ಕನ್ನಡದ ಮಟ್ಟಿಗೆ ಪ್ರಯೋಗಗಳಿಗೆ ಯಾವತ್ತೋ ಕೊರತೆಯಿಲ್ಲ. ನನ್ನಅನಿಸಿಕೆಯ ಪ್ರಕಾರ ನಮ್ಮಲ್ಲಿ ರೀಮೇಕ್ ಬಿಟ್ಟರೆ ಪ್ರಯೋಗಾತ್ಮಕ ಚಿತ್ರಗಳೇ ಜಾಸ್ತಿ. ಸ್ವಂತ ಕಥೆಯ ರೆಗ್ಯುಲರ್ ಮಸಾಲೆ ಚಿತ್ರಗಳು ನಮ್ಮಲ್ಲಿ ಗಮನಾರ್ಹ ಎನಿಸಿಕೊಂಡದ್ದು ಕೆಲವೇ ಕೆಲವು ಮಾತ್ರ.
ಆದರೆ ಹಾಡುಗಳೇ ಇಲ್ಲದೆ, ಪಕ್ಕಾ ಕಮರ್ಷಿಯಲ್ ಚಿತ್ರವನ್ನು ಕೊಟ್ಟವರು ದೇಸಾಯಿಯವರು. ಪೋಲಿಸ್ ಸ್ಟೋರಿ ಕೂಡ ಹಾಡುಗಳೇ ಇಲ್ಲದೆ, ನಾಯಕಿಯೇ ಇಲ್ಲದ ಸಾಹಸಮಯ ಚಿತ್ರ.ಈವತ್ತಿಗೂ ಆ ಚಿತ್ರದ ಗತಿ ಮತ್ತು ಚಿತ್ರಕಥೆ ಯಾವುದೇ ಸಾಹಸಮಯ ಚಿತ್ರಕ್ಕೆ ಸ್ಫೂರ್ತಿಯಾಗುವಂತಹದ್ದು. ಈ ಹಿಂದೆ ಡಾ. ರಾಜಕುಮಾರ್ ಅಭಿನಯದ ನಾಂದಿ ಕೂಡ ಆವತ್ತಿನ ಕಾಲಮಾನಕ್ಕೆ ಪ್ರಯೋಗಾತ್ಮಕ ಚಿತ್ರ.
ಉಪೇಂದ್ರರ ಎ, ಉಪೇಂದ್ರ ಕೂಡ ತಿರುವು ಮರುಗು ಚಿತ್ರಕಥೆಯನ್ನು ಹೊಂದಿದ್ದ ಪ್ರಯೋಗಾತ್ಮಕ ಚಿತ್ರಗಳೇ. ಅದರಲೂ ಎ ಚಿತ್ರಕ್ಕೆ ಇದು ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ ಎನ್ನುವ ಅಡಿಬರಹವನ್ನು ಉಪ್ಪಿ ಕೊಟ್ಟಿದ್ದರು ಮತ್ತದು ಆ ಚಿತ್ರಕ್ಕೆ ಪೂರಕವಾಗಿತ್ತು. ಇತ್ತೀಚಿಗೆ ಕಮರ್ಷಿಯಲ್ ನೆಲೆಗಟ್ಟಿನಲ್ಲಿ ಯಾವುದೇ ಪ್ರಯೋಗಾತ್ಮಕ ಚಿತ್ರಗಳು ಬಂದದ್ದು ಕಡಿಮೆ ಎನ್ನಬಹುದು. ನೀವು ಎ ಚಿತ್ರವನ್ನೇ ಗಮನಿಸಿದರೆ ಅದರಲ್ಲಿನ ಕಥೆಗೂ ಚಿತ್ರಕಥೆಯ ಒಘಕ್ಕೂ ಅಂತ್ಯದಲ್ಲಿ ನಿಜಕಥೆಗೂ ಅಜಗಜಾಂತರ ವ್ಯತ್ಯಾಸವಿತ್ತು. ಮೊದಲು ನೋಡಿದ್ದೇ ಒಂದಾದರೆ, ಕೊನೆಯಲ್ಲಿ ಕಂಡದ್ದೇ ಇನ್ನೊಂದು ಎನ್ನುವಂತಿತ್ತು ಅದರ ಚಿತ್ರಕಥೆ. ಆದರೆ ಅದು ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆದದ್ದು ಚಿತ್ರದ ದೃಶ್ಯದಲ್ಲಿನ ಹೊಸತನ ಮತ್ತು ಮನರಂಜನಾತ್ಮಕ ಅಂಶಗಳಿಂದ ಎನ್ನಬಹುದು. ಅರ್ಥವಾಗದಿದ್ದರೆ ಮತ್ತೊಮ್ಮೆ ಕೂಡ ಬೋರಾಗದೆ ನೋಡಬಹುದಾಗಿತ್ತು.
ಆದರೆ ಲೂಸಿಯಾ ಪ್ರಯೋಗಾತ್ಮಕ ಚಿತ್ರವಾದರೂ ಅದರಲ್ಲಿ ಸ್ವಲ್ಪ ಕ್ಲಾಸ್ ಎನಿಸುವ ನಿರೂಪಣೆ ಬಿಗಿದಪ್ಪಿಕೊಂಡಿತ್ತು.ತಿರುವು ಮುರುಗು ಚಿತ್ರಕಥೆ ಅಲ್ಲಲ್ಲಿ ಪುನರಾವರ್ತನೆಯಾಗಿ ಗುರು ಇನ್ನು ಮಲಗ್ತಾನೆ, ಕನಸು ಕಾಣ್ತಾನೆ ಎಂದು ಸಾಮಾನ್ಯ ಪ್ರೇಕ್ಷಕ ಹೇಳುವಂತಿತ್ತು. ಅದಿರಲಿ ಆದರೆ ಒಂದು ಪ್ರಯೋಗಾತ್ಮಕ ಚಿತ್ರ ಮಾಡುವುದು ಅಂತಹ ಕಷ್ಟದ ಕೆಲಸವಲ್ಲ. ತಲೆಯಲ್ಲಿ ಕಸುವಿದ್ದರೆ ಮಾಡಿಬಿಡಬಹುದು. ಆದರೆ ಮಾಡಿದ ನಂತರ ಅದನ್ನು ಜನರಿಗೆ ತಲುಪಿಸುವುದಿದೆಯಲ್ಲ ಅದು ತಾಕತ್ತಿನ ಕೆಲಸ.
ಆ ವಿಷಯದಲ್ಲಿ ನಿರ್ದೇಶಕ ಪವನ್ ಕುಮಾರ್ ಮೆಚ್ಚುಗೆಗೆ ಅರ್ಹ ಎನ್ನಬಹುದು. ಚಿತ್ರವನ್ನು ಮಾಡಿ, ಅದನ್ನು ಹೆಗಲ ಮೇಲೆ ಹೊತ್ತು, ಜನರನ್ನು ಚಿತ್ರಮಂದಿರದೊಳಕ್ಕೆ ಬರುವಂತೆ ಮಾಡಿದ ಅವರ ಪ್ರಯತ್ನಕ್ಕೆ ದೊಡ್ಡ ಶಹಬ್ಬಾಸ್ ಹೇಳಲೇ ಬೇಕಾಗುತ್ತದೆ. ಹಾಗೆಯೇ ಮಲ್ಟಿಫ್ಲೆಕ್ಸ್ ಸಿನಿಮಾ ಎನ್ನುವ ಸಂಸ್ಕೃತಿ ಹಿಂದಿ ಚಿತ್ರರಂಗದಲ್ಲಿ ಇತ್ತೇ ಹೊರತು ಕನ್ನಡದಲ್ಲಿ ಇರಲೇ ಇಲ್ಲ. ಅದರಲ್ಲೂ ಕನ್ನಡದಲ್ಲಿನ ಕಡಿಮೆ ವೆಚ್ಚದ ಪ್ರಯೋಗಾತ್ಮಕ ಚಿತ್ರವನ್ನು ಮಲ್ಟಿಫ್ಲೆಕ್ಸ್ ನಲ್ಲಿ ಹಣ ತೆತ್ತು ನೋಡುವ ಕನ್ನಡಿಗರೂ ಇರಲಿಲ್ಲ. ಹಾಗಾಗಿ ಕಡಿಮೆ ವೆಚ್ಚದ ಚಿತ್ರಗಳಿಗೆ ಅತ್ತ ಕ್ಲಾಸ್ ಜನರಿಂದಲೂ ಮೆಚ್ಚುಗೆ ಇಲ್ಲದೆ, ಮಾಸ್ ಜನರಿಂದಲೂ ಪ್ರೋತ್ಸಾಹವಿಲ್ಲದೆ ಕೊರಗುವ ಪರಿಸ್ಥಿತಿ ಇದ್ದೆ ಇತ್ತು.
ಸ್ಟಾರ್ ಇದ್ದರೇ ಚಿತ್ರ ಎನ್ನುವಮಾತನ್ನು ಸ್ವಲ್ಪವಾದರೂ ಮಂಕಾಗಿಸಿದ ಪವನ್ ಕನ್ನಡ ಚಿತ್ರರಂಗಕ್ಕೆ ಯುವ ನಿರ್ದೇಶಕರಿಗೆ ಸ್ಫೂರ್ತಿದಾಯಕ ನಿರ್ದೇಶಕ ಎನ್ನಬಹುದು.
ಅವರ ಇಂತಹ ಪ್ರಯತ್ನ ಹೊಸತನ ಯಾವತ್ತಿಗೂ ಹೀಗೆಯೇ ಸಾಗಲಿ ಎನ್ನುವುದು ನನ್ನ ಹಾರೈಕೆ.
chenagide....haleya hosa chitragala holoke istavaytu...
ReplyDelete