Saturday, February 9, 2013

ಒಂದು ಸುಂದರ ಅನುಭೂತಿ...

ಸೂನ್ಗವಾ ಎನ್ನುವುದು ಒಂದು ನೇಪಾಲಿ ಭಾಷೆಯ ಚಿತ್ರದ ಹೆಸರು.ಇದು. ಸ್ತ್ರೀಸಲಿಂಗಿ ಸಂಬಂಧದ ಕಥೆಯನ್ನೂ ಹೊಂದಿರುವ ಚಿತ್ರ.  ಒಂದು ಸಿನೆಮವಾಗಿ ಅದರ ನಿರೂಪಣೆ, ಚಿತ್ರಕಥೆ ಮುಂತಾದವು ಹಿಡಿದುಕೂರಿಸುವಂತಹ ಚಿತ್ರ.ಸಲಿಂಗ ಪ್ರೇಮದ ಚಿತ್ರಗಳಾದ ಮಿಲ್ಕ್, ಬ್ರೋಕ್ ಬ್ಯಾಕ್ ಮೌಂಟನ್ . ಮುಂತಾದ ಚಿತ್ರಗಳನ್ನೂ ನಾವು ಈಗಾಗಲೇ ನೋಡಿದ್ದೇವೆ, ಮೆಚ್ಚಿದ್ದೇವೆ.ಹಾರ್ವೆ ಮಿಲ್ಕ್ ಜೀವನ ಚರಿತ್ರೆಯಾಧಾರಿತ ಚಿತ್ರ ಮಿಲ್ಕ್ ಎಲ್ಲಾ ವಿಭಾಗದಲ್ಲೂ ಉತ್ಕೃಷ್ಟ ವೆನಿಸಿದ್ದರೂ ವಾಸ್ತವದ ಅಂಶ ಹೆಚ್ಚಾದ್ದರಿಂದ ಅಷ್ಟೇನೂ ಆಪ್ತ ಎನಿಸಿರಲಿಲ್ಲ. ಆದರೆ ಸೂನ್ಗವ ಚಿತ್ರಕ್ಕೆ ನಾನು ನಿಜಕ್ಕೂ ಮರುಳಾಗಿ ಬಿಟ್ಟೆ. ಮೊನ್ನೆ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ನೋಡಿದ ಚಿತ್ರ ಇದು. ಸ್ವಲ್ಪ ಇರುಸುಮುರುಸಿನಿಂದಲೇ ಒಳಹೋದ ನನಗೆ ಒಂದು ಅಪ್ಯಾಯಮಾನವಾದ ಅನುಭವವಾದ್ದದಂತೂ ಸತ್ಯ.
ಚಿತ್ರವನ್ನ ಇಷ್ಟೊಂದು ಪ್ರಶಂಸೆ ಮಾಡಲಿಕ್ಕೆ ಪ್ರಮುಖವಾಗಿ ಮೂರು ಕಾರಣಗಳಿವೆ. ಅವುಗಳೆಂದರೆ : ಸುಂದರವಾದ ನಟಿಯರು ಮತ್ತು ಅವರ ಅದ್ಭುತ ಅಭಿನಯ, ಸರಳವಾದ ಚಿತ್ರಕಥೆ ಮತ್ತು  ಪೂರ್ವಗ್ರಹ ಪೀಡಿತವಲ್ಲದ ಪ್ರೌಢತೆ ಮೆರೆದಿರುವ  ನಿರ್ದೇಶನ. ಪ್ಯಾರಿಸ್  ಮೂಲದ ಸುವರ್ಣ ಥಾಪರವರ ಚೊಚ್ಚಲ  ನಿರ್ದೇಶನದ ಈ ಚಿತ್ರ ನೇಪಾಳಿ ಭಾಷೆಯ ಮೊಟ್ಟ  ಮೊದಲ  ಸಲಿಂಗ   ಪ್ರೇಮ ಕಥೆಯಾಧರಿಸಿದ ಚಿತ್ರ. ಮೊನ್ನೆ ಅಂದರೆ ಜನವರಿ ನಾಲಕ್ಕನೇ ತಾರೀಖಿನಂದು ಬಿಡುಗಡೆಯಾದ  ಈ ಚಿತ್ರ ಈಗಾಗಲೇ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ  ಗಳಿಸಿ ಜನರ ಪ್ರತಿಕ್ರಿಯೆಗೆ ಕಾಯುತ್ತಿದೆ.
ಚಿತ್ರದ ಪ್ರಮುಖ ಪಾತ್ರಧಾರಿಗಳಾದ ದೀಯ ಮಸ್ಕೆ, ನಿಶಾ ಅಧಿಕಾರರವರ ಅಭಿನಯ ಮತ್ತು ಸೌಂದರ್ಯ ನಮ್ಮ ಕಣ್ಣುಗಳನ್ನು ಪರದೆಗೆ ಅಂಟಿಸಿ ಬಿಡುತ್ತದೆ.
ಚಿತ್ರದ ಕಥೆ ಇಂತಿದೆ. ದಿಯಾ ಮತ್ತು ಕಿರಣ್ ಜೀವದ ಗೆಳತಿಯರು.ಆದರೆ ದಿನ ಕಳೆದಂತೆ ಅವರ ಗೆಳೆತನ ಗೆಳೆತನದ ಎಲ್ಲೇ ಮೀರಿ ಇನ್ನೂ ಮುಂದುವರೆಯುತ್ತದೆ. ಅದರಲ್ಲೂ ಕಿರಣ್ ಳಿಗೆ ಗೆಳತಿ ದೀಯಾಳ ಬಗ್ಗೆ ಹುಚ್ಚು ಪ್ರೀತಿ. ಆಕೆ ಬೇರೆಯವರ ಜೊತೆ ಮಾತಾಡಿದರೆ ನೊಂದುಕೊಳ್ಳುವ ಕೋಪ ಮಾಡಿಕೊಳ್ಳುವ ಮಟ್ಟಕ್ಕೆ ಅವರ ಸಂಬಂಧ ಬೆಳೆದುನಿಲ್ಲುತ್ತದೆ. ದೀಯಳಿಗೆ ಅವರಿಬ್ಬರ ಸಂಬಂಧದ ಬಗ್ಗೆ ಇನ್ನೂ ಗೊಂದಲವಿರುತ್ತದೆ. ಮುಂದೆ ಇದಾವುದರ ಅರಿವಿಲ್ಲದ ದೀಯಾಳ ಮನೆಯವರು ದೀಯಾಳಿಗೆ ಮದುವೆ ನಿಶ್ಚಯ ಮಾಡುತ್ತಾರೆ. ವರ ಕೂಡ ದೀಯಾಳನ್ನು ಒಪ್ಪಿಕೊಳ್ಳುತ್ತಾನೆ. ಇಲ್ಯಾರೂ ದೀಯಾಳ ಅಭಿಪ್ರಾಯವನ್ನೂ ಕೇಳದೆ ನಿಶ್ಚಿತಾರ್ಥ ಮಾಡಿಬಿಡುತ್ತಾರೆ. ಇದನ್ನು ತಡೆಯಲಾಗದ ದೀಯ ವಿಷಯವನ್ನೂ ಕಿರಣ್ ಳಿಂದ ಮುಚ್ಚಿಡುತ್ತಾಳೆ. ಮುಂದೆ ವಿಷಯ ಗೊತ್ತಾದಾಗ ಇಬ್ಬರಿಗೂ ಮಾತಿನ ಸಂಘರ್ಷ ನಡೆದು ತಮ್ಮ ಸಂಬಂಧವನ್ನೂ ಗಟ್ಟಿ ಮಾಡಿಕೊಳ್ಳುವ  ಸಮಾಜವನ್ನು ಎದುರಿಸುವ ನಿರ್ಧಾರಕ್ಕೆ ಬಂದುಬಿಡುತ್ತಾರೆ. ವಿಷಯ ತಿಳಿದ ಸಂಪ್ರದಾಯಸ್ಥ ಮನೆಯವರು ಗೋಳಾಡುತ್ತಾರೆ. ಎರಡೂ ಮನೆಗಳಲ್ಲಿ ಪ್ರತಿರೋಧ ಏರ್ಪಡುತ್ತದೆ.ಮದುವೆಯಾಗ ಬೇಕಾದ ವರ ವಿಷ್ಯ ತಿಳಿದು ದೀಯಾಳ ಬಗ್ಗೆ ಅಸಹ್ಯ ವ್ಯಕ್ತಪಡಿಸಿ ದೂರಾಗುತ್ತಾನಾದರೂ ಅದೊಂದು ದಿನ ಮೊದಲೇ ಸೇರಿದ್ದರಿಂದ ದೀಯಾ, ಅವನ ಮಗುವಿಗೆ ತಾಯಿಯಾಗುವ ಸನ್ನಿವೇಶ ಬಂದುಬಿಟ್ಟಿರುತ್ತದೆ. 
ಇಬ್ಬರೂ ತಮ್ಮ ತಮ್ಮ ಮನೆ ತೊರೆದು ಬೇರೊಂದು ಮನೆ ಮಾಡಿಕೊಂಡು ಜೀವಿಸಲು ಪ್ರಾರಂಭಿಸುತ್ತಾರಲ್ಲದೆ ದೀಯಾಳ ಮಗುವನ್ನೂ ಸಾಕುವ ನಿರ್ಧಾರ ಕೈಗೊಳ್ಳುತ್ತಾರೆ.
ಆದರೆ ಸಮಾಜ ಅವರನ್ನು ತಮ್ಮಷ್ಟಕ್ಕೆ ತಾವೇ ಇರಲು ಬಿಡುವುದೇ..? ಸಂಪ್ರದಾಯ, ಜಾತಿಗಳಿಗೆ ಬೆಲೆ ಕೊಡುವ ಹಿರಿಯರು ಈ ನಿಷಿದ್ಧ ಪ್ರೀತಿಯನ್ನು ಹೇಗೆ ತೆಗೆದುಕೊಳ್ಳುತ್ತಾರೆ...
ಚಿತ್ರದಲ್ಲಿ ನಿರ್ದೇಶಕರ ಕೌಶಲ ಎದ್ದುಕಾಣುತ್ತದೆ. ಶೃಂಗಾರಮಯ ಸನ್ನಿವೇಶಗಳು, ಅಣ್ಣ-ತಂಗಿಯ ಭಾವನಾತ್ಮಕ ದೃಶ್ಯಗಳನ್ನು ಚಿತ್ರೀಕರಿಸಿರುವ ಪರಿ ನಿಜಕ್ಕೂ ಖುಷಿಕೊಡುತ್ತದೆ. ಇಡೀ ಚಿತ್ರದಲ್ಲಿ ದೀಯಾಳನ್ನು ಮದುವೆಯಾಗಲು ಬರುವ ವರ ಸುಮಾರು ದೃಶ್ಯಗಳಲ್ಲಿದ್ದರೂ ಆತನ ಮುಖವನ್ನೇ ತೋರಿಸದಿರುವುದು ನಿರ್ದೇಶಕರ ಜಾಣ್ಮೆಗೆ ಹಿಡಿದ ಕೈಗನ್ನಡಿ. ಒಟ್ಟಾರೆಯಾಗಿ ಹೇಳಬೇಕೆಂದರೆ ಅವಶ್ಯವಾಗಿ ನೋಡಲೇ ಬೇಕಾದ ಚಿತ್ರ ಸೂನ್ಗವಾ.

Thursday, February 7, 2013

ಹಣೆಬರಹ ತಿದ್ದಿದ ದೇವರನ್ನು ಸ್ಮರಿಸುತ್ತಾ...

ನನಗೆ ಕೊಟ್ಟಿದ್ದ ಜಾಗ ಮುಖ್ಯಮಂತ್ರಿ ಜಗಧೀಶ್ ಶೆಟ್ಟರ್ ರವರ ವಾಸಸ್ಥಾನವಾದ 'ಕೃಷ್ಣಾ' ದ ಮುಂದೆ. ಅಶೋಕ ಹೋಟೆಲ್ಲಿನ ಮುಂದಕ್ಕೆ ಹಾಸು ಹೊಕ್ಕಾಗಿರುವ ರಸ್ತೆಯಲ್ಲಿ ಜಾಗ ಸಿಕ್ಕಿದ್ದು ನಿಜಕ್ಕೂ ನನ್ನ ಅದೃಷ್ಟ ಎಂದೆನಿಸಿತ್ತು.ಬೆಳಿಗ್ಗೆ ಆರೂವರೆಗೆ ಅಲ್ಲಿ ಹಾಜರಾಗಿ ನನ್ನ ಪೇಂಟಿಂಗ್ ಗಳನ್ನ ಜೋಡಿಸಿದೆವು. ನಾನು ಸುಮ್ಮನೆ ಚಿತ್ರಗಳನ್ನೂ ಚಿತ್ರಿಸಿರಲಿಲ್ಲ. ಅದರಲ್ಲಿ ಮೂರ್ನಾಲ್ಕು ಸರಣಿಗಳನ್ನು ಮಾಡಿಕೊಂಡಿದ್ದೆ. 'ಛಾಯಾ' ಎನ್ನುವ ಸರಣಿಯಲ್ಲಿ ಬರೆ ನೆರಳಿನದ್ದೆ ಆಟ.ಏನೇ ಬಣ್ಣಗಳಿದ್ದರೂ ನೆರಳಿನ ಬಣ್ಣ ಮಾತ್ರ ಕಪ್ಪು ಬಿಳುಪೆ. ಆ ಒಂದು ಪರಿಕಲ್ಪನೆಯ ಮೇಲೆ ಒಂದಷ್ಟು ಪೇಂಟಿಂಗ್ ಮಾಡಿದ್ದೆ. ಹಾಗಾಗಿ ಜೋಡಿಸಿಡುವಾಗ ಆ ಪರಿಕಲ್ಪನೆಯ ಮೇಲೆಯೇ ಜೋಡಿಸಿದರೆ ಚೆನ್ನಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿತ್ತು. ನಾವು ಎಲ್ಲವನ್ನೂ ಜೋಡಿಸಿಡುವಷ್ಟರಲ್ಲಿ ಒಂಭತ್ತು ಘಂಟೆ. ಆದರೆ ಜೋಡಿಸಿಟ್ಟ ಮೇಲೆ ಅಲ್ಲಿಗೆ ಬಂದ ಪೋಲಿಸ್ 'ಇದು ಮುಖ್ಯ ಮಂತ್ರಿಗಳ ಮನೆಯ ಕ೦ಪೌಂಡ್..ಹಾಗಾಗಿ ನೀವು ಇಲ್ಲಿನ ಫುಟ್ ಪಾತ ಮೇಲೆ ಇಡುವ ಹಾಗಿಲ್ಲ .' ಎಂದರು. 'ಎಲ್ಲವನ್ನೂ ತೆಗೆದು ರಸ್ತೆಗೆ ಜೋಡಿಸಿಬಿಡಿ..' ಎಂದು ಬಿಟ್ಟರು.ಸರಿ ಎಂದುಕೊಂಡ ನಾವು ರಸ್ತೆಗೆ ಬಿದ್ದೆವು. ಮತ್ತೆ ತೆಗೆದು ಜೋಡಿಸಿಡುವ ಕೆಲಸ ಪ್ರಾರಂಭವಾಯಿತು. ಹತ್ತು ಘಂಟೆಯ ಹೊತ್ತಿಗೆ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಬಂದ ಪೋಲಿಸ್ 'ಇಲ್ಲಿ ಇಡುವ        ಹಾಗೆ ಇಲ್ಲ...ಚಿತ್ರಕಲಾ ಪರಿಷತ್ ನವರು ಅನುಮತಿ ತೆಗೆದುಕೊಂಡಿಲ್ಲ.ಹಾಗಾಗಿ ನೀವು ಇಲ್ಲಿಂದ ತೆಗೆದುಬಿಡಿ ಎಂದುಬಿಟ್ಟರು. .' ನಾವು ಸ್ವಲ್ಪ ಕೊಸರಾಡಿದ್ದಕ್ಕೆ 'ನೀವೇ ತೆಗೆದಿಡಿ..ಇಲ್ಲಾಂದ್ರೆ ನಮ್ಮವರು ಬಂದು ತೆಗೆದಿಡಬೇಕಾಗುತ್ತದೆ..' ಎಂದು ಸ್ವಲ್ಪ ಒರಟಾಗಿಯೇ ಹೇಳಿದರು. ಚಿತ್ರಕಲಾ ಪರಿಷತ್ ನವರೂ ಕೂಡ 'ಕಳೆದ ಬಾರಿ ಹೀಗಾಗಿರಲಿಲ್ಲ...ಏನೋ ಈ ಸಾರಿ ಅನುಮತಿ ಕೊಡುತ್ತಿಲ್ಲ..ಸಾರಿ..ನೀವು ಎಲ್ಲವನ್ನೂ ಕಟ್ಟಿಡಿ..ನಮ್ಮ ಸ್ವಯಂ ಸೇವಕರು ಬಂದು ಎಲ್ಲವನ್ನೂ ಜೋಡಿಸಿಡುತ್ತಾರೆ...ನಿಮಗೆ ಹೊಸ ಜಾಗ ಕೊಡುತ್ತೇವೆ...' ಎಂದು ಹೋಗಿಬಿಟ್ಟರು. ನಾವು ಎಲ್ಲವನ್ನೂ ಕಟ್ಟಿಕೊಂಡು ಸ್ವಯಂ ಸೇವಕರಿಗೆ ಕಾಯ್ದುಕುಳಿತೆವು. . ಹನ್ನೊಂದಾದರೂ ಯಾರೂ ಬರಲೇ ಇಲ್ಲ. ಹನ್ನೆರಡರ ಹೊತ್ತಿಗೆ ನಮಗೆ ಒಂತರಾ ಆಗಿಹೋಗಿತ್ತು. ನಾನು ಚಿತ್ರಪ್ರದರ್ಶನಕ್ಕೆ ಬಂದವನು ನನ್ನ ಚಿತ್ರವನ್ನೆಲ್ಲಾ ಕಟ್ಟಿಟ್ಟು ಅಲ್ಲಿನ ಚಿತ್ರಗಳನ್ನೂ ನೋಡತೊಡಗಿದೆ. ಗೆಳೆಯ ಪಿಲಿಪ್ ಜೊತೆಗಿದ್ದರಿಂದ ಅವರ ಜೊತೆ ಚಿತ್ರಗಳ ಬಗ್ಗೆ ಮಾತಾಡುತ್ತಿದ್ದೆವು. ಯಾಕೋ ಚಿತ್ರಕಲಾ ಪರಿಷತ್ ನವರು ನಮಗೆ ಹೊಸಜಾಗ ಮಾಡಿಕೊಡುವ ಯಾವ ಆಸಕ್ತಿಯನ್ನು ತೋರಿಸದೆ ತಮ್ಮ ತಮ್ಮ ಸಂಭ್ರಮದಲ್ಲಿ ಮುಳುಗಿಹೋಗಿದ್ದರು. ಯಾರನ್ನೂ ಕೇಳಿದರೂ ಇನ್ನೊಬ್ಬರೆಡೆಗೆ ಕೈತೊರಿಸುತ್ತಿದ್ದರು. ನಾನು ಮೂರ್ನಾಲ್ಕು ಸರಿ ಅಲ್ಲಲ್ಲಿ ಎಡಿತಾಕಿದೆ ..ಸಾರ್ ಅವರನ್ನು ಕೇಳಿ..ಇರಿ ವೈಟ್ ಮಾಡಿ...ಎಂದೆ ಹೇಳುತ್ತಿದ್ದರು.ಅಂತೂ ಇಂತೂ ಕ್ರೆಸೆಂಟ್ ರಸ್ತೆಯ ಕಾರು ಪಾರ್ಜಿಂಗ್ ಜಾಗದಲ್ಲಿ ಮೂಲೆಯಲ್ಲಿ ಒಂದು ಜಾಗ ನಮಗೆ ಸಿಕ್ಕಾಗ ಹೆಚ್ಚು ಕಡಿಮೆ ಅರ್ಧ ದಿವಸ ಕಳೆದುಹೋಗಿತ್ತು. ಅಷ್ಟರಲ್ಲಾಗಲೇ ನಮಗೆ ಮತ್ತೆ ಜೋಡಿಸಿಡುವ, ಪ್ರದರ್ಶಿಸುವ ಆಸಕ್ತಿ ಕಳೆದುಹೋಗಿತ್ತು. ಕೊಟ್ಟಿದ್ದ ಜಾಗವೂ ಹಾಗೆಯೇ ಇತ್ತು. ಅಲ್ಲಿ ಯಾರೂ ಬರಲು ಸಾಧ್ಯವೇ ಇರಲಿಲ್ಲ. ಸುಮ್ಮನೆ ಎಲ್ಲವನ್ನೂ ಕಟ್ಟಿ ಒಂದೆಡೆ ಇಟ್ಟು ಅಲ್ಲಿರುವ ಅದ್ಭುತ ಚಿತ್ರಗಳನ್ನೂ ಕಣ್ತುಂಬಿಕೊಳ್ಳೋಣ ಎನಿಸಿತು. ಆದರೆ ಇರಲಿ ಎಂದು ಜೋಡಿಸಿಟ್ಟೆದ್ದಾಯಿತು.
ನಾನು ಬೆಂಗಳೂರಿಗೆ ಬಂದಾಗಿನಿಂದ ಪ್ರತಿವರ್ಷ ಚಿತ್ರಸಂತೆಗೆ ಹಾಜರಾಗುತ್ತಿದ್ದರೂ ನಾನು ಚಿತ್ರಗಳನ್ನಿಟ್ಟಿದ್ದ ಈ ಜಾಗಕ್ಕೆ ಒಮ್ಮೆಯೂ ಇಣುಕಿರಲಿಲ್ಲ. ಆಮೇಲಿನದು ಎಲ್ಲವೂ ನೀರಸ. ನೋಡಲಿಕ್ಕೂ ಜನಬರದ ಜಾಗವಾಗಿತ್ತದು.
ಇದೆಲ್ಲದರ ನಡುವೆಯೂ ಚಿತ್ರಸಂತೆ ಕಣ್ಣಿಗೆ ಒಂದು ಹಬ್ಬ ಎನ್ನಬಹುದು.ಸಾವಿರಕ್ಕೂ ಹೆಚ್ಚು ಕಲಾವಿದರ ಅಸಂಖ್ಯ ಚಿತ್ರಗಳು ಒಂದೇ ಜಾಗದಲ್ಲಿ ನೋಡಲು ಸಿಗುವುದು ಕಷ್ಟ. ಚಿತ್ರಸಂತೆಯಿಂದ ಅದು ವರ್ಷ ವರ್ಷ ಸಾಧ್ಯವಾಗುತ್ತದೆ. ಅದರಲ್ಲೂ ಕೆಲವರ ವರ್ಣ ವಿನ್ಯಾಸ, ಶೈಲಿ ಹೊಸತನ ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋದದ್ದಂತೂ ಸತ್ಯ.
ಮುಂದಿನ ಚಿತ್ರಸಂತೆಗೆ ಭಾಗವಹಿಸಲು ಇನ್ನಷ್ಟು ಹುರುಪು ಬಂದಿದೆ. ಆದರೆ ಈ ಸಾರಿಯಂತೆ ಮುಂದಿನ ಸಾರಿ ದೇವರು ಹಣೆಬರಹ ತಿದ್ದದಿದರೆ ಸಾಕು..

Saturday, February 2, 2013

ಮುತ್ತಾಗದ ಮಣಿ, ಮೊರೆಯದ ಕಡಲು.

ಚಿತ್ರ ಬಿಡುಗಡೆಯಾಗಿದೆ. ಮೊದಲ ಆಟದ ಸಮಯ. ಜನರಿಲ್ಲ. ಟಿಕೆಟ್ ಗಳಿಗೆ ಸಂಖ್ಯೆಯ ಹಂಗಿಲ್ಲ. ಸರತಿಯ ಸಾಲಿಲ್ಲ. ಟಿಕೇಟು ಕೊಂಡುಕೊಂಡು ಒಳಬಂದಾಯ್ತು. ಸಿನಿಮಾವೂ ಶುರುವಾಯಿತು. ಜನರಲ್ಲಿ ಅಸಹನೆ. ಆವಾಗಾವಾಗ ಎದ್ದು ಹೊರಗಡೆ ಹೋಗುತ್ತಾರೆ. ಸಿಗರೇಟು ಸೇದುತ್ತಾರೆ. ಮೊಬೈಲ್ ಹಿಡಿದುಕೊಂಡು ಒಂದಷ್ಟು ಜನ ಹೊರಗೆ ಹೋಗಿ ಮಾತಾಡಿಕೊಂಡು ಬರುತ್ತಾರೆ. ಆದರೆ ಕೆಲವೊಬ್ಬರು ಅಲ್ಲೇ ಸೀಟಿಗೆ ಒರಗಿ ಮೊಬೈಲಿನಲ್ಲಿ ಮಾತಾಡಲು ಪ್ರಯತ್ನಿಸುತ್ತಾರೆ. ಸಿನಿಮಾದ ದೃಶ್ಯದಲ್ಲಿ ಶಬ್ದ ಜೋರಾದದ್ದಕ್ಕೆ ಶಪಿಸುತ್ತಾರೆ. ಮಧ್ಯಂತರ ಬರುತ್ತದೆ. ಅದಾದ ನಂತರ ಎಷ್ಟೋ ಜನ ಮತ್ತೆ ಒಳಬರುವುದೋ ಏನೋ  ಎಂಬ ಚಿಂತೆಗೆ ಬೀಳುತ್ತಾರೆ. ಶುರುವಾಗಿ ಸ್ವಲ್ಪ ಹೊತ್ತಾದ ಮೇಲೆ ಬೇಕೋ ಬೇಡವೋ ಎಂಬಂತೆ ಒಳಬರುತ್ತಾರೆ. ಆನಂತರ ಮುಗಿಯಲು ಇನ್ನೂ ಸಮಯವಿರುವಾಗಲೇ  ಎದ್ದು ಹೊರಬರುತ್ತಾರೆ.
ಇದು ಈವತ್ತು ಕಡಲ ಚಿತ್ರ ಪ್ರದರ್ಶನವಿದ್ದ ಚಿತ್ರಮಂದಿರದಲ್ಲಿ ಕಂಡುಬಂದಂತಹ ದೃಶ್ಯ. ಹಾಗಂತ ಚಿತ್ರ ಅಷ್ಟು ಕೆಟ್ಟದಾಗಿದೆಯಾ..?
ಚಿತ್ರದ  ನಾಯಕ ಅನಾಥ. ನಾಯಕಿ ವಿಲನ್ ಮಗಳು. ಇವರಿಬ್ಬರ ಪ್ರೀತಿ.ಅನಾಥನಿಗೆ ಆಸರೆಯಾಗುವವನು ಅಲ್ಲಿನ ಚರ್ಚಿನ ಪಾದ್ರಿ. ಇವರಿಗೆ ಎದುರಾಗಿ ನಿಲ್ಲುವವನು ವಿಲನ್. ಮೊದಲು ವಿಲನ್ ಮತ್ತು ಪಾದ್ರಿಗೂ ಪರಿಚಯ ಮತ್ತು ಸಂಘರ್ಷವಿರುತ್ತದೆ. ಪಾದ್ರಿಯ ತತ್ವ ಯಾವತ್ತಿಗೂ ಒಳ್ಳೆತನಕ್ಕೆ ಬೆಲೆಯಿದೇ ಮತ್ತು ಅದೇ ಗೆಲ್ಲುತದೆ ಎಂಬುದು.ಇಷ್ಟು ಹೇಳಿದ ಮೇಲೆ ಮುಂದೇನಾಗುತ್ತದೆ ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಆದರೆ ಚಿತ್ರ ನಮ್ಮನ್ನು ಕಾಡುವುದು, ಕಾಡಿ ಕಾಡಿ ಕಂಗೆಡಿಸುವುದು, ಸುಸ್ತು ಮಾಡುವುದು, ಅದರ ಏಕತಾನತೆಯಿಂದ. ಇಡೀ ಚಿತ್ರದಲ್ಲಿ ಎಲ್ಲೂ ನಗುವಿಲ್ಲ. ಒಂದಷ್ಟು ರೋಮಾನ್ಸ್ ಬಿಟ್ಟರೆ ಬೇರೆಲ್ಲಾ ಬರೀ ಮಾತುಕತೆಯೇ.ನಿಧಾನಕ್ಕೆ ನಡೆಯುವ ಅನಪೇಕ್ಷಿತ ದೃಶ್ಯಾವಳಿಗಳೇ.
ಮಣಿರತ್ನಂ ಚಿತ್ರಗಳೆಂದರೆ ತಂತ್ರಜ್ಞಾನದ ಬಗ್ಗೆ ಮಾತನಾಡುವ ಹಾಗಿಲ್ಲ. ಅದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಛಾಯಾಗ್ರಹಣ, ಸಂಗೀತ ಮುಂತಾದವುಗಳನ್ನೆಲ್ಲಾ ದಿಗ್ಗಜರೆ ಮಾಡಿರುವುದರಿಂದ ಅವೆಲ್ಲಾ ಪರಿಣಾಮಕಾರಿಯಾಗಿಯೇ ಇವೆ. ಆದರೆ ಚಿತ್ರದ ಕಥೆ ನಿರೂಪಣೆ ಮಾತ್ರ ನಿಂತ ನೀರು.ವಿಲನ್ ಆಗಿ ಅರ್ಜುನ ಸರ್ಜಾ ಪಾದ್ರಿಯಾಗಿ ಅರವಿಂದ್ ಸ್ವಾಮೀ ಉತ್ತಮ ಅಭಿನಯ ನೀಡಿದ್ದಾರೆ. ಆದರೆ ನಾಯಕ ಗೌತಂ ಕಾರ್ತಿಕ್ ಅಭಿನಯ ಸಾದಾರಣ.
ಚಿತ್ರದ  ಉದ್ದೇಶ ಮನರಂಜನೆಯೇ ಆಗಿರಬೇಕು ಎಂಬುದೆನಿಲ್ಲ. ಒಂದು ಗಂಭೀರವಾದ ವಿಚಾರವನ್ನೂ ಪ್ರೇಕ್ಷಕರ ಮುಂದಿಡುವುದೂ ಆಗಿರಬಹುದು. ಅಥವಾ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ, ಒಂದು ಘಟನೆಯ ವರದಿಯೂ ಆಗಿರಬಹುದು. ಅಥವಾ ಒಂದು ಕಾಲ್ಪನಿಕ ವಿಷಯದ ವಿವರಣೆಯೂ ಇರಬಹುದು. ಆದರೆ ಮಣಿರತ್ನಂ ಅದ್ಯಾವುದೂ ಅಲ್ಲದ  ಸರ್ವೆ ಸಾದಾರಣವಾದ   ಚಿತ್ರವೊಂದನ್ನು ಬಹಳಷ್ಟು ವೆಚ್ಚಮಾಡಿ ಅತ್ಯುತಮ ತಂತ್ರಜ್ಞರನ್ನು ಕಲೆಹಾಕಿ  ಹೊರತಂದಿದ್ದಾರೆ. ಕಡಲ ಅಲೆ, ಮೊರೆತ, ಸುತ್ತ ಮುತ್ತಲ ಕಣ್ತಣಿಸುವ ಪ್ರದೇಶಗಳು ಮುಂತಾದವುಗಳು ಚೆಂದಕ್ಕೆ ಕಾಣಿಸಿದರೂ ಸಿನಿಮಾಕ್ಕೆ ಕಥೆಗೆ ಏನೂ ಸಹಾಯ ಮಾಡಿಲ್ಲ.
ಚಿತ್ರ ನೋಡಿ ಹೊರಬಂದ ಮೇಲೆ ನಮಗೆ ಉಳಿಯುವುದು ಕಡಲಿನ ಮೊರೆತದ ಸದ್ದು , ಬೇಸರ ಮತ್ತು ಅರ್ಧ ಟಿಕೇಟಿನ ತುಂಡು ಮಾತ್ರ.

Friday, February 1, 2013

ಲಿಂಕನ್:ಆಸ್ಕರ ಕಣದ ಚಿತ್ರಗಳು

ಸ್ಟೀವನ್ ಸ್ಪೀಲ್ ಬರ್ಗ್ ಎಂದರೆ ನಮ್ಮಂಥ ಚಿತ್ರರಸಿಕರಲ್ಲಿ ಒಂದು ಮಿಂಚಿನ ಸಂಚಲನವಾಗುವುದು ಸತ್ಯದ ಸಂಗತಿ. ಅದ್ದೂರಿತನ ಮತ್ತು ವಸ್ತು ವಿಷಯದಲ್ಲಿ ಸ್ಪೀಲ್ ಬರ್ಗ್ ಚಿತ್ರಗಳು ಎಂದಿಗೂ ಮುಂಚೂಣಿಯಲ್ಲೇ ಇರುತ್ತವೆ. ಅವರ ಕಡಿಮೆ ವೆಚ್ಚದ ಡುಯೇಲ್ ನಿಂದ ಹಿಡಿದು ಜುರಾಸ್ಸಿಕ್ ಪಾರ್ಕ, ಶಿಂಡ್ಲರ್ಸ್ ಲಿಸ್ಟ್, ಎ,ಐ. ಮುಂತಾದ ಚಿತ್ರಗಳನ್ನು ಮರೆಯಲು ಹೇಗೆ ಸಾಧ್ಯ.ಇಲ್ಲಿಯವರೆಗೆ ನಿರ್ದೇಶನದಲ್ಲಿ ಅರ್ಧ ಶತಕ ಭಾರಿಸಿರುವ ಸ್ಪೀಲ್ ಬರ್ಗ್ ಮೂರು ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಅಪರೂಪದ ನಿರ್ದೇಶಕ.
 ಈ ವರ್ಷದ ಆಸ್ಕರ್ ಪಟ್ಟಿಯಲ್ಲಿ ಅತಿ ಹೆಚ್ಚು ವಿಭಾಗಕ್ಕೆ ಅಂದರೆ 12 ವಿಭಾಗಗಳಿಗೆ ನಾಮಾಂಕಿತಗೊಂಡಿರುವ ಚಿತ್ರ ಇದೆ ಸ್ಪೀಲ್ ಬರ್ಗ್ ನಿರ್ದೇಶನದ ಲಿಂಕನ್. ಭಾರತೀಯ ಸಂಸ್ಥೆ ರಿಲಾಯನ್ಸ್ ನ ಸಹ ನಿರ್ಮಾಣದೊಂದಿಗೆ ತಯಾರಾಗಿರುವ ಚಿತ್ರ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ವಿಜೇತೆ  ಡೋರಿಸ್ ಕೆಅರ್ನ್ಸ್ ಗುಡ್ ವಿನ್ ಳ ಕಾದಂಬರಿ ಆಧರಿಸಿದೆ.
ಚಿತ್ರದ ಕಥೆ ಅಬ್ರಾಹಾಂ ಲಿಂಕನ್ ರ ರಾಜಕೀಯ ಜೀವನ ಮತ್ತು ಗುಲಾಮಗಿರಿ ವಿರುದ್ಧದ 13 ನೆಯ ತಿದ್ದುಪಡಿಯನ್ನು ಅನುಷ್ಠಾನಕ್ಕೆ ತರುವುದರ ಕುರಿತದ್ದಾಗಿದೆ. ವರ್ಣಬೇಧ ನೀತಿಯಿಂದಾಗಿ ದೇಶದಲ್ಲಿ ಕರಿಯರ ಮೇಲಿನ ದೌರ್ಜನ್ಯ ಅತಿಯಾದ ಸಂದರ್ಭದಲ್ಲಿ ಲಿಂಕನ್ ಅದರ ವಿರುದ್ಧ ಹೋರಾಡುವ ಕಥೆ ಚಿತ್ರದ್ದು.
ಚಿತ್ರದ ಪ್ರಾರಂಭದಲ್ಲೇ ಸ್ಪೀಲ್ ಬರ್ಗ್ ಹಿಡಿದು ಕೂರಿಸಿಬಿಡುತ್ತಾರೆ ಕರಿಯರನ್ನು ಬಿಳಿಯ ಸೈನಿಕರು ತುಳಿದು ಸಾಯಿಸುವ ದೃಶ್ಯ ಮನಕಲಕುತ್ತದೆ . ಸಂವಿಧಾನದ 13 ನೆಯ ತಿದ್ದುಪಡಿಯನ್ನೂ ಜಾರಿಗೆ ತರಲೆಬೇಕೆಂಬುದು ಲಿಂಕನ್ ಧೇಯೋದ್ದೇಶ. ಆದರೆ ಇನ್ನು ಸಿವಿಲ್ ವಾರ್ ಮುಗಿದಿಲ್ಲದ ಕಾರಣ ಅದರ ಜಾರಿಗೆ ನಿಲ್ಲುವುದು ರಾಜಕೀಯ ಸ್ಥಿತಿಗತಿಯಲ್ಲಿ ಏರುಪೇರು ತರುವುದು ಲಿಂಕನ್ನರಿಗೂ ಗೊತ್ತಿದ್ದ ಸಂಗತಿ. ಅದೂ ಅಲ್ಲದೆ ಆ ಒಂದು ತಿದ್ದುಪಡಿಯ ಪರವಾಗಿ ನಿಂತರೆ ತುಂಬಾ ಜನ ರಾಜಕೀಯ ಹಿತೈಶಿಗಳನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆನ್ನುವುದು ಸತ್ಯ. ಹಾಗಾಗಿಯೇ ಲಿಂಕನ್ ರಿಪಬ್ಲಿಕನ್ ಪಕ್ಷದ ಸ್ಥಾಪಕ ಫ್ರಾನ್ಸಿಸ್ ಮೇಲೆ ನಂಬಿಕೆಯಿರಿಸುತ್ತಾರೆ. ಪ್ರಾನ್ಸಿಸ್ ಇದಕ್ಕೆ ಒಪ್ಪಿದರೂ ತನ್ನದೇ ಆದ ಶರತ್ತನ್ನು ಒಡ್ಡುತ್ತಾನೆ. ಯಾವುದೇ ಇತ್ಯರ್ಥವಾಗದೆ ಯುದ್ಧ  ನಿಲ್ಲಿಸಲು ಸಾಧ್ಯವಿಲ್ಲವಾದರೂ ಪ್ರಾನ್ಸಿಸ್ನ ಬೆಂಬಲದ ಅವಶ್ಯಕತೆ ಬೇಕೆಬೇಕಾದ್ದರಿಂದ ಲಿಂಕನ್ ಬೇರೆ ದಾರಿ ಕಾಣದೆ ಪ್ರಾನ್ಸಿಸ್ ಷರತ್ತಿಗೆ ಅಸ್ತು ಎನ್ನುತ್ತಾನೆ. ಇದರ ಮಧ್ಯ ತಿದ್ದುಪಡಿಗಾಗಿ ಎಲ್ಲರ ಬೆಂಬಲ ತೆಗೆದುಕೊಳ್ಳಲು ಪ್ರಯತ್ನಿಸುವ ಲಿಂಕನ್ ಮತ್ತು ವಿಲಿಯಂ ಅದಕ್ಕಾಗಿ ಹರಸಾಹಸ ಪಡಬೇಕಾಗುತ್ತದೆ. ಅಂತೂ ಇಂತೂ 13ನೆ ವಿಧಿಯ ಜಾರಿಯಾಗುವಲ್ಲಿಗೆ ಚಿತ್ರ ಕೊನೆಯ ಘಟ್ಟಕ್ಕೆ ಬಂದು ನಿಲ್ಲುತ್ತದೆ.  ಆನಂತರ ಲಿಂಕನ್ ಯುದ್ಧ ಭೂಮಿಗೆ ಭೇಟಿ ನೀಡುವುದು, ಆನಂತರ ಆತನ ಹತ್ಯೆ ಮುಂತಾದವುಗಳನ್ನು ನಿರ್ದೇಶಕರು ತ್ವರಿತಗತಿಯಲ್ಲಿ ತೋರಿಸಿಬಿಡುತ್ತಾರೆ. ಚಿತ್ರದ ಗತಿ ನಿದಾನವಾಗಿ ಸಾಗುತ್ತದೆಯಾದರೂ ಎಲ್ಲೂ ತನ್ನ ಹಿಡಿತವನ್ನು ಕಳೆದುಕೊಳ್ಳುವುದಿಲ್ಲ ಆದರೆ ಸುಮಾರು ಎರಡೂವರೆ ಘಂಟೆಗಳ ಅವಧಿಯ ಚಿತ್ರದಲ್ಲಿ ರೋಚಕತೆಯಿಲ್ಲ . ಚಿತ್ರವನ್ನೂ  ನೋಡುವುದಕ್ಕೂ ಮೊದಲು ಚಿತ್ರದ ಹಿನ್ನೆಲೆ, ಅಮೆರಿಕಾದ ಸಂವಿಧಾನ, ಲಿಂಕನ್ ಮತ್ತು ವರ್ಣಬೇಧ ನೀತಿಯ ಬಗ್ಗೆ ಸ್ವಲ್ಪ ಅರಿವಿದ್ದರೆ ಚಿತ್ರ ಸಹನೀಯವಾಗುತ್ತದೆ.  ಸರಿಯಾಗಿ ಮಗ್ನನಾಗಿ ನೋಡಿದರೆ ಪ್ರಾರಂಭದಿಂದ ಕೊನೆಯವರೆಗೂ ಕುತೂಹಲದಿಂದ ನೋಡಿಸಿಕೊಳ್ಳುತ್ತಾ ಸಾಗುತ್ತದೆ.
ಇದು  ಲಿಂಕನ್ ಜೀವನ ಚರಿತ್ರೆಯಲ್ಲ. ಬದಲಿಗೆ ಲಿಂಕನ್ ವರ್ಣಬೇಧ ನೀತಿಯನ್ನು ಜಾರಿಗೊಳಿಸುವುದಕ್ಕಾಗಿ ಮಾಡಿದ ಹೋರಾಟದ ಕಥೆ ಎನ್ನಬಹುದು. ಹಾಗಾಗಿಯೇ ಚಿತ್ರ ಅಲ್ಲಿಂದಲೇ ಪ್ರಾರಂಭವಾಗಿ ಅಲ್ಲಿಗೆ ಮುಗಿಯುತ್ತದೆ. ಚಿತ್ರದ ಕೊನೆಯಲ್ಲೂ ಕೂಡ ಲಿಂಕನ್ ರ ಸಾವನ್ನು ನಿರ್ದೇಶಕ ಹೈಲೈಟ್ ಮಾಡುವುದಿಲ್ಲ. ಚಿತ್ರದ ಅಂತ್ಯ ಕೂಡ ಲಿಂಕನ್ ರ ಭಾಷಣದ ಮೂಲಕ ಕೊನೆಯಾಗುತ್ತದೆ. ಬಹುಶ ಸ್ಪೀಲ್ ಬರ್ಗ್ ಉದ್ದೇಶ ಲಿಂಕನ್ ಅವರ ಸಾಧನೆಯ ಹಾದಿಯನ್ನು ವಿಷದಪದಿಸುವುದಷ್ಟೇ ಆಗಿರಬಹುದು. ಹಾಗಾಗಿಯೇ ಇಲ್ಲಿ ಲಿಂಕನ್ ರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ವಿವರಗಳಿಲ್ಲ. ಅವರ ಹಿನ್ನೆಲೆ , ಬಾಲ್ಯ ಕೂಡ ಚಿತ್ರದ ನಿರೂಪಣೆಯಲ್ಲಿ ಬರುವುದಿಲ್ಲ. ಹಾಗೆ ಅವರ ಹತ್ಯೆಯ ವಿವರಗಳು, ಹತ್ಯೆಯ ಘಟನೆಯನ್ನು ನೇರವಾಗಿ ತೋರಿಸಿಲ್ಲ. ಬರೇ ಲಿಂಕನ್ ರನ್ನು ಶೂಟ್ ಮಾಡಿದ್ದಾರೆ ಎಂಬ ಸುದ್ದಿ ಬರುವಲ್ಲಿಗೆ ಅದನ್ನು ಮೊಟಕುಗೊಳಿಸಲಾಗಿದೆ.
ಚಿತ್ರದ  ಪಾತ್ರಧಾರಿಗಳಲ್ಲಿ ಲಿಂಕನ್ ಪಾತ್ರ ನಿರ್ವಹಿಸಿರುವ ಡೆನಿಯಲ್ ಲೇ ಡೇವಿಸ್ ನಮಗೆ ಅಬ್ರಾಹಂ ಲಿಂಕನ್ ರ ಪ್ರತಿರೂಪದಂತೆಯೇ ಕಾಣಿಸುತ್ತಾರೆ. ನಾನು ಲಿಂಕನ್ ಫೋಟೂಗಳನ್ನು ನೋಡಿದ್ದು ಪುಸ್ತಕಗಳಲ್ಲಿ . ಅದೇ ಪ್ರತಿರೂಪದ ಲಿಂಕನ್ ನಮಗೆ ಈ ಚಿತ್ರದಲ್ಲಿ ಕಾಣಸಿಗುವುದನ್ನು ಕಂಡಾಗ ಅಮೆರಿಕಾದ ಚಿತ್ರಕರ್ಮಿಗಳ ಪ್ರಸಾದನ ಸಾಮರ್ಥ್ಯ ಮತ್ತು ಕಲಾವಿದರ ಪಾತ್ರದೆಡಿಗಿನ ತನ್ಮಯತೆಯ ಬಗ್ಗೆ ಮೆಚ್ಚುಗೆ ಮೂಡದಿರದು.

Monday, January 28, 2013

ವಿಶ್ವರೂಪಂ.ವಿ-ರೂಪಂ.....?

ಶಾರುಕ್ ಖಾನ್ ನಿರ್ಮಿಸಿ ನಟಿಸಿದ ರಾ.ಒನ್ ಚಿತ್ರ ಎಲ್ಲರಿಗೂ ಗೊತ್ತಿರಬಹುದು.ಭಾರತದ ಅತ್ಯಂತ ಹೆಚ್ಚು ವೆಚ್ಚದ ಚಿತ್ರ ಎಂದು ಖ್ಯಾತಿಗಳಿಸಿದ ಚಿತ್ರ ತಾಂತ್ರಿಕವಾಗಿ ತುಂಬಾ ಮುಂದೆ ಇತ್ತು. ಚಿತ್ರದ ಗ್ರಾಫಿಕ್ಸ್ ಹಾಲಿವುಡ್ ಚಿತ್ರಗಳಲ್ಲಿನ ದೃಶ್ಯ ವೈಭವಕ್ಕೆ ಸಮವಾಗಿತ್ತು. ಅದರಲ್ಲೂ ಕೆಲವು ದೃಶ್ಯಗಳನ್ನು ಹಾಲಿವುಡ್ಡಿನ ಸೂಪರ್ ಹಿಟ್ ಚಿತ್ರಗಳಿಂದ ನೇರವಾಗಿ ಎತ್ತಿದ್ದರೂ ಗುಣಮಟ್ಟದಲ್ಲಿ ಯಾವುದೇ ಕುಂದು ಕೊರತೆಗಳಿರಲಿಲ್ಲ. ಆದರೆ ಕೊರತೆಯಿದ್ದದ್ದು ಮಾತ್ರ ಕಥೆಯಲ್ಲಿ. ತೀರಾ ಅಸಂಗತವಾದ ಅತ್ತ ಮಜವನ್ನೂ  ಕೊಡದ ವಾಹ್ ಎನಿಸದ ಜೀ ಒನ್ ಪಾತ್ರ ಚಿತ್ರದ ಸೋಲಿಗೆ ಪ್ರಮುಖ ಕಾರಣವಾಗಿತ್ತು ಎನ್ನಬಹುದು.
ಕಮಲಹಾಸನ್ ನಿರ್ದೇಶನದ, ಅಭಿನಯದ ವಿಶ್ವರೂಪಂ ಚಿತ್ರ ನೋಡುವಾಗ ರಾ.ಒನ್ ಚಿತ್ರ ನೆನಪಾಗುವುದು ಸ್ವಾಭಾವಿಕ. ಯಾಕೆಂದರೆ ಇಲ್ಲೂ ಆ ಚಿತ್ರದಂತೆಯೇ ಅದ್ಭುತ ತಂತ್ರಜ್ಞಾನವಿದೆ. ಮೈ ನವಿರೇಳಿಸುವ ಸಾಹಸ ದೃಶ್ಯಗಳಿವೆ.ಆದರೆ ಇಲ್ಲದೆ ಇರುವುದು ಅಥವಾ ಇದ್ದೂ ಇಷ್ಟವಾಗದಂತಿರುವುದು  ಕಥೆ ಮಾತ್ರ. ಹೌದು! ವಿಶ್ವರೂಪಮ್ ತಾಂತ್ರಿಕವಾಗಿ ಶ್ರೇಷ್ಠತೆ ಮೆರೆದಿರುವ ಚಿತ್ರ. ಹಾಗೆ ಚಿತ್ರದ ಹಿನ್ನೆಲೆಯಲ್ಲಿ  ಕೂಡ ಭಯೋತ್ಪಾದನೆಯ ಎಳೆ ಇರುವುದರಿಂದ  ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿದ ಚಿತ್ರ ಎನ್ನಬಹುದಾದರೂ ಕಥೆ/ಚಿತ್ರಕಥೆಯ ಹೆಣಿಗೆ ಮಾತ್ರ ತೀರಾ ನೀರಸವಾದದ್ದು. ತುಂಬಾ ವೆಚ್ಚದ, ನಿರೀಕ್ಷೆಗಳ ಚಿತ್ರಗಳನ್ನೂ ಕಾತುರನಾಗಿ ನೋಡಿದಾಗ ಈ ಒಂದು ಭಾವ ಹುಟ್ಟಿಬಿಟ್ಟಾಗ ನಮ್ಮ ಮೇಲೆಯೇ ಅನುಮಾನ ಮೂಡುವುದು ಸಹಜ. ನಾವೇ ಅತಿಯಾದ ನಿರೀಕ್ಷೆ ಮಾಡಿಬಿಟ್ಟೆವಾ  ಅಥವಾ ತುಂಬಾ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ಏನೂ ಇಲ್ಲ ಎನ್ನುವುದು ನಮ್ಮ ಸ್ವಾಭಾವಿಕ ಹಿಂಸಾ ವಿನೋದದ ಗುಣವಾ ಎಂಬ ಗೊಂದಲ ನನಗಂತೂ ಮೂಡುತ್ತದೆ. ಆದರೆ ಚಿತ್ರ ನೋಡಿಬಂದ ಪ್ರೇಕ್ಷಕರ ಮುಖಗಳಲ್ಲಿ ಅಸಂತೃಪ್ತಿ ಕಂಡು ಬಂದಾಗ ಏನೋ ಊನವಿರುವುದು ನಿಜ ಎನಿಸುತ್ತದೆ.
ಖಳನಾಯಕ/ಉಗ್ರವಾದಿ ನ್ಯೂ ಯಾರ್ಕ್ ನಗರದಲ್ಲಿ ಬಾಂಬ್ ಸ್ಫೋಟಿಸಿ ಹಾನಿ ಮಾಡಬೇಕೆಂಬ ದುಷ್ಕೃತ್ಯಕ್ಕೆ ಕೈಹಾಕಿದಾಗ ನಾಯಕ ಬಿಡಲಾಗುತ್ತದೆಯೇ...ಸುಮ್ಮನಿರುವುದು ಸಾಧ್ಯವೇ...ಅಮೆರಿಕಾದ ಪೋಲಿಸ್ ಬೆಂಬಲ ತೆಗೆದುಕೊಂಡು ಅವರನ್ನು ಸಂಹರಿಸುವ ಕಾರ್ಯಕ್ಕೆ ಕೈಹಾಕುವುದರಿಂದ ಇದೊಂದು ಸಾಹಸಮಯ ಚಿತ್ರ ಎನ್ನಬಹುದು. ಹೆಲಿಕಾಪ್ಟರ್ ಗಳ ಹಾರಾಟ, ಗುಂಡಿನ ಮೊರೆತ ಬಾಂಬ್ ಸ್ಫೋಟದ ಸದ್ದು ಚಿತ್ರನೋಡಿ ಚಿತ್ರಮಂದಿರದಿಂದ ಹೊರಬಂದ ಮೇಲೂ ಕಿವಿಯಲ್ಲಿ ಮೊರೆಯುತ್ತಿರುತ್ತದೆ.
ಕಥಕ್ ನಾಟ್ಯ ಕಲಿಸುವ ಗುರುವಾಗಿರುವ ನಾಯಕನ ಹೆಂಡತಿಗೆ ನಾಯಕನ ಮೇಲೆ ಎಂಥದೋ ಅನುಮಾನ. ಹೆಣ್ಣಿಗನಂತಿರುವ ಗಂಡ ಬೇರೊಂದು ಸಂಬಂಧವಿರಿಸಿಕೊಂಡಿರಬಹುದಾ..? ಈ ಎಳೆಯ ಮೂಲಕ ಸಿನೆಮಾವನ್ನು ಒಂದು ಕೌಟುಂಬಿಕ ಕಥಾಹಂದರದ ಚಿತ್ರ ಎನ್ನಬಹುದು. ಅಥವಾ ಒಂದು ಸಾಂಸಾರಿಕ ವಸ್ತು ಕೂಡ ಚಿತ್ರದಲ್ಲಿದೆ ಎನ್ನಬಹುದೇನೋ...ಹಾಗೆ ನಾಯಕ ಮುಸ್ಲಿಂ, ಹಿಂದೆ ಉಗ್ರಗಾಮಿಗಳ ಗುಂಪಿಗೆ ಸೇರಿರುತ್ತಾನೆ  ಎಂಬುದು   ಚಿತ್ರದಲ್ಲಿ ಬಯಲಾಗುವ ನಿಗೂಢ ರಹಸ್ಯ..
ಈ ಎಲ್ಲ ಅಂಶಗಳನ್ನು ಜೋಡಿಸಿರುವ ಆ ಮೂಲಕ ಒಂದು ಒಟ್ಟಾರೆ ಕಥೆಯನ್ನಾಗಿ ಹೆಣೆದಿರುವ ಪ್ರಯತ್ನ ಮಾತ್ರ ಪರಿಣಾಮಕಾರಿಯಾಗಿಲ್ಲ ಎನ್ನಬಹುದು. ಕಮಲಹಾಸನ್ ಎಲ್ಲಾ ರೀತಿಯಲ್ಲೂ, ಎಲ್ಲಾ ದೃಶ್ಯಗಳಲ್ಲೂ ಅಷ್ಟೇನೂ ಭಿನ್ನವಾಗಿ ಕಾಣುವುದಿಲ್ಲ. ಹಾಗಂತ ಅವರು ಅಭಿನಯಿಸಿಲ್ಲ ಎಂಬರ್ಥವಲ್ಲ. ಪ್ರತಿಯೊಂದು ದೃಶ್ಯವೂ ಭಿನ್ನವಾಗಿರಬೇಕು, ಶ್ರೀಮಂತವಾಗಿರಬೇಕು ಎಂಬುದನ್ನು ಹಠತೊಟ್ಟು ಸಾಕಾರಗೊಳಿಸಿರುವ ಕಮಲ್ ಎಲ್ಲಿ ಎಡವಿದ್ದಾರೆ ಎಂಬುದನ್ನು ಮತ್ತೊಮ್ಮೆ ಮಗದೊಮ್ಮೆ ಪರೀಕ್ಷಿಸಿದರೆ ಬಾಣ ಕಥೆ  ಎಂಬಲ್ಲೇ ಹೋಗಿ ಚುಚ್ಚಿಕೊಳ್ಳುತ್ತದೆ.
ಕೆಲವುಕಡೆ  ಹಿನ್ನೆಲೆ ಸಂಗೀತದ ಆಬ್ಬರ ಮಾತುಗಳನ್ನೇ ನುಂಗಿಹಾಕಿದೆಯಾದರೂ ಒಟ್ಟಾರೆಯಾಗಿ ಪರಿಣಾಮಕಾರಿಯಾಗಿದೆ.ಸಾಹಸ, ಅತ್ಯುತ್ತಮ ಛಾಯಾಗ್ರಹಣ ಅದ್ಭುತ ಲೊಕೇಶನ್ ಗಳನ್ನು ನೋಡಿ ಮಾರುಹೋಗುವುದಾದರೆ ಒಮ್ಮೆ ನೋಡಲೇಬೇಕಾದ ಚಿತ್ರ ವಿಶ್ವರೂಪಂ.

Saturday, January 26, 2013

ಚಿತ್ರಸಂತೆಗೆ ಸ್ವಾಗತ ಕೋರುತ್ತಾ...

ಕಲಾವಿದ ವ್ಯಾನ್ ಗೋ ಒಬ್ಬ ವಿಕ್ಷಿಪ್ತನಾ..ಅಥವಾ ಹುಚ್ಚನಾ...ಎನ್ನುವ ಪ್ರಶ್ನೆ ಆತನ ಜೀವನಚರಿತ್ರೆ ಓದಿದವರನ್ನು ಕಾಡುವುದು ಸಹಜ. ಅತ್ಯಂತ ಹೀನಾಯವಾಗಿ[ಬಹುಶ ನಮ್ಮ ದೃಷ್ಟಿಯಲ್ಲಿ] ಬದುಕಿದ ಈ ಪ್ರತಿಭಾವಂತ ಕಲೆಯಲ್ಲಿ ಹೊಸದೇನನ್ನೋ ಹೇಳುವುದಕ್ಕೆ ಪ್ರಯತ್ನಿಸಿದ. ತನ್ನ ಪ್ರೇಯಸಿಗಾಗಿ ತನ್ನದೇ ಕಿವಿಯನ್ನು ಕತ್ತರಿಸಿಕೊಟ್ಟ. ಕೊಡಲಿಕ್ಕೆ ಅವನಲ್ಲಿದ್ದುದಾದರೂ ಏನು? ದಟ್ಟ ದಾರಿದ್ರ್ಯ ಅವನನ್ನು ಆವರಿಸಿತ್ತು. ಒಂದು ಹೊತ್ತಿನ ಕೂಳಿಗೂ ತತ್ವಾರ. ಆದರೂ ಸ್ವಲ್ಪ ತನ್ನ ಕಲೆಯನ್ನು ಕಮರ್ಶಿಯಲ್ ಪಥದತ್ತ ತಿರುಗಿಸಿದ್ದರೆ ವೈಭವದ ಜೀವನ ನಡೆಸಬಹುದಾಗಿತ್ತಾದರೂ ಆತನ ಚಿತ್ರಗಳಲ್ಲಿನ ವೈಭವ ಕಡಿಮೆಯಾಗುತ್ತಿತ್ತು.ಬಾಲ್ಯದಲ್ಲೇ ತನ್ನ ಚಿತ್ರಕೌಶಲ ತೋರಿಸಿದ ಗೋ ಆನಂತರ ತನ್ನ ದರಿದ್ರದ ನಡುವೆಯೂ ಮಾನಸಿಕ ವೇದನೆಗಳ ಮಧ್ಯಯೂ ಚಿತ್ರ ಬರೆಯುವುದನ್ನು ಮುಂದುವರೆಸಿದ. ಅವನ ಜೀವಿತಾವಧಿಯಲ್ಲಿ ಆಯಿಲ್ ಪೇಂಟಿಂಗ್, ವಾಟರ್ ಪೇಂಟಿಂಗ್, ಸ್ಕೆಚ್, ಡ್ರಾಯಿಂಗ್ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಚಿತ್ರ ಬಿಡಿಸಿದ ವಾನ್ ಗೋ ನೂರು ವರ್ಷವೇನೂ ಬದುಕಲಿಲ್ಲ. ಬರೀ ಮೂವತ್ತೇಳು ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡ. ಆತನ ಜೀವನವನ್ನಾಧರಿಸಿ ಬಂದ ಚಲನಚಿತ್ರಗಳೆಂದರೆ ವ್ಯಾನ್ ಗೋ [1991], ವಿನ್ಸೆಂಟ್ ಅಂಡ್ ಥಿಯೋ[1990] ಮತ್ತು ಲಸ್ಟ್ ಫಾರ್ ಲೈಫ್ [1956]. ಮೂರು ಚಿತ್ರಗಳಲ್ಲಿ ನನಗಿಷ್ಟವಾದದ್ದು ವಿನ್ಸೆಂಟ್ ಅಂಡ್ ಥಿಯೋ. ಕಾರಣ ಅದರಲ್ಲಿನ ನಾಯಕ ಟಿಮ್ ರೋತ್ ನಟನೆ.ವ್ಯಾನ್ ಗೋ ಚಿತ್ರವು ಗೊನ ಕೊನೆಯ ದಿನಗಳ ಬಗೆಗಿನ ಚಿತ್ರವಾದರೂ ಅದರ ಮಂದಗತಿಯ ನಿರೂಪಣೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ.
ನಮ್ಮಣ್ಣ ಚಿತ್ರ ಕಲಾವಿದ.ಶಾಸ್ತ್ರೋಕ್ತವಾಗಿ ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ ಚಿತ್ರಕಲೆ ತರಬೇತಿ ಪಡೆಯುತ್ತಿದ್ದಾಗ ಇಂತಹ ಮಹಾನ್ ಕಲಾವಿದರ ಜೀವನಚರಿತ್ರೆಯ ಪುಸ್ತಕಗಳನ್ನ ತರುತ್ತಿದ್ದ. ನನಗೋ ಓದುವ ಹುಚ್ಚು. ಆತನ ಪುಸ್ತಕಗಳನ್ನೂ ನಾನೂ ಓದುತ್ತಿದ್ದೆ. ಹಾಗೆ ನಾನು ಬಿಡುವಿನ ಸಮಯದಲ್ಲಿ ಚಿತ್ರಬಿಡಿಸುತ್ತಿದ್ದೆ. ನಮ್ಮಣ್ಣ ಒಂದೇ ದಿಕ್ಕಿನಲ್ಲಿ ತನ್ನ ಕಲಾಕೃಷಿಯನ್ನು ಮುಂದುವರೆಸಿದ್ದರೆ ನಾನು ಎಲ್ಲಾ ರೀತಿಯಲ್ಲೂ ಕೈಯಾಡಿಸುತಿದ್ದೆ. ಹಾಗಾಗಿ ಚಿತ್ರಕಲೆ ಒಂದು ಮಟ್ಟಿಗೆ ನನ್ನ ಕೈಹತ್ತಿತ್ತು ಎಂದೆ ಹೇಳಬಹುದಾಗಿತ್ತು. ಆದರೆ ಯಾವತ್ತೂ ಚಿತ್ರಕಲೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸುಮ್ಮನೆ ಅದನ್ನು ಹವ್ಯಾಸವನ್ನಾಗಿಯಷ್ಟೇ ಇಟ್ಟುಕೊಂಡಿದ್ದೆ. ಆದರೆ ನಮ್ಮಣ್ಣ ಈ ವಿಷಯದಲ್ಲಿ ತುಂಬಾ ಗಂಭೀರವಾಗಿದ್ದನಾದರೂ ಮನೆಯ ಪರಿಸ್ಥಿತಿಗಳು ಅವನನ್ನು ಸರ್ಕಾರಿ ನೌಕರಿಗೆ ತಳ್ಳಿದವು.
ಬೆಂಗಳೂರಿಗೆ  ಬಂದಾಗಿನಿಂದ ಚಿತ್ರಸಂತೆಗೆ ಹೋಗಿ ಬರುತ್ತಿದ್ದೆ. ಆಗ ಹೋದಾಗಲೆಲ್ಲಾ ನಾನೊಮ್ಮೆ ಒಂದಷ್ಟು ಚಿತ್ರಬರೆದು ಪ್ರದರ್ಶಿಸಿದರೆ ಹೇಗೆ ಎನಿಸುತ್ತಿತಾದರೂ ಅದಕ್ಕೆ ಅವಕಾಶ ದೊರೆತಿರಲಿಲ್ಲ. ಆದರೆ ಈ ಸಾರಿ ಆದದ್ದು ಆಗಲಿ ಎಂದು ಒಂದಷ್ಟು ಚಿತ್ರ ಬಿಡಿಸಿಯೇ ಬಿಟ್ಟೆ. ಈಗದನ್ನು ಭಾನುವಾರದ ಚಿತ್ರಸಂತೆಯಲ್ಲಿ ಪ್ರದರ್ಶನಕ್ಕೆ ಇಡುತ್ತಿದ್ದೇನೆ. ನನ್ನ ಮೊಟ್ಟೆಮೊದಲ ಚಿತ್ರಕಲಾ ಪ್ರದರ್ಶನ ಇದು ಎನ್ನಬಹುದು. ಅದ್ಭುತ ಅಥವಾ ಹೊಸ ಶೈಲಿಯ ಚಿತ್ರಗಳಾಗದೆ ಇದ್ದರೂ ಒಂದಷ್ಟು ಆ ನಿಟ್ಟಿನಲ್ಲಿ ಪ್ರಯತ್ನಿಸೋಣ ಎನಿಸಿದೆ.
ದಯವಿಟ್ಟು ನಾಳೆ ನೀವು ಬನ್ನಿ.ಅಲ್ಲಿ ಸಿಗಬಹುದು..

ವರ್ಣಮಯದ ನಂಜುಂಡಿ ಮತ್ತು ಕವಲೊಡೆದ ಪ್ರೀತಿ...

ವಸುಧೇಂದ್ರ ನನಗಿಷ್ಟವಾದ ಬರಹಗಾರರು. ನಾನು ಮೈಸೂರಿನಲ್ಲಿ ಓದುತ್ತಿದ್ದಾಗ ಅವರ ಕಥೆಗಳು ದಿನಪತ್ರಿಕೆಗಳ ಸಾಪ್ತಾಹಿಕದಲ್ಲಿ ಪ್ರಕಟವಾಗುತ್ತಿದ್ದವು. ಯಾಕೋ ಓದಿದ ಬಹಳ ದಿನಗಳವರೆಗೆ ಮನಸ್ಸಿನಲ್ಲಿ ಉಳಿಯುತ್ತಿದ್ದದ್ದಷ್ಟೇ ಅಲ್ಲ  ಆವಾಗಾವಾಗ ಆಯಾ ಕಥೆಗಳ ಪಾತ್ರಗಳು ಕಾಡುತ್ತಿದ್ದವು ಕೂಡ. ಅಪಸ್ವರದಲ್ಲೊಂದು ಆರ್ತನಾದ, ಯುಗಾದಿ, ಮನೀಷೆ ಮುಂತಾದ ಕಥೆಗಳನ್ನ ಮರೆಯುವುದಾದರೂ ಹೇಗೆ. 
ನಾನು ನನ್ನ ವಿದ್ಯಾಭ್ಯಾಸದ ನಂತರ ಬೆಂಗಳೂರಿಗೆ ಸಿನೆಮಾ ಹುಚ್ಚಿಡಿಸಿಕೊಂಡು ಬಂದ ನಂತರ ಹಲವಾರು ಪ್ರಯತ್ನಗಳ ನಂತರ ಟಿವಿ ಚಾನಲ್ಲಿನ ಧಾರಾವಾಹಿಯೊಂದರ ಸಂಚಿಕೆ ನಿರ್ದೇಶನ ಮಾಡುತ್ತಿದ್ದೆ. ಅದರ ಒಂದು ವಿಭಾಗದಲ್ಲಿ ಯಾರಾದರೂ ಕಥೆಗಾರರ, ಸಾಹಿತಿಗಳ ಪರಿಚಯ ಮಾಡಿಕೊಡುವುದಿತ್ತು. ನನಗೆ ನಮ್ಮ ಬಾಸ್ 'ವಸುಧೇಂದ್ರ ಅಂತ ಒಬ್ರು ರೈಟರ್ ಇದ್ದಾರೆ. ನೋಡಿ ಇಂಟರೆಸ್ಟಿಂಗ್ ಅನ್ಸಿದ್ರೆ ಒಂದು ಸೆಗ್ಮೆಂಟ್ ಮಾಡಿ..' ಎಂದರು. ನನಗೆ ಖುಷಿಯಾಗಿ ಹೋಯಿತು.ತಕ್ಷಣ ವಸುಧೆಂದ್ರರಿಗೆ ಫೋನ್ ಮಾಡಿ ಮಾತಾಡಿದೆ, ಭೇಟಿಗಾಗಿ ಸಮಯ ನಿಗದಿಪದಿಸಿಕೊಂಡೆ. ಅವರ ಮನೆಗೆ ಹೋದಾಗ ಅವರ ಕಥೆಗಳ ಬಗ್ಗೆ ಚರ್ಚಿಸಿದಾಗ ವಸುಧೇಂದ್ರರಿಗೆ ಆಶ್ಚರ್ಯವಾಯಿತು. ಅವರ ಕಥೆಗಳ ಸಾರಾಂಶದ ಜೊತೆಗೆ ಪಾತ್ರಗಳ ಹೆಸರನ್ನೂ ನಾನು ನೆನಪಿಸಿಕೊಂಡು ಹೇಳಿದಾಗ ವಸುಧೇಂದ್ರ ನನ್ನನ್ನು ಮೆಚ್ಚಿದ್ದಷ್ಟೇ ಅಲ್ಲ, ನೀನು ಏನಾದರೂ ಬರೆಯೋ ಎಂದು ಪ್ರೋತ್ಸಾಹಿಸಿದ್ದರು. ಆನಂತರ ಅವಾಗವಾಗ ಫೋನಿನಲ್ಲಿ ಮಾತಿಗೆ ಸಿಗುತ್ತಿದ್ದೆವು. ನನ್ನ ಬರಹಗಳನ್ನೂ ಅವರಿಗೆ ಕಳುಹಿಸಿ ಅವರ ಅಭಿಪ್ರಾಯ ತಿದ್ದುಪಡಿಗಳನ್ನು ಪಡೆಯುತ್ತಿದ್ದೆ. ಆದರೆ ಅದೊಂದು ದಿನ ವಸುಧೇಂದ್ರ ನಮ್ಮ ಮನೆಗೆ ಬಂದಿದ್ದರು. ಮನೆ ಎಂದರೆ ಸಿನಿಮಾದ ಕಥೆ ರಚನೆಗಾಗಿ ಮಾಡಿಕೊಂಡಿದ್ದ ವ್ಯವಸ್ಥೆ. ಊರಾಚೆಯಿತ್ತು. ನಾನು ಯಾವುದೇ ಸಿನೆಮಾ ನೋಡಿದ ತಕ್ಷಣ ಅದರ ಹೆಸರು ಇಸವಿ ಮತ್ತು ನನಗನಿಸಿದ ಹಾಗೆ ಸ್ಟಾರ್ ಕೊಟ್ಟುಬಿಡುತ್ತೇನೆ. ಮನೆಗೆ ಬಂದ ವಸುಧೇಂದ್ರರಿಗೆ ಸಿನೆಮಾಗಳ ಬಗ್ಗೆ ಹೇಳಿ ನೋಡಿದ ಸಿನೆಮಾಗಳ ಪಟ್ಟಿಕೊಟ್ಟೆ. ನನ್ನ ಅಭಿಪ್ರಾಯ ಮತ್ತು ಅವರ ಅಭಿಪ್ರಾಯ ಬಹಳಷ್ಟು ಚಿತ್ರಗಳ ವಿಷಯದಲ್ಲಿ ಒಂದೇ ಆಗಿತ್ತು.
ಅವರ ಹೊಸ ಪ್ರಬಂಧಗಳ ಸಂಕಲನ 'ವರ್ಣಮಯ' ಬಿಡುಗಡೆಯಾಗಿದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಪ್ರಬಂಧಗಳು ಖುಷಿಕೊಡುತ್ತವೆ. ಅದರಲ್ಲೂ ಡ್ರೈವರ್ ನಂಜುಂಡಿಯಾ  ಕಥಾನಕವಂತೂ ಹೊಟ್ಟೆಹುಣ್ಣಾಗಿಸುವಂತೆ ನಗಿಸಿದರೂ ಕೆಲವೆಡೆ ನಮಗರಿವಿಲ್ಲದ[ಲೇಖಕರಿಗೂ ಆಗಷ್ಟೇ ಪರಿಚಯವಾದ] ಪ್ರಪಂಚವನ್ನು ತೆರೆದಿಡುತ್ತದೆ. ಒಬ್ಬ ವ್ಯಕ್ತಿಯ ಬದುಕು ಬೆಳವಣಿಗೆಯನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಲೇ ಅಷ್ಟೇ ಅದ್ಭುತವಾಗಿ ನಮಗೆ ಪರಿಚಯಿಸುತ್ತಾರೆ ವಸುಧೇಂದ್ರ. .ಗೌರಮ್ಮ ಎನ್ನುವ ಕೆಲಸದಾಕೆಯ ಮೇಲಿನ ಪ್ರಬಂಧವೂ ಅಷ್ಟೇ. ಮನೆಗೆಳದವರ ಬದುಕಿನ ವಿವಿಧ ಮಗ್ಗಲನ್ನು ಬಿಡಿಬಿಡಿಯಾಗಿ ತೆರೆದಿಡುತ್ತಾ ಸಾಗುತ್ತದೆ. ಇಲ್ಲೆಲ್ಲೂ ಯಾರೂ ನಮಗೆ ಕಥಾನಾಯಕರಂತೆ ಭಾಸವಾಗುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಕಾಲದ ಕೈಗೊಂಬೆಗಳಂತೆ ನಮಗೆ ಕಾಣಿಸುತ್ತಾರೆ. ಹಾಗೆ ಅಪಾರ್ಟ್ಮೆಂಟಿನ ಕಥಾನಕ, ಮನೆಗೆಲಸದವರ ಘಟನೆಗಳು ಮುಂತಾದವುಗಳನ್ನು ನಮಗೆ ಇನ್ನೊಂದು ಆತ್ಮೀಯವಾಗಿರದ ನಮ್ಮದೇ ಪ್ರಪಂಚವನ್ನು ತೆರೆದಿಡುತ್ತವೆ. ಒಮ್ಮೆ ಓದಲೇಬೇಕಾದ ಪುಸ್ತಕ ವರ್ಣಮಯ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಮಿಕಾ  ಕೌರಿಸ್ಮಾಕಿ ನಿರ್ದೇಶನದ ಫಿನಿಶ್ ಚಲನಚಿತ್ರ ಹೌಸ್ ಆಫ್ ಬ್ರಾಂಚಿಂಗ್ ಲವ್ 2009ರಲ್ಲಿ ತೆರೆಕಂಡ ಚಲನಚಿತ್ರ. ಚಿತ್ರದ ಕಥೆ ಸರಳ. ಗಂಡ ಹೆಂಡಿರಿಬ್ಬರಿಗೂ ಜಗಳವಾಗಿದೆ. ಹಾಗಾಗಿ ಡೈವೋರ್ಸ್ ಕೂಡ ಸಿಕ್ಕಿದೆ. ಆದರೆ ಎಲ್ಲಾ ಸೆಟಲ್ ಮೆಂಟ್ ಗಾಗಿ ಇನ್ನೊಂದಷ್ಟು ತಿಂಗಳುಗಳ ಸಮಯವಿದೆ. ಹಾಗಾಗಿ ಬೇರೆಬೇರೆ ಕಡೆ ಇರುವುದಕ್ಕೆ ಆ ಮನೆಯಲ್ಲೇ ಇದ್ದರೆ ಖರ್ಚು ಉಳಿಯುತ್ತದೆ ಎಂದು ಯೋಚಿಸಿ ಇಬ್ಬರೂ ಒಂದೇ ಮನೆಯಲ್ಲಿ ಉಳಿದುಕೊಳ್ಳಲು ಯೋಚಿಸುತ್ತಾರೆ. ಆದರೆ ಖರ್ಚುಗಳನ್ನು ಹಂಚಿಕೊಳ್ಳುತ್ತಾರೆ. ನಿನ್ನಿಷ್ಟಕ್ಕೆ ನೀನಿರು, ನನ್ನಿಷ್ಟಕ್ಕೆ ನಾನಿರುತ್ತೇನೆ ಎಂದು ಪರಸ್ಪರ ಮಾತಾಡಿಕೊಂಡರೂ ಯಾವುದಕ್ಕೂ ಇರಲಿ ಎಂದು ಬೇಕು-ಬೇಡಗಳ ಒಂದು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಮುಂದೆ ನಡೆಯುವ ಘಟನಾವಳಿಗಳು ಪ್ರೇಕ್ಷಕರಿಗೆ ನಗೆ ತರಿಸುತ್ತವೆ ಅಲ್ಲದೆ ಅವರಿಬ್ಬರ ನಡುವೆ ಇದ್ದ ತಪ್ಪುಕಲ್ಪನೆಗಳು ದೂರಾಗುವಲ್ಲಿ ಸಹಾಯವಾಗುತ್ತವೆ. ಮುಂದೆ ಆ ಹಂತದಲ್ಲಿ ಪುನಃ ಪ್ರೀತಿಗೆ ಬೀಳುವ ದಂಪತಿಗಳು ಮತ್ತೆ ಒಂದಾಗುತ್ತಾರೆ.
ಚಿತ್ರದ ಕಥೆ ನಿರೂಪಣೆ ಚೆನ್ನಾಗಿದೆ. ನಾಯಕ /ನಾಯಕಿಯ ಅಭಿನಯ ಎಲ್ಲೂ ಕೃತಕವೆನಿಸುವುದಿಲ್ಲ. ಒಂದು ಉತ್ತಮ ಹಾಸ್ಯಮಯ ಟೈಂ ಪಾಸ್ ಚಲನಚಿತ್ರ ಇದು. ಸಮಯವಿದ್ದರೆ ಆರಾಮವಾಗಿ ನಗುನಗುತ್ತ ಟೈಂ ಪಾಸ್ ಮಾಡಲು ಒಮ್ಮೆ ನೋಡಿ.