Friday, December 14, 2012

ಮಾಂಜ್ಹಾ-ಕಿರುಚಿತ್ರ.

ಈ ಕಿರುಚಿತ್ರ ಭಾರತದಲ್ಲಿ ನಿಷೇಧಕ್ಕೊಳಗಾಗಿದೆ.
ಅದರ ಅರ್ಥ ಈ ಚಿತ್ರದಲ್ಲಿ ಏನೋ ಕಠೋರವಾದ ಸತ್ಯವಿರಬೇಕು. ಅಥವಾ ಸಮಾಜದ ಕರಾಳ ಮುಖವನ್ನೂ ಹಸಿಹಸಿಯಾಗಿಯೇ ತೋರಿಸಿರಬಹುದು.ಯಾವ ಬೆದರಿಕೆಗೆ, ಆಮಿಷಕ್ಕೆ ಒಳಗಾಗದೆ ನಿರ್ದೇಶಕ ತನಗನಿಸಿದ್ದನ್ನು ಚಿತ್ರೀಕರಿಸಿರಬೇಕು.
ಹೌದು ಇದೆಲ್ಲವೂ ಈ ಕಿರುಚಿತ್ರದ ಮಟ್ಟಿಗೆ ಸತ್ಯ.
ಈ ಕಿರುಚಿತ್ರವನ್ನು ನೋಡಿದ ಸ್ಲಂ ಡಾಗ್ ಖ್ಯಾತಿಯ ನಿರ್ದೇಶಕ ಡ್ಯಾನಿ ಬೊಯ್ಲ್ ಮೆಚ್ಚಿದ್ದಲ್ಲದೆ ತಮ್ಮ ಚಿತ್ರ ಸ್ಲಂ ಡಾಗ್ ಮಿಲ್ಲೆನಿಯರ್ ನ ಬ್ಲೂ ರೇ ಡಿವಿಡಿಯಲ್ಲಿ ಹೆಚ್ಚುವರಿ ಅಡಕವಾಗಿ ಈ ಕಿರುಚಿತ್ರವನ್ನು ಸೇರಿಸಿದ್ದರು.
ದರರ್ಥ ಈ ಕಿರು ಚಿತ್ರ ಅತ್ಯುತ್ತಮವಾಗಿದೆ ಎಂಬರ್ಥವಿರಬೇಕು.
ಹೌದು. ಮಾ೦ಜ್ಹಾ ಮರಾಠಿ ಭಾಷೆಯಲ್ಲಿರುವ ಕಿರುಚಿತ್ರ. ಕಪ್ಪುಬಿಳುಪು ವರ್ಣದ ಈ ಚಿತ್ರದ ಕಥೆ, ನಿರೂಪಣೆ ಪ್ರೇಕ್ಷಕರನ್ನು ಕೆಲಕಾಲ ದಿಗ್ಭ್ರಾಂತರನ್ನಾಗಿಸದಿರದು. ಮುಂಬೈನಗರದ ಸ್ಲಮ್ಮಿನ ಇನ್ನೊಂದು ಕರಾಳ ಮುಖವನ್ನೂ ತೆರೆದಿಡುವ ಈ ಚಿತ್ರದ ನಿರ್ದೇಶಕ ರಾಹಿ ಅನಿಲ್ ಬರವೆ.
ಮುಂಬೈ ಮಹಾನಗರಿ ರಂಕಾನ ತಾಯಿಯನ್ನು ವೇಶ್ಯಯನ್ನಾಗಿ ಮಾಡಿರುತ್ತದೆ. ತಂದೆಯನ್ನು ಕಿತ್ತುಕೊಂಡಿರುತ್ತದೆ . ಹಾಗಾಗಿ ರಂಕಾನಿಗಿರುವವಳು ಚಿಕ್ಕ ತಂಗಿ ಮಾತ್ರ. ಗಾಳಿಪಟದ ದಾರವನ್ನು ತಯಾರಿಸುವೆಡೆ  ಕೆಲಸ ಮಾಡುವ ರಂಕಾನಿಗೆ ಒಬ್ಬ ಮತಿಗೆಟ್ಟ ಪೋಲೀಸ್ ಅಧಿಕಾರಿ ಪರಿಚಯವಾಗುತ್ತಾನೆ . ಬಾಲ್ಯದಲ್ಲಿ ತಂದೆಯಿಂದಲೇ ನಿರಂತರ ಅತ್ಯಾಚಾರಕ್ಕೊಳಗಾಗಿದ್ದ ಆತ ರಂಕಾಳ  ಪುಟ್ಟ ತಂಗಿಯನ್ನು ಲೈಂಗಿಕವಾಗಿ ಆಘಾತಗೊಳಿಸುತ್ತಾನೆ ಮುಂದೆ ರಂಕಾ ಹೇಗೆ ಆ ಪೈಶಾಚಿಕ ಮನೋಭಾವದ ಪೋಲೀಸ್ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದೇ ಕಥೆ.
ಚಿತ್ರದ ಹಿನ್ನೆಲೆ ಸಂಗೀತ, ನೇರವಂತಿಕೆಯ ಸಂಭಾಷಣೆ ನಮ್ಮನ್ನು ಕಾಡದಿರದು .41 ನಿಮಿಷಗಳಷ್ಟು ಉದ್ದವಿರುವ ಈ ಕಿರುಚಿತ್ರವನ್ನೊಮ್ಮೆ ಅವಶ್ಯ ನೋಡಿ.
ಓದಿ  ಮೆಚ್ಚಿದ್ದು: ಪ್ರಮೋದ ರ ಬ್ಲಾಗ್ CIPHERS SPACE ನಲ್ಲಿನ  ಮೂರ್ಖರ , ಮೂರ್ಖರಿಂದ ಮೂರ್ಖರಿಗಾಗಿ ಈವತ್ತಿನ ಮಾಧ್ಯಮಗಳ ಟಿ .ಆರ್.ಪಿ. ಸರ್ಕಸ್ಸಿನ ಬಗ್ಗೆ ವ್ಯಂಗ್ಯವಾಗಿ ತಿಳಿಸುವ ಅರ್ಥ ಗರ್ಭಿತ ಲೇಖನ. ಓದು ಓದುತ್ತಾ ಹೌದಲ್ಲ ಎನಿಸುವ ಲೇಖನ ಸಕತ್ತು ಮಜಾ ಕೊಡುತ್ತದೆ. ನೀವು ಓದಿ.

Monday, December 10, 2012

ಅಡ್ಡ-ಒಂದು ಗಿಡ್ಡ ವಿಮರ್ಶೆ

ಒಂದು ರೀಮೇಕ್ ಚಿತ್ರದ ಬಗ್ಗೆ ಮಾತಾಡುವಾಗ, ನೋಡುವಾಗ , ವಿಮರ್ಶೆ ಮಾಡುವಾಗ ಅನೂಚಿತವಾಗಿ ಮೂಲಚಿತ್ರದ ನೆನಪು ಬಂದೆ ಬರುತ್ತದೆ. ಬೇಡ ಬೇಡ ವೆಂದರೂ ಎರಡೂ ಚಿತ್ರಕ್ಕೆ ತಾಳೆ ಹಾಕುವ ಮನಸ್ಸು, ಅದು ಅಲ್ಲೇ ಚೆನ್ನಾಗಿತ್ತು, ಈ ದೃಶ್ಯವನ್ನು ಇಲ್ಲಿ ಚೆನ್ನಾಗಿ ಚಿತ್ರೀಕರಿಸಿದ್ದಾರೆ, ಅಲ್ಲೊಂದು ಬೋರಿನ ದೃಶ್ಯವನ್ನು ಇಲ್ಲಿ ತೆಗೆದುಹಾಕಿದ್ದು ಚಿತ್ರಕ್ಕೆ ಲಾಭವಾಗಿದೆ ಎಂದೆಲ್ಲಾ ತಪ್ಪು ಸರಿಗಳ ಲೆಕ್ಕಾಚಾರದಲ್ಲಿ ತೊಡಗುತ್ತದೆ. ಆದರೆ ಒಂದು ಸಿನೆಮಾವನ್ನು ಬರೀ ಸಿನೆಮಾವನ್ನಾಗಿ, ಇಲ್ಲಿನ ಸಿನೆಮಾವನ್ನಾಗಿ ನೋಡಲು ಪ್ರಯತ್ನಿಸಿದಾಗ ಆ ಚಿತ್ರದ ನಿಜವಾದ ವಿಮರ್ಶೆ ಸಾಧ್ಯವಾಗುತ್ತೇನೋ. ಆಮೇಲಿನಿಂದ ಬೇಕಾದರೆ ಹೋಲಿಕೆ ಮಾಡಬಹುದೇನೋ.
ಪ್ರೇಮ್ ಅಡ್ಡದ ಕಥೆ 2012ರಲ್ಲಿ  ಪ್ರಾರಂಭವಾಗಿ 1981 ಕ್ಕೆ ಹೋಗಿ ನಿಲ್ಲುತ್ತದೆ. 1981ರಲ್ಲಿ ನಡೆದ ಮಾರಣ ಹೋಮದ ಕಥೆ ಚಿತ್ರದ್ದು. ನಾಲ್ವರು ಹಾದಿಬೀದಿ ಹುಡುಗರು ಕೊಲೆಗಳನ್ನು ಮಾಡುತ್ತಾ ಎಲ್ಲವನ್ನೂ ಕಳೆದುಕೊಂಡು ಕೊನೆಗೆ ತಾವೂ ಕೊಲೆಯಾಗುವುದೇ ಕಥೆ. ಆದರೆ ಚಿತ್ರ ನೋಡ ನೋಡುತ್ತಾ ನಮ್ಮ ನಾಯಕರ ಮೇಲೆ ಪ್ರೇಕ್ಷಕರಿಗೆ ಕರುಣೆ ಹುಟ್ಟಿಸುವುದರ ಬದಲು 'ಅಯ್ಯೋ ಯಾಕೀಗೆ ಮಾಡಿಬಿಟ್ಟರು..' ಎನಿಸುತ್ತದೆ. ಆದರೆ ಮತ್ತೆ ಅದೇ ತಪ್ಪನ್ನು ಮಾಡಿದಾಗ ನೋಡುಗನಿಗೆ ಅವರ ಮೇಲೆಯೇ ಬೇಸರವಾಗುತ್ತದೆ. ಆದರೆ ಬರುಬರುತ್ತಾ ಮನೆಗೆ ಮಗನಾಗದ, ಯಾರಿಗೂ ಒಳ್ಳೆಯವರಾಗದ ನಾಲ್ವರು ಕತ್ತು ಕುಯ್ಯುತ್ತಾ ಜೀವನ ನಡೆಸುವುದು ಅರಗಿಸಿಕೊಳ್ಳುವುದೂ ಕಷ್ಟವಾಗುತ್ತದೆ. ಚಿತ್ರದ ಬಿಡಿ ಬಿಡಿ ದೃಶ್ಯಗಳು ಚೆನ್ನಾಗಿವೆ. ಆದರೆ ಒಟ್ಟಾರೆಯಾಗಿ ಪಾತ್ರ ಪೋಷಣೆ ಮತ್ತು ಕಥೆಯ ಗತಿ ತೃಪ್ತಿಕರವಾಗಿಲ್ಲ. ಹಾಗಾಗಿಯೇ ಚಿತ್ರ ನಿರೀಕ್ಷಿತ ಪರಿಣಾಮ ಬೀರುವಲ್ಲಿ ಸೋಲುತ್ತದೆ. ರಾಜಕೀಯದ ದೊಂಬರಾಟದಲ್ಲಿ ಯಾರೋ ಅಮಾಯಕನನ್ನು ಕೊಲೆ ಮಾಡುವ ನಾಯಕರ ತಂಡ ನಮಗೆಂದೂ[ನನಗೆಂದೂ] ಒಳ್ಳೆಯವರು, ಅಥವಾ ಮಾಡಿದ್ದು ಸರಿಯಾದ ಕೆಲಸ ಎನಿಸುವುದಿಲ್ಲ.
ಚಿತ್ರದ ತಾಂತ್ರಿಕ ಅಂಶಗಳು ಚೆನ್ನಾಗಿವೆ. ಪಾತ್ರಧಾರಿಗಳೂ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಆದರೆ ಭಾವಕ್ಕಿಂತ ಹೆಚ್ಚಾಗಿ ಹಿಂಸೆ ವೈಭವೀಕರಿಸಿದೆ.ಮೊದಲ ಕೊಲೆಯಲ್ಲಿ ಚಾಕುವಿನಿಂದ ಇರಿದು ಆಮೇಲೆ ಮತ್ತೆ ಓಡಿ ಬಂದು ಕತ್ತು ಕುಯ್ಯುವುದು ಬರ್ಬರ ಎನಿಸುತ್ತದೆ. ಹಾಗೆ ಪ್ರಾರಂಭದಿಂದಲೂ ಏನೊಂದು ಒಳ್ಳೆಯ ಕೆಲಸವನ್ನ ನಾಯಕರು ಮಾಡದಿರುವುದು ಅವರ ವ್ಯಕ್ತಿತ್ವವನ್ನ ಅಧಪತನಕ್ಕಿಳಿಸುತ್ತದೆ.
ಚಿತ್ರದ ಋಣಾತ್ಮಕ ಮತ್ತು ಧನಾತ್ಮಕ ಅಂಶವೆಂದರೆ ಸಂಭಾಷಣೆ. ಹೆಸರಿಗೆ ಚಾಮರಾಜನಗರದ ಪಕ್ಕದ ಹಳ್ಳಿ, 1981 ರ ಇಸವಿ ಎಂದರೂ ಕೆಲವೇ ಕೆಲವೇ ಪಾತ್ರಗಳು ಹಳ್ಳಿಗಾಡಿನ ಮಾತಾಡುತ್ತವೆ. ನಾಯಕಿಯೂ ಸೇರಿದಂತೆ ಕೆಲವು ಪಾತ್ರಗಳು ಇದ್ದಕಿದ್ದಂತೆ ಬೆಂಗಳೂರು ಮಾತಿಗೆ ಶುರು ಹಚ್ಚಿ ಕೊಳ್ಳುತ್ತವೆ. ಚಾಮರಾಜನಗರದ ಮಾತುಗಳು ಕೆಲವೊಮ್ಮೆ ಮಂಡ್ಯದ ಮಾತಿನಂತೆ ಭಾಸವಾಗುತ್ತದೆ. ಚಿತ್ರದಲ್ಲಿ ಪ್ರೀತಿ, ತಾಯಿ ಮಮತೆ, ಸ್ನೇಹ,ಮಿತ್ರದ್ರೋಹ, ತ್ಯಾಗ ಎಲ್ಲವೂ ಇದೆ. ಆದರೆ ಹಿಂಸೆ, ಕ್ರೌರ್ಯ ಅದೆಲ್ಲವನ್ನೂ ಮೆಟ್ಟಿ ನಿಂತಿದೆ. ಹಾಗೆ ಚಿತ್ರವೂ 1981ರಲ್ಲಿ ಪ್ರಾರಂಭವಾದರೂ ಮುಂದುವರೆದಂತೆ ಪ್ರೇಕ್ಷಕರನ್ನು 1981ರ ಕಾಲಘಟ್ಟಕ್ಕೆ ಹೊತ್ತೊಯ್ಯುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ ಎನ್ನಬಹುದು.
2008ರಲ್ಲಿ  ಬಿಡುಗಡೆಯಾದ ತಮಿಳಿನ ಸುಬ್ರಮಣ್ಯ ಪುರಂ ಒಂದು ಕಡಿಮೆ ಬಜೆಟ್ಟಿನ ಚಿತ್ರ. ಅದರ ಒಟ್ಟು ಬಂಡವಾಳದಷ್ಟೇ ಹಣ ಕೇವಲ ತೆಲುಗು ಡಬ್ಬಿಂಗ್ ಹಕ್ಕಿನಿಂದ ಬಂತೆಂದರೆ ಅದರ ಯಶಸ್ಸಿನ ಅಂದಾಜು ಮಾಡಬಹುದು. ಆ ಚಿತ್ರದ ಭಾವ, ನಾಯಕ-ನಾಯಕಿಯ ವಸ್ತ್ರ, ಸಂಭಾಷಣೆಯ ಶೈಲಿ ಎಲ್ಲಕ್ಕಿಂತ ಹೆಚ್ಚಾಗಿ ಛಾಯಾಗ್ರಹಣ ಚಿತ್ರದ ಅಂದವನ್ನು ಹೆಚ್ಚಿಸಿತ್ತಲ್ಲದೆ, ಪರಿಣಾಮಕಾರಿಯನ್ನಾಗಿ ಮಾಡಿತ್ತು.
ಆದರೆ ಇಲ್ಲಿ ಎಲ್ಲವೂ ಇದ್ದು ಏನೋ ಇಲ್ಲಾ ಎನ್ನುವ ಭಾವ ಕಾಡುವುದು ಏಕೋ ಗೊತ್ತಾಗಲಿಲ್ಲ. ಅಂದ ಹಾಗೆ ಚಿತ್ರ ನೋಡಿದ ಮೇಲೆ ಹಿರಿಯರು ಕಿರಿಯರಿಗೆ ಬುದ್ದಿ ಹೇಳುವಾಗ 'ನಮ್ಮ  ಕಾಲದಲ್ಲಿ ಹೀಗಿರಲಿಲ್ಲ ನೋಡು..' ಎನ್ನುವ ಹಾಗಿಲ್ಲ. ಆ ಕಾಲದಲ್ಲಿ ಒಂದಷ್ಟು ಕೊಲೆ , ರಕ್ತ , ಮೋಸ ಬಿಟ್ಟರೆ ಇನ್ನೇನಿತ್ತು ಎನಿಸಿದರೆ ಅದಕ್ಕೆ ಈ ಸಿನೆಮಾ ಜವಾಬ್ದಾರಿಯಲ್ಲ.

Friday, December 7, 2012

ಜೋಗಿ ಲೇಖನಗಳೂ, ಚಿತ್ರರಂಗವೂ....

ಕಳೆದ ವಾರದ ಉದಯವಾಣಿಯ ಸಿನೆಮಾ ಪುರವಣಿಯಲ್ಲಿ ಮತ್ತು ಈ ವಾರದ ಸಿನೆಮಾ ಪುರವಣಿಯಲ್ಲಿ ಜೋಗಿಯವರ ಎರಡು ಲೇಖನಗಳು ಪ್ರಕಟವಾಗಿವೆ. ಒಂದು ಒಟ್ಟಾರೆಯಾಗಿ ನಿರ್ದೇಶಕರುಗಳ ಬಗ್ಗೆ ಮತ್ತೊಂದು ಕಥೆಯ ಬಗ್ಗೆ. ನಿಜಕ್ಕೂ ಎರಡೂ ಲೇಖನಗಳೂ ಒಳ್ಳೆಯ ಚಿಂತನೆಯನ್ನು ಬಡಿದೆಬ್ಬಿಸುವ ಲೇಖನಗಳು.
ಹೇಗೆ ಒಬ್ಬ ಕಲಾವಿದ/ಕಲಾವಿದೆ  ಒಂದೇ ಪಾತ್ರಕ್ಕೆ ಸೀಮಿತವಾಗಬಾರದೋ ಹಾಗೆಯೇ ಒಬ್ಬ  ನಿರ್ದೇಶಕ ಒಂದೇ ಶೈಲಿಗೆ ಜೋತು ಬೀಳಬಾರದು. ಹಾಗಂತ ಎಲ್ಲಾ ರೀತಿಯ ಎಲ್ಲಾ ವಿಭಾಗದ ಚಿತ್ರಗಳನ್ನೂ ಮಾಡಿಯೇ ತೀರಬೇಕೆಂದು ಹಠ ತೊಡಬೇಕಾಗಿಲ್ಲ. ಆದರೆ ತಮಗೆ ಆಗಿಬರುವ,ತಮ್ಮ ಮನಸ್ಸಿಗೆ, ಯೋಚನಾಲಹರಿಯ ಪರಿಧಿಯೊಳಗೆ ಬರುವ ಭಿನ್ನ ಭಿನ್ನ ರೀತಿಯ ಕಥಾವಸ್ತುವನ್ನು ದೃಶ್ಯ ಮಾಧ್ಯಮಕ್ಕೆ ತರಲು ಪ್ರಯತ್ನ ಪಡಬಹುದೇನೋ. ಅಥವಾ ತಮಗೊಲಿದ/ತಮಗೊಪ್ಪಿದ ಶೈಲಿಯಲ್ಲಿಯೇ ಬೇರೆ ಬೇರೆ ಕಥೆಯನ್ನೂ ಹೇಳಬಹುದು. ನಾವು  ಹಾಲಿವುಡ್ಡಿನ ನಿರ್ದೇಶಕ ರೋಲಂಡ್ ಎಮರಿಚ್ ನ ಸಿನೆಮಾಗಳನ್ನ ಗಮನಿಸಿದಾಗ ಆತನ ಹೆಚ್ಚಿನ ಸಿನೆಮಾಗಳು VFX ಅಥವಾ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಹೆಚ್ಚಾಗಿ ಹೊಂದಿರುವಂತಹ ಚಿತ್ರಗಳು ಕಂಡುಬರುತ್ತವೆ.. 2012 , 10000 B.C., ದಿ ಡೇ ಆಫ್ಟರ್ ಟುಮಾರೋ, ಗಾಡ್ಜಿಲ್ಲಾ, ಯೂನಿವೆರ್ಸಲ್ ಸೋಲ್ದರ್ , ಇಂಡೆಪೆಂಡೆನ್ಸ್ ಡೇ, ಅನಾನಿಮಸ್ ಮುಂತಾದವುಗಳು ಗ್ರಾಫಿಕ್ಸ್ ತಂತ್ರವನ್ನು ಹೆಚ್ಚಾಗಿ ನಂಬಿಕೊಂಡಿದ್ದರೂ   ವಸ್ತು ಮಾತ್ರ ಭಿನ್ನವಾದವುಗಳಾಗಿವೆ. ಹಾಗೆಯೇ ನಿರ್ದೇಶಕ ಸ್ಪೀಲ್ ಬರ್ಗ್ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನ. ವಸ್ತು ವಿಷಯದಲ್ಲಿ, ಶೈಲಿಯಲ್ಲಿ ಬೇರೆ ತರಹದ ಚಿತ್ರಗಳನ್ನ ಕೊಟ್ಟಿದ್ದಾನೆ ಸ್ಪೀಲ್ ಬರ್ಗ್.ಆತನ ಜಾಸ್ , ಈ.ಟಿ , ಇಂಡಿಯಾನ ಜೋನ್ಸ್, ದಿ ಕಲರ್ ಪರ್ಪಲ್, ಜುರಾಸಿಕ್ ಪಾರ್ಕ್, ಶಿಂಡ್ಲರ್ಸ್ ಲಿಸ್ಟ್, ಟರ್ಮಿನಲ್ ಹೀಗೆ. ಅದೇ ರೀತಿ ನಾವು ಸುಮಾರು ನಿರ್ದೇಶಕರನ್ನು ಗುರುತಿಸಬಹುದು. ಕನ್ನಡದಲ್ಲೂ ನಿರ್ದೇಶಕ ಉಪೇಂದ್ರರ ಮೊದಲ ನಾಲ್ಕು ಸಿನೆಮಾಗಳೂ ಎಲ್ಲಾ ರೀತಿಯಿಂದಲೂ ಭಿನ್ನವಾದವು.ಶ್, ಆಪರೇಶನ್ ಅಂತ, ಓಂ, ಎ  ಹಾರರ್, ಆಕ್ಷನ್ ಹೀಗ.ಆದರೆ ನಮ್ಮಲ್ಲಿ ಇತ್ತೀಚಿಗೆ ಯಾಕೆ ಆ ಕೆಲಸ ಆಗುತ್ತಿಲ್ಲ. ಒಬ್ಬ ನಿರ್ದೇಶಕ ಯಾಕೆ ಒಂದು ಯಶಸ್ಸಿನ ಸೂತ್ರಕ್ಕೆ ಹಿಡಿದುಕೊಂಡು ಅದಕ್ಕೆ ಜೋತಾಡುತ್ತಾನೆ ಎಂಬ ಪ್ರಶ್ನೆ ಕಾಡುವುದು ಸಹಜ. ಚಿತ್ರರಂಗದಲ್ಲಿ ತಮ್ಮ ಗುರುತೇ ಇರದಿದ್ದ ಸಮಯದಲ್ಲಿ ರಾಜಿಯಾಗದೆ , ತಮಗೆ ಅನಿಸಿದ ಚಿತ್ರವನ್ನ ಕಿತ್ತಾಡಿಕೊಂಡು ಜಗಳವಾಡಿಕೊಂಡು ಸಿನೆಮಾ ಮಾಡುವ ನಿರ್ದೇಶಕರು ತಮ್ಮ ದಿನಗಳು ಶುರುವಾದಾಗ ಯಾಕೆ ಸುಮ್ಮನಿದ್ದು ಬಿಡುತ್ತಾರೆ ಎನ್ನುವ ಪ್ರಶ್ನೆ ನನ್ನದು. ಪ್ರಾರಂಭದಲ್ಲಿ ಏನು ಮಾಡಲು ಹೊರಟರೂ ಅದಕ್ಕೆ ಉತ್ತರಗಳನ್ನು ಸಿದ್ಧವಾಗಿಟ್ಟು ಕೊಳ್ಳಬೇಕಾಗುತ್ತದೆ. ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಅದ್ಯಾಕೆ, ಅವರ್ಯಾಕೆ ಎಂಬ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿದ್ದರೂ ಇವರೇ ಸಾಕು, ಇದೆ ಸಾಕು ಎಂಬ ನಿರ್ಣಯಕ್ಕೆ ತಲೆಬಾಗಬೇಕಾಗುತ್ತದೆ. ಆದರೆ ಹೆಸರಾದ ಮೇಲೆ ಕೇಳಿದ ನಟರನ್ನು, ವಸ್ತುವನ್ನೂ, ಸ್ಥಳವನ್ನೂ ಕೊಡಲಿಕ್ಕೆ ನಿರ್ಮಾಪಕರು ಸಿದ್ಧವಾದಾಗಲೂ ನಿರ್ದೇಶಕರ್ಯಾಕೆ ತಾವೇ ಒಂದು ವೃತ್ತದೊಳಗೆ ಸೇರಿಕೊಳ್ಳುತ್ತಾರೆ ಎನ್ನುವುದೂ ಪ್ರಶ್ನೆಯಾಗಿಯೇ ಉಳಿದಿದೆ. 
 ಇನ್ನು ಕಥೆಯ ವಿಷಯಕ್ಕೆ ಬಂದರೆ ಆಗಿಲಿಂದ ಈವತ್ತಿಗೂ ಕಥೆಯ ಕೊರತೆ ಎದ್ದು ಕಾಡತೊಡಗುತ್ತದೆ. ಅಥವಾ ಇರುವ ಕಥೆ ಕಾದಂಬರಿಗಳನ್ನೂ ಸಿನೆಮಾ ರೂಪಕ್ಕೆ ಅಳವಡಿಸುವ ಪರಿಣತಿಯ ನಿರ್ದೇಶಕರು ಅಲ್ಪ ಸಂಖ್ಯಾತರು ಎನಿಸುತ್ತದೆ.
ಜೋಗಿಯವರ ಲೇಖನ ಎಲ್ಲೋ ಮೂಲೆಯಲ್ಲಿ ಕುಳಿತ ಕೇವಲ ಒಂದೇ ಒಂದು ಚಿತ್ರ ನಿರ್ದೇಶಿಸಿರುವ ನನ್ನನ್ನೇ ಅಷ್ಟು ಪರಿಯಾಗಿ ಕಾಡಿದೆಯೆಂದರೆ ನಮ್ಮ ಬಾಸ್ ಗಳನ್ನೂ ಬಡಿದೆಬ್ಬಿಸಲು ಸಾಕು. ಆ ಕೆಲಸವಾಗಲಿ ಮಾತು ನಮ್ಮ ನಿರ್ದೇಶಕರು ಚಿತ್ರದಿಂದ ಚಿತ್ರಕ್ಕೆ ಬೆಳೆಯಲಿ, ನಮಗೆ ದಾರಿದೀಪವಾಗಲಿ ಎಂಬ ಆಶಯ ನನ್ನದು.

Thursday, December 6, 2012

VFX-ಮಾಯಾಜಾಲದ ಬೆನ್ನುಬಿದ್ದು-2

ಅರೆ ಪಾರದರ್ಶಕ ಭೂತವನ್ನು  ಬೆಳ್ಳಿ ಬೆಳ್ಳಿಪರದೆಯ ಮೇಲೆ ತಂದದ್ದು ಇದೆ ಸ್ಮಿತ್. 1909ರಲ್ಲೇ ತೆರೆಗೆ ಬಂದ 'ದಿ  ಕಾರ್ಸಿಕಾನ್  ಬ್ರದರ್ಸ್ ' ಚಿತ್ರದಲ್ಲಿ ಭೂತವನ್ನು ನೋಡಿದ ಜನ ರೋಮಾಂಚಿತರಾಗಿದ್ದರಂತೆ ಹಾಗೆ ಡಬಲ್ ಎಕ್ಸ್ ಪೋಸರ್ ಗೆ ಇಂಗ್ಲಿಷ್ ಪೇಟೆಂಟ್ ಪಡೆದ ಸ್ಮಿತ್ ಆನಂತರ ಮತ್ತೊಬ್ಬ ವ್ಯವಹಾರಸ್ಥ ಚಾರ್ಲ್ಸ್ ಅರ್ಬನ್ ಜೊತೆ ಸೇರಿ ಹಲವಾರು ಸಿನೆಮಾಗಳನ್ನು ನಿರ್ಮಿಸಿದ ಅವುಗಳಲ್ಲಿ ಮುಖ್ಯವಾದುದೆಂದರೆ ಡಬ್ಲ್ಯೂ.ಆರ್ .ಬೂತ್ ನಿರ್ದೇಶನದ ಏರ್ ಶಿಪ್ ಡೆಸ್ಟ್ರಾಯರ್ . 1909ರಲ್ಲಿ ತೆರೆಗೆ ಬಂದ ಈ ಚಿತ್ರದ ಕಥೆ ಇಂತಿದೆ . ಅಂತರಿಕ್ಷಾವಾಹನವೊಂದು ಲಂಡನ್ ನಗರದ ಮೇಲೆ ಬಂದಿಳಿದು ಇಡೀ ನಗರವನ್ನು ಸುಟ್ಟುಹಾಕಲು ಹವಣಿಸುತ್ತದೆ . ಆಗ ನಾಯಕ ಅದರ ತಂತ್ರಜ್ಞಾನವನ್ನು ತಿಳಿದು ತನ್ನ ಬುದ್ದಿಶಕ್ತಿ  ಮತ್ತು  ತಂತ್ರಜ್ಞಾನದ  ಸಹಾಯದಿಂದ ಲಂಡನ್ ನಗರವನ್ನು ಉಳಿಸುವನು.ಇದೆ ಕಾಲ ಘಟ್ಟದಲ್ಲಿ ಹೆಸರಿಸಬಹುದಾದ  ಮತ್ತೊಬ್ಬ ಚಿತ್ರಕರ್ಮಿ ಎಂದರೆ ಸಿಸಿಲ್ ಎಂ. ಹೆಪ್ ವರ್ತ್ .ಹೆಪ್ ವರ್ತ್ ನಿರ್ದೇಶನದ  ಎಕ್ಷ್ ಪ್ಲೋಶನ್  ಆಫ್ ಎ ಮೋಟಾರ್ ಕಾರ್ ಬ್ರಿಟಿಶ್ ಟ್ರಿಕ್ಸ್ ಸಿನೆಮಗಳಲ್ಲೇ ಗಮನಾರ್ಹ ಸಿನೆಮಾ ಎಂದೇ ಹೇಳಬಹುದು ಕೇವಲ  ಒಂದೂವರೆ ನಿಮಿಷದ ಈ ಮೂಕಿ ಚಿತ್ರದ ಪರಿಣಾಮ ಮಾತ್ರ ಆ ಕಾಲಕ್ಕೆ ಅಗಾಧವಾದದ್ದು ಎಂದೇ ಹೇಳಬಹುದು. ಆಲಿಸ್ ಇನ್ ವಂಡರ್ ಲ್ಯಾಂಡ್ 1900 ಮತ್ತು ಹೌ ಇಟ್ ಫೀಲ್ಸ್ ಟು ಬಿ ರನ್ ಓವರ್ ಈತನ ಹೆಸರಿಸಬಹುದಾದ ಟ್ರಿಕಿ ಚಿತ್ರಗಳು.
ಬ್ರಿಟನ್ ಚಿತ್ರಕರ್ಮಿಗಳು vfx  ವಿಷಯದಲ್ಲಿ ಇಷ್ಟೆಲ್ಲಾ ತಲೆ ಕೆಡಿಸಿಕೊಳ್ಳು ತ್ತಿದ್ದರೂ ಅಮೆರಿಕನ್ ಚಿತ್ರಕರ್ಮಿಗಳು ಆ  ವಿಷಯದಲ್ಲಿ ಸ್ವಲ್ಪ  ಹಿಂದುಳಿದಿದ್ದರು  ಎಂದೇ ಹೇಳಬಹುದು. ಹಾಗಂತ ಅವರಿಗೆ ಇದೇನೂ ಹೊಸದಾಗಿರಲಿಲ್ಲ 1895ರಲ್ಲೇ ದಿ ಎಕ್ಸಿಕ್ಯೂಶನ್ ಆಫ್ ಮೇರಿ ಚಿತ್ರದಲ್ಲೇ ತಮ್ಮ vfx ಜ್ಞಾನ ಮೆರೆದಿದ್ದರು . ಆದರೂ ಆನಂತರದ ದಿನಗಳಲ್ಲಿ ಪ್ರಸ್ತುತ ಸುದ್ದಿಗಳನ್ನು ಚಿತ್ರರೂಪಕ್ಕೆ ತರಲು  ಆಸಕ್ತಿ ತೋರಿಸಿದರೆ ವಿನಾ ದೃಶ್ಯ ವೈಭವದ ಕಡೆಗೆ ಅಷ್ಟಾಗಿ ಒಲವು ತೋರಿರಲಿಲ್ಲ .
1898ರಲ್ಲಿ  ಅಲ್ಬರ್ಟ್ ಈ ಸ್ಮಿತ್  ಮತ್ತು ಸ್ಟುವಾರ್ಟ್ ಬ್ಲಾಕ್ಟನ್ ಸೇರಿಕೊಂಡು ತಮ್ಮ ವಿಟಾಗ್ರಾಫ್ ಕಂಪನಿಯ ಮೂಲಕ ದಿ ಬ್ಯಾಟಲ್ ಆಫ್ ಸ್ಯಾಂಟಿಯಾಗೊ ಬೇ ಚಿತ್ರವನ್ನು ನಿರ್ಮಿಸಿದರು. ಆ ಕಾಲಕ್ಕೆ  ವಿಭಿನ್ನ  ಪ್ರಯತ್ನವಾಗಿತ್ತು. ಯುಧ್ಧ ಭೂಮಿ, ಕಣಿವೆ,  ನೌಕೆಗಳು, ಪ್ರವಾಹ, ಬಾಂಬ್  ಮುಂತಾದವುಗಳನ್ನು ಆ ಕಾಲಕ್ಕೆ  ಭಿನ್ನ ಐಡಿಯ ಉಪಯೋಗಿಸಿ ಚಿತ್ರೀಕರಿಸಲಾಗಿತ್ತು ಅದಕ್ಕಾಗಿ ಸಣ್ಣ ಸಣ್ಣ ಮಾದರಿಗಳನ್ನು ಬಳಸಲಾಗಿತ್ತು . ಯುದ್ಧಭೂಮಿಯ ಪರಿಣಾಮ ತರುವುದಕ್ಕಾಗಿ  ಸಿಗಾರ್ ಮೂಲಕ ಹೊಗೆಬಿಟ್ಟು ಆನಂತರ ಚಿತ್ರದಲ್ಲಿ ಸಂಯೋಜಿಸಲಾಗಿತ್ತು .ಇದೆಲ್ಲದರ ಫಲಿತಾಂಶ ಅದ್ಭುತವಾಗಿತ್ತು ಈ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯ ನಂತರ ಇದೆ ವಿಟಾಗ್ರಾಫ್ ಕಂಪನಿ 1899ರಲ್ಲಿ ದಿ ವಿಂಡ್ಸರ್ ಹೋಟೆಲ್ ಫೈರ್ ಚಿತ್ರ ನಿರ್ಮಿಸಿತು .ಈ ಚಿತ್ರದಲ್ಲೂ ಬೆಂಕಿ, ಹೊಗೆ ಮುಂತಾದ ಪರಿಣಾಮಗಳಿಗಾಗಿ ಹಲವಾರು ಹೊಸ ಹೊಸ ತಂತ್ರಗಳನ್ನು ಬಳಸಲಾಗಿತ್ತು.
1903ರಲ್ಲಿ ಬಂದ ದಿ ಗ್ರೇಟ್ ಟ್ರೈನ್ ರಾಬರಿ ಚಿತ್ರ ಚಿತ್ರಜಗತ್ತಿನ ಹಲವಾರು ಹೊಸಹೊಸ ಸಾಧ್ಯತೆಗಳಿಗೆ ಮೆಟ್ಟಿಲಾಯಿತು ಎಂದರೆ ತಪ್ಪಾಗಲಾರದು .ಇದರ  ನಿರ್ದೇಶಕ ಎಡ್ವಿನ್ .ಎಸ್  ಪೋರ್ಟರ್ .1900ರಲ್ಲಿ ಎಡಿಸನ್ ಕಂಪನಿಗೆ ಬರೀ ಪ್ರೊಜೆಕ್ಟರ್ ಆಪರೇಟರ್ ಆಗಿ ಸೇರಿದ ಪೋರ್ಟರ್  ತನ್ನ ಪ್ರತಿಭೆಯಿಂದಾಗಿ  ಬೇಗನೆ ನಿರ್ದೇಶಕನ ಪಟ್ಟ ಗಳಿಸಿದ ವ್ಯಕ್ತಿ .ಆತನ ದಿ ಗ್ರೇಟ್ ಟ್ರೈನ್ ರಾಬರಿ ಆ ಕಾಲಕ್ಕೆ ಒಂದು ಉತ್ತಮ ಪ್ರಯತ್ನವಷ್ಟೇ ಅಲ್ಲ. ಕ್ಲೋಸ್ ಅಪ್ , ಲಾಂಗ್ ಶಾಟ್ಸ್ ಮುಂತಾದ ದೃಶ್ಯ ವಿಭಜನೆಯ ಸಂಯೋಜನೆಗಳನ್ನು ಗಳನ್ನು ದೃಶ್ಯವೊಂದಕ್ಕೆ ಸಮರ್ಥವಾಗಿ ಬಳಸಿಕೊಂಡಂತಹ ಚಿತ್ರ. ಈ ಚಿತ್ರದಲ್ಲಿ ಡಬಲ್ ಎಕ್ಸ್ ಪೋಸರ್ ಜೊತೆಗೆ ಗನ್ ಫೈರಿಂಗ್ ಪರಿಣಾಮಕ್ಕಾಗಿ ಚಿತ್ರದ ಫ್ರೇಮುಗಳನ್ನು ಕೆಂಪು ಬಣ್ಣಕ್ಕೆ ಪರಿವರ್ತಿಸಿದ್ದ.
ಮೆಲಿಸ್ ಮತ್ತು ಅವರ ಹಿಂದಿನ ಚಿತ್ರಕರ್ಮಿಗಳನ್ನು ಈ ಸ್ಪೆಷಲ್ ತಂತ್ರಜ್ಞಾನವನ್ನು ಪ್ರಯೋಗಾತ್ಮಕವಾಗಿ ಅಥವಾ ಆ ಪರಿಣಾಮವನ್ನು ತೋರಿಸುವುದಕ್ಕಾಗಿ, ಸಾಧಿಸುವುದಕ್ಕಾಗಿ ಬಳಸಿಕೊಂಡರೆ, ಪೋರ್ಟರ್ ಅದನ್ನು ಕಥೆಗೆ ಪೂರಕವಾಗಿ ಬಳಸಿಕೊಂಡ. ಸಿನೆಮಾದಲ್ಲಿನ ಕಥೆಯ ಅವಶ್ಯಕತೆಗೆ ತಕ್ಕಂತೆ ಪರಿಣಾಮಗಳನ್ನು ಬಳಸಿದ ಚಿತ್ರಕರ್ಮಿಗಳಲ್ಲಿ ಪೋರ್ಟರ್ ಮೊದಲಿಗ ಎನ್ನಬಹುದು.[ಸಶೇಷ]

Wednesday, December 5, 2012

ಕತ್ತಲನಗರದಲ್ಲಿ ಬೆಳಕು ಹುಡುಕುತ್ತಾ...

ಜಾನ್ ಮುರ್ಡೋಕನಿಗೆ ಎಚ್ಚರವಾಗುತ್ತದೆ. ಕಣ್ಣುಬಿಟ್ಟು ಸುತ್ತಲೋ ನೋಡಿದಾಗ ತಾನಿರುವುದು ಹೋಟೇಲ್ಲೊಂದರ ಬಾತ್ ಟಬ್ ನಲ್ಲಿ ಎಂಬುದರ ಅರಿವಾಗುತ್ತದೆ ಹೊರತು  ಯಾವ ಹೋಟೆಲ್, ನಾನ್ಯಾಕೆ ಇಲ್ಲಿ ಬಂದೆ ಎಂಬುದು ಗೊತ್ತಾಗುವುದಿಲ್ಲ. ಹಾಗೆ ಸುತ್ತ ಮುತ್ತ ನೋಡಿದ ಜಾನ್ ಮುರ್ಡೋಕ ಹೌಹಾರುತ್ತಾನೆ. ಪಕ್ಕದಲ್ಲಿ ಹೆಂಗಸಿನ ಶವ ಬಿದ್ದಿದೆ. ಆಕೆಯನ್ನು ಕೊಲೆ ಮಾಡಲಾಗಿದೆ. ಆಕೆ ಯಾರು..? ಅಷ್ಟರಲ್ಲಿ  ಫೋನ್ ರಿಂಗಾಗುತ್ತದೆ. ಈ ಗೊಂದಲಗಳಲ್ಲಿ ಮುಳುಗಿದ್ದ ನಾಯಕ ಆ ಫೋನ್ ರಿಸೀವ್  ಮಾಡಿದಾಗ ಅತ್ತಲಿನ ಧ್ವನಿ 'ಬೇಗ ತಪ್ಪಿಸಿಕೋ...ನಿನ್ನ ಕೊಲೆ ಮಾಡಲು ಬರುತ್ತಿದ್ದಾರೆ ' ಎನ್ನುತ್ತದೆ. ಯಾರಧ್ವನಿ ಅದು...ನನ್ನನ್ಯಾಕೆ ಯಾರಾದರೂ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ? ಇಷ್ಟಕ್ಕೂ ಇಲ್ಲಿ ನಡೆದಿರುವುದಾದರೂ ಏನು...ನಾನ್ಯಾಕೆ ತಪ್ಪಿಸಿಕೊಳ್ಳಬೇಕು...ತಪ್ಪಿಸಿಕೊಂಡು ಹೋಗುವುದಾದರೂ ಎಲ್ಲಿಗೆ..? ಯಾರಿಂದ ತಪ್ಪಿಸಿಕೊಳ್ಳಬೇಕು...ಈ ಎಲ್ಲ ಪ್ರಶ್ನೆಗಳೂ ನಾಯಕನಲ್ಲಿ ಮೂಡುತ್ತವೆ. ಆದರೆ ಯೋಚಿಸುತ್ತ ಕೂರಲು ಸಮಯವಾದರೂ ಎಲ್ಲಿದೆ. ನಾಯಕ ಅಲ್ಲಿಂದ ಓಡುತ್ತಾನೆ...
ಮುಂದೆ..? ಇದಿಷ್ಟು ಈ ಸಿನೆಮಾವನ್ನು ನೋಡಿ ಎಂದು ಹೇಳಲು ಸಾಕು ಎನಿಸುತ್ತದೆ. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗುವ ಈ ಚಿತ್ರ ಥ್ರಿಲ್ಲರ್ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಐ ರೋಬೋಟ್, ನೋಯಿಂಗ್ ಚಿತ್ರಗಳ ನಿರ್ದೇಶಕ ಅಲೆಕ್ಸ್ ಪ್ರೋಯಾಸ್ ನಿರ್ದೇಶನದ ಈ ಚಿತ್ರ 1998 ರಲ್ಲಿ ತೆರೆಗೆ ಬಂದಿತು. ಒಂದು ಘಂಟೆ ನಲವತ್ತು ನಿಮಿಷಗಳ ಅವಧಿಯ ಈ ಚಿತ್ರ ನೋಡುತ್ತಾ ನೋಡುತ್ತಾ ನಮ್ಮಲ್ಲೂ ನಮ್ಮ ಅಸ್ತಿತ್ವದ ಬಗ್ಗೆ ಕೆಲವು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ. ಕಣ್ಣಿಗೆ ಕಂಡದ್ದೆಲ್ಲಾ ಸತ್ಯವಲ್ಲಾ, ಹಾಗಂತ ಸುಳ್ಳೂ ಅಲ್ಲ ಎನ್ನುವುದು ಕಾಲ್ಪನಿಕ ನೆಲೆಗಟ್ಟಿನ ಮೇಲೆ ನಿರೂಪಿಸಿರುವುದು,  ಮತ್ತು ಆ ಪ್ರಯತ್ನದಲ್ಲಿ ಎಲ್ಲ ರೀತಿಯ ಮನರಂಜನೀಯ ಅಂಶಗಳನ್ನೂ ತುಂಬಿರುವುದು ಚಿತ್ರವನ್ನೂ ಬೋರಾಗದಂತೆ ಮಾಡಿದೆ. ಈ
ಸೈ-ಫೈ ಚಿತ್ರವನ್ನು ಈಗಾಗಲೇ ನೋಡಿರದಿದ್ದರೆ  ಸಿನೆಮಾವನ್ನೊಮ್ಮೆ ನೋಡಬಹುದು. ಸಿನಿಮಾದ ಹೆಸರು ಡಾರ್ಕ್ ಸಿಟಿ..

Saturday, December 1, 2012

ಎರಡು ಕವನಗಳು....

 ನನ್ನ ಪೇಂಟಿಂಗ್....
ಕೆಟ್ಟ ಸಮಯವಿದು...
1.
ಕಳೆಯೋಣ
ಈ ಸಮಯವನು

ತಲೆಯೆತ್ತಿದರೆ ಗ್ರಹಣ
ಹಿಡಿ ಅನ್ನ  ಮಣ್ಣು
ಕಣ್ಣ  ತುಂಬದ ನಿದಿರೆ
ಸೋಲು ಸೋಲೇ ಉಸಿರು.

ಹಾದು ಹೋಗಲಿ ಹೀಗೆ
ತಪ್ಪಿಸುವ ಮಾತೇಕೆ?

2.
 ಕಾಯೋಣ
ಆ ಕಾಲವನು

ಬದುಕು ಬೆಳದಿಂಗಳು
ಭರ್ತಿ ತೃಪ್ತಿಯ ಉದರ
ಸಂತೆಯಲು ನಿದ್ರೆ
ಕೈತಾಕಿದ್ದು ಚಿನ್ನ.

ಕಾಲ ಬರಲೇ ಬೇಕು ..
ಕಳೆದರೆ ರಾತ್ರಿ
ಉಳಿದದ್ದು ಹಗಲೇ ತಾನೇ..?

2. ಸೋತಿದ್ದೇನೆ..ಗೆಲ್ಲಲು ಬೇಕಿದೆ ಕನಸು...

ಒದ್ದಾಡುತ್ತಿದ್ದೇನೆ
ಮಗ್ಗುಲು ಬದಲಿಸುತ್ತಾ
ಕಣ್ಣರೆಪ್ಪೆ ಅದುಮುತ್ತಾ
ನೂರು ಸೋಲುಗಳನ್ನು ಪಕ್ಕಕ್ಕಿರಿಸಿ,
ಸುಡುಚಿಂತೆಗಳಿಗೆ ತಣ್ಣೀರೆರೆಚಿ,
ಇತಿಹಾಸವನ್ನು ಮೆದುಳಿ೦ದ ಅಳಿಸಿ
ನನ್ನ ನಾ ಮರೆಯುವ ಯತ್ನಗಳಿಂದ
ಸೋತು ಸೋತು ಮತ್ತೆ ಸೋತು
ಮಲಗಿದ್ದೇನೆ ನಿದ್ರೆ ಬಾರದೆ..!
****
ಬಾರದ ಪ್ರಿಯತಮೆಗಾಗಿ ಕಾದಿದ್ದೆ.
ಒಡನಾಡಿದ ನೆನಪುಗಳು ನನ್ನನ್ನುಳಿಸಿದ್ದವು
ಬೇಸರಿಸದಂತೆ ಬಸವಳಿಯದಂತೆ
ಸೋತು ಸಾಯದಂತೆ
ಮುಖ ತಿರುಗಿಸಿದವಳಿಗೆರೆಡು ಅಕ್ಷತೆ ಹಾಕಿ ಬಂದೆ
ಮತ್ತೆ ಕಾಯಲು ಹೋಗಲಿಲ್ಲ.

. ಬಾರದ ಮಳೆಗಾಗಿ ಕಾದಿದ್ದೆ. 
ಮಳೆ ಬಂದಂತೆ ಬೆಳೆ ಬೆಳೆದಂತೆ
ಬದುಕು  ಹಸನಾದಂತೆ...
ಹಗಲುಗನಸುಗಳೆನ್ನ  ಕಾದಿದ್ದವು
ಜಿಗುಪ್ಸೆಯಿಂದ ,ಹಸಿವಿಂದ
ಆತ್ಮಹತ್ಯಯಂತಹ ಪಾಪದಿಂದ

ಮಳೆಬರಲಿಲ್ಲ.
ರೂಢಿ ಬದುಕಾಗಿ ,
ಬದುಕು ರೂಢಿಯಾಗಿ ನಾನೀಗ ಮಳೆಗೆ ಕಾಯುತ್ತಿಲ್ಲ.
***
ಈಗ
ಬಾರದ ನಿದ್ರೆಗಾಗಿ ಕಾಯುತ್ತಿದ್ದೇನೆ
ನಿದ್ರೆ ಬಾರದೆ,ಕಣ್ಣು ಮುಚ್ಚದೆ
ಬೀಳದ ಕನಸುಗಳನ್ನ ಶಪಿಸುತ್ತಾ
ಕತ್ತಲಿದೆ, ಮಂಚವಿದೆ,
ಬದುಕು ನಿರ್ವರ್ಣ..

ನಿದ್ರೆಯಿಲ್ಲದೆ, ಕನಸಿಲ್ಲದೆ,
ನಾಳೆಗಳೆಲ್ಲವೂ ಶೂನ್ಯ...!!!

*****

ನನ್ನ ಹಳೆಯ ಡೈರಿಯಲ್ಲಿದ್ದ ಕವನಗಳಿವು. ಬೆಂಗಳೂರಿಗೂ  ಬರುವ ಮುಂಚಿನ ದಿನಗಳ ನನ್ನ ಪರಿಸ್ಥಿತಿಯನ್ನು ವ್ಯಕ್ತಪಡಿಸುತ್ತವೆ  . ಆಶ್ಚರ್ಯದ ಸಂಗತಿಯೆಂದರೆ ಈವತ್ತಿಗೂ ನನಗದು ಸೂಕ್ತ ಅನಿಸುತ್ತದೆ... ಇರಲಿ ನನಗೆ ಕವನವನ್ನು ಓದುವುದು ಇಷ್ಟ. ಬರೆಯುವುದೆಂದರೆ ಕಷ್ಟ . ಎಷ್ಟೋ ತಲೆಗೆ ಬಂದದ್ದನ್ನು ಗೀಚಿ ಆಮೇಲೆ ಹರಿದುಹಾಕಿದ್ದೇನೆ . ಈ ಎರಡು ಕವನಗಳೂ  ಅಷ್ಟೇ ಹತಾಶ ಮನೋಭಾವದಿಂದ ನಾನು ಹೊರಬರಲು ನನಗಾಗೆ ಬರೆದುಕೊಂಡದ್ದು .

Monday, November 26, 2012

ಡ್ರಾಮಾ:ಚಿತ್ರ ವಿಮರ್ಶೆ.

ಡ್ರಾಮಾ ಚಿತ್ರ ಬಂದಿದೆ.ನಿರ್ದೇಶಕ ಯೋಗರಾಜ್ ಭಟ್, ಅವರ ಹಿಂದಿನ ಚಿತ್ರಗಳು, ನಿರೀಕ್ಷೆಗಳನ್ನು ಬಿಟ್ಟು ಸುಮ್ಮನೆ ಕನ್ನಡ ಪ್ರೇಕ್ಷಕನಾಗಿ [ಅದು ಅತ್ಯವಶ್ಯ-ಯಾಕೆಂದರೆ ಭಟ್ಟರ ಸಿನೆಮಾದಲ್ಲಿ ಮಾತೆ ಬಂಡವಾಳ] ಸಿನಿಮಾಮಂದಿರದ ಒಳಹೊಕ್ಕರೆ ನಮಗೆ ಕಾಣಸಿಗುವುದು ಏನು ಎಂಬುದನ್ನು ಗಮನಿಸೋಣ. ಚಿತ್ರದ ಪ್ರಾರಂಭ ಅಂದರೆ ಟೈಟಲ್ ಕಾರ್ಡ್ ನಿಂದ ಹಿಡಿದು ಕೊನೆಯವರೆಗೆ ನಿರ್ದೇಶಕರು ಆಸಕ್ತಿ ವಹಿಸಿರುವುದು ಕಾಣಸಿಗುತ್ತದೆ. ಚಿತ್ರದಲ್ಲಿ ಇಬ್ಬರು ನಾಯಕರೂ ಮಹಾನ್ ತರಲೆಗಳು. ಉಡಾಫೆ ಮನೋಭಾವದವರು. ಪಿಯುಸಿಯಲ್ಲಿ ಆರು ಸಲ ಡುಮ್ಕಿ ಹೊಡೆದಿದ್ದಾರೆ. ಹಳ್ಳಿಯಲ್ಲಿ ಏನೆಲ್ಲಾ ತರಲೆ ಮಾಡಬಹುದೋ ಅಷ್ಟನ್ನು ಮಾಡಿಕೊಂಡಿದ್ದಾರೆ. ಅಲ್ಲಿಗೆ ಅಚಾನಕ್ಕಾಗಿ ಬರುವ ನಾಯಕಿ ಹುಡುಗರನ್ನು ನೋಡಿ ಕಬಡ್ಡಿ ಆಡಲು ಆಹ್ವಾನಿಸಿ, ಅದೇ ದೃಶ್ಯದಲ್ಲೇ ನಾಯಕನ ಮನಗೆದ್ದು 'ನಾನು ಬೇಕಿದ್ದರೆ ನನ್ನ ಹಿಂದೆ ಬಾ' ಎನ್ನುತ್ತಾಳೆ. ಇವನು ಗೆಳೆಯನನ್ನೂ ಕರೆದುಕೊಂಡು ಅಲ್ಲಿಂದ ಹೊರಟುಬಿಡುತ್ತಾನೆ. ಕಾಲೇಜು, ವಿಚಿತ್ರ ಪ್ರಾಂಶುಪಾಲರು, ಹುಡುಗ-ಹುಡುಗಿಯರ ಹಾಸ್ಟೆಲ್ಲು ಇದೆಲ್ಲದರ ಜೊತೆಗೆ ನಾಯಕಿಯ ತಂದೆ ಭೂಗತ ಜಗತ್ತಿನ ನಾಯಕ ಇಷ್ಟೆಲ್ಲಾ ಇದ್ದಮೇಲೆ ಒಂದು ಸಿನೆಮಾದ ಕಂಪ್ಲೀಟ್ ಪ್ಯಾಕೇಜ್ ರೆಡಿ ತಾನೇ? ಹೊಡೆದಾಟ, ಹಾಸ್ಯ, ಹಾಡುಗಳು ಕೊಲೆ ಸೆಂಟಿಮೆಂಟ್ ಎಲ್ಲದಕ್ಕೂ ಇಲ್ಲಿ ಸಾಕಷ್ಟು ಅವಕಾಶವಿದೆ. ಅದನ್ನೆಲ್ಲಾ ನಿರ್ದೇಶಕರು ಸಾಕಷ್ಟು ಸದುಪಯೋಗ ಪಡಿಸಿಕೊಂಡಿದ್ದಾರೆ ಎನ್ನಬಹುದು. ಹುಡುಗಿಯ ಮುತ್ತಿಗಾಗಿ, ಆ ಮೂಲಕ ಪ್ರೀತಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಾಗುವ ನಾಯಕ ಆ ಒಂದು ಘನಕಾರ್ಯದಿಂದಾಗಿ ಬಹುದೊಡ್ಡ ಸಮಸ್ಯೆಯೊಂದಕ್ಕೆ ಸಿಲುಕಿಕೊಳ್ಳುತ್ತಾನೆ. ಆದರೆ ಪ್ರೇಕ್ಷಕನಿಗೆ ಅಚ್ಚರಿಯಾಗುವಂತೆ ಬಹುಬೇಗ ಅದರಿಂದ ಹೊರಬಂದು ಮತ್ತೊಂದು ಸಮಸ್ಯೆಯಲ್ಲದ ಸಮಸ್ಯೆಗೆ ಸಿಲುಕಿಕೊಂಡ ನೆಪಹೇಳಿ ನಾಯಕಿಯೊಂದಿಗೆ ಗೆಳೆಯನನ್ನೂ ಆಕೆಯ ಗೆಳತಿಯನ್ನೂ ಕರೆದುಕೊಂಡು ಸಮುದ್ರ ತೀರಕ್ಕೆ ಹೋಗಿ ಹಾಡಿ ಕುಣಿದು ಅಲ್ಲೇ ಗೆಳೆಯನಿಗೆ ಬುದ್ಧಿಬರುವಂತೆ ಮಾಡಿ ಕ್ಲೈಮ್ಯಾಕ್ಸ್ ಕೂಡ ಮುಗಿಸುತ್ತಾನೆ. 
ಡ್ರಾಮಾ ಚಿತ್ರದಲ್ಲಿ ಕಥೆಯ ಎಳೆಯಷ್ಟೇ  ಇಲ್ಲ, ಗಟ್ಟಿಯಾದ ಹಲವಾರು ಕವಲುಗಳುಲ್ಲ ಕಥೆಯೇ ಇದೆ.ಅಲ್ಲಲ್ಲಿ  ಅಥವಾ ಅಗತ್ಯಕ್ಕಿಂತ ಹೆಚ್ಚಾಗಿಯೇ ಪಂಚಿಂಗ್ ಇರುವ ಸಂಭಾಷಣೆಗಳಿವೆ. ಚಂದನೆಯ, ಮಜಾ ಕೊಡುವ ಹಾಡುಗಳಿವೆ. ಕಚಗುಳಿಯಿಕ್ಕುವ ಹಾಸ್ಯದ ಸನ್ನಿವೇಶಗಳಿವೆ. ಆದರೆ ಬರೀ ಕಥೆಯಿದ್ದ ಮಾತ್ರಕ್ಕೆ ಅದು ಎಲ್ಲರಿಗೂ ಆಪ್ತವಾಗಬೇಕೆಂದೇನೂ ಇಲ್ಲವಲ್ಲ. ಇಲ್ಲೂ ಅದೇ ಆಗಿದೆ. ಇಬ್ಬರ ನಾಯಕರ ಉಡಾಫೆ ಕೊನೆಯವರೆಗೂ ಎಲ್ಲೂ ಒಂದು ತೂಕಕ್ಕೆ ಬರುವುದೇ ಇಲ್ಲ. ಪ್ರತಿ ಮಾತಿನಲ್ಲೂ ಉಡಾಫೆ ಮಾಡುತ್ತಾ , ಏನೇನೋ ಮಾಡುತ್ತಾ ಕಾಲ ಕಳೆಯುವವರು ಗಂಭೀರವಾದಾಗಲೂ  ಪ್ರೇಕ್ಷಕ ಮಾತ್ರ ಅನುಮಾನದಿಂದಲೇ ನೋಡುತ್ತಾನೆ. ಅಲ್ಲಿನ ಪಾತ್ರಗಳು ಅಳುವಾಗಲೂ, ಗಂಭೀರವಾಗಿ ಮಾತನಾಡುವಾಗಲೂ ನಮ್ಮದು ಅದೇ ನಿರೀಕ್ಷೆ. ಇಲ್ಲೇನಾದರೂ ಪಂಚಿಂಗ್ ಡೈಲಾಗ್ ಹೊಡಿಯಬಹುದಾ..? ಎಂಬುದು. ಅದಕ್ಕೆ ಕಾರಣ ನಿರ್ದೇಶಕರು. ನಮ್ಮನ್ನು ಅವರು ಹಾಗೆ ಮಾಡಿಬಿಟ್ಟಿದ್ದಾರೆ.  ಹಾಗಾಗಿಯೇ ಕೆಲವೊಂದು ಸನ್ನಿವೇಶಗಳು ಚೆನ್ನಾಗಿವೆಯಾದರೂ ತೀರ ಮನಸ್ಸಿಗೆ ತಟ್ಟುವುದಿಲ್ಲ. ಮಗಳು ಸುಖವಾಗಿರಲಿ ಎಂದು ಕೊನೆಯಲ್ಲಿ ತನ್ನನ್ನು ಕೊಂದುಕೊಂಡು  , ಎದುರಾಳಿಗಳನ್ನೂ ಸಾಯಿಸುವ ನಾಯಕಿಯ ಅಪ್ಪ ಗ್ರೇಟ್ ಎನಿಸುವುದಿಲ್ಲ. ಬಿಟ್ಟುಹೋದ ಹೆಂಡತಿಗಾಗಿ, ನೋಡೇ ಇರದ ಮಗಳಿಗೆ ಪರಿತಪಿಸುವ, ಕನ್ನಡದಲ್ಲೇ ಮಾತಾಡುವ ಪ್ರಾಂಶುಪಾಲ ಹುಚ್ಚನಂತೆ, ತಿಕ್ಕಲುನಂತೆ ಭಾಸವಾಗುವುದಕ್ಕೆ ಕಾರಣ ನಿರ್ದೇಶಕರೇ...ಇಲ್ಲಿನ ನಾಯಕಿ ತುಂಟಿಯಾ? ತಂದೆತಾಯಿ ಪ್ರೀತಿಯಿಂದ ವಂಚಿತ ಹುಡುಗಿಯಾ...? ಫ್ಲರ್ಟ್ ?.ಅಥವಾ ಈ ಎಲ್ಲವನ್ನೂ ಹೊಂದಿರುವ ಹೆಣ್ಣಾ ಎಂಬುದು ನಮಗೆ ಸ್ಪಷ್ಟವಾಗುವುದಿಲ್ಲ.
ಹಾಗಂತ ಡ್ರಾಮಾ ಕೆಟ್ಟ ಚಿತ್ರವಲ್ಲ. ನಾವು  ಅಂದರೆ ಪ್ರೇಕ್ಷಕರು ಇನ್ನೂ ಹೆಚ್ಚು ನಿರೀಕ್ಷಿಸುವುದಕ್ಕೆ ಕಾರಣವಿದೆ. ಅದೆಂದರೆ ನಿರ್ದೇಶಕ ಯೋಗರಾಜ್ ಭಟ್. ಅದ್ಯಾರೋ ಬೇರೆ ನಿರ್ದೇಶಕರು ಮಾಡಿದ್ದರೆ ಪರವಾಗಿಲ್ಲ ಎಂದು ಸುಮ್ಮನಿದ್ದುಬಿಡಬಹುದಿತ್ತು. ಆದರೆ ಮುಂಗಾರುಮಳೆಯ ನಂತರದ ಭಟ್ ಸಿನಿಮಾಗಳಿಗೆ  ಈಗಾಗಲೇ ಮೂರುಮೂರು ಸಾರಿ ಹಾಗೆ ಹೇಳಿ ಆಗಿದೆ. ಈ ಚಿತ್ರದಲ್ಲಿ ಏನೋ ಮಾಡುತ್ತಾರೆ ಎಂದು ಕಾದದ್ದೂ ಆಗಿದೆ. ಅದೂ ಭಟ್ಟರೇ ಕೊಟ್ಟಂತಹ ಭರವಸೆ. ಆದರೆ ಎರಡು ಉಡಾಫೆ ಹುಡುಗರ ಸರಳ ಕಥೆಯನ್ನೂ ನಿರೂಪಿಸುವುದಕ್ಕೆ ಭಟ್ ಬೇಕಾ..? ಚಿತ್ರದ ಎಲ್ಲಾ ಪಾತ್ರಗಳೂ ಅದೇ ಉಡಾಫೆಯಿಂದ ಮಾತಾಡಲೇ ಬೇಕಾ..? ಇವೆಲ್ಲಕ್ಕೂ ಭಟ್ರೇ ಉತ್ತರ ಹೇಳಬೇಕು. ಆಯಾ ದೃಶ್ಯಕ್ಕೆ ನಗೆತರಿಸಲು ಎಷ್ಟು ಬೇಕೋ ಅಷ್ಟನ್ನೇ ಮಾಡಿರುವ ಭಟ್ಟರು ಅದರಿಂದಾಚೆಗೆ ಯೋಚಿಸಿಲ್ಲವೇನೋ..? ಹಾಗಾಗಿಯೇ ಕೆಲವು ಪಾತ್ರಗಳು ಪೇಲವ ಎನಿಸುತ್ತವೆ. ಎಲ್ಲೋ ಬಂದು ಹೇಗೋ ಆಡಿ ಹೊರಟುಹೋಗುತ್ತವೆ. ದ್ವಿತೀಯ ನಾಯಕನ ನಾಯಕಿ ಮೂಕಿಯ ಪಾತ್ರವೂ ಅಷ್ಟೇ. ಅವರ ಪ್ರೀತಿಯೂ ಅಷ್ಟೇ. ಕಾಡುವುದಿಲ್ಲ.ಹಾಗೆ ನಾಯಕಿ ರಾಧಿಕಾಪಂಡಿತ್  ಪಾತ್ರವೇ ಜಾಳುಜಾಳಾದ್ದರಿಂದ ಅವರ ಪ್ರೀತಿ ಅಷ್ಟೊಂದು ಗಾಢ ಎನಿಸುವುದಿಲ್ಲ.
ಸಿನಿಮಾ ನೋಡಿದ ಮೇಲೆ ನನಗನಿಸಿದ್ದು ಈ ಅಂಶಗಳು. ಅತೀ ಹೆಚ್ಚು ನಿರೀಕ್ಷೆಯಲ್ಲಿದ್ದುದರಿಂದ ನನಗೆ ಹೀಗನ್ನಿಸಿತಾ..? ನಾನೇ ಪೂರ್ವಗ್ರಹ ಪೀಡಿತನಾಗಿದ್ದೆನಾ ..?ಎಂದು ನನ್ನನ್ನೇ ಹಲವಾರು ಸಾರಿ ಕೇಳಿಕೊಂಡೆ. ಆಮೇಲೆ ಚಿತ್ರ ಮುಗಿಸಿ ಹೊರಬಂದ ಮೂರ್ನಾಲ್ಕು ಅಪರಿಚಿತರಲ್ಲಿ  ಸುಮ್ಮನೆ ಸಿನಿಮಾದ ಬಗ್ಗೆ ವಿಚಾರಿಸಿದೆ. ಯಾರಲ್ಲೂ ಅದೊಂದು ತೃಪ್ತಿಯ ಭಾವ ಇರಲಿಲ್ಲ. ಇನ್ನೂ ಏನೋ  ಇರಬೇಕಿತ್ತು..ಇನ್ನೇನೋ ಕಡಿಮೆಯಾಗಿದೆ ಎನ್ನುವ ಭಾವವೇ ಅವರಲ್ಲೂ ಇದ್ದದ್ದರಿಂದ ನನ್ನ ಅನಿಸಿಕೆಯೂ ಸರಿ ಎನಿಸಿತ್ತು.
ಭಟ್ರ  ಹಿಂದಿನ ಸಿನೆಮಾಗಳಲ್ಲಿ ಕಥೆ ಇರಲಿಲ್ಲವೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನನ್ನ ಮುಂದಿನ ಚಿತ್ರದಲ್ಲಿ ಕಥೆಯಿಟ್ಟುಕೊಂಡೆ ಸಿನೆಮಾ ಮಾಡುತ್ತೇನೆಂದು ಭಟ್ ಭರವಸೆ ನೀಡಿದ್ದರು. ಮತ್ತದನ್ನು ಈಗ ಉಳಿಸಿಕೊಂಡಿದ್ದಾರೆ. ಈಗಲೂ ಅಷ್ಟೇ! ಇನ್ನೂ ಏನೇನು ಕೊರತೆ ಇದೆ ಎಂಬುದನ್ನು ಪಟ್ಟಿಮಾಡಿ ಭಟ್ಟರ ಮುಂದಿಟ್ಟರೆ ಮುಂದಿನ ಚಿತ್ರದಲ್ಲಿ ಆ ಎಲ್ಲ ಕೊರತೆ ನೀಗಿಸುತ್ತಾರೆಂಬ ತುಂಬು ಭರವಸೆಯಿಟ್ಟುಕೊಂಡು ನನ್ನ ಚಿತ್ರಾವಲೋಕನಕ್ಕೆ  ಪೂರ್ಣವಿರಾಮ ಇಡುತ್ತಿದ್ದೇನೆ.
[ಈ ಎಲ್ಲಾ ಅಭಿಪ್ರಾಯಗಳೂ ನನ್ನ ವೈಯಕ್ತಿಕವಾದವುಗಳಾಗಿವೆ. ನಾನೊಬ್ಬ ಪಕ್ಕಾ ಪ್ರೇಕ್ಷಕನಾಗಿ ಅನಿಸಿದ್ದನ್ನು ಅನಿಸಿದ ಹಾಗೆ ಬರೆದುಕೊಂಡಿದ್ದಾಗಿದೆ..]