Friday, August 5, 2016

ಸಂತೆಯಲ್ಲಿ ನಿಂತವನನ್ನು ನಾವು ಗಮನಿಸದೆ ಇದದ್ದು,...

ಮಹಾತ್ಮ ಕಬೀರ  ಚಿತ್ರದಲ್ಲಿ ಪವಾಡ ಜಾಸ್ತಿಯಿದೆ. ಆದರೆ ಅನುಸೂಯಾದೇವಿ ಅವರ ಸಂಗೀತ ಖುಷಿ ಕೊಡುತ್ತದೆ. ಕೆಲವರು ಆ ಕಾಲಕ್ಕೆ ಅದು ಸೂಪರ್ ಎನ್ನಬಹುದೇನೋ?ಅದು ನಿಜವೂ ಹೌದು. ಮಗ್ಗ ನೇಯದ ಕಬೀರ ರಾಮಜಪ ಮಾಡುತ್ತಾ  ಕುಳಿತುಕೊಂಡರೆ ಮಗ್ಗ  ರಾಮನ ದಯೆಯಿಂದ ತಾನಾಗಿಯೇ ನೇಯುತ್ತದೆ. ಅಮ್ಮ  ಒಳ ಹೋಗಿ ಬರುವಷ್ಟರಲ್ಲಿ ಬಟ್ಟೆ ರೆಡಿ!. ಇಂತಹ ಪವಾಡಗಳು, ಪ್ರತ್ಯಕ್ಷನಾಗುವ ದೇವರುಗಳು ಇವೆಲ್ಲ  ಕಬೀರದಲ್ಲಿದೆ.  ಹಾಡು ಹಾಡುತ್ತಾ ಮಾತನಾಡುತ್ತ ಮಾತಿನಲ್ಲಿ ಬುದ್ದಿವಾದ  ಹೇಳುತ್ತಾ ಸಾಗುವ ಕಬೀರ  ಮೊದಲಿಗೆ ಅಪ್ಪ ಅಮ್ಮನನ್ನು  ಸರಿಯಾಗಿ ನೋಡಿಕೊಳ್ಳದ ಮಗನಾಗಿ ಕಾಣುತ್ತಾನೆ. ಪತ್ನಿಗಿಂತ ಭಕ್ತಿರಸದಲ್ಲಿ  ಮುಳುಗಿ ಆಕೆಯೂ ನಲುಗುವಂತೆ ಮಾಡುತ್ತಾನೆ. ಅವನಿದ್ದದ್ದೆ ಹಾಗೆ ಅಂದರೆ  ಸಿನಿಮಾ ಅವನ ಪಾತ್ರದ ವಿಮರ್ಶೆಯಿಂದ ದೂರ.. ಆದರೆ  ಸಂತೆಯಲ್ಲಿ ನಿಂತ ಕಬೀರನದೂ ಹೆಚ್ಚು ಕಡಿಮೆ ಅದೇ ಬುದ್ದಿಯಾದರೂ ಇಲ್ಲಿ ಪವಾಡಗಳ ಹಂಗಿಲ್ಲ. ಸಂತೆಯಲ್ಲಿ  ಬಟ್ಟೆ ಮಾರಲು ಬರುವ ಕಬೀರ ಹಾಡುತ್ತಲೇ ಜನರ ಗಮನ ಸೆಳೆಯುತ್ತಾನೆ, ಹಿಂದೂ ಮುಸ್ಲಿಂ ಎಂದು ಜನರು ಕಟ್ಟಿ ಮಸೆಯುತ್ತಾ ನಿಂತಾಗ ಮಧ್ಯ ನಿಂತು ಇಬ್ಬರ ಪರವಾಗಿಯೂ ಇಬ್ಬರ ವಿರೋಧವಾಗಿಯೂ ಮಾತನಾಡುತ್ತಾನೆ.
ಸೋಮವಾರದಂದು ಸಿನಿಮಾ ನೋಡಲು  ಚಿತ್ರಮಂದಿರಕ್ಕೆ ಹೋದಾಗ ಬೆರಳೆಣಿಕೆಯ ಜನರಿದ್ದದ್ದು ನೋಡಿ ಕಳವಳ ಉಂಟಾದದ್ದು ದೇವರಾಣೆ ಸತ್ಯ. ಲಾಂಗು ಹಿಡಿದು ಹೊಡೆದಾಡುವ ರೌಡಿಯ ಕತೆಗೆ ತುಂಬಿ ಬರುವ ಜನರು, ಸತ್ತು ದೆವ್ವವಾಗಿ ಕಾಡುವ ದೆವ್ವಕ್ಕೆ ಮುಗಿ ಬೀಳುವ ಜನರು ಒಳ್ಳೆಯದ್ದು ಹೇಳುವ ಕಬೀರನನ್ಯಾಕೆ ದೂರ ಮಾಡಿದರು ಎಂಬುದು ಪ್ರಶ್ನೆ. ಆವತ್ತು  ಹಿಂದೂ ಮುಸ್ಲಿಂ ಬಗೆಗೆ ನೀತಿ ಪಾಠ ಹೇಳಿದ ಕಬೀರನನ್ನು ದೂರ ಮಾಡಿದ ಅವರಿಗೂ ಈವತ್ತು  ಕಬೀರನಿಗೆ  ಸೊಪ್ಪು ಹಾಕದ ನಮಗೋ ಅಂತಹ ವ್ಯತ್ಯಾಸವಿಲ್ಲ ಎನಿಸುತ್ತದೆ. 
ಇದೆಲ್ಲ ಪಕ್ಕಕ್ಕಿಡೋಣ.
ಕಬೀರ ಒಂದು ಸಿನೆಮವಾಗಿ ಗೆಲ್ಲುವುದು ಸೋಲುವುದು ವಿಷಯವಲ್ಲ. ಮನಮುಟ್ಟುವುದು ಬೇಕಾದದ್ದು. ನೋಡಿದ ಪ್ರೇಕ್ಷಕನಿಗಾದರೂ ಸಿನಿಮಾ ತಲುಪಿಬಿಟ್ಟರೆ ಅಷ್ಟು ಸಾರ್ಥಕ. ಆದರೆ ಸಿನಿಮಾ ನೋಡುತ್ತ ನೋಡುತ್ತ ಸಾಗಿದಂತೆ ಸೆಳೆಯುವುದೇ ಇಲ್ಲ. ಮೊದಲಾರ್ಧ  ಒಂದಷ್ಟು ದೃಶ್ಯಗಳ ಕೊಲಾಜ್ ನಂತೆ ಕಾಣುತ್ತದೆ. ಒಂದಕ್ಕೊಂದು ಸಂಬಂಧವನ್ನು ಅದೇಗೆ ಹೊಂದಿಸಬೇಕೋ ಚಿತ್ರಮಂದಿರದಲ್ಲಿ  ಕುಳಿತ ಪ್ರೇಕ್ಷಕ  ನೋಡುವುದರ ಜೊತೆಗೆ  ಈ ಎಕ್ಸ್ಟ್ರಾ ಕೆಲ್ಸಕ್ಕೆ ಒದ್ದಾಡಿಹೋಗುತ್ತಾನೆ..ಕಬೀರ ಅವನ ಹಿನ್ನೆಲೆ ಅವನ ಆಶಯಗಳು ಸಿನಿಮಾದಲ್ಲಿ ಹೈ ಲೈಟ್ ಆಗುವುದಿಲ್ಲ. ಇನ್ನು  ಶರತ್ ಕುಮಾರ್  ಮೈನಾ ಚಿತ್ರದಲ್ಲಿ ನಿರ್ವಹಿಸಿದ್ದ ಪೋಲಿಸ್ ಪಾತ್ರವನ್ನೇ ಇಲ್ಲಿಯೂ ರಾಜನಂತೆ ಮುಂದುವರೆಸಿದ್ದಾರೆ. ಅಲ್ವೇನ್ರಿ ಕಬೀರ್ ಎನ್ನುತ್ತಾ ಬಯಲಿನಲ್ಲಿಯೇ ಮಾತನಾಡುವ ರಾಜ ಅವರು.
ಅದೇಕೋ ಏನೋ ಸಿನಿಮಾ ನೋಡುತ್ತಾ ನೋಡುತ್ತಾ ಎಲ್ಲೋ  ಮಿಸ್  ಹೊಡೆಯುತ್ತದೆ ಎನಿಸುತ್ತದೆ. ಆದರೆ ನೋಡಿಯಾದ ಮೇಲೆ ಕಬೀರ ನಮ್ಮನ್ನು ಕಾಡುವುದಿಲ್ಲ. ಬದಲಿಗೆ ಬಹಳ ಬೋರಿಂಗ್ ಮನುಷ್ಯನಾಗಿ, ಹಾಡುಗಳು ಕಾಡದೆ ಕಬೀರ ನಮ್ಮನ್ನು ಆ ಕಾಲದ ಅಂದರೆ ಅವನ ಕಾಲದ ಜನರಂತೆಯೇ ಅವನ ದ್ವೇಷಿಯನ್ನಾಗಿ ಮಾಡಿಬಿಡುತ್ತಾನೆ.
ಮಹಾತ್ಮರ, ಸಂತರ ಬದುಕಿನಲ್ಲಿ  ಮಸಾಲೆ ಅಂಶಗಳು ಕಡಿಮೆಯೇ ಎನ್ನಬಹುದೇನೋ? ಅಥವಾ ಅದನ್ನು ಚಿತ್ರದಲ್ಲಿ ತೋರಿಸಲಿಕ್ಕೆ ನೈಜತೆ ಅಡ್ಡಬರುತ್ತದೆ. ಕಬೀರ ಯಾರೋ  ಹೊಡೆಯುವವರನ್ನು ತಡೆದಾಗ ಅದನ್ನು ಫೈಟ್ ನೊಂದಿಗೆ ತೋರಿಸಲು ಸಾಧ್ಯವೇ? ಹಾಗೆಯೇ ತನ್ನ ಪತ್ನಿಯ ಜೊತೆಗೆ ಕಳೆಯುವ ರಸಮಯ ಸಮಯಕ್ಕೆ ಆದೆಷ್ಟರ ಮಟ್ಟಿಗೆ ಶೃಂಗಾರ ತುಂಬಿ, ದ್ರಾಕ್ಷಿ ಗೋಡಂಬಿ ಬಳಸಲು ಸಾಧ್ಯ..? ಹಾಗಾಗಿ ಸಿನಿಮಾದ ಇತಿಮಿತಿ ಕತೆಯ ಪಾತ್ರದಲ್ಲಿಯೇ ಇರುತ್ತದೆ. ಇಷ್ಟರ ನಡುವೆಯೂ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ ಬೋರಿಂಗ್ ಅಲ್ಲ. ಅದು ರೋಚಕ. ಒಂದು ನಿಟ್ಟಿನಲ್ಲಿ ನೋಡಿದರೆ ಕಬೀರನದ್ದು ಅತಿ ರೋಚಕ. ಎರಡೂ ಕಡೆಯಿಂದ ಮತಾಂಧರು ಎದುರು ನಿಂತು ಹೊಡೆಯುವ ಬಡಿಯುವ ಸಾಯಿಸಲು ಪ್ರಯತ್ನಿಸುವ ಪ್ರಸಂಗಕ್ಕಿಂತ ರೋಚಕತೆ ಯಾವ ಕಮರ್ಷಿಯಲ್ ಪಾತ್ರಕ್ಕಿದ್ದೀತು.. ಆದರೆ ಅದನ್ನು ಹಿತಮಿತವಾಗಿ ನೋಡುವಂತೆ ಮಾಡಬೇಕಷ್ಟೆ. ಬಹುಶಃ ಚಿತ್ರಕತೆ ಇಲ್ಲಿ ಕೆಲಸ ಮಾಡುತ್ತದೆ. ಆದರೆ ಸಂತೆಗೆ ಬಂದು ಜನರ ಮುಂದೆ ನಿಂತವನ ನೇಯ್ಗೆಯಲ್ಲಿ ಕಸುವಿಲ್ಲದೆ ಇರುವ ಕಾರಣ ನೂಲಿನದ್ದಾ..? ಮಗ್ಗದ್ದಾ ನೋಡಿದವರು ಹೇಳ್ಬೇಕು.. ಹೇಳುವುದಕ್ಕಾದರೂ ಒಮ್ಮೆ ನೋಡಬೇಕಿತ್ತು ಅಲ್ಲವೇ? ಇಲ್ಲವಾದಲ್ಲಿ ಕಬೀರ ನಮ್ಮನ್ನು  ತಿದ್ದಿದಂತೆ ನಮ್ಮಂತಹ ಚಿತ್ರಕರ್ಮಿಗಳನ್ನು ತಿದ್ದುವವರಾರು..?

Friday, July 15, 2016

ದೆವ್ವದ ಪ್ರಶಸ್ತಿ ಕೊಡೋಣ ಬನ್ನಿ...

ಕಾಲಕ್ಕೆ ತಕ್ಕಂತೆ  ದೆವ್ವಗಳು  ಬದಲಾಗಿವೆ. ಅವುಗಳಲ್ಲೂ ಕೆಟ್ಟ ದೆವ್ವಗಳು, ಒಳ್ಳೆಯ  ದೆವ್ವಗಳು  ಹುಟ್ಟಿಕೊಂಡಿವೆ, ಹಾ  ಇಲ್ಲಿ ಸತ್ತು. ! ದೇವರು  ಎಂದರೆ  ಕಿಲೋಮೀಟರ್ ದೂರ ಓಡುತ್ತಿದ್ದ  ದೆವ್ವಗಳು  ಈಗ  ದೇವರ ವಿಗ್ರಹದ ಮುಂದೆ ಕುಣಿದು ಕುಪ್ಪಳಿಸಿ  ದೇವರನ್ನೇ  ಹೊಗಳಿ ಪಟಾಯಿಸಿಕೊಳ್ಳುತ್ತಿವೆ. ದೇವರಿಂದ ಶಕ್ತಿಯನ್ನು  ಎರವಲು  ಪಡೆದುಕೊಳ್ಳುತ್ತಿವೆ. ಅದಿರಲಿ. ಸಧ್ಯಕ್ಕೆ  ಕನ್ನಡ  ಚಿತ್ರರಂಗದಲ್ಲಿ  ದೆವ್ವದ ಕಾಲ. ಅಥವಾ ದೆವ್ವಗಳ ಪರ್ವ ಕಾಲ. ತರಾವರಿ ದೆವ್ವಗಳ  ಆಟಾಟೋಪ ಖುಷಿ ಕೊಡುವಂತಹದ್ದೆ ಬಿಡಿ.
ವರ್ಷದ  ಪ್ರಾರಂಭದಲ್ಲಿ  ಬಂದ  ದೆವ್ವದ ಮೂಲ ಉದ್ದೇಶ  ಹಗೆತನವಾದರೂ ನಗಿಸಿದ್ದಂತೂ ನಿಜ. ನಮ್ಮ  ಪ್ರಿಯಾಮಣಿಯಂತಹ ಸುಂದರಿ ದೆವ್ವವಾಗಿಯೂ ಕಾಡಬಹುದು ಎಂಬುದನ್ನು ತೋರಿಸಿಕೊಟ್ಟ ಚಿತ್ರವದು. ಬಂದದ್ದೆ ದೆವ್ವ ಕಾಡಲಿಲ್ಲ. ಬದಲಿಗೆ ನಿರ್ದೇಶಕನನ್ನೇ ಬಳಸಿಕೊಂಡು ಸಿನಿಮಾದ ಒಳಗೊಂದು ಸಿನಿಮಾ ತೆಗೆಯುವ ನಾಟಕವಾಡಿ ವಿಲನ್ ನನ್ನು ಬಗ್ಗು  ಬಡಿದ ದೆವ್ವವದು. ಆಮೇಲೆ  ಕಾಣಿಸಿಕೊಂಡದ್ದು ಗಂಡು ದೆವ್ವ. ಆವರಿಸಿದ್ದು ಮಾತ್ರ ಹೆಣ್ಣನ್ನು. ಪಾಪ ಮದುವೆಯಾಗಿ ಹನಿಮೂನ್ ಮತ್ತು  ಡ್ಯೂಟಿ ಎರಡನ್ನೂ ಒಂದೇ ಕಡೆ ಮಾಡುವ ಮೂಲಕ ಸ್ವಾಮೀ ಕಾರ್ಯ ಸ್ವಕಾರ್ಯ  ಮಾಡಿಕೊಳ್ಳೋಣ ಎಂದು ನಮ್ಮ ಶಿವಣ್ಣ ಪ್ಲಾನ್ ಮಾಡಿದರೆ ಅವರ ಪತ್ನಿಗೆ ಆವರಿಸಿಕೊಳ್ಳುವುದೇ..? ಅದರಲ್ಲೂ ಮೇಲಧಿಕಾರಿಗಿಂತ ಹೆಚ್ಚಾಗಿ ಕೊಂದವನನ್ನು ಹಿಡಿಯದಿದ್ದರೆ ಅಷ್ಟೇ ಎನ್ನುವ ಧಮಕಿ ಬ್ಲಾಕ್ ಮೇಲ್ ಬೇರೆ. ತನ್ನನ್ನು ಕೊಲೆಮಾಡಿದವರು ಯಾರು ಎಂಬುದನ್ನು ತಿಳಿದುಕೊಳ್ಳಲು ಆ ದೆವ್ವ ಕಡಿಮೆ ಅಬ್ಬರಿಸಲಿಲ್ಲ ಬಿಡ್ರೀ...
ಆಮೇಲೆ ಅನಂತ್ ನಾಗ್ ಸತ್ತು ದೆವ್ವವಾಗಿ ಮತ್ತೊಂದು ಆತ್ಮಕ್ಕೆ ಕತೆ ಹೇಳಿದ್ದು ಹೊಸಬರ ಪ್ರಯತ್ನದಲ್ಲಿ. ಇಲ್ಲಿ ದೆವ್ವಕ್ಕೆ maturity ಇತ್ತು, ಹಾಗೆಯೇ ದೆವ್ವದ ಮನೆ ಆಳಾಗಿದ್ದ ಆಫ್ ಕೋರ್ಸ್ ಮತ್ತೊಂದು ದೆವ್ವ ರಾಜು ತಾಳಿಕೋಟೆ ಸಹ ಯಾವುದೇ ಕಾಟ ಕೊಡಲಿಲ್ಲ. ಆಮೇಲೆ ಒಟ್ಟೊಟ್ಟಿಗೆ ಆವರಿಸಿಕೊಂಡದ್ದು ಐದೈದು ದೆವ್ವಗಳು. ನಮಗೆ ಸರಿಯಾದ ಶ್ರಾಧ ಮಾಡಿಲ್ಲ , ನಮಗೆ ಮೋಕ್ಷ ಸಿಕ್ಕಿಲ್ಲ, ಅದಕ್ಕಾಗಿ ಮದುವೆ ಮಾಡಿಕೊ ಎಂದು ರಮೇಶ್ ಅರವಿಂದ್ ಗೆ ಕಾಡಿದ್ದು ದೆವ್ವಗಳು.  ಆಮೇಲೆ ಒಂದು ಮನೆಯೊಳಗೇ ಒಂದು ದೆವ್ವ ಕಾಡಿತ್ತಾದರೂ ಮತ್ತೊಂದು ದೆವ್ವ ತಂತ್ರ ಮಾಡಿ ಸೇಡು ತೀರಿಸಿಕೊಂಡಿತು. ಆದರೆ ಸಾಯುವ ಕಡೆಗಳಿಗೆಯಲ್ಲಿ ಸುಂದರಿ ನೋಡಿ ಪ್ರೀತಿಸಲೇ ಬೇಕೆಂಬಾಸೆಯನ್ನು ಮನಸ್ಸಿನಲ್ಲಿಟ್ಟು ಕೊಂಡು ಅತೃಪ್ತ ಆತ್ಮವಾಗಿ ಕಾಡಿದ ದೆವ್ವ ಮುಟ್ಟದೆ ಲವ್ ಮಾಡೋಣ ಅನ್ನೋದೇ. ಪಾಪ ಸುಂದರಿಗೇನು ಗೊತ್ತು..? ಇವನ್ಯಾರೂ ಈ ಕಡುಕಲಿಗಾಲದಲ್ಲೂ ಹೀಗೆಲ್ಲ ಮಾತನಾಡುತ್ತಿದ್ದಾನಲ್ಲ ಎಂಬ ಅನುಮಾನ ಪಡದೆ ಇವನ್ಯಾರೋ ಸಭ್ಯರಲ್ಲಿ ಸಭ್ಯ ಅಂದುಕೊಂಡು ಪ್ರೀತಿಸಿದರೆ ಆಮೇಲೆ ಗೊತ್ತಾದದ್ದು ನಾನು ಪ್ರೀತಿಸಿದ್ದು ದೆವ್ವವನ್ನು ಎಂಬುದು. ಇದೆಲ್ಲದರ ಜೊತೆಗೆ ಅನ್ಯಾಯವಾಗಿ ಕೊಲೆಗೀಡಾದ ನಾಲ್ಕು ಆತ್ಮಗಳು ದೆವ್ವವಾಗಿ ಪ್ರೇಕ್ಷಕನಿಗೆ ಸಿನಿಮಾ ಕತೆ ಹೇಳಿದ ಉದಾಹರಣೆಯೂ ನಡೆದುಹೋಯಿತಲ್ಲ. ಸತ್ತು ಬಿದ್ದ ಭಗ್ನಪ್ರೇಮಿ, ಸಹ ನಿರ್ದೇಶಕ ಒಬ್ಬ ಚಿಕ್ಕ ಹುಡುಗ.. ಎಲ್ಲರೂ ಸೇರಿಕೊಂಡು ಮನುಷ್ಯರಿಗೆ ಕತೆ ಹೇಳಿ ನಂಬಿಸಿಬಿಟ್ಟದ್ದೂ ಉಂಟು.
ಇದರ ನಡುವೆ ಒಂದೆರೆಡು ದೆವ್ವಗಳು ಮನೆಯಲ್ಲಿಯೇ ಇದ್ದು ಬಂದ ಬಂದವರನ್ನು ಹೆದರಿಸಿದ್ದೂ ಉಂಟು. ಆದರೆ ಇವುಗಳ ನಡುವೆ ಅದೊಂದು ಹೆಣ್ಣು ದೆವ್ವ ರಸ್ತೆ ನಡುವಣ ಕಲ್ಲು ಸರಿಸಿದ್ದದ್ದನ್ನೇ ನೆಪಮಾಡಿಕೊಂಡು ಭಯಂಕರ ಪ್ಲಾನ್ ಮಾಡಿ ಹತ್ತಾರು ಸರಣಿ ಕೊಲೆಗಳನ್ನು ಮಾಡಿ ಸೈ ಅನಿಸಿಕೊಂಡಿತು ನೋಡಿ. ಅದರದೂ ಒಂದು ಅಹವಾಲು.. ನನ್ನನ್ನು ಕೊಂದವರು ಯಾರು ಎಂಬುದು ಗೊತ್ತಾಗಬೇಕು ಎಂಬುದು.ಅಲ್ಲಮ್ಮಾ.. ಮನುಷ್ಯ ಮಾತ್ರದವರು ಗೊತ್ತಿಲ್ಲದೇ ಕಲ್ಲು ಸರಿಸಿ ಸಾಯಿಸಿದರೂ ಎಂಬುದನ್ನೇ ನೆಪವಾಗಿಟ್ಟುಕೊಂಡು ಕಲ್ಲು ಸರಿಸಿದವರನ್ನೆಲ್ಲಾ ಸಾಯಿಸುತ್ತೀಯಲ್ಲ ಇದೇನು ನ್ಯಾಯ.. ಹಾಗಾದರೆ ನಾವ್ಯಾಕೆ ಸತ್ತೆವು, ನಾವು ಮಾಡದ ತಪ್ಪಿಗಾಗಿ ಸುಮ್ಮನೆ ಸತ್ತೆ ಹೋದೆವಲ್ಲಾ ಎಂಬೊಂದು ಕೊರಗಿಟ್ಟುಕೊಂಡೆ ಸತ್ತ ಆ ಹತ್ತು ಜನರೂ ದೆವ್ವಗಳಾದರೆ ನಿನ್ನ ಗತಿಯೇನು..?  ಇಷ್ಟಕ್ಕೂ ತೀರಾ ಬುದ್ದಿವಂತೆಯಾದ ನೀನು ಬರೀ ಕಲ್ಲು ಜರುಗಿಸಿದವರ ಮೇಲಷ್ಟೇ ಸೇಡು ತೀರಿಸಿಕೊಳ್ಳುವುದು ಅದ್ಯಾವ ನ್ಯಾಯಾ..? ಆ ರಸ್ತೆ/ಹಾರುಸೇತುವೆಗಾಗಿ ಕೋಟ್ಯಾಂತರ ಹಣ ಸರ್ಕಾರ ಮಂಜೂರು ಮಾಡಿದ್ದರೂ ಖರ್ಚು ಮಾಡದೆ ತಮ್ಮ ಬೊಕ್ಕಸಕ್ಕೆ ಹಾಕಿಕೊಂಡು ರಾಜಕಾರಣಿಗಳು, ಆ ಎಂಜಲನ್ನು ಬಿಡದೆ ನೆಕ್ಕಿದ ಅಧಿಕಾರಿಗಳು ಮುಂತಾದವರನ್ನು ವಿಚಾರಿಸಿಕೊಂಡಿದ್ದರೆ ಮೂಲಕ್ಕೆ ಕೈ ಹಾಕಬಹುದಿತ್ತಲ್ಲ ಮತ್ತು  ಒಂದು ರಸ್ತೆಯಷ್ಟೇ ಅಲ್ಲ, ಹಲವಾರು ರಸ್ತೆಯ ಸ್ಥಿತಿಗತಿ ಚೆನ್ನಾಗಿರುತ್ತಿತ್ತಲ್ಲ ಎಂದು ಕೂರಿಸಿಕೊಂಡು ಬುದ್ದಿವಾದ ಹೇಳಬಹುದಾಗಿತ್ತು. ಏಕೆಂದರೆ ಅದೇನುತಲೆ ಬಾಚದೇ  ಕೂದಲು ಕೆದರಿಕೊಂಡು , ಎರ್ರಾಬಿರ್ರಿ ಕಾಡಿಗೆಯನ್ನು ಕಣ್ಣಿಗೆ ಬಳಿದುಕೊಂಡು ಹೆದರಿಸುವ ಅಶಿಸ್ತು ದೆವ್ವವಲ್ಲವಲ್ಲ..ಸಾವಧಾನವಾಗಿ ಕುಳಿತುಮಾತನಾಡುತ್ತಿತ್ತು.. ಆದರೆ  ಆ ಧೈರ್ಯವಿರಲಿಲ್ಲ ಯಾರಿಗೂ ಎನಿಸುತ್ತದೆ.
ಆನಂತರ ಬಂದದ್ದು ನಮ್ಮ ಸವಾಲ್ ಗೆ ಸವಾಲ್ ಎನ್ನುವ ಸ್ಟಾರ್ ಗೆ ಆಟವಾಡಿಸುವ ದೆವ್ವ. ಈ ದೆವ್ವದ್ದು ಕಾಟವಿಲ್ಲ ಬಿಡಿ. ಮೊಮ್ಮಗನನ್ನು ಒಳ್ಳೆ ದಾರಿಗೆ ತರಬೇಕು ಎನ್ನುವ ಹಪಾಹಪಿಯ ದೆವವ್ವಿದು. ಒಟ್ಟಿನಲ್ಲಿ ಈ ವರ್ಷದ ಅತ್ಯಂತ ಒಳ್ಳೆಯದೆವ್ವ ಪ್ರಶಸ್ತಿ ಇದಕ್ಕೆ ಸಿಗಬೇಕೇನೋ..? ಆನಂತರದ್ದು ಹಳೆಯ ಆಪ್ತಮಿತ್ರ ನೆನಪಿಗೆ ತರುವ ದೆವ್ವ. ಚಿಕ್ಕ ಹುಡುಗಿಯ ದೆವ್ವವಾದರೂ  ಮುಲಾಜಿಲ್ಲದೆ ದೊಡ್ಡವರನ್ನು ಕಾಡಿದ ದೆವ್ವ. ಈಗ ಸಧ್ಯಕ್ಕೆ ಉಪೇಂದ್ರ ಅವರನ್ನು ಆವರಿಸಿಕೊಂಡ ದೆವ್ವ. ಸುಮ್ಮನಿದ್ದರೂ ಅಬ್ಬರಿಸುವ ಉಪ್ಪಿ ಮೇಲೆ ದೆವ್ವ ಆವರಿಸಿದರೆ ಗತಿ ಏನು ಶಿವನೆ ಎನ್ನುವ ಹಾಗಿಲ್ಲ ಬಿಡಿ. ಈ ದೆವ್ವ  ದೇವರ ಫ್ರೆಂಡ್ಶಿಪ್ ಮಾಡಿಕೊಂಡ ದೆವ್ವ..
ಒಟ್ಟಿನಲ್ಲಿ ಏಳು ತಿಂಗಳಿನಲ್ಲಿ ಇಷ್ಟೆಲ್ಲಾ ದೆವ್ವಗಳನ್ನು ನೋಡಿದ ನಾವು ಅತ್ಯುತ್ತಮ ಒಳ್ಳೆಯ ದೆವ್ವ, ಅತ್ಯುತ್ತಮ ಕೆಟ್ಟ ದೆವ್ವ, ಪೋಷಕ ದೆವ್ವ, ನಗಿಸಿದ ದೆವ್ವ, ಅಳಿಸಿದ ದೆವ್ವ, ಬಾಲ ದೆವ್ವ .. ಹೀಗೆ ಪ್ರಶಸ್ತಿ ಕೊಟ್ಟೆ ಬಿಡುವುದಾದರೆ ನಿಮ್ಮ  ಆಯ್ಕೆ  ಯಾವುದು ಎಂಬುದನ್ನು  ಹೇಳುವ ಮುನ್ನ ಹುಷಾರು..? ದೆವ್ವಕ್ಕೆ ನಿಮ್ಮ ಆಯ್ಕೆ  ತೃಪ್ತಿ ತರದೇ ಇದ್ದರೆ ಕಾಡುವುದಿಲ್ಲ ಎನ್ನುವುದಕ್ಕೆ ಖಾತರಿಯಿಲ್ಲ..

Thursday, July 14, 2016

ಆವಾಹನೆಗೊಳಗಾದ ಸಿದ್ದಿಕಿಗಾಗಿ ಚಿತ್ರ ನೋಡಬೇಕು..

ಸರ್..ನಾನು ದೇವರೊಂದಿಗೆ  ಮಾತನಾಡುತ್ತೇನೆ, ಅವನು ಯಾರನ್ನೋ  ನನ್ನ ಬಳಿಗೆ ಕಳುಹಿಸೋ ಎನ್ನುತ್ತಾನೋ ಅವರನ್ನು ಕಳಿಸುತ್ತೇನೆ, ನಾವೆಲ್ಲಾ  ಯಮನ ಏಜೆಂಟ್ ಇದ್ದ ಹಾಗೆ. ನಿಮಗಂತೂ ಲೈಸೆನ್ಸ್ ಇದೆ. ನೀವು ಸಾಯಿಸಿದರೆ ನಿಮಗೆ ಸವಲತ್ತು ಸಿಗುತ್ತದೆ. ..ಎನ್ನುತ್ತಾನೆ ಎದುರಿಗೆ ಕುಳಿತವನು. ಅಲ್ಲಿಗೆ ಪೋಲಿಸ್ ಅಧಿಕಾರಿಗೆ ಆತ ಕೊಲೆಗಾರ ಎನಿಸುವುದಕ್ಕಿಂತ ತಿಕ್ಕಲು ಮನುಷ್ಯ ಎನಿಸುತ್ತದೆ. ಹುಚ್ಚುಹುಚ್ಚಾಗಿ ಮಾತಾಡಿ, ಸುಮ್ಮನೆ ಜೈಲಿನಲ್ಲಿ ಕುಳಿತು ತಿನ್ನೋಣ ಎಂದುಕೊಂಡಿರುವ ಹುಚ್ಚ ಎನಿಸಿ ಅವನನ್ನು ಒಂದು ಕೋಣೆಯೊಳಗೆ ಬಂಧಿಸಿ ಮರೆತುಬಿಡುತ್ತಾರೆ. ಅಲ್ಲಿಂದ ಚಿತ್ರ ತೆರೆದುಕೊಳ್ಳುತ್ತದೆ. ರಮಣ ರಾಘವ ಅಲ್ಲಿನ ಜನರನ್ನು ಪೋಲಿಸರನ್ನು ಕಾಡುವಷ್ಟೇ ನವಾಜುದ್ದೀನ್ ಸಿದ್ದಿಕಿ ನಮ್ಮನ್ನು ಕಾಡುತ್ತಾರೆ. ನಮ್ಮನ್ನು ಹೆದರಿಸುತ್ತಾರೆ. ಅದೆಲ್ಲಿ ಮಾತನಾಡುತ್ತಾ ಕಬ್ಬಿಣದ ಕೋಲಿನಿಂದ ಹೊಡೆಯುತ್ತಾನೋ ಎನಿಸುವಷ್ಟು ಭಯಾನಕ ಭಯವನ್ನು ತುಂಬುತ್ತಾರೆ.
ಈ ಹಿಂದೆ ವರ್ಮ ರಮಣ ರಾಘವ ಎನ್ನುವ ಕೊಲೆಪಾತಕನನ್ನು ಕುರಿತು ಸಿನಿಮಾ ಮಾಡಿದ್ದರು.ಹಾಗೆ ನೋಡಿದರೆ ಸರಣಿ ಹಂತಕರು, ಅತ್ಯಾಚಾರಿಗಳು ರೌಡಿಗಳು ಮುಂತಾದ ಅಪರಾಧಿಗಳ ಬಗೆಗೆ ಸಿನಿಮಾ ತಯಾರಾಗಿರುವಷ್ಟು ಮಹಾತ್ಮರ ಬಗೆಗೆ ಚಿತ್ರ ಮಾಡಿರುವುದು ಕಡಿಮೆಯೇ. ಇದು ಬಹುಶಃ ಎಲ್ಲಾ ಭಾಷೆಯಲ್ಲಿಯೂ ಸತ್ಯ. ರಮಣ ರಾಘವ 2.0 ಇಷ್ಟವಾಗುವುದು ಅದರ ಕತೆಗಿಂತಲೂ ನಾಯಕ ನವಾಜುದ್ದೀನ್ ಅವರ ಅಭಿನಯದಿಂದ. ತನ್ಮಯತೆ ಅದೂ ಇದೂ ಎಲ್ಲವನ್ನು ಬಿಟ್ಟಾಕಿ. ಆ ಪಾತ್ರವನ್ನು ತನ್ನಂತೆ ಮತ್ತು ತನಗೆ ಒಪ್ಪಿಗೆಯಾಗುವಂತೆ ಆವಾಹಿಸಿಕೊಂಡು ಅಭಿನಯಿಸುವ ಸಿದ್ದಿಕಿ ಆ ಪಾತ್ರದ ಬಗೆಗೆ ಹೇವರಿಕೆ ಕೋಪ ಬರುವಂತೆ ಮಾಡುತ್ತಾರೆ. ಹಾಗೆಯೇ ತಮ್ಮ ಅಭಿನಯದ ಬಗೆಗೆ ಮೆಚ್ಚುವಂತೆ ಅಭಿನಯಿಸುತ್ತಾರೆ.
ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರ ಎಲ್ಲಾ ಪ್ರೇಕ್ಷಕರಿಗೂ ಹೇಳಿ ಮಾಡಿಸಿದ್ದಲ್ಲ. ಚಿತ್ರವನ್ನು ತುಂಬಾ ಒರಟಾಗಿ ನಿರೂಪಿಸಿರುವ ಕಶ್ಯಪ್ ಚಿತ್ರದಲ್ಲಿನ ಕತೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿಯೇ ನಿರೂಪಿಸಿದ್ದಾರೆ. ಇಲ್ಲಿ ಹೀರೋ ಎನಿಸಿಕೊಳ್ಳುವ ಪಾತ್ರವಾಗಲಿ, ವಿಲನ್ ಎನಿಸಿಕೊಳ್ಳುವ ಪಾತ್ರವಾಗಲಿ ಇಲ್ಲ. ಸರಣಿ ಹಂತಕನ ಮನಸ್ಥಿತಿ ಅವನ ಪೈಶಾಚಿಕತೆ ಮತ್ತು  ಪೋಲೀಸರ ಹುಡುಕಾಟ ಇವಷ್ಟನ್ನೂ ಸೇರಿಸಿ ಕತೆ ಹೆಣೆದಿದ್ದಾರೆ ನಿರ್ದೇಶಕರು. ಒಂದು ಕ್ರೈಂ ಥ್ರಿಲ್ಲರ್, ಒಬ್ಬ  ಸೈಕೋಪಾತ್ ನ ಕತೆ ಇದಾಗಿದ್ದರೂ ನವಾಜುದ್ದೀನ್ ಸಿದ್ದಿಕಿ ಅವರ ಅಭಿನಯಕ್ಕಾಗಿ ನೋಡಲೇಬೇಕಾದ ಚಿತ್ರವಿದು.

Tuesday, July 12, 2016

ಸಂಭಾಷಣೆಕಾರನಿಗೂ ನಿರ್ದೇಶಕನಿಗೂ ಬಂದಾರೆ ಮುನಿಸು...

ಚಿತ್ರಗಳಿಗೆ ಸಂಭಾಷಣೆ ಬರೆಯುವ ಕೆಲಸ ಒಂತರಾ ಖುಷಿ ಕೊಡುವ ಕೆಲಸವಾದರೂ ಅದು ಸವಾಲಿನ ಕೆಲಸ.. ಯಾಕೆಂದರೆ ಕತೆಯನ್ನು ತಲೆಗೆ ಹಾಕಿಕೊಂಡು ಇರುವ ದೃಶ್ಯಕ್ಕೆ ಸಂಭಾಷಣೆಯನ್ನು, ಮತ್ತು ಇಲ್ಲದ ದೃಶ್ಯವನ್ನು ಸೃಷ್ಟಿಸಿ ಹಾಗೆಯೇ ಆ ಸಂದರ್ಭ ಮತ್ತು ದೃಶ್ಯದ ಪ್ರಾಮುಖ್ಯತೆಯನ್ನು ಮನಗಂಡು ಹಾಗೆಯೇ ದೃಶ್ಯದಲ್ಲಿ ಅನಾವರಣಗೊಳ್ಳಬೇಕಾದ ಮುಖ್ಯ ಅಂಶ ಮತ್ತು ಮತ್ತು ದೃಶ್ಯಕ್ಕೆ ಒಟ್ಟಾರೆ ಚಿತ್ರದಲ್ಲಿರಬಹುದಾದ ನಿಗದಿತ ಸಮಯ ಇವೆಲ್ಲವನ್ನೂ ಲೆಕ್ಕ ಹಾಕಿ ಸಂಭಾಷಣೆ ಬರೆಯಬೇಕಾಗುತ್ತದೆ. ಮೂಲಕತೆ ಸಂಭಾಷಣೆಕಾರನದೆ ಆದರೆ, ಅಥವಾ ಸಂಭಾಷಣೆಕಾರನೇ ಕತೆಗಾರನಾದರೆ ಅಥವಾ ನಿರ್ದೇಶಕನೇ ಕತೆಗಾರ ಸಂಭಾಷಣೆಕಾರನಾಗಿದ್ದರೆ ಅದವರ ಮರ್ಜಿಗೆ ಬಿಟ್ಟದ್ದು. ಅಥವಾ ಸಿನಿಮ ರಿಮೇಕ್ ಆಗಿದ್ದರಂತೂ ಸಂಭಾಷಣೆಯಲ್ಲಿ ಸೃಜನಶೀಲತೆ ನೆಪಮಾತ್ರ ಎನ್ನಬಹುದು. ಆದರೆ ಬೇರೆಯವರ ಕತೆಗೆ ಸಂಭಾಷಣೆ ಬರೆದು ಅದನ್ನು ಒಪ್ಪಿಸುವ ಕೆಲಸ ಸುಲಭದ್ದಲ್ಲ. ಕೆಲವೊಮ್ಮೆ ನಿರ್ದೇಶಕನ ಆಶಯ, ಕತೆಯ ಆಶಯ, ಪಾತ್ರಧಾರಿಗಳ ಪಾತ್ರಪೋಷಣೆ ಇವೆಲ್ಲವೂ ಏರುಪೇರಾಗಿ ಬಿಡುತ್ತವೆ. ಜೊತೆಗೆ ದೃಶ್ಯದಲ್ಲಿರಬಹುದಾದ ಪಾತ್ರಗಳಿಗೆ ಹೆಚ್ಚು ಪಾತ್ರಗಳಿದ್ದರೆ ಸಂಭಾಷಣೆ ಹಂಚುವ ಮತ್ತು ಅವರುಗಳ ಸ್ವಂತಿಕೆ/ಪಾತ್ರಪೋಷಣೆ ಕಾಯ್ದುಕೊಳ್ಳುವ ಕೆಲಸ ಇವೆಲ್ಲಾ ತುಂಬಾ ಜಾಗರೂಕತೆಯಿಂದ ಮಾಡುವಂತಹದ್ದು. ಅದೊಂದು ಸಿನಿಮಾಕ್ಕೆ ಸಂಭಾಷಣೆ ಬರೆಯಲು ಒಪ್ಪಿಕೊಂಡ ಸಂಭಾಷಣೆಕಾರನಿಗೆ ನಿರ್ದೇಶಕರು ಕತೆಯನ್ನು ವಿವರವಾಗಿ ಬಿಚ್ಚಿಟ್ಟಿರಲಿಲ್ಲ..ಬದಲಿಗೆ ಹೀಗೂ ಇರಬಹುದು, ಅಥವಾ ಅದನ್ನು ಹೇಗಾದರೂ ಬರೆಯಬಹುದು, ಅಥವಾ ನಿಮಗಿಷ್ಟ ಬಂದ ಹಾಗೆ ಬರೆಯಿರಿ ಸಾರ್ ಎಂದೆ ಹೇಳುತ್ತಿದ್ದರು. ಕತೆಯನ್ನು ನಿರ್ಮಾಪಕರ ಮುಂದೆ, ಕಲಾವಿದರ ಮುಂದೆ ನಿರೂಪಣೆ ಕೊಡಲು ಸಂಭಾಷಣೆಕಾರನನ್ನು ಕರೆದುಕೊಂಡು ಹೋಗುತ್ತಿದ್ದರು. ಎಲ್ಲವೂ ಸೆಟ್ ಆಯಿತು. ನಿರ್ಮಾಪಕರಿಗೆ, ಕಲಾವಿದರುಗಳಿಗೆ ಎಲ್ಲರಿಗೂ ಕತೆಯನ್ನು ಸಂಭಾಷಣೆಯನ್ನು ಒಪ್ಪಿಸುವ ಜವಾಬ್ದಾರಿಯನ್ನು ಸಂಭಾಷಣೆಕಾರ ಮಾಡಿದ್ದರು. ಆದರೆ ಅಷ್ಟೆಲ್ಲಾ ಆದ ನಂತರ ನಿರ್ದೇಶಕರಿಗೂ ಸಂಭಾಷಣೆಕಾರರಿಗೂ ಯಾವುದೋ ಕಾರಣಕ್ಕೆ ಕಿರಿಕ್ಕು ಬಂದಿತ್ತು, ಯಾವಾಗ ಕೆಲಸಗಳೆಲ್ಲವೂ ಮುಗಿದಿತ್ತೋ ನಿರ್ದೇಶಕರೂ ಸಂಭಾಷಣೆಕಾರರನ್ನು ಸ್ವಲ್ಪ ಜೋರಾಗಿಯೇ ಝಾಡಿಸಿದ್ದರು. ಇದರಿಂದ ಕೋಪಗೊಂಡ ಸಂಭಾಷಣೆಕಾರ ತಾನು ಬರೆದಿದ್ದೆಲ್ಲವನ್ನು ಒಂದು ಪುಟವನ್ನೂ ಬಿಡದೆ ತೆಗೆದುಕೊಂಡು ಮನೆಗೆ ಬಂದವರು ಸಂಭಾಷಣೆ ಬೇಕಾದರೆ ನನ್ನೊಡನೆ ರಾಜಿಯಾಗಲಿ ಎಂದರು. ಆದರೆ ನಿರ್ದೇಶಕರು ತುಟಿಕ್ ಪಿಟಿಕ್ ಎನ್ನಲಿಲ್ಲ. ಶೂಟಿಂಗ್ ದಿನಗಳು ಹತ್ತಿರ ಬಂದರೂ ಉಹೂ .. ನಿರ್ದೇಶಕರ ಪತ್ತೆಯಿಲ್ಲ. ಈಗ ಸಂಭಾಷಣೆಕಾರಿಗೆ ಆಶ್ಚರ್ಯ ಇಡೀ ಸ್ಕ್ರಿಪ್ಟ್ ನನ್ನತ್ರವೇ ಇದೆ. ಶೂಟಿಂಗ್ ಬೇರೆ ಹತ್ತಿರ ಬರುತ್ತಿದೆ. ಅದೇಗೆ ನಿರ್ದೇಶಕರು ನಿರುಮ್ಮಳವಾಗಿದ್ದಾರೆ ಎಂದು. ಆದರೆ ಶೂಟಿಂಗ್ ಪ್ರಾರಂಭವಾಗಿ ಅನಾಯಾಸವಾಗಿ ನಡೆಯತೊಡಗಿದಾಗ ಬೆಚ್ಚಿ ಬಿದ್ದ ಸಂಭಾಷಣೆಕಾರರು ಚಿತ್ರತಂಡದವರನ್ನು ಸಂಪರ್ಕಿಸಿದಾಗ ಅದು ನಿರ್ದೇಶಕರ ಕಿವಿಗೆ ಬಿದ್ದಾಗ ಅವರು ಹೇಳಿದ್ದಿಷ್ಟು. "ಎಲ್ಲಾ ತಲೇಲಿ ಇದೆಯಮ್ಮ, ಸುಮ್ನೆ ನಾನು ಕುಳಿತ್ಕೊಂಡು ಬರೆಯೋಕ್ಕಾಗಲ್ಲವಲ್ಲ ಅದಕ್ಕೆ ಬರೆಸಿದ್ದು.. "
ಚಿತ್ರರಂಗದಲ್ಲಿ  ಇದೊಂದು ಆರೋಪ ಇದ್ದೇ ಇದೆ. ಅದೊಮ್ಮೆ  ಸ್ಕೈಲೈನ್ ಸ್ಟುಡಿಯೋ ಮುಂದೆ ಸಿಕ್ಕ ಸಂಭಾಷಣೆಕಾರ-ನಿರ್ದೇಶಕ ರಾಮ್ ನಾರಾಯಣ್ ಏನೇ ಆಗಲಿ ಕಣ್ರೀ ನಾವೇನೋ ಅಷ್ಟು ಚೆನ್ನಾಗಿ ಬರೆದುಕೊಡ್ತೀವಿ.. ಆದ್ರೆ ನಿರ್ದೇಶಕರು ಅದನ್ನು ತಗೋಳ್ಲೋದೆ ಇಲ್ಲ ಬಿಡಿ.. ಏನೇನೋ ಮಾಡಿ ಬಿಡ್ತಾರೆ, ಅದಕ್ಕೆ ಒಮ್ಮೊಮ್ಮೆ ಬೇಸರ ಆಗೋಗುತ್ತೆ.. ಇನ್ಮುಂದೆ ಸುಮ್ನೆ ನಾವು ಚೆನ್ನಾಗಿ ಸಂಭಾಷಣೆ-ಸ್ಕ್ರಿಪ್ಟ್ ಬರೆದು ನಿರ್ದೇಶಕರಿಗೆ ಕೊಟ್ಟು ಅದು ಹಾಳಾಗಿ ಅವರನ್ನು ಬೈದುಕೊಳ್ಳೋದಕ್ಕಿಂತ ಸುಮ್ನೆ ನಮ್ಮ ನಮ್ಮ ಸ್ಕ್ರಿಪ್ಟ್ ನಾವೇ ಡೈರೆಕ್ಟ್ ಮಾಡೋದು ಒಳ್ಳೇದು ಎಂದಿದ್ದರು. ಇದು ನಿಜವೂ ಹೌದು. ಸಂಭಾಷಣೆಕಾರ ಮತ್ತು  ನಿರ್ದೇಶಕ ಇಬ್ಬರ ಸಮಾಗಮ ಅಷ್ಟು ಸುಲಭವಲ್ಲ. ನಿರ್ದೇಶಕನ ಆಶಯವಷ್ಟೂ ಸಂಭಾಷಣೆಕಾರನ ತಲೆಗೆ ಅಚ್ಚೋತ್ತಬೇಕು.
ಮೊನ್ನೆ ಮೊನ್ನೆ ರನ್ ಅಂಟನಿ ಚಿತ್ರದ್ದು ಅದೇ ಕತೆ. ಸಂಭಾಷಣೆಕಾರ ಹರಿ ಪಾರಖ್ ನಾನು ಬರೆದ ಸಂಭಾಷಣೆಗಳಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದರು. ನಾನು ಸಂಭಾಷಣೆಕಾರನಾಗಿ ಚಿತ್ರರಂಗ ಪ್ರವೇಶಿಸಿದ ಹೊಸತರಲ್ಲಿ ಸಂಭಾಷಣೆ ಬರೆದು ಆನಂತರ ಸಿನೆಮಾವನ್ನು ಮೊದಲ ದಿನವೇ ನೋಡಿ, ನಾವು ಬರೆದ ಸಂಭಾಷಣೆ ಎಲ್ಲಿ ಎಂಬುದನ್ನು ಹುಡುಕುವುದೇ ಆಗಿತ್ತು. ಆದರೆ ನಾವೇ ಅಂದುಕೊಂಡಿದ್ದ ಮುಖ್ಯ ಎನಿಸಿದ್ದ ಸಂಭಾಷಣೆಗಳು ಅಲ್ಲಿರದೆ ಇದ್ದಾಗ ಬೇಸರವೂ ಆಗುತ್ತಿತ್ತು. ಕೇಳಿದರೆ ಅದಿಲ್ಲ ಇದಿಲ್ಲ, ಹಾಗಲ್ಲ ಹೀಗಲ್ಲ ಎಂಬೆಲ್ಲಾ ಉತ್ತರಗಳು ಬಂದುಬಿಡುತ್ತಿದ್ದವು. ತೀರಾ ಮಾತಾಡಿದರೆ ಬರವಣಿಗೆ ನಂಬಿಕೊಂಡ ನಮ್ಮಂತವರಿಗೆ ಮುಂದಿನ ಸಿನೆಮಾಗಳಲ್ಲಿ ಅವಕಾಶಗಳು ಸಿಗುವುದಿರಲಿ, ಬೇರೆ ಸಿನೆಮಾಗಳ ಅವಕಾಶಗಳು ತಪ್ಪಿಹೋಗುತ್ತಿದ್ದವು. ಹಾಗಾಗಿ ಹಣವಷ್ಟನ್ನೇ ತಲೆಯಲ್ಲಿಟ್ಟುಕೊಂಡು ಸಂಭಾಷಣೆ ಬರೆದು ಒಪ್ಪಿಸಿಬಂದು ಕೈ ತೊಳೆದುಕೊಳ್ಳುತಿದ್ದೆವು.
ನಾನು ಒಂದು ಚಿತ್ರಕ್ಕೆ ಸಂಭಾಷಣೆ ಬರೆಯಲು ಒಪ್ಪಿಕೊಂಡಿದ್ದೆ. ಸುಮಾರು 73 ದೃಶ್ಯಗಳಿದ್ದ ಸಿನಿಮಾದಲ್ಲಿ 64 ದೃಶ್ಯಗಳನ್ನು ಬರೆದು ಒಪ್ಪಿಸಿಬಿಟ್ಟಿದ್ದೆ. ಇನ್ನುಳಿದ 9 ದೃಶ್ಯಗಳು ಹಾಸ್ಯಮಯ ದೃಶ್ಯವಾಗಿದ್ದರಿಂದ ಅದಕ್ಕೆ ಒಂದಷ್ಟು ಸಮಯ ಕೋರಿದ್ದೆ. ಇದಾದ ಸ್ವಲ್ಪ ದಿನದಲ್ಲೇ ಕರೆ ಮಾಡಿದ ನಿರ್ದೇಶಕರು ಬೇಗನೆ ಭೇಟಿಯಾಗುವಂತೆ ಹೇಳಿದಾಗ ಹೋಗಿ ಭೇಟಿಯಾಗಿದ್ದೆ. ಅಲ್ಲಿ ಕನ್ನಡದ ಈವತ್ತಿನ ಪ್ರಮುಖ ಹಾಸ್ಯನಟರಲ್ಲಿ ಒಬ್ಬರಾದವರು ಕುಳಿತಿದ್ದು ಇವರು ಹಾಸ್ಯದೃಶ್ಯಗಳನ್ನು ಬರೆಯುತ್ತಾರೆ, ನಿಮ್ಮ ಅಭ್ಯಂತರ ಇಲ್ಲವೇ ಎಂದರು ನಿರ್ದೇಶಕರು. ನಾನು ಆಗಲಿ, ಒಳ್ಳೆಯದೇ ಎಂದೆ. ಇದಾದ ನಂತರ ಪತ್ರಿಕಾಗೋಷ್ಠಿ ಯಲ್ಲಿ ಸಂಭಾಷಣೆಕಾರ ಎಂದು ಅವರ ಹೆಸರನ್ನೇ ಪ್ರಮುಖವಾಗಿ ಘೋಷಿಸಿದ್ದರು. ಆನಂತರ ವೇದಿಕೆಯ ಕೆಳಗೆ ಬಂದ ಹಾಸ್ಯನಟರು ಬೇಸರಿಸಿಕೊಳ್ಳಬೇಡಿ, ನಾನು ಎಷ್ಟು ಹೇಳಿದರೂ ನಿರ್ದೇಶಕರು ಕೇಳಲಿಲ್ಲ, ಕೇವಲ ಒಂಭತ್ತು ದೃಶ್ಯ ಬರೆದು ಇಡೀ ಸಿನಿಮಾದ ಸಂಭಾಷಣೆಯ ಕ್ರೆಡಿಟ್ ತೆಗೆದುಕೊಳ್ಳುವುದು ನನಗೂ ಸರಿಹೋಗಲಿಲ್ಲ ಎಂದು ನುಡಿದಿದ್ದರು. ಅಷ್ಟರಲ್ಲಾಗಲೇ ನನಗೆ ಅದೆಲ್ಲಾ ರೂಢಿಯಾಗಿದ್ದರಿಂದ ನಕ್ಕು ಸುಮ್ಮನಾಗಿದ್ದೆ.
ಹಾಗಾದರೆ ಬರಹಗಾರರಿಗೆ ಬೆಲೆ ಇಲ್ಲವೇ..? ಅವರಿಗೆ ಸಿಗಬೇಕಾದ ಮರ್ಯಾದೆ ಸಿಗುತಿಲ್ಲವೇ..? ಅವರ ಬರವಣಿಗೆಗೆ ಕಿಮ್ಮತ್ತಿಲ್ಲವೇ..? ಖಂಡಿತ ಇದೆ. ಆದರೆ ಅದು ಒಬ್ಬ ನಿರ್ದೇಶಕನಿಗೆ ಗೊತ್ತಿರಬೇಕಾಗುತ್ತದೆ. ಒಂದು ಸಿನಿಮಾಕ್ಕೆ ಯಾವ ಯಾವ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು. ಏಕೆಂದರೆ ಬರಹ ಮತ್ತು ಸಂಗೀತ, ಸಾಹಿತ್ಯ ಇವು ಭಾವಕ್ಕೆ ಸಂಬಂಧಿಸಿದವು. ಶೈಲಿಗೆ ಸಂಬಂಧಿಸಿದವು. ಒಂದು ಸಿನೆಮಾವನ್ನು ನಿರ್ದೇಶಿಸಹೊರಡುವ ನಿರ್ದೇಶಕ ಮೊದಲಿಗೆ ತಾನು ಯಾವ ಕ್ಯಾಟೆಗರಿ ಸಿನಿಮಾ ಮಾಡುತ್ತಿದ್ದೇನೆ ಎಂಬುದನ್ನು ಅರಿತಿರಬೇಕು ಮತ್ತು ಅದರ ಬಗ್ಗೆ ಒಂದು ವಿಶದವಾದ ಅದ್ಯಯನ ಮಾಡಿರಬೇಕಾಗುತ್ತದೆ. ಏಕೆಂದರೆ ಪ್ರೇಮಕತೆ, ಥ್ರಿಲ್ಲರ್, ಹಾರರ್.. ಹೀಗೆ ನಾವೇನೆ ವಿಭಾಗಗಳನ್ನು ಮಾಡಿಕೊಂಡರೂ ಅದೆಲ್ಲದಕ್ಕೂ ಅದರದೇ ಆದ ನಿರೂಪಣೆಯ ಶೈಲಿ ವೇಗ, ಗತಿ ಇದ್ದೆ ಇರುತ್ತದೆ. ಇದರ ಜೊತೆಗೆ ನಿರ್ದೇಶಕನ ಶೈಲಿಯೂ ಸೇರಿಕೊಳ್ಳುತ್ತದೆ. ಅದು ಪಕ್ಕವಾದನಂತರ ನಾವು ಕಲಾವಿದರನ್ನು ಪಾತ್ರಕ್ಕೆ ತಕ್ಕಂತೆ ಹೇಗೆ ಆಯ್ಕೆ ಮಾಡುತ್ತೇವೆಯೋ ಹಾಗೆಯೇ ತಂತ್ರಜ್ಞರನ್ನೂ ಆಯ್ಕೆ ಮಾಡಬೇಕಾಗುತ್ತದೆ. ಇಲ್ಲಿ ನಿರ್ದೇಶಕ ಆಯಾ ತಂತ್ರಜ್ಞರ ಪರಣತಿಯನ್ನು ಅರಿತು ಅವರನ್ನು ಅಯ್ಕೆಮಾಡಿಕೊಳ್ಳಬೇಕಾಗುತ್ತದೆ ಅಥವಾ ಆಯ್ಕೆ ಮಾಡಿದ ತಂತ್ರಜ್ಞರಿಂದ ಇಚ್ಚಿತ ಕೆಲಸವನ್ನು ತೆಗೆದುಕೊಳ್ಳಬೇಕಾಗುತ್ತದೆ. ಎರಡೂ ಸಲ್ಲತಕ್ಕದ್ದೆ ಆದರೂ ಎರಡನೆಯದು ರಿಸ್ಕಿನ ಕೆಲಸ. ಇರಲಿ. ಅದರಲ್ಲೂ ಒಬ್ಬ ಬರಹಗಾರ, ಸಂಭಾಷಣೆಕಾರ ಎಂದಾಗ ಆತನ ವಿಶೇಷತೆ ಏನು ಎಂಬುದನ್ನು ಮನಗಾಣಬೇಕು. ಅವನ ಕಸುಬುದಾರಿಕೆಗೆ ಅವನ ಪ್ರಾವೀಣ್ಯತೆಗೆ ನಮ್ಮ ಸಿನಿಮಾದಲ್ಲಿ ಅವಕಾಶವಿದೆಯೇ, ಆತನ ಪ್ರತಿಭೆಗೆ ಸಾಟಿಯಾಗುವ ಕತೆ ನಮ್ಮ ಚಿತ್ರದ್ದೇ ಎಂಬುದನ್ನು ವಿಶ್ಲೇಷಣೆ ಮಾಡಬೇಕಾಗುತ್ತದೆ. ಆಗಾದಾಗ ಮಾತ್ರ ಅವರ ಪ್ರತಿಭೆಗೂ ನಮ್ಮ ಸಿನೆಮಾಕ್ಕೂ ಸಮಾಗಮ-ಸರಿಗಮ ಎನ್ನಬಹುದು. ಚುರುಕು ಮಾತುಗಳಿಂದ-ಬರಹಗಳಿಂದ, ತಮ್ಮ ವಿಶೇಷ ಪದಜೋಡನೆಯಿಂದ ಹೆಸರು ಮಾಡಿದವರ ಸಂಭಾಷಣೆಗೆ ಥ್ರಿಲ್ಲರ್ ಚಿತ್ರಗಳಲ್ಲಿ ಜಾಗ ಕಡಿಮೆಯೇ. ಹಾಗೆಯೇ ತುಂಬಾ ಗಂಭೀರವಾಗಿ, ವಸ್ತು ನಿಷ್ಟವಾಗಿ ಮತ್ತು ಅಂಕಿ ಅಂಶಗಳನ್ನ ಇಟ್ಟುಕೊಂಡು ಬರೆಯುವವರಿಗೆ ತಿಳಿ ಹಾಸ್ಯದ ಚಿತ್ರವನ್ನೂ ಕೊಟ್ಟುಬಿಟ್ಟರೆ ಸಿನಿಮಾದ ಕತೆ ಏನಾಗಬೇಡ ನೀವೇ ಹೇಳಿ. ಇತ್ತ ಅವರ ಪ್ರತಿಭೆಗೂ - ಸಿನಿಮಾದ ಆಶಯಕ್ಕೂ ಅಜಗಜಾಂತರವಾಗಿಬಿಡುತ್ತದೆ. ಆನಂತರ ನಿರ್ದೇಶಕರಿಗೆ ಬರೆದದ್ದು ಸಮಂಜಸ ಎನಿಸದೆ ತಮಗನ್ನಿಸಿದ್ದನ್ನು ಬರೆದುಕೊಳ್ಳುತ್ತಾರೆ. ಅಲ್ಲಿಗೆ ಮತ್ತೊಂದು ಆರೋಪ ಪಟ್ಟಿ ಶುರುವಾಗುತ್ತದೆ.
ಇದು ಕೇವಲ ಬರಹಗಾರನಿಗಷ್ಟೇ ಸಂಬಂಧಿಸಿದ್ದಲ್ಲ. ಸಂಗೀತ, ಸಾಹಿತ್ಯ, ಸಂಕಲನ, ಛಾಯಾಗ್ರಹಣ ಪ್ರತಿಯೊಂದಕ್ಕೂ ಸಂಬಂಧಿಸಿದ್ದು. ಹಾಗಾಗಿ ಮತ್ತು ಸಾಮಾನ್ಯವಾಗಿ ಎಲ್ಲರ ಆಯ್ಕೆ ನಿರ್ದೇಶಕನ ನಿರ್ಧಾರವಾದ್ದರಿಂದ ಆತನಿಗೆ ಅದರ ಸಂಪೂರ್ಣ ಅರಿವಿದ್ದರೆ ಪ್ರತಿಭೆಗೆ ನ್ಯಾಯ ಒದಗಿಸಬಹುದೇನೋ..?

Sunday, June 26, 2016

ರಿಮೇಕ್ ಮಾಡುವುದು ಕಷ್ಟ ಕಣ್ರೀ....

ಒಂದು ರಿಮೇಕ್ ಚಿತ್ರವನ್ನು ವಿಮರ್ಶೆ ಮಾಡುವುದು ಹೇಗೆ..? ಇಷ್ಟಕ್ಕೂ ಅದರಲ್ಲಿ ಏನಿದೆ ಏನಿಲ್ಲ ಎಂಬುದು ಈಗಾಗಲೇ ಪ್ರೇಕ್ಷಕನಿಗೆ ಅದರಲ್ಲೂ ಕನ್ನಡದ ಪ್ರೇಕ್ಷಕನಿಗೆ ಗೊತ್ತೇ ಇರುತ್ತದೆ. ಹಾಗಂತ ಅದನ್ನು ಅದಕ್ಕೂ ಇದಕ್ಕೂ ಹೋಲಿಕೆ ಮಾಡುತ್ತಾ ಕುಳಿತರೆ ಅದು ವಿಮರ್ಶೆಯಾಗುತ್ತದೆಯೇ..? ಒಂದು ಸೂಪರ್ ಹಿಟ್ ಸಿನಿಮಾವನ್ನು ಬೇರೆ ಭಾಷೆಗೆ ತಂದಾಗ ಅದ ಫಲಿತಾಂಶದ ಅಂದಾಜು ಮೊದಲೇ ಆಗಿರುತ್ತದೆ. ಯಾಕೆಂದರೆ ಅಲ್ಲಿ ಹಣ ಗಳಿಸಿ, ಪ್ರೇಕ್ಷಕನ ಮೆಚ್ಚುಗೆಗಳಿಸಿದ ಮೇಲೆಯೇ ಅದನ್ನು ಬೇರೆ ಭಾಷೆಗೆ ರಿಮೇಕ್ ಮಾಡಲಾಗುತ್ತದೆ. ಹಾಗಾಗಿ ಅಲ್ಲಿ ಎಲ್ಲವೂ ಫಿಟ್ ಅಂದ ಮೇಲೆಯೇ ಇಲ್ಲಿ ತೊಡಿಸುವ ಪ್ರಯತ್ನ.. ಆದರೆ ಅದು ಪರ್ಫೆಕ್ಟ್ ಆಗಬಹುದು.. ಇಷ್ಟವಾಗಬೇಕಲ್ಲವೇ..ಹಾಗೆ ನೋಡಿದರೆ ರಿಮೇಕ್ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗಿರಬೇಕು..ಆದರೆ ಅದಾಗಿಲ್ಲ.. ರಿಮೇಕ್ ಸ್ವಮೇಕ್ ಲೆಕ್ಕ ತೆಗೆದರೆ ಲಾಭ ನಷ್ಟ ಸಮವಾಗಿಯೇ ಇದೆ. ಹಾಗಾದರೆ ಲೆಕ್ಕಾಚಾರ ತಪ್ಪಿದ್ದೆಲ್ಲಿ..?
ಒಂದು ಸಿನಿಮಾ ಹಿಟ್ ಆಗುವುದು ಯಾವುದೋ ಒಂದು ಅಂಶದಿಂದಲ್ಲ. ಒಂದು ಚಿತ್ರದ ಒಂದು ಹಾಡು, ಕುಣಿತ, ಸಾಹಸ ಸನ್ನಿವೇಶ ಸಿನಿಮಾಕ್ಕೆ ಒಂದು ಆಕರ್ಷಣೆ ತಂದುಕೊಡುವುದರಲ್ಲಿ ಎರಡು ಮಾತಿಲ್ಲ. ಆದರೆ ಅದೊಂದೇ ಯಶಸ್ಸನ್ನು ಹೊತ್ತೊಯ್ಯಲಾರದು. ಅದೊಂದರ ಸೆಳೆತದಿಂದಾಗಿ ಒಳಹೊಕ್ಕವನಿಗೆ ಇಡೀ ಸಿನಿಮಾ ಇಷ್ಟವಾಗಬೇಕೆಂದರೆ ಆ ಚಿತ್ರದ ಪ್ರತಿಯೊಂದು ಅಂಶವೂ ಕರಾರುವಕ್ಕಾಗಿರಬೇಕು.ಸ್ಟಾರ್ ನಟನ ಆಕರ್ಷಣೆಗೆ ಚಿತ್ರಮಂದಿರಕ್ಕೆ ಮೊದಲ ದಿನವೇ ಹರಸಾಹಸ ಮಾಡಿ ಒಳನುಗ್ಗುವ ಪ್ರೇಕ್ಷಕ/ಅಭಿಮಾನಿ ಆನಂತರ ಅವನನ್ನು ಕೊನೆಯವರೆಗೂ ಕೂರಿಸಿಕೊಳ್ಳಲು,ಮತ್ತು ಒಂದಷ್ಟು ಜನರಿಗೆ ಬಾಯ್ಮಾತಿನ ಪ್ರಚಾರ ಮಾಡಲು ಸಿನಿಮಾ ಚೆನ್ನಾಗಿರಬೇಕಾಗುತ್ತದೆ. 
ಆದರೆ ರಿಮೇಕ್ ಎನ್ನುವಾಗ ಅದೆಷ್ಟು  ಸುಲಭದ ಕೆಲಸ ಅಲ್ಲವೇ ಎನಿಸುವುದು ಸತ್ಯ. ಅಲ್ಲೆಲ್ಲಾ ಚಿತ್ರೀಕರಸಿದ್ದು ಕಣ್ಣ ಮುಂದೆಯೇ ಇರುವಾಗ ಅದನ್ನು ಹಾಗೆ ನಕಲು ಮಾಡಲು ಅದ್ಯಾವ ಪ್ರತಿಭೆ ಬೇಕು ಎನ್ನುವುದು ಪ್ರಶ್ನೆ. ಆದರೆ ಹಾಗೆ ನೋಡಿದರೆ ಅದು ಸುಲಭದ ಕೆಲಸವಲ್ಲ. ಒಂದು ಪರ್ಫೆಕ್ಟ್ ರಿಮೇಕ್ ಎಂದರೆ ಮತ್ತೆ ಅದೇ ಸಿನೆಮಾವನ್ನು ಭಾವ ಕೆಡಿಸದೆ ಮತ್ತೊಮ್ಮೆ ನಿರ್ಮಿಸುವುದು, ಸಾಧ್ಯವಾದರೆ ಅದಕ್ಕಿಂತ ಹೆಚ್ಚು  ಪರಿಣಾಮಕಾರಿಯಾಗಿ. ಉದಾಹರಣೆಗೆ ಹಾಲಿವುಡ್ ಅಲ್ ಪಸಿನೋ ಅಭಿನಯದ 1983 ರಲ್ಲಿ ಬಿಡುಗಡೆಯಾದ ಸ್ಕಾರ್ ಫೇಸ್. ಸುಮಾರು ಎರಡು ಘಂಟೆ ಐವತ್ತು ನಿಮಿಷಗಳ ಚಿತ್ರವಿದು. ಆದರೆ ಈ ಚಿತ್ರಕ್ಕೆ ಮೂಲವಾದ 1932 ರ ಸ್ಕಾರ್ಫೇಸ್ ಒಂದು ಘಂಟೆ ಮೂವತ್ತೆರೆಡು ನಿಮಿಷಗಳು ಮಾತ್ರ ಉದ್ದವಿದೆ. ಅಂದರೆ ಮೂಲ ಕತೆಗೆ ಒಂದಷ್ಟು ಸೇರಿಸಿದ ಚಿತ್ರ ಮೂಲಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನಬಹುದು.ಹಾಗೆಯೇ  ಎ ಕಿಸ್ ಬಿಫೋರ್ ಡೈಯಿಂಗ್ ಅನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು. ಅಂದರೆ ಒಂದು ಸಿನೆಮಾವನ್ನು ಒಂದು ಕತೆಯಂತೆ ಪರಿಗಣಿಸಿ ರಿಮೇಕ್ ಮಾಡಿದಾಗ ಅದು ಒಪ್ಪಬಹುದಾಗುತ್ತದೆ. ಅಲ್ಲಿ ನಿರ್ದೇಶಕನ ಜಾಣ್ಮೆ, ಬರಹಗಾರನ ಕೌಶಲ, ಮತ್ತು ಭಾಷೆಯ ಭಾಷಾಂತರದ ಸೊಗಡುವ ವಾಸ್ತವತೆ ಮತ್ತು ನಿರ್ಮಾಣವಾಗುತ್ತಿರುವ ಕಾಲಘಟ್ಟ ಎಲ್ಲವೂ ಸೇರಿಕೊಳ್ಳುತ್ತದೆ. ಆದರೆ ಬರೀ ಅಲ್ಲಿಯದನ್ನು ಇಲ್ಲಿಗೆ ಕಾಪಿ ಪೇಸ್ಟ್ ಮಾಡಿದಾಗ ಬೇರೆಲ್ಲಾ ತಂತ್ರಜ್ಞರು ಸೃಜನಶೀಲತೆಯಿಂದಲೇ ಕೆಲಸ ಮಾಡಿದರೂ ನಿರ್ದೇಶಕ ಮಾತ್ರ ಸಪ್ಪೆ ಎನಿಸದಿರುವುದಿಲ್ಲ.
ರಿಮೇಕ್ ನಲ್ಲಿ ಅದಾಗಬೇಕಾಗುತ್ತದೆ.ಅಂದರೆ ಒಂದು ಸಿನಿಮಾ ಇಷ್ಟವಾದಾಗ ಅದನ್ನು ಇನ್ನೊಂದು ಭಾಷೆಗೆ ರಿಮೇಕ್ ಮಾಡುವಾಗ ಅದರ ಕತೆಯನ್ನಷ್ಟೇ ಆಯ್ದುಕೊಂಡು ಹಾಗೆಯೇ ಮೂಲಕ್ಕೆ ಧಕ್ಕೆ ಬಾರದ ಹಾಗೆ ಪುನರ್ನಿರ್ದೇಶನ ಮಾಡುವುದು ನಿರ್ದೇಶಕರ ಜಾಣ್ಮೆ. ಆಗ ರಿಮೇಕ್ ಎಂದಾಗ ಮೂಗು ಮುರಿಯುವ ಪ್ರಮೇಯ ಬಂದೊದಗುವುದಿಲ್ಲ. ಅದೊಂತರ ಕಾದಂಬರಿಯನ್ನೂ ಕತೆಯನ್ನೂ ಸಿನಿಮಾ ಮಾಡಿದಷ್ಟೇ ಶ್ರಮ ಬೇಡುತ್ತದೆಯಾದರೂ ಸಿನಿಮಾ ಪಕ್ಕ ನಮ್ಮದೇ ಎನಿಸುವುದರಲ್ಲಿ ಸಂದೇಹವಿಲ್ಲ.
ಆ ತರಹದ ಪ್ರಯತ್ನಗಳು ಸಾಕಷ್ಟು ಆಗಿವೆ. ಉದಾಹರಣೆಗೆ ಬಾಜಿಗರ್ ಚಿತ್ರದ ಮೂಲದಲ್ಲಿನ ನಾಯಕನಿಗೆ ಅಷ್ಟು ಬಲವಾದ ಕಾರಣಗಳಿರಲಿಲ್ಲ. ಅವನ ಕಣ್ಣಿದ್ದದ್ದು ಆಸ್ತಿಯ ಮೇಲೆ. ಆದರೆ ಬಾಜಿಗರ್ ಚಿತ್ರದಲ್ಲಿ ಅದಕ್ಕೆ ಸ್ಪಷ್ಟವಾದ ಮತ್ತು ಹೌದು ಎನಿಸುವ ಹಿನ್ನೆಲೆ ನೀಡಲಾಯಿತು. ಈವತ್ತಿಗೂ ಮ್ಯಾಟ್ ದಿಲ್ಲೊನ್ ಗಿಂತ ಶಾರುಕ್ ಹೆಚ್ಚು ಇಷ್ಟವಾಗುವುದು, ಬಾಜಿಗರ್ ನಮಗೆ ಹೆಚ್ಚು ಆಪ್ತ ಎನಿಸುವುದು ಅದಕ್ಕೆ ಎನಿಸುತ್ತದೆ. ತಮಿಳಿನ ಸಿಂಘಂ ಚಿತ್ರವನ್ನು ಹಿಂದಿಗೆ ತಂದಾಗ ನಿರ್ದೇಶಕರು ಬರೀ ಕತೆಯ ಎಳೆಯನ್ನಷ್ಟೇ ಇಟ್ಟುಕೊಂಡು ಉಳಿದದ್ದನ್ನು ಬದಲಾಯಿಸಿದರು. ಹಾಗಾಗಿ ಅದು ಮೂಲ ಚಿತ್ರಕ್ಕಿಂತಲೂ ಹೆಚ್ಚು ಥ್ರಿಲ್ ಕೊಡುತ್ತದೆ. ಘಜಿನಿ ಹಿಂದಿಯಲ್ಲಿ ಆದಾಗ ಅದರಲ್ಲಿದ್ದ ಲೋಪಗಳನ್ನು ತಿದ್ದಲಾಯಿತು. ಹಾಗಾಗಿ ಮೂಲದಲ್ಲಿದ್ದ ಅವಳಿ ಖಳರು ಮಾಯವಾದರು. ಮಣಿಚಿತ್ರತಾಲ್ ನಲ್ಲಿ ಮಧ್ಯಂತರಕ್ಕೆ ಬರದೆ ಮೊದಲೇ ಬಂದರು ವಿಷ್ಣುವರ್ಧನ್. ಚಾಪ್ಲಿನ್ ನ ಸಿಟಿ  ಲೈಟ್ಸ್ ಅನುರಾಗ ಸಂಗಮ, ತುಳ್ಲಾದ ಮನಂ ತುಳ್ಳುಂ ಆದಾಗಲೂ ಮೂಲ ಕತೆಯನ್ನು ತೆಗೆದುಕೊಂಡು ಅದನ್ನು ನಮ್ಮಲ್ಲಿಗೆ ತಕ್ಕಂತೆ ಕತೆಯನ್ನು ನೇಯಲಾಯಿತು..ಆನಂತರ ಅದನ್ನು ಮತ್ತೆ ನಮ್ಮಲ್ಲಿಗೆ ಓ ನನ್ನ ನಲ್ಲೆ ಹೆಸರಿಗೆ ತರಲಾಯಿತು ಬಿಡಿ... 
ಹಾಗೆ ರಿಮೇಕ್ ಮಾಡುವಾಗ ಎರ್ರಾಬಿರ್ರಿ ಬದಲಾಯಿಸಿ "ಗುರುವೇ.. ಅದೇ  ಸೂಪರ್  ಆಗಿತ್ತಲ್ಲ.." ಎನ್ನುವಂತೆ ಮಾಡಿದ ರಿಮೇಕ್ ಗಳೂ ಇದೆ. ಹಾಗಾಗಿಯೇ ರಿಮೇಕ್ ಎಂಬುದು ಕಷ್ಟದ ಕೆಲಸ. ಅದರ ಮೂಲವನ್ನು ಉಳಿಸಿಕೊಂಡು ನಮ್ಮತನವನ್ನು ತೋರಿಸುತ್ತಾ ಸಿನಿಮಾ ಮಾಡುವುದು ಜಾಣ್ಮೆ.
ಇದನ್ನೆಲ್ಲಾ ಏಕೆ ಪ್ರಸ್ತಾಪವಾಯ್ತೆಂದರೆ ಮೊನ್ನೆ ಎರಡು ಚಿತ್ರಗಳು ಬಿಡುಗಡೆಯಾದವು. ಒಂದು ಜಿಗರ್ಥಂಡ ಮತ್ತೊಂದು ಲಕ್ಷ್ಮಣ. ಎರಡೂ ಅದ್ದೂರಿ ಚಿತ್ರಗಳೇ. ಎರಡನ್ನೂ ಕನ್ನಡದ ಖ್ಯಾತನಾಮರೆ ನಿರ್ಮಿಸಿದ್ದಾರೆ, ನಿರ್ದೇಶಿಸಿದ್ದಾರೆ. ಎರಡರ ಮೂಲ ಚಿತ್ರಗಳೂ ಸೂಪರ್ ಹಿಟ್ ಗಳೇ. ಆದರೆ ಎರಡನ್ನೂ ನೋಡಿದಾಗ ಇಷ್ಟೆಲ್ಲಾ ಶ್ರೀಮಂತಿಕೆ, ತಂತ್ರಜ್ಞರು ಸೇರಿಕೊಂಡು ಭಾಷೆ ಬದಲಾಯಿಸಿದಂತಹ ಅನುಭವಕೊಡುವ ಚಿತ್ರವನ್ನು ನಿರ್ಮಿಸಬೇಕಿತ್ತೆ ಎನಿಸುತ್ತದೆ.

Friday, June 17, 2016

ಸೆನ್ಸಿಬಲ್ ನಿರ್ಮಾಪಕರು ಬೇಕಿದ್ದಾರೆ..

ಈವತ್ತಿನ ಮಟ್ಟಿಗೆ ಕನ್ನಡದಲ್ಲಿ ಒಂದಷ್ಟು ಒಳ್ಳೆಯ ಚಿತ್ರಗಳು ಬಿಡುಗಡೆಯಾಗಿದೆ ಎನ್ನುವುದು ಖುಷಿಯ ಸಂಗತಿಯೇ. ಹಾಗಾಗಿಯೇ ಅಂತಹ ಒಳ್ಳೆಯ ಚಿತ್ರಗಳನ್ನು ನಮಗೆ ನೀಡಿದ ನಿರ್ದೇಶಕರನ್ನು ಪ್ರಶಂಸೆ ಮಾಡುವುದು ಚಿತ್ರಪ್ರೇಕ್ಷಕರಾದ ನಮ್ಮ ಕರ್ತವ್ಯ. ಆದರೆ ಈ ಒಂದು ವಿಷಯದಲ್ಲಿ ನಾವು ನಿಜಕ್ಕೂ ಪ್ರಶಂಸಿಸಬೇಕಾದದ್ದು ನಿರ್ಮಾಪಕರನ್ನು. ನಿರ್ದೇಶಕ ಹೊಸತನವನ್ನು ಹೊಸಕತೆಯನ್ನು ಕೊಂಡೊಯ್ದಾಗ ವ್ಯಾವಹಾರಿಕವಾಗಿ ನಿರ್ಮಾಪಕ ಯೋಚನೆ ಮಾಡುವುದು ತಪ್ಪಲ್ಲ, ಆದರೆ ಕತೆಯ ಬಗ್ಗೆ ಗ್ರಹಿಸದೆ ಇರುವುದು ಸರಿಯಲ್ಲ. ನಮ್ಮಲ್ಲಿ ಅಂತಹ ಸೂಕ್ಷ್ಮಗ್ರಾಹಿ ನಿರ್ಮಾಪಕರ ಸಂಖ್ಯೆ ಕಡಿಮೆಯೇ.
ನಾನು ಒಬ್ಬ ನಿರ್ಮಾಪಕರಿಗೆ ಕತೆ ಹೇಳಲು ಹೋದಾಗ ಅವರು ಅರ್ಧ ಘಂಟೆ ಅದೂ ಇದೂ ಮಾತಾಡಿ ಕೊನೆಗೆ "ನೋಡಪ್ಪ..ಒಂದ್ ಕೆಲಸ ಮಾಡು.. ಅವರಿಗೆ ಸ್ಟೋರಿ ಹೇಳಿ ಒಪ್ಪಿಸಿಬಿಡು..ಅವರದ್ದು ಕಾಲ್ ಶೀಟ್ ತಂದ್ಬಿಡು..ಸಿನಿಮಾ ಮಾಡೋಣ .." ಅಂದರು. ನಾನು ಆಯ್ತು ಸಾರ್, ಆದರೂ ಒಮ್ಮೆ ಕತೆ ಕೇಳಿ ಎಂದದ್ದಕ್ಕೆ "ನಮಗೆ ಅದೆಲ್ಲಾ ಅರ್ಥ ಆಗಲ್ಲ ಗುರು.." ಎಂದು ಸಾರಾಸಗಟಾಗಿ ತಿರಸ್ಕರಿಸಿಬಿಟ್ಟರು. ಆಮೇಲೆ ಅದೂ ಇದೂ ಮಾತಾಡುತ್ತಾ ಅಲ್ಲೇ ಟಿವಿಯಲ್ಲಿ ಬರುತ್ತಿದ್ದ ತಮಿಳು ಸಿನಿಮಾ ಹೊಗಳುತ್ತಾ ಏನ್ ಸಿನಿಮಾ ಮಾಡ್ತಾರೆ ಇವ್ರು ಎಂದು ಲೋಚ್ಚಿಕ್ಕಿದರು. ನಾನು ಅಲ್ಲೇ ಹೇಳಿದೆ, ಸಾರ್ ಅಲ್ಲಿನ ನಿರ್ಮಾಪಕರು ಸ್ವಲ್ಪನಾದ್ರೂ ಕತೆ ಕೇಳ್ತಾರೆ, ಆದ್ರೆ ನೀವು ಕತೆಗಿಂತ ಸ್ಟಾರ್ ಗೆ ಹೆಚ್ಚು ಮಹತ್ವ ಕೊಡ್ತೀರಲ್ವಾ? ಹಾಗಾಗಿ ಸ್ಟಾರ್ ನಟನನ್ನು ಒಪ್ಪಿಸದಿದ್ದರೆ ಸಿನಿಮಾ ಆಗಲ್ಲ ಎನ್ನುವುದಾದರೆ ಸ್ಟಾರ್ ಗಳ ಹಿತಾಸಕ್ತಿಗೆ ತಕ್ಕಂತೆ ಕತೆ ಬದಲಾವಣೆ ಮಾಡಬೇಕಾಗುತ್ತದೆ.. ಎಂದೆ. ಹೇಳೋದ್ ಸುಲಭ ಕಣ್ರೀ ಸಿನಿಮಾಕ್ಕೆ ಹಣ ಹಾಕುವಾಗ ಗೊತ್ತಾಗುತ್ತೆ , ನಿಮಗೇನು ಗೊತ್ತು.. ನಿರ್ಮಾಪಕ  ಪೈಸೆ ಪೈಸೆ ಗೆ ಎಷ್ಟು ಒದ್ದಾಡ್ತಾನೆ ಅಂತ ಎಂದವರು ಆ ನಿಟ್ಟಿನಲ್ಲಿ  ನಷ್ಟ ಅನುಭವಿಸಿದವರ  ಹೆಸರುಗಳ ಪಟ್ಟಿಯನ್ನೇ ನನ್ನ ಮುಂದಿಟ್ಟರು. ನಾನು ಅವರು ನಿರ್ಮಿಸಿದ  ಚಿತ್ರಗಳ ಪಟ್ಟಿಯನ್ನು ಅವರ ಮುಂದಿಟ್ಟು ಅದರ ಬಗ್ಗೆ ಮಾತಾಡಿದೆ..ಇದೆಲ್ಲಾ ಸ್ವಯಂಕೃತ ಸರ್..ಅದೇಕೆ ಈ ಕತೆಯನ್ನು  ಸಿನಿಮಾ ಮಾಡಿದ್ದು, ಅದ್ಯಾಕೆ ಅದನ್ನು  ಹಾಗೆ ತೆಗೆದದ್ದು ..ನಿರ್ಮಿಸುವ ಇದರ ಬಗ್ಗೆ ಯಾಕೆ ಯೋಚಿಸಲಿಲ್ಲ, ಸೋಲೂ ಗೆಲುವುಗಳನ್ನೂ ಬ್ರಹ್ಮನೂ ಯೋಜಿಸಲಾರನೇನೋ.. ಆದರೆ ಒಂದು  ಅಂದಾಜಂತೂ ಮಾಡಬಹುದು..ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನ್ನುವುದನ್ನು ಗ್ರಹಿಸಿಕೊಳ್ಳಬಹುದು. ಇಷ್ಟೆಲ್ಲದರ ನಂತರದ್ದು ದೈವೇಚ್ಛೆ ಎನ್ನಬಹುದೇನೋ..? ಆದರೆ  ಅದಾವುದನ್ನು  ಮಾಡದೆ  ಒಂಟಿ ಕಣ್ಣಲ್ಲಿ ಸಿನಿಮಾ ಮಾಡಿ ಕಳೆದುಕೊಂಡು ಚಿತ್ರಜಗತ್ತೆ ಸರಿಯಿಲ್ಲ ಎನ್ನುವ ನಿರ್ಣಯದಿಂದ ಮೊದಲ್ಗೊಂಡು  ನಾನಾಕಾರಣಗಳನ್ನೂ ಪಟ್ಟಿ ಮಾಡುತ್ತಾ ಹೋದರೆ ಹೇಗೆ?
ಇದನ್ನು ಯಾಕೆ ಹೇಳಿದೆ ಎಂದರೆ ಒಬ್ಬ ನಿರ್ಮಾಪಕ ಕತೆಯನ್ನು ಕೇಳಿ, ಚರ್ಚಿಸಿ ಸಿನಿಮಾ ಮಾಡಿದರೆ ಅದು ಸಂತಸದ ಸಂಗತಿ. ಅಥವಾ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಅದಕ್ಕೊಬ್ಬ ಸಾಹಿತ್ಯ, ಸಿನಿಮಾ ಪರಿಣತರನ್ನು ಕೂರಿಸಿ ಆತನಿಂದ ಬರುವ ಕತೆಗಳನ್ನು ಪರಾಮರ್ಷಣೆ ಮಾಡಿಸಿದರೆ ಒಳ್ಳೆಯದು. ಹಾಲಿವುಡ್ ನಲ್ಲಿ ಇದಾಗುತ್ತದೆ. ಮಾರುಕಟ್ಟೆಗೆ ಬಂದ ಹೊಸ ಹೊಸ ಕಾದಂಬರಿಗಳನ್ನು  ಆ ಚಿತ್ರಸಂಸ್ಥೆ ಬರಹಗಾರರಿಂದ ನೂರಾರು ಪುಟಗಳ  ಬರಹವನ್ನು ಹತ್ತಾರು  ಪುಟಕ್ಕೆ  ಸಂಕ್ಷಿಪ್ತಗೊಳಿಸುತ್ತದೆ. ಆನಂತರ ಅದು ಸಿನಿಮಾಕ್ಕೆ  ಯೋಗ್ಯವೇ ಎನ್ನುವುದನ್ನು  ಕಂಪನಿಯ ಸೃಜನಶೀಲರು ಚರ್ಚಿಸುತ್ತಾರೆ. ಹಾಗಾಗಿಯೇ ಬಹುತೇಕ ಬೆಸ್ಟ್ ಸೆಲ್ಲರ್ ಎನಿಸಿಕೊಳ್ಳುವ ಪುಸ್ತಕಗಳು ಅಲ್ಲಿ ಸಿನಿಮಾ ರೂಪ ತಾಳುತ್ತವೆ. ಆದರೆ ನಮ್ಮಲ್ಲಿ ಚಿತ್ರನಿರ್ಮಾಣ ಸಂಸ್ಥೆಯಲ್ಲಿ ಅವರನ್ನು ಹೊರತುಪಡಿಸಿ ಬೇರೆಯವರೆಲ್ಲಾ ಇದ್ದಾರೆ, ಕಾದಂಬರಿ  ಕಮರ್ಷಿಯಲ್ ಗೆ ಆಗ್ಬರಲ್ಲ ಬಿಡಪ್ಪ  ಎಂದು ಸುರುವಿನಲ್ಲಿಯೇ ರಾಗ ಎಳೆದುಬಿಡುತ್ತಾರೆ. ಹಾಗೆಯೇ ಅಂತಹ ಕ್ರಿಯೇಟಿವ್  ಹೆಡ್ ಕುರ್ಚಿ ಸೃಷ್ಟಿಸಿ ಅದಕ್ಕೊಬ್ಬ ಸೂಕ್ತ ವ್ಯಕ್ತಿಯನ್ನು  ಕೂರಿಸೋಣ ಎಂದುಕೊಂಡರೆ ನಮ್ಮಲ್ಲಿ ಸಿಗುವವರು ತೀರಾ ಕಡಿಮೆಯೇ. ಈವತ್ತು  ನಮ್ಮಲ್ಲಿ ಚಿತ್ರಸಾಹಿತಿ,  ಛಾಯಾಗ್ರಹಾಕ, ನೃತ್ಯ ನಿರ್ದೇಶಕ, ನಿರ್ಮಾಪಕ, ಸಂಕಲನಕಾರ, ಸಾಹಸ ನಿರ್ದೇಶಕ .. ಹೀಗೆ  ಯಾರೂ  ಅವರು ಅವರಾಗಿಯೇ ಉಳಿದಿಲ್ಲ..ಅವರು ಒಂದಲ್ಲ ಒಂದು ದಿನ ನಿರ್ದೇಶಕನ ಕುರ್ಚಿ ಏರಿ ಸುಮ್ಮನಾಗಿಬಿಡುತ್ತಾರೆ. ಹಾಗಾಗಿಯೇ ನಮ್ಮಲ್ಲಿ ಒಂದೊಳ್ಳೆ ತಂತ್ರಜ್ಞ ತಂತ್ರಜ್ಞನಾಗಿಯಷ್ಟೇ ಉಳಿಯದೆ  ನಿರ್ದೇಶಕನ ಟೊಪ್ಪಿಗೆ ಧರಿಸುವ ಹಪಾಹಪಿ ತೋರಿಸಿ ಅವರ ನೈಪುಣ್ಯತೆಯಿದ್ದ  ವಿಭಾಗದಿಂದ  ಜಾರಿ ಹೋಗಿರುವ ಉದಾಹರಣೆಗಳಿವೆ. ಹಾಗಾಗಿಯೇ ನಮ್ಮಲ್ಲೀಗ  ಚಿ.ಉದಯಶಂಕರ್, ವರದಪ್ಪ  ಅಂತಹ ಮಹಾನ್ ಕಥೆಯ ತೀರ್ಪುಗಾರರು ಕಡಿಮೆ ಅಥವಾ ಇಲ್ಲವೇ ಇಲ್ಲ. ಹಾಗಾಗಿಯೇ  ಈ ಸಾಧ್ಯತೆಗಳೆಲ್ಲಾ ಕನ್ನಡದ ಮಟ್ಟಿಗೆ ಕಡಿಮೆಯೇ. ಅದರಲ್ಲೂ ಈವತ್ತು ನಿರ್ಮಾಪಕರ ಸಾಲಿನ ಬಹುತೇಕರು ಕತೆ ಕೇಳಿ ಸಿನಿಮಾ ಮಾಡುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ಸ್ಟಾರ್ ನಟನ ಕಾಲ್ ಶೀಟ್ ಅಥವಾ ರಿಮೇಕ್ ಹಕ್ಕುಗಳ ಮೇಲೆಯೇ ಸಿನಿಮಾ ಮಾಡುವುದಕ್ಕೆ ಮುನ್ನುಗ್ಗುತ್ತಾರೆ. ನಿರಂತರವಾಗಿ ಸಿನಿಮಾ  ಮಾಡುವ, ಅದರ ಹೊರಾತಾಗಿ  ಬೇರೇನೂ ಮಾಡದ  ಚಿತ್ರ  ನಿರ್ಮಾಪಕರುಗಳು  ಹೊಸತನ, ಹೊಸ ಅಲೆಯತ್ತ  ತಲೆ ಕೆಡಿಸಿಕೊಳ್ಳದೆ ತಮ್ಮ  ಎಂದಿನ  ಹಾದಿಯಲ್ಲಿ  ಮುನ್ನುಗ್ಗುತ್ತಿರುವುದು ಮತ್ತು ಹೊಸ ಪ್ರಯೋಗಗಳನ್ನು ಹೊಸಬರಷ್ಟೇ[ಬಹುತೇಕ] ಮಾಡುತ್ತಿರುವುದು ಕಣ್ಮುಂದಿರುವ ಸಂಗತಿ.
ಉದಾಹರಣೆಗೆ ತಿಥಿಯಂತಹ ಕತೆಯನ್ನು ಮಾಮೂಲಿ ನಿರ್ಮಾಪಕರ ಮುಂದೆ ಹರವಿದ್ದರೆ ಅವರು ಹೌಹಾರದೆ ಇರುತ್ತಿದ್ದರೆ..? ಅಯ್ಯೋ ಗುರುವೇ ಇದು ನೆಗೆಟಿವ್ ಟೈಟಲ್...ಎಲ್ಲಿ ಹೋಗುತ್ತೆ ಗುರುವೇ ಅನ್ನುವುದರಿಂದಲೇ ಪ್ರಾರಂಭಿಸುತ್ತಿದ್ದರು. ಅವರ ಲೆಕ್ಕಾಚಾರಗಳೇ  ಬೇರೆ ಇರುತ್ತವೆ. ಮುಂದಿನವಾರದಿಂದ  ನಿಮ್ಮ ಮೆಚ್ಚಿನ ಚಿತ್ರಮಂದಿರದಲ್ಲಿ  ತಿಥಿ ಅಂತಲೋ, ಪ್ರೇಕ್ಷಕ ಬಾರೋ  ತಿಥಿಗೆ ಹೋಗೋಣ ಅಂತಲೂ ಹೇಗೆ ಮಾತನಾಡಿಕೊಳ್ಳುತ್ತಾನೆ ಎನ್ನುವ ಅನಿಸಿಕೆ ಅವರದ್ದು. ಹಾಗೆಯೇ ಇನ್ನು ಈವತ್ತಿನ ವಿಶೇಷ ಎನಿಸಿದ ಚಿತ್ರವಾದ ಗೋದಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಕತೆಯನ್ನು ನಿರ್ಮಾಪಕರ ಎದುರಿಗೆ ಕುಳಿತು ಸಾವಧಾನವಾಗಿ ನಿರೂಪಿಸಲು ಸಾಧ್ಯವಿತ್ತೆ..ತಪ್ಪಿಸಿಕೊಂಡ ಅಪ್ಪ, ಹುಡುಕುವ ಮಗ, ಓಪನಿಂಗ್ ಸಾಂಗ್ ಇಲ್ಲ, ಕೇಡಿಗಳಿದ್ದರೂ ಫೈಟ್ ಇಲ್ಲ, ಕಾಮಿಡಿ ಇಲ್ಲವೇ ಇಲ್ಲ.. ನಮ್ಮ ಕೈಲಿ ಆಗಲ್ಲಪ್ಪ ಎಂದು ಬುದ್ದಿವಾದ ಹೇಳಿ ಕಳುಹಿಸಿಬಿಡುತ್ತಿದ್ದರೇನೋ? ಅಥವಾ  ಅದನ್ನು  ಹೀಗೆ ಮಾಡಿದರೆ ಹೇಗೆ, ಹಾಗೆ ಮಾಡಿದರೆ ಹೇಗೆ, ಕೇಡಿಗಳು  ಈಗಾಗಲೇ ಇರುವುದರಿಂದ  ಫೈಟ್ ಇಡಬಹುದಲ್ಲಾ, ವಸಿಷ್ಠ  ಅಚ್ಯುತ್ ಅವರನ್ನು  ಕುಡಿಯಲು ಕರೆದುಕೊಂಡು ಹೋಗಿದ್ದನ್ನೇ ನೆಪ  ಮಾಡಿಕೊಂಡು ಒಂದು ಐಟಂ ಡಾನ್ಸ್ ಹಾಕಿಬಿಡೋಣ ಎನ್ನುವ ಸಲಹೆಯಂತೂ  ದೇವರಾಣೆ ಬರುತ್ತಿತ್ತೇನೋ? ಆದರೆ  ನಿರ್ಮಾಪಕರು ನಿರ್ದೇಶಕರ ಕತೆ, ಅದರಲ್ಲಿರುವ ಸೂಕ್ಷ್ಮತೆಯನ್ನು ಗ್ರಹಿಸಿದ್ದಾರೆ, ಹಾಗಾಗಿಯೇ  ಚಿತ್ರ ಹಾಗೆಯೇ ಮೂಡಿ ಬಂದಿದೆ, ಗಾಂಧಿನಗರದಲ್ಲಿನ ಸಿದ್ಧಸೂತ್ರಗಳನ್ನು ಪಕ್ಕಕ್ಕೆ ತೂರಿ ಗಂಭೀರ ಕತೆಯ  ಚಿತ್ರ ಮೂಡಿದೆ, ಮತ್ತದು ಪ್ರೇಕ್ಷಕರಿಗೆ ಇಷ್ಟವಾಗಿದೆ.
ಅದಕ್ಕೆ ಹೇಳಿದ್ದು ಒಂದು ಹೊಸತನದ  ಸಿನಿಮಾದ ಹಿಂದೆ ನಿರ್ದೇಶಕನ ವಿಷನ್ ಎಷ್ಟಿರುತ್ತದೋ ಅಷ್ಟೇ ಟ್ರಸ್ಟ್ ನಿರ್ಮಾಪಕರದ್ದಿರುತ್ತದೆ. ನಿರ್ಮಾಪಕರ ಸೂಕ್ಷ್ಮಗ್ರಹಿಕೆ ಮತ್ತು ಅವರ ಬುದ್ದಿವಂತಿಕೆಯೇ ಹೊಸತನಕ್ಕೆ ದಾರಿಯಾಗುತ್ತದೆ. ಸುಮ್ಮನೆ  ಗಮನಿಸಿ, ಆವತ್ತಿನಿಂದ ಈವತ್ತಿನವರೆಗೆ ಯಾವುದಾದರೂ ಹೊಸ ಪ್ರಯತ್ನ, ಹುಬ್ಬೇರಿಸುವ ಸಿನಿಮಾಗಳೆಲ್ಲಾ ಬಂದಾಗ ನಿರ್ಮಾಪಕರು ಬಹುತೇಕ  ಹೊಸಬರೇ ಆಗಿರುತ್ತಾರೆ. ಆನಂತರ ಅವರು ಅದನ್ನು  ಕಾಯ್ದುಕೊಳ್ಳದೆ ಹೋಗುವುದು ಬಿಡುವುದು ಅವರಿಗೆ ಬಿಟ್ಟದ್ದು.
ಹಾಗಾಗಿ ನಮಗೆ ಸೂಕ್ಷ್ಮಗ್ರಾಹಿ, ಅಭಿರುಚಿಯುಳ್ಳ ಹಾಗೆಯೇ ಒಂದು ವಿಷನ್ ಇರುವ ನಿರ್ಮಾಪಕರು ಸಿಕ್ಕಿದ್ದಾರೆ. ಅವರನ್ನು ಉಳಿಸಿಕೊಳ್ಳುವುದು ನಿರ್ದೇಶಕರ ಬಹುದೊಡ್ಡ ಜವಾಬ್ದಾರಿಯಾಗಿದೆ..

Tuesday, June 14, 2016

ಸೈರಾಟ್ ಕನ್ನಡಕ್ಕೆ...

ನಮ್ಮ  ಕನ್ನಡದಲ್ಲಿ  ದಕ್ಷಿಣ ಭಾರತದ ಇತರೆ ಭಾಷೆಗಳಾದ ತೆಲುಗು ತಮಿಳು  ರಿಮೇಕ್  ಆಗುತ್ತಿದ್ದದ್ದೆ  ಹೆಚ್ಚು. ಒಂದಷ್ಟು ಹಿಂದಿ ಚಿತ್ರಗಳನ್ನು  ಹೊರತು ಪಡಿಸಿದರೆ  ಬೆಂಗಾಲಿ, ಒರಿಸ್ಸಾ, ಮರಾಠಿ  ಚಿತ್ರಗಳು ಕನ್ನಡ ರೂಪ ತಳೆದದ್ದು ಅಪರೂಪ. ಈಗ  ಮರಾಠಿ ಚಿತ್ರ  ಸೈರಾಟ್  ಕನ್ನಡಕ್ಕೆ  ರಿಮೇಕ್  ಆಗುತ್ತಿದೆ. ನಮ್ಮ ಹೆಸರಾಂತ  ನಿರ್ಮಾಪಕರಾದ ರಾಕಲೈನ್  ವೆಂಕಟೇಶ್  ಕನ್ನಡಕ್ಕೆ ತರುತ್ತಿದ್ದಾರೆ. ಆ ಮೂಲಕ  ಸೂಪರ್ ಹಿಟ್ ಚಿತ್ರಗಳು  ಯಾವುದೇ ಭಾಷೆಯಲ್ಲಿ ಬಂದರೂ ನಾವು ಕನ್ನಡಿಗರು  ರಿಮೇಕ್  ಮಾಡಲು ಸಿದ್ಧ  ಎಂಬುದು  ಸಾಬೀತಾದಂತಾಗಿದೆ.
ಸೈರಾಟ್  ಸರಿ ಸುಮಾರು  ಮೂರು  ಘಂಟೆ  ಅವಧಿಯ ಚಿತ್ರ. ಚಿತ್ರದ ಕತೆಯಾಗಲಿ, ಚಿತ್ರಕತೆಯಾಗಲಿ  ಯಾವುದೂ ಹೊಸತಲ್ಲ. ಅಥವಾ ಸಿನಿಮಾದಲ್ಲಿ ಸಮಾಜಕ್ಕೆ ಬೇಕಾದಂತಹ  ಸಂದೇಶವೂ ಇಲ್ಲ. ಮರ್ಯಾದೆ ಹತ್ಯೆಯನ್ನು ವೈಭವೀಕರಿಸಿರುವ  ಚಿತ್ರದಲ್ಲಿನ ಕತೆ ಚಿತ್ರಕತೆ ನಮ್ಮಲ್ಲಿಯೇ ತೆರೆಕಂಡ ಚಲುವಿನ ಚಿತ್ತಾರವನ್ನು ಆಲ್ಮೋಸ್ಟ್ ನೆನಪಿಸುತ್ತದೆ.ಮೊದಲಾರ್ಧ  ದೀರ್ಘವಾದರೂ ನೋಡಿಸಿಕೊಂಡು ಹೋಗುತ್ತದೆ. ಆಮೇಲೆ ಸ್ವಲ್ಪ ಮಟ್ಟಿಗೆ ಬೋರ್ ಎನಿಸಿದರೂ ಅಂತ್ಯ ಮಾತ್ರ ಮನಸ್ಸನ್ನು ಕಲಕುತ್ತದೆ. ಆ ಒಂದು ವಿಷಯದಲ್ಲಿ  ನಿರ್ದೇಶಕ ನಾಗರಾಜ್ ಮಂಗಳೆ ಅವರನ್ನು ಮೆಚ್ಚಲೇಬೇಕಾಗುತ್ತದೆ. ಅಂತ್ಯದಲ್ಲಿ ಯಾವುದೇ ಅಬ್ಬರವಿಲ್ಲದೆ, ಬರ್ಬರತೆಯಿಲ್ಲದೆ ಅದನ್ನು ನೋಡುಗನ ಕಣ್ಣಲ್ಲಿ ನೀರು ಬರುವ ಹಾಗೆ ಹತ್ತಿಕ್ಕಲಾಗದ ವಿಷಾದ ಆವರಿಸುವ ಹಾಗೆ ನಿರ್ದೆಶಿಸಿರುವುದು ಅವರ ಪ್ರತಿಭೆಯನ್ನು ಎತ್ತಿ ಹಿಡಿಯುತ್ತದೆ.ಆದರೂ ಬರೀ ಯಶಸ್ಸಿನ ಮಾನದಂಡದಿಂದಷ್ಟೇ ಅದನ್ನು ಕನ್ನಡಕ್ಕೆ ತರುತ್ತಿರುವುದು ಎಂಬುದು ಅರಗಿಸಿಕೊಳ್ಳಬೇಕಾದ ವಿಷಯ.
ಇದು ಕನ್ನಡಕ್ಕೆ ಹೊಸದೇನಲ್ಲ.. ಈ ಹಿಂದೆ "ಅವರ್ ಹಾಸ್ಪಿಟಾಲಿಟಿ" ಚಿತ್ರವನ್ನು ದಿನೇಶ್ ಬಾಬು ಬಲಗಾಲಿಟ್ಟು ಒಳಗೆ  ಬಾ ಎನ್ನುವ ಹೆಸರಿನಲ್ಲಿ ಕನ್ನಡದಲ್ಲಿ ತೆರೆಗೆ ತಂದಿದ್ದರು. ಆನಂತರ ರಾಜಮೌಳಿ ಅದನ್ನೇ ತೆಲುಗಿನಲ್ಲಿ "ಮರ್ಯಾದಾ ರಾಮಣ್ಣ" ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದರೆ ಮತ್ತದು ಇದೆ ಹೆಸರಿನಲ್ಲಿಯೇ ಕನ್ನಡಕ್ಕೆ ಕೋಮಲ್ ನಾಯಕತ್ವದಲ್ಲಿ ಅಧಿಕೃತವಾಗಿ ರಿಮೇಕ್ ಆಗಿತ್ತು.  ಹಾಗೆಯೇ  "ಮಣಿಚಿತ್ರತಾಳ್" ಕನ್ನಡದಲ್ಲಿ ಆಪ್ತಮಿತ್ರ  ಆಗುವ ಮುನ್ನವೇ "ಸಾಗರಿ" ಹೆಸರಿನಲ್ಲಿ ತೆರೆಕಂಡಿತ್ತು. ಹಾಗಾಗಿ ಕತೆ ಹೇಗೋ ಏನೋ ಅಲ್ಲಿ ಯಶಸ್ಸಾದರೆ ಇಲ್ಲಿ ತರೋಣ ಎನ್ನುವ ಮನೋಭಾವವೇ ಕನ್ನಡದಲ್ಲಿ ರಿಮೇಕ್ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿದೆ.
ಇನ್ನು ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್ ಕನ್ನಡದಲ್ಲಿ ಯಶಸ್ವೀ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ ಅವರ ಸಂಸ್ಥೆಯಿಂದ ಹೆಚ್ಚು ರಿಮೇಕ್ ಚಿತ್ರಗಳು ನಿರ್ಮಾಣವಾಗಿರುವುದು ಸ್ವಲ್ಪ ಬೇಸರದ ಸಂಗತಿ. ಈವತ್ತು ರಾಷ್ಟ್ರಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಪಕನೆಂದು ಗುರುತಿಸಿಕೊಂಡಿರುವ ರಾಕಲೈನ್ ಸ್ವಮೇಕ್ ಚಿತ್ರಗಳತ್ತ ಗಮನ ಹರಿಸದೆ ಇರುವುದು, ಕನ್ನಡದ ಕಥೆಗಳನ್ನು ಹೆಚ್ಚು ಸಿನಿಮಾ ಮಾಡದೆ ಇರುವುದು ಬೇಸರ ತರಿಸದೇ ಇರದು. ಪರಭಾಷೆಯಲ್ಲಿ ಅದ್ದೂರಿಯಾಗಿ ಸಿನಿಮಾ  ನಿರ್ಮಿಸುವ ಅವರು ಆಯಾರಂಗದಲ್ಲಿ ಸ್ವಮೇಕ್ ಚಿತ್ರಗಳನ್ನು ಹೆಚ್ಚು ನಿರ್ಮಿಸಿದ್ದಾರೆ. ಆದರೆ ಅದೇಕೋ ಏನೋ ಕನ್ನಡಕ್ಕೆ ಬಂದರೆ ಹೊಸ ಕತೆಯೂ ಇಲ್ಲ, ಸ್ವಮೇಕೂ ಇಲ್ಲ ಎನ್ನುತ್ತಾರೆ. ಈವತ್ತು ನಾವೆಲ್ಲಾ ಹೆಮ್ಮೆ ಪಡುವಂತಹ ಸಂಸ್ಥೆಯಾದ ರಾಕ್ ಲೈನ್  ಪ್ರೊಡಕ್ಷನ್ ನಲ್ಲಿ ಅದ್ಭುತ ಕತೆಯ ಸ್ಮರಣೀಯ ಎನಿಸುವ ಸ್ವಮೇಕ್ ಚಿತ್ರದ ಕೊರತೆಯಿದೆ. ಹಾಗಂತ ರಾಕ್ ಲೈನ್ ಸ್ವಮೇಕ್ ಮಾಡೇ ಇಲ್ಲ ಅಂತಲ್ಲ. ಆದರೆ ಅವರು ಜಾಸ್ತಿ ಮೊರೆ ಹೋಗಿರುವುದು ರಿಮೇಕ್ ಚಿತ್ರಗಳತ್ತ ಎನ್ನುವುದು ಸತ್ಯ. ಒಂದು ಲಾಲಿ, ಸೂಪರ್ ಅಂತಹ ಸ್ವಮೇಕ್ ಚಿತ್ರಗಳನ್ನೂ ನೀಡಿದೆ ಅವರ ಸಂಸ್ಥೆ. ಆದರೆ ಯಾವುದೇ ರೀತಿಯಲ್ಲಿಯೂ ಹೊಸತನದ ಹೊಸ ಅಲೆಯ ಚಿತ್ರಗಳ ಕಡೆಗೆ ಗಮನ ಹರಿಸದೆ ಇರುವುದು, ಪಕ್ಕಾ ಮಸಾಲೆ ಮನರಂಜನೆ -ರಿಮೇಕ್ ಚಿತ್ರಗಳಿಗಷ್ಟೇ ಪ್ರಾಮುಖ್ಯತೆ ಕೊಟ್ಟಿರುವುದು ಹೆಚ್ಚಾಗಿ ಕಂಡುಬರುತ್ತದೆ. ಸಿನಿಮಾ ವ್ಯವಹಾರವನ್ನು ತುಂಬಾ ಚೆನ್ನಾಗಿ ಅರಿತಿರುವ ಮತ್ತು ನಿರ್ಮಾಣದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿರುವ ರಾಕ್ ಲೈನ್ ಕನ್ನಡ ಚಿತ್ರರಂಗದ ಆಸ್ತಿ. ಅವರು ಸ್ವಮೇಕ್ ಚಿತ್ರಗಳತ್ತ, ಹೊಸ ಪ್ರತಿಭೆಗಳ ಅನಾವರಣದತ್ತ ಸ್ವಲ್ಪ ಆಸಕ್ತಿ ತೋರಿಸಿದರೆ ಕನ್ನಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವ ಎಲ್ಲಾ ಸಾಧ್ಯತೆಗಳಿವೆ. ಅವರು ಮನಸ್ಸು ಮಾಡಬೇಕಷ್ಟೆ...