ಗುಂಡೇಟು ತಿಂದು ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದ ಅನಾಮಿಕ ಚಂದ್ರು ಎಂಬ ವೈದ್ಯಕೀಯ ವಿದ್ಯಾರ್ಥಿಗೆ ಸಿಗುತ್ತಾನೆ. ಈ ಮೊದಲೇ ಮೂರ್ನಾಲ್ಕು ಜನ ಬಿದ್ದವನನ್ನು ನೋಡಿ ಹೋಗಿರುತ್ತಾರೆ. ಆದರೆ ಮಾನವೀಯತೆಯ ದೃಷ್ಟಿಯಿಂದ ಪ್ರಯಾಸ ಪಟ್ಟು ತನ್ನ ಮೋಟಾರ್ ಬೈಕಿನಲ್ಲಿ ಸಾಗಿಸಿಕೊಂಡು ಆಸ್ಪತ್ರೆಗಳಿಗೆ ಅಲೆಯುವ ಚಂದ್ರುಗೆ ಅಲ್ಲಿನ ಸಿಬ್ಬಂದಿಗಳ ವರ್ತನೆ ಬೇಸರ ತರಿಸುತ್ತದೆ. ಕೊನೆಗೆ ಪೋಲಿಸ್ ಮೊರೆ ಹೋದಾಗಲೂ ಒಬ್ಬ ಪೋಲಿಸ್ ಸಾಯುತಿರುವವನ ಕೈಯಲ್ಲಿದ್ದ ಗಡಿಯಾರ ಬಿಚ್ಚಿಕೊಳ್ಳುತ್ತಾನೆಯೇ ಹೊರತು ಬೇರೇನೂ ಮಾಡುವುದಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಮನೆಗೆ ಅವನನ್ನು ತಂದು ತನ್ನ ಮೇಜಿನ ಮೇಲೆಅವನಿಗೆ ಆಪರೇಷನ್ ಮಾಡುವ ನಿರ್ಧಾರ ಕೈಗೊಳ್ಳುತ್ತಾನೆ ಚಂದ್ರು.ತನ್ನ ಪ್ರೊಫೆಸರ್ ಗೆ ಫೋನ್ ಮಾಡಿ ಆ ಮೂಲಕ ಆಪರೇಷನ್ ಮಾಡಿ ಮಲಗುತ್ತಾನೆ.
ಆದರೆ ಬೆಳಗಾಗುವಷ್ಟರಲ್ಲಿ ಆತ ನಾಪತ್ತೆ. ಆದರೆ ಮಾರನೆಯ ದಿನವೇ ಪೋಲಿಸ್ ಚಂದ್ರುವಿನ ಮನೆಗೆ ಬಂದು ಒಬ್ಬ ಸುಫಾರಿ ಹಂತಕ ಈಗಾಗಲೇ ಹದಿನಾಲ್ಕು ಕೊಲೆ ಮಾಡಿರುವ ಭಯಾನಕ ಖೈದಿಗೆ ಆಶ್ರಯ ಕೊಟ್ಟದ್ದಕ್ಕೆ, ತಪ್ಪಿಸಿಕೊಳ್ಳಲು ನೆರವಾದದ್ದಕ್ಕೆ ಬಂಧಿಸುತ್ತಾರೆ. ಹಾಗೆ ಅವನ ಅಣ್ಣ ಅತ್ತಿಗೆಯನ್ನು ಬಂಧಿಸುತ್ತಾರೆ. ಈಗ ಹೇಗಾದರೂ ಮಾಡಿ ಚಂದ್ರುವಿನ ಮುಖಾಂತರ ಆ ಹಂತಕನನ್ನು ಹಿಡಿಯುವುದು ಅವರ ಗುರಿ.
ಆ ಹಂತಕ ಚಂದ್ರುವಿನ ಮೊಬೈಲಿಗೆ ಕರೆ ಮಾಡಿ ಥ್ಯಾಂಕ್ಸ್ ಹೇಳಿ ನಾನು ನಿನ್ನನ್ನು ಬೇಟಿಯಾಗಬೇಕು ಎನ್ನುತ್ತಾನೆ. ಅವನ ಹತ್ಯೆಗೆ ಒಂದು ಸಂಚು ಮಾಡುವ ಪೋಲಿಸ್ ಸಿಬ್ಬಂದಿ ಅದಕ್ಕೆ ಗಾಳವಾಗಿ ಚಂದ್ರುವನ್ನು ಬಳಸಿಕೊಳ್ಳಲು ನಿರ್ಧರಿಸುತ್ತಾರೆ.ಅಲ್ಲಿಂದ ಶುರುವಾಗುತ್ತದೆ ನೋಡಿ ನಿಜವಾದ ಕಥೆ.
ಕೇವಲ ಎರಡು ರಾತ್ರಿಗಳಲ್ಲಿ ನಡೆಯುವ ಕಥೆ ಮಿಸ್ಕಿನ್ ನಿರ್ದೇಶನದ ಓನಾಯುಂ ಅಟ್ಟುಕುಟ್ಟಿಯಾಮ್ ಚಿತ್ರದ್ದು.ಚಿತ್ರದ ಪ್ರಾರಂಭದಿಂದ ಕೊನೆಯ ವರೆಗೂ ಒಂದೆ ಗತಿಯನ್ನು ಕಾಯ್ದು ಕೊಂಡಿರುವ ನಿರ್ದೇಶಕ ಮಿಸ್ಕಿನ್ ನೋಡುಗನನ್ನು ಕುರ್ಚಿಯ ತುದಿಗೆ ಕೂರಿಸುತ್ತಾರೆ. ಪ್ರತಿ ತಿರುವು ಪ್ರತಿ ಸನ್ನಿವೇಶವೂ ವಾಸ್ತವಿಕ ನೆಲೆಯಲ್ಲೇ ಸಾಗುವುದರಿಂದ ನಮ್ಮ ಕಣ್ಣ ಮುಂದೆ ಇದೆಲ್ಲ ನಡೆಯುತ್ತಿದೆ ಎಂಬಂತೆ ಭಾಸವಾಗಿ ಉಸಿರುಕಟ್ಟುತ್ತದೆ.
ತಾವೇ ಇಲ್ಲಿ ಹಂತಕನ ಪಾತ್ರವನ್ನು ಮಾಡಿದ್ದಾರೆ. ಚಿತ್ರದಲ್ಲಿ ಇಳಯರಾಜಾ ರ ಹಿನ್ನೆಲೆ ಸಂಗೀತವಿದೆ. ಅದು ನಮ್ಮನ್ನು ಆ ಮೂಡಿನಿಂದ ಹೊರಬರಲು ಬಿಡುವುದೇ ಇಲ್ಲ.
ಮಿಸ್ಕಿನ್ ಬಗ್ಗೆ ಹೇಳುವುದಾದರೆ ಭಾರತದ ಚಿತ್ರರಂಗದಲ್ಲಿ ಸ್ವಂತ ಚಿತ್ರಕಥೆ ಬರೆವ ಮತ್ತು ಪ್ರತಿ ದೃಶ್ಯವನ್ನು ತುಂಬಾ ಸೂಕ್ಷ್ಮವಾಗಿ ವಿವರಗಳ ಜೊತೆ ಜೊತೆಗೆ ವಾಸ್ತವಿಕ ಅಂಶಗಳನ್ನು ಬೆರೆಸಿ ರಚಿಸುವ ನಿರ್ದೇಶಕರಲ್ಲಿ ಒಬ್ಬರು ಎನ್ನಬಹುದು. ಮಿಸ್ಕಿನ್ ಚಿತ್ರಗಳಲ್ಲಿ ದೃಶ್ಯ ವೈಭವವಾಗಲಿ, ಅತಿಯಾದ ಶಾಟ್ ವಿಂಗಡನೆಯಾಗಲಿ ಇರುವುದಿಲ್ಲ. ಹಾಗೆಯೇ ಕ್ಯಾಮೆರಾ ಕೋನಗಳೂ ಅಷ್ಟೇ. ನಿಮಗೆ ಅಡ್ಡಾದಿಡ್ಡಿಯಾಗಿ ಅತಿಯಾದ ಬುದ್ದಿವಂತಿಕೆ ಕಾಣಸಿಗುವುದಿಲ್ಲ.ಅವರ ಮೊದಲ ಚಿತ್ರ ಚಿತ್ತಿರಂ ಪೆಸುದಡಿ ಯಿಂದ ಹಿಡಿದು ಮೊನ್ನೆ ಮೊನ್ನೆ ಬಂದ ನಲವತ್ತು ಕೋಟಿ ವೆಚ್ಚದ ಮೂಗುಮುಡಿಯಾ ವರೆಗೆ ಗಮನಿಸಿ.ಅದರಲ್ಲೂ ಅಂಜಾದೆಯ ಕೊನೆಯ ದೃಶ್ಯದ ಚಿತ್ರೀಕರಣವಂತೂ ಸೂಪರ್.
ಇದರಲ್ಲಿಯೂ ಅದು ಮುಂದುವರೆದಿದೆ. ನಿಧಾನಕ್ಕೆ ಚಿತ್ರ ಸಾಗಿದರೂ ಎಲ್ಲೂ ಗೊಂದಲ ಮೂಡಿಸದೆ ಸ್ವಲ್ಪವೂ ಕುತೂಹಲ ಕಡಿಮೆಯಾಗಿಸದೆ ಚಿತ್ರ ಕೊನೆಯವರೆಗೂ ನೋಡಿಸಿಕೊಳ್ಳುತ್ತದೆ.
ನನ್ನ ಪ್ರಕಾರ ಇದು ಚಿತ್ರಪ್ರೇಮಿಗಳು, ಅದರಲ್ಲೂ ಥ್ರಿಲ್ಲರ್ ಪ್ರಿಯರು ಒಮ್ಮೆ ನೋಡಲೇ ಬೇಕಾದ ಚಿತ್ರ.
ಕೊಸರು: ಮೂಗುಮುಡಿ ಚಿತ್ರದ ಸೋಲಿನಿಂದಾಗಿ ನಿರ್ದೇಶಕ ಮಿಸ್ಕಿನ್ ಅವರಿಗೆ ನಿರ್ಮಾಪಕರು ದೊರೆಯದೆ ತಾವೇ ನಿರ್ಮಿಸಿದ ಚಿತ್ರವಿದು. ಹಾಗಾಗಿ ಇದು ದೊಡ್ಡದಾಗಿ ಬಿಡುಗಡೆಯಾಗಿಲ್ಲ.. ಚಿಕ್ಕ ಚಿಕ್ಕ ನಗರಗಳಲ್ಲಿ ಬಿಡುಗಡೆ ಮಾಡಿ, ತಾವೇ ಪ್ರಚಾರ ಮಾಡಿ, ಪೋಸ್ಟರ್ ಅಂಟಿಸಿಕೊಂಡು ಚಿತ್ರವನ್ನು ಮುನ್ನಡೆಸುತ್ತಿದ್ದಾರೆ ಮಿಸ್ಕಿನ್. ಆದರೆ ಈಗಾಗಲೇ ಪತ್ರಿಕೆಗಳಿಂದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಚಿತ್ರ ಪಡೆದಿದೆ.
ನಾನು ನೋಡಿದ್ದೇನೆ.ಅಧ್ಭುತ.ಹಾಗೇ ಅವರ ನಂದಲಾಲ ನೋಡಿ.ಚೆನ್ನಾಗಿದೆ.
ReplyDelete‘ಓನಾಯ್ ಮಟ್ರುಮ್ ಆಟ್ಟುಕುಟ್ಟಿ‘ (ತೋಳ ಮತ್ತು ಆಡು ಮರಿ) ಚಿತ್ರ ನೋಡಿದೆ. ತುಂಬಾ ಕಾಡಿದ ಚಿತ್ರ. ಇಂತಹ ಚಿತ್ರಗಳಾದರೂ ಕನ್ನಡಕ್ಕೆ ಭಾಷಾಂತರಗೊಂಡು ಸಿಗುವಂತಾಗಲಿ.
ReplyDelete