡ ಅವರಲ್ಲಿನ ಕಥೆಯ ಆಲೋಚನೆಯ ನಾವೀನ್ಯತೆಗೆ ಸಾಕ್ಷಿಯಾಗುವ ಚಿತ್ರ.
ಒಂದು ದರೋಡೆಯ ನಂತರ ಹಣವನ್ನೆಲ್ಲಾ ಒಬ್ಬನ ಕೈಗೊಪ್ಪಿಸಿ ಅದನ್ನು ಪಾಲು ಮಾಡಿಕೊಳ್ಳಬೇಕು ಎಂದಾಗ ಆತ ನನಗ್ಯಾವುದೂ ನೆನಪಿಲ್ಲ ಎಂದು ಬಿಟ್ಟರೆ..? ಇಲ್ಲೂ ಅದೇ ಆಗುತ್ತದೆ. ಮೊದಲಿಗೆ ಈ ದರೋಡೆಕೋರ ಘಜಿನಿಯನ್ನ ಅವನ ಸಹಚರರು ನಂಬುವುದಿಲ್ಲ. ಆದರೆ ಹೇಗೆ ಬಾಯಿ ಬಿಡಿಸುವುದು. ಅವರು ಮಾಡುವ ಪ್ರಯತ್ನಗಳು.. ಮೊದಲಾರ್ಧ ಚಿತ್ರ ಸೂಪರ್. ಆದರೆ ತದನಂತರ ಸ್ವಲ್ಪ ಮಟ್ಟಗಿನ ದಾರಿ ತಪ್ಪುವ ನಿರ್ದೇಶಕರು ಬರು ಬರುತ್ತಾ ಚಿತ್ರದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಳ್ಳುತ್ತಾರೆ. ಮುಂದೆ..ಸುಮ್ಮನೆ ಒಮ್ಮೆ ನೋಡಲು ಮೋಸವಲ್ಲದ ಚಿತ್ರ.
ಇದೆ ಮಾತನ್ನು ಕನ್ನಡದ ನಾಲ್ಕೂ ಚಿತ್ರಗಳಿಗೆ ಹೇಳಲಾಗುವುದಿಲ್ಲ. ಹೋಲಿಸಿದರೆ ಬಿಡಲಾರೆ ಎಂದೂ ನಿನ್ನ ಚಿತ್ರ ಸಿದ್ಧ ಸೂತ್ರದಿಂದ ಒಂದು ಚೂರು ಆಚೆ ಸರಿಯದ ಚಿತ್ರ. ಆದರೆ ಬಜೆಟ್ ಕಡಿಮೆಯಿರುವುದರಿಂದ ಇರುವುದನ್ನೇ ಬಡಿಸಬೇಕೆನ್ನುವುದು  ನಿರ್ದೇಶಕನ ಆಶಯ. ಅದು ಅನಿವಾರ್ಯ ಕೂಡ. ಹೆಸರಲ್ಲಿ ಕಥೆಯಿದೆ. ಅವಳು ಸಿಕ್ಕಳು, ನಕ್ಕಳು ಪ್ರೀತಿಸಿದಳು, ಒಪ್ಪದಿದ್ದಾಗ ಸತ್ತಳು, ಮತ್ತೆ ದೆವ್ವವಾದಳು..ಇದಿಷ್ಟೇ ಕಥೆ.
ಇನ್ನು ಚಂದ್ರನನ್ನು ಯಾವರೀತಿಯಿಂದಲೂ ಭರಿಸಲು ನನಗೆ ಸಾಧ್ಯವಾಗಲಿಲ್ಲ. ಅಪ್ಪಾ ಚಿತ್ರವೇ ಮುಂದಕ್ಕೆ ಹೋಗುವುದಿಲ್ಲ. ಅವರು ಅಲ್ಲೇ ಅದೇ ಮಾತು. ಇಬ್ಬರೂ ಚಂದ್ರರೇ..ಪ್ರೀತಿಸಿದರು. ರಾಜಕುಮಾರಿ ಮತ್ತು ಮೇಸ್ಟರ ಮಗ. ಆಮೇಲೆ..ಬರೀ ಸ್ವಲ್ಪ ಮಟ್ಟಗಿನ ಶ್ರೀಮಂತನ ಮಗಳಿಗೆ ಲೈನು ಹೊಡೆದರೆ ಬಿಡುವುದಿಲ್ಲ..ಇನ್ನೂ ರಾಜಕುಮಾರಿಯನ್ನು ಪ್ರೀತಿಸಿದರೆ ಯಾರು ಒಪ್ಪುತ್ತಾರೆ..ವಿರೋಧ, ಪ್ರತಿರೋಧ. 
ನಮ್ ದುನಿಯಾ ನಮ್ ಸ್ಟೈಲ್. ಕನ್ನಡದ ಮಟ್ಟಿಗೆ ಎಲ್ಲವೂ ಇರುವ ಏನೂ ಇಲ್ಲದ ಚಿತ್ರ.ಮೂರು ಜನ ನಾಯಕರು ಎಂದಾಗ ನಾವೆಲ್ಲಾ ದಿಲ್ ಚಾಹತಾ ಹಾಯ್, 3 ಈಡಿಯಟ್ ಸ್ ಗುಂಗಿನಲ್ಲಿರುತ್ತೇವೆ. ಹಾಗಂತ ಪ್ರೀತಂ ಗುಬ್ಬಿ ಇರಬೇಕಲ್ಲ. ಅವರು ಇಲ್ಲೇ ಇದ್ದಾರೆ. ಸುಮ್ಮನೆ ಹುಡುಗಿಯರನ್ನು ಕಂಡ ತಕ್ಷಣ ನಮ್ಮ ಜನ್ಮ ವೆ ಪ್ರೀತಿಸುವುದಕ್ಕೋಸ್ಕರ ಎಂದು ತಿಳಿದಿರುವ ಮೂರು ಜನರು ನಾಯಕಿಯರ ಹಿಂದೆ ಮುಂದೆ ಓಡಾಡಿ ಪ್ರೀತಿಸುತ್ತಾರೆ ಎಂಬುದನ್ನು ಯಾವುದೇ ಸ್ವಾರಸ್ಯವಿಲ್ಲದೆ ನೀರಸವಾಗಿ ಬೋರಾಗಿ ಬೇಸರವಾಗುವಂತೆ ಪ್ರೀತಂ ಗುಬ್ಬಿ ನಮ್ಮ ಮುಂದಿಟ್ಟಿದ್ದಾರೆ.
ಸ್ಸೈಕಲ್ ತುಳಿಯುವುದಕ್ಕೆ ಮಾತ್ರವಲ್ಲ ಧಮ್ ಬೇಕಿರುವುದು ನೋಡುವುದಕ್ಕೂ ಎನ್ನುವುದನ್ನು ಸೂಕ್ತ ಉದಾಹರಣೆ, ಉಪಕಥೆಗಳ ಮೂಲಕ ಸಾಧಿಸಿ ತೋರಿಸುವ ಚಿತ್ರ.
** ನಾಯಕಿಗೆ ನಾಯಕನ ಮೇಲೆ ಪ್ರಾಣ. ಹಾಗಾಗಿ ಹಾಡಿನಲ್ಲಿ ಕನಸಿನ ಲೋಕಕ್ಕೆ ತೆರಳಿ ಒಂದು ಸುತ್ತು ಕುಣಿಯುತ್ತಾಳೆ.  ಆದರೆ ಉಪನಾಯಕಿಗೆ ಪಕ್ಕದಲ್ಲೇ ಅತ್ತೆ ಮಗನಿದ್ದಾನೆ ಮತ್ತವನ ಜೊತೆ ಆಕೆ ಚೆನ್ನಾಗಿದ್ದು ಮದುವೆಗೂ ಒಪ್ಪಿಕೊಂಡಿದ್ದಾಳೆ. ಆದರೂ ಇರಲಿ ಎಂಬಂತೆ ಇನ್ನರ್ಧ ಹಾಡಿನಲ್ಲಿ ನಾಯಕನ ಜೊತೆ ತಾನೂ ಕುಣಿಯುತ್ತಾಳೆ.
**ಮಲೇಶಿಯಾದಲ್ಲಿ ಜಾಸ್ತಿ ತಮಿಳರಿದ್ದಾರೆ ಎಂದು ಅಲ್ಲಿಗೆ ಹೋಗಿ ಬಂದವರು ಹೇಳುತ್ತಾರೆ. ಆದರೆ ನಮ್ಮ ನಾಯಕರ ಅದೃಷ್ಟಕ್ಕೆ ಮಲೇಶಿಯಾದಲ್ಲಿ ಸಿಗುವವರೆಲ್ಲರೂ ಕನ್ನಡಿಗರೇ. ಮೂವರಲ್ಲಿ ಒಬ್ಬ ನಿರ್ದೇಶಕರನ್ನೇ ಹೇಗಾದರೂ ಯಾಮಾರಿಸಬೇಕು ಎಂದು ಮಲೇಷಿಯಾದ ಹುಡುಗಿಯನ್ನೇ ಪ್ರೀತಿಸಿದರೂ ಅವಳ ತಂದೆ ಕನ್ನಡಿಗನನ್ನೇ ಮಾಡಿ ನಿರ್ದೇಶಕರು ಹುಬ್ಬೇರಿಸುತ್ತಾರೆ.
**ಅದು ಕಲಾತ್ಮಕ ಇದು ಕಮರ್ಷಿಯಲ್ ಎಂದು ತನ್ನ ಎರಡೂ ಚಿತ್ರಗಳನ್ನು ವಿಂಗಡಿಸಿದ್ದರು ರೂಪಾ ಅಯ್ಯರ್. ಹಾಗಾದರೆ ಕಮರ್ಷಿಯಲ್ ಅಂದರೆ ಮನರಂಜನೆ ಎಂದು ನಾವೆಲ್ಲಾ ತಿಳಿದುಕೊಂಡಿರುವುದು ತಪ್ಪೇ ಎಂಬ ಪ್ರಶ್ನೆ ನಮ್ಮನ್ನು ನಿಮ್ಮನ್ನು ಚಿತ್ರ ನೋಡಿದ ಮೇಲೆ ಕಾಡದೆ ಇರದು.
**ಬೆಂಗಳೂರೆಂದರೆ ಇಡೀ ಪಾತಕ, ರೌಡಿಗಳ ಲೋಕವೇ..? ಹೌದು ಎನ್ನುತ್ತಾರೆ ನಮ್ಮ ನಿರ್ದೇಶಕರು. ಅದಕ್ಕೆ ಎಲ್ಲಾ ಬಿಟ್ಟು ಬೆಂಗಳೂರಿಗೆ ಬಂದವರು ಬೇಗನೆ ರೌಡಿಯಾಗಿಬಿಡುತ್ತಾರೆ...
ಕೊನೆಯ ಮಾತು:
ಕೆಲವೊಮ್ಮೆ ಚಿತ್ರವನ್ನು ಕೆಲವು ಮಾರ್ಜಿನ್ ಕೊಟ್ಟು ಸಿನಿಮಾ ನೋಡಬೇಕಾಗುತ್ತದೆ. ಆದರೆ ಒಂದು ಚಿತ್ರಕ್ಕೆ ಸಾಮಾನ್ಯವಾಗಿ ಎಲ್ಲವೂ ಇದ್ದರೂ ಕಥೆಯಲ್ಲಿ ಮಾತ್ರ ತಿರುಳಿಲ್ಲ ಎಂದಾಗ ದುಡ್ಡು ಕೊಟ್ಟದ್ದಕ್ಕೆ ದಿನವನ್ನು ವ್ಯರ್ಥ ಮಾಡಿದ್ದಕ್ಕೆ ಬೇಸರವಾಗುತ್ತದೆ. ಕೆಟ್ಟ ಸಿನೆಮಾಗಲಿಲ್ಲದ ಚಿತ್ರರಂಗವಿಲ್ಲ. ಆದರೆ ಸುಖಾ ಸುಮ್ಮನೆ ಚಿತ್ರ ಮಾಡುವುದು ಅದೆಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಇಟ್ಟುಕೊಂಡು ಇದನ್ನು ಬರೆದಿದ್ದೇನೆ.
ಈ ಪ್ರಶ್ನೆ ನಿಮಗೆ.
 ಮೇಲಿನವುಗಳಲ್ಲಿ  ಯಾವ ಚಿತ್ರವನ್ನು ನೀವು ನೋಡಿದಿರಿ..? ನಿಮಗೇನನ್ನಿಸಿತು..?

ಪ್ರಾಣ ಕೊಡುವ, ಪ್ರಾಣ ತೆಗೆಯುವ ಪ್ರೇಮಿಗಳು...

ಆತ ಬುದ್ದಿ ನೆಟ್ಟಗಿರದವ. ಚಿತ್ರ ಪ್ರಾರಂಭವಾದ ಹತ್ತು ನಿಮಿಷಕ್ಕೆ ಇದು ನೋಡುಗನಿಗೆ ಗೊತ್ತಾಗಿ ಬಿಡುತ್ತದೆ.ಆಕೆ ಬುದ್ದಿ ಮಾಂದ್ಯ ಹೆಣ್ಣು ಮಗಳು. ಅವಳ ಪರಿಸ್ಥಿತಿಯಿಂದಾಗಿ ಆಕೆ ಮನೆಯವರಿಗೆ ಭಾರ. ಆದರೆ ಸಂಬಂಧಗಳ ಕೊಂಡಿಯಿಂದ ಸುಲಭವಾಗಿ ಕಳಚಿಕೊಳ್ಳುವುದಾದರೂ ಹೇಗೆ..ಎಂಬುದು ಮನೆಯವರ ಪ್ರಶ್ನೆ. ಇವನೋ ತನ್ನ ಹುಚ್ಚು ಹುಚ್ಚಾಟಗಳಿಂದ ಮನೆಯವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಹಿಂಸಾಜೀವಿಯಾಗಿದ್ದಾನೆ. ವಯಸ್ಸು ಮೂವತ್ತಾದರೂ ಜವಾಬ್ದಾರಿಯಿಲ್ಲ ಎಂಬುದು ಮನೆಯವರ ಆರೋಪ. ಮದುವೆಯಾಗಿಲ್ಲ.
ಅದೊಂದು ದಿನ ಅಕೆಯನ್ನು ಸಂಧಿಸುವ ಅವಕಾಶ ಆಚನಾಕ್ಕಾಗಿ ನಮ್ಮ ನಾಯಕನಿಗೆ ಒದಗಿಬರುತ್ತದೆ. ಅವರ ಮನೆಗೆ ಶುಭಾಶಯ ಕೋರಲು ಹೋಗುವವನಿಗೆ ಆ ಮನೆಯವರು ಆಕೆಯನ್ನು ದೂರತಳ್ಳುವ ಹುನ್ನಾರ ಮಾಡಿರುವುದು ಗೊತ್ತಾಗುತ್ತದೆ. ಮುಂದೆ ಆಕೆಯನ್ನು ನಾಯಕ ಸಂಧಿಸುತ್ತಾನೆ. ಇಡೀ ಚಿತ್ರ ಅಪರೂಪದ ಪ್ರೇಮಕಥೆಯ ಚಿತ್ರವಾಗಿ ಮಾರ್ಪಡುತ್ತದೆ.
2002 ರಲ್ಲಿ ಬಿಡುಗಡೆಯಾದ ಓಯಸಿಸ್ ಚಿತ್ರದ ಕಥೆ ಕೇಳುವುದರಲ್ಲಿ ಮಜಾವಿಲ್ಲ. ನೋಡುವುದರಲ್ಲಿ ಸೊಬಗಿದೆ. ಒಂದು ಅನನ್ಯವಾದ ಚಿತ್ರ ನೋಡಾದ ಮೇಲೆ ನಮ್ಮನ್ನು ಆವರಿಸುತ್ತದೆ. ಕಲಾವಿದರಿಬ್ಬರೂ ನಟಿಸಿದ್ದಾರಾ..ಅಥವಾ ಅವರು ಇರುವುದೇ ಹಾಗಾ ಎಂಬ ಅನುಮಾನ ಮೂಡುತ್ತದೆ ಎಂದರೆ ಅದು ಅತಿಶಯೋಕ್ತಿ ಎನಿಸದು.  
ಒಬ್ಬ ಒಳ್ಳೆಯ ಪ್ರೇಮಿ ಯಾರು ಎನ್ನುವ ಪ್ರಶ್ನೆ ನನ್ನನ್ನು ಆವಾಗಾವಾಗ ಕಾಡತೊಡಗುತ್ತದೆ. ಮೊನ್ನೆ ರಾ೦ಝನಾ ಚಿತ್ರವನ್ನು ನೋಡಿದಾಗ ನನಗೆ ಒಂದು ಪ್ರಶ್ನೆ ಕಾಡತೊಡಗಿತು. ಪ್ರತಿಕ್ರಿಯೆ ಬರದಿದ್ದರೂ ಒಬ್ಬ ಹುಡುಗಿಯನ್ನು ಅಂಥಾ ಪರಿ ಪ್ರೀತಿಸಬೇಕಾ.? ಎಂದು. ಈಗ ನೋಡಿ ಹಿಂದೆ ಬೀಳುವುದು ಅವಳನ್ನು ಒಲಿಸಿಕೊಳ್ಳುವುದು ಓಕೆ. ಆದರೆ ಆಕೆ ಪ್ರತಿಕ್ರಿಯಿಸದಿದ್ದಾಗ ಅಥವಾ ಸಂಪೂರ್ಣವಾಗಿ ನಾವೇ ಆಕೆಗೆ ಬೇಡದಾದಾಗ ಅಥವಾ ನಮ್ಮ ಮೇಲೆ ಅಂತಹ ಭಾವನೆ ಆಕೆಗೆ ಬರದಿದ್ದಾಗಳೂ ಆಕೆಯನ್ನು ಪ್ರೀತಿಸುವುದು, ನನ್ನನ್ನು ಪ್ರೀತಿಸಲೇ ಬೇಕೆಂದು ಹಠ ಮಾಡುವುದು ಸರಿಯಾ..? ಡರ್ರ್ ಚಿತ್ರದ ಶಾರುಕ್ ಖಾನ್ ಪ್ರೀತಿಸುವ ನೆಪದಲ್ಲಿ ಕೊಟ್ಟ ಕಿರುಕುಳ ಎಂತಹದ್ದು ನಮಗೂ ನಿಮಗೂ ಗೊತ್ತಿದೆ. ಫೋನ್ ಬಂದರೆ ಸಾಕು ಆಕೆ ಬೆಚ್ಚಿ ಬೆದರಬೇಕು ಆ ರೀತಿ ಕಾಡಿದ, ಒಂದು ಕ್ಷಣವೂ ನೆಮ್ಮದಿಯಿಂದ ಇರಲು ಬಿಡದ ಅವನನ್ನು ಪ್ರೀತಿಸುವುದಾದರೂ ಹೇಗೆ ಮತ್ತು ಏಕೆ..?
ಅಕಸ್ಮಾತ್ ಒಂದು ಹುಡುಗಿ ನಮಗೆ ಇಷ್ಟವಿಲ್ಲದಿದ್ದರೂ ನಮ್ಮ ಹಿಂದೆ ಬಿದ್ದರೆ ನಮಗೆನನ್ನಿಸುತ್ತದೆ.?
ಆ ಕಾರಣದಿಂದಾಗಿಯೇ ನನಗೆ ಕುಂದನ್ ಪಂಡಿತ್ ಗಿಂತ ಆರ್ಯ ಇಷ್ಟವಾಗುತ್ತಾನೆ. ಆಕೆಯ ಮೇಲೆ ಅಪಾರ ಮನಸಿದೆ. ಆದರೆ ಈಗಾಗಲೇ ಆಕೆ ಬೇರೆಯವರನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದಾಗ ಅವಳನ್ನು ಆಕೆಯ ಪ್ರಿಯಕರನ ಜೊತೆ ಒಂದು ಮಾಡುವುದಕ್ಕೆ ನಿಲ್ಲುವ ಆರ್ಯ ತ್ಯಾಗಮಯಿ ಎನಿಸುವುದಿಲ್ಲ, ಇಡೀ ಚಿತ್ರದಲ್ಲಿ ಆ ಪಾತ್ರ ಎಲ್ಲೂ ಸ್ವಕರುಣೆಯಿಂದ ನರಳುವುದಿಲ್ಲ.
ಆದರೆ ಕುಂದನ್ ಪಂಡಿತ್ ಜೊತೆಯಲ್ಲಿ ತಾನು ಜೊಯಳನ್ನು ಪ್ರೀತಿಸಿದ್ದಷ್ಟೇ ತನ್ನನ್ನು ಪ್ರೀತಿಸುತ್ತಿರುವ ತನ್ನ ಗೆಳತಿಯ ಕಡೆಗೆ ಗಮನವನ್ನೇ ಹರಿಸುವುದಿಲ್ಲ. ಆಕೆಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾನೆಯೇ ಹೊರತು ಆಕೆಯ ಪ್ರೀತಿಯನ್ನು ಕೊನೆಯವರೆಗೂ ಅರ್ಥ ಮಾಡಿಕೊಳ್ಳುವುದಿಲ್ಲ. ಜೋಯಾಳಿಗೆ ಮದುವೆ ನಿಶ್ಚಯವಾಗಿದೆ ಎಂದು ತಿಳಿದಾಕ್ಷಣವೇ ಹಠಕ್ಕಾಗಿ ಗೆಳತಿಯನ್ನು ಮದುವೆಯಾಗಲು ಸಿದ್ಧನಾಗಿ ಆಕೆಯ ಮುಂದೆ ದೊಡ್ಡ ದೊಡ್ಡ ಮಾತನ್ನಾಡುವ ಕುಂದನ್ ಜೋಯಾಳ ಮದುವೆ ನಿಂತ ಗಡಿಬಿಡಿಯಲ್ಲಿ ತನ್ನ ಮದುವೆಯನ್ನು ನಿಲ್ಲಿಸುತ್ತಾನೆ. ಪಾಪ ಆಕೆಯ ಗತಿ..? ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಕುಂದನ್ ಹೇಗೆ ಹೀರೋ ಆಗುತ್ತಾನೆ..
ಇದೆ ಕುಂದನ್ ಹಿನ್ನೆಲೆ ಸಾಧುತನದ್ದು. ಹಾಗಾಗಿ ಬಚಾವ್..ಅಕಸ್ಮಾತ್ ಒರಟು ಹಿನ್ನೆಲೆಯವನೋ, ಕಟು ಮನಸ್ಸಿನವನೋ ಆಗಿದ್ದರೆ..
ಮುಖಕ್ಕೆ ಬ್ಲೇಡ್ ಹಾಕುತ್ತಿದ್ದನಾ..?ಮುಖಕ್ಕೆ ಆಸಿಡ್ ಎರಚುತ್ತಿದ್ದನಾ..? ಸಾಧ್ಯತೆಗಳು ಇಲ್ಲ ಎನ್ನುವಂತಿಲ್ಲ.
ಇರಲಿ. ಇದೊಂದು ಸುಮ್ಮನೆ ತಲೆಹರಟೆಯ ಆಲೋಚನೆಗಳು ಮೊನ್ನೆ ಶೋಭಾ ಡೇ ಬರೆದ ಲೇಖನವನ್ನು ಓದಿದ ಮೇಲೆ ತಲೆಯಲ್ಲಿ ಹಾದುಹೋಯಿತು.
ಕೊಸರು: ಹೀಗೆ ರಸ್ತೆಯಲ್ಲಿ ಹೋಗುವಾಗ ಚಂದ್ರ ಚಿತ್ರದ ಪೋಸ್ಟರ್ ಕಣ್ಣಿಗೆ ಬಿದ್ದಿತು. ಅತ್ಯುತ್ತಮ ವಸ್ತ್ರವಿನ್ಯಾಸವನ್ನು ಹೊಂದಿರುವ ಸುಂದರಿ ಶ್ರೇಯಳನ್ನು ಹಿಂದಿನಿಂದ ಪ್ರೇಂ ಬಳಸಿರುವ ರೋಮ್ಯಾಂಟಿಕ್ ಪೋಸ್ಟರ್ ಅದು. ಎಲ್ಲಾ ಸರಿ. ಆದರೆ  ಲಹರಿಯಲ್ಲಿರುವ ಶ್ರೇಯಾಳ ಕೊರಳಿಗೆ ನಾಯಕ ನಟ ಪ್ರೇಂ, ದಂಡುಪಾಳ್ಯ ಹಂತಕನೋಪಾದಿಯಲ್ಲಿ ತನ್ನ ಖಡ್ಗವನ್ನು ಹಿಡಿದು ನಮ್ಮೆಡೆಗೆ ವೀರಾವೇಶದಿಂದ ನೋಡುತ್ತಿರುವುದು ಏನನ್ನು ಸೂಚಿಸುತ್ತದೆ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು.ಅಂತಹ ರೋಮ್ಯಾಂಟಿಕ್ ಮೂಡಿನಲ್ಲೂ ಕೊರಳಿಗೆ ಖಡ್ಗ ಹಿಡಿದು ಯಾರನ್ನೂ ಹೆದರಿಸುತ್ತಿರಬಹುದು ಅಥವಾ ಮೆಚ್ಚಿಸುತ್ತಿರಬಹುದು..?
ರೂಪಾ ಅಯ್ಯರ್ ಅವರನ್ನೇ ಕೇಳಬೇಕು.

Tuesday, June 25, 2013

ಬ್ಯಾಕ್ to ಬ್ಯಾಕ್ ಎರಡು ಚಿತ್ರಗಳು...


ಈ ಎರಡೂ ಚಿತ್ರಗಳಲ್ಲಿ ವಿಶೇಷವಿದೆ. ರಾ೦ಝನಾ ಧನುಶ್ ಅಭಿನಯದ ಮೊದಲ ಹಿಂದಿ ಚಿತ್ರ. ಸರಿ ಸುಮಾರು ಮೂವತ್ತೈದು ಕೋಟಿ ವೆಚ್ಚದಲ್ಲಿ ತಯಾರಾದ ಚಿತ್ರ. ಹಾಗೆ ಆಕ್ಷನ್ ಸುದೀಪ್ ಅಭಿನಯಿಸಿದ್ದಾರೆ ಎಂದು ಪ್ರಚಾರ ಪಡೆದ ಎರಡನೇ ತೆಲುಗು ಚಿತ್ರ. ಆದರೆ ಎರಡೂ ಚಿತ್ರಗಳೂ ತೀರಾ ನಿರಾಶಾದಾಯಕವಲ್ಲದಾದರೂ ಅದ್ಭುತ ಎನ್ನುವ ಹಾಗಿಲ್ಲ.
ರಾ೦ಝನಾ:
ಧನುಶ್ ತಮ್ಮ ಕೊಲವೇರಿ ಹಾಡಿನಿಂದ ದೇಶಾದ್ಯಂತ ಹೆಸರು ಮಾಡಿದವರು. ತಮಿಳಿನಲ್ಲಿ ತನ್ನದೇ ಆದ ಛಾಪು ಹೊತ್ತಿರುವ ಕಲಾವಿದ. ಅವರ ಕಾದಲ್ ಕೊಂದೆನ್  ಚಿತ್ರದಲ್ಲಿನ ತಣ್ಣಗಿನ ಸೈಕೊಪಾಥ್ ಪಾತ್ರವನ್ನು ಮರೆಯುವುದಾದರೂ ಹೇಗೆ.? ಅವರು ಹಿಂದಿಯಲ್ಲಿ ಅಭಿನಯಿಸುತ್ತಿದ್ದಾರೆ ಎಂದಾಗ ಬಾಲಿವುಡ್ ಚಿತ್ರರಸಿಕರಿಂದ ಹಿಡಿದು ಇಡೀ ಭಾರತೀಯ ಚಿತ್ರರಂಗವೇ ಒಮ್ಮೆ ಕಣ್ಣು ಹಾಯಿಸಿತ್ತು.
ಚಿತ್ರಕ್ಕೆ ಸಂಗೀತ ಮಾಂತ್ರಿಕ ಎ.ಆರ್ .ರಹಮಾನ್ ಸಂಗೀತ ನೀಡಿದ್ದಾರೆ. ಎರಡು ಹಾಡುಗಳಂತೂ ಸೂಪರ್. ಹಾಗೆ ಛಾಯಾಗ್ರಹಣವಂತೂ ಬನರಾಸ್ ಅನ್ನು ಇಷ್ಟು ಚೆನ್ನಾಗುದೆಯಾ ಎನ್ನುವಂತೆ ನಮ್ಮ ಮುಂದಿಟ್ಟಿದೆ. ಚಿತ್ರದೊಳಗಿನ ಕಾಲಾವಧಿ ವಿಶಾಲವಾದದ್ದು. ಬಾಲ್ಯದಿಂದ ಆತನ ತಾರುಣ್ಯದವರೆಗೆ ಹರಿದು ಬರುವ ಕಥಾ ಹಂದರ ಬದುಕಿನ ಹಲವಾರು ಘಟ್ಟಗಳು ಹಾದುಹೋಗುತ್ತವೆ. ಹಾಗಾಗಿ ಕಾಲಾಂತರದ ರೂಪಾಂತರವನ್ನು ಕ್ಯಾಮೆರಾ ಕಣ್ಣಿನ ಮೂಲಕ ವಿಶದ ಪಡಿಸುವುದು ಕಷ್ಟದ ಕೆಲಸವೇ. ಚಿತ್ರದ ಗತಿ, ಅದರಲ್ಲಿನ ವಸ್ತು, ಅದರಲ್ಲಿನ ಕಾಲ ಬದಲಾದದ್ದು ನೋಡುಗನ ಅರಿವಿಗೆ ಬಾರದಂತೆ ಅರಿವಾಗಬೇಕಾದರೆ ಅದಕ್ಕೆ ಅನುಗುಣವಾದ ಕ್ಯಾಮೆರಾ ಚಲನೆ, ನೆರಳು ಬೆಳಕಿನ ಹೊಯ್ದಾಟವಿರಬೇಕು. ಆ ವಿಷಯದಲ್ಲಿ ಕ್ಯಾಮೆರಾ ಕೆಲಸಕ್ಕೆ ಶಹಬ್ಬಾಸ್ ಹೇಳಲೆಬೇಕಾಗುತ್ತದೆ.  ಛಾಯಾಗ್ರಾಹಕ ನಟರಾಜ್ ಸುಬ್ರಮಣಿಯನ್, ವಿಶಾಲ್ ಸಿಂಹ ಅಭಿನಂದನಾರ್ಹರು. ಹಾಗೆ ತನು ವೆಡ್ಸ್ ಮನು ಚಿತ್ರ ನಿರ್ದೆಶಿಸಿದ್ದ ಆನಂದ ಎಲ್ .ರೈ  ಚಿತ್ರವನ್ನು ಪ್ರೇಮಿಯೊಬ್ಬನ ಉತ್ಕಟತೆಯನ್ನು ತೋರಿಸುವ ವಿಷಯದಲ್ಲಿ ಗೆದಿದ್ದಾರೆ. ಅಭಿನಯದಲ್ಲಿ ಚಿಕ್ಕಂದಿನಿಂದ ದೊಡ್ದವನಾಗುವವರೆಗೆ ಅಲ್ಲಿಂದ ರಾಜಕೀಯಕ್ಕೆ ಪ್ರವೇಶ ಪಡೆಯುವವರೆಗೆ ಧನುಶ್ ತಮ್ಮ ಅಭಿನಯ ಸಾಮರ್ಥ್ಯವನ್ನು ಮೆರೆದಿದ್ದಾರೆ. ಇನ್ನುಳಿದಂತೆ ಅಭಯ ಡಿಯೋಲ್, ಮೊಹಮ್ಮದ್ ಬೆಸ್ಹಾನ್ ಆಯೂಬ್, ಸ್ವರ ಭಾಸ್ಕರ್,ಸೋನಂ ಕಪೂರ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.
ಇಷ್ಟೆಲ್ಲಾ ಪ್ಲಸ್ ಗಳಿರುವ ಚಿತ್ರದ ಮೊದಲ ಹದಿನೈದು ನಿಮಿಶವಂತೂ ಅದ್ಭುತವೆನಿಸುತ್ತದೆ. ಬಾಲ್ಯದಲ್ಲೇ ಮುಸ್ಲಿಂ ಹುಡುಗಿ ಜೊಯಾಗೆ ಮನಸೋಲುವ ತಮಿಳು ಪಂಡಿತನ ಮಗ ಕುಂದನ್ ಪಂಡಿತ್ ಅವಳ ಹಿಂದೆ ಬೀಳುತ್ತಾನೆ. ಪ್ರೀತಿಸುವಂತೆ ಪರಿಪರಿಯಾಗಿ ಬೇಡುತ್ತಾನೆ. ಕಾಡುತ್ತಾನೆ. ಅದನ್ನರಿವ ಆಕೆಯ ತಂದೆ ದೂರದ ಊರಿಗೆ ಅವಳನ್ನು ಕಳಿಸಿ ಆಕೆ ವಿದ್ಯಾಭ್ಯಾಸ ಮುಗಿಸಿ ವಾಪಸ್ಸು ಬಂದಾಗಲೂ ಕುಂದನ್ ಗೆ  ಆಕೆಯ ಮೇಲಿನ ಪ್ರೀತಿ ಮರೆಯಾಗಿರುವುದಿಲ್ಲ. ಆದರೆ ಅದನ್ನೆಲ್ಲಾ ಮರೆತಿದ್ದ ಜೊಯಾಲಲ್ಲಿ ಮತ್ತೆ ಮತ್ತೆ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾನೆ. ಕಾಡುತ್ತಾನೆ. ಆದರೆ ಆಕೆ ತಾನೀಗಾಗಲೇ ಒಬ್ಬ ಹುಡುಗನನ್ನು ಪ್ರೀತಿಸುತಿರುವ ವಿಷಯವನ್ನು ಹೇಳಿದಾಗ ಆಕೆಯ ಪ್ರೇಮಕ್ಕೆ ಅದ್ದಬರಲು, ಆತನೊಂದಿಗಿನ ಮದುವೆಯನ್ನು ಮುರಿದು ಹಾಕಲು ಶತಪ್ರಯತ್ನ ಪಡುತ್ತಾನೆ. ಅದು ಸಾಧ್ಯವಾಗದಾದಾಗ ಹಠ ತೊಟ್ಟು ಆಕೆಯ ಮದುವೆಯ ದಿನವೇ ತಾನು ಮದುವೆಯಾಗುತ್ತೇನೆಂದು ಪಣತೊಡುತ್ತಾನೆ.  ಆಕೆಯ ಮದುವೆಯ ದಿನವೇ ತನ್ನ ಮದುವೆಯನ್ನು ನಿಗದಿ ಮಾಡಿಕೊಳ್ಳುತ್ತಾನೆ. ಆದರೆ ಮುಂದೆ ವಿಧಿಯಾಟ ಬೇರೆಯೇ ಇರುತ್ತದೆ. ಜೊಯ ಪ್ರೀತಿಸುತ್ತಿದ್ದ ಹುಡುಗ ಮುಸ್ಲಿಂ ಅಲ್ಲ, ಅವನೊಬ್ಬ ಮೋಸಗಾರ ಎಂದು ತಿಳಿದು ಹೊಡೆದಾಟಗಳಾಗಿ ಜೊಯಾಳ ಮದುವೆಯೂ ನಿಂತುಹೋಗುತ್ತದೆ. ಆ ಗಲಾಟೆಯಲ್ಲಿ ಕುಂದನ್ ಮದುವೆಯೂ ನಿಂತುಹೋಗುತ್ತದೆ. ಇಲ್ಲಿಯವರೆಗಿನ ಕಥೆ ತುಂಬಾ ಆಸಕ್ತಿಕರವಾಗಿ ನೋಡಿಸಿಕೊಂಡು ಹೋಗುತ್ತದೆ. ಆದರೆ ಮಧ್ಯಂತರದ ನಂತರ ಚಿತ್ರದ ದಿಕ್ಕೇ ಬದಲಾಗಿ ಚಿತ್ರ ಇದ್ದಕ್ಕಿದ್ದಂತೆ ರಾಜಕೀಯದತ್ತ ಮುಖ ಮಾಡುತ್ತದೆ. ಅಲ್ಲಿಂದ ಸೀದಾ ಸೇಡಿನತ್ತ ತಿರುಗಿಕೊಂಡು ದುರಂತವಾಗುತ್ತದೆ.
ಚಿತ್ರದ ಕಥೆಯಲ್ಲಿನ ಮಧ್ಯಂತರದ ತಿರುವುಗಳೇ ಚಿತ್ರದ ಮೊದಲಾರ್ಧದ ಅಂದವನ್ನು ತಿಂದು ಹಾಕಿದೆ ಎನ್ನಬಹುದು. ಒಬ್ಬ ಅಮರಪ್ರೆಮಿಯ ಕಥೆಯನ್ನು ನಿರೂಪಿಸಲು ಹೋಗಿ ಅವನ ಪ್ರೀತಿಯ ಉತ್ತುಂಗವನ್ನು ಮನವರಿಕೆ ಮಾಡಿಕೊಡಲು ನಿರ್ದೇಶಕರು ಮಾಡಿರುವ ಹರಸಾಹಸವೆ ಅತ್ಯುತ್ತಮ ಚಿತ್ರವನ್ನು ಸಾದಾರಣ ಚಿತ್ರ ಎಂಬ ಪಟ್ಟಕ್ಕೆ ಕೆಳಗಿಳಿಸಿದೆ.
ಆಕ್ಷನ್:
ಚಿತ್ರದಲ್ಲಿ ಕನ್ನಡದ ನಟ ಸುದೀಪ ಇದ್ದಾರೆ ಎಂಬ ಒಂದು ಆಕರ್ಷಣೆಯ ಜೊತೆಗೆ ಭಾರತದ ಮೊತ್ತ ಮೊದಲ 3ಡಿ ಹಾಸ್ಯಮಯ ಚಿತ್ರ ಎಂಬ ಹಿರಿಮೆಯೂ ಈ ಚಿತ್ರಕ್ಕಿದೆ. ಆದರೆ ಒಂದು ಅಸಮಾಧನಕರ ಅಂಶವೆಂದರೆ ಈ ಎರಡೂ ಅಂಶಗಳೂ ಚಿತ್ರದ ಕಥೆಗಾಗಲಿ, ಸಿನಿಮಾಕ್ಕಿಂತ ನಿರೀಕ್ಷೆಯನ್ನು ತಣಿಸುವುದಕ್ಕಾಗಲಿ ಸಹಾಯ ಮಾಡಿಲ್ಲ ಎಂಬುದು.
ಸುದೀಪ ತೆಲುಗಲ್ಲಿ ಅಭಿನಯಿಸಿದ ಈಗ ದೊಡ್ಡ ಯಶಸ್ಸು ಕಂಡಿತ್ತು. ಆ ಯಶಸ್ಸನ್ನೇ ಬಂಡವಾಳವಾಗಿಟ್ಟುಕೊಂಡು ಅದರ ಲಾಭ ಪಡೆದುಕೊಳ್ಳಲೆಂದೇ ನಿರ್ಮಿತವಾಗಿರುವ ಚಿತ್ರ ಆಕ್ಷನ್. ಚಿತ್ರದಲ್ಲಿ ಖಳ ಛಾಯೆಯಿರುವ ಪಾತ್ರದಲ್ಲಿ ಸುದೀಪ ಅಭಿನಯಿಸಿದ್ದಾರಾದರೂ ಅದು ಅತಿಥಿ ಪಾತ್ರ. ಈಗ ಚಿತ್ರಕ್ಕೆ ಸಂಬಂಧಿಸಿದ ಸಂಭಾಷಣೆ ಹೊಡೆದು ಶಿಳ್ಳೆ ಗಿಟ್ಟಿಸುವ ಸುದೀಪ್ ಪಾತ್ರ ಚಿತ್ರದಲ್ಲಿ ತೀರಾ ಚಿಕ್ಕದು. ಹಾಗಾಗಿ ಸುದೀಪರನ್ನು ತಲೆಯಲ್ಲಿ ಇಟ್ಟುಕೊಂಡು ಚಿತ್ರಮಂದಿರಕ್ಕೆ ಕಾಲಾಕಿದರೆ ನಿರಾಶೆ ಕಟ್ಟಿಟ್ಟ ಬುತ್ತಿ.
ಚಿತ್ರದ ವಸ್ತು ಹಾಸ್ಯಮಿಶ್ರಿತ ಸಸ್ಪೆನ್ಸ್. ನೀವೀಗಾಗಲೇ ಹಾಲಿವುಡ್ ನಲ್ಲಿ ಯಶಸ್ಸಾದ ಹ್ಯಾಂಗೊವರ್ ಸರಣಿಯ ಚಿತ್ರಗಳನ್ನು ನೋಡಿದ್ದರೆ ಅದರ ತೆಲುಗು ರೂಪವನ್ನು ಯಾಕ್ಷನ್ ಚಿತ್ರದ ಮೂಲಕ ಮತ್ತೊಮ್ಮೆ ನೋಡಬಹುದು. ರಾತ್ರಿ ಬೆಳಗಾಗುವುದರೊಳಗೆ ಏನೇನೋ ನಡೆದುಹೋಗಿರುತ್ತದೆ. ಅದರ ಕಾರಣಗಳೇನು, ಅದರ ಹಿಂದಿನ ಹುನ್ನಾರವೇನು..ಅಷ್ಟಕ್ಕೂ ರಾತ್ರಿ ನಡೆದದ್ದಾರೂ ಏನು ಎನ್ನುವ ಪ್ರಶ್ನಗೆ ಉತ್ತರ ಕಂಡುಕೊಳ್ಳಬೇಕಾದರೆ ಯಾಕ್ಷನ್ ಚಿತ್ರಕ್ಕೊಮ್ಮೆ ಲಗ್ಗೆಯಿಡಬಹುದು.
ಹ್ಯಾಂಗೊವರ್ ಕಥೆ ನಡೆಯುವುದು ಲಾಸ್ ವೇಗಸ್ ನಲ್ಲಿ. ಬ್ಯಾಚುಲರ್ ಪಾರ್ಟಿಗೆ ತೆರಳುವ ಗೆಳೆಯರು ಕುಡಿದ ಅಮಲಿನಲ್ಲಿ ಮಾಡುವ ಕಿತಾಪತಿಗಳು ಅದರಿಂದಾಗುವ ಅನಾಹುತಗಳೇ ಚಿತ್ರದ ಮುಖ್ಯ ದ್ರವ್ಯವಾಗಿತ್ತಲ್ಲದೆ ಚಿತ್ರ ಅಪಾರ ಯಶಸ್ಸು ಗಳಿಸಿತ್ತು. ಇಲ್ಲಿಯೂ ಗೆಳೆಯರು ಗೋವಾಕ್ಕೆ ಮೋಜು ಮಾಡಲು ತೆರಳುತ್ತಾರೆ. ಗೋವಾಕೆ ಏಕೆ ಎಂದೆಲ್ಲಾ ಕೇಳಬಾರದು. ಭಾರತದ ಲಾಸ್ ವೇಗಸ್ ಗೋವಾ ಎಂದುಕೊಳ್ಳಿ. ಅಲ್ಲಿ ಕುಡಿದು ತಿಂದು ಮಜಾ ಮಾಡುತ್ತಾರೆ. ಕುಡಿತದ ಅಮಲಿನಲ್ಲಿ ಪ್ರಜ್ಞೆ ಕಳೆದುಕೊಂಡು ಹೇಗೇಗೋ ಹಾಗೆಯೇ ನಿದ್ರಾದೇವಿಗೆ ಶರಣಾಗುತ್ತಾರೆ. ಆದರೆ ಬೆಳಿಗ್ಗೆ ಎದ್ದಾಗ ಕೊನೆಯಲ್ಲಿ ಹುಲಿಯಿಮ್ದು ಇರುತ್ತದೆ, ಹುಡುಗಿಯಿರುತ್ತಾಳೆ, ಮಗುವೊಂದು ಇರುತ್ತದೆ, ಗೆಳೆಯನೊಬ್ಬ ನಾಪತ್ತೆಯಗಿರುತ್ತಾನೆ. ಪ್ರಥಮಾರ್ಧಕ್ಕೆ ಇಷ್ಟು ಕಥೆ. ಮುಂದಿನರ್ಧಕ್ಕೆ ಇದರ ಹಿಂದಿನ ಕಥೆ.
ಚಿತ್ರದಲ್ಲಿರುವ ತಮಾಷೆಯ ಪ್ರಸಂಗಗಳು ನಗಿಸುತ್ತವೆ. ಆದರೇಕೋ ತೀರ ಮನರಂಜಿಸುವುದಿಲ್ಲ, ಚಿತ್ರದಲ್ಲಿ ದೊಡ್ಡ ನಟರ ಬಳಗವೇ ಇದೆ. ಚಿತ್ರವೂ ಶ್ರೀಮಂತವಾಗಿದೆ. ಸಂಗೀತದ ವಿಷಯಕ್ಕೆ ಬಂದರೆ ಬಪ್ಪಿ ಬಪ್ಪಲಹರಿಯವರ ಸಂಗೀತ ಸಾರಥ್ಯದಲ್ಲಿ ಎರಡು ಹಾಡುಗಳು ಚೆನ್ನಾಗಿವೆ. ಅಲ್ಲರಿ ನರೇಶ್ ತಮ್ಮ ಎಂದಿನ ಶೈಲಿಯ ನಟನೆಯಿಂದ ನಗಿಸುತ್ತಾರೆ. ನಾಯಕಿಯರಾದ ಸ್ನೇಹಾ ಉಳ್ಳಾಲ್, ಕಾಮನಾ ಜೇಠಮಲಾನಿ,ಶೀನ ಶಹಬಾದಿ ತಮ್ಮ ಗ್ಲಾಮರ್ ಲುಕ್ನಿಂದ ಗಮನ ಸೆಳೆಯುತ್ತಾರೆ.

ತಾಂತ್ರಿಕವಾಗಿ, ತಾರಾಗಣದ ವಿಷಯದಲ್ಲೂ ಅದ್ದೂರಿಯಾಗಿರುವ ಆಕ್ಷನ್ ಚಿತ್ರ ಎಲ್ಲಾ ಅಂಶಗಳಿದ್ದಾಗ್ಯೂ ಮತ್ತೇನೋ ಕೊರತೆಯಿದೆ ಎನಿಸಿದ್ದಕ್ಕೆ ಕಾರಣವೇನು ಎಂಬುದರ   ಅನ್ವೇಷಣೆಯನ್ನು ನಿರ್ದೇಶಕ ಅನಿಲ್ ಸುನಕರವರಿಗೆ ಬಿಟ್ಟು ಬಿಡುವುದು ಒಳ್ಳೆಯದು.
ಕೊಸರು: ಇದು 3 ಡಿ ಚಿತ್ರ. ಆದರೆ ಆ ಮೂರನೆಯ ಆಯಾಮಕ್ಕೆ ಚಿತ್ರದ ಕಥೆಯಾಗಲೀ, ಚಿತ್ರಣಗಳಾಗಲಿ ಸಹಾಯ ಮಾಡುವುದಿಲ್ಲ. ಹಾಗಾಗಿ 3ಡಿ ಪರಿಣಾಮ ಎಂಬುದು ಯಾವುದೇ ಪರಿಣಾಮ ಬೀರದೆ ಚಿತ್ರ ನೋಡುವಾಗ ಕಣ್ಣು ಭಾರವಾಗುವುದಂತೂ ಸತ್ಯ.

Monday, June 24, 2013

ನಿರರ್ಥಕ ಸಂದೇಶಮಯ ಚಿತ್ರಗಳು...



ಕೆಲವು ಚಿತ್ರಗಳು ಬಿಡುಗಡೆಯಾಗುತ್ತವೆ. ಆದರೆ ಬಿಡುಗಡೆ ಮಾಡಿದವರಿಂದ ಹಿಡಿದು ಪ್ರೇಕ್ಷಕರವರೆಗೆ ಅದರ ಬಗ್ಗೆ ಯಾರಿಗೂ ಆಸಕ್ತಿ ಖಾಳಜಿ ಇರುವುದೇ ಇಲ್ಲ. ಅದರ ಬಗ್ಗೆ ವಿಮರ್ಶೆ ಮಾಡುವುದಿರಲಿ ಮಾತೂ ಆಡಲು ಹಿಂದಡಿಯಿಡುತ್ತಾರೆ. ಅಂತಹದ್ದೇ ಒಂದು ಚಿತ್ರ ಗರ್ಭದಗುಡಿ. ಸಂದೇಶಮಯ ಚಿತ್ರಗಳು ಯಾವತ್ತಿಗೂ ಅಗತ್ಯ. ಜೀವನಚೈತ್ರ ಚಿತ್ರ ಬಂದ ಮೇಲೆ ಎಷ್ಟೋ ಊರಲ್ಲಿ ಸಾರಾಯಿ ಮಾರಾಟ ನಿಲ್ಲಿಸಿದ್ದರು.ಸೈಲೆನ್ಸ್ಡ್ ಚಿತ್ರ ಬಿಡುಗಡೆಯಾದ ನಂತರ ಸೌತ್ ಕೊರಿಯಾದಲ್ಲಿ ದೊಡ್ಡ ಆಂದೋಲನವೇ ನಡೆದಿತ್ತು.
ಮೊದಲಿಗೆ ಸುಮ್ಮನೆ ಗರ್ಭದಗುಡಿಯ ಬಗ್ಗೆ ತಿಳಿದುಕೊಳ್ಳೋಣ. ತಂಗಿ ಅಣ್ಣ ಚಿತ್ರಗಳ ನಂತರ ಓಂ ಸಾಯಿಪ್ರಕಾಶ್ ಈಗ ನೇರವಾಗಿ ಭ್ರೂಣಕ್ಕೆ ಕೈಹಾಕಿದ್ದಾರೆ. ಅಂದರೆ ಸಾಮಾಜಿಕ ಪಿಡುಗಾದ ಭ್ರೂಣಹತ್ಯೆಯನ್ನು ಕುರಿತು ಚಿತ್ರವೊಂದನ್ನು ಮಾಡಿದ್ದಾರೆ ಮತ್ತದಕ್ಕೆ ಗರ್ಭದಗುಡಿ ಎಂಬ ಹೆಸರಿಟ್ಟಿದ್ದಾರೆ. ಅಂದಮೇಲೆ ಚಿತ್ರದಲ್ಲಿ ಹೆಣ್ಣು ಮಗುವನ್ನು ಅದರ ಭ್ರೂಣಾವಸ್ಥೆಯಲ್ಲೇ ಚಿವುಟಿ ಹಾಕಲು ನೋಡುವ ಸ್ತ್ರೀದ್ವೇಷಿಗಳಿಗೆ ಅದು ತಪ್ಪು ಎಂಬ ಸಂದೇಶದ ಜೊತೆಗೆ ಹೆಣ್ಣಿನ ಹಿರಿಮೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಅದೆಲ್ಲ್ಲಾಸರಿ. ಅದರಲ್ಲಿ ಒಂದು ಅರ್ಥ ಗರ್ಭಿತವಾದ ಚಿತ್ರ ಮಾಡಿದ್ದಾರಾ..? ಎಂಬುದೇ ಪ್ರಶ್ನೆ.
ಚಿತ್ರದ ಆಶಯ ಚೆನ್ನಾಗಿದೆ. ಚಿತ್ರವನ್ನು ಯಾವ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ, ಯಾವ ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಚಿತ್ರವನ್ನು ತೆರೆಗರ್ಪಿಸಲಾಗಿದೆ ಎಂಬುದು ಸ್ಪಷ್ಟ. ಏಕೆ ಹೀಗೆ ಎಂಬ ಪ್ರಶ್ನೆ ನನ್ನನ್ನು ಹಲವಾರು ಸಾರಿ ಕಾಡುತ್ತಲೇ ಇರುತ್ತದೆ.
ಒಂದು ಸಾಮಾಜಿಕ ಕಳಕಳಿಯ ಚಿತ್ರ ಎಂದಾಗ ಮೊದಲಿಗೆ ಅದು ಸಮಾಜಕ್ಕೆ ಅಂದರೆ ಜನರಿಗೆ ಮೊದಲು ತಲುಪಬೇಕು. ಆದರೆ ನಮ್ಮಲ್ಲಿ ಸಾಮಾಜಿಕ ಕಳಕಳಿಯ ಚಿತ್ರ, ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳು ಸಮಾಜಕ್ಕೆ ತಲುಪಿಯೇ ಇರುವುದಿಲ್ಲ. ಅದು ಪ್ರಶಸ್ತಿ ಕಮಿಟಿಯ ನಾಲ್ಕು ಮಂದಿ ನೋಡಿ ಅದಕ್ಕೊಂದು ಪ್ರಶಸ್ತಿ ಕೊಟ್ಟುಬಿಟ್ಟಿರುತ್ತಾರೆ.ಆಮೇಲೆ ಸಬ್ಸಿಡಿ ಅದು ಇದು ಎಂದು ಚಿತ್ರಕರ್ಮಿಗಳ ಬಂಡವಾಳವನ್ನು ಸಂಪಾದಿಸುವ[?] ಕಾಯಕದಲ್ಲಿ ನಿರತರಾಗಿರುತ್ತಾರೆ.
ಹೆಣ್ಣು ಭ್ರೂಣ ಹತ್ಯೆ ಒಂದು ಘೋರ ಕೃತ್ಯ. ಅಂತಹುದರ ಬಗ್ಗೆ ಸಿನಿಮಾ ತೆಗೆದಾಗ ಅದು ಎಲ್ಲರಿಗೂ ಪರಿಣಾಮಕಾರಿಯಾಗಿ ತಲುಪಿದಾಗ ಕಥೆಯ ಆಶಯ ಈಡೇರಿ ಸಿನಿಮಾ ಸಾರ್ಥಕ ಎನಿಸಿಕೊಳ್ಳುತ್ತದೆ. ಉದಾಹರಣೆಗೆ ಲಗೇ ರಹೋ ಮುನ್ನಾಭಾಯಿ ಚಿತ್ರದಲ್ಲಿನ  ಗಾಂಧೀಜಿಯವರ ಶಾಂತಿ ಸಂದೇಶ. ಅದನ್ನು ಅಷ್ಟು ಚಂದವಾಗಿ ಸೊಗಸಾಗಿ ಮತ್ತು ಪರಿಣಾಮಕಾರಿಯಾಗಿ ಜನರ ಮುಂದಿಟ್ಟ ನಿರ್ದೇಶಕ ರಾಜಕುಮಾರ್ ಹಿರಾನಿಗೆ ದೊಡ್ಡ ಸಲಾಂ ಹೊಡೆಯಲೇ ಬೇಕಾಗುತ್ತದೆ. ಮುಖ್ಯವಾಹಿನಿಯಲ್ಲಿ ಸಾಮಾಜಿಕ ಕಳಕಳಿಯನ್ನು ಕುರಿತ ಚಿತ್ರಗಳು ಬರಬೇಕು...ಆಗಲೇ ಚಲನಚಿತ್ರವೆಂಬುದು ಬರೀ ಮನರಂಜನೆಯ ಮಾಧ್ಯಮವಾಗದೆ ಸಮಾಜದ ಒಂದು ಭಾಗವಾಗುತ್ತದೆ.ಮಷೀನ್ ಗನ್ ಪ್ರೀಚರ್, ಸೈಲೆನ್ಸಡ್, ಕಾಂಸ್ಟ೦ಟ್ ಗಾರ್ಡನರ್, ಹೆಲ್ಪ್ ಮುಂತಾದ ಚಿತ್ರಗಳೂ ಸಂದೇಶಮಯ ಚಿತ್ರಗಳೇ. ಅವೆಲ್ಲಾ ಸ್ವಲ್ಪ ಸಾಕ್ಷ್ಯಚಿತ್ರ ಮಾದರಿಯಲ್ಲಿ  ಇದ್ದರೂ ನಮ್ಮನ್ನು ರಂಜಿಸಿದ್ದವು..  ಚಿಂತನೆಗೆ ಒಳಪಡಿಸಿದ್ದವು. ಆದರೆ ಕನ್ನಡದಲ್ಲಿ ಇಂತಹ ಉದಾಹರಣೆಗಳು ತೀರಾ ಕಡಿಮೆ ಎನ್ನಬಹುದು. ಸಂದೇಶವಿದ್ದರೆ ಅದು ಮುಖ್ಯವಾಹಿನಿಯ ಚಿತ್ರವಾಗುವುದೇ ಇಲ್ಲ. ನಾವೇ ನಮ್ಮಲ್ಲಿನ ಪ್ರೇಕ್ಷಕರನ್ನು ವಿಂಗಡಿಸುತ್ತಿದ್ದೀವೇನೋ ಎನಿಸುತ್ತದೆ. ಮಹಿಳೆಯರ, ಪಡ್ಡೆ ಹುಡುಗರ, ಯುವಕರ ಹೀಗೆ. ಗರ್ಭದಗುಡಿ ಎಂದಾಕ್ಷಣ ಚಿತ್ರಮಂದಿರದಲ್ಲಿ ನೀವು ಹುಡುಕಿದರೂ ಒಬ್ಬೆ ಒಬ್ಬ ಕಾಲೇಜು ಹುಡುಗ ಸಿಕ್ಕುವುದಿಲ್ಲ. ಸುಮ್ಮನೆ ನಾನೇ ನನ್ನ ಗೆಳೆಯರನ್ನು ಗರ್ಭದಗುಡಿ ನೋಡಲು ಬರುತ್ತೀರಾ ಎಂದದ್ದಕ್ಕೆ ಅದೆಲ್ಲಾ ನಮಗಲ್ಲಾ ಗುರು ಎಂದು ಹೇಳಿದ್ದಲ್ಲದೆ ನನ್ನನ್ನು ನೋಡಿ ನಕ್ಕವರು ಇದ್ದಾರೆ.ಅದೆಲ್ಲಾ ಹೆಂಗಸರ ಚಿತ್ರ ಗುರು ಎಂದದ್ದಕ್ಕೆ ನಾನು ಬಿಡುತ್ತೇನೆಯೇ..? ಅಲ್ಲಾ ಮಾರಾಯಾ..ಭ್ರೂಣಹತ್ಯೆ ಎಂಬುದು ಬರೀ ಮಹಿಳೆಯರೇ ಮಾಡಿಸುವ ಕಾರ್ಯವಲ್ಲ. ಅಥವಾ ಅದರ ಬಗ್ಗೆ ಬರೀ ಹೆಂಗಸರೇ ತಿಳಿದುಕೊಳ್ಳಬೇಕಿಲ್ಲ ನಾವೂ ನೀವೂ ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದೆಲ್ಲಾ ಅವರಿಗೆ ಹೇಳಿದ್ದೆ. ಅದೇನೇ ಆದರೂ ಚಿತ್ರ ನೋಡಲು ಅವರ್ಯಾರು ಬರಲಿಲ್ಲ. ನನಗೋ ಅದೇನೋ ವಿಚಿತ್ರ ಕುತೂಹಲ. ಗರ್ಭದಗುಡಿ ಎಂಬ ಶೀರ್ಷಿಕೆಯಡಿ ಎಂಬತ್ತರ ಗಡಿಯಲ್ಲಿರುವ ಹಿರಿಯ ನಿರ್ದೇಶಕರು ಏನು ಮಾಡಿರಬಹುದು ಎಂದು...ಅದ್ಯಾವ ರೀತಿ ಸಂದೇಶ ಕೊಡಲು ಹೊರಟಿರಬಹುದು ಎಂದು... ಚಿತ್ರವನ್ನು ನೋಡಿದೆ. ನೋಡುತ್ತಾ ನೋಡುತ್ತಾ  ಇಷ್ಟೆಲ್ಲಾ ವಿಷಯಗಳು ಮನಸ್ಸಿನಲ್ಲಿ ಹಾದುಹೋದವು.
ಕೆಲವು ಅಂಶಗಳು:
*ಚಿತ್ರದ ಪೋಸ್ಟರ್ ನಲ್ಲಿ ಮದರ್ ತೆರೇಸಾ ಫೋಟೋ ಇದೆ. ಅದಕ್ಕೆ ಸ್ಪಷ್ಟೀಕರಣವೆಂದರೆ ಚಿತ್ರದಲ್ಲಿ ನಾಯಕಿಯ ಹೆಸರು ತೆರೇಸಾ.
*ಸ್ತ್ರೀ ಶೋಷಣೆಯ ವಿರುದ್ಧದ ಈ ಚಿತ್ರದಲ್ಲಿ ಶೋಷಣೆ ಮಾಡುವವರಲ್ಲಿ ಸ್ತ್ರೀಯರೂ ಇದ್ದಾರೆ.
*ಚಿತ್ರಮಂದಿರದಲ್ಲಿ ಚಿತ್ರದೊಳಗಿದ್ದಷ್ಟೂ ಜನರಿರಲಿಲ್ಲ.
 ಇನ್ನು ಸಿನೆಮಾದ ಕಥೆ ಏನು..? ಹೇಗಿತ್ತು ಎಂಬ ವಿಷಯಗಳು ಅಷ್ಟೇನೂ ಆಸಕ್ತಿಕರವಲ್ಲ. ಏನಂತೀರಿ.?

Friday, June 21, 2013

ಒಬ್ಬ ಸಾಮಾನ್ಯ ಮತ್ತು ರೀಮೆಕುಗಳು

ಹಿಂದಿಯಲ್ಲಿ ಎ ವೆಡ್ನೆಸ್ ಡೆ ನನ್ನ ಅಚ್ಚುಮೆಚ್ಚಿನ ಚಿತ್ರ. ನೀರಜ್ ಪಾಂಡೆಯವರ ಬಿಗಿಯಾದ ಚಿತ್ರಕಥೆ ಚಿತ್ರದ ಪ್ರಮುಖ ಆಸ್ತಿ ಎನ್ನಬಹುದು. ಅದನ್ನು ದಿ ಕಾಮನ್ ಮ್ಯಾನ್ ಎನ್ನುವ ಹೆಸರಿನಲ್ಲಿ ಇಂಗ್ಲೀಷಿಗೆ ರೀಮೇಕ್ ಮಾಡಲಾಗಿದೆ.ಬೆನ್ ಕಿಂಗ್ ಸ್ಲೇ [ಕೃಷ್ಣ ಪಂಡಿತ್ ಭಾ೦ಜಿ]ನಮ್ಮಲ್ಲಿ ನಾಸೀರುದ್ದೀನ್ ಷಾ ಅಭಿನಯಿಸಿದ್ದ ಪಾತ್ರವನ್ನು ನಿಭಾಯಿಸಿದ್ದಾರೆ. ಇಡೀ ಚಿತ್ರ ಶ್ರೀಲಂಕಾದಲ್ಲಿ ನಡೆಯುತ್ತದೆ.ಕಥೆಯ ಬಗ್ಗೆ ಹೇಳುವುದೇನೂ ಇಲ್ಲ. ಆದರೆ ನಮ್ಮ ಷಾ ನಿರ್ವಹಿಸಿದ್ದ ಪಾತ್ರವನ್ನು ಬೆನ್ ನಿರ್ವಹಿಸುವಲ್ಲಿ ಕೊಂಚ ಎಡವಿದ್ದಾರೆ ಎನ್ನಬಹುದು. ಇಲ್ಲಿ ಬೆನ್ ನಮಗೆ ಜನಸಾಮಾನ್ಯ ಎನಿಸುವುದೇ ಇಲ್ಲ. ಪಕ್ಕಾ ಫಿಟ್ ದೇಹವನ್ನು ಹೊಂದಿರುವ ಮತ್ತು ಇನ್ ಶರ್ಟ್ ಮಾಡಿಕೊಂಡ ಬೆನ್ ನಮಗೆ ಬೇರೆ ರೀತಿಯಾಗಿಯೇ ಕಾಣುತ್ತಾರೆ. ಅದಲ್ಲದೆ ಅವರ ನಡೆ ನುಡಿ ಸಂಭಾಷಣೆ ಒಪ್ಪಿಸುವ ಪರಿ ನಮಗೆಲ್ಲೂ ಸಾಮಾನ್ಯನೊಬ್ಬ ತನ್ನ ಒಳಗುದಿಯನ್ನು ವ್ಯಕ್ತ ಪಡಿಸುವ ಹಾಗೆ ಕಾಣಿಸುವುದೇ ಇಲ್ಲ.ಅದೇ ಚಿತ್ರದ ಮೈನಸ್ ಪಾಯಿಂಟ್ ಎನ್ನಬಹುದು.
ಇದೆ ಚಿತ್ರ ತಮಿಳು/ತೆಲುಗಲ್ಲಿ ಕಮಲ್ ಹಾಸನ್ ಅಭಿನಯದಲ್ಲೂ ತೆರೆಗೆ ಬಂದಿತ್ತು. ಆದರೆ ಕಮಲ್ ಹಾಸನ್ ಕೂಡ ಒಬ್ಬ ಸಾಮಾನ್ಯ ನಾಗಿರಲಿಲ್ಲ. ಅವರ ಮಾತು, ಶೈಲಿ ಯಾವುದೂ ಸಾಮಾನ್ಯ ಎನಿಸಿರಲಿಲ್ಲ. ಚಿತ್ರದ ಕಥೆ ಎಷ್ಟೇ ಬಿಗಿಯಾಗಿದ್ದರೂ ಕಲಾವಿದ ಸರಿಯಾಗಿ ಪಾತ್ರವನ್ನು ಅಭಿನಯಿಸದಿದ್ದರೆ ಚಿತ್ರ ನಿರೀಕ್ಷಿತ ಪರಿಣಾಮ ಬೀರುವುದಿಲ್ಲ. ಕಮಲ್ ಹಾಸನ್ ಮುಖಭಾವವಾಗಲಿ, ಅವರ ದೇಹದಾರ್ಡ್ಯತೆ ಚಿತ್ರದಲ್ಲಿನ ಪಾತ್ರಕ್ಕೆ ಸಹಾಯ ಮಾಡಿರಲಿಲ್ಲ.
ರೀಮೇಕ್ ನ ಇತಿಮಿತಿಗಳೇನೆ ಇರಲಿ ಅದನ್ನು ನಿರ್ವಹಿಸುವುದು ಕಷ್ಟ ಸಾಧ್ಯದ ಕೆಲಸ. ಒಂದು ರೀಮೇಕ್ ಚಿತ್ರ ಮಾಡುವಾಗ ಕಲಾವಿದರ ಆಯ್ಕೆಯಂತೂ ಬಹಳ ಮುಖ್ಯ. ಅಲ್ಲಿ ಆ ಭಾಷೆಯಲ್ಲಿ ಪಾತ್ರ ನಿರ್ವಹಿಸಿದ್ದವನ ರೀತಿಯ ಸಮರ್ಥ ಕಲಾವಿದನನ್ನು ಹುಡುಕುವುದು ಸಾಹಸದ ಕೆಲಸವೇ.ಈಗಲೂ ನನಗೆ ಬಾಜಿಗರ್ ಚಿತ್ರವನ್ನು ಬೇರ್ಯಾವ ಭಾಷೆಯಲ್ಲಿ ನಿರ್ಮಿಸಿದರೂ ಶಾರುಕ್
ನಂತಹ ಕಲಾವಿದನನ್ನು ಎಲ್ಲಿ ಹುಡುಕುವುದು ಎನಿಸುತ್ತದೆ..?
ಹೆಚ್ಚು ಕಡಿಮೆ ರೀಮೇಕ್ ಆದ ಎಲ್ಲಾ ಭಾಷೆಯಲ್ಲೂ ಯಶಸ್ವಿಯಾದದ್ದು ತಮಿಳಿನ ಚಿನ್ನತಂಬಿ. ಆದರೆ ಎಲ್ಲಾ ಭಾಷೆಗಿಂತ ಕನ್ನಡದ ರಾಮಾಚಾರಿ ಬೆಸ್ಟ್ ವರ್ಶನ್ ಎನ್ನಬಹುದು..ಯಾಕೆಂದರೆ ರವಿಚಂದ್ರನ್ ರೀತಿಯಲ್ಲಿ ಅಮಾಯಕತೆ ತೋರಿಸುವುದು ಮತ್ತು ಆ ಪಾತ್ರವನ್ನು ನಿರ್ವಹಿಸುವುದು ಬೇರೆ ಕಲಾವಿದರಿಗೆ ಸಾಧ್ಯವಾದರೂ ಅವರ ರೂಪದಲ್ಲಿ ವ್ಯತ್ಯಾಸವಿದ್ದದ್ದೆ ಅದಕ್ಕೆ ಮುಖ್ಯ ಕಾರಣ ಎನ್ನಬಹುದು.
ಹಾಗೆಯೇ ಭಾರತದಿಂದ ಇಂಗ್ಲಿಷಿಗೆ ಅಥವಾ ಬೇರೆಯ ದೇಶಕ್ಕೆ ಹೆಚ್ಚು ಚಿತ್ರಗಳು ಹೋಗಿಲ್ಲ. ಮುನ್ನಾಭಾಯಿ ಚಿತ್ರ ಹಾಲಿವುಡ್ ನಲ್ಲಿ ರೀಮೇಕ್ ಆಗುತ್ತಿದೆ ಎಂಬ ಸುದ್ದಿ ಕೇಳಿ ಬಂದಿತ್ತಾದರೂ ಅದಿನ್ನು ಕಾರ್ಯ ರೂಪಕ್ಕೆ ಬಂದಿಲ್ಲ.  ಕೊರಿಯಾದ, ಜಪಾನಿನ ಚೀನಾದ ಕೆಲವು ಚಿತ್ರಗಳು ಹಾಲಿವುಡ್ ನಲ್ಲಿ ಪುನರ್ನಿರ್ಮಾಣವಾಗಿವೆ. ಆದರೆ ಅತಿ ಹೆಚ್ಚು ಚಿತ್ರ ನಿರ್ಮಾಣವಾಗುವ ಭಾರತದಲ್ಲಿನ ಯಾವ ಚಿತ್ರವೂ ಹಾಲಿವುಡಿನತ್ತ ಮುಖ ಮಾಡದೆ ಇರುವುದು ಬೇಸರ ತರಿಸುತ್ತದೆ.
ಹಾಲಿವುಡ್ ಗೆ ರೀಮೇಕ್ ಆದ ಭಾರತೀಯ ಚಿತ್ರಗಳು ನಿಮಗೆ ಗೊತ್ತಿದ್ದರೆ ತಿಳಿಸುವಿರಾ..?

Tuesday, June 18, 2013

ನನ್ನಿಷ್ಟ ಪುಸ್ತಕ ಮತ್ತು ರಾಮ್ ಗೋಪಾಲ್ ವರ್ಮ...

“ನನ್ನ ಪ್ಲಾಪ್ ಸಿನಿಮಾಗಳೆಲ್ಲವನ್ನೂ ನಾನು ಉದ್ದೇಶಪೂರ್ವಕವಾಗಿ ತೆಗೆದದ್ದು...ಹಾಗೂ ನನ್ನ ಹಿಟ್ ಸಿನಿಮಾಗಳೆಲ್ಲಾ ಅನಿರೀಕ್ಷಿತವಾಗಿ ಸಂಭವಿಸಿದ್ದು..”
ನಮಗೆ ನಿಮಗೆ ಗೊತ್ತಿರುವಂತೆ ಸತ್ಯ ಮತ್ತು ದಿಲ್ ಸೆ ಚಿತ್ರಗಳು ಒಂದೆ ವರ್ಷದಲ್ಲಿ ಬಿಡುಗಡೆಯಾದವು. ದಿಲ್ ಸೆ ಚಿತ್ರದಲ್ಲಿ ದಿಗ್ಗಜ ಮಣಿರತ್ನಂ ನಿರ್ದೇಶಕನ ಪಟ್ಟವನ್ನು ಅಲಂಕರಿಸಿದ್ದರು. ಸಂಗೀತ ಮಾಂತ್ರಿಕ ಎ.ಆರ್.ರಹಮಾನ್ ಸಂಗೀತ ನೀಡಿದ್ದರು. ಬಾಲಿವುಡ್ ಚಿತ್ರದ ಸೂಪರ್ ಸ್ಟಾರ್  ಶಾರುಕ್ ಖಾನ್ ಇದ್ದರು. ಹೀಗೆ ಬರೀ ದಿಗ್ಗಜರನ್ನೇ ಹೊಂದಿದ್ದ ಬಹು ನಿರೀಕ್ಷಿತ ದಿಲ್ ಸೆ ಪ್ರೇಕ್ಷಕರಿಂದಲೂ ವಿಮರ್ಶಕರಿಂದಲೂ ಗಲ್ಲಾಪೆಟ್ಟಿಗೆ ದೃಷ್ಟಿಯಿಂದಲೂ ಬಹುದೊಡ್ಡ ಸೋಲು ಕಂಡಿತ್ತು. ಆದರೆ ವರ್ಮಾ ಬಿಟ್ಟರೆ ಬೇರಾರೂ ಅಷ್ಟೊಂದು ಪರಿಚಿತರಲ್ಲದ ಸತ್ಯ ಚಿತ್ರ ಬಹುದೊಡ್ಡ ಯಶಸ್ಸು ಕಂಡಿತಲ್ಲದೆ ಮಾಸ್ಟರ್ ಪೀಸ್ ಎನಿಸಿಕೊಂಡಿತು.ವಿಷಯವೇನಪ್ಪ ಎಂದರೆ ರಾಮ್ ಗೋಪಾಲ್ ವರ್ಮರವರು ದಿಲ್ಸೆ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದರು.
ನನಗೆ ವರ್ಮಾ ಬಗ್ಗೆ ಅಚ್ಚರಿ ಎನಿಸಿದ್ದೆ ಈ ಕಾರಣದಿಂದಾಗಿ. ನಿರ್ಮಾಣ, ನಿರ್ದೇಶನ , ಬರಹ ಎಲ್ಲವನ್ನೂ ಸಮಪ್ರಮಾಣದಲ್ಲಿ ಹಂಚಿಕೊಂಡು ಹೋದ ಚಿತ್ರಕರ್ಮಿ ವರ್ಮಾ. ಮಣಿರತ್ನಂ ರವರ ತಿರುಡಾ ತಿರುಡಾ ಚಿತ್ರಕ್ಕೆ ಚಿತ್ರಕಥೆ ಬರೆದದ್ದು ಇದೆ ರಾಮ್ ಗೋಪಾಲ್ ವರ್ಮ.
ರಾಮ್ ಗೋಪಾಲ್ ವರ್ಮ ಬರೆದಿರುವ “ನನ್ನಿಷ್ಟ” ಪುಸ್ತಕವು ನಾನು ಮೊನ್ನೆ ಓದಿದೆ. ಅದು ಅಗ್ನಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದಾಗ ಒಂದೆರೆಡು ಕಂತುಗಳನ್ನು  ಓದಿದ್ದೆನಾದರೂ ಪೂರ್ತಿ ಪುಸ್ತಕಕ್ಕಾಗಿ ಕಾದಿದ್ದೆ. ಮೊನ್ನೆ ಕೈಗೆ ಸಿಕ್ಕಾಗ ಸುಮಾರು ನೂರ ಅರವತ್ತೇಳು ಪುಟಗಳ ಪುಸ್ತಕವನ್ನು ಒಂದೆ ಗುಕ್ಕಿನಲ್ಲಿ ಓದಿ ಮುಗಿಸಿದೆ. ಪುಸ್ತಕ ಅದ್ಭುತವಲ್ಲದಿದ್ದರೂ, ಪೂರ್ತಿಯಾಗಿ ರಾಮ್ ಗೋಪಾಲ್ ವರ್ಮನನ್ನು ಹಿಡಿದಿಡದಿದ್ದರೂ ವರ್ಮಾರ ಯೋಚನಾಲಹರಿಯ ಒಂದು ಭಾಗವನ್ನಾದರೂ ನಮಗೆ/ಓದುಗರಿಗೆ ವಿಶದಪಡಿಸುತ್ತದೆ. ಇಲ್ಲಿ ನಿರ್ದೇಶಕ ವರ್ಮಾ ಇದ್ದಾರೆ ಹೊರತು ವೈಯಕ್ತಿಕ ವರ್ಮರ ಕಥೆಯಿಲ್ಲ. ಅವರು ಹುಟ್ಟು, ಓದು ಹೆಂಡತಿ ಮಕ್ಕಳು..ತಂದೆ ತಾಯಿ ..ಉಹೂ..ಯಾವುದೂ ಇಲ್ಲ. ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಪ್ರಸ್ತಾಪವಾಗುತ್ತದದಾದರೂ ಅದೂ ಸಿನಿಮಾದ ಒಂದು ಭಾಗಕ್ಕೆ ಸಹಾಯಮಾಡಲೆಂದೇ ಪ್ರಸ್ತಾಪವಾಗುತ್ತದೆ.
ವರ್ಮ ಭಾರತೀಯ ಚಿತ್ರರಂಗ ಕಂಡ ವಿಶಿಷ್ಟ ನಿರ್ದೇಶಕ. ಯಾವುದೇ ಇಮೇಜಿಗೆ ಗಂಟು ಬೀಳದ ತನ್ನಿಷ್ಟ ಬಂದಹಾಗೆ ಸಿನಿಮಾ ತೆಗೆಯುತ್ತಾ ಹೋದ ಚಿತ್ರಕರ್ಮಿ. ಅವರ ಸಿನಿಮಾಗಳಲ್ಲಿ ಭೂಗತ ಜಗತ್ತು ಕೊಲೆ ಸುಲಿಗೆ ಮುಂತಾದವುಗಳೇ ಮುಖ್ಯ ದ್ರವ್ಯ. ನವಿರುತನ, ತಿಳಿಹಾಸ್ಯದ ನಿರೂಪನೆಯಿರುವ ಚಿತ್ರಗಳು ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ನನಗೆ ಗೊತ್ತಿರುವ ಮಟ್ಟಿಗೆ ವಿಮರ್ಶಕರಿಂದ ಅತಿ ಹೆಚ್ಚು ಪ್ರಶಂಶೆಗೊಳಗಾದ ಹಾಗೆ ಕಟು ವಿಮರ್ಶೆಗೊಳಗಾದ ನಿರ್ದೇಶಕ ಎಂದರೆ ರಾಮ್ ಗೋಪಾಲ್ ವರ್ಮ ಎನ್ನಬಹುದು. ಆತನ ಚಿತ್ರಕ್ಕೆ ಅಗ್ಯಾತ್ ಗೆ ಬೆಂಗಳೂರ್ ಮಿರರ್ ಪತ್ರಿಕೆ ಸೊನ್ನೆ ಸ್ಟಾರ್ ನೀಡಿತ್ತು. ನಾನು ಇದುವರೆವಿಗೂ ಸೊನ್ನೆ ಸ್ಟಾರ್ ಪಡೆದ ಇನ್ನೊಂದು ಚಿತ್ರವನ್ನು ನೋಡಿಲ್ಲ. ಆದರೆ ಅವರ ಸರ್ಕಾರ್, ಸರ್ಕಾರ್ ರಾಜ್ , ಸತ್ಯ ಚಿತ್ರಗಳು ಅತ್ಯುತ್ತಮ ಚಿತ್ರ ಎಂದು ಪ್ರಶಂಶನೀಯ ವಿಮರ್ಶೆಗಳಿಸಿದ್ದವು.ತೆಲುಗಿನಲ್ಲಿ ಚಿತ್ರಯಾನ ಪ್ರಾರಂಭಿಸಿದ ವರ್ಮ ತಮಿಳು ಹಿಂದಿ ಚಿತ್ರರಂಗದಲ್ಲಿ ತಮ್ಮ ಛಾಪು ಒತ್ತಿದ್ದು ಅದೂ ಅತೀ ಕಡಿಮೆ ಸಮಯದಲ್ಲಿ ದೊಡ್ಡ ಸಾಧನೆಯಲ್ಲದೇ ಮತ್ತೇನು..?
ಪುಸ್ತಕದಲ್ಲಿ ಅವರ ಚಿತ್ರರಂಗ ಪ್ರವೇಶದಿಂದ ಹಿಡಿದು ಅವರ ಹಿನ್ನೆಲೆ, ಹುಚ್ಚು ಸಾಹಸಗಳ ವಿವರ ಇದೆ.
ಅವರ ಶ್ರೇಷ್ಠವೆನಿಸುವ ಚಿತ್ರಗಳ ಹಿಂದಿನ ಕಥೆಯಿದೆ. ಹಾಗೆ ಅವರ ಜೊತೆ ಬೆಳೆದ, ಅವರ ಸಿನಿಮಾಗಳಲ್ಲಿ ಕೆಲಸ ಮಾಡಿದ ಬರಹಗಾರ, ನಿರ್ದೇಶಕ ಬಗೆಗಿನ ಆರೋಗ್ಯಕರವಾದ ಪ್ರಸ್ತಾಪ ಇದೆ. ಹಾಗೆಯೇ ಬೇರೆಯ ನಿರ್ದೇಶಕರ ಬಗ್ಗೆ ಅವರಿಗಿರುವ ಅಭಿಪ್ರಾಯವಿದೆ. ಹಾಗೆ ನಮಗೆ/ನಿಮಗೆ ಗೊತ್ತಿಲ್ಲದ ವರ್ಮಾರ ಕಿರುಪರಿಚಯವಿದೆ.
ಒಮ್ಮೆ ಓದಿ.
ಕೆಲವು ಸಿನಿಮಾಗಳು ನೋಡುತ್ತಾ ನೋಡುತ್ತಾ ಇಷ್ಟು ಬೇಗ ಮುಗಿದುಹೊಯಿತಾ ಎನಿಸುತ್ತದೆ. ಹಾಗೆಯೇ ನಾನು ಯಂಡಮೂರಿಯವರ ಕಾದಂಬರಿಗಳನ್ನು ಓದುವಾಗ ದಿನಕ್ಕಿಷ್ಟೇ ಎಂಬಂತೆ ಓದುತಿದ್ದೆ. ಅದಕ್ಕೆ ಕಾರಣ ಒಂದೇ ದಿನಕ್ಕೆ ಓದಿ ಮುಗಿಸಿಬಿಟ್ಟರೆ ಮತ್ತೆ ಓದಲು ಮುಂದೇನು ಎಂಬ ಭಯವಿತ್ತು...ವರ್ಮಾರ ಪುಸ್ತಕವೂ ಅಷ್ಟೇ. ಇಷ್ಟೇನಾ .?ಎನಿಸುತ್ತದೆ. ಕಾರಣ ವರ್ಮಾ ಅವರ ಚಿತ್ರಗಳಿಂದಾಗಿ ನಮಗೆ ಹೆಚ್ಚು ಕುತೂಹಲಕಾರಿಯಾಗಿದ್ದಾರೆ. ಅವರ ಪುಸ್ತಕ, ಜೀವನಚರಿತ್ರೆ ಎಂದಾಗ ನಮಗೆ ಹೆಚ್ಚು ನಿರೀಕ್ಷೆ ಇದ್ದುಬಿಟ್ಟಿರುತ್ತದೆ. ಆದರೆ ಪುಸ್ತಕದಲ್ಲಿ ಅಷ್ಟು ವಿಷಯವಿಲ್ಲ. ಎಲ್ಲವೂ ಸರಳಾತಿಸರಳ  ಎನಿಸಿ, ವರ್ಮಾ ತೀರಾ ಅವರ ಒಳಗುದಿಯನ್ನು ಬಿಚ್ಚಿಟ್ಟಿಲ್ಲ , ಸುಮ್ಮನೆ ಕೆಲವು ವಿಷಯಗಳನ್ನು ತೇಲಿಸಿಬಿಟ್ಟಿದ್ದಾರೇನೋ ಎನಿಸುವುದರಿಂದ “ನನ್ನಿಷ್ಟ” ಪುಸ್ತಕ ಓದಿ ಮುಗಿಸಿದ ಮೇಲೂ ನಮ್ಮ ನಿರೀಕ್ಷೆ ತಣಿಯುವುದಿಲ್ಲ.
ಕೊಸರು:ಮೊನ್ನೆ ಕಡ್ಡಿಪುಡಿ ಚಿತ್ರ ನೋಡುತ್ತಿದ್ದಾಗ ನನಗನ್ನಿಸಿದ್ದು. ಚಿತ್ರದಲ್ಲಿ ಮೂರು ಜನ ಹಿಂಸಾವಿನೋದಿಗಳು ಕುಡಿದು ಸಿಗರೇಟು ಸೇದುತ್ತಾ ಹುಡುಗಿಯೊಬ್ಬಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡುವ ದೃಶ್ಯವೊಂದಿದೆ. ಆಗ ಆ ದೃಶ್ಯ ನಡೆಯುತ್ತಿರುವಾಗ ಕೆಳಗೆ ಧೂಮಪಾನ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶ ಬರುತ್ತಲೇ ಇರುತ್ತದೆ. ಅಲ್ಲಿ ಅವರು ಚಿತ್ರದಲ್ಲಿ ಕೊಲೆಯನ್ನೂ ಮಾಡುತ್ತಿರುತ್ತಾರೆ, ಅತ್ಯಾಚಾರ ಮಾಡುತ್ತಿರುತ್ತಾರೆ. ಅಂದರೆ ಅತ್ಯಾಚಾರ ಮಾಡಬಹುದು, ಕೊಲೆ ಮಾಡಬಹುದು...ಧೂಮಪಾನ ಮದ್ಯಪಾನ ಮಾಡಬಾರದು ಎಂದರ್ಥವೆ ಎನಿಸಿ ನಗುಬಂದಿತು.