Saturday, January 26, 2013

ಚಿತ್ರಸಂತೆಗೆ ಸ್ವಾಗತ ಕೋರುತ್ತಾ...

ಕಲಾವಿದ ವ್ಯಾನ್ ಗೋ ಒಬ್ಬ ವಿಕ್ಷಿಪ್ತನಾ..ಅಥವಾ ಹುಚ್ಚನಾ...ಎನ್ನುವ ಪ್ರಶ್ನೆ ಆತನ ಜೀವನಚರಿತ್ರೆ ಓದಿದವರನ್ನು ಕಾಡುವುದು ಸಹಜ. ಅತ್ಯಂತ ಹೀನಾಯವಾಗಿ[ಬಹುಶ ನಮ್ಮ ದೃಷ್ಟಿಯಲ್ಲಿ] ಬದುಕಿದ ಈ ಪ್ರತಿಭಾವಂತ ಕಲೆಯಲ್ಲಿ ಹೊಸದೇನನ್ನೋ ಹೇಳುವುದಕ್ಕೆ ಪ್ರಯತ್ನಿಸಿದ. ತನ್ನ ಪ್ರೇಯಸಿಗಾಗಿ ತನ್ನದೇ ಕಿವಿಯನ್ನು ಕತ್ತರಿಸಿಕೊಟ್ಟ. ಕೊಡಲಿಕ್ಕೆ ಅವನಲ್ಲಿದ್ದುದಾದರೂ ಏನು? ದಟ್ಟ ದಾರಿದ್ರ್ಯ ಅವನನ್ನು ಆವರಿಸಿತ್ತು. ಒಂದು ಹೊತ್ತಿನ ಕೂಳಿಗೂ ತತ್ವಾರ. ಆದರೂ ಸ್ವಲ್ಪ ತನ್ನ ಕಲೆಯನ್ನು ಕಮರ್ಶಿಯಲ್ ಪಥದತ್ತ ತಿರುಗಿಸಿದ್ದರೆ ವೈಭವದ ಜೀವನ ನಡೆಸಬಹುದಾಗಿತ್ತಾದರೂ ಆತನ ಚಿತ್ರಗಳಲ್ಲಿನ ವೈಭವ ಕಡಿಮೆಯಾಗುತ್ತಿತ್ತು.ಬಾಲ್ಯದಲ್ಲೇ ತನ್ನ ಚಿತ್ರಕೌಶಲ ತೋರಿಸಿದ ಗೋ ಆನಂತರ ತನ್ನ ದರಿದ್ರದ ನಡುವೆಯೂ ಮಾನಸಿಕ ವೇದನೆಗಳ ಮಧ್ಯಯೂ ಚಿತ್ರ ಬರೆಯುವುದನ್ನು ಮುಂದುವರೆಸಿದ. ಅವನ ಜೀವಿತಾವಧಿಯಲ್ಲಿ ಆಯಿಲ್ ಪೇಂಟಿಂಗ್, ವಾಟರ್ ಪೇಂಟಿಂಗ್, ಸ್ಕೆಚ್, ಡ್ರಾಯಿಂಗ್ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಚಿತ್ರ ಬಿಡಿಸಿದ ವಾನ್ ಗೋ ನೂರು ವರ್ಷವೇನೂ ಬದುಕಲಿಲ್ಲ. ಬರೀ ಮೂವತ್ತೇಳು ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡ. ಆತನ ಜೀವನವನ್ನಾಧರಿಸಿ ಬಂದ ಚಲನಚಿತ್ರಗಳೆಂದರೆ ವ್ಯಾನ್ ಗೋ [1991], ವಿನ್ಸೆಂಟ್ ಅಂಡ್ ಥಿಯೋ[1990] ಮತ್ತು ಲಸ್ಟ್ ಫಾರ್ ಲೈಫ್ [1956]. ಮೂರು ಚಿತ್ರಗಳಲ್ಲಿ ನನಗಿಷ್ಟವಾದದ್ದು ವಿನ್ಸೆಂಟ್ ಅಂಡ್ ಥಿಯೋ. ಕಾರಣ ಅದರಲ್ಲಿನ ನಾಯಕ ಟಿಮ್ ರೋತ್ ನಟನೆ.ವ್ಯಾನ್ ಗೋ ಚಿತ್ರವು ಗೊನ ಕೊನೆಯ ದಿನಗಳ ಬಗೆಗಿನ ಚಿತ್ರವಾದರೂ ಅದರ ಮಂದಗತಿಯ ನಿರೂಪಣೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ.
ನಮ್ಮಣ್ಣ ಚಿತ್ರ ಕಲಾವಿದ.ಶಾಸ್ತ್ರೋಕ್ತವಾಗಿ ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ ಚಿತ್ರಕಲೆ ತರಬೇತಿ ಪಡೆಯುತ್ತಿದ್ದಾಗ ಇಂತಹ ಮಹಾನ್ ಕಲಾವಿದರ ಜೀವನಚರಿತ್ರೆಯ ಪುಸ್ತಕಗಳನ್ನ ತರುತ್ತಿದ್ದ. ನನಗೋ ಓದುವ ಹುಚ್ಚು. ಆತನ ಪುಸ್ತಕಗಳನ್ನೂ ನಾನೂ ಓದುತ್ತಿದ್ದೆ. ಹಾಗೆ ನಾನು ಬಿಡುವಿನ ಸಮಯದಲ್ಲಿ ಚಿತ್ರಬಿಡಿಸುತ್ತಿದ್ದೆ. ನಮ್ಮಣ್ಣ ಒಂದೇ ದಿಕ್ಕಿನಲ್ಲಿ ತನ್ನ ಕಲಾಕೃಷಿಯನ್ನು ಮುಂದುವರೆಸಿದ್ದರೆ ನಾನು ಎಲ್ಲಾ ರೀತಿಯಲ್ಲೂ ಕೈಯಾಡಿಸುತಿದ್ದೆ. ಹಾಗಾಗಿ ಚಿತ್ರಕಲೆ ಒಂದು ಮಟ್ಟಿಗೆ ನನ್ನ ಕೈಹತ್ತಿತ್ತು ಎಂದೆ ಹೇಳಬಹುದಾಗಿತ್ತು. ಆದರೆ ಯಾವತ್ತೂ ಚಿತ್ರಕಲೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸುಮ್ಮನೆ ಅದನ್ನು ಹವ್ಯಾಸವನ್ನಾಗಿಯಷ್ಟೇ ಇಟ್ಟುಕೊಂಡಿದ್ದೆ. ಆದರೆ ನಮ್ಮಣ್ಣ ಈ ವಿಷಯದಲ್ಲಿ ತುಂಬಾ ಗಂಭೀರವಾಗಿದ್ದನಾದರೂ ಮನೆಯ ಪರಿಸ್ಥಿತಿಗಳು ಅವನನ್ನು ಸರ್ಕಾರಿ ನೌಕರಿಗೆ ತಳ್ಳಿದವು.
ಬೆಂಗಳೂರಿಗೆ  ಬಂದಾಗಿನಿಂದ ಚಿತ್ರಸಂತೆಗೆ ಹೋಗಿ ಬರುತ್ತಿದ್ದೆ. ಆಗ ಹೋದಾಗಲೆಲ್ಲಾ ನಾನೊಮ್ಮೆ ಒಂದಷ್ಟು ಚಿತ್ರಬರೆದು ಪ್ರದರ್ಶಿಸಿದರೆ ಹೇಗೆ ಎನಿಸುತ್ತಿತಾದರೂ ಅದಕ್ಕೆ ಅವಕಾಶ ದೊರೆತಿರಲಿಲ್ಲ. ಆದರೆ ಈ ಸಾರಿ ಆದದ್ದು ಆಗಲಿ ಎಂದು ಒಂದಷ್ಟು ಚಿತ್ರ ಬಿಡಿಸಿಯೇ ಬಿಟ್ಟೆ. ಈಗದನ್ನು ಭಾನುವಾರದ ಚಿತ್ರಸಂತೆಯಲ್ಲಿ ಪ್ರದರ್ಶನಕ್ಕೆ ಇಡುತ್ತಿದ್ದೇನೆ. ನನ್ನ ಮೊಟ್ಟೆಮೊದಲ ಚಿತ್ರಕಲಾ ಪ್ರದರ್ಶನ ಇದು ಎನ್ನಬಹುದು. ಅದ್ಭುತ ಅಥವಾ ಹೊಸ ಶೈಲಿಯ ಚಿತ್ರಗಳಾಗದೆ ಇದ್ದರೂ ಒಂದಷ್ಟು ಆ ನಿಟ್ಟಿನಲ್ಲಿ ಪ್ರಯತ್ನಿಸೋಣ ಎನಿಸಿದೆ.
ದಯವಿಟ್ಟು ನಾಳೆ ನೀವು ಬನ್ನಿ.ಅಲ್ಲಿ ಸಿಗಬಹುದು..

ವರ್ಣಮಯದ ನಂಜುಂಡಿ ಮತ್ತು ಕವಲೊಡೆದ ಪ್ರೀತಿ...

ವಸುಧೇಂದ್ರ ನನಗಿಷ್ಟವಾದ ಬರಹಗಾರರು. ನಾನು ಮೈಸೂರಿನಲ್ಲಿ ಓದುತ್ತಿದ್ದಾಗ ಅವರ ಕಥೆಗಳು ದಿನಪತ್ರಿಕೆಗಳ ಸಾಪ್ತಾಹಿಕದಲ್ಲಿ ಪ್ರಕಟವಾಗುತ್ತಿದ್ದವು. ಯಾಕೋ ಓದಿದ ಬಹಳ ದಿನಗಳವರೆಗೆ ಮನಸ್ಸಿನಲ್ಲಿ ಉಳಿಯುತ್ತಿದ್ದದ್ದಷ್ಟೇ ಅಲ್ಲ  ಆವಾಗಾವಾಗ ಆಯಾ ಕಥೆಗಳ ಪಾತ್ರಗಳು ಕಾಡುತ್ತಿದ್ದವು ಕೂಡ. ಅಪಸ್ವರದಲ್ಲೊಂದು ಆರ್ತನಾದ, ಯುಗಾದಿ, ಮನೀಷೆ ಮುಂತಾದ ಕಥೆಗಳನ್ನ ಮರೆಯುವುದಾದರೂ ಹೇಗೆ. 
ನಾನು ನನ್ನ ವಿದ್ಯಾಭ್ಯಾಸದ ನಂತರ ಬೆಂಗಳೂರಿಗೆ ಸಿನೆಮಾ ಹುಚ್ಚಿಡಿಸಿಕೊಂಡು ಬಂದ ನಂತರ ಹಲವಾರು ಪ್ರಯತ್ನಗಳ ನಂತರ ಟಿವಿ ಚಾನಲ್ಲಿನ ಧಾರಾವಾಹಿಯೊಂದರ ಸಂಚಿಕೆ ನಿರ್ದೇಶನ ಮಾಡುತ್ತಿದ್ದೆ. ಅದರ ಒಂದು ವಿಭಾಗದಲ್ಲಿ ಯಾರಾದರೂ ಕಥೆಗಾರರ, ಸಾಹಿತಿಗಳ ಪರಿಚಯ ಮಾಡಿಕೊಡುವುದಿತ್ತು. ನನಗೆ ನಮ್ಮ ಬಾಸ್ 'ವಸುಧೇಂದ್ರ ಅಂತ ಒಬ್ರು ರೈಟರ್ ಇದ್ದಾರೆ. ನೋಡಿ ಇಂಟರೆಸ್ಟಿಂಗ್ ಅನ್ಸಿದ್ರೆ ಒಂದು ಸೆಗ್ಮೆಂಟ್ ಮಾಡಿ..' ಎಂದರು. ನನಗೆ ಖುಷಿಯಾಗಿ ಹೋಯಿತು.ತಕ್ಷಣ ವಸುಧೆಂದ್ರರಿಗೆ ಫೋನ್ ಮಾಡಿ ಮಾತಾಡಿದೆ, ಭೇಟಿಗಾಗಿ ಸಮಯ ನಿಗದಿಪದಿಸಿಕೊಂಡೆ. ಅವರ ಮನೆಗೆ ಹೋದಾಗ ಅವರ ಕಥೆಗಳ ಬಗ್ಗೆ ಚರ್ಚಿಸಿದಾಗ ವಸುಧೇಂದ್ರರಿಗೆ ಆಶ್ಚರ್ಯವಾಯಿತು. ಅವರ ಕಥೆಗಳ ಸಾರಾಂಶದ ಜೊತೆಗೆ ಪಾತ್ರಗಳ ಹೆಸರನ್ನೂ ನಾನು ನೆನಪಿಸಿಕೊಂಡು ಹೇಳಿದಾಗ ವಸುಧೇಂದ್ರ ನನ್ನನ್ನು ಮೆಚ್ಚಿದ್ದಷ್ಟೇ ಅಲ್ಲ, ನೀನು ಏನಾದರೂ ಬರೆಯೋ ಎಂದು ಪ್ರೋತ್ಸಾಹಿಸಿದ್ದರು. ಆನಂತರ ಅವಾಗವಾಗ ಫೋನಿನಲ್ಲಿ ಮಾತಿಗೆ ಸಿಗುತ್ತಿದ್ದೆವು. ನನ್ನ ಬರಹಗಳನ್ನೂ ಅವರಿಗೆ ಕಳುಹಿಸಿ ಅವರ ಅಭಿಪ್ರಾಯ ತಿದ್ದುಪಡಿಗಳನ್ನು ಪಡೆಯುತ್ತಿದ್ದೆ. ಆದರೆ ಅದೊಂದು ದಿನ ವಸುಧೇಂದ್ರ ನಮ್ಮ ಮನೆಗೆ ಬಂದಿದ್ದರು. ಮನೆ ಎಂದರೆ ಸಿನಿಮಾದ ಕಥೆ ರಚನೆಗಾಗಿ ಮಾಡಿಕೊಂಡಿದ್ದ ವ್ಯವಸ್ಥೆ. ಊರಾಚೆಯಿತ್ತು. ನಾನು ಯಾವುದೇ ಸಿನೆಮಾ ನೋಡಿದ ತಕ್ಷಣ ಅದರ ಹೆಸರು ಇಸವಿ ಮತ್ತು ನನಗನಿಸಿದ ಹಾಗೆ ಸ್ಟಾರ್ ಕೊಟ್ಟುಬಿಡುತ್ತೇನೆ. ಮನೆಗೆ ಬಂದ ವಸುಧೇಂದ್ರರಿಗೆ ಸಿನೆಮಾಗಳ ಬಗ್ಗೆ ಹೇಳಿ ನೋಡಿದ ಸಿನೆಮಾಗಳ ಪಟ್ಟಿಕೊಟ್ಟೆ. ನನ್ನ ಅಭಿಪ್ರಾಯ ಮತ್ತು ಅವರ ಅಭಿಪ್ರಾಯ ಬಹಳಷ್ಟು ಚಿತ್ರಗಳ ವಿಷಯದಲ್ಲಿ ಒಂದೇ ಆಗಿತ್ತು.
ಅವರ ಹೊಸ ಪ್ರಬಂಧಗಳ ಸಂಕಲನ 'ವರ್ಣಮಯ' ಬಿಡುಗಡೆಯಾಗಿದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಪ್ರಬಂಧಗಳು ಖುಷಿಕೊಡುತ್ತವೆ. ಅದರಲ್ಲೂ ಡ್ರೈವರ್ ನಂಜುಂಡಿಯಾ  ಕಥಾನಕವಂತೂ ಹೊಟ್ಟೆಹುಣ್ಣಾಗಿಸುವಂತೆ ನಗಿಸಿದರೂ ಕೆಲವೆಡೆ ನಮಗರಿವಿಲ್ಲದ[ಲೇಖಕರಿಗೂ ಆಗಷ್ಟೇ ಪರಿಚಯವಾದ] ಪ್ರಪಂಚವನ್ನು ತೆರೆದಿಡುತ್ತದೆ. ಒಬ್ಬ ವ್ಯಕ್ತಿಯ ಬದುಕು ಬೆಳವಣಿಗೆಯನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಲೇ ಅಷ್ಟೇ ಅದ್ಭುತವಾಗಿ ನಮಗೆ ಪರಿಚಯಿಸುತ್ತಾರೆ ವಸುಧೇಂದ್ರ. .ಗೌರಮ್ಮ ಎನ್ನುವ ಕೆಲಸದಾಕೆಯ ಮೇಲಿನ ಪ್ರಬಂಧವೂ ಅಷ್ಟೇ. ಮನೆಗೆಳದವರ ಬದುಕಿನ ವಿವಿಧ ಮಗ್ಗಲನ್ನು ಬಿಡಿಬಿಡಿಯಾಗಿ ತೆರೆದಿಡುತ್ತಾ ಸಾಗುತ್ತದೆ. ಇಲ್ಲೆಲ್ಲೂ ಯಾರೂ ನಮಗೆ ಕಥಾನಾಯಕರಂತೆ ಭಾಸವಾಗುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಕಾಲದ ಕೈಗೊಂಬೆಗಳಂತೆ ನಮಗೆ ಕಾಣಿಸುತ್ತಾರೆ. ಹಾಗೆ ಅಪಾರ್ಟ್ಮೆಂಟಿನ ಕಥಾನಕ, ಮನೆಗೆಲಸದವರ ಘಟನೆಗಳು ಮುಂತಾದವುಗಳನ್ನು ನಮಗೆ ಇನ್ನೊಂದು ಆತ್ಮೀಯವಾಗಿರದ ನಮ್ಮದೇ ಪ್ರಪಂಚವನ್ನು ತೆರೆದಿಡುತ್ತವೆ. ಒಮ್ಮೆ ಓದಲೇಬೇಕಾದ ಪುಸ್ತಕ ವರ್ಣಮಯ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಮಿಕಾ  ಕೌರಿಸ್ಮಾಕಿ ನಿರ್ದೇಶನದ ಫಿನಿಶ್ ಚಲನಚಿತ್ರ ಹೌಸ್ ಆಫ್ ಬ್ರಾಂಚಿಂಗ್ ಲವ್ 2009ರಲ್ಲಿ ತೆರೆಕಂಡ ಚಲನಚಿತ್ರ. ಚಿತ್ರದ ಕಥೆ ಸರಳ. ಗಂಡ ಹೆಂಡಿರಿಬ್ಬರಿಗೂ ಜಗಳವಾಗಿದೆ. ಹಾಗಾಗಿ ಡೈವೋರ್ಸ್ ಕೂಡ ಸಿಕ್ಕಿದೆ. ಆದರೆ ಎಲ್ಲಾ ಸೆಟಲ್ ಮೆಂಟ್ ಗಾಗಿ ಇನ್ನೊಂದಷ್ಟು ತಿಂಗಳುಗಳ ಸಮಯವಿದೆ. ಹಾಗಾಗಿ ಬೇರೆಬೇರೆ ಕಡೆ ಇರುವುದಕ್ಕೆ ಆ ಮನೆಯಲ್ಲೇ ಇದ್ದರೆ ಖರ್ಚು ಉಳಿಯುತ್ತದೆ ಎಂದು ಯೋಚಿಸಿ ಇಬ್ಬರೂ ಒಂದೇ ಮನೆಯಲ್ಲಿ ಉಳಿದುಕೊಳ್ಳಲು ಯೋಚಿಸುತ್ತಾರೆ. ಆದರೆ ಖರ್ಚುಗಳನ್ನು ಹಂಚಿಕೊಳ್ಳುತ್ತಾರೆ. ನಿನ್ನಿಷ್ಟಕ್ಕೆ ನೀನಿರು, ನನ್ನಿಷ್ಟಕ್ಕೆ ನಾನಿರುತ್ತೇನೆ ಎಂದು ಪರಸ್ಪರ ಮಾತಾಡಿಕೊಂಡರೂ ಯಾವುದಕ್ಕೂ ಇರಲಿ ಎಂದು ಬೇಕು-ಬೇಡಗಳ ಒಂದು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಮುಂದೆ ನಡೆಯುವ ಘಟನಾವಳಿಗಳು ಪ್ರೇಕ್ಷಕರಿಗೆ ನಗೆ ತರಿಸುತ್ತವೆ ಅಲ್ಲದೆ ಅವರಿಬ್ಬರ ನಡುವೆ ಇದ್ದ ತಪ್ಪುಕಲ್ಪನೆಗಳು ದೂರಾಗುವಲ್ಲಿ ಸಹಾಯವಾಗುತ್ತವೆ. ಮುಂದೆ ಆ ಹಂತದಲ್ಲಿ ಪುನಃ ಪ್ರೀತಿಗೆ ಬೀಳುವ ದಂಪತಿಗಳು ಮತ್ತೆ ಒಂದಾಗುತ್ತಾರೆ.
ಚಿತ್ರದ ಕಥೆ ನಿರೂಪಣೆ ಚೆನ್ನಾಗಿದೆ. ನಾಯಕ /ನಾಯಕಿಯ ಅಭಿನಯ ಎಲ್ಲೂ ಕೃತಕವೆನಿಸುವುದಿಲ್ಲ. ಒಂದು ಉತ್ತಮ ಹಾಸ್ಯಮಯ ಟೈಂ ಪಾಸ್ ಚಲನಚಿತ್ರ ಇದು. ಸಮಯವಿದ್ದರೆ ಆರಾಮವಾಗಿ ನಗುನಗುತ್ತ ಟೈಂ ಪಾಸ್ ಮಾಡಲು ಒಮ್ಮೆ ನೋಡಿ.

Monday, January 21, 2013

ಷಾ ಬಹದ್ದೂರ್ ಎಂಬ ನರಹಂತಕನ ಕಥೆ

ಸರ್ಕಸ್ ಕಂಪನಿಯಲ್ಲಿದ್ದ ಹುಲಿ ಬಹದ್ದೂರ್ ಷಾ ಗೆ ಯಾವತ್ತೂ ಹೊಟ್ಟೆ ತುಂಬಾ ಊಟ ಕೊಡದಿರುವುದಕ್ಕೆ ಬಹು ಮುಖ್ಯ ಕಾರಣವೆಂದರೆ ತೀರಾ ಹೊಟ್ಟೆ ತುಂಬಾ ತಿಂದು ಹುಲಿ ಮೈಬಿಳೆಸಿಕೊಂಡರೆ ಸರ್ಕಸ್ಸಿನಲ್ಲಿನ  ಚಮತ್ಕಾರಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂಬುದು.. ಅದರಲ್ಲೂ ಹುಲಿಗಿರುವ ಚಮತ್ಕಾರವೆಂದರೆ ಬೆಂಕಿಯ ಉಂಗುರದಿಂದ ಆ ಕಡೆಯಿಂದ ಈ ಕಡೆಗೆ,ಈ ಕಡೆಯಿಂದ  ಆ ಕಡೆಗೆ ಹಾರುವುದು. ಅದು ಸರಾಗವಾಗಿ ಮತ್ತು ಚುರುಕಾಗಿ ಹಾರಬೇಕೆಂದರೆ ಅದು ಸಣ್ಣದಿದ್ದಾಗಷ್ಟೇ ಸಾಧ್ಯ.ಸರ್ಕಸಿನ ಆಟ ಮುಗಿದ ಮೇಲೆ ಇಡೀ ಸರ್ಕಸ್ ಕುಟುಂಬ ಒಂದೆಡೆ ಸೇರಿ ತಮಗೆ ಖುಷಿಕೊಡುವ ಕಾರ್ಯಗಳಲ್ಲಿ ತೊಡಗಿಕೊಂಡರೆ ಪ್ರಾಣಿ ಪಕ್ಷಿಗಳಿಗೆ ತೂಕಡಿಸುವುದಷ್ಟೇ  ಕೆಲಸ.
ಆವತ್ತು ಎಂದಿನಂತೆ ಸರ್ಕಸ್  ಇನ್ನೂ ಪ್ರಾರಂಭವಾಗಿರಲಿಲ್ಲ. ಮದ್ಯಾಹ್ನದ ಸಮಯ.ಎಲ್ಲರೂ ತಮ್ಮ ತಮ್ಮ ಗುಡಾರಗಳಲ್ಲಿ ತಮ್ಮ ಚಮತ್ಕಾರದ ತರಬೇತಿಗಳಲ್ಲಿದ್ದರು..ಎಲ್ಲಾ ಕಡೆ ಒಮ್ಮೆ ಇಣುಕಿ ಹಾಕಿದ ಮುದುಕ ಯಜಮಾನ, ಪ್ರಾಣಿಗಳಿದ್ದ ಕಡೆಗೊಂದು ಸುತ್ತು ಹಾಕಿ ತನ್ನ ಗುಡಾರದ ಕಡೆ ಹೊರಟಿದ್ದ. ದೂರದಲ್ಲಿ ಯಾವುದೋ ಪ್ರಾಣಿ ಕೂಗಿದ, ಒಂದಷ್ಟು ಗೂಬೆಗಳ ಸದ್ದು ಬಿಟ್ಟರೆ ಮತ್ಯಾವ ಸದ್ದೂ ಇರಲಿಲ್ಲ. ಸರ್ಕಸ್ ಆಟಕ್ಕೆ ಮಾಲೀಕನಿಗೆ ಕೊಟ್ಟಿದ್ದ ಜಾಗ ಊರಾಚಿನ, ಕಾಡಿಗೆ ಹತ್ತಿರವಾದ ಜಾಗವಾದ್ದರಿಂದ ಮೊಲ, ಹಾವುಗಳು ಎಗ್ಗಿಲ್ಲದೆ ನೋಡಲು ಸಿಗುತ್ತಿದ್ದವು.ಆದರೆ ಬಹದ್ದೂರ್ ಷಾ ಹುಲಿಯ ಬೋನಿನ ಬಾಗಿಲ ಚಿಲಕ ಸಡಿಲವಾದದ್ದನ್ನು ಮಾಲೀಕ ಆವತ್ತು ಗಮನಿಸಿರಲಿಲ್ಲ.
ಅದಾದ ಒಂದು ಘಂಟೆಯ ನಂತರ ಮಾಲೀಕನ ಹೆಂಡತಿಗೆ ಏನೋ ಸದ್ದಾಯಿತು. ಯಾವುದೋ ಗುರ್ರ್ ಗುರ್ರ್ ಎನುವ ಸದ್ದು ಕೇಳಿಬಂದಿತಾದರೋ ದಿನ ಪ್ರಾಣಿ ಪಕ್ಷಿಗಳ ಜೊತೆ ಇದ್ದದ್ದರಿಂದ ಅದೇನೂ ವಿಶೇಷ ಎನಿಸಿರಲಿಲ್ಲ. ಹಿಂದಿನಿಂದ ಗಂಡನ ಕೂಗಿನ ಶಬ್ದ ಕೇಳಿಸಿದಾಗ ಆಕೆಗೆ ಭಯವಾಗಿ ಎದು ಹೊರಗಡೆ ಓಡಿ ಬಂದವಳು ಅಲ್ಲಿನ ದೃಶ್ಯ ಕಂಡು ಕಿಟಾರನೆ ಕಿರುಚಿ ಮೂರ್ಛೆಹೋಗಿದ್ದಳು. ಅಲ್ಲಿತ್ತು ಮಾಲೀಕನ ಹೆಣ. ಓಡಿ ಬಂದು ಕಿರುಚಿ ಕುಸಿದು ಬೀಳುತ್ತಿದ್ದ ಮಾಲೀಕನ ಹೆಂಡತಿಯನ್ನೇ ನೋಡುತ್ತಾ ರಾಜ ಗಾಂಭೀರ್ಯದಿಂದ ಕಾಡಿನ ಕಡೆಗೆ ಹೊರಟು ಹೋಗಿತ್ತು ಷಾ ಬಹದ್ದೂರ್. ಮಾಲೀಕನ ಹೆಣ ಅದೆಷ್ಟು ವಿರೂಪವಾಗಿತ್ತೆಂದರೆ ಬರೀ ಮಾಂಸ, ರಕ್ತಗಳ ಮಿಶ್ರಣ ಮುದ್ದೆ ಬಿಟ್ಟರೆ ಅದು ಮಾಲೀಕನದೆ ಹೆಣ ಎಂಬುದಕ್ಕೆ ಬೇರ್ಯಾವ ಪುರಾವೆ ಇರಲಿಲ್ಲ.
ಅದಾದ ನಂತರ ಆ ಊರಿಗೆ ಅಂಟಿಕೊಂಡೇ ಇದ್ದ ಕಾಡಿನಲ್ಲಿ ಒಂದು ರೀತಿಯ ಭಯದ ವಾತಾವರಣ ಶುರುವಾಗಿತ್ತು. ಆ ಕಾಡಿನಲ್ಲಿ ಮರದ ದಿಮ್ಮಿಗಳನ್ನು ಕತ್ತರಿಸುವ, ಸಾಗಿಸುವ ಕೆಲಸ ನಡೆಯುತ್ತಿದ್ದರಿಂದ ಕೆಲಸಗಾರರು ಅಲ್ಲಲ್ಲಿ ಬೀಡು ಬಿಟ್ಟಿದ್ದರು. ಈ ಒಂದು ಘಟನೆ ಅವರನ್ನು ಅಧೀರರನ್ನಾಗಿ ಮಾಡಿತ್ತು.ಆದರೆ ಅಲ್ಲಿನ ಕೆಲಸಗಾರನನ್ನು ಅದೇ ರೀತಿ ಬೇಟೆಯಾಡಿದ ನಂತರ ನರಹಂತಕ ಬಹದ್ದೂರ್ ಷಾ ಬಗ್ಗೆ ಎಲ್ಲರಲ್ಲೂ ಭಯ ಮೂಡಿದ್ದಷ್ಟೇ ಅಲ್ಲ ಅದೆಷ್ಟು ಅಪಾಯಕಾರಿ ಎಂಬುದರ ಅರಿವೂ ಆಯಿತು. ಅದಲ್ಲದೆ ಆ ಕೆಲಸಗಾರನನ್ನು ಕೊಂದ ಹುಲಿ ಹೆಣವನ್ನು ಅಲ್ಲೇ ಬಿಟ್ಟುಹೋಗಿದ್ದದ್ದು ಅ ಹೆಣದ ಸ್ವರೂಪ ಇಡೀ ದೃಶ್ಯವನ್ನು ಭೀಭತ್ಸಕರವನ್ನಾಗಿಸಿತ್ತು. ಹೆಣವನ್ನ ಹೊತ್ತೊಯ್ಯುವಷ್ಟು ಹುಲಿ ಇನ್ನೂ ಶಕ್ತಿಯುತವಾಗಿರಲಿಲ್ಲ. ಆದರೆ ನರಮಾಂಸದ ರುಚಿ ಮಾತ್ರ ಷಾ ಬಹದೂರಿಗೆ ಹತ್ತಿತ್ತು.
ಈಗ ಅಲ್ಲಿನ ಕೆಲಸಗಾರರಿಗೆ ರಾತ್ರಿಗಳೆಂದರೆ ಯಮನ ಸಾನಿಧ್ಯದಂತೆ ಭಾಸವಾಗತೊಡಗಿತ್ತು. ಎಲ್ಲರೂ ಒಂದೆಡೆ ಸೇರಿ ತಮ್ಮ ಗುಡಿಸಲುಗಳ ಸುತ್ತ ಬೆಂಕಿ ಹಚ್ಚಲು ನಿರ್ಧರಿಸಿದರು. ಸಾಮಾನ್ಯವಾಗಿ ಯಾವುದೇ ಪ್ರಾಣಿಗಳು ಬೆಂಕಿಗೆ ಹೆದರುವುದು ಸಹಜ. ಆದರೆ ಬಹದ್ದೂರ್ ಷಾ ಉರಿಯುವ ಬೆಂಕಿಯ ಉಂಗುರದೊಳಗಿಂದ ಹಾರಿ ಅಭ್ಯಾಸವಿದ್ದದ್ದು ಅವರಿಗೇನು ಗೊತ್ತಿತ್ತು.  ಇದಾದ ಐದು ದಿನದ ನಂತರ ಬಹದ್ದೂರ್ ಷಾ ಉರಿಯುವ ಬೆಂಕಿಯ ನಡುವೆಯೇ ಹಾರಿ ಒಬ್ಬನನ್ನು ಕೊಂದು ಹೆಣ ಹೊತ್ತೊಯ್ಯುವ ವಿಫಲ ಪ್ರಯತ್ನ ನಡೆಸಿದಾಗ ಜನ ಹೌಹಾರಿದ್ದರು. ಬೆಂಕಿಗೂ ಹೆದರದ ನರಹಂತಕನನ್ನು ಹೆದರಿಸುವುದಾದರೂ ಹೇಗೆ?
ನಂತರ ನರಹಂತಕ ಬಹದ್ದೂರ್ ಷಾ ನದ್ದು ನರಮೇಧ ಎಂದೆ ಹೇಳಬಹುದು. ರಾತ್ರಿಯಾಯಿತೆಂದರೆ ಹೊರಗೋಗಿದ್ದವರು ಮನೆಗೆ ಬರಲಿಲ್ಲವೆಂದರೆ ಷಾ ಬಹದ್ದೂರ್ ಗೆ ಆಹುತಿಯಾಗಿದ್ದಾರೆಂದು ಜನ ನಿಸ್ಸಂದೇಹವಾಗಿ ಹೇಳುತ್ತಿದ್ದರು. ಹಗಲು, ರಾತ್ರಿ, ಸಂಜೆ ಹೀಗೆ ಎಲ್ಲೆಂದರಲ್ಲಿ ಷಾ ಬಹದ್ದೂರ್ ತನ್ನ ಬೇಟೆಯಾಡುತ್ತಿತ್ತು. ಈಗ ಷಾ ಬಹದ್ದೂರನನ್ನು ಬೇಟೆಯಾಡಲು ಶಕ್ತ ಶಿಕಾರಿವೀರಣ ಅವಶ್ಯಕತೆ ಬಂದೆ ಬಂದಿತು. ಶಿಕಾರಿಯಲ್ಲಿ ಧೈರ್ಯ, ತಾಳ್ಮೆ, ಸಾಹಸದ ಜೊತೆಗೆ ಅದೃಷ್ಟವೂ ಪಾತ್ರ ವಹಿಸುತ್ತದೆ. ದಿನಗಟ್ಟಲೆ ಮೈಯೆಲ್ಲಾ ಕಣ್ಣಾಗಿ ಕಾಯುತ್ತ ಕುಳಿತುಕೊಳ್ಳಬೇಕಾಗುತ್ತದೆ. ಅಂತಹ ಧೀರನೊಬ್ಬ ಬೇಕೇ ಬೇಕು. ಯಾಕೆಂದರೆ ಒಮ್ಮೆ ನರಮಾಂಸದ ರುಚಿ ನೋಡಿದ ಹುಲಿ ಮನುಷ್ಯರ ಪಾಲಿಗೆ ಅಪಾಯಕಾರಿ.
ಈ ವಿಷಯ ಶರವೇಗದಲ್ಲಿ ಊರಲ್ಲೆಲ್ಲಾ ಪಸರಿಸಿತು. ಕಾಡಲ್ಲಿ ನೆಲೆಸಿದ್ದ ಕೆಲಸಗಾರರು ಜಾಗ ಬಿಟ್ಟು ಬೇರೆಡೆಗೆ ವಲಸೆ ಹೋಗಲು ನಿರ್ಧಾರವನ್ನೂ ಮಾಡಿದರು.ಇದೆಲ್ಲದಕ್ಕೂ ಕಾರಣನಾಗಿದ್ದ ಷಾ ಬಹದ್ದೂರ್ ಮಾತ್ರ ತನ್ನ ನರಮೆಧವನ್ನು ಯಾವ ಎಗ್ಗಿಸಿಗ್ಗಿಲ್ಲದೆ ನಡೆಸಿಕೊಂಡೇ ಇತ್ತು.ಆದರೆ ಎಲ್ಲದಕ್ಕೂ ಎಲ್ಲರಿಗೂ ಒಂದು ಅಂತ್ಯ ಇರಲೇಬೇಕಲ್ಲವೇ. ಹಾಗೆ ಷಾ ಬಹದ್ದೂರನ ಅಟ್ಟಹಾಸಕ್ಕೆ ಅಂತ್ಯಕಾಲ ಕೂಡಿ ಬಂದದ್ದು ಒಬ್ಬ ಹೆಂಗಸಿನ ರೂಪದಲ್ಲಿ.
ಶಿಕಾರಿ ಕುರಿತಾದ ಕಥೆಗಳ ಪರಿಚಯವಾದದ್ದು ಮೊದಲು ನನಗೆ ಕೆ.ಪಿ.ಪೂರ್ಣ ಚಂದ್ರ ತೇಜಸ್ವಿಯವರಿಂದ.ಅವರ ಜಿಮ ಕಾರ್ಬೆಟ್, ಕೆನೆತ್ ಅಂಡರ್ಸನ್ರ ಕಥೆಗಳಿಂದಾಗಿ. ಬಯಲು ಸೀಮೆಯಲ್ಲಿ ಹುಟ್ಟಿದ ನನ್ನಂಥವರಿಗೆ ಶಿಕಾರಿ ಮುಂತಾದವುಗಳೆಲ್ಲಾ ಪುಸ್ತಕದ ಮೂಲಕವೇ ಪರಿಚಯವಾಗುವುದೇ ಹೊರತು ಸ್ವಾನುಭವದಿಂದ ಸಾಧ್ಯವಿಲ್ಲ. ಯಾರೋ ಮೊಲ ಹಿಡಿಯುವವರೇ ದೊಡ್ಡ ಬೇಟೆಗಾರರು ಎನಿಸಿತ್ತು. ಆದರೆ ರುದ್ರಪ್ರಯಾಗದ ನರಭಕ್ಷಕ, ಕೆನೆತ್ ಅಂಡರ್ಸನ್ ರವರ ಕಥೆಗಳನ್ನ ಓದಿದಾಗ ಆದ ರೋಮಾಂಚನ ಥ್ರಿಲ್ಲರ್ ಕಾದಂಬರಿ ಓದಿದಷ್ಟೇ ಆಗಿತ್ತು. ನಿನ್ನೆ ಹ್ಯೂ ಗಾಂಜರ್ ಬರೆದ ದಿ ಸ್ಕಾರ್ಲೆಟ್ ಟೈಗರ್ ಅಂದ ಅದರ್ ಸ್ಟೋರೀಸ್ ಓದಿದಾಗ ಮತ್ತೆ ಅದೇ ಅನುಭವವಾಯಿತು.ಹ್ಯೂ ಮೂಲತಹ ಪ್ರವಾಸಿಗ.ಅದಕ್ಕೂ ಮುನ್ನ ಭಾರತೀಯ ನೌಕಾಪಡೆಯಲ್ಲಿ ಕೆಲಸದಲ್ಲಿದ್ದ. ಆನಂತರ ವಕೀಲನಾಗಿ, ಶಿಪ್ಪಿಂಗ್ ಕಂಪನಿಯೊಂದರಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸಿದ್ದ.ವರ್ಷದಲ್ಲಿ ಆರು ತಿಂಗಳು ಪ್ರವಾಸದಲ್ಲಿ ಕಳೆಯುತ್ತಿದ್ದ ಗಾಂಜರ್,ಉಳಿದ ದಿನಗಳನ್ನ ಹಿಮಾಲಯದಲ್ಲಿ ಕಳೆಯುತ್ತಿದ್ದ. ಇಲ್ಲಿ ರುವ ಕಥೆಗಳು ಶಿಕಾರಿಗಳದ್ದೆ ಆದರೂ ಯಾವುದು ಸ್ವಾನುಭಾವವಲ್ಲ. ಹಾಗೆ ಇರುವ ಏಳು ಕಥೆಗಳೂ ಎಲ್ಲೋ ಒಂದು ಕಡೆ ಯಾರೋ ಒಂದು ನರಹಂತಕ ಹುಲಿಯನ್ನೂ ಚಿರತೆಯನ್ನೋ ಶಿಕಾರಿಯಾಡಿದ ಕಥೆಯೂ ಅಲ್ಲ. ಬದಲಿಗೆ ಶಿಕಾರಿಯ ಸ್ವರೂಪ, ಅದರ ಹಿನ್ನೆಲೆ ಮತ್ತು ಅದು ನಡೆದ ರೀತಿಗಳನ್ನು ವಿವರಿಸುವ ಆ ಮೂಲಕ ರೋಮಾಂಚಕ ನೈಜ ಘಟನೆಗಳನ್ನ ತೆರೆದಿಡುವ ಪ್ರಯತ್ನ. ಒಮ್ಮೆ ಓದಿ.

Thursday, January 17, 2013

ಜಾಂಗೋ ಬಂಧಮುಕ್ತ.:ಆಸ್ಕರ್ ಕಣದ ಚಿತ್ರಗಳು.

ಆಗಿನ್ನು ಅಮೇರಿಕಾದಲ್ಲಿ ಸಿವಿಲ್ ವಾರ್ ಶುರುವಾಗಿರಲಿಲ್ಲ. ವರ್ಣಬೇಧ ನೀತಿ ಮತ್ತು ಗುಲಾಮಗಿರಿ ಪದ್ದತಿಗಳು ಜೀವಂತವಾಗಿದ್ದ ಕಾಲವದು.ಬರೀ ಮೈ ಬಣ್ಣ ಮಾತ್ರದಿಂದಾಗಿ ಒಂದಿಡೀ ಜನಾಂಗವನ್ನೇ ಗುಲಾಮರು ಎಂದು ಪರಿಗಣಿಸಿ, ಅವರುಗಳನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಅಮಾನುಷ ಪದ್ಧತಿ ಉತ್ತುಂಗದಲ್ಲಿತ್ತು.ಆ ಕಾಲದಲ್ಲಿ ಪರಸ್ಪರ ಅವರನ್ನು ಮಾರಾಟಮಾಡುವ, ಅವರ ಕೈ ಕಾಲಿಗೆ ಸಂಕೋಲೆ ಹಾಕಿ ಕೆಲಸ ಮಾಡಿಕೊಳ್ಳುವುದನ್ನು ಬಿಳಿಯರು ತಮ್ಮ ಜನ್ಮ ಸಿದ್ಧ ಹಕ್ಕು ಎಂದೆ ಸ್ವಘೋಷಿತ ನಿಯಮವನ್ನು ಪಾಲಿಸುತ್ತಿದ್ದರಲ್ಲದೆ , ಕರಿಯರು ತಮ್ಮ ಸೇವೆ ಮಾಡುವುದಕ್ಕಾಗಿಯೇ ಹುಟ್ಟಿದ್ದಾರೆ ಎಂದೇ ನಂಬಿದ್ದರು. ಅವರಿಗೆ ಅಂದರೆ ಕರಿಯರಿಗೆ ಮನುಷ್ಯರಿಗಿರುವ ಯಾವ ಹಕ್ಕುಗಳು, ಸವಲತ್ತುಗಳೂ ಇರಲಿಲ್ಲ. ಸ್ಪೆಕ್ ಸಹೋದರರು ಇಂತಹ ಕರಿಯ ಗುಲಾಮರನ್ನು ಕೊಳ್ಳುವ ಮಾರುವ ಕಾರ್ಯ ನಿರ್ವಹಿಸುತ್ತಿದ್ದ ಖದೀಮರು. ಜಾಂಗೋ ಸೇರಿದಂತೆ ಹಲವಾರು ಜನರನ್ನು ಸಂಕೋಲೆ ಹಾಕಿಕೊಂಡು ನಡುಗುವ ಛಳಿಯಲ್ಲಿ ಬರಿಗಾಲಿನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಅವರಿಗೆ ಎದುರಾಗುವುದು ಡಾ.ಕಿಂಗ್ ಶುಲ್ಜ್. ಜರ್ಮನ್ ಮೂಲದ ಕಿಂಗ್ ತನ್ನನ್ನು ತಾನು ದಂತವೈದ್ಯ ಎಂದೆ ಹೇಳಿಕೊಳ್ಳುತ್ತಾನೆ. ಅಪ್ರತಿಮ ಮಾತುಗಾರ. ಮತ್ತು ಅಷ್ಟೇ ನಿಖರವಾದ ಗುರಿಕಾರ ಕೂಡ. ಯಾವ ಸಂದರ್ಭದಲ್ಲಿ ಏನು ಮಾಡುತ್ತಾನೆ ಯಾವುದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಆ ಬ್ರಹ್ಮನಿಂದಲೂ ಊಹಿಸಲಾಗದು.
ಪೆಕ್ ಸಹೋದರರ ಜೊತೆ ಮಾತನಾಡುವ ಡಾಕ್ಟರ್ ತನಗೊಬ್ಬ ಕರಿಯನ ಅವಶ್ಯಕತೆ ಇದೆ, ಅದಕ್ಕಾಗಿ ನಾನು ಎಷ್ಟು ಬೇಕಾದರೂ ಹಣಕೊಡಲು ಸಿದ್ಧನಾಗಿದ್ದೇನೆ ಎಂದು ಹೇಳಿ ಅವರಲ್ಲಿ ಆಸೆ ಹುಟ್ಟಿಸುತ್ತಾನೆ. ಆದರೆ ತನಗ್ಯಾರು ಬೇಕೋ ಅವರನ್ನು ನಾನೇ ಪರೀಕ್ಷಿಸಿ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಆಯ್ಕೆ ಮಾಡಿಕೊಳ್ಳುತ್ತಿದ್ದಾಗ ಜಾಂಗೋ ತನಗೆ ಸರಿಯಾದ ವ್ಯಕ್ತಿ ಎಂದೆ ನಿರ್ಧರಿಸುತ್ತಾನೆ. ಆದರೆ ಪೆಕ್ ಸಹೋದರರಿಗೆ ಡಾಕ್ಟರ್ ಮೇಲೆ ಅನುಮಾನ ಬಂದು ಅವನೆಡೆಗೆ ಬಂದೂಕು ತಿರುಗಿಸಿದಾಗ ಕ್ಷಣಮಾತ್ರದಲ್ಲಿ ಸಹೋದರರಲ್ಲಿ ಒಬ್ಬನನ್ನು ಕೊಂದು ಮತ್ತೊಬ್ಬನನ್ನು ಗಾಯಗೊಳಿಸುತ್ತಾನೆ. ನಂತರ ಜಾಂಗೋನನ್ನು ಕರೆದುಕೊಂಡು ಉಳಿದೆಲ್ಲರನ್ನೂ ಪೆಕ್ ನ ಬಂಧನದಿಂದ ಬಿಡಿಸುತ್ತಾನೆ.
ಜಾಂಗೋನ ಕಾಲಿನಲ್ಲಿದ್ದ ಸರಪಳಿ ಬಿಚ್ಚುವ ಮೂಲಕ ಅವನನ್ನು ಸ್ವತಂತ್ರ ವ್ಯಕ್ತಿ ಎಂದು ಘೋಷಿಸುತ್ತಾನೆ.
ಹಾಗೆ ಜಾಂಗೋ ಬಂಧಮುಕ್ತನಾಗುತ್ತಾನೆ.
 ಜಾಂಗೋನನ್ನು ಬಂಧ ಮುಕ್ತನ್ನಾಗಿಸಿದ್ದರ ಹಿಂದೆ  ಡಾಕ್ಟರ್ ಕಿಂಗನಿಗೆ ಬೇರೆಯದೇ ಆದ ಉದ್ದೇಶವಿದೆ. ಹಾಗೆ ಸ್ವತಂತ್ರನಾದ ಜಾಂಗೋನಿಗೂ ಅವನದೇ ಆದ ಒಂದು ಘನಕೆಲಸವಿದೆ. ಇಬ್ಬರು ಸೇರಿ ತಮ್ಮ ಗುರಿಯೆಡೆಗೆ ಹೆಜ್ಜೆ ಹಾಕುತ್ತಾರೆ. ಮುಂದೆ ಅವರ ಗುರಿ ನೆರೆವೇರಿಸಿಕೊಳ್ಳುವಲ್ಲಿನ ಪಯಣವಿದೆಯಲ್ಲ..ಅದು ರೋಚಕವೂ ಹೌದು ಕುತೂಹಲಕಾರಿಯೂ ಹೌದು. ಅದನ್ನು ನೋಡಿ ಸವಿಯಲಷ್ಟೇ ಸಾಧ್ಯ.
ಅತ್ಯುತ್ತಮ ಚಿತ್ರಕಥೆಗಾಗಿ ತನ್ನದೇ ನಿರ್ದೇಶನದ ಪಲ್ಪ್ ಪಿಕ್ಶನ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ನಿರ್ದೇಶಕ, ನಟ, ಛಾಯಾಗ್ರಾಹಕ,ಸಂಕಲನಗಾರ, ನಿರ್ಮಾಪಕ ಕ್ವೆ೦ಟಿನ್ ಟರಂಟಿನೋ ವಿಭಿನ್ನವಾದ ಚಿತ್ರಕರ್ಮಿ. ವಿಶಿಷ್ಟ ನಿರೂಪಣೆಯಿಂದ ವಿಚಿತ್ರವಾದ ಕಥೆಯಿಂದಾಗಿ ಚಿತ್ರರಂಗದಲ್ಲಿ ತನ್ನದೇ ಚಾಪು ಮೂಡಿಸಿರುವ ಪ್ರತಿಭಾವಂತ.ಕಿಲ್ ಬಿಲ್ 1,2., ಪಲ್ಪ್ ಪಿಕ್ಷನ್, ಇನ್ಗ್ಲೋರಿಯಸ್ ಬಾಸ್ಟರ್ಡ್ಸ್, ಜಾಕಿ ಬ್ರೌನ್, ರೆಸಾರ್ವೈರ್ ಡಾಗ್ಸ್ ಮುಂತಾದವುಗಳು ಕ್ವೆ೦ಟಿನ್ ಟರಂಟಿನೋನ ಜನಪ್ರಿಯ ಚಿತ್ರಗಳು.
ಈ ಸಾರಿಯ ಆಸ್ಕರ್ ಕಣದಲ್ಲಿ ಐದು ವಿಭಾಗಳಲ್ಲಿ ನಾಮಾಂಕಿತ ಗೊಂಡಿರುವ ಜಾಂಗೋ ಅನ್ ಚೈನೆಡ್ ಒಂದು ಮನರಂಜನಾತ್ಮಕ ಚಿತ್ರ. ಚಿತ್ರದ ತಿರುಳಲ್ಲಿ ಪ್ರತಿಕಾರದ ಎಳೆಯಿದ್ದರೂ ಚಿತ್ರ ಸೆಳೆಯುವುದು ಅದರ ನಿರ್ದೆಶನದಿಂದಾಗಿ. ಹಳೆಕಾಲದ ಚಿತ್ರದ ನಿರೂಪಣೆ ಕೂಡ ಹಳೆಯದರಂತೆಯೇ ಇದ್ದು, ಅದಕ್ಕೆ ತಕ್ಕುದಾದ ಹಿನ್ನೆಲೆ ಸಂಗೀತವಿರುವುದು ನಮ್ಮನ್ನು ಬೇರೆಯದೇ ರಂಜನೀಯ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಚಿತ್ರದ ಪ್ರಮುಖ ಆಕರ್ಷಣೆ ಸಂಭಾಷಣೆ. ಅಲ್ಲಲ್ಲಿ ನೆಗೆಯುಕ್ಕಿಸುವ ಸಂಭಾಷಣೆಗಳು ಮತ್ತು ಪಾತ್ರಧಾರಿಗಳು ಅದನ್ನು ಹೇಳುವ ಶೈಲಿ ನೋಡುಗನಿಗೆ ಮಜಾ ಕೊಡುತ್ತದೆ. ಅದರಲ್ಲೂ ಡಾ ಕಿಂಗ್  ಆಗಿ ಕ್ರಿಸ್ತೋಪ್ಹ್ ವಾಲ್ತಜ್ ಅಭಿನಯವಂತೂ ಸೂಪರ್. ಹಾಗೆ ಜಾಂಗೋ ಆಗಿ ಜೆಮಿ ಫಾಕ್ಸ್ನ ಜೊತೆಗೆ ಲಿಯೋನಾರ್ಡೋ ದಿ ಕಾರ್ಪಿಯೋ, ಸ್ಯಾಮುವೆಲ್ ಜಾಕ್ಸನ್ ಮುಂತಾದ ಅದ್ಭುತ ನಟರ ಬಳಗವೇ ಇದೆ.
ಸರಳವಾದ ನೆರವಾದ ಕಥೆ, ಅದ್ಭುತ ನಟರು ಅತ್ಯುತ್ತಮ ಹಿನ್ನೆಲೆ ಸಂಗೀತವಿರುವ ಜಾಂಗೋ ಅತ್ಯುತ್ತಮ ಮನರಂಜನೆ ಕೊಡುವ ಚಿತ್ರ.ನೋಡಿ ನಕ್ಕು ಆನಂದಿಸಬಹುದಾದ ಈ ಚಿತ್ರ ಯಾವ ಯಾವ ವಿಭಾಗದಲ್ಲಿ ಆಸ್ಕರ್ ಗಳಿಸಬಹುದೆನ್ನುವ ಕುತೂಹಲ ನನಗಿದೆ.

Wednesday, January 16, 2013

ಝೀರೋ ಡಾರ್ಕ್ ಥರ್ಟಿ-ಆಸ್ಕರ್ ಕಣದ ಚಿತ್ರಗಳು

2001 ರಂದು ನಡೆದ ಅವಳಿ ಗಗನ ಚುಂಬಿ ಕಟ್ಟಡಗಳ ನೆಲಸಮದಿಂದಾಗಿ ಇಡೀ ಅಮೆರಿಕ ಬೆಚ್ಚಿಬಿದ್ದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.ಸಾವಿರಾರು ಜನರನ್ನು ಬಲಿತೆಗೆದುಕೊಂಡ ಆತ್ಮಾಹುತಿ ದಾಳಿ ಒಸಾಮಾ ಬಿನ್ ಲಾಡನ್  ನ ಕರಾಳ ಮುಖದ ಪರಿಚಯ ಮಾಡಿಕೊಟ್ಟದ್ದು ನಿಜ. ಆನಂತರ ಅಮೇರಿಕಾ ನಿದ್ರಿಸಲಿಲ್ಲ. ಬಿನ್ ಲಾಡನ್ ಮತ್ತು ಭಯೋತ್ಪಾದನೆಯ ಬೇರುಗಳನ್ನು ಹುಡುಕಿ ಹುಡುಕಿ ಬುಡ ಸಮೇತ ಕಿತ್ತುಹಾಕುವ ನಿರ್ಧಾರ ಕೈಗೊಂಡು ಅದನ್ನು ನೆರವೇರಿಸಿಕೊಂಡ ಕಥೆಯ ವಿವರ ಸುಮಾರು ಜನರಿಗೆ ತಿಳಿದಿರಲಿಕ್ಕಿಲ್ಲ. ಅದಾದ ನಂತರದ ಎಷ್ಟೋ ವರ್ಷದ ನಂತರ ಅಂದರೆ ಹತ್ತು ವರ್ಷದ ನಂತರ ಬಿನ್ ಲಾಡನ್ ನನ್ನು ಪಾಕಿಸ್ತಾನದ ಅಡಗುಮನೆಯೊಂದರಲ್ಲಿ ಕೊಲೆ ಮಾಡಿ ಅವನ ಶವವನ್ನು ಸಮುದ್ರಕ್ಕೆ ಬೀಸಾಕಿದ ಸುದ್ದಿ ಬಂತಷ್ಟೇ. 
ಅದು ನಡೆದುದರ ಬಗ್ಗೆ ಸಾಕ್ಷ್ಯಚಿತ್ರವೊಂದು ಇದ್ದರೂ ಅದರಲ್ಲಿ ಅಂತಹ ಹೇಳಿಕೊಳ್ಳುವಂತಹ ಆಧಾರಗಳಿಲ್ಲ. ಸಾಕ್ಷ್ಯಗಳಿಲ್ಲ. 
 ಕ್ಯಾಥರಿನ್ ಬೀಗ್ಲೋ  ನಿರ್ದೇಶನದಲ್ಲಿ ಝೀರೋ ಡಾರ್ಕ್ ಥರ್ಟಿ ಚಿತ್ರದ ಕಥೆಯ ವಸ್ತು ಬಿನ್ ಲಾಡನ್ ನ ಬೇಟೆಯ ಕುರಿತಾದದ್ದು. ಅಮೆರಿಕಾದಲ್ಲಿ ನಡೆದ ಬಾಂಬ್ ಸ್ಫೋಟದ ನಂತರ ಅವನನ್ನು ಹುಡುಕಿಕೊಂಡು ಹೋಗುವ ಅಮೆರಿಕಾದ ಇಂಟೆಲಿಜನ್ಸ್ ಪಡೆಯ ಕಾರ್ಯ ವೈಖರಿಯ ವಿವರಗಳನ್ನು ಎಳೆಎಳೆಯಾಗಿ ಬಿಡಿಸುವ ಚಿತ್ರ ನಿಜಕ್ಕೂ ತುಂಬಾ ಪರಿಣಾಮಕಾರಿಯಾಗಿದೆ.
ಇಡೀ ಚಿತ್ರ ಸಾಕ್ಷ್ಯ ಚಿತ್ರದ ಮಾದರಿಯಲ್ಲೇ ಇದೆ. ದೃಶಿಕೆಯ ಸಂಯೋಜನೆ, ದೃಶ್ಯದ ಚಿತ್ರೀಕರಣ ಎಲ್ಲವೂ ಯಾರೋ ಕೆಮೆರಾ ತೆಗೆದುಕೊಂಡು ನಡೆಯುತ್ತಿರುವ ದೃಶ್ಯಾವಳಿಯನ್ನು ನಿಜವಾಗಿಯೂ ಚಿತ್ರೀಕರಿಸುತ್ತಿದ್ದಾರೇನೋ ಎನ್ನುವ ಭಾವ ಮೂಡಿಸುತ್ತದೆ. ಅಷ್ಟೇ ಅಲ್ಲ. ಚಿತ್ರದ ಪಾತ್ರಧಾರಿಗಳೂ ಅಷ್ಟೇ. ತಾವೇ ಪಾತ್ರದಲ್ಲಿ ಲೀನವಾಗಿ ಅಭಿನಯಿಸಿದ್ದಾರೆ.
ಚಿತ್ರದ ಪ್ರಾರಂಭ ಭಯೋತ್ಪಾದಕರ ಸಹಾಯಕನನನೊಬ್ಬನನ್ನು ಹಿಂಸೆ ಕೊಟ್ಟು ಬಾಯಿ ಬಿಡಿಸುವ ಚಿತ್ರಣದ ಮೂಲಕ ತೆರೆದುಕೊಳ್ಳುತ್ತದೆ.ಅದೆಷ್ಟು ಪರಿಣಾಮಕಾರಿಯಾಗಿದೆಯೆಂದರೆ 'ಇದೆಲ್ಲಾ ಮನುಷ್ಯರಿಗೆ ಬೇಕಾ ' ಎನಿಸುವಷ್ಟರ ಮಟ್ಟಿಗೆ ದೃಶ್ಯದ ಚಿತ್ರೀಕರಣವಿದೆ. ಅಲ್ಲಿಂದ ತೆರೆದುಕೊಳ್ಳುವ ಚಿತ್ರ ಮುಂದೆ ನಾಗಾಲೋಟದಲ್ಲಿ ಮುಂದುವರೆಯುತ್ತದೆ. ಅಲ್ಲಲ್ಲಿ ಬಾಂಬ್ ಸಿಡಿಯುವುದು, ಇತ್ತ ಭಯೋತ್ಪಾದಕರ ಪಟ್ಟಿ ಹಿಡಿದುಕೊಂಡು ಅವರ ಬೇಟೆಗೆ ಓಡಾಡುವುದು ಮುಂತಾದವುಗಳನ್ನು ತುಂಬಾ ಚೆನ್ನಾಗಿ ಬೆರೆಸುತ್ತಾ ಚಿತ್ರವನ್ನೂ ಕುತೂಹಲಕಾರಿಯಾಗಿ ಮಾಡಿದ್ದಾರೆ ನಿರ್ದೇಶಕಿ. ಬಾಂಬ್ ಸ್ಫೋಟಗಳನ್ನು ಎಲ್ಲೂ ನೇರವಾಗಿ ತೋರಿಸದ ನಿರ್ದೇಶಕರು ಅದನ್ನು ಸುದ್ಧಿವಾಹಿನಿಯ  ಪ್ರಸರಣದಲ್ಲಿ ನಿರೂಪಿಸುತ್ತಾರೆ. ಆದರೆ ಬೇಟೆಯ ಹಂತದಲ್ಲಿ ನಡೆಯುವ ಹೊಡೆದಾಟ ಗುಂಡಿನ ಚಕಮಕಿಯನ್ನು ತುಂಬಾ ನೈಜವಾಗಿ ನಿರೂಪಿಸಿದ್ದಾರೆ. ಪಾಕಿಸ್ತಾನ, ಆಫ್ಘಾನಿಸ್ತಾನ ಅಮೇರಿಕಾ ಮುಂತಾದ ಕಡೆಗಳಲ್ಲಿ ಹತ್ತು ವರ್ಷಗಳಲ್ಲಿ ನಡೆಯುವ ಕಥಾ ಹಂದರದ ಚಿತ್ರ ಮಹಿಳೆಯ ಅಂದರೆ ನಾಯಕಿಯ ದೃಷ್ಟಿಕೋನದ ಮೂಲಕ ನಿರೂಪಿತವಾಗಿದೆ.  ಅಮೆರಿಕಾದ ರಾಜಕೀಯ ಪರಿಸ್ಥಿತಿಯ ಗೊಂದಲವನ್ನೂ ಅಲ್ಲಲ್ಲಿ ಸೂಕ್ಷ್ಮವಾಗಿ ಬಿಚ್ಚಿಡುವ ಕಥೆ, ಸೈನಿಕರ ನಡವಳಿಕೆ, ಅವರ ಸೂಕ್ಷ್ಮತೆ ಕಾರ್ಯ ತತ್ಪರತೆ ಎಲ್ಲವನ್ನೂ ವಸ್ತುನಿಷ್ಠವಾಗಿ ವಿಶದಪಡಿಸುತ್ತದೆ.
ಮಧ್ಯರಾತ್ರಿ ಹನ್ನೆರೆಡುವರೆ ಘಂಟೆಯ ಸಮಯವನ್ನ ಸೇನಾ ಭಾಷೆಯಲ್ಲಿ ಝೀರೋ ಡಾರ್ಕ್ ಥರ್ಟಿ ಎನ್ನುತ್ತಾರೆ. ಅದೇ ರೀತಿ ಮಧ್ಯರಾತ್ರಿಯಲ್ಲಿ ನಡೆಯುವ ಬಿನ್ ಲಾಡನ್ ಹುಡುಕಾಟದ ಸೈನಿಕ ಕಾರ್ಯಾಚರಣೆ ತುಂಬಾ ರೋಚಕವಾಗಿ ಮೂಡಿಬಂದಿದೆ.
ಚಿತ್ರದ ಕೆಲವು ದೃಶ್ಯಗಳು ತುಂಬಾ ಪರಿಣಾಮಕಾರಿಯಾಗಿದೆ. ಅವುಗಳಲ್ಲಿ ಸೈನಿಕರು ಬಿನ್ ಲಾಡನ್ ನನ್ನು ಕೊಂದ ನಂತರವೂ ಆತನೋ ಇಲ್ಲವೋ ಎಂದು ಖಾತರಿ ಪಡಿಸಿಕೊಳ್ಳಲು ಒದ್ದಾಡುವುದು, ಬಿನ್ ಲಾಡನ್ ಅವಿತಿದ್ದಾನೆ ಎಂದು ಗೊತ್ತಾಗಿ, ಅದರ ವರದಿ ಸಲ್ಲಿಸಿದ ಮೇಲೂ ದಿನಗಟ್ಟಲೆ, ಘಂಟೆಗಟ್ಟಲೆ ತಿಂಗಳುಗಟ್ಟಲೇ ಅದರ ಬಗ್ಗೆ ಏನೂ ಕ್ರಮ ಕೈಗೊಳ್ಳದ ಸರ್ಕಾರದ ನಿಲುವಿನಿಂದಾಗಿ ನಾಯಕಿ ಹತಾಷಳಾಗುವುದು, ಅಂತಿಮ ಹಂತದ ಕಾರ್ಯಾಚರಣೆಯಲ್ಲಿ ವಿನಾಕಾರಣ ಗುಂಡಿನ ದಾಳಿಗೆ ಬಲಿಯಾಗುವ ಮಹಿಳೆಯರನ್ನು ಕಂಡು ಕಸವಿಸಿಯಾಗುವ ಸೈನಿಕರು ಮುಂತಾದವುಗಳು ನಿಜಕ್ಕೂ ಚಿತ್ರದ ಪ್ರಮುಖ ದೃಶ್ಯಗಳು ಎನ್ನಬಹುದು.
ತೀರಾ ವಸ್ತುನಿಷ್ಠವಾಗಿರುವ ಒಂದು ರೋಚಕ ಇತಿಹಾಸದ ಅವಗಾಹನೆ ಮತ್ತು ಒಂದು ಅತ್ಯುತ್ತಮ ಸಾಕ್ಷ್ಯಚಿತ್ರ ಮಾದರಿಯ ಥ್ರಿಲ್ಲರ್ ನೋಡುವ ಮನಸ್ಸಿರುವವರು ಒಮ್ಮೆ ನೋಡಲೇಬೇಕಾದ ಚಿತ್ರ ಝೀರೋ ಡಾರ್ಕ್ ಥರ್ಟಿ.
ಈ  ಚಿತ್ರ ಈ ಸಾರಿಯ ಆಸ್ಕರ್  ಕಣದಲ್ಲಿ ಅತ್ಯುತ್ತಮ ಚಿತ್ರ , ಅತ್ಯುತ್ತಮ ನಿರ್ದೇಶಕಿ, ಅತ್ಯುತ್ತಮ ನಟಿ ಸೇರಿದಂತೆ ಐದು ವಿಭಾಗಗಳಲ್ಲಿ ನಾಮಾಂಕಿತಗೊಂಡಿದೆ.
ಓದಿ ಮೆಚ್ಚಿದ್ದು:
ಬಿದಿರಿನ ದೊಡ್ಡ ಲೋಟದಲ್ಲಿ ರಾಗಿಯ ಕಾಳನ್ನು ತುಂಬಿಸಿ, ಬಿಸಿನೀರನ್ನು ಸೇರಿಸಿ, ಬಿದಿರಿನದ್ದೇ ಸ್ಟ್ರಾದಲ್ಲಿ ಹೀರುವ ನೋಟ "ಸಿಕ್ಕಿಂ"ನ ಲೋಕಲ್ ಬಾರ್-ಗಳಲ್ಲಿ ಕಾಣಸಿಗುತ್ತದೆ. ಲೋಟದಲ್ಲಿ ನೀರು ಖಾಲಿಯಾದರೆ ಇನ್ನಷ್ಟು ಬಿಸಿನೀರು ಸೇರಿಸಿ ಹತ್ತು ನಿಮಿಷ ಬಿಟ್ಟರೆ ಮತ್ತೆ "ಛಾಂಗ್" ಸಿದ್ಧ. ರಾಗಿ ಕಾಳಿಗೆ ಬಿಸಿನೀರು ಸೇರಿಸಿದರೆ ಅದ್ಯಾವ ಮಹಾನ್ ರುಚಿ ಎಂದು ನೀವು ಕೇಳಬಹುದು.  ನೋಡಲು ನಾವು ಮನೆಯಲ್ಲಿ ಬಳಸುವ ರಾಗಿಯ ಕಾಳಿನಂತಿದ್ದರೂ, ಈ ರಾಗಿಯ ಕಾಳಿನ ಹಿಂದಿನ ಕಥೆ ಬೇರೆಯೇ ಇದೆ.
ಈ ಬ್ಲಾಗ್ ನಲ್ಲಿ ಇನ್ನೂ ಸುಮಾರಿ ಇಂಟೆರೆಸ್ಟಿಂಗ್ ಎನಿಸುವ ಬರಹಗಳಿವೆ. ಹಾಗೆ ಚಿತ್ರಗಳೂ ಇವೆ.ಕಥೆ. ಲಲಿತ ಪ್ರಬಂಧ , ಹಳ್ಳಿಯ ಚಿತ್ರಣ, ವಿವಿಧ ಜನರ ರಾಜ್ಯಗಳಡೆಗಿನ ಪರಿಚಯ,ಹಕ್ಕಿ, ಪ್ರಾಣಿ, ಪಕ್ಷಿ.. ಹೀಗೆ ಸಾಕಷ್ಟು ವಿಷಯಗಳೇ ಅಡಕವಾಗಿವೆ. ನಾನಂತೂ ಇಲ್ಲಿರುವ ಚಂದನೆಯ ಫೋಟೋಗಳನ್ನು ಕಣ್ತುಂಬಿಕೊಂಡಿದ್ದೇನೆ.ನೀವು ಒಮ್ಮೆ ಬೇಟಿ ಕೊಡಿ. .ಅಂದಹಾಗೆ 
ಅನುಭವ ಮಂಟಪ  ಎಂಬುದು ಬ್ಲಾಗ್ ನ ಹೆಸರು

Monday, January 14, 2013

VFX-ಮಾಯಾಜಾಲದ ಬೆನ್ನುಬಿದ್ದು-3

1910 ರ ವೇಳೆಗಾಗಲೇ ಸಿನೆಮಾ ಒಂದು ದೊಡ್ಡ ಮಾಧ್ಯಮವಾಗಿ ಬೆಳೆದಿತ್ತಲ್ಲದೆ, ಸಿನೆಮಾದಿಂದ ಹಣವನ್ನ ಸಂಪಾದಿಸಬಹುದೆಂಬ ಸತ್ಯ  ಚಿತ್ರಕರ್ಮಿಗಳಿಗೆ ಅರ್ಥವಾಗಿತ್ತು. ಈ ಸಮಯದಲ್ಲಿ ರೆಕ್ಸ್ ನಂತಹ ಚಿಕ್ಕ ಚಿಕ್ಕ ಚಿತ್ರ ನಿರ್ಮಾಣ ಸಂಸ್ಥೆಗಳು ಹುಟ್ಟಿಕೊಂಡವಾದರೂ ಬಂದಹಾಗೆ ಅದೇ ವೇಗದಲ್ಲಿ ಮರೆಯಾದವು ಕೂಡ. ಆದರೆ ಚಿತ್ರೋದ್ಯಮ ಒಂದು ನೆಲ ಕಂಡುಕೊಂಡಂತೆ ಚಿತ್ರಕರ್ಮಿಗಳು ಸಿನೆಮಾಗಳ ತಯಾರಿಕೆಯನ್ನು  ಮುಂದುವರೆಸಿದ್ದರು. 1907 ರ ವೇಳೆಗೆ ಚಿತ್ರ ನಿರ್ಮಾಣ ಸಂಸ್ಥೆ ಬಯೋಗ್ರಾಪ್ಹ್ ಗೆ ಸೇರಿದ ಡಿ.ಡಬ್ಲ್ಯೂ.ಗ್ರಿಪಿತ್ ತನ್ನ ತಾಂತ್ರಿಕ ಕೌಶಲ್ಯ ಮತ್ತು ಕಥೆ ಹೇಳುವ ಹೊಸ ಹೊಸ ತಂತ್ರಗಳಿಂದ  ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ಎನ್ನಬಹುದು. ಅಲ್ಲಿಯವೆರೆಗೆ ಚಿತ್ರಗಳೆಂದರೆ ಪರದೆಯ ಮೇಲೆ ನಡೆಯುವ ನಿರಂತರ ಚಟುವಟಿಕೆಗಳಾಗಿದ್ದವು. ಆದರೆ ಗ್ರಿಪಿತ್ ಸಂಕಲನ ಮೇಜಿನ ಮಹತ್ವವನ್ನ ಚಿತ್ರರಂಗಕ್ಕೆ ಅರಿವಾಗಿಸಿ ದೃಶ್ಯ ಮಾಧ್ಯಮದಲ್ಲಿ ಹೊಸ ಬಾಗಿಲು ತೆರೆದುಬಿಟ್ಟ. ಕ್ಯಾಮೆರಾ ಚಲನೆ, ಸಂಕಲನ, ಶಾಟ್ ಗಳ ಸಂಯೋಜನೆ ಮುಂತಾದವುಗಳನ್ನು ಒಂದು ಚಿತ್ರದಲ್ಲಿ ಅಳವಡಿಸಿ ಅದನ್ನು ಹೇಗೆ ಪರಿಣಾಮಕಾರಿಯಾಗಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವ ಇದೆ ಗ್ರಿಪಿತ್. ಕಾಲದ ವ್ಯತ್ಯಾಸಗಳನ್ನು ವಿಷದಪಡಿಸಲು ಫೇಡ್ ಇನ್, ಫೇಡ್ ಔಟ್ ತಂತ್ರಗಳನ್ನು ಮೊದಲ ಭಾರಿಗೆ ಬಳಸಿದ ಗ್ರಿಪಿತ್ ಇದಕ್ಕಾಗಿ ಕ್ಯಾಮೆರಾ ಒಪರ್ಚರ್ ಡಯಾಪ್ರಾಗಂ ನ್ನು ತೆರೆಯುವ, ಮುಚ್ಚುವ ಮೂಲಕ ಬೆಳಕನ್ನು ನಿಯಂತ್ರಿಸಿ ಈ ಪರಿಣಾಮ ಸಾಧಿಸಿದ್ದ. ಆನಂತರ ಐರಿಸ್ ಎನ್ನುವ ಚಿಕ್ಕದಾದ ಉಪಕರಣವನ್ನು ಕಂಡುಕೊಂಡಿದ್ದ. ಈ ಪರಿಣಾಮ ಬೇಕಾದಾಗ ಅದನ್ನು ಕ್ಯಾಮೆರಾದ ಮುಂದೆ ಇಟ್ಟು ನಿಧಾನವಾಗಿ ಸರಿಸುವ ಮೂಲಕ ದೃಶ್ಯಕ್ಕೆ ಬೇಕಾದಂತೆ ಪರಿಣಾಮವನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದ.ಹಾಗೆ ಒಂದೇ ಶಾಟ್ ನಲ್ಲಿ ಎರಡು ದೃಶ್ಯಗಳನ್ನು ಸಂಯೋಜಿಸುವಾಗಲೂ ಇದೆ ಐರಿಸ ಉಪಯೋಗವಾಗುತ್ತಿತ್ತು.
ಮುಂದೆ  ಚಿತ್ರದ ಚಿತ್ರೀಕರಣದಲ್ಲಿ ಹಿನ್ನೆಲೆಯಲ್ಲಿ ಚಿತ್ರಗಳನ್ನೂ ದೊಡ್ಡ ದೊಡ್ಡ ಪೇಂಟಿಂಗ್ ಬಳಸಿಕೊಳ್ಳುವ ಯೋಚನೆ ಮಾಡಿದ್ದು ನೋರ್ಮ.ಓ.ಡಾನ್.ಈತನ ಈ ಉಪಾಯದಿಂದಾಗಿ ಈಗಾಗಲೇ ಇದ್ದ ಸ್ಟುಡಿಯೋಗಳು ತಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿಕೊಳ್ಳುವಂತಾಗಿತ್ತು. ಚಿತ್ರಗಳ ಅವಧಿ ಚಿಕ್ಕದಾಗಿದ್ದರೂ ಅದರಲ್ಲಿನ ನಟ/ನಟಿಯರನ್ನು ಜನ ಗುರುತಿಸುತ್ತಿದ್ದರು.ಆದರೆ ಗ್ರಿಫಿತ್ ನ ಸಿನೆಮಾ ಪ್ರವೇಶದ ನಂತರ ಚಿತ್ರಗಳ ಉದ್ದ ಹೆಚ್ಚಾಗತೊಡಗಿತ್ತು. ಕಾರಣ ಗ್ರಿಫಿತ್ ಚಿತ್ರದಲ್ಲಿ ಕಥೆ ಹೇಳಲು ಶುರುಮಾಡಿದ್ದ. ಏನೋ ಅಂಡ್ ಆರ್ದೆನ್ನ ಚಿತ್ರದ ಉದ್ದ ಎರಡು ರೀಲುಗಳಿಗೂ ಅಂದರೆ 30 ನಿಮಿಷಕ್ಕೂ ಹೆಚ್ಚು ಉದ್ದವಿತ್ತು.

] 1912 ರಲ್ಲಿ ಬಿಡುಗಡೆಯಾದ ಕ್ವೀನ್ ಎಲಿಜ್ಯಬೇತ್ ಫ್ರೆಂಚ್ ಸಿನೆಮಾ ನಲವತ್ತನಾಲ್ಕು ನಿಮಿಷಗಳಷ್ಟು ಉದ್ದವಿದ್ದು ಸೂಪರ್ ಹಿಟ್ ಆಯಿತಲ್ಲದೇ ಅದರಲ್ಲಿ ಅಭಿನಯಿಸಿದ್ದ ನಟಿ ಸಾರಾ ಜನರ ದೃಷ್ಟಿಯಲ್ಲಿ ಸ್ಟಾರ್ ಆಗಿ ಹೊರಹೊಮ್ಮಿದ್ದಳು.ಈ ಬೆಳವಣಿಗೆಯ ನಂತರ ಚಿತ್ರ ಕರ್ಮಿಗಳು ಸಿನೆಮಾಗಳನ್ನು ಹೆಚ್ಚು ಉತ್ಸಾಹದಿಂದ ನಿರ್ಮಿಸತೊಡಗಿದ್ದರಲ್ಲದೆ,  ದಶಕದ ಕೊನೆಕೊನೆಗೆ ಚಿತ್ರದ ಉದ್ದ ಒಂದೂವರೆ ಘಂಟೆಗೆ ಬಂದು ನಿಂತಿತ್ತು.
ಈ  ದಶಕದಲ್ಲಿ ಬಂದ ಗ್ರಿಫಿತ್ ನ ಗಮನಾರ್ಹ ಚಿತ್ರವೆಂದರೆ ಬರ್ತ್ ಒಫ್ ಎ ನೇಷನ್. 1915ರಲ್ಲೇ ತೆರೆಗೆ ಬಂದ ಈ ಚಿತ್ರ ಅಮೆರಿಕಾದ ರಾಜ ಮನೆತನಗಳ ನಡುವಿನ ಯುದ್ಧದ ಇತಿಹಾಸವನ್ನು ಹೊಂದಿತ್ತು. ಒಂದು ಪರಿಪೂರ್ಣ ಚಿತ್ರವಾದ ಎ ಬರ್ತ್ ಒಫ್ ಎ ನೇಷನ್ ಅದ್ಭುತ ಯಶಸ್ಸು ಗಳಿಸಿದ್ದಷ್ಟೇ ಅಲ್ಲ ಅಮೆರಿಕಾದ ವೈಟ್ ಹೌಸ್ ನಲ್ಲೂ ಪ್ರದರ್ಶನ ಗೊಂಡ ಈ ಚಿತ್ರ ಅನೇಕ ವಿವಾದಗಳನ್ನೂ ಹುಟ್ಟುಹಾಕಿತ್ತಲ್ಲದೆ, ಕೆಲವೊಂದು ನಗರಗಳಲ್ಲಿ ನಿಶೇಧಕ್ಕೊಳಗಾಗಿತ್ತು.
ಈ  ನಿಟ್ಟಿನಲ್ಲಿ ಹೇಳುವುದಾದರೆ ಚಿತ್ರರಂಗದ ಇತಿಹಾಸದಲ್ಲಿ 1910 ರ ದಶಕ ಒಂದು ಮೈಲಿಗಲ್ಲು ಎನ್ನಬಹುದು. ಬರೀ ಒಂದೆರೆಡು ದೃಶ್ಯಗಳು ಅಥವಾ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದಕ್ಕಷ್ಟೇ ಮೀಸಲಾಗಿದ್ದ ಚಿತ್ರರಂಗ ಆ ಮೂಲಕ ಕಥೆ ಹೇಳಲು ಪ್ರಾರಂಭಿಸಿದ್ದು ಈ ದಶಕದಲ್ಲೇ. ಒಂದು ಕಥೆಯನ್ನೂ, ಕಾದಂಬರಿಯನ್ನೂ, ನಾಟಕವನ್ನೂ ಸಿನೆಮಾ ರೂಪಕ್ಕೆ ಯಶಸ್ವಿಯಾಗಿ ತರಲಾಯಿತು. ಹಾಗೆ ಚಿತ್ರದ ಅವಧಿಯೂ ಈ ದಶಕದಲ್ಲಿ ಗಮನಾರ್ಹವಾಗಿ ಬೆಳೆಯಿತು. ಕೇವಲ ಒಂದು ರೀಲಿಗಷ್ಟೇ ಸೀಮಿತವಾಗಿದ್ದ ಚಿತ್ರಗಳು, ಆನಂತರ ಕಥೆಗೆ ತಕ್ಕಂತೆ ಚಿತ್ರದ ಉದ್ದವನ್ನು ಹೆಚ್ಚಿಸಿಕೊಂಡವು. ಜೊತೆಗೆ ಸಂಕಲನ ಮತ್ತು ಕ್ಯಾಮೆರಾ ಚಲನೆ, ತಂತ್ರಗಳಲ್ಲಿ ಸಾಕಷ್ಟು ಮುಂದುವರೆದಿದ್ದಲ್ಲದೆ, ಜನರ ಮನಸ್ಸಿನಲ್ಲಿ ಸಿನೆಮಾ ಒಂದು ಪರಿಪೂರ್ಣ ಮನರಂಜನಾ ಮಾಧ್ಯಮವಾಗಿ ರೂಪುಗೊಂಡಿತ್ತು.                                                                                  [ಸಶೇಷ ]

Saturday, January 12, 2013

ಜನವರಿ 12 ರಂದು..

ಒಮ್ಮೆ ಹಿಂದಿರುಗಿ 2012 ನ್ನೊಮ್ಮೆ ಅವಲೋಕಿಸಿದರೆ:
ಪ್ರಾರಂಭದಲ್ಲಿ ಏನೇನೋ ಅನಿಸಿತ್ತು. ಸುಮಾರು ಯೋಜನೆಗಳಿದ್ದವು.ಹಾಗೆ ಕನಸುಗಳೂ ಆಶಾದಾಯಕವಾಗಿದ್ದವು.. ನನ್ನ ಸಿನೆಮಾ ಮಾರ್ಚ್ 23 ಈ ವರ್ಷ ಬಿಡುಗಡೆಯಾಗಿಬಿಡುತ್ತದೆ. ಏನೋ ಒಂದಾಗುತ್ತದೆ. ಎಲ್ಲವೂ ಫಲಪ್ರದವಾಗುತ್ತದೆ ಎಂದೆನಿಸಿತ್ತು.
ಆದರೆ ನೋಡನೋಡುತ್ತಾ 2012 ಹಾಗೆಯೇ ಕಳೆದುಹೋಯಿತು. ನನ್ನ ಯಾವೊಂದು ಕೆಲಸಗಳು ಸಂಪೂರ್ಣವಾಗಲಿಲ್ಲ. ನಮ್ಮ ಸಿನೆಮಾದ ಕೆಲಸಗಳು ಕಾರಣಾಂತರಗಳಿಂದ ತಡವಾಗಿ ತಡವಾಗಿ ಸಂಪೂರ್ಣವಾಗಲು ವರ್ಷಾಂತ್ಯ ಬೇಕಾಯಿತು. ಚಿತ್ರ ಮುಗಿದು ಎಲ್ಲಾ ಕಡೆ ಪ್ರಸಂಶೆ ಬಂದರೂ ಯಾರೂ ಸ್ಟಾರ್ ಗಳಿರದ ಕಾರಣ ಚಿತ್ರವನ್ನ ಬಿಡುಗಡೆ ಮಾಡಲು ಯಾರು ಮುಂದೆ ಬರಲಿಲ್ಲ. ಹೀಗೆ..ಒಂದೇ ಒಂದು ಚಿತ್ರವನ್ನೂ ಕೈಯಲ್ಲಿ ಹಿಡಿದುಕೊಂಡು ಅದರ ಬಿಡುಗಡೆಗೆ ಕಾಯುತ್ತ ಕುಳಿತ ನನ್ನ ಇಡೀ ವರ್ಷದ ಸಂಪಾದನೆ ನೆನಪಿಸಿಕೊಂಡರೆ ..
ಕಳೆದ ವರ್ಷ ನಾನು ಮಾಡಬೇಕೆಂದುಕೊಂಡ ಕೆಲಸಗಳು ಹಲವಾರು, ಭೇಟಿ ಮಾಡಿದ ವ್ಯಕ್ತಿಗಳು ನೂರಾರು ಆದರೆ ಯಾವುದೂ ಕೆಲಸಕ್ಕೆ ಬರಲಿಲ್ಲ. ದಿನಗಳು ಕಣ್ಣ ಮುಂದೆಯೇ ನಿರಾಶಾದಾಯಕವಾಗಿ, ಏನೂ ಲಾಭವಿಲ್ಲದೆ ಕಳೆದುಹೋದವು.
ಈ ವರ್ಷದ ಹಾದಿಯಲ್ಲಿ ನನಗೆ ಎಲ್ಲಾ ಕೆಲಸಗಳ ಫಲಿತಾಂಶ ಕಾದಿದೆ. ನನ್ನ ಪುಸ್ತಕ ಬಿಡುಗಡೆಯಾಗುವುದರಲ್ಲಿದೆ..ಅದರ ಫಲಿತಾಂಶ ಏನು ನೋಡಬೇಕು. ನಮ್ಮ ಸಿನೆಮಾ ಕೂಡ ಬಿಡುಗಡೆಯಾಗುತ್ತದೆ ಅದರ ಭವಿಷ್ಯ ನನ್ನ ಭವಿಷ್ಯವನ್ನ ಹೊತ್ತು ನಿಂತಿದೆ.
'ಸರ್ವ ವಸ್ತು೦ ಭಯಾನ್ವಿತಂ
ಭುವಿನೃಣಾ೦  ವೈರಾಗ್ಯ ಮೇವಭಯಂ '
ಇದು ಸ್ವಾಮೀ ವಿವೇಕಾನಂದರಿಗೆ ಇಷ್ಟವಾದ ನುಡಿ. ಇದು ನನಗೂ ಇಷ್ಟವಾದದ್ದು ಯಾಕೋ ನನಗೆ ಗೊತ್ತಿಲ್ಲ. ಅದರ ತಾತ್ಪರ್ಯ ಮಾತ್ರ ನನ್ನ ಮನದಾಳದಲ್ಲಿ ಉಳಿದುಬಿಟ್ಟಿತ್ತು. ನಾನಾಗ ಕಾಲೇಜಿಗೆ ಹೋಗುತ್ತಿದ್ದೆ. ಬೆಳಿಗ್ಗೆ ಒಂಬತ್ತಕ್ಕೆ ಕಾಲೇಜು   ಪ್ರಾರಂಭವಾದರೂ ನಾನು ಮನೆಯನ್ನ ಆರು ಘಂಟೆಗೆ ಬಿಡುತ್ತಿದ್ದೆ. ಯಾಕೆಂದರೆ ನಮ್ಮೂರಿನಿಂದ ನಂಜನಗೂಡಿಗೆ ಕೇವಲ ಮುಕ್ಕಾಲು ಘಂಟೆಯ ಹಾದಿಯಾದರೂ ಬಸ್ಸುಗಳು ಮಾತ್ರ ಇದ್ದದ್ದು ಕೆಲವೇ ಕೆಲವು. ಅವುಗಳಲ್ಲಿ ಹಿಂದಿನ ಊರಿನಲ್ಲಿ ಜನ ತುಂಬಿದ್ದರೆ ನಮ್ಮ ಊರಿನಲ್ಲಿ ನಿಲ್ಲಿಸುತ್ತಿರಲಿಲ್ಲ. ಹಾಗಾಗಿ ಬೆಳಿಗ್ಗೆಯೇ ಎದ್ದು ಹೊರಟು ಬಿಡುತ್ತಿದ್ದೆ. ಏಳು ಘಂಟೆಗೆ ನಂಜನಗೂಡು. ಲೈಬ್ರರಿ ತೆರೆಯುವುದು ಎಂಟು ಘಂಟೆಗೆ. ಹಾಗಾಗಿ ಒಂದು ಘಂಟೆ ಅಲ್ಲಿ ಪತ್ರಿಕೆಗಳನ್ನೂ ವಿತರಿಸುವವರನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದೆ. ಆಮೇಲೆ ಬೇಸರ ಕಳೆಯಲು ಪಕ್ಕದಲ್ಲಿದ್ದ ದೇವಸ್ಥಾನಕ್ಕೆ ಹೋಗಿ ಕುಳಿತುಕೊಂಡು ಸುಮ್ಮನೆ ಹೋಗಿ ಬರುವವರನ್ನು ನೋಡುತ್ತಿದ್ದೆ. ಯೋಚಿಸುತ್ತ ಯೋಚಿಸುತ್ತಾ ಯಾಕೋ ಈ ಬದುಕೇ ವ್ಯರ್ಥ ಎನಿಸುತ್ತಿತ್ತು. ಎಲ್ಲವನ್ನೂ ತೊರೆದು ಹೋಗಿಬಿಡಬೇಕು ಎನಿಸುತ್ತಿತ್ತು. ಯಾಕಾಗಿ ಇಷ್ಟೆಲ್ಲಾ ಹೋರಾಡಬೇಕು ಎನಿಸುತ್ತಿತ್ತು. ನನ್ನ ಕಾಲೇಜು ಜೀವನದಲ್ಲಿ ನನ್ನ ತರಗತಿಯಲ್ಲಿದ್ದ ವಿದ್ಯಾರ್ಥಿಗಳಲ್ಲಿ ನಾನೊಬ್ಬನೇ ಹುಡುಗ. ಉಳಿದವರೆಲ್ಲರೂ ಹುಡುಗಿಯರೇ. ಹಾಗಾಗಿ ನನಗೆ ಗೆಳೆಯರೇ ಇರಲಿಲ್ಲ. ಸಿನಿಮಾಕ್ಕೆ, ಸುತ್ತಾಡಲು ಎಲ್ಲದಕ್ಕೂ ನಾನೊಬ್ಬನೇ. ತರಗತಿಗೆ ಬಂದಾಗ ನಾನು ಮುಂದೆ ಕುಳಿತುಕೊಳ್ಳುತ್ತಿದ್ದರೆ ನನ್ನ ಹಿಂದೆ ಹುಡುಗಿಯರ ಹಿಂಡು ಕುಳಿತುಕೊಳ್ಳುತ್ತಿತ್ತು..ನನಗೋ ಎಂಥದೋ ಮುಜುಗರವಾಗಿತ್ತಿತ್ತು. ಅವರವರಲ್ಲಿ  ಏನಾದರೂ ಮಾತಾಡಿಕೊಂಡು ನಕ್ಕರೆ ನನಗೆ ಏನೋ ಕಸಿವಿಸಿಯಾಗುತ್ತಿತ್ತು. ಆದರೆ ನಮ್ಮ ತರಗತಿಯ ವಿದ್ಯಾರ್ಥಿನಿಯರು ಒಳ್ಳೆಯವರಿದ್ದರು. ನಾನೊಬ್ಬನೇ ಹುಡುಗ ಎಂಬ ಕನಿಕರ ಅವರಲ್ಲಿತ್ತು. ತಮ್ಮ ಪಾಡಿಗೆ ತಾವಿರುತ್ತಿದ್ದರು.ಇಡೀ ಬಿ..ಎಸ್ಸಿ. ಹೀಗೆ ಕಳೆಯಿತು. ಗೆಳೆಯರಿಲ್ಲದೆ, ಸುತ್ತಾಟವಿಲ್ಲದೆ ಒಂಟಿಯಾಗಿ. ಆ ಸಮಯದಲ್ಲಿ ನಾನು ಸ್ವಾಮೀ ವಿವೇಕಾನಂದರ ಭಕ್ತನಾಗಿದ್ದು. ಎಲ್ಲಾ ಆಸೆಯನ್ನೂ ಬಿಡಬೇಕು ಎಂದು ನಿರ್ಧರಿಸಿದ್ದೆ. ನನ್ನ ಬಗ್ಗೆಯೇ ಪ್ರಯೋಗಗಳನ್ನು ಮಾಡಿಕೊಳ್ಳಲು ನಿರ್ಧರಿಸಿದ್ದೆ. ಮುಖದಲ್ಲಿ ಮೊಡವೆ ಬರುತ್ತಿದ್ದರಿಂದ ಮುಖ ನೋಡಿದಾಗ ಚಿಂತೆಯಾಗುತ್ತದೆಂದು ಆರು ತಿಂಗಳು ನನ್ನ ಮುಖವನ್ನೂ ಕನ್ನಡಿಯಲ್ಲಿ, ಎಲ್ಲೇ ಆಗಲಿ ನಾನು ನೋಡಿರಲಿಲ್ಲ. ಸ್ನಾನ ಮಾಡಿ ಒಂದು ಅಂದಾಜಿಗೆ ತಲೆ ಬಾಚಿಕೊಳ್ಳುತ್ತಿದ್ದೆ. ಹೆಚ್ಚು ಅದ್ಯಾತ್ಮಿಕ ಪುಸ್ತಕ ಓದಲು ಪ್ರಾರಂಭಿಸಿದ್ದೆ. ಅವರ ನುಡಿಗಳು ತಲೆಯಲ್ಲಿತ್ತು. ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಕೋಪವನ್ನು ಕಡಿಮೆಮಾಡಿಕೊಂಡೆ.ಎಲ್ಲವನ್ನೂ ಎಲ್ಲಾ ಸಂದರ್ಭದಲ್ಲೂ ವಿವೇಚನೆಯಿಂದ, ತಾಳ್ಮೆಯಿಂದ ವರ್ತಿಸುವುದನ್ನು ಕಲಿತೆ.ನನಗೆ ಇದಕ್ಕೆ ಸಾಥ್ ನೀಡಿದ್ದು ಯಂಡಮೂರಿಯವರ 'ಅಂತರ್ಮುಖ ' ಕಾದಂಬರಿ. ಅದನ್ನು ಸುಮಾರಿ ಸಾರಿ ಓದಿದೆ. ಸ್ವಕರುಣೆಯನ್ನು ಮನಸ್ಸಿನಿಂದ ಕಿತ್ತುಹಾಕಿದೆ.
ಹಾಗಾಗಿ ನನಗೆ ಸ್ವಾಮೀ ವಿವೇಕಾನಂದರ ಬದುಕು ಸ್ಫೂರ್ತಿಯಾಯಿತು.ಯಾವುದನ್ನೂ ಹೀಗೆಳೆಯದ, ಪ್ರತಿಯೊಂದಕ್ಕೂ ಅದರದೇ ಬೆಲೆಯಿದೆ ಎನ್ನುವ ಸಿದ್ಧಾಂತ ನನಗೂ ಮನದಟ್ಟಾಯಿತು.
ಅವರಿಗೆ, ಅವರ ಜನ್ಮದಿನವಾದ ಜನವರಿ 12 ರಂದು ನನ್ನ ಶುಭಾಶಯಗಳು.
ಇನ್ನೊಂದು ವಿಷಯ, ಜನವರಿ 12 ನನ್ನ ಜನ್ಮ ದಿನವೂ ಹೌದು.