Tuesday, May 7, 2013

ರಹಸ್ಯಮಯ ರೀಮೇಕುಗಳು...

ರೀಮೇಕ್ ಎಂಬುವುದು ಚಿತ್ರರಂಗದಲ್ಲಿ ಸರ್ವೇ ಸಾಮಾನ್ಯ. ಬಹುತೇಕ ಎಲ್ಲಾ  ದೇಶದ, ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ರೀಮೇಕ್ ಎನ್ನುವುದು ಇದ್ದಇದೆ. ಯಾವುದೋ ಕಥೆ ಸಿನೆಮಾಕ್ಕೆ ತಕ್ಕುದಾದರೆ ಅದನ್ನು ಸಿನೆಮಾರೂಪಕ್ಕೆ ತರಲು ಒಬ್ಬ ಚಿತ್ರಕರ್ಮಿ ಮುಂದಾಗುತ್ತಾನೆ. ಇಲ್ಲಿ ಕಥೆ ಯಾವುದೇ ಭಾಷೆಯದಾದರೂ ಅಭ್ಯಂತರವಿರುವುದಿಲ್ಲ. ಹಾಗೆಯೇ ರೀಮೇಕ್.  ಈಗಾಗಲೇ ಬೇರೆ ಭಾಷೆಯಲ್ಲಿ ಬಂದ ಚಿತ್ರವೂ ನಮ್ಮ ನಾಡಿಗೆ ಭಾಷೆಗೆ ಅಗತ್ಯ ಎನಿಸಿದಾಗ ಅದನ್ನು ಪುನರ್ನಿರ್ಮಾಣ ಮಾಡುವುದು ತಪ್ಪಲ್ಲ. ಆದರೆ ಕೇವಲ ಯಶಸ್ಸನ್ನಷ್ಟೇ ಮಾನದಂಡವನ್ನಾಗಿಟ್ಟುಕೊಂಡು ಸ್ವಂತ ಕಥೆ ಮಾಡುವ ರಿಸ್ಕು ತೆಗೆದುಕೊಳ್ಳದೆ ಸುಖಾ ಸುಮ್ಮನೆ ರೀಮೇಕ್ ಮಾಡುವುದು ಸೃಜನಶೀಲತೆಯ ದಾರಿದ್ರ್ಯ ಎನ್ನಬಹುದು.ಟೈಟಾನಿಕ್ ಚಿತ್ರ ಆರನೆಯ ಬಾರಿ ನಿರ್ಮಿತವಾದ ಚಿತ್ರ. ಹಾಗೆಯೇ ಬಹಳಷ್ಟು ಶ್ರೇಷ್ಠ ಚಿತ್ರಗಳು ಇನ್ನೊಂದು ಭಾಷೆಯಿಂದ ಬಂದವುಗಳೇ ಆಗಿವೆ. ಇನ್ನೂ ಒಂದಿದೆ. ಅದು ಸ್ಫೂರ್ತಿ.. ಒಂದು ಸಿನೆಮಾ ನೋಡುವಾಗ ಅದರಲ್ಲಿನ ಕೆಲವು ದೃಶ್ಯ, ಸನ್ನಿವೇಶಗಳಿಂದಾಗಿ ಬೇರೆಯದೇ ಆದ ಕಥೆಯೊಂದು ಹೊಳೆದುಬಿಡಬಹುದು.ಆಗ ಅದು ಸ್ಫೂತಿಯಾಗುತ್ತದೆ.ಕನ್ನಡದ ಓಂ ಚಿತ್ರ, ಹಿಂದಿಯ ಸತ್ಯ ಚಿತ್ರಕ್ಕೆ ಸ್ಫೂರ್ತಿ ಎಂದು ಸ್ವತಹ ರಾಮ್ ಗೋಪಾಲ್ ವರ್ಮರವರೆ ಹೇಳಿಕೊಂಡಿದ್ದಾರೆ. ಮೈನೆ ಪ್ಯಾರ್ ಕಿಯಾ ಚಿತ್ರಕ್ಕೆ ಪ್ರೇಮಲೋಕ ಸ್ಫೂರ್ತಿ..ಹೀಗೆ.
ಮೊನ್ನೆ ಶರಣ್ ಅಭಿನಯದ ಸುಂದರಿ ಗಂಡ ಸದಾನಂದ ಎನ್ನುವ ಸಿನೆಮಾ ವಾಹಿನಿಯೊಂದರಲ್ಲಿ ನೋಡುತ್ತಿದ್ದೆ. ನೋಡುತ್ತಾ ನೋಡುತ್ತಾ ನನಗೆ ಗೊತ್ತಾದ ವಿಷಯವೆಂದರೆ ಅದು ಹಾಲಿವುಡಿನ ಕಾಲಿನ್ ಫೆರೆಲ್ ಅಭಿನಯದ ಫೋನ್ ಬೂತ್ ಚಿತ್ರದ ಕನ್ನಡದ ಅವತರಣಿಕೆ ಎಂಬುದು. ನೋಡಿ ಒಂದು ಗಂಭೀರ, ಥ್ರಿಲ್ಲರ್ ಚಿತ್ರವನ್ನು ಹಾಸ್ಯ ಲೇಪನದ ಜೊತೆಗೆ ನಿರೂಪಿಸುವ ವಿಫಲ ಯತ್ನ ಎನ್ನಬಹುದು. ಬಹುಶ ಈ ಸಿನೆಮಾ ಫೋನ್ ಬೂತ್ ನಕಲು ಎಂಬುದು ಸುಮಾರು ಜನರಿಗೆ ಗೊತ್ತಿಲ್ಲ ಎನ್ನಬಹುದು. ಯಾಕೆಂದರೆ ಸಿನೆಮಾ ತಯಾರಕರೂ ಅದರ ಬಗ್ಗೆ ಮಾತಾಡಿಲ್ಲ, ಸಿನೆಮಾ ಜನರನ್ನೂ ತಲುಪಿಲ್ಲ. 
ಆಶಿಕಿ ಚಿತ್ರದ ಹಾಡುಗಳು ಈವತ್ತಿಗೂ ಮೈ ರೋಮಾಂಚನಗೊಳಿಸುತ್ತವೆ.ಹನ್ನೆರೆಡು ಹಾಡುಗಳೂ ಸೂಪರ್ ! ಅನು ಅಗರವಾಲ್, ರಾಹುಲ್ ರಾಯ್ ಅಭಿನಯವನ್ನು ಮರೆಯುವುದಾದರೂ ಹೇಗೆ..? ಕನ್ನಡದಲ್ಲಿ ಆಶಿಕಿ ರೋಜಾ ಎಂಬ ಹೆಸರಿನಲ್ಲಿ ಪುನರ್ನಿರ್ಮಾಣವಾಗಿದೆ ಮತ್ತು ನೀರಸವಾಗಿದೆ.
ಕೆಲವೇ ದಿನಗಳ ಹಿಂದೆ ಬೆಂಕಿ ಬಿರುಗಾಳಿ ಎಂಬೊಂದು ಸಿನಿಮಾ ಬಂದಿತ್ತು. ನನಗೋ ಆ ಸಿನೆಮಾದ ಬಗ್ಗೆ ಕೆಟ್ಟ ಕುತೂಹಲ. ಒಬ್ಬ ಅದೇಗೆ ಆ ತರಹದ ಸಿನೆಮಾ ಮಾಡಲು ಸಾಧ್ಯ..? ಮಾಡಿದ್ದರೂ ಕಥೆ ಹೇಗೆ ಹೆಣೆದಿರಬಹುದು ಎಂದು ತಲೆಕಡಿಸಿಕೊಂಡು ನೋಡಿಯೇ ಬಿಡೋಣ ಎಂದು ಚಿತ್ರಮಂದಿರಕ್ಕೆ ನುಗ್ಗಿಯೇ ಬಿಟ್ಟಿದ್ದೆ. ಅನಾಮತ್ತು ಎರಡು ಘಂಟೆಗಳ ಭರ್ಜರಿ ಮನರಂಜನೆ ಆ ಚಿತ್ರ. ತಲೆಬುಡವಿಲ್ಲದ , ಅರ್ಥಹೀನ ಸಿನೆಮಾ ಅದು. ಕನ್ನಡ ಚಿತ್ರರಂಗದ ಅಧೋಗತಿಗೆ ಅಂತಹ ನಾಲ್ಕಾರು ಚಿತ್ರಗಳು ಸಾಕು ಎಂದು ಹೇಳಬಹುದು. ಇರಲಿ. ಆದರೂ ಆ ಸಿನೆಮಾದಲ್ಲಿನ ಕಥೆ ಏನಿರಬಹುದು..? ಅದು ಯಾವುದಾದರೂ ಸಿನೆಮಾದ ಸ್ಫೂರ್ತಿಯೇ..?
ನಿಜಾಂಶ ಗೊತ್ತಾದರೆ ನೀವೇ ಬೆಚ್ಚಿ ಬೀಳುತ್ತೀರೀ..ಅನುರಾಗ್ ಬಸು ನಿರ್ದೇಶನದ ಅದ್ಭುತ ಚಿತ್ರಕಥೆಯ ಗ್ಯಾಂಗ್ ಸ್ಟರ್ ಸಿನೆಮಾ ನಿಮಗೆ ಗೊತ್ತಲ್ಲಾ..ಅದರಲ್ಲಿನ ನಿರೂಪಣೆ ಭಾವವನ್ನು ಮರೆಯಲಾದರೂ ಹೇಗೆ ಸಾಧ್ಯ..ಅದನ್ನೇ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಕನ್ನಡೀಕರಿಸಿದ್ದಾರೆ ಪುಣ್ಯಾತ್ಮರು. ಅಬ್ಬಾ ದೇವರೇ..? ಎನಿಸದಿರಲಿಲ್ಲ.
ಹೇರಾ ಪೆರಿ ಚಿತ್ರವೂ ಕನ್ನಡದಲ್ಲಿದೆ. ಆಪ್ತಮಿತ್ರಕ್ಕೂ ಮುನ್ನ ಮಣಿ ಚಿತ್ರತಾಲ್ ಚಿತ್ರವೂ ಸಾಗರಿ ಹೆಸರಲ್ಲಿ ಕನ್ನಡಕ್ಕೆ ಬಂದಿತ್ತು.ಹಾಗೆಯೇ ವರ್ಮಾ ಕಂಪನಿಯಿಂದ ಬಂದಂತಹ ಅತ್ಯುತ್ತಮ ಚಿತ್ರ ಏಕ್ ಹಸೀನಾ ತಿ ಕೂಡ ಕನ್ನಡದಲ್ಲಿ ಪ್ರೇಮ ಅಭಿನಯದಲ್ಲಿ ಬಂದಿದೆ.
ಕೆಲವು ಸಿನೆಮಾಗಳು ಮೂಲ ಭಾಷೆಯಲ್ಲಿ ಮಾಸ್ಟರ್ ಪೀಸ್ ಎನಿಸಿಕೊಳ್ಳುತ್ತವೆ.ಅವುಗಳನ್ನು ನಮ್ಮ ಭಾಷೆಗೆ ತರುವುದು ಸುಲಭದ ಕೆಲಸವಲ್ಲ. ಅಂತಹ ಸಿನೆಮಾಗಳಲ್ಲಿನ ಪಾತ್ರಧಾರಿಗಳ ಆಯ್ಕೆಯೇ ಸವಾಲಿನ ಕೆಲಸ. ಆದರೆ ಕನ್ನಡದ ಕೆಲವರು ಯಾವ ಯಗ್ಗು ಸಿಗ್ಗಿಲ್ಲದೆ ಅಂತಹ ಮಾಸ್ಟರ್ ಪೀಸ್ ಗಳನ್ನೇ ಕನ್ನಡಕ್ಕೆ ತಂದಿರುವುದು ಆಶ್ಚರ್ಯ ಎನಿಸುತ್ತದೆ.
ಇವು ನಾನು ಬಿಡುಗಡೆಯಾಗುವ ಬಹುತೇಕ ಚಿತ್ರಗಳನ್ನು ನೋಡುವುದರಿಂದ ಗೊತ್ತಾಗುತ್ತದೆ. ಆದರೆ ಗೊತ್ತಿಲ್ಲದೆಯೇ ಇನ್ನೂ ಯಾವ್ಯಾವ ಮಹಾನ್ ಚಿತ್ರಗಳು ಕನ್ನಡೀಕರಣಗೊಂಡಿವೆಯೋ..
ನಿಮ್ಮ ಅನುಭವಕ್ಕೆ ಬಂದಿರುವ ಅಂತಹ ಸಿನಿಮಾ ಯಾವುವು..? 

Tuesday, April 30, 2013

ವಿಕ್ಷಿಪ್ತತೆ, ಸೂರಿ ಮತ್ತು ಕಡ್ಡಿಪುಡಿ ಸಿನಿಮಾ..

 ವಿಕ್ಷಿಪ್ತ ಮತ್ತು ವಿಕೃತದ ನಡುವಿನ ಅಂತರ ಬಹಳ ದೊಡ್ಡದು ಎಂದು ಕೆಲವೊಮ್ಮೆ ಅನಿಸಿದರೆ ಕೆಲವೊಮ್ಮೆ ಎರಡರ ನಡುವಿನ ಅಂತರ ತುಂಬಾ ಚಿಕ್ಕದು ಅಥವಾ ಸಣ್ಣ ಎಳೆ ಎನಿಸುತ್ತದೆ.ಅದರಲ್ಲೂ ಸಿನಿಮಾ ವಿಷಯಕ್ಕೆ ಬಂದಾಗ ಕೆಲವು ನಿರ್ದೇಶಕರ ವಿಕ್ಷಿಪ್ತ ಮನಸ್ಥಿತಿ ಅಥವಾ ಅವರ ಕಥೆಯಲ್ಲಿನ ವಿಕ್ಷಿಪ್ತ ದೃಷ್ಟಿ ಅಚ್ಚರಿ ಮೂಡಿಸದೇ ಇರದು. ನಾವು ನೋಡುವ ದೃಷ್ಟಿಗೂ ಅವರು ತೋರಿಸುವ ಜಗತ್ತಿನ ಸೃಷ್ಟಿಗೂ ಅಜಗಜಾಂತರ ವ್ಯತ್ಯಾಸವಿರುವುದು ಕಂಡುಬರುತ್ತದೆ. ಆದರೆ ಎಲ್ಲರೂ ಜಗತ್ತನ್ನು ವಾರೆಗಣ್ಣಿಂದ ನೋಡಲು ಸಾಧ್ಯವಿಲ್ಲ. ಅದರಲ್ಲೂ ಒಂದು ಮಾಧ್ಯಮದಲ್ಲಿರುವ ಮರುಸೃಷ್ಟಿಗೆ ಅವಕಾಶವಿರುವ ಸೃಜನಶೀಲ ವ್ಯಕ್ತಿಗಳ ಬರಹ, ಚಿತ್ರಣ ಅಥವಾ ಒಟ್ಟಾರೆಯಾಗಿ ಅವರ ಸೃಷ್ಟಿ ನಮಗೊಂದು ಭಿನ್ನವಾದ‘ಲೋಕವನ್ನೇ ದರ್ಶಿಸುವುದು ನಿಜ.
ಇನ್ನು ಸಿನಿಮಾದ ವಿಷಯಕ್ಕೆ ಬಂದಾಗ ಒಬ್ಬ ನಿರ್ದೇಶಕ ತಾನು ನೋಡಿದ ಅಥವಾ ತನಗಿಷ್ಟವಾದದ್ದನ್ನೇ ತೆರೆಯ ಮೇಲೆ ತಂದರೆ ಅದು ಅತ್ಯುತ್ತಮವಾಗಿರುತ್ತದೆ ಅಷ್ಟೇ ಅಲ್ಲ.ಆ ಕಥಗೊಂದು ನ್ಯಾಯ ಸಿಗುತ್ತದೆ. ಬಲವಂತವಾಗಿ, ಸೂಕ್ತ ಅದ್ಯಯನವಿಲ್ಲದೇ ಒಂದು ಭಿನ್ನ ಕಥೆಯನ್ನು ನಿರೂಪಿಸಹೊರಟಾಗ ಸಾಕಷ್ಟು ಅಪಸವ್ಯವಾಗುವುದು ಸತ್ಯ. 
ನಿರ್ದೇಶಕ ಬಾಲಾರ ಯಾವುದೇ ಸಿನಿಮಾ ತೆಗೆದುಕೊಳ್ಳಿ. ಅದು ವಿಕ್ಷಿಪ್ತ ಎನ್ನಬಹುದು. ಅವರು ಜಗತ್ತನ್ನು ನೋಡಿರುವ ಅಥವಾ ನೋಡುವ ರೀತಿಯೇ ಭಿನ್ನವಾದದ್ದು. ಅವರ ಚಿತ್ರಗಳಲ್ಲಿ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಇರುತ್ತವೆ. ಹಾಸ್ಯ, ಹಾಡು, ಹೊಡೆದಾಟ, ಕೊಲೆ ಹೀಗೆ ಆದರೆ ಚಿತ್ರ ಮಾಮೂಲಿ ಮಸಾಲೆ ಸಿನಿಮಾ ಎನಿಸುವುದಿಲ್ಲ. 
ಕನ್ನಡದಲ್ಲಿ ಸೂರಿ ನಿರ್ದೇಶನದ ,ದುನಿಯಾ’ ಚಿತ್ರ ಬಂದಾಗ ನನ್ನಂತಹ ಯುವ ನಿರ್ದೇಶಕರಿಗೆ ಪುಳಕವಾದದ್ದಂತೂ ನಿಜ.ದುನಿಯಾ ಚಿತ್ರದಲ್ಲಿನ ದೃಶ್ಯರಚನೆ, ದೃಶ್ಯ ಜೋಡನೆ, ಪಾತ್ರ ಪೋಷಣೆ ಮತ್ತು ನಿರೂಪಣೆ ಮೆಚ್ಚುವಂತಹದ್ದು. ನಮ್ಮ ನಡುವಿನ ಜಗತ್ತನ್ನು ವಿಕ್ಷಿಪ್ತವಾಗಿ ತೋರಿಸಿದ್ದರು ಸೂರಿ. ಆದರೆ ಅದಾದ ಮೇಲೆ ಸೂರಿ ಬಲವಂತವಾಗಿ ತಮ್ಮ ಚಿತ್ರಗಳಲ್ಲಿ ಜಗತ್ತನ್ನು ವಿಭಿನ್ನವಾಗಿ ತೋರಿಸಲು ಪ್ರಯತ್ನಿಸಿದರೇನೋ..? ಹಾಗಾಗಿಯೇ ಅವರ ಮುಂದಿನ ಚಿತ್ರಗಳಲ್ಲಿ ಭಿನ್ನತೆಗಿಂತ
ಕ್ರೌರ್ಯ ಭೀಭತ್ಸಗಳು ರೌದ್ರಾವತಾರ ತಾಳಿದ್ದವು. ಎಲ್ಲವನ್ನು ಬೇರೊಂದು ದೃಷ್ಟಿಕೋನದಿಂದ ನೋಡಲೇಬೇಕು, ಪ್ರೇಕ್ಷಕ ಸೂರಿ ಸಿನಿಮಾಗಳಿಂದ ಬೇರೇನೋ ನಿರೀಕ್ಷಿಸುತ್ತಾನೆ ಎಂದು ಅವರಂದುಕೊಂಡರೇನೋ ಎಂಬಂತೆ ಅವರ ತದನಂತರ ಚಿತ್ರಗಳ ದೃಶ್ಯಗಳು, ಪಾತ್ರಗಳು ಅವುಗಳ ಹಿನ್ನೆಲೆ ಮುಂತಾದವುಗಳು ತೀರಾ ಸಾಮಾನ್ಯವಾಗಿರಲಿಲ್ಲ. ಅಷ್ಟೆಲ್ಲಾ ಮಾತನಾಡುವ ದುನಿಯಾದಲ್ಲಿನ ರಂಗಾಯಣ ರಘು ಪಾತ್ರವನ್ನು ಇತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಏಕಾಏಕಿ ಮೂಕನನ್ನಾಗಿಸಿದರು.ಹಾಗೆ ಮುಂದುವರೆದರೆ ಜಾಕಿ ಚಿತ್ರದಲ್ಲಿ ಹೆಣ ಇಟ್ಟುಕೊಂಡು ಅಪಹಾಸ್ಯ ಮಾಡುವ, ಅಣ್ಣಾಬಾಂಡ್ ನಲ್ಲೂ ಅದನ್ನೇ ಮುಂದುವರೆಸಿದರು. ಬಹುಶ ಅದೇ ಅವರ ಹಿನ್ನೆಡೆಗೆ ಕಾರಣವಿರಬಹುದು.
ಚಿತ್ರದಲ್ಲಿನ ಕಥೆಯಲ್ಲಿ ವಿಕ್ಷಿಪ್ತತೆಯನ್ನು ಬಲವಂತವಾಗಿ ಕಟ್ಟಿಕೊಡುವ ಪ್ರಯತ್ನದಿಂದಾಗಿಯೇ ಸೂರಿ ಚಿತ್ರಗಳು ಇಷ್ಟೇನಾ ಎನ್ನುವ ಹಣೆಪಟ್ಟಿ ಪಡೆದುಕೊಂಡವು ಎನ್ನಬಹುದು.
ಈಗ ಕಡ್ಡಿಪುಡಿ ಚಿತ್ರ ತೆರೆಗೆ ಬರುವ ಹಂತದಲ್ಲಿದೆ. ಅದರ ಪ್ರೋಮೋ ಕೂಡ ಅಲ್ಲಲ್ಲಿ ಹರಿದಾಡುತ್ತಿದೆ. ಬರೀ ಪ್ರೋಮೋ ನೋಡಿ ಯಾವುದನ್ನೂ ತೀರ್ಮಾನಿಸಲಾಗುವುದಿಲ್ಲವಾದರೂ ಮತ್ತೊಂದು ಸೂರಿ ಶೈಲಿಯ ಚಿತ್ರ ಎನ್ನುವುದರಲ್ಲಿ ಸಂಶಯ ಬರುವುದಿಲ್ಲ.ಚಿತ್ರದ ಸ್ತಿಲ್ಸ್ ಕೂಡ ಅದೇ ಕಥೆಯನ್ನು ಹೇಳುತ್ತವೆ. ಪ್ರೋಮೋದಲ್ಲಿನ ದೃಶ್ಯ ನನಗೆ ಸಿಟಿ ಆಫ಼್ ಗಾಡ್ ಚಿತ್ರದಲ್ಲಿನ ದೃಶ್ಯವೊಂದನ್ನು ನೆನಪಿಸಿತು. ಜಂಗ್ಲಿಯ ಮೊದಲ ದೃಶ್ಯ ಕೂಡ ಪಲ್ಪ್ ಫಿಕ್ಷನ್ ಚಿತ್ರದಲ್ಲಿನ ದೃಶ್ಯಕ್ಕೆ ಹೋಲಿಕೆಯಾಗುತ್ತಿತ್ತು.ಜಂಗ್ಲಿ ಚಿತ್ರದಲ್ಲಿ ಕಾರಿನ ಹಿಂಬದಿಯಲ್ಲಿ ಕೊಲೆ ಮಾಡಬೇಕಾಗಿರುವ ವ್ಯಕ್ತಿಯನ್ನಿಟ್ಟುಕೊಂಡು ಅದೊಂದು ವಿಷಯ ಬಿಟ್ಟು ಬೇರೆಲ್ಲಾ ಉಡಾಫೆಯ ತಮಾಷೆಯ ಮಾತಾಡಿಕೊಂಡು ಹೋಗುತ್ತಾರೆ, ಅದೇ ರೀತಿಯಲ್ಲಿ ಪಲ್ಪ್ ಪಿಕ್ಷನ್ ಚಿತ್ರದಲ್ಲಿ ಕೊಲೆ ಮಾಡಲು ಸಿದ್ಧರಾಗಿ ಹೋಗುವ ಜಾನ್ ಟ್ರವೋಲ್ಟ ಮತ್ತು ಸಾಮುವೆಲ್ ಜಾಕ್ಸನ್ ಆ ವಿಷಯವೊಂದನ್ನು ಬಿಟ್ಟು ಬೇರೆಲ್ಲಾ ಮಾತಾಡಿಕೊಂಡು ಹೋಗುತ್ತಾರೆ. ಸ್ಪೂರ್ತಿ ಏನೇ ಇರಲಿ. ಕನ್ನಡದ ಮಟ್ಟಿಗೆ ಬಹು ನಿರೀಕ್ಷೆಯ ನಿರ್ದೇಶಕ ಸೂರಿ. ಆದರೆ ದುನಿಯಾ ನಂತರದ ಅವರ ಯಾವ ಚಿತ್ರವೂ ಪ್ರೇಕ್ಷಕರನ್ನು ಸಂಪೂರ್ಣ ತಣಿಸಿಲ್ಲ. ಆದರೂ ಚಿತ್ರದಿಂದ ಚಿತ್ರಕ್ಕೆ ನಿರೀಕ್ಷೆ ಇಮ್ಮಡಿಯಾಗುತ್ತಲೇ ಇದೆ. ಇನ್ನು ಚಿರಯುವಕ ಶಿವರಾಜ್ ಕುಮಾರ್ ರವರ ಇತ್ತೀಚಿನ ಚಿತ್ರಗಳು ಯಾವುವೂ ಯಶಸ್ಸಿನ ಹಾದಿ ಹಿಡಿದಿಲ್ಲ. ಈ ಚಿತ್ರ ಶಿವಣ್ಣರಿಗೆ ಯಶಸನ್ನ ತಂದುಕೊಟ್ಟು, ಸೂರಿ ಮೇಲಿನ ಭರವಸೆಯನ್ನುಳಿಸಿ  ಪ್ರೇಕ್ಷಕರ ನಿರೀಕ್ಷೆಯನ್ನು ಜೀವಂತವಾಗಿಡಬೇಕಾಗಿದೆ.
ಹಾಗಾಗಿ ಕಡ್ಡಿಪುಡಿಯ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ

ವಿಶೇಷ ಚಿತ್ರ...26

ಸ್ಪೆಷಲ್ 26 ಚಿತ್ರ ನಿಜಕ್ಕೂ ವಿಶೇಷವಾದ ಚಿತ್ರ ಎನ್ನಬಹುದು. ಕಥೆ, ನಿರೂಪಣೆಯ ದೃಷ್ಟಿಯಿಂದಾಗಿ, ಕಲಾವಿದರ ಅಭಿನಯದ ದೃಷ್ಟಿಯಿಂದಾಗಿ ಈ ಚಿತ್ರ ನೋಡಲೇಬೇಕಾದ ಚಿತ್ರ ಎನಿಸಿಕೊಳ್ಳುತ್ತದೆ.1987ರ ಮಾರ್ಚ್ ತಿಂಗಳಲ್ಲಿ  ಮುಂಬೈನಲ್ಲಿ ನಡೆದ ಸುಳ್ಳು ತೆರಿಗೆ ದಾಳಿಯನ್ನಾಧರಿಸಿದ ಚಿತ್ರ ಇದು. ನಿಜ ಕಥೆಯ ಚಿತ್ರವಾದರೂ ನಿರ್ದೇಶಕ ಇದನ್ನು ಒಂದು ಸಾಕ್ಷ್ಯಚಿತ್ರವನ್ನು ಮಾಡಲು ಹೋಗಿಲ್ಲ. ಒಂದು ಪರಿಪೂರ್ಣ ಮನರಂಜನೆಯ ಚಿತ್ರಕ್ಕೇ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ತುಂಬಿಸಿರುವುದರಿಂದ ಚಿತ್ರ ಕುತೂಹಲ ಕೆರಳಿಸುತ್ತಾ ಸಾಗುತ್ತದೆ.
ಚಿತ್ರದ ಕಥೆ ಇಂತಿದೆ. ಆವತ್ತು ಜನವರಿ ಇಪ್ಪತ್ತಾರು. ಅಲ್ಲಿನ ಪೋಲೀಸ್ ಸ್ಟೇಷನ್ನಿಗೆ ಕರೆಯೊಂದು ಬರುತ್ತದೆ. ಅದನ್ನು ತೆಗೆದುಕೊಳ್ಳುವ ಪೋಲೀಸ್ ಅಧಿಕಾರಿಗೆ ಅತ್ತಲಿನ ಧ್ವನಿಯೊಂದು ತಾವು ಸಿ.ಬಿ.ಐ.ನವರು, ಈಗ ಒಬ್ಬ ಗಣ್ಯವ್ಯಕ್ತಿಯ ಮನೆಗೆ ದಾಳಿಗೆ ಹೋಗುತ್ತಿದ್ದೇವೆ, ಅದಕ್ಕೆ ಪೋಲೀಸ್ ಸಹಕಾರ ಬೇಕು ಎಂದಾಗ ಪೋಲೀಸ್ ಅಧಿಕಾರಿ ಒಪ್ಪಿಕೊಳ್ಳುತ್ತಾನೆ. ಒಬ್ಬ ಮಂತ್ರಿಯ ಮನೆಗೆ ನುಗ್ಗಿ ದಾಳಿ ನಡೆಸಿ ಅವನಲ್ಲಿದ್ದ ಹಣ, ಚಿನ್ನವನ್ನೆಲ್ಲಾ ದಸ್ತಗಿರಿಮಾಡುವ ಸಿ.ಬಿ.ಐನವರು ವಂಚಕರು ಎಂಬುದು ಆನಂತರ ಗೊತ್ತಾಗುತ್ತದೆ. ಈಗ ಅವರು ದೋಚಿರುವ ಸಂಪತ್ತು ಕಪ್ಪುಹಣವಾದ್ದರಿಂದ ಮಂತ್ರಿ ಅದನ್ನು ಸಾರ್ವಜನಿಕರ ಗಮನಕ್ಕೆ ತರಲು ಮನಸ್ಸುಮಾದುವುದಿಲ್ಲ. ಆದರೆ ಇದರಿಂದಾಗಿ ಪೋಲೀಸ್ ಆಫ಼ೀಸರ್ ಸಸ್ಪೆಂಡ್ ಆಗಬೇಕಾಗಿಬರುತ್ತದೆ. ಆತ ತನಿಖೆ ಮಾಡುತ್ತಾ ಸಾಗಿದಂತೆ ಇದೇ ತರಹದ ನಕಲಿ ದಾಳಿಗಳು ಸುಮಾರು ಕಡೆ ನಡೆದಿರುವುದು ತಿಳಿದುಬರುತ್ತದೆ. ಈ ಕೇಸಿನ ತನಿಖೆಯನ್ನು ನಿಷ್ಠಾವಂತ ದಕ್ಷ ಪೋಲೀಸ್ ಅಧಿಕಾರಿಗೆ ವಹಿಸಲಾಗುತ್ತದೆ.
ಇತ್ತ ವಂಚಕರ ಗುಂಪು ಈ ಸಾರಿ ಅದಕ್ಕಿಂತಲೂ ದೊಡ್ದ ಯೋಜನೆಯನ್ನು ಹಾಕಿಕೊಳ್ಳುತ್ತಾರೆ. ಆದರೆ ಅದು ಆ ಪೋಲೀಸಗೆ ತಿಳಿಯುತ್ತದೆ. ಅವರನ್ನು ನಕಲಿದಾಳಿ ಮಾಡುತ್ತಿರುವಾಗಲೇ ಹಿಡಿಯಬೇಕೆಂದು ಆ ಅಧಿಕಾರಿ ಪ್ಲಾನ್ ಮಾಡುತ್ತಾನೆ. ಇದಾವುದೂ ಗೊತ್ತಿರದ ಅವರು ತಮ್ಮ ಕಾರ್ಯವನ್ನು ಕೈಗೊಳ್ಳಲು ಮುಂದಾಗುತ್ತಾರೆ. ಮುಂದೆ,,?
ಚಿತ್ರ ಶರವೇಗದಲ್ಲಿ ಸಾಗುತ್ತದೆ. ಕೊನೆಯವರೆಗೂ ತನ್ನ ಕುತೂಹಲವನ್ನು ಉಳಿಸಿಕೊಳ್ಳುವ ಚಿತ್ರ ಕೊನೆಯಲ್ಲಿ ನೋಡುಗನಿಗೆ ಶಾಕ್ ಕೊಡುತ್ತದೆ.
ಚಿತ್ರದಲ್ಲಿನ ಸಂಭಾಷಣೆ ಮತ್ತು  ಚಿತ್ರಕಥೆ ಚಿತ್ರವನ್ನು ಹೆಚ್ಚು ಆಸಕ್ತಿಕರವನ್ನಾಗಿ ಮಾಡಿವೆ. ಅದರಲ್ಲೂ ಎಲ್ಲೂ ಸುಳಿವು ಬಿಟ್ಟುಕೊಡದ ಚಿತ್ರಕಥೆಯೇ ೨೬ರ ಹೈಲೈಟ್. ಹಾಗೆ ಹಿನ್ನೆಲೆ ಸಂಗೀತ ಸಿನಿಮಾದ ಗತಿಗೆ ಸಹಕಾರಿಯಾಗಿದೆ.
ವಂಚಕರ ನಾಯಕನಾಗಿ ಅಕ್ಶಯಕುಮಾರ್ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಗುಂಪಿನ ಸದಸ್ಯನಾಗಿ ಅನುಪಮ್ ಖೇರ್ ರದು ಪಾತ್ರೋಚಿತ ಅಭಿನಯ. ಚಿತ್ರದಲ್ಲಿ ನಮಗಿಷ್ಟವಾಗುವುದು ಮನೋಜ್ ಬಾಜಪೇಯಿ. ದಕ್ಷ ಪೋಲೀಸ್ ಅಧಿಕಾರಿಯಾಗಿ ಕಡಕ್ಕಾಗಿ ಪಾತ್ರ ನಿರ್ವಹಿಸಿದ್ದಾರೆ ಮನೋಜ್. ಹಾಗೆ ಮತ್ತೊಂದು ಮಹತ್ವದ ಪಾತ್ರ ನಿರ್ವಹಿಸಿರುವ ಜಿಮ್ಮಿ ಶೇರ್ ಗಿಲ್ ಕೂಡ ತಮ್ಮ ನಟನೆಯಿಂದಾಗಿ ಗಮನಸೆಳೆಯುತ್ತಾರೆ.
ಎ ವೆಡ್ನೆಸ್ ಡೇ ತರಹದ ಪ್ರಸ್ತುತ ಭಯೋತ್ಪಾದಕ ವಿರೋಧಿ ಥ್ರಿಲ್ಲರ್ ಚಿತ್ರ ನೀಡಿದ್ದ ನೀರಜ್ ಪಾಂಡೆಯವರ ನಿರ್ದೇಶನ ನಿಜಕ್ಕೂ ಅಭಿನಂದನಾರ್ಹ. ಒಮ್ಮೆ ನೋಡಿ ಎಂದು ಧೈರ್ಯವಾಗಿ ಶಿಫ಼ಾರಸ್ಸು ಮಾಡಬಹುದಾದ ಚಿತ್ರ ಸ್ಪೆಶಲ್ 26

Friday, April 26, 2013

ವರ್ಷಾಚರಣೆಯಲ್ಲಿ ನನ್ನ ಬ್ಲಾಗು...

ಸಾರ್..ಸಂಭಾವನೆ ಆಮೇಲೆ ಮಾತಾಡೋಣ..ನನ್ನ ಮೊದಲ ಚಿತ್ರವಾದ್ದರಿಂದ ನನಗೆ ಒಂದಷ್ಟು ಸ್ವಾತಂತ್ರ್ಯ ಕೊಡಿ, ನನ್ನ ಮೇಲೇ ನಂಬಿಕೆ ಇಡಿ ಎಂದು ನಮ್ಮ ನಿರ್ಮಾಪಕರಿಗೆ ಹೇಳಿದ್ದೆ. ಇದು ಮೂರ್ನಾಲ್ಕು ವರ್ಷಗಳ ಹಿಂದಿನ ಮಾತು. ಅದಕ್ಕೆ ನಿರ್ಮಾಪಕರೂ ಒಪ್ಪಿದ್ದರು . ಹಾಗೆ ನನ್ನ ಮೊದಲ ಸಿನೆಮಾದ ಯಾನ ಪ್ರಾರಂಭವಾಗಿತ್ತು. ಮೊದಲ ಸಿನಿಮಾ ಹೀಗೆಯೇ ಇರಬೇಕೆಂಬ ಆಸೆ, ಚಿತ್ರಣ ನನ್ನ ಕಣ್ಣಲ್ಲಿತ್ತು. ನನ್ನ ಗೆಳೆಯರು ನನ್ನ ಮೊದಲ ಸಿನಿಮಾವಾದ್ದರಿಂದ ಹೆಚ್ಚು ಹಣ ಅಪೇಕ್ಷೆ ಮಾಡದೇ ಕೆಲಸ ಮಾಡಲು ಸಿದ್ಧರಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏನಾಗುತ್ತಿತ್ತೋ? ಆದರೆ ಆಗಲಿಲ್ಲ, ನಿರ್ಮಾಪಕರ ಸಣ್ಣತನದ ಸಂಪೂರ್ಣ ಅರಿವಾಗುವಷ್ಟರಲ್ಲಿ ಕಾಲ ಮಿಂಚಿಹೋಗಿತ್ತು. ನಮ್ಮ ನಡುವೆ ಒಂದು ಒಪ್ಪಂದವೂ ಆಗಿಹೋಗಿತ್ತು. ಅದರ ಪ್ರಕಾರ ನಾನೇ ನಾನಾಗಿ ಸಿನಿಮಾ ಮಾಡುವುದಿಲ್ಲ ಎಂದು ಹೋಗುವ ಆಗಿರಲಿಲ್ಲ..ಅಕಸ್ಮಾತ್ ಹಾಗೆ  ಹೋಗುವುದಾದರೆ ಅಲ್ಲಿಯವರೆಗೆ ನಿರ್ಮಾಪಕರ ವೆಚ್ಚವನ್ನೆಲ್ಲಾ ಭರಿಸಿ ಹೋಗಬೇಕಾಗಿತ್ತು. ಹಾಗೆಯೇ ನಿರ್ಮಾಪಕರೂ ಸಕಾರಣವಿಲ್ಲದೇ ನನ್ನ ಸಿನಿಮಾ ಮಾಡದೆ ನಿಲ್ಲಿಸುವ ಹಾಗಿರಲಿಲ್ಲ. ಏಕೋ ಏನೋ ಚಿತ್ರದ ಬರವಣಿಗೆಯ ಕೆಲಸ ಮುಗಿದನಂತರ ನಿರ್ಮಾಪಕರಿಗೆ ಚಿತ್ರವನ್ನು ಮುಂದುವರೆಸುವ ಮನಸ್ಸಾಗಲಿಲ್ಲ. ಹಾಗಂತ ಸಿನಿಮಾ ನಿಲ್ಲಿಸುವ ಹಾಗೂ ಇರಲಿಲ್ಲ. ಅಷ್ಟರಲ್ಲಾಗಲೆ ಕೆಲವು ಲಕ್ಷಗಳೂ ಕೈಬಿಟ್ಟಿದ್ದವು. ಈ ಎಲ್ಲಾ ಗೊಂದಲಗಳಿಂದ ನಾನು ಒಂದೆಡೇ ಅನಾಮತ್ತು ಐದಾರು ತಿಂಗಳು ಸುಮ್ಮನೇ ಇರಬೇಕಾದ ಕೆಟ್ಟ ಪರಿಸ್ಥಿತಿ ಬಂದುಬಿಟ್ಟಿತ್ತು. ನನಗೂ ನಿರ್ಮಾಪಕರಿಗೂ ಮುಖ ಕಂಡರೇ ಆಗದಂತಹ ಪರಿಸ್ಥಿತಿ. ಆ ತಿಂಗಳುಗಳಲ್ಲಿ ಏನು ಮಾಡುವುದು? ಹತಾಷೆ ಬೇಸರ ನನ್ನನ್ನಾವರಿಸಿದ್ದವು. ಅದನ್ನು ಕಳೆಯಲು ಪುಸ್ತಕ ಸಿನಿಮಾಗಳ ಮೊರೆಹೋದೆ. ದಿನಕ್ಕೆ ಕನಿಷ್ಟ ನಾಲ್ಕು ಸಿನಿಮಾ ನೋಡತೊಡತೊಡಗಿದೆ. ಜಗತ್ತಿನ ಮೂಲೆಮೂಲೆಯ ಚಿತ್ರಗಳನ್ನು ಹುಡುಕಿಹುಡುಕಿ ನೋಡಿದೆ. ಆನಂತರ ಆ ಸಿನಿಮಾ ನಿಂತು ಹೋಗಿ ಆ ನಿರ್ಮಾಪಕರಿಗೂ ನನಗೂ ಸಂಧಾನವೂ ಆಗಿ ನಾನು ಮತ್ತೆ ಬಂದು ನನ್ನ ಕೆಲಸಗಳಲ್ಲಿ ತೊಡಗಿಸಿಕೊಂಡರೂ ಸಿನಿಮಾ ನೋಡುವುದನ್ನು ಬಿಟ್ಟಿರಲಿಲ್ಲ. ಮತ್ತೆ ಬದುಕು ಹೇಗೇಗೊ ಆಗುತ್ತಿತ್ತು. ಕೈ ಹಾಕಿದ ಕೆಲಸ ಕೈಹಿಡಿಯುತ್ತಿರಲಿಲ್ಲ. ಸೋಲು ಕಂಗೆಡಿಸುತ್ತಿತ್ತು. ಆದರೂ ಸಿನಿಮಾವನ್ನು ಎಡೇಬಿಡದೇ ನೋಡತೊಡಗಿದ್ದೆ. 
ಅದೊಂದು ದಿನ ನಾನು ಫಿಲಿಪ್ ಮಾತಾಡುತ್ತಾ ಕುಳಿತ್ತಿದ್ದೆವು. ಫಿಲಿಪ್ ನಿಮಗೆ ಇಷ್ಟು ಚಿತ್ರಗಳ ನಾಲೆಜ್ ಇದೆ. ಹಾಗೆ ಬರವಣಿಗೆಯೂ ಇದೆ. ಪುಸ್ತಕ ಓದುತ್ತೀರಿ. ನೀವ್ಯಾಕೆ ಇದಕ್ಕೆ ಸಂಬಂಧಿಸಿದ ಬ್ಲಾಗ್ ಬರೆಯಬಾರದು ಎಂದರು. ನನಗೆ ಬ್ಲಾಗ್ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಸರಿ ಪ್ರಯತ್ನಿಸುವ ಎಂದು ಮನೆಗೆ ಬಂದವನಿಗೆ ಫಿಲಿಪ್ ಒಂದಷ್ಟು ಬ್ಲಾಗುಗಳ ಲಿಂಕ್ ಕಳಿಸಿದ್ದರು. ಅದರ ಜೊತೆಗೆ ಕನ್ನಡದ ಸುಮಾರು ಬ್ಲಾಗುಗಳನ್ನು ಓದಿದೆ. ಸಿನಿಮಾಕ್ಕೆ ಸಂಬಂಧಿಸಿದ ಬ್ಲಾಗುಗಳನ್ನು ತಿರುವಿಹಾಕಿದೆ. ಸರಿ ಒಂದು ಬ್ಲಾಗು ಮಾಡೇ ಬಿಡುವ ಎಂದು ನನ್ನ ಮೊದಲ ಬ್ಲಾಗು ಬರೆದೆ. ಅದು ಯಶಸ್ವಿಯಾಗಲಿಲ್ಲ. ಅದನ್ನು ಪೋಸ್ಟ್ ಮಾಡುವ ಅದನ್ನು ಫೇಸ್ ಬುಕ್ ನಲ್ಲಿ ಲಿಂಕ್ ಮಾಡುವ ಮುಂತಾದವುಗಳು ನನಗೆ ಗೊತ್ತಿರಲಿಲ್ಲ. ಹಾಗೆ ನನಗೆ ಅಂತರ್ಜಾಲ ಸಂಬಂಧಿ ಗೆಳೆಯರೂ ಹೆಚ್ಚು ಜನರಿರಲಿಲ್ಲ.
ಆನಂತರ ರವೀಂದ್ರ ಟಾಕೀಸ್ ಮಾಡಿದೆ. ಈವತ್ತಿಗೆ ಒಂದು ವರ್ಷವಾಯಿತು. ಬರೆಬರೆಯುತ್ತಾ ಎಷ್ಟೋ ವಿಷಯಗಳು ನನಗೆ ಅರಿವಾದವು. ಈಗಂತೂ ದಿನಾ ಸಮಯ ಸಿಕ್ಕಾಗಲೆಲ್ಲಾ ಸುಮಾರಷ್ಟು ಬ್ಲಾಗುಗಳನ್ನು ಓದುತ್ತೇನೆ. ಕೆಲವನ್ನು ರೆಗ್ಯುಲರಾಗಿ ಓದುತ್ತೇನೆ. ಹೊಸ ಬ್ಲಾಗು ಪ್ರಾರಂಭವಾದರೆ ಇನ್ನು ಖುಷಿಯಿಂದ ಓದುತ್ತೇನೆ. ಬ್ಲಾಗುಗಳ ಮೂಲಕ ಹೊಸ ಲೋಕವೊಂದು ತೆರೆದುಕೊಂಡಂತೆನಿಸಿದೆ. ಹಾಗೆ ನನ್ನ ಹಲವಾರು ಸೋಲು ಹತಾಷೆಗೆ ಅದ್ಭುತವಾದ ಔಷಧವಾಗಿದೆಯಲ್ಲದೇ, ನನಗೆ ಹಲವಾರು ಸಮಾನಮನಸ್ಕ ಗೆಳೆಯರನ್ನು ಸಂಪಾದಿಸಿಕೊಟ್ಟಿದೆ.
ಹಾಗಾಗಿ ನಾನು ಬ್ಲಾಗಿಗೆ ಋಣಿಯಾಗಿದ್ದೇನೆ.

Monday, April 22, 2013

ಬೆಳದಿಂಗಳ ಬಾಲೆಯ ಕನವರಿಕೆ...

ಕೆಲವೊಮ್ಮೆ ನಾವೇ ಮೆಚ್ಚಿದ ನಮ್ಮದೇ ಕಥೆಗಳು, ಆಲೋಚನೆಗಳು ಹಲವಾರು ದಿನ ಕಳೆದ ನಂತರ ನಮಗೆ ಔಟ್ ಡೇಟೆಡ್ ಎನಿಸುತ್ತದೆ. ಹಾಗೆ ಕೆಲವು ಸಿನೆಮಾಗಳ ವಸ್ತುಗಳೂ ಅಷ್ಟೇ. ತಂತ್ರಜ್ಞಾನ ಬೆಳೆದಂತೆ ಆವತ್ತಿನ ಸಿನೆಮಾವನ್ನು ಈವತ್ತು ನೋಡಿದಾಗ ಅರ್ಥಹೀನ ಎನಿಸುತ್ತದೆ. ಆದರೆ ಸಿನೆಮಾವನ್ನು ಆವತ್ತಿನ ಕಾಲಮಾನದಲ್ಲೇ ನೋಡಿದಾಗ ಮಾತ್ರ ನಮಗೆ ತಟ್ಟುತ್ತದೆ. ಅದರಲ್ಲೂ ನನ್ನ ಪೀಳಿಗೆಯವರು ನಾವು ಅದೃಷ್ಟವಂತರು ಎನ್ನಬಹುದು. ನಮಗೆ ಪತ್ರ ಬರೆಯುವ, ಪೋಸ್ಟ್ ಮಾಡುವ, ಅ೦ಚೆಗಾಗಿ ಕಾಯುವ ..ಎಲ್ಲವೂ ಅನುಭವಕ್ಕೆ ನಿಲುಕಿವೆ. ಹಾಗೆಯೇ ಇಮೇಲ್ ಕೂಡ ಗೊತ್ತು. ಎಸ್ಎಂ ಎಸ್ ಕೂಡ ನಮ್ಮ ಕೈಯಲ್ಲಿದೆ. ಆದರೆ ತೀರಾ ಇತ್ತೀಚಿನ ಪೀಳಿಗೆಗೆ ಇಮೇಲ್ ಗೊತ್ತೇ ಹೊರತು ಅಂಚೆ ಗೊತ್ತಿಲ್ಲ. ಪತ್ರ ಬರೆದಿಲ್ಲ. ಅಥವಾ ಬರೆಯುವ ಅವಶ್ಯಕತೆ ಇಲ್ಲ. 
ನನಗನಿಸಿದ ಪ್ರಕಾರ ಯಾರನ್ನಾದರೂ ಮಿಸ್ ಮಾಡಿಕೊಳ್ಳಲು ಈವತ್ತಿನ ಮಟ್ಟಿಗೆ ಸಾಧ್ಯವಿಲ್ಲ. ಅಥವಾ ಮಿಸ್ ಮಾಡಿಕೊಳ್ಳುವ ತೀವ್ರತೆ ಆವತ್ತಿನಷ್ಟಿಲ್ಲ. ಕಾಲೇಜಿನಲ್ಲಿ ಪ್ರೀತಿಸುವ ಅಥವಾ ಆಗ ತಾನೇ ಪ್ರೀತಿಗೆ ಬಿದ್ದವರು ಬೇಸಿಗೆಯ ಅಥವಾ ದಸರಾ ರಜೆಗೆ ತಮ್ಮ ತಮ್ಮ ಊರಿಗೆ ತೆರಳಿದಾಗ ಅವರ ಚಡಪಡಿಕೆಗಳು ಅದೆಷ್ಟಿರುತ್ತಿದ್ದವು. ಬರೀ ಟೆಲೆಫೋನ್ ನಲ್ಲಿ ಕದ್ದು ಮುಚ್ಚಿ ಮಾತಾಡಿಕೊಳ್ಳುವ ಪುಳಕ ಈಗೆಲ್ಲಿ. ತಿಂಗಳುಗಟ್ಟಲೆ ಮಿಸ್ ಮಾಡಿಕೊಳ್ಳುತ್ತಾ ಆ ಮೂಲಕ ಕಾಯುತ್ತ ಕೊನೆಗೊಂದು ದಿನ ಭೇಟಿಯಾದಾಗ ಮಾತು ಬರದೆ ಸುಮ್ಮನೆ ಮುಖ ಮುಖ ನೋಡುತ್ತಾ ಕಣ್ಣಂಚಿನಲ್ಲಿ ನೀರು ಜಿನುಗಿ...ಇಡೀ ದಿನಗಟ್ಟಲೆ ಹೇಗೆ ಬರೀ ನೆನಪಲ್ಲೇ ಕನಸಲ್ಲೇ ಕಳೆದದನ್ನು ಹೇಳಿಕೊಳ್ಳುವ ಅಂತ ಮನಸು ತವಕಿಸಿದರೂ ಮಾತು ಬರದೆ...ಅಬ್ಬಾ...
ಆದರೆ ಈಗ ಅದಿಲ್ಲ. ಮಿಸ್ ಮಾಡಿಕೊಳ್ಳುವ ಅವಧಿಯನ್ನು ಅಥವಾ ತೀವ್ರತೆಯನ್ನು ಮೊಬೈಲ್ ತಿಂದು ಹಾಕಿದೆ. 'ಏಯ್.. ನಾನಿಲ್ಲಿದ್ದೇ ಗೊತ್ತಾ...ಹೇಗಿದೆ ಅಂತೀಯ...ನೀನಿರಬೇಕಿತ್ತು...ಎಷ್ಟೊಂದು ಮಿಸ್ ಮಾಡ್ಕೊತಿದ್ದೀನಿ..' ಎಂದು ಆ ಕ್ಷಣದಲ್ಲೇ ಹೇಳಿಬಿಟ್ಟರೆ ಮುಗೀತಲ್ಲ...ಅಲ್ಲಿಗೆ ಮಿಸ್ ಮೈನಸ್...
ಬೆಳದಿಂಗಳ ಬಾಲೆಯ ರೇವಂತ್ ಒಂದು ಸ್ಥಿರದೂರವಾಣಿಯಲ್ಲಿ ಕೇಳಿಬರುವ ಸುಂದರ ಹುಡುಗಿಯ ಧ್ವನಿಗೆ ಮಾರುಹೋಗಿ ಹುಡುಕುತ್ತಾ ಸಾಗುವಲ್ಲಿನ ಪಯಣ ಅದೆಷ್ಟು ರೋಚಕ ರೋಮಾಂಚಕವಾಗಿತ್ತು ಅಲ್ಲವಾ..?ಚದುರಂಗದಾಟದಲ್ಲಿ ಗಟಾನುಗಟಿಗಳನ್ನು ಹೊಡಿದುರುಳಿಸೋ ರೇವಂತ್ ಒಂದು ನಂಬರ್, ಆ ಮೂಲಕ ಆ ಬೆಳದಿಂಗಳ ಬಾಲೆಯನ್ನು ಹುಡುಕಲು ಪಡುವ ಪ್ರಯತ್ನಗಳು, ಆಕೆ ಕೊಡುವ ಸುಳಿವುಗಳು, ನೋಡುಗನಿಗೆ ಅದೆಷ್ಟು ಆಪ್ತವೆನಿಸಿರಲಿಲ್ಲ. ಅಷ್ಟೇ ಅಲ್ಲ...ಚಿತ್ರದ ಕೊನೆಯಲ್ಲಿ ನಂಬರ್,  ಆ ಮನೆ ಗೊತ್ತಾಗಿ ಆಕೆಯನ್ನು ನೋಡಲು ಮಳೆಯಲ್ಲೇ ಓಡುವ ರೇವ೦ತನಿಗಿ೦ತ ನೋಡುಗನ ಕಾತರವೇ ಹೆಚ್ಚಿದ್ದಿರಬಹುದೇನೋ..?
ಹಾಗೆ ನೀವು ಯಾರೇ ನೀನು ಚಲುವೆ ಚಿತ್ರದಲ್ಲಿ ಬರೇ ಸ್ಥಿರದೂರವಾಣಿ ಮೂಲಕ, ಪತ್ರದ ಮೂಲಕ ಸಂಗೀತ, ರವಿಚಂದ್ರನ್ ಪ್ರೀತಿಯಲ್ಲಿ ಬೀಳುವುದನ್ನು ಅನುಭವಿಸದಿರುವುದಾದರೂ ಹೇಗೆ.? ಬರೀ ಪತ್ರಕ್ಕಾಗಿ ಕಾಯುತ್ತಾ , ಪತ್ರಗಳ ಮುಖೇನ ಕನಸು  ಹಂಚಿಕೊಳ್ಳುತ್ತಾ ಪ್ರೀತಿಯನ್ನು ಗಟ್ಟಿಮಾಡಿಕೊಳ್ಳುವ ವಿಸ್ಮಯ ಅದೆಷ್ಟು ಚಂದವಿತ್ತಲ್ಲವೇ? ಚಿತ್ರದ ಕೊನೆಯಲ್ಲಿ ಜೊತೆಯಲ್ಲೇ ರವಿಚಂದ್ರನ್ ಇದ್ದರೂ ಊರೆಲ್ಲಾ ಅಲೆಯುವ ನಾಯಕಿಗೆ ನಾಯಕ ಸಿಗುವ ಕೊನೆಕ್ಷಣದಲ್ಲಿ ನಮ್ಮ ಮೈಮನಸು ರೋಮಾಂಚನದಿಂದ ಅರಳದಿರಲು ಸಾಧ್ಯವೇ ಹೇಳಿ.
ಸುಮ್ಮನೆ ಯೋಚಿಸಿದಾಗ ಅಕಸ್ಮಾತ್ ಮೊಬೈಲ್ ಆವಾಗಲೇ ಬ೦ದುಬಿಟ್ಟಿದ್ದರೆ ಎಂಬ ಭಯವಾಗುತ್ತದೆ ನನಗೆ. ರೇವಂತ್ ಒಂದೆ ಘಂಟೆಯಲ್ಲಿ ಕಂಡುಹಿಡಿದುಬಿಡುತ್ತಿದ್ದ. ಆಕೆಯ ಜೊತೆಗೆ ಅಷ್ಟು ಬಾಂಧವ್ಯ ಬೆಳೆಯುತ್ತಿರಲಿಲ್ಲವೇನೋ? ಆಫೀಸಿಗೆ ಹೊರಡುವಾಗ, ಬಸ ಹತ್ತಿದ ಮೇಲೆ, ತಲುಪಿದ ಮೇಲೆ, ಮದ್ಯಾಹ್ನದ ಊಟದ ಸಮಯದಲ್ಲಿ ..ಹೀಗೆ ಪ್ರೀತಿ ಪಾತ್ರರಿಗೆ ಕ್ಷಣಕ್ಷಣದ ವರದಿ ಸಲ್ಲಿಸುವ ಮೊಬೈಲಿಗರಾದ ನಾವು, ಯಾರೇ ಪರಿಚಯವಾದರೂ ನಿಮ್ಮ ನಂಬರ್ ಕೊಡಿ, ಇದು ನನ್ನ ನಂಬರ್ ಎಂದು ವಿನಿಮಯ ಮಾಡಿಕೊಂಡು ಬಿಡುವ ಈ ಕಾಲದಲ್ಲಿ ಸಂಗೀತ ಪಟ್ಟಷ್ಟು ಕಷ್ಟ ಪಡಬೇಕಿಲ್ಲವೇನೋ? ಹಾಗಾಗಿ ಯಾರೇ ನೀನು ಚಲುವೆ ಚಿತ್ರವೇ ನಮಗೆ ಸಿಗುತ್ತಿರಲಿಲ್ಲ.ನಂಬರ ವಿನಿಮಯವಾಗಿ ಅಲ್ಲೇ ಪ್ರೀತಿ ಬೆಳೆದು ಅವರು ಒಬ್ಬರನ್ನೊಬ್ಬರು ಸಿಕ್ಕಿ ಎಲ್ಲವೂ ಸುಲಭವಾಗಿಬಿಡುತ್ತಿತ್ತು.
ಜೋಗಿ ಚಿತ್ರದಲ್ಲಿನ ಒಂದು ದೃಶ್ಯ. ಬೆಂಗಳೂರು ಮಹಾನಗರಿಗೆ ಬಂದು ಅರಿವಿಲ್ಲದೆ ರೌಡಿಯಾಗಿ ಬಿಡುವ  ಮಾದೇಶ ಅಮ್ಮನನ್ನು ಹುಡುಕುವುದು, ಹಾಗೆ ಮಗನನ್ನು ಹುಡುಕಿಕೊಂಡು ಬರುವ ಮಾದೇಶನ ತಾಯಿಗೆ ಮಗನ ಗೆಳೆಯ ಯೋಗೇಶ ಸಿಗುವುದು ಎಲ್ಲವೂ ಸರಿ. ಆಕೆ ಮೊದಲು ಯೋಗೇಶನಿಗೆ ಸಿಕ್ಕಿ ಆನಂತರ ಯೋಗೇಶ ಮಾದೇಶನಿಗೆ ಸಿಕ್ಕಾಗ ಅಮ್ಮನ ವಿಷಯ ತಿಳಿದವನು ವಿಳಾಸ ಬರೆದುಕೊಡುತ್ತಾನೆ ಹೊರತು ಮೊಬೈಲ್ ನಂಬರ್ ಕೊಡುವುದಿಲ್ಲ. ಚಿತ್ರದಲ್ಲಿ ಮಾದೇಶ ಮೊಬೈಲ್ ಕಾಲದವನಾದರೂ ಉಪಯೋಗಿಸುವುದಿಲ್ಲ. ಅದು ಚಿತ್ರದ ಓಟಕ್ಕೆ ಪ್ಲಸ್ ಆಗಿದೆ.
ಈಗಂತೂ  ಮೊಬೈಲ್ ಮಿಸ್ ಆದ ಕುರಿತು ಹಾಸ್ಯಮಯ, ಪ್ರೇಮ ಮತ್ತು ಸಾಹಸಮಯ ಚಿತ್ರಗಳು ಎಲ್ಲ ಭಾಷೆಯಲ್ಲೂ ಸುಮಾರಷ್ಟು ಬಂದಿವೆ. ಮೊಬೈಲಿ೦ದಲೆ ಪ್ರೀತಿ ಹುಟ್ಟುವ, ಮೊಬೈಲಿ೦ದಲೆ ಏನೇನೋ ಆಗುವ ಸಿನಿಮಾಗಳಿಗೇನೂ ಕೊರತೆಯಿಲ್ಲ. ಆದರೂ ಮೊದಲ ಪ್ರೇಮ ಪತ್ರವೇ..? ಎನ್ನುವ ಪತ್ರ ಮುಖೇನ ಪ್ರೀತಿಯ ಪುಳಕವೇಕೋ ಸಿಗುತ್ತಿಲ್ಲವೆನಿಸುತ್ತದೆ.
ನಿಮ್ಮ ಅಭಿಪ್ರಾಯ..?



ಓಬವ್ವ ಮತ್ತು ಡಿವಿಡಿ ಪ್ಲೇಯರ್ ..



[ಇತ್ತೀಚಿಗೆ ಗ್ರಂಥ ಪುಸ್ತಕದಲ್ಲಿ ಪ್ರಕಟವಾದ ನನ್ನ ಕಥೆ]
ಬವ್ವ ಒಮ್ಮೆ ಡಿವಿಡಿ ಪ್ಲೇಯರ್ ನತ್ತ ನೋಡಿದಳು.ಹೊರಕ್ಕೆ ತೆಗೆದುಕೊಂಡುಹೋಗಿ ಬೀಸಾಡಿಬಿಡಬೇಕೆನ್ನುವಷ್ಟು ಕೋಪ ಬಂದಿತು ಆ ಡಿವಿಡಿ ಪ್ಲೆಯರಿನ ಮೇಲೆ. ಆದರೆ ಅದನ್ನ ನೋಡುತ್ತಿದ್ದಂತೆ ಅದು ಹೇಗೋ ಕೋಪವೆಲ್ಲ ಭರ್ರನೇ ಒಂದೇ ಸಲಕ್ಕೇ ಇಳಿದುಹೋಗಿ ಅದರ ಮೇಲೆ ಒಂದು ರೀತಿಯ ಪ್ರೀತಿ ಉಕ್ಕಿಹರಿಯತೊಡಗಿತು.ಒಂದು ಕೈಯನ್ನು ಮಂಡಿಯ ಮೇಲೂರಿ ಇನ್ನೊಂದನ್ನು ನೆಲಕ್ಕೆ ಊರಿ ಅಯ್ಯೋ ಸಿವ್ನೇ..ಅದೇಕಪ್ಪಾ ವಯಸ್ಸಾದ್ಮೇಲೂ ನಮ್ಮೋಂತೋರ್ನ ಇಟ್ಕಂಡೈ..ಸುಮ್ಕೆ ಕರ್ಕೊಂಡೋಗ್ಬುಡದಲ್ವ..ಎಂಬೊಂದು ರಿಪೀಟೆಡ್ ಡೈಲಾಗ್ ಉದುರಿಸಿ ನಿಧಾನಕ್ಕೆ ಎದ್ದು ಡಿವಿಡಿ ಪ್ಲೇಯರಿನತ್ತ ನಡೆದಳು. ಮನೆಯಲ್ಲಿದ್ದ ಒಂದೇಒಂದು ಕುರ್ಚಿಯನ್ನು ಬಂದಕ್ಷಣದಿಂದಲೇ ತನ್ನದಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದ ಡಿವಿಡಿ ಪ್ಲೇಯರ್ ಒಮ್ಮೆ ಓಬವ್ವನ ಕಡೆ ನೋಡಿತು. ಬೆಳ್ಳಿಬಣ್ಣದ ಡಿವಿಡಿ ಪ್ಲೇಯರ್ ಆ ಕ್ಷಣದಲ್ಲಿ ಚಿನ್ನ ಬೆಳ್ಳಿಗಿಂತ ಅಮೂಲ್ಯವಾದ ಆಭರಣದಂತೆ ಕಂಡಿತು. ಹತ್ತಿರಕ್ಕೆ ಬಂದ ಓಬವ್ವ ತನ್ನ ಸುಕ್ಕುಗಟ್ಟಿದ ಕೈಗಳಿಂದ ಅದನ್ನು ನೇವರಿಸಿದಳು.ತನ್ನ ಕೈಯಲ್ಲಿನ ಸುಕ್ಕಿನಿಂದಾಗಿ ಅದೆಲ್ಲಿ ಸ್ಕ್ರಾಚಾಗುವುದೊ ಎಂಬ ದಿಗಿಲು ಅವಳನೊಮ್ಮೆ ಕಾಡದೇ ಇರಲಿಲ್ಲ. ಅದರ ಪಕ್ಕದಲ್ಲೆ ಇದ್ದ ರೀಮೋಟ್ ಕೂಡ ಇನ್ನೂ ಮುದ್ದುಮುದ್ದಾಗಿ ಕಂಡು, ಅದನ್ನೊಮ್ಮೆ ಕೈಗೆತ್ತಿಕೊಂಡ ಓಬವ್ವ ಅದರ ಬಟನ್ನುಗಳನ್ನು ಸೂಕ್ಷ್ಮವಾಗಿ ಒತ್ತಿ ಮತ್ತೆ ಅದರ ಜಾಗದಲ್ಲಿ ಜೋಪಾನವಾಗಿರಿಸಿ ಯಥಾಪ್ರಕಾರ ಮತ್ತೆ ತನ್ನ ಜಾಗಕ್ಕೆ ಹೋಗಿ ಕುಳಿತುಕೊಂಡಳು.ಈಗ ಧಾರಾವಾಹಿ ಶುರುವಾಗಿರ್ಬೇಕು..ಈವತ್ತೇನಾದದ್ದು..ತನ್ನ ಮನಸ್ಸಿನಲ್ಲೇ ಹೇಳಿಕೊಂಡು ಅದರ ಬಗ್ಗೆ ಯೋಚಿಸ ತೊಡಗಿದಳು.ತಾನು ಕೊನೆಯದಾಗಿ ಧಾರಾವಾಹಿ ನೋಡುವುದನ್ನು ನಿಲ್ಲಿಸಿದ್ದು ಯಾವಾಗ...ಹೋದ ಪೋರ್ಣಮಿಯ ದಿವ್ಸವೇ ಕೊನೇ..ಅಮೇಲಿಂದ ರುಕ್ಮಿಣಮ್ಮನ ಮನೆ ಕಡೆ ಹೋಗಿರಲೇ ಇಲ್ಲ..ಅಂದರೆ ಸರಿ ಸುಮಾರು ಹದಿನೈದು ದಿನವೇ ಆಗಿಹೋಗಿವೆ..ಏನಾಗಿಹೋಗಿದೆಯೊ..ಯಾರ ಪಾಡು ಏನಾಗಿದೆಯೊ..ಎಂದು ಧಾರಾವಾಹಿಯ ಪಾತ್ರಗಳನ್ನು ನೆನೆಪಿಸಿಕೊಂಡು ಅಲವತ್ತುಗೊಂಡಳು.
ಓಬವ್ವನ ದಿನಚರಿಯೇ ಹಾಗಿತ್ತು. ಸಂಜೆ ಮನೆಗೆ ಬಂದವಳು ಕೈಕಾಲು ಮುಖ ತೊಳೆದು ದೇವರ ಪೋಟೋಗೆ ಕೈಮುಗಿದು,ಸತ್ತ ಗಂಡನನ್ನು ನೆನಪಿಸಿಕೊಂಡು ಮದ್ಯಾಹ್ನದ ಅರ್ಧ ಮುದ್ದೆ ಸಾರು ತಿಂದು ರುಕ್ಮಿಣಮ್ಮನ ಮನೆಗೆ ಹೊರಟುಬಿಡುತ್ತಿದ್ದಳು, ಟಿವಿ ನೋಡಲಿಕ್ಕೆ.ಇವಳು ಹೋಗುವ ಸಮಯಕ್ಕೆ ಸರಿಯಾಗಿ ಶುರುವಾಗುವ ಧಾರಾವಾಹಿಗಳು ರುಕ್ಮಿಣಮ್ಮ ಮತ್ತು ಓಬವ್ವರನ್ನು ಆಕ್ರಮಿಸಿಕೊಂಡುಬಿಡುತ್ತಿದ್ದವು. ತುಂಬಾ ಆಸಕ್ತಿಯಿಂದ ನೋಡುತ್ತಿರುವಾಗಲೇ ವಕ್ಕರಿಸುವ ಜಾಹಿರಾತುಗಳನ್ನು ಒಳ್ಳೇ ಟೈಮ್ಗೆ ಶನಿಕಣಂಗೆ ವಕ್ಕರಿಸ್ಕತವೇ..ದರಿದ್ರದವು.. ಎಂದು ಬೈದು, ಅವುಗಳ ಜೊತೆಗೆ ಧಾರಾವಾಹಿಯ ಪಾತ್ರಗಳ ಒಳ್ಳೇತನಕ್ಕೆ ಶಬಾಸ್‌ಗಿರಿ ಕೊಟ್ಟು, ಕೆಟ್ಟತನಕ್ಕೆ ಅಲ್ಲೇ ಕ್ಯಾಕರಿಸಿ ಉಗಿದು ಈಯಮ್ಮ ನಂಕೈಗೆ ಸಿಕ್ಬೇಕು ಒಂದ್ಸಲಾ..ಚಮ್ಡಾ ಸುಲ್ದುಬುಡ್ತೀನಿ..ಎಂಗಾಡ್ತಳಾ ನೋಡು ಮಿಟಕಲಾಡಿ.. ಎಂದೆಲ್ಲಾ ಬೈದಾಡುತ್ತಿದ್ದಳು. ಅದರ ಜೊತೆಜೊತೆಗೆ ಊರಿನ ಆಗುಹೋಗುಗಳ ಬಗ್ಗೆ ಸಾದ್ಯಂತವಾದ ಚರ್ಚೆಯನ್ನು ಮಾಡಿ, ಏನಾದರೊಂದು ಮುಖವೆನಿಸುವ ವಿಷಯ ಹೇಳಲು ಇರು ರುಕ್ಮಿಣಮ್ಮೋ..ಒಸಿ ಅಡ್ವಟೈಜು ಬಂದ್ಬಿಡ್ಲೀ..ಯೋಳ್ತೀನಿ.. ಎಂದು ಜಾಹಿರಾತಿಗೆ ಕಾಯ್ದು, ಇನ್ನೂ ಯಾಕೋ ಬರ್ತಿಲ್ಲವೆನಿಸಿ, ನೋಡು ..ದರಿದ್ರದವು..ಬೇಕೂ ಅಂದಾಗ ಎಂಗೆ ಆಟ ಆಡುಸ್ತವೆ.. ಎಂದು ಅದಕ್ಕೂ ಬೈಯುತ್ತಿದ್ದದ್ದುಂಟು. 
ಈಗ ಹದಿನೈದು ದಿನದಿಂದ ಅದೂ ತಪ್ಪಿಹೋಗಿತ್ತು.ಎಲ್ಲಾ ಆದದ್ದೂ ಈ ಡಿವಿಡಿ ಪ್ಲೇಯರಿನಿಂದ.
ಓಬಳಮ್ಮನ ಗಂಡ ಸಿದ್ದಯ್ಯ ಸತ್ತು ಸರಿಸುಮಾರು ಹನ್ನೆರಡು ವರುಷಗಳೇ ಕಳೆದುಹೋಗಿತ್ತು.ಅವನ ಕೈಯಲ್ಲಿ ಯಾವಾಗಲೂ ಇರುತ್ತಿದ್ದ ಬೀಡಿ ತುಂಡಿನ ಜೊತೆಗೆ ಸಾರಾಯಿ ಪಾಕೆಟ್ಟು ಕೂಡ ರಾತ್ರಿ ಹೊತ್ತು ಸೇರಿಕೊಂಡು ಪಿತೂರಿ ನಡೆಸಿ ಕೆಮ್ಮಿಸಿಕೆಮ್ಮಿಸಿ ಇಡೀ ದೇಹವನ್ನೇ ತರತರ ನಡುಗಿಸಿ ಅದೊಂದು ದಿನ ಮಲಗಿದ್ದಲ್ಲಿಯೇ ಕೊಂದುಬಿಟ್ಟಿದ್ದವು. ಇರುವ ಒಬ್ಬಳೇ ಮಗಳು ರೇಣುಕಳನ್ನು ದೂರದ ಬೆಂಗಳೂರಿಗೆ ಮದುವೆ ಮಾಡಿಕೊಟ್ಟಾಗಿತ್ತು. ಗಂಡ ಸತ್ತ ಮೇಲೆ ಮಗಳು ಬೆಂಗಳೂರಿಗೆ ಬಂದು ತನ್ನ ಜೊತೆ ಇದ್ದು ಬಿಡು ಎಂದು ಅಂಗಲಾಚಿದರೂ ಓಬವ್ವ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ತನ್ನ ಗಂಡ, ನಾನು ಬಾಳಿ ಬದುಕಿದ ಊರಿದು..ಅದು ಬಿಟ್ಟು ಬ್ಯಾರೆ ಕಡೆ ಬಂದು ಪರ್ದೇಸಿ ಹಂಗೆ ಸಾಯ್ಲಾ ನಾನು.. ಎಂದು ತಾನೂ ಊರಲ್ಲೇ ಇರುವುದಕ್ಕೆ ಕಾರಣವನ್ನೂ ಕೊಟ್ಟಿದ್ದಲ್ಲದೇ ಬೆಂಗ್ಳೂರು ಅಂದ್ರೆ ಊರಮ್ಮಿ ಅದೂ..ಥೂತ್..ಜನ ಬದ್ಕಕಾತದಾ..ಹತ್ತಿ ಹಣ್ಣೊಲ್ಗಿರಾ ಹುಳುಗಳಾದ್ರೂ ವಾಸಿ..ಚಂದಾಗಿ ಬದುಕ್ತವಾ..ಇನ್ನಷ್ಟು ವರ್ಸ ನೋಡ್ಕಾ..ಬೆಂಗ್ಳೂರು ಮುಳ್ಗೋಯ್ತದೆ.. ಎಂಬ ಅರ್ಥವಿಲ್ಲದ, ತರ್ಕಕ್ಕೆ ನಿಲುಕದ ನುಡಿಮುತ್ತು ಉದುರಿಸಿ ಬೆಂಗಳೂರಿಗರನ್ನು ನರಕವಾಸಿಗಳೆಂಬಂತೆ ಚಿತ್ರಿಸಿದ್ದಳು.ಊರಲ್ಲಿದ್ದ ಎರಡು ಗುಂಟೆ ಜಮೀನನ್ನು ಕರಿಬಸಪ್ಪನಿಗೆ ವಾರಕ್ಕೆ ಕೊಟ್ಟಿದ್ದಳು.ಅವನು ಅದರಲ್ಲಿ ಉತ್ತಿಬೆಳೆದು ವರ್ಷಕ್ಕಿಷ್ಟು ಅಂತ ಕೊಡಬೇಕಿದ್ದರೂ ಅವನು ವರ್ಷಕ್ಕೆ ಕೊಡುತ್ತಿರಲಿಲ್ಲ. ಎಲ್ಲಾನೂ ಮನೇಲಿಟ್ಕಂಡು ಏನ್ಮಾಡಿಯಾ..ಹುಡುಗ್ರು ಊರ್ಲಿ ಪೋಲಿಬಿದ್ದೋಗವೆ..ಇಸ್ಪೇಟು ಆಡೋಕು ಕಾಸಿನಾಟ ಆಡಕೂ ಕಾಸಿಲ್ಲಾಂದ್ರೆ ಮನೆಗೆ ನುಗ್ಗಲ್ಲಾಂತ ಏನ್ ಗ್ಯಾರಂಟೀ..ಅದ್ಕೆ ಬೇಕಾದಗ್ ಬೇಕಾದಗ್ ಬಂದು ಈಸ್ಕೊಂಡು ಹೋಗಯಂತೆ..ಎಂದಿದ್ದನು. ಮತ್ತು ನೀಯತ್ತಿನಿಂದ ಹಾಗೆ ನಡೆದುಕೊಳ್ಳುತ್ತಿದ್ದನು. ಬಸಣ್ಣ..ರಾಗಿ ಮುಗ್ದೋಗದಕಯ್ಯೋ.. ಎಂದು ಕೇಳಿದರೆ ಮನೆತವ್ಕ ಬವ್ವೋ..ಅಮ್ಯಾಕೆ ರಾಗಿ ಈಸ್ಕಂಡೋಗಿ ಮುದ್ಕಿ ನೀನು ಮಿಲ್ಲುಗೂ ಮನ್ಗೂ ಓಡಾಡೀಯಾ..ಎಷ್ಟುಬೇಕಷ್ಟು ರಾಗಿ ಹಿಟ್ನೇ ಈಸ್ಕಂಡುಹೋಗು..ಎನ್ನುತ್ತಿದ್ದನು.ಖರ್ಚಿಗೇನಾರ ಬೇಕಮ್ಮೋ.. ಎಂದೂ ಕೇಳುತ್ತಿದ್ದನು.ಮಗಳು ವರ್ಷಕ್ಕೊಮ್ಮೆ ಮನೆಗೆ ಬಂದಾಗ ಅಮ್ಮೋ..ನಿನ್ನ್ ಮಗಳೇನಾರ ರಾಗಿಜೋಳ ಮನೆಗೆ ತಗೊಂಡೋದಳಾ ಕೇಳು..ಬೆಂಗ್ಳೂರಂದ್ರೆ ಎಲ್ಲಕೂ ಖರ್ಚು..ಎಂದೂ ತಾನೇ ವಿಚಾರಿಸುತ್ತಿದ್ದನಲ್ಲದೇ ಒಂದೆರೆಡು ಕೊಳಗ ರಾಗಿಯನ್ನೋ,ಜೋಳವನ್ನೋ ಕೊಟ್ಟುಕಳುಹಿಸುತ್ತಿದ್ದನು.ಅದ್ಕೆ ಕಣಪ್ಪ..ದೇವ್ರು ನಿನ್ನಾ ಬಂಗಾರದಂಗಿಟ್ಟಿರಾದು..ನೀನು ನೂರ್ಕಾಲ ಬಾಳಪ್ಪ.. ಎಂದು ಮನಸಾರೆ ಹರಸುತ್ತಿದ್ದಳು. ಬೆಳಗೆದ್ದ ತಕ್ಷಣ ಹೊಲದ ಕಡೆಗೆ ನಡೆದುಬಿಡುವ ಓಬವ್ವ ಅಲ್ಲಿ ಓಡಾಡಿ ಕಳೆಕಿತ್ತು ಬರುತ್ತಾಳೆ. ಕೆಲಸ ನಡೆಯುವಾಗಲಂತೂ ತಾನು ಬೇರೆಯವರಿಗೆ ವಾರಕ್ಕೆ ಹಾಕಿದ್ದೇನೆ ಎಂಬುದನ್ನು ಮರೆತು ತನ್ನದೇ ಹೊಲ ಎಂಬಂತೆ ಕೆಲಸ ಮಾಡುತ್ತಾಳೆ.ದಿನವೆಲ್ಲಾ ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾಳೆ. ಪ್ರತಿ ತಿಂಗಳೂ ಮಗಳು ಕಳಿಸುವ ನೂರೈವತ್ತು ರೂಪಾಯಿಗಳ ಮನಿಯಾರ್ಡರ್ ಅನ್ನು ಜೋಪಾನವಾಗಿಟ್ಟುಕೊಳ್ಳುತಾಳೆ. ತನ್ನ ಗುಡಿಸಲಿಗಿಂತ ಸ್ವಲ್ಪ ಚೆನ್ನಾಗಿರುವ ಮನೆಯಲ್ಲಿ ಮದ್ಯಾಹ್ನ ಯಾವುದಾದರೊಂದು ಬಟ್ಟೆಗೆ ತೇಪೆಹಾಕುತ್ತಾಳೆ.ಸಂಜೆಯಾಗುತ್ತಿದ್ದಂತೆ ರುಕ್ಮಿಣಮ್ಮನ ಮನೆಕಡೆಗೆ ಟಿವಿ ನೋಡಲು ಹೊರಟುಬಿಡುತ್ತಾಳೆ. ರುಕ್ಮಿಣಮ್ಮನೂ ಅಷ್ಟೇ..ರಾಜ್ಕುಮಾರ್ ಸಿನಿಮಾಗಳು, ದೇವರ ಸಿನಿಮಾಗಳಿದ್ದರೆ ಅಡ್ವಾನ್ಸಾಗಿ ಹೇಳಿಬಿಡುತ್ತಾಳೆ.ಸಂಜೆ ಏಳು ಗಂಟೆಯಿಂದ ಓಬವ್ವನಿಗೆ ಬೇರೇಯದೇ ಪ್ರಪಂಚ ತೆರೆದುಕೊಳ್ಳುತ್ತದೆ.ಅದು ನೆನೆಪಿನಾಳದಲ್ಲಿ ನಶಿಸಿಹೋಗುತ್ತಿರುವ ತನ್ನಪ್ಪ ಅಮ್ಮರ ನೆನಪು , ತನ್ನೂರು ಬಾಲ್ಯಗಳನ್ನೂ ನೆನೆಪಿಸುತ್ತದೆ. ಒಮ್ಮೊಮ್ಮೆ ಎಲ್ಲಾ ಕಳೆದೇಹೋಯಿತೆ..ಅಂತಲೂ ಅನಿಸಲಿಕ್ಕೆ ಶುರುವಾದರೂ ಮಗಳ ನೆನಪು ಮೊಮ್ಮಕ್ಕಳ ನೆನಪು ಅವಳನ್ನು ಆ ವಿಷಾದದ ಭಾವದಿಂದ ಹೊರತರುತ್ತದೆ.
ಈಗ್ಗೆ ತಿಂಗಳ ಹಿಂದೆ ಮಗಳು ರೇಣುಕ ಊರಿಗೆ ಬಂದವಳು ಸುಮ್ಕೆ ನನ್ ಜೊತೆ ಹದಿನೈದಿನ ಇದ್ದೋಗವಂತೆ ಬಾಮ್ಮ..ಎಂದು ಬಲವಂತ ಮಾಡಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಳು.ಒಂದು ಸಾರಿ ನೋಡಿಯೇ ಬಿಡೋಣ ಎಂದು ಮನಸ್ಸಿನಲ್ಲೇ ನಿರ್ಧಾರ ಮಾಡಿದ್ದ ಓಬವ್ವನೂ ಮಗಳ ಜೊತೆ ಬೆಂಗಳೂರಿನ ಬಸ್ಸತ್ತಿಬಿಟ್ಟಿದ್ದಳು.ಪ್ರತಿ ಸ್ಟಾಪು ಬಂದಾಗಲೂ ಈಗ ಇಳಿಯಬೇಕೇನೋ.. ಎಂಬಂತೆ ಮಗಳ ಕಡೆ ನೋಡಿದರೆ ಮಗಳು ಆ ಯಾವ ಲಕ್ಷಣವನ್ನೂ ತೋರಿಸದೆ ನಿದ್ರೆಯಲ್ಲಿಯೇ ಇರುತ್ತಿದ್ದಳು. ಬಸ್ಸು ಹೋಗುತ್ತಲೇ ಇದ್ದದ್ದನ್ನು ಕಂಡ ಓಬವ್ವನಿಗೆ ಇದ್ಯಾವುದೋ ಬೇರೆಯದೆ ದೇಶಕ್ಕೆ ಹೋಗುತ್ತಿದ್ದೇನೆ ಎನಿಸಿಬಿಟ್ಟಿತ್ತು. ಹೋದಷ್ಟು ಮುಗಿಯದ ಪಯಣ ಓಬವ್ವನಿಗೆ ಅದೆಷ್ಟು ರೇಜಿಗೆ ತಂದಿತೆಂದರೆ ಬರುವಾಗ ಹೇಗಪ್ಪಾ ಬರುವುದು..ಎಂಬ ಚಿಂತೆಯನ್ನು ಹೋಗುವಾಗಲೇ ಹತ್ತಿಸಿ ಹಿಂಡಿ ಹಿಪ್ಪೆ ಮಾಡಿತ್ತು. ಅಂತೂ ಇಂತೂ ಬೆಂಗಳೂರು ತಲುಪಿದಾಗ ಸಂಜೆ ಆರಾಗಿತ್ತು. ಮೆಜಸ್ಟಿಕ್ಕಿನಲ್ಲಿಳಿದಾಗ ಅಲ್ಲಿನ ಜನಜಂಗುಳಿ ನೋಡಿ ಓಬವ್ವ ಹೌಹಾರಿದ್ದಳು. ತನ್ನೂರಿನ ವಾರಕ್ಕೊಮ್ಮೆ ನಡೆಯುವ ಸಂತೆಯಲ್ಲಿರಲಿ, ವರ್ಷಕ್ಕೊಮ್ಮೆ ನಡೆಯುವ ತನ್ನೂರ ದೊಡ್ಡ ಜಾತ್ರೆಯಲ್ಲೂ ಇಂಥ ಜನಸಂಖ್ಯೆಯನ್ನು ಕಂಡಿರಲಿಲ್ಲ.  ಯಾನವ್ವ ಏನಾರ ಇಸೇಸ ಇದ್ದದ್ದ ಈವತ್ತು..ಈಪಾಟಿ ಜನ ಅವ್ರಲ್ಲಾ.. ಎಂದು ಮಗಳನ್ನು ಕೇಳಿದ್ದಕ್ಕೆ ಇಲ್ಲಿ ದಿನ ಹಿಂಗಿಯಕಮ್ಮಾ..ಬೇಗಬೇಗ ಹೆಜ್ಜೆಹಾಕು ಇಲ್ಲಾಂದ್ರೆ ಬಸ್ಸಿಗಲ್ಲ.. ಎಂದು ಓಡುವ ತರದಲ್ಲಿ ಓಬವ್ವನನ್ನು ನಡೆಸಿದ್ದಳು. ಕಿಕ್ಕಿರಿದು ತುಂಬಿದ್ದ ಬಸ್ಸಿನಲ್ಲಿ ತೂರಿಕೊಂಡು ಮೈಯನ್ನೆಲ್ಲ ನುಜ್ಜುಗುಜ್ಜಾಗಿಸಿಕೊಂಡು ಮನೆಗೆ ತಲುಪವಷ್ಟರಲ್ಲಿ ಓಬವ್ವನಿಗೆ ಮತ್ತೊಮ್ಮೆ ಹುಟ್ಟಿಬಂದಂತಾಗಿತ್ತು. ಮಗಳ ಮನೆಯಲ್ಲಿ ವಾರ ಕಳೆಯುವಷ್ಟರಲ್ಲಿ ಓಬವ್ವನಿಗೆ ಅದ್ಯಾವಾಗ ತನ್ನೂರಿಗೆ ಹೋಗಿಬಿಡುತ್ತೇನೋ ಎಂದು ನೂರಾರು ಬಾರಿ ಅನ್ನಿಸಿಬಿಟ್ಟಿತ್ತು. ಅಳಿಯ ಸದಾಶಿವ ಮುನ್ಸಿಪಾಲಿಟಿಯ ನೌಕರನಾಗಿದ್ದ. ಮಗಳು ನಾಲ್ಕಾರು ಮನೆಯಲ್ಲಿ ಮುಸುರೆ ಕೆಲಸ ಮಾಡುತ್ತಿದ್ದಳು.ಬೆಳಿಗ್ಗೆದ್ದ ತಕ್ಷಣ ಇಬ್ಬರು ಹೊರಟುಬಿಡುತ್ತಿದ್ದರು. ಮನೆಯಲ್ಲಿ ಓಬವ್ವ ಒಂಟಿಯಾಗಿಬಿಡುತ್ತಿದ್ದಳು. ಅದೊಂದು ದಿನ ಮನೇಲಿ ಕೂತ್ಕಂಡು ಏನ್ಮಾಡಿಯವ್ವೋ..ಬಾ ಸುಮ್ಕೆ ನಂಜೊತೆ.. ಎಂದು ರೇಣುಕ ತಾನು ಕೆಲಸ ಮಾಡುವ ಮನೆಗೆ ಕರೆದುಕೊಂಡು ಹೋಗಿದ್ದಳು. ಅವರು ಆವತ್ತು ಹೇಗೊ ರಜಾದಿನವಾದ್ದರಿಂದ ಬಿಗ್ ಬಜಾರಿಗೆ ತಮ್ಮ ಕಾರಿನಲ್ಲೇ ಕರೆದುಕೊಂಡು ಹೋಗಿದ್ದಲ್ಲದೆ ಓಬವ್ವನಿಗೆ ಮುನ್ನೂರು ರೂಪಾಯಿಗಳ ಸೀರೆ ಕೊಡಿಸಿದ್ದರು.ಅದು ಹಬ್ಬದ ಸಮಯವಾದ್ದರಿಂದ ಬಿಗ ಬಜಾರಿನಲ್ಲಿ ಸೀರೆ ಕೊಂಡಾಗ ಅದರ ಜೊತೆ ಕೂಪನ್ ಕೂಡ ಕೊಟ್ಟಿದ್ದರು. ರೇಣುಕ ಅದನ್ನು ತೆಗೆದುಕೊಂಡಳು ಇದೆಲ್ಲಾ ಸುಮ್ಕೆ.. ಎಂದದ್ದಲ್ಲದೆ ಅದರಲ್ಲಿ ಓಬವ್ವನ ಹೆಸರು ಬರೆದು ಡಬ್ಬಿಗೆ ಹಾಕಿದ್ದಳು.
ಎಲ್ಲಾ ಮುಗಿಸಿ ಬಿಗ್ ಬಜಾರಿನಲ್ಲೆಲ್ಲಾ ಸುತ್ತಾಡಿದರು. ಓಬವ್ವನಿಗಂತೂ ಅದೆಂತದೋ ಬೆರಗು..!ಮನೆಯವರು ತಾವು ಹೋಗುತ್ತೇವೆ ಎಂದಾಗ ಅಮ್ಮಾವ್ರೆ ನಾವು ಬಸ್ಸಲ್ಲಿ ಹೋಯ್ತೀವಿ ನೀವೋಗಿ.. ಎಂದು ರೇಣುಕಾಳೇ ಅವರನ್ನು ಕಳುಹಿಸಿ ತನ್ನವ್ವನನ್ನು ಸುತ್ತಾಡಿಸಿದ್ದಳು. ಸಂಜೆಯಾಗುವರೆಗೂ ಅಲ್ಲೇ ಕಳೆದು ಇನ್ನೇನು ಮನೆಗೆ ಹೋಗಲು ನೆಲಮಹಡಿಯತ್ತ ಧಾವಿಸುತ್ತಿದ್ದಾಗ ಅಲ್ಲಿ ಜನರೆಲ್ಲಾ ನೆರೆದಿರುವುದು ಕಾಣಿಸಿತು. ಏನಿರಬಹುದೆಂಬ ಕುತೂಹಲದಿಂದ ಅಮ್ಮನನ್ನು ಎಳೆದುಕೊಂಡು ಅತ್ತ ಸಾಗಿದಳು. ಅಲ್ಲಿ ಆವತ್ತು ಚಿತ್ರನಟಿ ಬಂದಿದ್ದಳು. ಆವತ್ತು ಕೂಪನ್ನುಗಳ ಡ್ರಾ ದಿನವಾದರಿಂದ ಸಣ್ಣಮಟ್ಟದ ಸಂಗೀತವೂ ಅಲ್ಲಿತ್ತು. ಓಬವ್ವನಂತೂ ವರ್ಣಿಸಲಾಗದ ಭಾವನೆಯೊಂದಿಗೆ ಮಗಳ ಕೈಯನ್ನು ಭದ್ರವಾಗಿ ಹಿಡಿದುಕೊಂಡೇ ನಿಂತಿದ್ದಳು. ಸುತ್ತಮುತ್ತಲ ಜನಜಂಗುಳಿ, ಅವರ ಸಂಭ್ರಮಗಳು ಮುಂತಾದವುಗಳನ್ನು ಎವೆಯಕ್ಕದೆ ನೋಡುತ್ತಿರುವ ಅಮ್ಮನನ್ನು ಕಂಡು ರೇಣುಕಳಿಗೆ ಕೂಡ ಎಂಥದೋ ಖುಷಿಯಾಗಿತ್ತು..ಅದೇ ಖುಷಿಯಲ್ಲಿದ್ದವಳಿಗೇ ಯಾರೋ ಓಬವ್ವ ಎಂದು ಕೂಗಿದ ಹಾಗೆ ಭಾಸವಾಗಿತ್ತು.ಹೌದು ಕರೆಯುತ್ತಿದ್ದರು..ಅದೂ ಮೈಕಿನಲ್ಲಿ..ರೇಣುಕಾಳಿಗೆ ಮೊದಲಿಗೆ ಗಾಬರಿಯಾಗಿತ್ತು..ಆದರೆ ವಿಷಯ ತಿಳಿದ ಮೇಲೆ ಖುಷಿಯಾಗಿತ್ತು. ಓಬವ್ವನ ಹೆಸರಿನಲ್ಲಿ ಹಾಕಿದ್ದ ಲಕ್ಕಿ ಡ್ರಾ ಕೂಪನ್ನಿಗೆ ನಾಲ್ಕನೇ ಬಹುಮಾನ ಬಂದಿತ್ತು. ಇಲ್ಲಿದ್ದರೆ ಈಗಲೇ ಬಂದು ತೆಗೆದುಕೊಂಡು ಹೋಗಬಹುದು..ಇಲ್ಲವಾದಲ್ಲಿ ನಾವು ಕರೆ ಮಾಡಿ ತಿಳಿಸುತ್ತೇವೆ.. ಮೈಕಿನಲ್ಲಿ ಅನೌನ್ಸ್ ಮಾಡುತ್ತಿದ್ದರು. ರೇಣುಕಾ ಖುಷಿಯಿಂದ ಹೋದಾಗ ಅವರು ಓಬವ್ವಳೇ ಬರಬೇಕೆಂದು ಜೊತೆಗೆ ಏನಾದರೂ ಗುರುತಿನ ಚೀಟಿ ತರಬೇಕೆಂದೂ ಹೇಳಿ ಇಕ್ಕಟ್ಟಿಗೆ ಸಿಲುಕಿಸಿದ್ದರು. ಅದರಲ್ಲೂ ಓಬವ್ವನನ್ನು ಸ್ಟೇಜಿನ ಮೇಲಕ್ಕೆ ಕರೆದುಕೊಂಡು ಹೋಗುವಷ್ಟರಲ್ಲಿ ರೇಣುಕಾಳಿಗೆ ಸಾಕು ಸಾಕಾಗಿತ್ತು. ಕೊನೆಗೆ ಜೋರಾಗಿ ಗದರಿದ ಮೇಲೆಯೇ ಓಬವ್ವ ಸ್ಟೇಜು ಹತ್ತಿದ್ದು.ಆಗ ತಾನೆ ಕೊಂಡಿದ್ದ ಸೀರೆ, ಕೂಪನ್ನಿನ ಅರ್ಧಭಾಗವನ್ನೆಲ್ಲಾ ತೋರಿಸಿದ ಮೇಲೆ ಆಯೋಜಕರು ಗಿಫ್ಟ್ ಬಾಕ್ಸ್ ಕೊಟ್ಟು ಕಳುಹಿಸಿದ್ದರು.
ಮನೆಗೆ ಬಂದವರೇ ಆ ಡಬ್ಬದಲ್ಲಿ ಏನಿರಬಹುದೆಂದು ಕುತೂಹಲದಿಂದ ತೆಗೆದುನೋಡಿದರೆ ಅದೊಂದು ಡಿವಿಡಿ ಪ್ಲೇಯರ್ ಆಗಿತ್ತು. ಈಗಾಗಲೇ ರೇಣುಕಾಳ ಮನೆಯಲ್ಲಿ ಒಂದು ಡಿವಿಡಿ ಪ್ಲೇಯರ್ ಇತ್ತಾದ್ದರಿಂದ ಈ ಡಿವಿಡಿ ಪ್ಲೇಯರನ್ನು ಮಾರಿ ಬಿಡೋಣವೆನ್ನಿಸಿದರೂ ಓಬವ್ವನ ಜೀವಮಾನದಲ್ಲಿ ಬಂದ ಮೊಟ್ಟಮೊದಲ ಬಹುಷ ಕಟ್ಟ ಕಡೆಯ ಕೊಡುಗೆ ಅದಾದ್ದರಿಂದ ಅದನ್ನು ಮಾರಲು ಮನಸು ಒಪ್ಪಿರಲಿಲ್ಲ. ಕೊಡದ್ಕೊಡ್ತಾ ನನ್ಮಕ್ಳು ಸೀರನಾ ಬಟ್ಟೆನಾ ಪಾತ್ರನಾ ಪಗಡಾನ ಕೊಡಕಾಗ್ಲಿಲ್ವಾ.. ಎಂದು ರೇಣುಕಾ ಬೈದುಕೊಂಡಿದ್ದಳು. ಓಬವ್ವನಿಗೂ ಇದ್ದಕ್ಕಿದ್ದಂತೆ ದಕ್ಕಿದ ಅನಿರೀಕ್ಷಿತ ಡಿವಿಡಿ ಪ್ಲೇಯರ್ ಒಂದು ವರದಂತೆಯೇ ಕಂಡಿತು. ಎಲ್ಲೋ ಇದ್ದ ತನ್ನನ್ನು ಈ ಬೆಂಗಳೂರಿಗೆಳೆತಂದು ದೇವರು ಅದ್ಯಾವುದೊ ಸಕಾರಣಕ್ಕಾಗಿಯೇ ತನಗೀ ಕೊಡುಗೆ ನೀಡಿರಬೇಕೆಂದು ಓಬವ್ವ ಬಲವಾಗಿ ನಂಬಿಬಿಟ್ಟಳಲ್ಲದೆ ಬುಡವ್ವಾ ನಾ ಅದ್ನ ಊರ್ಗೆ ತಕ್ಕಂಡೋಯ್ತೀನಿ.. ಎಂದಳು. ಅದಕ್ಕೆ ವಿಚಿತ್ರವಾಗಿ ಅವ್ವನನ್ನೇ ನೋಡಿದ ರೇಣುಕಾ, ಅಮೌ ಅದನ್ನೇನಂತ ತಿಳ್ಕಂದಿದೈ..ಡಿವಿಡಿ ಪ್ಲೇಯರು..ಸೀಡಿ ಕ್ಯಾಸೆಟ್ಟು ತಕ್ಕಂಬಂದು ಸಿಲ್ಮಾ ನೋಡದು..ಬರೀ ಅದ್ನ ತಕ್ಕಂಡೋಗಿ ಏನ್ಮಾಡೀಯಾ..ಟಿವಿನೂ ಬೇಕು ಅದ್ರ ಜೊತೆಗೆ..ಮುಂಡ ಮಕ್ಳು ಬರೀ ಡಿವಿಡಿ ಪ್ಲೇಯರ್ರು ಕೊಟ್ಟವ್ರಲ್ಲಾ..ಟಿವೀನಾ ಅವ್ರಪ್ಪಂದ್ರು ಕೊಟ್ಟಾರಾ..? ಎಂದು ಆಯೋಜಕರನ್ನು ಬೈದಿದ್ದಳು. ನಂಗ ಅಷ್ಟೂ ಗೊತ್ತಿಲ್ಲ್ವಮ್ಮೀ ..ನಿಮ್ಮನೇಲೇ ಇಲ್ವಾ..ನಾಯೇನ ಪೆದ್ದಿ ಅನ್ಕಂಡ್ಯಾ..ಗೊತ್ತು ಕಣಮ್ಮಿ..ಅಲ್ಲಿ ಎಂಗಿದ್ರೂ ರುಕ್ಮಿಣಮ್ಮನ ಮನೇಲಿ ಇದಿಲ್ಲಾ ಒಂದ ತಕ್ಕ ಬೇಕೂಂತಿದ್ದಳು..ಅವ್ರಿಗೆ ಕೊಟ್ರಾಯ್ತು..ಎಂಗಿದ್ರೂ ಊರ್ನಲ್ಲಿ ನೋಡ್ಕಬೇಕಾದವ್ರು ಅವ್ರು ತಾನೆ..ಕಷ್ಟಸುಖಕ್ಕ ನಿನ್ನ ನೆಚ್ಚಿಕೊಳ್ಳಕಾಯ್ತದಾ..ನೀ ಈ ಊರಿಂದ ಬರಗಂಟ ನನ್ನ ಹೆಣ ಮಣ್ಣಲ್ಲಿ ಮಣ್ಣಾಗೋಗಿರುತ್ತಾ ..ಅಷ್ಟಿಯ..ಕೊಡು ಅವ್ರಿಗೆ ಕೊಡ್ತೀನಿ.. ಎಂದಿದ್ದಳು. ಅದ್ಯಾಕೆ ಹಾಗೆ ಸುಳ್ಳು ಹೇಳಿದ್ದಳೋ ಓಬವ್ವನಿಗೂ ಗೊತ್ತಿರಲಿಲ್ಲ.ಒಟ್ಟಿನಲ್ಲಿ ತನಗದು ಸೇರಿದ್ದು ಎಂಬ ಭಾವ ಅವಳನ್ನಾಕ್ರಮಿಸಿಕೊಂಡಿತ್ತು.ರೇಣುಕಾಳಿಗೆ ಆ ಡಿವಿಡಿ ಪ್ಲೇಯರನ್ನು ಓಬವ್ವನಿಗೆ ಕೊಡದೇ ಬೇರೆ ದಾರಿಯಿರಲಿಲ್ಲ.
ಡಿವಿಡಿ ಪ್ಲೇಯರಿನೊಂದಿಗೆ ತನ್ನೂರಿಗೆ ಬಂದ ಓಬವ್ವನಿಗೆ ರಾಜ್ಯವನ್ನು ಗೆದ್ದು ತನ್ನ ಜೊತೆ ತೆಗೆದುಕೊಂಡು ಬಂದಷ್ಟೇ ಸಂತೋಷವಾಗಿತ್ತು. ಬಂದ ತಕ್ಷಣವೇ ಅದನ್ನು ಜೋಪಾನದಿಂದ ಹೊರತೆಗೆದು ತನ್ನ ಗುಡಿಸಲು ಬಾಗಿಲು ಮುಚ್ಚಿ ತಿರುಗಿಸಿ ಮುರುಗಿಸಿ ನೋಡಿದಳು. ನಂತರ ಮನೆಯಲ್ಲಿದ್ದ ಒಂದೇ ಒಂದು ಕುರ್ಚಿಯನ್ನು ಪ್ರಯಾಸದಿಂದ ಹೊತ್ತು ತಂದು ಮೂಲೆಯಲ್ಲಿಟ್ಟು ಅದನ್ನು ಚೆನ್ನಾಗಿ ತಿಕ್ಕಿ ತಿಕ್ಕಿ ಒರೆಸಿದಳು. ಆಮೇಲೆ ಅದರ ಮೇಲೆ ತನ್ನ ಸೀರೆಯನ್ನು ಮಡಚಿಟ್ಟಳು. ಆನಂತರ ಡಿವಿಡಿ ಪ್ಲೇಯರ್ ಮತ್ತು ಅದರ ರಿಮೋಟನ್ನು ಪ್ರತಿಷ್ಟಾಪಿಸಿದವಳು ಆ ಕುರ್ಚಿಯ ಮುಂದೆ ಕುಳಿತು ಸುಮಾರು ಹೊತ್ತು ಅದರೆಡೆಗೇ ದೃಷ್ಟಿ ನೆಟ್ಟುಕೊಂಡು ಕುಳಿತ್ತಿದ್ದಳು. ಆವತ್ತು ರುಕ್ಮಿಣಮ್ಮನ ಮನೆಗೂ ಹೋಗಲಿಲ್ಲ.
ಮಾರನೆಯ ದಿನ ಆ ಡಿವಿಡಿ ಪ್ಲೇಯರನ್ನು ಏನು ಮಾಡುವುದೆಂದು ಯೋಚಿಸತೊಡಗಿದಳು. ಟಿವಿಯಿಲ್ಲದ ಆ ಡಿವಿಡಿ ಯಾತಕ್ಕೂ ಬಾರದ ವಸ್ತುವಾದರೂ ಓಬವ್ವನಿಗೆ ಹಾಗೆನಿಸಲಿಲ್ಲ. ಹೇಗೋ ಏನೋ ಮಾಡಿ ಒಂದು ಟಿವಿಯನ್ನು ತಂದುಬಿಟ್ಟರೆ ತನ್ನಿಷ್ಟ ಬಂದ ರಾಜ್ಕುಮಾರು, ದೇವರ ಸಿನಿಮಾಗಳನ್ನು ನೋಡಬಹುದೆನಿಸಿತು. ಅದಕ್ಕಾಗಿಯೇ ಇರಬೇಕು ದೇವರು ತನಗಿದನ್ನು ಕರುಣಿಸಿರಬೇಕೆಂದು ಬಲವಾಗಿ ಓಬವ್ವನಿಗೆ ಅನಿಸತೊಡಗಿತು. ಊರಿಗೆ ಬಂದು ಎರಡು ದಿನವಾದರೂ ಓಬವ್ವ ಮನೆಬಿಟ್ಟು ಹೊರಬರಲಿಲ್ಲ. ಯಾರಾದರೂ ಡಿವಿಡಿ ಪ್ಲೇಯರ್ ಕದ್ದುಬಿಟ್ಟರೇ..? ಎಂಬ ಭಯ ಅವಳನ್ನು ಕಾಡತೊಡಗಿತ್ತು. ಹಾಗೆಯೇ ಮಗಳು ಕೊಟ್ಟಿದ್ದ  ರಾಜ್ಕುಮಾರ ಚಿತ್ರಗಳ ಸಿಡಿಗಳನ್ನೂ ಪ್ಲೇಯರಿನ ಮೇಲೆಯೇ ಇಟ್ಟಿದ್ದಳು. ತಾನು ಟಿವಿ ತಂದರೆ ಇದನ್ನೆಲ್ಲಾ ಹೇಗೆ ಫಿಕ್ಸ್ ಮಾಡುವುದು ಎಂಬ ಯೋಚನೆ ಬಂದರೂ ಮೇಲಿನಮನಿ ವೀರಭದ್ರನನ್ನು ಕರೆಸಿ ಎಲ್ಲಾ ರೆಡಿ ಮಾಡಿಸಿ ಬರೀ ಸ್ವಿಚ್ಚು ಹಾಕುವ ಹಾಗೆ ಮಾಡಿಕೊಂಡರಾಯಿತು ಎಂದು ತನ್ನನ್ನೇ ಸಮಾಧಾನ ಮಾಡಿಕೊಂಡಿದ್ದಳು.
ಮೂರನೆಯ ದಿನ ಮನೆಯಿಂದ ಹೊರಗೆ ಹೊರಟ ಓಬವ್ವ ಬಾಗಿಲ್ಲನ್ನು ಎರೆಡೆರೆಡು ಬಾರಿ ಎಳೆದೆಳೆದು ಭದ್ರವಾಗಿದೆ ಎಂಬುದನ್ನು ಖಾತ್ರಿಮಾಡಿಕೊಂಡಿದ್ದಳು. ಅದಕ್ಕೂ ಮುನ್ನ ಡಿವಿಡಿ ಪ್ಲೇಯರಿನ ಮೇಲೆ ಒಂದು ಬಟ್ಟೆ ಹೊದಿಸಿ ಅದರ ಮೇಲೆ ಒಂಚೂರು ಅರಿಶಿನ ಕುಂಕುಮ ಸಿಂಪಡಿಸಿದ್ದಳು.ಯಾರಾದರೂ ಬಂದರೆ ಏನೋ ದೇವರದ್ದು ಎಂದುಕೊಂಡು ಮುಟ್ಟದೆ ಇರಲಿ ಎಂದು ಹಾಗೆ ಮಾಡಿದ್ದಳು. ಆದರೆ ರುಕ್ಮಿಣಮ್ಮನ ಮನೆಗೆ ಕಾಲಿಡುತ್ತಿದ್ದಂತೆಯೇ ರುಕ್ಮಿಣಮ್ಮ ಓಬವ್ವ ಅದೇನ ಡಿವಿಡೀ ಪ್ಲೇಯರು ತಕ್ಕಬಂದಿದ್ದಿಯಂತಲ್ಲ..ನಿನ ಮಗ್ಳು ಫೋನು ಮಾಡಿದ್ಲು..ಎಲ್ಲಿ ತಕ್ಕಂಡೇ ಬರ್ನಿಲ್ಲಾ.. ಎಂದು ಬಿಟ್ಟಿದ್ದು ರುಕ್ಮಿಣಮ್ಮನಿಗೆ ಮಗಳ ಮೇಲೆ ಅಸಾಧ್ಯವಾದ ಕೋಪ ಬರಿಸಿಬಿಟ್ಟಿತ್ತು. ತಕ್ಕಬರವು ಅನ್ಕಂಡಿದ್ದಿ..ಮರ್ತೋದಿ..ನಾಳ ತಕ್ಕಂಬತ್ತೀನಿ.. ಹೇಗೋ ಸಾವರಿಸಿಕೊಂಡು ಉತ್ತರಕೊಟ್ಟಳು. ಮರಿಬ್ಯಾಡಕನವ್ವೋ..ನಾನು ಅದ್ಕಿಯ ನನ್ ಮಗನ್ನ ಕೈಲಿ ಒಂದೆರೆಡು ದೇವ್ರು ಪಿಚ್ಚರ್ದು ಕ್ಯಾಸೆಟ್ಟು ತರ್ಸಿವ್ನಿ..ಇಬ್ರು ಕುಂತ್ಕಂದು ನೋಡವು.. ಎಂದಾಗ ಓಬವ್ವನಿಗೆ ಹೇಗೇಗೊ ಆಯಿತು.ಆವತ್ತು ಇಡೀ ದಿನ ಯಾವ ಧಾರಾವಾಹಿಯ ಕಥೆಯೂ ಓಬವ್ವನಿಗೆ ತಟ್ಟಲಿಲ್ಲ.
ಆವತ್ತೇ ಕೊನೆ ಆಮೇಲಿನಿಂದ ರುಕ್ಮಿಣಮ್ಮನ ಮನೆ ಕಡೆಗೆ ತಲೆ ಹಾಕಿರಲಿಲ್ಲ.. ಎಲ್ಲಾದರೂ ದಾರಿಯಲ್ಲಿ ಸಿಕ್ಕಿಬಿಟ್ಟಾಳು ಎಂದು ನೋಡಿಕೊಂಡೆ ಓಡಾಡುತ್ತಿದ್ದಳು. ಆದರೂ ಅದ್ಯಾವ ಮಾಯೆಯಲ್ಲೋ ದಾರಿಯಲ್ಲಿ ಅದೊಂದು ದಿನ ರುಕ್ಮಿಣಮ್ಮನೇ ಎದುರಾಗಿಬಿಟ್ಟಿದ್ದಳು..ಆಗ ಓಬವ್ವ ಎರಡ್ಮೂರು ಬಾರಿ ಕೆಮ್ಮಿ ಯಾನ ಗೊತ್ತಿಲ್ಲಕವ್ವ..ಸ್ಯಾನೆ ಕೆಮ್ಮು..ಅದ್ಕೆ ಬಂದಿರ್ಲಿಲ್ಲ..ನಾಳೆಯಿಂದ ಬತ್ತೀನಿ..ವಯಸ್ಸಾದ್ಮ್ಯಾಲ ನಿಂಗೆ ಗೊತ್ತಲ್ಲವಾ.. ಎಂದು ಅವಳೆದುರು ಜೋರಾಗಿ ಕೆಮ್ಮಿ ಕೆಮ್ಮಿ ಅಲ್ಲಿಂದ ತಪ್ಪಿಸಿಕೊಂಡಿದ್ದಳು.
ಮೆಕ್ಯಾನಿಕ್ ರಂಗನ ಅಂಗಡಿಗೆ ಹೋದ ಓಬವ್ವ ಒಂದ್ ಟಿವಿ ಎಷ್ಟಾದ್ದಪ್ಪಾ.. ಎಂದು ವಿಚಾರಿಸಿದ್ದಳು. ರಂಗ ಯಾವುದೋ ಟಿವಿಯ ಹಿಂಭಾಗಕ್ಕೆ ತಲೆ ತುರುಕಿಕೊಂಡಿದ್ದವನು ತಲೆ ಹೊರಗೆ ಹಾಕಿ ಓಬವ್ವನನ್ನು ಒಂದೆರೆಡು ಕ್ಷಣ ದಿಟ್ಟಿಸಿ ಯಾರ್ಗೆಮ್ಮ..ಎಂದು ಕೇಳಿದ್ದನು. ಯ್ಯೋ ಯಾರ್ಗಾದ್ರ ನಿಂಗೇನಾಪ್ಪ..ಎಷ್ಟಾದದ್ದು ಯೋಳು..ನಂಗಿಯ ಕಣಪ್ಪ..ಬರ ವರ್ಷದಿಂದ ನನ್ನ ಅಳಿಯ ಮಕ್ಳು ಇಲ್ಗೇ ಬಂದ್ಬುಟ್ಟರಂತೆ..ಅದ್ಕೆ ಕಣ ಯೋಳಪ್ಪ.. ಎಂದಿದ್ದಳು, ಕೋಪವನ್ನು ತಡೇದುಕೊಂಡು. ಹೊಸದ ಹಳೇದಾ .. ರಂಗ ಮತ್ತೆ ಟಿವಿಯೊಳಕ್ಕೆ ತಲೆ ತುರುಕಿಸಿಕೊಳ್ಳುತ್ತ ಕೇಳಿದನು. ಹಳೆದಾದ್ರ ಸಾಕು ಕಣಪ್ಪ..ಚಂದಾಗಿ ಬಂದ್ರ ಸಾಕು.. ಹಂಗಾರೆ ಎರಡ್ಸಾವ್ರ ತಕ್ಕಂಬಾ ಸೂಪರ್ರಾಗಿರ ಟಿವಿ ಕೊಡ್ತೀನಿ..ಥೇಟು ಹೊಸದರಂಗೇ ಅದ.. ಟಿವಿಯೊಳಗಿಂದಲೇ ರಂಗ ಮಾತಾಡುತ್ತಿದ್ದದ್ದು ಓಬವ್ವನಿಗೆ ಟಿವಿಯೇ ಮಾತಾಡುತ್ತಿದೆ ಎನಿಸಿತ್ತು. ಒಸಿ ಕಮ್ಮಿ ಮಾಡ್ಕಪ್ಪಾ.. ಅಂದದ್ದಕ್ಕೆ , ಮೌ..ಇದೇನ್ ಕಳ್ಳೇಪುರಿ ಯಾಪಾರ ಅನ್ಕಂಡ್ಯಾ..ಚೌಕಾಸಿ ಮಾಡಕ..ಎರಡ್ಸಾವ್ರ ಅಂದ್ರ ಎರಡ್ಸಾವ್ರ..ಅದು ಈ ವಾರದ ಒಳ್ಗ ಬಂದ್ರೆ ಇಲ್ಲಾಂದ್ರೆ ಯಾರ ಬತ್ತಾರೋ ಅವ್ರಿಗೆ ಕೊಟ್ಬಿಡ್ತೀನಿ.. ಎಂದು ಟಿವಿಯೊಳಗಿಂದಲೇ ಗದರಿಕೊಂಡನು. ಸರಿ ಕಣಪ್ಪಾ ..ಯಾರ್ಗೂ ಕೊಡಕೋಬ್ಯಾಡ..ನಾನೆ ದುಡ್ಡು ತಕ್ಕಂಬತ್ತೀನಿ.. ಎಂದು ಹೇಳಿ ಒಂದು ನಿಮಿಷವೂ ಅಲ್ಲಿ ನಿಲ್ಲದೆ ಬರಬರನೇ ತರಗೆಲೆಯಂತೆ ಮನೆಗೆ ಓಡಿಬಂದಿದ್ದಳು. ಮನೆಯಲ್ಲಿದ್ದ ಹಣವನ್ನೆಲ್ಲ ಓಟ್ಟಾಗಿಸಿ ನೋಡಿದಾಗ ಅಲ್ಲಿದ್ದದ್ದು ಏಳುನೂರು ರೂಪಾಯಿಗಳು ಮಾತ್ರ. ಉಳಿದ ಸಾವಿರದಿನ್ನೂರೈವತ್ತು ರೂಪಾಯಿಗಳಿಗೆ ಏನು ಮಾಡುವುದು ಎಂದು ಯೋಚಿಸತೊಡಗಿದಳು.ಕೊನೆಗೆ ನಾಳೆ ಬೆಳಿಗ್ಗೆಯೇ ಕರಿಬಸಪ್ಪನ ಹತ್ತಿರಹೋಗಿ ಸಾಲ ಕೇಳುವುದೆಂದು ನಿರ್ಧರಿಸಿದಳು.
ಮಾರನೆಯ ದಿನ ಬೆಳಿಗ್ಗೆಯೇ ಕರಿಬಸಣ್ಣನ ಮನೆ ಕಡೆಗೆ ಹೊರಟಳು. ದಾರಿಯುದ್ದಕ್ಕೂ ಈಗ ಕರಿಬಸಣ್ಣನಿಗೆ ಏನು ಹೇಳುವುದು ಎಂಬ ಯೋಚನೆಯೇ ಕಾಡತೊಡಗಿತ್ತು. ಏಕಾಏಕಿ ಅಷ್ಟೊಂದು ದುಡ್ಡು ನಿನಗ್ಯಾಕೆ ಎಂದರೆ ಏನು ಮಾಡುವುದು..ಕರಿಬಸಣ್ಣನ ಮನೆ ಬರುವವರೆಗೂ ಏನು ಕಾರಣಕೊಡುವುದೆಂದು ಎಷ್ಟು ಯೋಚಿಸಿದರೂ ತೋಚಲಿಲ್ಲ. ಕರಿಬಸಣ್ಣ ಓಬವ್ವಳನ್ನು ನೋಡಿದಾಕ್ಷಣ ಒಂದು ಪರಿಚಯದ ನಗೆ ನಕ್ಕು, ಬಾಮ್ಮೋ..ಟಿವಿ ತಕ್ಕತ್ತಿದ್ದೆಯಂತೇ..ಅದೇನು ನಿನ್ನಳಿಯ ಮಕ್ಳು ಇಲ್ಲಿಗೆ ಬಂದಾರಂತೆಲ್ಲಾ..ಏನು ವಿಷಯ.. ಎಂದು ಕೇಳಿಯೇ ಬಿಟ್ಟನು. ಓಬವ್ವನಿಗೆ ಒಂದು ಘಳಿಗೆ ಆಶ್ಚರ್ಯವಾದರೂ ಇದು ಮೆಕಾನಿಕ್ ರಂಗನ ಕರಾಮತ್ತು ಎನ್ನುವುದನ್ನು ಕ್ಷಣಾರ್ಧದಲ್ಲಿ ಅರ್ಥ ಮಾಡಿಕೊಂಡು ಒಂದು ಪೆಚ್ಚು ನಗೆ ನಕ್ಕಳು. ಅಲ್ಲ ಕಣವ್ವಾ..ಈಗ ಟಿವಿ ತಕ್ಕಂಡೋಯ್ತೀಯ ಅನ್ಕ..ಅದ್ಕ ಕೇಬಲ್ ಬ್ಯಾಡವಾ? ತಿಂಗಳಿಗಾ ಏನಿಲ್ಲಾಂದ್ರೂ ನೂರುಪಾಯಿ..ಆಮ್ಯಾಕೆ ಕರೆಂಟು ಬಿಲ್ಲು ಬ್ಯಾರೆ ಜಾಸ್ತಿಯಾಯ್ತದ..ನಿನ್ ಮಗಳು ಬಂದ ಮ್ಯಾಲ ಅವರ ಪಾಡು..ಅವ್ರು ಬರಾಗಂಟ ನೀನೆ ಮೆಂಟೇನ್ ಮಾಡಬೇಕಲ್ಲಾ..ದುಡ್ಡು ಎಲ್ಲಿಂದ ಮಾಡೀಯಾ..? ಎಂದವನು ಮಗಳಿಗೆ ಯೋಳು ತಿಂಗ್ಳು ಕಳಿಸ್ತಿದ್ದದ್ದಕ್ಕಿನ್ನ ಒಸಿ ಜಾಸ್ತಿ ಕಳಿಸಕಾ.. ಎಂದು ಮುಂದುವರೆಸಿದನು. ಓಬವ್ವ ಇದಾವುದನ್ನೂ ಯೋಚಿಸಿಯೇ ಇರಲಿಲ್ಲ. ಕರಿಬಸಣ್ಣನ ಮಾತಲ್ಲೂ ಸತ್ಯ ಇದೆ ಎನಿಸಿತು. ಇಷ್ಟಕ್ಕೊ ಅದೆಷ್ಟು ಕ್ಯಾಸೆಟ್ಟು ತೆಗೆದುಕೊಂಡು ಹೋಗಿ ನೋಡಕಾದದ್ದು..ದಿಟ! ಟಿವಿ ತಕ್ಕಂಡ್ರೆ ಬೇಕಾದ ಪಿಚ್ಚರ್ರು ನೋಡಬಹುದು..ಮನೇಲೇ ಕುಂತ್ಕಂಡು ಧಾರಾವಾಯಿಗಳ್ನೂ ನೋಡಬೌದು..ಸಾಯ ಕಡೆಗಾಲದಲ್ಲಿ ಇಸ್ಟೂ ಸುಕ ಪಡದೆರಾ ಅದೆಂತಾ ಬಾಳು..? ಎಂದುಕೊಂಡವಳು ಅಯ್ಯಾ ಬುಡಪ್ಪಾ..ಈಗೇನ್ಮಾಡಕಾದದ್ದು.. ಎಂದು ಸ್ವಲ್ಪಹೊತ್ತು ಅವನನ್ನೇ ನೋಡಿ, ಬಸಣ್ಣಾ..ಅದ್ಕೆ ಒಂಚೂರು ಕಾಸ್ ಬೇಕಿತ್ತು ಕಣಪ್ಪಾ..? ಎಂದು ಅವನನ್ನೇ ನೋಡುತ್ತಾ ನಿಂತಳು. ಮೊನ್ನೇ ತಾನೇ ಕಳ ಕೀಳಿಸ್ಬಿಟ್ಟೆ ಓಬವ್ವ..ಕಾಸಿಲ್ಲ..ಐನೂರ ಆರ್ನೂರಾದ್ರೆ ಕೊಡ್ತೀನಿ ನೋಡು..ಸಾವ್ರಗಟ್ಟಲೇ ಬೇಕಾದ್ರ ಇನ್ನೇಡು ತಿಂಗ್ಳು ಕಾಯ್ಬೇಕಾಯ್ತದಾ.. ಎಂದವನು ಓಬವ್ವನ ಪ್ರತಿಕ್ರಿಯೆಗೂ ಕಾಯದೆ ಲೇ ಇವ್ಳೇ ಓಬವ್ವಂಗ ಆರ್ನೂರುಪಾಯಿಟ್ಟಿದ್ದೀನಿ ಅಲ್ಲಿ ಕೊಡು.. ಎಂದು ಅದೇ ವೇಗದಲ್ಲಿ ವೋಗು ಓಬವ್ವ ಈಸ್ಕ.. ಎಂದನು.ಓಬವ್ವ ಮುಂದಕ್ಕೆ ಮಾತಾಡಲಿಲ್ಲ ಅಥವಾ ಕರಿಬಸವಣ್ಣ ಅದಕ್ಕೆ ಅನುವು ಮಾಡಿಕೊಡಲಿಲ್ಲಎಲ್ಲಾ ಮೊದಲೇ ಮಾತಾಡಿಕೊಂಡಂತಿತ್ತು.
ಮನೆಯಲ್ಲಿ ಹಣವನ್ನೆಲ್ಲಾ ಒಟ್ಟುಗೂಡಿಸಿ ಹತ್ತಿಪ್ಪತ್ತು ಸಾರಿ ಲೆಕ್ಕ ಹಾಕಿದರೂ ಅದು ಎರಡುಸಾವಿರ ಮುಟ್ಟಲಿಲ್ಲ. ಈಗೇನು ಮಾಡುವುದು? ಮಗಳಿಗೊಂದು ಫೋನು ಮಾಡಿಸುವುದಾ..?ತನ್ನ ಹುಚ್ಚಾಟಕ್ಕೆ ಮಗಳು ಬರೀ ನಗುವುದಿಲ್ಲ ಬೈಯ್ದು ಮಂಗಳಾರತಿ ಎತ್ತೇ ಎತ್ತುತ್ತಾಳೆ..ಅವಳಿಗೇನು ಗೊತ್ತು ನನ್ನ ಕಷ್ಟ..ಒಂಟಿಯಾಗಿ ಅವರಿವರ ಮನೇಗೋಗಿ ಅವರ ಹಾಕಿದ್ದ ನೋಡ್ಕಂದು ಬರ್ಬೇಕು...ಎಂದು ಮಗಳಿಗೆ ಮನಸಲ್ಲಿ ಬೈದುಕೊಂಡಳು.
ಮೂರು ದಿನವಾದರೂ ಓಬವ್ವನ ಕೈಯಲ್ಲಿ ಹಣ ಹೊಂದಿಸಲು ಸಾಧ್ಯವಾಗಲಿಲ್ಲ.ಅವನು ಬೇರೆ ಯಾರಿಗಾದರೂ ಟಿವಿ ಮಾರಿಬಿಟ್ಟನಾ ಹೇಗೆ..?ಯಾವುದಕ್ಕೂ  ಒಂದ್ಸಾರಿ ಹೋಗಿ ನೋಡಿಕೊಂಡು ಬಂದು ಬಿಡಬೇಕು ಎಂದುಕೊಂಡ ಮೇಲೆ ಓಬವ್ವ ಒಂದು ಘಳಿಗೆಯನ್ನೂ ವೇಸ್ಟ್ ಮಾಡಲಿಲ್ಲ.ಬರಬರನೇ ತರಗೆಲೆಯಂತೆ ಹೊರಟೇಬಿಟ್ಟಳು.ಅಂಗಡಿಯ ಮುಂದೆ ಕರಿಬಸವಪ್ಪ ಬೀಡಿ ಸೇದುತ್ತಾ ಆರಾಮವಾಗಿ ರಂಗನೊಂದಿಗೆ ಮಾತಾಡುತ್ತ ಕುಳಿತಿದ್ದ. ಯಥಾಪ್ರಕಾರ ಟಿವಿಯೊಳಗೆ ಮುಖ ತೂರಿಸಿಕೊಂಡಿದ್ದ ರಂಗ ಟಿವಿಯೇ ಜೀವಂತವಾಗಿ ಮಾತಾಡುತ್ತಿದೆ ಎಂಬ ಭ್ರಮೆ ತುಂಬಿಸುವಲ್ಲಿ ಯಶಸ್ವಿಯಾಗಿದ್ದ. ಯಾನ ಓಬವ್ವಾ..ಇನ್ನೂ ಟಿವಿ ತಕ್ಕಳ್ನಿಲವಾ.... ಎಂದ. ಇಲ್ಲಾ ಕಣಪ್ಪೋ..ಮಗಳು ಬಾಕಿ ಹಣ ಕಳಿಸ್ತೀನಿ .. ಅಂದವ್ಳೇ..ಅದ್ಕೆ ಕಾಯ್ತೋವ್ನಿ..ಎಂದು ಸುಳ್ಳು ಹೇಳಿದಳು.ಅದ್ಕಿಯ ವಿಚಾರಿಸ್ಕೊಂಡೋಗವು ಅಂತ ಬಂದಿ ಕಣಪ್ಪ..ಇಂವ ಯಾರಿಗಾದ್ರೂ ಮಾರ್ಬುಟ್ನಾ ಹೆಂಗೆ ಅಂತ.. ಎಂದು ರಂಗನ ಕಡೆ ನೋಡಿದಳು. ಅದೆಂಗ್ ಮಾರಿಬುಟ್ಟನು..ಲೇ ರಂಗ ಮಾರ್ಬುಟ್ಯಾ ಎಂದು ಜಬರ್ದಸ್ತಿನಲ್ಲಿ ಕೇಳಿದಕ್ಕೆ ರಂಗ ತಲೆಯೆತ್ತಿ ಓಬವ್ವನ ಕಡೆ ನೋಡಿ ಇಲ್ಲಾ ಕಣಣ್ಣೋ..ಈವಮ್ಮಂಗೆ ಕಾಯ್ದಿಟ್ಟುಕೊಂಡೀನಿ..ಆದ್ರೂ ಎಷ್ಟ್ ದಿನ ಅಂತ ಕಾಯಕ್ಕಾದ್ದು ಯೋಳಣ್ಣ..ಟಿವಿಯೇನ್ ನಂದಾ..ಮೇಗಲ್ಮನಿ ರಾಜಣ್ಣಂದು..ಅಂವ ದಿನಾ ಹೋಗಬರಾ ಲೋ ಮಾರ್ದ್ಯಾ..ಅಂತ ಕೇಳಿ ಪ್ರಾಣ ತಿಂತವ್ನಾ..? ಎಂದು ತನ್ನ ಮಾತು ಮುಗಿಯುವುದರೊಳಗೆ ಮತ್ತೇ ಟಿವಿಯೊಳಗೆ ತೂರಿಕೊಂಡನು. ಅದೂ ಸರಿ ಅನ್ನು..ಓಬವ್ವ ನಿನ ಮಗಳಿಗೇ ಯೋಳು..ಅವ್ಳಿಗೂ ಬುದ್ದಿಲ್ಲಾ ಕಣ ತಗವ್ವ..ಅಲ್ಲಾ ಟಿವಿ ಬದಲ್ಗೆ ಒಂದ್ ಮೊಬೈಲ್ ಫೋನ್ ತಕ್ಕೋಟ್ಟಿದ್ರಾ ಅವ್ವನ್ನ ಆವಾಗಾವಾಗ ಇಚಾರಿಸ್ಕ ಬಹುದಿತ್ತಲ್ಲವಾ..ಟಿವಿ ನೋಡ್ಕಂದು ಏನ್ಮಾಡದು.. ಎಂದು ಹೇಳಿದನು.
ವಾಪಸ್ಸು ಮನೆಗೆ ಬರುವವರೆಗೂ ಕರಿಬಸಣ್ಣನ ಮಾತುಗಳು ಅವನೇ ಬಂದು ಕಿವಿಯಲ್ಲಿ ಪದೆಪದೇ ಹೇಳುತ್ತಿದ್ದಾನೋ ಎನ್ನುವಷ್ಟರ ಮಟ್ಟಿಗೆ ಪ್ರತಿಧ್ವನಿಸುತ್ತಿತ್ತು.ಹೌದಲ್ಲ ಮೊಬೈಲಿದ್ದರೆ ಆವಾಗಾವಾಗ ಮಗಳಜೊತೆ ಮಾತಾಡಬಹುದಲ್ಲ..ಕಷ್ಟಸುಖ ಹೇಳಿಕೊಳ್ಳಬಹುದು..ಎಂಬಾಲೋಚನೆಯೂ ಬಂದುಹೋಯಿತು. ಸೀದಾ ಮನೆಗೆ ಬಂದವಳು ದೇವರ ಫೋಟೊ ಇಟ್ಟಿದ್ದ ಜಾಗವನ್ನು ತೆರವುಗೊಳಿಸಿದಳು.ಅದರ ಮೇಲಿದ್ದ ಮಣ್ಣನ್ನು ಬಗೆದುಹಾಕಿದಳು.ಕೆಳಗೆ ಹೂತಿದ್ದ ತಾಮ್ರದ ಕುಡಿಕೆಯನ್ನು ಹೊರತೆಗೆದಳು. ಅದರಲ್ಲಿದ್ದದ್ದನ್ನು ನೆಲೆಕ್ಕೆ ಸುರುವಿದಳು. ಒಂದು ಮೂಗು ಬಟ್ಟು, ಎರೆಡು ಬೆಳ್ಳಿಯ ಗೆಜ್ಜೆಗಳು, ಒಂದು ತಾಳಿ ಇತ್ತು. ಎಲ್ಲವನ್ನು ಗಿರವಿ ಇಟ್ಟರೆ ಎರಡು ಸಾವಿರದ ಮೇಲೆಯೇ ಬರಬಹುದು..ಬರೀ ಎರಡುಸಾವಿರ ತೆಗೆದುಕೊಳ್ಳಬೇಕು..ಎಂದು ಮನಸ್ಸಿನಲ್ಲಿಯೇ ಗಟ್ಟಿಯಾಗಿ ನಿರ್ಧರಿಸಿಕೊಂಡವಳು, ಅಷ್ಟನ್ನೂ ಜೋಪಾನವಾಗಿ ಒಂದು ಬಟ್ಟೆಗೆ ಗಂಟು ಕಟ್ಟಿಕೊಂಡು ಒಮ್ಮೆ ಡಿವಿಡಿ ಪ್ಲೇಯರಿನ ಕಡೆಗೊಮ್ಮೆ ನೋಡಿ ಬರಬರನೇ ಸೇಠು ಅಂಗಡಿಯ ಕಡೆಗೆ ಹೋಗಲು ನಿರ್ಧರಿಸಿ ಮನೆಯಿಂದ ಹೊರಗೆ ಬಂದವಳು ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ಬಿಟ್ಟಳು. ಎದುರಿಗೆ ರುಕ್ಮಿಣಮ್ಮ ಓಬವ್ವಾ ಏನು ಕಾಣಂಗೇ ಇಲ್ಲಾ ಉಸಾರಾ..ನಾನು ಅದ್ಕಿಯೇ ನನ್ನ ಮಗಂಗೆ ಯೋಳಿದೆ..ಹೋಗಿ ಮನೆಯತ್ರ ನೋಡ್ಕಂದು ಬಾಂತ..ಅಂವ ಬಂದಿದ್ದಾಗ ನೀ ಇರ್ನಿಲ್ವಂತಾ..ಏನಾತೊ ಏನಾಂತ ಗಾಬ್ರಿಯಾಗ್ಬಿಟ್ಟಿದೆ ಕಣವ್ವಾ..ಚೆಂದಾಗಿದ್ದೀಯ ತಾನೆ..ಪಾಪ ಮಗ್ಳು ಬ್ಯಾರೆ ದೂರವ್ಳೇ..ಅದ್ಕೆ ನಾನೇ ಬಂದೇ.. ಎಂದಳು. ಓಬವ್ವಂಗೆ ಏನು ಹೇಳಬೇಕೆಂದು ತೋಚಲಿಲ್ಲ.ಆದರೂ ಹೇಗೊ ಸಾವರಿಸಿಕೊಂಡು ಯಾನ ಈಗ ಸಲ್ಪ ಹಗೂರಾಗದೆ..ಕಣವ್ವಾ.. ಎಂದಳು. ಅಷ್ಟಿದ್ರಾ ಸಾಕು ಬುಡವ್ವಾ.. ಎಂದ ರುಕ್ಮಿಣಮ್ಮ ಮಾತಿಗೆ ಸುರುವಚ್ಚಿಕೊಂಡಳು.ನಿಂತುಹೋದ ಧಾರಾವಾಹಿಯ ಕಥೆಗಳನ್ನೂ ಪೂರ್ಣ ಮಾಡಿದಳು. ಊರಿನ ವಿಷಯಗಳನ್ನು ಹೇಳಿದಳು. ಮಗನು ಹೊಸ ಬೈಕು ಕೊಂಡದ್ದನ್ನು ಹೇಳಿದಳು. ತನಗೂ ಹುಷಾರು ತಪ್ಪಿದ್ದನ್ನು ಹೇಳಿದಳು.ಇಬ್ಬರು ಮುದುಕಿಯರೂ ನಿಂತುಕೊಂಡೇ ಸುಮಾರು ಹೊತ್ತು ಹರಟಿದರು. ಆಮೇಲೆ ಎಂಗೋ ಸಂಜೆಗೆ ಬತ್ತಿಯಲ್ಲವ್ವಾ ಬಾ..ಈವತ್ತು ರಾಜ್ಕುಮಾರದು ಬಬ್ರುವಾಹನ ಪಿಚ್ಚರದೆ..ನಿನ್ನೂ ನೋಡಿದಂಗಾಯ್ತದೆ..ಹಂಗೆ ಅದ್ನೂ ಯೋಳ್ದಂಗಾಯ್ತದೆ ಅಂತ ಬಂದಿ.. ನಾನು ಬತ್ತೀನಿ.. ಎಂದು ಹೇಳಿದ ರುಕ್ಮಿಣಮ್ಮ ತನ್ನ ಮನೆ ಕಡೆ ಮುಖ ಮಾಡಿದಳು. ಯಾಕೋ ಇಷ್ಟು ಪ್ರೀತಿ ತೋರಿಸುವ ರುಕ್ಮಿಣಮ್ಮನಿಗೆ ತಾನು ಮೋಸ ಮಾಡುತ್ತಿದ್ದೇನೆ ಎನಿಸಿತು ಓಬವ್ವನಿಗೆ. ತಾನೇ ಮನೆಯಲ್ಲಿ ಕುಳಿತು ಟಿವಿ ನೋಡುವಂತಾದರೆ ನೋಡಿದ ಮೇಲೆ ಅದರ ಬಗ್ಗೆ ಯಾರೊಂದಿಗೆ ಮಾತಾಡುವುದು ಎನಿಸಿತು.ಇಷ್ಟು ದಿನ ಬರೀ ಧಾರಾವಾಹಿ ಸಿನಿಮಾಗಳಷ್ಟೇ ಮಜಾ ಕೊಡುತ್ತಿರಲಿಲ್ಲ. ನೋಡಿದ ಮೇಲೆ ಅದರ ಬಗ್ಗೆ ಆಡುವ ಮಾತುಗಳು ಬೈಗುಳಗಳೂ ಹೆಚ್ಚು ಪ್ರಭಾವ ಬೀರಿದ್ದು, ಅವುಗಳ ಪಾತ್ರವನ್ನು ಇನ್ನಷು ಜೀವಂತ ಮಾಡಿದ್ದು ಎನ್ನುವ ಸತ್ಯ ಓಬವ್ವನಿಗೆ ಮಿಂಚಿನಂತೆ ಹೊಳೆಯಿತು.ಓಬವ್ವ ಮುಂದೆ ಏನನ್ನೂ ಯೋಚಿಸಲಿಲ್ಲ..ಆಗಲೆ ಮೂರ್ನಾಲ್ಕು ಮರು ದೂರ ಸಾಗಿದ್ದ ರುಕ್ಮಿಣಮ್ಮನನ್ನು ಕೂಗಿ ಕರೆದವಳು, ಒಳಹೋಗಿ ಡಿವಿಡಿ ಪ್ಲೇಯರನ್ನು ತೆಗೆದುಕೊಂಡು ಬಂದು ಅವಳ ಮುಂದೆ ಹಿಡಿಯುತ್ತ  ಸಧ್ಯ ನೀನಾಗೇ ಬಂದಿದ್ದಯ್..ಹಂಗೆ ಇದ್ನೂ ತಗಂಡೋಗವ್ವ..ನಂಗೆ ಎತ್ಕಂಡು ಅಷ್ಟು ದೂರ ಬರಕ್ಕಾಗಲ್ಲಾ..ಎಂದಳು.