Wednesday, December 26, 2012

ಬೆಂಗಳೂರು ಸಿನೆಮೋತ್ಸವ -2

ರೋಜ್: ಚಿತ್ರದ ಕಥೆ 1945ರ ಕಾಲಘಟ್ಟದ್ದು. ಜರ್ಮನ್ ಸೈನಿಕನೊಬ್ಬನ ಪತ್ನಿ ಚಿತ್ರದ ನಾಯಕಿ ರೋಜ. ಸೈನಿಕ, ರಶಿಯನ್ ರ ದಾಳಿಯಿಂದ ಸತ್ತ ನಂತರ ರೋಜಾ ಒಂಟಿಯಾಗಿ ತನ್ನ ಜಮೀನಿನಲ್ಲೆ ಉಳಿದುಕೊಳ್ಳುತ್ತಾಳೆ. ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವನ್ನು ರಶಿಯನ್ ಸೈನಿಕರೂ ಎಸಗುತ್ತಿದ್ದರೂ ಆಕೆಯ ರಕ್ಷಣೆಗೆ ಯಾರೂ ಇರುವುದಿಲ್ಲ . ಚಿತ್ರದ ನಾಯಕ ಪೋಲೆಂಡ್ ದೇಶದ ಸೈನಿಕ. ವಾರ್ಸಾದ ಉಗಮದ ಸಮಯದಲ್ಲಿ ಕಣ್ಣಮುಂದೆಯೇ ತನ್ನ ಹೆಂಡತಿಯ ಮೇಲೆ ಅತ್ಯಾಚಾರವೆಸಗಿ ಸಾಯಿಸಿರುತ್ತಾರೆ. ತನ್ನ ಗುರುತನ್ನು ಮುಚ್ಚಿಟ್ಟುಕೊಳ್ಳಲು ಬರುವ ನಾಯಕ ರೋಜಾಳ ರಕ್ಷಣೆಗೆ ನಿಲ್ಲುತ್ತಾನೆ.ಮುಂದೆ ಆಕೆಯ ಹೊಲವನ್ನು ಹಸನುಮಾಡಿ, ಅವಳನ್ನು ರಶಿಯನ್ ಸೈನಿಕರಿಂದ ರಕ್ಷಿಸಲು ನಾನಾ ಪ್ರಯತ್ನ ಪಡುತ್ತಾನಾದರೂ ಆಕೆ ದುರ್ಮರಣಕ್ಕೀಡಾಗುತ್ತಾಳೆ . ಆಕೆಯ ಮಗಳನ್ನು ರಕ್ಷಿಸಲು ಪನತೊಡುವ ನಾಯಕ ಆನಂತರ ರಶಿಯನ್ ಸೈನಿಕರ ಕೈಗೆ ಸಿಕ್ಕಿ ನರಕಯಾತನೆ ಅನುಭವಿಸುತ್ತಾನೆ. ಅಷ್ಟೆಲ್ಲಾ ಹಿಂಸೆಯ ನಂತರವೂ ಬದುಕುಳಿಯುವ ನಾಯಕ ಕೊನೆಯಲ್ಲಿ ರೋಜಾಳ ಮಗಳನ್ನು ಹುಡುಕಿಕೊಂಡು ಹೋಗಿ, ಆಕೆಯನ್ನು ಸೇರುತ್ತಾನೆ. 
ಚಿತ್ರದ ಕಥೆ, ನಿರೂಪಣೆ ನಮಗೆ 1945ರ ಕರಾಳ ದಿನಗಳನ್ನು ಹಾಗೆಯೇ ತೆರೆದಿಡುತ್ತದೆ. ಜಯ ಯಾರ ಕಡೆಗೆ ಆಗಲಿ, ಯುದ್ಧದ ಭೀಕರತೆ ಮಾತ್ರ ಎರಡೂ ಕಡೆ ತನ್ನ ಕರಾಳ ಪ್ರಭಾವವನ್ನು ಬೀರದೆ ಇರುವುದಿಲ್ಲ. ಅಲ್ಲಿ ಹೆಂಗಸು, ಮಕ್ಕಳು ಗಂಡಸೆಂಬ ಭೇದ ಭಾವವಿಲ್ಲ.. ಆವತ್ತಿನ ದಿನದಲ್ಲಿ ಬದುಕೆಂಬುದು ಅದೆಷ್ಟು ಕಷ್ಟ ಕರವಾಗಿತ್ತೆ೦ಬುದು ಪ್ರಾರಂಭದ ದೃಶ್ಯದಲ್ಲಿಯೇ ನಿರ್ದೇಶಕ ನಮಗೆ ಮನವರಿಕೆ ಮಾಡಿಕೊಟ್ಟುಬಿಡುತ್ತಾನೆ. ಚಿತ್ರದಲ್ಲಿ ಇನ್ನೊಂದು ಗಮನ ಸೆಳೆಯುವ ಅಂಶವೆಂದರೆ ಕಲಾ ನಿರ್ದೇಶನ. ಯುದ್ಧದ ನಂತರದ ದೃಶ್ಯಗಳನ್ನು ಯಥಾವತ್ತಾಗಿ ಕಟ್ಟಿಕೊಡುವುದರಲ್ಲಿ ನಿರ್ದೇಶಕನಿಗೆ ಸರಿಸಮನಾಗಿ ಛಾಯಾಗ್ರಾಹಕ ಮತ್ತು ಕಲಾನಿರ್ದೇಶಕರೂ ಕೈ ಜೋಡಿಸಿದ್ದಾರೆ. ಹಾಗಾಗಿ ಚಿತ್ರದಲ್ಲಿ ನೈಜಕತೆ ಮೆರೆದಿದೆ.
ಯುದ್ಧದ ಬಗ್ಗೆ ಹಾಲಿವುಡಿನಿಂದ ಹಿಡಿದು ಪ್ರಪಂಚದ ಎಲ್ಲಾ ಚಿತ್ರರಂಗಗಳಲ್ಲೂ ಸುಮಾರಷ್ಟು ಚಿತ್ರಗಳು ತೆರೆಕಂಡಿವೆ. ದೇಶ ದೇಶ ಬೇರೆಯಾದರೂ, ಕಥೆಗಳು ಬೇರೆಯಾದರೂ ಒಟ್ಟಾರೆ ಪ್ರಭಾವ ಮಾತ್ರ ಒಂದೇ ಇರುತ್ತದೆ:ಯುದ್ಧ ಎನ್ನುವುದು ಅಮಾನವೀಯ ಎಂಬುದು.
ಬರೀ ಮೂರೊತ್ತು ತಿಂದು ಬದುಕುವುದಕ್ಕೆ, ತಮ್ಮ ನೆಲದಲ್ಲಿ ಬೆಳೆದು ತಮ್ಮ ಪಾಡಿಗೆ ತಾವಿರುತ್ತೆವೆಂಬುದಕ್ಕೆ ಬಿಡದ ಯುದ್ಧ ಯಾವತ್ತೂ ಯಾರಿಗೂ ಬೇಡ ಎಂಬ ಸಂದೇಶವನ್ನು ಚಿತ್ರ ಯಶಸ್ವಿಯಾಗಿ ಸಾರುತ್ತದಷ್ಟೇ ಅಲ್ಲ ತುಂಬಾ ದಿನದ ವರೆಗೆ ರೋಸ್ ಮತ್ತು ನಾಯಕ ತಾದೆಯುಜ್ ಪಾತ್ರಗಳು ಕಾಡುತ್ತವೆ. ಅವಶ್ಯವಾಗಿ ಒಮ್ಮೆ ನೋಡಬೇಕಾದ ಚಿತ್ರ ರೋಜ್.
ಇತರ ಮಾತರಂ:
 ಮಲಯಾಳಂ ನ ಕಾದಂಬರಿಕಾರ ಕಲ್ಪಟ್ಟ ನಾರಾಯಣನ್  ಅವರ ಕಾದಂಬರಿ ಆಧರಿಸಿದ ಚಿತ್ರ ಇತ್ರ ಮಾತರಂ 2012ರಲ್ಲಿ ತೆರೆಕಂಡ೦ತಹ ಚಿತ್ರ. ಒಂದೂವರೆ ಘಂಟೆಯಷ್ಟು ಅವಧಿಯ ಈ ಚಿತ್ರದ ನಿರ್ದೇಶಕ ಕೆ. ಗೋಪಿನಾಥನ್. ಚಿತ್ರದ ಪ್ರಮುಖ ಪಾತ್ರಧಾರಿ/ನಾಯಕಿಯ ಸಾವಿನೊಂದಿಗೆ ಸಿನೆಮಾ ಆರಂಭವಾಗುತ್ತದೆ. ಮೂವತ್ತೆಂಟು ವರ್ಷದ ಒಂದು ಮಗುವಿನ ತಾಯಿಯಾಗಿದ್ದ ಗೃಹಿಣಿಯ ಸಾವಿನ ನಂತರ ಆಕೆಯ ಅಂತಿಮ ದರ್ಶನಕ್ಕೆ ಬರುವ ಸಂಬಂಧಿಕರ ಮೂಲಕ ಆಕೆಯ ಹಿನ್ನೆಲೆ, ಜೀವನದ ಆಗುಹೋಗುಗಳು ತಿಳಿಯುತ್ತಾ ಹೋಗುತ್ತವೆ. ನನ್ನ ಒಡವೆಗಳನ್ನು ಜೋಪಾನವಾಗಿಡು  ಎಂದು ಪಕ್ಕದ ಮನೆಯ ಮುದುಕಿ ತನ್ನ ಆಭರಣಗಳನ್ನು ಕೊಟ್ಟಿರುತ್ತಾಳೆ. ಈಗ ಏಕಾಏಕಿ ಆಕೆ ಸತ್ತದ್ದರಿಂದ ಮುದುಕಿಗೆ ಆಭರಣದ ಚಿಂತೆಯಾಗುತ್ತದೆ. ಬಾಲ್ಯದ ಗೆಳತಿಗೆ ತನ್ನ ಕಷ್ಟಸುಖ ಹಂಚಿಕೊಳ್ಳಲು ಇದ್ದ ಏಕೈಕ ವ್ಯಕ್ತಿ ಇನ್ನಿಲ್ಲವಲ್ಲ ಎಂಬ ಚಿಂತೆ. ಪಕ್ಕದ ಮನೆಯ ಹುಡುಗ, ಕೆಲಸದಾಳು.. ಹೀಗೆ ಎಲ್ಲರ ಜೀವನದಲ್ಲೂ ಆಕೆಗಿದ್ದ ಪಾತ್ರವು ಚೀಚಿಯ ಜೀವನದ ವಿವಿಧ ಮಗ್ಗಲನ್ನು ವಿಶದಪಡಿಸುತ್ತವೆ.
ಚಿತ್ರದ ಕಥೆ-ಚಿತ್ರಕಥೆ ಭಿನ್ನವೆನಿಸಿದರೂ ಮಂದಗತಿಯ ನಿರೂಪಣೆ ಪ್ರೇಕ್ಷಕರನ್ನು ಆಕಳಿಸುವಂತೆ ಮಾಡುತ್ತದೆ. ಒಬ್ಬೊಬ್ಬರು ಹೆಣ ನೋಡಲು ಬಂದಾಗ ಅವರ ಮೂಲಕ ಅವರು ಮತ್ತು ನಾಯಕಿಗೆ ಸಂಬಂಧಪಟ್ಟ ಘಟನೆಗಳು ತೆರೆದುಕೊಳ್ಳುತ್ತವೆ. ಕೆಲವು ಘಟನೆಗಳು ಆತ್ಮೀಯವೆನಿಸುತ್ತವೆ. ಕೆಲವು ಆಸಕ್ತಿಕರವೆನಿಸುತ್ತವೆ. ಆದರೂ ಇನ್ನೂ ಏನಾದರೂ ಬೇಕಿತ್ತೇನೋ ಎನಿಸುವುದರಿಂದ ಚಿತ್ರ ಮಾಸ್ಟರ್ ಪೀಸ್ ಎನಿಸುವುದಿಲ್ಲ.
ದಿ ಮೂನ್'ಸ್ ಪಾಮ್:
 ಖಾಲಿದ್ ಯೂಸೆಫ್ ನಿರ್ದೇಶನ 2011ರಲ್ಲಿ ಬಿಡುಗಡೆಯಾದ ಈಜಿಪ್ಟ್ ಭಾಷೆಯ ಚಿತ್ರದ ಅವಧಿ ಎರಡು ಘಂಟೆಗಳು.ದಿ ಮೂನ್'ಸ್ ಪಾಮ್ ಚಿತ್ರದ ಕಥೆ ಇಷ್ಟೇ. ಒಬ್ಬಾಕೆಗೆ ಐದು ಜನ ಮಕ್ಕಳು. ಗಂಡನ ಕನಸು ಒಂದು ಸ್ವಂತ ಮನೆ ನಿರ್ಮಿಸುವುದಾಗಿರುತ್ತದೆ, ಆದರೆ ಅದು ಈಡೇರದೆ ಆಟ ಅಕಾಲ ಮರಣಕ್ಕೀಡಾದಾಗ ತಾಯಿ ಆ ಕನಸನ್ನು ಮಕ್ಕಳಿಗೆ ವರ್ಗಾಯಿಸುತ್ತಾಳೆ. ಮನೆ ಕಟ್ಟಲು ಹಣ ಸಂಪಾದಿಸಲು ಐವರೂ ನಗರಕ್ಕೆ ಹೊರಟುಬಿಡುತ್ತಾರೆ,.ಅಲ್ಲಿ ಐವರ ಬದುಕು ಕಾರಣಾ೦ತರದಿಂದಾಗಿ ಬೇರೆ ಬೇರೆ ಯಾಗುತ್ತದೆ. ಮುಂದೆ ಆಕೆಯ ಸಾಯುವ ಕೊನೆ ಕ್ಷಣದಲ್ಲಿ ಹಿರಿಯ ಮಗ ಜಿಕ್ರಿ ತನ್ನ ಉಳಿದ ನಾಲ್ವರು ತಮ್ಮಂದಿರನ್ನು ಹುಡುಕಿ ಜೊತೆಯಲ್ಲಿ ಕರೆದುಕೊಂಡು ಬರಲು ನಿರ್ಧರಿಸುತ್ತಾನೆ. ಅವರೆಲ್ಲರಿಗೂ ಅಣ್ಣನ ಮೇಲೆ ಅಸಮಾಧಾನವಿರುತ್ತಾದ್ದರಿಂದ ಯಾರೂ ಒಪ್ಪುವುದಿಲ್ಲ. ಕೊನೆಯಲ್ಲಿ ತಾಯಿಯ ಸಾವಿನೊಂದಿಗೆ ಐವರೂ ಒಂದಾಗುತ್ತಾರಲ್ಲದೆ ಅಮ್ಮನ ಕನಸಾದ ಮನೆ ಕಟ್ಟುವುದನ್ನು ನನಸಾಗಿಸುತ್ತಾರೆ.
ಚಿತ್ರವೂ ಮಾಮೂಲಿ ಮಸಾಲೆ ಚಿತ್ರದಂತಿದೆ. ಯಾವುದೇ ಕಲಾತ್ಮಕ ಅಂಶಗಳಾಗಲಿ, ಹೊಸತನವಾಗಲಿ ಚಿತ್ರದಲ್ಲಿಲ್ಲ. ಚಿತ್ರದ ಪಾತ್ರ ಪೋಷಣೆ ಅಷ್ಟಾಗಿ ಪರಿಣಾಮಕಾರಿಯೆನಿಸುವುದಿಲ್ಲ. ಐದು ನಾಯಕರ ಪಾತ್ರಗಳೂ ಅಷ್ಟೇ. ಯಾವುದು ನಮ್ಮನ್ನು ಅಷ್ಟಾಗಿ ಕಾಯುಡುವುದಿಲ್ಲವಾದರೂ ತಾಯಿಯ ಪಾತ್ರ ಕೆಲವು ಕಡೆ ಮೆಚ್ಚುಗೆಗೆ ಪಾತ್ರವಾಗುತ್ತದೆ.
ನಮ್ಮದೇ ತೊಂಬತರ ದಶಕದ ಹಿಂದಿ ಸಿನೆಮಾ ನೋಡಿದಂತೆ ಭಾಸವಾದರೆ ಅದಕ್ಕೆ ಖಾಲಿದ್ ಯೂಸಫ್ ಕಾರಣರಲ್ಲ. ಅದಕ್ಕೆ ನಾವೇ ಕಾರಣವಾಗುವುದೇಕೆಂದರೆ ಇಂತಹ ಚಿತ್ರಗಳನ್ನ ಈಗಾಗಲೇ ಸಾಕಷ್ಟು ನೋಡಿಬಿಟ್ಟಿದ್ದೇವೆ.
ಓಆಸ್:
ಅಭಿನವ್  ಶಿವ್ ತಿವಾರಿ ಎಂಬ ನವನಿರ್ದೆಶಕನ ಚಿತ್ರ ಓಆಸ್.ನೇಪಾಳದ ಚಿಕ್ಕ ಹಳ್ಳಿಯೊಂದರ ಬಾಳೆ ಕಿಕು. ಆಕೆಗೆ ತುಂಬಾ ಓದಬೇಕೆಂಬಾಸೆಯಿದ್ದರೂ ಆಕೆಯ ಮನೆಯ ಬಡತನ ಅದಕ್ಕೆ ಇಂಬು ನೀಡುವುದಿಲ್ಲ.ಆಕೆಯನ್ನು ಆಕೆಯ ಊರಿನವಳೇ ಆದ, ಸಂಬಂಧಿಯೊಬ್ಬಳು ಸೋಗಿನ ಮಾತಾಡಿ ಅಪ್ಪ ಅಮ್ಮನ ಮನವೊಲಿಸಿ ಸುಂದರ ಬದುಕನ್ನು ರೂಪಿಸುವ ಭರವಸೆ ನೀಡಿ ಅಲ್ಲಿಂದ ಕರೆದುಕೊಂಡು ಬಂದು ವೇಶ್ಯಾವಾಟಿಕೆಗೆ ತಳ್ಳುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ಕಿಕುವಿನ ವೇಶ್ಯಾಗೃಹ ಯಾತ್ರೆ. ಅಲ್ಲಿಂದ ತಪ್ಪಿಸಿಕೊಳ್ಳಲು ಮತ್ತೊಂದು ಅದಕ್ಕಿಂತ ಹೆಚ್ಚಿನ ನರಕಸ್ವರೂಪಿ  ವೇಶ್ಯಾಗೃಹಕ್ಕೆ  ಬೀಳುತ್ತಾಳೆ. ನರಕಯಾತನೆ ಅನುಭವಿಸುತ್ತಾಳೆ. ಆದರೆ ಅಲ್ಲಿಂದ ತಪ್ಪಿಸಿಕೊಳ್ಳುವ ಕನಸನ್ನು ಮಾತ್ರ ಜೀವಂತವಾಗಿಟ್ಟುಕೊಂಡಿರುತ್ತಾಳೆ. ಕೊನೆಯಲ್ಲಿ ಸರ್ಕಾರೇತರ ಸಂಸ್ಥೆಯೊಂದರ ನೆರವಿನಿಂದ ಆಕೆ ಬಿಡುಗಡೆಯಾದರೂ ತಾನು ಅಲ್ಲೇ ಉಳಿದು ಆ ಸಂಸ್ಥೆಯಲ್ಲಿ ಕೆಲಸ ಮಾಡುವ ನಿರ್ಧಾರ ಕೈಗೊಳ್ಳುತ್ತಾಳೆ.
ಚಿತ್ರದ ಕಥೆ ಅದರ ಹಿಂದಿನ ಸತ್ಯ /ವಾಸ್ತವ ನಮಗೆಲ್ಲಾ ಗೊತ್ತಿರುವಂತಹದ್ದೆ. ವೇಶ್ಯಾವಾಟಿಕೆ, ಮಕ್ಕಳ ಕಳ್ಳ ಸಾಗಾಣಿಕೆಯ ಬಗ್ಗೆ ದೇಶದ ವಿವಿಧೆಡೆ ಎಲ್ಲಾ ರೀತಿಯಲ್ಲೂ ಚಿತ್ರಗಳು ಬಂದುಹೋಗಿವೆ. ಅದೇ ನಿಟ್ಟಿನಲ್ಲಿ ಇದು ಒಂದು ಚಿತ್ರ ಎನಿಸುತ್ತದೆಯೇ ಹೊರತು ಹೊಸದಾದ ಅನುಭಾವವನ್ನು ಕಟ್ಟಿಕೊಡುವುದಿಲ್ಲ. ಚಿತ್ರ ಮುಂದುವರೆದಂತೆ ಎಲ್ಲಾ ನಿರೀಕ್ಷಿತ ಎನಿಸುತ್ತದೆ. ಆದರೆ ಕೆಲವು ಕಡೆ ಚಿತ್ರ ಚಿತ್ರೀಕರಣವನ್ನು ಅಗತ್ಯಕ್ಕೆ ತಕ್ಕಂತೆ ಮೊನಚಾಗಿಸಿರುವುದರಿಂದ ಇದು ಭಾರತೀಯ ಚಿತ್ರವೇ ಎನ್ನುವ ಅನುಮಾನ ಉಂಟುಮಾಡುತ್ತದೆ. ಚಿತ್ರದ ಪ್ರಾರಂಭದಲ್ಲಿ ತೀವ್ರಗತಿಯಲ್ಲಿ ಮುಂದುವರೆಯುವ ಚಿತ್ರ ತದನಂತರ ಕೆಲವು ಸನ್ನಿವೇಶಗಳ ಪುನರಾವರ್ತನೆಯಿಂದಾಗಿ ನಿಧಾನವಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಬಹುತೇಕರಿಗೆ ಗೊತ್ತಿರುವ ಸತ್ಯವನ್ನು ಒಂದು ಸೀದಾಸಾದಾ ಕಥೆಯ ಮೂಲಕ ನಿರ್ದೇಶಕರು ನಮ್ಮ ಮುಂದಿಡುವ ಪ್ರಯತ್ನ ಮಾಡಿದ್ದಾರೆ .
ಕಿಕುವಿನ ಪಾತ್ರ ನಿರ್ವಹಿಸಿರುವ ದಿವ್ಯಾ ಚೆತ್ರಿ ನಿಜಕ್ಕೂ ಅಭಿನಂದನಾರ್ಹರು. ಜೊತೆಗೆ ವೇಶ್ಯಾವಾಟಿಕೆಯೊಂದರ ಮುಖ್ಯಸ್ಥೆಯ ಪಾತ್ರ ನಿರ್ವಹಿಸಿರುವ ಪ್ರಿಯಾಂಕ ಬೋಸ್ ಕೂಡ ಅತ್ಯುತ್ತಮ ಅಭಿನಯ ನೀಡಿದ್ದಾರೆ.



Monday, December 24, 2012

ಚಿತ್ರೋತ್ಸವದ ಚಿತ್ರಗಳು: ಪರ್ವಿಜ್ ಮತ್ತು ಹೋಮ್

ತನ್ನ ರೈನಿ ಸೀಸನ್ [2010] ಚಿತ್ರದಿಂದ ಗಮನಸೆಳೆದಿದ್ದ ನಿರ್ದೇಶಕ ಮಾಜಿದ್ ಬರ್ಜೆಗರ್ ನಿರ್ದೇಶನದ ಚಲನಚಿತ್ರ ಪರ್ವಿಜ್. ಚಿತ್ರದ ಪ್ರಮುಖ ಪಾತ್ರಧಾರಿ ಪರ್ವಿಜ್ ಗೀಗ ಐವತ್ತು ವರ್ಷ ವಯಸ್ಸು. ತನ್ನ ಜೀವಮಾನದಲ್ಲೇ ಏನೊಂದು ಕೆಲಸವನ್ನೂ ಮಾಡದೆ ಅಪ್ಪನ ಮನೆಯಲ್ಲಿ ಉಂಡಾಡಿ ಗುಂಡನಂತೆ ಕಾಲ ಕಳೆದವ. ಅವನ ಸುತ್ತಮುತ್ತಲ ಜನರಿಗೆ ಪರ್ವಿಜ್ ಎಂದರೆ ಏತಕ್ಕೂ ಬಾರದ ನಾಲಾಯಕ್ಕು, ನಿರುಪಯೋಗಿ ಎನ್ನುವ ಭಾವವಿದೆ. ಅದನ್ನು ಯಾವತ್ತೂ ಮುರಿಯುವ, ಅವರ ಅನಿಸಿಕೆಯನ್ನು ಸುಳ್ಳುಮಾಡುವ ಯಾವ  ಉಮ್ಮೇದು ಎಮ್ಮೆಕಿವಿಯ ಪರ್ವಿಜ್ ಗೆ ಇಲ್ಲ. 
ಆದರೆ ಬದುಕು ಅಂದುಕೊಂಡ ಹಾಗೆ ಇರುವುದಿಲ್ಲವಲ್ಲ. ಪರ್ವಿಜ್ ನ ತಂದೆ ಮತ್ತೆ ಮರುಮದುವೆಯಾಗಲು ಯೋಚಿಸಿ, ನಿಶ್ಚಯಿಸಿಕೊಂಡ ಮೇಲೆ ಮಗನನ್ನು ಮನೆಯಿಂದ ಹೊರಗಿರಿಸಲು ಯೋಚಿಸುತ್ತಾನೆ. ಅಷ್ಟೇ ಅಲ್ಲ ಅವನ ದೈನಂದಿನ ಖರ್ಚುವೆಚ್ಚವನ್ನು ತಾನೇ ವಹಿಸಿಕೊಂಡು ಅವನಿಗೊಂದು ಮನೆಯನ್ನೂ ಹುಡುಕಿ ಅದರ ಬಾಡಿಗೆಯನ್ನು ತನ್ನ ಜೇಬಿನಿಂದಲೇ ಕೊಡಲು ನಿರ್ಧರಿಸುತ್ತಾನೆ. ಪರ್ವಿಜ್ ಗೆ ಈ ವಿಷಯ ಇರುಸುಮುರುಸಾದರೂ ಅವನ ನಿರ್ಧಾರಕ್ಕಿಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲವಾದ್ದರಿಂದ ಮರುಮಾತಾಡದೆ ಅಪ್ಪ ನೋಡಿದ ಇನ್ನೊಂದು ಮನೆಗೆ ವಾಸ್ತವ್ಯ ಬದಲಿಸುತ್ತಾನೆ. ಹೊಸಮನೆಯಲ್ಲಿ ಪಕ್ಕದ ಮನೆಯ ಹುಡುಗ ಕೂಡ ಪರ್ವಿಜ್ ನ ಮಾತಿಗೆ ಬೆಲೆಕೊಡದೆ ತನ್ನಿಷ್ಟದಂತೆ ಪರ್ವಿಜ್ ಮನೆಯನ್ನ ಬಳಸಿಕೊಳ್ಳತೊಡಗುತ್ತಾನೆ.
ಹೀಗೆ ಎಲ್ಲ ಕಡೆಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗುವ ಪರ್ವಿಜ್ ತನ್ನ ಅಸ್ತಿತ್ವವನ್ನು, ಇರುವಿಕೆಯನ್ನು ತೋರಿಸುವ ಪ್ರಯತ್ನ ಪಡುತ್ತಾನೆ. ಅದು ಚಿತ್ರವನ್ನೂ ಏಕಾಏಕಿ ಆಸಕ್ತಿಕರವನ್ನಾಗಿ ಮಾಡುವುದಲ್ಲದೆ, ಚಿತ್ರದ ಮಗ್ಗಲಿಗೆ ಹೊಸ ಚೈತನ್ಯ ತುಂಬುತ್ತದೆ. ಮುಂದಿನ ಕಥೆ ಇಷ್ಟೆ. ಅಪ್ಪನಿಗೆ,  ತನ್ನನ್ನು ರೇಗಿಸುತ್ತಿದ್ದ ಲಾಂಡ್ರಿಯವನಿಗೆ, ತನ್ನಪ್ಪನ ಮಾತನ್ನು ಕೇಳಿಕೊಂಡು ಪರ್ವಿಜ್ ನನ್ನು ಮನೆಯಿಂದ ಖಾಲಿ ಮಾಡಿಸಲು ಬಂದ ಮನೆ ಮಾಲೀಕನಿಗೆ, ಸದಾ ಗೋಳು ಹೊಯ್ದುಕೊಳ್ಳುತ್ತಿದ್ದ ಪಕ್ಕದ ಮನೆಯ ಹುಡುಗನಿಗೆ ಎಲ್ಲರಿಗೂ ಪಾಠ ಕಲಿಸಲು ಪರ್ವಿಜ್ ನಿರ್ಧರಿಸುತ್ತಾನೆ. ಆವಾಗ ನಡೆಯುವ ಘಟನೆಗಳು ಅಥವಾ  ಪರ್ವಿಜ್ ಕೃತ್ಯಗಳು ಇಡೀ ಚಿತ್ರಕ್ಕೆ ಹೊಸ ಆಯಾಮವನ್ನು ಕೊಡುತ್ತದೆ.
ಚಿತ್ರದ ನಿರೂಪಣೆಯಲ್ಲಿ ಹೊಸತನವೇನಿಲ್ಲವಾದರೂ ಇರಾನಿ ಚಿತ್ರಗಳಂತೆ ವಾಸ್ತವಕ್ಕೆ ಹತ್ತಿರವಾದ ಕಥೆ ಚಿತ್ರಕಥೆ ಇದೆ. ಯಾವುದೇ ಅವಸರವಿಲ್ಲದೆ ಯಾರನ್ನೂ ನಾಯಕನನ್ನಾಗಿಯೂ ಖಳನಾಯಕನನ್ನಾಗಿಯೂ ಮಾಡದೆ ಪಾತ್ರಗಳು ಸಂದರ್ಭಕ್ಕನುಸಾರವಾಗಿ ವರ್ತಿಸುವಂತೆ ಕಥೆ ಹೆಣೆದಿರುವ/ನಿರೂಪಿಸಿರುವ ನಿರ್ದೇಶಕ ಆ ಕಾರಣದಿಂದಾಗಿಯೇ ನಮಗಿಷ್ಟವಾಗುತ್ತಾನೆ. ಪರ್ವಿಜ್ ನ ಪ್ರತಿ ವರ್ತನೆಯಲ್ಲೂ ವಾಸ್ತವದ ಅಂಶವಿದೆ.ಹಾಗಾಗಿಯೇ ಚಿತ್ರ ನೈಜ ಘಟನೆಯ ಸಾಕ್ಷ್ಯಚಿತ್ರದಂತೆ ಭಾಸವಾಗುತ್ತದೆಯೇ ಹೊರತು ಎಲ್ಲೂ ಸಿನಿಮೀಯ ಎನಿಸುವುದಿಲ್ಲ. ಅತನ ವರ್ತನೆಯಲ್ಲಿ ಹತಾಶೆಯಿದೆ, ಕ್ರೌರ್ಯವಿದೆ ಹಾಗೆ ನ್ಯಾಯವೂ ಇದೆ. ಹೀಗಾಗಿ ಪರ್ವಿಜ್ ಚಿತ್ರವನ್ನೂ ಒಂದು ವಿಭಾಗಕ್ಕೆ ಅಥವ ಪರ್ವಿಜ್ ಪಾತ್ರವನ್ನ ಒಂದು ಮಾನದಂಡಕ್ಕೆ ಒಳಪಡಿಸಿ ಕೈತೊಳೆದುಕೊಳ್ಳಲಾಗುವುದಿಲ್ಲ. ಚಿತ್ರದ ಶಕ್ತಿ ಇದೆ ಎನ್ನಬಹುದು.
ಮೊದಲ ಇಪ್ಪತ್ತು ನಿಮಿಷ ಮಂದಗತಿಯ ನಿರೂಪಣೆ ಆಕಳಿಕೆ ತರಿಸಿದರೂ ತದನಂತರ ಮಂದಗತಿ ಹಾಗೆ ಇರುತ್ತದೆ. ಆದರೆ ಚಿತ್ರದ ಕಥೆ ಆಸಕ್ತಿಕರವಾಗಿ ಶರವೇಗವನ್ನೂ, ತಿರುವುಗಳನ್ನೂ ಪಡೆದುಕೊಳ್ಳುತ್ತದೆ. ಒಮ್ಮೆ ನೋಡಲೇಬೇಕಾದ ಚಿತ್ರ ಪರ್ವಿಜ್.
ಹೋಮ್:ಒಂದು ತುಂಬು ಕುಟುಂಬ. ಅದಕ್ಕೊಬ್ಬ ಯಜಮಾನ. ಅವನಿಗೆ ಎಲ್ಲವೂ ಆತನ ಅಣತಿಯಂತೆ ನಡೆಯಬೇಕೆನ್ನುವ ಬಯಕೆ.ಅವನ ಮಕ್ಕಳೂ ಅಷ್ಟೇ ಒಬ್ಬನನ್ನು ಹೊರೆತುಪಡಿಸಿ, ಎಲ್ಲರೂ ಅವನು ಹಾಕಿದ ಲಕ್ಷ್ಮಣ ರೇಖೆ ದಾಟುವುದಿಲ್ಲ . ಹಿರಿಯ  ಮಗ ಒಂದು ಕೊಲೆ ಮಾಡಿ ಜೈಲು ಸೇರಿಕೊಂಡವನು ಹಾಗೆಯೇ ಕತ್ತಲ ರಾಜ್ಯಕ್ಕೆ ಅಧಿಪತಿಯಾಗುತ್ತಾನೆ. ಇಂತಹ ಮನೆಯಲ್ಲಿ ಹೊರಬರದ ಹಲವಾರು ಸೂಕ್ಷ್ಮವೆನಿಸಿದರೂ ಸಹಿಸಲಾಗದ ಹಲವಾರು ಸಮಸ್ಯೆಗಳಿರುತ್ತವೆ . ತಾತನ ಶತಮಾನೋತ್ಸವದ ಆಚರಣೆಗಾಗಿ ಇಡೀ ಕುಟುಂಬ ಸಂಭ್ರಮದಿಂದ ಸಿದ್ಧವಾಗುತ್ತದೆ. ಅಲ್ಲಿಗೆ ಹಿರಿಯ ಮಗ ಕೂಡ ಬರುತ್ತಾನೆ. ಆದರೆ  ಶತಮಾನದ ಸಂಭ್ರಮಾಚರಣೆ ಬದಲಿಗೆ ಅಲ್ಲಿ ಮಾರಣಹೋಮ ನಡೆಯುತ್ತದೆ. ಹಿರಿಯ ಮಗನ ಪಾಪಕೃತ್ಯಗಳು ಅವನ ಜೊತೆಗೆ ಮನೆಯ ಸದಸ್ಯರನ್ನೂ ಆಪೋಶನ ತೆಗೆದುಕೊಳ್ಳುತ್ತವೆ .
2011ರಲ್ಲಿ ಬಿಡುಗಡೆಯಾದ ರಶಿಯನ್ ಭಾಷೆಯ ಚಲನಚಿತ್ರ ಹೋಮ್.ಎರಡು ಘಂಟೆ ಏಳು ನಿಮಿಷಗಳಷ್ಟು ಅವಧಿಯ ಈ ಚಿತ್ರದ ನಿರ್ದೇಶಕ ಒಲೆಗ್ ಪೋಗೊದೀನ್. ಚಿತ್ರದಲ್ಲಿ ಮುಖ್ಯವಾಗಿ ಹರವಾಗಿರುವುದು ಕುಟುಂಬದೊಳಗಿನ ಸಂಬಂಧದಲ್ಲಿನ ಸೂಕ್ಷ್ಮತೆ ಮತ್ತು ದ್ವೇಷ. ಇವುಗಳನ್ನು ಬಿಚ್ಚಿಡುತ್ತಾ ಒಂದೊಂದೆ ಪಾತ್ರಗಳನ್ನೂ ಪರಿಚಯಿಸುತ್ತಾ ಹೋಗುವ ನಿರ್ದೇಶಕ ಕಡಿಮೆ ಸಂಖ್ಯೆಯ ದೃಶ್ಯಗಳಲ್ಲಿ ಚಿತ್ರದ ಹಂದರ, ಮತ್ತು ಅಲ್ಲಿನ ಜನಜೀವನವನ್ನು ಬಿಚ್ಚಿಟ್ಟು ಬಿಡುತ್ತಾನೆ. ಒಮ್ಮೆಲೆ ಮನೆಗೆ ಹಿರಿಯ ಮಗ ಹಿಂದಿರುಗಿದ ನಂತರ ಒಂದಷ್ಟು ಹಳೆಯ ರಹಸ್ಯಗಳ ಹಿನ್ನೆಲೆ ಬಯಲಾಗುವುದರೊಂದಿಗೆ ಚಿತ್ರ ಸಾಹಸಮಯ ಮತ್ತು ಕುತೂಹಲಭರಿತ ರೋಮಾಂಚಕ ಮಗ್ಗಲಿಗೆ ಹೊರಳುತ್ತದೆ. ಅಮೇಲಿನದೆಲ್ಲಾ ಹುಡುಕಾಟ, ಹೊಡೆದಾಟ, ಕೊಲೆ ಇಷ್ಟೇ. ಹಲವಾರು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿರುವ ಈ ಚಿತ್ರ ತೀರಾ ಮಹತ್ವದ ಚಿತ್ರವಾಗಿಲ್ಲದಿದ್ದರೂ ಒಮ್ಮೆ ನೋಡಲಡ್ಡಿಯಿಲ್ಲ.

ಓದಿ ಮೆಚ್ಚಿದ್ದು: 

 ಅಪ್ಪ ಯಾವತ್ತಿಗೂ ನನ್ನ ಹೀರೋ . ಈವತ್ತಿನ 'ನಾನು' ಗೆ ಕಾರಣ ನನ್ನಪ್ಪ. ನನಗೆ ಯಾವತ್ತೂ ನನಸು  ಮಾಡಿಕೊಳ್ಳಲಾಗದ ಕನಸನ್ನು ಹಾಗೆ ಕನಸಾಗಿಸಿ ಹೋದ ಅಪ್ಪನ ನೆನಪು  ದಿನವಿಲ್ಲ ನನಗೆ. ನಿನ್ನೆ ಜೀವನ್ಮುಖಿ ಬ್ಲಾಗ್ ನಲ್ಲಿದ್ದ  ಛೆ ಅಪ್ಪನಿಗೂ ವಯಸ್ಸಾಗಿ ಬಿಡ್ತೆ ಲೇಖನ ನನ್ನ ಕಣ್ಣನ್ನು ಆರ್ದ್ರವಾಗಿಸಿತು ಹಾಗೆ ಅದರಲ್ಲಿನ ಇನ್ನು ಕೆಲವು ಲೇಖನಗಳು ತೀರ ಆತ್ಮೀಯ ಎನಿಸಿದವು. ಬಿಡುವಾದಾಗ ನೀವು ಒಮ್ಮೆ ಲಗ್ಗೆಯಿಡಿ.

Thursday, December 20, 2012

ಚಿತ್ರೋತ್ಸವದ ಸಂಭ್ರಮ:ನೂರಾರು ಚಿತ್ರಗಳು

ಳೆದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ನನಗೆ ಭಾಗವಹಿಸಲು ಸಾಧ್ಯವಾಗಿರಲಿಲ್ಲ . ಹಾಗಾಗಿ ಆಲ್ಲಿ ಪ್ರದರ್ಶನಗೊಂಡಿದ್ದ  ಎಲ್ಲಾ ಸಿನೆಮಾಗಳನ್ನು ಪಟ್ಟಿ ಮಾಡಿಕೊಂಡು ಒಂದು ತಿಂಗಳಲ್ಲಿ ನೋಡಿಬಿಟ್ಟಿದ್ದೆ. ಆದರೆ ಈ ಸಾರಿಯ ಚಿತ್ರೋತ್ಸವದ ಪಟ್ಟಿಯಲ್ಲಿರುವ ಬಹುತೇಕ ಚಿತ್ರಗಳನ್ನು ನಾನು ಈಗಾಗಲೇ ನೋಡಿಬಿಟ್ಟಿದ್ದರೂ ಅದನ್ನು ತೆರೆಯ ಮೇಲೆ ಚಿತ್ರಮಂದಿರದಲ್ಲಿ ನೋಡುವ ಮಜವೇ ಬೇರೆ. ಈ ಸಾರಿ ಸುಮಾರು ಏಳು ದೇಶಗಳ ನೂರೈವತ್ತಕ್ಕೂ ಹೆಚ್ಚು ಸಿನೆಮಾಗಳಿವೆ. ಅವುಗಳಲ್ಲಿ ಸುಮಾರು ಗಮನಾರ್ಹವೆನಿಸಿರುವ ಚಿತ್ರಗಳಿವೆ .ನನಗೆ ಗೊತ್ತಿರುವಂತೆ[ನೋಡಿರುವ] ಚಿತ್ರಗಳಾದ  ಹೆಡ್ ಶಾಟ್[2012],ಕಿಮ್ ಕಿ  ಡುಕ್  ನಿರ್ದೇಶನದ ಪಿಯೇಟ [2012], ಜರ್ಮನ್ ಭಾಷೆಯ ಬಾರ್ಬರಾ[2012], ರಶಿಯಾ ದ ಹೋಂ [2012], ಕೆನಡಾ ದೇಶದ ಕ್ಯಾಮಿಒನ್ [2012], ಇರಾನ್ ನ ಆರೆಂಜ್ ಸೂಟ್ [2012], ಸೈಲೆನ್ಸ್ ಮುಂತಾದ ನೋಡಲೇ ಬೇಕಾದ ಚಿತ್ರಗಳಿವೆ. ಅವುಗಳಲ್ಲಿ ಸೋದರ-ಕಾಮಿ ಶೇಮೆಲೆಸ್ಸ್[2012/ಪೋಲೆಂಡ್]ತರಹದ ಸ್ವಲ್ಪ ಮುಜುಗರ ತರಿಸುವ ಚಿತ್ರವೂ ಇದೆ. ಒಟ್ಟಿನಲ್ಲಿ ದಿನಕ್ಕೈದು ಸಿನೆಮಾದಂತೆ ನೋಡಲು ತೊಡಗಿದರೆ ಅದೆಷ್ಟು ನಮ್ಮನ್ನು ನೋಡಿಸಿಕೊಳ್ಳುತ್ತವೋ ಗೊತ್ತಿಲ್ಲ . ನೋಡಿರುವ ಚಿತ್ರಗಳಿಂದಾಗಿ ಸ್ವಲ್ಪ ವಿರಾಮವೂ ದೊರೆಯುವುದರಿಂದ ಏಳು ದಿವಸಗಳಲ್ಲಿ ಸಾಧ್ಯವಾದಷ್ಟು ಚಿತ್ರಗಳನ್ನು ನೋಡಿಬಿಡಬೇಕೆನ್ನುವ ಆಸೆಯಂತೂ ಇದೆ. ಇವೆಲ್ಲಾ ಇತ್ತೀಚಿನ ಅಂದರೆ 2010ರ ಮೇಲಿನ ಚಿತ್ರಗಳು. ಇವುಗಳ ಜೊತೆಗೆ ರಾಬರ್ಟ್ ಬೆನಿನಿ ಯಾ ಮಾಸ್ಟರ್ ಪೀಸ್ 'ಲೈಫ್ ಇಸ್ ಬ್ಯೂಟಿ ಫುಲ್ [1997],  ಮೈಕೆಲ್ಯಾಂಜೆಲೊ ಅನ್ತೊನಿನಿಯ ಐಡೆಂಟಿಫಿಕೇಶನ್ ಆಫ್ ಎ ವುಮನ್[1982], ರೆಡ್ ಡೆಸರ್ಟ್[1964], ಹಲ ಅಷ್ಬಿ ನಿರ್ದೇಶನದ ಕಮಿಂಗ್ ಹೋಂ[1974], ಜೆಅನ್ ಪಾಲ್ ರಪ್ಪೆನೆಔ ನಿರ್ದೇಶನದ ದಿ ಹಾರ್ಸ್ ಮ್ಯಾನ್ ಆನ್ ದಿ ರೂಫ್[1995],  ಓಲ್ಡ್ ಬಾಯ್  [೨೦೦೩]ಮುಂತಾದ ಚಿತ್ರಗಳೂ ಇರುವುದರಿಂದ ಹೊಸ-ಹಳೆಯ ಸಂಗಮವೂ ದೊರೆಯುತ್ತದೆ. ಅದರ ಜೊತೆಗೆ ನಿರ್ದೇಶಕರಾದ ಫಾತಿಹ್ ಅಕಿನ್ , ಅಕಿರಾ ಕುರುಸೋವ ರ ಚಿತ್ರಗಳು, ಭಾರತದ ಜಾನ್ ಬರುವ, ರಾಮು ಕಾರಿಯತ್, ಗಿರೀಶ್ ಕಾಸರವಳ್ಳಿ, ಸಿದ್ದಲಿಂಗಯ್ಯನವ ಚಿತ್ರಗಳೂ ಇವೆ.
ಎಲ್ಲ ಚಿತ್ರಗಳನ್ನು ನೋಡಿದ ಮೇಲೆ ಮಾತಾಡಲು, ಚರ್ಚೆ ಮಾಡಲು ಸಾಕಷ್ಟು ವಿಷಯವಂತೂ ಇರುತ್ತದೆ . ಜೊತೆಗೆ ಒಂದು ಹೊಸ ಪ್ರಪಂಚವೂ ತೆರೆದುಕೊಂಡಿರುತ್ತದೆ .

ಓದಿ ಮೆಚ್ಚಿದ್ದು: 

ನಾನು ಕವನ ಬರೆದಿದ್ದು ತೀರಾ ಕಡಿಮೆ. ಆದರೆ ಓದಿ ಖುಷಿ ಪಡುತ್ತೇನೆ. ಗೆಳೆಯ ಚಂದ್ರ ಆಗಾಗ ಒಳ್ಳೆಯ ಕವನಗಳನ್ನು ಬರೆಯುತ್ತಿದ್ದ.ಅದು ಬಿಟ್ಟರೆ ಪತ್ರಿಕೆಯಲ್ಲಿ ಬರುವ ಕವನಗಳನ್ನು ಓದಿಯೇ  ಓದುತ್ತೇನೆ .ತೆರೆದ ಮನ ಬ್ಲಾಗಿನಲ್ಲಿರುವ ಒಂದೆರೆಡು ಕವನಗಳು ನನಗಂತೂ ತುಂಬಾ ಹಿಡಿಸಿತು. ಹಾಗೆ ಬೀಟಾ ಮಹಿಳೆ ಎನ್ನುವ ಲೇಖನವೂ.ಅಲ್ಲಿನ ಹಿತ ವಚನಗಳು ಚೆನ್ನಾಗಿದೆ  ಅಷ್ಟೇ ಅಲ್ಲ, ಅರ್ಥ ಗರ್ಭಿತವಾಗಿಯೂ ಇದೆ. ಒಮ್ಮೆ ನೀವು ಓದಿ.


Tuesday, December 18, 2012

ಪೂರ್ವ ತಯಾರಿ ಮತ್ತು ಸ್ಟೋರಿ ಬೋರ್ಡ್...

ನಾನಾಗ ಹತ್ತನೆಯ ತರಗತಿಯಲ್ಲಿದ್ದೆ. ಎಂಟನೆಯ ತರಗತಿಯಲ್ಲಿ ಮೊದಲ ಕಥೆ ಬರೆದಿದ್ದೆನಾದರೂ ಸಿನೆಮಾದ ಗೀಳು ನನಗೆ ಹತ್ತನೇ ತರಗತಿಯಲ್ಲಿ ಹತ್ತಿದ್ದು. ಅದ್ಯಾಕೆ ಹತ್ತಿತು ನನಗಿನ್ನೂ ಗೊತ್ತಿಲ್ಲ. ನಮ್ಮೂರಿದ್ದದ್ದು ಬೆಂಗಳೂರಿನಿಂದ ನೂರಾನಲವತ್ತು ಕಿಲೋಮೀಟರ್ ದೂರದಲ್ಲಿರುವ ಮೈಸೂರಿನಿಂದ 25 ಕಿಲೋಮೀಟರು ದೂರದಲ್ಲಿರುವ ನಂಜನಗೂಡಿನಿಂದ ಒಂಬತ್ತು ಕಿಲೋಮೀಟರು ದೂರದಲ್ಲಿ. ಅಲ್ಲಿ ಯಾವುದೇ ರೀತಿಯ ಸಿನಿಮಾ ಸಂಬಂಧಿ ಚಟುವಟಿಕೆಗಳು ನಡೆಯಲು ಸಾಧ್ಯವೇ ಇರಲಿಲ್ಲ. ಆಗೊಂದು ಈಗೊಂದು ಚಿತ್ರೀಕರಣ ತಂಡ ಬಂದು ಚಿತ್ರೀಕರಣ ಮಾಡುತ್ತಿದ್ದರೂ ಅದೆನೆಗೆ ತಲುಪುತ್ತಿರಲಿಲ್ಲ. ನನಗೆ ಸಿನಿಮಾ ಶೂಟಿಂಗ್ ನೋಡುವ ಆಸೆಯಿದ್ದರೂ ಸಾಧ್ಯವಾಗಿರಲಿಲ್ಲ. ಪೀಯುಸಿಗೆ ಬಂದ ಮೇಲೆ ನಂಜನಗೂಡಿಗೆ ಕಾಲೇಜು ಸೇರಿಕೊಂಡವನು ಮೊದಲಿಗೆ ಸಾರ್ವಜನಿಕ ಗ್ರಂಥಾಲಯಕ್ಕೆ ಲಗ್ಗೆಯಿಟ್ಟಿದ್ದೆ. ಸಿನಿಮಾ ಸಂಬಂಧಿ ಪುಸ್ತಕಗಳನ್ನ ತಡಕಾಡಿದ್ದೆ. ನಂಗೆ ಬೇಕಾದದ್ದು ಸಿನೆಮಾದ ಬಗೆಗಿನ ತಾಂತ್ರಿಕ ಜ್ಞಾನ ಮತ್ತು ತಯಾರಿಕೆಯ ಹಂತಗಳು. ಆದರೆ ಅದಕ್ಕೆ ಸಂಬಂಧ ಪಟ್ಟ ಪುಸ್ತಕಗಳು ಇರಲಿಲ್ಲ. ಸಿನೆಮಾದ ಕಥೆಯನ್ನ ನನ್ನಲ್ಲೇ ಹುಟ್ಟುಹಾಕುತ್ತಿದ್ದೆನಾದರೂ ಸಿನೆಮಾಕ್ಕೆ  ಅದನ್ನು ಚಿತ್ರಕಥೆಯಾಗಿ ಬರಹ ರೂಪದಲ್ಲಿ ಹೇಗೆ ಬರೆಯಬೇಕೆಂಬ ರೀತಿನೀತಿಯ ಮಾದರಿ ನನಗೆ ಗೊತ್ತಿರಲಿಲ್ಲ. ಇಡೀ ಗ್ರಂಥಾಲಯ ಹುಡುಕಿದ ಮೇಲೆ ಒಂದೇ ಒಂದು ಪುಸ್ತಕ ಸಿಕ್ಕಿದ್ದು ನನಗೆ ಭಗವದ್ಗೀತೆ ಸಿಕ್ಕಿದ ಹಾಗಾಗಿತ್ತು. ಅದರಲ್ಲಿ ಒಂದಷ್ಟು ಅಮೂಲ್ಯ ವಿಷಯಗಳೂ ಇದ್ದವು.
ನಮ್ಮ ಚಿತ್ರ ಮಾರ್ಚ್ 23 ಪೂರ್ವ ಚಿತ್ರೀಕರಣದಲ್ಲಿ ಬರವಣಿಗೆಗೆ ನಾವು ನಮ್ಮ ತಂಡ ತೆಗೆದುಕೊಂಡ ಒಟ್ಟು ಅವಧಿ ಸರಿ ಸುಮಾರು ಎಂಟು ತಿಂಗಳುಗಳು. ದೊಡ್ಡ ಸ್ಟಾರ್ ಇಲ್ಲದ ದೊಡ್ಡ ಬಜೆಟ್ ಇಲ್ಲದ್ದರಿಂದ ನಾನಂದುಕೊಂಡದ್ದನ್ನು ಸಾಧಿಸಲು ಪೂರ್ವ ತಯಾರಿ ಅತ್ಯಗತ್ಯವಾಗಿತ್ತು. ಹಾಗಾಗಿ ಸಂಭಾಷಣೆಯ ನಂತರ ದೃಶಿಕೆಯನ್ನು ವಿಂಗಡಿಸಿ, ಅದಕ್ಕೆ ಸ್ಟೋರಿ ಬೋರ್ಡ್ ಮಾಡತೊಡಗಿದೆ. ನನ್ನ ಚಿತ್ರಕಲೇ ಈ ವಿಷಯದಲ್ಲಿ ನೆರವಿಗೆ ಬಂತು. ಇಡೀ ಸಿನೆಮಾಕ್ಕೆ ಸ್ಟೋರಿ ಬೋರ್ಡ್ ಮಾಡುವಷ್ಟರಲ್ಲಿ ತಿಂಗಳುಗಳೇ ಕಳೆದುಹೋಗಿದ್ದವು. ನಿರ್ಮಾಪಕರು ನನ್ನ ಪೂರ್ವತಯಾರಿ ನೋಡಿ ಖುಷಿ ಪಟ್ಟಿದ್ದರು.
ನಮ್ಮ ಚಿತ್ರಕ್ಕೆ ನಾನು ಬಿಡಿಸಿದ ಸ್ಟೋರಿ ಬೋರ್ಡ್.
 ಆ ಅನುಭವದ ನಂತರವೇ ನನಗನಿಸಿದ್ದು ಒಂದು ಚಿತ್ರಕ್ಕೆ ಪೂರ್ವ ತಯಾರಿ ಎಷ್ಟು ಮುಖ್ಯ ಎನ್ನುವುದು. ನಾವು ಹಾಲಿವುಡ್ ಚಿತ್ರಗಳನ್ನ ಗಮನಿಸಿದಾಗ ಇದು ನಮಗರಿವಾಗುತ್ತದೆ. ಇಡೀ ಚಿತ್ರದ ಗತಿ, ಮೂಡನ್ನು ಸ್ವಲ್ಪವೂ ತುಳಿಯದೆ ಹೊತ್ತೊಯ್ಯುವ ಅವರ ಆ ಪ್ರಾವಿಣ್ಯತೆಗೆ ಆ ಪೂರ್ವ ತಯಾರಿಯೇ ಕಾರಣ. ಮೊನ್ನೆ ದಿ ಆವೆಂಜರ್ಸ್ ನೋಡಿದಾಗ ಅದರ ಪ್ರತಿಯೊಂದು, ದೃಶ್ಯ, ಅದಕ್ಕೆ ತಕ್ಕ ಗ್ರಾಫಿಕ್ಸ್, ಬೆಳಕು ಎಲ್ಲವೂ ಪೂರ್ವತಯಾರಿಯಿಂದ ಮಾತ್ರ ಸಾಧ್ಯ ಎನಿಸಿತು. ತೀರ ಮಹತ್ವದ ಚಿತ್ರವಲ್ಲವಾದರೂ ಒಮ್ಮೆ ನೋಡಿ ಖುಶಿಪಡಬಹುದಾದ ಚಿತ್ರ. ಸಾಹಸ, ಗ್ರಾಪಿಕ್ಸ್ ನಾಯಕರುಗಳು ಚಿತ್ರವನ್ನ ಬೋರಾಗದಂತೆ ಮಾಡುತ್ತವೆ.

ಓದಿ ಮೆಚ್ಚಿದ್ದು: 
ನಾನು ಕಾಲೇಜು ಮುಗಿಸಿ ಮನೆ ಸೇರುತ್ತಿದ್ದದ್ದು ರಾತ್ರಿ ಹತ್ತು ಘಂಟೆಗೆ. ಮನೆಯವರೆಲ್ಲಾ ಮಲಗಿಬಿಡುತ್ತಿದ್ದರಾದರೂ ನನ್ನ ತಂಗಿ ನನಗೆ ಊಟ ಬಡಿಸಲು ಎದ್ದಿರುತ್ತಿದ್ದಳು. ಊಟ ಮಾಡುವಾಗ ಅವಳಿಗೆ ಹೊಸದಾಗಿ ಬಿಡುಗಡೆಯಾದ ಸಿನೆಮಾದ ಕಥೆಯನ್ನೂ , ಓದಿದ್ದನ್ನೋ ರಸವತ್ತಾಗಿ ಹೇಳುತ್ತಿದ್ದೆ. ಕೆಲವೊಮ್ಮೆ ಕುಚೇಷ್ಟೆಗೆ ಸಾಂಸಾರಿಕ ಸಿನೆಮಾದ ಕಥೆಯನ್ನ ಕುತೂಹಲಕ್ಕೆ ಕೇಳಿದರೆ ನಾನು ಸಿನೆಮಾ ನೋಡಿರದಿದ್ದರೂ ಸುಮ್ಮನೆ ಏನೇನೋ ಕಲ್ಪಿಸಿ ಅವಳಿಗೆ ಹೇಳುತ್ತಿದ್ದೆ. ಅವಳು ' ಆ ಸಿನೆಮಾ ಹಾಗಿರುವಾ ಹಾಗೆ ಕಾಣುವುದಿಲ್ಲವಲ್ಲ...ಒಳ್ಳೆ ಕಥೆಯಿದದ್ದ ಹಾಗಿದೆ.  ನೀನು ನೋಡಿದ್ರೆ ರಕ್ತ ಕೊಲೆ ಅಂತ ಏನೇನೋ ಹೇಳ್ತಿದ್ದೀಯಾ..' ಎಂದು ಅನುಮಾನ ವ್ಯಕ್ತ ಪಡಿಸುತ್ತಿದ್ದಳು. ಆಮೇಲೆ ಸಿನೆಮಾ ನೋಡಿದ ಮೇಲೆ ಬೈದರೆ ಆವಾಗ ಹಾಗೆ ಇತ್ತು. ಈಗ ಬದಲಾಗಿದೆ ಎಂದು ನಗುತ್ತಿದ್ದೆ.ಆವಾಗಿನಿಂದಲೂ ನನಗೆ ನಾನು ನೋಡಿ ಖುಶಿಪಟ್ಟೆದ್ದನ್ನು ಎಲ್ಲರಿಗೂ ಹೇಳಿ ತಲೆ ತಿನ್ನುವ ಚಟ ಬಂದುಬಿಟ್ಟಿದೆ. ನನ್ನ ಗೆಳೆಯರ ತಂಡವೂ ಹಾಗೆ ಇದೆ. ಏನನ್ನಾದರೂ ನೋಡಿದಾಕ್ಷಣ, ಓದಿದಾಕ್ಷಣ ಫೋನ್ ಮಾಡಿ ಮಾತಾಡಲೇ ಬೇಕು. ನನ್ನ ಹಡಗು ನನ್ನದು ನನ್ನ ತೀರ ನನ್ನದು ಬ್ಲಾಗಿನಲ್ಲಿನ  ಸ್ಫೂರ್ತಿ ಕವನ ತುಂಬಾ ಹಿಡಿಸಿತು. 
ಚಿಗುರೊಡೆಯಿತು ಇನ್ನೊಮ್ಮೆ ನನ್ನೊಳಗಿದ್ದ,                      
ಮಗುವಿನ ಮನಸು                                                      
ನೆನಪಾಯಿತು  ಅಪ್ಪ -ಅಮ್ಮ ನನಗಾಗಿ,
                            
ಕಂಡ ಕನಸು 
ಸಾಲುಗಳು ಇಷ್ಟವಾಯಿತು.   ತೀರಾ ಪ್ರಾ ಸದ ಹಂಗಿಲ್ಲದ ಕವನ ನಿಮಗೂ ಇಷ್ಟವಾಗಬಹುದು.            

Monday, December 17, 2012

ಹಂದಿ, ಗಂಡ, ಮಕ್ಕಳು -5

ವೇಸ್ ಡಿ.ನೋಸೆಸ್ ಎನ್ನುವ ಬೆಲ್ಜಿಯಂ ಭಾಷೆಯ ಚಲನಚಿತ್ರವೊಂದಿದೆ. ಥಿಯೆರಿ ಜೆನೊ ಎನ್ನುವವ ಅದರ ನಿರ್ದೇಶಕ. ಚಿತ್ರದ ಕಥೆ ಇಂತಿದೆ ಕೇಳಿ. ಆತನೊಬ್ಬ ರೈತ. ಪ್ರಾಣಿಗಳೆಂದರೆ ಅದೊಂತರ ಪ್ರೀತಿಯೋ, ದ್ವೇಷವೋ ಗೊತ್ತಾಗದಂತ ಪರಿಸ್ಥಿತಿ ನಮಗೆ ಅಥವಾ ನಿರ್ದೇಶಕನಿಗೆ ಅಥವಾ ಸ್ವತಃ ನಾಯಕನಿಗೂ. ಅವನು ಎಲ್ಲರಿಗಿಂತ ಭಿನ್ನ ಎನ್ನುವುದಕ್ಕಿಂತ ಅಪಸಾಮಾನ್ಯ , ತಿಕ್ಕಲ ಎನ್ನಬಹುದು. ಕೋಳಿ ಪ್ರೀತಿಸುತ್ತಾನಾದರೂ ತಲೆ ಕತ್ತರಿಸುತ್ತಾನೆ, ಪಾರಿವಾಳದ ತಲೆಗೆ ಗೊಂಬೆ ಕಟ್ಟುತ್ತಾನೆ. ಇವೆಲ್ಲಕ್ಕಿಂತ ಅತಿರೇಕ ಮುಂದೆ ಇದೆ. ಆತನು ಒಂದು ಹೆಣ್ಣು ಹಂದಿಯನ್ನು ಪ್ರೀತಿಸುತ್ತಾನೆ. ಹೌದು. ಅದನ್ನೇ ನಮ್ಮ ಸಂಸ್ಕೃತಿಯ ಪ್ರಕಾರ ಹೇಳುವುದಾದರೆ ಮದುವೆಯಾಗುತ್ತಾನೆ. ಮುಂದೆ ಅದಕ್ಕೆ ಮಕ್ಕಳಾದಾಗ, ಅಥವಾ ಇವನಿಗೆ ಹಂದಿ ಮರಿಗಳಾದಾಗ ಅವಕ್ಕೆ ತಾನೆ ಹಾಲುಣಿಸಲು ಪ್ರಯತ್ನಿಸುತ್ತಾನೆ. ಆದರೆ ಅವು ತಟ್ಟೆಯಲ್ಲಿ ಹಾಲು ಕುಡಿಯುತ್ತವೆ.ಆದರೆ ಹಂದಿಗಳಿಗೆ ತಾಯಿಯ ಸಹವಾಸ ಬೇಕೇ ಬೇಕಲ್ಲವೇ..? ಅವುಗಳು ತಾಯಿ ಹಂದಿಯ ಬಳಿ ಹೋಗಲು ಹಾತೊರೆಯುತ್ತವೆ. ಇದರಿಂದ ಕೋಪಗೊಳ್ಳುವ ತಂದೆ ಅವುಗಳನ್ನೂ ಸಾಯಿಸುತ್ತಾನೆ. ಇದರಿಂದ ತಾಯಿ ಹಂದಿ ಖಿನ್ನತೆಗೊಳಗಾಗುತ್ತದೆ. ರೊಚ್ಚಿಗೆದ್ದು ಹುಚ್ಚುಚ್ಚಾಗಿ ಓಡತೊಡಗುತ್ತದೆ. ಹಾಗೆ ಓಡಿ ಗುಂಡಿಯೊಂದಕ್ಕೆ ಬೀಳುತ್ತದೆ.ಆದರೆ ಈತ ಬಿಡಬೇಕಲ್ಲಾ ..ಹುಡುಕೆ ಹುಡುಕುತ್ತಾನೆ. ಆ ದೇಹವನ್ನೂ ಹೊರತೆಗೆಯುತಾನೆ. ಅಳುತ್ತಾನೆ. ತಾನು ಸಾಯಲು ಪ್ರಯತ್ನಿಸುತ್ತಾನೆ. ಆಮೇಲೆ ಹುಚ್ಚನಂತಾಡಿ ಮನೆಯ ವಸ್ತುಗಳನ್ನೆಲ್ಲಾ ಒಡೆದು ಹಾಕುತ್ತಾನೆ. ಕೊನೆಯಲ್ಲಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಈ ಚಿತ್ರದ ಪೂರ್ಣ ಕಥೆ ಹೇಳಿದುದರ ಹಿಂದೆ ಒಂದು ಉದ್ದೇಶವಿದೆ.ಜಗತ್ತಿನಲ್ಲಿ ಎನೆಲ್ಲಾ ಸಿನೆಮಾಗಳನ್ನೂ ಮಾಡುತ್ತಾರೆ ಎನ್ನುವುದನ್ನು ಪರಿಚಯಿಸುವುದಾದರೂ ಕೆಲವೊಂದು ಸಿನೆಮಾಗಳನ್ನೂ ನೋಡಿ ಎಂದು ಶಿಫಾರಸ್ಸು ಮಾಡಲು ಧೈರ್ಯ ಬರುವುದಿಲ್ಲ. ಆದರೆ ಅದೇಗೋ ಏನೋ  ನಾನಂತೂ ನೋಡಿಬಿಟ್ಟಿರುತ್ತೆನಾದ್ದರಿಂದ ನೋಡಿದ ವಿಶೇಷವನ್ನು , ವಿಚಿತ್ರವನ್ನು ಹೇಳಿಕೊಳ್ಳಬೇಕೆಂಬ ತುಡಿತವಂತೂ ಇರುತ್ತದೆ.ಹಾಗಾಗಿ ಚಿತ್ರದ ಬಗ್ಗೆ ಹೇಳಿಕೊಳ್ಳುವ ಎನಿಸಿದರೂ ಕೆಲವೊಮ್ಮೆ ಕೆಲವು ಸಿನೆಮಾಗಳು ಆ ಧೈರ್ಯ ಕೊಡುವುದಿಲ್ಲ .
ಈ ಸಿನೆಮಾ ಕೂಡ ಅದೇ ಪಟ್ಟಿಗೆ ಸೇರಿದ್ದು. ಸಿನೆಮಾ ನೋಡಿದ ಮೇಲೆ ಇದನ್ನು ಯಾಕೆ ನೋಡಬೇಕು? ಎನ್ನುವ ಪ್ರಶ್ನೆಯಂತೂ ಕಾಡದೆ ಇರದು. ಸುಮಾರು ಒಂದು ಘಂಟೆ ಇಪ್ಪತ್ತು ನಿಮಿಷಗಳಷ್ಟು ಉದ್ದವಿರುವ ಈ ಚಿತ್ರವನ್ನ ನೋಡಬೇಕೆನ್ನಿಸಿದರೆ ಒಮ್ಮೆ ನೋಡಬಹುದು.
1975 ರಲ್ಲಿ ತಯಾರಾದ ಈ ಚಿತ್ರ ಸಾರ್ವಜನಿಕ ಪ್ರದರ್ಶನಕ್ಕೆ ಅನರ್ಹವೆಂದು ನಿಷೇಧಗೊಳಿಸಿಲಾಯಿತಾದರೂ ಅದರ ಡಿವಿಡಿ ಆವೃತ್ತಿಗಳು ಲಭ್ಯವಿದೆ.

ಓದಿ ಮೆಚ್ಚಿದ್ದು:

ನಾನು ಯಾವುದೇ ಕಥೆ ಬರೆದರೂ, ಅಥವಾ ಸಿನೆಮಾದ ಕಥೆಯ ಬಗ್ಗೆ ಆಲೋಚಿಸಿದರೂ ಅದನ್ನು ಬರೆಯುವ ಮೊದಲು ಅದರ ಪೋಸ್ಟರನ್ನು ವಿನ್ಯಾಸ ಮಾಡುತ್ತಿದ್ದೆ. ಅದೊಂತರ ಮಜಾ. ನಾನು ಎಷ್ಟೋ ಸಿನೆಮಾದ ಕಥೆಗಳು ಎಂದುಕೊಂಡಿರುವ ಕಥೆಗಳು ಬರಹರೂಪದಲ್ಲಿಲ್ಲ . ಆದರೆ ಅವುಗಳ ಪೋಸ್ಟರ್ ಡಿಸೈನ್ ಸಿದ್ಧವಾಗಿದೆ. ಮೊನ್ನೆ ನೆನಪಿನ ಸಂಚಿಯಿಂದ ಬ್ಲಾಗ್ ನಲ್ಲಿರುವ       ನನ್ನ ಕೆಲವು ಅಟೆಂಪ್ಟ್ ಗಳು ಲೇಖನವನ್ನು ಓದಿದಾಗ ನಂಗೆ ನೆನಪು ಬಂದದ್ದು ನನ್ನ ಕಥೆಗೆ ನಾನೇ ಚಿತ್ರಗಳನ್ನು ಬರೆಯುತ್ತಿದ್ದದ್ದು. ಹಾಗೆ ನಮ್ಮ ಊರಿನ ಗೋಡೆಯ ಮೇಲೆ ಬಣ್ಣಬಣ್ಣದ ಬಳಪಗಳಿಂದ ನನ್ನದೇ ಚಿತ್ರದ ಪೋಸ್ಟರ್ ಬಿಡಿಸುತ್ತಿದ್ದದ್ದು. ಇಲ್ಲಿ ಮಾಲತಿ ಮೇಡಂ ವರ್ಣಮಯ ಪುಸ್ತಕಕ್ಕಾಗಿ ಮುಖಪುಟ ಮಾಡಲು ಪ್ರಯತ್ನಿಸಿದ್ದನ್ನು ಅವರೇ ಹೇಳಿಕೊಂಡಿದ್ದಾರೆ. ಲೇಖನ ಮತ್ತು ಮುಖಪುಟದ ಮಾದರಿಗಳು ಎರಡೂ ಚೆನ್ನಾಗಿವೆ.

Friday, December 14, 2012

ಮಾಂಜ್ಹಾ-ಕಿರುಚಿತ್ರ.

ಈ ಕಿರುಚಿತ್ರ ಭಾರತದಲ್ಲಿ ನಿಷೇಧಕ್ಕೊಳಗಾಗಿದೆ.
ಅದರ ಅರ್ಥ ಈ ಚಿತ್ರದಲ್ಲಿ ಏನೋ ಕಠೋರವಾದ ಸತ್ಯವಿರಬೇಕು. ಅಥವಾ ಸಮಾಜದ ಕರಾಳ ಮುಖವನ್ನೂ ಹಸಿಹಸಿಯಾಗಿಯೇ ತೋರಿಸಿರಬಹುದು.ಯಾವ ಬೆದರಿಕೆಗೆ, ಆಮಿಷಕ್ಕೆ ಒಳಗಾಗದೆ ನಿರ್ದೇಶಕ ತನಗನಿಸಿದ್ದನ್ನು ಚಿತ್ರೀಕರಿಸಿರಬೇಕು.
ಹೌದು ಇದೆಲ್ಲವೂ ಈ ಕಿರುಚಿತ್ರದ ಮಟ್ಟಿಗೆ ಸತ್ಯ.
ಈ ಕಿರುಚಿತ್ರವನ್ನು ನೋಡಿದ ಸ್ಲಂ ಡಾಗ್ ಖ್ಯಾತಿಯ ನಿರ್ದೇಶಕ ಡ್ಯಾನಿ ಬೊಯ್ಲ್ ಮೆಚ್ಚಿದ್ದಲ್ಲದೆ ತಮ್ಮ ಚಿತ್ರ ಸ್ಲಂ ಡಾಗ್ ಮಿಲ್ಲೆನಿಯರ್ ನ ಬ್ಲೂ ರೇ ಡಿವಿಡಿಯಲ್ಲಿ ಹೆಚ್ಚುವರಿ ಅಡಕವಾಗಿ ಈ ಕಿರುಚಿತ್ರವನ್ನು ಸೇರಿಸಿದ್ದರು.
ದರರ್ಥ ಈ ಕಿರು ಚಿತ್ರ ಅತ್ಯುತ್ತಮವಾಗಿದೆ ಎಂಬರ್ಥವಿರಬೇಕು.
ಹೌದು. ಮಾ೦ಜ್ಹಾ ಮರಾಠಿ ಭಾಷೆಯಲ್ಲಿರುವ ಕಿರುಚಿತ್ರ. ಕಪ್ಪುಬಿಳುಪು ವರ್ಣದ ಈ ಚಿತ್ರದ ಕಥೆ, ನಿರೂಪಣೆ ಪ್ರೇಕ್ಷಕರನ್ನು ಕೆಲಕಾಲ ದಿಗ್ಭ್ರಾಂತರನ್ನಾಗಿಸದಿರದು. ಮುಂಬೈನಗರದ ಸ್ಲಮ್ಮಿನ ಇನ್ನೊಂದು ಕರಾಳ ಮುಖವನ್ನೂ ತೆರೆದಿಡುವ ಈ ಚಿತ್ರದ ನಿರ್ದೇಶಕ ರಾಹಿ ಅನಿಲ್ ಬರವೆ.
ಮುಂಬೈ ಮಹಾನಗರಿ ರಂಕಾನ ತಾಯಿಯನ್ನು ವೇಶ್ಯಯನ್ನಾಗಿ ಮಾಡಿರುತ್ತದೆ. ತಂದೆಯನ್ನು ಕಿತ್ತುಕೊಂಡಿರುತ್ತದೆ . ಹಾಗಾಗಿ ರಂಕಾನಿಗಿರುವವಳು ಚಿಕ್ಕ ತಂಗಿ ಮಾತ್ರ. ಗಾಳಿಪಟದ ದಾರವನ್ನು ತಯಾರಿಸುವೆಡೆ  ಕೆಲಸ ಮಾಡುವ ರಂಕಾನಿಗೆ ಒಬ್ಬ ಮತಿಗೆಟ್ಟ ಪೋಲೀಸ್ ಅಧಿಕಾರಿ ಪರಿಚಯವಾಗುತ್ತಾನೆ . ಬಾಲ್ಯದಲ್ಲಿ ತಂದೆಯಿಂದಲೇ ನಿರಂತರ ಅತ್ಯಾಚಾರಕ್ಕೊಳಗಾಗಿದ್ದ ಆತ ರಂಕಾಳ  ಪುಟ್ಟ ತಂಗಿಯನ್ನು ಲೈಂಗಿಕವಾಗಿ ಆಘಾತಗೊಳಿಸುತ್ತಾನೆ ಮುಂದೆ ರಂಕಾ ಹೇಗೆ ಆ ಪೈಶಾಚಿಕ ಮನೋಭಾವದ ಪೋಲೀಸ್ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದೇ ಕಥೆ.
ಚಿತ್ರದ ಹಿನ್ನೆಲೆ ಸಂಗೀತ, ನೇರವಂತಿಕೆಯ ಸಂಭಾಷಣೆ ನಮ್ಮನ್ನು ಕಾಡದಿರದು .41 ನಿಮಿಷಗಳಷ್ಟು ಉದ್ದವಿರುವ ಈ ಕಿರುಚಿತ್ರವನ್ನೊಮ್ಮೆ ಅವಶ್ಯ ನೋಡಿ.
ಓದಿ  ಮೆಚ್ಚಿದ್ದು: ಪ್ರಮೋದ ರ ಬ್ಲಾಗ್ CIPHERS SPACE ನಲ್ಲಿನ  ಮೂರ್ಖರ , ಮೂರ್ಖರಿಂದ ಮೂರ್ಖರಿಗಾಗಿ ಈವತ್ತಿನ ಮಾಧ್ಯಮಗಳ ಟಿ .ಆರ್.ಪಿ. ಸರ್ಕಸ್ಸಿನ ಬಗ್ಗೆ ವ್ಯಂಗ್ಯವಾಗಿ ತಿಳಿಸುವ ಅರ್ಥ ಗರ್ಭಿತ ಲೇಖನ. ಓದು ಓದುತ್ತಾ ಹೌದಲ್ಲ ಎನಿಸುವ ಲೇಖನ ಸಕತ್ತು ಮಜಾ ಕೊಡುತ್ತದೆ. ನೀವು ಓದಿ.

Monday, December 10, 2012

ಅಡ್ಡ-ಒಂದು ಗಿಡ್ಡ ವಿಮರ್ಶೆ

ಒಂದು ರೀಮೇಕ್ ಚಿತ್ರದ ಬಗ್ಗೆ ಮಾತಾಡುವಾಗ, ನೋಡುವಾಗ , ವಿಮರ್ಶೆ ಮಾಡುವಾಗ ಅನೂಚಿತವಾಗಿ ಮೂಲಚಿತ್ರದ ನೆನಪು ಬಂದೆ ಬರುತ್ತದೆ. ಬೇಡ ಬೇಡ ವೆಂದರೂ ಎರಡೂ ಚಿತ್ರಕ್ಕೆ ತಾಳೆ ಹಾಕುವ ಮನಸ್ಸು, ಅದು ಅಲ್ಲೇ ಚೆನ್ನಾಗಿತ್ತು, ಈ ದೃಶ್ಯವನ್ನು ಇಲ್ಲಿ ಚೆನ್ನಾಗಿ ಚಿತ್ರೀಕರಿಸಿದ್ದಾರೆ, ಅಲ್ಲೊಂದು ಬೋರಿನ ದೃಶ್ಯವನ್ನು ಇಲ್ಲಿ ತೆಗೆದುಹಾಕಿದ್ದು ಚಿತ್ರಕ್ಕೆ ಲಾಭವಾಗಿದೆ ಎಂದೆಲ್ಲಾ ತಪ್ಪು ಸರಿಗಳ ಲೆಕ್ಕಾಚಾರದಲ್ಲಿ ತೊಡಗುತ್ತದೆ. ಆದರೆ ಒಂದು ಸಿನೆಮಾವನ್ನು ಬರೀ ಸಿನೆಮಾವನ್ನಾಗಿ, ಇಲ್ಲಿನ ಸಿನೆಮಾವನ್ನಾಗಿ ನೋಡಲು ಪ್ರಯತ್ನಿಸಿದಾಗ ಆ ಚಿತ್ರದ ನಿಜವಾದ ವಿಮರ್ಶೆ ಸಾಧ್ಯವಾಗುತ್ತೇನೋ. ಆಮೇಲಿನಿಂದ ಬೇಕಾದರೆ ಹೋಲಿಕೆ ಮಾಡಬಹುದೇನೋ.
ಪ್ರೇಮ್ ಅಡ್ಡದ ಕಥೆ 2012ರಲ್ಲಿ  ಪ್ರಾರಂಭವಾಗಿ 1981 ಕ್ಕೆ ಹೋಗಿ ನಿಲ್ಲುತ್ತದೆ. 1981ರಲ್ಲಿ ನಡೆದ ಮಾರಣ ಹೋಮದ ಕಥೆ ಚಿತ್ರದ್ದು. ನಾಲ್ವರು ಹಾದಿಬೀದಿ ಹುಡುಗರು ಕೊಲೆಗಳನ್ನು ಮಾಡುತ್ತಾ ಎಲ್ಲವನ್ನೂ ಕಳೆದುಕೊಂಡು ಕೊನೆಗೆ ತಾವೂ ಕೊಲೆಯಾಗುವುದೇ ಕಥೆ. ಆದರೆ ಚಿತ್ರ ನೋಡ ನೋಡುತ್ತಾ ನಮ್ಮ ನಾಯಕರ ಮೇಲೆ ಪ್ರೇಕ್ಷಕರಿಗೆ ಕರುಣೆ ಹುಟ್ಟಿಸುವುದರ ಬದಲು 'ಅಯ್ಯೋ ಯಾಕೀಗೆ ಮಾಡಿಬಿಟ್ಟರು..' ಎನಿಸುತ್ತದೆ. ಆದರೆ ಮತ್ತೆ ಅದೇ ತಪ್ಪನ್ನು ಮಾಡಿದಾಗ ನೋಡುಗನಿಗೆ ಅವರ ಮೇಲೆಯೇ ಬೇಸರವಾಗುತ್ತದೆ. ಆದರೆ ಬರುಬರುತ್ತಾ ಮನೆಗೆ ಮಗನಾಗದ, ಯಾರಿಗೂ ಒಳ್ಳೆಯವರಾಗದ ನಾಲ್ವರು ಕತ್ತು ಕುಯ್ಯುತ್ತಾ ಜೀವನ ನಡೆಸುವುದು ಅರಗಿಸಿಕೊಳ್ಳುವುದೂ ಕಷ್ಟವಾಗುತ್ತದೆ. ಚಿತ್ರದ ಬಿಡಿ ಬಿಡಿ ದೃಶ್ಯಗಳು ಚೆನ್ನಾಗಿವೆ. ಆದರೆ ಒಟ್ಟಾರೆಯಾಗಿ ಪಾತ್ರ ಪೋಷಣೆ ಮತ್ತು ಕಥೆಯ ಗತಿ ತೃಪ್ತಿಕರವಾಗಿಲ್ಲ. ಹಾಗಾಗಿಯೇ ಚಿತ್ರ ನಿರೀಕ್ಷಿತ ಪರಿಣಾಮ ಬೀರುವಲ್ಲಿ ಸೋಲುತ್ತದೆ. ರಾಜಕೀಯದ ದೊಂಬರಾಟದಲ್ಲಿ ಯಾರೋ ಅಮಾಯಕನನ್ನು ಕೊಲೆ ಮಾಡುವ ನಾಯಕರ ತಂಡ ನಮಗೆಂದೂ[ನನಗೆಂದೂ] ಒಳ್ಳೆಯವರು, ಅಥವಾ ಮಾಡಿದ್ದು ಸರಿಯಾದ ಕೆಲಸ ಎನಿಸುವುದಿಲ್ಲ.
ಚಿತ್ರದ ತಾಂತ್ರಿಕ ಅಂಶಗಳು ಚೆನ್ನಾಗಿವೆ. ಪಾತ್ರಧಾರಿಗಳೂ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಆದರೆ ಭಾವಕ್ಕಿಂತ ಹೆಚ್ಚಾಗಿ ಹಿಂಸೆ ವೈಭವೀಕರಿಸಿದೆ.ಮೊದಲ ಕೊಲೆಯಲ್ಲಿ ಚಾಕುವಿನಿಂದ ಇರಿದು ಆಮೇಲೆ ಮತ್ತೆ ಓಡಿ ಬಂದು ಕತ್ತು ಕುಯ್ಯುವುದು ಬರ್ಬರ ಎನಿಸುತ್ತದೆ. ಹಾಗೆ ಪ್ರಾರಂಭದಿಂದಲೂ ಏನೊಂದು ಒಳ್ಳೆಯ ಕೆಲಸವನ್ನ ನಾಯಕರು ಮಾಡದಿರುವುದು ಅವರ ವ್ಯಕ್ತಿತ್ವವನ್ನ ಅಧಪತನಕ್ಕಿಳಿಸುತ್ತದೆ.
ಚಿತ್ರದ ಋಣಾತ್ಮಕ ಮತ್ತು ಧನಾತ್ಮಕ ಅಂಶವೆಂದರೆ ಸಂಭಾಷಣೆ. ಹೆಸರಿಗೆ ಚಾಮರಾಜನಗರದ ಪಕ್ಕದ ಹಳ್ಳಿ, 1981 ರ ಇಸವಿ ಎಂದರೂ ಕೆಲವೇ ಕೆಲವೇ ಪಾತ್ರಗಳು ಹಳ್ಳಿಗಾಡಿನ ಮಾತಾಡುತ್ತವೆ. ನಾಯಕಿಯೂ ಸೇರಿದಂತೆ ಕೆಲವು ಪಾತ್ರಗಳು ಇದ್ದಕಿದ್ದಂತೆ ಬೆಂಗಳೂರು ಮಾತಿಗೆ ಶುರು ಹಚ್ಚಿ ಕೊಳ್ಳುತ್ತವೆ. ಚಾಮರಾಜನಗರದ ಮಾತುಗಳು ಕೆಲವೊಮ್ಮೆ ಮಂಡ್ಯದ ಮಾತಿನಂತೆ ಭಾಸವಾಗುತ್ತದೆ. ಚಿತ್ರದಲ್ಲಿ ಪ್ರೀತಿ, ತಾಯಿ ಮಮತೆ, ಸ್ನೇಹ,ಮಿತ್ರದ್ರೋಹ, ತ್ಯಾಗ ಎಲ್ಲವೂ ಇದೆ. ಆದರೆ ಹಿಂಸೆ, ಕ್ರೌರ್ಯ ಅದೆಲ್ಲವನ್ನೂ ಮೆಟ್ಟಿ ನಿಂತಿದೆ. ಹಾಗೆ ಚಿತ್ರವೂ 1981ರಲ್ಲಿ ಪ್ರಾರಂಭವಾದರೂ ಮುಂದುವರೆದಂತೆ ಪ್ರೇಕ್ಷಕರನ್ನು 1981ರ ಕಾಲಘಟ್ಟಕ್ಕೆ ಹೊತ್ತೊಯ್ಯುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ ಎನ್ನಬಹುದು.
2008ರಲ್ಲಿ  ಬಿಡುಗಡೆಯಾದ ತಮಿಳಿನ ಸುಬ್ರಮಣ್ಯ ಪುರಂ ಒಂದು ಕಡಿಮೆ ಬಜೆಟ್ಟಿನ ಚಿತ್ರ. ಅದರ ಒಟ್ಟು ಬಂಡವಾಳದಷ್ಟೇ ಹಣ ಕೇವಲ ತೆಲುಗು ಡಬ್ಬಿಂಗ್ ಹಕ್ಕಿನಿಂದ ಬಂತೆಂದರೆ ಅದರ ಯಶಸ್ಸಿನ ಅಂದಾಜು ಮಾಡಬಹುದು. ಆ ಚಿತ್ರದ ಭಾವ, ನಾಯಕ-ನಾಯಕಿಯ ವಸ್ತ್ರ, ಸಂಭಾಷಣೆಯ ಶೈಲಿ ಎಲ್ಲಕ್ಕಿಂತ ಹೆಚ್ಚಾಗಿ ಛಾಯಾಗ್ರಹಣ ಚಿತ್ರದ ಅಂದವನ್ನು ಹೆಚ್ಚಿಸಿತ್ತಲ್ಲದೆ, ಪರಿಣಾಮಕಾರಿಯನ್ನಾಗಿ ಮಾಡಿತ್ತು.
ಆದರೆ ಇಲ್ಲಿ ಎಲ್ಲವೂ ಇದ್ದು ಏನೋ ಇಲ್ಲಾ ಎನ್ನುವ ಭಾವ ಕಾಡುವುದು ಏಕೋ ಗೊತ್ತಾಗಲಿಲ್ಲ. ಅಂದ ಹಾಗೆ ಚಿತ್ರ ನೋಡಿದ ಮೇಲೆ ಹಿರಿಯರು ಕಿರಿಯರಿಗೆ ಬುದ್ದಿ ಹೇಳುವಾಗ 'ನಮ್ಮ  ಕಾಲದಲ್ಲಿ ಹೀಗಿರಲಿಲ್ಲ ನೋಡು..' ಎನ್ನುವ ಹಾಗಿಲ್ಲ. ಆ ಕಾಲದಲ್ಲಿ ಒಂದಷ್ಟು ಕೊಲೆ , ರಕ್ತ , ಮೋಸ ಬಿಟ್ಟರೆ ಇನ್ನೇನಿತ್ತು ಎನಿಸಿದರೆ ಅದಕ್ಕೆ ಈ ಸಿನೆಮಾ ಜವಾಬ್ದಾರಿಯಲ್ಲ.