Friday, April 12, 2013

ತೆರೆಯ ಹಿಂದೆ...

ದ್ವೀಪ ಚಿತ್ರದ ಎಲ್ಲಾ ತಯಾರಿಯಾಗಿತ್ತು. ಅದರ ಬರಹದ ಕೆಲಸವೆಲ್ಲಾ ತೃಪ್ತಿಕರವಾಗಿ ಬಂದಿತ್ತು. ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಮಳೆಯ ಅವಶ್ಯಕತೆ ಅಗತ್ಯವಿತ್ತು. ಯಾಕೆಂದರೆ ದ್ವೀಪ ಚಿತ್ರದಲ್ಲಿ ಮಳೆ ಒಂದು ಪ್ರಮುಖವಾದ ಭಾಗ ಎನ್ನಬಹುದು. ಹಾಗಾಗಿ ಚಿತ್ರೀಕರಣವನ್ನು ಆಗಸ್ಟ್ ತಿಂಗಳಿನಿಂದ ಪ್ರಾರಂಭಿಸುವ ಯೋಜನೆಹಾಕಿ ಎಲ್ಲ ತಂತ್ರಜ್ಞರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಆಗಸ್ಟ್ ತಿಂಗಳಲ್ಲಿ ಸಿದ್ಧವಾಗಿರುವಂತೆ ಹೇಳಿಯೂ ಆಗಿತ್ತು. ಆದರೆ ಅಷ್ಟರಲ್ಲೇ ಡಾ.ರಾಜ್ ಕುಮಾರ್ ರವರ ಅಪಹರಣವಾಯಿತು. ಮತ್ತದು ಸುಲಭಕ್ಕೆ ಮುಗಿಯದೆ ನೂರೆಂಟು ದಿನಗಳವರೆಗಿನ ಜಗ್ಗಾಟವಾಯಿತು. ಪ್ರಹಸನ ಸುಖಾಂತ್ಯವಾದರೂ ಮಳೆಗಾಲ ಮುಗಿದುಹೋಗಿದ್ದರಿಂದ ಚಿತ್ರೀಕರಣವನ್ನು ಮತ್ತೆ ಪ್ರಾರಂಭಿಸಲು ಮತ್ತೆ ಮಳೆಗಾಲವನ್ನು ಕಾಯುವ ಸಂದರ್ಭ ಚಿತ್ರತಂಡಕ್ಕೆ ಎದುರಾಯಿತು.
ಗಿರೀಶ್ ಕಾಸರವಳ್ಳಿಯವರು ತಮ್ಮ ತಬರನ ಕಥೆ ಚಿತ್ರ ಮಾಡುವಾಗ ಅದರ ಚಿತ್ರಕಥೆ ಆದ ಮೇಲೆ ಅದನ್ನು ಅವಲೋಕನಕ್ಕೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರಿಗೆ ಕೊಟ್ಟಾಗ ಓದಿ ಖುಷಿಯಾದ ಪೂಚಂತೆಯವರು ಚಿತ್ರಕ್ಕೆ ನಾನೇ ಸಂಭಾಷಣೆ ಬರೆಯುತ್ತೇನೆ ಎಂದರಂತೆ. ಖುಷಿಯಾದ ಕಾಸರವಳ್ಳಿಯವರು ಆ ಜವಾಬ್ದಾರಿಯನ್ನು ಅವರಿಗೆ ವಹಿಸಿದರು.ದಿನಗಳು ಕಳೆದವು. ಪೂಚಂತೆಯವರು ಕೇಳಿದಾಗಲೆಲ್ಲಾ ಈವತ್ತು ಬರೆಯುವೆ, ನಾಳೆ ಬರೆಯುವೆ ಎನ್ನುತ್ತಲೇ ಹೋದರು.ಚಿತ್ರೀಕರಣದ ಎಲ್ಲಾ ಸಿದ್ಧತೆ ಮುಗಿದರೂ ಸಂಭಾಷಣೆ ಮಾತ್ರ ಸಿದ್ಧವಾಗಿಲ್ಲ. ಗಿರೀಶರವರು ಹೋದಾಗಲೆಲ್ಲಾ 'ನಾಳೆ ಬರೆಯುತ್ತೇನೆ..ಈಗ ಮೀನು ಹಿಡಿಯಲು ಹೋಗಬೇಕು..ತೋಟದಲ್ಲಿ ಕೆಲಸವಿದೆ ಎಂದೆಲ್ಲಾ ಹೇಳುವುದನ್ನು ಮುಂದುವರೆಸಿದಾಗ ಕಾಸರವಳ್ಳಿಯವರಿಗೆ ದಿಕ್ಕೇ ತೋಚದಂತಾಯಿತಂತೆ. ಕೊನೆಗೆ ಬೇರೆ ದಾರಿ ಕಾಣದೆ ತಾವೇ ಚಿತ್ರದ ಸಂಭಾಷಣೆ ಬರೆದು ಅದನ್ನು ಪೂಚಂತೇಯವರ ಮುಂದಿಟ್ಟಾಗ ಅದನ್ನು ಓದಿದ ಪೂಚಂತೇ ಅದರ ಮೇಲೆ 'ಸಂಭಾಷಣೆಯನ್ನ ಪೂರ್ತಿ ನೀವೇ ಬರೆಯಬಹುದು' ಎಂದು ಬರೆದುಕೊಟ್ಟರಂತೆ.
 ನಾನು ಚಿತ್ರವೊಂದಕ್ಕೆ ಚಿತ್ರಕಥೆ ಬರೆಯುತ್ತಿದ್ದೆ. ಅದೊಂದು ಮಹಿಳಾಪ್ರಧಾನ ಚಿತ್ರ. ಕಥೆ ಚೆನ್ನಾಗಿತ್ತು. ನಾಯಕಿಯ ಕಡೆಯವರೇ ನಿರ್ಮಾಪಕರೂ ಆಗಿದ್ದರು. ಸಂಪೂರ್ಣ ಚಿತ್ರಕಥೆ ಮುಗಿದ ಮೇಲೆ ನಿರ್ಮಾಪಕರು ಮತ್ತು ನಾಯಕಿಯ ಮುಂದೆ ಅದನ್ನು ಸಾದರ ಪಡಿಸಿದೆ. ನಾಯಕಿ ಖುಷಿಯಾದರು. ಆಮೇಲೆ ಅವರೊಂದು ಸಲಹೆ ಕೊಟ್ಟರು. ಅವರು ಹಿಂದಿ ಚಿತ್ರವೊಂದರ ನೃತ್ಯದ ದೃಶ್ಯಕ್ಕೆ ಮಾರುಹೋಗಿದ್ದರು.ಹಾಗಾಗಿ ಆ ದೃಶ್ಯವನ್ನು ಹಗಲು ರಾತ್ರಿ ಅಭ್ಯಾಸ ಮಾಡಿಬಿಟ್ಟಿದ್ದರು. ಅದನ್ನು ನನಗೆ ಚಿತ್ರದಲ್ಲಿ ಯಾವುದಾದರೂ ಒಂದು ಮೂಲೆಯಲ್ಲಿ ಸೇರಿಸುವಂತೆ ಒತ್ತಾಯ ಮಾಡತೊಡಗಿದರು. ನನಗೀಗ ಪೀಕಲಾಟಕ್ಕಿಟ್ಟುಕೊಂಡಿತು. ಸಂದರ್ಭ ಸರಿಯಿಲ್ಲದೆ ಅದೇಗೆ ಸುಖಾ ಸುಮ್ಮನೆ ಒಂದು ಅನಾವಶ್ಯಕ, ಕಥೆಗೆ ಪೂರಕವಲ್ಲದ ದೃಶ್ಯ ವನ್ನ ಸೇರಿಸುವುದು. ನಾನು ಖಡಾಖಂಡಿತವಾಗಿ ಸಾಧ್ಯವಿಲ್ಲ ಎಂದುಬಿಟ್ಟೆ. ಆದರೆ ಆಕೆ ಅಷ್ಟಕ್ಕೇ ಬಿಡಲಿಲ್ಲ. ಸೇರಿಸಲೆಬೇಕೆ೦ದು ಒಂದೆ ಹಠಕ್ಕೆ ಬಿದ್ದರು. ನಾನು ಒಪ್ಪಲಿಲ್ಲ. ಹಾಗಾಗಿ ಆ ಚಿತ್ರದಿಂದ ಹೊರಬೀಳಬೇಕಾಯಿತು.
ನಮ್ಮ  ಹಿರಿಯ ನಿರ್ದೇಶಕರೊಬ್ಬರ ಸಿನೆಮಾ ಅದು. ನಿರ್ಮಾಪಕರು ತಾನು ಚಿಕ್ಕದಾದರೂ ಸರಿ ಒಂದು ಪಾತ್ರ ಮಾಡೇ ಮಾಡುತ್ತೇನೆಂದು ಹಠಕ್ಕೆ ಬಿದ್ದರಂತೆ. ನಿರ್ದೇಶಕರಿಗೆ ವಿಧಿಯಿಲ್ಲ. ಹಾಗಂತ ಪಾತ್ರ ಕೊಟ್ಟರೆ ಆ ಪಾತ್ರವನ್ನೂ, ಆ ಮೂಲಕ ಸಿನೆಮಾವನ್ನೂ ಹಾಳು ಮಾಡುವುದು ಗ್ಯಾರಂಟೀ. ಹಾಗಾಗಿ ಯಾವುದಕ್ಕೂ ಇರಲಿ ಎಂದು ಒಂದು ಪೋಲಿಸ್ ಪೇದೆಯ ಪಾತ್ರವನ್ನ ನಿರ್ಮಾಪಕರಿಗೆ ಕೊಟ್ಟರು. ಚಿತ್ರದಲ್ಲಿ ಒಂದು ಸಾವಾಗುತ್ತದೆ. ಅದನ್ನು ಮಹಜರು ಕಾರ್ಯದಲ್ಲಿ ಬರುವ ಪೋಲಿಸ್ ಪೇದೆಯ ಪಾತ್ರ ಅದು. ಯಾವುದೇ ಸಂಭಾಷಣೆಯಿರಲಿಲ್ಲ.  ನಿರ್ದೇಶಕರು ತಾನು ಗೆದ್ದೆ ಎಂದು  ಬೀಗಿದರು. ನಿರ್ಮಾಪಕರು ತಾವು ಕೂಡ ಒಂದು ಪಾತ್ರವನ್ನ ಮಾಡುತ್ತಿದ್ದೇನೆಂದು ತನ್ನ ಗೆಳೆಯರಿಗೆಲ್ಲಾ ಹೇಳಿದಾಗ ಅದ್ಯಾರೋ ಅವರ ಆತ್ಮೀಯರು ಪೋಲಿಸ್ ಪೇದೆಯ ಪಾತ್ರ ಚಿಕ್ಕದಾಯಿತು. ಅದಕ್ಕಿಂತ ದೊಡ್ಡ ಪಾತ್ರ ಮಾಡು...ಎಂದು ಸಲಹೆ ಕೊಟ್ಟರು. ನಿರ್ಮಾಪಕರು ಪೇದೆಗಿಂತ ದೊಡ್ಡ ಪಾತ್ರವೆಂದರೆ ಇನ್ಸ್ ಪೆಕ್ಟರ್ ಅದಕ್ಕಿಂತ ದೊಡ್ಡದೆಂದರೆ ಎಸಿಪಿ ಎಂದು ಅರ್ಥೈಸಿಕೊಂಡವರೇ ಆ ಸಮವಸ್ತ್ರವನ್ನು ಅಂದರೆ ಎ.ಸಿ.ಪಿ. ಸಮವಸ್ತ್ರವನ್ನು ಬಾಡಿಗೆಗೆ ತರಿಸಿ ಆ ದೃಶ್ಯವನ್ನು ನಿರ್ದೇಶಕರ ಅಸಹನೆಯ ನಡುವೆಯೂ ಚಿತ್ರೀಕರಿಸಿಬಿಟ್ಟರು. ಒಂದು ಚಿಕ್ಕ ಹಳ್ಳಿಯಲ್ಲಿ ಸಾಮಾನ್ಯ ಸಾವೊಂದರ ಮಹಜರು ಕಾರ್ಯವನ್ನ ಎ.ಸಿ.ಪಿ ಮಾಡುವ ದೃಶ್ಯ ಅದೆಷ್ಟು ನಗೆಪಾಟಲು ನೀವೇ ಯೋಚಿಸಿ...

ಚಿತ್ರರಂಗದ ಕಥೆಗಳನ್ನ ಕೇಳುತ್ತಿದ್ದರೆ ಅದೇ ಒಂದು ವರ್ಣಮಯ ಸಿನೆಮಾವಾಗುತ್ತದೆ. ನಾನು ಯಾರೇ ಚಿತ್ರರಂಗದ ಹಿರಿಯರು ಸಿಕ್ಕರೂ ಅದು ಇದು ಮಾತಾಡುತ್ತ ಅವರ ನೆನಪುಗಳನ್ನು, ಆ ಕಾಲದ ಘಟನೆಗಳನ್ನ ಕೇಳುತ್ತೇನೆ. ಅವೆಲ್ಲಾ ತುಂಬಾ ಆಸಕ್ತಿಕರವಾಗಿರುತ್ತವೆ.

Thursday, April 11, 2013

ತಪ್ಪುಗಳು-ಒಪ್ಪುಗಳು...

ಆಕೆ ಖಡಕ್ ಪೋಲಿಸ್ ಅಧಿಕಾರಿ. ಅವಳ ಜೀಪು ಭರ್ರನೆ ಬಂದು ಒಂದು ಕಡೆ ನಿಲ್ಲುತ್ತದೆ. ಕೆಳಗಿಳಿದವಳೇ ತನ್ನ ಎದುರಿನ ಮರದತ್ತ ಕಣ್ಣು ಹಾಯಿಸಿ ಜೀಪಿನಿಂದ ಬೈನಾಕುಲರ್ ತೆಗೆದುಕೊಂಡು ಅದರ ಮೂಲಕ ನೋಡುತ್ತಾಳೆ. ಅಲ್ಲಿ  ಕೇಡಿಯೊಬ್ಬ ಡ್ರಗ್ಸ್  ಮಾರುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಅವರೆಲ್ಲಾ ಕಾಲೇಜು ವಿದ್ಯಾರ್ಥಿಗಳು. ಬೈನಾಕುಲರ್ ಅನ್ನು ಜೀಪಿನ ಒಳಗಿಡುತ್ತಾಳೆ. ಕಾಲೇಜು ಮುಂದೆ ನಿಂತು ಒಬ್ಬ ದುಷ್ಟ ವಿದ್ಯಾರ್ಥಿ ಮಾದಕವಸ್ತುಗಳನ್ನು ಮಾರಿ, ಇನ್ನಿತರ ಒಳ್ಳೆಯ ವಿದ್ಯಾರ್ಥಿಗಳನ್ನು ಹಾಳು ಮಾಡುತ್ತಿದ್ದರೆ ಅದೇಗೆ ಸುಮ್ಮನಿರಲು ಸಾಧ್ಯ ನಮ್ಮ ಸಾಹಸಿ ನಾಯಕಿ..! ಈಗ ಆಕೆಯ ಮುಂದಿನ ನಡೆ ಏನಿರಬಹುದು..?
ಆಕೆ ಮುಂದೇನು ಮಾಡಲು ಸಾಧ್ಯ.ಬೈನಾಕುಲರ್ ನಲ್ಲಿ ನೋಡಿದ್ದಾಳೆ ಎಂದರೆ ಅವರೆಲ್ಲಾ ದೂರದಲ್ಲಿದ್ದಾರೆ ಎಂದರ್ಥ. ಹಾಗಾಗಿ ಆಕೆ ತನ್ನ ರಿವಾಲ್ವರ್ ನಿಂದ ಶೂಟ್ ಮಾಡಬಹುದು. ಆದರೆ ಅಲ್ಲಿ ನಡೆಯುವ ಕಥೆಯೇ ಬೇರೆ. ಬೈನಾಕುಲರ್ ಒಳಗಿಟ್ಟವಳು ಇಲ್ಲಿಂದಲೇ ಅಲ್ಲಿಗೆ ಹಾರಿಬಿಡುತ್ತಾಳೆ. ಹನುಮಂತನನ್ನು ಮೀರಿಸುವಂತೆ.
ಕೆಲವು ಸಿನೆಮಾಗಳನ್ನೂ ನೋಡುವಾಗ ನಗು ಉಕ್ಕಿಬರುವುದು ಇಂತಹ ದೃಶ್ಯ ರಚನೆಯಿಂದಾಗಿ. ಯಾವುದೇ ಸಿನೆಮಾದಲ್ಲಿ ಮೊದಲು ಕಥೆಯ ಎಳೆ. ಆನಂತರ ಚಿತ್ರಕಥೆ ರಚಿಸುತ್ತೇವೆ. ತದನಂತರ ಒಂದೊಂದೇ ದೃಶ್ಯವನ್ನು ಕಟ್ಟುತ್ತಾ ಅಥವಾ ಹೆಣೆಯುತ್ತಾ  ಹೋಗುತ್ತೇವೆ. ಸಿನೆಮಾಕ್ಕೆ ಇದು ಬಹಳ ಮುಖ್ಯ. ಅವನು ಬಂದ ಎಂಬುದು ಚಿತ್ರಕಥೆಯಾದರೆ ಎಲ್ಲಿಂದ ಹೇಗೆ ಬರುತ್ತಾನೆ, ಇದಕ್ಕೂ ಹಿಂದೆ ಏನಾಗಿತ್ತು , ಅದರ ಮುಂದುವರಿಕೆ ಸರಿಯಾಗಿದೆಯೇ ಎಂಬುದನ್ನೆಲ್ಲಾ ತಲೆಯಲ್ಲಿಟ್ಟುಕೊಂಡು ದೃಶ್ಯ ನಿರ್ಮಾಣ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ಲಾಜಿಕ್ ಅನ್ನು ಗಣನೆಗೆ ಸ್ವಲ್ಪವಾದರೂ ತೆಗೆದುಕೊಳ್ಳಬೇಕಾಗುತ್ತದೆ. ಹಾಗಂತ ತೀರಾ ಲಾಜಿಕ್ ಹಿಂದೆ ಬಿದ್ದರೆ ಸಿನೆಮಾದ ಮನರಂಜನೆಗೆ ಪೆಟ್ಟುಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ ಲಾಜಿಕ್ ಇಲ್ಲದಿದ್ದರೂ ಅದನ್ನು ನಂಬಿಸುವಂತಹ ಹಿನ್ನೆಲೆ ಅಲ್ಲಿರಬೇಕು.ಸ್ಪೈಡರ್ ಮ್ಯಾನ್ ನಿಗೆ ಹಾರುವುದು ಸಾಧ್ಯವಾದದ್ದು ಜೇಡ ಕಚ್ಚಿದುದರಿಂದ ಎಂಬುದನ್ನು ಪರಿಣಾಮಕಾರಿಯಾಗಿ ಹಂತಹಂತವಾಗಿ ಜನರಿಗೆ ನಂಬಿಸಬೇಕು. ನಾನು ಎಷ್ಟೋ ಚಿತ್ರದ ಚರ್ಚೆಗೆ ಕುಳಿತಾಗ ಇಂತಹ ಪ್ರಶ್ನೆಗಳನ್ನೂ ಕೇಳಿದ್ದಿದ್ದೆ. ಆಗೆಲ್ಲಾ ನಮ್ಮ ಬಾಸ್ ಗಳು "ಆದಂಗೆ ..ಸಿನೆಮಾದಲ್ಲಿ ಲಾಜಿಕ್ ಮುಖ್ಯ ಅಲ್ಲಾ..ಮ್ಯಾಜಿಕ್ ಮುಖ್ಯ ಎಂತೆಲ್ಲಾ ಹೇಳಿದ್ದಿದ್ದೆ. ಆದರೆ ಲಾಜಿಕ್ ಬಗ್ಗೆ ಯೋಚನೆ ಮಾಡದಾದಾಗ ಇಡೀ ದೃಶ್ಯವೇ ಅಪಹಾಸ್ಯಕ್ಕೀಡಾಗುತ್ತದೆ.
ಅದಕ್ಕಾಗಿಯೇ  ಕೆಲವು ಸಿನೆಮಾದ ದೃಶ್ಯ ನೋಡಿ ನಗುತ್ತಿರುತ್ತೇನೆ.
ಮೊನ್ನೆ  ಇನ್ನೊಂದು ಚಿತ್ರವನ್ನೂ ನೋಡಿದೆ. ಚಿತ್ರದ ಕೊನೆಯ ದೃಶ್ಯ . ಖಳನಾಯಕ ನಾಯಕನ ಜೊತೆ ಹೊಡಿದಾಡುತ್ತಿದ್ದಾನೆ. ಹಾಗೆಯೇ ಅದಕ್ಕೂ ಮುನ್ನ ಐದಾರು ಮಕ್ಕಳನ್ನು ಒಂದು ದೊಡ್ಡ ಮರಕ್ಕೆ ಕಟ್ಟಿ ಹಾಕಿದ್ದಾನೆ.ಅದೂ ಒಂದೆ ಒಂದು ಹಗ್ಗದಿಂದ, ಒಂದೆ ಸುತ್ತು ಹಾಕಿ. ಅದ್ಯಾವ ಮಂತ್ರದ ಹಗ್ಗದಿಂದಲೂ ಆ ರೀತಿ ನಾಲ್ಕಾರು ಜನ ಹುಡುಗರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲವೇ ಇಲ್ಲ. ಯಾಕೆಂದರೆ ಒಬ್ಬೆ ಒಬ್ಬ ಹುಡುಗ ಸುಮ್ಮನೆ ಜಾರಿಕೊಂದರೂ ಸಾಕು...ಎಲ್ಲರೂ ತಪ್ಪಿಸಿಕೊಳ್ಳಬಹುದು...ಆದರೆ ಆ ಹುಡುಗರು ಇಡೀ ಸಿನಿಮಾದಲ್ಲಿ ತುಂಟಾಟ ತೋರಿಸಿದರೂ ಈ ದೃಶ್ಯದಲ್ಲಿ ಮಾತ್ರ ಅಸಹಾಯಕರಂತೆ ನಾಯಕನನ್ನು ಕೂಗುತ್ತಿರುತ್ತಾರೆ. ನಾಯಕ ಹೇಗೋ ಸಮಯ ಸಾಧಿಸಿ ನಾಯಕಿಯನ್ನು ಬಿಡಿಸಿದಾಗ ನಾಯಕಿ ಓಡಿ ಹೋಗಿ, ಆ ಹುಡುಗರನ್ನು ಕಟ್ಟಿಹಾಕಿದ್ದ ಹಗ್ಗವನ್ನು ಬಿಚ್ಚುವ ಪರಿ ಎಲ್ಲರಿಗೂ ನಗು ಉಕ್ಕಿಸುತ್ತದೆ.
ಇನ್ನೊಂದು ಚಿತ್ರದ ದೃಶ್ಯ. ನಾಯಕ ಕೇಡಿಯಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾನೆ. ವಿಲನ್ ಬಿಟ್ಟಾನೆಯೇ...ಅವನೂ ಅಟ್ಟಾಡಿಸುತ್ತಾನೆ. ಅವನ ಕೈಯಲ್ಲಿ ಪಿಸ್ತೋಲ್. ನಾಯಕ ನಿರಾಯುಧ ಧೀರ.ಅವನು ಶೂಟ್ ಮಾಡಲು ಸಿದ್ಧನಾಗಿ ಶೂಟ್ ಮಾಡುತ್ತಾನೆ. ಈಗ ನಾಯಕ ತಪ್ಪಿಸಿಕೊಳ್ಳುವುದಾದರೂ ಹೇಗೆ...ತಿರುಗಿನಿಂತ ನಾಯಕನ ಕೊರಳಲ್ಲಿ ಅಮ್ಮ ಕೊಟ್ಟಿದ್ದ ಒಂದೆಳೆ ಸರ ಇರುತ್ತದೆ. ದಾರಕ್ಕಿಂತ ತುಸುವೇ ದೊಡ್ಡದಾದ ಸರ ಅದು. ಆದರೆ ಅಮ್ಮ ಕೊಟ್ಟಿದ್ದಲ್ಲವೇ..? ನಾಯಕ ಅದನ್ನು ಕೊರಳಿಂದ ತೆಗೆದು ಗುಂಡುಗಳನ್ನು ತಡೆದುಬಿಡುತ್ತಾನೆ. ಬರೀ ದಾರದಲ್ಲೇ ಎಲ್ಲಾ ಗುಂಡುಗಳನ್ನು ಬುಲೆಟ್ ಪ್ರೂಫ್ ಗಿಂತ ಹೆಚ್ಚಾಗಿ ತಡೆದು ಕೆಳಗೆ ಬೀಳಿಸುತ್ತಾನೆ...ಇಲ್ಲವನ ಸರವನ್ನೂ ಅಥವಾ ನಾಯಕನ ಕಣ್ಣಿನ ತೀಕ್ಷ್ನತೆಯನ್ನೋ ಹೊಗಳಬೇಕಾದದ್ದು  ಪ್ರೇಕ್ಷಕರಿಗೆ ಬಿಟ್ಟ ವಿಷಯವಾಗುತ್ತದೆ.
ಚಿತ್ರದ ನಾಯಕ ನಾಯಕಿ ಮನಸಾರೆ ಪ್ರೀತಿಸಿ ಮನೆಯಲ್ಲಿ ಮದುವೆಗೆ ಒಪ್ಪದಿದ್ದಾಗ ಒಂದಷ್ಟು ಹಣ ಆಭರಣ ಮನೆಯಿಂದ ಕದ್ದುಕೊಂಡು ಹಳ್ಳಿಯೊಂದಕ್ಕೆ  ಬರುತ್ತಾರೆ. ಅಲ್ಲಿನ ತೋಟದ ಮನೆಯಲ್ಲಿ ಉಳಿದುಕೊಳ್ಳುತ್ತಾರೆ.ಅದು ಆ ಊರಿನ ಆಸೆಬುರುಕ ಜಮೀನ್ದಾರನಿಗೆ ಗೊತ್ತಾಗಿ ಅವರ ಬಳಿ ಇರುವ ಚಿನ್ನಾಭರಣ, ಹಣವನ್ನ ಲಪಟಾಯಿಸಲು ನಿರ್ಧರಿಸುತ್ತಾನೆ. ಅದು ನಾಯಕಿಗೆ ಗೊತ್ತಾಗಿ ಚಿನ್ನಾಭರಣವನ್ನು ಒಂದು ತಾಮ್ರದ ಬಿಂದಿಗೆಗೆ ಹಾಕಿ ಅದನ್ನು ನಾಯಕನ ಕೈಯಲ್ಲಿ ಕೊಟ್ಟು ಎಲ್ಲಾದರೂ ದೂರ ಅಡಿಗಿಸಿಷ್ಟು ಬರಲು ಹೇಳುತ್ತಾಳೆ. ನಾಯಕ ಹಾಗೆ ಮಾಡಲು ಹೊರಬಂದಾಗ ಅಲ್ಲಿ ಕೇಡಿಗಳು ಬರುವುದು ಕಾಣಿಸಿ ಅಲ್ಲೇ ಇದ್ದ ಮರವೊಂದನ್ನು ಏರಿ ಬಿಂದಿಗೆಯ ಸಮೇತ ಅಲ್ಲೇ ಕುಳಿತುಕೊಳುತಾನೆ. ಖಳರು ಬಂದು ಚಿನ್ನ ಇಲ್ಲದಾದಾಗ ನಾಯಕಿಯನ್ನು ಚುಚ್ಚಿ ಕೊಲ್ಲುತ್ತಾರೆ. ಆದರೆ ಅದೇ ಮರದ ಮೇಲೆ ತಾಮ್ರದ ಬಿಂದಿಗೆಯನ್ನು ಭದ್ರವಾಗಿ ಹಿಡಿದುಕುಳಿತ ನಾಯಕನ ಕಣ್ಮುಂದೆ ನಾಯಕಿಯನ್ನು ಸಾಯಿಸುತ್ತಿದ್ದರೂ ಅವಳನ್ನು ರಕ್ಷಿಸುವ ಯಾವ ಪ್ರಯತ್ನವನ್ನೂ ಮಾಡದ ನಾಯಕ ಸುಮ್ಮನೆ ಅದೇ ಮರದ ಮೇಲೆ ಕುಳಿತಿರುತ್ತಾನೆ. ಅನಂತರ ನಾಯಕ ಹುಚ್ಚನಂತಾಗುತ್ತಾನೆ.
ಆದರೆ ಚಿತ್ರದ ಕೊನೆಯಲ್ಲಿ ಅದೇ ಕೇಡಿಗಳು ತಾಮ್ರದ ಬಿಂದಿಗೆಯನ್ನು ಕದ್ದೊಯ್ಯಲು ಯತ್ನಿಸಿದಾಗ ಅದ್ಯಾವ ಪರಿ ಹೊಡಿದಾಡುತ್ತಾನೆಂದರೆ ಬಿಂದಿಗೆಯನ್ನು ಯಾರಿಗೂ ಮುಟ್ಟಕೊಡುವುದಿಲ್ಲ.
ನಾಯಕಿಯನ್ನ ಕಣ್ಣೆದುರೆ ಸಾಯಿಸುತ್ತಿದ್ದಾಗಲೂ ಹೊಡೆದಾಡುವ ಪ್ರಯತ್ನ ಮಾಡದ ನಾಯಕ ಹಣ ಆಸ್ತಿ ದೋಚುವಾಗ ಹೊಡೆದಾಡುವ ಪರಿ ಅಚ್ಚರಿ ಎನಿಸುತ್ತದೆ.ಅಂದರೆ ಅವನ ಪ್ರೀತಿ ನಾಯಕಿಯ ಮೇಲೋ...ಹಣದ ಮೇಲೋ...ಯೋಚಿಸುವುದು ನಮಗೆ ಬಿಟ್ಟ ವಿಷಯ...
ನಾನಂತೂ ಇಂತಹ ಸುಮಾರು ಸಿನೆಮಾಗಳ ದೃಶ್ಯ ನೋಡಿಬಿಟ್ಟಿದ್ದೇನೆ.ಅದೊಂತರ ಮಜಾ. ನಗು ತರಿಸುತ್ತದೆ. ಹಿಂದೆ, ಮುಂದೆ ಕಿಂಚಿತ್ತೂ ಯೋಚಿಸದ ಚಿತ್ರಕರ್ಮಿಗಳು ಮಾತ್ರ ಇಂತಹ ದೃಶ್ಯಗಳನ್ನು ಕಟ್ಟಲು ಸಾಧ್ಯವಾಗುತ್ತದೆ.
ನಿಮಗೆ ಗೊತ್ತಿರುವ ಈ ತರಹದ ದೃಶ್ಯಗಳ ಬಗ್ಗೆ ಹೇಳಿ.. ಒಂದಷ್ಟು ನಕ್ಕು ಮಜಾ ತೆಗೆದುಕೊಳ್ಳೋಣ.

ಅರ್ಧ ಕಟ್ಟು ಕಥೆ, ಉಳಿದರ್ದ ಬರೀ ವ್ಯಥೆ-ಬಚ್ಚನ್..

ಪ್ರಾರಂಭದಲ್ಲೇ ಎರಡು ಬರ್ಬರ ಕೊಲೆ ಮಾಡುತ್ತಾನೆ ನಾಯಕ ಭರತ್. ಅದೂ ಒಬ್ಬ ಪೋಲಿಸ್ ಅಧಿಕಾರಿ ಮತ್ತು ಒಬ್ಬ ವೈದ್ಯನನ್ನು. ಅಲ್ಲಿಂದ ತಪ್ಪಿಸಿಕೊಳ್ಳುವಾಗ ಪೋಲೀಸರ ಕೈಗೆ ಸಿಕ್ಕಿಕೊಳ್ಳುತ್ತಾನೆ. ವಿಚಾರಣೆಯ ವೇಳೆಯಲ್ಲಿ ತಾನೇಕೆ ಕೊಲೆ ಮಾಡಿದೆ ಎಂಬುದನ್ನು ವಿವರವಾಗಿ ಪೋಲೀಸರ ಮುಂದೆ ಬಿಚ್ಚಿಡುತ್ತಾನೆ. ಸಿನೆಮಾದ ಇಂಟರ್ವಲ್ ನ ವರೆಗೆ ಹೇಳುವ ಕಥೆ ಒಂದಷ್ಟು ಭಾವಗಳನ್ನು ಹುಟ್ಟುಹಾಕುತ್ತದೆ. ಆದರೆ ಒಮ್ಮೆ ವಿರಾಮದ ನಂತರ ಅಷ್ಟೊತ್ತು ಹೇಳಿದ ಕಥೆ ಕಟ್ಟು ಕಥೆ ..ನಿಜವಾದ ಕಥೆ ಬೇರೆಯದೇ ಇದೆ ಎಂದು ನಾಯಕಿ ಕಥೆ ಹೇಳಲು ಶುರುಮಾಡುತ್ತಾಳೆ. ಪೋಲಿಸ್ ಅಧಿಕಾರಿಯ ಜೊತೆಗೆ ಪ್ರೇಕ್ಷಕರೂ ಬೆಚ್ಚಿಬೀಳುತ್ತಾರೆ. ನಿಜವಾದ ಕಥೆ ತೆರೆದುಕೊಂಡಂತೆ ಅಲ್ಲಿ ಮತ್ತೊಂದು ಪ್ರೇಮ ಕಥೆ, ಆ ಮೂಲಕ ಸೇಡಿನ ಕಥೆ ಬಿಚ್ಚಿಕೊಳ್ಳುತ್ತದೆ.
ಇದು ಬಚ್ಚನ್ ಚಿತ್ರದ ಸಂಕ್ಷಿಪ್ತವಾದ ಕಥೆ.ಚಿತ್ರದ ಪ್ರಾರಂಭ ಜೋರಾಗಿದೆ. ಪ್ರಾರಂಭದ ಸಾಹಸಮಯ ದೃಶ್ಯಗಳು ರೋಮಾಂಚನ ಉಂಟುಮಾಡಿದರೂ ಕೆಲವೇ ಕೆಲವು ಗ್ರಾಫಿಕ್ಸ್ ದೃಶಿಕೆಗಳು ಅದರ ಅಂದವನ್ನು ಹಾಳುಗೆಡವುತ್ತವೆ. ಚಿತ್ರದ ಕಥೆ ಆಸಕ್ತಿದಾಯಕವಾಗಿದೆ. ಆದರೆ ನಿರ್ದೇಶಕರು ಚಿತ್ರದಲ್ಲಿನ ಕಟ್ಟು ಕಥೆಗೆ ಹೆಚ್ಚು ಒತ್ತು ಮತ್ತು ಸಮಯ ಕೊಟ್ಟಿರುವುದರಿಂದ ಚಿತ್ರದಲ್ಲಿನ ನಿಜ ಕಥೆ, ನಾಯಕ-ನಾಯಕಿಯ ಪ್ರೇಮದ ಉತ್ಕಟತೆ ಪೇಲವವಾಗಿದೆ. ಹಾಗಾಗಿಯೇ ಚಿತ್ರ ನಿರೀಕ್ಷಿತ ಪರಿಣಾಮ ಬೀರುವುದಿಲ್ಲ. ಇಲ್ಲಿ ಭಾವನ ನಾಯಕಿಯಾದರೂ ಲೆಕ್ಕಕ್ಕೆ ಸಿಗುವಷ್ಟು ದೃಶ್ಯಗಳಲ್ಲಿ ಬಂದು ಹೋಗುತ್ತಾರೆ. ಅದರಲ್ಲಿ ಒಂದು ಹಾಡು ಸೇರಿಕೊಂಡಿರುವುದರಿಂದ ನಾಲ್ಕಾರು ಮಾತನಾಡಿ ಕೇಡಿಗಳ ಕೈಯಲ್ಲಿ ಸಿಕ್ಕಿ ಸಾಯುತ್ತಾರೆ. ಹಾಗೆ ಪ್ರದೀಪ್ ರಾವತ್ ಹಾಗೆ ಬಂದು ಕೊಲೆ ಮಾಡಿ ತಾವೂ ಸಾಯುತ್ತಾರೆ. ಹಾಗಾಗಿ ಅವರ ಕ್ರೌರ್ಯದ ಮುಖ ಜನರಿಗೆ ತಲುಪುವುದಿಲ್ಲ. ಇನ್ನು ಪೆರೋಲ್ ಮೊದಲಾರ್ಧದ ತುಂಬಾ ಇದ್ದರೂ ಅದು ಕಟ್ಟುಕಥೆ ಎಂದು ನಿರ್ದೇಶಕರು ಪೆರೋಲ್ ಕೈಯಲ್ಲೇ ಹೇಳಿಸುವುದರಿಂದ ಅದಷ್ಟು ಪರಿಣಾಮ ಬೀರುವುದಿಲ್ಲ. ಹಾಗಾಗಿಯೇ ಇಡೀ ಚಿತ್ರ ನಿರೀಕ್ಷಿತ ಪರಿಣಾಮ ಬೀರುವುದಿಲ್ಲ.ಎಂದು ಹೇಳಿದ್ದು.
ಹೊಡೆದಾಟದ ದೃಶ್ಯಗಳು ಚೆನ್ನಾಗಿವೆ. ಅಲ್ಲಲ್ಲಿ ಬರುವ ಗ್ರಾಫಿಕ್ಸ್ ಪಕ್ಕಾ ಇಲ್ಲದೆ ಇರುವುದು ಕಿರಿಕಿರಿ ಉಂಟುಮಾಡುತ್ತವೆಯಾದರೂ ಒಟ್ಟಾರೆ ಚಿತ್ರಕ್ಕೆ ದೊಡ್ಡ ನಷ್ಟ ಮಾಡುವುದಿಲ್ಲ.
ನಿರ್ದೇಶಕ ಶಶಾಂಕ್ ರ ಕಥೆಯ ಎಳೆ ಚೆನ್ನಾಗಿದೆ ಮತ್ತು ಕುತೂಹಲಕರವಾಗಿದೆ. ಆದರೆ ದ್ವೇಷದ ಹಿಂದಿನ ಕಾರಣದ ಕಥೆ/ದೃಶ್ಯಗಳಿಗೆ ಹೆಚ್ಚು ಅವಕಾಶವಿಲ್ಲದೆ ಇರುವುದು ಚಿತ್ರದ ನಾಯಕನ  ಒಟ್ಟಾರೆ ಯೋಜನೆಗೆ ಬಲವಾದ ಸಾಥ್ ಕೊಡುವಲ್ಲಿ ಸೋತಿದೆ. ನಾಯಕ-ನಾಯಕಿ ಅವರಿಬ್ಬರ ನಡುವಿನ ಸಂಬಂಧವನ್ನು ಇನ್ನೂ ಪರಿಣಾಮಕಾರಿಯಾಗಿ ತೋರಿಸಿದ್ದರೆ ನಾಯಕನ ಅಷ್ಟೂ ಯೋಜನೆಗೆ ದೊಡ್ಡ ಬಲಸಿಗುತ್ತಿತ್ತೇನೋ..?
ಚಿತ್ರ ಚೆನ್ನಾಗಿದೆ. ಆದರೆ ಮೇಲಿನ ಅಂಶಗಳ ಲೆಕ್ಕಾಚಾರಕ್ಕೆ ಕಾರಣ ಚಿತ್ರ ಇನ್ನೂ ಚೆನ್ನಾಗಿರುವ ಸಾಧ್ಯತೆಗಳಿದ್ದುವಲ್ಲ ಎನ್ನುವುದು. ಇವೆಲ್ಲವನ್ನೂ ಪಕ್ಕಕ್ಕೆ ಇರಿಸಿ, ಚಿತ್ರದ ಶ್ರೀಮಂತಿಕೆಗೆ / ಹೊಡೆದಾಟದ ದೃಶ್ಯಗಳಿಗೆ ಸುದೀಪ್ ಅಭಿನಯಕ್ಕಾಗಿ ಸಿನಿಮಾವನ್ನೊಮ್ಮೆ ನೋಡಬಹುದು ಹಾಗೆ ಮೆಚ್ಚಬಹುದು.

Saturday, March 23, 2013

ಯಕುಜಾ -ಸರಣಿಗಳು

 ತಕೆಷಿ ಕಿತನೋ ಜಪಾನಿ ಭಾಷೆಯ ಹೆಸರುವಾಸಿ ನಿರ್ದೇಶಕ. ಇಟಲಿಯ ಮಾಫಿಯ, ನಮ್ಮಲ್ಲಿನ ಭೂಗತ ಲೋಕ ಇರುವಂತೆ ಜಪಾನಿನ ಸಂಘಟಿತ ಅಪರಾಧಲೋಕವನ್ನು ಯಕುಜ ಎಂದು ಕರೆಯುತ್ತಾರೆ. ಜಪಾನೀ ಭಾಷೆಯಲ್ಲಿ ಅತಿ ಹೆಚ್ಚು ಯಕುಜಾ ಸಂಬಂಧಿ ಚಿತ್ರದಲ್ಲಿ ತೊಡಗಿಸಿಕೊಂಡವನೆಂದರೆ ಇದೆ ತಕೆಷಿ ಕಿತನೋ. ಆತನ ಸೋನತೈನ್ [1993], ಬ್ರದರ್[2000], ಔಟ್ ರೇಜ್[2010], ಔಟ್ ರೇಜ್ ಬೇಯೊಂಡ್[2012]  ಈ ನಿಟ್ಟಿನಲ್ಲಿ ಬಂದ ಪ್ರಸಿದ್ಧ ಚಿತ್ರಗಳು.
ಔಟ್ ರೇಜ್ ಚಿತ್ರ ಡ ಕಥೆ ತುಂಬಾ ಸರಳವಾದದ್ದು. ಜಪಾನೀ ಭೂಗತ ದೊರೆಗಳ ಅಥವಾ ಸಂಘಟಿತ ಅಪರಾಧಲೋಕದ ಮುಖ್ಯಸ್ಥರ ನಡುವೆ ಕಥೆ ಚಿತ್ರದ್ದು.
ಒಬ್ಬ ಬಾಸ್, ನಮ್ಮಲ್ಲಿನ ಡಾನ್ ಎಂದುಕೊಳ್ಳಿ. ಇಡೀ ನಗರದ ಸಮಸ್ತ ದಂಧೆಯೂ ಅವನ ಕೈಯಲ್ಲೇ ಇದೆ. ಎಲ್ಲಾ ಬಾರ್ಅಂಡ್ ರೆಸ್ಟೋರೆಂಟ್, ಮಾದಕ ವಸ್ತು ಸಾಗಣೆ, ಲೈವ್ ಬಾಂಡ್ ಗಳು ಆತನವು ಅಥವಾ ಅವನ ಕೈಕೆಳಗೆ ಇರುವಂತಹವು. ನಗರದಲ್ಲಿ ಇವರ ವಿರುದ್ಧದ ಗ್ಯಾಂಗ್ ಒಂದು ತನ್ನ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿದಾಗ ಅದನ್ನು ಮಟ್ಟಹಾಕಲು ಆ ಡಾನ್ ಒಂದು ಕಾರ್ಯ ತಂತ್ರ ರೂಪಿಸುತ್ತಾನೆ. ಇದರಲ್ಲಿ ನಾಯಕನ ಪಾತ್ರವೇನೂ ಇರುವುದಿಲ್ಲ. ಆದರೂ ತನ್ನ ಬಾಸ್ ನ ಅಣತಿಯಂತೆ ಅವನು ಹೇಳಿದ ಕೆಲಸವನ್ನ ಮಾಡುತ್ತಾನೆ. ಆದರೆ ನಾರದ ಬುದ್ದಿಯ ಬಾಸ್ ನ ತಂತ್ರವೇ ಬೇರೆ ಇರುತ್ತದೆ. ಈಗ ನಾಯಕ ಬಲಿಪಶುವಾಗುತ್ತಾನೆ. ಮುಂದೆ ದ್ರೋಹ ಮೋಸ ಅನ್ಯಾಯ ಕೊಲೆ ಮುಂತಾದವುಗಳು ನಡೆಯುತ್ತವೆ.ಇದು ಎಲ್ಲಾ ಚಿತ್ರದಲ್ಲೂ ಇರುವ ಕಥೆ ಇದೆ. ಅದರಲ್ಲೂ ಒಂದು ಭೂಗತಲೋಕದ ಕಥೆಯನ್ನೂ ತೆರೆದಿಡುವ ಸಿನೆಮಾಗಳಲ್ಲಿ ಈ ತರಹದ ಕಥೆ ಇದ್ದೆ ಇರುತ್ತದೆ. ಆದರೂ ಚಿತ್ರಗಳು ಭಿನ್ನ ಎನಿಸುವುದು ಅದರ ನಿರೂಪಣೆಯಿಂದ. ಇಲ್ಲಿ ತಕೆಷಿ ಕಿತನೋ ನಾಯಕನಾಗಿಯೂ ಅಭಿನಯಿಸಿದ್ದಾರೆ. ಪ್ರಾರಂಭದಲ್ಲಿ ಸ್ವಲ್ಪ ನಿಧಾನಗತಿ ಎನಿಸಿದರೂ ಚಿತ್ರ ಮುಂದುವರೆದಂತೆ ಕಥೆಯ ಹಂದರ ನಮ್ಮನ್ನು ಹಿಡಿದುಕೂರಿಸಿಬಿಡುತ್ತದೆ. ನಿರೂಪಣೆಯಂತೂ ಸೂಪರ್. ಹಿನ್ನೆಲೆ ಸಂಗೀತ ಮತ್ತು ಕ್ಯಾಮೆರಾ ಚಲನೆ ನಮ್ಮನ್ನು ಕುರ್ಚಿಯಿಂದ ಅಲುಗಾಡಲು ಬಿಡುವುದಿಲ್ಲ. ಅದರಲ್ಲೂ ಕೊನೆಯ ಇಪ್ಪತ್ತು ನಿಮಿಷದಲ್ಲಿ ಎಲ್ಲವೂ ನಿರೀಕ್ಷಿತ ಎನಿಸಿದರೂ ಚಿತ್ರ ನೋಡದೆ ಇರಲು ಸಾಧ್ಯವಿಲ್ಲ. ತಕೆಷಿ ಕಿತನೋ ಅಭಿನಯ ಆತನ ಸಂಭಾಷಣೆ ಹೇಳುವ ಪರಿ ತುಂಬಾ ಪರಿಣಾಮಕಾರಿ. ಹತ್ಯೆಯ ದೃಶ್ಯಗಳು ಮತ್ತದರ ಚಿತ್ರೀಕರಣ ಥ್ರಿಲ್ಲಿಂಗ್ ಆಗಿದೆ.
ಔಟ್ ರೇಜ್ ಬೇಯೊಂಡ್ 2012 ರಲ್ಲಿ ತೆರೆಗೆ ಬಂದ ಔಟ್ ರೇಜ್ ನ ಮುಂದುವರೆದ ಭಾಗದ ಕಥೆ. ಎರಡು ಪ್ರಬಲ ಗ್ಯಾಂಗುಗಳು ಕಾರ್ಯ ತತ್ಪರವಾಗಿದ್ದಾಗ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುವುದು. ಇಬ್ಬರು ಬಡಿದಾಡಿಕೊಂಡು ಯಾರು ಸಾಯುತ್ತಾರೆ, ಯಾರು ಉಳಿಯುತ್ತಾರೆ ನೋಡುವುದು ಸತ್ತವರಿಗೆ ನಮಸ್ಕಾರ ಉಳಿದವರರಿಗೆ ಅಂತ್ಯಸಂಸ್ಕಾರ ಮಾಡುವುದು. ಇದು ಅಲ್ಲಿನ ಪೋಲಿಸ್ ಅಧಿಕಾರಿಯೊಬ್ಬನ ಸೂತ್ರ. ಹಾಗಾಗಿ ಯಕುಜಾದ ಎರಡು ಗುಂಪಿನ ನಡುವೆ ಆತನೇ ಜಗಳ ತಂದಿಕ್ಕುತ್ತಾನೆ. ಒಬ್ಬರನ್ನೊಬ್ಬರು ಬಡಿದಾಡಿಕೊಂಡು ಸಾಯುವಂತೆ ಮಾಡುತ್ತಾನೆ. ಈ ಆಟದಲ್ಲಿ ನಾಯಕ ಮತ್ತೆ ಬಲಿಪಶುವಾಗುತ್ತಾನೆ. ಜೈಲಿನಲ್ಲಿದ್ದ ನಾಯಕ ಬಿಡುಗಡೆಯಾದಾಗ ಆತನಿಗೆ ಇಷ್ಟವಿಲ್ಲದಿದ್ದರೂ ಅವನನ್ನು ಮತ್ತೆ ಭೂಗತಜಗತ್ತಿಗೆ ಇಳಿಯುವಂತೆ ಮಾಡುತ್ತಾನೆ ಪೋಲಿಸ್ ಅಧಿಕಾರಿ. ಮುಂದೆ ಮತ್ತದೇ ಮಾರಣಹೋಮ.
ಈ ಸರಳ ಕಥೆಯ ಚಿತ್ರ ನೋಡಿದ ನಂತರವೂ ನಮ್ಮನ್ನು ಕಾಡುತ್ತವೆ. ಅಟ್ಟಿಸಿಕೊಂಡು ಓಡಾಡುವ, ಕೊಂದು ಅತ್ತಹಾಸಗೈಯುವವರೇ ಬೇಟೆಯಾಗುವುದು, ಪ್ರಾಣಭಿಕ್ಷೆಯಾಚಿಸುವುದು ಭೂಗತಲೋಕದ ವಿಪರ್ಯಾಸಕ್ಕೆ ಸಾಕ್ಷಿಯಾಗುತ್ತದೆ.
ಎರಡು ವರ್ಷಗಳ ಅಂತರದಲ್ಲಿ ಬಂದ ಎರಡೂ ಚಿತ್ರಗಳು ಒಂದೇ ಚಿತ್ರದಂತೆ ಭಾಸವಾಗುತ್ತವೆ. ಅಥವಾ ಒಂದರ ನಂತರ ಮತ್ತೊಂದನ್ನು ಒಮ್ಮೆಲೆ ನೋಡಬಹುದಾದಷ್ಟು ಕುತೂಹಲಕಾರಿಯಾಗಿವೆ. ತಪ್ಪೊಪ್ಪಿಗೆಯ ಸಂಕೇತವಾಗಿ ಒಂದು ಕಿರುಬೆರಳನ್ನು ಕತ್ತರಿಸಿಕೊಡುವ, ಕೊಲೆಗಾರ ಎದುರಿಗೆ ನಿಂತಾಗಲೂ ಅವನನ್ನು ರೋಷದಿಂದ ಕೆಣಕುವ ದೃಶ್ಯಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ. ಹಾಗೆಯೇ ಎರಡೂ ಚಿತ್ರಗಳ ಚಿತ್ರಣವೂ ಅಷ್ಟೇ. ಅದರ ಗತಿ, ನಿರೂಪಣ ಶೈಲಿ ಒಂದೇ ತೆರನಾಗಿದ್ದು ಒಂದು ಚಿತ್ರದ ಮುಂದುವರೆದ ಭಾಗ ಹೇಗಿರಬೇಕೋ ಹಾಗಿರುವುದು ಪ್ರೇಕ್ಷಕನಲ್ಲಿ ಒಂದೇ ಸಿನೆಮಾ ನೋಡಿಡ ಭಾವವನ್ನು ಮೂಡಿಸುತ್ತವೆ. ಹಾಗೆ ಚಿತ್ರದಲ್ಲಿ ಗಮನಸೆಳೆಯುವುದು ತಣ್ಣನೆಯ ಕ್ರೌರ್ಯ. ಒಂದು ಕೊಲೆಯನ್ನು ಅಷ್ಟೇ ನೀಟಾಗಿ, ಯೋಜನಾಬದ್ಧವಾಗಿ ಮತ್ತು ನಿರ್ದಯೆಯಿಂದ ಮಾಡಿ ಮುಗಿಸುವ ಪಾತ್ರಗಳ ಬಗ್ಗೆ ಒಂದು ರೀತಿಯ ಭಾವ ಮೂಡುತ್ತದೆ.

Sunday, March 17, 2013

2012-ನೋಡಿದ ಚಿತ್ರಗಳು-1

ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಸಿನೆಮಾ ನೋಡುತ್ತಿದ್ದೆ. ನಮ್ಮ ಕಾಲೇಜು ಮದ್ಯಾಹ್ನ ಎರಡಕ್ಕೆ ಮುಗಿಯುತ್ತಿದ್ದರಿಂದ ತರಗತಿಗೆ ಚಕ್ಕರ್ ಹಾಕುವ ಪ್ರಮೇಯ ಬಂದಿರಲಿಲ್ಲ. ಊಟ ಮಾಡಿದ ನಂತರ ಬಸ್ಸು ಹಿಡಿದು ಮನೆಗೆ ಹೋಗಬೇಕಾಗಿತ್ತು. ಆದರೆ ಅಷ್ಟು ಬೇಗ ಹೋಗಿ ಮಾಡುವುದಾದರೂ ಏನಿತ್ತು. ಹಾಗಾಗಿ ಲಕ್ಷಣವಾಗಿ ಚಿತ್ರಮಂದಿರಕ್ಕೆ ಹೋಗಿ ಕುಳಿತುಬಿಡುತ್ತಿದ್ದೆ. ಸಿನೆಮಾ ಯಾವುದಾದರೇನು..? ನೋಡುತ್ತಿದ್ದೆ .ನೋಡಿದ ನಂತರ ಸಿನೆಮಾದ ಟಿಕೇಟಿನ ಅರ್ಧಭಾಗ ನಮ್ಮ ಬಳಿ ಇರುತ್ತಿತ್ತಲ್ಲ.. ಅದರ ಹಿಂದೆ ಸಿನೆಮಾದ ಹೆಸರು, ನೋಡಿದ ದಿನಾಂಕ ಬರೆದಿಡುತ್ತಿದ್ದೆ. ನನ್ನ ಪದವಿ ಮುಗಿಯುವವರೆಗೆ ಆ ತರಹದ ಟಿಕೆಟ್ ಗಳು ಬೇಜಾನ್ ಆಗಿದ್ದವು. 
ಈಗಲೂ ಅಷ್ಟೇ ಸಿನೆಮಾ ನೋಡಿದ ತಕ್ಷಣ ಅದರ ಬಗ್ಗೆ ಚಿಕ್ಕಾದಾದ ಟಿಪ್ಪಣಿ ಬರೆದಿಡುತ್ತೇನೆ. ಇಲ್ಲವಾದಲ್ಲಿ ಆ ಸಿನೆಮಾದ ಹೆಸರು ದಿನಾಂಕವನ್ನು ಡೈರಿಯಲ್ಲಿ ಬರೆದು ಬಿಡುತ್ತೇನೆ.ಕಳೆದ ವರ್ಷ ನನಗೆ ಅಂತಹ ಕೆಲಸವಿರಲಿಲ್ಲ. ಕೈಯಲ್ಲಿದ್ದದ್ದು ಒಂದೇ ಚಿತ್ರ. ಹಾಗಾಗಿ ಸಿನೆಮಾ ನೋಡಲು ಸಾಕಷ್ಟು ಸಮಯ ಸಿಕ್ಕಿತ್ತು. ಆಗ ನೋಡಿದ ಹಾಲಿವುಡ್ ಸಿನೆಮಾಗಳಿವು.
1.ಕಾಂಟ್ರಬ್ಯಾಂಡ್:
ಶೂಟರ್  ಚಿತ್ರ ನೋಡಿದ ನಂತರ ಮಾರ್ಕ್ ವಾಲ್ಬರ್ಗ್ ನನಗೆ ಇಷ್ಟವಾದದ್ದು. ಒಬ್ಬ ಮಾಸ್ ಹೀರೋ ಆಗಿ. ನಂಗೆ ಜಾತನ್ ಸ್ತಾಥಂ ಬಿಟ್ಟರೆ ಮಾರ್ಕ್ ವಾಲ್ ಬರ್ಗೆ ಇಷ್ಟವಾಗುವುದು. ಅದರಲ್ಲೂ ಒಂದು ಕಮರ್ಶಿಯಲ್ ಎಲಿಮೆಂಟಿರುವ ಚಿತ್ರಗಳೆಂದರೆ ನನಗೆ ಯಾವಾಗಲೂ ಖುಷಿ ತರುವ ವಿಚಾರವೇ.ಈ ಚಿತ್ರದ ಕಥೆಯ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುವ ಹಾಗಿಲ್ಲ. ಮಾದಕ ವಸ್ತುವಿನ ಸಾಗಣೆಯನ್ನೂ ಮುಖ್ಯ ಎಳೆಯನ್ನಾಗಿ ಹೊಂದಿರುವ ಚಿತ್ರದಲ್ಲಿ ನಾಯಕ ಮಾಜಿ ಸ್ಮಗ್ಲರ್. ಆದರೆ ಈವಾಗ ದಂಧೆ ಬಿಟ್ಟು ತನ್ನ ಹೆಂಡತಿ ಮಕ್ಕಳೊಂದಿಗೆ ಆರಾಮವಾಗಿದ್ದಾನೆ. ಆದರೆ ಮೈದುನ ಕೂಡ ಒಬ್ಬ ಸಾಗಣೆದಾರನಾಗಿದ್ದು ಪೋಲಿಸರಿಂದ ತಪ್ಪಿಸಿಕೊಳ್ಳುವಾಗ ಮಾದಕವಸ್ತುವನ್ನು ನದಿಗೆ ಬೀಸಾಕಿಬಿಡುತ್ತಾನೆ. ಆದರೆ ಅವನ ಬಾಸ್ ಬಿಡಬೇಕಲ್ಲ...ಅವನ ಹಿಂದೆ ಬೀಳುತ್ತಾನೆ...ನಾಯಕ ಇನ್ನೂ ಸುಮ್ಮನಿದ್ದರೆ ನಾಯಕನೆನಿಸಿಕೊಳ್ಳುವುದಿಲ್ಲವಲ್ಲ...ಮೈದುನನ್ನುಳಿಸಲು ಹೋರಾಟಮಾಡುತ್ತಾನೆ...ಚಿತ್ರ ಕೆಲವೊಂದು ಕಡೆ ಕುತೂಹಲ ತರಿಸಿದರೂ ಸುಮಾರು ಕಡೆ ಬೋರ್ ಹೊಡೆಸುತ್ತದೆ. ಸಂಭಾಷಣೆ ಅಂತಹ ಹೇಳಿಕೊಳ್ಳುವಹಾಗಿಲ್ಲ. ಹಾಗೆ ಹೊಡೆದಾಟದ ಸನ್ನಿವೇಶಗಳೂ ಅಷ್ಟೇ. ಹಾಗಾಗಿ ಚಿತ್ರ ಒಂದು ಸಾಮಾನ್ಯ ಚಿತ್ರವೆನಿಸಿಕೊಳ್ಳುತ್ತದೆ.
2.ಹೇ ವೈರ್:
ಇದೊಂದು ಪಕ್ಕ ಆಕ್ಷನ್ ಚಿತ್ರ. ನಮ್ಮಲ್ಲಿ ಮಾಲಾಶ್ರೀ ಚಿತ್ರಗಳ ರೀತಿ ಇರುವ ಚಿತ್ರವಿದು. ಒಂದು ಕೇಡಿಗಳ ಗ್ಯಾಂಗ್ ..ನಾಯಕಿ ಹೊಡೆದಾಟ...ಇಷ್ಟೇ ಸಿನೆಮಾ.ಆರು ಅಡಿಗೆ ಕೇವಲ ಇಂಚುಗಳಷ್ಟು ಕಡಿಮೆಯಿರುವ ನಾಯಕಿ ಗಿನಾ ಕ್ಯಾರೆನೋ ಅಭಿನಯದ ಈ ಚಿತ್ರದಲ್ಲಿ ಒಂದೆರೆಡು ಹೊಡೆದಾಟದ ದೃಶ್ಯ ಬಿಟ್ಟರೆ ಬೇರೇನೂ ಹೇಳಿಕೊಳ್ಳುವ ಹಾಗಿಲ್ಲ. ಚಿತ್ರಕಥೆಯೂ ಅಷ್ಟೇ . ನಿಂತಲ್ಲೇ ಸುತ್ತುತ್ತದೆ. ಅಂತಹ ತಿರುವುಗಳಿಲ್ಲ. ಎಲ್ಲವೂ ನಿರೀಕ್ಷಿತವೇ. ಒಮ್ಮೆ ನೋಡಿ ಮರೆತುಬಿದಬಹುದಾದ ಚಿತ್ರ ಹೇ ವೈರ್. ಓಶಿಯನ್1,2,3, ಇನ್ ಫಾರ್ಮಂಟ್ ಮುಂತಾದ ಚಿತ್ರಗಳ ನಿರ್ದೇಶಕ ಸ್ಟೀವನ್ ಸೋಡರ್ಬರ್ಗ್ ನಿರ್ದೇಶನದ ಅತ್ಯಂತ ಸಾಮಾನ್ಯ ಚಿತ್ರವಿದು.
3.ವುಮನ್ ಇನ್ ಬ್ಲಾಕ್:
 ಹ್ಯಾರಿ ಪಾಟರ್ ನಾಯಕ ಡೆನಿಯಲ್ ರಾಡ್ಕ್ಲಿಫ್ ಅಭಿನಯದ ಈ ಚಿತ್ರ .ವಕೀಲ ವೃತ್ತಿಯ ನಾಯಕ ವಿಧುರ. ಕಾರ್ಯ ನಿಮಿತ್ತ ಒಂದು ಹಳ್ಳಿಗೆ ಹೋದಾಗ ಕಪ್ಪು ಧಿರಿಸಿನ ದೆವ್ವವೊಂದು ಅಲ್ಲಿ ಭಯಾನಕ ವಾತಾವರಣ ಸೃಷ್ಟಿಸಿರುವುದು ತಿಳಿದುಬರುತ್ತದೆ. ಮುಂದೆ ಅದೇ ಒಂದಷ್ಟು ಭಯಾನಕ ಸನ್ನಿವೇಶಗಳು.. ಕೊನೆಗೊಂದು ರಹಸ್ಯ..ಚಿತ್ರ ಒಂದು ಹಾರರ್ ವಿಭಾಗದ ಚಿತ್ರವಾದರೂ ಅಂತಹ ಪ್ರಭಾವನ್ನೇನೂ ಬೀರುವುದಿಲ್ಲ. ಹ್ಯಾರಿ ಪಾಟರ್ ನಾಯಕ ನಮಗೆ ಈ ಚಿತ್ರದಲ್ಲೆಲ್ಲೂ ದೊಡ್ದವನೆನಿಸುವುದಿಲ್ಲ. ಹಾಗಾಗಿ ಚಿತ್ರ ಅಲ್ಲಲ್ಲಿ ಶಾಕ್ ಕೊಟ್ಟರೂ ಪರಿಪೂರ್ಣ ಭಯಾನಕ ಚಿತ್ರ ನೋಡಿದ ಭಾವ ಮೂಡಿಸುವುದಿಲ್ಲ.
4.ಕ್ರೋನಿಕಲ್:
ಜೋಶ ಟ್ರಂಕ್ ನಿರ್ದೇಶನದ ಮೊತ್ತಮೊದಲ ಚಿತ್ರವಿದು. ಮೂರು ಜನ ಗೆಳೆಯರು. ಅವರಲ್ಲೊಬ್ಬ ಪುಕ್ಕಲ. ಅವನನ್ನು ಎಲ್ಲರೂ ರೇಗಿಸುವವರೇ. ತಂದೆಯ ನಿರ್ಲಕ್ಷ್ಯಕ್ಕೊಳಗಾದ ಆತನಿಗೆ ಎಲ್ಲವನ್ನೂ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಹುಚ್ಚು. ಮುಂದೆ ಮೂವರಿಗೂ  ಅದ್ಭುತ ಶಕ್ತಿ ದೊರೆತಾಗ ಅದನ್ನು ಮೊದಲಿಗೆ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆನಂತರ ಆ ಶಕ್ತಿಯಿಂದ ತಮಗಿಷ್ಟ ಬಂದಹಾಗೆ ಆಡಲು ಶುರುಮಾಡುತ್ತಾರೆ. ಮುಂದೆ ಅದೇ ದುರಂತಕ್ಕೆ ಕಾರಣವಾಗುತ್ತದೆ.
ನನಗೆ ಈ ಚಿತ್ರ ಇಷ್ಟವಾದದ್ದು ಅದರ ವಿಶುಯಲ್ ಎಫೆಕ್ಟ್ ನಿಂದ. ಇಡೀ ಚಿತ್ರವನ್ನ ಬ್ಲೇರ್ ವಿಚ್ ಪ್ರಾಜೆಕ್ಟ್ ಮಾದರಿಯಲ್ಲಿ ಅಂದರೆ ಯಾವುದು ಮುದ್ರಿತ ಟೇಪಿನಲ್ಲಿದ್ದ ವೀಡಿಯೊ ತರಹ ನಿರೂಪಿಸಲಾಗಿದೆ. ಆದರೂ ದೃಶ್ಯ ವೈಭವ ಮನಸ್ಸಿಗೆ ತಟ್ಟುತ್ತದೆ. ಒಮ್ಮೆ ಆರಾಮವಾಗಿ ನೋಡಬಹುದಾದ ಚಿತ್ರವಿದು.

Saturday, March 16, 2013

ಹಾಲಿವುಡ್ ನ ಬಾಂಗ್ಲಾ ರೀಮೇಕ್...

ಯಾವುದೇ ಚಿತ್ರರಂಗದಲ್ಲೂ ರೀಮೇಕ್ ಎನ್ನುವುದು ಇದ್ದೆ ಇದೆ. ರೀಮೇಕ್ ತಪ್ಪೂ ಎಂದೂ ಹೇಳಲಾಗುವುದಿಲ್ಲ. ಆದರೆ ಮಕ್ಕಿಕಾಮಕ್ಕಿ ಭಟ್ಟಿ ಇಳಿಸುವುದು ಸ್ವಲ್ಪ ಇರುಸು ಮುರುಸು ತರುತ್ತದೆ. ಆದರೆ ಬರೀ ಕಥೆಯನ್ನಷ್ಟೇ ತಗೆದುಕೊಂಡು ಅದನ್ನು ನಮ್ಮ ನೆಲಕ್ಕೆ ಅನ್ವಯಿಸಿ ನೋಡುವಂತಹ ಸಿನಿಮಾ ಮಾಡಿದರೆ ಅದು ಸ್ವಾಗತಾರ್ಹ. ಪ್ಯಾಚ್ ಆಡಮ್ಸ್ ಮತ್ತು ಡೆಡ್ ಪೋಎಟ್ ಸೊಸೈಟಿ ಚಿತ್ರಗಳನ್ನ ಮುನ್ನಾಭಾಯಿ ಎಂ.ಬಿ.ಬಿ.ಎಸ್ ಮತ್ತು 3 ಇಡಿಯಟ್ಸ್ ಮಾಡಿದಾಗ ನಾವು ಖುಷಿಖುಷಿಯಿಂದ ನೋಡಿದ್ದೇವೆ. ಮೂಲ ಪ್ರತಿಗಿಂತ ಇದೆ ಅದ್ಭುತ ಅಂತಲೂ ಅನಿಸಿದ್ದಿದೆ. ಹಾಗೆಯೇ ಎ ಕಿಸ್ ಬಿಫೋರ್ ಡೈಯಿಂಗ್ ಗೆ ಒಂದು ತಾರ್ಕಿಕ ಹಿನ್ನೆಲೆ ಕೊಟ್ಟು ಬಾಜಿಗರ್ ಮಾಡಿದಾಗ ಹುಚ್ಚೆದ್ದು ನೋಡಿದ್ದೂ ಇದೆ.. 
ನಮಗೆಲ್ಲಾ ಗೊತ್ತಿರುವಂತೆ ಬೆಂಗಾಲಿ ಭಾಷೆಯ ಚಿತ್ರಕರ್ಮಿಗಳು ಅವರ ಸ್ವಂತ ಕಥೆಯಿಂದಾಗಿ ಹೆಸರುವಾಸಿ. ಯಾವುದೇ ಸಿದ್ಧಸೂತ್ರಗಳಿಗೆ ಮಾರುಹೋಗದೆ ಸಿನೆಮಾ ಮಾಡುತ್ತಾ ಬಂದವರು ಅವರು. ಹಾಗಾಗಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಾಲಿ ಸಿನೆಮಾಗಳಿಗೆ ಅದರದೇ ಆದ ಮಾನ್ಯತೆಯಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಕ್ರಮೇಣ ನಶಿಸಿಹೋಗುತ್ತಿದೆ. ಇತ್ತೀಚಿನ  ವರ್ಷದಲ್ಲಿ ಬಂದ ಬೆಂಗಾಲಿ ಸಿನೆಮಾಗಳೆಡಿಗೆಗೆ ಕಣ್ಣು ಹಾಯಿಸಿದರೆ ನಮಗದು ಅರ್ಥವಾಗುತ್ತದೆ. ಬಹುತೇಕ ದಕ್ಷಿಣ ಭಾರತದ ಅದರಲ್ಲೂ ತೆಲುಗು ಚಿತ್ರಗಳ ಅವತರಣಿಕೆಯೇ ಅಲ್ಲಿವೆ. ಆರ್ಯ, ಆರ್ಯ 2, ಬೊಮ್ಮರಿಲ್ಲು, ರೆಡಿ, ಕನ್ನಡದ ಮುಂಗಾರು ಮಳೆ, ಸಿಂಘಂ ಹೀಗೆ.
ರೀಮೇಕ್ ಮಾಡುವಾಗ ಸವಾಲುಗಳು ಜಾಸ್ತಿ. ಬರೀ ಅಲ್ಲಿರುವುದನ್ನೇ ಇಲ್ಲಿ ತೆಗೆದು ಸಿನಿಮಾ ನೆಲಕಚ್ಚಿದ ಉದಾಹರಣೆ ಅತಿ ಹೆಚ್ಚು ಎನ್ನಬಹುದು. ಹಾಗಾಗಿ ಗಟ್ಟಿ ಕಥೆಯ ಚಿತ್ರಗಳನ್ನೂ, ಅದರ ಕಥೆಗಳನ್ನೂ ಬೇರೆ ಬೇರೆ ಭಾಷೆಗಳಲ್ಲಿ ಪುನರ್ನಿಮಿಸಲು ತಯಾರಿ ನಡೆಸುತ್ತಾರೆ. ಆದರೆ ಅದೇ ಯಂದಿರನ್, ಮಮ್ಮಿ, ಟೈಟಾನಿಕ್ , 2012 ಮುಂತಾದ ಚಿತ್ರಗಳನ್ನ ರೀಮೇಕ್ ಮಾಡಲು ಸಾಧ್ಯವಾಗುವುದಿಲ್ಲ
ಆದರೆ ಮೊನ್ನೆ ಬಾಂಗ್ಲ ಭಾಷೆಯ  ಒಂದು ಸಿನೆಮಾ ನೋಡುತ್ತಾ ನೋಡುತ್ತಾ ಅದೆಷ್ಟು ನಕ್ಕೆನೆಂದರೆ ಹೇಳಲಾಗದು. ಜೊತೆಗೆ ಅವರ ಹುಚ್ಚುತನಕ್ಕೆ ಬೆರಗಾದೆ. ಕಿಂಗ್ ಕಾಂಗ್ ಚಿತ್ರ ನಮಗೆಲ್ಲ ಗೊತ್ತೇ ಇದೆ. ಹಾಲಿವುಡಿನಲ್ಲಿ ಸುಮಾರು ಸಾರಿ ನಿರ್ಮಾಣ ವಾಗುತ್ತಲೇ ಇರುವ ಈ ಚಿತ್ರದ ಮುಖ್ಯ ಆಸ್ತಿ ಎಂದರೆ ಗ್ರಾಫಿಕ್ಸ್. ಯಾಕೆಂದರೆ ಕಿಂಗ್ ಕಾಂಗ್ ಎನ್ನುವ ಬೃಹತ್ ಗಾತ್ರವನ್ನು ಅದರ ಕೆಳಗಿನ ಜನಸಾಮಾನ್ಯರನ್ನು ನಿಜವಾಗಿ ತೋರಿಸಿದಾಗಲೇ ಸಿನೆಮಾ ಕನ್ವಿನ್ಸಿಂಗ್ ಎನಿಸುವುದು. ಆದರೆ ಬಾಂಗ್ಲಾ ಕಿಂಗ್ ಕಾಂಗ್ ಅದೆಲ್ಲಕ್ಕೂ ನಗು ಉಕ್ಕಿಸುವಂತಿದೆ. ಕಿಂಗ್ ಕಾಂಗ್ ಅಲ್ಲಿದೆ ಇಲ್ಲಿದೆ ಹಾಗಿದೆ ಹೀಗಿದೆ ಎಂಬುದನ್ನು ವರ್ಣನೆ ಕೊಡುತ್ತಲೇ ಸಾಗುವ ಚಿತ್ರ ಕೊನೆಗೆ ನಮಗೆ ಬೇಸ್ತು ಬೀಳುವಂತೆ ಮಾಡುತ್ತದೆ. ಗ್ರಾಫಿಕ್ಸ್ ಮುಖ್ಯ ಭಾಗವಾಗಿರುವ ಚಿತ್ರದಲ್ಲಿ ಅದೊಂದು ಬಿಟ್ಟು ಬೇರೆಲ್ಲವೂ ಅಸಹನೀಯವಾಗಿದೆ. ಒಂದು ರೀಮೇಕ್ ಚಿತ್ರವನ್ನೂ ಹೀಗೂ ಮಾಡಬಹುದೆನ್ನುವ ಉದಾಹರಣೆ ಎಂತಿದೇ ಈ ಚಿತ್ರ. ಸುಮ್ಮನೆ ಮಜಾ ತೆಗೆದುಕೊಳ್ಳುವ ಇರಾದೆಯಿದ್ದರೆ ಈ ಸಿನೆಮಾ ನೋಡಿ. ಹಾಲಿವಿಡಿನ ಕಿಂಗ್ ಕಾಂಗ್ ಚಿತ್ರ ಮರೆತುಹೋದರೂ ಹೋಗಬಹುದು.

Monday, March 11, 2013

ಬಟ್ಟಲು ಕಣ್ಣಿನ ಚಲುವೆ ಮತ್ತು ತುಜೆ ದೇಖ ತೋ ಏ ಹಾಡು...,

ಆಕೆಯ ಹೆಸರನ್ನು ನೀವು ರಮಣಿ ಎಂದುಕೊಳ್ಳಿ. ಆಕೆ ಮನೆಯಿಂದ ಕಾಲೇಜಿಗೆ ಅರ್ಧ ಕಿಲೋಮೀಟರು ನಡೆದುಕೊಂಡೆ ಬರುತ್ತಿದ್ದಳು.ಬಸವನ ಗುಡಿ ಬ್ಲಾಕಿನಿಂದ ಆಕೆ ಪುಸ್ತಕಗಳನ್ನ ಎದೆಗವುಚಿಕೊಂಡು ಆ ಕಡೆ ಈ ಕಡೆ ನೋಡದೆ ತಲೆ ತಗ್ಗಿಸಿ, ಆಗಾಗ ವಾಹನಗಳ ಹಾರನ್ನಿನ ಸದ್ದಿಗೆ ತಲೆ ಎತ್ತಿ ನೋಡಿ ಮತ್ತೆ ತಲೆ ಕೆಳಗೆ ಹಾಕಿ ನಡೆಯುತ್ತಾ ಸಾಗಿದರೆ ಕಾಲೇಜು ತಲುಪುವವರೆಗೆ ಆ ಕಡೆ ಈ ಕಡೆ ನೋಡುತ್ತಿರಲಿಲ್ಲ. ಆದರೆ ಆಕೆಯ ಮನೆಯಿಂದ ಹೊರಡುತ್ತಿದ್ದಂತೆ ಅವಳನ್ನು ಹಿಂಬಾಲಿಸುತ್ತಿದ್ದವನು ಭರತ್. ಪಕ್ಕದ ಕಾಲೇಜಿನಲ್ಲಿ ಡಿಪ್ಲೋಮಾ ಓದುತ್ತಿದ್ದವನು ಅವನು. ಒಂಭತ್ತನೆಯ ತರಗತಿಗೆ ಅವಳ ಬೆನ್ನು ಬಿದ್ದವನು ಮೂರುವರ್ಷಗಳವರೆಗೂ ಅವಳನ್ನು ಎಡೆಬಿಡದೆ ಹಿಂಬಾಲಿಸುತ್ತಿದ್ದ. ಆದರೆ ಒಂದು ದಿನವೂ ಆಕೆಯನ್ನು ಮಾತನಾಡಿಸುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಸುಮ್ಮನೆ ಅವಳ ಹಿಂದೆ ನಡೆದುಕೊಂಡು ಕಾಲೇಜಿನವರೆಗೆ ಬರುವುದು, ಆಕೆ ಕಾಲೇಜು ತಲುಪಿದ ಮೇಲೆ ವಾಪಸು ಹೋಗಿಬಿಡುವುದು, ಅದಾದ ಮೇಲೆ ಸಂಜೆ ಕಾಲೇಜು ಬಿಡುವ ಮುನ್ನವೇ ಕಾಲೇಜಿನ ಹತ್ತಿರ ಬರುವುದು, ಬಿಟ್ಟ ತಕ್ಷಣ ಅವಳನ್ನು ಬೆನ್ನೆತ್ತಿ ಮನೆಯ ವರೆಗೂ ಹೋಗಿ ಆಕೆ ಮನೆಯೊಳಗೇ ಹೋದ ಮೇಲೆ ತನ್ನ ಮನೆಗೆ ಹೋಗುವುದು ಅವನ ನಿತ್ಯದ ದಿನಚರಿಯಾಗಿತ್ತು. 
ಇನ್ನು ನಮ್ಮ ಮದನನ ಕಥೆಯೇ ಬೇರೆ. ರಮಣಿ ಕಾಲೇಜಿಗೆ ಬಂದ ದಿನವೇ 'ಅವಳು ನನ್ನ ಹುಡುಗಿ ಅವಳಿಗೆ ಯಾರೂ ಕಣ್ಣಾಕಬಾರದು..' ಎಂದು ತಾಕೀತು ಮಾಡಿಬಿಟ್ಟಿದ್ದ. ಸ್ವಲ್ಪ ಒರಟನಾದ್ದರಿಂದ ಅವನ ಮಾತು ನಡೆಯುತ್ತಿತ್ತು. ಅವಳು ಕುಳಿತುಕೊಳ್ಳುವ ಬೆಂಚಿನ ನೇರಕ್ಕೆ ಯಾರೂ ಕುಳಿತುಕೊಳ್ಳುವ ಹಾಗಿರಲಿಲ್ಲ, ಅವನು ಕುಳಿತುಕೊಳ್ಳಲು ಬಿಡುತ್ತಿರಲಿಲ್ಲ. ಯಾರೇ ಕುಳಿತಿದ್ದರೂ ಅವರನ್ನು ಜಗಳ ಮಾಡಿ ಎಬ್ಬಿಸಿ ಕಳುಹಿಸುತ್ತಿದ್ದ. ಇಂತಹ ರಕ್ಷಕರ ನಡುವೆಯೇ ಇದ್ದ ರಮಣಿ ಮಾತ್ರ ಇಬ್ಬರನ್ನು ಕಣ್ಣೆತ್ತಿ ವರ್ಷದಲ್ಲಿ ಒಂದು ಸಲವೂ ನೋಡಿರಲಿಲ್ಲ. ಇನ್ನು ಮಾತನಾಡಿಸುವುದೆಲ್ಲಿ ಬಂತು. ಕಾಲೇಜಿನಲ್ಲಂತೂ ಆಕೆಯನ್ನು ಮಾತನಾಡಿಸುವ ಹಾಗಿರಲಿಲ್ಲವಲ್ಲ. ಇನ್ನು ಹೊರಗೆ ಭರತ್ ನ ಕಣ್ಣು ತಪ್ಪಿಸುವುದಾದರೂ ಹೇಗೆ.?
ಆದರೆ  ರಮಣಿ ಸುಂದರಿ ಎಂದು ಒಂದೇಮಾತಿನಲ್ಲಿ ಹೇಳಿಬಿಡಬಹುದಿತ್ತು. ಬಟ್ಟಲು ಕಣ್ಣುಗಳು ಅವಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದ್ದವು. ಅದೊಂದು ದಿನ ನನ್ನ ಪಾಡಿಗೆ ನಾನು ಕುಳಿತಿದ್ದೆ. ನನ್ನ ಕಾಲಿನ ಹತ್ತಿರ ಪೆನ್ನಿನ ಕ್ಯಾಪೊಂದು ಬಂದು ಬಿದ್ದಿತ್ತು. ನಾನು ಬಗ್ಗಿ ನೋಡಿದ್ದೆ. ಹಿಂದುಗಡೆ ಕುಳಿತಿದ್ದ ಮದನ 'ಏಯ್ ಅದನ್ನೆತ್ತಿ ಅವಳಿಗೋ ಕೊಡು..' ಎಂದಾಗಲೇ ಅದು ರಮಣಿಯದು ಎಂದು ನನಗೆ ಗೊತ್ತಾದದ್ದು. ನಾನು ಆಕೆಯ ಕಡೆ ತಿರುಗದೆ ಹಾಗೆ ಎತ್ತಿಕೊಟ್ಟಿದ್ದೆ. ಆದರೆ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಅದೇ ರೀತಿ ಮತ್ತೆ ಕ್ಯಾಪು ನನ್ನ ಕಾಲಬಳಿ ಬಿದ್ದಿತ್ತು. ಮತ್ತೆ ಮತ್ತೆ ಅದು ಬೀಳಲು ಶುರುವಾದಾಗಲೇ ನನಗೆ ಗೊತ್ತಾದದ್ದು ಆಕೆ ಬೇಕೆಂತಲೇ ಆ ಕೆಲಸ ಮಾಡುತ್ತಿದ್ದಾಳೆ ಎಂಬುದು. ಸರ್ಪಗಾವಲಿನಲ್ಲಿದ್ದ ಹುಡುಗಿಯನ್ನು ಪ್ರೀತಿಸಲು ಸಾಧ್ಯವೇ..? ಇಲ್ಲಿ ಅವರಪ್ಪ ಅಮ್ಮನ ಪ್ರಶ್ನೆಯೇ ಇಲ್ಲ. ಇದ್ದದ್ದು ಇಬ್ಬರು ಏಕಮುಖಿ ಪ್ರೇಮಿಗಳದ್ದು. ಒಂದು ದಿನವೂ ಮಾತನಾಡಿಸದ ಆದರೆ ವರ್ಷಗಟ್ಟಲೆ ಪ್ರೀತಿಸುತ್ತಿದ್ದ ಅವರಿಬ್ಬರೂ ನಿಜವಾದ ಪ್ರೇಮಿಗಳೇ..ಆದರೆ ಆಕೆ ಅವರಿಬ್ಬರನ್ನು ಅಲಕ್ಷ್ಯ ಮಾಡಿದ್ದಳು. ಸುಖಾಸುಮ್ಮನೆ ನನ್ನ ಹಿಂದೆ ಬಿದ್ದಿದ್ದಳು. ಪ್ರೀತಿಸಬೇಕೆ ಬೇಡವೇ ಎಂಬ ಪ್ರಶ್ನೆ ಗೆ ನನ್ನಲ್ಲಿ ಸ್ಪಷ್ಟ ಉತ್ತರವಿರಲಿಲ್ಲ. ಹಾಗಂತ ಆಕೆಯ ಗೆಳೆತನ, ಸಾಂಗತ್ಯವನ್ನು ನಿರ್ಲಕ್ಷಿಸಳು ಮನಸ್ಸು ಒಪ್ಪಿರಲಿಲ್ಲ. ಆದರೆ ಈ ನಕ್ಷತ್ರಿಕರಿಂದ ಮುಕ್ತಿ ಹೇಗೆ ಎಂಬುದೇ ದೊಡ್ಡ ತಲೆ ನೋವಾಗಿತ್ತು ನನಗೆ. ಆದರೆ ರಮಣಿ ಅದ್ಯಾವುದನ್ನೂ ಗಮನಿಸುತ್ತಿರಲಿಲ್ಲ.ಪೆನ್ನು ಬೀಳಿಸುವ ಕಾರ್ಯಕ್ರಮದಿಂದ ಪ್ರಾರಂಭಿಸಿ ಮಾತನಾಡಿಸುವ ಮಟ್ಟಕ್ಕೆ ಬಂದಿದ್ದಳು . ನಾನು ಕಾಲೇಜು ಬಿಟ್ಟಾಕ್ಷಣ  ನನಗಾಗಿ ಕಾಯುತ್ತಿದ್ದಳು. ಆದರೆ ಏನೂ ಮಾತನಾಡುತ್ತಿರಲಿಲ್ಲ. ಸುಮ್ಮನೆ ನನ್ನನ್ನೊಮ್ಮೆ ನೋಡಿ ತನ್ನ ಮನೆಗೆ ಹೊರಟುಬಿಡುತ್ತಿದ್ದಳು. ಆ ಒಂದು ನೋಟಕ್ಕೆ ನಾನು ಇಡೀ ದಿನ ಕಾಯುತ್ತಿದ್ದೆ. ಬಹುಶ ಅವಳೂ ಕಾಯುತ್ತಿದ್ದಳೆನೋ. ಆಗತಾನೆ ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ ಬಿಡುಗಡೆಯಾಗಿತ್ತು. ಇಡೀ ಕಾಲೇಜಿನಲ್ಲಿ ಅದರದೇ ಮಾತು. ಎಲ್ಲರ ಬಾಯಲ್ಲೂ ಆ ಸಿನೆಮಾದ ಹಾಡಿನ ಗುನುಗು. ಶಾರುಕ್ ಅಂತೂ ನಮಗೆ ಹುಚ್ಚು ಹಿಡಿಸಿದ್ದಂತೂ ನಿಜ. ಶನಿವಾರ ನಾವೆಲ್ಲಾ ಸಿನಿಮಾಕ್ಕೆ ಹೊರಟು ನಿಂತಿದ್ದೆವು. ಮದನ ನನ್ನ ಹತ್ತಿರಕ್ಕೆ ಬಂದವನು 'ನೋಡು ಈವತ್ತು ರಮಣಿ ಬರ್ತಾಳೆ.. ನಿನ್ನ ಹತ್ತಿರ ಏನೋ ಮಾತಾಡಬೇಕಂತೆ...' ಎಂದಿದ್ದ. ನನಗೆ ಆಶ್ಚರ್ಯವಾಗಿತ್ತು. ಆದರೆ ರಮಣಿ ಅದೆಷ್ಟು ಬುದ್ದಿವಂತೆಯಾಗಿದ್ದಳೆಂದರೆ ತಾನೇ ಮದನನ ಹತ್ತಿರ ಹೋಗಿ ನೇರವಾಗಿ ವಿಷಯ ತಿಳಿಸಿ ನೀನೆ ನನಗೆ ಸಹಾಯ ಮಾಡು ನಾನು ಅವನೊಂದಿಗೆ ಮಾತಾಡಬೇಕು ಎಂದುಬಿಟ್ಟಿದ್ದಳು. ಅದನ್ನು ಮಹಾಪ್ರಸಾದವೆಂಬಂತೆ ಸ್ವೀಕರಿಸಿದ್ದ ಮದನ ನನಗೆ ಹಾಗೆ ಹೇಳಿದ್ದ. ನನಗೆ ಭಲೇ ಹುಡುಗಿ ಎನಿಸಿತ್ತು. 
ಚಿತ್ರಮಂದಿರದಲ್ಲಿ ಇಬ್ಬರು ಅಕ್ಕಪಕ್ಕ ಕುಳಿತಿದ್ದೆವು. ಸಿನಿಮಾದ ಪ್ರತಿ ದೃಶ್ಯ, ಹಾಡು ಅದ್ಭುತ ಎನಿಸಿತ್ತು. ಅದೆಂತಹದೋ ಅನನ್ಯ ಭಾವ ನನ್ನನ್ನು ತುಂಬಿ ಹೋಗಿತ್ತು. ಚಿತ್ರ ಮುಗಿಯುವವರೆಗೆ ನಾವಿಬ್ಬರು ಒಂದೂ ಮಾತನಾಡಿರಲ್ಲಿಲ್ಲ. ಆದರೆ ಅದೆಷ್ಟೋ ಮಾತನಾಡಿದಂತೆ ಭಾಸವಾಗಿತ್ತು.
ಆಕೆ ಪ್ರೊಪೋಸ್ ಮಾಡಿದ್ದಳು. ನಾನು ಸ್ವೀಕರಿಸಿದ್ದೆ. ಅಥವಾ ನಾನು ಪ್ರೊಪೋಸ್ ಮಾಡಿದ್ದೆ. ಅವಳು ಸ್ವೀಕರಿಸಿದ್ದಳು.ಅಥವಾ ಇಬ್ಬರಿಗೂ ಪ್ರೊಪೋಸ್ ಮಾಡುವ ಪ್ರಮೇಯವೇ ಬಂದಿರಲಿಲ್ಲ. ಅಷ್ಟರಲ್ಲಾಗಲೇ ಇಬ್ಬರಲ್ಲೂ ಪ್ರೀತಿ ಮೂಡಿಯಾಗಿತ್ತು.
ಮೊನ್ನೆ ಮೊನ್ನೆ ಅಚಾನಕ್ಕಾಗಿ ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ ಚಿತ್ರದ ಹಾಡು ಕಿವಿಗೆ ಬಿದ್ದಾಗ ಇದೆಲ್ಲಾ ನೆನಪಾದದ್ದಂತೂ ಸತ್ಯ. ಹಾಗೆ ಮೆಲುಕುಹಾಕುತ್ತಾ ಸಾಗಿದಂತೆ ಶಾರುಕ್, ಕಾಜೋಲ್ ಎಲ್ಲ ನೆನಪಾಗಿತ್ತು. ನನ್ನ ಕಣ್ಣಮುಂದೆ ಇಡೀ ಚಿತ್ರಣವೇ ಬಂದು ನಿಂತಿತ್ತು. ಒಂದು ಸಿನೆಮಾ, ಹಾಡು ನಮ್ಮನ್ನು ನಮ್ಮದೆಯ ಚರಿತ್ರೆಯ ಪುಟಗಳಿಗೆ ಕರೆದುಕೊಂಡು ಹೋಗುವಂತೆ ಮಾಡಿಬಿಡುವ ವಿಸ್ಮಯದ ಅರಿವಾಯಿತು. ಪ್ರತಿಯೊಬ್ಬರಿಗೋ ಬಹುಶ ಹಾಗೆ ಅನಿಸುತ್ತದೆ. ಆವತ್ತೆಷ್ಟು ಚೆನ್ನಾಗಿತ್ತು..? ನನಗಂತೂ ನಮ್ಮ ಕಾಲೇಜು ದಿನಗಳು ರಂಗೇರಲು ಕಾರಣ ಶಾರುಕ್ ಮತ್ತು ಕಾಜೋಲ್, ವಿಷ್ಣುವರ್ಧನ್, ಚಿತ್ರಗಳು ಮತ್ತದರ ಇಂಪಾದ ಗೀತೆಗಳು, ಎನಿಸುತ್ತದೆ. ಸಿನೆಮಾದ  ಯುಗಳ ಗೀತೆಗಳು, ಇಂಪಾದ ಸಂಗೀತ ಮೈ ನವಿರೇಳಿಸುತ್ತಿದ್ದವಲ್ಲದೆ ನಮ್ಮದೇ ಕಾಲೇಜು ಗೆಳತಿಯರನ್ನು ಕನಸು ಕಣ್ಣಿನ ಮೂಲಕ ನೋಡುವಂತೆ ಮಾಡುತ್ತಿದ್ದದಂತೂ ಸತ್ಯ. ಈವತ್ತು ಬಲವಂತವಾಗಿ ಬರೀ ನೆನಪನ್ನಷ್ಟೇ ಹೆಕ್ಕಲು ಸಾಧ್ಯವಿಲ್ಲ. ಜೊತೆಗೆ ಹಾಡುಗಳಿದ್ದರಷ್ಟೇ ಅದು ಸಂಪೂರ್ಣವಾಗುವುದು ಎನಿಸುತ್ತದೆ.ನಾನಂತೂ ಸಿನೆಮಾದ ಜೊತೆ ಜೊತೆಯೇ ಬೆಳೆದವನು. ಸಿನೆಮಾದ ಹಾಡುಗಳೇ ನನ್ನ ಬದುಕಿನ ಕಾಲಘಟ್ಟದ ಪ್ರಮುಖ ತಿರುವುಗಳು. ಸುಮ್ಮನೆ ಕುಳಿತು ನೆನಪಿಸಿಕೊಂಡರೆ ಬಾಜಿಗರೋ ಬಾಜಿಗರ್ ನಿಂದ ಹಿಡಿದು ಮುಂಗಾರುಮಳೆಯೇ ಏನು ನಿನ್ನ ಹನಿಗಳ ಲೀಲೆ ವರೆಗೆ ಮೈ ನವಿರೇಳಿಸುವ ನವಿರು ನವಿರಾದ ನೆನಪುಗಳು ಮನಸುಗಳನ್ನು ತಂಪಾಗಿಸುತ್ತವೆ.
ಅದೆಷ್ಟು  ಸಿನೆಮಾಗಳು ನನಗೆ ಅದ್ಭುತವಾದ ನೆನಪುಗಳಿಗೆ ಸಾಕ್ಷಿಯಾಗಿ ನಿಂತಿವೆ ಎಂಬುದನ್ನು ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ.ಆ ಹಾಡುಗಳು ಕಿವಿಗೆ ಬಿದ್ದರೆ ಬೇರೆಯದೇ ಮಾಯಾಲೋಕ ಕಣ್ಣಂಚಲ್ಲಿ ಮೂಡಿ ಮರೆಯಾಗುತ್ತದೆ.ಆ ನೆನಪಿನ ಭಾಗವಾದ ಅವರೆಲ್ಲಾ ನೆನಪಾದರೂ ಅವರೆಲ್ಲಿರಬಹುದು ಎಂಬ ಪ್ರಶ್ನೆ ಕಾಡುತ್ತದೆ. ಹಾಗೆ ಕಣ್ಣಂಚಿನಲ್ಲಿ ಒಂದು ಹನಿ ನೀರು ಜಿನುಗುತ್ತದೆ.ಅದರ ಭಾವ ನಮಗರಿವಾಗುವುದಿಲ್ಲ..ಸಿನೆಮಾ ಪ್ಯಾರದಿಸೋ ಚಿತ್ರದ ನಾಯಕನಂತೆ.
ಸಿನೆಮಾ ಪ್ಯಾರಡಿಸೋ ಸಿನೆಮಾದಲ್ಲಿ ಕೊನೆಯ ದೃಶ್ಯ ನಿಮಗೆ ಗೊತ್ತಿರಬಹುದು. ಸತ್ತ ಆಲ್ಫ್ರೆದೋ ನಾಯಕನಿಗಾಗಿ ಒಂದು ಸಿನೆಮಾದ ರೀಲನ್ನು ಬಿಟ್ಟು ಹೋಗಿರುತ್ತಾನೆ. ನಾಯಕ ಬಾಲ್ಯದಲ್ಲಿದ್ದಾಗ ನೋಡಬಾರದಿದ್ದ ಚುಂಬನದ ದೃಶ್ಯಗಳಿದ್ದ ರೀಲು ಅದು. ಅದನ್ನು ನಾಯಕನಿಗಾಗಿ ಎತ್ತಿ ಇಡುವ ಆಲ್ಫ್ರೆದೋ ಪ್ರೀತಿಯನ್ನು ಮರೆಯುವುದಾದರೂ ಹೇಗೆ. ಅದನ್ನು ಚಿತ್ರಮಂದಿರದಲ್ಲಿ ನೋಡುತ್ತಾ ನೋಡುತ್ತಾ ಕಣ್ಣೀರಾಗುತ್ತಾನೆ ನಾಯಕ. ನಾನು ನೋಡಿರುವ ಸಿನೆಮಾಗಳಲ್ಲಿ ಶಕ್ತಿಯುತವಾದ ಅದ್ಭುತವಾದ ಕ್ಲೈಮ್ಯಾಕ್ಸ್ ಅದೇ ಎನಿಸುತ್ತದೆ.
ನಿಮ್ಮ ನೆನಪುಗಳನ್ನು ಬಡಿದೆಬ್ಬಿಸುವ ಹಾಡುಗಳು ಯಾವುವು? ಅಥವಾ ಸಿನೆಮಾ ಯಾವುದಿರಬಹುದು? ಒಮ್ಮೆ ನೆನಪಿಸಿಕೊಳ್ಳಿ.