Friday, July 6, 2012

ಓದಿ, ನೋಡಿ ಮರುಳಾದದ್ದು..


ವಾಗ  ಮೈಸೂರಿನ ಹಾಸ್ಟೆಲಿನಲ್ಲಿದ್ದೆವು. ಕಾಲೇಜು ಮುಗಿದ ನಂತರ ಲೈಬ್ರರಿ ಆಮೇಲೆ ಸಿನಿಮಾ ಇವೆರೆಡೇ ಆಯ್ಕೆಗಳಿದ್ದ ಟೈಮ್ ಅದು. ತರಗತಿ ಮುಗಿಸಿ, ಒಂದಷ್ಟು ಹರಟೆ ಹೊಡೆದು ಲೈಬ್ರರಿಯಲ್ಲೊಂದಷ್ಟು ಕಾಲವನ್ನು ವ್ಯಯಿಸಿ, ಊಟದ ಆಜುಬಾಜು ಸಮಯಕ್ಕೆ ಹಾಸ್ಟೆಲಿನ ಅಂಗಳದಲ್ಲಿ ಪ್ರತ್ಯಕ್ಷವಾಗಿ ಊಟ ಮುಗಿಸಿದರೆ ಮತ್ತೆ ಸಿನಿಮಾದ ಕಡೆ ಗಮನ ಹೋಗಿಬಿಡುತ್ತಿತ್ತು. ಆವಾಗ, ಈವಾಗಲೂ ನನಗೊಂದು ಚಟ ಇದೆ. ಸಿನಿಮಾ ಹೇಗೇ ಇರಲಿ ಕನ್ನಡವಾದರೇ ಅದನ್ನೊಮ್ಮೆ ನೋಡಲೇಬೇಕು, ನಾಯಕ, ನಾಯಕಿ, ನಿರ್ದೇಶಕ ಯಾರಾದರೂ ನನಗೆ ಅಷ್ಟೊಂದು ಮುಖ್ಯವೆನಿಸುತ್ತಿರಲಿಲ್ಲ. ಅದರಲ್ಲೂ ಹೊಸಬರ ಸಿನಿಮಾವಾದರಂತೂ ಏನನ್ನೂ ಕೇಳದೇ ಚಿತ್ರಮಂದಿರದೊಳಕ್ಕೆ ನುಗ್ಗಿ ಬಿಡುತ್ತಿದ್ದೆ. ಇಂಥ ಸುಮಾರು ಸಿನಿಮಾ ನೋಡಿ ನೋಡಿ ಹಿಂಸೆ ಪಟ್ಟುಕೊಂಡಿದ್ದಷ್ಟೇ ಅಲ್ಲ, ಗೆಳೆಯರಿಗೂ ಹಿಂಸೆ ಕೊಟ್ಟಿದ್ದೆ. ಆವಾಗ ಒಂದು ಹೊಸ ಸಿನಿಮಾ ಬಿಡುಗಡೆಯಾಗಿತ್ತು. ಯಾವುದೇ ನಿರೀಕ್ಷೆಗಳಿಲ್ಲದ, ಚೆನ್ನಾಗಿರೊಲ್ಲವೇನೋ ಎಂದು ಅನುಮಾನ ತರಿಸುವ  ಸಿನಿಮಾ ಅದು. ನನಗೋ ಒಮ್ಮೆ ನೋಡಲೇಬೇಕೆಬ್ಬಿಸಿತ್ತಾದರೂ ಗೆಳೆಯ ಚಂದ್ರ ಬೇಕಾದರೆ ಕತ್ತು ಕತ್ತರಿಸಿಕೊಳ್ಳುತ್ತೇನೆ, ಸಿನಿಮಾಕ್ಕೆ ಮಾತ್ರ ಬರಲು ತಯಾರಿಲ್ಲ ಎಂದು ಹಠ ಹಿಡಿದುಬಿಟ್ಟ. ಆಮೇಲೆ ಅವನೇ ಇರು ಒಂದು ಐಡಿಯ ಮಾಡೋಣ ಎಂದ. ನಮ್ಮ ರೂಮಲ್ಲಿದ್ದ ಇನ್ನಿಬ್ಬರು ರೂಮೇಟುಗಳನ್ನು ಹೇಗಾದರೂ ಮಾಡಿ ಸಿನಿಮಾಕ್ಕೆ ಕಳುಹಿಸುವುದು, ಅವರ ಅಭಿಪ್ರಾಯ ಕೇಳಿಕೊಂಡು ಸಿನಿಮಾಕ್ಕೆ ಹೋಗುವುದೋ ಬೇಡವೋ ನಿರ್ಧರಿಸುವುದೇ ಅವನ ಐಡಿಯ. ಸರಿ ಎಂದದ್ದೇ ಅವರು ರೂಮಲ್ಲಿದ್ದಾಗ ಊಟಕ್ಕೂ ಮುಂಚೆ ಮದ್ಯಾಹ್ನ ಒಂದು ಸಿನಿಮಾ ನೋಡಿದೆವು..ಎಂಥ ಅದ್ಭುತ ಸಿನಿಮಾ ಗೊತ್ತಾ..ಈವತ್ತು ಒಳ್ಳೇ ಸಿನಿಮಾಕ್ಕೇ ಪಬ್ಲಿಸಿಟೀನೆ ಕೊಡಲ್ಲಾ ಮಾರಾಯಾ..ಎಂದೆಲ್ಲಾ ಬೂಸಿಬಿಟ್ಟು, ಆ ಸಿನಿಮಾವನ್ನು ಆ ಕ್ಷಣ ನೋಡದಿದ್ದರೇ ಬದುಕಿದ್ದೂ ವ್ಯರ್ಥ ಎನ್ನುವ ರೇಂಜಿಗೆ ಹೇಳಿಬಿಟ್ಟೆವು. ಅವರಿಬ್ಬರು ತುರಾತುರಿಯಿಂದ ಊಟ ಮುಗಿಸಿದ್ದೇ ಸಿನಿಮಾಕ್ಕೇ ಓಡಿಬಿಟ್ಟರು. ನಾವು ನೆಮ್ಮದಿಯಾಗಿ ಮಲಗಿದೆವು.
ಸೆಕೆಂಡ್ ಶೋ ಮುಗಿಸಿ, ಸಿನಿಮಾದ ನರಕಯಾತನೇ ಮುಗಿಸಿಬಂದವರು ನಿದ್ರೆ ಮಾಡುತ್ತಿದ್ದರೂ ಬಿಡದೇ ನಮ್ಮನ್ನು ಎಬ್ಬಿಸಿದಾಗ, ಅವರ ಮುಖದಲ್ಲಿ ಚಿಮ್ಮುತ್ತಿದ್ದ ರೋಷಾವೇಶದ ಭಾವಗಳನ್ನು ನೋಡಿದಾಗ ನಮಗೆ ಆ ಸಿನಿಮಾದ ಬಗ್ಗೆ ಸಂಪೂರ್ಣ ತಿಳಿದುಹೋಗಿತ್ತು. ಮುಂದಿನದ್ದು ನೀವೇ ಊಹಿಸಬಹುದು.
ಮೊನ್ನೆ ಫೇಸ್‌ಬುಕಿನಲ್ಲಿ ನನ್ನ ಸ್ಟೇಟಸ್ ಅಪ್‌ಡೇಟ್ ಮಾಡುವಾಗ ಆ ವಾರ ಬಿಡುಗಡೆಯಾದ ಎಲ್ಲಾ ಮೂರು ಚಿತ್ರಗಳನ್ನೂ ನೋಡಿದ್ದನು ಹಂಚಿಕೊಂಡಿದ್ದೆ. ಆಗ ಗೆಳೆಯರೆಲ್ಲಾ ಅದನ್ನೂ ನೋಡಿದಾ..ನೀನು ಬಿಡು ಯಾವುದನ್ನೂ ಬಿಡಲ್ಲಾ ಎಂದೆಲ್ಲಾ ಫೋನ್ ಮಾಡಿ ಹೀಗೆಳೆದಿದ್ದರು. ಆದರೆ ನನಗೆ ಬರೀ ಕನ್ನಡದಲ್ಲಷ್ಟೇ ಅಲ್ಲ. ಬೇರೆಲ್ಲಾ ಭಾಷೆಯಲ್ಲೂ ಅತೀ ಕೆಟ್ಟದಾದ ಅರ್ಥವೇ ಇಲ್ಲದ ಸಿನಿಮಾಗಳನ್ನು ನೋಡಿಬಿಟ್ಟಿರುವುದರಿಂದ ಈವಾಗಾವಾಗ ಸಿನಿಮಾ ಚೆನ್ನಾಗಿಲ್ಲದಿದ್ದರೂ ತೀರಾ ಕೆಟ್ಟದಾಗಿಲ್ಲದಿದ್ದರೇ ಬೇಸರವೆನಿಸುತ್ತದೆ. ಅಲ್ಲಿನ ಬಾಲಿಶ ದೃಶ್ಯಗಳು, ಅರ್ಥವೇ ಇಲ್ಲದ ಮಾತುಗಳು, ಸುಖಾಸುಮ್ಮನೆ ಹೊಡೆತ ತಿನ್ನುವ ಖಳರು, ನೋಡಿದ ಘಳಿಗೆಯೇ ಯುಗಳಗೀತೆಯನ್ನು ಹಾಡಲು ಬೆಟ್ಟದ ತಪ್ಪಲಿಗೋ, ಪಾರ್ಕಿಗೋ ಓಡಿಹೋಗುವ ನಾಯಕ-ನಾಯಕಿಯರು... ನೆನಪಿಸಿಕೊಂಡು ನಗಲು ಇನ್ನೇನು ಬೇಕು..
ಸಿಡ್ನೀ ಶೆಲ್ಡನ್ ಬರೆದ ಮಾಸ್ಟರ್ ಆಫ್ ದಿ ಗೇಮ್ ಓದಿದೆ. ಪ್ರಾರಂಭದಲ್ಲಿ ತುಂಬಾ ರೋಚಕವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ತದನಂತರ ತಣ್ಣಗೆ ಏರಿಳಿತಗಳಿಲ್ಲದೇ ಬರೇ ಒಂದು ತಲೆಮಾರಿನ ಕಥೆಯನ್ನು ತೆರೆದಿಡುತ್ತದೆ.ಬಡತನದ ಬೇಗೆಯಲ್ಲಿ ಬೆಂದ ಹುಡುಗನೊಬ್ಬ ಆಫ್ರಿಕಾಗೆ ವಜ್ರದ ನಿಕ್ಷೇಪ ಹುಡುಕಿಕೊಂಡು ಹೋಗುತ್ತಾನೆ. ಯಾವೊಂದು ಪೂರ್ವ ತಯಾರಿಯೂ ಇಲ್ಲದೇ ಬರೇ ಗುರಿಯೊಂದನ್ನೇ ಅಚಲವಾಗಿಟ್ಟುಕೊಂಡು ಹೋಗುವ ಹುಡುಗ, ಏನೆಲ್ಲಾ ಕಷ್ಟ ಕಾರ್ಪಣ್ಯ ಅನುಭವಿಸಿ, ಮೋಸಹೋಗಿ ಹೇಗೆ ದೊಡ್ಡ ಶ್ರೀಮಂತನಾಗುತ್ತಾನೆ, ಆನಂತರ ಅವನ ತಲೆಮಾರು ಹೇಗೆ ನಡೆದುಕೊಂಡು ಬರುತ್ತದೆ ಎನ್ನುವುದನ್ನು ತುಂಬಾ ವಿವರವಾಗಿ ಬರೆದಿದ್ದಾನೆ ಶೆಲ್ಡನ್.
ಅವನ ಇನ್ನೊಂದು ಕಾದಂಬರಿ ಟೆಲ್ ಮಿ ಯುವರ್ ಡ್ರೀಮ್ಸ್ ಸ್ಪ್ಲಿಟ್ ಪರ್ಸನಾಲಿಟಿಯ ಬಗೆಗಿನ ಕಾದಂಬರಿ. ಇಲ್ಲಿ ಮೂರು ವಿಭಿನ್ನ ವ್ಯಕ್ತಿತ್ವ ಹೊಂದಿದ ನಾಯಕಿ ತನಗರಿವಿಲ್ಲದೇ ಸಾಲು ಸಾಲು ಕೊಲೆಗಳನ್ನು ಮಾಡುತ್ತಾ ಸಾಗುತ್ತಾಳೆ. ಅವಳನ್ನು ಪತ್ತೆ ಹಚ್ಚುವುದೇ ದೊಡ್ದ ಸಾಹಸವಾದರೂ ಶೆಲ್ಡನ್ ಕಾದಂಬರಿಯನ್ನು ಅಷ್ಟಕ್ಕೆ ಮುಗಿಸದೆ ಅಂಥವರನ್ನು ಗುಣ ಪಡಿಸುವ ಬಗೆಯನ್ನು ಬೋರ್ ಹೊಡೆಸದಂತೆ ತುಂಬಾ ವೈಜ್ಞಾನಿಕ ಅಂಶಗಳ ಸಹಾಯದೊಂದಿಗೆ ವಿವರಿಸುತ್ತಾ ಹೋದರೂ ರಹಸ್ಯವನ್ನು ಕೊನೆಯ ಪುಟದವರೆಗೂ ಕಾಪಾಡಿಕೊಂಡಿದ್ದಾನೆ.
ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಗುತ್ತಿದ್ದ ಜೋಗಿಯವರ ಗುರುವಾಯನ ಕೆರೆ ಮುಗಿದಿದ್ದು ಒಂದು ರೀತಿಯಲ್ಲಿ ಬೇಸರ ತರಿಸಿದೆ. ತೀರಾ ರಾಜಕೀಯ ವಿಷಯಗಳಿದ್ದಾಗೆಲ್ಲಾ ನನಗೆ ಅದರ ಬಗ್ಗೆ ಆಸಕ್ತಿಯಿಲ್ಲದ ಕಾರಣ ಹಾಯ್ ಬೆಂಗಳೂರ್ ಪತ್ರಿಕೆಯನ್ನು ಸಹನೀಯ ಮಾಡಿದ್ದೇ ಈ ಗುರುವಾಯನ ಕೆರೆ. ಜೋಗಿ ಬರಹಗಳು, ಅವರ ಪದಸಂಪತ್ತು, ಅವರ ಜ್ಞಾನಸಂಪತ್ತು ಯಾವಾಗಲೂ ಆಶ್ಚರ್ಯತರಿಸುತ್ತದೆ. ಯಾವುದೇ ಗಂಭೀರ ಜಟಿಲ ವಿಷಯವನ್ನೂ ಮನ ಮುಟ್ಟುವ ಹಾಗೆ ಸರಳವಾಗಿ ಬರೆಯುವ ಜೋಗಿಯವರ ಬರಹಗಳನ್ನು ನಾನು ಓದದೇ ಇರುವುದಿಲ್ಲ.
ಹಾಗೇ ಕ್ಲೋಪ್ಕ-ದಿ ಟ್ರ್ಯಾಪ್ ಎನ್ನುವ ಸೆರ್ಬಿಯನ್ ಭಾಷೆಯ ಚಲನಚಿತ್ರ ನೋಡಿದ ಮೇಲೆ ಒಂದು ಒಳ್ಳೆಯ ಥ್ರಿಲ್ಲರ್ ನೋಡಿದ ಅನುಭವವಾಯಿತು. ತುಂಬಾ ಸರಳ ಕಥೆಯ ಚಿತ್ರವಾದರೂ ನಿರ್ದೇಶಕ ನಿರೂಪಿಸಿರುವ ರೀತಿ ತುಂಬಾ ಪರಿಣಾಮಕಾರಿಯಾಗಿದೆ. ಮಗನಿಗೆ ಮಾರಣಾ೦ತಿಕ ಖಾಯಿಲೆಯಿದೆ. ಆಪರೇಶನ್ ಗೆ ಸುಮಾರು ಹಣ ಬೇಕು. ಆಪರೇಶನ್ ಮಾಡಿಸದಿದ್ದರೆ ಮಗ ಬದುಕುವುದಿಲ್ಲ. ಹಣ ಹೊಂದಿಸಲು ಸಮಯದ ಅಭಾವವಿದೆ. ಹಾಗೆ ಸುಲಭಕ್ಕೆ ಹಣ ಸಿಗುವ ಯಾವ ಮಾರ್ಗವೂ ಇಲ್ಲ. ಈ ಸಂದರ್ಭದಲ್ಲಿ ಒಂದು ಪತ್ರಿಕೆಯೊ೦ದಕ್ಕೆ ಗಂಡ ಹೆಂಡತಿ ಜಾಹಿರಾತು ನೀಡುತ್ತಾರೆ...ಆಗೊಬ್ಬ ವ್ಯಕ್ತಿ ಆಪರೇಶನ್ ಹಣ ಜೊತೆಗೆ ಓಡಾಟದ ಖರ್ಚು ಕೊಡುತ್ತೀನಿ,..ಬದಲಿಗೆ ನೀನೊಬ್ಬ ವ್ಯಕ್ತಿಯನ್ನು ಕೊಲ್ಲಬೇಕೆನ್ನುತ್ತಾನೆ...ಈ ಸಂಧಿಗ್ದ ಪರಿಸ್ಥಿತಿಯಲ್ಲಿ ನಾಯಕ ಒಪ್ಪಿಕೊಂಡು ಕೊಲೆ ಮಾಡುತ್ತಾನೆ..? ಮು೦ದೆನಾಗುತ್ತದೆ...ಸಮಯ ಸಿಕ್ಕಾಗ ಸಿನಿಮಾ ನೋಡಿ.

Wednesday, July 4, 2012

ಮೆಚ್ಚಿನ ಕಲಾವಿದರು-1


ಆರು ತಿಂಗಳಿನ ನ೦ತರ ಬ್ಯಾಟ್ ಮ್ಯಾನ್ ಚಿತ್ರಕ್ಕಾಗಿ..
ದಿ ಡಾರ್ಕ್  ನೈಟ್ ರೈಸೆಸ್  ಚಿತ್ರವನ್ನ ಕಾತರದಿಂದ ಎದುರು ನೋಡಲು ಎರಡು ಕಾರಣಗಳಿವೆ. ಮೊದಲನೆಯದು ನನ್ನ ಮೆಚ್ಚಿನ ನಿರ್ದೇಶಕ ಕ್ರಿಸ್ಟೋಫರ್ ನೋಳನ್ ನ ನಿರ್ದೇಶನ ಮತ್ತು ಮೆಚ್ಚಿನ ಕಲಾವಿದ ಕ್ರಿಶ್ಚಿಯನ್ ಬೇಲ್  ನಟನೆ. 2011 ರಲ್ಲಿ ಫೈಟರ್ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊ೦ಡಿರುವ ಬೇಲ್ ಪಾತ್ರಕ್ಕಾಗಿ, ಆ ಪಾತ್ರದ ಜೀವ೦ತಿಕೆಗಾಗಿ ಯಾವ ಪ್ರಯತ್ನವನ್ನೂ ಎಗ್ಗಿಲ್ಲದೆ ಭಯಪಡದೆ ಮಾಡುವ ಕಲಾವಿದ. ಹಾಲಿವುಡ್ ಚಿತ್ರಪ್ರಪ೦ಚದಲ್ಲಿ ಅತೀ ಕಡಿಮೆ ಬಜೆಟ್ಟಿನ ಚಿತ್ರಗಳಲ್ಲಿ, ಹಾಗೆಯೇ ದೊಡ್ಡ ಬಜೆಟ್ಟಿನ ಚಿತ್ರಗಳಲ್ಲಿ ಆರ್ಟ್ ಹೌಸ್ ಚಿತ್ರಗಳಲ್ಲಿ, ಸ್ವತಂತ್ರ ನಿರ್ಮಾಣ ಸಂಸ್ಥೆಗಳಲ್ಲಿ ನಟಿಸಿ ತನ್ನ ಛಾಪನ್ನು ಮೂಡಿಸಿರುವ ಪ್ರತಿಭಾವಂತ. 
ದಿ ಮೆಷಿನಿಸ್ಟ್ ಎ೦ಬ ಇಂಗ್ಲೀಷ್ ಭಾಷೆಯ ಸ್ಪ್ಯಾನಿಶ್ ನಿರ್ಮಾಣದ ಚಿತ್ರವೊ೦ದಿದೆ. 2004ರಲ್ಲಿ ತೆರೆಗೆ ಬಂದ ಈ ಮನೋವೈಜ್ಞಾನಿಕ ಚಿತ್ರದ ನಿರ್ದೇಶಕ ಬ್ರಾಡ್ ಅಂಡರ್ಸನ್. ನಿದ್ರಾಹೀನತೆಯಿಂದ ಬಳಲುವ ಕಾರ್ಮಿಕನೊಬ್ಬನ ಕಥೆ ಇದು...ಸುಮಾರು ದಿನ ನಿದ್ರೆ ಮಾಡದೇ ಇದ್ದದ್ದರಿಂದ ಕೃಶಗೊಳ್ಳುತ್ತಾ ಹೋಗುವ ಕಾರ್ಮಿಕ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸುತ್ತಾನೆ.. ಅವನ ಈ ವರ್ತನೆಯಿಂದಾಗಿ ಸಹೋದ್ಯೋಗಿಗಳು ಅವನನ್ನು ದೂರವಿಡುತ್ತಾರೆ.ಇದರ ನಡುವೆ ಇವನ ಹುಚ್ಚುತನದಿಂದಾಗಿ ಫ್ಯಾಕ್ಟರಿಯಲ್ಲಿ ಸಹೋದ್ಯೋಗಿಯೊಬ್ಬ ಕೈ ಕಳೆದುಕೊಳ್ಳಬೇಕಾಗುತ್ತದೆ..ಎಲ್ಲರೂ ಇವನ ಮೇಲೆ ದೂರಿದರೇ, ನಾಯಕ ಮಾತ್ರ ಇದಕ್ಕೆಲ್ಲಾ ಕಾರಣ ಇವಾನ್ ಎನ್ನುವ ವ್ಯಕ್ತಿ ಎ೦ದು ಹೇಳುತ್ತಾನೆ..ಇಡೀ ಕಾರ್ಮಿಕ ಪರಿವಾರಕ್ಕೇ ಆ ಇವಾನ್ ಎನ್ನುವ ವ್ಯಕ್ತಿಯ ಪರಿಚಯವಿರುವುದಿಲ್ಲ..ಮತ್ತು ಆ ಫ್ಯಾಕ್ಟರಿಯಲ್ಲಿ ಇವಾನ್ ಎಂಬ ಹೆಸರಿನ ಕಾರ್ಮಿಕನೂ ಇರುವುದಿಲ್ಲ..ಆದರೆ ನಾಯಕ ಮಾತ್ರ ತನ್ನ ಜೀವನದಲ್ಲಿ



 ನಡೆಯುವ ಎಲ್ಲಾ ಅವಘಢಗಳಿಗೆ ಇವಾನನೇ ಕಾರಣ ಎ೦ದು ಭಾವಿಸಿ ಅವನನ್ನು ಹುಡುಕಲು ಪ್ರಾರಂಭಿಸುತ್ತಾನೆ..ಅವನಿಗೆ ಇವಾನ್ ಸಿಗುತ್ತಾನಾ..?ಇದು ಕಥೆಯ ಹೂರಣ..ನಿಜವಾಗಿ ಅಲ್ಲಿ ಇವಾನ್ ಎನ್ನುವ ವ್ಯಕ್ತಿ ಇರುವುದೇ ಇಲ್ಲ..ಅದು ನಾಯಕನದೇ ಕಲ್ಪನೆಯ ವ್ಯಕ್ತಿ..!!
ಇಲ್ಲಿ ಬರುವ ನಾಯಕನ ಪಾತ್ರ ನಿರ್ವಹಿಸಿರುವವನು ಕ್ರಿಶ್ಚಿಯನ್ ಬೇಲ್ .ದಿನದಿನಕ್ಕೆ ಕೃಶಗೊ೦ಡು ಅಸ್ಥಿಪಂಜರದಂತಾಗುವ ನಾಯಕನ ಪಾತ್ರವನ್ನು
ಕ್ರಿಶ್ಚಿಯನ್ ಬೇಲ್ ನಿರ್ವಹಿಸಿರುವ ರೀತಿ ಅದ್ಭುತವಾದದ್ದಷ್ಟೇ ಅಲ್ಲ, ತ್ರಾಸದಾಯಕವಾದದ್ದು.ಯಾಕೇಂದರೆ ಕ್ರಿಶ್ಚಿಯನ್ ಬೇಲ್ ಈ ಚಿತ್ರಕ್ಕಾಗಿ ಅನಾಮತ್ತು ಸುಮಾರು  30 ಕೆ.ಜಿ. ತೂಕ ಕಳೆದುಕೊಂಡಿದ್ದ. ಬಹುಶ: ಚಿತ್ರ ಜಗತ್ತಿನಲ್ಲೇ ಸಿನಿಮಾಕ್ಕಾಗಿ ಇಷ್ಟೊ೦ದು ಸಣ್ಣ ಆದ ನಟ ಮತ್ತೊಬ್ಬನಿಲ್ಲ..ಕ್ರಿಶ್ಚಿಯನ್ ಬೇಲ್ ಹುಟ್ಟಿದ್ದು ಜನವರಿ,30 1974ರಲ್ಲಿ.ಪಾತ್ರಕ್ಕಾಗಿ ಎ೦ಥ ತ್ರಾಸಿಗೆ ಬೇಕಾದರೂ   ಸಿದ್ಧನಾಗುವ ಈ ಕಲಾವಿದ ಮೆಷಿನಿಸ್ಟ್ ಸಿನಿಮಾದ ನಂತರದ ಚಿತ್ರ  ಬ್ಯಾಟ್‌ಮನ್ ಬಿಗಿನ್ಸ್‌ಗಾಗಿ ಕೇವಲ ಆರು ತಿಂಗಳಲ್ಲೇ ತೂಕ ಹೆಚ್ಚಿಸಿಕೊ೦ಡು ತನ್ನ ದೇಹದಾರ್ಢ್ಯತೆಗಳಿಸಿಕೊಂಡಿದ್ದ.            
 ಪಬ್ಲಿಕ್‌ಎನಿಮೀಸ್[2009], ಟೆರ್ಮಿನೇಟರ್‌ಸಾಲ್ವೇಷನ್[2009], ದಿ ಡಾರ್ಕ್‌ನೈಟ್[2008], ಐ ಯಾಮ್‌ನಾಟ್‌ದೇರ್[2007],ದಿ ಪ್ರೆಸ್ಟೀಜ್[2006], ರೀನ್‌ ಆಫ್ ಫೈರ್[2002], ಅಮೆರಿಕನ್ ಸೈಕೋ[2000]             
ಕ್ರಿಶ್ಚಿಯನ್ ಬೇಲ್ ಅಭಿನಯಿಸಿರುವ ಯಶಸ್ವಿ ಚಿತ್ರಗಳು
ಮೇಲಿನ  ದಿ ಮಷಿನಿಸ್ಟ್ ಮತ್ತು ಬ್ಯಾಟ್ ಮ್ಯಾನ್ ಬೆಗಿನ್ಸ್ ಚಿತ್ರಗಳ ತೆರೆಚಿತ್ರಗಳನ್ನು ಗಮನಿಸಿದರೆ ಬೇಲ್ ನ ಪರಿಶ್ರಮದ ಮನವರಿಕೆಯಾಗುತ್ತದೆ.

Monday, July 2, 2012

ಒ೦ದಷ್ಟು ತಮಿಳು ಚಿತ್ರಗಳು...

ವಾಳಕು ಎನ್ 18/9
ಅಳಗಿರಿ ಸಾಮಿಯನ್ ಕುದುರೈ
ಮೊನ್ನೆ ಮೊನ್ನೆ ತಮಿಳಿನಲ್ಲಿ 'ಅಳಗಿರಿಸಾಮಿಯನ್ ಕುದುರೈ' ಎಂಬ ಕಡಿಮೆ ಬಜೆಟ್ಟಿನ ಸಿನಿಮಾ ತೆರೆಗೆ ಬಂತು.ನಿಜಕ್ಕೂ ಉತ್ತಮ ಚಿತ್ರ.  ನೀವದನ್ನು ನೋಡಿಲ್ಲವಾದರೆ ದಯವಿಟ್ಟು ಒಮ್ಮೆ ನೋಡಿಬಿಡಿ. ಸರಳ ಸುಂದರ ಸಿನೆಮಾ ಅದು. ಒಂದು ಊರು, ಅಲ್ಲಿನ ಜನಜೀವನ, ಒಂದು ಜಾತ್ರೆ, ದೇವಸ್ಥಾನದ ಒಂದು ಕುದುರೆ ಇವುಗಳೇ ಚಿತ್ರದ ಪ್ರಮುಖ ಅಂಶಗಳಾದರೂ ಸಿನಿಮಾದ ಕಥೆ ಯಾವ ಕಾಲಘಟ್ಟೆಕ್ಕೂ ನಿಲುಕದೆ ಪ್ರಸ್ತುತ ಎನಿಸುತ್ತದೆ. ಅದಕ್ಕೆ ಕಾರಣ  ಅದರಲ್ಲಿನ ಸತ್ವ ಎನ್ನಬಹುದು.ಕಥೆ-ಚಿತ್ರಕಥೆಯೇ ಚಿತ್ರದ ಜೀವಾಳ. ಚಿತ್ರದಲ್ಲಿ ನಾಯಕನಿದ್ದರೂ ಅವನು ನಾಯಕನಲ್ಲ. ಇಲ್ಲಿ ಯಾವುದೇ ನಾಯಕ, ಖಳನಾಯಕ, ಪೋಷಕ ಪಾತ್ರ ತರಹದ ವಿ೦ಗಡನೆಗಳಿಲ್ಲ. ನಮ್ಮ ಅಕ್ಕಪಕ್ಕದ ಮನೆಯವರು, ದೂರದ ಸಂಬಂಧಿಗಳು , ಗೆಳೆಯರು ಇವುಗಳೇ ಇಲ್ಲಿ ಪಾತ್ರಗಳಾಗಿ ಮೆರೆದಿವೆ.
ಎ೦ಗೆಯು೦  ಎಪ್ಪೋದಂ
ಕಳಗು
ಮೈನಾ
ಖ್ಯಾತ ನಿರ್ದೇಶಕ  ಮುರುಗದಾಸ್ ನಿರ್ಮಾಣದ ಎನ್ಗೆಯಂ ಎಪ್ಪೋದಂ ಕೂಡ ಒಂದು ಸರಳ ಸುಂದರವಾದ ಚಿತ್ರವಾದರೂ ಅದರ ಅನಿರೀಕ್ಷಿತ ಕ್ಲೈಮಾಕ್ಸ್ ನಮ್ಮನ್ನು ದ೦ಗುಬದಡಿಸುವುದ೦ತೂ ನಿಜ. ಎರಡು ಪ್ರೇಮಕಥೆಗಳನ್ನು ತುಂಬಾ ಚೆನ್ನಾಗಿ ನವಿರಾಗಿ ನಿರೂಪಿಸುತ್ತಾ ಹೋಗುವ ನಿರ್ದೇಶಕ ಕೊನೆಯಲ್ಲಿ ಒಂದು ಅಪಘಾತ ಮಾಡಿಸಿ ಚಿತ್ರವನ್ನೂ ನೋವಿನಲ್ಲಿ ಮುಗಿಸಿಬಿಡುತ್ತಾನೆ.ಅದೇ ಸಿನಿಮಾದ ಪ್ರಾರ೦ಭವೂ ಹೌದು.ಇದು ಕೂಡ ಕಡಿಮೆ ಬಜೆಟ್ಟಿನ ಚಿತ್ರವೇ..ಆದರೂ ಸ್ಕ್ರಿಪ್ಟ್ ವಿಷಯದಲ್ಲಿ ಉತ್ತಮ ಚಿತ್ರವೇ ಸರಿ. ಹಾಗೆ ನೋಡಿದರೆ 'ತಮಿಳ್ ಪಡಂ', ಮೈನಾ ಮುಂತಾದ ಚಿತ್ರಗಳೂ ಕಡಿಮೆ ಬಂಡವಾಳದ ಚಿತ್ರಗಳೇ. ಈ ಚಿತ್ರಗಳು ಯಶಸ್ಸಾದದ್ದು ಸ್ಟಾರ್ ಗಳಿಂದ ಅಲ್ಲ. ಕಥೆ-ನಿರೂಪಣೆಯಿಂದ.  ಇತ್ತೀಚಿಗೆ ಬಂದ ತಮಿಳಿನ ಕಡಿಮೆ ಬಜೆಟ್ಟಿನ ಸಿನೆಮಾಗಳಲ್ಲಿ ಅದೆಂತಹ ಸತ್ವ ಇರುತ್ತದೆ ಎನಿಸುತ್ತದೆ. ಆ ಕಥಾಹಂದರ , ಭಾಷೆ, ಜನಜೀವನದ ಸೊಬಗನ್ನು ಎಷ್ಟು ಚೆನ್ನಾಗಿ ತೆರೆಯ ಮೇಲೆ ನಿರೂಪಿಸುತ್ತಾರಲ್ಲಾ ಅದು ಖುಷಿ ಕೊಡುತ್ತದೆ. ಹಾಗೆಯೇ ಮೊನ್ನೆ ಬಿಡುಗಡೆಯಾದ ಬಾಲಾಜಿ ಶಕ್ತಿವೇಲ್ ನಿರ್ದೇಶನದ ವಾಳಕ್ ಏನ್ 18/9 ಸಿನೆಮಾ ಕೂಡ ಅದೇ ಪಟ್ಟಿಗೆ ಸೇರಿಸಬಹುದಾದ೦ತಹ  ಚಿತ್ರ. ಕಳಗು ಕಥಾವಸ್ತುವಿನ ದೃಷ್ಟಿಯಿ೦ದ ವಿಶೇಷವಾದ  ಚಿತ್ರ ಎನಿಸಿಕೊಳ್ಳುತ್ತದೆ. ಇದು ಕೂಡ ದುರಂತದಲ್ಲಿ ಕೊನೆಯಾದರೂ ಒಂದು ವಿಶಿಷ್ಟವಾದ ಜನಾಂಗದ ನಡುವೆ ಇಟ್ಟಿರುವ ಪ್ರೇಮ ಕಥೆ ನಮ್ಮನ್ನು ತಟ್ಟದಿರದು .ಬೆಟ್ಟದ ಇರುಕಲು, ಪ್ರಪಾತಕ್ಕೆ  ಬಿದ್ದ ಹೆಣಗಳನ್ನು ಎತ್ತುವುದನ್ನೇ ಕಾಯಕ ಮಾಡಿಕೊಂಡಿರುವವರ ಕಥೆ ಇದೆ. ಒಂದು ಭಿನ್ನ ಅನುಭವಕ್ಕಾಗಿ ಈ ಚಿತ್ರವನ್ನೊಮ್ಮೆ ನೋಡಬಹುದು. 
 ನಮ್ಮಲ್ಲಿ ಕಡಿಮೆ ಬಂಡವಾಳದ ಚಿತ್ರಗಳೆಂದರೆ ಕಿರುತೆರೆ ಚಿತ್ರಗಳು ಎನ್ನುವಂತಾಗಿಬಿಟ್ಟಿದೆ.  ಅಂದರೆ ಕಿರುತೆರೆಗಾಗಿ ಅತೀ ಕಡಿಮೆ ವೆಚ್ಚದಲ್ಲಿ ರೀಲು ಸುತ್ತಿ, ಆನಂತರ ನಾಮಕಾವಸ್ತೆಗೆ ಒ೦ದು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಹಣಮಾಡಿಕೊಳ್ಳುವ ಚಿತ್ರಗಳು.ಬರೀ ಎರಡ್ಮೂರು ತಿಂಗಳಿಗೆ ಒ೦ದು ಸಿನಿಮಾ ಮುಗಿದುಹೋಗುತ್ತದೆ.   ನಿರ್ಮಾಪಕರಿಗೆ ಲಾಭವಾದರೂ ಕನ್ನಡಚಿತ್ರರಂಗ ಮಾತ್ರ ಅಧೋಗತಿಗೆ ಇಳಿದುಹೋಗುತ್ತದೆ.ಈಗ ಆಗಿರುವುದೂ ಅದೇ. ಕಡಿಮೆ ವೆಚ್ಚದ ಚಿತ್ರ ಅಂದರೆ ಮೊದಲೆಲ್ಲ ಪ್ರಯೋಗಾತ್ಮಕ ಅಥವಾ ಉತ್ತಮ ಕಥೆಯುಳ್ಳ ಚಿತ್ರ ಎನ್ನುವಂತಿತ್ತು. ಆದರೆ ಈವತ್ತು ಕನ್ನಡ ಚಿತ್ರರಂಗದಲ್ಲಿ ಕಡಿಮೆ ವೆಚ್ಚದ ಚಿತ್ರಗಳೆಂದರೆ ಚಾನೆಲ್ ಚಿತ್ರಗಳು ಎನ್ನುವಂತಾಗಿದೆ. ಹಿಂದಿಯಲ್ಲೂ ಕಡಿಮೆ ಬಜೆಟ್ಟಿನ ಚಿತ್ರಗಿಗೊ೦ದು ಹೆಸರಿದೆ.ಬೆಲೆ ಇದೆ. ಆದರೆ ನಮ್ಮಲ್ಲಿ ಕೆಲವು ದುರಾಸೆಯ , ಸಿನಿಮಾ ಪ್ರೀತಿಯಿಲ್ಲದ ಜನರಿಂದಾಗಿ ಈವತ್ತಿನ ಪರಿಸ್ಥಿತಿ ಬಂದೊದಗಿದೆ.
ತಮಿಳ್ ಪಡಂ
ಹಾಗ೦ತಹ ಬೇರೆ ಭಾಷೆಗಳಲ್ಲಿ  ಕೆಟ್ಟ ಸಿನಿಮಾಗಳು ಇಲ್ಲವೆಂದಲ್ಲ. ಆದರೆ ಇಲ್ಲಿಗಿಂತ ಕಡಿಮೆ.ಮೇಲಿನ ಸಿನೆಮಾಗಳನ್ನೆಲ್ಲ ನೋಡಿಲ್ಲವಾದರೆ ಬಿಡುವು ಮಾಡಿಕೊಂಡು ಒಮ್ಮೆ ನೋಡಿ.

Saturday, June 23, 2012

ಸಿನಿಮಾ ..ಸಾಕ್ಷ್ಯ ಚಿತ್ರಗಳು..ವಿವಾದ..


1978 ರಲ್ಲಿ ಬಿಡುಗಡೆಯಾದ ಕ್ಯಾಪ್ರಿಕಾರ್ನ್ ಒನ್ ಸಿನಿಮಾದ ಕಥೆ ಹೀಗಿದೆ. ನಾಸಾದ ವಿಜ್ಞಾನಿಗಳು ಒಂದಷ್ಟು ಜನರನ್ನು ಮಂಗಳಗ್ರಹಕ್ಕೆ ಕಳುಹಿಸುವ ಸಂಭ್ರಮದಲ್ಲಿದ್ದಾರೆ.ಈಗಾಗಲೆ ಅದರ ತಯಾರಿಗಳು ನಡೆದಿವೆ. ಅದು ಜಗತ್ತಿನ ಮೊಟ್ಟಮೊದಲ ಮಂಗಳಯಾನವಾದ್ದರಿಂದ ಜಗತ್ತಿನೆಲ್ಲೆಡೆ ಕುತೂಹಲವಿದೆ.ಇಡೀ ದೇಶದ ಜನರು ಆ ಒಂದು ಸಂಭ್ರಮದ ಕ್ಷಣಕ್ಕಾಗಿ ಎದುರುನೋಡುತ್ತಿರುತ್ತಾರೆ.
ಸಾಧ್ಯವಿಲ್ಲ ಎಂಬುಗಗನಯಾತ್ರಿಗಳೂ ತಮ್ಮ ಮೊಟ್ಟಮೊದಲ ಯಾನದ ಖುಷಿಇತಿಹಾಸವಾಗುವ ಅದ್ಭುತ ಗಳಿಗೆಗೆ ಕಾಯುತ್ತಿರುವಾಗಲೇ ಅವರನ್ನೆಲ್ಲಾ ಆ ರಾಕೆಟಿನಿಂದ ಹೊರದಬ್ಬಲಾಗುತ್ತದೆ. ಆನಂತರ ಖಾಲಿಯಾದ ಆ ರಾಕೆಟ್ ಉಡಾವಣೆಯಾಗುತ್ತದೆ. ಆದರೆ ಯಾತ್ರಿಗಳನ್ನು ಮಾತ್ರ ರಹಸ್ಯತಾಣವೊಂದಕ್ಕೆ ಕರದೊಯ್ಯಲಾಗುತ್ತದೆ. ಏನಾಗುತ್ತಿದೆ ಎಂಬುದು ಯಾರಿಗೋ ಗೊತ್ತಾಗುವುದಿಲ್ಲ. ಆನಂತರ ಗೊತ್ತಾಗುವ ವಿಷಯವೆಂದರೆ ಆ ಅಂತರಿಕ್ಷದ ತಂತ್ರಜ್ಞಾನದಲ್ಲಿ ದೋಷವಿರುವುದರಿಂದ ಅದರಲ್ಲಿ ಪ್ರಯಾಣಿಸಲು ದು. ಹಾಗಂತ ಅದನ್ನು ಜಗಜ್ಜಾಹೀರು ಮಾಡಲುಸಾಧ್ಯವಿಲ್ಲ. ಹಾಗಾಗಿ ಅವರನ್ನು ಸ್ಟುಡಿಯೋ ಒಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮಂಗಳಗ್ರಹದಂತೆ ಸೆಟ್ ಹಾಕಲಾಗಿರುತ್ತದೆ. ಅದರಲ್ಲಿ ಚಿತ್ರೀಕರಣಮಾಡಿ ಜಗತ್ತಿಗೆ ನಿಜವಾಗಿಯೂ ಮಂಗಳಗ್ರಹದ ಚಿತ್ರಗಳು ಅವು, ತಾವು ಮಂಗಳಗ್ರಹ ಯಾನವನ್ನು ಯಶಸ್ವಿಯಾಗಿ ಮುಗಿಸಿದ ಮೊದಲಿಗರು ಎಂದು ಕೊಚ್ಚಿಕೊಳ್ಳುವ ಉಮ್ಮೇದು ಸರ್ಕಾರದ್ದು. ಆದರೆ ಒಬ್ಬ ಪತ್ರಕರ್ತನಿಂದಾಗಿ ಎಲ್ಲಾ ಬೆಳಕಿಗೆ ಬರುತ್ತದೆ.
ಪೀಟರ್ ಹ್ಯಾಮ್ಸ್ ನಿರ್ದೇಶನದ ಈ ರೋಮಾಂಚಕಾರಿ ಚಿತ್ರ ತುಂಬಾ ಕುತೂಹಲಕರವಾಗಿದೆ.
ಅದೇ ರೀತಿಯ ಇನ್ನೊಂದು ಪ್ರಶ್ನೆ ಇದೆ.
ಮೊಟ್ಟಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿರಿಸಿದ ವ್ಯಕ್ತಿ ಯಾರು? ಉತ್ತರ ಎಲ್ಲರಿಗೂ ಗೊತ್ತು. ನೀಲ್ ಆರ್ಮ್ ಸ್ಟ್ರಾಂಗ್. ಆದರೆ ಅದು ನಿಜವೇ ಎಂಬ ಪ್ರಶ್ನೆ ಕಾಡತೊಡಗಿದ್ದು ನನಗೆ ಕಾನ್ಸ್‌ಪಿರಸಿ ಥಿಯರಿ:ಡಿಡ್ ವಿ ಲ್ಯಾಂಡ್ ಆನ್ ದಿ ಮೂನ್ ಎಂಬ ಸಾಕ್ಶ್ಯಚಿತ್ರವನ್ನು ವೀಕ್ಷಿಸಿದಾಗ. ವರ್ಲ್ಡ್ಸ್ ಡೆಡ್ಲಿಯಸ್ಟ್ ಅರ್ಥ್‌ಕ್ವೇಕ್ಸ್ ಸಾಕ್ಷ್ಯಚಿತ್ರದ ನಿರ್ದೇಶಕ ಜಾನ್ ಮೊಫೆಟ್ ನಿರ್ದೇಶನ ಈ ಸಾಕ್ಷ್ಯಚಿತ್ರ 45 ನಿಮಿಷಗಳಷ್ಟು ಉದ್ದವಿದೆ. ಪ್ರಾರಂಭದಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮಾನವನ ಹೆಜ್ಜೆ ಗುರುತು, ಆವಾಗ ತೆಗೆದೆ ಫೋಟೊಗಳು, ಆವತ್ತಿನ ಖ್ಯಾತರ ಹೇಳಿಕೆಗಳನ್ನು ತೋರಿಸುವ ನಿರ್ದೇಶಕ ಆನಂತರ ಒಂದೊಂದೆ ಅನುಮಾನಗಳನ್ನು ಸಾಕ್ಷಿ ಸಮೇತ ನಮ್ಮ ಮುಂದಿರಿಸುತ್ತಾ ಹೋಗುತ್ತಾನೆ. ಅವನು ಕೊಡುವ ಕಾರಣಗಳು, ಅದನ್ನು ಸಮರ್ಥಿಸುವ ಹೇಳಿಕೆಗಳು ಮುಂತಾದವುಗಳು ನಮ್ಮನ್ನೂ ಆ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತವೆ.ಜೆ ಎಫ್ ಕೆನೆಡಿ ಸಾಕ್ಷ್ಯಚಿತ್ರದ ನಿರ್ದೇಶಕ ವಿಲಿಯಮ್ ಕಾರೆಲ್ ನಿರ್ದೇಶನದ ಮತ್ತೊಂದು ಸಾಕ್ಷ್ಯಚಿತ್ರ ಆಪರೇಷನ್ ಲೂನ್ ಈ ನಿಟ್ಟಿನಲ್ಲಿ ಮತ್ತಷ್ಟು ಸಾಕ್ಷ್ಯಾಧಾರ ಕೊಟ್ಟು ಚಂದ್ರನ ಮೇಲೆ ಕಾಲಿಟ್ಟದ್ದು ಸುಳ್ಳು ಎಂಬುವ ಮಾತಿಗೆ ಪುಷ್ಠಿ ನೀಡುತ್ತದೆ. ಹಾಗೆ 2003ದಿ ಟ್ರೂತ್ ಬಿಹೈ೦ದ್ ಮೂನ್ ಲ್ಯಾ೦ಡಿ೦ಗ್ ಸಹ ಈ ವಾದವನ್ನು ಎತ್ತಿಹಿಡಿಯುತ್ತದೆ,.ಅಂದರೆ ಇತಿಹಾಸವನ್ನು ತಿರುಚಲಾಗಿದೆಯೇ..?
ಈ ಸಾಕ್ಷ್ಯಚಿತ್ರದಲ್ಲಿ ಕೆಲವು ಗಮನಿಸುವಂತಹ ಅಂಶಗಳಿವೆ. 
**ಚಂದ್ರನ ಮೇಲಿನ ಗುರುತ್ವಾಕರ್ಷಣೆ ಭೂಮಿಗಿಂತ ಆರು ಪಟ್ಟು ಕಡಿಮೆ! ಅಂತಹುದ್ದರಲ್ಲಿ ಅದು ಹೇಗೆ ಅಷ್ಟು ಕಡಿಮೆ ಅವಧಿಯಲ್ಲಿ ಅಸಾಧ್ಯವೆನ್ನಬಹುದಾದಷ್ಟು ಫೋಟೊ ಕ್ಲಿಕ್ಕಿಸಲು ಸಾಧ್ಯವಾಯಿತು..
**ಪಾದದ ಗುರುತಿನ ತಗ್ಗಿನಲ್ಲಿರುವ  ನೆರಳು-ಬೆಳಕಿನ ಅಸಮತೋಲನ.., ಮೂನ್ ಲ್ಯಾಂಡರ್ಸಿನ ತೂಕ ಟನ್ ಗಟ್ಟಲೇ ಇದ್ದರೂ ಅದರ ತಗ್ಗಿನ ಗುರುತಿಗಿಂತ ಕೆಜಿ ಗಟ್ಟಲೇ ತೂಕದ ಮನುಷ್ಯನ ಪಾದದ ತಗ್ಗು  ಅದಕ್ಕಿಂತಲೂ ಆಳವಾಗಿ ಮೂಡಿದ್ದು ಹೇಗೆ?
** ಈ ಚಂದ್ರಗ್ರಹಯಾನದಲ್ಲಿ ಭಾಗಿಯಾದ ಮುಖ್ಯ ವ್ಯಕ್ತಿಗಳು ಇದ್ದಿಕ್ಕಿದ್ದಂತೆ ಅಸಹಜವಾಗಿ, ಆಕಸ್ಮಿಕವಾಗಿ ಅಕಾಲಿಕ ಮರಣಕ್ಕೀಡಾದದ್ದೆಲ್ಲಾ ಕಾಕತಾಳೀಯವೇ..
ಇವೆಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ.
ನನಗೆ ಎಸ್.ಎಲ್. ಭೈರಪ್ಪನವರ ಆವರಣ ಓದಿದಾಗಲೂ ಹೀಗೆ ಆಗಿತ್ತು. ಟಿಪ್ಪು ಸುಲ್ತಾನ್ ಮತಾಂಧನಾ ? ಎನ್ನುವ ಪ್ರಶ್ನೆಗೆ ನಿಖರ ಉತ್ತರ ಸಿಕ್ಕಿರಲಿಲ್ಲ.ಈಗಲೂ ಇಲ್ಲ. ನಂಜನಗೂಡಿನಲ್ಲಿ ಶ್ರೀನಂಜುಂಡೀಶ್ವರ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್ ನಂಜನಗೂಡಿಗೆ ಭೇಟಿ ಕೊಟ್ಟ, ದೇವಸ್ಥಾನಕ್ಕೆ ಕಾಣಿಕೆ ನೀಡಿದ ಕುರುಹುಗಳಿವೆ. ಆದರೆ ಎಸ ಎಲ್ ಭೈರಪ್ಪನವರ ಅಧ್ಯಯನ ಇವೆಲ್ಲಕ್ಕಿಂತ ಆಳವಾದುದರಿ೦ದ ಯಾವುದನ್ನೂ ಹೀಗೆ ಎಂದು ಹೇಳಲಾಗುವುದಿಲ್ಲ. ಏನೆ ಆಗಲಿ ಕೆಲವೊಂದು ಸಿನಿಮಾಗಳು, ಸಾಕ್ಷ್ಯಚಿತ್ರಗಳು, ಪುಸ್ತಕಗಳು  ಒಂದಷ್ಟು ಇತಿಹಾಸದ ಕಡೆಗೆ ತಿರುಗಿನೋಡುವಂತೆ, ಯೋಚಿಸುವಂತೆ ಮಾಡುತ್ತವಲ್ಲಾ..ಅದು ಖುಷಿಯ ಸಂಗತಿ. ಅಲ್ಲವೇ

Wednesday, June 20, 2012

ಆಸ್ಕರ್ ಕಣದ ಚಿತ್ರಗಳು-3


ಸಾರಿಯಾ ಆಸ್ಕರ್ ಕಣದಲ್ಲಿ  ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದುಕೊಂಡ ನಟಿ ಆಕ್ಟೇವಿಯಾ ಸ್ಪೆನ್ಸರ್. ಚಿತ್ರ ದಿ ಹೆಲ್ಪ್.  ಜಾತಿ, ಮತ ಅಂತಸ್ತಿನಂತೆಯೇ ವರ್ಣಬೇಧ ಕೂಡ ಒಂದು ಸಾಮಾಜಿಕ ಪಿಡುಗು. ತಮ್ಮದಲ್ಲದ ತಪ್ಪಿಗೆ ಮಾನಸಿಕ ಹಿಂಸೆ ಅನುಭವಿಸುವ ಕರಿಯರ ಬದುಕಿನ ಮಜಲುಗಳನ್ನು ತೆರೆದಿಟ್ಟ ಚಿತ್ರ ದಿ ಹೆಲ್ಪ್. ಕಾಥ್ರಿನ್ ಸ್ಟಾಕೆಟ್‌ರವರ ಕಾದಂಬರಿ ಆಧಾರಿತ ಈ ಚಿತ್ರದ ನಿರ್ದೇಶಕ ಟಾಟಾ ಟೇಲರ್.
ದಿ ಹೆಲ್ಪ್ ಇಷ್ಟವಾಗುವುದು ಅದರ ಸರಳತೆಯಿಂದಾಗಿ. ಯಾವುದನ್ನೂ ವೈಭವೀಕರಿಸದೇ, ಅಥವಾ ಓರೆಗಣ್ಣಿಂದ ನೋಡದೇ ವಾಸ್ತವತೆಯನ್ನು ತೆರೆದಿಡುತ್ತಾ ಹೋಗುವ ವಸ್ತು ನಿಷ್ಠತೆಗೆ. ಒಂದು ಸಾಮಾಜಿಕ ಪಿಡುಗು, ಒಂದು ಅವ್ಯವಸ್ಥೆ ಅಥವಾ ಒಂದು ಸಮಸ್ಯೆಯ ಕುರಿತಾದ ಸಿನಿಮಾ ಮಾಡುವಾಗ ಒಬ್ಬ ಚಿತ್ರಕರ್ಮಿ ಅಳವಡಿಸಿಕೊಳ್ಳಬೇಕಾದದ್ದು ಈ ಒಂದು ನಿಷ್ಪಕ್ಷಪಾತ ಭಾವನೆಯನ್ನು. ಯಾರನ್ನೂ ಕೆಟ್ಟವರನ್ನಾಗಿಸದೇ ಯಾರನ್ನೂ ಹೀರೋಗಳನ್ನಾಗಿ ಮಾಡದೇ ಪ್ರತಿ ಪಾತ್ರವನ್ನೂ ಅದರ ಗುಣಾವಗುಣಗಳಿಗೆ ತಕ್ಕಂತೆ ರೂಪಿಸುತ್ತಾ ಹೋಗುವ ಕುಶಲತೆ ಮೆಚ್ಚಬೇಕಾದುದೇ. ಇಲ್ಲಿ ಒಬ್ಬರ, ಒಂದು ಕುಟುಂಬದ ಕಥೆಯಿಲ್ಲ. ಒಂದು ಜನಾಂಗದ ಇತಿಹಾಸವಿದೆ. ನಮದಿಷ್ಟೇ, ನಾವಿಷ್ಟೇ ಎಂದು ಬದುಕಬೇಕಾದ ಜನ ಹಾಗೇ ಬದುಕಬೇಕಾ..? ಎಂಬ ಪ್ರಶ್ನೆಯಿದೆ. ಹಾಗೇ ಅದಕ್ಕೆ ಉತ್ತರವೂ ಇದೆ. ಮಕ್ಕಳನ್ನು ನೋಡಿಕೊಳ್ಳುವುದರಿಂದಾ ಹಿಡಿದು ಕಸಗುಡಿಸುವವರೆಗೇ ಎಲ್ಲ ಬಗೆಯ ಕೆಲಸಗಳಿಗೂ ಕರಿಜನಾಂಗದ ಮೇಲೆ ಅವಲಂಭಿತರಾಗಿರುವ ಬಿಳಿಯರು, ಎಲ್ಲಾ ರೀತಿಯಿಂದಲೂ ಸಮರ್ಥರಾಗಿದ್ದು, ಬಿಳಿಯರ ಎಲ್ಲಾ ಕೆಲಸಗಳನ್ನೂ ಮಾಡಿಕೊಟ್ಟು ಅವರ ಮೇಲೆಯೇ ಅವಲಂಭಿತರಾಗಿರುವ ಕರಿಯರು ಮತ್ತು ಅವರ ನಡುವಿನ ಭೇದಭಾವವನ್ನು ಚಿಕ್ಕ ಚಿಕ್ಕ ಘಟನೆಗಳ ಮೂಲಕ ತೆರೆದಿಡುತ್ತಾ ಸಾಗುವ ಈ ಚಿತ್ರ ಮನರಂಜನೆಯ ಜೊತೆಗೆ ಮನುಕುಲಕ್ಕೇ ಅಗತ್ಯವಾದ ಉತ್ತಮ ಸಂದೇಶವನ್ನೂ ಕೊಡುವಲ್ಲಿ ಯಶಸ್ವಿಯಾಗುತ್ತದೆ. ಕೆಲವು ದೃಶ್ಯಗಳಲ್ಲಿ ನಗುವಿದ್ದರೂ ಅದರ ಹಿಂದೆ ವಿಷಾದವಿದೆ. ಹಾಗೆ ಮನಕಲುಕುವ ದೃಶ್ಯದ ಹಿಂದೆ ತೆಳು ಹಾಸ್ಯದ ಲೇಪನವಿದೆ.
ಇಂಥ ಅತ್ಯುತ್ತಮ ಸಂದೇಶವಿರುವ, ಸಂವೇದನಾಶೀಲ, ಮನೋಜ್ಞ ಸಿನಿಮಾವನ್ನು ಟಾಟಾ ಟೇಲರ್ ತಂಡ ಮಾಡಿದೆ. ಒಮ್ಮೆ ನೋಡಿ.ಹಾಗೆಯೇ ನಿಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ ಮತ್ತು ಮುಂದಿನ ಪೀಳಿಗೆಯ ಮಕ್ಕಳಿಗೆ ಈ ಸಿನಿಮಾ ನೋಡುವಂತೆ ಹೇಳಿ

Friday, June 15, 2012

ವಿ'ಚಿತ್ರ'ಗಳು-2


ಸಿನಿಮಾ ನೋಡುತ್ತಿದ್ದ ಹಾಗೆಯೇ ಕಥೆ ಒಂದು ಘಟ್ಟಕ್ಕೆ ತಲುಪಿದ ಮೇಲೆ ಇನ್ನೇನು ಕೊನೆಯ ಹಂತ ಬಂತು ಎನ್ನುವಷ್ಟರಲ್ಲಿ ತೆರೆಯ ಮೇಲೆ ನೀವು ಅಂಜುಬುರುಕರಾಗಿದ್ದಲ್ಲಿ, ಮೆದು ಹೃದಯದವರಾಗಿದ್ದಲ್ಲಿ ಮುಂದಿನ ದೃಶ್ಯಗಳನ್ನು ನೋಡಲುಸಾಧ್ಯವಿಲ್ಲ.. ಈಗಲೇ ಚಿತ್ರಮಂದಿರದಿಂದ ಹೊರಟುಬಿಡಿ..ಎಂದು ಮೂಡಿದರೆ ನಿಮಗೇನಾಗಬೇಡ..ಇದು ಗ್ಯಾಸ್ಪರ್‌ನೋ ಎಂಬ ನಿರ್ದೇಶಕನ ಐ ಸ್ಟ್ಯಾಂಡ್ ಆಲೋನ್ ಚಿತ್ರದಲ್ಲಿ ಕ್ಲೈಮ್ಯಾಕ್ಸಿಗೂ ಮುನ್ನ ಬರುವ ತೆರೆಬರಹ. ಇದೇ ನಿರ್ದೇಶಕನ ಮತ್ತೊಂದು ಸಿನಿಮಾ ಇದೆ. ಅದೇ ಇರಿವರ್ಸಿಬಲ್. 2002 ರಲ್ಲಿ ತೆರೆಗೆ ಬಂದ ಈ ಚಿತ್ರದ ತಾರಾಗಣದಲ್ಲಿ ಖ್ಯಾತ ನಟಿ ಮೋನಿಕಾ ಬೆಲ್ಲುಚಿ, ವಿನ್ಸೆ೦ಟ ಕೇಸಲ್ ಆಲ್ಬರ್ಟ್  ದ್ಯೂಪನಲ್ ಅಭಿನಯಿಸಿದ್ದಾರೆ.. ಆ ನುಡಿವಾಕ್ಯ ಐ ಸ್ಟ್ಯಾಂಡ್ ಆಲೋನ್ ಸಿನಿಮಾದ ಕೊನೆಯ ದೃಶ್ಯಕ್ಕೆ ಮಾತ್ರ ಅನ್ವಯಿಸಿದರೆ ಇರಿವರ್ಸಿಬಲ್ ಸಿನಿಮಾಗೆ  ಇಡೀ ಚಿತ್ರಕ್ಕೆ ಅನ್ವಯಿಸುತ್ತದೆ.
ಹೆಸರೇ ಸೂಚಿಸುವಂತೆ ಇಡೀ ಚಿತ್ರವೇ ಹಿಂದುಮುಂದಾಗಿದೆ. ಅಂದರೆ ಸಿನಿಮಾದ ಕ್ಲೈಮ್ಯಾಕ್ಸ್ ಮೊದಲು ಬಂದರೆ ಮೊದಲ ದೃಶ್ಯ ಕೊನೆಯಲ್ಲಿ ಬಂದು ಚಿತ್ರ ಮುಗಿಯುತ್ತದೆ. ಒಂದು ಸುಂದರ ಕುಟುಂಬ ಒಂದು ರಾತ್ರಿಯಲ್ಲಿ ನಿರ್ನಾಮವಾಗುವುದೇ ಚಿತ್ರದ ಕಥಾಹಂದರ.
ಈ ತರಹದ ತಿರುಗುಮುರುಗು ನಿರೂಪಣೆಯನ್ನು ನಿರ್ದೇಶಕ ಯಾಕಾಗಿ ಆಯ್ಕೆ ಮಾಡಿಕೊಂಡ ಎಂಬುದಕ್ಕೆ ಇಡೀ ಸಿನಿಮಾದಲ್ಲಿ ಸ್ಪಷ್ಟ ನಿದರ್ಶನವೇನೂ ಕಾಣುವುದಿಲ್ಲ. ಅಥವಾ ಹಾಗೆ ತಿರುಗುಮುರುಗು ಮಾಡಿರುವುದರ ಹಿಂದೆ ಬುದ್ದಿವಂತಿಕೆಯ, ಅಚ್ಚರಿ ತರಿಸುವ ಯಾವ ಅಂಶವೂ ಕಂಡುಬರುವುದಿಲ್ಲ. ಬರೇ ವಿಚಿತ್ರ ನಿರೂಪಣೆಗೋಸ್ಕರ ಈ ಚಿತ್ರ ಆಯ್ದಕೊಂಡಿರಬೇಕೇನೋ ಎನಿಸುತ್ತದೆ.
ಸಿನಿಮಾವೂ ಅಷ್ಟೆ. ತುಂಬಾ ಹಿಂಸಾತ್ಮಕವಾಗಿದೆ. ಅದರಲ್ಲೂ ಕ್ಯಾಮೆರಾ ಚಲನೆಯಂತೂ ಯಾರೋ ಕ್ಯಾಮೆರ ಕೈಯಲ್ಲಿ ಹಿಡಿದು ಧಾವಂತದಿಂದ ದಿಕ್ಕುದೆಸೆಯಿಲ್ಲದೇ ಎತ್ತೆತ್ತಲೋ ಹೆಜ್ಜೆ ಹಾಕಿದಂತಿದೆ. ಸಿನಿಮಾದ ಮಧ್ಯದಲ್ಲಿ ಬರುವ ಅತ್ಯಾಚಾರದ ಸನ್ನಿವೇಶ ಬಿಟ್ಟರೇ ಬೇರಾವ ದೃಶ್ಯದಲ್ಲೂ ಕ್ಯಾಮೆರಾ ನಿಲ್ಲುವುದೇ ಇಲ್ಲ. ಜೊತೆಗೆ ಗುಂಯ್ ಎನ್ನುವ ಹಿನ್ನೆಲೆ ಸಂಗೀತ ಬೇರೆ. ದೃಶ್ಯಗಳು ಅದೆಷ್ಟು ನೈಜವಾಗಿವೆಯೆಂದರೆ ನೋಡಿ ಅರಗಿಸಿಕೊಳ್ಳುವುದು ಅಸಾಧ್ಯ. ಅದರಲ್ಲೂ ಸಲಿಂಗಿಗಳ ಕ್ಲಬ್ಬಿನಲ್ಲಿ ನಡೆಯುವ ಬರ್ಬರ ಹತ್ಯೆ ಚಿತ್ರೀಕರಿಸಿರುವ ಪರಿಗೆ ನೋಡಲಾಗದೆ  ಕಣ್ಣುಮುಚ್ಚಿಕೊಳ್ಳಲೇ ಬೇಕಾಗುತ್ತದೆ. ಅದೇ ರೀತಿ ಅತ್ಯಾಚಾರದ ಸನ್ನಿವೇಶದಲ್ಲೂ. 
ಸುಮಾರು ಒಂಬತ್ತು ನಿಮಿಷಗಳಷ್ಟು ಉದ್ದವಿರುವ ಈ ಅತ್ಯಾಚಾರದ ದೃಶ್ಯದಲ್ಲಿ ಕ್ಯಾಮೆರಾ ಒಂದುಕಡೆ ಸ್ಥಿರವಾಗಿಬಿಡುತ್ತದೆ. ಆದರೆ ಆ ಇಬ್ಬರು ಕಲಾವಿದರ ಅಭಿನಯ, ದೃಶ್ಯದ ಬರ್ಬರತೆ, ಹಿನ್ನೆಲೆ ಸಂಗೀತ ಮತ್ತು ಬೆಳಕಿನ ಸಂಯೋಜನೆ ಎಲ್ಲಾ ಸೇರಿ ನೋಡುಗನ ಮನಸ್ಸನ್ನು ಘಾಸಿಗೊಳಿಸಿಬಿಡುತ್ತದೆ.
ಒಂದು ಭಿನ್ನ ಪ್ರಯತ್ನ, ವಿಚಿತ್ರ ಪ್ರಯೋಗ ಹಾಗೆ ಹಿಂಸಾತ್ಮಕ ಸಿನಿಮಾಗಳೆಡೆಗೆ ನಿಮ್ಮ ಒಲವಿದ್ದರೆ ಒಮ್ಮೆ ನೋಡಿ ಎನ್ನುವ ಧೈರ್ಯಮಾಡಬಹುದು.
ಇಲ್ಲದಿದ್ದರೆ ಯಾರಿಗೂ ನೋಡಿ ಎಂದು ಹೇಳದಿರುವುದೇ ಒಳ್ಳೆಯದು.


Wednesday, June 13, 2012

ಅನಿರೀಕ್ಷಿತ ಪ್ರವಾಸವೂ...


ಇರುವುದಿಲ್ಲ. ಯಾಕೆಂದರೆ ದಿನದ ಇಪ್ಪತ್ತನಾಲ್ಕು ತಾಸೂ ಚಿತ್ರದ ಕಥೆಯ ಚರ್ಚೆಯಲ್ಲೇ ಕಳೆದು ಹೋಗಿರುತ್ತದೆ. ಸುಮ್ಮನೇ ಹಸಿರು ಪ್ರದೇಶದ, ಹೊಸ ಹೊಸ ಜಾಗದ ನಡುವೆ ನಡೆಯುತ್ತ 'ಹಾಗೇ ಮಾಡೋಣ', 'ಹೀಗೆ ಮಾಡಿದರೆ ಚೆನ್ನಾಗಿರುತ್ತೆ..' ಎಂದು ಮಾತಾಡುಸಿನಿಮಾದ ಕೆಲಸಕ್ಕಾಗಿ ಒಂದು ವಾರ ಭಟ್ಕಳದ ಅಕ್ಕಪಕ್ಕದ ಪ್ರದೇಶಗಳಿಗೆ ಭೇಟಿನೀಡಬೇಕಾಗಿತ್ತು. ಸಿನಿಮಾದ ಬರವಣಿಗೆಯ ಕೆಲಸವೆಂದರೆ ಅಲ್ಲಿ ಸಿನಿಮಾ ನೋಡಲು ಆಸ್ಪದ ತ್ತಾ ಸಾಗುವುದೇ ಒಂದು ವಿಶಿಷ್ಟ ಅನುಭವ. ಅವೇನೂ ಪ್ರವಾಸಿ ತಾಣಗಳಲ್ಲ. ಅಲ್ಲಿನ ಜನರು ಬದುಕುವ ಪರಿ, ಅವರ ಊಟತಿಂಡಿ ವ್ಯವಸ್ತೆ, ಅಲ್ಲಿನ ರಾಜಕೀಯ ಪರಿಸ್ಥಿತಿ, ಅಲ್ಲಿನ ಜನರ ಮನಸ್ಥಿತಿ, ಸಾಹಿತ್ಯ, ಸಿನಿಮಾ, ರಾಜಕೀಯ, ವಿದ್ಯಾಭ್ಯಾಸಗಳೆಡೆಗೆ ಅವರಿಗಿರುವ ದೃಷ್ಟಿಕೋನ ಮುಂತಾದವುಗಳನ್ನು ಗಮನಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿತ್ತದು. ಅದರಲ್ಲೂ ಭಟ್ಕಳ ಅಕ್ಕಪಕ್ಕದ ಸುಮಾರು ಹಳ್ಳಿಗಳಿಗೆ ಬಸ್ಸಿಡಿದು ಆಟೋದಲ್ಲಿ ಓಡಾಡಿಕೊಂಡು ಅಲ್ಲಿನ ಜನರ ಜೊತೆ ಅದೂ ಇದೂ ಮಾತಾಡುವುದೇ ಒ೦ದು ಮಜ. ನಾವಿದ್ದ ಜಾಗದಿಂದ ಮುರಡೇಶ್ವರ ಕೇವಲ ಹನ್ನೆರೆಡು ಕಿಲೋಮೀಟರ್ ಆದ್ದರಿಂದ ಅಲ್ಲೂ ಹೋಗಿಬಂದುಬಿಡೋಣವೆಂದುಕೊಂಡು ಹೊರಟೇಬಿಟ್ಟವು. ವರ್ಷಾನೂ ಗಟ್ಟಲೇ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ ರಾವಣ. ಈಶ್ವರ ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಏನು ಬೇಕೆಂದು ಕೇಳಿದಾಗ ತನಗೆ ಆತ್ಮಲಿಂಗ ಕರುಣಿಸು ಎಂದು ಬೇಡಿಕೊಳ್ಳುತ್ತಾನೆ. ಈಶ್ವರ ತಥಾಸ್ತು ಎಂದು ಆತ್ಮಲಿಂಗ ಕರುಣಿಸುತ್ತಾನೆ. ಆದರೆ ನಾರದ ಮತ್ತು ಗಣಪತಿ ಸೇರಿಕೊಂಡು ಅದು ಲಂಕೆಯ ಪಾಲಾಗುವುದನ್ನು ತಪ್ಪಿಸಬೇಕೆಂದು ಉಪಾಯಮಾಡುತ್ತಾರೆ. ರಾವಣನು ಸಂಧ್ಯಾವಂದನೆ ಮಾಡಬೇಕಾದಾಗ ಗಣಪತಿ ಮಾರುವೇಶ ಧರಿಸಿ ಶಿವನಿಂದ ಆತ್ಮಲಿಂಗವನ್ನು ಪಡೆದುಕೊಂಡು ತಾನು ಮೂರು ಎಣಿಸುವವರೆಗೆ ಬರದಿದ್ದರೆ ಅದನ್ನು ಭೂಸ್ಪರ್ಶಮಾಡಿಬಿಡುತ್ತೇನೆ ಎಂದು ಹೇಳುತ್ತಾನೆ. 'ಸರಿ' ಎಂದು ರಾವಣ ಸಂಧ್ಯಾವಂದನೆಯಲ್ಲಿ ನಿರತನಾದಾಗ ಗಣಪತಿ ಮೂರು ಬಾರಿ ಕೂಗಿ ಕರೆದು ಲಿಂಗವನ್ನು ಭೂಸ್ಪರ್ಶಮಾಡಿಯೇ  ಬಿಡುತ್ತಾನೆ. ಒಮ್ಮೆ ಭೂಸ್ಪರ್ಶವಾದ ಲಿಂಗವನ್ನು ಮತ್ತೆ ತನ್ನ ವಶಕ್ಕೆ ತಗೆದುಕೊಳ್ಳಲು ಪ್ರಯತ್ನಿಸಿ ಸಾಧ್ಯವಾಗದಿದ್ದಾಗ ತನ್ನ ಗದೆಯಿಂದ ಭಾರಿಸುತ್ತಾನಂತೆ ರಾವಣ. ಅವನ ಹೊಡೆತಕ್ಕೆ ಐದು ಚೂರಾಗುವ ಶಿವಲಿಂಗ ಐದು ಕಡೆಗಳಲ್ಲಿ ಬೀಳುತ್ತದೆ. ಅವೇ ಗೋಕರ್ಣ, ಮುರುಡೇಶ್ವರ, ಸಜ್ಜೇಶ್ವರ, ಧಾರೇಶ್ವರ, ಗುಣವಂತೇಶ್ವರ. ಅಲ್ಲಿನ ಪುರಾಣದ ಕಥೆ ಕೇಳಿದ ಮೇಲೆ ಕೊನೆಯ ದಿನ ಆ ಐದು ಪಂಚಕ್ಷೇತ್ರಗಳನ್ನೂ ಸುತ್ತಿಬರಬೇಕೆಂದುಕೊಂಡು ನಾನು ಗೆಳೆಯ ಗಿರಿಬಾಲು ನಿರ್ಧರಿಸಿದೆವು. ನನಗೆ ಪ್ರತಿಸಾರಿಯೂ ಪುರಾಣದ ಕಥೆ ಕೇಳುವಾಗ ಸಿನಿಮಾಕ್ಕೇ ಅದೆಂತಹ ಅದ್ಭುತ ಕುತೂಹಲಕಾರಿ ವಸ್ತು ಎನಿಸುತ್ತದೆ. ನಮ್ಮ ಪುರಾಣದಲ್ಲಿರುವ ರೋಚಕತೆ ಅಬ್ಬಬ್ಬಾ...
ಇವೆಲ್ಲಾ ವೈಯಕ್ತಿಕ ಪ್ರಲಾಪದ ನಡುವೆಯೂ ಸಿಡ್ನೀ ಶೆಲ್ಡನ್ ಮಾತ್ರ ನನ್ನನ್ನು ಬಿಡುತ್ತಿಲ್ಲ. ಅವನ ದಿ ನೇಕಡ್ ಫೇಸ್ ಓದಿದೆ. ತುಂಬಾ ರೋಮಾಂಚಕಾರಿ ಕಾದಂಬರಿ ಅದು. ಒಬ್ಬ ಮನಶಾಸ್ತ್ರದ ವೈದ್ಯನ ಸುತ್ತಮುತ್ತ ನಡೆಯುವ ಕಥೆ ಅದ್ಯಾವ ಪರಿ ಓದಿಸಿಕೊಂಡಿತೆಂದರೆ ಕೆಲಸದ ನಡುನಡುವೆ ಸ್ವಲ್ಪ ಸಮಯ ಸಿಕ್ಕರೂ ಪುಟಬಿಡಿಸುವಂತೆ ಮಾಡುತ್ತಿತ್ತು. ಓದುಗ ಏನನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಾಗದಂತಹ ವೇಗದಲ್ಲಿ ಕಾದಂಬರಿ ಓಡುತ್ತದೆ. ಪ್ರತಿ ನಿರೀಕ್ಷೆಯನ್ನೂ ಸುಳ್ಳು ಮಾಡುವ ಶೆಲ್ಡನ್, ಅನಿರೀಕ್ಷಿತ ತಿರುವುಗಳನ್ನು ಕೊಟ್ಟು ಓದುಗರನ್ನು ಅಚ್ಚರಿಗೀಡುಮಾಡುತ್ತಾನೆ. ಕೊನೆಯ ಹತ್ತು ಹದಿನೈದು ಪುಟಗಳು ಸ್ವಲ್ಪ ಉದ್ದವಾಯಿತೇನೋ ಅನಿಸಿದ್ದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗೆ ರವಿಬೆಳೆಗೆರೆಯವರ ಹಿಮಾಗ್ನಿಯನ್ನೂ ಓದಿ ಮುಗಿಸಿದೆ. ಸುಮಾರು ನಾಲ್ಕು ನೂರು ಪುಟಗಳು ಎರಿಕ್ ಬಾನಾ ಅಭಿನಯದ ಮ್ಯೂನಿಕ್ ಚಿತ್ರದ ಕನ್ನಡ ರೂಪಾಂತರ ಎನಿಸಿದರೂ ಕೊನೆಯ ನೂರು ಪುಟಗಳು ಬೇರೆಯದೇ ಆದ ತಿರುವನ್ನು ತೆಗೆದುಕೊಳ್ಳುತ್ತದೆ.  ಏನೆಲ್ಲಾ ಸಾಹಸಮಾಡಿ, ಪ್ರಾಣದ ಹಂಗು ತೊರೆದು ಭಯೋತ್ಪಾದಕರ ಮೂಲ ವ್ಯಕ್ತಿಗಳನ್ನು ಬಗ್ಗು ಬಡಿಯುವ ನಾಯಕ ಕೊನೆಯಲ್ಲಿ ತನ್ನ ಸಂಬಳಕ್ಕಾಗಿ ತನ್ನವರ ವಿರುದ್ಧವೇ ಹೋರಾಡುವ ಅಂಶ ರೋಚಕ ಎನಿಸಿತು.ಈಗ ಸಿಡ್ನೀ ಶೆಲ್ಡನ್ ರಚಿತ ಕಾದಂಬರಿ ದಿ ಅದರ್ ಸೈಡ್ ಆಫ್ ಮಿಡ್‌ನೈಟ್ ಪುಸ್ತಕ ತಂದಿಟ್ಟುಕೊಂಡಿದ್ದೇನೆ.ಈಗಾಗಲೇ ಇದೇ ಕಾದಂಬರಿ ಆಧಾರಿತ ಸಿನಿಮಾವನ್ನು ನೋಡಿರುವುದರಿಂದ ಅದರ ಪಾತ್ರಗಳು ಅಚ್ಚಳಿಯದೇ ಮನಸ್ಸಿನಲ್ಲಿ ಹಾಗೇ ಉಳಿದಿವೆ. ಮತ್ತೇ ಅದನ್ನೇ ಬರಹದ ರೂಪದಲ್ಲಿ ಮನತುಂಬಿಕೊಳ್ಳುವ ಪುಳಕಕ್ಕೆ ಸಮಯಬೇಡುತ್ತಿದ್ದೇನೆ.
ನಿಮ್ಮ  ಸಮಾಚಾರವೇನು..?